ಸ್ತ್ರೀ ವರ್ಗದ ಕೌಟುಂಬಿಕ ಸ್ಥಾನ ಮಾನ:

ಹೆಣ್ಣು ಒಬ್ಬ ಗಂಡಿನೊಡನೆ ಮದುವೆಯಾದ ಮೇಲೆ ಮಾತ್ರ ಅವಳಿಗೆ ಸ್ವತಂತ್ರವಾದ ಸಂಸಾರ. ಅದರಲ್ಲೂ ಅತ್ತೆ-ಮಾವನ ಮನೆಯವರ ಹೆಚ್ಚು ನಿರ್ಬಂಧಗಳು ಇಲ್ಲದಿದ್ದು ಅವರೊಂದಿಗೆ ಪ್ರೀತಿ ನಂಬಿಕೆಗಳಿಂದ ಸೊಸೆ ಹೊಂದಿಕೊಂಡು ಹೋದರೆ ಆ ಕುಟುಂಬದಲ್ಲಿ ಅವಳಿಗೊಂದು ಉನ್ನತ ಸ್ಥಾನ-ಮಾನ ಲಭ್ಯವಾಗುತ್ತವೆ. ಇಲ್ಲದಿದ್ದರೆ ಎಲ್ಲರಿಂದ ತಿರಸ್ಕಾರಕ್ಕೆ ಗುರಿಯಾಗುತ್ತಾಳೆ. ಮದುವೆಗೆ ಮುನ್ನ ಹೆಣ್ಣು ತನ್ನ ತಂದೆ-ತಾಯಿ ಸಹೋದರರ ಹಿಡಿತದ ಹಿತರಕ್ಷಣೆಯಲ್ಲೆ ಬಂಧಿತಳಾಗಿರುತ್ತಾಲೆ. ಆಮೇಲೆ ಗಂಡನ ರಕ್ಷಣೆಯಲ್ಲಿರುತ್ತಾಳೆ. ಇದು ಈ ದೇಶದ ಸಾಂಸಾರಿಕ ಸಂಬಂಧ. ಆದರೆ ಮಾಲೇರು ಮಹಿಳಾ ಸಮುದಾಯ ಇವೆಲ್ಲ ಸಂಬಂಧದಿಂದ ಹೊರತಾಗಿ ಬೆಳೆದು ಬಂದಿದೆ.

ಈ ಜನಾಂಗದ ಹೆಣ್ಣಿನ ಪೂರ್ವಕಾಲದ ಕುಟುಂಬ ವ್ಯವಸ್ಥೆಯ ಕಥೆ ವಿಚಿತ್ರವಾದದ್ದು. ಸುಮಾರು ೬೦-೭೦ ವರ್ಷಗಳ ಹಿಂದೆ ಇವಳಿಗೆ ತನ್ನವನೆ ಆದ ಗಂಡ, ಸಂಸಾರ ಕುಟುಂಬ ಎಂಬ ಯಾವ ಸಂಬಂಧ ವ್ಯವಸ್ಥೆಯು ಇರಲಿಲ್ಲ. ಏಕೆಂದರೆ ಇವಳನ್ನು ದೇವರಿಗೆ ಧಾರೆಯೆರೆದು ಬಿಡುತ್ತಿದ್ದರು. ಅಲ್ಲಿಂದ ಇವಳು ದೇವಸ್ಥಾನದ ಪುರೋಹಿತನಾಗಲಿ ಅಥವಾ ಉನ್ನತ ಜಾತಿಯ ಸ್ಥಿತಿವಂತನಾಗಲಿ ಅನಧಿಕೃತವಾಗಿ ತಮ್ಮಿಬ್ಬರ ಮಾನಸಿಕ ಒಪ್ಪಂದದ ಮೇಲೆ ಕೂಡಿ ಸಂಬಂಧವಿಟ್ಟುಕೊಂಡು ಮಕ್ಕಳನ್ನು ಹಡೆಯುತ್ತಿದ್ದಳು. ಇಂತಹ ಉಪಪತ್ನಿಯರು ಗಂಡಸಿಗೆ ಜಾಸ್ತಿ ಇದ್ದರೆ ಅವನಿಗೆ ಸಾಮಾಜಿಕ ಸ್ಥಾನಮಾನ ಬೆಲೆ ಜಾಸ್ತಿಯಾಗಿರುತ್ತಿತ್ತು. ಅದೇ ಇವನ ಉಪಪತ್ನಿಗೆ ಮತ್ತು ಇವನಿಗೆ ಹುಟ್ಟಿದ ಇವಳ ಮಕ್ಕಳಿಗೆ ಅದೇ ಸಮಾಜದಲ್ಲಿ ಯಾವುದೇ ರೀತಿಯ ಬೆಲೆ, ಗೌರವಗಳಿರದೆ ಕೀಳಾಗಿ ಕಾಣುತ್ತಿದ್ದರು. ಏಕೆಂದರೆ ಈ ಮಹಿಳೆ ಇವನೆ ನನ್ನ ಗಂಡ ಎಂದು, ಮಕ್ಕಳು ಇವನೆ ನಮ್ಮ ಅಪ್ಪ ಎಂದು ಯಾರನ್ನೂ ಅಧಿಕೃತವಾಗಿ ಆ ಸಮಾಜಕ್ಕೆ ಹೇಳಿಕೊಳ್ಳುವಂತಿರಲಿಲ್ಲ. ಹೇಳಿಕೊಂಡರು ಬೆಲೆ ಇರಲಿಲ್ಲ. ಗಂಡಸು ಮಾತ್ರ ಅನಧಿಕೃತವಾಗಿ ತನ್ನ ಉಪಪತ್ನಿ ಮತ್ತು ಮಕ್ಕಳ ಬಗ್ಗೆ ನಾನು ಇಟ್ಟುಕೊಂಡವಳು, ನನಗೆ ಹುಟ್ಟಿದ ಮಕ್ಕಳು ಎಂದು ಸಮಾಜಕ್ಕೆ ಹೇಳಿಕೊಳ್ಳುತ್ತಿದ್ದ. ಈ ಅವಕಾಶ ಉಪಪತ್ನಿ ಮತ್ತು ಮಕ್ಕಳಿಗೆ ಇರಲಿಲ್ಲ. ಅವಳು ದೇವರಿಗೆ ಧಾರೆಯೆರೆದ ದೇವದಾಸಿ ಮಹಿಳೆ ಮತ್ತು ಅವಳ ಮಕ್ಕಳು ಎಂಬ ಕಾರಣಕ್ಕಾಗಿ. ಹಾಗಾಗಿ ಇವರಿಗೆ ಆ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಯಾವ ಗೌರವವಾಗಲಿ, ಸ್ಥಾನಮಾನವಾಗಲಿ ಇರಲಿಲ್ಲ.

ದೇವರಿಗೆ ಧಾರೆಯೆರೆಯುವ ಪದ್ದತಿ ಹೇಗಿತ್ತೆಂದರೆ ವಯಸ್ಸಿಗೆ ಬಂದ ಹುಡುಗಿಯನ್ನು ಊರ ದೇವಾಲಯಕ್ಕೆ ಹುಡುಗಿಯ ಮನೆಯವರು ಮತ್ತು ಐದು ಜನ ದೇವದಾಸಿಯರು ಕರೆದುಕೊಂಡು ಹೋಗಿ ಹುಡುಗಿಯೊಂದಿಗೆ ತಾಳಿ, ಕಾಲುಂಗರ, ಗೆಜ್ಜೆ ಹೂಮಾಲೆಗಳನ್ನು ಪೂಜೆಗಾಗಿ ಪೂಜಾರಿಗೆ ಕೊಡಿಸುತ್ತಿದ್ದರು. ಅವನು ಪೂಜೆ ಮಾಡಿ ಕೊಟ್ಟಮೇಲೆ ಆ ಹುಡುಗಿ ತುಳಸಿ ಗಿಡಕ್ಕೆ ಪೂಜೆ ಮಾಡುತ್ತಿದ್ದಳು. ಆಮೇಲೆ ಹಿರಿಯರ ಆದೇಶ, ಅನುಮತಿಯ ಮೇಲೆ ಆ ಹುಡುಗಿ ತನ್ನ ಕೊರಳಿಗೆ ತಾನೆ ತಾಳಿ ಕಟ್ಟಿಕೊಳ್ಳುತ್ತಿದ್ದಳು. ಆಗ ಹಿರಿಯರು ಮತ್ತು ಐದು ಜನ ದೇವದಾಸಿಯರು ಅಕ್ಷತೆ ಕಾಳನ್ನು ಹಾಕುತ್ತಿದ್ದರು. ನಂತರ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಿದ್ದಳು.(ಇದು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ರೂಢಿಯಲ್ಲಿತ್ತು. ಗೆಜ್ಜೆಕಟ್ಟಿ ಕುಣಿಯುವುದು). ಹೀಗೆ ಕಲಾವಿದ ಕುಟುಂಬ ಪರಿಸರದಿಂದ ಬೆಳೆದು ಬಂದ ಹುಡುಗಿ ಆಗಿದ್ದರೆ ಅವಳು ಅದೇ ರೀತಿ ಕಲಾವಿದೆಯಾಗಿ ಮುಂದುವರೆಯುತ್ತಿದ್ದಳು. ಇವಳ ಕಲಾಭಿನಯ ನೋಡಿ ಜನ ಆನಂದಿಸುತ್ತಿದ್ದರು. ಈ ರೀತಿ ದೇವ ಹೆಸರಲ್ಲಿ ಧಾರೆಯೆರೆಯಲ್ಪಟ್ಟ ಹುಡುಗಿ ದೇವರ ಸೇವೆ ಮಾಡಿಕೊಂಡುಬಾಳಬೇಕಾಗಿತ್ತೆ ಹೊರತು; ಯಾವ ಗಂಡಸಿನೊಡನೆಯೂ ಮದುವೆ ನಡೆಯದಿದ್ದರಿಂದ ಅಧಿಕೃತವಾಗಿ ಯಾರು ಇವಳೊಂದಿಗೆ ಗಂಡನಾಗಿ ಉಳಿಯುತ್ತಿರಲಿಲ್ಲ.

ಇಂತಹ ಹುಡುಗಿಯರು ಸುಂದರಿಯರಾಗಿದ್ದರಿಂದ ದೇವಾಲಯದ ಪೂಜಾರಿಗಳು ತಮ್ಮ ದೇಹ ಸುಖಕ್ಕೆ ಬಳಸಿಕೊಳ್ಳುತ್ತಿದ್ದರು ಅಥವಾ ಊರ ಉತ್ತಮ ಜಾತಿಯ ಪ್ರಬಲ ವ್ಯಕ್ತಿ ತನ್ನ ಉಪಪತ್ನಿಯೆಂದು ಹೇಳಿಕೊಂಡು ಅವಳಿಗೆ ಊಟ. ಬಟ್ಟೆ ಕೊಟ್ಟುಕೊಂಡು ನೋಡಿಕೊಳ್ಳುತ್ತಿದ್ದ. ಆದರೆ ಇವಳು ಅವನ ಯಾವ ವ್ಯವಹಾರ, ಸಂಬಂಧ, ಕಾರ್ಯಕ್ರಮ, ತೀರ್ಮಾನಗಳಿಗೂ ಪಾಲುದಾರಳಾಗುತ್ತಿರಲಿಲ್ಲ. ಕೇವಲ ಒಂದು ವಸ್ತುವಾಗಿ ಅವನ ದೇಹ ಸುಖಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಇವಳು ಸಮಾಜದಲ್ಲಿ ಯಾರಿಗೂ ಎಲ್ಲಿಯೂ ಸಲ್ಲದವಳಾಗಿರುತ್ತಿದ್ದಳು. ಈ ಪದ್ಧತಿಯ ಸಂಪ್ರದಾಯ ಆಚರಣೆಗೊಳಪಟ್ಟ  ಮೂಡಿಗೆರೆ ತಾಲ್ಲುಕಿನ ಕಳಸದ ಮಾಲೇರು ದೇವದಾಸಿ ಮಹಿಳೆ ಗಿರಿಜಮ್ಮ ಜೀವನ ಇದಕ್ಕೆ ಒಂದು ಅಪ್ಪಟ ಸಾಕ್ಷಿ. ಈ ಗಿರಿಜಮ್ಮನನ್ನು ಸಾಹುಕಾರನಾಗಿದದ ಮೂಡಲಪಾಡಿ ನಾರಾಯಣಪ್ಪ ತುಳಸಿಕಟ್ಟೆಯಲ್ಲಿ ಗಂಧರ್ವ ವಿವಾಹ ಮಾಡಿಕೊಂಡಿದ್ದೇನೆಂದು ಹೇಳಿಕೊಂಡು ತನ್ನ ಉಪಪತ್ನಿಯನ್ನಾಗಿ ಮಾಡಿಕೊಂಡಿದ್ದ. ಇವರಿಗೆ ಹುಟ್ಟಿದ ಮಗಳೇ ಕಲ್ಯಾಣಿ. ಇವಳಿಗೆ ತಾಯಿಯ ಜೀವನ ಪದ್ಧತಿಯೇ ಎರವಲಾಗಿದೆ. ಈ ದೇವದಾಸಿ ಮಕ್ಕಳಿಗೆ ತಾಯಿಯೇ ಸರ್ವಸ್ವ ಪ್ರಧಾನಗಳು. ಅದರಂತೆ ತಾಯಿಯ ಸಂಪ್ರದಾಯ-ದಂತೆ ಮಗಳು ಕಲ್ಯಾಣಿಯನ್ನು ದೇವರಿಗೆ ಧಾರೆಯೆರೆದರು. ಸಾಮಾನ್ಯವಾಗಿ ಒಮದೇ ಊರಿನಲ್ಲಿ ಮೂರು ನಾಲ್ಕು ಜನ ದೇವಾಲಯಗಳಲ್ಲಿ ಪುರೋಹಿತರಾಗಿದ್ದವರು, ಅಥವಾ ಪ್ರಬಲಕೋಮಿನ ಸಾಹುಕಾರರಾಗಿದ್ದವರು ದೇವರಿಗೆ ಧಾರೆಯೆರೆಯಲ್ಪಟ್ಟ ಮಾಲೇರು ಚಂದದ ಹುಡುಗಿಯರನ್ನು ತಮ್ಮ ಉಪಪತ್ನಿಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ಹಾಗೆ ಆದವರಲ್ಲಿ ಕಲ್ಯಾಣಿಯು ಒಬ್ಬಳು. ಇವಳು ದೇವರ ಸೇವೆ ಮಾಡಿಕೊಮಡಿದ್ದರೂ; ನಾರಾಯಣಪ್ಪನ ಮನೆಯ ಒಂದು ಜಾಗದಲ್ಲಿ ವಾಸವಾಗಿದ್ದ ತನ್ನ ತಾಯಿ ಗಿರಿಜಮ್ಮನ ಜೊತೆಯಲ್ಲೆ ಇರುತ್ತಿದ್ದಳು. ಇವಳಿಗೂ ವನಜಾಕ್ಷಿ ಎಂಬ ಒಬ್ಬ ಮಗಳು ಹುಟ್ಟಿದಳು. ಇವಳ ಜೀವನವು ಅದೇ ಪಾಡಾಯಿತು. ಹೀಗೆ ತಾಯಿ, ಮಗಳು, ಮೊಮ್ಮಗಳೆಲ್ಲ ಮೂಡಲಪಾಡಿಯ ನಾರಾಯಣಪ್ಪರ ಮನೆಯ ಒಂದು ಭಾಗದಲ್ಲಿ ಒಟ್ಟಿಗೆ ವಾಸವಾಗಿದ್ದರು.

