ಗಣಕೀಕರಣ, ಅಂರ್ತಜಾಲ ತಾಣಗಳು ಮತ್ತು ಸಾಮಾಜಿಕ ಮಾಧ್ಯಮ ತಾಣಗಳು, ಸ್ಮಾರ್ಟ್ ಫೋನ್ ಗಳು, ಎಸ್ಎಂಎಸ್ ಸಂದೇಶಗಳು, ಇ-ಮೇಲ್, ಇ-ವಾಣಿಜ್ಯ, ಇ-ಬ್ಯಾಂಕಿಂಗ್, ಮೊಬೈಲ್-ವಾಣಿಜ್ಯ, ಹೀಗೆ ಅನೇಕ ರೀತಿಯಲ್ಲಿ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ತಂತ್ರಜ್ಞಾನ. ಗದ್ಯ, ಆಡಿಯೋ ಮತ್ತು ವೀಡಿಯೋ ಮಾಹಿತಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟನೆ, ವಿನಿಮಯ ಮತ್ತು ಸಂಗ್ರಹಕ್ಕಾಗಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಮಾಹಿತಿ ಎಷ್ಟು ಸುರಕ್ಷಿತವಾಗಿರುತ್ತದೆ? ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತದೆ.
ಮೊಬೈಲ್ ಫೋನ್, ಇ-ಮೇಲ್ ಸೇವೆಗಳ ಅಥವಾ ಬ್ಯಾಂಕಿನ ಗ್ರಾಹಕರ ಮಾಹಿತಿ, ಆಸ್ಪತ್ರೆಯಲ್ಲಿರುವ ರೋಗಿಗಳ ಆರೋಗ್ಯ ಮಾಹಿತಿ, ರಕ್ಷಣಾ ಪಡೆಗಳು ಮತ್ತು ಸಂಶೋಧನೆ ಕೇಂದ್ರಗಳ ರಹಸ್ಯ ಮಾಹಿತಿ, ಹೀಗೆ ಹಲವಾರು ಕ್ಷೇತ್ರಗಳಲ್ಲಿರುವ ಮಾಹಿತಿಯನ್ನು ಕಳವು ಮಾಡಿ, ದುರುಪಯೋಗ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ವಂಚಕರಗಳ ಜಾಲಗಳು ಕೆಲಸ ಮಾಡುತ್ತಿವೆ. ತಂತ್ರಜ್ಞಾನ ಪರಿಣಿತಿರು, ವಿಷಯ ತಜ್ಞರು, ಸೈಬರ್ ಅಪರಾಧಿಗಳು ಇರುವ ಇಂತಹ ಜಾಲಗಳು ಬಹಳ ವ್ಯವಸ್ಥಿತವಾಗಿ ಕೆಲಸ ಮಾಡುತ್ತವೆ. ಅವುಗಳಿಗೆ ಅಗತ್ಯ ಬಂಡವಾಳ ಹೂಡಿಕೆ ಮಾಡಿ, ಈ ವಂಚನೆಯ ಜಾಲವನ್ನು ಲಾಭದಾಯಕ ಬಹುರಾಷ್ಟ್ರೀಯ ಉದ್ಯಮವನ್ನಾಗಿ ಮಾಡುವಲ್ಲಿ ಬಂಡವಾಳಶಾಹಿಗಳು, ಕೆಲವು ದೇಶಗಳ ಸರ್ಕಾರಗಳು ಮತ್ತು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿರುವ ಉಗ್ರವಾದಿ ಸಂಘನೆಗಳು ಭಾಗಿಯಾಗಿರುವುದು ಅತಂಕದ ವಿಷಯವಾಗಿದೆ.

