ಜನಸಂಖ್ಯಾ ಬಾಹುಳ್ಯದ ಪ್ರಾದೇಶಿಕ ನೆಲೆ

ಭಾರತದಲ್ಲಿ ಸಾವಿರಾರು ಬುಡಕಟ್ಟು ಸಮುದಾಯಗಳು ನೆಲೆಗೊಂಡಿವೆ. ಅವರಲ್ಲಿ ಕರ್ನಾಟಕದ ಕಾಡು, ಬೆಟ್ಟ, ಗುಡ್ಡ ಮತ್ತು ಬಯಲು ಪ್ರದೇಶಗಳಲ್ಲಿ ನೂರಾರು ಬುಡಕಟ್ಟು ಜನರು ವಾಸಮಾಡುತ್ತಿದ್ದಾರೆ. ಅಂತಹ ಜನ ಸಮುದಾಯಗಳಲ್ಲಿ ’ಮಾಲೇರು’ ಜನಾಂಗವು ಒಂದು. ಇವರ ಹುಟ್ಟು, ಬೆಳವಣಿಗೆ ಮತ್ತು ಜೀವನದ ಹಿನ್ನೆಲೆಗಳನ್ನು ಕೆದಕಿದಂತೆಲ್ಲ ನಾನಾ ಅಂಶಗಳು ವ್ಯಕ್ತವಾಗುತ್ತವೆ.

’ಮಾಲೇರು’ಮೂಲ ಜನರು ಆರ‍್ಯ ವೈದಿಕ ಬ್ರಾಹ್ಮಣ ಕುಟುಂಬದ ಬಾಲವಿಧವೆ ಸ್ತ್ರೀಯರು. ಈ ವೈದಿಕ ಬ್ರಾಹ್ಮಣ ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ ಐದಾರು ವರ್ಷದ ಹೆಣ್ಣು ಮಕ್ಕಳಿಗೆ ಅವರ ಕುಲದ ಎಂಟು ಹತ್ತು ವರ್ಷದ ಹುಡುಗನನ್ನು ಗುರುತಿಸಿ ಮದುವೆ ಮಾಡುತ್ತಿದ್ದದ್ದು ರೂಢಿ. ಹೀಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಮದುವೆಯಾಗಿ ಏನಾದರೂ ಅಕಾಲ ಮರಣಕ್ಕೆ ಗಂಡು ಬಲಿಯಾದರೆ ಅವನು ಮದುವೆಯಾಗಿದ್ದ ಹೆಣ್ಣು ಬಾಲವಿಧವೆಯಾಗುತ್ತಿದ್ದಳು. ಇವಳು ಪ್ರಾಪ್ತ ವಯಸ್ಸಿಗೆ ಬಂದರೆ ಯಾರನ್ನೂ ಮರುಮದುವೆ ಯಾಗುವಂತಿರಲಿಲ್ಲ. ಅವಳಿಗೆ ತಲೆ ಬೋಳಿಸಿ, ಒಡವೆ ವಸ್ತ್ರಗಳನ್ನು ತೊಡಲು ಬಿಡದೆ ಕೆಂಪು ಸೀರೆ ತೊಡಿಸಿ, ವಿಕಾರಗೊಳಿಸುತ್ತಿದ್ದರು. ಅವಳನ್ನು ಸಮಾಜ, ಕುಟುಂಬಗಳ ಶುಭಕಾರ್ಯಗಳಿಂದ, ದೇವರ ಪೂಜಾ ಕಾರ‍್ಯಗಳಿಂದ ಬಹಿಷ್ಕರಿಸಲ್ಪಟ್ಟು ಅಶುಭ ಚಿನ್ಹೆಯನ್ನಾಗಿಸಿದ್ದರು. ಇವಳು ಆ ಮನೆಯ ಅಡಿಗೆ, ಪೂಜೆಗಳಿಗೆ ಸಹಾಯಕಳಾಗಿ; ಹೊಲ, ಗದ್ದೆ, ತೋಟಗಳ ಕೆಲಸ ಮಾಡಿಕೊಂಡು ಯಾವ ಜನ ಸಂಪರ್ಕವೇ ಇಲ್ಲದಂತೆ ಆ ಮನೆಯ ಸೇವಕಿಯಾಗಿ ಜೀವನ ಸಾಗಿಸುತ್ತಿದ್ದಳು. ಹೀಗಿದ್ದ ಆ ಮನೆಗೆ ಯಾರಾದರೂ ಅತಿಥಿಗಳು ಬಂದು ಹೋದವರಾಗಲಿ ಅಥವಾ ಅಕ್ಕಪಕ್ಕದ ಮನೆ, ಊರಿನವರಾಗಲಿ ಈಪ್ರಾಪ್ತ ವಯಸ್ಸಿನ ವಿಧವೆಯನ್ನು ನೋಡಿ ತಮ್ಮ ದೇಹ ಸುಖಕ್ಕೆ ಪ್ರೇರೆಪಿಸಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇವಳಿಗೆ ದೇಹ ಮತ್ತು ಮನಸ್ಸಿನ ಲೌಕಿಕ ಸುಖ, ಭೋಗ ಜೀವನದಿಂದ ನಿರ್ಬಂಧವಿತ್ತು. ಅವಳು ಪರ ಪುರುಷನ ಜೊತೆ ಲೌಕಿಕ ಸುಖ ಭೋಗಕ್ಕೆ ಒಳಗಾಗಿ ಗರ್ಭಧರಿಸಿ ಮಕ್ಕಳಾದರೆ ಅವಳನ್ನು ಮನೆಯಿಂದ, ಆ ಸಮಾಜದಿಂದ ಬಹಿಷ್ಕರಿಸುತ್ತಿದ್ದರು. ಆಗ ಆ ಹೆಣ್ಣು ಕಾಡು ಸೇರಬೇಕಾಗಿತ್ತು. ಅಲ್ಲಿ ಗುಡಿಸಲು ಹಾಕಿ ವಾಸಮಾಡುತ್ತಾ ಜೀವನೋಪಾಯಕ್ಕೆ ಮಕ್ಕಳ ರಕ್ಷಣೆಗೆ ಕೂಲಿ ನಾಲಿ ಮಾಡಿಕೊಂಡು ಗಂಡ ಇಲ್ಲದೆ ತನ್ನ ಮಕ್ಕಳನ್ನು ಹೆತ್ತು,ಹೊತ್ತು ಸಾಕುತ್ತಿದ್ದಳು. ಅವಳ ಕುಟುಂಬವನ್ನೇ ’ಮಾಲೇರು’ ಎಂದು ಕರೆಯಲಾಗಿದೆ.

ಇನ್ನು ಕೆಲವು ಕುಟುಂಬಗಳ ಬಾಲ ವಿಧವೆಯರನ್ನು ಅವರ ತಂದೆ-ತಾಯಿ ಅಥವಾ ಅತ್ತೆ-ಮಾವಂದಿರ (ಘಂಡನ)ಮನೆಯಲ್ಲಿ ಸಾಕಲಾರದವರಾದಾಗ ಆ ಹೆಣ್ಣು ಮಕ್ಕಳನ್ನು ಅವರ ಊರಿನ ಪ್ರಧಾನ ದೇವಾಲಯಗಳಲ್ಲಿ ಆಯಾ ದೇವರ ಹೆಸರಿನಲ್ಲಿ ಅಲ್ಲಿಯ ತುಳಸಿ ಗಿಡಕ್ಕೆ ಈ ವಿಧವೆಯಿಂದ ಹೂ ಮಾಳೆಯನ್ನು ತೊಡಿಸಿ, ಪೂಜೆಯ ವಿಧಿ ವಿಧಾನಗಳನ್ನೆಲ್ಲ ಮಾಡಿ ಹಿರಿಯರ ಅನುಮತಿಯ ಮೇರೆಗೆ ಪುರೋಹಿತ, ದೇವರ ಹೆಸರಿನಲ್ಲಿ ಮದುವೆಯಾದಳೆಂದು ಘೋಷಿಸುತ್ತಿದ್ದ. ಅಲ್ಲಿಂದ ದೇವದಾಸಿಯಾದವಳು ಶಾಶ್ವತ ಮುತ್ತೈದೆಯಾಗಿ ಹೂವು, ಬಳೆ, ಕುಂಕುಮ ತೊಡಬಹುದಾಗಿತ್ತು. ದೇವಾಲಯದಲ್ಲೆ ಇರಬೇಕಾದ ಇವಳು ಅಲ್ಲಿಯ ಕಸಮುಸರೆ ತೊಡಕೊಂಡು ಹೂವುಗಳನ್ನು ಅರಿಸಿ, ಕೊಯ್ದು ತಂದು ಕಟ್ಟಿ ಪೂಜೆಗೆ ಅಣಿಗೊಳಿಸುತ್ತಿದ್ದಳು. ಇಂತಹ ಕೆಲಸದಿಂದ ಪೂಜಾರಿಯ ಸಹಾಯಕಳಾಗಿ ಕೂಲಿರಹಿತ ಸೇವೆಯಲ್ಲಿ ನಿರತಳಾಗಿರುತ್ತಿದ್ದಳು. ಇಂತಹ ಒಡನಾಟದಲ್ಲಿ ಅಲ್ಲಿಯ ಪುರೋಹಿತರೆ ತಮ್ಮ ದೇಹ ಸುಖಕ್ಕೆ ಬಳಸಿಕೊಂಡು, ಆ ಹೆಣ್ಣು ಗರ್ಭಧರಿಸಿ ಮಕ್ಕಳನ್ನು ಪಡೆದರೆ, ಊರ ಜನರೆ ತಿರಸ್ಕರಿಸಿ ಅವಳನ್ನು ಕಾಡಿಗೆ ಅಟ್ಟುತ್ತಿದ್ದರು. ಇಲ್ಲಿ ಬ್ರಾಹ್ಮಣ ಪುರೋಹಿತ ಪೂರ್ಣ ಸ್ವಾತಂತ್ರ‍್ಯ-ವುಳ್ಳವನಾಗಿದ್ದು ಇವನಿಗೆ ಯಾವ ಶಿಕ್ಷೆಯು ಇಲ್ಲದೆ ಮುಕ್ತನಾಗುತ್ತಿದ್ದ.

ಕಾಡಿಗಟ್ಟಿದ ಆ ಹೆಣ್ಣು ತನ್ನ ಮಗುವನ್ನು ಹಡೆದು ಕೂಲಿ-ನಾಲಿ ಮಾಡಿ ಅನ್ನ, ಬಟ್ಟೆ ಕೊಟ್ಟು ಸಾಕಿ ಸಲಹುತ್ತಿದ್ದಳು. ಇವಳಿಗೆ ಹುಟ್ಟಿದ ಮಕ್ಕಳು ಹೆಣ್ಣಾಗಿದ್ದರೆ ಬೆಳೆದು ದೊಡ್ಡವರಾಗಿ ಪ್ರಾಪ್ತವಯಿಸ್ಸಿಗೆ ಬಂದಾಗ ಮೇಲ್ಜಾತಿಯ ಜನ ಈ ಮಕ್ಕಳನ್ನು ಕೀಳಾಗಿ ಕಾಣುತ್ತಿದ್ದರು. ತಾಯಿ ಮಕ್ಕಳಿಬ್ಬರಿಗೂ ಪುರೋಹಿತರ ಮತ್ತು ಮೇಲ್ಜಾತಿಯರ ಸೇವೆ ಹಾಗೂ ಅವರ ಹೊಲ, ತೋಟ, ಮನೆಗಳ ಕೂಲಿಯೇ ಪ್ರಧಾನ ಜೀವನವಾಗಿತ್ತು. ತನ್ನ ಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯವಾಗಿ. ಶಕ್ತಿಯಾಗಲಿ ತಾಯಿಗೆ ಇಲ್ಲದಿದ್ದಾಗ ಹೆಣ್ಣು ಮಕ್ಕಳನ್ನು ದೇವಾಲಯಗಳಲ್ಲಿ ದೇವರ ಹೆಸರಿಣನಿಂದ ತುಳಸಿಗಿಡಕ್ಕೆ ಮದುವೆ ಮಾಡಿ; ದೇವರ ಸೇವೆಗೆಂದು ದೇವದಾಸಿಯಾಗಿ ಬಿಡುತ್ತಿದ್ದರು. ಅಲ್ಲಿಂದ ದೇವಾಲಯದಲ್ಲಿ ಗರ್ಭಧರಿಸುವವರೆಗೆ ದೇವರ ಸೇವೆ, ನಂತರ ಬಾಳು ಕಾಡು ಮತ್ತು ಬೆಟ್ಟ-ಗುಡ್ಡಗಳಲ್ಲಿ. ಹೀಗೆ ತಾಯಿ ಮಗಳಿಬ್ಬರೂ ದೇವಾಲಯದ ಪೂಜಾರಿಗಳ ಭೋಗದ ವಸ್ತುವಾಗಿ ಮಲಿನವಾದವರು. ಇಂತಹ ಶೋಷಣೆಗೆ ಒಳಪಟ್ಟು ಪುರೋಹಿತಶಾಹಿಗಳ ನಿಯಮಗಳಂತೆ ಸಾಮಾಜಿಕ ಬಹಿಷ್ಕಾರಕ್ಕೊಳಪಟ್ಟ ತಾಯಿ-ಮಗಳು, ಮಗ ಇವರ ಸಾಂಸಾರಿಕ ಕುಟುಂಬವೇ ’ಮಾಲೇರು’ ಜನಾಂಗ.

