ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣನ್ನು ವೈಜ್ಞಾನಿಕವಾಗಿ ಮಾಂಜಿಫೆರಾ ಇಂಡಿಕಾ ಎಂದೂ ಸಂಸ್ಕೃತದಲ್ಲಿ ಆಮ್ರಫಲ ಹಾಗೂ ಇಂಗ್ಲೀಷಿನಲ್ಲಿ ಮ್ಯಾಂಗೋ ಎಂದೂ ಕರೆಯುತ್ತಾರೆ. ಹಣ್ಣುಗಳು ಮಾನವನ ಬಾಳಿನ ಸಂಜೀವಿನಿಯಾಗಿದ್ದು ಈ ಹಣ್ಣಿನ ತಿರುಳಿಗೆ ಪ್ರೊಸ್ಟ್ರೇಟ್ ಕ್ಯಾನ್ಸರ್ ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಕುರಿತು ‘ಇಂಡಸ್ಟ್ರಿಯಲ್ ಟಾಕ್ಸಿಕೋಲಜಿ ರಿಸರ್ಚ್ ಸೆಂಟರ್’ (ಐಟಿಆರ್‌ಸಿ) ಸಂಶೋಧಕರು ದೃಢಪಡಿಸಿದ್ದಾರೆ. ಹಣ್ಣುಗಳಿಗೆ ಸಹಜವಾಗಿ ಮತ್ತು ಸ್ವಾಭಾವಿಕವಾಗಿ ಮಾನವನ ಆಹಾರ ವಸ್ತುಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ನೀಡಲಾಗಿದೆ. ನಮ್ಮ ಪೂರ್ವಜರು ಪ್ರಕೃತಿದತ್ತವಾಗಿ ದೊರೆಯುತ್ತಿದ್ದ ಗಡ್ಡೆ, ಗೆಣಸು, ಹಣ್ಣುಹಂಪಲಗಳನ್ನೇ ಆಹಾರವಾಗಿ ಸೇವಿಸುತ್ತಿದ್ದರು. ಹಾಗಾಗಿ ಅಂದಿನಿಂದ ಇಂದಿನವರೆಗೆ ಹಣ್ಣುಗಳಿಗೆ ಅವುಗಳದೇ ಆದ ಹಿರಿಮೆಯ ಸ್ಥಾನವಿದೆ. ಪೂಜೆ – ಪುನಸ್ಕಾರ, ಧಾರ್ಮಿಕ ವಿಧಿ – ವಿಧಾನಗಳಲ್ಲಿ ಪುಷ್ಪಗಳಂತೆ ಫಲಗಳಿಗೂ ಕೂಡ ಅಷ್ಟೇ ಮಹತ್ವವಿರುವುದು ಗೋಚರವಾಗುತ್ತದೆ.

ವಸಂತ ಕಾಲದ ಆರಂಭವಾಯಿತೆಂದರೆ ಸಾಕು ಮಾವು ತನ್ನ ಚಿನ್ನದ ಹೊಳಪು ಹಾಗೂ ಸುಮಧುರ ವಾಸನೆಯ ಮೂಲಕ ಮೈತುಂಬಿಕೊಂಡು ನಿಲ್ಲುತ್ತದೆ. ಇದರ ರಂಗಿಗೆ ಮಾರುಹೋದ ಕೋಗಿಲೆಯು ತನ್ನ ಮಧುರ ಕಂಠದಿಂದ ಇಂಪಾಗಿ ಹಾಡುವ ಮೂಲಕ ಸರ್ವರ ಗಮನವನ್ನೂ ಮಾವಿನತ್ತ ಸೆಳೆಯುವಂತೆ ಮಾಡುತ್ತದೆ. ಮಾವಿನ ಸುಗ್ಗಿ ಆರಂಭವಾಯಿತೆಂದರೆ ಸಾಕು ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಮಾವಿನ ಕಾಯಿ ಚಟ್ನಿ, ಉಪ್ಪಿನಕಾಯಿ, ಮಾವಿನ ಹಣ್ಣಿನ ಸೀಕರಣೆ ಮಾಡಿ ಸವಿಯುವ ಮೂಲಕ ವಸಂತ ಮಾಸವನ್ನು ಉಲ್ಲಾಸದಿಂದ ಕಳೆಯುತ್ತಾರೆ.

ಮಾವಿನ ಹುಟ್ಟೂರು ಭಾರತದ ಪೂರ್ವಕ್ಕೆ ಇರುವ ದೇಶಗಳಾದ ಬರ್ಮಾ, ಅಂಡಮಾನ್ ದ್ವೀಪಗಳು ಹಾಗೂ ಬಂಗಾಳಕೊಲ್ಲಿ ಎಂದು ಹೇಳಬಹುದು. ಮಾವು ನಮ್ಮ ರಾಷ್ಟ್ರದ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಭಾರತದ ಮಾವಿನಹಣ್ಣುಗಳು ರುಚಿಕರವಾಗಿದ್ದು ‘ಎ’ ಮತ್ತು ‘ಸಿ’ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಮಾವಿನ ಹಣ್ಣುಗಳನ್ನು ತಾಜಾ ರೂಪದಲ್ಲಿ ಮತ್ತು ಸಂಸ್ಕರಿಸಿದ ರೂಪದಲ್ಲಿ ಉಪಯೋಗಿಸುತ್ತಾರೆ. ವಿದೇಶದಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ತಾಜಾ ಹಣ್ಣುಗಳು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ.

