ಸಾಮಾಜಿಕ ಸಾಧನೆಗಳು

ಮಾಲೇರು ಮಹಿಳೆಯರು ಸಮಾಜಿಕ ಉನ್ನತಿಗಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸು ಹಾತೊರೆದರೂ ಅವರಿಗೆ ಯಾವ ರಂಗದಲ್ಲೂ ಅವಕಾಶವಾಗಿಲ್ಲ. ಏಕೆಂದರೆ ಅವಳಿಗೆ ಸಾಮಾಜಿಕ ಸ್ಥಾನಮಾನಗಳಿಲ್ಲ. ಆರ್ಥಿಕವಾಗಿಯೂ ದುರ್ಬಲಳು ಆದ್ದರಿಂದಲೇ ಅವಳು ಯಾವ ಕ್ಷೇತ್ರದ್ಲಲೂ ತನ್ನನ್ನು ತೊಡಗಿಸಿಕೊಂಡು ಮಾಲೇರು ಸಮುದಾಯದ ಮಹಿಳೆಯರೆಂದು ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ಇವರು ಮೊದಲಿಂದಲೂ ಸಾಂಸ್ಕೃತಿಕ ರಂಗದಲ್ಲಿ ಹೆಚ್ಚು ಬೆಳೆದವರು. ಆದರೂ ಅವರು ತಮ್ಮ ಜಾತಿಯ ಕೀಳರಿಮೆಯಿಂದ ಮಾಲೇರು ಎಂದು ಗುರುತಿಸಿಕೊಳ್ಳುವುದಕ್ಕೆ ಹಿಂಜರಿದು ಉನ್ನತ ಹೆಸರು ಮಾಡಿ ಬ್ರಾಹ್ಮಣೀಕರಣಗೊಂಡಿದ್ದಾರೆ. ಆದರೆ ಈಗ ಹಾಗಿಲ್ಲ. ಮನಸ್ಸಿದ್ದ ಮಹಿಳೆಯರು ಯಾವ ರಂಗದಲ್ಲಾದರೂ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ, ಜಾಣ್ಮೆಯಿಂದ ಬಳಸಿಕೊಂಡು ಹಿಂದಿನ ಕೀಳರಿಮೆಯನ್ನು ಬಿಟ್ಟು ಮಾಲೇರು ಮಹಿಳೆಯೆಂದು ಗುರುತಿಸಿ ಕೊಂಡು ಎಲ್ಲ ರಂಗದಲ್ಲೂ ಭಾಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಯಾವ ಕೆಲಸವಾದರೂ ಅವು ಸಾರ್ವತ್ರಿಕವಾದ ಸಾಮಾಜಿಕ ಕ್ಷೇತ್ರಕ್ಕೆ ಒಳಪಡುತ್ತವೆ. ಹೀಗಿದ್ದರೂ ಇವುಗಳಿಗೆ ಭಿನ್ನವಾಗಿ ಸಾಮಾಜಿಕ ಕೆಲಸ ಕಾರ‍್ಯಗಳು ಪ್ರತ್ಯೇಕವಾಗೆ ಗುರುತಿಸಿಕೊಳ್ಳುತ್ತವೆ. ಈ ಕ್ಷೇತ್ರದ ವ್ಯಕ್ತಿಯ ಸಾಧನೆ ತುಂಬ ವಿರಳ ಮತ್ತು ಕಷ್ಟಸಾಧ್ಯ. ಆದರೆ ಸಮಾಜ ಸೇವೆ ಮಾಡುವ ಸಮಾನ ಮನಸ್ಸಿನ ಗುಂಪು ಸಂಘಟನೆಯಾಗಿ ಮಾಡುವ ಕೆಲಸ ಸರಳ. ಆದರೆ ಶ್ರಮವು ಜಾಸ್ತಿ. ಏಕೆಂದರೆ ಕಾಲ, ಬುದ್ಧಿ, ಹಣಗಳನ್ನು ತ್ಯಾಗ ಮನೋಭಾವದಿಂದ ನಿಸ್ವಾರ್ಥವಾಗಿ ಸಮಾಜದ ಅಭಿವೃದ್ಧಿಗೆ ಪ್ರಯೋಗ ಮಾಡಬೇಕು. ಇಂಥಹ ಅಪರೂಪದ ಘನ ಕಾರ‍್ಯವನ್ನು ಮಾಡುವವರು ತುಂಬ ವಿರಳ. ಅದರಲ್ಲೂ ಮಾಹಿತಿಗಳನ್ನು ಅರಿತಿದ್ದ ಸಮಾನ ಮನಸ್ಸಿನಗೆಳೆಯರ ಬಳಗ, ಹಾಸನದಲ್ಲಿ ಸುಮಾರು ೧೪೦ ಮಂದಿ ಸದಸ್ಯರನ್ನೊಳಗೊಂಡ “ಕಾಮದೇನು ಸಹಕಾರಿ ವಿದ್ಯಾಶ್ರಮ ಚೈತನ್ಯ ಮಂದಿರ(ನಿ)” ಎಂಬ ಸಹಕಾರಿ ಸಂಘವನ್ನು ಹುಟ್ಟುಹಾಕಿತು. ಇದರು ಅಧ್ಯಕ್ಷರಾಗಿ ಡಾ|| ಗುರುರಾಜ್ ಹೆಬ್ಬಾರ‍್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುತ್ತತ್ತಿ ರಾಜಣ್ಣ, ಆಡಳಿತ ಮಂಡಳಿ ಕಾರ‍್ಯದರ್ಶಿಯಾಗಿ ಡಾ|| ಡಿ.ಆರ‍್.ಗಂಗಾಧರ, ಖಜಾಂಚಿಯಾಗಿ ನಿರ್ವಾಣಯ್ಯ ಮತ್ತು ಹತ್ತು ಜನ ನಿರ್ದೇಶಕರಾಗಿ ಆರು ಜನ ಪುರುಷರು, ನಾಲ್ಕು ಜನ ಸ್ತ್ರೀಯರು ಆಯ್ಕೆಯಾದರು. ಇವರ ನೇತೃತ್ವದ ಸಂಘಟನೆ ೧೯೯೯ರಲ್ಲಿ ನೋಂದಾವಣೆಯಾಗಿ ಇದರ ಹಲವಾರು ಧ್ಯೇಯೋದ್ದೇಶಿತ ಕಾರ‍್ಯಕ್ರಮಗಳಲ್ಲಿ “ಚೈತನ್ಯ ಮಂದಿರ”ವೆಂಬ ವೃದ್ಧಾಶ್ರಮದ ಮೂಲಕ ೨೦೦೪ರಲ್ಲಿ ತನ್ನ ಕಾರ್ಯಾರಂಭ ಮಾಡಿತು.

ನಾಲ್ಕು ಜನ ಮಹಿಳಾ ನಿರ್ದೇಶಕರು, ಮಾಲೇರು ಮಹಿಳೆ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್, ಇಂದಿರಾಮೂರ್ತಿ, ಗೌರಮ್ಮ, ಗೀತಾರಂಗಸ್ವಾಮಿ, ಇವರೆಲ್ಲ ಚೈತನ್ಯ ಮಂದಿರದ ವೃದ್ಧರೊಂದಿಗೆ ತಮ್ಮ ಕುಟುಂಬ ಸದಸ್ಯರಂತೆ ಜವಾಬ್ದಾರಿಯುತರಾಗಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ಅವರದು ವಿಶಿಷ್ಟವಾದ ಸಹಭಾಗಿತ್ವದ ಸ್ಪಂದನ. ಹಾಗಾಗಿ ಇವರೆಲ್ಲರ ಪರಿಶ್ರಮದಿಂದ ಆರಂಭದಲ್ಲಿ ಹಾಸನ ತಾಲ್ಲೂಕು ಬೊಮ್ಮನಹಳ್ಳಿಯ ಅಕ್ಕಯ್ಯಮ್ಮ ಮತ್ತು ಹಾಸದವರೇ ಆದ ಸಿದ್ಧಲಿಂಗಮ್ಮ ಅವರುಗಳು ಚೈತನ್ಯ ಮಂದಿರಕ್ಕೆ ಮೊದಲ ಆಶ್ರಮವಾಸಿಗಳಾಗಿ ಬಂದರು. ಇವರ ನಂತರ ಆಲೂರು ತಾಲ್ಲುಕು ರಾಯರಕೊಪ್ಪಲಿನ ನಂಜಪ್ಪ ತುಮಕೂರು ತಾಲ್ಲೂಕಿನ ಚಂದ್ರಲೀಲಾ, ಬೇಲೂರಿನ ಪುಪ್ಪೇಗೌಡ, ಹಾಸನದ ಬೋರಮ್ಮ ಮೊದಲಾದವರು ಸೇರ್ಪಡೆಯಾಗಿ ಈ ವೃದ್ಧಾಶ್ರಮ ಬೆಳೆಯುತ್ತಾ ಸಾಗಿ ೩೦ ಮಂದಿ ಸ್ತ್ರೀಯರು ೬ ಜನ ಪುರುಷ ವೃದ್ಧರು ಇಲ್ಲಿ ಸೇರಿ ಜೀವನ ಮಾಡುತ್ತಿದ್ದಾರೆ.

ಈ ವೃದ್ಧರ ಪಾಲನೆ, ಪೋಷಣೆಯಲ್ಲಿ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ಅವರು ಅತ್ಯಂತ ಕಾಳಜಿ, ಕಳಕಳಿಯಿಂದ ತನ್ನತಂದೆ-ತಾಯಿಯರ ಜವಾಬ್ದಾರಿ ಹೊತ್ತ ಮಗಳಾಗಿ ಪ್ರೀತಿ, ವಾತ್ಸಲ್ಯ, ಆರೈಕೆಗಳಿಂದ ನೋಡಿಕೊಳ್ಳುತ್ತಿದ್ದಾರೆ. ಇವರ ಪತಿ ವಿಶಾಲ ಹೃದಯವಂತವೈದ್ಯರಾದ ಡಾ|| ಗುರುರಾಜಹೆಬ್ಬಾರ‍್ ಅವರಿಗೆ ತಮ್ಮ ಕನಸಿನ ಕೂಸಾದ ಕಾಮಧೇನು ಸಹಕಾರಿ ಸಂಘದ ’ಚೈತನ್ಯ ಮಂದಿರ’ ವೃದ್ಧಾಶ್ರಮದ ಬಗ್ಗೆ ಅವರದೆಯಾದ ಕಲ್ಪನೆಯ ಕನಸಿದೆ. ಅದರ ನನಸಿನ ಏಳಿಗೆಗಾಗಿ ಅಲ್ಲಿಯ ವೃದ್ಧರಿಗೆ ವೈದ್ಯರಾಗಿ ಆರೋಗ್ಯ ನೀಡಿ, ಕೆಲವೊಮ್ಮೆ ತಾಯಿಯಾಗಿ ಮಮತೆಯಿಂದ ಪ್ರೀತಿ ತೋರಿ, ಕೆಲವು ಸಾರಿ ತಂದೆಯಾಗಿ ಅವರ ಅಗತ್ಯಕ್ಕನುಗುಣವಾಗಿ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಾರೆ. ಇನ್ನೂ ಕೆಲವು ಸಾರಿ ಮಕ್ಕಳಂತೆ ಅವರೊಡನೆ ನಗುನಗುತ್ತಾ ಅವರನ್ನು ನಗಿಸಿ ತಮ್ಮ ಪ್ರೀತಿ, ಗೌರವವನ್ನು ಹೆಚ್ಚಿಸಿಕೊಂಡು ಹೊರಬರುತ್ತಾರೆ. ಇಂತಹ ಗುಣದ ಡಾ|| ಹೆಬ್ಬಾರ‍್ ಅವರು ಆ ವೃದ್ದ ತಂದೆ ತಾಯಿಗಳಿಗೆ ಮಗನಾಗಿ ಅವರೆಲ್ಲರ ಪಾಲನೆ, ಪೋಷಣೆ, ರಕ್ಷಣೆಗೆ ಜವಾಬ್ದಾರಿ ಹೊತ್ತು ನಿರ್ವಹಿಸುತ್ತಾ ಆನಂದಪಡುತ್ತಿದ್ದಾರೆ. ಇವರ ಈ ಎಲ್ಲಾ ನಡೆ, ನುಡಿ, ಕ್ರಿಯೆ, ಆನಂದಗಳಿಗೆ ಒತ್ತಾಸೆಯಾಗಿ, ಪತಿ ಜೊತೆ ಅವರಿಗೆ ನೆರಳಾಗಿ, ಸಹಾಯ, ಸಹಕಾರ, ಪ್ರೋತ್ಸಾಹ ನೀಡುತ್ತಾ ಇವರೆಲ್ಲರ ಸಂತೋಷ, ನೆಮ್ಮದಿಯ ನಿಟ್ಟುಸಿರಲ್ಲಿ ಅತ್ಯಂತ ಆಹ್ಲಾದಕರ ನಗು ಮುಖದಲ್ಲಿ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ಅವರಿರುತ್ತಾರೆ. ಇವರು ತಮ್ಮ ಪತಿ ಡಾ.ಗುರುರಾಜ್ ಹೆಬ್ಬಾರ‍್, ಮಕ್ಕಳಾದ ಕಾವ್ಯ, ಪ್ರತಿಭಾ ಅವರ ಕುಟುಂಬ ನೋಡಿಕೊಂಡು, ಮನೆಯ ವ್ಯವಹಾರ ಹಾಗೂ ತಮ್ಮ ’ರಾಮಕೃಷ್ಣ ನರ್ಸಿಂಗ್ ಹೋಂ’ ನ ಮೇಲ್ವಿಚಾರಣೆಯನ್ನು ಮಾಡಿಕೊಂಡು ವೃದ್ಧಾಶ್ರಮದ ಆಗುಹೋಗುಗಳನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ. ಹೀಗೆ ಮನೆಯ ಒಳ ಮತ್ತು ಹೊರ ಪ್ರಪಂಚಗಳೆರಡರ ವ್ಯವಹಾರವನ್ನು ನಿರಂತರವಾಗಿ ಕಾರ‍್ಯಶೀಲಗೊಳಿಸಿರುವುದು ಶ್ರೀಮತಿ ಸ್ವರ್ಣ ಲತಾ ಹೆಬ್ಬಾರ‍್ ಅವರು ಸುಖ ಸಂಸಾರ ಜೀವನದ ಮನೆಯೊಡತಿಯ ಜಾಣ್ಮೆ, ಪ್ರತಿಭೆಯ ಸಂಕೇತವಾಗಿ, ಬೇರೆಯವರಿಗೆ ಆದರ್ಶ, ಮಾರ್ಗದರ್ಶಕರಾಗಿ ಜನರಿಗೆ ಕಂಡುಬರುತ್ತಾರೆ.

ಇಂತಹ ದಂಪತಿಗಳನ್ನೊಳಗೊಂಡ ಕಾಮಧೇನು ಸಹಕಾರ ಸಂಘದ ಚೈತನ್ಯಮಂದಿರ ವೃದ್ಧಾಶ್ರಮದ ಆಡಳಿತ ಮಂಡಳಿ. ಅಲ್ಲಿ ಪ್ರವೇಶ ಪಡೆದ ಸರ್ವ ವೃದ್ಧರಿಗೂ ಉಚಿತವಾಗಿ ಸಕಲ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದಾರೆ. ಇವರನ್ನು ದಿನನಿತ್ಯ ನೋಡಿಕೊಳ್ಳುವ ಸಹಾಯಕರಾಗಿರುವ ಉದ್ಯೋಗಿಗಳಿಗೂ ಸಂಘದ ನೀತಿ ನಿಯಮಗಳ ಚೌಕಟ್ಟಿನೊಳಗೆ ನಾನಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಅಲ್ಲಿಗೆ ಬಂದ ವೃದ್ಧರು ತಮ್ಮ ಕೊನೆಗಾಲದ ಸಮಯವನ್ನು ಪ್ರೀತಿ, ವಿಶ್ವಾಸ, ಮಮಕಾರಗಳಿಂದ ಸರಳವಾಗಿ, ಸಂತೋಷವಾಗಿ ಕಳೆಯುತ್ತಾ ನೆಮ್ಮದಿಯಿಂದ ಇದ್ದಾರೆ.