ನಾರಾಯಣಪ್ಪನ ಮನೆಯಲ್ಲಿ ಹಬ್ಬ ಹರಿದಿನಗಳಾಗಲಿ, ಪೂಜೆ ಪುರಸ್ಕಾರಗಳಾಗಲಿ, ಇಲ್ಲಾ ಮದುವೆ ಮುಂಜಿಯಂತಹ ಯಾವುದೇ ಕಾರ್ಯಗಳಾಗಲಿ ನಡೆದರೆ, ಈ ಯಾವುದರಲ್ಲೂ ಗಿರಿಜಮ್ಮ ಮತ್ತು ಅವಳ ಮಕ್ಕಳಿಗೆ ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವ ಅವಕಾಶವಿರಲಿಲ್ಲ. ನಾರಾಯಣಪ್ಪನ ಹಿರಿಯ ಹೆಂಡತಿ ಮಕ್ಕಳಿಗೆ ಇದ್ದಷ್ಟು ಸ್ಥಾನಮಾನ ಹಕ್ಕು ಜವಾಬ್ದಾರಿ ಇವರಿಗೆ ಇರಲಿಲ್ಲ. ಆದರೆ ಆ ಮನೆಯವರ ಕೆಲಸ ಕಾರ್ಯಗಳಲ್ಲಿ ಸೇವಕರಾಗಿ ಭಾಗಿಯಾಗಬೇಕಾಗಿತ್ತು. ಇವರ‍್ಯಾರು ನಾರಾಯಣಪ್ಪನ ಮನೆಯ ಅಡಿಗೆ ಕೋಣೆಗಾಗಲಿ, ಪೂಜೆ ಮತ್ತು ಊಟದ ಕೊಠಡಿಗಳಿಗಾಗಲಿ ಯಾವುದಕ್ಕೂ ಪ್ರವೇಶವಿರಲಿಲ್ಲ. ಇವರು ತಮ್ಮ ಬದುಕಿನುದ್ದಕ್ಕೂ ಕೇವಲ ಆ ಮನೆಯ ಹೊರಾವಣದಲ್ಲೆ ಜೀವನ ಸಾಗಿಸಿದವರು. ಮನೆಯ ದೇವರ ಕೋಣೆಯಲ್ಲಿ ಪೂಜೆ ನಡೆಯುತ್ತಿದ್ದರೆ, ಗಿರಿಜನಮ್ಮನ ಮೊಮ್ಮಗಳು ವನಜಾಕ್ಷಿಯನ್ನು ಒಳಗೆ ಬಿಡದಿದ್ದಾಗ ಅವಳು ಕಿಟಕಿಯ ಹೊರಗಡೆ ನಿಂತು ದೇವರಿಗೆ ಕೈ ಮುಗಿಯುತ್ತಿದ್ದಳಂತೆ ಆ ಮನೆಯ ಕೇಂದ್ರ ಕೋಣೆಗಳಿಗೆ ಇವರು ಹೋದರೆ ಮೈಲಿಗೆ, ದೋಷ ತೊಂದರೆಗಳಾಗುತ್ತವೆ ಎಂದೆಲ್ಲ ಹೆದರಿಸುತ್ತಿದ್ದರಂತೆ. ಈ ರೀತಿ ಹೆದರಿಸಿ, ನಿರ್ಬಂಧಪಡಿಸಿ ಬ್ರಾಹ್ಮಣ ಗಂಸರಿಗಿಂತ ಹೆಚ್ಚಾಗಿ ಆ ಮನೆಯ ಹೆಂಗಸರೆ ಇವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದರು.

ಈ ಎಲ್ಲ ಅನುಭವಗಳಿಂದ ನಮಗೆ ಅಪಮಾನವಾಗುತ್ತಿದೆ, ನಮ್ಮ ಗೌರವ ಹಾಳಾಗುತ್ತಿದೆ ಎಂಬ ಅರಿವು ಇಲ್ಲದ ಮಾಲೇರು ಮಹಿಳೆಯರು ಉಪಪತ್ನಿಯ ವ್ಯವಸ್ಥೆಯೊಳಗೆ ಬಂಧಿತರಾಗಿದ್ದರು. ಇವರ ಜೊತೆಗೆ ದೇಹ ಸಂಬಂಧವಿಟ್ಟು ಕೊಂಡವನಿಗೆ ಹುಟ್ಟಿದ ಮಕ್ಕಳನೆಲ್ಲ ಸೇರಿಸಿಉಪಪತ್ನಿಯ ಸಂಸಾರ ಕುಟುಂಬವಿದು ಎಂಬ ಪರಿಕಲ್ಪನೆಯೇ ಇಲ್ಲದ ಸಮಾಜವಾಗಿತ್ತು. ಇದರೊಳಗೆ ತಾನು ಹೊಂದಾಣಿಕೆ ಮಾಡಿಕೊಂಡೆ ಸಾಗುತ್ತಿರುವ ಮಹಿಳೆಗೆ ಗಂಡಿನೊಡನೆ ದೇಹ ಸಂಬಂಧಿವತ್ತೆ ಹೊರತು; ಅವನನ್ನು ನನ್ನ ಗಂಡನೆಂದು ಭಾವಿಸುವ, ನನ್ನ ಕುಟುಂಬ, ಸಂಸಾರವೆಂದು ಹೇಳಿಕೊಳ್ಳುವ ಸ್ವಾತಂತ್ರ‍್ಯ, ಹಕ್ಕು ಆ ಸಮಾಜದೊಳಗಿರಲಿಲ್ಲ. ಹಾಗಾಗಿ ಮಕ್ಕಳನ್ನು ಹೆತ್ತ ಹೆಣ್ಣಿಗೆ ತನ್ನ ಮಕ್ಕಳ ಸಂಬಂಧ, ರಕ್ಷಣೆ, ಬೆಳವಣಿಗೆಯ ಜವಾಬ್ದಾರಿಗಳು ಮೀಸಲಾಗಿದ್ದಂತೆ; ಆ ಮಕ್ಕಳ ಹುಟ್ಟಿಗೆ ಕಾರಣನಾದ ಗಂಡಿಗೆ ಈ ಹೊಣೆಗಾರಿಕೆಗಳಾವುವು ಸಾಮಾಜಿಕ ನಿಯಮವಾಗಿರಲಿಲ್ಲ. ಅಂತಹದ್ದರಲ್ಲೂ ಕೆಲವು ಹೃದಯವಂತ ಗಂಡಸರು ಮಾತ್ರ ತನಗೆ ಇದ್ದ ಹಣ, ಭೂಮಿ, ಮನೆಯಂತಹ ಆಸ್ತಿಯಲ್ಲಿ, ತನ್ನ ಉಪಪತ್ನಿಯ ಹೆಸರಿಗೆ ಮತ್ತು ಅವಳ ಮಕ್ಕಲ ರಕ್ಷಣೆಗಾಗಿ ಸ್ವಲ್ಪ ಭಾಗಕೊಟ್ಟು, ಇಲ್ಲಾ ಬರೆದಿಟ್ಟು ಚನ್ನಾಗಿ ನೋಡಿಕೊಂಡು ಮರಣ ಹೊಂದಿದ್ದಾರೆ ಎಂದು ವೃದ್ಧರು ಇಂಗಿಗೂ ಮಾತನಾಡುತ್ತಾರೆ. ಎಷ್ಟೋ ಜನ ಆಸ್ತಿ ಇಲ್ಲದವರು ಮತ್ತುಆಸ್ತಿ ಇದ್ದವರು ತನ್ನ ಹೆಂಡತಿ ಮಕ್ಕಳು ಆ ಉಪಪತ್ನಿ ಮಕ್ಕಳಿಗೆ ಏನನ್ನೂ ಕೊಡಲು ಬಿಡದೆ ತೊಂದರೆ ಕೊಡುತ್ತಿದ್ದಾಗ ಅದನ್ನು ಎದುರಿಸಲಾಗದೆ ಅಸಹಾಯಕರಾಗಿ ಕೊನೆಯಾದವರು ಕೆಲವರು. ಇನ್ನು ಕೆಲವರಿಗೆ ಏನೆಲ್ಲ ಆಸ್ತಿ ಇದ್ದು, ಕೊನೆಗೆ ಎಲ್ಲರಿಗೂ ಹಂಚಿಕೊಡೋಣವೆಂಬ ಲೆಕ್ಕಾಚಾರದಲ್ಲೆ ಇದ್ದು, ಆಕಸ್ಮಿಕ ಸಾವಿಗೆ ತುತ್ತಾಗಿದ್ದಾರೆ. ಆಮೇಲೆ ಇವನ ಹಿರಿಯ ಹೆಂಡತಿ ಮಕ್ಕಳು ಈ ಉಪಪತ್ನಿ ಮಕ್ಕಳಿಗೆ ಯಾವ ಆಸ್ತಿಯನ್ನು ಕೊಡದೆ; ಬೀದಿ ಪಾಲಾಗಿದ್ದ ಮಾಲೇರು ಮಹಿಳೆಯರು ಹಲವಾರು ಜನ ಆಗಿಹೋಗಿದ್ದಾರೆ. ಹೀಗೆ ದಿಕ್ಕಿಲ್ಲದ ಮಾಲೇರು ಸಮುದಾಯದ ಹೆಣ್ಣು ಮಕ್ಕಳದ್ದು ಗೋಳಿನ ಕಥೆ.

ಈ ಸಮುದಾಯಕ್ಕೆ ಎಷ್ಟೋ ಶತಮಾನಗಳ ಹಿಂದಿನಿಂದಲೂ ಒಳ್ಳೆಯ ಶಿಕ್ಷಣವಿಲ್ಲದೆ ಮಹಿಳೆಯರು ಅಸಹಾಯಕರಾಗಿ ಸಮಾಜ, ಸಂಸಾರ, ಕುಟುಂಬಗಳಲ್ಲಿ ಯಾವ ಸ್ಥಾನಮಾನವೂ ಇಲ್ಲದೆ ಕಳೆದಿರುವ ದಿನಗಳನ್ನು ಇತಿಹಾಸದಿಂದ ಅಳಿಸಲಾಗುದು. ಈ ಮಹಿಳೆಯರಿಗೆ ಆಯಾ ಸ್ಥಳೀಯ ಸಮಾಜ, ಸಂಸ್ಕೃತಿಯ ವ್ಯವಸ್ಥೆಯಗಳನ್ನು, ಜನರನ್ನು ಪ್ರಶ್ನಿಸುವ, ತನ್ನ ಮನಸ್ಸಿಗೆ ಒಗ್ಗದಿದ್ದನ್ನು ತಿರಸ್ಕರಿಸುವ, ಸರಿ ತಪ್ಪುಗಳ ಬಗ್ಗೆ ಚಿಂತಿಸುವ ಯಾವ ತಿಳುವಳಿಕೆಯು ಅಂದು ಇರಲಿಲ್ಲ. ಏಕೆಂದರೆ ಇವರಿಗೆ ಯಾವ ವಿದ್ಯೆಯ ಗಂಧಗಾಳಿಯು ಇರಲಿಲ್ಲ. ಹಾಗಾಗಿ ಈ ಎಲ್ಲಹಿಂಸೆ, ಶೋಷಣೆಗಳನ್ನು ಮಾನಸಿಕ, ದೈಹಿಕವಾಗಿ ಒಪ್ಪಿ, ಹೊಂದಿಕೊಂಡು ಜನರೊಳಗೆ ಸಾಗುತ್ತಿದ್ದರು. ಹೀಗೆ ಜೀವಿಸಲಾಗದ ಎಷ್ಟೋ ಮಹಿಳೆಯರು ತಾನು ಮಕ್ಕಳನ್ನು ಪಡೆದ ಗಂಡಿನಿಂದ, ಊರು, ಸಮಾಜದಿಂದ ದೂರವಾಗಿ ಕಾಡು, ನಾಡುಗಳಲ್ಲಿ ತನ್ನ ಮಕ್ಕಳೊಡನೆ ವಾಸಮಾಡಿದ್ದಾಳೆ. ಅಲ್ಲಿಂದ ಅವಳ ಮತ್ತುಮಕ್ಕಳ ಜೀವನ, ರಕ್ಷಣೆಯ ಬಗ್ಗೆ ಕಾಳಜಿ, ಧೈರ‍್ಯ, ಜವಾಬ್ದಾರಿ ಬಂದು; ಮಕ್ಕಳ ಬೆಳವಣಿಗೆಯ ಮೇಲೆ ನಿಯಂತ್ರಣ ಹೊಮದಿ ಅವರಿಗೆ ಒಳ್ಳೆ ಶಿಕ್ಷಣದ ದಾರಿ ಮಾರ್ಗಗಳನ್ನು ತೋರಿದ್ದಾಳೆ. ಆದ್ದರಿಂದಲೇ ಈಹೆಣ್ಣಿಗೆ ಈಗ ಕುಟುಂಬದಲ್ಲಿ ಒಳ್ಳೆ ಸ್ಥಾನಮಾನ ಲಭ್ಯವಾಗುತ್ತಿದೆ. ಏಕೆಂದರೆ ಮಕ್ಕಳನ್ನು ತನ್ನ ದಾರಿಯಿಂದ ತಪ್ಪಿಸಿ ಮದುವೆ ಮಾಡಿ, ಮನುಷ್ಯ ಸಂಬಂಧದಿಂದ ಸುಸಂಸ್ಕೃತ, ನಾಗರಿಕ ಬದುಕಿನ ದಾರಿ ತೋರಿಸುತ್ತಿದ್ದಾಳೆ.

