ಈಗಾಗಲೇ ನಾವು ಅಕ್ಷರ ಮಾಹಿತಿಯನ್ನು ಮುದ್ರಿಸುವ, ಸಂರಕ್ಷಿಸುವ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಆದರೆ ಮನುಷ್ಯನಿಗೆ ಧ್ವನಿಯನ್ನೂ ಮುದ್ರಿಸುವ, ಮುದ್ರಿಸಿದ ಮಾಹಿತಿಯನ್ನು ಮತ್ತೆ  ಕೇಳುವ ಆಸೆಯಾಯಿತು. ಮಾನವನ ಆಸೆಗೆ ಕೊನೆ ಎಲ್ಲಿದೆ? ಆಕಾಶಕ್ಕೆ ಹಾರುವ ಆಸೆ. ನೀರಿನ ಆಳದಲ್ಲಿ ಈಜುವ ಆಸೆ. ಅಂತರಿಕ್ಷವನ್ನೂ ಮುಟ್ಟುವ ಆಸೆ. ಹೀಗಿರುವಲ್ಲಿ ಅಂದು ಧ್ವನಿ ಮಾಹಿತಿಯನ್ನು ಮುದ್ರಿಸುವ ಬಯಕೆಯಾಗಿದ್ದು ಸಹಜವೆ.

ಅನೇಕ ಜನ ವಿಜ್ಞಾನಿಗಳು ಇದರ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಲೇ ಇದ್ದರು. ಮೊದಲು ಲಿಯಾನ್ ಸ್ಕಾಟ್ ಎಂಬ ವಿಜ್ಞಾನಿ ಶಬ್ದ ತರಂಗಗಳನ್ನು ಈ ರೀತಿ ಮುದ್ರಿಸಿದ. ಶಬ್ದ ತರಂಗಗಳಿಂದ ಕಂಪನಕ್ಕೊಳಗಾಗುವ ತೆಳುವಾದ ಚರ್ಮದ ಹಾಳೆಗೆ ಅಂಟಿಸಿದ ಲೇಖನಿ ಚಲಿಸುತ್ತಿರುವ ಸುರುಳಿ ಕಾಗದದ ಮೇಲೆ ಆದನ್ನು ಗುರುತಿಸುತ್ತಿತ್ತು. ಆದರೆ ಈ ವಿಧಾನದಲ್ಲಿ ಶಬ್ದವನ್ನು ತಕ್ಷಣ ಮರುಚಾಲನೆ(ಪ್ಲೇಬಾಕ್) ಮಾಡುವುದು ಸಾಧ್ಯವಾಗಿರಲಿಲ್ಲ. ಮುದ್ರಿತ ನಕ್ಷೆಯನ್ನು ಫೋಟೋ ತೆಗೆದು, ಒಂದು ಲೋಹದ ತಟ್ಟೆಯ ಮೇಲೆ ಅಳವಡಿಸಿದ ನಂತರವೇ ಮರುಚಾಲನೆ ಮಾಡಬೇಕಾಗುತ್ತಿತ್ತು. ಆಗ ಫೋಟೋ ತೆಗೆಯುವ ತಾಂತ್ರಿಕತೆಯೂ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದುದರಿಂದ ಇದನ್ನು ಜನಬಳಕೆಗೆ ಸಿಕ್ಕುವಂತೆ ಅಧಿಕ ಸಂಖ್ಯೆಯಲ್ಲಿ ತಯಾರಿಸಲು ಸಾಧ್ಯವಾಗಲಿಲ್ಲ. ಈ ಯಂತ್ರಕ್ಕೆ ‘ಫೋನಟೋಗ್ರಾಫ್’ ಎಂದು ಹೆಸರು ಕೊಟ್ಟ.

ಈ ದಿಶೆಯಲ್ಲಿ ಯಶಸ್ಸು ದೊರಕಿದ್ದು ಪ್ರಸಿದ್ಧ ವಿಜ್ಞಾನಿ ಥಾಮಸ್ ಆಳ್ವಾ ಎಡಿಸನ್‌ಗೆ. ಈ ಪ್ರಯತ್ನವೂ ಕೂಡ ಫೋನಟೋಗ್ರಾಫ್‌ನ ಸಿದ್ಧಾಂತದ ಮೇಲೆ ಆಧಾರಿತವಾಗಿತ್ತು. ಆತ ಮೊದಲು ಮುದ್ರಿಸಿದ ಧ್ವನಿ ಮಾಹಿತಿ ಏನು ಗೊತ್ತಾ?  “Mary had a little lamb, its fleece was white as snow, and everywhere that Mary went, the lamb was sure to go.”   ಇದು ಮಕ್ಕಳ ಪದ್ಯದ ಚಿಕ್ಕ ತುಣುಕು. ಆದರೆ ಎಡಿಸನ್ ಮಾಡಿದ ಕೆಲಸದಿಂದ ಈ ಸಾಲುಗಳು ಚರಿತ್ರಾರ್ಹವಾದವು. ಈ ಘಟನೆ ಜರುಗಿದ್ದು ೧೮೭೭ರ ಡಿಸೆಂಬರ್ ೪ರಂದು.

 

ಎಡಿಸನ್‌ನ ಫೋನೋಗ್ರಾಫ್

ಮೊದಲ ಗ್ರಾಮಫೋನ್

ಈ ಘಟನೆ ನಡೆದಿದ್ದು ಒಂದು ಆಕಸ್ಮಿಕ. ಎಡಿಸನ್ ಟೆಲಿಗ್ರಾಫ್ ರವಾನೆಮಾಡುವ ಯಂತ್ರವನ್ನು ಉತ್ತಮಪಡಿಸುವುದರಲ್ಲಿ ತೊಡಗಿದ್ದ. ಒಂದು ಬಾರಿ ಆ ಯಂತ್ರದ ಶಬ್ದವನ್ನು ಮುದ್ರಿಸುವ ಟೇಪು ಬಹಳ ವೇಗವಾಗಿ ತಿರುಗಿದಾಗ ಅದು ಮನುಷ್ಯರ ಧ್ವನಿಯನ್ನು ಹೋಲುವ ಶಬ್ದ ಮಾಡಿದುದನ್ನು ಗಮನಿಸಿದ. ಅದೇ ಜಾಡಿನಲ್ಲಿ ಮತ್ತಷ್ಟು ಸಂಶೋಧನೆಗಳನ್ನು ನಡೆಸಿದ. ಮೊದಲು ಟೆಲಿಪೋನ್ ಧ್ವನಿವರ್ಧಕದಲ್ಲಿ ಮಾತನಾಡಿದಾಗ ಅದರಿಂದ ಹೊರಡುವ ಕಂಪನವು ಕಾಗದದ ತುಣಿಕಿನ ಮೇಲೆ ಜರುಗುವ ಒಂದು ಲೋಹದ ಮುಳ್ಳನ್ನು ಅಲ್ಲಾಡಿಸುವುದರ ಮೂಲಕ ಧ್ವನಿ ಮುದ್ರಣ ಮಾಡಬಹುದೆಂದು ಪ್ರಯತ್ನ ಮಾಡಿದ. ಆದರೆ ಅದು ಕಾಗದವನ್ನೇ ಕತ್ತರಿಸುವ ಸಾಧ್ಯತೆ ಇತ್ತು. ಇದು ಸರಿಯಾಗಿ ಕೆಲಸ ಮಾಡಲಿಲ್ಲ. ಆದರೂ ಎಡಿಸನ್ ಮತ್ತು ಅವನ ಸಂಗಡಿಗರ ಸತತ ಪ್ರಯತ್ನದ ಫಲವಾಗಿ ಕಾಗದದ ಬದಲು ತವರ(ಟಿನ್)ದ ಹಾಳೆಯನ್ನು ಇಟ್ಟಾಗ ಅವರಿಗೆ ಜಯ ದೊರಕಿತು. ಹೀಗೆ ಉಂಟಾದ ಕೊರಕಲಿನ ಜಾಡಿನಲ್ಲಿ ಒಂದು ಮುಳ್ಳನ್ನು ಅದೇ ರೀತಿ ಕಂಪನ ಉಂಟಾಗುವಂತೆ ಚಾಲಿಸಿ, ಆ ಕಂಪನಗಳನ್ನು ಹಿಗ್ಗಿಸಿ(Amplify) ಧ್ವನಿಯನ್ನು ಹಿಂಪಡೆಯಬಹುದಾಗಿತ್ತು. ಹೀಗೆ ಅಕ್ಷರ ಮುದ್ರಣ ತಂತ್ರಜ್ಞಾನವನ್ನು ಕಂಡು ಹಿಡಿದ ಸುಮಾರು ನಾಲ್ಕು ಶತಮಾನಗಳ ನಂತರ ಧ್ವನಿ ಮಾಹಿತಿಯನ್ನು ಮುದ್ರಿಸುವ ತಾಂತ್ರಿಕತೆಯನ್ನು ಕಂಡುಹಿಡಿಯಲಾಯಿತು. ಆದರೆ ಇದಕ್ಕೆ ಸಾಕಷ್ಟು ಸುಧಾರಣೆಗಳಾಗುವ ಅವಶ್ಯಕತೆ ಇತ್ತು. ಮತ್ತು ಇದನ್ನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಲು ಸಾಧ್ಯವಿರಲಿಲ್ಲ. ಆ ಯಂತ್ರಕ್ಕೆ ಆಗ ಅವರಿಟ್ಟ ಹೆಸರು ‘ಫೋನೋಗ್ರಾಫ್’.

“ಸರ್, ಇದರ ಬಗ್ಗೆ ಒಂದು ವಿಷಯ ತಿಳಿಸಬೇಕು. ಇಂಟರ್‌ನೆಟ್‌ನಲ್ಲಿ ” www.ieee-virtual-museum.org/” ಅಂತ ಒಂದು ವೆಬ್‌ಸೈಟ್ ಇದೆ. ಅದರಲ್ಲಿ ಮೊಟ್ಟಮೊದಲು ಧ್ವನಿ ಮುದ್ರಣ ಮಾಡಿದ ಧ್ವನಿ ತುಣುಕುಗಳನ್ನು ಕೇಳಬಹುದು.” ಉಮೇಶ್ ಹೆಚ್ಚಿನ ಮಾಹಿತಿ ನೀಡಿದ.

“ಗುಡ್, ನೀವೆಲ್ಲರೂ ಈ ವೆಬ್‌ಸೈಟ್ ನೋಡಿ, ಹಾಗೆ ನಿಮ್ಮ ಕ್ಲಾಸಿನ ಬೇರೆ ಹುಡುಗರಿಗೂ ತಿಳಿಸಿ. ಬೇಕಾದರೆ ನಮ್ಮ ಮನೆಗೆ ಬಂದರೆ ನಾನು ತೋರಿಸುತ್ತೇನೆ” ಎಂದು ಅವನಿಗೆ ಉತ್ತೇಜನ ನೀಡಿ, ಮುಂದೆ ಓದುವಂತೆ ಸನ್ನೆ ಮಾಡಿದರು.