ವೈದಿಕ ಬ್ರಾಹ್ಮಣರ ಕುಟುಂಬಗಳಲ್ಲಿ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲು ತಡವಾದ ಕಾರಣದಿಂದಲೊ, ಇಲ್ಲ ಅವಕಾಶವಾಗದೆಯೊ ಇದ್ದಾಗ, ಯಾವ ಯಾವುದೊ ಒತ್ತಾಯ, ಪ್ರಭಾವ ಪ್ರಚೋದನೆಗಳಿಂದ ಪುರುಷ ಸಂಪರ್ಕವಾಗಿ ಆ ಹೆಣ್ಣು ಮಕ್ಕಳು ಗರ್ಭಧರಿಸಿ ಮಕ್ಕಳನ್ನು ಪಡೆಯುತ್ತಿದ್ದರು. ಈ ವಿಷಯ ಜನರಿಗೆ, ಪುರೋಹಿತರಿಗೆ ತಿಳಿದೊಡನೆ ಅವಳನ್ನು ಅವರ ಸಮಾದಿಂದ ಹೊರಗಿಡುತ್ತಿದ್ದರು. ಅಲ್ಲಿಂದ ಆ ಹೆಣ್ಣು ಮತ್ತು ಅವಳ ಮಗು ’ಮಾಲೇರು’ ಜನಾಂಗಕ್ಕೆ ಸೇರುತ್ತಿದ್ದರು.

ಮಾಲೇರು ಜನಾಂಗದ ಇತಿಹಾಸದ ಬಗ್ಗೆ ಇಂದಿಗೂ ದಕ್ಷಿಣ ಕನ್ನಡ ಭಾಗದ ಹಳೆಯ ತಲೆಮಾರಿನ ಜನರ ಬಾಯಲ್ಲಿ ಉಳಿದು ಬಂದಿರುವ ಮಾಹಿತಿ ಏನೆಂದರೆ ಇಂದಿಗೆ ಸುಮಾರು ೩೦೦-೪೦೦ ವರ್ಷಗಳಿಗೂ ಹಿಂದೆ ದಕ್ಷಿಣ ಕನ್ನಡ ಭಾಗದ ’ಪಾರ್ಥೀ’ ಎಂಬ ಊರು ಇತ್ತಂತೆ. ಆ ಉರ ಹೊರಗೆ ಒಂದು ದೇವಾಲಯವಿದ್ದು ಆ ಭಾಗದ ಅಗ್ರಹಾರದಲ್ಲಿ ಹತ್ತಾರು ಬ್ರಾಹ್ಮಣ ಕುಟುಂಬಗಳು ವಾಸವಾಗಿದ್ದವು. ಆ ಕಾಲದಲ್ಲೆ  ಈ ಕುಟುಂಬದ ಹೆಣ್ನು ಮಕ್ಕಳು ದೊಡ್ಡವರಾಗುವ (ಋತುಮತಿ ಅಥವಾ ಮೈನೆರೆವ) ಮೊದಲೇ ಅಂದರೆ ೫-೬ ವರ್ಷದಿಂದ ೮-೧೦ ವರ್ಷದ ಒಳಗೆ ವಿವಾಹವಾಗಬೇಕಾಗಿತ್ತು. ಅಷ್ಟರೊಳಗೆ ಅಂದರೆ ಮದುವೆಗೆ ಮುಂಚೆ ಯಾರಾದರೂ ಋತುಮತಿಯಾದಲ್ಲಿ ಆ ಹೆಣ್ಣು ಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಅವಳನ್ನು ಕಾಡಿಗೆ ಬಿಡುವ ಅನಿಷ್ಠ ಪದ್ಧತಿಯಿತ್ತಂತೆ ಎನ್ನುತ್ತಾರೆ.

ಇಂತಹ ಒಂದು ಘಟನೆ ಆ ’ಪಾರ್ಥೀ’ ಎಂಬ ಊರಿನಲ್ಲಿ ನೆಡೆದಿದ್ದನ್ನು ಹಿರಿಯರು ಹೀಗೆ ಹೇಳುತ್ತಾರೆ. “ಬ್ರಾಹ್ಮಣ ಕುಟುಂಬದ ಒಬ್ಬ ಮಗಳು ಮದುವೆಗೆ ಮುನ್ನ ಮೈನೆರೆದಿದ್ದಕ್ಕೆ ಅದು ಅನಿಷ್ಟ ಹಾಗೂ ದುಃಖದ ಸಂಗತಿ ಎಂದು ಆ ಹುಡುಗಿಯ ತಂದೆ-ತಾಯಿಗಳು ಊರಿನ ಹಿರಿಯರಿಗೆ ತಿಳಿಸುತ್ತಾರೆ. ಏನೂ ಅರಿಯದ ಸುಂದರಿಯಾದ ಆ ಮುಗ್ದ ಹುಡುಗಿ ಮತ್ತು ಅವಳ ತಂದೆ-ತಾಯಿಯರ ಮೇಲೆ ಹಿರಿಯರಿಗೆ ಅನುಕಂಪ ಮೂಡಿ ಆ ಹುಡುಗಿಯನ್ನು ಕಾಡಿಗೆ ಬಿಡಲು ಮನಸ್ಸು ಬಾರದೆ ಅಶುದ್ಧಳಾದ ಅವಳನ್ನು ಯಾರೂ ಮದುವೆ-ಯಾಗುವಂತಿರಲಿಲ್ಲ. ಆದ್ದರಿಂದ ಅವಳನ್ನು ಊರ ಹೊರಗಿನ ದೇವಾಲಯದ ಹೊರಾವರಣದಲ್ಲಿದ್ದುಕೊಂಡು, ದೇವರಿಗೆ ಹೂಮಾಲೆಯನ್ನು ಕಟ್ಟಿಕೊಟ್ಟು ಅದರಿಂದ ಬರುವ ಸಂಪಾದನೆಯಲ್ಲಿ ಜೀವನ ಸಾಗಿಸಲೆಂದೂ ಹೇಳುತ್ತಾರೆ. ಆ ಸಂಪಾದನೆ ಜೀವನಕ್ಕೆ ಸಾಕಾಗದಿದ್ದರೆ ಅವಳ ತಂದೆಯಾಗಲೀ ಅಥವಾ ಊರಿನ ಹಿರಿಯವರಾಗಲೀ ಸಹಾಯ ಮಾಡಬಹುದೆಂದು ತೀರ್ಮಾನಿಸುತ್ತಾರೆ.

ಊರ ಹಿರಿಯರ ಈ ತೀರ್ಮಾನದಂತೆ ಆ ಹುಡುಗಿಯು ಪ್ರತಿದಿನ ಹೂಮಾಲೆಯನ್ನು ಕಟ್ಟಿ ತಂದು ದೇವರಿಗೆ ಅರ್ಪಿಸುತ್ತಿದ್ದಳು. ಆ ಉರು ಅಗ್ರಹಾರದ ಸುಬ್ರಾಯ ಎಂಬ ಯುವಕನು ಪ್ರತಿದಿನ ದೇವಾಲಯಕ್ಕೆ ಬರುತ್ತಿದ್ದು, ಈ ಹುಡುಗಿಯ ತಾರುಣ್ಯ ಮತ್ತು ಮೋಹಕ ರೂಪವನ್ನು ನೋಡಿ ಆಕರ್ಷಿತನಾದ. ಅವಳ ಬದುಕಿನ ದುಃಖದ ಕಥೆಯನ್ನು ಕೇಳಿ ಮರುಗಿದ ಹುಡುಗ ನಾನು ನಿನಗೆ ಬಾಳು ಕೊಡುವುದಾಗಿ ಹೇಳಿದ. ಹೀಗೆ ಇವರಿಬ್ಬರು ಪರಸ್ಪರ ಒಂದಾದ ವಿಷಯ ತಿಳಿದ ಹಿರಿಯರು ಸುಬ್ರಾಯನಿಗೆ ಅವಳು ಅಶುದ್ಧ ಹೆಣ್ಣು, ನೀನು ಅವಳನ್ನು ಮದುವೆ ಆಗುವುದಿರಲಿ, ಅವಳೊಂದಿಗೆ ಯಾವ ಸಂಬಂಧವನ್ನು ಇಟ್ಟುಕೊಳ್ಳುವಂತಿಲ್ಲ. ಹೀಗಿರುವಾಗ ನೀನು ಆಕೆಯೊಂದಿಗೆ ಅಕ್ರಮ ಸಂಬಂಧಿವಿರಿಸಿಕೊಂಡಿರುವುದಾಗಿ ತಿಳಿದಿದೆ. ಆ ಸುದ್ದಿ ನಿಜವಾಗಿದ್ದರೆ ಅವಳನ್ನು ಬಿಟ್ಟು ಬಿಡು. ಇಲ್ಲವಾದರೆ ನಿನ್ನನ್ನೂ ಜಾತಿಯಿಂದ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆದರೆ ಸುಬ್ರಾಯನು ತಾನು ಆಕೆಯನ್ನು ಬಿಡುವುದಿಲ್ಲವೆಂದು ಹಠ ಹಿಡಿದನು. ಆಗ ಊರ ಜನ ಸುಬ್ರಾಯನನ್ನು ಜಾತಿಯಿಂದ ’ಬಹಿಷ್ಕಾರ’ ಹಾಕಿದರು. ಊರ ಹೊರಗೆ ಬಂದು ಸುಬ್ರಾಯನು ಒಂದು ಗುಡಿಸಲು ಕಟ್ಟಿಕೊಂಡು ಆ ಹುಡುಗಿಯೊಂದಿಗೆ ’ಮಾಲೆ’ ಎಂದೂ; ಅವಳ ಸಂಬಂಧ ಮಾಡಿದ. ಸುಬ್ರಾಯ ’ಮಾಲೆಯ’ ಎಂದೂ ಅವರ ಕುಟುಂಬವನ್ನು “ಮಾಲೇರು”ಎಂದು ಕರೆಯತೊಡಗಿದರು. ಜಾತಿಯಿಂದ ಬಹಿಷ್ಕೃತನಾದ ಸುಬ್ರಾಯನು ಸ್ಥಳೀಯ ಜನರಿಂದ ಸುಬ್ಬನಾದ. ಚಿಕ್ಕಂದಿನಿಂದಲೂ ವಿಚಾರವಂತನಾಗಿ, ವಿದ್ಯಾವಂತ ಮತ್ತು ಕವಿಯೂ ಆದ ಸುಬ್ಬನು ಯಕ್ಷಗಾನದಲ್ಲಿ ಕೆಲವು ಕೃತಿಗಳನ್ನು ರಚಿಸಿದನು. ಇವನು ಬರೆದ ಮೊಟ್ಟಮೊದಲು ಕೃತಿ “ಚುಡಾಮಣಿ” (ರಾಮಾಯಣದ ಸುಂದರ ಕಾಂಡ) ಈತನ ರಚಿಸಿದ ಈ ಯಕ್ಷಗಾನ ಕೃತಿಗಳು ಇಂದಿಗೂ ಜನಪ್ರಿಯವಾಗಿವೆ. ಹೀಗೆ ಬ್ರಾಹ್ಮಣರ ಹೆಣ್ಣು ಮಕ್ಕಳು ಮದುವೆಗೆ ಮೊದಲು ಋತಿಮತಿಯರಾದ ಹಲವರು ಹುಡುಗಿಯರು ಸುಬ್ಬನ ಕುಟುಂಬದ ಜೊತೆ ಸೇರಿಕೊಂಡಿದ್ದಾರೆಂದು ಹಿರಿಯರು ಹೇಳುತ್ತಾರೆ.

ಇಂತಹ ನಾನಾ ಕಾರಣ ಮತ್ತು ಸಂಬಂಧದಿಂದ ’ಮಾಲೇರು’ ಎನ್ನಿಸಿಕೊಂಡ ಸ್ತ್ರೀಯರಿಗೆ ಹೆಣ್ಣು ಮಕ್ಕಳಲ್ಲದೆ ಗಂಡು ಮಗು ಹುಟ್ಟಿದರೆ; ಅವನು ಬ್ರಾಹ್ಮಣರಲ್ಲದೆ ಮತ್ತಿತರೆ ಮೇಲ್ಜಾತಿಯವರ ಹೊಲಗದ್ದೆ, ತೋಟ, ಮನೆಯ ಕೆಲಸ ಮಾಡಿಕೊಂಡು ಅವರು ಹಾಕಿದ ಅನ್ನ ತಿಂದುಕೊಂಡು ಅವರು ವರ್ಷಕ್ಕೊಮ್ಮೆ ಕೊಟ್ಟ ಬಟ್ಟೆಯನ್ನು ತೊಟ್ಟುಕೊಂಡು ತಬ್ಬಲಿಯಂತೆ ಜೀವನ ಮಾಡಬೇಕಾಗಿತ್ತು. ಈ ಹುಡಗ ಪ್ರಾಪ್ರವಯಸ್ಸಿಗೆ ಬಂದಾಗ ಮದುವೆ ಆಗುವಂತಾದಾಗ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅವನು ಮದುವೆ ಆಗುವುದಾದರೆ ಅದೇ ರೀತಿ ಇನ್ನೊಂದು ಬಹಿಷ್ಕೃತ ಸಮುದಾಯದ ’ಮಾಲೇರು’ ಸಮುದಾಯದಲ್ಲಿ ಹುಟ್ಟಿದ ಹೆಣ್ಣನ್ನೇ ಹುಡುಕಿ ಮದುವೆಯಾಗಬೇಕಾಗಿತ್ತು. ಇವರ ವಂಶದ ಮಕ್ಕಳೇ ’ಮಾಲೇರು’ಎಂದು ಗುರುತಿಸಲ್ಪಟ್ಟಿದ್ದಾರೆ. ಹೀಗಾದರೆ ಈಗಿರುವ ಹಿರಿಯ ತಲೆಮಾರಿನವರು ಇವರಿಗಿಂತ ೩ ತಲೆಮಾರು ಹಿಂದಿನವರು ಅಧಿಕೃತವಾಗಿ ಮದುವೆ ಆದವರು. ಈ ೩-೪ ತಲೆಮಾರಿನವರಿಗಿಂತ ಹಿಂದಿನವರು ಯಾರು ಮದುವೆ ಆಗದೆ ಹೆಚ್ಚಾಗಿ ಬ್ರಾಹ್ಮಣರಿಗೆ ಮತ್ತು ಪ್ರಬಲ ಜಾತಿಯ ಪ್ರಬಲ ಪುರುಷನ ಉಪಪತ್ನಿಗೆ ಹುಟ್ಟಿದ ಮಕ್ಕಳಾಗಿ ಅವರಿಂದ ಬೆಳೆದು ಬಂದವರೆ ಈ ಮಾಲೇರು ಸಮುದಾಯ.