ಈ ಹಿಂದೆ ನೆಮ್ಮದಿಯ ಜೀವನಕ್ಕೂ ಒಗ್ಗದೆ ಕೆಲವು ಹೀನ ಚಟಗಳನ್ನು ಮೈಗೂಡಿಸಿ-ಕೊಂಡು ಬಂದವರು ಇಲ್ಲಿಯ ಶುದ್ಧ ಜೀವನಕ್ಕೆ ಒಗ್ಗದೆ ಬಿಟ್ಟುಹೋಗಿದ್ದಾರೆ. ಅಂತಹವರಲ್ಲಿ ಹಾಸನದ ಭಿಕ್ಷಾವೃತ್ತಿಯ ಬೋರಮ್ಮ. ಈ ಅಜ್ಜಿ ತನ್ನ ಗಂಡ ಮಕ್ಕಳಾರು ಇಲ್ಲದೆ ಕಾವಿಬಟ್ಟೆ ಧರಿಸಿ ಹಾಸನ ಸಿಟಿಯಲ್ಲಿ ಭಿಕ್ಷೆ ಬೇಡುತ್ತಿತ್ತಂತೆ ಯಾರೋ ಚೈತನ್ಯ ಮಂದಿರದ ಮಾಹಿತಿ ನೀಡಿದ್ದರಿಂದ ಕೇಳಿಕೊಂಡು ಬಂದು ವೃದ್ಧಾಶ್ರಮ ಸೇರಿಕೊಂಡಿತಂತೆ. ಅಲ್ಲಿ ಎರಡು ತಿಂಗಳು ಸರಿಯಾಗಿ ಇದ್ದು ಆಮೇಲೆ ಪ್ರತಿಗುರುವಾರ ಹೊರಗಡೆ ಹೋಗಿಬರುತ್ತೇನೆಂದು ಹೇಳಿ ಹೋಗಿ ಸಿಟಿಯಲ್ಲಿ ಭಿಕ್ಷೆಬೇಡಿ ಸಂಜೆ ಆಶ್ರಮಕ್ಕೆ ಬಂದು ಸೇರುತ್ತಿತ್ತಂತೆ. ಇದು ಆಶ್ರಮದ ಮೇಲ್ವಿಚಾರಕರ ಗಮನಕ್ಕೆ ಯಾರಿಗೂ ಬಂದಿರಲಿಲ್ಲ. ಆದರೆ ವೃದ್ಧಾಶ್ರಮ ನೋಡಲು ಬಂದ ಜನರು  ಈ ಬೋರಮ್ಮನನ್ನು ನೋಡಿ ಈ ಅಮ್ಮ ಸಿಟಿಯಲ್ಲಿ ಭಿಕ್ಷೆ ಬೇಡುತ್ತಾ ಇರುತ್ತದೆ ಎಂದು ಮೇಲ್ವಿಚಾರಕರಿಗೆ ಹೇಳಿದರು. ಆಡಳಿತ ಮಂಡಳಿ ಬೋರಮ್ಮನಿಗೆ ಆಶ್ರಮದ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಇಡೀ ವೃದ್ಧಾಶ್ರಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಸಿದರು. ಆಗ ಈ ಆಶ್ರಮದ ನಿಯಮಗಳಿಗೆ ಕಟ್ಟುನಿಟ್ಟಾಗಿ ಇರಲಾರದೆ ಆ ಅಜ್ಜಿ ಬಿಟ್ಟು ಹೋಯಿತಂತೆ.

ಇನ್ನೊಬ್ಬರು ಬೇಲೂರಿನ ಪುಪ್ಪೇಗೌಡ ಎಂಬುವವರು ಕೆಲವಾರು ತಿಂಗಳು ಚೆನ್ನಾಗಿದ್ದು ಆಮೇಲೆ ನಾನು ಅಲ್ಲಿಗೆ ಹೋಗಬೇಕು, ಇಲ್ಲಿಗೆ ಹೋಗಬೇಕು, ನನ್ನ ಮಗಳ ಮನೆಗೆ ಹೋಗಬೇಕು ಎಂದೆಲ್ಲ ಒತ್ತಾಯ ಪಡಿಸುತ್ತಿದ್ದರು. ಅನುಮತಿ ನೀಡದಿದ್ದಕ್ಕೆ ಆಗಾಗ್ಗೆ ನಿಯಮ ಬಾಹಿರವಾಗಿ ನಡೆದು ಕೊಂಡು, ಕೊನೆಗೆ ಆಶ್ರಮದ ನಿಯಮಗಳನ್ನು ಪಾಲಿಸಲಾರದೆ ಬಿಟ್ಟುಹೋಗಿದ್ದಾರೆ. ಇನ್ನು ಕೆಲವರು ಶ್ರೀಮಂತ ಕುಟುಂಬದಿಂದ ಬಂದವರು ಅವರವರ ಸ್ಟೇಟಸ್‌ನ ಪ್ರದರ್ಶನದಂತೆ ಕೇಳುತ್ತಿದ್ದ ಸೌಲಭ್ಯಗಳು ತುಂಬ ಭಿನ್ನವಾಗಿದ್ದವಂತೆ, ಹಾಗೆಯೇ ಭಿನ್ನ ವರ್ತನೆಗಳು ಬೇರೆಯವರಿಗೆ ಮುಜುಗರ ತರಿಸುವಂತಿದ್ದವಂತೆ, ಆಗ ಆಡಳಿತ ಮಂಡಳಿಯ ನಿರ್ದೇಶಕರು  ಕೆಲವರು ಬಂದು “ನೋಡಿ ನಮ್ಮ ಆಶ್ರಮಕ್ಕೆ ಬಂದು ಸೇರಿದ ಬಡವರಿರಬಹುದು, ಶ್ರೀಮಂತರಿರಬಹುದು ಎಲ್ಲರೂ ನಮಗೆ ಒಂದೆ” ನಿಮ್ಮೆಲ್ಲರಿಗೂ ಉಚಿತವಾಗಿ ಸಮಾನವಾಗಿ ನಮ್ಮ ಮಿತಿಯೊಳಗೆ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು, ಅನುಕೂಲಗಳನ್ನು ಮಾಡಿ ಕೊಡುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ತಾರತಮ್ಯ ಮಾಡುವಂತಿಲ್ಲ. ಇದನ್ನು ಅರಿತು ತಿಳಿದು ಹೊಂದಿಕೊಂಡು  ಹೋಗಬೇಕೆಂಧು ಅರ್ಥಮಾಡಿಸಿದ ಮೇಲೆ ಎಲ್ಲರೂ ತಿಳಿದು ಹೊಂದಿಕೊಂಡು ಹೋಗುತ್ತಿದ್ದಾರೆ. ಹೀಗೆ ಶಾಂತಿ, ಸಮಾಧಾನದಿಂದ ಮುನ್ನಡೆಯುತ್ತಿರುವ ಈ ವೃದ್ಧಾಶ್ರಮದಲ್ಲಿ ನಂಜೇಗೌಡ ಎಂಬ ವೃದ್ಧರು ಎರಡು ವರ್ಷ ತುಂಬ ಚೆನ್ನಾಗಿ ಕಾಲ ಕಳೆದು ಈ ಆಶ್ರಮದಲ್ಲೇ ಸಾವನ್ನಪ್ಪಿದ್ದಾರೆ. ಅವರಿಗೆ ಹೆಂಡತಿ, ಮಕ್ಕಳು ಯಾರು ಇಲ್ಲದ ಕಾರಣ ಆಶ್ರಮವಾಸಿಗಳೆಲ್ಲ ಸೇರಿ ಶವ ಚಿತಾಗಾರದಲ್ಲಿ ಸುಟ್ಟು ಬೂದಿಯನ್ನು ಗೊರೂರು  ಹೊಳೆಗೆ ಬಿಟ್ಟು ಬಂದವರಂತೆ. ಆಮೇಲೆ ಹಿಂದೂ ಸಂಸ್ಕೃತಿಯಂತೆ ಹನ್ನೊಂದನೆ ದಿನಕ್ಕೆ ಶಾಸ್ತ್ರೋಕ್ತವಾಗಿ ಕರ್ಮ ಕಳೆದು, ಶಾಂತಿಯಿಂದ ತಿಥಿ ಮಾಡಿ ಎಲ್ಲರಿಗೂ ಅನ್ನ ಹಾಕಿದರು. ಹೀಗೆ ಒಂದು ದೊಡ್ಡ ಕುಟುಂಬವಾಗಿ ಸಾಗುತ್ತಿರುವ ವೃದ್ಧಾಶ್ರಮಕ್ಕೆ ಹಲವಾರು ಜನ ಬಂದು ಸೇರಲು  ಒತ್ತಡ ಹೇರುತ್ತಿದ್ದಾರೆ. ಬಂದವರೆಲ್ಲರಿಗೂ ಸಮಾನ ಸೌಲಭ್ಯ ನೀಡಿ ನೋಡಿಕೊಳ್ಳುವ ಅನುಕೂಲ ವ್ಯವಸ್ಥೆಯ ಕೊರತೆ ಇರುವ ಕಾರಣದಿಂದ ಅವರ ಮಿತಿಯೊಳಗೆ ಈಗ ನೂರು ಜನರಿರುವಂತಹ ವ್ಯವಸ್ಥೆ ಮಾಡಲು ಆಡಳಿತ ಮಂಡಳಿ ಮುಂದಾಗಿ ಕೆಲಸ ಮಾಡುತ್ತಿದೆ. ಜೊತೆಗೆ ಅನಾಥ ಮಕ್ಕಳಿಗೂ ಆಸರೆಯಾಗುವ ಸಂಕಲ್ಪದಿಂದ ಶಿಶುಕಲ್ಯಾಣವನ್ನು ತೆರೆದಿದ್ದಾರೆ ಹಾಗೂ ಶಿಕ್ಷಣ ಸಂಸ್ಥೆಯನ್ನು  ಮತ್ತಿತರ ಸೌಲಭ್ಯ ಭರಿತ ಯೋಜನೆ ತರಲು ಈ ಸಂಘಟನೆ ಕಾರ್ಯಶೀಲವಾಗಿದೆ.

ಚೈತನ್ಯಮಂದಿರದಲ್ಲಿ ಈಗಿರುವ ೩೪ ಜನ ವೃದ್ಧರಲ್ಲಿ ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಗೆ ಸೇರಿದವರಿದ್ದಾರೆ. ಇವರೆಲ್ಲ ಈಘ ಚೆನ್ನಾಗಿದ್ದಾರೆ. ಇದು ಕರ್ನಾಟಕದ ಇತರ ವೃದ್ಧಾಶ್ರಮಗಳಿಗಿಂತ ಭಿನ್ನವಾಗಿದೆ. ಹೇಗೆಂದರೆ ಕರ್ನಾಟಕದ ಯಾವ ಭಾಗದಲ್ಲಿ ವೃದ್ಧಾಶ್ರಮಗಳಿದ್ದರೂ ಅವುಗಳನ್ನು  ಮಠಗಳೊ ಅಥವಾ ಖಾಸಾಗಿಯವರೊ ಇಲ್ಲ ಧಾರ್ಮಿಕ ಸಂಘಟನೆಯವರೋ ನಡೆಸುತ್ತಿದ್ದಾರೆ. ಆದರೆ ‘ಚೈತನ್ಯ ಮಂದಿರ’ವನ್ನು ಸಹಕಾರಿ ಸಂಘದಿಂದ ನಡೆಸಲಾಗುತ್ತಿದೆ. ಹಾಗಾಗಿ ಇದು ಕರ್ನಾಟಕದಲ್ಲೇ ಮೊದಲ ಸಹಕಾರಿ ಸಂಘದ ವೃದ್ಧಾಶ್ರಮ. ಇದಕ್ಕೆ ಸರ್ಕಾರ, ಖಾಸಗಿಯವರ, ಮಠಗಳ, ಸಂಘಸಂಸ್ಥೆಯವರ ಯಾರ ಸಹಾಯ, ಸಹಕಾರವು ಇಲ್ಲ. ಕೇವಲ ಕಾಮಧೇನು ಸಹಕಾರಿ ಸಂಘದ ಸದಸ್ಯರ ಹಣದಿಂದ ಮಾತ್ರ ನಡೆಸಲಾಗುತ್ತಿದೆ. ಇದರ ಜೊತೆಗೆ ಈ ವೃದ್ಧಾಶ್ರಮ-ವನ್ನು ನೋಡಲು ಬಂದವರು ದವಸ, ಧಾನ್ಯ, ಹಸು, ಮತ್ತಿತರ ಕೆಲವು ವಸ್ತುಗಳನ್ನು ದಾನಮಾಡಿದ್ದಾರೆ. ಇವುಗಳನ್ನು ಬಳಸಿಕೊಂಡು ತಿಂಗಳಿಗೆ ೩೫ ಸಾವಿರ ರೂಗಳನ್ನು ಈ ವೃದ್ಧಾಶ್ರಮಕ್ಕೆ ಆಡಳಿತ ಮಂಡಳಿ ಖರ್ಚು ಮಾಡುತ್ತಿದೆ. ಇಲ್ಲಿ ಉಚಿತವಾಗಿ ರಾಯಲ್‌ ಸೌಲಭ್ಯಗಳನ್ನು ನೀಡುವ ಮಟ್ಟದಲ್ಲಿ ಈ ಸಂಘಟನೆ ಇಲ್ಲ. ಆದರೆ ಸರಳ, ಸಜ್ಜನಿಕೆಯ ಪ್ರೀತಿ ಮಮತೆಯ ಶಾಂತಿಧಾಮವಾಗಿ ಚೈತನ್ಯಮಂದಿರವಿದೆ. ಇದರ ಸಹಕಾರ ಮೂರ್ತಿಗಳಾಗಿ ಶ್ರೀಮತಿ ಸ್ವರ್ಣಲತಾ. ಡಾ|| ಗುರುರಾಜ್‌ಹೆಬ್ಬಾರು ದಂಪತಿಗಳಿರುವುದೆ ಒಂದು ಕಾಣಿಕೆಯಾಗಿದೆ.

ಸಮಾಜ ಸೇವೆಯನ್ನೆ ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವ ಈ ದಂಪತಿಗಳು ತಮ್ಮ ಸ್ವಶಕ್ತಿಯಿಂದ ತಾವೇ ಒಂದು  ಖಾಸಗಿ ವೈದ್ಯಕೀಯ ಸಂಸ್ಥೆ ’ಶ್ರೀ ರಾಮಕೃಷ್ಣ ನರ್ಸಿಂಗ್ ಹೋಂ’ ಅನ್ನು ತೆರೆದಿದ್ದಾರೆ. ಅಲ್ಲಿ ವೃತ್ತಿಯಲ್ಲಿ ವೈದ್ಯರಾದ ಡಾ. ಹೆಬ್ಬಾರ‍್ ಅವರು ದಿನ ನಿತ್ಯ ನೂರಾರು ಜನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಆದರೆ ಇದರ ವ್ಯವಸ್ಥೆಯನ್ನು, ಖರ್ಚು ವೆಚ್ಚದ ಮೇಲ್ವಿಚಾರಣೆಯನ್ನು ಶ್ರೀಮತಿಸ್ವರ್ಣಲತಾ ಹೆಬ್ಬಾರ‍್ ಅವರೇ ನೋಡಿಕೊಳ್ಳುತ್ತಿದ್ದಾರೆ. ಇವರೇ ತಮ್ಮ ಪತಿಗೆ ಹಲವಾರು ಸಲಹೆ ಸೂಚನೆಗಳ ಮಾರ್ಗದರ್ಶನ ಮಾಡುತ್ತಾ ಇಬ್ಬರು ಸಹಭಾಗಿಗಳಾಗಿ ಮುನ್ನೆಡೆಸುತ್ತಿದ್ದಾರೆ. ಮಾಲೇರು ಸಮುದಾಯದಿಂದ ಬಂದ ಡಾ|| ಗುರುರಾಜ್ ಹೆಬ್ಬಾರ‍್ ಅವರು ಹೃದಯವಂತ, ಸ್ವಾಭಿಮಾನಿಯಾಗಿದ್ದು ತನ್ನ ಸಮುದಾಯದವರ ನಾನು ಕಷ್ಟ-ಸುಖ, ನೋವು-ನಲಿಗಳ ಅನುಭವದಿಂದ ಬಂದವರು. ಹಾಗಾಗಿ ಇವರು ವೈದ್ಯಕೀಯ ಚಿಕಿತ್ಸೆಯನ್ನು ಅವರ ಗಮನಕ್ಕೆ ಬಂದಂತಹ ಬಡವರಿಗೆ, ಅಸಹಾಯಕರಿಗೆ, ಕೂಲಿಕಾರ್ಮಿಕರಿಗೆ, ಕೆಲವು ವೃದ್ಧರಿಗೆ, ಗೆಳೆಯರಿಗೆ ಮತ್ತು ಪರಿಚಿತ ಅಧಿಕಾರಿಗಳಿಗೆಲ್ಲ ಉಚಿತವಾಗಿ ಮಾಡಿಕೊಂಡು ಬಂದಿದ್ದಾರೆ. ಆದರೆ ನಿರಂತರ ಚಿಕಿತ್ಸೆ ಪಡೆಯುವವರ ಹತ್ತಿರ ಮತ್ತು ಅಪರಿಚಿತರಾಗಿ ಚಿಕಿತ್ಸೆಗೆ ಬಂದವರಲ್ಲಿ, ನರ್ಸಿಂಗ್‌ಹೋಂನಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುವ ಸಂದರ್ಭ ಬಂದವರಲ್ಲಿ ಹಣ ಪಡೆಯುತ್ತಾರೆ. ಈ ಹಣದಲ್ಲೇ ಆ ನರ್ಸಿಂಗ್ ಹೋಂ ಅನ್ನು ನಡೆಸಿಕೊಂಡು ಹೋಗುತ್ತಿದದಾರೆ. ಹಾಗಾಗಿ ಇವರ ಉಚಿತ ಸೇವೆಯಿಂದ ನರ್ಸಿಂಗ್ ಹೋಂ ಬೇಗ ಬೆಳೆಯಲು, ಹೆಚ್ಚು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಸಾಧ್ಯವಾಗಿಲ್ಲ. ಆದರೆ ಹೊರಗಿನ ಉತ್ತಮ ವೈದ್ಯತಜ್ಞರ, ತಂತ್ರಜ್ಞರ ಸಂಪರ್ಕರದಲ್ಲಿದ್ದು ಅವರನ್ನು ಬಳಸಿಕೊಂಡು ತಮ್ಮ ರೋಗಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಹಾಗಾಗಿ ಇರುವುದರಲ್ಲೇ ದಂಪತಿಗಳು ತೃಪ್ತಿಪಟ್ಟುಕೊಂಡು, ಕೆಲವು ಸಹಾಯಕರೊಂದಿಗೆ ಸೇರಿ ಶ್ರೀಮತಿ ಸ್ವರ್ಣಲತಾ ಅವರು ಲೆಕ್ಕಪತ್ರಗಳ ಮೇಲ್ವಿಚಾರಣೆ ನೋಡಿಕೊಂಡು, ಮನೆಯಲ್ಲಿ ಒಳ್ಳೆಯ ಗೃಹಿಣಿಯಾಗಿ ಜನ ಮೆಚ್ಚುಗೆಗಳಿಸಿದ್ದಾರೆ. ಆದ್ದರಿಂದಲೇ ಇಂತಹ ದಂಪತಿಗಳನ್ನು ಗೌರವಿಸಲು ಹಾಸನತಾಲ್ಲೂಕಿನ ಕಟ್ಟಾಯ ಮತ್ತು ಸುತ್ತಮುತ್ತಲ ಗ್ರಾಮಸ್ಥರೆಲ್ಲ ಸೇರಿ ೨೦೦೭ರಲ್ಲಿ ಪ್ರೀತಿಯಿಂದ ದಂಪತಿಗಳಿಬ್ಬರನ್ನು ಸನ್ಮಾನ ಮಾಡಿದ್ದಾರೆ.