ಆದರೆ ನಾನಾ ಕಾರಣಗಳಿಂದ ಮತ್ತೆ ಹತ್ತು ವರ್ಷಗಳ ಕಾಲ ಎಡಿಸನ್ ಈ ಸಂಶೋಧನೆಯನ್ನು ಮುಂದುವರಿಸಲಿಲ್ಲ. ಈ ಮಧ್ಯೆ ಬೆಲ್ ಪ್ರಯೊಗಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಟೇಂಡರ್ ಎಂಬ ಸಂಶೋಧಕ ಮೇಣದ ಸಿಲಿಂಡರ್ ಮೇಲೆ ಧ್ವನಿ ಮುದ್ರಣ ಮಾಡುವ ಮತ್ತು ಮುದ್ರಿತ ಮಾಹಿತಿಯನ್ನು ಮರುಚಾಲನೆ (ರೀಪ್ಲೇ) ಮಾಡುವ ತಾಂತ್ರಿಕೆಯನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ೧೮೮೫ರಲ್ಲಿ ಪೇಟೆಂಟ್ ಕೂಡ ಪಡೆದ. ಆದರೆ ಪುನಃ ೧೮೮೭ರಲ್ಲಿ ಎಡಿಸನ್ ತನ್ನ ಸಂಶೋಧನೆಗೆ ವಾಪಸ್ಸು ಮರಳಿ ಅನೇಕ ಬದಲಾವಣೆಗಳನ್ನೂ, ಸುಧಾರಣೆಗಳನ್ನೂ ಮಾಡಿದ್ದೇ ಅಲ್ಲದೆ ಸಾಕಷ್ಟು ಲಾಭವನ್ನೂ ಮಾಡಿಕೊಂಡ. ಆಗ ಜನರಿಗೆ ಇದು ಒಂದು ಕೌತುಕವಾಗಿದ್ದು, ಧ್ವನಿ ಮುದ್ರಿಕೆಗಳಿಗೆ ಅಗಾಧ ಬೇಡಿಕೆ ಇದ್ದುದೇ ಇದಕ್ಕೆ ಕಾರಣ.

ಮುಂದಿನ ಸುಧಾರಣೆ ವಾಷಿಂಗಟನ್ ನಗರದಲ್ಲಿ ಜರ್ಮನಿಯಿಂದ ವಲಸೆ ಬಂದಿದ್ದ ಎಮಲಿ ಬರ್ಲಿನರ್ ಎಂಬ ವಿಜ್ಞಾನಿಯಿಂದ ೧೮೭೭ರ ಕೊನೆಯ ಭಾಗದಲ್ಲ್ಲಿ ಆಯಿತು. ಈತ ಸಿಲಿಂಡರ್‌ಗೆ ಬದಲಾಗಿ ಒಂದು ಚಪ್ಪಟೆಯಾದ ತಟ್ಟೆಯ ಮೇಲೆ ಧ್ವನಿ ಕಂಪನಗಳಿಗೆ ಪ್ರತಿಸ್ಪಂದಿಸುವ ಲೋಹದ ಮುಳ್ಳು ಚಕ್ರಾಕಾರವಾಗಿ ಜಾಡು ಕೊರೆಯುವುದರ ಮೂಲಕ ಧ್ವನಿ ಮುದ್ರಣ ಮಾಡುವ ಪ್ರಯೋಗದಲ್ಲಿ ಸಫಲನಾದ. ಇದಕ್ಕೆ ‘ಹಿಲ್-ಅಂಡ್- ಡೇಲ್’ ವಿಧಾನ ಎಂದೂ ಕರೆಯುತ್ತಾರೆ. ಈ ಯಂತ್ರಕ್ಕೆ ಬರ್ಲಿನರ್ ಗ್ರಾಮಫೋನ್ ಎಂದು ಹೆಸರಿಸಿದ. ಇದರಿಂದಾದ ಬಹುಮುಖ್ಯ ಪ್ರಯೋಜನವೆಂದರೆ ಒಂದು ಬಾರಿ ಧ್ವನಿ ಮುದ್ರಿತಗೊಂಡ ಪ್ರಧಾನ ತಟ್ಟೆಯೊಂದರಿಂದ ಹಲವು ನಕಲುಗಳನ್ನು ಪಡೆಯಬಹುದಾಗಿತ್ತು. ಅತಿ ಶೀಘ್ರದಲ್ಲಿ ಇದು ಪ್ರಪಂಚಾದ್ಯಂತ ಮನ್ನಣೆ ಮತ್ತು ಜನಪ್ರಿಯತೆ ಪಡೆಯಿತು.

ಗ್ರಾಮಫೋನ್ ಚಾಲಕ

ಗ್ರ್ರಾಮಫೋನ್ ಮುದ್ರಿಕೆಗಳು

ಮೊದಲು ಮುದ್ರಿಕೆಗಳನ್ನು  ತಯಾರಿಸಲು ಗಾಜನ್ನು ಬಳಸುತ್ತಿದ್ದರು. ಅನಂತರ ಸತು(ಜ಼ಿಂಕ್), ಪ್ಲಾಸ್ಟಿಕ್ ಹೀಗೆ ಸುಧಾರಣೆಗಳಾದವು. ಹೀಗೆ ತಯಾರಿಸಿದ ಪ್ರಧಾನ ಮುದ್ರಿಕೆಯಿಂದ ನೂರಾರು ಮುದ್ರಿಕೆಗಳನ್ನು ಮುದ್ರಿಸುವ ವಿಧಾನವನ್ನೂ ಅಭಿವೃದ್ಧಿ ಪಡಿಸಲಾಯಿತು. ಸಿಲಿಂಡರ್ ಮತ್ತು ಚಪ್ಪಟೆ ಆಕಾರದ ಮುದ್ರಿಕೆಗಳನ್ನು ಯಾಂತ್ರಿಕವಾಗಿಯೇ ಮರು ಚಾಲನೆ ಮಾಡಲಾಗುತ್ತಿತ್ತು. ಚಾಲನೆ ಮಾಡುವುದಕ್ಕೆ ಮುಂಚೆ ಯಾಂತ್ರಿಕ ಕೈಗಡಿಯಾರಕ್ಕೆ ಅಥವಾ ಆಟಿಕೆ ಗೊಂಬೆಗಳಿಗೆ ಕೀ ಕೊಡುವಂತೆ. ಮರುಚಾಲನೆ ಪೆಟ್ಟಿಗೆಯಲ್ಲಿರುವ ಒಂದು ಹಿಡಿಕೆಯನ್ನು ತಿರುಗಿಸಬೇಕಾಗುತ್ತಿತ್ತು. ಮುದ್ರಿಕೆ ಚಾಲಕಗಳನ್ನು “ಗ್ರಾಮಫೋನ್” ಎಂದು ಕರೆಯಲಾಗುತ್ತಿತ್ತು.

ಈ ಧ್ವನಿಮುದ್ರಿಕೆಗಳು ಜನರಿಗೆ ಹುಚ್ಚೇ ಹಿಡಿಸಿದವು. ಸಿಲಿಂಡರ್‌ಗಳಿಗಿಂತ ಚಪ್ಪಟೆಯಾಕಾರದ ಮುದ್ರಿಕೆಗಳು ಬಹಳ ಕಾಲ ಬಳಕೆಯಲ್ಲಿದ್ದವು. ಈ ಮುದ್ರಿಕೆಗಳನ್ನು ನಿಮಿಷಕ್ಕೆ ೭೮ಸುತ್ತು ವೇಗದಲ್ಲಿ (78 rpm)ತಿರುಗಿಸುವ ಮಾನಕವನ್ನು ನಿಗದಿಸಲಾಯಿತು. ಅದರ ನಂತರ 45 ಮತ್ತು  33⅓ rpm ವೇಗದಲ್ಲಿ ತಿರುಗಿಸುವ ಸಂಪ್ರದಾಯವೂ ಜಾರಿಗೆ ಬಂತು. ಅಲ್ಲದೆ ಮುದ್ರಿಕೆಗಳನ್ನು ತಯಾರಿಸಲು ಬಳಸುವ ಪದಾರ್ಥದಲ್ಲಿಯೂ ಬದಲಾವಣೆಗಳಾಗಿ ವಿನೈಲ್ ಮುದ್ರಿಕೆಗಳು ಬಳಕೆಗೆ ಬಂದವು. ಮನೆಗಳಲ್ಲಿ ಈ ಮುದ್ರಿಕೆಗಳನ್ನು ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಯಿತು. ಧ್ವನಿಮುದ್ರಿಕೆಗಳಲ್ಲಿ ಮುದ್ರಿಸಲೆಂದು ಹಲವು ಪ್ರಕಾರಗಳ ಸಂಗೀತವೂ ಹುಟ್ಟಿಕೊಂಡವು. ಅವುಗಳಲ್ಲಿ ಹೆಸರಿಸಬಹುದಾದುದು ಜಾಜ಼್. ಬರ್ಲಿನರ್ ಪ್ರಸಿದ್ಧ ಸಂಗೀತಕಾರರ ಮನವೊಲಿಸಿ ಮುದ್ರಿಕೆಗಳಲ್ಲಿ ಅವರ ಸಂಗೀತವನ್ನು ಮುದ್ರಿಸಿದ. ೧೯೦೮ ರಲ್ಲಿ ಬರ್ಲಿನರ್ ತನ್ನ ಕಂಪನಿಯ ಲಾಂಛನವಾಗಿ ಫ್ರಾನ್ಸಿಸ್ ಬರ್ರಾಡ್‌ನ ಚಿತ್ರ ‘ಹಿಸ್ ಮಾಸ್ಟರ‍್ಸ್ ವಾಯಸ್” ಚಿತ್ರವನ್ನು ಅಳವಡಿಸಿಕೊಂಡ.

“ಈ ಚಿತ್ರ ಯಾವುದೆಂದು ಯಾರಾದರೂ ಹೇಳುತ್ತೀರಾ?” ಎಂದು ಚರಣ್ ತನ್ನ ಸ್ನೇಹಿತರತ್ತ ನೋಡಿದ. ಯಾರಿಗೂ ತಿಳಿಯಲಿಲ್ಲ. ಆಗ ನಾಗರಾಜ್ ಮೇಷ್ಟ್ರು “ಚರಣ್, ಇದು ಒಂದು ಶತಮಾನದಷ್ಟು ಹಳೆಯ ಮಾತು. ನಿಮ್ಮ ತಾತಂದರಿಗೆ ಈ ವಿಷ್ಯ ತಿಳಿದಿರಬಹುದು. ಈ ಮಕ್ಕಳನ್ನು ಯಾಕೆ ಗೋಳುಹುಯ್ಯಕೊಳ್ತೀ. ನಿನಗೆ ಗೊತ್ತು. ಏಕೆಂದರೆ ನೀನು ಅದರ ಬಗ್ಗೆ ಈಗ ಓದಿ ತಿಳಿದುಕೊಂಡಿದ್ದೀಯಾ.” ಎಂದು ತಮಾಷೆ ಮಾಡಿದರು.