ಅದರಲ್ಲೂ ಕರ್ನಾಟಕದ ಮಣ್ಣು ಮತ್ತು ಹವಾಗುಣ ಅನೇಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿರುವುದರಿಂದ ಕ್ಷೇತ್ರದ ಅನೇಕ ಉದ್ದಿಮೆದಾರರ ಗಮನವನ್ನು ಸೆಳೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ತೋಟಗಾರಿಕಾ ಬೆಳೆಗಳ ಕೊಯ್ಲೋತ್ತರ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗಿದೆ. ಮಾವು ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಪರದೇಶಗಳಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಮಾವು ಬೆಳೆಗಾರರು ರಫ್ತು ಗುಣಮಟ್ಟದ ಮಾವಿನ ಉತ್ಪಾದನೆಗೆ ಮುಂದಾಗಬೇಕಾಗಿದೆ. ನಮ್ಮ ರಾಜ್ಯದಿಂದ ಹೊರರಾಷ್ಟ್ರಗಳಿಗೆ ಹಣ್ಣುಗಳನ್ನು ರಫ್ತು ಮಾಡಬೇಕಾದರೆ ಅಲ್ಲಿಯ ಅನೇಕ ಗ್ರಾಹಕರು ಸ್ಪಂದಿಸುವಂತೆ ಅವುಗಳ ಗುಣಮಟ್ಟವನ್ನು ಕಾಪಾಡುವಲ್ಲಿ ವಿಶೇಷ ಕ್ರಮಗಳನ್ನು ರೈತರು ಹಾಗೂ ರಫ್ತುದಾರರು ಅನುಸರಿಸಬೇಕಾಗುತ್ತದೆ.

ಸೂಕ್ತ ಮಣ್ಣು

ಮಾವು ವಿವಿಧ ಪ್ರಕಾರದ ಮಣ್ಣುಗಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಮಾವು ತಾಯಿ ಬೇರನ್ನು ಹೊಂದಿದ್ದು ನಾಟಿ ಮಾಡಿದ ನಂತರ ತುಂಬಾ ಆಳದವರೆಗೆ ತನ್ನ ಬೇರನ್ನು ಬಿಡುವ ಸಾಮರ್ಥ್ಯ ಹೊಂದಿದೆ. ಈ ಆಳವು ಸುಮಾರು ೬ ಮೀಟರಗಳಷ್ಟಾಗಬಹುದಾಗಿದೆ. ಆದಾಗ್ಯೂ ಪೋಷಕಾಂಶ ಪಡೆಯುವ ಹೆಚ್ಚಿನ ಬೇರುಗಳು ಭೂಮಿಯ ಮೇಲ್ಪದರಿನ ೨೫೦ ರಿಂದ ೫೦೦ ಮಿ.ಮೀ ಆಳದಲ್ಲಿ ಇರುವದು ಸಾಮಾನ್ಯ ಮಾವನ್ನು ನೀರಾವರಿ ಅಥವಾ ಖುಷ್ಕಿ ಜಮೀನಿನಲ್ಲಿ ಬೆಳೆಯುವುದನ್ನು ಆಧರಿಸಿ, ಅದರ ಪ್ರತಿಕ್ರಿಯೆ ವಿವಿಧ ಪ್ರಕಾರದ ಮಣ್ಣುಗಳಲ್ಲಿ ವಿವಿಧ ವಿಧವಾಗಿರುತ್ತದೆ.

ನೀರಾವರಿಯಲ್ಲಿ ಮಾವು ಬೆಳೆಯಲು ಸೂಕ್ತ ಮಣ್ಣು

ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲಿ ಮಾವು ಬೆಳೆಯಲು ಮಣ್ಣಿನ ಕೆಲವು ಗುಣಗಳನ್ನು ವಿಶ್ಲೇಷಿಸಬೇಕಾಗುವದು.

ಬಸಿಯುವಿಕೆ

ಸ್ವಲ್ಪ ಪ್ರಮಾಣದಲ್ಲಿ ಇಳಿಜಾರು ಹೊಂದಿರುವ ಭೂಮಿ ಇದ್ದರೆ ಮಳೆ ಅಥವಾ ನೀರಾವರಿಯಿಂದ ಬರಬಹುದಾದ ಹೆಚ್ಚಿನ ನೀರನ್ನು ಸೂಕ್ತವಾಗಿ ಹೊರಹಾಕುವ ಮೂಲಕ ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಮಾಡುವ ಗುಣವಿರಬೇಕು. ಹೊಲದಲ್ಲಿ ತಗ್ಗು ಪ್ರದೇಶಗಳು, ಕೊಳ್ಳಗಳಿದ್ದರೆ ಅಂತಹ ಪ್ರದೇಶದಲ್ಲಿ ಮಾವು ನಾಟಿ ಮಾಡಬಾರದು. ಜಮೀನಿನಲ್ಲಿ ಅತಿ ಹೆಚ್ಚು ತೇವಾಂಶವಿದ್ದರೆ ಬೇರುಗಳಿಗೆ ಸೂಕ್ತವಾದ ಗಾಳಿ ಸಿಗದಂತಾಗಿ ಗಿಡಗಳು ಒಣಗಿಹೋಗಬಹುದು. ಇದಲ್ಲದೇ ಭೂಮಿಯಲ್ಲಿ ಕಲ್ಲಿನ ಪದರು ಅಥವಾ ಗಟ್ಟಿ ಪದರು ಇದ್ದರೆ ಅಂತಹ ಮಣ್ಣುಗಳು ಮಾವು ಬೆಳೆಯಲು ಸೂಕ್ತವಲ್ಲ. ಇನ್ನೂ ಅತಿ ಹೆಚ್ಚಿನ ಪ್ರಮಾಣದಲ್ಲಿ ತುಂಬಾ ಸವಕಳಿ ಸಾಧ್ಯತೆ ಇರುವುದರಿಂದ ಅಲ್ಲಿ ಪೋಷಕಾಂಶ ಹಾಗೂ ನೀರಿನ ಲಭ್ಯತೆಯ ತೊಂದರೆಯಿಂದಾಗಿ ಮಾವು ಸರಿಯಾಗಿ ಬೆಳೆಯಲಾರದು.

ಮಣ್ಣಿನ ಆಳ

ನೀರಾವರಿ ಸಹಾಯದಿಂದ ಮಾವು ಬೆಳೆಯುವ ಪ್ರದೇಶದಲ್ಲಿ ಒಂದು ಮೀಟರ ಅಥವಾ ಒಂದು ಮೀಟರಗಿಂತ ಹೆಚ್ಚು ಆಳವಿರುವ ಮಣ್ಣುಗಳು ಸೂಕ್ತ. ಮೇಲಿನ ಒಂದು ಮೀಟರ ಆಳದಲ್ಲಿ ಯಾವುದೇ ರೀತಿಯ ಅಡೆತಡೆಗಳಿರಬಾರದು. ನೀರಾವರಿ ಪದ್ಧತಿಯನ್ನು ಸೂಕ್ತವಾಗಿ ಯೋಜಿಸಿದಾಗ ೭೫೦ ಮಿ.ಮೀ ಆಳವಿರುವ ಪ್ರದೇಶದಲ್ಲಿಯೂ ಮಾವು ಬೆಳೆಯಬಹುದು. ಆದರೆ ಈ ಪ್ರದೇಶದಲ್ಲಿ ಕನಿಷ್ಠ ೭೫೦ ಮಿ.ಮೀ.ವರೆಗೆ ಯಾವುದೇ ರೀತಿಯ ಕಲ್ಲಿನ ಪದರು ಅಥವಾ ಗಟ್ಟಿ ಮಣ್ಣಿನ ಪದರು ಇರಬಾರದು. ಈ ಗಟ್ಟಿಪದರುಗಳ ಮೇಲೆ ನೀರಿನ ಸಂಗ್ರಹವಾಗುತ್ತ ಮುಂದೆ ಜವಳು ತೊಂದರೆಯಾಗಬಹುದು. ಈ ರೀತಿಯ ಗಟ್ಟಿಪದರುಗಳು ನೀರಿನ ಸೂಕ್ತವಾದ ಬಸಿಯುವಿಕೆಯನ್ನು ಬಾಧಿಸುತ್ತವೆ.

ಮಣ್ಣಿನ ಪ್ರಕಾರ

ನೀರಾವರಿಯಲ್ಲಿಯ ಮಾವು ಬೆಳೆಯಲು ಸೂಕ್ತವಾದ ಮಣ್ಣು ಎಂದರೆ ಉಸುಗು ಮಿಶ್ರಿತ ರೇವೆ ಮಣ್ಣು ಅಥವಾ ಕೆಂಪುಗೋಡು ಮಣ್ಣು. ಈ ಮಣ್ಣಿನಲ್ಲಿ ಜೇಡಿಯ ಪ್ರಮಾಣ ೧೫ ರಿಂದ ೨೫ ಪ್ರತಿಶತವಿದ್ದರೆ ತುಂಬಾ ಸೂಕ್ತ. ಉತ್ತಮ ನಿರ್ವಹಣೆ ಮಾಡುವ ಸಾಮರ್ಥ್ಯವಿದ್ದರೆ ೫೦% ಜೇಡಿ ಇರುವ ಮಣ್ಣಿನಲ್ಲಿಯೂ ಮಾವು ಬೆಳೆಯಬಹುದಾಗಿದೆ. ಜೇಡಿ ಪ್ರಮಾಣ ಹೆಚ್ಚಾದಂತೆ ಬಸಿಯುವಿಕೆಯ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು.

ಮಣ್ಣಿನ ರಚನೆ

ಮಣ್ಣಿನ ರಚನೆ ತುಂಬಾ ಅವಶ್ಯಕವಾದ ಗುಣಧರ್ಮವಾಗಿದ್ದು ಸಡಿಲಾದ, ಸಮ ಬಿರುಸಾದ ರಚನೆ ಸೂಕ್ತವಾದದ್ದು, ತುಂಬಾ ಗಟ್ಟಿಯಾದ, ಬಿರುಸಾದ ರಚನೆಗಳಿದ್ದರೆ ಭೂಮಿಯಲ್ಲಿ ನೀರಿನ ಬಸಿಯುವಿಕೆ ಹಾಗೂ ಬೇರುಗಳ ರಚನೆಯಲ್ಲಿ ಅಡ್ಡಿಯುಂಟು ಮಾಡುವುದರಿಂದ ಇಂತಹ ಮಣ್ಣುಗಳು ಸೂಕ್ತವಲ್ಲ. ಯಾವ ಮಣ್ಣುಗಳಲ್ಲಿ ಜೇಡಿಯ ಪ್ರಮಾಣ ಅತಿ ಹೆಚ್ಚಾಗಿರುವುದೋ ಅಂತಹ ಮಣ್ಣುಗಳಲ್ಲಿ ಈ ರೀತಿಯ ರಚನೆಯ ಸಮಸ್ಯೆಗಳಿರುವುದು ಸಾಮಾನ್ಯ.

ನೀರು

ನೀರಾವರಿಯಲ್ಲಿ ಉಪಯೋಗಿಸಬಹುದಾದ ನೀರು ಸಹಿತ ತನ್ನದೇ ಆದ ಅಗಾಧವಾದ ಪ್ರಮಾಣವನ್ನು ಹೊಂದಿರುತ್ತದೆ. ಗಿಡವು ಹೂ ಬಿಡುವ ೨ – ೩ ತಿಂಗಳ ಮುಂಚೆ ನೀರು ಕೊಡದೆ ಮಣ್ಣು ಒಣಗುವಂತೆ ಮಾಡುವುದರಿಂದ ಉತ್ತಮ ಹೂ ಬಿಡುವಿಕೆಯಲ್ಲಿ ಸಹಕಾರಿಯಾಗುವುದು. ಮುಂದೆ ವಸಂತ ಋತುವಿನಲ್ಲಿ ಸೂಕ್ತವಾದ ಬೆಳವಣಿಗೆ ಬಂದು ಮುಂದೆ ಉತ್ತಮ ಹೂ ಬಿಡುವಲ್ಲಿ ಸಹಕಾರಿಯಾಗುವುದು.

