ಪೋಷಕಾಂಶಗಳ ನಿರ್ವಹಣೆ

ಉತ್ತಮ ಹಾಗೂ ಗುಣಮಟ್ಟದ ಇಳುವರಿ ಪಡೆಯಬೇಕೆಂದರೆ ಪೋಷಕಾಂಶಗಳ ನಿರ್ವಹಣೆ ತುಂಬಾ ಮಹತ್ವದ ವಿಷಯ. ಪೋಷಕಾಂಶಗಳ ಅವಶ್ಯಕತೆಯು ಗಿಡಗಳ ವಯಸ್ಸಿನ ಮೇಲೆ ಅವಲಂಬಿತವಾಗಿದ್ದು ನಾಟಿ ಮಾಡಿದ ಮೊದಲ ಹತ್ತು ವರ್ಷಗಳಲ್ಲಿ ಹಾಗೂ ನಂತರದ ವರ್ಷಗಳಲ್ಲಿ ಎಷ್ಟು ಪ್ರಮಾಣದಲ್ಲಿ ಪೋಷಕಾಂಶ ನೀಡಬೇಕೆಂದು ಈ ಕೆಳಗೆ ವಿವರಿಸಲಾಗಿದೆ.

ನಾಟಿ ಮಾಡಿದ ಮೊದಲು ಹತ್ತು ವರ್ಷಗಳಲ್ಲಿ ಗಿಡಗಳ ಉತ್ತಮ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪೋಷಕಾಂಶಗಳ ನಿರ್ವಹಣೆ ಮಾಡಬೇಕಾಗುವುದು. ಪ್ರತಿ ಗಿಡಕ್ಕೆ ಸುಮಾರು ೫೦ ಕಿಗ್ರಾಂ ಕೊಟ್ಟಿಗೆ ಗೊಬ್ಬರ, ೭೫ ಗ್ರಾಂ. ಸಾರಜನಕ, ೨೦ ಗ್ರಾಂ. ರಂಜಕ ಹಾಗೂ ೭೦ ಗ್ರಾಂ ಪೊಟ್ಯಾಶ್ ಒದಗಿಸುವ ಯಾವುದೇ ರಸಗೊಬ್ಬರವನ್ನು ಎರಡು ಕಂತುಗಳಲ್ಲಿ (ಜೂನ್ ಹಾಗೂ ಅಕ್ಟೋಬರ್ ತಿಂಗಳಲ್ಲಿ) ಚೆನ್ನಾಗಿ ಮಡಿಗಳನ್ನು ಅಗೆದು ಸಡಿಲಿಸಿ ಹಾಕಬೇಕು.

ಇನ್ನು ಗಿಡಗಳು ೧೦ ವರ್ಷವಾದ ನಂತರದಿಂದ ಪ್ರತಿ ವರ್ಷ ಸುಮಾರು ೭೫೦ ಗ್ರಾಂ ಸಾರಜನಕ, ೨೦೦ ಗ್ರಾಂ ರಂಜಕ ಹಾಗೂ ೭೦೦ ಗ್ರಾಂ ಪೊಟ್ಯಾಶ್ ನೀಡುವ ಗೊಬ್ಬರವನ್ನು ಎರಡು ಕಂತುಗಳಲ್ಲಿ ಜೂನ್ ಹಾಗೂ ಅಕ್ಟೋಬರ್ ತಿಂಗಳುಗಳಲ್ಲಿ ಪೂರೈಸಬೇಕು ಅಥವಾ ಇಳುವರಿಯ ಪ್ರಮಾಣವನ್ನು ಆಧರಿಸಿ ಒಂದು ಟನ್ ಮಾವಿನ ಹಣ್ಣಿನ ಇಳುವರಿ ಪಡೆಯಲು ಕೊಟ್ಟಿಗೆ ಗೊಬ್ಬರದ ಜೊತೆಗೆ ೬.೭ ಕಿ.ಗ್ರಾಂ. ಸಾರಜನಕ, ೧.೭೦ ಕಿ.ಗ್ರಾಂ. ರಂಜಕ ಹಾಗೂ ೭.೩೦ ಕಿ.ಗ್ರಾಂ. ಪೊಟ್ಯಾಶ್ ನೀಡುವ ರಾಸಾಯನಿಕ ಗೊಬ್ಬರಗಳನ್ನು ಮೇಲೆ ಹೇಳಿದಂತೆ ಎರಡು ಕಂತುಗಳಲ್ಲಿ ಗಿಡಕ್ಕೆ ನೀಡಬೇಕು. ಮೊದಲನೇ ಕಂತನ್ನು ಜೂನ್‌ನಲ್ಲಿ ನೀಡಿದರೆ ಎರಡನೇ ಕಂತನ್ನು ಅಕ್ಟೋಬರ್‌ನಲ್ಲಿ ನೀಡಬೇಕು. ಲಘು ಪೋಷಕಾಂಶಗಳೂ ಸಹಿತ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದ್ದು ಇವುಗಳಲ್ಲಿ ಸತುವಿನ ಕೊರತೆಯಾದರೆ ಎಲೆಗಳ ಗಾತ್ರ ಸಣ್ಣದಾಗುವುದು ಮತ್ತು ಬೋರಾನ್ ಕೊರತೆಯಾದರೆ ಎಲೆಯಲ್ಲಿಯ ಆಂತರಿಕ ನರಗಳ ನೆಕ್ರೊಸಿಸ್ ಆಗುವುದು. ಈ ಪೋಷಕಾಂಶಗಳನ್ನು ಸಮರ್ಪಕವಾಗಿ ಪೂರೈಸಲು ಅನುಕ್ರಮವಾಗಿ ೦.೫೦% ರ ಸತುವಿನ ಸಲ್ಫೆಟ್ ಮತ್ತು ೧.೦% ರ ಬೋರಾಕ್ಸ್ ದ್ರಾವಣವನ್ನು ಗಿಡಗಳಿಗೆ ಮೂರು ಸಲ ಹದಿನೈದು ದಿನಗಳ ಅಂತರದಲ್ಲಿ ಜೂನ್ ತಿಂಗಳಿನಲ್ಲಿ ನೀಡಬೇಕು.