“ಸರಿ, ನಾನೇ ಹೇಳುತ್ತೀನಿ. ಅಲ್ಲ ತೋರಿಸುತ್ತೀನಿ” ಎಂದು ತಾನು ತಂದಿದ್ದ ಚಿತ್ರ ತೋರಿಸಿದ.

‘His Master’s Voice’

“ಸರ್, ಮತ್ತೊಂದು ವಿಷಯವನ್ನೂ ನಾನೇ ಹೇಳಿಬಿಡುತ್ತೀನಿ. ಈ ನಾಯಿಯ ಹೆಸರು ನಿಪ್ಪರ್.”

ಈ ರೀತಿಯ ಧ್ವನಿ ಮುದ್ರಣ ಕಾರ್ಯ ೧೯೨೫ರ ತನಕ ಪ್ರಚಲಿತವಾಗಿತ್ತು. ೧೯೨೫ರಲ್ಲಿ ವಿದ್ಯುಚ್ಛಕ್ತಿಯ ಬಳಕೆ ಬಂದ ಮೇಲೆ ಸಾಕಷ್ಟು ಸುಧಾರಣೆಗಳಾಗಿ, ೧೯೩೦ರಲ್ಲಿ ಸ್ವಲ್ಪ ಭಾಗವನ್ನು ವಿದ್ಯುಚ್ಛಕ್ತಿ ಬಳಸಿ ಚಾಲನೆ ಮಾಡುವ ರೂಢಿಯೂ ಬಂತು.

ಮುಂದಿನ ಹಂತದಲ್ಲಿ ೧೮೯೭-೯೮ರಲ್ಲಿ ವಾಲ್ಟೆಮೆರ್ ಪೌಲ್‌ಸನ್, ಶಬ್ದವನ್ನು ಸ್ಟೀಲ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ತಂತಿಯ ಮೇಲೆ ಲೋಹದ ಕಾಂತೀಯ ಗುಣಗಳನ್ನು ಬಳಸಿಕೊಂಡು ಮುದ್ರಿಸುವ ಪ್ರಯತ್ನ ಮಾಡಿ ಯಶಸ್ಸು ಪಡೆದ. ಶಬ್ದ ಕಂಪನಗಳನ್ನು ವಿದ್ಯುಚ್ಛಕ್ತಿ ಅಲೆಗಳಾಗಿ ಮಾರ್ಪಡಿಸಿ, ಅದರಿಂದ ಲೋಹದ ಕಾಂತೀಯ ಗುಣ ಬದಲಿಸುವಂತೆ ಮಾಡುವುದರ ಮೂಲಕ ಶಬ್ದವನ್ನು ಮುದ್ರಿಸಿದ. ಅನಂತರ ಈ ಪ್ರಕ್ರಿಯೆಯನ್ನು ಹಿಮ್ಮಖವಾಗಿ ಪುನರಾವರ್ತಿಸಿ ಶಬ್ದವನ್ನು ಪಡೆಯುವ ವಿಧಾನವನ್ನೂ ಅಭಿವೃಧ್ಧಿ ಪಡಿಸಿದ. ಈ ಯಂತ್ರವನ್ನು ಟೆಲಿಗ್ರಾಫೋನ್ ಎಂದು ಕರೆದ. ಇದನ್ನು ೧೯೨೦-೩೦ರ ದಶಕದಲ್ಲಿ ಬಳಸಲಾಗುತ್ತಿತ್ತು.

ವೆಬ್ಸ್ಟರ್ ವೈರ್೩

ಟೆಲಿಗ್ರಾಫೋನ್

ಅಷ್ಟು ಹೊತ್ತಿಗೆ ಇಲೆಕ್ಟ್ರಾನಿಕ್ ಧ್ವನಿವರ್ಧಕಗಳೂ ಅಭಿವೃದ್ಧಿಯಾಗಿದ್ದು ಈ ಯಂತ್ರಕ್ಕೆ ಅದರ ಸಹಾಯವೂ ದೊರಕಿತು. ಆದರೂ ಮರುಚಾಲನೆ ಮಾಡಿದಾಗ ಅಂತಹ ಉತ್ತಮ ಗುಣಮಟ್ಟದ ಫಲಿತಾಂಶವೇನೂ ಸಿಕ್ಕಲಿಲ್ಲ. ಇದಕ್ಕೆ ತಂತಿಯ ಚಲನೆಯ ವೇಗದಲ್ಲಿ ವ್ಯತ್ಯಾಸವಾಗುವುದು, ತಂತಿ ತಿರುಚಿಕೊಳ್ಳುವುದು ಇತ್ಯಾದಿ ಹಲವಾರು ಕಾರಣಗಳಿದ್ದವು. ಗ್ರಾಮಫೋನ್ ಮುದ್ರಿಕೆಗಳಂತೆ ಇದರಲ್ಲಿ ಸಂಗೀತವನ್ನು ಮುದ್ರಿಸುವುದಕ್ಕಿಂತ ಆಫೀಸ್‌ನಲ್ಲಿ ಉಕ್ತಲೇಖನ ಮುದ್ರಿಸಿಕೊಳ್ಳಲು ಬಳಸಲಾಗುತ್ತಿತ್ತು. ಮತ್ತೊಂದು ಪ್ರಯೋಜನವೆಂದರೆ ಒಂದು ಬಾರಿ ಮುದ್ರಿಸಿದ ಧ್ವನಿಯನ್ನು ಅಳಿಸಿ (ಕಾಂತೀಯ ಗುಣಗಳನ್ನು ಅಳಿಸಿ) ಮತ್ತೊಮ್ಮೆ ಬಳಸಬಹುದಾಗಿತ್ತು. ಹಾಗಾಗಿ ಇದನ್ನು ಎರಡನೆಯ ಮಹಾಯುದ್ಧದ ನಂತರದ ದಿನಗಳಲ್ಲಿ, ಅಂದರೆ ೧೯೪೦-೫೦ರಲ್ಲಿ ಟಿಲಿಫೋನ್ ಕಂಪನಿಗಳು ಮತ್ತಿತರ ಕಛೇರಿಗಳಲ್ಲಿ ಬಳಸಲಾಗುತ್ತಿತ್ತು. ಒಟ್ಟಿನಲ್ಲಿ ಕಾಂತೀಯ ಮಾಧ್ಯಮದಲ್ಲಿ ಧ್ವನಿ ಮುದ್ರಣ ಮಾಡುವ ಸಾಧ್ಯತೆಯನ್ನು ಈ ಯಂತ್ರ ಪರಿಚಯ ಮಾಡಿಸಿತು.

ಇದೇ ಸಮಯದಲ್ಲಿ ಜರ್ಮನಿಯಲ್ಲಿ ಕಾಂತೀಯ ಪಟ್ಟಿಗಳ ಮೇಲೆ ಧ್ವನಿ ಮುದ್ರಣ ಮಾಡುವ ಪ್ರಯೋಗಗಳಾಗುತ್ತಿದ್ದವು. ಆದರೆ ಆ ಸಮಯದಲ್ಲಿ ಎರಡನೆ ಮಹಾಯುದ್ಧ ನಡೆಯುತ್ತಿದ್ದುದರಿಂದ ಜರ್ಮನರು ಈ ವಿಷಯವನ್ನು ಗುಟ್ಟಾಗಿಯೇ ಇಟ್ಟಿದ್ದರು. ೧೯೩೬ರ ನಂತರ ಯುದ್ಧ ಮುಗಿದ ಮೇಲೆ ಈ ತಾಂತ್ರಿಕತೆ ಪ್ರಪಂಚದ ಇತರ ಕಡೆಗೆ ತಲುಪಿತು. ೧೯೩೨ರ ಕ್ರಿಸ್‌ಮಸ್ ಹಬ್ಬದ ಪ್ರಸಾರದಂದು ಬ್ರಿಟಿಷ್ ಬ್ರಾಡ್‌ಕಾಸ್ಟ್ ಸಂಸ್ಥೆಯವರು ತಮ್ಮ ಪ್ರಸಾರಕ್ಕೆ ಒಂದು ಧ್ವನಿಮುದ್ರಕವನ್ನು ಬಳಸಿದರು. ಅದು ಬಹಳ ದೊಡ್ಡ ಗಾತ್ರದಲ್ಲಿತ್ತು. ಕೇವಲ ಅರ್ಧ ಘಂಟೆಯ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಬಳಸಿದ ಟೇಪಿನ ಉದ್ದ ೩ ಕಿಲೋ ಮೀಟರ್‌ಗಳಷ್ಟಿದ್ದು, ಅದರ ತೂಕ ೨೫ ಕೆಜಿಗಳಷ್ಟಿತ್ತು. ಟೇಪನ್ನು ಒಂದು ನಿಮಿಷಕ್ಕೆ ೯೦ ಮೀಟರ್ ವೇಗದಲ್ಲಿ ಓಡಿಸಲಾಯಿತು.

“ಅಬ್ಬಬ್ಬಾ!  ಆಗ ಆಡಿಯೋ ಸಿಡಿ ನೋಡಿದ್ದರೆ ಜನಗಳಿಗೆ ಅದೆಷ್ಟು ಸಂತೋಷವಾಗುತ್ತಿತ್ತೋ. ಈಗ ಒಂದು ಆಡಿಯೋ ಟೇಪ್ ರೆಕಾರ್ಡರ್ ಎರಡು ಬೆಟ್ಟಿನಲ್ಲಿ ಎತ್ತ ಬಹುದು ಅಷ್ಟು ಚಿಕ್ಕದಾಗಿ, ಹಗುರವಾಗಿರತ್ತೆ ಅಲ್ವಾ ಸಾರ್” ಎಂದು ಕೃಷ್ಣ ಬಾಯಿ ಹಾಕಿದ.