ಹಾಸನದ ಸಂಜೀವಿನಿ ಆಸ್ಪತ್ರೆಯನ್ನು ಸಹಕಾರಿ ಸಂಘದ ಮೂಲಕವಾಗೆ ಹುಟ್ಟು ಹಾಕಿ ಬೆಳೆಸಿದವರು ಡಾ||ಗುರುರಾಜ್‌ಹೆಬ್ಬಾರ‍್ ಅವರು. ಇದು ಬೆಳೆದ ಮೇಲೆ ಇನ್ನೊಂದು ಸಹಕಾರ ಸಂಘವನ್ನು ಕಟ್ಟಿ ಅವರ ಮೂಲಕವಾಗೆ “ಕಾಮಧೇನು ವಿದ್ಯಾಶ್ರಮ ಚೈತನ್ಯ ಮಂದಿರ”ವನ್ನು ಹುಟ್ಟು ಹಾಕಿ ಇದರಿಂದ ನಡೆಸುತ್ತಿರುವುದೇ ಇದುವರೆಗೆ ಪ್ರಸ್ತಾಪಿಸಿದ ’ಚೈತನ್ಯಮಂದಿರ’ ವೃದ್ಧಾಶ್ರಮ. ವೈದ್ಯವೃತ್ತಿಯ ಜೊತೆಗೆ ಇಂತಹ ಸಹಕಾರ ಸಂಘಗಳನ್ನು ಕಟ್ಟಿ ಬೆಳೆಸಲು ಬೆಂಬಲಿಗರಾದ ತಮ್ಮ ಗೆಳೆಯರ ದೊಡ್ಡ ಬಳಗವನ್ನೇ ಸೃಷ್ಟಿಸಿ ಹೀಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಹಲವಾರು ಸಂಘಟನೆ ಗಳು ಗುರುತಿಸಿ ಸನ್ಮಾನಿಸಿವೆ. ಅವುಗಳಲ್‌ಇ ’ನೇತಾಜಿ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌’ ಹಾಸನ, ’ಕರ್ನಾಟಕ ಪರಿಶಿಷ್ಟ ಜಾತಿ ವರ್ಗಗಳ ಸಂಘಟನೆ’ ಹಾಸನ. ’ನೆಲಜಲ ಸಂರಕ್ಷಣಾ ಸಮಿತಿ’ ಹಾಸನ ಮತ್ತು ’ಹಾಸನ ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್’ ಹಾಗೂ ಮುಸ್ಲಿಂ ಸಂಘಟನೆಯಾದ ’ಆಲ್‌ಅಮೀನ್ ಶಿಕ್ಷಣ ಸಂಸ್ಥೆ’, ಡಾ.ರಾಜಕುಮಾರ‍್ ಸಂಘಟನೆ ಮುಂತಾದ ಹತ್ತಾರೆ ಸಾಮಾಜಿಕ ಸಂಘ-ಸಂಸ್ಥೆಗಳು. “ಸುಪ್ರಸಿದ್ಧ ವೈದ್ಯರು, ಸಮಾಜ ಸೇವಾ ಧುರೀಣರು” ಎಂದು ಸನ್ಮಾನಿಸಿ, ಪ್ರಶಸ್ತಿ ನೀಡಿವೆ.

ಇಂತಹ ಸಾಧನೆಯನ್ನು ಗುರುತಿಸಿಯೇ ಸರ್ಕಾರಿ ಸಂಸ್ಥೆಗಳಾದ ಹಾಸನ ಜಿಲ್ಲಾಡಳಿತ ಹಾಗು ಕರ್ನಾಟಕ ಸರ್ಕಾರ ೨೦೦೫ರಲ್ಲಿ ಸುವರ್ಣ ಕರ್ನಾಟಕ ಸಂದರ್ಭದಲ್ಲಿ ’ಸಮಾಜಸೇವೆ’ ಗಾಗಿ ಸನ್ಮಾನಿಸಿದೆ. ಅದೇ ವರ್ಷ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು, ಅವರು ’ಸಮಾಜ ರತ್ನ’ ರಾಜ್ಯ ಪ್ರಶಸ್ತಿ ನಿಡಿದೆ. ಇವೆಲ್ಲವನ್ನು ಗಮನಿಸಿಯೇ ೨೦೦೭ರಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ಸಹಕಾರ ಮಹಾ ಮಂಡಳಿ ನಿಯಮಿತ ಬೆಂಗಳೂರು ಅವರು ಸಹಕಾರ ಚಳುವಳಿ ಶತಮಾನೋತ್ಸವದೊಂದು “ಶ್ರೇಷ್ಠ ಸಹಕಾರಿ” ಎಂದು ಸನ್ಮಾನ  ಮಾಡಿದೆ. ಈ ಎಲ್ಲ ಪರಿಣಾಮವಾಗಿ ಹಾಸನ ಸಹಕಾರ ಸಂಘ ಸಂಜೀವಿನಿ ಆಸ್ಪತ್ರೆಯ ಸದಸ್ಯರೆಲ್ಲ ಸೇರಿ ಅಲ್ಲಿ ಆಡಳಿತ ಮಂಡಳಿ ’ಸಹಕಾರ ಸಂಘದ’ ಹುಟ್ಟು ಮತ್ತು ಬೆಳವಣಿಗೆಗೆ ಕಾರಣಕರ್ತರಾದ ಡಾ|| ಗುರುರಾಜ್ ಹೆಬ್ಬಾರ‍್ ಅವರ ಸಾಧನೆಯ ಗೌರವಾರ್ಥ ಅವರ ಹೆಸರಿನಲ್ಲಿ ಸಂಜೀವಿನಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ತೆಗೆದುಕೊಂಡು ಉತ್ತೀರ್ಣರಾದ ಪ್ರತಿಭಾನ್ವಿತರಿಗೆ ೧೦ ಸಾವಿರ ರೂ ಬಹುಮಾನ, ಫಲಕ ನೀಡುವ ತೀರ್ಮಾನ ಮಾಡಿದ್ದಾರೆ. ಇದು ೨೦೦೮ರಿಂದ ಜಾರಿಗೆ ಬರಲಿದೆ.

ಡಾ||ಗುರುರಾಜ್ ಹೆಬ್ಬಾರ‍್ ಅವರ ಈ ಎಲ್ಲಾ ಸಾಧನೆ ಕ್ರಿಯೆಗಳಿಗೆ ಕೈಜೋಡಿಸಿ ಅವರಿಗೆ ನೆರಳಾಗಿ ಸಾಗಿ ಬಂದಿರುವ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ಅವರ ಈ ಜೋಡಿಯನ್ನು ಯಾವ ಸಂಘಟನೆಯವರು ಗೌರವ ಕೊಡುತ್ತಾರೆ, ಪ್ರೀತಿ, ಅಭಿಮಾನಪಡುತ್ತಾರೆ. ಆದ್ದರಿಂದಲೇ ಹಾಸನ ಜಿಲ್ಲೆಯಲ್ಲೆ ಇವರ ಸೇವೆ ಜನಜನಿತವಾದದ್ದರಿಂದ ಹಾಸನ ’ಕನ್ನಡ ಸೇನೆ’ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಧರ್ಮರಾಜ್ ಕಡಗ ಅವರು ಈ ದಂಪತಿಗಳನ್ನು ಆಯ್ಕೆ ಮಾಡಿ ಕರೆಸಿ ಹೇಮಾವತಿ ನದಿ ತುಂಬಿ ಹರಿಯುತ್ತಿರುವ ಗೊರೂರಿನ ಹೇಮಾವತಿ ಅಣೆಕಟ್ಟಿಗೆ ಇವರಿಂದ ೫-೮-೦೭ರ ಭಾನುವಾರ ಬಾಗಿನ ಅರ್ಪಿಸಿದ್ದಾರೆ. ಸಾರ್ವಜನಿಕವಾದ ಈ ಮಹತ್ಕಾರ‍್ಯ ಇವರ ಸೇವೆ, ಸಾಧನೆ, ಜನಮನ್ನಣೆಗೆ ಕಳಸವಿಟ್ಟಂತಿದೆ.

) ಮಾಲೇರು ಮಹಿಳೆಯರ ಸಾಂಸ್ಕೃತಿಕ ಸಾಧನೆಗಳು

ಮಾಲೇರು ಮಹಿಳೆಯರು ಆದಿಯಿಂದ ಬೆಳೆದು ಬಂದಿದ್ದೇ, ಅವರ ಇಡೀ ಜೀವನವನ್ನು ಪ್ರಬಲ ಜಾತಿಗಳೊಳಗಿನ ಪ್ರಬಲ ಪುರುಷರ ದೇಹ ಮನಸ್ಸುಗಳ ಸುಖಕ್ಕಾಗಿ ತಮ್ಮ ದೇಹ ಮನಸ್ಸುಗಳನ್ನು ತ್ಯಾಗ ಮಾಡಿಕೊಂಡು. ಈ ತ್ಯಾಗದೊಳಗೆ ಆತ್ಮಗೌರವದ ಅರಿವಿಲ್ಲದೆ, ಧ್ವನಿಯಿಲ್ಲದ ಮಹಿಳೆಯರಾಗಿ ಸಾಗಿ ಬಂದಿದ್ದರು. ಆದ್ದರಿಂದಲೇ ಇತರ ಸಮಾಜದ ಜನರು ಈ ಜನಾಂಗದ ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದದ್ದು. ಇವರೊಳಗೆ ಏನೆಲ್ಲಾ ಕಲಾ ಪ್ರತಿಭೆಗಳಿದ್ದರೂ ಅವುಗಳಿಗೆ ಯಾರೂ ಬೆಲೆಕೊಡುತ್ತಿರಲಿಲ್ಲ. ಮಾನ್ಯತೆಯೂ ಇರಲಿಲ್ಲ. ಇಂತಹ ಸಮಾಜ, ವ್ಯವಸ್ಥೆಯ ಜನ-ಮನದಿಂದ ಬಿಡಿಸಿಕೊಂಡು ಹೊರ ಬರಲು ಈ ಮಾಲೇರು ಮಹಿಳೆಯರು ಮಾನಸಿಕವಾದ ಹೋರಾಟಗಳನ್ನು ತುಂಬ ಎದುರಿಸಿ ಬಂದಿದ್ದಾರೆ. ಇವರಿಗೆ ಯಾವ ಕ್ಷೇತ್ರದಲ್ಲಾದರೂ ಮುಂದುವರೆಯಲು ಅವರಲ್ಲಿರುವ ಹಿಂಜರಿಕೆ, ಕೀಳರಿಮೆ ಗಳು ತುಂಬ ತೊಡಕಾಗಿವೆ. ಇವುಗಳನ್ನು ಮೀರಿ ಬಂದ ಅಪ್ರತಿಮ ಪ್ರತಿಭಾವಂತ ಮಹಿಳೆಯರು ತಮ್ಮೊಳಗಿದ್ದ ನೃತ್ಯ, ಸಂಗೀತ, ನಾಟಕ,ಸಿನಿಮಾ, ಧಾರಾವಾಹಿಗಳಂತಹ ಸಾಂಸ್ಕೃತಿಕ ಕಲಾ ರಂಗದಲ್ಲಿ ಹಾಡಿ, ಕುಣಿದು, ಅಭಿನಯಿಸಿ ಜನ ಮನ್ನಣೆ ಪಡೆದಿದ್ದಾರೆ. ಈ ಕ್ಷೇತ್ರಗಳ ಹಲವಾರು ಪ್ರತಿಭೆಗಳು ಮಾಲೇರು ಮಹಿಳೆಯರಿಗೆ ಯಾವುದೇ ಪ್ರೋತ್ಸಾಹ, ಗೌರವಗಳಿಲ್ಲದಿದ್ದರಿಂದ ಹಿಂಜರಿದು ಬ್ರಾಹ್ಮಣರೆಂದೇ ಗುರುತಿಸಿಕೊಂಡು ಹೆಸರು ಮಾಡಿ ಹೋಗಿದ್ದಾರೆ. ಅಂತಹ ಕೆಲವು ಮಹಿಳೆಯರ ಬಗ್ಗೆ “ಮಾಲೇರು ಮಹಿಳಾ ಕೂಟ” ದ ಸದಸ್ಯರು ಹಿರಿಯ ತಲೆಗಳನ್ನು ಹೆಸರಿಸಿ ಹೀಗೆ ವಿವರಿಸುತ್ತಾರೆ.

ಈಗಾಗಲೇ ಕಲಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಲತಾಮಂಗೇಶ್ಕರ‍್, ಎಂ.ಎಸ್.ಸುಬ್ಬಲಕ್ಷ್ಮಿ, ಪಂಡರೀಬಾಯಿ, ಕಲ್ಪನಾ ಅಂತಹ ಹಲವಾರು ಪ್ರತಿಭವೆಗಳಿವೆ. ಇವರು ಮಾಲೇರು ಕುಲದವರಾಗೆ ಇದ್ದು, ಇವರ ಪ್ರತಿಭೆಗೆ ಬ್ರಾಹ್ಮಣರ ಪ್ರೋತ್ಸಾಹ ಬೆಂಬಲ ಸಿಕ್ಕಿ, ಅವರ ಸಂಪರ್ಕದಲ್ಲೇ ಇದ್ದ ಕಾರಣ ಬ್ರಾಹ್ಮಣರ ಜನ ಮನದಲ್ಲಿ ಉಳಿದರು ಎನ್ನುತ್ತಾರೆ. ಏಕೆಂದರೆ ಲತಾ ಮಂಗೇಶ್ಕರ‍್ ಅವರು ಗೋವಾದವರು. ಅಲ್ಲಿ ’ಮಂಗೇಶ್ಕರ್‌’ ಎಂಬ ದೇವಾಲಯವಿದೆ. ಆ ದೇವರ ಸೇವೆಯಲ್ಲಿದ್ದ ಲತಾ ಅವರು ತಮ್ಮ ಹೆಸರಿನ ಮುಂದೆ ’ಮಂಗೇಶ್ಕರ‍್’ ಎಂದು ಈ ದೇವರ ಹೆಸರನ್ನು ಸೇರಿಸಿಕೊಂಡು ಹಿಂದೂಸ್ಥಾನಿ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿ ಹೆಚ್ಚು ಪ್ರಸಿದ್ಧಿಯಾದರು. ಇವರ ಸಹೋದರ ಸಹೋದರಿಯರೆಲ್ಲ ಹುಟ್ಟು ಕಲಾವಿದರು. ತಂಗಿ ಉಷಾಮಂಗೇಶ್ಕರ‍್ ಕೂಡ ಅಕ್ಕನಂತೆ ಸಂಗೀತದಲ್ಲಿ ಹಿನ್ನೆಲೆ-ಗಾಯಕಿಯಾಗಿ ಸಿನಿಮಾ, ಭಕ್ತಿಗೀತೆ, ಭಾವಗೀತೆ, ದೇವಭಕ್ತಿ ಗೀತೆಗಳಲ್ಲಿ ಹೆಸರು ಮಾಡಿದ್ದಾರೆ. ಇವರು ಮದುವೆಯಾಗಿದ್ದಾರೆ. ಆದರೆ ಲತಾ ಮಂಗೇಶ್ಕರ‍್ ಕೂಡ ಸಂಗೀತ ಸಿನಿಮಾ ಕ್ಷೇತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಭಾರತದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಇವರು ಭಾರತದ ಹಲವಾರು ಭಾಷೆಗಳಲ್ಲಿ ಸಿನಿಮಾ ಹಿನ್ನೆಲೆಗಾಯಕಿಯಾಗಿ, ಭಕ್ತಿಗೀತೆ ದೇಶಭಕ್ತಿಗೀತೆ ಹೀಗೆ ನಾನಾ ರೀತಿಯ ಹಾಡುಗಳನ್ನು ಹೇಳಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಆದರೂ ಇವರು ಮದುವೆಯಾಗದೆ ಉಳಿದವರು. ಕೀರ್ತಿ ಸಂಪಾದಿಸಿದರು. ಇವೆಲ್ಲ ಮಾಲೇರು ಮಹಿಳೆಯಾಗಿ ಅಲ್ಲ, ಬ್ರಾಹ್ಮಣ ಮಹಿಳೆಯಾಗಿ ಎಂದು ಜನರ ಮನದಲ್ಲಿ ಉಳಿದರು. ಹಾಗಾಗಿ ಇವರ ಕೀರ್ತಿಯ ಹೆಸರು ಮಾಲೇರು ಸಮುದಾಯಕ್ಕಲ್ಲ, ಬ್ರಾಹ್ಮಣ ಸಮುದಾಯಕ್ಕೆ.