ಮಾಲೇರು ಸಮುದಾಯದಲ್ಲಿ ಮಹಿಳೆಯರು ಸುಶಿಕ್ಷಿತರಿರಲಿ ಅಥವಾ ಅಶಿಕ್ಷಿತರಿರಲಿ ತಮ್ಮ ಕುಟುಂಬದಲ್ಲಿ ಅವರದೇ ಆದ ಸ್ಥಾನಮಾನವನ್ನು ಈಗ ಉಳಿಸಿಕೊಂಡಿದ್ದಾರೆ. ಗಂಡ, ಮಕ್ಕಳ ಜೀವನದ ದಾರಿ ಮಾರ್ಗಗಳ ಆಯ್ಕೆಯ ಪ್ರಶ್ನೆ ಬಂದಾಗ ತಾಯಿಯಾದವಳು ಸೂಕ್ತ ಸಲಹೆಗಳ ಮೂಲಕ ಮಾರ್ಗದರ್ಶನ ಮಾಡುತ್ತಾಳೆ. ಅವರವರ ಬೆಳವಣಿಗೆಗೆ ಮೊದಲ ಹಂತದಲ್ಲೆ ಬೆಂಬಲಿಗಳಾಗಿ ನಿಂತು ಪ್ರೋತ್ಸಾಹ ನೀಡುತ್ತಾಳೆ. ಸಂಸಾರದಲ್ಲಿ ಮಕ್ಕಲ ಏಳಿಗೆಗೆ ಮೊದಲ ಗುರುವಾಗಿ ಸುಶಿಕ್ಷಿತರನ್ನಾಗಿ ಮಾಡಿದ್ದಾಳೆ. ಆದಿಯಿಂದಲೂ ಶಿಕ್ಷಣವೆ ಇಲ್ಲದೆ ಈ ಸಮುದಾಯದ ಹೆಣ್ಣುಮಕ್ಕಲು ಅಶಿಕ್ಷಿತರೆ ಆಗಿದ್ದರು. ಈ ಎಲ್ಲ ಅರಿವು ಮತ್ತು ಅನುಭವವಿದ್ದ ಮಹಿಳೆ ತನ್ನ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಲ್ಳೆಯ ಸ್ಥಾನಮಾನ ಪಡೆಯಲು ಪ್ರಧಾನ ಪಾತ್ರವಹಿಸಿದ್ದಾಳೆ. ಹೀಗೆ ಮನೆಯ ಮತ್ತುಕುಟುಂಬದ ಬೆಳವಣಿಗೆಗೆ ಮನೆಯ ಸ್ತ್ರೀಯರ ಪಾಲು ದೊಡ್ಡದು. ಅದನ್ನು ಅಚ್ಚುಕಟ್ಟಾಗಿ ಈ ಸಮುದಾಯದ ಮಹಿಳೆ ನಿರ್ವಹಿಸುತ್ತಿದ್ದಾಳೆ.

ಮಾಲೇರು ಮಹಿಳೆಯರು ಸ್ವಾತಂತ್ರ ಭಾರತದವರೆಗೆ ಶಿಕ್ಷಣದ ಯಾವ ಗಂಧಗಾಳಿಯು ಇಲ್ಲದವರಾಗಿದ್ದರು. ಸ್ವಾತಂತ್ರ‍್ಯದ ನಂತರದ ಕಾಲದಲ್ಲಿ ಅದರಲ್ಲೂ ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಕೇಂದ್ರ ಸರ್ಕಾರ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಕಾನುನು ಮಾಡಿ ಜಾರಿ ಮಾಡಿದರು. ಅಲ್ಲಿಂದ ನಾವು ಸ್ವಲ್ಪ ಅಕ್ಷರ ಕಲಿತ ಕಾರಣಕ್ಕೆ ಜಗತ್ತಿನ ಆಗುಹೋಗುಗಳ ಅರಿವು ನಮಗಾಯಿತು. ಅದರಿಂದ ಶಿಕ್ಷಣದ ಮಹತ್ವ ತಿಳಿದು ನಮ್ಮ ಮಕ್ಕಳಿಗೆ ನಮ್ಮ ಕೈಲಾದಷ್ಟು ಒಳ್ಳೆ ವಿದ್ಯಾಭ್ಯಾಸ ಕೊಡಿಸುತ್ತಾ ಬಂದಿದ್ದೇವೆ. ನಮ್ಮ ಮಕ್ಕಳು ಓದಿ ಹಲವಾರು ಜನ ಬೇರೆ ಬೇರೆ ಕಡೆ ಕೆಲಸ ಮಾಡ್ತಾ ಇದ್ದಾರೆ ಎಂದುಮಹಿಳಾ ಸಂಘಟನೆಯ ಹಿರಿಯ ಮಹಿಳೆಯರು ಹೇಳುತ್ತಾರೆ. ಆದರೆ ಈಗಲೂ ಗ್ರಾಮಾಂತರ ಪ್ರದೇಶದ ಸ್ತ್ರೀಯರಿಗೆ ಹೆಚ್ಚು ಒಳ್ಳೆಯ ಶಿಕ್ಷಣ ಸಿಗಲು ಸಾಧ್ಯವಾಗಿಲ್ಲ. ಸಿಕ್ಕಿದರೂ ಓದು ಬರಹ ಕಲಿತಿರಬಹುದು. ಅಷ್ಟೆ.ಇವರಿಗೂ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಅರಿವಾಗಿ ತಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಏಕೆಂದರೆ ಇವರ ಸಮುದಾಯದವರ ಪಟ್ಟಣದ ಮಕ್ಕಳು ಓದಿ ಒಳ್ಳೊಳ್ಳೆ ಡಾಕ್ಟರ‍್, ಇಂಜಿನಿಯರ‍್ಸ್, ಆಗಿ ಹೊರದೇಶಗಳಿಗೂ ಮದುವೆಯಾಗಿ ಹೋಗಿದ್ದಾರೆ. ಇಂತಹ ಸುದ್ದಿಯು ಒಬ್ಬರಿಂದ ಒಬ್ಬರು ಮಾತಾಡಿ ತಿಳಿದು ನಮ್ಮ ಮಕ್ಕಳು ಹೀಗಾಗಬೇಕೆಂದು ಆಸೆಯಿಂದ ಓದಿಸುತ್ತಿದ್ದಾರೆ. ಹೀಗೆ ನಗರಪಟ್ಟಣಗಳಲ್ಲಿ ಡಾಕ್ಟರ‍್ಸ್, ಇಂಜಿನಿಯರ‍್ಸ್ ಪದವಿಗಳಿಗೆ ಓದುತ್ತಿರುವವರು, ಓದಿ ವೃತ್ತಿಯಲಿರುವವರು ಮತ್ತು ಬ್ಯಾಂಕುಗಳಲ್ಲಿ, ದೂರವಾಣಿ ಕೇಂದ್ರಗಳಲ್ಲಿ ಹೀಗೆ ಹಲವಾರು ಇಲಾಖೆಗಳಲ್ಲಿ ಉದ್ಯೋಗ ಮಾಡುತ್ತಿರುವವರು ಹಲವಾರು ಜನ ಮಹಿಳೆಯರಿದ್ದಾರೆ.

ಅವರುಗಳಲ್ಲಿ-ಉಡುಪಿಯ ನಾಗರತ್ನ-ಲಕ್ಷ್ಮೀನಾರಾಯಣ ಅವರ ಮಗಳು ಡಾ||ಶೋಭಾ, ಹುಬ್ಬಳ್ಳಿಯ ಮೀನಾಕ್ಷಿ-ಸಚ್ಚಿದಾನಂದ ಅವರ ಮಗಳು ಡಾ|| ರೂಪ ಮತ್ತು ಧಾರವಾಡದ ಸತ್ಯಮ್ಮ-ಕೃಷ್ಣಮೂರ್ತಿಯವರ ಮಗಳು ಡಾ|| ರೂಪ. ಬೆಂಗಳೂರಿನ ಗಿರಿಜ-ರಾಮಚಂದ್ರರಾವ್ ಅವರ ಮಗಳು ಡಾ||ಶುಭ ವೈದ್ಯರಾದರೆ ಇವರ ಇನ್ನೊಬ್ಬ ಮಗಳು ಪ್ರಭಾ ಇಂಜಿನಿಯರ‍್ ಆಗಿದ್ದಾರೆ. ಹಾಸನ ಸ್ವರ್ಣಲತಾ-ಡಾ||ಗುರುರಾಜ್ ಹೆಬ್ಬಾರ‍್ ದಂಪತಿಗಳ ಮಕ್ಕಳಾದ ಕಾವ್ಯಶ್ರೀ ಬಿ.ಡಿ.ಎಸ್.ದಂತ ವೈದ್ಯ ಪದವಿಗಾಗಿ, ಪ್ರತಿಭಾ ಬಿ.ಇ.ಇಂಜಿನಿಯರ್‌ಪದವಿಗಾಗಿ ಓದುತ್ತಿದ್ದಾರೆ. ಬೆಂಗಳೂರಿನವರೆ ಆದ ದೇವಿರಮ್ಮ-ಸುಬ್ರಹ್ಮಣ್ಯ ಅವರ ಮಗಳು ಡಾ|| ಜ್ಯೋತಿ ಬ್ರಾಹ್ಮಣ ಹುಡುಗನನ್ನು ಮದುವೆಯಾಗಿ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಇವರಂತೆ ಬೆಂಗಳೂರಿನವರಾದ ಅನ್ನಪೂರ್ಣ-ಚಂದ್ರಶೇಖರ‍್ ಅವರ ಮಗಳು ಆಶಾಕಂಪ್ಯೂಟರ‍್ ಇಂಜಿನಿಯರಾಗಿ ಬ್ರಾಹ್ಮಣ ಹುಡುಗನನ್ನು ಮದುವೆ ಮಾಡಿಕೊಂಡು ಆಸ್ಟ್ರೇಲಿಯದಲ್ಲಿದ್ದಾರೆ.

ಬಹುಪಾಲು ಒಳ್ಳೆ ಪದವಿ ಶಿಕ್ಷಣ ಪಡೆದುಒಳ್ಳೆ ಉದ್ಯೋಗದಲ್ಲಿರುವ ಹುಡುಗಿಯರು ತಮ್ಮ ಜಾತಿಯ ಕೀಳರಿಮೆಯಿಂದ ಬೇಸತ್ತು ಬ್ರಾಹ್ಮಣ ಹುಡುಗರನ್ನು ಹಾಗೂ ಉತ್ತಮ ಜಾತಿಯ ಹುಡುಗರನ್ನು ಮದುವೆಯಾಗಿ ಜೀವನಮಾಡುತ್ತಿರುವುದು ದಟ್ಟವಾಗಿದೆ. ಇನ್ನು ಹಲವಾರು ಜನ ಹುಡುಗಿಯರು ಮಹಿಳೆಯರು ಬ್ಯಾಂಕುಗಳಲ್ಲಿ,ಹಲವಾರು ಇಲಾಖೆಗಳಲ್ಲಿ ಗುಮಾಸ್ತರಾಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕಿಯರಾಗಿ, ಉಪನ್ಯಾಸಕಿಯರಾಗಿ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಕಲೆಸಮಾಡಿಕೊಂಡೆ ತಮ್ಮ ಸಂಸಾರ, ಕುಟುಂಬ ವೃತ್ತಿಗಳಲ್ಲೆಲ್ಲ ಹೆಸರು ಮಾಡಿ, ಈ ಸಮುದಾಯದ ಹೆಣ್ಣಿಗೆ ಈಗ ಒಳ್ಳೆ ಸ್ಥಾನಮಾನ, ಗೌರವವನ್ನು ತುಂಬಿಕೊಡುತ್ತಿದ್ದಾರೆ. ಹೆಣ್ಣುಮಕ್ಕಳ ಈ ಬೆಳವಣಿಗೆಗೆ ತಂದೆ ಗಿಂತಲೂ ಮಿಗಿಲಾದ ಜವಾಬ್ದಾರಿ, ಪಾತ್ರತಾಯಿಯದಾಗಿದೆ ಎಂಬುದು ಇವರ ಹಿರಿಯರ ಅನುಭವದ ಮಾತುಗಳನ್ನು ಕೇಳುವಾಗಲೇ ತಿಳಿಯುತ್ತದೆ.

ಮಾಲೇರು ಸಮುದಾಯದ ಗಂಡಸರು ತಮ್ಮ ಕುಲದ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಾಧನೆ, ನಡೆ-ನುಡಿ, ಕಾರ‍್ಯಶೀಲತೆಗಳನ್ನು ನೋಡಿ, ಕೇಳಿ ಅವರ ಮೇಲೆ ಹೆಚ್ಚು ಪ್ರೀತಿಗೌರವ ಹೊಂದಿ ಹೆಮ್ಮೆಪಡುತ್ತಿದ್ದಾರೆ. ಇವರದು ಮೂಲತಃ ಮಾತೃಪ್ರಧಾನ ಕುಟುಂಬವೇ ಆಗಿತ್ತು. ಆದರೆ ಕಾಲಬದಲಾದಂತೆ ಅಕ್ಕಪಕ್ಕದ ಸಮಾಜ ಸಂಸ್ಕೃತಿಗಳಪ್ರಭಾವ ಪರಿಣಾಮ, ಸಂಬಂಧಗಳಿಂದಾಗಿ ನಾನಾ ಬದಲಾವಣೆಗಳಾಗಿವೆ. ಹಾಗಾಗಿ ಬ್ರಾಹ್ಮಣರಿಂದ ಹಿಡಿದು ಹಲವು ಉತ್ತಮ ಜಾತಿಗಳ ಪ್ರಭಾವವಾಗಿ ಈ ಸಮುದಾಯದ ಗಂಡಸರು ಎಚ್ಚೆತ್ತುಕೊಂಡು ತಮ್ಮ ತಮ್ಮ ಮಕ್ಕಳು ಹೆಂಡತಿ, ತಾಯಿಯರು ಮತ್ತು ಸಹೋದರಿಯರು ಮತ್ತಿತರರ ರಕ್ಷಣೆಯ ಜವಾಬ್ದಾರಿಯನ್ನು ತಾವೆ ಹೊತ್ತು, ಶೋಷಿತ ಜನ ಸಮಾಜದ ಬಿಡುಗಡೆಗಾಗಿ ಹಂಬಲಿಸುತ್ತ ಮುನ್ನೆಡೆದಿದ್ದಾರೆ. ಹಾಗಾಗಿ ಈಸಮುದಾಯವು ಕೂಡ ಈಗ ಪುರುಷ ಪ್ರಧಾನ ಸಮಾಜ ಕುಟುಂಬಗಳೇ ಆಗಿವೆ. ಹಾಗಾಗಿ ಈಗ ಈ ಸಮಾಜ ಕುಟುಂಬದಲ್ಲಿ ಹೆಣ್ಣಿನ ಮೇಲೆ ಯಾವುದೇ ಶೋಷಣೆ ಇಲ್ಲ. ಪುರುಷರ ಸಹಕಾರದಿಂದ ಹೆಣ್ಣೆ ತನ್ನ ಶಾಂತಿ, ಸಹನೆ, ಚಾಣಾಕ್ಷತನದ ಬುದ್ಧಿಯಿಂದ ಶಾಂತಿಯುತವಾಗಿ ಕುಟುಂಬವನ್ನು ಮುನ್ನೆಡೆಸುತ್ತಾ ಸಾಗಿದ್ದಾಳೆ. ಆದರೆ ಕುಟುಂಬದಲ್ಲಿ ಪುರುಷನೆ ಕೊನೆಯ ತೀರ್ಮಾನ ಮಾಡುತ್ತಾನೆ. ಅದಕ್ಕೂ ಮುನ್ನ ತನ್ನ ಕುಟುಂಬದ ಹಿರಿಯ ಮಹಿಳೆಯರೊಡನೆ ಅಥವಾ ಹೆಂಡತಿ ಮಕ್ಕಳೊಡನೆ ಚರ್ಚಿಸಿ ಕೊನೆಗೆ ತೀರ್ಮಾನಿಸುತ್ತಾನೆ.