“ಎಲ್ಲರಿಗೂ ಸಂತೋಷ ಆಗತ್ತೆ. ಆದರೆ ನನಗೆ ಒಂದು ವಿಚಿತ್ರ ಯೋಚನೆ ಬರ್ತಾ ಇದೆ. ಈಗಿನ ಸಿನಿಮಾಗಳಲ್ಲಿ ಹೀರೋನೋ, ವಿಲನ್ನೋ ಒಂದು ಕಾಸೆಟ್ ಅಥವಾ ಸಿಡಿ ಇಟ್ಟುಕೊಂಡು, ಇದನ್ನ ಪೋಲೀಸರಿಗೆ ಕೊಟ್ಟು ನಿನ್ನ ಕೊನೆ ಮುಟ್ಟಿಸ್ತೀನಿ ಅಂತ ಯಾರ್ನೋ ಹೆದರಿಸ್ತಾ, ಒಬ್ಬರಿಂದ ಒಬ್ಬರಿಗೆ ಅದನ್ನು ಕ್ಯಾಚ್ ಕೊಡ್ತಾ ಒದ್ದಾಡಿಸ್ತಾರಲ್ಲಾ ಅವರಿಗೆ ಇಷ್ಟು ಭಾರವಾದ ಟೇಪ್ ಇದ್ದಿದ್ದರೆ ಚಾನ್ಸೇ ಇರ್ತಿರ್ಲಿಲ್ಲ.” ಎಂದು ಚರಣ್ ತನ್ನ ಅಭಿಪ್ರಾಯ ಹೇಳಿದ

“ಹೌದು, ವಿಜ್ಞಾನ, ತಾಂತ್ರಿಕತೆ ಮುಂದುವರಿಯುತ್ತಿರುವಾಗ ಹೀಗೆ ಎನ್ನಿಸುವುದು ಸಹಜವೇ. ಈಗ ಸುಮಾರು ಹತ್ತು ವರ್ಷಗಳ ಹಿಂದೆ ನಮಗೆ ಮೊಬೈಲ್ ಫೋನ್ ಬಳಕೆ ಬಗ್ಗೆ ಗೊತ್ತಿರಲಿಲ್ಲ. ಈಗ ಜನ ಸಾಮಾನ್ಯರಿಗೂ ಇದು ಸಿಕ್ಕುತ್ತಿದೆ. ಹೀಗೆ ಗಾತ್ರ ಮತ್ತು ತೂಕ ಚಿಕ್ಕದಾಗಿರುವುದಕ್ಕೆ ಕಾರಣ ಏನು ಗೊತ್ತಾ?” ಎಂದು ನಾಗರಾಜ್ ಪ್ರಶ್ನಿಸಿದರು.

“ಟ್ರಾನ್ಸಿಸ್ಟರ್‌ಗಳನ್ನು ಕಂಡುಹಿಡಿದ ನಂತರ ಈ ಬದಲಾವಣೆ ಬಂತು ಅಲ್ವಾ ಸಾರ್. ಅದಕ್ಕೆ ಮೊದಲು ರೇಡಿಯೋ ಕೂಡ ಬಹಳ ತೂಕವಾಗಿ ದೊಡ್ಡದಾಗಿರುತ್ತಿತ್ತಂತೆ. ಅಲ್ಲದೆ ಅವುಗಳಿಗೆ ಹೆಚ್ಚು ವಿದ್ಯುಚ್ಛಕ್ತಿಯೂ ಬೇಕಾಗುತ್ತಿತ್ತಂತೆ.” ಇದು ಉಲ್ಲಾಸ್ ಹೇಳಿದ ಉತ್ತರ.

“ಸರಿಯಾಗಿ ಹೇಳಿದೆ. ಅರೆವಾಹಕ ಆಂದರೆ ಸೆಮಿಕಂಡಕ್ಟರ್ ವಸ್ತುಗಳ ಗುಣಗಳನ್ನು ಕಂಡುಹಿಡಿದ ಮೇಲಂತೂ ಅತಿ ಕಡಿಮೆ ಜಾಗದಲ್ಲಿ ಅನೇಕ ಸರ್ಕ್ಯುಟ್‌ಗಳನ್ನು ಅಳವಡಿಸಲು ಸಾಧ್ಯವಾಯಿತು. ಅಲ್ಲದೆ ಇವುಗಳು ಕೆಲಸವನ್ನೂ ಬಹಳ ಚೆನ್ನಾಗಿ ನಿರ್ವಹಿಸುತ್ತವೆ ಮತ್ತು ವಿದ್ಯುಚ್ಛಕ್ತಿಯ ಬಳಕೆಯೂ ಕಡಿಮೆ. ಹೀಗಾಗಿ ಅನೇಕ ನಿತ್ಯೋಪಯೋಗಿ ಇಲೆಕ್ಟ್ರಾನಿಕ್ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಟೇಪ್ ರೆಕಾರ್ಡರ್, ರೇಡಿಯೋಗಳ ಗಾತ್ರ, ತೂಕ ಚಿಕ್ಕದಾಗಿವೆ.” ಎಂದು ಮೇಷ್ಟ್ರು ಹೇಳುತ್ತಿರುವಷ್ಟರಲ್ಲಿ “ಸಾರ್ ಇವತ್ತಿಗೆ ಇಷ್ಟು ಸಾಕು ಸಾರ್. ಪಾಕಿಸ್ಥಾನ್ ಬ್ಯಾಟಿಂಗ್ ನೋಡಕ್ಕೆ ಆಸೆ. ನಾಳೆ ಮುಂದುವರಿಸಬಹುದಲ್ಲವೆ?” ಎಂದು ಚರಣ್ ತನ್ನ ಆಸೆಯನ್ನು ಮುಂದಿಟ್ಟ.

ಒಂದೇ ಸಮ ಕೇಳಿದರೆ ಹುಡುಗರಿಗೆ ಬೇಸರ ಬರುತ್ತದೆ ಎಂಬ ಕಾರಣವನ್ನೂ ಸೇರಿಸಿ ಮುಂದಿನ ವಾಚನವನ್ನು ಮರುದಿನಕ್ಕೆ ತಳ್ಳಿ ಎಲ್ಲರೂ ಮನೆಯ ದಾರಿ ಹಿಡಿದರು. ಅಷ್ಟರಲ್ಲಿ ನಾಗರಾಜ್ ವಾಪಸ್ಸು ಬಂದು,

“ಉಲ್ಲಾಸ್ ನನಗೆ ಮರ‍್ತೇ ಹೋಗಿತ್ತು. ಇವತ್ತು ರಾತ್ರಿ ನಮ್ಮ ಮನೆಗೆ ನನ್ನ ಕಾಲೇಜಿನ ಸ್ನೇಹಿತರು ಮುಂಬೈಯಿಂದ ಬರ್ತಾ ಇದ್ದಾರೆ. ನಾಳೆ ನಾವೆಲ್ಲಾ ಬೇಲೂರು, ಹಳೇಬೀಡಿಗೆ ಹೋಗುವ ಪ್ರೋಗ್ರಾಮ್ ಹಾಕಿಕೊಂಡಿದ್ದೇವೆ. ನನಗೆ ನಾಳೆ ಬರಕ್ಕೆ ಆಗಲ್ಲ. ಸರಿ, ಮತ್ತೆ ಭಾನುವಾರವೂ ಬೇಡ. ಸೋಮವಾರ ಸೇರೋಣವೆ?” ಎಂದು ಕೇಳಿದರು.

“ಸರಿ ಸಾರ್, ಅದಕ್ಕೇನಂತೆ. ಇನ್ನೂ ರಜಾ ದಿನಗಳಿವೆಯಲ್ಲಾ” ಎಂದು ಹೇಳಿದ ಉಲ್ಲಾಸ್ ಕ್ರಿಕೆಟ್ ನೋಡಲು ಓಡುತ್ತಿದ್ದ ಗೆಳೆಯರಿಗೆ ವಿಷಯವನ್ನು ಕೂಗಿ ಹೇಳಿದ.

ಸೋಮವಾರ

ಎರಡು ದಿನಗಳ ವಿರಾಮದ ನಂತರ ಸೋಮವಾರ ಎಲ್ಲರೂ ಮತ್ತಷ್ಟು ಲವಲವಿಕೆಯಿಂದ ಸೇರಿದ್ದರು. ಅಲ್ಲದೆ ಈಗ ವಿಷಯವೂ ಇನ್ನಷ್ಟು ಆಧುನಿಕ ಕಾಲಕ್ಕೆ ಬಂದಿದ್ದರಿಂದ, ಕೇವಲ ಇತಿಹಾಸವಲ್ಲದೆ ತಮ್ಮ ಕಾಲದ ವಿಷಯವನ್ನು ತಿಳಿದುಕೊಳ್ಳುವಲ್ಲಿ ಕುತೂಹಲವೂ ಜಾಸ್ತಿಯಾಗಿತ್ತು. ನಾಗರಾಜ್ ಬಂದದ್ದೇ ತಡ ಉಮೇಶ್ “ಸಾರ್ ಶುರು ಮಾಡಲೇ?” ಎಂದು ಕೇಳಿದ.

“ಏನು? ಯಾಕೆ ಆತುರ? ಇವತ್ತು ಮ್ಯಾಚ್ ಇದೆಯಾ?’ ಎಂದು ತಮಾಷೆ ಮಾಡಿದರು. ಭಾರತ ಕ್ರಿಕೆಟ್ ತಂಡ ಸೋತಿದ್ದ ವಿಷಯ ಅವರಿಗೂ ಗೊತ್ತಿತ್ತು. ಚರಣ್ ತಾನೇ ಆಡಿ ಸೋತಂತೆ ಸಪ್ಪಗೆ ಕುಳಿತಿದ್ದ. ಅವನ ಮುಖ ಒಮ್ಮೆ ನೋಡಿ, ಉಮೇಶನ ಕಡೆ ತಿರುಗಿ ಓದುವಂತೆ ಸೂಚನೆ ನೀಡಿದರು.

-ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನರು ಉತ್ತಮ ಮಟ್ಟದ ಧ್ವನಿಮುದ್ರಕಗಳನ್ನು ಅಭಿವೃದ್ಧಿಗೊಳಿಸಿ ಬಳಸುತ್ತಿದ್ದರು. ಆಗ ಅವರು ಪ್ಲಾಸ್ಟಿಕ್ ಟೇಪಿನ ಮೇಲೆ ಫಿರೋಮಾಗ್ನೆಟಿಕ್ ಐರನ್ ಆಕ್ಸೈಡ್ ಲೇಪನ ಮಾಡಿ, ಅದರ ಮೇಲೆ ಮುದ್ರಿಸುವ ಪ್ರಯೋಗದಲ್ಲಿ ಸಫಲರಾಗಿದ್ದರು. ಮುದ್ರಿತ ಧ್ವನಿಯು ತಕ್ಷಣವೇ ಮರುಚಾಲನೆ ಮಾಡುವುದಕ್ಕೆ ಲಭ್ಯವಾಗುತ್ತಿತ್ತು. ಈ ಯಂತ್ರಕ್ಕೆ “ಮಾಗ್ನೆಟೋಪೋನ್” ಎಂದು ಕರೆಯುತ್ತಿದ್ದರು. ಆದರೆ ಅದನ್ನು ಗುಟ್ಟಾಗಿಯೇ ಇಟ್ಟಿದ್ದರು. ಈ ಸಂದರ್ಭದಲ್ಲಿ ಮತ್ತೊಂದು ಐತಿಹಾಸಿಕ ವಿಷಯವನ್ನು ತಿಳಿಸಬಯಸುತ್ತೇವೆ. ನಿಯಮ, ಶಿಸ್ತುಗಳಿಗೆ ಹೆಸರುವಾಸಿಯಾಗಿ ತನ್ನ ಪ್ರಜೆಗಳಿಗೂ ಸಿಂಹಸ್ವಪ್ನವಾಗಿದ್ದ ಹಿಟ್ಲರ್‌ಗೆ ಆಗಿನ ಕಾಲದ ಶಾಸ್ತ್ರೀಯ ಸಂಗೀತ ಕೇಳುವುದಕ್ಕೆ ಬಹಳ ಇಷ್ಟವಂತೆ. ಅವನು ಈ ಧ್ವನಿಮುದ್ರಕಗಳಲ್ಲಿ ಮುದ್ರಿಸಿದ ಸಂಗೀತ ಕೇಳುತ್ತಿದ್ದನಂತೆ. ಆಗಿನ ಯುದ್ಧದ ಸಂದರ್ಭಕ್ಕೆ ತಕ್ಕಂತೆ ವಿಜ್ಞಾನದ ಅನೇಕ ಪ್ರಯೋಗಗಳಿಗೆ ತಡೆ ಹಾಕಿದರೂ, ಈ ಧ್ವನಿಮುದ್ರಕದ ಪ್ರಯೋಗಗಳಿಗೆ, ಅಭಿವೃದ್ಧಿಗೆ ಉತ್ತೇಜನ ನೀಡಿದನಂತೆ. ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಆತನ ಭಾಷಣಗಳನ್ನೂ, ಯುದ್ಧ ಸಂಬಂಧಿ ವಾರ್ತೆ ಮತ್ತು ಘೋಷಣೆಗಳನ್ನು ಧ್ವನಿಮುದ್ರಿಸಿ ರೇಡಿಯೋ ಮೂಲಕ ಪ್ರಸಾರ ಮಾಡಲು ಧ್ವನಿಮುದ್ರಕಗಳ ಅಗತ್ಯವಿತ್ತು. ಜರ್ಮನಿಯ ರೇಡಿಯೋ ಪ್ರಸಾರದ ಧ್ವನಿ ಉತ್ತಮ ಮಟ್ಟದ್ದಾಗಿದ್ದು, ಅವರು ಆಗ ಪ್ರಚಲಿತವಾಗಿದ್ದ ಧ್ವನಿಮುದ್ರಿಕೆಗಳನ್ನಲ್ಲದೆ ಮತ್ತೇನೋ ಬಳಸುತ್ತಿರಬೇಕೆಂಬ ಗುಮಾನಿ ಎಲ್ಲರಿಗೂ ಇತ್ತು.