೧೯೧೧ರ ಜನಗಣತಿಯಲ್ಲಿ ’ಮಾಲೇರು’ ಜನಾಂಗ ಇನ್ನೂ ಒಂದು ಮೂಲದಿಂದ ಬಂದಿರುವುದನ್ನು ವಿರಿಸುತ್ತದೆ. ಅದರ ಪ್ರಕಾರ ದೇವಸ್ಥಾನದ ಬಲಿಪೀಠದ ಮೇಲೆ ಹಾಕಿದ ಪೂಜಾನೈವೇದ್ಯದ ಅನ್ನವನ್ನು ಯಾವುದೇ ಹೆಂಗಸು ತಿಂದರೆ ಆ ಕ್ಷಣದಿಂದ ಆಕೆ ತನ್ನ ಜಾತಿಯನ್ನು ಕಳೆದುಕೊಂಡು ಸಾರ್ವಜನಿಕರ ಸ್ವತ್ತಾಗುತ್ತಾಳೆ. ಅವಳು “ಮಾಲೇರು” ಹೆಣ್ಣು ಎನ್ನಿಸಿಕೊಳ್ಳುತ್ತಾಳೆ. ಇವಳಿಗೆ ಬ್ರಾಹ್ಮಣ ಸಂಪರ್ಕದಿಂದ ಹುಟ್ಟಿದ ಮಕ್ಕಳು-“ಗೋಲಕ” ಎನ್ನಿಸಿಕೊಳ್ಳುತ್ತಾರೆ ಎಂದಿದೆ.

ಹೀಗೆ ನಾನಾ ಕಾರಣಗಳಿಂದ ’ಮಾಲೇರು’ ಜನಾಂಗ ಉದಯವಾಗಿರುವುದು ಗಮನಕ್ಕೆ ಬರುತ್ತದೆ. ಅದರಲ್ಲೂ ಬಾಲ್ಯವಿವಾಹ ಆದ ಮೇಲೆ ಆಕಸ್ಮಿಕವಾಗಿ ಗಂಡಿಗಿಂತ ಮೊದಲು ಹೆಣ್ಣೆ ಸಾವಿಗೊಳಪಟ್ಟರೆ ಆ ಹುಡುಗ ಬೇರೆ ಯಾವ ಬ್ರಾಹ್ಮಣ ಹುಡುಗಿಯನ್ನಾದರೂ ತಂದು ಇನ್ನೊಂದು ಮದುವೆ ಆಗುತ್ತಿದ್ದ. ಆದರೆ ಗಂಡ ಸತ್ತರೆ ಈ ಹುಡುಗಿಗೆ ಆ ಅವಕಾಶವಿರದೆ ಬ್ರಾಹ್ಮಣ ಸಮಾಜದಿಂದ ತಿರಸ್ಕಾರಕ್ಕೊಳಪಡುತ್ತಿದ್ದಳು. ಅವರ ಸಂಪ್ರದಾಯದ ಈ ವಿಚಾರ ಎಲ್ಲಾ ಸಮಾಜಕ್ಕೂ ಹರಡಿ ವಿಧವೆಯಾದ ಈ ಹೆಣ್ಣು ಅಪಶಕುನ ಸಂಕೇತವಾಗಿ ಎಲ್ಲರಿಂದ ಅಪಮಾನಕ್ಕೊಳಪಡುತ್ತಿದ್ದಳು.

ಬ್ರಾಹ್ಮಣ ಹೆಣ್ಣುಮಗಳು ಮದುವೆ ಆಗಿ ವಿಧವೆ ಆಗುವ ಮುನ್ನ ಹುಟ್ಟಿದ ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಇವರ‍್ಯಾರು ಸೇರುವುದಿಲ್ಲ. ಈ ಮಕ್ಕಳು ತಂದೆ ಸಾಯುವುದಕ್ಕಿಂತ ಮುಂಚಿತವಾಗಿ ಹುಟ್ಟಿದ್ದರಿಂದ ಇವರ‍್ಯಾರಿಗೂ ಕಳಂಕವಿಲ್ಲ. ಇವರುಬ್ರಾಹ್ಮಣರಾಗಿ ಉಳಿಯುತ್ತಾರೆ. ಆದರೆ ತಂದೆ ಸತ್ತ ಮೇಲೆಇತರೆ ಯಾವ ಪುರುಷನ ಸಂಪರ್ಕದಿಂದ ಲಾದರೂ ಈ ಮಕ್ಕಳ ತಾಯಿಗೆ ಮತ್ತೆ ಮಕ್ಕಳಾದರೆ ಈ ತಾಯಿ ಮತ್ತು ಮಕ್ಕಳು ಇಬ್ಬರೂ ಬ್ರಾಹ್ಮಣರಾಗಿ ಉಳಿಯದೆ ’ಮಾಲೇರು’ ಆಗುತ್ತಾರೆ. ಏಕೆಂದರೆ ಈ ತಾಯಿ ಅನೈತಿಕ ಸಂಬಂಧಕ್ಕೊಳಗಾಗಿ ದ್ದಾಳೆಂದು. ಆ ಮಕ್ಕಳು ಅಂತಹ ಸಂಬಂಧದಿಂದ ಹುಟ್ಟಿದವರೆಂದು ಇಡೀ ಸಮಾಜದಿಂದ ತಿರಸ್ಕೃತರಾಗುತ್ತಿದ್ದರು. ಹೀಗಾದ ತಾಯಿ ಮಕ್ಕಳೆಲ್ಲ ಜೀವನ ಪರ‍್ಯಂತ ಈ ಅನೈತಿಕ ಸಂಬಂಧದಲ್ಲೆ ಜೀವನ ಕಳೆದು ಇಡೀ ಸಮಾಜದಿಂದ ಬಹಿಷ್ಕಾರಕ್ಕೊಳಗಾಗುತ್‌ಇತದ್ದರು. ಹೀಗೆ ಮಾಡುತ್ತಿದ್ದವರು ವೈದಿಕ ಪುರೋಹಿತಶಾಹಿ ವರ್ಗ.ನಂತರ ಹಲವು ಮೇಲ್ವರ್ಗದ ಪ್ರಧಾನ ಪುರುಷರು ಅವರ ದೊಡ್ಡಸ್ತಿಕೆಗಾಗಿ ಈ ಸ್ತ್ರೀಯರ ಸಂಬಂಧ ಬೆಳೆಸುತ್ತಿದ್ದರು. ಈ ಜನರ ಸ್ವಾರ್ಥ ಸುಖಭೋಗಕ್ಕಾಗಿ ಮಾಲೇರು ಸಮುದಾಯದ ಹೆಣ್ಣು ಮಕ್ಕಳನ್ನು ನಿರಂತರವಾಗಿ ಬಳಸಿಕೊಂಡು ಎಸೆದಿದ್ದಾರೆ.ದ ಈ ಹೆಣ್ಣುಮಕ್ಕಳ ಜೀವನ ಬೆಳವಣಿಗೆಯೇ ’ಮಾಲೇರು’ ಜನಾಂಗದ ಸಂಸ್ಕೃತಿಯಾಗಿ ಸೃಷ್ಟಿಯಾಗಿದೆ.

ಮೇಲಿನ ಈ ಎಲ್ಲಾ ಹಿನ್ನೆಲೆಗಳನ್ನು ಗಮನಿಸಿದರೆ, ಬಾಲವಿಧವೆಯಾದವಳು ಪ್ರಾಪ್ತ ವಯಸ್ಸಿಗೆ ಬಂದು ಬೇರೆಯವರಿಂದ ಗರ್ಭಧರಿಸಿದವಳು, ಮದುವೆಗೆ ಮುನ್ನ ಋತುಮತಿ-ಯಾದವಳು, ದೇವಸ್ಥಾನದ ಬಲಿ ಪೀಠದ ಮೇಲೆ ಹಾಕಿದ ಪೂಜಾನೈವೇದ್ಯದ ಅನ್ನವನ್ನು ತಿಂದವಳು ’ಮಾಲೇರು’ ಮಹಿಳೆ ಆಗುತ್ತಿದ್ದಳು. ಇವಳು ದೇವಸ್ಥಾನದಲ್ಲಿ ಸಾರಿಸಿ, ಗುಡಿಸಿ ದೇವರಿಗೆ ಹೂಮಾಲೆಯನ್ನು ಕಟ್ಟಿಕೊಡುವ ನೆಪದಲ್ಲಿ ಆ ದೇವಾಲಯಗಳ ಪೂಜಾರಿಗಳ ಸೇವೆ ಮತ್ತು ಅವರ ದೇಹ ಸುಖಕ್ಕೆ ಒಳಗಾಗುತ್ತಿದ್ದಳು. ಹೀಗೆ ಪುರೋಹಿತಶಾಹಿಗಳಿಂದ ಅಥವಾ ಉತ್ತಮ ಜಾತಿಯವರಿಂದ ಅವರ ಸ್ವಾರ್ಥ ಸುಖಕ್ಕೆ ಬಳಕಯಾಗಲ್ಪಟ್ಟು ಬಹಿಷ್ಕಾರಕ್ಕೊಳಪಟ್ಟವಳು ’ಮಾಲೇರು’ ಮಹಿಳೆ ಆಗಿದ್ದಾಲೆ. ಇಂತಹವರ ಸಂತತಿಯ ಹೆಣ್ಣು ಗಂಡುಗಳ ಗುಂಪೇ ಒಂದು ಜನಾಂಗವಾಗಿ ರೂಪುಗೊಂಡಿದೆ. ಇವರು ಕರ್ನಾಟಕದಲ್ಲೇ ಏಕೆ ಭಾರತದಾದ್ಯಂತ ನಾನಾ ರೀತಿಯಲ್ಲಿ ಸೃಷ್ಟಿಯಾಗಲ್ಪಟ್ಟಿದ್ದಾರೆ. ಈ ಸಮುದಾಯ ಪ್ರಾದೇಶಿಕ, ಭಾಷಿಕ, ಸಾಂಸ್ಕೃತಿಕ ಭಿನ್ನತೆಯಿಂದ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟು ಜೀವನ ಮಾಡುತ್ತಿದ್ದಾರೆ. ಇವರನ್ನು ಕರ್ನಾಟಕದಲ್ಲಿ ’ಮಾಲೇರು’ ಎಂದು ಕರೆದರೆ; ಕೇರಳದಲ್ಲಿ ’ಅದಿಯನ್, ಕಣಿಯನ್’ ಎಂದೆಲ್ಲ ಕರೆಯುತ್ತಾರೆ. ಹೀಗೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತಿತರ ರಾಜ್ಯಗಳಾದ ಭಾರತದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲೆಲ್ಲ ಬೇರೆ ಬೇರೆ ಹೆಸರುಗಳಿಂದ ಈ ಜನಾಂಗ ವಾಸ ಮಾಡುತ್ತಿದ್ದಾರೆ.