ಒಣಬೇಸಾಯದಲ್ಲಿ ಮಾವು ಬೆಳೆಯಲ್ಲಿ ಸೂಕ್ತವಾದ ಮಣ್ಣು

ಹವಾಮಾನದ ವಿವಿಧ ಗುಣಧರ್ಮಗಳ ಆಧಾರದ ಮೇಲೆ ಕೆಲವೊಂದು ಪ್ರದೇಶಗಳಲ್ಲಿ ಮಣ್ಣಿನಿಂದ ಹಾಗೂ ಗಿಡಗಳಿಂದ ಆಗಬಹುದಾದ ತೇವಾಂಶ ನಷ್ಟ ಕಡಿಮೆಯಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಮಣ್ಣು ತೇವಾಂಶವನ್ನು ಬಹಳ ದಿನಗಳವರೆಗೆ ಕಾಯ್ದುಕೊಂಡು ಬರುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದಾಗಿ ಗಿಡಗಳು ಒಣಗದೇ ಇರುವುದಕ್ಕೆ ಸಹಕಾರಿಯಾಗುವುದು. ಸೂಕ್ತವಾದ ಪ್ರಮಾಣದಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣಧರ್ಮ ಹೊಂದಿದ ಮಣ್ಣುಗಳಲ್ಲಿ ಮಾವು ಬೆಳೆಯಲು ಸೂಕ್ತ. ಮಣ್ಣಿನಲ್ಲಿ ಸಂಗ್ರಹವಾಗಿರುವ ತೇವಾಂಶವು ಗಿಡಗಳಿಗೆ ಬೇಸಿಗೆ ಕಾಲದಲ್ಲಿ ಸಿಗುವಂತಿರಬೇಕು. ಈ ಮಣ್ಣುಗಳಲ್ಲಿ ಸುಮಾರು ೧೫ ರಿಂದ ೩೦ ಪ್ರತಿಶತ ಜೇಡಿ ಇರಬೇಕು ಹಾಗೂ ಸುಮಾರು ೬೦೦ ಮಿ.ಮೀ.ನಷ್ಟು ಆಳವಿರಬೇಕು. ಮೇಲೆ ತಿಳಿಸಿದಂತೆ ೩೦ ಪ್ರತಿಶತಕ್ಕಿಂತ ಹೆಚ್ಚು ಹಾಗೂ ೧೫ ಪ್ರತಿಶತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಜೇಡಿಯನ್ನು ಹೊಂದಿರುವ ಮಣ್ಣುಗಳು ಸೂಕ್ತವಲ್ಲ.

ಮಣ್ಣಿನ ಪಿ.ಎಚ್.

ಮಾವಿನ ಉತ್ತಮ ಬೆಳವಣಿಗೆಗೆ ಸೂಕ್ತವಾದ ಪಿ.ಎಚ್. ಎಂದರೆ ಸುಮಾರು ೬ ರಿಂದ ೭.೨. ಯಾವ ಮಣ್ಣುಗಳಲ್ಲಿ ಪಿ.ಎಚ್ ೬ ಕ್ಕಿಂತ ಕಡಿಮೆ ಇರುತ್ತದೆಯೋ ಅಂತಹ ಮಣ್ಣುಗಳಲ್ಲಿ ಲಘು ಪೋಷಕಾಂಶಗಳ ಕೊರತೆಯೊಂದಿಗೆ ರಂಜಕ ಹಾಗೂ ಪೊಟ್ಯಾಶಿಯಂಗಳ ಕೊರತೆ ಕಂಡುಬರುವುದರಿಂದ ಈ ತರಹದ ಮಣ್ಣುಗಳು ಮಾವು ಬೆಳೆಯಲು ಸೂಕ್ತವಲ್ಲ. ಮಾವು ಬೆಳೆಯಲು ಮಣ್ಣಿನಲ್ಲಿ ಕನಿಷ್ಟ ೨೦೦ ಪಿಪಿಎಂ ಕ್ಯಾಲ್ಸಿಯಂ, ೮೦ ರಿಂದ ೨೦೦ ಪಿಪಿಎಂ ಪೊಟ್ಯಾಶಿಯಂ, ಕನಿಷ್ಟ ೨೦ ಪಿಪಿಎಂ ರಂಜಕದ ಪ್ರಮಾಣವಿದ್ದರೆ ಅಂತಹ ಜಮೀನುಗಳು ಸೂಕ್ತವಲ್ಲ.

ಮಣ್ಣಿನ ತಯಾರಿ

ಮಣ್ಣಿನ ತಯಾರಿ ಮಾವು ನಾಟಿಮಾಡಲು ತುಂಬಾ ಆವಶ್ಯಕ. ಸೂಕ್ತವಾಗಿ ಮಣ್ಣಿನ ತಯಾರಿ ಮಾಡುವುದರಿಂದ ಹಲವಾರು ಪ್ರಯೋಜನಗಳು ಉಂಟು. ಅವುಗಳಲ್ಲಿ ಪ್ರಮುಖವಾದವೆಂದರೆ,

೧. ಉತ್ತಮವಾದ ಬೇರುಗಳ ಅಭಿವೃದ್ಧಿ.

೨. ಉತ್ತಮವಾದ ನೀರಿನ ಬಸಿಯುವಿಕೆ / ಇಳಿಯುವಿಕೆ.

೩. ನೀರು ಹರಿದು ಹಾನಿಯಾಗುವ ಪ್ರಮಾಣದಲ್ಲಿ ಇಳಿತ.

೪. ನೀರಾವರಿಯಿಂದ ನೀಡಿದ ನೀರಿನ ಸಮರ್ಪಕ ಉಪಯೋಗ.

೫. ಪೋಷಕಾಂಶಗಳ ಲಭ್ಯತೆ ಹಾಗೂ ಉಪಯೋಗ.

೬. ವಿವಿಧ ರೋಗಗಳ ಹತೋಟಿ.

೭. ಉತ್ತಮ ಗಾತ್ರ ಹಾಗೂ ಗುಣಮಟ್ಟದ ಹಣ್ಣುಗಳು.

೮. ಉತ್ತಮ ಇಳುವರಿ ಹಾಗೂ ಲಾಭ.