ಯಾವ ಮಾಹಿತಿಯನ್ನು ಕಳವು ಮಾಡಿದರೆ ತಮಗೆ ಹೆಚ್ಚು ಲಾಭವಿದೆ ಎಂದು ನಿರ್ಧರಿಸುವ ಈ ವಂಚಕರು, ಇಂತಹ ಮಾಹಿತಿ ಇರುವ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಗುರುತಿಸಿ, ಅಂತಹ ವ್ಯವಸ್ಥೆಯೊಳಗೆ ಹೋಗಿ ಹೇಗೆ ಅಗತ್ಯ ಮಾಹಿತಿಯನ್ನು ಕಳವು ಮಾಡಬೇಕು ಎಂದು ಕಾರ್ಯ ಯೋಜನೆಯನ್ನು ರೂಪಿಸುತ್ತಾರೆ. ವಂಚಕರ ಜಾಲದಲ್ಲಿರುವ ಸುರಕ್ಷತೆ ತಂತ್ರಜ್ಞಾನ ಪರಿಣಿತರು ಇಂತಹ ಮಾಹಿತಿ ಸಂಗ್ರಹ ವ್ಯವಸ್ಥೆಯ ಸುರಕ್ಷತೆಗಾಗಿ ಬಳಸಲಾಗಿರುವ ತಂತ್ರಜ್ಞಾನಗಳ ವ್ಯೂಹವನ್ನು ಭೇದಿಸಿ, ಮಾಹಿತಿ ಕಳವು ಮಾಡುವ ಅವಕಾಶ ಕಲ್ಪಿಸುತ್ತಾರೆ. ಎಷ್ಟು ವ್ಯವಸ್ಥಿತವಾಗಿ ಮಾಹಿತಿ ಕಳವು ಮಾಡಲಾಗುತ್ತದೆ ಎಂದರೆ, ಇಂತಹ ಮಾಹಿತಿ ಕಳವು ನೆಡೆದಿದೆ ಎಂದು ಅರಿವಾಗಲು ಸರಾಸರಿ 201 ದಿನಗಳು ಬೇಕಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಪರಿಣಿತರು ಆತಂಕ ವ್ಯಕ್ತಪಡಿಸುತ್ತಾರೆ. ಪ್ರತಿ ಬಾರಿ ಇಂತಹ ಮಾಹಿತಿ ಕಳವು ನೆಡೆದಾಗ ಆಗುವ ನಷ್ಟ ಸರಾಸರಿ 4 ಮಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ವರ್ಷ 2019ರಲ್ಲಿ ಮಾಹಿತಿ ಕಳುವುನಿಂದಾಗಿ ವಿಶ್ವಾದಂತ್ಯ 3 ಟ್ರಿಲಿಯನ್ ಡಾಲರ್ ಗಳಿಗೂ ಹೆಚ್ಚು ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ವಿಶ್ವಾದದಂತ್ಯ ಇರುವ ಪ್ರಮುಖ ಆಸ್ಪತ್ರೆಗಳು ಮತ್ತು ಲ್ಯಾಬ್ ಗಳಲ್ಲಿ ಶೇಕಡಾ 90ರಷ್ಟು ಸಂಸ್ಥೆಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಮಾಹಿತಿ ಕಳವು ನೆಡೆದಿದೆ ಎಂದು ಮಾಹಿತಿ ಕಳವು ಕುರಿತು ನಡೆದಿರುವ ಅಧ್ಯಯನ ವರದಿಯೊಂದು ಹೇಳುತ್ತದೆ. ಹೀಗೆ ಆಸ್ಪತ್ರೆ ಮತ್ತು ಲ್ಯಾಬ್ ಸಂಸ್ಥೆಗಳಿಂದ ರೋಗಿಗಳ ಆರೋಗ್ಯ ಮಾಹಿತಿ ಕಳವು ಮಾಡಿ, ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ.