ಇವರುಗಳನ್ನು ಬ್ರಾಹ್ಮಣರು ಮತ್ತಿತರ ಮೇಲ್ಜಾತಿಯ ಜನರು ಶೂದ್ರರಂತೆ ಕೆಲವೊಮ್ಮೆ ಅಸ್ಪೃಶ್ಯರಂತೆ ಕಾಣುತ್ತಿದ್ದರು. ಈ ಪ್ರಬಲ ಕೋಮಿನವರ ಮನೆಯಲ್ಲಿ ಮಾಲೇರು ಊಟ, ತಿಂಡಿ ಮಾಡಿದರೆ ಎಲೆಯನ್ನು ಇವರೆ ತೆಗೆದುಕೊಂಡು ಹಾಸಿ ಊಟಮಾಡಿ, ಮತ್ತೆ ಎಂಜಲು ಎಲೆಯನ್ನು ತೆಗೆದು ಸಗಣಿ ಗಂಜಲ ಹಾಕಿ ಹಾಸಿ ಊಟಮಾಡಿ, ಮತ್ತೆ ಎಂಜಲು ಎಲೆಯನ್ನು ತೆಗೆದು ಸಗಣಿ ಗಂಲ ಹಾಕಿ ತೊಳೆದು ಹೊರಬರಬೇಕಾಗಿತ್ತು. ಅವರ ಮನೆಗಳಲ್ಲಿ ಕಾಫಿ, ನೀರು ಕುಡಿದು ತಾವು ಕುಡಿದ ಲೋಟವನ್ನು ನೀರು ಹಾಕಿ ತೊಳೆದಿಟ್ಟು ಬರಬೇಕಾಗಿತ್ತು. ಆ ಆಚರಣೆಗಳು ಮಾಲೇರು ಜನಕ್ಕೆ ಸಾಮಾನ್ಯವಾಗಿದ್ದವು. ಇವರು ಬ್ರಾಹ್ಮಣ, ಲಿಂಗಾಯಿತ, ಶೆಟ್ಟರುಗಳ ಮನೆಗೆ ಹೋದಾಗ ಅವರು ಎಲೆ, ಅಡಿಕೆ, ಸುಣ್ಣ ಬೆರೆಸಿ ತಾಂಬೂಲವನ್ನು ಕೊಡುತ್ತಿದ್ದರು. ಅದೇ ಮಾಲೇರು ಮನೆಗೆ ಈ ಉತ್ತಮರು ಬಂದಾಗ ಎಲೆ, ಅಡಿಕೆ ಮಾತ್ರ ತೆಗೆದುಕೊಂಡು ಸುಣ್ಣವನ್ನು ಮುಟ್ಟುತ್ತಿರಲಿಲ್ಲ. ಏಕೆಂದರೆ ಸುಣ್ಣಕ್ಕೆ ಅವರ ಮನೆಯ ನೀರು ಹಾಕಿರುತ್ತಾರೆ ಎಂಬ ಭಾವದಿಂದ. ಹಾಗಾಗಿ ಅವರ ಜೊತೆಯಲ್ಲೆ ಸುಣ್ಣವನ್ನು ಇಟ್ಟುಕೊಂಡಿರುತ್ತಿದ್ದು ಅವರ ಸುಣ್ಣವನ್ನು ಹಾಕಿಕೊಂಡು ತಾಂಬುಲ ತಿನ್ನುತ್ತಿದ್ದರು. ಏಕೆಂದರೆ ಮಾಲೇರು ಮನೆಯ ನೀರು ಹಾಕಿ ಮಾಡಿದ ಸುಟ್ಟ ಸುಣ್ಣವನ್ನು ತಿಂದರೆ ನಮಗೆ ಮೈಲಿಗೆ ಆಗುತ್ತದೆ. ಮತ್ತೆ ನಮ್ಮಜಾತಿ ಕೆಡುತ್ತದೆ ಎಂಬ ಭಾವದಿಂದ ಹೀಗೆ ಮಾಡುತ್ತಿದ್ದರು. ಇವರುಗಳ ಮನೆಯಲ್ಲಿ ಮದುವೆ, ತಿಥಿ, ಹೊಸಮನೆ ಪ್ರವೇಶಗಳಲ್ಲಿ ಮತ್ತು ದೇವಾಲಯಗಳ ಉಟೋಪಚಾರಗಳಲ್ಲಿ ಮಾಲೇರು ಭಾಗವಹಿಸಿದರೆ ಇವರಿಗೆ ಅಡ್ಡ ಪಂತಿಯ ಊಟ ಹಾಕುತ್ತಿದ್ದರು. ಇಂತಹ ಹೀನ ಜಾತಿ, ಸಮಾಜಗಳ ವರ್ತನೆಯಿಂದ, ಮಾಲೇರು ಸಮುದಾಯಕ್ಕೆ ಸಾಮಾಜಿಕ ಗೌರವವಿಲ್ಲದೆ ಅವರಲ್ಲಿ ನಾವು ಕೀಳು-ಹೀನ ಕುಲದವರು, ದುರ್ಬಲರು ಎಂದೆಲ್ಲ ಮಾನಸಿಕವಾಗಿ ಕುಸಿದು ಚೇತರಿಸಿಕೊಳ್ಳದವರಾಗಿದ್ದಾರೆ. ಆದ್ದರಿಂದಲೇ ಅವರು ಸ್ವಾಭಿಮಾನವಿಲ್ಲದೆ, ಆತ್ಮಗೌರವವಿಲ್ಲದೆ ತಮ್ಮ ಶೋಷಕರನ್ನೆ ದೊಡ್ಡವರು ಶ್ರೇಷ್ಟರೆಂದುಕೊಂಡು ತಾವು ಕೀಳು, ದುರ್ಬಲರೆಂದು ತಿಳಿದು ಇಡೀ ಸಮುದಾಯ ಸಾಮಾಜಿಕ ಸ್ಥಾನ ಮಾನದ ಕಡೆ ಚಿಂತಿಸದೆ ೨೦ನೇ ಶತಮಾನದವರೆಗೆ ಹಲವಾರು ಶತಮಾನಗಳನ್ನು ಕಳೆದಿದೆ. ಈಗಲು ಇದು ತಪ್ಪಿಲ್ಲ. ಆದ್ದರಿಂದಲೇ ಇವರು ನಾವು ’ಮಾಲೇರು’ ಎಮದು ಹೇಳಿಕೊಳ್ಳಲಿಕ್ಕೆ ಹಿಂಜರಿಯುತ್ತಾರೆ. ಹಾಗಾಗಿ ಈ ಜನ ತಾವುಹುಟ್ಟಿದ ವಾಸಸ್ಥಳವನ್ನು ಬಿಟ್ಟು ವಿದ್ಯಾವಂತರಾಗಿ, ಉದ್ಯೋಗಸ್ಥರಾಗಿ ಬೇರೆ ಬೇರೆ ಕಡೆ ಸೇರಿಕೊಂಡು ಬ್ರಾಹ್ಮಣರ ನಾನಾ ಜಾತಿ-ಮತಗಳ (ಹೆಬ್ಬಾರ‍್, ರಾವ್, ಸ್ಥಾನಿಕರು, ಭಟ್ಟರು ಇತ್ಯಾದಿ) ಹೆಸರನ್ನು ಹೇಳಿಕೊಂಡು; ಅವರ ಸಂಪ್ರದಾಯ, ಆಚರಣೆಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಅನುಸರಿಸುತ್ತಾ, ಜೀವನ ಮಾಡುತ್ತಿದ್ದಾರೆ. ಇಂತಹ ಹತ್ತಾರು ಕುಟುಂಬಗಳು ಕಾಡು, ಬೆಟ್ಟ, ಗುಡ್ಡ, ಬಯಲುಸೀಮೆಗಳಲ್ಲಿ ಕೆಲವು ಕಡೆ ದಟ್ಟವಾಗಿ, ಕೆಲವು ಕಡೆ ವಿರಳವಾಗಿ ನೆಲೆಸಿವೆ. ನಗರ ಹಳ್ಳಿಗಳ ಕಾಲ, ಪರಿಸರ, ಪರಿಸ್ಥಿತಿಯ ಸಮಯ ಸಂದರ್ಭಗಳು ಬದಲಾವಣೆ ಆದಂತೆ ಹಲವಾರು ದಶಕಗಳ ಹಿಂದೆ ಮಾಲೇರು ಸ್ತ್ರೀಯರನ್ನು ಮೇಲ್ಜಾತಿಯ ಪುರುಷರು ಬಳಸಿಕೊಂಡದ್ದರಿಂದ ಚಂದದ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಇವರಿಗೆ ಮನಸೋತ ಬೇರೆ ಬೇರೆ ಜಾತಿ, ಮತ, ಧರ್ಮದ ಹುಡುಗರು ಅಲ್ಲಿಯ ಕಾಲ, ಪರಿಸರ, ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ಆ ಹುಡುಗಿಯರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ಮುಂದಿನ ಸಂತತಿ ಇದುವರೆಗೂ ಬೆಳೆದು ಬಂದ ಭಾರತೀಯ ಜಾತಿ ಸಮಾಜ ಬೆಚ್ಚುವಂತೆ ಇದು ಪ್ರಯೋಗಿಕವಾಗಿ, ವೈಚಾರಿಕ, ವೈಜ್ಞಾನಿಕವಾದ ಪ್ರಕೃತಿಯ ಜೀವತತ್ವಕ್ಕೆ ಬೇರಾಗಲಿದೆ. ಈ ಎಲ್ಲ ಹಿನ್ನೆಲೆಗಳಿಂದ ಇದೊಂದು ಮಾದರಿ ಸಮುದಾಯವಾಗಲಿದ್ದು; ಇದಕ್ಕೆಲ್ಲ ಮೂಲ ಕಾರಣ ’ಮಾಲೇರು’ ಮಹಿಳೆಯರು. ಇವರು ಜೀವನಾನುಭವವೇ ಒಂದು ಸಂಸ್ಕೃತಿಯಾಗಿ ರೂಪುಗೊಂಡಿದೆ.

ಈ ಮಾಲೇರು ಸಮುದಾಯದ ಉಲ್ಲೇಖ ೧೯೦೧ರ ಮೈಸೂರು ಗೆಜೆಟಿಯರ‍್ ಭಾರತದ ಜನಗಣತಿ ವರದಿಯಲ್ಲೇ ಇದೆ. ಅಲ್ಲಿಂದ ಈ ಜನಾಂಗದ ಬಗ್ಗೆ ಅಧ್ಯಯನ ಮಾಡಿ ಇವರನ್ನು ಪರಿಶಿಷ್ಟ ಪಂಗಡ (ಎಸ್.ಟಿ) ದ ಗುಂಪಿಗೆ ಭಾರತದ ಸಂವಿಧಾನದ ಪ್ರಕಾರ ಸೇರಿಸಲಾಗಿದೆ. ಅಲ್ಲಿಂದ ಈ ಸಮುದಾಯ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡು ವಿದ್ಯಾಭ್ಯಾಸದಲ್ಲಿ ಮತ್ತು ಉದ್ಯೋಗದಲ್ಲಿ ಕಳೆದ ಐವತ್ತು ವರ್ಷದಿಂದ ಬೆಳವಣಿಗೆಯಾಗಿ ನಗರಗಳಲ್ಲಿ ಸೇರಿ ಬದಲಾವಣೆ ಹೊಂದಿದ್ದಾರೆ. ಆದರೆ ಕರ್ನಾಟಕದ ಕೆಲವು ಮಲೆನಾಡು ಪ್ರದೇಶಗಳಲ್ಲಿರುವ ಗ್ರಾಮೀಣ ಜನ ಇನ್ನು ಬ್ರಾಹ್ಮಣರ ಮತ್ತು ಉತ್ತಮ ಜಾತಿಯರ ಹೊಲ, ಮನೆಗಳಲ್ಲಿ, ದೇವಾಲಯಗಳಲ್ಲಿ ಹೊಟ್ಟೆ, ಬಟ್ಟೆಗಾಗಿ ಜೀವನ ಮಾಡುತ್ತಿರುವುದು ಇವತ್ತೀಗೂ ಸಾಕ್ಷಿಯಾಗಿ ಉಳಿದಿದೆ.

ಕರ್ನಾಟಕದಲ್ಲಿ ಈ ಮಾಲೇರು ಸಮುದಾಯ ಹೆಚ್ಚಾಗಿ ವಾಸಮಾಡುವ ಸ್ಥಳಗಳೆಂದರೆ ನಗರ ಪಟ್ಟಣಗಳಿಗಿಂತ ಗ್ರಾಮಗಳೇ ಆಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಜನ ಆರ್ಥಿಕವಾಗಿ ದುರ್ಬಲರಾಗಿದ್ದು, ಸಾಮಾಜಿಕ ಸ್ಥಾನಮಾನಗಳಿಲ್ಲದೆ ಶಿಕ್ಷಣದ ಕೊರತೆಯನ್ನು ತುಂಬಿಕೊಳ್ಳದವರಾಗಿ, ಇನ್ನು ಸಾಮಾಜಿಕ ಶೋಷಣೆಯ ಅಪಮಾಣದಿಂದ ಬಿಡಿಸಿಕೊಳ್ಳದವ-ರಾಗಿದ್ದಾರೆ. ಮಾನಸಿಕ ಹಿಂಸೆಯಿಂದ ಜೀವನ ಮಾಡುತ್ತಿರುವ ಬೆರಳೆಣಿಕೆಯ ಕುಟುಂಬಗಳು ಕೆಲವು ಹಳ್ಳಿಗಳಲ್ಲಿ ಇನ್ನೂ ಇದ್ದಾರೆ. ಅಂತಹ ಹಳ್ಳಿಗಳೇನು ಪಟ್ಟಣಗಳಲ್ಲೂ ಹಲವಾರು ಜನರಿದ್ದಾರೆ. ಒಟ್ಟಾರೆ ಈ ಸಮುದಾಯದ ಜನ ಮತ್ತು ವಾಸಸ್ಥಳಗಳನ್ನು ಹೀಗೆ ಗುರುತಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಹಳ್ಳಿಗಳಾದ ಕುಂಚೆಬೈಲ್, ಕಿಕ್ರೆ, ತೆಕ್ಕೂರು, ನೆಮ್ಮಾರು, ಗಂಡುಗಟ್ಟ, ಕಾವಡಿ, ಉಳುವೆ, ಶೃಂಗೇರಿಗಳಲೆಲ್ಲ ಸುಮಾರು ೬೧ ಮನೆಗಳಿದ್ದು ಅಲ್ಲಿಯ ಗಂಡಸರು, ಹೆಂಗಸರು, ಮಕ್ಕಳೆಲ್ಲ ಸೇರಿ ಸುಮಾರು ೩೯೪ ಜನರಿದ್ದಾರೆ. ಅವರಲ್ಲಿ ಮಹಿಳೆಯರೆ ೧೪೫ ಜನರಿದ್ದಾರೆ.

ಕೊಪ್ಪ ತಾಲ್ಲೂಕಿನಲ್ಲಿ ಸೂರ‍್ಯದೇವಸ್ಥಾನ, ಮಠಗೋಡು, ಬೊಮ್ಮಲಾಪುರ, ತುಂಬಾರೆ, ಸೂರ್ಳಿ ಸೀತಾರಂಪುರ; ಹರಿಹರಪುರ, ಅದ್ದಡ, ಕೊಪ್ಪ, ಹುಲ್ಮಕ್ಕಿ, ಆರೂರು, ಮರಕಡಲೆ, ಜಯಪುರ, ಜೇಡಿಕೆರೆ, ಕೋಣಂಬಿ, ನಾರ್ವೆ, ಬ್ರಹ್ಮನಕೋಡು, ದೂಬಳ, ತೋಟದ ಮನೆ, ಬಿಳಲಕೊಪ್ಪ, ಬಸರಿಕಟ್ಟೆ, ಮೇಗುಂದ, ಕಂಕಳೆ, ಬೆಳ್ಳೂರು, ಕರ್ಕೇಸರ ತಲಮಕ್ಕಿ, ಗಂಡಿಕೆರೆ, ಮಲ್ಲಂದೂರು, ಕುದ್ರೆಗುಮಡಿ, ಸಿದ್ಧರಮಠ, ಕಲ್ಲಾರಸುಳಿ, ಆಗುಂಬೆ, ಕಮ್ಮರಡಿ, ಮತ್ತಿತರ ಹಳ್ಳಿಗಳಿವೆ. ಇಲ್ಲೆಲ್ಲ ಸುಮಾರು ೧೨೫ ಕುಟುಂಬಗಳಿದ್ದು ಅಲ್ಲಿರುವ ಗಂಡಸರು, ಹೆಂಗಸರು, ಮಕ್ಕಳೆಲ್ಲ ಸೇರಿ ೫೨೦ ಜನರಿದ್ದಾರೆ. ಅವರಲ್ಲಿ ಸ್ತ್ರೀಯರೆ ೧೮೫ ಜನರಿದ್ದಾರೆ.