ಇದೇ ರೀತಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು ಎಂ.ಎಸ್.ಸುಬ್ಬಲಕ್ಷ್ಮಿಯವರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇದಕ್ಕೊಳಪಟ್ಟ ಭಕ್ತಿಗೀತೆಗಳಲ್ಲಿ ಹೆಚ್ಚು ಪ್ರಸಿದ್ಧಿಯಾದವರು, ನಾನಾ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಕರ್ನಾಟಕದಲ್ಲೇ ಏಕೆ ಭಾರತದಾದ್ಯಂತ ಸಂಗೀತ ಕ್ಷೇತ್ರದಲ್ಲಿ ಇವರದೂ ದೊಡ್ಡ ಹೆಸರು. ಕೊನೆಗೆ ಇವರು ಕೊಂಕಣಿ ಬ್ರಾಹ್ಮಣ ಹುಡುಗನನ್ನು ಮದುವೆಯಾಗಿ ಮಾಲೇರು ಸಮುದಾಯದಿಂದ ಬ್ರಾಹ್ಮಣ ಹುಡುಗನನ್ನು ಮದುವೆಯಾಗಿ ಮಾಲೇರು ಸಮುದಾಯದಿಂದ ಬ್ರಾಹ್ಮಣ ಸಮುದಾಯಕ್ಕೆ ಪರಿವರ್ತನೆಯಾಗಿ ಅಲ್ಲೆ ಸ್ಥಿರವಾಗಿ ಅವರ ಹೆಸರು, ಕೀರ್ತಿ, ಜೀವನವೆಲ್ಲ ಮುಡಿಪಾಯಿತು ಎಂಬುದು ಹಲವು ಹಿರಿಯ ಮಹಿಳೆಯರು ಅಭಿಪ್ರಾಯ.

ಇವರೆಲ್ಲ ಸಂಗೀತದಲ್ಲಿ ಹಿನ್ನೆಲೆಗಾಯಕಿಯರಾಗಿ ಬೆಳೆದವರಾದರೆ, ನಾಟಕ, ಸಿನಿಮಾ ಕ್ಷೇತ್ರದಲ್ಲೂ ಹೆಸರು ಮಾಡಿದವರು ಹಲವರು. ಅವರಲ್ಲಿ ದೊಡ್ಡ ಹೆಸರು ಮಾಡಿದವರು ಪಂಡರೀಬಾಯಿ, ಕಲ್ಪನಾ ಅವರುಗಳು. ಪಂಡರೀಬಾಯಿ ಕನ್ನಡ ಚಿತ್ರರಂಗದ ಹಿರಿಯ ನಟ-ನಟಿಯರಲ್ಲಿ ಒಬ್ಬರು. ಕರ್ನಾಟಕ, ಮಹಾರಾಷ್ಟ್ರದ ಗಡಿ ಪ್ರದೇಶದವರಾದ ಇವರನ್ನು ಪಿಟೀಲ್ ಚೌಡಯ್ಯನವರು ತಮ್ಮ ನಿರ್ದೇಶನದ ಚಿತ್ರಕ್ಕೆ ನಟಿಯಾಗಿ ಆಯ್ಕೆಮಾಡಿಕೊಂಡರು. ಇಲ್ಲಿಂದ ಪಂಡರೀಬಾಯಿ ಅವರು ಸಿನಿಮಾರಂಗಕ್ಕೆ ಮೊದಲು ಪಾದಾರ್ಪಣೆ ಮಾಡಿದರು. ಅಲ್ಲಿಂದ ಸುಮಾರು ೭೦-೮೦ ಸಿನಿಮಾಗಳಲ್ಲಿ, ನಾಯಕಿ, ಉಪನಾಯಕಿ ಮತ್ತು ತಾಯಿ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ. ಇವರು ಮದುವೆಯಾಗದೆ ಕೊನೆಯವರೆಗೂ ಉಳಿದು ಸಿನಿಮಾರಂಗದಲ್ಲಿ ಒಳ್ಳೆ ಗೌರವ ಪಡೆದರು. ಹಾಗೆಯೇ ನಾನಾ ಪ್ರಶಸ್ತಿ, ಸನ್ಮಾನಗಳು ಸಿಕ್ಕಿದವು. ಇವರುಮೂಲತಃ ಮಾಲೇರು ಮಹಿಳೆಯಾದರೂ ಕೊಂಕಣಿ ಬ್ರಾಹ್ಮಣರೆಂದು ಹೇಳಿಕೊಂಡು ಹಾಗೆ ಗುರುತಿಸಿಕೊಂಡರು. ಇದೇ ರೀತಿ ನಾಯಕಿ ನಟಿಯಾಗಿ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿ ಕಣ್ಮರೆಯಾದ ಕಲ್ಪನಾ ಕೊನೆಗೂ ಯಾರನ್ನು ಮದುವೆಯಾಗದೆ ಹಾಗೆ ಉಳಿದು ಅಪಾರ ಜನಮನ್ನಣೆಯನ್ನು ತಮ್ಮ ಅಭಿನಯದಿಂದ ಸಂಪಾದಿಸಿಕೊಂಡಿದ್ದರು. ಇವರನ್ನು ಮಾಲೇರು ಮಹಿಳೆ ಎಂಬ ಕಾರಣದಿಂದಲೇ ಯಾರೂ ಮದುವೆಯಾಗಲು ಹಿಂದೆಮುಂದೆ ಯೋಚಿಸಿದ ಯಾವ ಗಂಡಸರು ಮಾನ್ಯ ಮಾಡಲಿಲ್ಲ. ಹಾಗೆ ಕಲ್ಪನಾಜೀವನದಲ್ಲಿ ತುಂಬಾ ನೊಂದು ಹೋಗಿದ್ದರೆಂದು “ಮಾಲೇರು ಮಹಿಳಾ ಕೂಟ”ದ ಹಲವಾರು ವೃದ್ಧ ಮಹಿಳೆಯರು ಅವರ ಕಾಲದ ಕಲಾವಿದ ಹೆಣ್ಣು ಮಕ್ಕಳ ಕಥೆಯನ್ನು ಕೇಳಿ, ನೋಡಿದ್ದ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ವಿವರಿಸುತ್ತಾರೆ.

ಆ ಕಾಲದಲ್ಲಿ ಯಾವ ಬ್ರಾಹ್ಮಣ ಕುಟುಂಬವು ತಮ್ಮ ಕುಲದ ಹೆಣ್ಣು ಮಕ್ಕಳನ್ನು ನಾಟಕ,ಸಿನಿಮಾಗಳಂತಹ ಕಲಾರಂಗಕ್ಕೆ ಅಭಿನಯಿಸಲು, ನೃತ್ಯ ಮಾಡಲು ಕಳುಹಿಸಿದ್ದಂತಹ ಉದಾಹರಣೆಗಳು ಯಾವ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಚರಿತ್ರೆಯಲ್ಲಿಯೂ ಕಾಣಸಿಗುವುದಿಲ್ಲ. ಹಾಗಿದ್ದ ಮೇಲೆ ಇದ್ದವರ‍್ಯಾರು ಎಂದರೆ ಬ್ರಾಹ್ಮಣರಿಂದ ಬಹಿಷ್ಕೃತರಾದ ಮಾಲೇರು ಮಹಿಳೆಯರು ಮತ್ತು ಲಿಂಗಯಿತರಿಂದ ಬಹಿಷ್ಕೃತರಾದ ಪಾತ್ರದವರ ಮಹಿಳೆಯರು ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಬೇಕು. ಆದರೆ ಇತ್ತೀಚೆಗೆ ಕಲಾ ರಂಗಕ್ಕೆ ಅದರಲ್ಲೂ ಸಿನಿಮಾ, ಧಾರಾವಾಹಿ, ಭರತನಾಟ್ಯಗಳಂತಹ ಕಲಾ ಕ್ಷೇತ್ರದಲ್ಲಿ ಹೆಚ್ಚಾಗಿ ಬ್ರಾಹ್ಮಣ ಹೆಣ್ಣುಮಕ್ಕಳೇ ಜಾಸ್ತಿಯಾಗಿ ಭಾಗವಹಿಸುತ್ತಿದ್ದಾರೆ. ಈ ಬೆಳವಣಿಗೆ ೪೦-೫೦ ವರ್ಷಗಳಿಂದೀಚೆಗೆ ಹೆಚ್ಚಾಗಿ ಬದಲಾವಣೆಯಾಗುತ್ತಿದ್ದಾರೆ. ಏಕೆಂದರೆ ಕಲಾಕ್ಷೇತ್ರಗಳು ಕೂಡ ಆಗ ವ್ಯಾಪಾರ ಕೇಂದ್ರ ಗಳಾಗಿದ್ದರಿಂದ ಬ್ರಾಹ್ಮಣರು ಕೂಡ ಈಗ ಅವರ ಮಕ್ಕಳನ್ನು ಈ ವಾಣಿಜ್ಯ ಕೇಂದ್ರಕ್ಕೆ ಹೆಚ್ಚು ಪ್ರವೇಶ ಮಾಡಿಸಿದ್ದಾರೆ. ಹಾಗಾಗಿ ಈ ಕಲಾರಂಗದಲ್ಲಿ ಬೇರೆಯವರಿಗೆ ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಆದರೂ ಕೆಲವರು ಅಲ್ಲೊಂದು ಇಲ್ಲೊಂದು ಈಗ ಪ್ರಧಾನ ಪಾತ್ರಗಳನ್ನು ಅಭಿನಯಿಸಲು ಈ ಸಾಧ್ಯವಾಗುತ್ತಿಲ್ಲ. ಆದರೂ ಸಿಕ್ಕ ಪಾತ್ರಗಳನ್ನೇ ನಿರ್ವಹಿಸಿಕೊಂಡು ಸಿನಿಮಾದಲ್ಲಿ ಇರಬಹುದು, ಧಾರಾವಾಹಿಗಳಲ್ಲಿ ಇರಬಹುದು ಮುಂದುವರೆಯುತ್ತಿರುವುವರೆಂದರೆ ಸಧ್ಯಕ್ಕೆ ಮಾಲತಿ ಸರೋಜ ಅವರು.

ತಾಯಿಯೊಂದಿಗೆ ಬೆಂಗಳೂರಿನಲ್ಲೆ ವಾಸವಾಗಿರುವ ಮಾಲತಿ ಸರೋಜ ಅವರು ಮೂಲತಃ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಈಗ ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಅವಕಾಶ ಸಿಕ್ಕಾಗ ನಟಿಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅಧಿಕೃತವಾಗಿ ತಂದೆಯ ಹೆಸರಿಲ್ಲದಿದ್ದರಿಂದ ಇವರ ತಾಯಿ ಸರೋಜ ಅವರ ಹೆಸರನ್ನೇ ತಮ್ಮ ಹೆಸರೊಡನೆ ಸೇರಿಸಿಕೊಂಡು ವಿವಾಹವು ಆಗದೆ ಹಾಗೆ ಉಳಿದಿದ್ದಾರೆ. ಕರ್ನಾಟಕದ ಕೊನೆಯ ದೇವದಾಸಿ ಮಹಿಳೆಯರಲ್ಲಿ ಒಬ್ಬರಾದ ಚಂದ್ರಮತಿಯವರು ವಿಶೇಷವಾಗಿ ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ತುಂಬ ಹೆಸರು ಮಾಡಿದವರು. ಸ್ಥಳೀಯ ಕಲಾವಿದೆಯಾದ ಇವರು ತುಂಬ ಬಡತನದಲ್ಲಿ ಇದ್ದವರು. ದೊಡ್ಡ ದೊಡ್ಡ ಕಲಾವಿದರೆಲ್ಲ ನಗರ ಪಟ್ಟಣಗಳಲ್ಲಿ ಇದ್ದದ್ದರಿಂದ, ಮಲೆನಾಡ ಕೊಂಪೆಯಲ್ಲಿದ್ದ ಬಸರೂರಿನ ಚಂದ್ರಮತಿ ಯಾರ ಗಮನಕ್ಕೂ ಬಾರಲಿಲ್ಲ. ಹಾಗಾಗಿ ದೊಡ್ಡ ಕಲಾವಿದರ ಪರಿಚಯವಾಗದೆ ಸಿನಿಮಾ, ಧಾರಾವಾಹಿಗಳಂತಹ ಕ್ಷೇತ್ರದಲ್ಲಿ ಭಾಗವಹಿಸಲು ಇವರಿಗೆ ಅವಕಾಶವಾಗಲಿಲ್ಲ. ಕಡು ಬಡತನದಲ್ಲಿದ್ದ ಈ ಕಲಾವಿದೆ ಸ್ಥಳೀಯ ಕಲಾವಿದೆಯಾಗಿಯೇ ಹೆಸರು ಮಾಡಿದ್ದರು.

ಮಾಲೇರು ಜನಾಂಗ ಒಂದು ಬುಡಕಟ್ಟು ವರ್ಗಕ್ಕೆ ಸೇರಿದ್ದಾದರೂ ಈ ವರ್ಗದ ಜನರು ಯಾರೂ ಜಾನಪದ ಕಲೆಗಳಲ್ಲಿ ಹೆಸರು ಮಾಡಿಲ್ಲ. ಇಲ್ಲಿಯ ಮಹಿಳೆಯರು ಬ್ರಾಹ್ಮಣ ಸಮುದಾಯದ ಹಿನ್ನೆಲೆ, ಪ್ರಭಾವದಿಂದ ಬಂದವರಾದ್ದರಿಂದ ಶಾಸ್ತ್ರೀಯ ಸಂಗೀತವನ್ನು ಮೈಗೂಡಿಸಿಕೊಮಡು ಬೆಳೆದವರಾಗಿದ್ದಾರೆ. ಅಂತಹವರಲ್ಲಿ ಲೀಲಾಸದಾನಂದ ಒಬ್ಬರು. ಇವರು ಬೆಂಗಳೂರಿನಲ್ಲೇ ವಾಸವಾಗಿದ್ದು, ಸರ್ಕಾರಿ ದೂರವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ಕಲಿತು ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಸಂಗೀತ ತರಗತಿಗಳನ್ನು ತೆಗೆದುಕೊಂಡು ಮಕ್ಕಳಿಗೆ ಕಲಿಸಿ ಹಲವಾರು ಶಿಷ್ಯಂದಿರನ್ನು ಸೃಷ್ಟಿಸಿದ್ದಾರೆ. ಹಾಗಾಗಿ ತಮ್ಮ ಪ್ರತಿಭೆಯನ್ನು ಮಕ್ಕಳ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಳಸಿಕೊಂಡು ಬೆಳೆಸುತ್ತಾ ಬೆಳೆಯುತ್ತಿದ್ದಾರೆ. ಇದರ ಮೂಲಕ  ಮಕ್ಕಳ ಸಂಗೀತ ಭವಿಷ್ಯದ ತಳಹದಿಯನ್ನಾಗಿಯೂ ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇದರಿಂದ ಅವರ ಸುತ್ತಮುತ್ತಲ ಸಾಮಾಜಿಕ ಸ್ಥಾನಮಾನ, ಗೌರವಗಳು ಅವರ ಈ ಸಾಧನೆ, ಹೃದಯವಂತಿಕೆಯಿಂದಲೇ ಪ್ರಾಪ್ತವಾಗಿದೆ. ಇದಕ್ಕೆ ಅವರ ಪತಿ ಸದಾನಂದ ಅವರ ಪ್ರೋತ್ಸಾಹ, ಬೆಂಬಲ, ಸಹಾಯ, ಸಹಕಾರಗಳೆಲ್ಲ ಜೊತೆಯಾಗಿರುವುದರಿಂದ ಇವೆಲ್ಲ ಸಾಧ್ಯವಾಗುತ್ತಿವೆ. ಸದಾನಂದ ಅವರ ಸಾಮಾಜಿಕ ಕಳಕಳಿ, ಸಮಾಜಸೇವೆ, ಸಮುದಾಯ ನಿಷ್ಠೆ, ಅತ್ಯಂತ ಶ್ಲಾಘನೀಯವಾದವು. ಹಾಗಾಗಿ ಮನೆಯ ಒಳಗೆ ಮತ್ತು ಹೊರಗೆ ಎರಡು ಭಾಗದಲ್ಲೂ ಅವರಿಗೆ ಅತ್ಯಂತ ಗೌರವವಿದೆ. ಇಂತಹ ದಂಪತಿಗಳ ಪ್ರತಿಭೆ, ಹೃದಯವಂತಿಕೆ ಕಾರ‍್ಯಶೀಲತೆಗಳಿಂದ ಸಮಾಜ ಮತ್ತು ಸಾಂಸ್ಕೃತಿಕ ಕಾರ‍್ಯಗಳು ಇನ್ನೂ ಆಗಬೇಕಾಗಿದೆ. ಈಗಿರುವ, ಮಾಡುತ್ತಿರುವ ಕೆಲಸ, ಕಾರ‍್ಯಗಳಿಂದ ಈ ಸಮುದಾಯದ ಸಾಧನೆ, ಸ್ಥಾನಮಾನ, ಗೌರವಗಳು ವೃದ್ಧಿಯಾಗುತ್ತಿರುವುದು ವಿಶೇಷವಾಗಿದೆ.