ಕಳೆದ ವರ್ಷವೊಂದರಲ್ಲಿ ಮಾಹಿತಿ ಕಳವು ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿರುವುದು ವಿಶ್ವಾದಂತ್ಯ ಆತಂಕವುಂಟು ಮಾಡಿದೆ. ಅಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ವಿಶ್ವದ ಆರ್ಥಿಕ ವ್ಯವಸ್ಥೆಯ ಮೇಲೆ ಹೊರೆಯಾಗುತ್ತಿರುವ ಮಾಹಿತಿ ಕಳವು ಪ್ರಕರಣಗಳನ್ನು ತಡೆಯಲು ಅಗತ್ಯವಾದ ತಂತ್ರಜ್ಞಾನ ಲಭ್ಯವಿಲ್ಲವೇ ಎನ್ನುವ ಪ್ರಶ್ನೆ ಬರುವುದು ಸ್ವಾಭಾವಿಕ.

ಮಾಹಿತಿ ಕಳವು ತಡೆಗಟ್ಟಲು ಮತ್ತು ಮಾಹಿತಿ ಕಳವು ನೆಡೆದಾಗ ಅದರ ತನಿಖೆ ಮಾಡಲು ಅಧುನಿಕ ತಂತ್ರಜ್ಞಾನಗಳು ಲಭ್ಯವಿದೆ ಆದರೆ ಇಂತಹ ತಂತ್ರಜ್ಞಾನವನ್ನು ಬಳಸುವ ಪರಿಣಿತರ ಸಂಖ್ಯೆ ಕಡಿಮೆ ಇದೆ. ವರ್ಷ 2020ರ ವೇಳೆಗೆ, ಇಂತಹ ಪರಿಣಿತರು ದೊರೆಯದೆ ಸುಮಾರು 15 ಲಕ್ಷ ಕೆಲಸ ಖಾಲಿ ಇರುತ್ತದೆ ಎಂಬ ಆತಂಕವನ್ನು ಮಾಹಿತಿ ತಂತ್ರಜ್ಞಾನ ಪರಿಣಿತರು ವ್ಯಕ್ತಪಡಿಸುತ್ತಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕರ್ನಾಟಕ ರಾಜ್ಯ, ಅಗತ್ಯ ತರಬೇತಿ ನೀಡಿ ಇಂತಹ ತಂತ್ರಜ್ಞಾನ ಪರಿಣಿತರನ್ನು ಉದ್ಯಮಕ್ಕೆ ನೀಡಲು ಪ್ರಾರಂಭಿಸಿದರೆ, ನಮ್ಮ ರಾಜ್ಯದ ಲಕ್ಷಾಂತರ ಜನ ಯುವಕ-ಯುವತಿಯರಿಗೆ ಉದ್ಯೋಗ ದೊರೆಯುತ್ತದೆ.
ಸಾರ್ವಜನಿಕರು ಬಳಸುವ ಅಂತರ್ಜಾಲ ತಾಣಗಳು, ಸಾಮಾಜಿಕ ಜಾಲತಾಣಗಳು, ಸರ್ಚ ಇಂಜಿನ ಒಂದು ಭಾಗವಾದರೆ, ನಮಗೆ ಗೊತ್ತಿಲ್ಲದಂತೆ ಕಾರ್ಯನಿರ್ವಹಿಸುವ ಭೂಗತ ಅಂತರ್ಜಾಲ ಅಥವಾ ಡಾರ್ಕ್ ವೆಬ್ ಕೂಡಾ ಇದೆ. ಮಾಹಿತಿ ಕಳುವಿನ ಜಾಲಗಳಿಗೆ, ಸೈಬರ್ ಅಪರಾಧಿಗಳಿಗೆ ಈ ಭೂಗತ ಅಂರ್ತಜಾಲ ಕಾರ್ಯಸ್ಥಾನವಾಗಿದೆ. ಸಾವಿರಾರು ಸಂಖ್ಯೆಯ ಜಾಲ ತಾಣಗಳು, ಸಮೂಹ ತಾಣಗಳು ಈ ಭೂಗತ ಅಂರ್ತಜಾಲದಲ್ಲಿ ಕೆಲಸ ಮಾಡುತ್ತವೆ. ಇಂತಹ ಜಾಲ ತಾಣಗಳು ಮತ್ತು ಸಮೂಹದ ಐಪಿ ಕೂಡಾ ಬೇರೆಯವರಿಗೆ ತಿಳಿಯದಂತೆ ಮರೆಮಾಚುವ ತಂತ್ರಜ್ಞಾನಗಳನ್ನು ಬಳಸುವುದರಿಂದ, ಅಲ್ಲಿ ಪ್ರಕಟವಾಗುವ ಮಾಹಿತಿ, ನೆಡೆಯುವ ಮಾಹಿತಿ ವಿನಿಮಯ ಕುರಿತು ತಿಳಿಯುವುದು ಕಷ್ಟವಾಗುತ್ತದೆ.