ನರಸಿಂಹರಾಜಪುರ ತಾಲ್ಲೂಕಿನ ಬಾಳೆಹಿತ್ಲು, ಹೋಲೆಕೊಪ್ಪ, ಕಾನೂರು, ಜೋಗಿಮಕ್ಕಿ ಮತ್ತಿತರ ಗ್ರಾಮಗಳಲ್ಲಿ ಎಂಟು ಹತ್ತು ಕುಟುಂಬಗಳಿದ್ದು; ಗಂಡಸರು, ಹೆಂಗಸರು,ಮಕ್ಕಳೆಲ್ಲ ಸೇರಿ ೧೦೦ ಜನರಿದ್ದಾರೆ. ಅವರಲ್ಲಿ ಮಹಿಳೆಯರೇ ೨೨ ಜನರಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಕೆಲವು ಗ್ರಾಮಗಳಾದ ಬಾಳೆಹೊಳೆ, ಹಳುವಳ್ಳಿ, ಕಳಸ, ಲಿಂಗದಹಿತ್ಲು, ಬರಗೋಡು, ಹಂದಿಹಡ್ಲು, ಕೋಣೆಬೈಲು, ಮುನ್ನೂರುಪಾಲು, ಕೆದಲುಗುಡ್ಡೆ, ಹೂವಿನಹಿತ್ಲು, ಹೊರನಾಡು, ಕುದ್ರೆಮುಖ ಈ ಊರುಗಳಲ್ಲಿ ೫೫ ಕುಟುಂಬಗಳಿದ್ದು; ಮಹಿಳೆರು, ಪುರುಷರು, ಮಕ್ಕಳೆಲ್ಲ ಸೇರಿ ೨೩೦ ಜನ ಆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಅವರಲ್ಲಿ ೮೫ ಜನ ಸ್ತ್ರೀಯರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳಾದ ಗುಡ್ಡೆಕೊಪ್ಪ, ಕೋಣಂದೂರು, ದೇವಾಸೆ, ಹುರುಳಿ-ಶಿವಳ್ಳಿ, ತೀರ್ಥಮುತ್ತೂರು, ಆಲ್ಮನೆ, ಅರಳಾಪುರ, ತೀರ್ಥಹಳ್ಳಿ, ಗುಡ್ಡೇಕೊಪ್ಪ, ಹಲಸಿನಹಳ್ಳಿ, ಅರಳಸುರಳಿ, ಮಲ್ಲೇಸರ, ಲಕ್ಕುಡಿಗೆ, ಬಸವಾನಿ, ಕೊಕ್ಕೋಡು, ಸಿಡಿಯ, ಗಡಿಕಲ್ಲು, ಗಿಣಿಯ ಮೇಲುಕೊಪ್ಪ ಈ ಗ್ರಾಮಗಳಲ್ಲಿ ಮಾಲೇರು ಎರಡರಿಂದ ಎಂಟು ಹತ್ತು ಕುಟುಂಬಗಳಿವೆ. ಈ ಊರುಗಳಲ್ಲಿ ಸುಮಾರು ೯೫ ಮನೆಗಳಿದ್ದು; ಸ್ತ್ರೀ ಪುರುಷರು ಮಕ್ಕಳೆಲ್ಲ ಕೂಡಿ ೬೨೦ ಜನ ವಾಸಮಾಡುತ್ತಿದ್ದಾರೆ. ಅವರಲ್ಲಿ ಸ್ತ್ರೀಯರೆ ೨೧೦ ಜನರಿದ್ದಾರೆ.

ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಮಾಲೇರು ವಾಸಮಾಡುತ್ತಿರುವ ಹಳ್ಳಿಗಳೆಂದರೆ ಬಳೇಗೋಡು, ಪುರಪ್ಪೆಮನೆ, ಹೆದ್ದಾರಿಪುರ, ರಿಪ್ಪನ್‌ಪೇಟೆ, ಮುತ್ತುಗತುಂಬ್ರಿ, ಹೊಸನಗರ, ನಾಗರಕುಡಿಗೆ, ಕೀಳಂಬಿ, ಕುದೂರು, ಕಾರಗಡಿ, ಸಾಗರ, ಗೋಳಿಕೊಪ್ಪ, ತಾರಣಬೈಲು, ಹೈತೂರು, ಇಡುವಾಣಿ, ಈ ಹಳ್ಳಿಗಳಲ್ಲಿ ಎರಡು ತಾಲ್ಲೂಕುಗಳಿಂದ ಎಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿದ್ದು ಸುಮಾರು ೧೯೫ ಜನರು ವಾಸವಾಗಿರುವುದನ್ನು ಕಾಣಬಹುದು. ಇವರಲ್ಲಿ ಸ್ತ್ರೀಯರೆ ೭೦ ಜನರಿದ್ದಾರೆ.

ಮಲೆನಾಡು ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಬಾಳೆಗುಂಡಿ, ಮುಲ್ಕಿ, ಕಾಪು, ಉಡುಪಿಯಲ್ಲಿ ೨೦ ಕುಟುಂಬಗಳಿದ್ದು ಇಲ್ಲಿಯ ಜನರಾದ ಮಹಿಳೆಯರು, ಪುರುಷರು ಮತ್ತು ಮಕ್ಕಳೆಲ್ಲ ಕೂಡಿ ೭೦ ಜರಿದ್ದಾರೆ. ಇವರಲ್ಲಿ ೨೫ ಜನ ಮಹಿಳೆಯರಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ಕುಂದಾಪುರ, ಬೆಳ್ತಂಗಡಿ, ಕಾರ್ಕಳ, ಪುತ್ತೂರು, ತಾಲ್ಲೂಕು-ಗಳಲ್ಲಿ ಮಾಲೇರು ಇರುವ ಹಳ್ಳಿಗಳು ತುಂಬಾ ಕಡಿಮೆ. ಆದರೂ ಕೋಟೇಶ್ವರ, ಸಿದ್ದಾಪುರ, ಕೊಲ್ಲೂರು, ಕಮಲಶಿಲೆ, ತೆಂಕನ ಮಕ್ಕಿ, ಕುಂದಪುರ, ಕಲ್ಮಂಜೆ, ಕೆಮ್ಮಣ್ಣುಗುಡ್ಡೆ, ಗುರುವಾಯನ-ಕೆರೆ, ಉಜ್ಜೆ, ಕೆಬ್ಬಿನಾಲೆ, ಕೆಮ್ಮಣ್ಣು ಇಲ್ಲೆಲ್ಲ ೫೫ ಕುಟುಂಬಗಳಿದ್ದು, ಒಟ್ಟು ೨೨೫ ಜನರಲ್ಲಿ ಸ್ತ್ರೀಯರು ಗಂಡಸರು ಮತ್ತು ಮಕ್ಕಳೆಲ್ಲ ಸೇರಿದ್ದಾರೆ. ಅವರಲ್ಲಿ ಬರಿ ಸ್ತ್ರೀಯರೆ ೮೦ ಜನರಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಟ್ಕಳ, ಬಿಜಾಪುರ, ಮುದ್ದೇಬಿಹಾಳ, ಬಾಗಲಕೋಟೆ, ಇಲ್ಕಲ್ಲು, ಬಳ್ಳಾರಿ, ಹೊಸಪೇಟೆ ಮತ್ತು ಕಂಪಲಾಪುರ, ಮಾರುಕೇರಿ, ಹೊಸನಾಡು ಇಂತಹ ಪ್ರದೇಶಗಳಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಮನೆಗಳಿದ್ದು ಒಟ್ಟು ೨೦ ಕುಟುಂಬಗಳಿವೆ. ಈ ಜಿಲ್ಲೆಯಲ್ಲಿ ೨೬ ಜನ ಸ್ತ್ರೀಯರಿದ್ದು ಪುರುಷ ಮತ್ತು ಮಕ್ಕಳು ಸೇರಿ ೭೫ ಜನ ವಾಸವಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಗಳಂತೆ ಇನ್ನೂ ಕಡಿಮೆ ಜನರಿರುವ ಜಿಲ್ಲೆಗಳೆಂದರೆ ಮಂಡ್ಯ, ಚನ್ನಪಟ್ಟಣ, ಗೌರಿಬಿದನೂರು, ಕೋಲಾರ, ಹಾಸನ. ಇಲ್ಲೆಲ್ಲ ಒಟ್ಟು ೨೦ ಕುಟುಂಬಗಳಿದ್ದು, ೬೫ ಜನ ವ್ಯಾಪಾರ, ಉದ್ಯೋಗ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇವರಲ್ಲಿ ೨೫ ಜನ ಹೆಂಗಸರು ಸೇರಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆಗಳಿರುವುದು ಬೆಂಗಳೂರು, ಶಿವಮೊಗ್ಗ ಮತ್ತು ಭದ್ರಾವತಿ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾತ್ರ. ಅದರಲ್ಲೂ ಈ ಮಾಲೇರು ಸಮುದಾಯ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಮಾಡಿಕೊಂಡು ಮತ್ತು ಅದು ಇದು ಅಂತ ಯಾವ ಯಾವುದೋ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿರುವ ಜನ ಹೆಚ್ಚಾಗಿ ಬೆಂಗಳೂರಿನಲ್ಲೆ ಕಂಡುಬರುತ್ತಾರೆ. ಹೊರಗಿನಿಂದ ಇಲ್ಲಿಗೆ ಬಂದವರು ಬಾಡಿಗೆ ಮನೆ ಸಿಗುವುದಿಲ್ಲವೆಂದು ನಾವೂ ಬ್ರಾಹ್ಮಣರೆ ಎಂದುಹೇಳಿಕೊಂಡು ಬಾಡಿಗೆ ಮನೆಯನ್ನು ಪಡೆದು ವಾಸಮಾಡುತ್ತಿದ್ದಾರೆ. ಇಂತಹವರೆಲ್ಲ ಗಮನಕ್ಕೆ ಬಂದವರನ್ನು ಗುರುತಿಸಿ ಹೇಳುವುದಾದರೆ, ಬೆಂಗಳೂರು ನಗರದಲ್ಲೆ ೩೧೦ ಕುಟುಂಬಗಳಿದ್ದು ಸ್ತ್ರೀಪುರುಷರು ಮಕ್ಕಳೆಲ್ಲ ಸೇರಿ ೧೧೬೨ ಜನರಿದ್ದಾರೆ. ಇವರಲ್ಲಿ ಸುಮಾರು ೪೧೫ ಜನ ಮಹಿಳೆಯರಿದ್ದಾರೆ. ಇದೇ ರೀತಿ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿದ್ದು ೩೬೦ ಕ್ಕೂ ಹೆಚ್ಚು ಜನ ತಮ್ಮ ತಮ್ಮ ವೃತ್ತಿ ಮಾಡಿಕೊಂಡು ವಾಸಿಸುತ್ತಿದ್ದಾರೆ. ಅವರಲ್ಲಿ ೧೩೦ ಜನ ಮಹಿಳೆಯರು ನಾನಾ ರೀತಿಯ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಮೈಸೂರು ನಗರದಲ್ಲೆ ೪೫ ಸಂಸಾರಗಳಿದ್ದು ಇಲ್ಲಿರುವ ಜನಗಳನೆಲ್ಲ ಸೇರಿಸಿದರೆ ೧೬೫ಕ್ಕೂ ಹೆಚ್ಚು ಜನರಿದ್ದಾರೆ. ಇವರಲ್ಲಿ ೫೬ ಜನ ಹೆಂಗಸರಿದ್ದಾರೆ. ಹಾಗೆಯೇ ಚಿಕ್ಕಮಗಳೂರು, ಬೀರೂರು, ಕಡೂರು, ಅರಸೀಕೆರೆಯಂತಹ ನಗರ ಪಟ್ಟಣಗಳಲ್ಲಿ ೩೮ ಕುಟುಂಬಗಳ ಮನೆಗಳಿವೆ. ಅಲ್ಲಿ ೪೫ ಜನ ಮಹಿಳೆಯರು ಸೇರಿ ಪುರುಷರು, ಮಕ್ಕಳೆಲ್ಲ ಒಟ್ಟು ೧೩೫ ಜನರು ಜೀವನ ಮಾಡುತ್ತಿದ್ದಾರೆ. ಇವರುಗಳಲ್ಲದೆ ಕರ್ನಾಟಕದ ಈ ಮಾಲೇರು ಸಮುದಾಯದ ಜನ ಭಾರತದ ಬೇರೆ ಬೇರೆ ನಗರಗಳಾದ ದೆಹಲಿ, ಮುಂಬೈ, ಪೂನಾ, ಹೈದರಾಬಾದ್‌ಗಳಲ್ಲಿ ಉದ್ಯೋಗ, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಮಾಡುತ್ತಿರುವ ೩೦ ಕುಟುಂಬಗಳಲ್ಲಿ ಒಟ್ಟು ೭೬ ಜನರು ಮೇಲಿನ ಹೊರರಾಜ್ಯಗಳಲ್ಲಿ ಕರ್ನಾಟಕದ ಮಾಲೇರು ಇದ್ದಾರೆಂದು ಹೇಳಬಹುದು. ಅವರಲ್ಲಿ ೨೫೮ ಮಂದಿ ಮಹಿಳೆರಯರೆ ಹಲವಾರು ವೃತ್ತಿಗಳಲ್ಲಿ ತೊಡಗಿರುವುದು ವಿಶೇಷವಾಗಿದೆ.

ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಕಡೆ ಕೆಲವರು ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದು ಅಲ್ಲೊಂದು ಇಲ್ಲೊಂದು ಕುಟುಂಬಗಳು ವಾಸಮಾಡುತ್ತಿವೆ. ಇಲ್ಲೆಲ್ಲಾ ಇವರು ’ಸ್ಥಾನಿಕರು’ ಎಂದುಹೇಳಿಕೊಂಡು ಬದುಕುತ್ತಿದ್ದಾರೆ. ಈ ಸ್ಥಾನಿಕರು ಎಂಬುವರು ಬ್ರಾಹ್ಮಣ ಸಮುದಾಯದ ಹಲವು ಪಂಗಡಗಳಲ್ಲಿ ಕೊನೆಯವರು. ಆದರೂ ಇವರುಮನೆ, ತೋಟ, ಗದ್ದೆಯಂತಹ ಭೂ ಆಸ್ತಿಯಲ್ಲಿ ಸಂಪಾದನೆಯಲ್ಲಿ ಪ್ರಬಲರು. ಜೊತೆಗೆ ವ್ಯಾಪಾರ,ವ್ಯವಹಾರದಲ್ಲೂ ದೊಡ್ಡವರಾಗಿ ಶ್ರೀಮಂತರರೆನಿಸಿಕೊಂಡು ಪ್ರಸಿದ್ದರಾದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರೆ ಹೆಸರಾಗಿದ್ದವರು. ಬ್ರಾಹ್ಮಣರಲ್ಲಿ ಸ್ಥಾನಿಕರಿಗೆ ಒಳ್ಳೆಯ ಸಾಮಾಜಿಕ ಸ್ಥಾನಮಾನವಿಲ್ಲ. ಆದರೂ ಇವರು ಆರ್ಥಿಕವಾಗಿ ಪ್ರಬಲರಾಗಿದ್ದವರು. ಹಾಗಾಗಿಇವರಿದ್ದ ಜಾಗದಲ್ಲಿ ’ಮಾಲೇರು’ ಸಮುದಾಯವನ್ನು ತುಂಬ ಕೀಳಾಗಿ ಕಾಣುತ್ತಿದ್ದರು. ಅಲ್ಲಿಂದ ವಲಸೆ ಬಂದ ಈ ’ಮಾಲೇರು’ ಜನ ಆ ’ಸ್ಥಾನಿಕರು’ ಹೆಸರಿಂದಲೇ ಕೊಡಗಿನ ಕಡೆ ಇವತ್ತಿಗೂ ಕೆಲವರು ವಾಸವಾಗಿದ್ದಾರೆ. ಇಲ್ಲೆಲ್ಲಾ ೮-೧೦ ಕುಟುಂಬಗಳಿದ್ದು ಇವರಲ್ಲಿ ೩೮ ಜನರಿದ್ದು ೧೫ ಜನ ಮಹಿಳೆಯರಿದ್ದಾರೆ. ಕೊಡಗಿನ ಈ ಪ್ರದೇಶಗಳಲ್ಲಿ ವಾಸವಾಗಿರುವ ಸ್ಥಾನಕರೆ ಮಾಲೇರು ಸಮುದಾಯವಾಗಿದೆ.

ಬೆಂಗಳೂರು, ಮೈಸೂರು ನಗರಗಳ ಕಡೆ ಬಾಡಿಗೆ ಮನೆಗಾಗಿ ಜಾತಿ ಬಗ್ಗೆ ಸುಳ್ಳು ಹೇಳಿದಂತೆ ಮಡಿಕೇರಿಯಲ್ಲೂ ಆಗಿದೆ. ಅದೇ ರೀತಿ ಇತರೆ ಜಿಲ್ಲೆಗಳಾದ ಚಾಮರಾಜನಗರ, ಕನಕಪುರ, ತುಮಕೂರು, ಚಿತ್ರದುರ್ಗ, ರಾಯಚೂರು, ಗುಲ್ಬರ್ಗಾಗಳಲ್ಲಿ ಬೆರಳೆಣಿಕೆಯ ಕುಟುಂಬಗಳಿರಬಹುದು. ಆದರೆ ಗಂಗಾವತಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗಾ ಭಾಗಗಳಲ್ಲಿ ’ಪಾತ್ರದವರು’ ಎಂಬ ವರ್ಗ ಕಂಡುಬರುತ್ತಾರೆ. ಇವರು ’ಲಿಂಗಾಯಿತ’ ಜಾತಿಯಿಂದ ಬಹಿಷ್ಕೃತರಾದವರು ಎಂದು ಹೇಳುತ್ತಾರೆ. ಆ ಭಾಗದ ಜನ. ಈ ಆಧಾರಗಳನ್ನು ಗಮನಿಸಿದರೆ ಉತ್ತಮ ಪ್ರಬಲ ಕೋಮಿನಿಂದ ಬಹಿಷ್ಕೃತರಾದ ಜನ ಬರ‍್ತಾ ಬರ‍್ತಾ ಅವರದೆ ಒಂದು ಜಾತಿ, ಪಂಗಡವಾಗಿ ರೂಪುಗೊಂಡಿರುವುದು ಈ ಅದ್ಯಯನ, ಮಾಹಿತಿಗಳಿಂದ ತಿಳಿದುಬರುತ್ತದೆ. ಇಲ್ಲಿ ಹಲವಾರು ಜಿಲ್ಲೆಗಳ ಕ್ಷೇತ್ರಕಾರ‍್ಯ ಶೋಧನೆಯಿಂದ ಹಲವಾರು ಕುಟುಂಬದ ಜನರು ತಮ್ಮ ಮಾಲೇರು ಜಾತಿಯ ಹೆಸರನ್ನು ಬ್ರಾಹ್ಮಣರೆಂದು ಸುಳ್ಳುಹೇಳಿಕೊಂಡು, ಅವರ ಸಂಪ್ರದಾಯವನ್ನೆ ಅನುಸರಿಸುತ್ತಾ ಡೋಂಗಿ ಜೀವನಮಾಡುತ್ತಿರುವ ಹಲವಾರು ಕುಟುಂಬಗಳು ಬೆಳಕಿಗೆ ಬಂದಿವೆ. ಇವರೆಲ್ಲ ಸುಳ್ಳು ಜಾತಿಯ ಹೇಳಿಕೆಯಿಂದ ಉತ್ತಮ ಜಾತಿಯವರೊಡನೆ ಸಂಪರ್ಕ ಹೊಂದಿ ಸಾಮಾಜಿಕವಾದ ಸ್ಥಾನಮಾನವನ್ನು ಸಮಾನವಾಗಿ ಗುರುತಿಸಿಕೊಂಡು ಖಾಸಗಿ ಕ್ಷೇತ್ರಗಳಲ್ಲಿ ಆರ್ಥೀಕವಾಗಿ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಕೆಲವರು ಮುಂದುವರೆದಿರುವುದು ದಟ್ಟವಾಗಿದೆ. ಆದರೆ ಇದು ಅವರ ಸ್ವಾರ್ಥ, ಕ್ಷಣಿಕ ಸಮಾಧಾನದ ಪರಿಹಾರವೆ ಹೊರತು, ಭವಿಷ್ಯದ ಶಾಶ್ವತ ಪರಿಹಾರವಲ್ಲ. ಇದೇ ಈ ಸಮುದಾಯದವರ ಮೀಸಲಾತಿಗೆ ಬಂದಿರುವ ಕುತ್ತು.

ಮಾಲೇರು ಬ್ರಾಹ್ಮಣರೆಂದು ಅವರ ಸಂಪ್ರದಾಯ, ಆಚರಣೆಗಳನ್ನು ಬಳಸಿಕೊಂಡು ಜೀವನ ಮಾಡುತ್ತಿರುವುದರಿಂದ; ಅವರ ಸಾಮಾಜಿಕ, ಆರ್ಥಿಕ ಬೆಳವಣಿಗೆಯನ್ನು ಗಮನಿಸಿದ ಬ್ರಾಹ್ಮಣ ಮತ್ತಿತರ ಉತ್ತಮ ಜಾತಿಯ ಮನುವಾದಿ ಅಧಿಕಾರಿಗಳು ಈ ಮಾಲೇರು ಜನ ಸುಳ್ಳು, ಬದಲಾವಣೆ, ಬೆಳವಣಿಗೆಗಳನ್ನೆ ಆಧಾರವಾಗಿಟ್ಟುಕೊಂಡು ಅವರ ವಿರುದ್ಧವಾಗಿ, ಆಡಳಿತಾತ್ಮಕವಾಗಿ ಸರ್ಕಾರ ಕೊಡುವ ಮೀಸಲಾತಿಯನ್ನೆ ನಾಶಗೊಳಿಸುವ ತಂತ್ರ ಹೂಡಿದ್ದಾರೆ. ಬೂದಿ ಮುಚ್ಚಿದ ಕೆಂಡದ ಹಾಗೆ ಅವರ ತಂತ್ರ ಪ್ರಯೋಗ ಮಾಡುತ್ತಿರುವುದು ಜನಗಳ ಮಾತಿನಿಂದ ತಿಳಿಯುತ್ತದೆ. ಇಷ್ಟೆಲ್ಲ ಆದರೂ ಕರ್ನಾಟಕದ ಮಾಲೇರು ಸಮುದಾಯದ ಜನ ಒಟ್ಟು ೪೧೯೮ ಜನ ಕಂಡುಬಂದರೆ; ಅವರಲ್ಲೆ ೧೫೬೦ ಜನ ಮಹಿಳೆಯರಿರುವುದು ಸ್ಪಷ್ಟವಾಯಿತು. ಇವರಿಂದಲೇ ಈ ಸಮುದಾಯದ ಸೃಷ್ಟಿ ಮತ್ತು ಬೆಳವಣಿಗೆಯಾಗಿರುವುದು ಕೂಡ ಅಷ್ಟೆ ಸತ್ಯವಾಗಿದೆ. ಹಾಗಾಗಿ ಇವರು ನಡೆಸಿಕೊಂಡು ಬಂದ ಮಿಶ್ರ ಸಂಪ್ರದಾಯ ಆಚರಣೆ, ರೂಢಿಗಳೇ ಮಾಲೇರು ಸಂಸ್ಕೃತಿಯಾಗಿ ರೂಪುಗೊಂಡಿರುವುದನ್ನು ನಾವು ಕಾಣಬಹುದಾಗಿದೆ. ಮಾಲೇರು ಸಮುದಾಯದವರ ಭಾಷೆ, ವೃತ್ತಿ, ವೇಷ, ಕುಟುಂಬ, ಜೀವನ ಪದ್ಧತಿ, ಆಚರಣೆಗಳು

ಭಾಷೆ

ಮಾಲೇರು ಸಮುದಾಯದ ಈ ಜನರಿಗೆ ಅವರದೇ ಆದ ಭಾಷೆ ಇಲ್ಲ. ಇವರು ಯಾವ ಯಾವ ಪ್ರದೇಶದಲ್ಲಿ, ಯಾವ ಬ್ರಾಹ್ಮಣ ಸಮುದಾಯದವರ ಮನೆಗಳಲ್ಲಿ ಹುಟ್ಟಿ, ಬೆಳೆದು, ತಿರಸ್ಕಾರದಿಂದ ಹೊರದೊಡಲ್ಪಟ್ಟಿರುವ ಹೆಣ್ಣುಮಕ್ಕಳು ಕಡಿಮೆ ಪ್ರಮಾಣದಲ್ಲಿ ಗಂಡುಮಕ್ಕಳು, ಇವರು ಆಯಾ ಪ್ರದೇಶದ ಉತ್ತಮ ಜಾತಿಮತದವರ ಮನೆಯಲ್ಲಿ ರೂಢಿಯಲ್ಲಿದ್ದ ಭಾಷೆಯನ್ನೆ ಮಾತನಾಡುತ್ತಾರೆ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಬೀರೂರು, ಕಡೂರು, ಅರಸೀಕೆರೆ, ಚಿಕ್ಕಮಗಳೂರು ಈ ಪ್ರದೇಶಗಳ ಸುತ್ತಮುತ್ತಲಿನ ಪ್ರಾದೇಶಿಕವಾದ ಪ್ರಧಾನ ಭಾಷೆ ಕನ್ನಡ. ಇದರ ಜೊತೆಗೆ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಟ್ಟಿಗೆಹಾರ, ಕುದುರೆಮುಖ, ಆಗುಂಬೆ ಈ ಪ್ರದೇಶಗಳಲ್ಲಿ ತುಳು ಬಳಕೆಯಲ್ಲಿದೆ. ಈ ಪ್ರದೇಶಗಳ ಜನ ತುಳು, ಕನ್ನಡ ಎರಡು ಭಾಷೆಗಳನ್ನು ಸಾಮಾನ್ಯವಾಗಿ ಮಾತನಾಡುತ್ತಾರೆ.