ಅಂತೂ ಯುದ್ಧ ಮುಗಿದ ಮೇಲೆ ೧೯೩೬ರಲ್ಲಿ ಧ್ವನಿ ಟೇಪುಗಳನ್ನು ತಯಾರಿಸುವ BASF ಕಂಪನಿಯವರು ಲಂಡನ್‌ನಿಂದ ಬಂದು ವಾದ್ಯಗೋಷ್ಠಿ ಕಾರ್ಯಕ್ರಮ ನಡೆಸಿಕೊಟ್ಟ ಲಂಡನ್ ಫಿಲ್‌ಹಾರ್ಮಾನಿಕ್ ವಾದ್ಯಗೋಷ್ಠಿಯವರ ಕಾರ್ಯಕ್ರಮವನ್ನು ಮುದ್ರಿಸಿ, ತಕ್ಷಣವೇ ಮರುಚಾಲನೆ ಮಾಡಿದಾಗ ಆ ಸಭೆಯಲ್ಲಿ ನೆರೆದಿದ್ದವರಿಗೆ ಅದನ್ನು ನಂಬುವುದಕ್ಕೇ ಆಗಲಿಲ್ಲ. ಎಲ್ಲರೂ ಎದ್ದು ನಿಂತು ಕರತಾಡನ ಮಾಡಿದರಂತೆ. ಆ ಹೊತ್ತಿಗಾಗಲೇ ಅನೇಕ ರೇಡಿಯೋ ವಾಹಿನಿಗಳು ತಮ್ಮ ಪ್ರಸಾರದಲ್ಲಿ ಈ ಮುದ್ರಕಗಳನ್ನು ಬಳಸಲು ಪ್ರಾರಂಭಿಸಿದ್ದವು.

ಈ “ಮಾಗ್ನೆಟೋಪೋನ್” ಯಂತ್ರವನ್ನು ಅಮೆರಿಕಾಕ್ಕೆ ಪರಿಚಯಿಸಿ ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಿದ ಕೀರ್ತಿ ಜಾನ್ ಟಿ ಮುಲ್ಲಿನ್‌ಗೆ ಸಲ್ಲುತ್ತದೆ. ಆತ ಅಮೆರಿಕಾದ ಸೇನಾದಳದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ. ಅವರ ತಂಡಕ್ಕೆ ಜರ್ಮನಿಯವರು ಬಳಸುತ್ತಿರುವ ಧ್ವನಿಮುದ್ರಕಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂಬ ಆದೇಶವನ್ನು ಕೊಟ್ಟಿದ್ದರು. ಅದರಂತೆ ಅವರು ಇಲೆಕ್ಟ್ರಾನಿಕ್ ಯಂತ್ರಗಳನ್ನು ವಶಪಡಿಸಿಕೊಳ್ಳುತ್ತಿದ್ದಾಗ ಅವರಿಗೆ ಒಂದು ರೇಡಿಯೋ ಕೇಂದ್ರದಲ್ಲಿ ಒಂದು “ಮಾಗ್ನೆಟೋಪೋನ್” ಸಿಕ್ಕಿತು. ಅದನ್ನು ಅಮೆರಿಕಕ್ಕೆ ಸಾಗಿಸಿ, ಅದರ ಬಗ್ಗೆ ತಿಳಿದುಕೊಂಡು, ಅದರ ಮೇಲೆ ಮತ್ತಷ್ಟು ಪ್ರಯೋಗಗಳನ್ನು ಮಾಡಿದ. ಎರಡು ವರ್ಷಗಳ ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶವನ್ನೂ ಪಡೆದ. ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದಾಗ ಜನ ಅತ್ಯಾಶ್ಚರ್ಯಗೊಂಡರು. ಅದೇ ಸಂದರ್ಭದಲ್ಲಿ ಹಾಲಿವುಡ್ ಸಂಗೀತ ತಂತ್ರಜ್ಞನೊಬ್ಬ ಒಂದು ಸಭೆಯಲ್ಲಿದ್ದು, ಅದನ್ನು ಕೇಳಿ ಆಗಿನ ಕಾಲದ ಖ್ಯಾತ ಗಾಯಕ ಕ್ರಾಸ್ಬೀಗೆ ಇದರ ವಿಷಯ ತಿಳಿಸಿದ. ಧ್ವನಿಮುದ್ರಕದ ಗುಣಮಟ್ಟವನ್ನು ನೋಡಿ ಸಂತೋಷಗೊಂಡ ಕ್ರಾಸ್ಬೀ ತನ್ನ ಕಾರ್ಯಕ್ರಮಗಳಿಗೆ ಅದನ್ನು ಬಳಸಲು ನಿಶ್ಚಯಿಸಿದ. ವಿಶೇಷವಾಗಿ ರೇಡಿಯೋ ಪ್ರಸಾರಗಳನ್ನು ಮೊದಲೇ ಮುದ್ರಿಸಿದರೆ ಅದರಿಂದ ಉತ್ತಮ ಕಾರ್ಯಕ್ರಮಗಳನ್ನು ನೀಡುವುದು ಸಾಧ್ಯವೆಂದು ಅವನು ರೇಡಿಯೋ ಕೇಂದ್ರಗಳಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸಿದ. ಮುಲ್ಲಿನ್, ಕ್ರಾಸ್ಬೀ ಮತ್ತಿತರರು ಇಂತಹ ಧ್ವನಿಮುದ್ರಕಗಳನ್ನು ತಯಾರಿಸಿವ ಒಂದು ಸಂಸ್ಥೆಯನ್ನೇ ಸ್ಥಾಪಿಸಿದರು.

ಕ್ರಾಸ್ಬೀಯಂತೂ ತನ್ನ ರೇಡಿಯೋ ಕಾರ್ಯಕ್ರಮಗಳನ್ನು ಧ್ವನಿಮುದ್ರಣ ಮಾಡಿಯೇ ಪ್ರಸಾರ ಮಾಡುತ್ತಿದ್ದನು. ಒಂದು ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡುವುದಕ್ಕೆ ಮುಂಚೆ ಧ್ವನಿಮುದ್ರಿಸಿ, ತಪ್ಪಾದ ಭಾಗವನ್ನು ಮತ್ತೆಮತ್ತೆ ಮುದ್ರಿಸಿ, ಟೇಪನ್ನು ಕತ್ತರಿಸಿ, ಅಂಟಿಸಿ ಬಹಳ ಶ್ರಮಪಟ್ಟು ಉತ್ತಮ ಮಟ್ಟದ ಪ್ರಸಾರ ಮೂಡಿಬರುವಂತೆ ಮಾಡುತ್ತಿದ್ದನು. ಕೆಲವೊಮ್ಮೆ ಜನ ಒಟ್ಟಾಗಿ ನಗುವುದನ್ನು ಕೂಡ ಮುದ್ರಿಸಿ ತಮಗೆ ಬೇಕಾದ ಕಡೆ ಅಂಟಿಸಿ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿದ್ದನಂತೆ

ಕಾಂತೀಯ ಧ್ವನಿ ಮುದ್ರಿಕೆಗಳು

ಹೆಚ್ಚು ಜನರು ಇದನ್ನು ಬಳಸುವುದಕ್ಕೆ ಪ್ರಾರಂಭಿಸಿದ ಮೇಲೆ ಅನೇಕ ಸುಧಾರಣೆಗಳಾದವು. ಒಂದು ಧ್ವನಿ ಮುದ್ರಿತ ಮಾರ್ಗ(ಟ್ರಾಕ್)ಕ್ಕೆ ಬದಲಾಗಿ ಎರಡು, ನಂತರ ನಾಲ್ಕು, ಎಂಟು ಹೀಗೆ ಹೆಚ್ಚಿಸಿ ೨೪ ಟ್ರಾಕ್‌ಗಳಿರುವ ಯಂತ್ರವನ್ನೂ ತಯಾರಿಸುವಷ್ಟು ಬೆಳಸಿದರು. ಇದರಿಂದ ಸ್ಟೀರಿಯೋಫೋನಿಕ್ ಪರಿಣಾಮಗಳನ್ನು ಅಳವಡಿಸಿವುದು ಸಾಧ್ಯವಾಯಿತು. ಬೇರೆಬೇರೆ ಮಾರ್ಗದಲ್ಲಿ ಬೇರೆ ಬೇರೆ ಸಮಯದಲ್ಲಿ ಧ್ವನಿಮುದ್ರಿಸಲೂ ಸಾಧ್ಯವಾಯಿತು. ಸ್ಟುಡಿಯೋಗಳಲ್ಲಿ ಧ್ವನಿಮುದ್ರಿಸಿ, ಅಳಿಸಿ, ಸಂಪಾದಿಸಿ, ಕತ್ತರಿಸಿ, ಅಂಟಿಸುವ ಕೆಲಸಗಳಿಗೆ ಈ ಯಂತ್ರ ಬಹಳ ಉಪಯೋಗವಾಯಿತು.