ಈ ಸಮುದಾಯದ ಹೆಣ್ಣು ಮಕ್ಕಳಲ್ಲಿ ಸುಂದರಿಯರು ಹೆಚ್ಚು ಸಿಕ್ಕುತ್ತಾರೆ. ಜೊತೆಗೆ ನೃತ್ಯ, ಸಂಗೀತ, ಮತ್ತಿತರ ಕಲೆಗಳಲ್ಲಿ, ವಿದ್ಯೆ ಬುದ್ಧಿಯಲ್ಲಿಯೂ ಯಾರಿಗೂ ಕಡಿಮೆ ಇಲ್ಲದಂತಹ ಮಕ್ಕಳಿದ್ದಾರೆ. ಇವರಿಗೆ ಪ್ರೋತ್ಸಾಹವಿಲ್ಲದೆ, ಎಲ್ಲಿಯೂ ಅವಕಾಶವಾಗದೆ ಅವರವರೊಳಗೆ ಅವರ ಕಲಾ ಪ್ರತಿಭೆಗಳು ಕಮರಿ ಹೋಗುತ್ತಿವೆ. ಆದ್ದರಿಂದ ಅಂತಹ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ನಿಟ್ಟಿನಲ್ಲಿ ಈ ಸಮುದಾಯದ ಹಿರಿಯರು, ವಿದ್ಯಾವಂತ, ತಿಳಿವಳಿಕೆಯುಳ್ಳವರು ಮಾಡಬೇಕಾಗಿದೆ. ಇದರ ಜೊತೆಗೆ ಈಗ ನಾನಾ ರಂಗದಲ್ಲಿರುವ ದೊಡ್ಡ ದೊಡ್ಡ ಕಲಾವಿದರು ಇವರೊಳಗಿನ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬೇಕಾಗಿರುವ ಜವಾಬ್ದಾರಿ ಅನಿವಾರ‍್ಯವಾಗಿದೆ. ಹೀಗೆ ಒಂದು ಸಾಂಸ್ಕೃತಿಕ ಪ್ರತಿಭೆಗಳನ್ನು ಜೀವಂತಗೊಳಿಸುವ ನಿಷ್ಠೆ ಈಗ ಈ ಸಮುದಾಯದ, ಸಮಜ, ಸರ್ಕಾರಗಳ  ಮೇಲಿದೆ.

ಆತ್ಮಗೌರವ ಸ್ವಾಭಿಮಾನಿ ದಂಪತಿಗಳಾದ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ಅವರು “ಕಾಮಧೇನು ವಿದ್ಯಾಶ್ರಮ ಚೈತನ್ಯ ಮಂದಿರ’ದ ಬಗ್ಗೆ ಮತ್ತು ಪತಿ ಡಾ|| ಗುರುರಾಜ್ ಹೆಬ್ಬಾರ‍್ ಅವರ ಬಗ್ಗೆ ಬರೆಯಬೇಡಿ, ನಮ್ಮಗಳಿಗೆ ಹೇಳಿಕೊಳ್ಳುವ, ಪ್ರಚಾರ ಬಯಸಲು ಮನಸ್ಸಿಲ್ಲವೆಂದು ಮುಜುಗರಪಡುತ್ತಿದ್ದರು. ಇದಕ್ಕೆಲ್ಲ ಕೇವಲ ನಮ್ಮಿಬ್ಬರ ಶ್ರಮವಿಲ್ಲ; ಇದರ ಮೇಲೆ ಇಡೀ ನಮ್ಮ ಸಹಕಾರಿ ಸಂಘದ ಪ್ರತಿಯೊಬ್ಬ ಸದಸ್ಯರ ಶ್ರಮ, ಹಣ, ಸಮಯ, ವಿನಿಯೋಗವಾಗಿದೆ. ಆದ್ದರಿಂದ ನಮ್ಮಗಳ ಹೆಸರಿನಲ್ಲಿ ಅವರ ಮಾಹಿತಿ,ವಿವರಣೆ ದಾಖಲಾದರೆ ಅವರ ಸಹಕಾರ ಗುಣಕ್ಕೆ ಧಕ್ಕೆಯಾಗುತ್ತದೆ” ಎಂದು ಚಡಪಡಿಸಿದರು. ಆದರೂ ನಾನು ಅವರ ಮನಸ್ಸು ಮತ್ತು ನಡವಳಿಕೆಗಳನ್ನು ಅರ್ಥ ಮಾಡಿಕೊಂಡು ಅವರ ಮಾತನ್ನೆ ಇಲ್ಲಿ ಉಲ್ಲೇಖಿಸಿ ವಿವರ ಕೊಟ್ಟಿದ್ದೇನೆ.

ಏಕೆಂದರೆ ಮಾಲೇರು ಮಹಿಳೆಯರೇ ಸೇರಿದ, ಆ ಸಮುದಾಯದವರ ನಾಯಕತ್ವದ ಸಹಕಾರ ಚಿಂತನೆಯಿಂದ ಇಂತಹ ಸಹಕಾರ ಸಂಘ ಬೆಳೆದಿರುವುದು ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ. ಆದ್ದರಿಂದ ಈ ದಂಪತಿಗಳ ಸಹಕಾರ, ಮುಂದಾಳತ್ವ, ತ್ಯಾಗ, ಶ್ರಮ, ನಡೆ-ನುಡಿಗಳಿಗೆ ಎಂತಹವರು ಕರುತ್ತಾರೆ. ಹಾಗಾಗಿ ಕರಗಿಸುವ, ಅರಗಿಸುವ ಬೆಳಗಿಸುವ ಗುಣ-ಶಕ್ತಿ ಶ್ರೀಮತಿ ಸ್ವರ್ಣಲತಾ ಹೆಬ್ಬಾರ‍್ ದಂಪತಿಗಳಿಗೆ ಇರುವುದರಿಂದಲೂ ’ಚೈತನ್ಯ ಮಂದಿರ’ದ ಈ ವಿವರಣೆ ಕೊಡಬೇಕಾಯಿತು. ಇದರ ವಿವರಣೆಯನ್ನು ನೀಡಲು ಅವರಲ್ಲಿ ಹಿಂಜರಿಕೆ ಇದ್ದುದ್ದರಿಂದ ನಾನೇ ನೋಡಿ, ಕೇಳಿ ತಿಳಿದು ಸಾರ್ವಜನಿಕರಿಂದ ಮಾಹಿತಿ ಪಡೆದು ಇಲ್ಲಿ ದಾಖಲಿಸಿದ್ದೇನೆ. ಈ ದಂಪತಿಗಳು ಮಾಡಿರುವುದು, ಈಗ ಮಾಡುತ್ತಿರುವುದೆಲ್ಲ ಮಾಲೇರು ಮಹಿಳಾ ಸಮುದಾಯದವರ ಮಹತ್ವದ ಸಾಧನೆಗಳಾಗಿವೆ. ಇವರು ಮಾಡಿರುವುದೆಲ್ಲ ಸಾರ್ವಜನಿಕರಿಗಾಗಿ ನೀಡಿರುವ ಕೊಡುಗೆಗಳೇ ಹೊರತು ಅವರ ಸ್ವಾರ್ಥ ಸಾಧನೆಗಾಗಿ ಏನೂ ಮಾಡಿಕೊಂಡಿಲ್ಲ. ಈ ಸಹಕಾರ ಸಂಘದ ಕಾರ‍್ಯ ಚಟುವಟಿಕೆಗಳಿಗೆಲ್ಲ ಮೂಲಕೇಂದ್ರ ಇವರೆ ಆದಕಾರಣ. ’ಕಾಮಧೇನು ವಿದ್ಯಾಶ್ರಮ ಚೈತನ್ಯ ಮಂದಿರ’ದ ವಿವರವನ್ನು ಇಲ್ಲಿ ಕೊಡಲಾಇಗದ.ಎ ಈ ವಿವರದೊಳಗೆ ಈ ಸಹಕಾರ ಸಂಘದ ಎಲ್ಲ ಸದಸ್ಯರ ಕಾರ‍್ಯಸಾಧನೆಯ ವಿವರವಿಲ್ಲ. ಕಾರಣ ಇದು ಮಾಲೇರು ಮಹಿಳಾ ಸಂಸ್ಕೃತಿಗೆ ಅವರ ಕಾರ‍್ಯ ಸಾಧನೆಗಳಿಗೆ ಮಾತ್ರ ಸೀಮಿತವಾಗಿದ್ದರ ಅನಿವಾರ್ಯತೆಯಿಂದ ಅವರಿಗೆ ಸಂಬಂಧಿದ ವಿವರಗಳನ್ನು ಮಾತ್ರ ಇಲ್ಲಿ ಮಾಹಿತಿ ನೀಡಲಾಗಿದೆ.

ಮಾಲೇರು ಮಹಿಳೆಯರ ರಾಜಕೀಯ ಸಾಧನೆಗಳು

ಮಾಲೇರು ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ವಿರಳವಾಗಿರುವಂತೆ ರಾಜಕೀಯ ರಂಗದಲ್ಲೂ ಹೆಚ್ಚು ಜನ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಅಂತಹ ಅವಕಾಶವೂ ಹೆಚ್ಚು ದೊರೆಯದಿರುವುದು ಒಂದು ಕಾರಣ. ಆದರೆ ದೊರೆತ ಅವಕಾಶವನ್ನು ಬಳಸಿಕೊಂಡು ಬೆಳೆದ ಒಬ್ಬ ಮಹಿಳೆಯೆಂದರೆ ಶೃಂಗೇರಿಯ ಪುಷ್ಪ ಲಕ್ಷ್ಮೀನಾರಾಯಣ ಅವರು. ಶೃಂಗೇರಿ ತಾಲ್ಲೂಕು ಪಂಚಾಯ್ತಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಇವರು, ನಂತರ ಚಿಕ್ಕಮಗಳೂರು ಜಿಲ್ಲಾಪಂಚಾಯ್ತಿಯ ಸದಸ್ಯೆಯಾಗಿ,ಉಪಾಧ್ಯಕ್ಷೆಯೂ ಆಗಿ ಕೆಲಸ ಮಾಡಿದ್ದಾರೆ. ಹಾಗೂ ಹಲವಾರು ಸಂಘ, ಸಂಸ್ಥೆ, ಮಂಡಳಿಗಳ ಅಧ್ಯಕ್ಷೆ, ಸದಸ್ಯೆ, ಖಜಾಂಚಿಯಂತಹ ನಾನಾ ಹುದ್ದೆಗಳ ಜವಾಬ್ದಾರಿವಹಿಸಿಕೊಂಡು ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಜೊತೆಗೆ ಅವರದೆ ಆದ ಹಲವಾರು ಕಾರ‍್ಯಸಾಧನೆ ಮಾಡಿ ಬೆಳೆದು ಹೆಸರು ಮಾಡಿದ್ದಾರೆ.

ಇವರ ಈ ಎಲ್ಲ ಬೆಳವಣಿಗೆಗೆ ಮೂಲ ಬೇರಾದವರು ಅವರ ಕೌಟುಂಬಿಕ ಪರಿಸರದ ಕುಟುಂಬದ ಸದಸ್ಯರು. ಪುಷ್ಪ ಅವರ ತಂದೆ ಡಿ.ಶಂಕರರಾವ್, ತಾಯಿ ಸುಮತಿರಾವ್ ಮತ್ತು ಸಹೋದರ, ಸಹೋದರಿಯರು ಇವರಿಗೆ ಯಾರಿಗೂ ಅರಿವಿಲ್ಲದಂತೆ ರಾಜಕೀಯ ಜೀವರಸ ತುಂಬಿದವರು. ಇವರ ಬಾಲ್ಯದಲ್ಲೆ  ಶಂಕರರಾವ್ ಕಾಂಗ್ರೆಸ್ ಪಕ್ಷದ ಕಾರ‍್ಯಕರ್ತರಾಗಿ ಕೆಲಸ ಮಾಡಿ ಒಂದು ಬಾರಿ ಗ್ರೂಪ್ ಪಂಚಾಯ್ತಿ ಚುನಾವಣೆಗೆ ನಿಂತು ಸೋತಿದ್ದರು. ಆದರೆ ತಾಯಿ ಸುಮತಿರಾವ್ ಮಾತ್ರ ಗ್ರೂಪ್‌ಪಂಚಾಯ್ತಿಯ ನಾಮನಿರ್ದೇಶಿತ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿ ತಮ್ಮ ನೇರ ನಿಷ್ಠ. ಪ್ರಾಮಾಣಿಕ, ಮುಗ್ಧ ಮನಸ್ಸಿನಿಂದ ಊರ ಕೆಲಸಗಳನ್ನು ಮಾಡಿಸುತ್ತಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಸುಮತಿರಾವ್ ಅವರು ತುಂಬ ಚಾಣಾಕ್ಷ ಬುದ್ಧಿಯುಳ್ಳ ಭವಿಷ್ಯ ಪ್ರಜ್ಞೆಯ ಸೂಕ್ಷ್ಮಮತಿಗಳು. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಬಡತನದಲ್ಲೂ ಮಗಳು ಪುಷ್ಪ ಅವರನ್ನು ಬಿ.ಕಾಂ.ವರೆಗೆ ಓದಿಸಿದ್ದರು. ನಂತರ ಇವರು ಕರ್ನಾಟಕ ಮುಕ್ತವಿಶ್ವವಿದ್ಯಾನಿಯದಿಂದ ಜಾನಪದದಲ್ಲಿ ಎಂ.ಎ.ಪದವಿ ಪಡೆದವರಾಗಿದ್ದಾರೆ. ಇದಕ್ಕೆಲ್ಲ ಅಮ್ಮನ ಮಾರ್ಗದರ್ಶನ ಮತ್ತು ಅವರ ಅಪ್ಪನ ಶ್ರಮ ಫಲದ ಪ್ರತಿಯಾಗಿ ವಿದ್ಯೆ, ಬುದ್ಧಿ, ತಿಳುವಳಿಕೆ, ಅನುಭವ, ಧೈರ‍್ಯ ಇವೆಲ್ಲ ಇವರ ಬೆಳವಣಿಗೆಯ ಜೊತೆಯಲ್ಲೆ ಊರ ಪರಿಸರದಲ್ಲೇ ಮೈಗೂಡಿಕೊಂಡಿದ್ದವು.

ಹೀಗೆ ಬೆಳೆದ ಪುಷ್ಪ ಅವರ ೧೯೮೫ರಲ್ಲಿ ಡಾ||ಲಕ್ಷ್ಮೀನಾರಾಯಣ ಅವರನ್ನು ಮದುವೆಯಾಗಿ ಮಗಳು ಸುಶ್ಮಿತಾ ಪ್ರಿಯದರ್ಶಿನಿ, ಮಗ ರಜತ್ ಪ್ರೀತಂ ಅವರನ್ನು ಹೆತ್ತು ಬೆಳಸಿ ಒಳ್ಳೆ ಗೃಹಿಣಿಯಾಗಿದ್ದವರು. ಆ ಸಂದರ್ಭದಲ್ಲೇ ಇವರು ಊರ ಗೃಹಿಣಿಯರನ್ನೆಲ್ಲ ಒಗ್ಗೂಡಿಸಿಕೊಂಡು ೧೯೯೦ರಲ್ಲೆ ’ಮಹಿಳಾ ಸಮಾಜ’ ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಮಾಡಿರುವ ಕೆಲಸ ಗಣನೀಯವಾಗಿದೆ. ಮಹಿಳಾ ಸಂಘದ ಸದಸ್ಯರಿಗೆ ಹೊಲಿಗೆ, ಸಂಗೀತ, ಆಟೋಟಗಳಲ್ಲಿ ತರಬೇತಿ ನೀಡಿ ಅವರ ಆರೋಗ್ಯ ಮತ್ತು ವೃತ್ತಿ ಜೀವನಕ್ಕೆ ಪ್ರೋತ್ಸಾಹ, ಧನ ಸಹಾಯ ಮಾಡಿ ಸಂಘದ ಬೆಳವಣಿಗೆಗೆ ಆಧಾರವಾಗಿದ್ದಾರೆ. ೧೯೯೨-೯೩ರಲ್ಲಿ ಪ್ರಾರಂಭವಾದ ’ಅಕ್ಷರಧಾರಾ’ ಕಾರ‍್ಯಕ್ರಮದಲ್ಲಿ ಸ್ವಯಂಸೇವಕಿಯಾಗಿ ಅಂಗವಿಕಲೆಯರ ಮನೆಗೆ ಹೋಗಿ ಪಾಠಹೇಳಿಕೊಟ್ಟು ೧೦ ಜನ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಿದ್ದಾರೆ. ಮಗಳು ಸುಶ್ಮಿತ ಪ್ರಿಯದರ್ಶಿನಿ ಶೃಂಗೇರಿ ಶಾಲೆಗೆ ಓದಲು ಕಳುಹಿಸುವ ಸಂದರ್ಭ ಒದಗಿಬಂದಾಗ: ಮಗಳನ್ನು ಕಳುಹಿಸಿ ಕರೆತರಲು ಎಂದೊ ಕಲಿತಿದ್ದ ಡ್ರೈವಿಂಗ್ ಉಪಯೋಗಕ್ಕೆ ಬಂದಿದೆ. ಆಗ ಮಹಿಳೆಯರು ಹಳ್ಳಿಯಲ್ಲಿ ವಾಹನ ಓಸಿಸುವುದೆಂದರೆ ಜನಕ್ಕೆ ಆಶ್ಚರ‍್ಯದ ಸಂಗಿ. ಅದೆಲ್ಲ ಅಲ್ಲಿನ ಸುತ್ತಮುತ್ತಲ ಜನಕ್ಕೆ ಪುಷ್ಪ ಅವರ ಧೈರ‍್ಯ, ಶಕ್ತಿ, ಬೆಳವಣಿಗೆಗಳು ಹೆಚ್ಚು ಗೌರವ, ಪ್ರೀತಿ ತಂದಿವೆ. ಇವರ ಬಗೆಗೆ ಈ ಎಲ್ಲ ಆಧಾರ ಹಿನ್ನೆಲೆಗಳ ಜೊತೆಗೆ ಡಾಕ್ಟರ‍್ ಹೆಂಡತಿ ಎಂಬ ಸಾರ್ವಜನಿಕರ ಪ್ರೀತಿ, ಗೌರವ ಇವರ ಮುಂದಿನ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿ ಜಯ ಕಾಣಲು ಅನುವಾದವು.