ಪೋಷಕಾಂಶಗಳ ಪೂರೈಕೆಗಳನ್ನು ವೈಜ್ಞಾನಿಕವಾಗಿ ಮಾಡಲು ಮಾವಿನ ಗಿಡದ ಎಲೆ ಹಾಗೂ ದೇಟುಗಳ ಮಾದರಿಗಳನ್ನು ಪಡೆದು ಪರೀಕ್ಷಿಸಬೇಕಾಗುವುದು. ಎಲೆ ಹಾಗೂ ದೇಟುಗಳ ಮಾದರಿ ಪಡೆಯುವಾಗ ಹಿಂದಿನ ವರ್ಷ ಹಣ್ಣು ಬಿಡದಂತಹ ಟೊಂಗೆಗಳಿಂದ ಸುಮಾರು ೪ ರಿಂದ ೫ ತಿಂಗಳ ಬೆಳವಣಿಗೆ ಹೊಂದಿದ ಎಲೆಗಳು ಹಾಗೂ ದೇಟುಗಳನ್ನು ಆಯ್ಕೆ ಮಾಡಬೇಕು. ಈ ರೀತಿಯಾಗಿ ವಿಶ್ಲೇಷಿಸಿದ ಎಲೆ ಹಾಗೂ ದೇಟುಗಳಲ್ಲಿ ಈ ಕೆಳಗೆ ನೀಡಿದ ಪೋಷಕಾಂಶಗಳ ಪ್ರಮಾಣವಿರಬೇಕು.

ಪೋಷಕಾಂಶಗಳು

ನಿಗದಿಪಡಿಸಿದ ಪೋಷಕಾಂಶಗಳ ಪ್ರಮಾಣ
ಸಾರಜನಕ (ಶೇ.) ೧.೨೫
ರಂಜಕ (ಶೇ.) ೦.೦೬
ಪೊಟ್ಯಾಶ್ (ಶೇ.) ೦.೫೪
ಕ್ಯಾಲ್ಸಿಯಂ (ಶೇ.) ೧.೭೧
ಮೆಗ್ನೇಶಿಯಂ (ಶೇ.) ೦.೫೦
ಗಂಧಕ (ಶೇ.) ೦.೧೨
ಕಬ್ಬಿಣ (ಮಿ. ಗ್ರಾಂ/ಲೀ.) ೦.೧೭೧
ಮ್ಯಾಂಗನೀಸ್ (ಮಿ. ಗ್ರಾಂ/ಲೀ.) ೦.೦೬೬
ಸತುವು (ಮಿ. ಗ್ರಾಂ/ಲೀ.) ೦.೦೨೫
ತಾಮ್ರ (ಮಿ. ಗ್ರಾಂ/ಲೀ.) ೦.೦೧೨