ಒಟ್ಟಾರೆ ಕುಟುಂಬದಲ್ಲಿ ಹೆಣ್ಣಿಗೆ ಹೇಳಿಕೊಳ್ಳುವ ಸ್ಥಾನಮಾನ ವಿಲ್ಲವೆಂಬುದೇನೋ ನಿಜ. ಆದರೆಹಿಂಸೆ, ಒತ್ತಡ, ಕಿರಿಕಿರಿ, ಹಿಯಾಳಿಕೆ, ಬೇಸರಗಳಿಲ್ಲದೆ ಸ್ತ್ರೀಯರು, ಗಂಡಸರು, ಮಕ್ಕಳು ವಯಸ್ಸಾದವರೆಲ್ಲರೂ ಕುಟುಂಬದಲ್ಲಿ ಶಾಂತಿಯುತವಾಗಿ ಜೀವನ ಸಾಗಿಸುತ್ತಿರುವುದು ಅಷ್ಟೆ ಸತ್ಯವಾಗಿದೆ: ಈ ಎಲ್ಲ ಕಾರಣಗಳಿಂದಲೇಮಾಲೇರು ಜನಾಂಗದ ಸ್ತ್ರೀಯರು ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಇವರೆಲ್ಲ ಬೆಳವಣಿಗೆಗೆ ತದ್ವಿರುದ್ಧವಾಗಿ ಸ್ವಾತಂತ್ಯ ಪೂರ್ವಕಾಲದ ಸ್ತ್ರೀ ಸಮುದಾಯ ಅಶಿಕ್ಷಿತರಾಗಿ ಯಾರ ಯಾವ ಏಳಿಗೆಗೂ ಪೂರಕವಾದ ಬೆಳವಣಿಗೆಗೆ ಸಾಧ್ಯವಾಗಿರಲಿಲ್ಲ. ಇದನ್ನು ಅರಿತ ಬ್ರಟಿಷ್‌ಸರ್ಕಾರದ ಶಿಕ್ಷಣ ನೀತಿಯಿಂದ ಈಜನಾಂಗಕ್ಕೆ ಶಿಕ್ಷಣ, ಪಡೆಯುವ ಹಕ್ಕು ಸಂವಿಧಾನ ಬದ್ಧವಾಗಿ ಕಾಲಕ್ರಮೇಣ ಜಾರಿಯಾಗುತ್ತ ಬಂದು ಎಲ್ಲರು ಸುಶಿಕ್ಷಿತ ಸಮುದಾಯವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ಇದಕ್ಕೆಲ್ಲ ಈ ಕುಟುಂಬಗಳ ಹೆಣ್ಣಿನ ತಿಳುವಳಿಕೆ, ಬುದ್ಧಿವಂತಿಕೆ, ಅನುಭವಗಳು ಪ್ರಧಾನಪಾತ್ರವಹಿಸಿ ಅವಳ ಸ್ಥಾನಮಾನವನ್ನು ಹೆಚ್ಚಿಸಿವೆ.

ಇದೇ ಹೆಣ್ಣಿಗೆ ಈಗ್ಗೆ ಐವತ್ತ ಅರವತ್ತು ವರ್ಷಗಳ ಹಿಂದೆ ಯಾವ ಸ್ಥಾನಮಾನವು ಈ ಸಮಾಜ ಇರಲಿಲ್ಲ. ಅವಳನ್ನು ದೇವದಾಸಿ, ಮಾಲೇರು ಹೆಣ್ಣು ಎಂಬ ಕಾರಣಕ್ಕೆ ಯಾವ ಸಮುದಾಯದ ಜನರು ಪ್ರೀತಿ,ಕರುಣೆ ಇಲ್ಲದೆ ಒಂದು ರೀತಿಯಾಗಿ ಕಸವಾಗಿ ಕಾಣುತ್ತಿದ್ದರು. ಸಂಗೀತ, ನೃತ್ಯ,ನಟನೆಯಂತಹ ಕಲೆಗಳಲ್ಲಿ ಏನೆಲ್ಲ ಸಾಧನೆ ಮಾಡಿದರೂ ಆ ಸಮಾಜ ಕುಟುಂಬದಲ್ಲಿ ಅವಳಿಗೆ ಗೌರವವಿರುತ್ತಿರಲಿಲ್ಲ. ಇನ್ನು ಒಂದು ರೀತಿಯಲ್ಲಿ ಕೀಳಾಗೆ ಕಾಣುತ್ತಿದ್ದರು. ಇವೆಲ್ಲವನ್ನು ಲೆಕ್ಕಿಸದೆ ಹೆಣ್ಣು ಈ ಸಮಾಜದಲ್ಲಿ ಬೆಳೆದಿದ್ದಾಳೆ. ಬೆಳೆದು ತನ್ನ ಕಳಂಕವನ್ನು ತಾನೆ ಕಳೆದುಕೊಂಡು ಸಾಧಿಸಿ, ಗಳಿಸಿ ಈಕುಟುಂಬ ಸಮಾಜದಲ್ಲಿ ಹೆಸರಾಗಿ ಗೌರವ ತಂದುಕೊಂಡಿದ್ದಾಳೆ.

ಮಹಿಳೆಯರ ಆರ್ಥಿಕ ಹಿಡಿತ ಅಥವಾ ನಿರಾಧಾರ ಸ್ಥಿತಿ

ಮಾಲೇರು ಸಮುದಾಯ ಸಮಾಜದಲ್ಲಿ ಕೀಳಾಗಿ ಗುರುತಿಸಲ್ಪಟ್ಟಿರುವುದರಿಂದ ಇವರಿಗೆ ಆರ್ಥಿಕವಾಗಿ ಯಾವ ಹಿಡಿತವನ್ನು ಸಾಧಿಸಲಾಗಿಲ್ಲ. ಅದರಲ್ಲೂ ಈ ಜನಾಂಗದ ಸ್ತ್ರೀಯರು ಆರ್ಥಿಕವಾಗಿ ತುಂಬ ದುರ್ಬಲರು. ಇವರೆಲ್ಲ ಬ್ರಾಹ್ಮಣರ ಮನೆಯಲ್ಲಿ ಜೀತ ಮಾಡಿಕೊಂಡಿದ್ದ ಸಂದರ್ಭದಲ್ಲಿ ಕೇಂದ್ರದ ಇಂದಿರಾಗಾಂಧಿ ಆಡಳಿತವಿದ್ದಾಗ ರಾಜ್ಯದ ಮುಖ್ಯಮಂತ್ರಿ ದೇವರಾಜ ಅರಸು ಜಾರಿಗೆ ತಂದು “ಉಳುವವನೆ ಭೂಮಿಯ ಒಡೆಯ” ಕಾನೂನಿನಿಂದ ಭೂಮಿ ಇಲ್ಲದ ಕೆಲವರಿಗೆ ಅಲ್ಪಸ್ವಲ್ಪ ಭೂಮಿ ಸಿಕ್ಕಿತು. ಈ ಸಮುದಾಯವನ್ನು ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರಿಂದಾಗಿ ಸರ್ಕಾರಗಳಿಂದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಜಾರಿಯಾಗಿ ಹಲವಾರು ಜನಗಳಿಗೆ ಅವಕಾಶವಾಯಿತು. ಇದರಿಂದ ಕೆಲವು ಮಹಿಳೆಯರು ತಮ್ಮಕುಟುಂಬದಲ್ಲಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.

ಈ ಬೆಳವಣಿಗೆಯನ್ನು ಗಮನಿಸಿದ ಮೇಲ್ಜಾತಿ-ಬ್ರಾಹ್ಮಣ ಅಧಿಕಾರಿವರ್ಗ ಹಲವಾರು ಇಲಾಖೆಗಳಲ್ಲಿ ತಮ್ಮಕುತಂತ್ರದಿಂದ ಆಡಳಿತಾತ್ಮಕವಾಗಿ ೮೦-೯೦ರ ದಶಕದಲ್ಲೆ ಕಡಿತಗೊಳಿಸಲು ಪ್ರಾರಂಭಿಸಿದರು. ಇದರ ಜೊತೆಯಲ್ಲೆ ಮಾಲೇರು ಪರಿಶಿಷ್ಟ ಪಂಗಡಕ್ಕೆ ಸೇರುವುದಿಲ್ಲ. ಅವರು ಬ್ರಾಹ್ಮಣರ ಒಂದು ಜಾತಿ ಎಂದು ಗುಲ್ಲೆಬ್ಬಿಸಿ ಸರ್ಕಾರಿ ಸೌಲಭ್ಯ ವಂಚಿಸಲು ತಿಳಿಯದ ಜನಗಳಿಗೆ ಮತ್ತು ಅಧಿಕಾರಿ ವರ್ಗಕ್ಕೆ ವಿಷ ಬೀಜ ಬಿತ್ತಿದ್ದರು. ಇದು ನಾನಾ ಇಲಾಖೆಗಳಲ್ಲಿ ನಾನಾರೂಪ ಪಡೆದು ನಾನಾ ಸಮಸ್ಯೆಗಳನ್ನು ಸೃಷ್ಟಿಸಿತು.ಕಡಿಮೆ ಜನಸಂಖ್ಯೆ ಇರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತಿತರ ಹಲವು ರಂಗಗಳಲ್ಲಿ ದುರ್ಬಲವಾಗಿರುವ ಈ ಸಮುದಾಯಕ್ಕೆ ಹೈಕೋರ್ಟಿನಲ್ಲೂ ಇತ್ಯಾರ್ಥವಾಗದ ಅರ್ಜಿಗಳು ಇನ್ನು ಹಾಗೆ ಉಳಿದಿವೆ. ಮೀಸಲಾತಿ ಈ ಜನಾಂಗಕ್ಕೆ ಜಾರಿಯಾದಂದಿನಿಂದಲೂ ಅಂದರೆ ಆರಂಭಗೊಂಡ ಡಿ. ದೇವರಾಜ ಅರಸು ಅವರ ಕಾಲದಿಂದಲೂ ಹಾಗೇ ಮುಂದೂಡುತ್ತ ಬಂದಿವೆ. ಇಂತಹ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ’ಮಾಲೇರು’ ಜನಾಂಗದಲ್ಲಿದ್ದ “ಸಮಾಜ ಸುಧಾರಕ ಸಂಘ” ವು ವಿಲೀನಗೊಂಡು “ಕರ್ನಾಟಕ ರಾಜ್ಯದ ಮಾಲೇರು ವರ್ಗದ ಸಂಘ” ಅಸ್ತಿತ್ವಕ್ಕೆ ಬಂದಿತು. ಈ ಸಂಘದ ಮನವಿ ಪತ್ರಗಳು ಯಾವ ಅಧಿಕಾರಿಗಳಿಗಾಗಲಿ, ರಾಜಕಾರಣಿಗಳಿಗಾಗಲಿ, ನ್ಯಾಯಾಧೀಶರಿಗಾಗಲಿ ಯಾರ ಕಣ್ಮನಗಳಿಗೂ ತಾಕದಂತಾಗಿವೆ. ಈ ಎಲ್ಲ ಕಾರಣದಿಂದಾಗೆ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಇನ್ನು ಸಾಧ್ಯವಾಗಿಲ್ಲ. ಇದನ್ನು ಅರಿತೆ ಜಾಗೃತರಾದ ಕೆಲವು ವಿದ್ಯಾವಂತ ಮಹಿಳೆಯರು ಕೂಡಿ ೧೯೯೫ರಲ್ಲೇ ರಚಿಸಿಕೊಂಡ ಸಂಘ “ಮಾಲೇರು ಮಹಿಳಾ ಕೂಟ”ವು ದಲಿತ ಸಂಘರ್ಷ ಸಮಿತಿಯ ಹಿರಿಯನಾಯಕರಾದ ಹಾಸನದ ಚಂದ್ರಪ್ರಸಾದ್ ತ್ಯಾಗಿ ಅವರಿಂದ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಮೂಲಕ ಹೊಲಿಗೆ ತರಬೇಕು, ಕರಕುಶಲ ತರಬೇತಿ, ಮತ್ತಿತರ ಸಣ್ಣಪುಟ್ಟ ಕೈಕಸುಬುಗಳ ಮಾಹಿತಿ ತರಬೇತಿ ಪಡೆದು ತಮಗೆ ತಾವು ಸ್ವಾವಲಂಬಿಗಳಾಗಿ ಬದುಕಲು ದಾರಿ ಹುಡುಕುತ್ತಾ ಸಾಗಿದೆ.

ಈ ಸಂಘಟನೆಯ ಕೇಂದ್ರಸ್ಥಾನ ಬೆಂಗಳೂರು. ಆದ್ದರಿಂದ ಗ್ರಾಮೀಣ ಪ್ರದೇಶದ ಜನಕ್ಕೆ ಈ ಸಂಘಟನೆ ಬಗ್ಗೆ ತಿಳಿದಿಲ್ಲ. ಇದರ ಯಾವ ಮಾರ್ಗದರ್ಶನವಾಗಲಿ, ಸಹಾಯ, ಸಹಕಾರ-ವಾಗಲಿ ಯಾವುದು ಲಭ್ಯವಾಗುತ್ತಿಲ್ಲ. ಗ್ರಾಮೀಣ ಮಹಿಳೆಯರಿಗೆ ತಮ್ಮ ಹೊಟ್ಟೆಪಾಡಿನಕೂಡಲಿ -ನಾಲಿ, ದೇವಾಲಯಗಳ ಸೇವೆಯ ಅನ್ನವೆ ಜೀವನಾಧಾರವಾಗಿ ಪರಿಣಮಿಸಿದೆ. ಅಂತಹ ಪ್ರದೇಶಗಳೆಂದರೆ ಮೂಡಿಗೆರೆ ಕಳಸದ ಹತ್ತಿರ ಹಳುವಳ್ಳಿಯ ಸುತ್ತಮುತ್ತಲ ಗುಡ್ಡದ ಪ್ರದೇಶಗಳಲ್ಲಿ ಹತ್ತಾರು ಕುಟುಂಬಗಳು ಹೊರನಾಡ ಅನ್ನಪೂರ್ಣೇಶ್ವರಿ ದೇವಸ್ಥಾನದ ಅನ್ನವನ್ನು ಅಲ್ಲಿಯ ಬ್ರಾಹ್ಮಣರ ಮನೆಯ ಹೊಲ, ಗದ್ದೆ, ತೋಟದ ಕೃಷಿ ದೇವಾಲಯದ ಸೇವ ಕೆಲಸವನ್ನೇ ನಂಬಿಕೊಂಡಿವೆ.

ಬರಗೋಡು, ಕೆತ್ಲುಗುಡ್ಡೆ, ಹಂದಿಹಡ್ಲು, ಕೋಣೆ ಬಯಲು, ಲಿಂಗನ ಹಿತ್ಲು ಮತ್ತು ಕಳಸದ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ, ಗೇಣಿದಾರರಾಗಿ ಕೃಷಿ ಮಾಡುತ್ತ ಸ್ವಂತ ಸ್ಥಳ-ಮನೆಗಳನ್ನಾಗಿ ಮಾಡಿಕೊಂಡು ಅವುಗಳಲ್ಲೆ ತಮ್ಮ ಆದಾಯವನ್ನು ಜೀವನೋಪಾಯಕ್ಕೆ ಮಾಡಿಕೊಂಡು ಬದುದನ್ನು ಕಳೆಯುತ್ತಿರುವ ಹಲವಾರು ಕುಟುಂಬಗಳಿವೆ. ಇವರು ಯಾರಿಗೂ ತಿಂಗಳು, ವರ್ಷದ ಆದಾಯವಿರಲಿ ಆಯಾ ದಿನದ ತಮ್ಮ ಹೊಟ್ಟೆ, ಬಟ್ಟೆ ಜೀವನಕ್ಕೂ ಕೊರತೆ ಇರುವ ಕೂಲಿಯು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಆದಾಯ ಎಲ್ಲಿಂದ ಬರಬೇಕು ಇದು ಇವರ ಬದುಕು.

’ಮಾಲೇರು’ ಎಂಬ ಜಾತಿ ಹೆಸರಿನ ಜನಕ್ಕೆ ಸಾಮಾಜಿಕ ಸ್ಥಾನಮಾನಗಳಿಲ್ಲದೆ ಆರ್ಥಿಕವಾಗಿಯೂ ಅವರು ಬೆಳವಣಿಗೆ ಆಗಲು ಸಾಧ್ಯವಾಗಿಲ್ಲ. ಏಕೆಂದರೆ ಇವರಲ್ಲಿ ಕೆಲವರು ನಾವು ಹೀನಕುಲದವರು ಬಹಿಷ್ಕೃತ ಸಮಾಜದವರು, ಶುದ್ಧ ತಾಯಿ-ತಂದೆಯ ವಂಶಸ್ಥರು ನಾವಲ್ಲ ಎಂಬ ಕೀಳರೆಮೆಯಿಂದಾಗಿ ಎಷ್ಟೋ ಕುಟುಂಬಳು ಸ್ವಾಭಿಮಾನ ಆತ್ಮಗೌರವವಿಲ್ಲದೆ ತಮ್ಮ ಜಾತಿಯ ಹೆಸರನ್ನು ಸುಳ್ಳು ಹೇಳಿಕೊಂಡು ನಾವು ಬ್ರಾಹ್ಮಣರು ಎಂದು ಅವರ ಸಂಪ್ರದಾಯ, ಆಚರಣೆತಗಳನ್ನೆ ಅನುಸರಿಸುತ್ತಾ ಜನರನ್ನು ನಂಬಿಸಲು ಪ್ರಯತ್ನಪಡುತ್ತಾ ನಾನಾ – ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. ಹೆಚ್ಚಾಗಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರ, ಕಮಲಶಿಲೆ ಮತ್ತುಕುಂದಾಪುರಗಳಲ್ಲಿ ಕೆಲವು ಕುಟುಂಬಗಳು ಸುಳ್ಳು ಹೇಳಿ ಬದುಕುತ್ತಿದ್ದಾರೆ. ಇದೇ ರೀತಿ ಶಿವಮೊಗ್ಗ ಜಿಲಲೆಯ ಸುತ್ತಮುತ್ತ ವಾಸಿಸುವ ಕೆಲವು ಕುಟುಂಬಗಳಿವೆ. ಯಾವ ಪ್ರದೇಶದಲ್ಲಿ ಜಾತಿ ವ್ಯವಸ್ಥೆಯ ಮೇಲುಕೀಳೆಂಬ ಭಾವನೆಗಳು ಜನರಲ್ಲಿ ಹೆಚ್ಚಿವೆಯೋ ಅಂತಹ ಪ್ರದೇಶದಲ್ಲಿ ಈ ಜನರು ನಾವೂ ಬ್ರಾಹ್ಮಣರೆ ಎಂದು ಹೇಳಿಕೊಂಡು ಜನಿವಾರ ತೊಟ್ಟು ಡೋಂಗಿ ಬ್ರಾಹ್ಮಣಾಚರಣೆಗಳನ್ನು ಅನುಸರಿಸುತ್ತಿದ್ದಾರೆ. ಏಕೆಂದರೆ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಉತ್ತಮ ಸ್ಥಾನವರ್ಗದಲ್ಲಿ ಗುರುತಿಸಿಕೊಂಡವನು ಆರ್ಥಿಕವಾಗಿಯೂ ಅವನು ಉನ್ನತ ಸ್ಥಾನಕ್ಕೆ ಏರಬಲ್ಲ. ಆದ್ದರಿಂದಲೇ ಈ ಸಮುದಾಯ ಅನ್ಯಮಾರ್ಗವನ್ನು ಹಿಡಿಯಲು ದಾರಿಯಾಗಿದೆ.

ಚಿಕ್ಕಮಗಳೂರು ಕೊಪ್ಪತಾಲ್ಲೂಕಿನ ಮೆಗುಂದ ಹೋಬಳಿಯಲ್ಲಿ, ನರಸಿಂಹರಾಜಪುರದ ಕೆಲವು ಪ್ರದೇಶಗಳಲ್ಲಿ ಹಲವಾರು ಕುಟುಂಬಗಳಿಗೆ ಬಡತನದಿಂದ ಬಿಡುಗಡೆ ಸಿಕ್ಕಿಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶದ ಈ ಮಹಿಳೆ ತಿಂಗಳಿಗೆ ೫೦೦ ರೂ. ದುಡಿಯುತ್ತಾಳೆ. ಈ ಹಣ ಅವಳ ಮಕ್ಕಳ ಹೊಟ್ಟೆ ಬಟ್ಟೆಗೂ ಸಾಲುವುದಿಲ್ಲ. ಹೀಗಾಗಿ ಇವಳು ಯಾವ ಗುಡಿ ಕೈಗಾರಿಕೆಗಳನ್ನು ಕೈಗೊಳ್ಳು ಸಾಧ್ಯವಾಗುತ್ತಿಲ್ಲ. ಜೊತೆಗೆ ಕನಿಷ್ಟ ಕೂಲಿಯೂ ಇಲ್ಲ-ದಂತಾಗಿದ್ದಾರೆ. ಏಕೆಂದರೆ ಜಾಗತೀಕರಣದ ಬೆಳವಣಿಗೆಯಿಂದಾಗಿ ಆಧುನಿಕ ಯಂತ್ರ ತಂತ್ರಜ್ಞಾನಗಳು ಬೆಳೆದುಈಜನರ ದೈಹಿಕ ಶ್ರಮವಾದ ಕೂಲಿಗೆ ಕುತ್ತು ಬಂದೊದಗಿದೆ. ಇವರ ದಿನನಿತ್ಯದ ಕೆಲಸಗಳಾದ ಹೊಲ, ಗದ್ದೆ, ತೋಟಗಳ ಉಳುಮೆ, ಅಗೆತಕ್ಕೆ; ಹಳ್ಳ, ಕೊಳ್ಳ, ಕಾಲುವೆಗಳನ್ನು ತೆಗೆಸಲು, ಮಣ್ಣನ್ನು ಹೆರಲು ಇಂತಹ ನಾನಾ ಕೆಲಸಗಳಿಗೆ ಇಂದು ಜೆ.ಸಿ.ಪಿ ಹಿಟಾಚಿ ಯಂತ್ರಗಳು, ಟ್ರಾಕ್ಟರ್‌ಗಳು ಬಳಕೆಯಾಗುತ್ತಿವೆ. ಭತ್ತ ನಾಟಿ ಮಾಡಲು ಕಳೆ ಕೀಳಲು,ಭತ್ತ ಬಡಿಯಲು ಸಹ ಯಂತ್ರಗಳು ಬಳಕೆಯಾಗುತ್ತಿವೆ. ಇಂತಹ ಆಧುನಿಕ ಅಭಿವೃದ್ಧಿಗಳು ಗ್ರಾಮೀಣ, ಹಳ್ಳಿಗಾಡು ಪ್ರದೇಶಗಳಲ್ಲಿ ಕೂಲಿಯನ್ನೇ ಆಶ್ರಯಿಸಿ ಬದುಕುತ್ತಿದ್ದ ಜನಕ್ಕೆ ಪರ್ಯಾಯ ಮಾರ್ಗಗಳಿಲ್ಲದೆ ತಮ್ಮ ಕುಟುಂಬ ಸಾಕಲು ಯಾವ ಆದಾಯವು ಇಲ್ಲದೆ, ನಿರಾಧಾರ ಸ್ಥಿತಿಯನ್ನು ತಲುಪಿ ನರಳುವಂತೆ ಮಾಡಿವೆ.

ಕರ್ನಾಟಕದ ಹಲವಾರು ಭಾಗಗಳಲ್ಲಿ ಬೆರಳೆಣಿಕೆಯ ಕುಟುಂಬಗಳು ವಾಸಮಾಡು-ತಿದ್ದಾರೆ. ಈ ಜನರಿಗೆ ಆರ್ಥಿಕ ಬೆಳವಣಿಗೆಯ ಆಧಾರವಾದ ಭೂ ಮಾಲಿಕತ್ವ, ಕೈಗಾರಿಕೆ ಒಡೆತನ, ಆರೋಗ್ಯಕೇಂದ್ರ, ಶಿಕ್ಷಣ ಸಂಸ್ಥೆ, ಸಹಕಾರಿ ಬ್ಯಾಂಕ್ ಮತ್ತಿತರ ಯಾವುದೇ ಸಾಧನ, ಸಂಪನ್ಮೂಲ ಕೇಂದ್ರಗಳಾವುವು ಇವರ ಹಿಡಿತದಲ್ಲಿಲ್ಲ. ಹಾಗಾಗಿ ಆದಾಯಗಳಿಸುವ, ಉದ್ಯೋಗ ನೀಡುವ ಯಾವುದೇ ಮೂಲವು ಈ ಜನರಿಗೆ ಇಲ್ಲ. ಇಂತಹ ಮೂಲ ಕಾರಣಗಳಿಂದ ಸ್ತ್ರೀಯರು ಆದಾಯ ಹೀನರಾಗಿ ದುರ್ಬಲರಾಗಿದ್ದಾರೆ. ಆದಾಯಗಳಿಸುವುದಕ್ಕಿಂತ ಹೆಚ್ಚಾಗಿ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಂಡು ತನ್ನ ಗಂಡ ಮಕ್ಕಳನ್ನು ನೋಡಿಕೊಳ್ಳಲು, ದುಡಿಯಲು ಯಾವ ಮೂಲವು, ಇಲ್ಲದೆ ಮಾನಸಿಕ ಹಿಂಸೆಯಿಂದಲೇ ಎಷ್ಟೋ ಕುಟುಮಬಗಳು ಹಳ್ಳಿಗಾಡುಗಳಲ್ಲಿ ಬಳಲುತ್ತಿವೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಜಾಗತೀಕರಣವನ್ನು ಆಧುನೀಕರಣವನ್ನು ವಿರೋಧಿಸಿಯೂ ವಿರೋಧಿಸದಂತೆ ಧ್ವನಿ ಇಲ್ಲದವರಂತಾಗಿ ಹೇಗೋ ಆಯಾ ಪ್ರದೇಶದ ಪರಿಸರ ಪರಿಸ್ಥಿತಿಗಳನ್ನು ಎದುರಿಸುತ್ತಾ ಹೊಂದಾಣಿಕೆಯಲ್ಲೇ ಹೋಗುತ್ತಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಹೆಣ್ಣು ದುರ್ಬಲಳಾಗಿ ಬಡತನದಿಂದ ಕಡು ಬಡವಳಾಗಿ, ಹೊಟ್ಟೆ ಪಾಡಿಗಾಗಿ ಹೂ ಮಾರುವ ದೇವಾಲಯಗಳ ಸೇವೆ ಮಾಡುವ, ಬೇರೆ ಕಡೆ ಕೂಲಿ ನಾಲಿ ಮಾಡಿ ಜೀವನ ಮಾಡುತ್ತಿದ್ದಾಳೆ. ಈ ವೃತ್ತಿಗಳಲ್ಲಿಯೂ ಆ ದಿನದ ಹೊಟ್ಟೆಯ ಆದಾಯವು ಸಿಗದಿದ್ದಾಗ ಪೋಲಿ ಗಂಡಸರ ಪ್ರಚೋದನೆಗೆ ಸಿಕಕಿ ತಮ್ಮಮೈಯಾರಿಕೊಂಡು ಜೀವನ ಮಾಡುತ್ತಿರುವ ಕುಟುಂಬಗಳು ಹಲವಾರಿವೆ. ಇವರ ಜೀವನಕ್ಕಾಗಿ ಸರ್ಕಾರ ಯಾವ ಆಧಾರವಾಗಲಿ, ಮಾರ್ಗಸೂಚಿಗಳನ್ನು ನೀಡಿಲ್ಲ.ಹಾಗಾಗಿ ಈ ಬಡವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಇನ್ನಿತರ ಎಲ್ಲ ಕ್ಷೇತ್ರಗಳಲ್ಲೂ ದುರ್ಬಲರಾಗಿ ಹೀನ ಸ್ಥಿತಿಗೆ ತಲುಪುತ್ತಿದ್ದಾರೆ.