೧೯೯೫ರ ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗ ಡಾ| ಲಕ್ಷ್ಮೀನಾರಾಯಣ ಅವರನ್ನು ಕಾಂಗ್ರೆಸ್, ಬಿ.ಜೆ.ಪಿ. ಜನತಾದಳ ಪಕ್ಷಗಳ ಕಾರ‍್ಯಕರ್ತರು ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಲು ಕೇಳಿಕೊಂಡರು. ಡಾ|| ಲಕ್ಷ್ಮೀನಾರಾಯಣ ಅವರು ರಾಜಕೀಯ ಹೋರಾಟ, ಹಿಂಸೆಗಳು ಬೇಡವೆಂದು ತಿರಸ್ಕರಿಸಿದ್ದರು. ಜನತಾದಳದ ಕಾರ‍್ಯಕರ್ತರುಗಳ ಒತ್ತಾಯಕ್ಕೆ ಕೊನೆಗೂ ಮಣಿದು ಪುಷ್ಪ ಅವರನ್ನು ಕೇಳಿ ಸ್ಪರ್ಧಿಸಲು ಅನುಮತಿಕೊಟ್ಟರು. ಪುಷ್ಪ ಲಕ್ಷ್ಮಿನಾರಾಯಣ ಅವರು ಶೃಂಗೇರಿ ತಾಲ್ಲೂಕು ಪಂಚಾಯ್ತಿಯ “ಅಡ್ಡಗದ್ದೆ” ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿ ಅತಿಹೆಚ್ಚು ಮತಗಳ ಅಂತರದಿಂದ ಚುನಾಯಿತರಾದರು. ಶೃಂಗೇರಿ ತಾಲ್ಲುಕು ಪಂಚಾಯ್ತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿ ಇವರೆ ಅಧ್ಯಕ್ಷರಾಗಿ ಆಯ್ಕೆಯಾಗಿ ತಾಲ್ಲುಕಿನ ಪ್ರಥಮ ಮಹಿಳಾ ಅಧ್ಯಕ್ಷೆಯಾದದ್ದು ಈಗ ಇತಿಹಾಸ.

ಇವರ ಅಧ್ಯಕ್ಷ ಅವಧಿಯ ಕಾರ್ಯಸಾಧನೆಗಳು ಅಪಾರ. ಅವುಗಳಲ್ಲಿ ಮುಖ್ಯವಾದವನ್ನು ಗುರುತಿಸುವುದಾದರೆ-ಅಂದು ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರೆ ಆಶ್ರಯ ಸಮಿತಿ ಅಧ್ಯಕ್ಷರು ಆಗಿರುತ್ತಿದ್ದರು. ಹಾಗಾಗಿ ತಾಲ್ಲೂಕಿನ ನಿವೇಶನಗಳನ್ನು ಗುರುತಿಸಿ ಬಡವರು, ರೈತರು, ಕೂಲಿಕಾರ್ಮಿಕರುಗಳ ಜೀವನ ಸಮಸ್ಯೆ, ಅಡ್ಡಿ ಆತಂಕಗಳಿಂದ ಅಧ್ಯಕ್ಷರಿಗೆ ಎಲ್ಲ ಸಮ್ಯೆಗಳನ್ನು ನಿಭಾಯಿಸಿ ಬಗೆಹರಿಸಲು ಕಷ್ಟಸಾಧ್ಯವಾಗಿತ್ತು. ಅಂತಹ ಸ್ಥಿತಿಯಲ್ಲಿ ಅವನ್ನೆಲ್ಲ ನಿಭಾಯಿಸಿ ಹಾಡ್ಯ, ಗೋಮಾಳ ಜಾಗಗಳ್ಲಿ ಅವರವರ ವಾಸಸ್ಥಳಗಳನ್ನು ಗುರುತಿಸಿ ಅವರಿಗೆ ಯಾರಿಗೂ ತೊಂದರೆಯಾಗದಂತೆ ಐದು ವರ್ಷಗಳ್ಲಿ ೫೦೦ರಷ್ಟು ಸಾಗುವಳಿ ಚೀಟಿಯನ್ನು ವಿಸ್ತರಿಸಲಾಗಿದೆ.

ಪುಷ್ಟಿ ಲಕ್ಷ್ಮೀನಾರಾಯಣ ಅವರ ಕ್ಷೇತ್ರವಾದ ಅಡ್ಡಗದ್ದೆ ಸರ್ವೆ ನಂಬರ‍್ ೨೦೬ರಲ್ಲಿ ಮತ್ತು ಬೀಳಂದೂರು ಗ್ರಾಮದ ಸರ್ವೆ ನಂಬರ‍್ ೭೫ರಲ್ಲಿ ಸುಮಾರು ೧೨೦ ಜನರಿಗೂ ಹೆಚ್ಚು ಸಾಗುವಳಿ ಚೀಟಿ ಕೊಡಲಾಗಿದೆ. ತಾಲ್ಲುಕಿನ ಇಂಜಿನಿಯರಿಂಗ್ ಇಲಾಖೆ ಸ್ವಂತ ಕಟ್ಟಡ ಇರಲಿಲ್ಲ. ಇವರ ಅಧಿಕಾರವಧಿಯಲ್ಲಿ ಆ ಇಲಾಖೆಗೆ ಒಂದು ಕಟ್ಟಡ ಕಟ್ಟಿಸಿಕೊಟ್ಟಿದ್ದು ಒಂದು ಗುರುತರ ಕೆಲಸವಾಗಿದೆ. ಶೃಂಗೇರಿ ತಾಲ್ಲುಕಿಗೆ ಜೂನಿಯರ‍್ ಕಾಲೇಜಿನ ಅಗತ್ಯವಿತ್ತು. ಆದರೆ ಅದನ್ನು ಮಂಜೂರು ಮಾಡಿಸಿ ತರಲು ಹಲವಾರು ತೊಂದರೆಗಳು ಸೃಷ್ಟಿಯಾಗಿದ್ದರೂ [ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಉಸ್ತುವಾರಿ ಇವರಿಗೆ ಇದ್ದ ಕಾರಣ; ಹೆಚ್ಚುವರಿ ಪ್ರಾಥಮಿಕ ಶಾಲಾ ಕೊಠಡಿಯಲ್ಲೇ ಎರಡು ಕೊಠಡಿ ಕಟ್ಟಿಸಿದ್ದರು] ಮಂಜೂರು ಮಾಡಿಸಿ ತಂದರು. ಆಮೇಲೆ ಈ ಕಾಲೇಜಿಗೆ ಮಕ್ಕಳನ್ನು ತಮ್ಮ ಸಹಾಯಕರು, ಸ್ನೇಹಿತರೆಲ್ಲ ಸೇರಿ ಹೋರಾಡಿ ಹುಡುಕಿ ಕರೆತಂದು ಸೇರಿಸಿ ಉದ್ಘಾಟನೆ ಮಾಡಿಸಿ ಬೆಳೆಸಿದ್ದಾರೆ.

ಕೃಷಿ ಇಲಾಖೆಯ ’ಭರಣಿ ಚೇತನ ಕೇಂದ್ರ’ ಕಟ್ಟಡ ಗ್ರಾಮಪಂಚಾಯ್ತಿಗೆ ಬಂದಿತ್ತು. ಅದನ್ನು ತಾಲ್ಲೂಕಿನ ಮುಖ್ಯಸ್ಥಳದಲ್ಲಿ ನಿರ್ಮಾಣ ಮಾಡಿಸಿದ್ದು ಅವರ ವಿಶೇಷ ಕೆಲಸಗಳಲ್ಲಿ ಒಂದು. ಅಲ್ಲಿ ಈಗ ಜಲಾನಯನ ಇಲಾಖೆ ಕೆಲಸ ಮಾಡುತ್ತಿದೆ. ಬಿದ್ದು ಹೋಗಿದ್ದಂತಹ ಅಕ್ಷರ ಧಾರ ಕೊಠಡಿಯನ್ನು ಪುನರ‍್ ನಿರ್ಮಾಣ ಮಾಡಿ, ತಾಲ್ಲೂಕು ಪಂಚಾಯ್ತಿ ಕಟ್ಟಡವನ್ನು ನಿವೀಕರಣಗೊಳಿಸಲಾಗಿದೆ. ಶೃಂಗೇರಿಯ ಶ್ರೀಜಗದ್ಗುರು ಚಂದ್ರಶೇಖರ ಭಾರತಿ ಕಾಲೇಜು ಮಕ್ಕಳ ಅನುಕೂಲಕ್ಕೆ ಕಾಡುದಾರಿಯನ್ನು ೨ ಲಕ್ಷ ರೂ.ಗಳಿಗೂ ಅಧಿಕ ಹಣದಿಂದ ಮೆಟ್ಟಿಲುಗಳ ನಿರ್ಮಾಣವಾಗಿ ಪರಿವರ್ತಿಸಿ ಸಹಾಯಮಾಡಿದ್ದಾರೆ. ಕಾಲೇಜು ಮಹಿಳಾ ವಿದ್ಯಾರ್ಥಿನಿಲಯ ವನ್ನು ಪ್ರಾರಂಭಿಸಿದ್ದು ಇವರು ತಮ್ಮ ಕ್ಷೇತ್ರವಾದ ಅಡ್ಡಗದ್ದೆಯ ಅಕ್ಕಪಕ್ಕ ಊರುಗಳಾದ ಕಾವಡಿ, ಆನೆಗುಂದ, ಬೆಳಂದೂರು, ಉಳುವೆ, ಅಡ್ಡಗದ್ದೆಗಳಲ್ಲೆಲ್ಲ ಕುಡಿಯುವ ನೀರಿನ ಯೋಜನೆಯನ್ನು ಆಗಲೇ ಜಾರಿಗೊಳಿಸಿದ್ದು ಅದೂ ಈಗಲೂ ಮುಂದುವರಿದಿದೆ.

ಪರಿಶಿಷ್ಟಜಾತಿಯ ಕಾಲೋನಿಯವರಿಗೆ ಸರ್ಕಾರ ಕೊಟ್ಟ ದರ್ಖಾಸ್ ಜಾಗದ ಸುತ್ತ ೨.೫೦ ಲಕ್ಷ ರೂಪಾಯಿಯ ತಂತಿ ಬೇಲಿ ಹಾಕಿಸಲಾಗಿದೆ. ಈ ಜನ ಸಾಗುವಳಿ ಮಾಡಿದ ಭೂಮಿ ಹಾಲಂದೂರು ಕಡೆಯ ಎಮ್ಮೆಗಳ ದಾಳಿಗೆ ಸಿಕ್ಕಿ ಹಾಳಾಗುತ್ತಿತ್ತು. ಅದಕ್ಕೆ ತಂತಿ ಬೇಲಿ ಹಾಕಿಸಿ ಪಂಪ್‌ಸೆಟ್ ಅನ್ನು ಹೊಸದಾಗಿ ಕೊಡಿಸಿ ಹಳೆಯದನ್ನು ದುರಸ್ತಿಗೊಳಿಸಿ ನೀರು ಕಾಲುವೆಗೆ ಸಿಮೆಂಟ್ ಹಾಕಿಸಿ, ಕೃಷಿ ತೋಟಗಾರಿಕೆ ಇಲಾಖೆಗಳಿಂದ ಅಡಕೆ, ತೆಂಗು ಮತ್ತಿತರ ಗಿಡಗಳನ್ನು ಕೊಡಿಸಿ ಅವರ ಕೃಷಿ ತೋಟಕ್ಕೆ ಉಪಯೋಗ ಮಾಡಲಾಗಿದೆ. ಈ ಜನರ ಭೂಮಿಗೆ ಸಾಮಾಜಿಕ ಅರಣ್ಯ ಇಲಾಖೆಯ ಆರ‍್.ಎಫ್. ಓ. ಅವರ ಸಹಾಯ ಪಡೆದು ಸಾಮಾಜಿಕ ನೆಡು ತೋಪು ನೆಸುತ್ತೇವೆಂದು ಹೇಳಿ ೧೦-೨೦ ಎಕರೆ ಭೂಮಿಗೆ ಅನುಕೂಲವಾಗುವಂತೆ ಅಕೇಶಿಯಾ ಮತ್ತಿತರ ಕಾಡು ಮರಗಳ ಸಸಿಯನ್ನು ನೆಡಿಸಿದ್ದು ಅವರ ಜಮೀನಿನ ಸುತ್ತ ಬೇಲಿ ಹಾಕಿಸಿದಂತಾಗಿದೆ. ಈ ಕೆಲಸ ಎಲ್ಲ ಜನರಿಂದ ಮೆಚ್ಚಿಗೆ ಪಡೆದಿದೆ.

ಪುಷ್ಪ ಲಕ್ಷ್ಮೀನಾರಾಯಣ ಅವರ ಅವಧಿಯಲ್ಲೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತಹ ಹೊಸ ಯೋಜನೆಯಿಂದ (KHSDP-Karnataka Health System Development Project) ಒಂದು ಶೃಂಗೇರಿ ತಾಲ್ಲೂಕಿಗೆ  ಬಂದಿತ್ತು. ಆಗ ಅಧ್ಯಕ್ಷರು ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಬೇಕೆಂದು ಜಾಗ ಅರಸಲು ಶುರುಮಾಡಿದರು. ಅವರಿಗೆ ಶೃಂಗೇರಿ ಪೇಟೆಗೆ ಸನಿಹವಿದ್ದ ಸರ್ಕಾರಿ ಜಾಗ ಒತ್ತುವರಿಯಾಗುತ್ತಿದ್ದದ್ದು ಗಮನಕ್ಕೆ ಬಂತು. ತಕ್ಷಣ ಜಿಲ್ಲಾಧಿಕಾರಿ ಅಮಿತಾ ಪ್ರಸಾದ್ ಅವರಿಗೆ ತಿಳಿಸಿ ಆ ಜಾಗವನ್ನು ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಿಸಿ-ಕೊಂಡದ್ದು ಅವರ ಸಾಧನೆಗಳಲ್ಲೊಂದು. ತಾಲ್ಲೂಕು ಪಂಚಾಯ್ತಿಯಿಂದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವಾಗ ಅವರ ಜೊತೆ ಸಹಾಯ ಹಸ್ತ ನೀಡಿ ನೆರವಾದವರು ಶೃಂಗೇರಿ ಶ್ರೀ ಮಠದವರು.

ಈ ರೀತಿಯ ಅಭಿವೃದ್ದಿ ಕೆಲಸಗಳು ಶೃಂಗೇರಿ ತಾಲ್ಲೂಕಿಗೆ ಹೆಚ್ಚಾಗಿ ಹರಿದುಬಂದವು. ಆದ್ದರಿಂದಲೇ ತಾಲ್ಲುಕಿನ ಜನಕ್ಕೆ ಕುಡಿಯುವ ನೀರು, ರಸ್ತೆ, ಸೇತುವೆಗಳು, ಶಾಲೆ ನಿರ್ಮಾಣ, ಶಾಲಾ ಕೊಠಡಿಗಳ ಮತ್ತು ಶಿಕ್ಷಕರ ಹೆಚ್ಚಳ ಹೊಸ ಅಂಗನವಾಡಿಗಳ ಸೇರ್ಪಡೆಯ ಕೆಲಸಗಳನ್ನು ಕಾರ‍್ಯರೂಪಕ್ಕೆ ತಂದಿದ್ದಾರೆ. ಹೀಗೆ ಹಲವಾರು ದುರಸ್ತಿ ಕೆಲಸಗಳನ್ನು ಶಿಕ್ಷಣ ಸಚಿವರಾದ ಶ್ರೀ .ಎಚ್.ಜಿ.ಗೋವಿಂದೇಗೌಡರ ಬೆಂಬಲ ಮತ್ತು ತಾಲ್ಲೂಕು ಪಂಚಾಯ್ತಿಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಸಹಾಯ ಸಹಕಾರಗಳಿಂದ ಅಧ್ಯಕ್ಷರಾದ ಪುಷ್ಪ ಲಕ್ಷ್ಮಿನಾರಾಯಣ ಅವರು ಉತ್ತಮ ಕೆಲಸ ಮಾಡಿ ಹೆಸರುಗಳಿಸಲು ಸಾಧ್ಯವಾಗಿದೆ.