ತೇವಾಂಶ ನಿರ್ವಹಣೆ

ಗಿಡಗಳ ಸೂಕ್ತ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಮಣ್ಣಿನಲ್ಲಿ ಸರಿಯಾದ ಪ್ರಮಾಣದಲ್ಲಿ ತೇವಾಂಶವನ್ನು ಕಾಪಾಡಿಕೊಂಡು ಬರುವುದು ತುಂಬಾ ಪ್ರಮುಖವಾದ ವಿಚಾರ. ಇದಕ್ಕಾಗಿ ಪ್ರತಿ ವರ್ಷ ಗಿಡಗಳಿಗೆ ನವೆಂಬರ್ – ಡಿಸೆಂಬರ್ ತಿಂಗಳುಗಳಲ್ಲಿ ನೀರು ಒದಗಿಸುವುದನ್ನು ತಡೆಹಿಡಿಯಬೇಕು. ಹೀಗೆ ಮಾಡುವುದರಿಂದ ತೇವಾಂಶದ ಕೊರತೆಯ ಜೊತೆಗೆ ವಾತಾವರಣದಲ್ಲಿಯ ಕಡಿಮೆ ಉಷ್ಣತೆ ಅಂಶಗಳಿಂದ ಮುಂದೆ ಉತ್ತಮ ಹೂವು ಬಿಡುವುದರಲ್ಲಿ ಸಹಕಾರಿಯಾಗುತ್ತದೆ. ಅಕ್ಟೋಬರ್ ತಿಂಗಳಿನ ಅಂತ್ಯದಲ್ಲಿ ಶಿಫಾರಸಿಗೆ ಅನುಗುಣವಾಗಿ ಪೋಷಕಾಂಶಗಳನ್ನು ಗಿಡಗಳಿಗೆ ನೀಡಬೇಕು. ೧೦ ಪಿಪಿಎಂ ಪ್ರಮಾಣದ ಎನ್.ಎ.ಎ. ದ್ರಾವಣವನ್ನು ಗಿಡಗಳಿಗೆ ಎರಡು ಸಲ ಸಿಂಪಡಿಸಬೇಕು. (ಮೊದಲನೆಯದು ಗಿಡದಲ್ಲಿ ಕಾಯಿಗಳು ಬಟಾಣಿ ಕಾಳಿನ ಗಾತ್ರಕ್ಕೆ ತಲುಪಿದಾಗ ಅದಾದ ೨೦ ದಿನಗಳ ನಂತರ) ಗಿಡದಲ್ಲಿ ಸುಮಾರು ಶೇ. ೫೦ ಪ್ರಮಾಣದಲ್ಲಿ ಕಾಯಿಗಳು ಬಟಾಣಿ ಗಾತ್ರವನ್ನು ತಲುಪಿದಾಗ ನೀರು ಕೊಡಲು ಪ್ರಾರಂಬಿಸಿ ಮುಂದೆ ಏಪ್ರಿಲ್ ತಿಂಗಳಿನವರೆಗೆ ಮುಂದುವರೆಸಬೇಕು.

ಪ್ರಮುಖ ಕೀಟಗಳು ಹಾಗೂ ನಿರ್ವಹಣೆ

ಜಿಗಿ ಹುಳು

 • ಈ ಕೀಟವು ಪ್ರಮುಖವಾಗಿ ನವೆಂಬರ್ ತಿಂಗಳಿನಿಂದ ಫೆಬ್ರುವರಿ ತಿಂಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಮರಿ ಮತ್ತು ಪ್ರೌಢ ಕೀಟಗಳು ಹೂವಾಡುವಾಗ ಟೊಂಗೆಯಿಂದ ರಸ ಹೀರಿ ಎಲೆಗಳ ಮೇಲೆ ಅಂಟಾದ ಜಿಗಿ ದ್ರಾವಣ ಸ್ರವಿಸುವವು. ತದನಂತರ ಎಲೆಯ ಮೇಲೆ ಕಪ್ಪಾದ ಬೂಷ್ಟು ಬೆಳೆಯುವುದು. ಈ ಕೀಟದ ಸೂಕ್ತ ನಿರ್ವಹಣೆಗಾಗಿ ನಾಟಿ ಅಂತರ ಬಹುಮುಖ್ಯ.
 • ಮಾವಿನ ಗಿಡಗಳನ್ನು ಶಿಫಾರಸು ಮಾಡಿದ ಅಂತರದಲ್ಲಿ ನಾಟಿ (೯ ಮೀ. X ೯ ಮೀ. ಅಥವಾ ೧೦ ಮೀ. X ೧೦ ಮೀ.) ಮಾಡಬೇಕು.
 • ಜಿಗಿಹುಳು ನಿಯಂತ್ರಣಕ್ಕೆ ೪ ಗ್ರಾಂ ಕಾರ್ಬರಿಲ್ ೫೦ ಡಬ್ಲುಸಿ ಅಥವಾ ೨ ಮಿ.ಲೀ. ಮೆಲಾಥಿಯಾನ್ ೫೦ ಇಸಿ ಅಥವಾ ೧ ಮಿ.ಲೀ. ಮೊನೋಕ್ರೊಟೋಫಾಸ್ ೩೬ ಎಂ.ಎಲ್. ಅಥವಾ ೦.೫ ಮಿ.ಲೀ. ಫಾಸ್ಟಾಮಿಡಾನ್ ೮೦ ಡಬ್ಲ್ಯು. ಎಸ್. ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಮಾವಿನ ಗಿಡಗಳಲ್ಲಿ ಶೇಕಡಾ ೨೫ ರಿಂದ ೫೦ ರಷ್ಟು ಹೂಗಳು ಆದಾಗ ಮತ್ತು ಬಟಾಣಿ ಕಾಳಿನ ಗಾತ್ರದ ಹಣ್ಣುಗಳಿದ್ದಾಗ ಸಿಂಪಡಿಸಬೇಕು.

ನುಸಿ

 • ನುಸಿ ಬಾಧೆಯಿಂದ ಪೂರ್ಣ ಬಲಿತ ಎಲೆಯ ಹರಿತ್ತಿನ ಪ್ರಮಾಣ ಕಡಿಮೆಯಾಗಿ ಮಾಸುವವು. ಇದರ ಬಾಧೆಯಿಂದ ಚಿಗುರು ಎಲೆಯ ಮೇಲೆ ಕೆಂಪಾದ ಮಚ್ಚೆಗಳು ಕಾಣಿಸಿಕೊಳ್ಳುವವು. ಇದಲ್ಲದೇ ಹೂವಾಡುವ ರೆಂಬೆಗಳ ಬೆಳವಣಿಗೆ ಕುಂಠಿತವಾಗಿ ಹೂಗಳು ಅರಳದೆ ಬಾಡುವವು.