ಮಾಹಿತಿ ಕಳವು ತಡೆಗಟ್ಟಲು ಮತ್ತು ಮಾಹಿತಿ ಕಳುವು ನೆಡೆದ ತಕ್ಷಣ ಗೊತ್ತಾಗಲು ಮತ್ತು ಮಾಹಿತಿ ಕಳುವಿನಿಂದಾದ ನಷ್ಟವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ರೂಪಿಸಲು, ಸಮಗ್ರ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯನ್ನು ಹಲವಾರು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ.
ಉದಾಹರಣೆಗೆ ಒಂದು ಬ್ಯಾಂಕಿನ ಗ್ರಾಹಕರ ಮತ್ತು ಆರ್ಥಿಕ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡಲು ಬ್ಯಾಂಕು ಬಳಸಿರುವ ಸುರಕ್ಷತಾ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಲಾಗುತ್ತದೆ. ಮಾಹಿತಿ ಕಳವು ಮಾಡುವ ವಂಚಕರ ಜಾಲವು ಈ ಸುರಕ್ಷತಾ ತಂತ್ರಜ್ಞಾನವನ್ನು ಭೇದಿಸಿ, ಅಗತ್ಯ ಮಾಹಿತಿಯನ್ನು ಕಳವು ಮಾಡಲು ಸಾಧ್ಯವಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಸುರಕ್ಷತೆಯಲ್ಲಿ ಲೋಪ ದೋಷಗಳು ಕಂಡು ಬಂದರೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕುರಿತು ಬ್ಯಾಂಕಿನ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಸುರಕ್ಷತೆ ಕುರಿತು ಇಂತಹ ಪರಿಣಿತ ಸೇವೆಯನ್ನು ಹಲವಾರು ಸಂಸ್ಥೆಗಳು ನೀಡುತ್ತಿವೆ.
ವಿಶ್ವಾದಂತ್ಯ ಬ್ಯಾಂಕುಗಳಲ್ಲಿ ನೆಡೆದ ಮಾಹಿತಿ ಕಳವು ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ, ಭೂಗತ ಅಂರ್ತಜಾಲದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಕಳುವಿನ ಜಾಲವನ್ನು ಗುರುತಿಸಿ, ಅವರು ಮುಂದೆ ನೆಡೆಸಲು ಯೋಜಿಸಿರುವ ಮಾಹಿತಿ ಕಳವು ಕುರಿತು ಮಾಹಿತಿಯನ್ನು ಸಂಗ್ರಹಿಸಿ, ಇಂತಹ ಮಾಹಿತಿ ಕಳವು ಯತ್ನ ವಿಫಲಗೊಳಿಸಲು ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಬ್ಯಾಂಕುಗಳಿಗೆ ನೀಡುವ ಸಮರ್ಥ ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯನ್ನು ಕೆಲವು ಪ್ರಮುಖ ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಇಂತಹ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕಾಗ್ನಿಟಿವ್ ಸೆಕ್ಯೂರಿಟಿ ಎನ್ನುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.