ಇವರ ಆಡಳಿತ ಕ್ರಮದ ಬಗ್ಗೆ, ಕಾರ‍್ಯಸಾಧನೆಗಳ ಬಗ್ಗೆ ನೂರಾರು ಜನ ಪಕ್ಷದ ಕಾರ‍್ಯಕರ್ತರು, ಜನಸಾಮಾನ್ಯರು, ಅಧಿಕಾರಿಗಳು, ಹಿರಿಯ ರಾಜಕಾರಣಿಗಳು ಮತ್ತು ಸಚಿವರು ಎಲ್ಲರ ಮೆಚ್ಚುಗೆ ಪಡೆದರು. ದಕ್ಷತೆಗೆ, ಪ್ರಾಮಾಣಿಕತೆಗೆ ಹೆಸರಾಗಿ ಜನ ಪ್ರೀತಿ ಗಳಿಸಿದರು. ಈ ಎಲ್ಲಾ ಕಾರಣದಿಂದಲೇ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷತೆಯ ಜೊತೆಗೆ ಪಕ್ಷದ ಬಲವರ್ಧನೆಗಾಗಿ ಜಿಲ್ಲಾ ಮಹಿಳಾ ಜನತಾದಳದ ಅಧ್ಯಕ್ಷೆಯಾಗಿಯೂ ಆಯ್ಕೆಯಾದರು. ಇದರ ಜೊತೆಗೆ ರಾಜ್ಯ ಯುವ ಜನತಾದಳದ ಕಾರ‍್ಯಕಾರಿ ಮಂಡಳಿ (Executive Committee Member) ಯ ೬೬ಜನ ಸದಸ್ಯರಲ್ಲಿ ಒಬ್ಬರಾಗಿ ನೇಮಕಗೊಂಡು ಪಕ್ಷದ ಬೆಳವಣಿಗೆಗೆ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡರು. ಈ ಹುದ್ದೆಗಳ ಜೊತೆಯಲ್ಲೆ ’ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಾಮನಿರ್ದೇಶಿತ (Nominated Member) ಸದಸ್ಯೆಯಾಗಿ ನೇಮಕಗೊಂಡಿದ್ದರು. ಆದ್ದರಿಂದಲೇ ಅವರು ತಮ್ಮ ತಾಲ್ಲೂಕಿನ ಶಾಲಾ ಕಾಲೇಜುಗಳ ಸೌಲಭ್ಯಗಳನ್ನು ಸರಾಗವಾಗಿ ತಂದು ಜಾರಿ ಮಾಡಿ ಕೆಲಸ ಮಾಡಿಸಲು ಸಾಧ್ಯವಾಗಿದ್ದು, ಪುಷ್ಪ ಲಕ್ಷ್ಮೀನಾರಾಯಣ ಅವರಿಗೆ ಹುದ್ದೆಗಳು ಬಂದಂತೆಲ್ಲ ಸಾಧನೆಗಳಾದವು. ಇವೆರಡರ ಜೊತೆಯಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಪ್ರೀತಿ ಸಿಕ್ಕಿ ಜನಬೆಂಬಲವು ದೊರೆಯಿತು. ಈ ಎಲ್ಲ ಹೆಸರು ಸಾಧನೆಗಳು ೧೯೯೫ರಿಂದ ೨೦೦೦ ಮೇ ತಿಂಗಳವರೆಗೆ ೫ ವರ್ಷ ಕಾಲ ತಮ್ಮ ಶೃಂಗೇರಿ ತಾಲ್ಲುಕು ಪಂಚಾಯ್ತಿ ಅಧ್ಯಕ್ಷ ಅವಧಿ ಮುಗಿಸಿದರು. ಅಷ್ಟರೊಳಗೆ ಮಾನ್ಯ ಎಚ್.ಡಿ.ದೇವೇಗಡ ಮತ್ತು ಮಾನ್ಯರಾಮಕೃಷ್ಣ ಹೆಗ್ಗಡೆಯವರ ಜಿದ್ದಾ ಜಿದ್ದಿಯ ರಾಜಕಾರಣದಿಂದ ಜನತಾದಳ ಒಡೆದು ಎರಡು ಹೋಳಾಗಿಹೋಯಿತು. ಪಕ್ಷದ ಕಾರ್ಯಕರ್ತರೆಲ್ಲ ಒಡೆದು ಚದುರಿಹೋದರು. ಆ ಸಂದರ್ಭದಲ್ಲಿ ಪುಷ್ಪ ಲಕ್ಷ್ಮೀನಾರಾಯಣ ಅವರು ಯಾರ ಕಡೆಯೂ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದರು.

ಅಷ್ಟರಲ್ಲಿ ೨೦೦೦ ಜೂನ್ ೬ಕ್ಕೆ ಜಿಲ್ಲಾ ಪಂಚಾಯ್ತಿ ಚುನಾವಣೆ ಘೋಷಣೆಯಾಗಿತ್ತು. ಆಗ ಜನತಾದಳದ ಅಭ್ಯರ್ಥಿಗಳು ಒಂದಾಗಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪುಷ್ಪ ಲಕ್ಷ್ಮೀನಾರಾಯಣ ಅವರು ಜನತಾದಳದಿಂದ ಮತ್ತೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆಗ ಸ್ಥಳೀಯ ಕಾಂಗ್ರೆಸ್ ಮುಖಂಡರು, ಶಾಸಕರಾದ ಡಿ.ಬಿ.ಚಂದ್ರೇಗೌಡರು ನಮ್ಮ ಪಕ್ಷಕ್ಕೆ ಬನ್ನಿರೆಂದು ಒತ್ತಡ ತಂದರು. ಆಗ ಪಕ್ಷ ಬದಲಾವಣೆ ಇವರಿಗೆ ಮನಸ್ಸಿಲ್ಲದಿದ್ದರೂ ಜನತಾದಳದಿಂದ ಸ್ಪರ್ಧಿಸಲು ಸದ್ಯಕ್ಕೆ ಸಾಧ್ಯವಿಲ್ಲದ ಸ್ಥಿತಿ ಕಂಡು ಮತ್ತೆ ೫ ವರ್ಷ ಸುಮ್ಮನೆ ಉಳಿಯಲಾರದ್ದಕ್ಕೆ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಯಿತು. ಇವರ ಜನಪ್ರಿಯತೆಯಿಂದ ಶಾಸಕರಾದ ಡಿ.ಬಿ.ಚಂದ್ರೇಗೌಡರಿಗೆ ಗೆಲ್ಲುವ ಅಭ್ಯರ್ಥಿ ತಮ್ಮ ಕ್ಷೇತ್ರಕ್ಕೆ ಅಗತ್ಯವಾಗಿದ್ದರಿಂದ ಕೆಲವು ಕಾಂಗ್ರೆಸ್ ಕಾರ‍್ಯಕರ್ತರ ವಿರೋಧದ ನಡುವೆಯೂ ಪುಷ್ಪಲಕ್ಷ್ಮೀನಾರಾಯಣ ಅವರಿಗೆ ಸಾಮಾನ್ಯ ಮಹಿಳಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಲ್ಲಿಸಿದರು. ಆಗ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಇವರಿಗೆ ಪ್ರತಿಸ್ಪರ್ಧಿಯಾದರು. ಇವರನ್ನು ಎದುರಿಸಿ ಹೋರಾಡಿ ಗೆಲ್ಲಲೇಬೇಕಾಗಿದ್ದ ಸ್ಥಿತಿ ಕಾಂಗ್ರೆಸ್ ನಾಯಕರಿಗೆ ಮತ್ತು ಪುಷ್ಪ ಅವರಿಗೆ ಎಲ್ಲರಿಗೂ ಛಲದ ಇಕ್ಕಟ್ಟಿನ ಪರಿಸ್ಥಿತಿ ಒದಗಿಬಂತು. ಇಂತಹ ರಾಜಕೀಯ ಹೋರಾಟದಲ್ಲಿ ಕೇವಲ ಜನಪ್ರಿಯತೆಯೊಂದೆ ಸಾಲದು. ಅದಕ್ಕೆ ತಂತ್ರಗಳೆ ಮುಖ್ಯ ಜೊತೆಗೆ ಹಣವು ಅಷ್ಟೆ ಪ್ರಧಾನ. ಹಾಗಾಗಿ ಕುತಂತ್ರಗಳಿಗೆ ಪ್ರತಿತಂತ್ರ ಬಳಸಿ ೩೫೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವ ಸಾಧಿಸಿದರು. ಇವರು ಜನತಾದಳದಿಂದ ಕಾಂಗ್ರೆಸ್‌ಗೆ ವಲಸೆ ಬಂದು, ಹೆಚ್ಚು ಮತಗಳ ಅಂತರದಲ್ಲಿ ತಾಲ್ಲೂಕಿನ ಜನಪ್ರಿಯ ಏಕಮೇವ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆಯಾದದ್ದು, ಜಿಲ್ಲಾ ಪಂಚಾಯ್ತಿಗೆ ವಿಶೇಷ ಪ್ರತಿನಿಧಿಯಾದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷಸ್ಥಾನದ ಕೆಲಸದ ಅನುಭವದಿಂದಾಗಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕೆಲಸಮಾಡಲು ಶ್ರಮವಾಗಲಿಲ್ಲ. ಆದರೆ ಅಧ್ಯಕ್ಷರಿಗಿರುವ ಅಧಿಕಾರ ಸದಸ್ಯರಿಗೆ ಇರುವುದಿಲ್ಲ. ಆದರೂ ತಮ್ಮ ಅನುಭವ, ಪರಿಚಿತ ಅಧಿಕಾರಿಗಳು ಮತ್ತು ಹಿರಿಯ ರಾಜಕಾರಣಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರೊಡನೆ ಕೂಡಿ ಏಕಮೇವ ಮಹಿಳಾ ಸದಸ್ಯೆಯಾಗಿ, ತಾಲ್ಲೂಕಿನ ಏಳಿಗೆಯ ಕೆಲಸ ಮಾಡಬೇಕಾಯಿತು. ಅಂತಹ ಕೆಲಸಗಳಲ್ಲಿ ಕೆಲವು ಪ್ರಮುಖವಾದವು ಇವು.

ಆರೋಗ್ಯ ಇಲಾಖೆಯ K.H.S.D.P ಕಾರ್ಯಕ್ರಮದಿಂದ ಒಂದೂಕಾಲು ಕೋಟಿ ರೂಪಾಯಿಯ ನೂತನ ೩೦ ಹಾಸಿಗೆಯ ಆಸ್ಪತ್ರೆಯೋಜನೆ, ಬಾಲಕಿಯರ ೭೦ ಲಕ್ಷ ರೂಪಾಯಿಯ ವಸತಿ ನಿಲಯ, ಕಿಗ್ಗಾದ ಹಾಸೈಲ್‌೪೦ ಲಕ್ಷ ರೂಪಾಯಿಯ ಪ್ರಸ್ತಾವನೆ ಮತ್ತು ಮಸಿಗೆ ಹಾಲಂದೂರು ರಸ್ತೆ, ಕ್ರಿಕೆಕೆಳಕೊಪ್ಪದ P.W.D ರಸ್ತೆಗಳು ಒಟ್ಟು ೩ ಕೋಟಿ ಅಂದಾಜಿನ ರಸ್ತೆಗಳ ಪ್ರಸ್ತಾವನೆಯನ್ನು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಿ.ಬಿ.ಚಂದ್ರೇಗೌಡರ ಮುತುವರ್ಜಿಯಿಂದ, ವಿಧಾನಸೌಧದ ಆಡಳಿತ ವರ್ಗದಿಂದ, ಮಂಜೂರು ಮಾಡಿಸಿ ತರಲಾಯಿತು.

ಈ ಕೆಲಸಗಳ ನಂತರ ಬೇಗಾರಿನಲ್ಲಿ ಜೂನಿಯರ‍್ ಕಾಲೇಜು ಪ್ರಾರಂಭ ಮಾಡಿಸಲು ಜನರ ಅಹವಾಲನ್ನು ಸರ್ಕಾರಕ್ಕೆ ಮುಟ್ಟಿಸಿ, ಮಾನ್ಯ ಸಚಿವರಿಂದ ಒಪ್ಪಿಗೆ ಪಡೆದು ಕಾಲೇಜು ಪ್ರಾರಂಭಿಸಲಾಯಿತು. ಆ ಸಮಯದಲ್ಲಿ (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ)ಯ ಅಧ್ಯಕ್ಷರು ಪುಷ್ಪ ಲಕ್ಷ್ಮೀನಾರಾಯಣ ಅವರೇ ಆಗಿದ್ದರು. ಹಾಗಾಗಿ ಶೃಂಗೇರಿ ತಾಲ್ಲೂಕಿನ ಪ್ರೌಢಶಾಲೆಗಳಾದ ಹೊಳೆಕೊಪ್ಪ, ತೊರೆಹಡ್ಲು, ಶೃಂಗೇರಿಯ ಸರ್ಕಾರಿ ಜೂನಿಯರ‍್ ಕಾಲೇಜು, ಬೇಗಾರು ಸರ್ಕಾರಿ ಜೂನಿಯರ‍್ ಕಾಲೇಜು ಮತ್ತು ನೆಮ್ಮೂರು ಶಾಲಾಕಾಲೇಜುಗಳ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಯಿತು. ಅವುಗಳ ಶೈಕ್ಷಣಿಕ ಕಾರ‍್ಯಕ್ರಮಗಳಾದ ಕುಡಿಯುವ ನೀರು, ಶಾಲಾ ರಂಗಮಂದಿರ, ಆಟದ ಮೈದಾನ, ಕೊಠಡಿ ದುರಸ್ತಿ, ನೂತನ ಕೊಠಡಿಗಳ ಸೇರ್ಪಡೆ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಲಾಯಿತು.

ರೈತರ ಅನುಕೂಲಕ್ಕಾಗಿ ತಾಲ್ಲೂಕಿಗೆ ೨೨ DPAP (ರಾಷ್ಟ್ರೀಯ ಜಲಾನಯನ ಪ್ರದೇಶಾಭಿವೃದ್ಧಿ ಕಾರ‍್ಯಕ್ರಮ. ಬರಗಾಲಪೀಡಿತ ಪ್ರದೇಶಾಭಿವೃದ್ಧಿ ಯೋಜನೆಗಳನ್ನು) ತಾಲ್ಲೂಕಿನ ಇತಿಹಾಸದಲ್ಲೇ ತಾಲ್ಲೂಕಿಗೆ ಮೊದಲ ಬಾರಿಗೆ ತರಲಾಯಿತು. ಬೇರಾವ ತಾಲ್ಲೂಕಿಗೂ ಸಿಗದ ಇಂತಹ ನಾನಾ ಯೋಜನೆಯ ಕಾರ‍್ಯಕ್ರಮಗಳ ಅಪಾರ ಹಣವನ್ನು ಜಿಲ್ಲಾಪಂಚಾಯ್ತಿ ಸದಸ್ಯೆಯಾಗಿದ್ದಾಗ ತಂದು ದೊಡ್ಡ ಸಾಧನೆ ಮಾಡಿದ್ದಾರೆ. ೧೯೯೫-೨೦೦೦ರ ಅವಧಿಯಲ್ಲಿ ಇವರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷತೆಯಾಗಿದ್ದಾಗ ಕೇವಲ ನಾಲ್ಕು ಜಲಾನಯನ ಕಾರ‍್ಯಕ್ರಮಗಳನ್ನು ತಂದಿದ್ದರು. ಇವರೆ ೨೦೦೦-೨೦೦೫ ಜಿಲ್ಲಾ ಪಂಚಾಯ್ತಿ, ಸದಸ್ಯೆಯಾದಾಗ ಹಠ ಹಿಡಿದು ಸುಮಾರು ೨೨ DPAP ಕಾರ‍್ಯಕ್ರಮಗಳನ್ನು ತಾಲ್ಲೂಕಿಗೆ ತಂದದ್ದು ಮಾತ್ರ ಎಲ್ಲ ರೈತರು ಸ್ಮರಿಸುವಂತಹದ್ದು. ಈ ಎಲ್ಲ ಅಭಿವೃದ್ಧಿಯ ಸಾಧನೆಗಳಿಗೆ ಸರ್ಕಾರಿ ಕಡತಗಳಲ್ಲಿ ದಾಖಲೆಗಳಿವೆ.

ಶೃಂಗೇರಿ ತಾಲ್ಲೂಕಿನ ಅಭಿವೃದ್ಧಿ ಸಾಧನೆಗಳಿಂದ ಬಂದ ಹೆಸರು. ಕೀರ್ತಿ, ಜನಮೆಚ್ಚಿಗೆಗಳನ್ನು ಸಹಿಸದ ಪಕ್ಷದ ಸ್ಥಳೀಯ ಕಾರ‍್ಯಕರ್ತರಲ್ಲಿ ಕೆಲವು ಕುತಂತ್ರಿಗಳು ಹಿರಿಯ ರಾಜಕಾರಣಿಗಳ ಕಿವಿಯೂದಿ, ಅವರ ತಲೆಕೆಡಿಸಿ ಇವರು ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷೆ, ಉಪಾಧ್ಯಕ್ಷೆ ಆಗಬೇಕಾಗಿದ್ದ ಅವಕಾಶಗಳನ್ನು ತಪ್ಪಿಸುತ್ತಾ ಬಂದಿದ್ದರು. ಆದರೂ ೫ನೇ ವರ್ಷದ ಕೊನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಎಲ್. ರಾಂದಾಸ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಂ. ಪುಟ್ಟೇಗೌಡ, ಸಚಿವರಾದ ಡಿ.ಬಿ.ಚಂದ್ರೇಗೌಡ, ಶಾಸಕರಾದ ಶ್ರೀ ಸಗೀರ‍್ ಅಹಮದ್ ಮತ್ತಿತರ ಪಕ್ಷದ ಹಿರಿಯರೆಲ್ಲರ ತೀರ್ಮಾನದಂತೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆಯಾಗಿ ಕೊನೆಯ ೭ ತಿಂಗಳ ಅವಧಿಗೆ ಆಯ್ಕೆಯಾದರು. ಇದ್ದ ಅಲ್ಪಾವಧಿ ಸಮಯದಲ್ಲಿ ಮಾಡಿದ ಉತ್ತಮ ಕೆಲಸವೆಂದರೆ, ಶಿಕ್ಷಕರ ಅರಿಯರ‍್ಸ್ (ಹಿಂಬಾಕಿ) ೨ ಕೋಟಿ ೧೧ ಲಕ್ಷ ರೂಪಾಯಿ ಹಣ ಬರಬೇಕಾಗಿತ್ತು. ಈ ವಿಷಯ ಉಪಾಧ್ಯಕ್ಷೆ ಪುಷ್ಪ  ಲಕ್ಷ್ಮೀನಾರಾಯಣ ಅವರ ಗಮನಕ್ಕೆ ಬಂದಾಗ ಅವರು ಶಿಕ್ಷಣ ಆಯುಕ್ತರು ಮತ್ತು ಸರ್ಕಾರದ ಶಿಕ್ಷಣ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಛಲಬಿಡದೆ ಹೋರಾಡಿ ೨೦೦೫ ಮಾರ್ಚ್‌೩೧ರ ಕೊನೆಯ ಆರ್ಥಿಕ ವರ್ಷ ಮುಗಿಯುವುದರೊಳಗೆ ಸರ್ಕಾರದ ಬೊಕ್ಕಸದಿಂದ ಕೇವಲ ಮೂರು ದಿನಗಳ ಅಂತರದಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡು ಬಂದರು. ಇದರಿಂದ ಶಿಕ್ಷಕರು ಲಕ್ಷಾಂತರ ರೂಪಾಯಿಗಳ ಸರ್ಕಾರದಿಂದ ಪಡೆಯುವಂತಾದದ್ದು ಇವರ ಆಡಳಿತಾತ್ಮಕವಾಗಿ ಮಾಡಿದ ಸಾಧನೆಯಾಗಿದೆ.