ಮಣ್ಣು ತಯಾರಿಕೆಯ ಹಂತಗಳು

ಮಣ್ಣುಗಳ ಆಯ್ಕೆಯಿಂದ ಹಿಡಿದು ಅವುಗಳ ತಯಾರಿಕೆಯಲ್ಲಿಯ ಪ್ರಮುಖ ಹಂತಗಳೆಂದರೆ,

  • ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣಧರ್ಮಗಳ ಪರೀಕ್ಷೆ.
  • ಒಂದೆರಡು ಸಲ ಆಳವಾಗಿ ಉಳುಮೆ ಮಾಡುವುದು.
  • ತದನಂತರ ಸೂಕ್ತವಾಗಿ ರೆಂಟೆ ಹೊಡೆದು ನಾಟಿ ಮಾಡಲು ಗುಂಡಿಗಳನ್ನು ತೆಗೆಯುವದು.
  • ಮಣ್ಣು ಪರೀಕ್ಷೆ ಮಾಡಿಸುವದು. (ಕನಿಷ್ಠ ನಾಟಿಗಿಂತ ೯ ತಿಂಗಳು ಮುಂಚೆ)
  • ಪರೀಕ್ಷೆ ಫಲಿತಾಂಶಗಳ ಆಧಾರದ ಮೇಲೆ ವಿವಿಧ ಪೋಷಕಾಂಶಗಳನ್ನು ಪೂರೈಸುವುದು.
  • ಮಣ್ಣಿನ ಸೂಕ್ತವಾದ ಪ್ರಮಾಣದಲ್ಲಿ ಸಾವಯವ ಗೊಬ್ಬರ ನೀಡುವದು.

ಸೂಕ್ತ ಹವಾಮಾನ

ಮಾವು ವಿವಿಧ ಪ್ರಕಾರದ ಹವಾಮಾನಗಳಲ್ಲಿ ಬೆಳೆಯುವದಾದರೂ ಕೆಲವೊಂದು ಅಂಶಗಳು ತುಂಬಾ ಪ್ರಮುಖವಾದವುಗಳು. ಮಾವು ಬೆಳೆಗೆ ವೈವಿಧ್ಯಮಯವಾದ ಹವಾಮಾನವನ್ನು ತೆಗೆದುಕೊಂಡು ಬೆಳೆಯುವ ಸಾಮರ್ಥ್ಯವಿದೆ. ಮಾವು ತುಂಬಾ ಉಷ್ಣ ಪ್ರದೇಶಗಳಲ್ಲಿ ಹೆಚ್ಚಿನ ಆರ್ದ್ರತೆ ಹಾಗೂ ತಂಪು ವಾತಾವರಣವಿರುವ ಪ್ರದೇಶಗಳಲ್ಲಿ, ಒಣ ಹಾಗೂ ಅರೇಶುಷ್ಕ ಪ್ರದೇಶಗಳಲ್ಲಿಯೂ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಉಷ್ಣತೆ

ಅತಿ ಕಡಿಮೆ ಎಂದರೆ ೫ ಡಿಗ್ರಿ ಸೆಲ್ಸಿಯಸ್ ಅತಿಹೆಚ್ಚು ಎಂದರೆ ೪೬ ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ತಡೆಯುವ ಸಾಮರ್ಥ್ಯವಿರುವ ಮಾವು, ಕಾಯಿ ಕಟ್ಟುವ ಹಂತದಲ್ಲಿ ಉಷ್ಣತೆ ತೀವ್ರ ಕುಸಿದರೆ ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಬಹುದು. ಇನ್ನು ೪೬ ಡಿಗ್ರಿ ಸೆಲ್ಸಿಯಸ್‌ಗಿಂತ ಉಷ್ಣತೆ ಹೆಚ್ಚಾದರೆ ಗಿಡದ ಬೆಳವಣಿಗೆ ಕುಂಟಿತವಾಗಬಹುದು. ಇಂತಹ ಪ್ರಸಂಗಗಳಲ್ಲಿ ಆರ್ದ್ರತೆಯ ಪ್ರಮಾಣವೇನಾದರೂ ಕಡಿಮೆಯಾದರೆ ಬೆಳವಣಿಗೆ ಇನ್ನೂ ಕುಂಟಿತಗೊಳ್ಳುವುದು. ಉತ್ತಮವಾದ ಬೆಳವಣಿಗೆ ಹಾಗೂ ಇಳುವರಿಗೆ ಸೂಕ್ತವಾದ ಉಷ್ಣತೆಯೆಂದರೆ ೨೭ ರಿಂದ ೩೬ ಡಿಗ್ರಿ ಸೆಲ್ಸಿಯಸ್.

ಆರ್ದ್ರತೆ

೫೫ ಪ್ರತಿಶತಗಿಂತ ಕಡಿಮೆ ಆರ್ದ್ರತೆ ಮಾವು ಉತ್ಪಾದನೆಗೆ ಸೂಕ್ತವಾದದ್ದು. ಅತಿ ಕಡಿಮೆ ಆರ್ದ್ರತೆ ಮತ್ತು ಹೆಚ್ಚಿನ ಪ್ರಮಾಣದ ಮಳೆಯು ಬೆಳೆಯ ಬೆಳವಣಿಗೆಗೆ ಸೂಕ್ತವಲ್ಲ.