ನಿರ್ವಹಣೆ

 • ಬಲಿತ ಹಾಗೂ ಚಿಗುರು ಎಲೆಯ ಮೇಲೆ ನುಸಿಯ ಬಾಧೆ ಕಂಡಾಗ ಕೂಡಲೇ ೩ ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಎಲೆಗಂಟು ಮಸಕ

 • ಎಲೆಗಳ ಕೆಳಭಾಗದಲ್ಲಿ ಕೀಟ ಚುಚ್ಚಿ ತತ್ತಿಗಳನ್ನು ಇಟ್ಟ ನಂತರ ಹೊರಬಂದ ಕೀಟ ಎಲೆಗಳ ಅಂಗಾಂಗಗಳನ್ನು ತಿನ್ನುವುದರಿಂದ ಎಲೆ ಮೇಲೆ ಗಂಟುಗಳಾಗುವವು.

ನಿರ್ವಹಣೆ

 • ಆಗಸ್ಟ್ ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ತಿಂಗಳ ಕೊನೆಯ ಅವಧಿಯಲ್ಲಿ ಗಿಡಗಳಲ್ಲಿಯ ಹೊಸ ಚಿಗುರನ್ನು ಈ ಕೀಟದ ಬಾಧೆಯಿಂದ ರಕ್ಷಿಸಲು ಅಂತರವ್ಯಾಪಿ ಕೀಟನಾಶಕಗಳಾದ ೧.೦ ಮಿ.ಲೀ. ಡೈಮಿಥೋಯೇಟ್ ಅಥವಾ ೦.೫ ಮಿ.ಲೀ. ಪಾಸ್ಫಾಮಿಡಾನ್ ಅಥವಾ ೧.೦೦ ಮಿ.ಲೀ. ಮೊನೋಕ್ರೊಟೊಫಾಸ್ ೩೬ ಎಸ್.ಎಲ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.
 • ಗಿಡದ ಆಲಿ(ಮಡಿ)ಗಳಲ್ಲಿ ಕಳೆಗಳು ಬೆಳೆಯದಂತೆ ನೋಡಿಕೊಳ್ಳಬೇಕು.

ರೆಂಬೆ ಕುಡಿ ಕೊರಕ

 • ಈ ಕೀಟ ಹೊಸ ಚಿಗುರು ರೆಂಬೆಗಳ ಕುಡಿಯಲ್ಲಿ ರಂಧ್ರ ಮಾಡುವುದರಿಂದ ಬೆಳೆ ಕುಡಿ ಬಾಡುವುದು.
 • ಈ ಕೀಟದ ಬಾಧೆ ಸಾಮಾನ್ಯವಾಗಿ ಆಗಸ್ಟ್ – ಸೆಪ್ಟಂಬರ್ ತಿಂಗಳು ಹಾಗೂ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವುದು.

ನಿರ್ವಹಣೆ

 • ಬಾಡಿದ ರೆಂಬೆ ತುದಿಗಳನ್ನು ಕತ್ತರಿಸಿ ನಾಶಪಡಿಸಬೇಕು.
 • ಈ ಕೀಟದ ಹತೋಟಿಗೆ ಪ್ರತಿ ಲೀಟರ ನೀರಿನಲ್ಲಿ ೪ ಗ್ರಾಂ. ಕಾರ್ಬರಿಲ್ ೫೦ ಡಬ್ಲ್ಯೂ.ಸಿ. ಅಥವಾ ೧.೭. ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಮಾವಿನ ಗಿಡಗಳಲ್ಲಿ ಹೊಸ ಚಿಗುರು ಬಿಡುವ ಸಮಯದಲ್ಲಿ ಸಿಂಪಡಿಸುವುದು ಬಹಳ ಸೂಕ್ತ ಮತ್ತು ಈ ಕೀಟದ ಬಾಧೆ ತೀವ್ರತೆ ಹೆಚ್ಚಾಗಿದ್ದಲ್ಲಿ ೧೫ ದಿನಗಳ ಅಂತರದಲ್ಲಿ ಇದೇ ಸಿಂಪಡಣೆಯನ್ನು ಮರುಕೈಗೊಳ್ಳಬೇಕು.

ಹಣ್ಣಿನ ನೊಣ

 • ಈ ಕೀಟದ ಬಾಧೆಯಿಂದ ಹಣ್ಣಿನ ತಿರುಳು ಕಂದು ಬಣ್ಣಕ್ಕೆ ತಿರುಗಿ ಹಣ್ಣು ಕೊಳೆಯುವುದು. ಇದರ ಬಾಧೆ ಎಪ್ರಿಲ್ – ಮೇ ತಿಂಗಳ ಅವಧಿಯಲ್ಲಿ ಕಂಡುಬರುವುದು.

