ಹಿಡಿದ ಮಳೆ ಬಿಟ್ಟಿರಲಿಲ್ಲ. ಆದರೂ ಪೇಟೆಗೆ ಹೋಗಿ, ಊರಿಗೆ, ಏನನ್ನಾದರೂ ಒಂದಿಷ್ಟು ನೆನಪಿಗೆ ಕೊಂಡು ಒಯ್ಯಬೇಕು ಎಂದುಕೊಂಡು, ಹೋಟೆಲಿನ ಕೆಳ ಅಂಗಳದಲ್ಲಿ ಉಮಾಪತಿಯವರಿಗಾಗಿ ಕಾದು ನಿಂತಿದ್ದೆ. ಕೀವ್ ನಗರದಿಂದ ಹಿಂದಕ್ಕೆ ಬಂದ ಪ್ರೊಫೆಸರ್ ಮ್ಯಾಥ್ಯೂ ಅವರು ಕಾಣಿಸಿದರು. ಮರುದಿನ ವಿಮಾನದಲ್ಲಿ ನಾವಿಬ್ಬರೂ ಇಂಡಿಯಾಕ್ಕೆ ಹೋಗುವ ಸಹಪ್ರಯಾಣಿಕರು. ‘ಹೇಗಿತ್ತು ನಿಮ್ಮ ನಿಲುಗಡೆ ಕೀವ್‌ವಲ್ಲಿ’ ಎಂದೆ. ಅತ್ಯಂತ ಉತ್ಸಾಹದಿಂದ, ತಾವು ಪಡೆದ ಅನುಭವಗಳನ್ನು ಹೇಳತೊಡಗಿದರು. ಆ ವೇಳೆಗೆ ಉಮಾಪತಿ ಬಂದರು. ಬಸ್ಸು ಹಿಡಿದು ಮಳೆಯಲ್ಲೇ ಊರೊಳಕ್ಕೆ ಬಂದೆವು. ಹತ್ತಾರು ಅಂಗಡಿಗಳನ್ನು ಅಲೆದು, ಬೊಂಬೆ ಮುಂತಾದ್ದನ್ನು ಕೊಂಡು ಒಂದು ಗಂಟೆಗೆ ಹಿಂದಕ್ಕೆ ಬಂದೆವು. ನನ್ನ ದ್ವಿಭಾಷಿ ವೊಲೋಜ ಕಾದಿದ್ದ. ಮೂವರೂ ಅಲ್ಲೇ ರೆಸ್ಟೋರಾಂಟಿನಲ್ಲಿ ಊಟ ಮುಗಿಸಿದೆವು. ಉಮಾಪತಿ, ‘ನನಗೆ ಲೈಬ್ರರಿಯಲ್ಲಿ ಕೆಲಸವಿದೆ; ನೀವು ಹೇಗಿದ್ದರೂ ನಾಳೆ ಹಿಂತಿರುಗುತ್ತೀರಿ. ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದಾಗ ಭೆಟ್ಟಿಯಾಗುತ್ತೇನೆ’ ಎಂದು ಕೈ ಕುಲುಕಿ ಸುರಿಯುವ ಮಳೆಯ ಕೆಳಗೆ ಹೊರಟು ಹೋದರು. ಮರು ದಿನ ಬೆಳಿಗ್ಗೆ ನಾನು ಏರ್‌ಪೋರ್ಟಿಗೆ ಹೊರಡಲು ಟ್ಯಾಕ್ಸಿಗೆ ಗೊತ್ತು ಮಾಡಿರುವುದಾಗಿಯೂ, ಒಂಬತ್ತನೆ ಮಹಡಿಯ ಮುದುಕಿ ಆರು ಗಂಟೆಗೆ ಟ್ಯಾಕ್ಸಿ ತರಿಸಿ, ಆ ಮೊದಲೆ ನನ್ನನ್ನೆಬ್ಬಿಸುತ್ತಾಳೆಂದೂ ವೊಲೋಜ ಹೇಳಿದ.