ಗಾಳಿ

ಮಾವು ಬೆಳೆಯುವ ಪ್ರದೇಶದಲ್ಲಿ ಬೀಸುವ ಗಾಳಿಯೂ ಕೂಡ ಗಿಡದ ಬೆಳವಣಿಗೆ ಹಾಗೂ ಇಳುವರಿಯ ಮೇಲೆ ಪ್ರಭಾವ ಬೀರುವುದು. ಅತಿ ವೇಗದಿಂದ ಗಾಳಿ ಬೀಸುವ ಪ್ರದೇಶವಾಗಿದ್ದರೆ ಕಾಯಿಗಳು ಮಾಗುವ ಮುಂಚೆಯೇ ಉದುರಬಹುದು. ಗಾಳಿಯಿಂದಾಗಬಹುದಾದ ಹಾನಿಯನ್ನು ಕಡಿಮೆ ಮಾಡಲು ಮಾವಿನ ಸುತ್ತಲೂ ಗಾಳಿಯನ್ನು ತಡೆಹಿಡಿಯುವ ಸಾಮರ್ಥ್ಯವಿರುವ ವಿವಿಧ ಪ್ರಕಾರದ ಗಿಡಗಳನ್ನು ನೆಡುವುದರ ಮೂಲಕ ಗಾಳಿಯಿಂದಾಗುವ ಹಾನಿಯನ್ನು ಕಡಿಮೆಗೊಳಿಸಬಹುದಾಗಿದೆ. ಹಣ್ಣು ಹಿಡಿಯುವ ಟೊಂಗೆಗಳನ್ನು ಚಾಟನಿ ಮಾಡುವದು ಬಹಳ ಪ್ರಮುಖವಾದ ಅಂಶ. ಹಣ್ಣು ಹಿಡಿಯದ ಟೊಂಗೆಗಳು ಮುಂದೆ ಒಣಗಿ ಗಾಳಿ ಬಿಟ್ಟಾಗ ಉಳಿದ ಹಣ್ಣುಗಳ ಮೇಲ್ಮೈ ಪರಚುವ ಮುಖಾಂತರ ಹಣ್ಣುಗಳ ಗುಣಮಟ್ಟವನ್ನು ಕಡಿಮೆ ಮಾಡಬಹುದು.

ಸೂಕ್ತ ತಳಿಗಳ ಆಯ್ಕೆ

ಫಲಪ್ರದವಾಗಿ ಹಾಗೂ ಲಾಭದಾಯಕವಾಗಿ ಮಾವು ಬೆಳೆಯಲು ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡುವುದು ತುಂಬಾ ಆವಶ್ಯಕ. ಮಾವಿನಲ್ಲಿ ಹಲವಾರು ತಳಿಗಳಿದ್ದು ಈ ಕೆಳಗೆ ವಿವರಿಸಿದ ಕೆಲವು ತಳಿಗಳು ನಾಟಿ ಮಾಡಲು ಸೂಕ್ತವಾದ ತಳಿಗಳಾಗಿವೆ.

. ಆಪೂಸ್ (ಆಲ್ಫಾನ್ಸೊ/ಬಾದಾಮಿ)

ಮಾವಿನಲ್ಲಿ ಅತ್ಯಂತ ಜನಪ್ರಿಯ ತಳಿಯಾದ ಆಪೂಸ್ ಉತ್ತಮ ಗುಣಮಟ್ಟದ ಹಣ್ಣು ನೀಡುವುದು. ಸಾಮಾನ್ಯ ಗಾತ್ರವನ್ನು ಹೊಂದಿರುವ ಈ ತಳಿಯು ರಫ್ತು ಮಾಡಲೂ ಕೂಡಾ ಸೂಕ್ತವಾಗಿದೆ. ಈ ತಳಿಯನ್ನು ತಾಜಾ ಹಣ್ಣಿಗೆ ಅಥವಾ ವಿವಿಧ ಪ್ರಕಾರದ ಸಂಸ್ಕರಣೆಗಾಗಿ ಉಪಯೋಗಿಸಬಹುದು. ಈ ತಳಿಯನ್ನು ಪ್ರಮುಖವಾಗಿ ಹೆಚ್ಚಿನ ಪ್ರಮಾಣದ ಮಳೆ ಬೀಳುವ ಹಾಗೂ ಆರ್ದ್ರತೆ ಹೊಂದಿದ ಪ್ರದೇಶಗಳಲ್ಲಿ ಫಲಪ್ರದವಾಗಿ ಬೆಳೆಯಬಹುದು.

. ರಸಪುರಿ (ಪೈರಿ/ಕಲಮಿ)

ರಸಪುರಿ ತಳಿಯು ಬೇಗ ಮಾಗುವ ಗುಣಹೊಂದಿದ ತಳಿಯಾಗಿದೆ. ಈ ತಳಿಯ ಹಣ್ಣುಗಳು ನಾರು ರಹಿತ ತಿರುಳನ್ನು ಹೊಂದಿರುವುದರಿಂದ ಹೆಚ್ಚು ಪ್ರಚಲಿತ. ಮಧ್ಯಮ ಗಾತ್ರದ ಹಣ್ಣುಗಳೂ ತುಂಬಾ ರುಚಿಕರ ಹಾಗೂ ರಸಭರಿತವಾಗಿರುತ್ತವೆ.

. ಬೆನೇಶಾನ್ (ಒಂಗನಪಲ್ಲಿ)

ಉತ್ತಮ ಗಾತ್ರ ಹಾಗೂ ಗುಣಮಟ್ಟದ ಹಣ್ಣುಗಳನ್ನು ಹೊಂದಿರುವ ಈ ತಳಿ ಒಣ ಪ್ರದೇಶಗಳಿಗೆ ತುಂಬಾ ಸೂಕ್ತವಾಗಿದೆ. ಈ ತಳಿಯ ಪ್ರಥಮ ದರ್ಜೆಯ ಹಣ್ಣುಗಳು ರಫ್ತು ಮಾಡಲೂ ಕೂಡಾ ಸೂಕ್ತವಾಗಿದೆ.

. ತೋತಾಪುರಿ

ಇದನ್ನು ಬೆಂಗಳೂರು ತಳಿಯೆಂದೂ ಕರೆಯುವುದುಂಟು. ಈ ತಳಿಯು ತಡವಾದ ಇಳುವರಿ ಕೊಡುವ ಗುಣಹೊಂದಿದ್ದು ಉತ್ತಮ ಗಾತ್ರದ ಹಣ್ಣುಗಳನ್ನು ನೀಡುವುದು. ಬೇರೆ ಬೇರೆ ಉತ್ತಮ ತಳಿಗಳಿಗೆ ಹೋಲಿಸಿದರೆ ಹಣ್ಣಿನ ರುಚಿ ಸ್ವಲ್ಪ ಕಡಿಮೆ. ಈ ಹಣ್ಣುಗಳನ್ನು ಹೆಚ್ಚಿನ ಸಮಯದವರೆಗೆ ಕೆಡದಂತೆ ಸಂಗ್ರಹಿಸಬಹುದಾಗಿದೆ. ಒಣ ಪ್ರದೇಶದಲ್ಲಿಯೂ ಈ ತಳಿಯನ್ನು ಬೆಳೆಯಬಹುದಾಗಿದೆ.