ಹೊರಗಿನ ಪ್ರಭಾವಗಳಿಂದ ಆಗಿರುವ ಪರಿಣಾಮಗಳು:

ಯಾವುದೇ ಅಲ್ಪಸಂಖ್ಯಾತ, ಬುಡಕಟ್ಟು, ಸಮುದಾಯಗಳ ಮೇಲೆ ಬಹುಸಂಖ್ಯಾತಜನ,ಸಮಾಜ, ಸಂಸ್ಕೃತಿ, ದೇಶ, ಭಾಷೆ, ಜ್ಞಾನ, ವಿಷಯ, ವಿಚಾರಗಳ ಪ್ರಭಾವವಾಗುವುದು ಸಾಮಾನ್ಯ. ಹೀಗೆ ಒಂದರ ಮೇಲೆ ಒಂದು ನಾನಾರೀತಿಯ ಪ್ರಭಾವ ಪರಿಣಾಮವಾದಂತೆಲ್ಲ ಮಾಲೇರು ಮಹಿಳಾ ಸಮುದಾಯ ಪರಿವರ್ತನೆಯ ದಿಕ್ಕಿನತ್ತ ಸಾಗುತ್ತಾ ಬಂದಿದೆ. ಈ ನಾಡಿನ ಅಲ್ಪಸಂಖ್ಯಾತರಾದ ಇವರ ಮೇಲೆ ಈ ದೇಶದ ಅಲ್ಪಸಂಖ್ಯಾತರಾದ ಬ್ರಾಹ್ಮಣ ಸಮುದಾಯದ ಸಂಸ್ಕೃತಿ, ಜ್ಞನ ಮತ್ತು ಅವರ ನಾನಾ ವಿಷಯ ವಿಚಾರಗಳ ಪ್ರಭಾವವಾಗಿರುವುದು ಇಲ್ಲಿ ಪ್ರಧಾನ ಸಂಗತಿ, ಜೊತೆಗೆ ನಾಗರಿಕ ಸಮಾಜ. ಆಧುನಿಕ ಜಗತ್ತಿನ ಜಾಗತೀಕರಣದ ಬೆಳವಣಿಗೆಯ ವಿಜ್ಞಾನ,ತಂತ್ರಜ್ಞಾನ, ವೈಚಾರಿಕತೆಯಂತಹ ಜ್ಞಾನ ಶಾಖೆಗಳಿಂದ ಈ ಮಹಿಳೆಯರ ಮೇಲೆ ಮತ್ತು ಅವರಹೆಣ್ಣು ಮಕ್ಕಳ ಮೇಲೆ ನಾನಾ ಪ್ರಭಾವ ಪರಿಣಾಮಗಳಾಗಿವೆ. ಅದರಲ್ಲೂ ಇವರ ಶಿಕ್ಷಣ, ಉದ್ಯೋಗ, ಆರ್ಥಿಕತೆ,ಸಾಂಸ್ಕೃತಿಕ ಜೀವನ ಮತ್ತಿತರ ಜೀವನ ಪ್ರವೃತ್ತಿಗಳಲ್ಲಿ ಬದಲಾವಣೆಯ ಹಂತಗಳು ಹೆಚ್ಚಾಗಿವೆ. ಇದರಿಂದ ಈ ಸಮುದಾಯದ ಮಹಿಳೆಯರಲ್ಲಿಅವರ ಸಮಾಜದ ಬದಲಾವಣೆಗೆ ಹೊಮದಾಣಿಕೆಯು ಇದೆ. ವಿರೋಧವು ಇದೆ. ಇಂತಹವುಗಳಿಂದ ಕುಟುಂಬ ವ್ಯವಸ್ಥೆಯಲ್ಲಿ ನಾನಾ ಬದಲಾವಣೆಗಳು ಆಗಿರುವುದು ಕಂಡುಬರುತ್ತವೆ.

ಮಾಲೇರು ಮಹಿಳೆಯರ ಮಾನಸಿಕ ಹೊಂದಾಣಿಕೆ ಮತ್ತು ವಿರೋಧಗಳು

ಈ ಸಮುದಾಯದ ಮಹಿಳೆಯರಿಗೆ ಆರು ದಶಕಗಳ ಹಿಂದೆ ಅವರ ಹುಟ್ಟು ಮತ್ತು ಬೆಳವಣಿಗೆ, ಜೀವನ ಸ್ಥಿತಿಗತಿಗಳಿಂದ ತಮ್ಮಗಳ ಬಗ್ಗೆ ಕೀಳರಿಮೆ ಸೃಷ್ಟಿಯಾಗಿತ್ತು. ಇದರಿಂದಾಗಿ ತಮ್ಮ ಆತ್ಮಗೌರವ, ಸ್ವಾಭಿಮಾನ ಇಲ್ಲದವರಾಗಿ ಜೀವನಸಾಗಿಸುತ್ತಿದ್ದರು. ಆದರೆ ಐದು ಆರು ದಶಕಗಳ ನಂತರ ಕಾಲ, ದೇಶ, ಸಮಾಜ, ಸಂಸ್ಕೃತಿ, ವಿಜ್ಞಾನ, ವಿಚಾರಗಳು ಬೆಳೆದಂತೆ ಈ ಮಹಿಳೆಯರು ತಮ್ಮ ಕೀಳರಿಮೆಯಿಂದ ಬಿಡುಗಡೆ ಹೊಂದುವ ಸ್ಥಿತಿಗೆ ಮಾನಸಿಕವಾಗಿ ಪರಿವರ್ತನೆಯಾಗಿದ್ದಾರೆ. ಇದಕ್ಕೆ ಮೂಲಕಾರಣ ಅವರ ಶಿಕ್ಷಣ ಮತ್ತು ಜೀವನ ಪರಿಸರ. ಈ ತಿಳುವಳಿಕೆಗಳಿಂದ ಜಗತ್ತಿನ ನಾನಾ ವಿಷಯ, ವಿಚಾರ, ಚಿಂತನೆಗಳ ಬದಲಾವಣೆಯ ಅರಿವಾದಂತೆ ಪ್ರಗತಿಶೀಲ ಮನೋಭಾವ ಈ ಹೆಣ್ಣು ಮಕ್ಕಳಲ್ಲಿ ಬೆಳವಣಿಗೆಯಾಗುತ್ತಿದೆ.

ವೈದಿಕ ಬ್ರಾಹ್ಮಣರ ಸಂಸ್ಕೃತಿ ಸಂಪ್ರದಾಯಗಳ ಮೌಢ್ಯತೆಯ ಸುಳಿಗೆ ಸಿಕ್ಕ ಮಾಲೇರು ಸಮಾಜದ ಮಹಿಳೆಯರು ಹೆಚ್ಚಾಗಿ ಪುರುಷರಿಂದ ಶೋಷಣೆಗೊಳಪಟ್ಟು, ಬಹಿಷ್ಕೃತರಾಗಿ ಸೃಷ್ಟಿಯಾದ ತಮ್ಮ ಕುಲದ ಕಾರಣ-ಹಿನ್ನೆಲೆಗಳನ್ನು ಈ ಹಿಂದೆ ತಿಳಿಯದಾಗಿದ್ದರು. ಆದ್ದರಿಂದಲೇ ಅಂದಿನಿಂದ ತಮ್ಮ ಜೀವನ ಪೂರ್ತಿ ನಡೆಯುತ್ತಿದ್ದ ಹಿಂಸೆ, ದಬ್ಬಾಳಿಕೆ, ಶೋಷಣೆಗಳನ್ನು “ನಿಮ್ಮ ಪೂರ್ವ ಜನ್ಮದ ಪಾಪ, ಕರ್ಮದ ಫಲ” ಎಂಬ ನಂಬಿಕೆಗಳ ಮೂಲಕ ಪುರೋಹಿತರು ಭಿತ್ತಿದ ತಂತ್ರಗಳನ್ನು ಅರಿಯದೆ ನಂಬಿದ್ದರು. ಹಾಗಾಗಿ ಪುರೋಹಿತ ಸಮುದಯದೊಂದಿಗೆ ಮತ್ತು ಇಡೀ ಸಮಾಜದೊಂದಿಗೆ ತಮ್ಮ ಜೀವನವನ್ನು ಹೊಂದಾಣಿಕೆ ಮಾಡಿಕೊಂಡು ತಮ್ಮ ಬಾಳನ್ನು ಸಾಗಿಸುತ್ತಿದ್ದರು. ಆದರೆ ಇಂದು ತಿಳಿದವರಾದಂತೆಲ್ಲ ಈಗ ಸೃಷ್ಟಿಯಾಗಿರುವ ತಮ್ಮ ಜಾತಿ,ಕುಲದ ಭಾವ ಮತ್ತು ಹಿನ್ನೆಲೆಯ ಪರಿಕಲ್ಪನೆಗಳನ್ನೆಲ್ಲ ವರೆಸಿಹಾಕಲೆಂದುಮಹಿಳೆಯರು ತಮ್ಮ ಮಕ್ಕಳು ಮತ್ತು ಪುರುಷರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆಯಿಂದಾಗಿ ಚೆಲುವೆಯರಾದ ಮಾಲೇರ ಬುದ್ದಿವಂತ ಹೆಣ್ಣುಮಕ್ಕಳು ತಾವು ಇಷ್ಟಪಟ್ಟ ಅಥವಾ ತಮ್ಮನ್ನು ಇಷ್ಟ ಪಟ್ಟಂತಹ ಬೇರೆ ಬೇರೆ ಧರ್ಮ, ಜಾತಿಯ ಅಂದ್ರೆ ಕ್ರೈಸ್ತರಿಂದಹಿಡಿದು ಅಯ್ಯಂಗಾರಿ ಬ್ರಾಹ್ಮಣರು ಹಾಗೂ ಪರಿಶಿಷ್ಟ ಜಾತಿ ಮತ್ತು ಇತರೆ ನಾನಾ ಜಾತಿ, ಮತ, ವರ್ಗದ ಹುಡುಗರನ್ನು ಒಪ್ಪಿ, ಪ್ರೀತಿಸಿ, ಮದುವೆಯಾಗುವ ವಿಶಾಲ ಮನೋಭಾವದಿಂದ ಮುನ್ನೆಡೆಯುತ್ತಿದ್ದಾರೆ. ಇದಕ್ಕೆ ಅವರ ತಂದೆ ತಾಯಿಯರು ತಮ್ಮ ಮಕ್ಕಳನ್ನು ಪ್ರೀತಿಸಿ ಮದುವೆಯಾಗುವು ಹುಡುಗ, ಹುಡುಗಿಯರ ಸಂಬಮಧಿಕರೊಂದಿಗೆ ಮತ್ತು ತಮ್ಮ ಸಮುದಾಯದವರೊಟ್ಟಿಗೆ ಹಾಗೂ ತಮ್ಮ ಮಕ್ಕಳೊಡನೆ ಹೊಂದಾಣಿಕೆ ಮಾಡಿಕೊಂಡು ಎಲ್ಲರೊಂದಿಗೆ ಪ್ರೀತಿ ಸ್ನೇಹದಿಂದ ಬಾಳುವಂತೆ ಹೇಳುತ್ತಾ ಮಕ್ಕಳು ಹಿಡಿವ ಒಳ್ಳೆಯ ದಾರಿ ಮಾರ್ಗಕ್ಕೆ ಬಂಬಲ ಸೂಚಿಸುತ್ತಾ ಬಂದಿದ್ದಾರೆ. ಇಂತಹ ಅಂತರ್‌ಜಾತಿ-ಧರ್ಮಗಳ ವಿವಾಹದಿಂದಾಗಿ ಇವರಿಗೆ ಅಂದ ಚೆಂದದ, ಆರೋಗ್ಯವಂತ, ಬುದ್ಧಿವಂತ ಮಕ್ಕಳು ಹುಟ್ಟುತ್ತಿದ್ದಾರೆ. ಇದರಿಂದ ಮಾನವ ಸಂತತಿಯ ಆರೋಗ್ಯವಂತ ಬೆಳವಣಿಗೆಗೆ ಭಿನ್ನ ಕುಲದ ಸಂಸಾರ ಜೀವನವೇ ವೈಜ್ಞಾನಿಕ ಸತ್ಯದ ಸಾಕ್ಷಿಯಾಗಿ ಮಾಲೇರು ಮಕ್ಕಳು ಮುನ್ನಡೆಯುತ್ತಿದ್ದಾರೆ. ಈ ಸಮುದಾಯದ ಇಂತಹ ಬೆಳವಣಿಗೆಗಳು ಮುಂದಿನ ಸಮಾಜಕ್ಕೆ ಮಾದರಿಯಾಗಿ ಬೆಳೆಯುತ್ತಿರುವುದು ವಿಶೇಷವಾಗಿದೆ.