ನಿರ್ವಹಣೆ

 • ಈ ಕೀಟದಿಂದ ಕೊಯ್ಲು ನಂತರದ ಅವಧಿಯಲ್ಲಿ ಕಂಡುಬರುವ ಹಾನಿಯನ್ನು ಕಡಿಮೆಗೊಳಿಸಲು, ಮಾವಿನ ಹಣ್ಣುಗಳು ಬಲಿತಾಗ ೪ ಗ್ರಾಂ ಕಾರ್ಬರಿಲ್ ೫೦ ಡಬ್ಲು.ಪಿ. ಅಥವಾ ೧.೭ ಮಿ.ಲೀ. ಡೈಮಿಥೊಯೇಟ್ ೩೦ ಇ.ಸಿ. ೧೦ ಗ್ರಾಂ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
 • ಎಲ್ಲ ಮಾವು ಬೆಳೆಗಾರರು ಈ ಕೀಟದ ನಿರ್ವಹಣೆಯನ್ನು ಸಾಮೂಹಿಕವಾಗಿ ಕೈಗೊಳ್ಳುವುದು ಅತೀ ಅವಶ್ಯ.

ಮಾವು ಬಾಧಿಸುವ ಪ್ರಮುಖ ರೋಗಗಳು ಹಾಗೂ ಅವುಗಳ ನಿರ್ವಹಣೆ

ಮಾವನ್ನು ಬಾಧಿಸುವ ಪ್ರಮುಖ ರೋಗಗಳೆಂದರೆ,

೧. ಚಿಬ್ಬು ರೋಗ

೨. ಬೂದಿ ರೋಗ

೩. ದುಂಡಾಣು ಎಲೆಚುಕ್ಕೆ ರೋಗ

೪. ಹೂ ಅಂಗಮಾರಿ ರೋಗ

ಚಿಬ್ಬು ರೋಗ

ಚಿಬ್ಬು ರೋಗವು ಮೃದುವಾದ ರೆಂಬೆ, ಎಲೆ, ಹೂಗೊನೆ ಮತ್ತು ಬೆಳವಣಿಗೆಯ ಹಂತದಲ್ಲಿರುವ ಸಣ್ಣ ಹಾಗು ಬಲಿತ ಕಾಯಿಗಳನ್ನು ಬಾಧಿಸುತ್ತದೆ. ರೋಗ ತಗುಲಿದ ಭಾಗದಲ್ಲಿ ಕಂದು ಬಣ್ಣ ಹೊಂದಿದ ಗೋಲಾಕಾರದ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸುತ್ತವೆ. ನಂತರದ ಸಮಯದಲ್ಲಿ ಈ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ದೊಡ್ಡದಾಗುವವು. ರೋಗದ ಭಾದೆ ತೀವ್ರವಾದಾಗ ಗಿಡದಿಂದ ಎಲೆಗಳು ಹಾಗೂ ರೆಂಬೆಗಳು ಉದುರುತ್ತವೆ. ಹೂವಿನ ಗೊನೆಗಳು ಮೊದಲು ಕಪ್ಪು ಬಣ್ಣಕ್ಕೆ ತಿರುಗಿ ನಂತರ ಬಾಡಿದಂತಾಗಿ ಒಣಗಿ ಹೋಗುತ್ತವೆ. ಈ ರೋಗದಿಂದ ಕಾಯಿಗಳ ಮೇಲೆ ಕಪ್ಪುಚುಕ್ಕೆಗಳು ಕಂಡುಬಂದು ಕಾಯಿಗಳ ಗುಣಮಟ್ಟವು ಕಡಿಮೆಯಾಗುವುದು. ರೋಗದ ಸೂಕ್ತ ನಿರ್ವಹಣೆಗೆ ರೋಗ ಪೀಡಿತ ಎಲೆ, ರೆಂಬೆ, ಕಾಯಿಗಳನ್ನು ನಾಶಪಡಿಸುವುದು ಒಂದು ವಿಚಾರವಾದರೆ ರೋಗದ ಲಕ್ಷಣ ಕಂಡುಬಂದಾಗ ಶೇ.೧ ರ ಬೋಡೋ ಮಿಶ್ರಣ ಅಥವಾ ಪ್ರತಿ ಲೀಟರ್ ನೀರಿಗೆ ೧ ಗ್ರಾಂ. ಕಾರ್ಬನ ಡೈಜಿಮ್ ಅಥವಾ ೧ ಗ್ರಾಂ. ಮಿಥೇಲ್ ಥೈಯೋಪನೆಟ್ ಬೆರೆಸಿ ೧೫ ದಿನಗಳ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು.

ಬೂದಿ ರೋಗ

ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಅಂದರೆ ಡಿಸೆಂಬರ ಹಾಗೂ ಜನೆವರಿ ತಿಂಗಳುಗಳಲ್ಲಿ ಕಂಡುಬರುವ ರೋಗವಾಗಿದ್ದು ಗಿಡವು ಹಣ್ಣು ಬಿಡಲು ಪ್ರಾರಂಭಿಸುವ ಹಂತದಲ್ಲಿ ಕಂಡುಬರುವುದು. ಈ ರೋಗದಿಂದ ಬಾಧಿತವಾದ ಗಿಡದಲ್ಲಿ ಎಲೆಗಳು ದೇಟುಗಳು ಕೊಂಬೆಗಳು ಹಾಗೂ ಹೂವಿನ ಗೊನೆಗಳ ಮೇಲೆ ಬಿಳಿ ಅಥವಾ ಬೂದಿ ಬಣ್ಣದ ಹುಡಿಯಂತಹ ಪದಾರ್ಥ ಕಂಡುಬರುವುದು. ಇದರ ಪರಿಣಾಮವಾಗಿ ಬೆಳವಣಿಗೆಯ ಹಂತದಲ್ಲಿರುವ ಸಣ್ಣ ಕಾಯಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗುವುದಲ್ಲದೇ ನಂತರ ಉದುರಿ ಹೋಗುವವು.