ಈ ರೀತಿಯ ಅನೇಕ ಬದಲಾವಣೆಗಳಾಗುತ್ತಿದ್ದು, ೧೯೬೩ರಲ್ಲಿ ಧ್ವನಿ ಸುರುಳಿಗಳನ್ನು ಕ್ಯಾಸೆಟ್‌ಗಳಲ್ಲಿಡುವ ಪ್ರಯತ್ನ ಮಾಡಿದರು. ಇದುವರೆವಿಗೂ ಟೇಪ್‌ಗಳು ತೆರೆದುಕೊಂಡಿದ್ದವು. ಕ್ಯಾಸೆಟ್‌ಗಳಲ್ಲಿಟ್ಟರೆ ರವಾನಿಸಲು, ಧೂಳಿನಿಂದ, ವಾತಾವರಣದ ವೈಪರೀತ್ಯಗಳಿಂದ ಅನುಕೂಲವೆಂದು ಯೋಚಿಸಿ ಈ ರೀತಿಯ ಮಾರ್ಪಾಡನ್ನು ಮಾಡಿದರು. ಆದರೆ ಇದರಿಂದ ಧ್ವನಿಮುದ್ರಕಗಳ ಗುಣಮಟ್ಟ ಕಡಿಮೆಯಾಯಿತು. ಆದರೆ ಅದನ್ನು ಕಾರುಗಳಲ್ಲಿ ಅಳವಡಿಸಿಕೊಂಡು ಕೇಳಬಹುದಾಗಿತ್ತು. ಈ ಅಂಶ ಜನರಿಗೆ ಬಹಳ ಇಷ್ಟವಾಯಿತು. ಈಗಾಗಲೇ ಮುದ್ರಿತ ಸಂಗೀತವನ್ನು ಕೇಳುವ ಹವ್ಯಾಸ ಬೆಳಸಿಕೊಂಡಿದ್ದ ಅನೇಕ ಸಂಗೀತಪ್ರಿಯರು ಕ್ಯಾಸೆಟ್‌ನಲ್ಲಿ ಬರುವ ಸಂಗೀತವನ್ನೇ ಕೇಳಲು ಮುಂದಾದರು. ಈ ಕ್ಯಾಸೆಟ್‌ಗಳಿಗೆ ಭಾರಿ ಮಾರುಕಟ್ಟೆ ಒದಗಿಬಂತು. ಆದರೆ ಅತಿ ಶೀಘ್ರದಲ್ಲಿ ಇಲೆಕ್ಟ್ರಾನಿಕ್ ಸಂಶೋಧನೆಗಳಲ್ಲಿ ಅಭಿವೃದ್ಧಿಯಾಗಿ ಕ್ಯಾಸೆಟ್ ಗುಣಮಟ್ಟವೂ ಸಾಕಷ್ಟು ಸುಧಾರಿಸಿತು.

“ಹೌದು, ಮೊನ್ನೆ ನಾವು ಬೇಲೂರು, ಹಳೆಬೀಡಿಗೆ ಹೋದಾಗಲೂ, ಆ ಟಾಕ್ಸಿಯಲ್ಲಿ ಸಾಕಷ್ಟು ಹಾಡು ಕೇಳಿದೆವು. ಮುಂಬೈಯಿಂದ ಬಂದಿದ್ದ ನನ್ನ ಸ್ನೇಹಿತರೂ ಕನ್ನಡ ಸಿನಿಮಾ ಹಾಡುಗಳನ್ನು ಬಹಳ ಇಷ್ಟಪಟ್ಟರು. ಆ ಡ್ರೈವರ್ ಎಷ್ಟು ಒಳ್ಳೊಳ್ಳೆಯ ಕ್ಯಾಸೆಟ್ ಇಟ್ಟಿದ್ದಾ ಗೊತ್ತಾ? ಯಾವದು ಕೇಳಿದರೂ ಇದೆ ಅಂತ ಹೇಳ್ತಾ ಇದ್ದ. ಕಾರ್ ಡ್ರೈವ್ ಮಾಡುತ್ತಾ, ಒಂದೇ ಕೈಲಿ ಕಣ್ಣುಮುಚ್ಚಿ, ಕಣ್ಣು ತೆಗೆಯುವುದರಲ್ಲಿ ಕ್ಯಾಸೆಟ್ ತೆಗೆದು ಬೇರೆ ಹಾಕಿಬಿಡ್ತಾ ಇದ್ದ. ಈಗಂತೂ ಕ್ಯಾಸೆಟ್‌ಗಳಿಗೆ ಬಹಳ ಕಡಿಮೆ ಬೆಲೆ.”  ಅಂತ ನಾಗರಾಜ್ ಕ್ಯಾಸೆಟ್‌ಗಳು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿರುವುದನ್ನು ತಿಳಿಸಿದರು.

“ಇವತ್ತಿನ ಜನಜೀವನದಲ್ಲಿ ಧ್ವನಿಮುದ್ರಿಸುವುದು ಎಷ್ಟು ಸುಲಭವಾಗಿದೆ ಅಲ್ವಾ ಸಾರ್?’ ಎಂದು ಕೃಷ್ಣ ಕೇಳಿದ.

ಅದಕ್ಕೆ ಉತ್ತರವಾಗಿ “ಹೌದು. ಮನೆಯಲ್ಲಿ ಮಕ್ಕಳ ಮೊದಲ ಮಾತು, ತೊದಲು ನುಡಿ ರಿಕಾರ್ಡ್ ಮಾಡಿಡುತ್ತಾರೆ. ಅಪರೂಪವಾಗಿ ಬಂದ ಸ್ನೇಹಿತರ ಜೊತೆ ಮಾತನಾಡುವಾಗ, ತಮಾಷೆಯಾಗಿ ಹರಟುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ರಿಕಾರ್ಡ್ ಮಾಡಿಡುತ್ತಾರೆ. ಕೆಲವು ಬಾರಿ ಮಾತನಾಡುವವರಿಗೆ ತಿಳಿಯದಂತೆ ಗುಟ್ಟಾಗಿ ಸೋಫಾ ಕೆಳಗೋ, ಬೀರು ಹಿಂದೆಯೋ ಚಿಕ್ಕ ಟೇಪ್ ರೆಕಾರ್ಡರ್ ಇಟ್ಟು, ರೆಕಾರ್ಡ್ ಮಾಡಿ ಅವರಿಗೆ ಅನಂತರ ಕೇಳಿಸಿ ಗೇಲಿ ಮಾಡುತ್ತಾರೆ. ಚಿಕ್ಕ ಮಕ್ಕಳಿಗೂ ಟೀಪ್ ರೆಕಾರ್ಡರ್‌ನಲ್ಲಿ ರೆಕಾರ್ಡ್ ಮಾಡಕ್ಕೆ ಗೊತ್ತಿರತ್ತೆ.” ಎಂದು ಹೇಳುತ್ತಾ ಈಗಿನ ಜನಜೀವನದಲ್ಲಿ ಧ್ವನಿಮುದ್ರಕಗಳು ಬಳಕೆಯಾಗುತ್ತಿರುವ ಬಗ್ಗೆ ಚಿಕ್ಕ ವಿವರಣೆಯನ್ನೇ ಕೊಟ್ಟರು ನಾಗರಾಜ್.

“ಸಾರ್ ಇನ್ನು ಸ್ವಲ್ಪ ಇದೆ. ಓದಿ ಮುಕ್ತಾಯ ಹಾಡಿ ಬಿಡುತ್ತೇನೆ” ಎಂದು ಉಮೇಶ್ ಮಾತು ಹರಟೆಯತ್ತ ಹೋಗುವುದಕ್ಕೆ ತಡೆ ಹಾಕಿದ.

-೧೯೮೦ರಲ್ಲಿ ಡಿಜಿಟಲ್ ತಾಂತ್ರಿಕತೆ ಬರುವವರೆಗೂ ಧ್ವನಿಮುದ್ರಕದಲ್ಲಿ ಮುದ್ರಿಸುವ ಧ್ವನಿಯ ಗುಣಮಟ್ಟವನ್ನು ಉತ್ತಮಪಡಿಸುತ್ತಲೇ ಇದ್ದರು. ಆದರೂ ಮೂಲವಾಗಿ ಕಾಂತೀಯ ಪಟ್ಟಿಕೆಯ ಮೇಲೆ ಧ್ವನಿಮುದ್ರಣವಾಗುವ ತಾಂತ್ರಿಕತೆಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಎಲ್ಲಾ ವಿಧಾನಗಳಲ್ಲಿಯೂ ಶಬ್ದದಿಂದ ಹೊರಡುವ ಕಂಪನಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವರ್ತಿಸಿ ಅದನ್ನು ಮಾಗ್ನೆಟಿಕ್ ಟೀಪಿನ ಮೇಲೆ ಮುದ್ರಿಸಲಾಗುತ್ತದೆ. ಮುದ್ರಿತ ಧ್ವನಿಯ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತಷ್ಟು ವಿದ್ಯುತ್ ತರಂಗಗಳನ್ನು ಸೇರಿಸುವುದು, ಉತ್ತಮ ಧ್ವನಿಗ್ರಾಹಕ ಮತ್ತು ಧ್ವನಿವರ್ಧಕಗಳನ್ನು ಬಳಸುವುದು, ಟೇಪಿನ ವೇಗವನ್ನು ಸೂಕ್ತವಾಗಿ ಆಯ್ದುಕೊಳ್ಳುವುದು ಇತ್ಯಾದಿ ತಂತ್ರಗಳನ್ನು ಬಳಸುತ್ತಾರೆ. ಧ್ವನಿಮುದ್ರಕಗಳಿಂದ ಹೊರಹೊಮ್ಮುವ ಧ್ವನಿಯ ಗುಣಮಟ್ಟ ಅದರ ಸಂಕೀರ್ಣತೆ, ಗಾತ್ರಕ್ಕೆ ತಕ್ಕಂತೆ ವ್ಯತ್ಯಾಸವಾಗುತ್ತದೆ.” ಎಂದು ಚರಣ್ ತನ್ನ ವಾಚನಕ್ಕೆ ಮುಕ್ತಾಯ ಹಾಡಿದ.

“ಸಾರ್ ಒಂದು ಸಲ ಧ್ವನಿಮುದ್ರಿಸಿದ ಮೇಲೆ ಎಷ್ಟು ವರ್ಷಗಳಾದರೂ ಮುದ್ರಿತ ಟೇಪನ್ನು ಬಳಸಬಹುದಾ? ಎಷ್ಟು ಸಲ ಬೇಕಾದರೂ ಕೇಳಬಹುದಾ?” ಎಂದು ಋತ್ವಿಕ್ ತನ್ನ ಅನುಮಾನವನ್ನು ಮುಂದಿಟ್ಟ.

“ಏನು ಚರಣ್, ನಿನ್ನ ಫ್ರೆಂಡ್‌ನ ಅನುಮಾನಕ್ಕೆ ಉತ್ತರವಿದೆಯಾ?” ಎಂದು ಪ್ರಶ್ನೆಯನ್ನು ಚರಣ್‌ಗೆ ತಿರುಗಿಸಿದರು.