ಮಾಲೇರು ಸಮುದಾಯ ಹೆಣ್ಣು ಮಕ್ಕಳು ಅನ್ಯ ಜಾತಿ-ಧರ್ಮದ ಹುಡುಗರೊಂದಿಗೆ ಬಾಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಇಂತಹವರು ಬಹುಪಾಲು ಉನ್ನತ ಶಿಕ್ಷಣ ಪಡೆದವರಾಗಿದ್ದಾರ. ಹಾಗಾಗಿ ಬೇರೆ ಹುಡುಗರು ಈಹುಡುಗಿಯರನ್ನು ಮದುವೆಯಾಗಿದ್ದಾರೆ. ವಿದ್ಯಾವಂತ ಮತ್ತು ಉದ್ಯೋಗಸ್ಥ ಹುಡುಗಿಯರು ಬೇರೆ ಜಾತಿಯ ಹುಡುಗರನ್ನು ಮದುವೆ ಆಗುವುದನ್ನು ವಿರೋಧಿಸುವವರು ಮಾಲೇರು ಜನರಲಿದ್ದಾರೆ. ಹಾಗೆಯೇ ಆ ಹುಡುಗನ ಮನೆಯವರು ವಿರೋಧಿಸುವವರು ಇದ್ದಾರೆ. ಆದರೆ ಮಾಲೇರು ಮಾತ್ರ ತಮ್ಮ ಮಕ್ಕಳ ಒಪ್ಪಿ ಆಗುವಾಗ ವಿರೋಧವೇಕೆ ಎಂದು ಅವರಿಗೆ ಬದುಕಿನ ತಿಳುವಳಿಕೆ ನೀಡಿ ಬೆಂಬಲ ಸೂಚಿಸುತ್ತಿದ್ದಾರೆ. ಈ ಇಬ್ಬರ ವಿರೋಧದೊಳಗೂ ಪ್ರೋತ್ಸಾಹ ನೀಡುವವರ ಧೈರ‍್ಯದಿಂದ ಹೊಂದಾಣಿಕೆ ಮಾಡಿಕೊಂಡು, ದಿನನಿತ್ಯ ಪರ-ವಿರೋಧಗಳನ್ನು ಎದುರಿಸುತ್ತಾ ಮುಜುಗರ-ದಿಂದಲೂ, ದಿಟ್ಟತನದಿಂದಲೂ ಬಾಳುತ್ತಿರುವ ಕುಟುಂಬಗಳು ಹಲವಾರಿವೆ.

ಇಂತಹ ವಿವಾಹಗಳು ನಗರ, ಪಟ್ಟಣಗಳಲ್ಲೆ ಜಾಸ್ತಿ. ಗ್ರಾಮ, ಹಳ್ಳಿಗಳಲ್ಲಿ ತುಂಬ ಕಡಿಮೆ. ನಗರದ ವಿದ್ಯಾವಂತಹ ಹೆಣ್ಣು ಮಕ್ಕಳು ತಮ್ಮ ಕುಲದ ಕೀಳರಿಮೆಯಿಂದ ನಲುಗಿ ಹೋಗಿದ್ದಾರೆ. ಹಾಗಾಗಿ ಆ ಕುಲದಲ್ಲೇ ಬಾಳಿ, ಬದುಕಲು ಹಿಂಜರಿದು ಯಾವ ಜಾತಿ ಯಾದರೂ ಸರಿ ನನ್ನನ್ನು ಇಷ್ಟ ಪಡುವವನನ್ನು ಕೂಡಿ ಬಾಳುವುದು ಲೇಸೆಂದು ತಿಳಿದು ಎಂತಹ ವಿರೋಧಗಳಿದ್ದರು ಅವುಗಳನ್ನೆಲ್ಲ ಎದುರುರಿಸಿ ಮುನ್ನೆಡೆಯುತ್ತಿದ್ದಾರೆ. ಹೀಗೆ ಮದುವೆಯಾದ ಈ ಮಹಿಳೆಯರು ತಾವು ಹುಟ್ಟಿ ಬೆಳೆದ ಜೀವನ ಸಂಸ್ಕೃತಿಗಳನ್ನು ಬಿಟ್ಟು ತನ್ನ ಪತಿಯ ಕುಟುಂಬ, ಸಮಾಜ, ಸಂಸ್ಕೃತಿಗಳ ಜೀವನ ಪದ್ಧತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಈ ಹೊಂದಾಣಿಕೆಯ ಗುಣದಿಂದಾಗಿ ಅಂತರ್‌ಜಾತಿ ವಿವಾಹವಾದ ಮಹಿಳೆ ತನ್ನ ಸಂಸಾರ, ಕುಟುಂಬವನ್ನು ಚನ್ನಾಗಿ ನಡೆಸಿಕೊಂಡು ಸಾಗುತ್ತಿದ್ದಾಳೆ. ಇದಕ್ಕೆ ಅವಳ ತಂದೆ-ತಾಯಿ, ಅತ್ತೆ-ಮಾವ, ಗಂಡ ಎಲ್ಲರೂ ಸಹಕಾರ ನೀಡುತ್ತಿರುವುದು ಇವರ ಬೆಳವಣಿಗೆಗೆ ಬೆಂಬಲವಾಗಿದೆ. ಇವೆಲ್ಲ ನಾಳೆಯ ಸಮಾಜಕ್ಕೆ ಜೀವಂತ ಚಿನ್ಹೆಗಳಾಗಿವೆ.

ಈ ಮಹಿಳೆಯು ಹಿಂದೆ ವೇಷ-ಭೂಷಣಗಳ ಮೇಲೆ ಸಾಮಾಜಿಕ, ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಶೃಂಗಾರ ಮಾಡಿಕೊಂಡು ಹೋಗಿಬರುವ ಸಭೆ-ಸಮಾರಂಭ, ಶುಭಕಾಯ್ಯ-ಗಳಿಗೂ ಹೋಗುವಂತಹ ನಿರ್ಬಂಧಕ್ಕೆ ಒಳಪಟ್ಟಿದ್ದಳು. ಹಾಗಾಗಿ ಆಧುನಿಕ ಬೆಳವಣಿಗೆಯ ಸೋಂಕು ಕೂಡ ಇವರಿಗೆ ಆಗಿರಲಿಲ್ಲ. ಸುಮಾರು ನಲವತ್ತು ಐವತ್ತು ವರ್ಷಗಳ ಹಿಂದೆ ಇಂತಹ ಕಟ್ಟುಪಾಡುಗಳಿಗೆ ಒಳಪಟ್ಟು ಮಾನಸಿಕವಾಗಿ ಅವರು ಹೊಂದಿಕೊಂಡೆ ಜೀವನ ಮಾಡುತ್ತಿದ್ದರು. ಇತ್ತೀಚಿನ ಬೆಳವಣಿಗೆಗಳಿಂದ ಈ ಮಹಿಳೆಯರು ಈ ಆಚರಣೆ, ನಂಬಿಕೆ-ಗಳನ್ನೆಲ್ಲ ವಿರೊಧೀಸಿ, ಎಲ್ಲರಂತೆ ನಾವು ಸಮಾನರೆಂದು ಎಲ್ಲಾ ಕ್ಷೇತ್ರಗಳಲ್ಲೂ ಭಾಗಿಯಾಗುತ್ತಿದ್ದಾರೆ. ನಗರ, ಪಟ್ಟಣಗಳ ಮಹಿಳೆಯರ ಪ್ರಭಾವ ಅದರಲ್ಲೂ ಈ ಮಾಲೇರು ಉದ್ಯೋಗಸ್ಥ, ವಿದ್ಯಾವಂತ ಮಹಿಳೆಯರ ಮೇಲೆ ದಟ್ಟವಾಗಿದೆ. ಹಾಗಾಗಿ ಐವತ್ತು ವರ್ಷಗಳ ಹಿಂದಿನ ಮಾಲೇರು ಮಹಿಳೆಯರ ಸೋಂಕು ಇವತ್ತಿನ ಮಾಲೇರು ಮಹಿಳೆಯರ ಮೇಲೆ ಕಿಂಚಿತ್ತು ಸುಳಿಯದಂತೆ ಬದಲಾಗಿದ್ದಾರೆ. ಈಗ ಇವರು ಯಾರಿಗೂ ಕಡಿಮೆ ಇಲ್ಲದಂತೆ ವೇಷ-ಭೂಷಣಗಳಲ್ಲಿ ವಡವೆ ವಸ್ತ್ರ ಧರಿಸುವುದರಲ್ಲಿ ನಾಗರಿಕ ಆಧುನಿಕ ಸಮಾಜದ ಮಹಿಳೆಗೆ ಸಮಾನಳಾಗಿ ಸಾಗುತ್ತಿದ್ದಾಳೆ.

ಈ ಸಮುದಾಯದ ಮಹಿಳೆಯರ ಈ ಬದಲಾವಣಗೆ ಕಾರಣ ಕಡ್ಡಾಯ ಶಿಕ್ಷಣ ಮತ್ತು ಸರ್ಕಾರಿ ಮೀಸಲಾತಿ ಸೌಲಭ್ಯದ ಬಳಕೆಯಿಂದ, ಇದರ ಉಪಯೋಗದಿಂದ ಆರ್ಥಿಕವಾಗಿ ಬೆಳೆಯಲು ನಗರ, ಪಟ್ಟಣಗಳಲ್ಲಿ ಈಗೀಗ ಸಹಾಯವಾಗುತ್ತಿದೆ. ಇದು ಸಾಧ್ಯವಾಗು-ತ್ತಿರುವುದು ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರ. ಇವರಲ್ಲಿ ಸ್ವಂತ ಮನೆಗಳು ನಗರಗಳಲ್ಲಿ ಇಲ್ಲದಿದ್ದರೂ ಬಾಡಿಗೆ ಮನೆಯಲ್ಲೆ ಊಟ ಬಟ್ಟೆಗೆ ಕೊರತೆ ಇಲ್ಲದಂತೆ ತನ್ನ ಗಂಡ ಮಕ್ಕಳೊಂದಿಗೆ (ಸಮಾಧಾನದಿಂದ) ಬದುಕುತ್ತಿದ್ದಾರೆ. ಇದು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಆ ಮಹಿಳೆಯರನ್ನು ಕೇಳಿದರೆ, ಅವರು “ನಾವು ನಮಗೆ ಸಿಕ್ಕ ಶಿಕ್ಷಣ ಉದ್ಯೋಗ ಮತ್ತಿತರ ಸರ್ಕಾರಿ ಮೀಸಲಾತಿಯ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಅವುಗಳ ಉಪಯೋಗವನ್ನು ನಮ್ಮ ಸಂಸಾರ, ಕುಟುಂಬ, ಸಮಾಜ, ಸಮುದಾಯದ ಒಳಿತಿಗಾಗಿ ಸರಿಯಾಗಿ ಬಳಸಿಕೊಂಡು ಮುನ್ನೆಡೆಯುತ್ತಿದ್ದೇವೆ” ಎನ್ನುತ್ತಾರೆ. ನಮ್ಮ ಸಂಸಾರದ ಶಾಂತಿ, ಸಮಾಧಾನದ ಜೀವನವನ್ನು ನೋಡಿ ಸೈರಿಸದ ಜನ ನಮ್ಮ ಜನಾಂಗದ ಸರ್ಕಾರಿ ಮೀಸಲಾತಿ ಸೌಲಭ್ಯದ ಮೇಲೆ ಕಣ್ಣಿಟ್ಟು ನಾನಾ ರೀತಿಯ ಆರೋಪ, ಆಕ್ಷೇಪ ಮಾಡುತ್ತಾ ಬಂದಿದ್ದಾರೆ. ಇವರು ನಮ್ಮನ್ನು ಮಾಲೇರು ಅಲ್ಲ, ಬ್ರಾಹ್ಮಣರ ಒಂದು ಗುಂಪು (ಮತ, ಜಾತಿ) ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮನ್ನು ಬಿಟ್ಟು ಇನ್ಯಾರು ಮಾಲೇರು ಎನ್ನುವ ಜನರಿದ್ದಾರೆ ತೋರಿಸಿ ಎಂದರೆ; ಯಾರು ಆಧಾರ ಕೊಡುವುದಿಲ್ಲ. ಸಮಾಜ ಕಲ್ಯಾಣ ಇಲಾಖೆ ನೌಕರನೊಬ್ಬ ಮಾಡಿರುವ “ಮಾಲೇರು” ಹೆಸರಿಗೆ ಬದಲಾಗಿ “ಮಲೇರು” ಎಂದು ದಾಖಲಿಸಿದ ಹೆಸರನ್ನೇ ಬಳಸಿಕೊಂಡು “ಮಲೇರು” ಜನರಿದ್ದಾರೆಂದು ಇನ್ನೊಂದು ಬುಡಕಟ್ಟು ಜನ “ಮಲೆಕುಡಿಯರು” ಇವರನ್ನೆ ಹೆಸರಿಸುತ್ತಾ ಬಂದಿದ್ದಾರೆ. ಈ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಮತ್ತು ನ್ಯಾಯಾಲಯದ ಪ್ರತಿವಾದಿಗಳು ಹೀಗೆ ವಾದಿಸುತ್ತಾ ಬಂದಿದ್ದಾರೆ. ನಮ್ಮ ಸಮುದಾಯದ ಸರ್ಕಾರಿ ಸೌಲಭ್ಯದ ಬಗ್ಗೆ ಸರ್ಕಾರ, ನ್ಯಾಯಾಂಗ, ಅಧಿಕಾರಿಗಳು, ರಾಜಕಾರಣಿಗಳು ಯಾರೂ ಸಹ ನಮ್ಮ ಸಮುದಾಯದ ಈ ಸಾರ್ವತ್ರಿಕ ಕೆಲಸದ ಗೊಂದಲವನ್ನು ನಿವಾರಿಸುವಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ನಮಗೆ ಇನ್ನು ಸಹ ನ್ಯಾಯ ಸಿಗದೆ ಚಡಪಡಿಸುತ್ತಿದ್ದೇವೆಂದು ತಮ್ಮ ಅಳಲನ್ನು ತೋರಿಕೊಳ್ಳುತ್ತಾರೆ.