ಈ ರೋಗದ ನಿರ್ವಹಣೆಗಾಗಿ ಗಿಡಗಳಲ್ಲಿ ಹೂ ಬಿಡುವ ಪ್ರಕ್ರಿಯೆ ಪ್ರಾರಂಭವಾಗುವುದಕ್ಕಿಂತ ಮೊದಲು ಹೂ ಬಿಟ್ಟಾಗ ಹಾಗೂ ಕಾಯಿ ಕಟ್ಟುವ ಸಂದರ್ಭದಲ್ಲಿ ಅಂದರೆ ಮೂರು ಸಲ ಸುಮಾರು ೧೫ ದಿನಗಳ ಅಂತರದಲ್ಲಿ ೩ ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಅಥವಾ ೧ ಗ್ರಾಂ. ಕಾರ್ಬನ್ ಡೈಜಿಮ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆ, ಹೂ ಮತ್ತು ಕಾಯಿಗಳು ಸರಿಯಾಗಿ ನೆನೆಯುವಂತೆ ಸಿಂಪಡಣೆ ಮಾಡಬೇಕು.

ದುಂಡಾಣು ಎಲೆಚುಕ್ಕೆ ರೋಗ

ದುಂಡಾಣು ಎಲೆ ಚುಕ್ಕೆ ರೋಗದಿಂದ ಪೀಡಿತವಾದ ಗಿಡಗಳ ಎಲೆಗಳ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಂಡು ಬರುತ್ತವೆ. ಈ ಚುಕ್ಕೆಗಳು ತದನಂತರ ಕಂದು ಬಣ್ಣಕ್ಕೆ ತಿರುಗಿ ದೊಡ್ಡ ಮಚ್ಚೆಗಳಂತೆ ಕಾಣುತ್ತವೆ. ಈ ರೀತಿಯ ಕಪ್ಪು ಮಚ್ಚೆಗಳು ಹಣ್ಣಿನ ಮೇಲೆಯು ಕಂಡು ಬರುತ್ತವೆ. ವಾತಾವರಣದಲ್ಲಿ ತೀವ್ರವಾದ ಆರ್ದ್ರತೆ ಮೋಡಕವಿದ ವಾತಾವರಣ ಅಥವಾ ಮೇಲಿಂದ ಮೇಲೆ ತುಂತುರ ಮಳೆಯಾಗುವಂತಹ ಹವಾಮಾನದಲ್ಲಿ ಈ ರೋಗವು ತೀವ್ರವಾಗುವದು.

ಈ ರೋಗದ ಹತೋಟಿಗಾಗಿ ರೋಗದ ಲಕ್ಷಣಗಳು ಕಂಡುಬಂದಾಗ ೦.೨ ಗ್ರಾಂ. ಸ್ಟ್ರೆಪ್ಟೊಮೈಸಿನ್ ಸಲ್ಫೇಟ್ ಜೊತೆಗೆ ೨ ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ೨೫ ದಿನಗಳ ಅಂತರದಲ್ಲಿ ಸುಮಾರು ೩ ಸಿಂಪಡಣೆಗಳನ್ನು ಮಾಡಬೇಕು.

ಹೂ ಅಂಗಮಾರಿ ರೋಗ

 • ಹೂವಿನ ಮೇಲೆ ಕಪ್ಪು ಚಿಹ್ನೆಗಳು ಕಂಡುಬರುತ್ತವೆ. ಈ ರೋಗದ ತೀವ್ರತೆ ಹೆಚ್ಚಾದಾಗ ಇಡೀ ಹೂಗೊನೆ ಕಪ್ಪಾಗಿ ಎಲ್ಲಾ ಹೂಗಳು ಉದುರುತ್ತವೆ.
 • ಇಬ್ಬನಿ ಬಿದ್ದ ಸಂದರ್ಭಗಳಲ್ಲಿ ಹಾಗೂ ಮೋಡ ಮುಸುಕಿದ ವಾತಾವರಣದಲ್ಲಿ ಇದರ ಬಾಧೆಯು ಹೂಗೊನೆಯಲ್ಲಿ ಹೆಚ್ಚಾಗಿ ಕಂಡುಬರುವುದು.

ನಿರ್ವಹಣೆ

 • ಈ ರೋಗದ ನಿರ್ವಹಣೆಗೆ ಪ್ರತಿ ಲೀಟರ್ ನೀರಿನಲ್ಲಿ ೨ ಗ್ರಾಂ. ಮೆಂಕೊಜೆಬ್ ಬೆರೆಸಿ, ಇಬ್ಬನಿ ಬಿದ್ದ ದಿನದಂದು ಹೂ ಗೊನೆಗಳಿಗೆ ಚೆನ್ನಾಗಿ ಸಿಂಪಡಿಸಬೇಕು.