ಈ ಭಾಗಗಳಲ್ಲಿ ಮಾತನಾಡುವಂತೆ ಕೊಪ್ಪ, ಶೃಂಗೇರಿ, ಸಾಗರ, ತೀರ್ಥಹಳ್ಳಿ, ನರಸಿಂಹರಾಜಪುರ ಭಾಗಗಳಲ್ಲೂ ಕೂಡ ಕೆಲವರು ಕನ್ನಡ ಮಿಶ್ರಿತ ತುಳು ಭಾಷೆಯನ್ನು ಮಾತನಾಡುತ್ತಾರೆ. ಏಕೆಂದರೆ ದಿನಬಳಕೆ ಮಾತು ಕನ್ನಡವಾದರು ತುಳು ಬಳಕೆಯಲ್ಲಿದೆ. ಅಂತಹ ಒಂದೆರಡು ವಾಕ್ಯಗಳನ್ನು ಉಲ್ಲೇಖಿಸುವುದಾದರೆ;

ಅ)   ದಾನೆ ಇರನಾ ವಣಸಾಂಡ

ಆ)   ಶಾಲೆಗೆ ವೋದು ಬರ್ಪರ (ಶಾಲೆಗೆ ಹೋಗಿ ಬಂದಿರೊ)

ಇ)   ತೋಟದ ಕೆಲಸ ಆಂಡು (ತೋಟದ ಕೆಲಸ ಆಯ್ತು)

ಇಂತಹ ವಾಕ್ಯಗಳು ದಿನನಿತ್ಯ ಬಳಸುವ ಮಾತುಗಳಾಗಿವೆ. ಈ ಭಾಷೆಯ ಜೊತೆಗೆ ಇಲ್ಲಿಯ ಜನ ’ಹವ್ಯಕ ಕನ್ನಡವನ್ನು’ ಮಾತನಾಡುತ್ತಾರೆ. ಈ ಭಾಷೆಯನ್ನು ಮಾತನಾಡುವವರು ಹವ್ಯಕ ಬ್ರಾಹ್ಮಣರು. ಈ ಭಾಷೆಯ ವಿಶೇಷವೇನೆಂದರೆ ಹಳಗನ್ನಡ-ಹೊಸಗನ್ನಡ ಮಿಶ್ರಿತ ಆಡುನುಡಿ. ಇದನ್ನು ಬ್ರಾಹ್ಮಣರ ಜೊತೆಯಲ್ಲೆ ಕೂಲಿನಾಲಿ ಮಾಡಿಕೊಂಡಿದ್ದ ’ಮಾಲೇರು’ ಸಮುದಾಯ ತಮ್ಮ ವ್ಯವಹಾರಿಕ ಸಂಬಂಧದಿಂದ ಅವರ ಭಾಷೆಯನ್ನು ಇವರು ರೂಢಿಸಿಕೊಂಡು ದಿನನಿತ್ಯ ಬಳಸುತ್ತಾರೆ. ಅಂತಹ ಮಾತುಗಳನ್ನು ದಿನನಿತ್ಯ ಕುಟುಂಬದಲ್ಲಿ ಹೇಗೆ ಬಳಕೆ ಆಗುತ್ತವೆ ಎಂಬುದಕ್ಕೆ ಕೆಲವು ತುಣಕುಗಳು.

೧)   ಅಪ್ಪಿ ಅಂಗಳದಲ್ಲಿ ಆಡಾಡ(ಕಂದ ಅಂಗಳದಲ್ಲಿ ಆಡಬೇಡ ಒಳಗೆ ಬಂದು ಆಡು)

೨)   ಇವತ್ತು ಎಮ್ಮನಲಿ ಹಾಲಿಲ್ಲೆ ಹಂಗಾಗಿ ಕಾಫಿ ಮಾಡಿಲ್ಲೆ (ಇವತ್ತು ನಮ್ಮ ಮನೆಯಲ್ಲಿ ಹಾಲಿಲ್ಲ. ಹಾಗಾಗಿ ನಮ್ಮಲ್ಲಿ ಕಾಫಿ ಮಾಡಿಲ್ಲ)

೩)   ಕೂಸೆ ಇವತ್ತುನಿಂಗಳ ಸ್ಕೂಲಿಗೆ ರಜವಾಡ ಅದಕ್‌ಎಕ ನೀನು ಇವತ್ತೂ ಹೋಗಡ (ಇವತ್ತು ನಿಮ್ಮ ಸ್ಕೂಲಿಗೆ ರವಂತೆ ಅದಕ್ಕೆ ನೀನು ಸ್ಕೂಲಿಗೆ ಹೋಗಬೇಡ)

ಇಂತಹ ಆಡುನುಡಿಗಳನ್ನು ಕಲಿತ ಈ ಸಮುದಾಯ ಅವರವರ ಪ್ರಾದೇಶಿಕ ಭಿನ್ನತೆಗೆ ಅನುಗುಣವಾಗಿ ಭಿನ್ನ ಜನಸಮುದಾಯದ ಭಾಷೆಗಳನ್ನು ಆಯಾ ಜನ ಮತ್ತು ಭಾಷೆಗಳ ಸಂಪರ್ಕದಿಂದ ಕಲಿತಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಾದ ಬಿಜಾಪುರ, ಮುದ್ದೇಬಿಹಾಳ, ಬಾಗಲ್ಕೋಟೆ, ಇಲ್ಕಲ್ಲುಗಳಂತಹ ಪ್ರದೇಶಗಳು ಮಹಾರಾಷ್ಟ್ರದ ಆಜುಬಾಜಿ ನಲ್ಲಿರುವುದರಿಂದ; ಮಹಾರಾಷ್ಟ್ರದ ಮರಾಠಿ ಭಾಷೆಯ ಪ್ರಭಾವವು ಆಗಿ, ಮರಾಠಿ ಮಿಶ್ರಿತ ಕನ್ನಡ ಬಳಕೆಯಲ್ಲಿದೆ.

ಹಾಸನ, ಶಿವಮೊಗ್ಗ, ಮೈಸೂರು, ಬೆಂಗಳೂರು ಮತ್ತಿತರ ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸಮಾಡುವ ಜನ ಆಯಾ ನಗರ, ಪಟ್ಟಣಗಳ ಪ್ರಾದೇಶಿಕ ಭಾಷೆಯನ್ನು ಈ ಜನ ಮಾತನಾಡುವುದು ಸಾಮಾನ್ಯವಾಗಿದೆ. ಹಾಗಾಗಿ ಈ ಎಲ್ಲ ಕಾರಣಗಳ ಹಿನ್ನೆಲೆಯನ್ನು  ಗಮನಿಸಿದರೆ ಮಾಲೇರು ಸಮುದಾಯಕ್ಕೆ ತನ್ನದೆ ಆದ ಭಾಷೆ ಇರುವ ಯಾವ ಆಧಾರ ಸೂಚನೆಗಳು ಇಲ್ಲದಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ವೃತ್ತಿ, ವೇಷ

ಮಾಲೇರು ಸಮುದಾಯದಲ್ಲಿರುವ ಹೆಣ್ಣು-ಗಂಡು ಇಬ್ಬರೂ ಹೊಲ, ಗದ್ದೆತೋಟಗಳಲ್ಲಿ ಕೃಷಿಯಾಧಾರಿತವಾಗಿ ಕೂಲಿ ಕೆಲಸವನ್ನೇ ಪ್ರಧಾನವಾಗಿ ಅವಲಂಬಿಸಿರುತ್ತಾರೆ. ಅದರಲ್ಲೂ ಹೆಣ್ಣು ಬ್ರಾಹ್ಮಣರ ಮನೆಯ ಸಹಾಯಕ ಸೇವೆ ಮತ್ತು ದೇವಾಲಯದ ಸೇವಾ ಕಾರ್ಯಕ್ಕಾಗಿ ಮೀಸಲಾಗಿದ್ದಳು. ಆರಂಭದಿಂದಲೂ ಇವಳ ವೃತಿಊರ ದೇವಾಲಯಗಳ ಕಸ ಗುಡಿಸಿ-ಕೊಂಡು ಸಾರಿಸಿ ರಂಗೋಲಿ ಇಟ್ಟು ಊರು-ಕಾಡುಗಳಲ್ಲಿ ಅಲೆದು ಹೂವು ಬಿಡಿಸಿಕೊಂಡು ಬಂದು, ಅವುಗಳನ್ನು ಕಟ್ಟಿ ದೇವರ ಪೂಜೆಗೆ ಅಣಿಗೊಳಿಸುವುದು. ಪೂಜಾರಿಯ ಕೆಲಸ ಕಾರ‍್ಯಗಳಲ್ಲಿ ಸಹಾಯಕಳಾಗುವುದು ರೂಢಿಗೆ ಬಂತು. ಈ ಹೆಣ್ಣು ಮಗಳು ಮೂಲತಃ ಬ್ರಾಹ್ಮಣರ ಮನೆಯೊಳಗೆ ಹುಟ್ಟಿ ಬೆಳೆದವಳು. ಇವಳು ಬ್ರಾಹ್ಮಣರ ಸಾಂಪ್ರದಾಯಿಕ ಅಶುಭ ಸೂಚನೆಯಿಂದ ಬಹಿಷ್ಕರಿಸಲ್ಪಟ್ಟು, ತನ್ನ ಕುಟುಂಬ ಸಂಬಂಧವನ್ನೆ ಕಳೆದು ಕೊಂಡು ಕಾಡು ಸೇರುವ, ಬೀದಿಗೆ ಬಂದು ಸಂಚಾರಮಾಡುವ ಈ ಪರಿಸರ ಪರಿಸ್ಥಿತಿಗಳಿಗೆ ತನಗೆ ತಾನೇ ಒಗ್ಗಿಹೋದಳು. ಇದರಿಂದ ಈ ಸಮಾಜ, ಸಂಸ್ಕೃತಿ ಜನಗಳ ಸಂಬಂಧವೆಲ್ಲ ಅರಿವಾಗಿ ಅವನ್ನೆಲ್ಲ ಎದುರಿಸಿ ನಡೆಯಲು ಹೆಣ್ಣು ತುಂಬ ಚಾಲಕಿನ, ಧೈರ‍್ಯವಂತಳಾಗಿ ಶಕ್ತಿಶಾಲಿಯಾದಳು. ಹಾಗಾಗಿ ಇವಳು ಯಾವ ಕೆಲಸಕ್ಕೂ ತನ್ನ ದೇಹ ಮನಸ್ಸುಗಳನ್ನು ಒಗ್ಗಿಸಿಕೊಂಡು ಮುನ್ನೆಡೆದಳು. ಅದರಿಂದ ಯಾರ ಮನೆಯ, ಯಾವ ಕೆಲಸಕ್ಕೂ, ಯಾವ ಪರಿಸರ, ವಾತವರಣಕ್ಕೂ, ತನ್ನ ಜೀವನ ಸಾಗಿಸಲು ಹೊಂದಿಕೊಂಡಳು. ಈ ಎಲ್ಲ ಹಿನ್ನೆಲೆ ಕಾರಣ. ಕೆಲವು ಸಮಸ್ಯೆಗಳ ಪ್ರಭಾವದಿಂದಾಗಿ ಬ್ರಾಹ್ಮಣ ಮತ್ತಿತರ ಮೇಲ್ಜಾತಿಯವರ ಮನೆಯ ಕಸಮುಸುರೆ, ಪಾತ್ರೆ, ಬಟ್ಟೆ, ಅಡಿಗೆಯ ಧವಸ ಧಾನ್ಯಗಳ ಶುಚಿಮಾಡಿ ಅಣಿಗೊಳಿಸಿಕೊಡುವ ಮತ್ತಿತರ ಕೆಲಸಗಳಲ್ಲಿ ಸಹಾಯಕಳಾಗುತ್ತಿದ್ದಳು.

ಹೀಗೆ ಮನೆಕೆಲಸಕ್ಕೆ ಸೀಮಿತವಾಗಿದ್ದ ಈ ಹೆಣ್ಣುಮನೆಯ ಒಳಗೂ ಹೊರಗೂ ದುಡಿಯುತ್ತೇನೆಂದು ಸಿದ್ದಳಾಗಿದ್ದಾಳೆ. ಹೀಗೆ ಕಾಲ ಕಳೆದಂತೆ ಮಾಲೇರ ಮಹಿಳೆಯರು ಮದುವೆಗೆ ಮುನ್ನ ಅವರ ತಂದೆ, ಸಹೋದರರ ಜೊತೆ ಹೊಲ, ಗದ್ದೆ, ತೋಟಗಳಲ್ಲಿ ದುಡಿಯುವುದನ್ನು ಕಲಿತಿದ್ದವರು; ಮದುವೆ ಆದ ಮೇಲೆ ಅವರ ಗಂಡ, ಮಕ್ಕಳ ಜೊತೆಗ ಕೆಲವರು ಮಾತ್ರ ಹಳ್ಳಿಗಳಲ್ಲಿ ಕೃಷಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೃಷಿ ಕೆಲಸ ಕಲಿತ ಮಹಿಳೆಯರು ಸ್ವಂತ ಭೂಮಿ ಇಲ್ಲದವರು, ದುಡಿಮೆ ಇಲ್ಲದವರು ಕೂಲಿಯನ್ನೆ ಆಶ್ರಯಿಸಿದ್ದಾರೆ. ಗ್ರಾಮೀಣ ಪ್ರದೇಶದ ಈ ಮಹಿಳೆಯರು ತೋಟದ ಕೆಲಗಳಾದ ಕಾಫಿ, ಏಲಕ್ಕಿ, ವಿಳ್ಳೆದ ಎಲೆ ಕೊಯ್ಯುವುದು, ಅಡಿಕೆಗೊನೆ ಕತ್ತರಿಸುವುದ, ಅಡಕೆ ಎಡೆಯುವುದ ಮುಂತಾದ ದಿನಗೂಲಿ ಅಥವಾ ಗುತ್ತಿಗೆ ಕೆಲಸ ಮಾಡಿ ಜೀವಿಸುತ್ತಿದ್ದಾರೆ. ಇವಲ್ಲದೆ ಹೊಲಗದ್ದೆಗಳ ನಾಟಿ, ಕಳೆ, ಕೂಯಿಲು, ಒಕ್ಕಣೆ ಕೆಲಸಗಳೆಲ್ಲ ಪ್ರಧಾನ ಕೂಲಿ ಕೆಲಸಗಳೇ ಆಗಿವೆ. ಇವೆಲ್ಲ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನಾಧಾರ ವೃತ್ತಿಗಳಾಗಿವೆ.