. ಮಲಗೋವಾ

ಈ ತಳಿಯ ಹಣ್ಣುಗಳು ಉತ್ತಮ ಗಾತ್ರವನ್ನು ಹೊಂದಿವೆ. ಹಣ್ಣುಗಳ ಗಾತ್ರವು ದೊಡ್ಡದಾಗಿರುತ್ತದೆಯಲ್ಲದೇ ತುಂಬಾ ರುಚಿಕರವಾಗಿರುತ್ತವೆ. ಪ್ರತಿ ಗಿಡದಲ್ಲಿ ಬರಬಹುದಾದ ಹಣ್ಣುಗಳ ಸಂಖ್ಯೆಯನ್ನು ಬೇರೆ ತಳಿಗಳಿಗೆ ಹೋಲಿಸಿದರೆ ಗಿಡದಲ್ಲಿ ಬಿಡಬಹುದಾದ ಒಟ್ಟು ಹಣ್ಣುಗಳ ಸಂಖ್ಯೆ ಕಡಿಮೆ.

. ಮಲ್ಲಿಕಾ

ಇದು ನೀಲಂ ಹಾಗೂ ದಶಹರಿ ತಳಿಗಳಿಂದ ಅಭಿವೃದ್ಧಿಗೊಳಿಸಿದ ತಳಿಯಾಗಿದ್ದು ಉತ್ತಮ ಫಲನೀಡುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿ ವರ್ಷ ಇಳುವರಿ ಕೊಡುವ ಗುಣ ಹೊಂದಿದ್ದು ತುಂಬಾ ರುಚಿಕರವಾದ ಗುಣವನ್ನು ಹೊಂದಿದೆ. ಹಣ್ಣಿನ ಗುಣದಲ್ಲಿ ಯಾವುದೇ ರೀತಿಯ ಬದಲಾವಣೆ ಆಗದಂತೆ ಹೆಚ್ಚು ಕಾಲ ಸಂಗ್ರಹಿಸಿ ಇಡಬಹುದು. ಹಣ್ಣಿನಲ್ಲಿ ನಾರುರಹಿತ ತಿರುಳು ಇರುವುದರಿಂದ ಇದನ್ನು ಜನರು ಇಷ್ಟಪಡುವುದುಂಟು.

. ದಶಹರಿ

ಈ ಹಣ್ಣಿನಲ್ಲಿಯೂ ನಾರುರಹಿತ ತಿರುಳು ಇರುವುದು ಮತ್ತು ರಸಭರಿತವಾದ ಗುಣ ಹೊಂದಿದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ.

. ಅಮ್ರಪಾಲಿ

ದಶಹರಿ ಹಾಗೂ ನೀಲಂಗಳಿಂದ ಅಭಿವೃದ್ಧಿಪಡಿಸಿದ ಈ ತಳಿಯೂ ಸಾಧಾರಣದಿಂದ ಉತ್ತಮ ಇಳುವರಿ ನೀಡುವ ಗುಣ ಹೊಂದಿದೆ. ಈ ತಳಿಯು ಹೆಚ್ಚಿನ ಸಾಂದ್ರತೆಯಲ್ಲಿ ನಾಟಿ ಮಾಡಲು ಸೂಕ್ತವಾಗಿದೆ.

. ಅರ್ಕಾ ಅನಮೋಲ್

ಆಪೂಸು ಹಾಗೂ ಜನಾರ್ಧನ ಪಸಂಗ ತಳಿಗಳಿಂದ ಅಭಿವೃದ್ಧಿ ಪಡಿಸಿದ ಈ ತಳಿಯು ಪ್ರತಿ ವರ್ಷ ಇಳುವರಿ ಕೊಡುವ ಗುಣ ಹೊಂದಿದೆ. ಈ ತಳಿಯ ಹಣ್ಣನ್ನು ಹೆಚ್ಚು ಕಾಲ ಇಡಬಹುದಲ್ಲದೇ ರಫ್ತು ಮಾಡಲು ಸೂಕ್ತವಾಗಿದೆ.

೧೦. ರ್ಕಾ ಪುನೀತ

ಆಪೂಸು ಮತ್ತು ಬಂಗನಪಲ್ಲಿ ತಳಿಗಳಿಂದ ಅಭಿವೃದ್ಧಿಪಡಿಸಿದ ಈ ತಳಿಯು ಪ್ರತಿವರ್ಷ ಇಳುವರಿ ನೀಡುವ ಗುಣಹೊಂದಿದೆ. ಉತ್ತಮ ಇಳುವರಿ ನೀಡುವ ಗುಣ ಹೊಂದಿದೆ. (ಹೆಕ್ಟೇರಿಗೆ ೧೦ ರಿಂದ ೧೧ ಟನ್).

ಉಪ್ಪಿನಕಾಯಿಗೆ ಸೂಕ್ತವಾದ ತಳಿಗಳು :

ಉಪ್ಪಿನಕಾಯಿ ತಯಾರಿಸಲು ತುಂಬಾ ಸೂಕ್ತವಾದ ತಳಿಗಳೆಂದರೆ,

೧. ಅಪ್ಪಿ ಮಿಡಿ, ೨. ಹ್ಯಾಮ್ಲೆಟ್.