ಹೂ ಗೊಂಚಲಿನ ವಿಕಾರತೆ

 • ಮಾವಿನ ಮೃದುವಾದ ಎಳೆಯ ಕಡ್ಡಿಗಳು ಚಿಕ್ಕ ಚಿಕ್ಕ ಎಲೆಗಳನ್ನು ಹೊಂದಿ ಗುಂಪಾಗಿ ಬೆಳೆದು ವಿಕಾರ ರೂಪವನ್ನು ಪಡೆದುಕೊಳ್ಳುತ್ತವೆ. ಎಲೆಗಳು ಹಾಗೂ ಹೂ ಗೊನೆಗಳು ತಮ್ಮ ಸಾಮಾನ್ಯವಾದ ಬೆಳವಣಿಗೆಯನ್ನು ಹೊಂದದೆ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಬೆಳೆದು ವಿಕಾರ ರೂಪವನ್ನು ಪಡೆಯುತ್ತವೆ. ಈ ರೀತಿಯ ಹೂಗೊನೆಗಳು ಕಾಯಿಗಳನ್ನು ಬಿಡುವುದಿಲ್ಲ.

ನಿರ್ವಹಣೆ

 • ಈ ಬಾಧೆಗೆ ತುತ್ತಾದ ಭಾಗವನ್ನು ಕತ್ತರಿಸಿ, ನಂತರ ಕತ್ತರಿಸಿದ ಭಾಗಕ್ಕೆ ಬೋರ್ಡೊ ಮುಲಾಂ ಹಚ್ಚಬೇಕು.
 • ಶಿಫಾರಸ್ಸು ಮಾಡಿದ ಪ್ರಮಾಣದ ಲಘು ಪೋಷಕಾಂಶಗಳನ್ನು ಸಾವಯವ ಗೊಬ್ಬರದ ಮುಖಾಂತರ ಬಳಕೆ ಮಾಡುವುದು ಬಹಳ ಸೂಕ್ತ.

ಕೊಯ್ಲು ನಂತರದ ರೋಗಗಳು

 • ಕೊಯ್ಲು ಮಾಡಿದ ಹಣ್ಣುಗಳು ಶಿಲೀಂದ್ರ ಮತ್ತು ದುಂಡಾಣುಗಳ ಬಾಧೆಯಿಂದ ಕೊಳೆಯುತ್ತವೆ.

ನಿರ್ವಹಣೆ

 • ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಬೇಕು. ಕೊಯ್ಲು ಮಾಡುವ ಸಂದರ್ಭದಲ್ಲಿ ಹಣ್ಣುಗಳಿಗೆ ಪೆಟ್ಟಾಗದಂತೆ ಅತಿ ಜಾಗ್ರತೆ ವಹಿಸಬೇಕು.
 • ಹಣ್ಣುಗಳನ್ನು ಶೇಖರಿಸಲು ಬಳಸುವ ಗೋದಾಮುಗಳನ್ನು ಸ್ವಚ್ಛವಾಗಿರಿಸಬೇಕು. ಹಣ್ಣುಗಳನ್ನು ಕಡಿಮೆ ಉಷ್ಣಾಂಶ (೧೦ ಸೆ.ಮೀ.) ಹೊಂದಿದ ವಾತಾವರಣದಲ್ಲಿ ಶೇಖರಿಸುವುದರಿಂದ ಈ ರೋಗಾಣುಗಳ ವೃದ್ಧಿಯನ್ನು ಕಡಿಮೆ ಮಾಡಬಹುದು.
 • ಶಿಲೀಂದ್ರ ನಾಶಕ ಕಾರ್ಬನ್ ಡೈಜಿಮ್ ಅಥವಾ ಬೆನೊಮಿಲ್ ಅಥವಾ ಕ್ಲೊರ್‌ಥ್ಯಾಲೊನಿಲ್ ಇತ್ಯಾದಿ ದ್ರಾವಣಗಳಲ್ಲಿ ಅದ್ದಿ ತೆಗೆಯುವುದರಿಂದ ಕೊಳೆಯುವಿಕೆಯಿಂದ ರಕ್ಷಿಸಬಹುದು.