‘ಪ್ಯಾಲೇಸ್ ಆಫ್ ಕಾಂಗ್ರೆಸ್’ದಲ್ಲಿ ರಾತ್ರಿಯ ‘ಬ್ಯಾಲೆ’ಗೆ ಟಿಕೆಟ್ ಖಚಿತವಾಗಿದೆಯೆ ಎಂದು ಹೋಟೆಲಿನ ಸರ್ವಿಸ್ ಬ್ಯೂರೋದಲ್ಲಿ ವಿಚಾರಿಸಿದೆವು. ‘ಟಿಕೆಟ್ ಖಚಿತವಾಗಬಹುದು; ಈವರೆಗೂ ತರಿಸಲಾಗಿಲ್ಲ; ಐದೂವರೆಗೆ ಬನ್ನಿ ಬಹುಶಃ ತೆಗೆದಿರಿಸಿರುತ್ತೇವೆ’ ಎಂದು ಆಶ್ವಾಸನೆ ದೊರಕಿತು. ‘ಈ ದಿನ ಬ್ಯಾಲೆಗೆ ಹೋದರೆ, ನಮ್ಮ ಮನೆಯಲ್ಲಿ, ನೀವು ಹೊರಡುವ ಹಿಂದಿನ ದಿನದ ಊಟ ತಪ್ಪಿದಂತಾಗುತ್ತದಲ್ಲ; ಆದರೂ, ನಾಲ್ಕು ಗಂಟೆಗೆ ಬಂದು ತಿಂಡಿಯನ್ನಾದರೂ ತಿಂದುಕೊಂಡು ಹೋದರೆ ಸಮಾಧಾನ’ ಎಂದಿದ್ದರು ಮಹಾದೇವಯ್ಯ. ನಾನು, ವೊಲೋಜ ಬಸ್ಸು ಹಿಡಿದು, ಮಳೆಯಲ್ಲಿ ತೊಯ್ಯಿಸಿಕೊಳ್ಳುತ್ತಾ ನಾಲ್ಕೂವರೆಗೆ ಅವರ ಮನೆಗೆ ಹೋದೆವು. ಸೊಗಸಾದ ಬಿಸಿ ಬಿಸಿ ಉಪಹಾರವಾಯಿತು. ಐದೂವರೆಯ ನಂತರ, ಮಹಾದೇವಯ್ಯ, ವೊಲೋಜ, ನಾನು ಟಿಕೆಟ್ಟುಗಳನ್ನು ಪಡೆಯಲು ಬಸ್ಸು ಹಿಡಿದು, ಹೋಟೆಲಿಗೆ ಬಂದೆವು. ಮಳೆಯ ಮಂಜು ಸರ್ವತ್ರ ವ್ಯಾಪಿಸಿತ್ತು. ಟಿಕೆಟ್ ದೊರೆಯಿತು. ಇನ್ನರ್ಧ ಗಂಟೆಯಲ್ಲಿ ಕ್ರೆಮ್ಲಿನ್ ಹತ್ತಿರ ಹೋಗಿ ತಲುಪುವುದು ಹೇಗೆ? ಬಸ್ಸಲ್ಲಿ ಹೋಗುವ ಪ್ರಶ್ನೆಯಂತೂ ದೂರವೇ ಉಳಿಯಿತು. ಟ್ಯಾಕ್ಸಿಯೊಂದೂ ಕಾಣಲಿಲ್ಲ. ಅಸಾಧ್ಯ ಮಳೆ; ಗಾಳಿ. ‘ಇನ್ನಿಪ್ಪತ್ತು ನಿಮಿಷದಲ್ಲಿ, ಏಳುಗಂಟೆಗೆ ಸರಿಯಾಗಿ ಬ್ಯಾಲೆ ಷುರುವಾಯಿತೆಂದರೆ ಒಳಕ್ಕೇ ಬಿಡುವುದಿಲ್ಲ; ಬಿಡುವುದೇನಿದ್ದರೂ ಮೊದಲ ಅಂಕ ಮುಗಿದ ಮೇಲೆಯೇ’ – ಎಂದು ವೊಲೋಜ ತನ್ನಲ್ಲಿ ತಾನು ಗೊಣಗಿದ. ಕಾತರದ ತುದಿಯಲ್ಲಿ ನಿಂತ ನಮ್ಮ ಎದುರು ಒಂದು ಕಾರು ನಿಂತಿತು; ಅದರೊಳಗಿಂದ ಕೆಲವರು ಇಳಿದರು. ವೊಲೋಜ ಓಡಿ ಹೋಗಿ ಚಾಲಕರ ಜತೆ ಮಾತನಾಡಿ, ಬನ್ನಿ ಬನ್ನಿ ಎಂದು ಕರೆದ. ನಾವು ಕಾರೊಳಗೆ ತೂರಿಕೊಂಡೆವು. ಅದೊಂದು ಯಾವುದೋ ಆಫೀಸಿನ ಕಾರು; ಬಿಡುತ್ತಿದ್ದವಳು ಮಹಿಳೆ. ಕನಿಕರಿಸಿ ನಮ್ಮನ್ನು ಕಾರೊಳಗೆ ಸೇರಿಸಿದ್ದಳು. ಅಂತೂ ಏಳು ಗಂಟೆಗೆ ಮೂರು ನಿಮಿಷವಿರುವಾಗ ‘ಪ್ಯಾಲೇಸ್ ಆಫ್ ಕಾಂಗ್ರೆಸ್ ಭವನ’ದ ಒಳಗಿದ್ದೆವು. ಮುಂದೆಯೇ ಒಳ್ಳೆಯ ಸ್ಥಳ ನಮಗೆ ದೊರೆತಿತ್ತು.

ಬಾಲ್‌ಷೋಯ್ ಥಿಯೇಟರಿಗಿಂತ ದೊಡ್ಡದು ಇದು; ರಷ್ಯದ ರಾಜ್ಯ ಕ್ರಾಂತಿಯಾದ ಮೇಲೆ ನಿರ್ಮಿತಿಯಾದದ್ದು. ಒಮ್ಮೆಗೆ ಆರುಸಾವಿರ ಪ್ರೇಕ್ಷಕರನ್ನು ಇದು ಹಿಡಿಸುತ್ತದೆ. ೧೩೨ ಅಡಿ ಎತ್ತರದ, ೭೨ ಅಡಿ ಅಗಲದ ರಂಗವೇದಿಕೆ ಇದೆ. ಈ  ದಿನದ  ಬ್ಯಾಲೆಯ ಹೆಸರು ‘ಬಹ್‌ಚಿರಾಯ್‌ಸ್ಕಿ ಫಂತಾನ್’ (‘ಬಹ್‌ಚಿರಾಯ್‌ಸ್ಕಿ ಎಂಬ ಊರಲ್ಲಿರುವ ಚಿಲುಮೆ’) – ಪುಷ್ಕಿನ್ನನ ಕಾದಂಬರಿಯ ಆಧಾರದ ಮೇಲೆ ರಚಿತವಾದ ಸಂಗೀತ-ನೃತ್ಯ ರೂಪಕ ಇದು. ಜನ್ನನ ಅನಂತನಾಥ ಪುರಾಣದಲ್ಲಿ ಬರುವ ‘ಚಂಡಶಾಸನ’ನ ಕತೆಯನ್ನು ನೆನಪಿಗೆ ತರುವ ಕಥಾವಸ್ತು ಇದರದ್ದು. ಎರಡೂವರೆ ಗಂಟೆಗಳ ಕಾಲ ನಡೆದ ಈ ಬ್ಯಾಲೆ ಅದ್ಭುತವಾಗಿತ್ತು.