ನಾಟಿ ಮಾಡಲು ಸೂಕ್ತ ಸಸಿಗಳ ಆಯ್ಕೆ

ನಾಟಿ ಮಾಡುವ ಆರೋಗ್ಯವಂತವಾದ ಸಸಿಗಳನ್ನು ಆಯ್ಕೆ ಮಾಡಬೇಕು. ಈ ಸಸಿಗಳು ಕನಿಷ್ಠ ಒಂದು ವರ್ಷ ವಯಸ್ಸಿನದಾಗಿರಬೇಕು ಹಾಗೂ ಕಸಿ ಮಾಡಿದ ಜಾಗೆಯಲ್ಲಿ ಉತ್ತಮವಾಗಿ ಬೆಸೆದುಕೊಂಡಿರಬೇಕು. ಹೆಚ್ಚು ವಯಸ್ಸಿನ ಸಸಿಗಳು ಸೂಕ್ತವಲ್ಲ. ಸಾಮಾನ್ಯವಾಗಿ ಮೃದುಕಾಂಡ ಬೆಣೆ ಕಸಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿ ಸಸಿಗಳನ್ನು ಬಳಸುವುದು ಒಂದಡೆಯಾದರೆ, ಮಾವಿನ ಗೊಟ್ಟಗಳನ್ನು (ಬೀಜ) ಕುಣಿಗಳಲ್ಲಿ ಹಾಕಿ, ಬೇರು ಸಸಿಗಳನ್ನು ಬೆಳೆಸಿ ಮುಂದೆ ಫೆಬ್ರುವರಿ ತಿಂಗಳಲ್ಲಿ ಆಯ್ಕೆ ಮಾಡಿದ ತಳಿಯನ್ನು ಉಪಯೋಗಿಸಿ ಕಸಿ ಮಾಡಬೇಕು. ಈ ಪದ್ಧತಿಯಿಂದ ಶೇ.೯೦ – ೯೫ರಷ್ಟು ಸಸಿಗಳು ಯಶಸ್ಸು ಹೊಂದಿ ಮೂರನೇ ವರ್ಷದಿಂದಲೇ ಮಾವಿನ ಫಲ ಪಡೆಯಬಹುದಾಗಿದೆ.

ನಾಟಿ ಮಾಡುವ ಅಂತರ

ಮಾವಿನಲ್ಲಿ ನಾಟಿ ಮಾಡುವ ಅಂತರವು ಪ್ರಮುಖವಾಗಿ ತಳಿ ಹಾಗೂ ಮಣ್ಣಿನ ಗುಣಧರ್ಮದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಅನುಸರಿಸುವ ಅಂತರ ೧೦ಮೀ x ೧೦ಮೀ. ಅಂತರವನ್ನು ಆಧರಿಸಿ ಸಸಿಗಳ ಸಂಖ್ಯೆ ಬದಲಾಗುತ್ತದೆ.

ಗಿಡದಿಂದ ಗಿಡಕ್ಕೆ ಅಂತರ ಸಸಿಗಳ ಸಂಖ್ಯೆ (ಪ್ರತಿ ಹೆಕ್ಟೇರ್ ಪ್ರದೇಶಕ್ಕೆ)
೯ಮೀ x ೯ಮೀ ೧೨೩
೧೦ಮೀ x ೧೦ಮೀ ೧೦೦
೧೨ಮೀ x ೧೨ಮೀ ೬೯

ನಾಟಿ ಮಾಡುವ ಪದ್ಧತಿ

ನಾಟಿ ಮಾಡಬೇಕಾದ ತೋಟದಲ್ಲಿಯೇ ಸಸಿಗಳನ್ನು ಬೆಳೆಸಿ ಅಲ್ಲಿಯೇ ಗೂಟಿ ಮಾಡಲು ಸಾಧ್ಯವಿರದೇ ಹೋದಾಗ ಹೊರಗಿನಿಂದ ಸೂಕ್ತವಾದ ಸಸಿಗಳನ್ನು ಆಯ್ಕೆ ಮಾಡಿ ತರಬೇಕು. ಸಸಿಗಳನ್ನು ತರುವ ಪೂರ್ವದಲ್ಲಿ ತೋಟದಲ್ಲಿ ಗುಂಡಿಗಳನ್ನು ಬೇಸಿಗೆಯಲ್ಲಿಯೇ ಅಗೆದು ಸೂಕ್ತವಾಗಿ ಮಣ್ಣು, ಸಾವಯವ/ಕೊಟ್ಟಿಗೆ ಗೊಬ್ಬರ ಇತ್ಯಾದಿಗಳಿಂದ ತುಂಬಿ ತಯಾರು ಮಾಡಿರಬೇಕು. ಸಸಿಗಳನ್ನು ಹೊಂದಿದ ಬ್ಯಾಗುಗಳನ್ನು ನಾಟಿ ಮಾಡುವುದಕ್ಕೆ ಪೂರ್ವದಲ್ಲಿ ಹರಿದು ತೆಗೆದು, ಯಾವುದೇ ರೀತಿಯಲ್ಲಿ ಸಸಿಯ ನಾಟಿ ಮಾಡಿದ ನಂತರ ಜಮೀನಿನ ಲಂಬಕೋನದಲ್ಲಿ ಇರುವಂತೆ ನೋಡಿಕೊಂಡು ಆಧಾರ ನೀಡಬೇಕು. ನಾಟಿ ಮಾಡಿದ ನಂತರ ನೀರು ಹಾಯಿಸಬೇಕು.

ನಾಟಿ ಮಾಡಲು ಸೂಕ್ತ ಸಮಯ

ಮಾವಿನ ಸಸಿಗಳನ್ನು ನಾಟಿ ಮಾಡಲು ಅತ್ಯಂತ ಸೂಕ್ತವಾದ ಸಮಯವೆಂದರೆ ಜೂನ್ ಹಾಗೂ ಜುಲೈ ತಿಂಗಳುಗಳು. ಜೂನ್‌ನಲ್ಲಿ ಪ್ರಾರಂಭವಾಗುವ ಮಳೆಯೊಂದಿಗೆ ನಾಟಿ ಕಾರ್ಯವನ್ನು ಪ್ರಾರಂಭಿಸಬೇಕು.