ಕೊಯ್ಲು ಹಾಗೂ ಕೊಯ್ಲೊತ್ತರ ನಿರ್ವಹಣೆ

 • ಹಣ್ಣುಗಳನ್ನು ಕೊಯ್ಲು ಮಾಡಲು ಸಂಪೂರ್ಣವಾಗಿ ಮಾಗಿದ, ಗಟ್ಟಿಯಾದ ಮತ್ತು ಹಳದಿ ಹಾಗೂ ತಿಳಿ ಹಸಿರು ಬಣ್ಣದ ಕಾಯಿಗಳನ್ನು ಆಯ್ಕೆ ಮಾಡಬೇಕು. ಹಣ್ಣುಗಳನ್ನು ದೇಟು ಸಮೇತ ಕೈಯಿಂದ ಬೇರ್ಪಡಿಸಿ, ನಂತರ ಕತ್ತರಿಯಿಂದ ೧ ಸೆಂ.ಮೀ. ಉದ್ದ ದೇಟನ್ನು ಬಿಟ್ಟು ಕತ್ತರಿಸಬೇಕು. ಇದಾದ ಮೇಲೆ ತಕ್ಷಣ ಬಿದಿರಿನ ರಂಧ್ರವನ್ನು ಹೊಂದಿದ ಮಂಚದ ಮೇಲೆ ಕತ್ತರಿಸಿದ ದೇಟು ಕೆಳಗೆ ಮಾಡಿ ಹೊಂದಿಸಬೇಕು. ಇದರಿಂದ ಹಣ್ಣಿನ ಸೊನೆ ಬಸಿದು ಹೋಗುವುದರಿಂದ, ಸೊನೆ ಕಲೆ ರಹಿತ ಹಣ್ಣುಗಳನ್ನು ಪಡೆಯಬಹುದು. ಇಂತಹ ಹಣ್ಣುಗಳು ನೀರಿನಲ್ಲಿ ಹಾಕಿದಾಗ ಮುಳುಗಬೇಕು. (ಕಾಯಿಗಳ ಸಾಂಧ್ರತೆ ೧.೦೧ ನಿಂದ ೧.೦೨ ಇರುವುದು).
 • ಹಣ್ಣಿನ ಒಟ್ಟು ಸಕ್ಕರೆ ಪ್ರಮಾಣ ೮x೧ ಡಿಗ್ರಿ ಬ್ರಿಕ್ಸ್‌ನಷ್ಟಿರಬೇಕು.
 • ಬೆಳಗಿನ ಸಮಯದಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಬೇಕು.
 • ಹಣ್ಣುಗಳನ್ನು ೫ ರಿಂದ ೭ ಸೆಂ.ಮೀ. ಉದ್ದದ ತೊಟ್ಟು ಸಮೇತ ಗಿಡದಿಂದ ಬೇರ‍್ಪಡಿಸಬೇಕು.
 • ಕೊಯ್ಲು ಮಾಡಿದ ನಂತರ ೨೦ ಕಿ.ಗ್ರಾಂ. ಸಾಮರ್ಥ್ಯವಿರುವ ಪ್ಲಾಸ್ಟಿಕ್ ಟ್ರೇಗಳಲ್ಲಿ ಹಣ್ಣುಗಳನ್ನು ಹಾಕಿ ನೆರಳಿನಲ್ಲಿ ಶೇಖರಿಸಬೇಕು.

ರಫ್ತಿಗಾಗಿ ಮಾವಿನ ಹಣ್ಣಿನ ಗುಣಮಟ್ಟದ ಆವಶ್ಯಕತೆಗಳು

 • ನಮ್ಮ ದೇಶದಿಂದ ತಾಜಾ ಮಾವಿನ ಹಣ್ಣುಗಳನ್ನು ಸ್ಪರ್ಧಾತ್ಮಕ ಬೆಲೆಗೆ ಯು.ಎ.ಇ., ಸೌದಿ ಅರೇಬಿಯಾ, ಕುವೈತ್, ಇಂಗ್ಲೆಂಡ್, ನೆದರಲ್ಯಾಂಡ್, ಜರ್ಮನಿ, ಅಮೆರಿಕಾ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.

ಗ್ರಾಹಕರ ಬೇಡಿಕೆ

ತಳಿಗಳು            ಆಲ್ಫಾನ್ಸೋ, ಬೆನೆಶಾನ್ (ಬಂಗನಪಲ್ಲಿ), ಕೇಸರ, ಚೌಸಾ.
ಹಣ್ಣಿನ ಗಾತ್ರ       ೨೦೦ – ೮೦೦ ಗ್ರಾಂ. (ಒಂದೇ ಸಮನಾದ ಹಣ್ಣುಗಳ ಗಾತ್ರ ಅವಶ್ಯ).
ಬಣ್ಣ       ಹಳದಿ ಮಿಶ್ರಿತ ಕೆಂಪು ಬಣ್ಣ, ಹಳದಿ ಅಥವಾ ಕೆಂಪು ಬಣ್ಣದ ಹಣ್ಣುಗಳಿಗೆ ಬಹಳ ಬೇಡಿಕೆ ಇರುವುದು.
ಆಕಾರ   ಅಂಡಾಕೃತಿ.
ಮಾಗುವಿಕೆ         ಸಂಪೂರ್ಣ ಮಾಗಿದ, ಗಟ್ಟಿಯಾದ, ವಿಕಾರ, ಕಲೆ ಮತ್ತು ಗೀರು ರಹಿತ ಹಣ್ಣಾಗಿರಬೇಕು.
ರುಚಿ ಮತ್ತು ರಚನೆ            ನಾರು ಮತ್ತು ಟರಪೆಂಟೈನ್ ವಾಸನೆ ರಹಿತ ಹಾಗೂ ಸುವಾಸನೆಯುಕ್ತ ತಿರುಳು ಹೊಂದಿದ ಹಣ್ಣುಗಳಿರಬೇಕು.