ಮಾಲೇರು ಸಮುದಾಯದ ಕೆಲವು ಪುರುಷರು ಮತ್ತುಮಹಿಳೆಯರು ನಾಟಿ ವೈದ್ಯ ಪದ್ಧತಿಯಲ್ಲಿ ನುರಿತವರಾಗಿದ್ದಾರೆ. ಇದು ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮುದಾಯದವರ ಕೆಲವು ಕುಟುಂಬಗಳ ಜೀವನಾಧಾರ ವೃತ್ತಿಯಾಗಿ ಬೆಳೆದು ಬಂದಿದೆ. ಅಂತಹ ಕುಟುಂಬಗಳಲ್ಲಿ ಚಿಕ್ಕಮಗಳೂರಿನ ಬಾಳೆಹಿತ್ಲು ಊರಿನಕಾಮಾಕ್ಷಮ್ಮ ಮತ್ತು ಕೊಪ್ಪತಾಲೂಕಿನ ಬೊಮ್ಮಲಾಪುರದ ಸಾವಿತ್ರಮ್ಮ ನಾಗಮ್ಮ ಇವರುಗಳೆಲ್ಲ ತಮ್ಮ ಸುತ್ತಮುತ್ತಲ ಗ್ರಾಮೀಣ ಜನರ ಕಾಯಿಲೆಗಳಿಗೆ ಔಷಧಿ ನೀಡಿ ಇವರೇ ಪ್ರಾದೇಶಿಕ ನಾಟಿ ವೈದ್ಯರಾಗಿದ್ದರು. ಈ ವೈದ್ಯ ಪದ್ಧತಿಯಲ್ಲೇ ತುಂಬ ಹೆಸರು ಮಾಡಿ ಪ್ರಸಿದ್ಧಿಯಾದವರು. ಹೊನ್ನವರದ ಗಣಪಮ್ಮ (ಗಣಪಿ) ಇವರಿಂದ ನಾಗೇಶ ದೇವಾಡಿಗ ಈ ವೈದ್ಯಪದ್ಧತಿಯನ್ನು ಕಲಿತು ಬೆಳೆಸಿದ್ದಾರ. ಇವರು ಈಗಲೂ ಇದ್ದಾರೆ. ಹಲವಾರು ಜನರಿಗೆ ಔಷಧಿ ಮಾಡಿಕೊಡುವುದನ್ನು ಹೇಳಿಕೊಟ್ಟಿದ್ದಾರೆ. ಇಂತಹ ನಾಟಿವೈದ್ಯರೆಲ್ಲ ಸ್ತ್ರೀಯರ, ಮಕ್ಕಳ, ಪುರುಷರ ಸಾಮಾನ್ಯ ಕಾಯಿಲೆಗಳಿಗೆ ಅಂದರೆ-ಹೆಂಗಸರ ಬಿಳಿಸೆರಗು, ಕಾಮಾಲೆ, ಅರ್ಧತಲೆನೋವು, ಜ್ವರ, ಪಿತ್ತ ಗ್ಯಾಸ್ಟ್ರಿಕ್, ಅಲ್ಸರ‍್, ಅಸ್ತಮ ಮುಂತಾದ ರೋಗಗಳಿಗೆ ಔಷಧಿ ಮಾಡಿಕೊಡುತ್ತಾರೆ.

ನಗರ, ಪಟ್ಟಣ ಪ್ರದೇಶದ ಮಹಿಳೆಯರು ತಮ್ಮ ಕಾಯಂ ಉದ್ಯೋಗದ ಜೊತೆಗೆ ಬಟ್ಟೆ ಹೊಲೆಯುವುದು, ವೈಯರು ಮತ್ತುಉಣ್ಣೆ ದಾರದ ಬ್ಯಾಗುಗಳನ್ನು ಹೆಣೆಯುವುದು, ಚಾಪೆಗಳನ್ನು ಹೆಣೆಯುವುದು ಹೀಗೆ ನಾನಾ ತರದ ಮನೆಯ ಕರಕುಶಲ ಕೆಲಸಗಳನ್ನು ಮಾಡಿಕೊಂಡು ಕುಟುಂಬದ ಖರ್ಚನ್ನೇ ಉಳಿಸಿಕೊಂಡು ತನ್ನ ಸಮಯವನ್ನು ವ್ಯಯಮಾಡದೆ ಸಣ್ಣಪುಟ್ಟ ದುಡಿಮೆಯ ಕೆಲಸಗಳನ್ನು ಮನೆಯಲ್ಲೇ ಮಾಡಿಕೊಂಡು ಸದ್ದಿಲ್ಲದೆ ತನ್ನ ಕುಟುಂಬವನ್ನು ಸಾಗಿಸುತ್ತಾ ನಡೆದಿದ್ದಾರೆ.

ಈ ಸಮುದಾಯದ ಕೆಲವು ಕಲಾವಿದ ಮಹಿಳೆಯರು ಸಿನಿಮಾ, ಧಾರವಾಹಿ, ನಾಟಕ, ಸಂಗೀತ, ನೃತ್ಯಗಳಂತಹ ಕ್ಷೇತ್ರಗಳಲ್ಲಿ, ದೇವದಾಸಿ ಮಹಿಳೆಯರು ಹಿರಿಯ ಕಲಾವಿದರಾಗಿ ದುಡಿದಿದ್ದಾರೆ. ಕೆಲವರು ಬ್ರಾಹ್ಮಣ, ಸಮುದಾಯವೆಂದು ಗುರುತಿಸಿಕೊಂಡು, ಹೆಸರು ಮಾಡಿ ಆಗಿಹೋಗಿದ್ದಾರೆ ಎಂದು ಈ ಸಮುದಾಯದ ಹಿರಿಯ ಮಹಿಳೆಯರು ಹೇಳುತ್ತಾರೆ.

ಬೆಂಗಳೂರಿನ ಮಾಲತಿ ಸರೋಜ ಅವರು ದೇವದಾಸಿ ಮೂಲದ ಮಹಿಳೆ. ಇವರಿಗೆ ತಂದೆಯ ದಾಖಲೆ ಸಿಗದೆ ತಾಯಿಯ ಹೆಸರನ್ನೇ ಇಟ್ಟುಕೊಂಡು ತಾಯಿಯಿಂದ ಗುರುತಿಸಲ್ಪಟ್ಟವ ರಾಗಿದ್ದಾರೆ. ಇವರು ವಿವಾಹವನ್ನು ಆಗದೆ ಚಿತ್ರರಂಗ, ಧಾರವಾಹಿಗಳ ನಟಿಯಾಗಿ ಗುರುತಿಸಿ-ಕೊಂಡು ಉದ್ಯೋಗ ಮಾಡಿಕೊಂಡು ತಾಯಿಯೊಂದಿಗೆ ಜೀವಿಸುತ್ತಿದ್ದಾರೆ. ಕರ್ನಾಟಕದ ಕಲಾವಿದೆ ಬಸರೂರಿನ ದೇವದಾಸಿ ಮಹಿಳೆ ಚಂದ್ರವತಿ ಎಂಬುವವರು ನೃತ್ಯ, ಹಾಡುಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡವರು. ಇವರ ಜೀವನ, ಕಲಾಸಂಸ್ಕೃತಿಯ ಬಗ್ಗೆ ತರಂಗದ ಸಂಪಾದಕರಾಗಿದ್ದ ಸಂತೋಷಕುಮಾರ‍್ ಗುಲ್ವಾಡಿಯವರು ಅಧ್ಯಯನ ಮಾಡಿದ ಬರವಣಿಗೆ ಗಳನ್ನು ಪ್ರಕಟಿಸಿ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ. ಗುಲ್ವಾಡಿಯವರು ಬರೆದ ಚಂದ್ರವತಿಯವರ ಕಲಾ ವಿಚಾರ, ಜೀವನ ಕಥೆ ಕೇಳಿ ಪ್ರಭಾವಿತರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಸಂಗೀತ, ನೃತ್ಯ ಕಲಾವಿದೆ ಚಂದ್ರವತಿಯವರಿಗೆ ತಿಂಗಳ ಮಾಸಾಂತ್ಯ ಹಣ ಬರುವಂತೆ ಸಹಾಯ ಮಾಡಿದ್ದಾರೆ. ಹಾಗಾಗಿ ಇವರನ್ನು ಮಾತಾಮಾತೆಯರೆಂದು ಕರೆದಿದ್ದಾರೆ.

ದೇವದಾಸಿ ಮಹಿಳೆಯರಲ್ಲಿ ಬಸರೂರಿನ ಚಂದ್ರವತಿ, ಗೌರಿ, ರಾಜೀವಿ, ಲಲಿತಾ ಇವರುಗಳೇ ಕೊನೆಯವರು.ಇಂತಹವರಿಂದ ಸೃಷ್ಟಿಗೊಮಡ ಮಾಲೇರು ಸಮುದಾಯದ ಸುಂದರ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡದಂತೆ ಆಯಾ ಪ್ರದೇಶದ ಕುಲಪುರೋಹಿತರು ತಡೆಯೊಡ್ಡುತ್ತಿದ್ದರು. ಇವರು ಮಾಲೇರ ಹಿರಿಯರಿಗೆ ಈ ಸುಂದರ ಹುಡುಗಿಯರನ್ನು ಬೇರೆ ಕಡೆ ಮದುವೆ ಮಾಡಿಕೊಡಬೇಡ ಮನೆ ಲಕ್ಷಣ ಹೋಗುತ್ತೆ. ನೀವು ಸಂಪಾದಿಸಿದ ಪುಣ್ಯ, ಸಂಪತ್ತು, ಶ್ರೀಮಂತಿಕೆಗಳೆಲ್ಲ ಬೇರೆ ಕಡೆ ಹರಿದು ನಾಶವಾಗುತ್ತವೆ. ಆದ್ದರಿಂದ ದೇವರಿಗೆ ಧಾರೆ ಎರಿ ಎಂದು ಹೇಳುತ್ತಿದ್ದರು. ಅವರ ಮಾತನ್ನೇ ಅಂತಿಮ ತೀರ್ಮಾನ, ವೇದವಾಕ್ಯವಾಗಿ ನಂಬುತ್ತಿದ್ದ ಜನರು ತಮ್ಮ ಮಕ್ಕಳನ್ನು ದೇವರಿಗೆ ಧಾರೆ ಎರೆಯುತ್ತಿದ್ದರು. ಅಲ್ಲಿಂದ ಆ ಹೆಣ್ಣು ಮಗಳ ಬಾಳು ದೇವರ ಹೆಸರಿನಲ್ಲಿ ಕುಲಪುರೋಹಿತರಿಗೆ ಅಥವಾ ಊರ ಪ್ರಧಾನ ಒಡೆಯನಿಗೆ ಉಪಪತ್ನಿಯಾಗಿ ಮೈ ಒಪ್ಪಿಸಬೇಕಾಗಿತ್ತು. ಯೌವನದಿಂದ ಮುಪ್ಪಿನವರೆಗೆ ಈ ಹೆಣ್ಣುಮಕ್ಕಳ ಬಾಳು ಬಲಿಪಶುವಾಗುತ್ತಿತ್ತು. ಇವರಿಗೆ ಹುಟ್ಟಿದ ಹೆಣ್ಣು ಮಕ್ಕಳು ಹೂವನ್ನು ಕಟ್ಟಿ ಮಾರಿ ಜೀವನಮಾಡುತ್ತಿದ್ದರು. ಗಂಡು ಮಕ್ಕಳಾದರೆ ಆ ಒಡೆಯನ ಹೊಲಮನೆಯ ಸೇವಕ-ನಾಗಿರುತ್ತಿದ್ದ. ಈ ಮಕ್ಕಳು ಬಾಲ್ಯದಿಂದ ತಾಯಿಯ ಜೊತೆಯಲ್ಲೆ ಬೆಳೆದದ್ದರಿಂದ ತಾಯಿಯ ಕೆಲಸ ದೇವರಿಗೆ ಹೊಲಗಳನ್ನು ಆಯ್ದು ತಂದು ಹಾರಕಟ್ಟಿ ಕೊಡುವುದಾಗಿತ್ತು. ಅವಳ ಜೀವನ ಪದ್ಧತಿ ನಡೆನುಡಿಗಳೆಲ್ಲ ಮಕ್ಕಳಿಗೆ ಎರವಲಾಗಿ ಅವರು ತಮ್ಮ ಜೀವನಕ್ಕೆ ಆದಾಯವಿಲ್ಲದೆ ಕಾಡಲ್ಲಿ ಅಥವಾ ಊರುಗಳಲ್ಲಿ ಅಲೆದು ಹೂವು ಬಿಡಿಸಿತಂದು; ಈಗ ಮಾರುಕಟ್ಟೆಯಲ್ಲಿ ಕೊಂಡುತಂದು ಹಾರಕಟ್ಟಿ ಆದಾಯಕ್ಕಾಗಿ ಮಾರುತ್ತಾರೆ. ಇದು ಇವರ ಜೀವನ ವೃತ್ತಿಯಾಗಿ ಸಾಗುತ್ತಿದೆ. ಈ ವೃತ್ತಿಯಲ್ಲೇ ಮುಂದುವರಿದ ಹೆಣ್ಣುಮಕ್ಕಳು, ಮಹಿಳೆಯರನ್ನು ರಸ್ತೆ ಬದಿ ದಿನನಿತ್ಯ ಹೂ ಕೊಳ್ಳುವಾಗ ಪರಿಚಿತರಾದ ಲಾರಿ, ಕಾರು, ಮತ್ತಿತರ ವಾಹನಗಳ ಚಾಲಕರು, ಮತ್ತಿತರ ಪೋಲಿ ಹುಡುಗರು ಇವರನ್ನು ತಮ್ಮ ದೇಹ ಚಟಕ್ಕೆ ಬಳಸಿಕೊಂಡು ಲೈಂಗಿಕಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ ಈ ಮಹಿಳೆಯರ ವೃತ್ತಿಯೆ ಅವರಿಗೆ ಕುತ್ತಾಗಿ ಪರಿಣಮಿಸಿದೆ.