ಇಂತಹ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಇಂದಿನ ವಿದ್ಯಾವಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಸರ್ಕಾರಿ ಮೀಸಲಾತಿ ಸೌಲಭ್ಯವನ್ನು ಕಾಯದೆ ನಗರ, ಪಟ್ಟಣ, ಹಳ್ಳಿಗಳೆನ್ನದೆ ಎಲ್ಲಾ ಕಡೆಯಲ್ಲೂ ಶಿಕ್ಷಣ ಮತ್ತು ಉದ್ಯೋಗ (ಸರ್ಕಾರಿ ಮತ್ತು ಖಾಸಗಿ ಕ್ಷೇತ್ರ)ಗಳಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿ ಓದುತ್ತಾ, ದುಡಿಯುತ್ತಾ ಇದ್ದಾರೆ. ಇನ್ನು ಕೆಲವರು ಸ್ವಯಂ ಉದ್ಯೋಗ ಮಾಡಿಕೊಂಡೆ ಜೀವನ ಮಾಡುತ್ತಿದ್ದಾರೆ. ಇವರೆಲ್ಲ ಮುಂದಿನ ಪೀಳಿಗೆಗೆ ಮಾದರಿಯಾಗುತ್ತಿದ್ದಾರೆ. ಈ ಬೆಳವಣಿಗೆಗಳು ಯಾವುದೆ ಕೆಳವರ್ಗದ ಶೋಷಿತ ಸಮುದಾಯಕ್ಕೆ ಅಗತ್ಯವಾದ ಮಾರ್ಗಸೂಚಿಗಳಾಗಿವೆ. ಇವೆಲ್ಲ ವಿರೋಧದೊಳಗೂ ಮುನ್ನೆಡೆಯುವ ಹಂಬಲದಿಂದ ಸ್ತ್ರೀಯರು, ಗಂಡಸರು ಮತ್ತು ಮಕ್ಕಳೆಲ್ಲ ಸಮಾಜದೊಡನೆ ಮಾನಸಿಕವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರು ನಗರದ ಸ್ತ್ರೀಯರು ತಮ್ಮ ಸಮುದಾಯದ ಕುಟುಂಬಗಳ ಬೆಳವಣಿಗೆಗೆ ಮಕ್ಕಳ ಭವಿಷ್ಯವನ್ನೆಲ್ಲ ಗಮನದಲ್ಲಿರಿಸಿಕೊಂಡೆ ಹೀಗೆ ಸಾಗುತ್ತಿದ್ದಾರೆ.

ಕುಟುಂಬ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು

ಮಾಲೇರು ಸಮುದಾಯದ ಕುಟುಂಬ ವ್ಯವಸ್ಥೆಗಳು ಶತಮಾನದ ಸುಮಾರು ೪-೫ ದಶಕಗಳ ಕಾಲ ಅವರ ಪೂರ್ವಾಚರಣೆಗಳು, ಸಂಪ್ರದಾಯ, ನಂಬಿಕೆಯ ಜೀವನ ಇವೆಲ್ಲ ಮುಮದುವರೆಯುತ್ತಾ ಬಂದಿದ್ದೊ. ಭಾರತ ಸ್ವಾತಂತ್ರ‍್ಯ ಪಡೆದು ತಮ್ಮದೇ ಆದ ಸಂವಿಧಾನಬದ್ಧ ಪ್ರಜಾಪ್ರಭುತ್ವ ಆಡಳಿತ ಪ್ರಾರಂಬವಾದ ಮೇಲೆ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬದಲಾವಣೆಗಳಾದವು. ಇದರ ಪರಿಣಾಮ ಮಾಲೇರು ಸಮುದಾಯದ ಮೇಲೂ ಆಗಿ ಶಿಕ್ಷಣ ಸಿಕ್ಕ ಮೇಲೆ ಆ ಮಹಿಳೆಯರ ಜ್ಞಾನ ವಿಶಾಲವಾಗುತ್ತ ಬಂದು, ಈ ಜನರ ಕುಟುಂಬ ವ್ಯವಸ್ಥೆಗಳು ಬದಲಾಗುತ್ತಾ ಬಂದಿವೆ.

ಪೂರ್ವದಿಂದಲೂ ಮಾಲೇರು ಮಹಿಳೆಯರು ದೇವರು, ಸಂಪ್ರದಾಯ, ಆಚರಣೆಗಳೆಂಬ ಪುರೋಹಿತರ ಗೊಡ್ಡು ನಂಬಿಕೆಗಳಿಗೆ ಬಲಿಯಾಗಿದ್ದರು. ಇದರ ಪರಿಣಾಮವಾಗಿ ತಂದೆ-ತಾಯಿ, ಅತ್ತೆ-ಮಾವ, ಗಂಡ ಮಕ್ಕಳೆಂಬ ಸಾಮಾನ್ಯ ಸಂಸಾರ, ಕುಟುಂಬದ ಅನುಭವಗಳ ಪರಿಕಲ್ಪನೆಗಳಿಲ್ಲದ ಬಾಳಾಗಿತ್ತು. ಭಾರತೀಯ ಸಂಪ್ರದಾಯದಲ್ಲಿ ಹೆಣ್ಣು ತನ್ನ ತಂದೆ-ತಾಯಿಯ ಕುಟುಂಬದ ಕೊಂಡಿಯಿಂದ, ಅತ್ತೆ-ಮಾವರ ಕುಟುಂಬಕೊಂಡಿಯ ಗಂಡನನ್ನು ಕೂಡಿ, ತಮ್ಮೆರಡು ಸಂಬಂಧಗಳ ಆಧಾರದ ಮೇಲೆ ತಾವು ತೂಗುವ ತೊಟ್ಟಿಲಲ್ಲಿ ಆನಂದ ವಿಹಾರದ ಸಂಸಾರ ಹೂಡಿ, ತನ್ನ ಕುಟುಂಬ ಸಾಗಬೇಕಾದದ್ದು, ಭಾರತೀಯ ಹೆಣ್ಣು ಗಂಡಿನ ಸಂಸಾರ, ಕುಟುಂಬ ಪದ್ಧತಿಯ ನಿಯಮ. ಆದರೆ ಈ ಅವಕಾಶ ಮಾಲೇರು ಹೆಣ್ಣಿಗೆ ಇರಲಿಲ್ಲ. ಇವರಿಗೆ ತಂದೆ ಮನೆಯ ಕೊಂಡಿಯು ಇಲ್ಲ. ಮಾವನಮನೆಯ ಕೊಂಡಿಯೆಂತು ಇಲ್ಲವೆಯಿಲ್ಲ. ಹಾಗಾಗಿ ತನ್ನ ಗಂಡನೆಂಬ ಸಾಂಸಾರಿಕ ತೊಟ್ಟಿಲು ಈ ಹೆಣ್ಣಿನ ಪಾಲಿಗಿರಲೇಯಿಲ್ಲ. ಇದ್ದರೂ ಅದು ಯಾರದೋ ಸಂಸಾರದ ಕೌಟುಂಬಿಕ ತೊಟ್ಟಿಲ ಹಂಗಿನಲ್ಲಿ ಬಾಳಬೇಕಾಗಿತ್ತು. ಇಂತಹ ಕೌಟುಂಬಿಕ ವ್ಯವಸ್ಥೆ ಈ ಶತಮಾನದಲ್ಲಿ ಈಗ ಬದಲಾಗಿದೆ.

ಈ ಸಮುದಾಯಕ್ಕೆ ಸಂವಿಧಾನ ಬದ್ಧ ಕಾನೂನುಗಳಿಂದಾಗಿ ಈ ಸಮುದಾಯಕ್ಕೆ ಸರ್ಕಾರಿ ಸೌಲಭ್ಯಗಳು ಸಿಕ್ಕಿ ಕೀಳರಿಮೆಯಿಂದ ಬದುಕುತ್ತಿದ್ದ ಕುಟುಂಬಳು ಸ್ವಾಭಿಮಾನದಿಂದ ಬದುಕುವಂತಾಗಿದೆ. ಇವರು ಸ್ಥಳೀಯ ಉತ್ತಮ ಜಾತಿಯ ಕುಟುಂಬಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹೇಗೆ ಉತ್ತಮ ಸ್ಥಿತಿಯಲ್ಲಿ ಬೆಳವಣಿಗೆಯಾಗುತ್ತಿವೆಯೋ ಅವನ್ನು ನೋಡಿ ತನ್ನ ಗಂಡ-ಹೆಂಡತಿ-ಮಕ್ಕಳೆಲ್ಲ ಕುಟುಂಬದಲ್ಲಿ ಬೆಳವಣಿಗೆಯ ದಾರಿಯತ್ತ ಸಾಗುತ್ತಿದ್ದಾರೆ. ಈ ಕುಟುಂಬಗಳಲ್ಲಿ ಆಧುನಿಕತೆಗೆ, ನಾಗರಿಕತೆಯ ಬೆಳವಣಿಗೆಗೆ ಅನುಗುಣವಾಗಿ ಸಾಗುತ್ತಿವೆ.

ಈಗಿನ ಹೆಣ್ಣು ಮಕ್ಕಳು ೧೮-೨೦ ವರ್ಷದ ನಂತರವೇ ತಂದೆ-ತಾಯಿಯರ ತೀರ್ಮಾನದಂತೆ, ತಮ್ಮ ಆಯ್ಕೆಯಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಮದುವೆ-ಯಾಗಿ ಸಂಸಾರ ಮಾಡುತ್ತಿದ್ದಾರೆ. ಈ ಕುಟುಂಗಳು ಹಿಂದಿನಂತೆ ಈಗ ಮಾತೃ ಪ್ರಧಾನವಾಗಿಲ್ಲ, ಪಿತೃ ಪ್ರಧಾನವಾಗಿ ಬದಲಾಗಿವೆ. ಇಲ್ಲಿ ತಂದೆಯ ಕುಟುಂಬದ ಪ್ರಧಾನ ಪಾತ್ರಧಾರಿ. ಇವನನ್ನು ಬಿಟ್ಟರೆ ಹಿರಿಯ ಮಗನೆ ಇಡೀ ಕುಟುಂಬದ ನಿಯಂತ್ರಣ ಹೊಂದಿರುವವನು. ಈ ತಂದೆ ಮಗನೇ ತಮ್ಮ ಕುಟುಂಬದ ಹೊಲ, ಗದ್ದೆ, ತೋಟದ ಕೃಷಿ ವ್ಯವಹಾರದಲ್ಲಿ, ಮನೆಯ ಸಾಮಾಜಿಕ, ಸಾಂಸ್ಕೃತಿಕ ಕಾರ‍್ಯ ಸಂಬಧದ ತೀರ್ಮಾನಗಳಲ್ಲಿ ಮತ್ತು ಮನೆಯ ಇನ್ನಿತರ ಮಕ್ಕಳ ಸಂಬಮಧಿಕರ ಶಿಕ್ಷಣ, ಉದ್ಯೋಗ, ಮದುವೆ, ಹುಟ್ಟು, ಸಾವು ಮತ್ತಿತರ ಕೆಲಸ ಕಾರ್ಯಗಳಲ್ಲಿ ಅಂತಿಮ ನಿರ್ಧಾರ ಮಾಡುತ್ತಾರೆ. ಆದರೆ ಮನೆಯ ಹಿರಿಯವರಾದ ಅಜ್ಜ, ಅಜ್ಜಿ,ತಾಯಿ, ಮತ್ತಿತರ ಸ್ತ್ರೀಯರ ಅನಿಸಿಕೆ, ಮಾರ್ಗದರ್ಶನದ ಮೇಲೆ ತೀರ್ಮಾನಿಸುತ್ತಾರೆ.

ಈ ಸಮುದಾಯದ ಕುಟುಂಬದಲ್ಲಿ ಕಡಿಮೆ ಎಂದರೆ ಒಂದು, ಹೆಚ್ಚೆಂದರೆ ಮೂರು ಮಕ್ಕಳ ಮಿತಿಯೊಳಗೆ ಇರುವ ಚಿಕ್ಕ ಚಿಕ್ಕ ಕುಟುಂಬಗಳಿವೆ. ಇವರಲ್ಲಿ ಹಿರಿಯರಿಗೆ, ವಿದ್ಯಾವಂತರಿಗೆ ಒಳ್ಳೆಯ ಸ್ಥಾನಮಾನ, ಗೌರವ ಕೊಡುವ ಸಂಸ್ಕೃತಿ ಹೆಚ್ಚು; ಅವರ, ಮಾತು,ನೀತಿ, ನಡೆವಳಿಕೆ ಮಾರ್ಗದರ್ಶನಗಳನ್ನು ಈ ಸಮುದಾಯದ ಕುಟುಂಬದ ಜನರು ಹೆಚ್ಚಾಗಿ ಅನುಸರಿಸುತ್ತಾ ಸಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಅಜ್ಜ, ಮುತ್ತಜ್ಜ ಮುತ್ತಾಯಿಯಿಂದ ತಂದೆ-ತಾಯಿ, ಮಕ್ಕಳು-ಮರಿ ಮಕ್ಕಳವರೆಗೆ ಕೌಟುಂಬಿಕ ಸಂಬಂಧವೆಂಬುದು ಪ್ರೀತಿ, ವಿಶ್ವಾಸ, ನಂಬಿಕೆ, ಗೌರವಗಳಿಂದ ಸಾಗುತ್ತಿವೆ. ಆದ್ದರಿಂದಲೇ ಹಿಂದಿನ ಸಂಪ್ರದಾಯ, ಆಚರಣೆ, ನಂಬಿಕೆಗಳನ್ನು ತಿರಸ್ಕರಿಸಿ ದೇವದಾಸಿ ಪದ್ಧತಿಗೆ, ಉಪಪತ್ನಿ ವ್ಯವಸ್ಥೆಗೆ, ಬ್ರಾಹ್ಮಣರ ಮನೆಯ ಮತ್ತು ದೇವಾಲಯಗಳ ಸೇವಾಕಾರ‍್ಯಗಳನ್ನೆಲ್ಲ ಬಿಟ್ಟು ವಿದ್ಯೆ ಕಲಿತು ಎಲ್ಲಾ ಕುಟುಂಬಗಳು ಜಾಗೃತವಾಗುತ್ತಿವೆ. ಇಂತಹ ನಾನಾ ಉತ್ತಮ ಗುಣ, ನಡವಳಿಕೆಗಳ ಬೆಳವಣಿಗೆಗಳಿಂದಾಗಿ ಕಡಿಮೆ ಜನಸಂಖ್ಯೆ ಇರುವ ಈ ಸಮುದಾಯದ ಸಂಸಾರ, ಕುಟುಂಬಗಳು ಹೆಚ್ಚು ಹೆಚ್ಚು ವೈಚಾರಿಕ, ವೈಜ್ಞಾನಿಕ ಜ್ಞಾನ, ಚಿಂತನೆಗಳಿಂದ ಎಲ್ಲಾ ಸ್ತ್ರೀಯರು ಸುಶಿಕ್ಷಿತರಾಗುವ ದಾರಿಯಲ್ಲಿ ಸಂಘಟಿತರಾಗಿ ಮುನ್ನೆಡೆಯುತ್ತಿದ್ದಾರೆ. ಮಾಲೇರು ಸಂಸ್ಕೃತಿಯ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದ ಸಾಧನೆಗಳು