‘ಪ್ಯಾಲೇಸ್ ಆಫ್ ಕಾಂಗ್ರೆಸ್’ನಿಂದ ಹೊರಗೆ ಕಾಲಿರಿಸುವಾಗ ೯.೪೫ ಆಗಿತ್ತು. ಮಳೆ ನಿಂತು ಮಂಜು ಬೀಳಲಾರಂಭಿಸಿತ್ತು. ‘ಸ್ನೋಯಿಂಗ್!’ – ಎಂದು ವೊಲೋಜ ಸಂಭ್ರಮಿತನಾದ. ನೋಡುತ್ತೇನೆ. ಹಕ್ಕಿಯ ಬಿಳಿಯ ಪುಟ್ಟ ಗರಿಗಳಂತೆ, ಕಾಗದದ ಚೂರುಗಳನ್ನು ಗಾಳಿಯಲ್ಲಿ ತೂರಿದ ಹಾಗೆ ಹಿಮದ ಹಳುಕುಗಳು ಬೀಳತೊಡಗಿದವು. ಬಿದ್ದ ಹಾಗೆ ನೆಲವೆಲ್ಲ ಬೆಳ್ಳಗಾಗಿತ್ತು. ಮರದ ಮರಮರದ ಎಲೆಗಳ ಮೇಲೆ ಹಿಮ ಕೂತಿತ್ತು. ನನ್ನ ತಲೆಯ ಮೇಲೆ, ನಿಲುವಂಗಿಯ ಮೇಲೆ ಹಗುರವಾಗಿ ಬಂದು ಕೂತು, ದೀಪದ ಬೆಳಕಿನಲ್ಲಿ ಮಿರುಗತೊಡಗಿತು. ಎಲ್ಲೆಲ್ಲೂ ಬೆಳ್ಳಗೆ. ‘ಸೆಪ್ಟೆಂಬರ್ ತಿಂಗಳಲ್ಲಿ ಹಿಮ ಬೀಳುವುದು ಅಪರೂಪ; ನಿಮಗೆ ಇದು ಫೇರ್‌ವೆಲ್ ಸ್ನೋ’ ಎಂದರು ಮಹಾದೇವಯ್ಯ. ಅಂತೂ ನಾನೂ ಈ ಊರಿಗೆ ಬಂದ ಮೇಲೆ, ಬೇಸಗೆ, ಮಳೆಗಾಲ ಮತ್ತು ಹಿಮಗಾಲ ಮೂರನ್ನೂ ಕಂಡಂತಾಯಿತು ಅಂದುಕೊಂಡೆ. ಹತ್ತಿರದಲ್ಲಿದ್ದ ಮೆಟ್ರೋ ಸ್ಟೇಷನ್ನಿನ್ನೊಳಗೆ ಇಳಿದಾಗ, ವೊಲೋಜ ತಾನು ಬೇರೆಯ ದಾರಿಯಿಂದ ಮನೆಗೆ ಹೋಗುವುದಾಗಿಯೂ, ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ನನಗಾಗಿ ಕಾಯುವುದಾಗಿಯೂ ತಿಳಿಸಿ ಹೊರಟುಹೋದ. ಮೆಟ್ರೋ ಹಿಡಿದು ನಾನೂ ಮಹಾದೇವಯ್ಯನವರೂ, ವಿಶ್ವವಿದ್ಯಾಲಯದ ಸ್ಟೇಷನ್ನಿಗೆ ಬಂದೆವು. ಸುರಂಗ ರೈಲಿನಿಂದ ಹೊರಗೆ ಬಂದರೆ, ಆಗಲೇ ಮಂಜು ಬೀಳುವುದು ಕಡಮೆಯಾಗಿತ್ತು. ಬಿದ್ದ ಹಿಮವೆಲ್ಲಾ ಕಾಲುದಾರಿಯ ಮೇಲೆ ಮೊಸರು ಚೆಲ್ಲಿದ ಹಾಗಿತ್ತು. ರಸ್ತೆಯಲ್ಲಿ ವಾಹನ ಹಾದು ಹೋಗುವ ಸ್ಥಳದಾಚೆ ಈಚೆ ಬೆಳ್ಳನೆಯ ಮಂಜು ಚದುರಿಬಿದ್ದಿತ್ತು. ಹೇಗೋ ಕಾಲಾಡಿಸಿಕೊಂಡು ಬಸ್‌ಸ್ಟಾಪಿನಲ್ಲಿ ನಿಂತೆವು. ಅಲ್ಲಿಂದ ನಮ್ಮ ಹೋಟೆಲಿಗೆ ನೇರವಾಗಿ ಬಸ್ಸು. ನನ್ನ ಎದುರಿಗೇ ಬಸ್ಸು ಹಿಡಿಯಲು ಧಾವಿಸಿದ ಇಬ್ಬರು ಹಿಮದ ಮೇಲೆ ಹೇಗೋ ಕಾಲಿಟ್ಟು ದೊಪ್ಪನೆ ಜಾರಿಬಿದ್ದರು; ಸಾವರಿಸಿಕೊಂಡು ಎದ್ದರು. ಬಂದ ಬಸ್ಸನ್ನು ಹತ್ತಿದೆ. ‘ಬೆಳಿಗ್ಗೆ ಟ್ಯಾಕ್ಸಿ ಬಂದೊಡನೆ ನೇರವಾಗಿ ನಮ್ಮ ಮನೆಗೆ ಬನ್ನಿ; ನಾನೂ ನಿಮ್ಮನ್ನು ಬೀಳ್ಕೊಡಲು ಬರುತ್ತೇನೆ’ –  ಎಂದು ಮಹಾದೇವಯ್ಯನವರು ಹೇಳಿ, ಬೇರೊಂದು ಬಸ್ಸಿನ ದಾರಿ ಕಾದರು. ನಾನು ಹೋಟೆಲಿನ ಬಳಿ ಬಸ್ಸಿಳಿದಾಗ ಹತ್ತೂ ಮುಕ್ಕಾಲು ಗಂಟೆ. ದಟ್ಟವಾಗಿ ನೆಲದ ಮೇಲೆ ಬಿದ್ದ ಬಿಳಿಯ ಹಿಮದ ನಡುವೆ, ಹೇಗೋ ಹುಷಾರಾಗಿ ಕಾಲಿಡುತ್ತಾ ಕೋಣೆ ಸೇರಿದೆ.

ನನ್ನ ಸಾಮಾನುಗಳನ್ನೆಲ್ಲಾ ಪೆಟ್ಟಿಗೆಗೆ ಸೇರಿಸಿದೆ. ಬೆಳಿಗ್ಗೆ ಬೇಗ ಏಳಬೇಕೆಂದು ಹೊಸದಾಗಿ ಕೊಂಡುತಂದ ಅಲಾರಂ ಟೈಂಪೀಸಿಗೆ ಕೀ ಕೊಟ್ಟು ಮಲಗುವ ವೇಳೆಗೆ ಹನ್ನೊಂದೂವರೆ. ದೊಡ್ಡ ಗಾಜಿನ ಕಿಟಕಿಯಿಂದ ಕೆಳಕ್ಕೆ ನೋಡಿದೆ. ಅಷ್ಟು ಹೊತ್ತಿನಲ್ಲಿಯೂ ಕೆಲವು ಮಕ್ಕಳು ನೆಲದ ಮೇಲೆ ಬಿದ್ದ ಹಿಮವನ್ನು ಚೆಂಡು ಕಟ್ಟಿ ತೂರುತ್ತಿದ್ದರು. ನನಗೆ ಆಶ್ಚರ್ಯವಾಯಿತು. ಬಹುಶಃ ಹಿಮಗಾಲವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದರಲ್ಲಿ ಈ ಜನಕ್ಕೆ ಆಸಕ್ತಿಯಿರಬಹುದೆಂದುಕೊಂಡೆ. ಕೆಳಗೆ ಪಾರ್ಕಿನಲ್ಲಿ ಬೆಳೆದ ಮರಗಳು ಮಂಜಿನ ಭಾರಕ್ಕೆ ತಲೆಬಾಗಿಸಿದ್ದುವು. ದೀಪವಾರಿಸಿ ಮಲಗಿದೆ. ಕಳೆದ ಈ ಇಪ್ಪತ್ತೆರಡು ದಿನಗಳು ನಾನು ಮಾಸ್ಕೋದಲ್ಲಿ ಕಳೆದ ನೆನಪಿನ ಪುಟಗಳು ತೆರೆಯತೊಡಗಿದವು.