“ಹಾ, ಅದರ ವಿಷಯ ಸ್ವಲ್ಪ ಓದಿದ್ದೇನೆ. ಈ ಟೇಪುಗಳನ್ನು ತಯಾರಿಸಿದ ಉದ್ದೇಶ ಧ್ವನಿಮುದ್ರಣ ಮಾಡಿ, ತಕ್ಷಣ ಮರುಚಾಲನೆ ಮಾಡುವುದಾಗಿತ್ತು. ಆದ್ದರಿಂದ ಇದು ತಾತ್ಕಾಲಿಕವಾದುದೆಂದೇ ಪರಿಗಣಿಸಬೇಕು. ಮಾಗ್ನೆಟಿಕ್ ಟೇಪುಗಳ ಮೇಲೆ ಲೇಪನ ಮಾಡಿರುವ ಕೆಲವು ರಾಸಾಯನಿಕ ವಸ್ತುಗಳು ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಂಡು ತಮ್ಮ ಗುಣಗಳನ್ನು ಕಳೆದುಕೊಳ್ಳುತ್ತವೆ. ಟೇಪುಗಳನ್ನು ಚಾಲನೆ ಮಾಡದೆ ಸುಮ್ಮನೆ ಇಟ್ಟಿದ್ದರೂ ಕೆಟ್ಟು ಹೋಗುತ್ತವೆ. ಟೇಪುಗಳನ್ನು ಸರಿಯಾದ ಉಷ್ಣಾಂಶ ಮತ್ತು ಹಿತಕರ ವಾತಾವರಣದಲ್ಲಿ ಸಂರಕ್ಷಿಸಿಟ್ಟರೆ ಸ್ವಲ್ಪ ಜಾಸ್ತಿಕಾಲ ಬಾಳಿಕೆ ಬರುತ್ತದೆ. ಏನೇ ಆದರೂ ಸ್ವಲ್ಪ ವರ್ಷಗಳ ನಂತರ ಕೆಟ್ಟುಹೋದರೆ ಆಶ್ಚರ್ಯವಿಲ್ಲ. ಆದ್ದರಿಂದ ಟೇಪುಗಳಲ್ಲಿ ಅಮೂಲ್ಯ ಮಾಹಿತಿಯಿದ್ದರೆ ಅದನ್ನು ಆಗಾಗ್ಗೆ ನಕಲು ಮಾಡಿ ಬೇರೆ ಮಾಧ್ಯಮಗಳಲ್ಲಿ ಅಥವಾ ಹೊಸ ಟೇಪುಗಳಲ್ಲಿ ಇಡಬೇಕು. ಹಳೆಯ ಟೇಪುಗಳನ್ನು ಮತ್ತೆ ಚಾಲಿಸ ಬೇಕಾದಾಗ ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದು ಕೆಟ್ಟು ಹೋಗಿದ್ದರೆ ಅದನ್ನು ಸರಿಯಾದ ರೀತಿ ಸಂಸ್ಕರಿಸಿ ಚಾಲಿಸಬೇಕು. ಇಲ್ಲದಿದ್ದರೆ ಅದು ರೆಕಾರ್ಡ್ ಚಾಲನೆ ಯಂತ್ರವನ್ನೂ ಕೆಡಿಸುತ್ತದೆ.” ಎಂದು ತಾನು ಓದಿದ ಕೆಲವು ವಿಷಯಗಳನ್ನು ಅಲ್ಲಿದ್ದವರಿಗೆ ತಿಳಿಸಿದ.

“ಚರಣ್, ಈ ವಿಷಯವನ್ನೂ ಬರೆದು ಬಿಡು. ಇದು ಕೂಡ ಮುಖ್ಯ ವಿಚಾರವೇ. ಅಲ್ಲದೆ ಒಂದು ಸಾರಿ ಟೇಪಿನಿಂದ ಅಳಿಸಿದ ಮಾಹಿತಿಯನ್ನು ಮತ್ತೆ ಹಿಂದಕ್ಕೆ ಪಡೆಯುವ ವಿಧಾನವೇನಾದರೂ ಇದೆಯಾ?” ಎಂದು ನಾಗರಾಜ್ ಮತ್ತೊಂದು ಪ್ರಶ್ನೆಯನ್ನು ಕೇಳಿದರು.

ಅದಕ್ಕೆ ಉತ್ತರವಾಗಿ ಉಮೇಶ್ “ಇಲ್ಲ ಸಾರ್, ಅದು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಆದರೆ ಕೆಲವು ಗೂಢಚಾರ ಸಂಸ್ಥೆಗಳಿಗೆ ಮಾತ್ರ ಈ ತಾಂತ್ರಿಕತೆ ತಿಳಿದಿದೆಯಂತೆ.” ಎಂದು ಹೇಳಿದ ಉಮೇಶ್ ಮುಂದುವರಿದು “ಏನೇ ಆದರೂ ಧ್ವನಿಮುದ್ರಿತ ಟೇಪುಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಯಂತ್ರದ ಸೂಕ್ಷ್ಮ ಭಾಗಗಳನ್ನು, ಟೇಪುಗಳ ಮುದ್ರಿತ ಭಾಗವನ್ನು ಕೈನಿಂದ ಮುಟ್ಟಬಾರದು. ಧ್ವನಿ ಮುದ್ರಕ ಹಾಗೂ ಟೇಪುಗಳನ್ನು ಧೂಳಿರದ ವಾತಾವರಣದಲ್ಲಿಡಬೇಕು.” ಎಂದು ಸೇರಿಸಿದ.

ಇಷ್ಟೆಲ್ಲಾ ಜಾಗರೂಕತೆಗಳನ್ನು ಕೇಳಿದ ಕೃಷ್ಣ, “ಅಬ್ಬಬ್ಬಾ! ಇದನ್ನೆಲ್ಲಾ ನೋಡಿದರೆ ಗ್ರಾಮಫೋನ್ ಮುದ್ರಿಕೆಗಳೇ ವಾಸಿ ಅಲ್ವಾ?”

“ಇಲ್ಲ ಹಾಗೇನೂ ಇಲ್ಲ. ಗ್ರಾಮಫೋನ್ ಮುದ್ರಿಕೆಗಳಿಗೂ ಅದರದೇ ಆದ ತೊಂದರೆಗಳಿವೆ. ಬಹಳ ಮುಂಚೆ ತಯಾರಿಸುತ್ತಿದ್ದ ಅಲ್ಯೂಮಿನಿಯಮ್ ಮುದ್ರಿಕೆಗಳು ಬಹಳ ಸಾರಿ ಮರುಚಾಲನೆ ಮಾಡಿದ ಮೇಲೆ ಹಾಳಾಗುತ್ತಿದ್ದವು. ಅಲ್ಯೂಮಿನಿಯಮ್ ಮೇಲೆ ಅಸಿಟೇಟ್ ಲೇಪನಮಾಡಿ ಬಳಸಿದಾಗ, ಸ್ವಲ್ಪ ಸಮಯದ ನಂತರ ಅಸಿಟೇಟ್ ಹೆಕ್ಕಳೆಯಾಗಿ ಬಂದು ಮುದ್ರಿಕೆಗಳು ಹಾಳಾಗುತ್ತವೆ. ಮುದ್ರಿಕೆ ತಯಾರಿಸಲು ಗಾಜನ್ನು ಬಳಸಲಾಗುತ್ತಿತ್ತು. ಆದರೆ ಗಾಜು ಒಡೆದು ಹೋಗುವ ಸಾಧ್ಯತೆ ಜಾಸ್ತಿ. ಈ ಎಲ್ಲಾ ತೊಂದರೆಗಳು ಟೇಪ್‌ಗಳಲ್ಲಿಲ್ಲ.” ಎಂದು ಚರಣ್ ಕೃಷ್ಣನ ಸಂದೇಹವನ್ನು ನಿವಾರಿಸಿದ.

“ಈ ಎರಡು ವಿಧಾನಗಳಿಗಿಂತ ಉತ್ತಮ ವಿಧಾನವೆಂದರೆ ಈಗ ಸಿಕ್ಕುವ ಆಡಿಯೋ ಸಿಡಿಗಳಲ್ಲವೇ? ಅದನ್ನು ಹೇಗೆ ತಯಾರಿಸುತ್ತಾರೆ?’ ಕೃಷ್ಣನಿಗೆ ಈಗ ನಿಜಕ್ಕೂ ಗೊಂದಲವಾಗಿ ಹೋಯಿತು.

“ಹಾ, ಅದನ್ನು ತಿಳಿದುಕೊಳ್ಳುವುದೇ ಮುಂದಿನ ಕೆಲಸ. ಆದರೆ ಇವತ್ತಿಗೆ ಇಷ್ಟು ಸಾಕು. ಅಲ್ಲದೆ ಈಗ ಚಿತ್ರ ಮಾಹಿತಿಯನ್ನು ಸಂಗ್ರಹಿಸುವ ವಿಧಾನಗಳ ಇತಿಹಾಸವನ್ನೂ ತಿಳಿದುಕೊಳ್ಳಬೇಕಲ್ಲವೇ? ಅದಾದ ನಂತರವೇ ಕೃಷ್ಣನ ಪ್ರಶ್ನೆಗೆ ಉತ್ತರ ಸಿಗುವುದು.” ಎಂದು ನಾಗರಾಜ್ ಮುಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

“ಸಾರ್, ಉಲ್ಲಾಸನ ಅಕ್ಕಿಕಾಳಿನಿಂದ ಶುರುವಾದ ಕಥೆ ಎಷ್ಟು ಬೆಳೆಯುತ್ತಿದೆಯಲ್ಲಾ! ನಾಳೆ ಚಿತ್ರ ಮಾಹಿತಿಯ ಬಗ್ಗೆ ಯಾರು ಬರೆದಿದ್ದಾರೆ ಗೊತ್ತಾ ಸಾರ್?” ಎಂದು ಕೇಳಿದ ಕೃಷ್ಣ.

ಅದಕ್ಕೆ ಉತ್ತರವಾಗಿ ನವೀನ್ ಮತ್ತು ವಿನಯ್ ಕೈ ಎತ್ತಿ ತಾವು ಸಿದ್ಧ ಎಂದು ಸೂಚಿಸಿದರು. ಅಂದಿನ ವಾಚನ ಸಭೆ ಮುಕ್ತಾಯವಾಯಿತು.