ಶೃಂಗೇರಿಯಲ್ಲಿ ಕೋರ್ಟಿದೆ. ಆದರೆ ಸ್ವಂತ ಕಟ್ಟಡವಿಲ್ಲ. ಇವರ ಅಧಿಕಾರಾವಧಿಯಲ್ಲಿ ಇವರಿಗೆ ಸಂಬಂಧಿಸಿಲ್ಲದ ಕೆಲಸವಾದರೂ ತಾಲ್ಲೂಕಿನ ಅಭಿವೃದ್ಧಿ ಕಾರ‍್ಯಕ್ಕಾಗಿ ತಮ್ಮ ವ್ಯಾಪ್ತಿ-ಯನ್ನು ಮೀರಿ ಹಣಕಾಸು ಆಯುಕ್ತರನ್ನು, ಸಚಿವರಾದ ಮಾನ್ಯ ಶ್ರೀ ಹೆಚ್.ಡಿ.ರೇವಣ್ಣನವರನ್ನು ಭೇಟಿಯಾಗಿ ಕೋರ್ಟಿನ ಕಟ್ಟಡಕ್ಕೆ ಟೋಕನ್ ಗ್ರಾಂಟ್ ೬ ಲಕ್ಷ ರೂ.ಗಳನ್ನು ಹಾಕಿಸಿ ಕೋರ್ಟ್‌ಕಟ್ಟಡ ಪ್ರಾರಂಭಿಸಲು ಸಹಕರಿಸಿದ್ದಾರೆ. ಈಗ ಅದು ೧.೧೦ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಪಡೆದು ತಲೆ ಎತ್ತುತ್ತಿದೆ.

ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಕೆಲಸಗಳ ನಡುವೆ ಇವರು ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವುಗಳ ಕಾರ‍್ಯಕಾರಿ ಮಂಡಳಿ ಸದಸ್ಯರಾಗಿ ಅಂಗನವಾಡಿ ಕಾರ‍್ಯಕರ್ತರಿಗೆ, ಶಿಕ್ಷಕರಿಗೆ, ಮಹಿಳೆಯರಿಗೆ ಕಾನೂನು ನೆರವು, ಅರಿವು ಕಾರ‍್ಯಕ್ರಮಗಳನ್ನು ನಡೆಸಲು ಪ್ರಮುಖ ಪಾತ್ರದಾರರಾಗಿದ್ದಾರೆ. ಇಂತಹ ಕಾರ‍್ಯಕ್ರಮಗಳ ಇಂದಿಗೂ ಮುಂದುವರಿಯುತ್ತಿವೆ.

೧೯೯೫ ರಿಂದ ೨೦೦೫ ರವರಗೆ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಅಧಿಕಾರಾವಧಿ-ಯಲ್ಲಿ ಶೃಂಗೇರಿ ತಾಲ್ಲೂಕಿನ ಸಾರ್ವಜನಿಕ ಕೆಲಸಗಳ ಜೊತೆಯಲ್ಲೆ ಸಾಹಿತ್ಯ ಪರಿಷತ್, ಕನ್ನಡ ಭವನ ಸಾಹಿತ್ಯ ಗೋಷ್ಠಿಗಳಂತಹ ಕೆಲಸಗಳನ್ನು ಮಾಡಿ ಸಾಹಿತಿಗಳ, ಚಿಂತಕರ ಗಮವನ್ನು ಸೆಳೆದಿದ್ದಾರೆ. ಇವರು ೧೯೮೬ರಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿದ್ದರು. ಇವರು ೧೯೮೬ರಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿದ್ದರು. ೧೯೯೫ರಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಮೇಲೆ ಪರಿಷತ್ ಮೀಟಿಂಗ್‌ಗೆ ಹೋಗುತ್ತಿದ್ದರು. ಆಗ ಅದರ ಸ್ಥಿತಿಗತಿ ಅರಿವಿಗೆ ಬಂದು ಯಾವುದೊ ಶಾಲಾ ಕೊಠಡಿಯೊಳಗೆ ಸೀಮಿತವಾಗಿದ್ದ ಅದರ ಕಾರ‍್ಯಕ್ರಮ ಜನಮನಕ್ಕೆ ತಲುಪಬೇಕೆಂದು ’ಸಾಹಿತ್ಯೋತ್ಸವ’ದಂಥ ಕಾರ‍್ಯಕ್ರಮ ಮಾಡಿ ತಾಲ್ಲೂಕಿನ ಜನರು ಸಾಹಿತ್ಯ ಪರಿಷತ್ತಿನ ಕಡೆ ಸಾಹಿತ್ಯ, ಸಮಾಜದ ಚಿಂತನೆಗಳಿಗೆ, ಮತ್ತು ಕಲಾ ಚಟುವಟಿಕೆಗಳಿಗೆ ಬರುವಂತೆ ಪ್ರೋತ್ಸಾಹಿಸಿ ಸಹಕರಿಸಿದ್ದಾರೆ. ಇಂತಹ ಕಾರ‍್ಯಕ್ರಮಗಳಿಗೆ ತಾಲ್ಲೂಕು ಪಂಚಾಯ್ತಿಯಿಂದ ೫೦೦೦/-ರೂ. ಅನುದಾನವನ್ನು ನೀಡಿ ಸತತ ೭ವರ್ಷ ಕಾರ‍್ಯಕ್ರಮ ನಡೆಯುವಂತೆ ಪ್ರೋತ್ಸಾಹಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿಯಾಗಿ ೫ ವರ್ಷ ಕೆಲಸ ಮಾಡಿದ್ದಾರೆ. ಅದುವರೆಗೆ ಪರಿಷತ್ತಿನ ಖಾತೆಯಲ್ಲಿ ಕೊರತೆ ಬಜೆಟ್‌ಪ್ರತಿವರ್ಷ ಉದ್ಭವವಾಗುತ್ತಿತ್ತು. ಇದನ್ನು ಅರಿತ ಪುಷ್ಪ ಲಕ್ಷ್ಮೀನಾರಾಯಣ ಅವರು ಖಜಾಂಚಿ ಆದ ಮೇಲೆ ೭೫,೦೦೦ಕ್ಕೂ ಹೆಚ್ಚು ಹಣವನ್ನು ಪರಿಷತ್ತಿನ ಖಾತೆಗೆ ಕ್ರೋಢೀಕರಿಸಿ ಪರಿಷತ್ತಿನ ಬೆಳವಣಿಗೆಗೆ ಆಧಾರವಾಗಿ ನಿಂತರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯ ಗೋಷ್ಠಿಗಳನ್ನು ನಡೆಸಲು ಸದಸ್ಯರನ್ನು ಪ್ರೇರೆಪಿಸಿದರು. ನಂತರ ಕಾರ‍್ಯಕಾರಿ ಸಭೆಯಲ್ಲಿ ಸಾಹಿತ್ಯಗೋಷ್ಠಿ ನಡೆಸಲು ತೀರ್ಮಾನಿಸಿ ಸಿದ್ದಗೊಳಿಸಲಾಯಿತು. ಈ ಗೋಷ್ಠಿಗೆ ಡಾ.ಹಾ.ಮಾ.ನಾಯಕ, ಪ್ರಧಾನ ಗುರುದತ್, ಡಾ.ಸಾ.ಶಿ. ಮರುಳಯ್ಯ, ಪ್ರೊ. ಜಿ.ಎಚ್.ನಾಯಕ, ಕೈಯಾರೆ ಕಿಞ್ಣಣ್ಣರೈ, ಗೊ.ರೂ.ಚನ್ನಬಸಪ್ಪ, ಸಿ. ಅಶ್ವಥ್, ಉದ್ಯಾವರ ಮಾಧವಾಚಾರ್ಯ, ಭುವನೇಶ್ವರ‍್ ಅಂತಹ ಸಾಹಿತ್ಯ ಚಿಂತಕ, ವಿಮರ್ಶಕರುಗಳನ್ನು ಕರೆಸಿ ಸಾಹಿತ್ಯದ ಬಗ್ಗೆ ಚರ್ಚಾತ್ಮಕ ಗೋಷ್ಠಿಗಳನ್ನು ನಡೆಸಲಾಗಿದೆ.

ಪುಷ್ಪಲಕ್ಷ್ಮೀನಾರಾಯಣ ಅವರು ಪಂಚಾಯ್ತಿ ಸದಸ್ಯರಾಗಿದ್ದ ಕಾಲದಲ್ಲಿ ಶೃಂಗೇರಿ ತಾಲ್ಲೂಕಿಗೆ ’ಕನ್ನಡ ಭವನ’ ನಿರ್ಮಾಣ ಮಾಡಲು ಯೋಜನೆ ಸಿದ್ಧವಾಯಿತು. ಆಗ ಪುಷ್ಪ ಅವರೆ ’ಕನ್ನಡ ಭವನ ಸಮಿತಿ’ಯ ಕಾರ್ಯಾಧ್ಯಕ್ಷರಾದರು. ಆಗ ಜಿಲ್ಲಾ ಪಂಚಾಯ್ತಿಯಿಂದ ಮೊದಲ ಬಾರಿ ೨೫,೦೦ ರೂ ಹಣವನ್ನು ಮಂಜೂರು ಮಾಡಿಸಿ ತಂದು ಕನ್ನಡ ಭವನದ ತಳಪಾಯ ತೆಗೆಸಿ ಕೆಲಸ ಆರಂಭಿಸಲು ನೆರವಾದರು. ನಂತರ ೫೦.೦೦೦ ರೂಗಳನ್ನು ಮಂಜೂರು ಮಾಡಿಸಿ ತಂದು ಗೋಡೆ ನಿರ್ಮಾಣಕ್ಕೆ ಮುಂದಾದರು. ಈ ಹಣದ ಜೊತೆಗೆ ಹಲವು ಸಂಘ ಸಂಸ್ಥೆಗಳಿಂದ, ದಾನಿಗಳಿಂದಹಣ ಕ್ರೂಢೀಕರಿಸಿ ತರಲಾಗಿದೆ. ಇದಕ್ಕೆ ಪರಿಷತ್ತಿನ ಸದಸ್ಯರು, ಕನ್ನಡಭವನ ಸಮಿತಿಯ ಸದಸ್ಯರ ಶ್ರಮ ಸಹಕಾರದಿಂದ ಕನ್ನಡ ಭವನ ಈಗ ಪೂರ್ಣಗೊಳ್ಳಲು ಸಾಧ್ಯವಾಗಿದೆ.

೨೦೦೫ಕ್ಕೆ ಜಿಲ್ಲಾ ಪಂಚಾಯ್ತಿಯ ಅಧಿಕಾರಾವಧಿ ಮುಗಿದ ಮೇಲೆ ಸಾಹಿತ್ಯ ಪರಿಷತ್ತಿನ ಕೆಲವು ಸದಸ್ಯ ಸ್ನೇಹಿತರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕೆಂದು ಸಲಹೆ, ಸೂಚನೆ, ಒತ್ತಾಯಗಳು ಬಂದವು. ಆ ಸಮಯದಲ್ಲಿ ತ.ಸು. ಶಾಮರಾಯರ ಮಗ ಪ್ರೊ. ಬಿ.ಎಸ್.ವೆಂಕಣ್ಣಯ್ಯನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಒತ್ತಡ ಬಂದು ಆಯ್ಕೆಯಾಗಿ ಈಗಲೂ ಈ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಇದಲ್ಲದೆ ’ಭಾರತ ಜ್ಞಾನ ವಿಜ್ಞಾನ ಸಂಸ್ಥೆ’ಯ ಅಧ್ಯಕ್ಷೆಯಾಗಿ ಸತತ ಮೂರು ವರ್ಷಗಳು ಕೆಲಸ ಮಾಡಿದ್ದಾರೆ. ಈ ಜ್ಞಾನ ವಿಜ್ಞಾನ ಸಂಸ್ಥೆಯ ಕಾರ‍್ಯ ಚಟುವಟಿಕೆಗಳಿಗೆ ನೂರಾರು ಮಕ್ಕಳಿಗೆ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ವೈಜ್ಞಾನಿಕ ಮನೋಭಾವನೆಗಳನ್ನು ಮೂಡಿಸಿದ್ದಾರೆ. ಮಹಿಳೆಯರಿಗೆ ನಿರಂತರ ಕಲಿಕಾ ಕೇಂದ್ರಗಳಲ್ಲಿ ಕಲಿಕೆ-ಗಳಿಕೆಗೆ ಪ್ರೋತ್ಸಾಹಿಸಿ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬೆಳೆಸಿರುವುದರ ಬಗ್ಗೆ ಸ್ಥಳೀಯ ಮಹಿಳೆಯರು ನೆನಪಿಸಿಕೊಳ್ಳುತ್ತಾರೆ.

ಹೀಗೆ ಪುಷ್ಪಲಕ್ಷ್ಮೀನಾರಾಯಣ ಅವರು ಹತ್ತಾರು ಸ್ಥಾನಮಾನದ ಅಧಿಕಾರ ಹೊಂದಿ ನೂರಾರು ರೀತಿಯ ಸಾರ್ವಜನಿಕ ಕೆಲಸಗಳಿಗೆ ತಮ್ಮನ್ನು ತೊಡಗಿಸಿಕೊಂಡು; ಯಾವೊಂದು ಜಾತಿ,ಕುಲ, ಧರ್ಮಕ್ಕೂ ಬದ್ಧರಾಗಿದವರಲ್ಲ. ಇವರು ’ಬಹುಜನ ಸುಖಾಯ ಬಹುಜನ ಹಿತಾಯ’ ಎಂಬ ಬುದ್ಧನ ತತ್ವಕ್ಕೆ ಬದ್ಧರಾಗಿ ಕೆಲಸ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಜನರ ಪ್ರೀತಿಗೆ, ಜನಮನ್ನಣೆಗೆ ಬಾಜನರಾಗಿದ್ದಾರೆ. ೨೦೦೬ರಲ್ಲಿ ಜಿಲ್ಲಾಪಂಚಾಯ್ತಿ ಚುನಾವಣೆಯಾದಾಗ ಶೃಂಗೇರಿ ತಾಲ್ಲೂಕಿಗೆ ಜಿಲ್ಲಾ ಪಂಚಾಯ್ತಿ ಚುನಾವಣೆಯಾದಾಗ ಶೃಂಗೇರಿ ತಾಲ್ಲೂಕಿಗೆ ಜಿಲ್ಲಾ ಪಂಚಾಯ್ತಿ  ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗಕ್ಕೆ ಒಂದು ಪರಿಶಿಷ್ಟ ವರ್ಗಕ್ಕೆ ಮತ್ತೊಂದು ಮೀಸಲು ಕ್ಷೇತ್ರಗಳಿದ್ದವು. ಅವುಗಳಲ್ಲಿ ಕಾಂಗ್ರೆಸ್‌ಪಕ್ಷದಿಂದ ಇವರು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿ ಭಾಗವಹಿಸಲು ಆಕಾಂಕ್ಷಿಯಾಗಿದ್ದರು. ಆದರೆ ಆ ಕ್ಷೇತ್ರಕ್ಕೆ ಪುರುಷರು ಹೆಚ್ಚು ಆಕಾಂಕ್ಷಿ ಆಗಿದ್ದರಿಂದ ಇವರಿಗೆ ಅವಕಾಶವಾಗಲಿಲ್ಲ. ಪರಿಶಿಷ್ಟ ವರ್ಗದ ಕ್ಷೇತ್ರ ಬೇರೆಯಾದ್ದರಿಂದ ಆ ಕ್ಷೇತ್ರಕ್ಕೆ ಇವರು ಅಭ್ಯರ್ಥಿಯಾಗಲು ಇವರಿಗೆ ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್‌ನಿಂದ ಭಾಗವಹಿಸಿದ್ದ ಇಬ್ಬರೂ ಸೋತರು. ಈಗ ಜಿಲ್ಲಾ ಪಂಚಾಯ್ತಿ, ತಾಲ್ಲುಕು ಪಂಚಾಯ್ತಿ, ಗ್ರಾಮಪಂಚಾಯ್ತಿ ಮೂರರಲ್ಲಿಯೂ ಜನತಾದಳ, ಬಿ.ಜೆ.ಪಿ ಆಡಳಿತ ನಡೆಸುತ್ತಿವೆ.ಕಾಂಗ್ರೇಸ್‌ನಿಂದ ಪುಷ್ಪ ಅವರಿಗೂ ಅವಕಾಶ ಕೊಡದೆ ಬೇರೆಯವರೂ ಗೆಲ್ಲದೆ ಕಾಂಗ್ರೇಸ್‌ಪಕ್ಷ ಈಗ ಇಲ್ಲಿ ಮೂಲೆ ಸೇರಿದೆ. ಹಾಗೆಯೇ ಪುಷ್ಪ ಲಕ್ಷ್ಮೀನಾರಾಯಣ ಅವರು ಈಗ ವಿಶ್ರಾಂತವಾಗಿ ಕಳೆದ ೧೦-೧೫ ವರ್ಷಗಳ ಸಾರ್ವಜನಿಕ ಸೇವೆಯ ಸಾಧನೆಗಳ ನೆನಪಿನ ಅವಲೋಕನದಲ್ಲಿ ಕಾಲಕಳೆಯುತ್ತಿದ್ದಾರೆ.

* * *