ಮಂಗಳವಾರ

ಎಲ್ಲರೂ ಸಮಯಕ್ಕೆ ಸರಿಯಾಗಿ ಸೇರಿದರು. ನವೀನ್ ಓದಲು ತಯಾರಾಗಿದ್ದ. ನಾಗರಾಜ್ ಮೇಷ್ಟ್ರು, ಕೃಷ್ಣ ಇಬ್ಬರೂ ಬಂದಿರಲಿಲ್ಲ. ಆದರೆ ಇವತ್ತು ಮತ್ತೊಬ್ಬ ಹೊಸದಾಗಿ ಗುಂಪಿಗೆ ಸೇರಿದ್ದ. ಅವನು ಸಾಗರ್. ಅವನು ಸ್ಕೂಲಿನ ಕ್ಯಾಪ್ಟನ್. ಈ ಗುಂಪಿನ ಹುಡುಗರಿಗಿಂತ ಒಂದು ಕ್ಲಾಸ್ ಮುಂದಿದ್ದ. ಆದರೆ ಆಟ, ಚರ್ಚಾಸ್ಪರ್ಧೆ, ಕ್ವಿಜ಼್ ಹೀಗೆ ಅನೇಕ ಚಟುವಟಿಕೆಗಳಲ್ಲಿ ಈ ಹುಡುಗರ ಜೊತೆಯೇ ಸೇರುತ್ತಿದ್ದ. ಇವತ್ತು ಅವನೂ ವಾಚನ ಸಭೆಗೆ ಹಾಜರಾದ.

ಸ್ವಲ್ಪ ಹೊತ್ತಿನಲ್ಲಿ ಮೇಷ್ಟ್ರು ಬಂದರು. ಆದರೆ ಕೃಷ್ಣ ನಾಪತ್ತೆ. ಎಲ್ಲರೂ ಎದ್ದು ಮೇಷ್ಟ್ರಿಗೆ ನಮಸ್ಕಾರ ಮಾಡಿದರು. ಅವರು ಸಾಗರ್‌ನ ನೋಡಿ “ಓ ಸಾಗರ್, ಏನು ಇಷ್ಟು ದಿನ ಎಲ್ಲಿಗೆ ಹೋಗಿದ್ದೆ? ಏನು ಸಮಾಚಾರ?” ಎಂದು ಕೇಳಿದರು

“ಸಾರ್, ನಾನು ನಮ್ಮ ಮನೆಯವರ ಜೊತೆ ಬದರಿ, ಕೇದಾರ ಮತ್ತೆ ಕೆಲವು ಊರುಗಳಿಗೆ ಟೂರ್ ಹೋಗಿದ್ದೆ. ನಿನ್ನೆ ರಾತ್ರಿ ಬಂದೆ. ಅದಕ್ಕೆ ಇವತ್ತು ಇಲ್ಲಿಗೆ ಬಂದೆ” ಎಂದು ತಾನು ಇಷ್ಟು ದಿನಗಳೂ ಬರದೆ ಇದ್ದುದಕ್ಕೆ ಕಾರಣ ನೀಡಿದ.

“ಹೌದು ಅವತ್ತು ಉಲ್ಲಾಸ್ ಹೇಳ್ತಾ ಇದ್ದ. ನನಗೆ ಜ್ಞಾಪಕ ಬರಲಿಲ್ಲ. ಹೇಗಿತ್ತು ಪ್ರವಾಸ? ನೀನು ಪ್ರವಾಸದ ಬಗ್ಗೆನೇ ಒಂದು ಚಿಕ್ಕ ಲೇಖನ ಮಾಡಿಬಿಡು.” ಎಂದು ನಾಗರಾಜ್ ಅವನಿಗೆ ಒಂದು ಕೆಲಸ ಕೊಟ್ಟರು.

“ಅದೂ ಮಾಡ್ತೀನಿ ಸಾರ್. ಆದರೆ ಈಗ ನಾನು ಈ ಪ್ರಾಜೆಕ್ಟ್‌ಗೇ ಸೇರಿದ್ದೇನೆ. ನಾನು ಡಿಜಿಟಲ್ ಸಂಗ್ರಾಹಕಗಳ ವಿಷಯ ಉಲ್ಲಾಸ್ ಜೊತೆ ಸೇರಿ ಬರೆದಿದ್ದೇನೆ” ಎಂದು ಹೇಳಿದ

“ಬಹಳ ಒಳ್ಳೆಯದು. ಆದರೆ ನಿನಗೆ ಪ್ರಾಜೆಕ್ಟ್ ವಿಷಯ ಯಾರು ಹೇಳಿದರು?”

“ಉಲ್ಲಾಸ್ ಮತ್ತು ಋತ್ವಿಕ್ ಇಬ್ಬರೂ ನನಗೆ ಇ-ಮೇಲ್ ಕಳಿಸ್ತಾ ಇದ್ದರು. ನನಗೆ ಇಲ್ಲಿನ ಎಲ್ಲಾ ವಿಷಯ ತಿಳೀತಾ ಇತ್ತು. ಬದರಿ ಪ್ರವಾಸ ಆದಮೇಲೆ ನಾನು ಡೆಲ್ಲಿಯಲ್ಲಿ ನಾಲ್ಕು ದಿನಗಳಿದ್ದೆ. ನಾನು ಮುಂಚೆ ಬಹಳ ಸಾರಿ ಡೆಲ್ಲಿ ನೋಡಿದೀನಿ. ಮನೆಯವರು ಡೆಲ್ಲಿ ಸುತ್ತಲು ಹೋದಾಗ ನಾನು ಮನೆಯಲ್ಲಿಯೇ ಉಳಿದು ಬರೆದುಬಿಟ್ಟೆ.”

“ಶಹಭಾಷ್ ಕ್ಯಾಪ್ಟನ್. ಡೆಲ್ಲಿಗೆ ಹೋದರೂ ಹಳ್ಳಿ ಮರೆಯಲಿಲ್ಲವಲ್ಲಾ. ನಿನಗೆ ಯಾರು ಏನು ಬರೆಯುತ್ತಿದ್ದಾರೆ ಎಂದು ಗೊತ್ತಿತ್ತಾ.?

“ಓ, ಪ್ರತಿದಿನ ಓದುತ್ತಿದ್ದ ವಿಷಯಾನ ಉಮೇಶ್ ಮತ್ತು ಚರಣ್ ಟೈಪ್ ಮಾಡಿ ಕಳಿಸ್ತಾ ಇದ್ದರು. ನನಗೆ ಎಲ್ಲ ವಿಷ್ಯ ತಿಳಿದಿದೆ”

“ನೋಡಿ, ಈಗ ಕಾಲ ಎಷ್ಟು ಬದಲಾಗಿದೆ. ಮುಂಚೆ ಒಂದು ಕಾಲದಲ್ಲಿ ಅಂದರೆ ಶಾಸನಗಳ ಕಾಲದಲ್ಲಿ ಮಾಹಿತಿಯನ್ನು ನೋಡಲು ಜನ ಶಾಸನದ ಬಳಿ ಹೋಗಬೇಕಾಗಿತ್ತು. ರಾಜನಾದರೂ ಸರಿ. ಕಾಗದ, ಪುಸ್ತಕಗಳ ಕಾಲದಲ್ಲಿ ಮಾಹಿತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗಬಹುದಾಗಿತ್ತು. ಅಥವಾ ಅಂಚೆ ಮೂಲಕವೂ ಯಾರ ಕೈಲಾದರೋ ಕಳುಹಿಸಬಹುದಾಗಿತ್ತು. ಆದರೆ ಈಗ ಕುಳಿತಲ್ಲೇ ಕುಳಿತು ಮಾಹಿತಿಯನ್ನು ಆಕಾಶಮಾರ್ಗದಲ್ಲಿ ಬೇರೆ ಕಡೆಗೆ ರವಾನಿಸಿಬಿಡಬಹುದು. ಕೇವಲ ಪಠ್ಯ ಮಾತ್ರವಲ್ಲ. ಧ್ವನಿ, ಚಿತ್ರ ಎಲ್ಲವನ್ನೂ. ಅದೂ ಬಹಳ ಬೇಗ, ಬಹಳ ದೂರ. ಅದನ್ನು ನೀವು ಇಷ್ಟು ಸಮರ್ಪಕವಾಗಿ ಉಪಯೋಗ ಮಾಡಿಕೊಂಡಿದ್ದು ನಿಜಕ್ಕೂ ಒಳ್ಳೆಯ ವಿಷಯ” ಎಂದು ಗೆಳೆಯರಿಗೆಲ್ಲಾ ಮತ್ತೊಮ್ಮೆ ಶಹಭಾಷ್ ಹೇಳಿದರು.

ಅಷ್ಟರಲ್ಲಿ ಕೃಷ್ಣ ಓಡುತ್ತಾ ಬಂದ. ಅವನ ಕೈಯ್ಯಲ್ಲಿ ಒಂದು ಪ್ಲಾಸ್ಟಿಕ್ ಚೀಲವಿತ್ತು. ಬಂದವನೇ ಚೀಲವನ್ನು ಉಮೇಶನ ಕೈಲಿ ಕೊಟ್ಟು ತಾನು ಏದುಸಿರು ಬಿಡುತ್ತಾ ಒಂದು ಕಡೆ ಕುಳಿತ. ಚೀಲವನ್ನು ಮುಟ್ಟಿ ನೋಡುತ್ತಿದ್ದಂತೆ ಉಮೇಶನಿಗೆ ಅದರಲ್ಲಿದ್ದುದು ಏನೆಂದು ತಿಳಿಯಿತು. ಅವನು ಮೂಗರಳಿಸುತ್ತಾ “ಥಾಂಕ್ಯೂ ಕೃಷ್ಣ. ಈರುಳ್ಳಿ ಪಕೋಡ ನನಗಿಷ್ಟ ಅಂತ ನನ್ನ ಕೈಲೇ ಕೊಟ್ಯಾ. ಎಲ್ಲರಿಗೂ ಸಾಕಾದಷ್ಟು ತಂದಿದ್ದಾನೆ ಸಾರ್” ಎಂದು ಹೇಳುತ್ತಾ ಎಲ್ಲರ ಮುಂದೂ ಚೀಲ ಹಿಡಿಯುತ್ತಾ ಪಕೋಡ ಹಂಚಲು ಪ್ರಾರಂಭಿಸಿದ. ಕೃಷ್ಣ ತಡವಾಗಿ ಬಂದದ್ದಕ್ಕೆ ಕಾರಣ ಕೇಳುವ ಅಗತ್ಯವೇ ಬರಲಿಲ್ಲ. ಅವರಮ್ಮನ ಕೈಲಿ ಎಲ್ಲರಿಗೂ ಆಗುವಷ್ಟು ಪಕೋಡ ಮಾಡಿಸಿಕೊಂಡು ಬರುವಷ್ಟರಲ್ಲಿ ಸ್ವಲ್ಪ ತಡವಾಗಿತ್ತು.

ನಾಗರಾಜ್ ಮೇಷ್ಟ್ರಿಗೆ ಕೃಷ್ಣನ ಈ ಕೃತ್ಯದಿಂದ ನಗು ಬಂತು. ಅವನಿಗೆ ಪಕೋಡವೂ ಬೇಕು. ಪ್ರವಚನವೂ ಬೇಕು. ಅವರೂ ಕೃಷ್ಣನ ಪಕೋಡಕ್ಕೆ ವಂದನೆ ಸಲ್ಲಿಸಿ, ನವೀನ್‌ಗೆ ಓದಲು ಸೂಚನೆ ನೀಡಿದರು.