-ಫೋಟೋಗ್ರಾಫಿಯ ಬಗ್ಗೆ ಜನರಿಗೆ ಬಹಳ ಹಿಂದೆಯೇ ತಿಳಿದಿತ್ತು. ಲಿಯೋನಾರ್ಡೊ ಡಾ ವಿಂಚಿ ಎಂಬ ಪ್ರಸಿದ್ಧ ಚಿತ್ರಗಾರ ೧೫೧೯ರಲ್ಲಿ ತನ್ನ ಪುಸ್ತಕದಲ್ಲಿ ಇದರ ಉಲ್ಲೇಖ ಮಾಡಿದ್ದಾನೆ. Camera Obscura ಬಳಸಿ ಪ್ರಾಕೃತಿಕ ಅಥವಾ ಮೂರು ಆಯಾಮದ ವಸ್ತುಗಳನ್ನು ಎರಡು ಆಯಾಮದಲ್ಲಿ ಅಂದರೆ ಚಿತ್ರದಂತೆ ಸೆರೆ ಹಿಡಿಯುವ ವಿಧಾನವನ್ನು ಇದು ವಿವರಿಸುತ್ತದೆ. Camera Obscura  ಅಂದರೆ ‘ಕತ್ತಲ ಕೋಣೆ’ ಎಂದರ್ಥ. ಈಗ ಚಿತ್ರ ತೆಗೆಯುವ ಸಾಧನಕ್ಕೆ ಕ್ಯಾಮೆರಾ ಎಂಬ ಹೆಸರು ಬರವುದಕ್ಕೆ ಇದೇ ಕಾರಣ. ಅದರ ವಿಧಾನವನ್ನು ತೋರಿಸುವ ಚಿತ್ರ ಈ ಮುಂದೆ ನೀಡಲಾಗಿದೆ. ಈ ವಿಧಾನವನ್ನು ಚಿತ್ರಕಾರರು ಚಿತ್ರರಚಿಸಲು ಉಪಯೋಗ ಮಾಡಿಕೊಳ್ಳುತ್ತಿದ್ದರು.

 

ಈಗ ಕೆಲವು ಕಡೆ ಈ Camera Obscura ದಂತೆ ಕತ್ತಲ ಕೋಣೆಗಳನ್ನು ಕಟ್ಟಿ ಪ್ರದರ್ಶನಕ್ಕೆ ಇಟ್ಟಿದ್ದಾರೆ

 

 

Camera Obscura SanFrancisco CliffHouse

ಆದರೆ ಮೊಟ್ಟ ಮೊದಲ ಫೋಟೋ ತೆಗೆದ ಕೀರ್ತಿ ಸಲ್ಲುವುದು ನೈಪ್ಸ್ (Niépce) ಎಂಬ ಫ್ರೆಂಚ್ ವಿಜ್ಞಾನಿಗೆ. ಈ ಫೋಟೋ ತೆಗೆಯಲು ಆತನು ಬೆಳಕಿಗೆ ಸಂವೇದಿಸುವ ಒಂದು ವಸ್ತುವಿನ ಮೇಲೆ ೮ ಘಂಟೆಗಳ ಕಾಲ ಬೆಳಕು ಹಾಯುವಂತೆ ಜೋಡಿಸಿಟ್ಟು ಯಶಸ್ಸನ್ನು ಪಡೆದನು. ಈ ಘಟನೆ ಸಂಭವಿಸಿದ್ದು ೧೮೨೭ನೇ ವರ್ಷದಲ್ಲಿ. ಅನಂತರ ಆತನು ಲೂಯಿಸ್ ಡಾಗುರೆ (Louis Daguerre) ಎಂಬ ಮತ್ತೊಬ್ಬ ಫ್ರೆಂಚ್ ವಿಜ್ಞಾನಿಯ ಜೊತೆಗೂಡಿ ಪ್ರಯೋಗಗಳನ್ನು ಮುಂದುವರಿಸಿದ. ಆದರೆ ನೈಪ್ಸ್ ನಾಲ್ಕು ವರ್ಷಗಳ ನಂತರ ಮರಣ ಹೊಂದಿದ. ಹಾಗಾಗಿ ಲೂಯಿಸ್ ಡಾಗುರೆ ಪ್ರಯೋಗಗಳನ್ನು ಮುಂದುವರಿಸಿ ೮ ಘಂಟೆಗಳ ಬದಲು ಕೇವಲ ಅರ್ಧ ಘಂಟೆಯಲ್ಲಿಯೇ ಫೋಟೋ ಸೆರೆ ಹಿಡಿಯಲು ಸಾಧ್ಯವಾಗುವಂತೆ ಉತ್ತಮಗೊಳಿಸಿದ. ಅಷ್ಟೇ ಅಲ್ಲದೆ ಹೀಗೆ ತೆಗೆದ ಬಿಂಬವನ್ನು ಒಂದು ರೀತಿಯ ಉಪ್ಪಿನಲ್ಲಿ ಅದ್ದುವುದರಿಂದ ಅದನ್ನು ಆ ವಸ್ತುವಿನ ಮೇಲೆ ಖಾಯಂ ಆಗಿ ಉಳಿಸಬಹುದೆಂದೂ ಕಂಡು ಹಿಡಿದ.

ಇವನ ಪ್ರಯೋಗದ ವಿವರಗಳನ್ನು ೧೮೩೯ರಲ್ಲಿ ಸಾರ್ವಜನಿಕರಿಗೆ ತಿಳಿಸಲಾಯಿತು. ಆತನು ಚಿತ್ರವನ್ನು ಸೆರೆ ಹಿಡಿಯುವ ಈ ವಿಧಾನಕ್ಕೆ ‘ಡಾಗಿರೋಟೈಪ್’ ಎಂದು ಹೆಸರಿಸಿದ. ಆದರೆ ಸರ್ ಜಾನ್ ಹರ್ಷಲ್ ಈ ವಿಧಾನಕ್ಕೆ ಫೋಟೋಗ್ರಾಫಿ ಎಂಬ ಹೆಸರು ಕೊಟ್ಟ. ಗ್ರೀಕ್ ಭಾಷೆಯಲ್ಲಿ ‘ಫೋಟೋ’ ಎಂದರೆ ಬೆಳಕು. “ಗ್ರಾಫಿ” ಎಂದರೆ ಬರೆಯುವುದು. ಈ ಚಿತ್ರವನ್ನು ಬೆಳಕಿನ ಮೂಲಕ ಬರೆಯಬಹುದು ಎಂಬುದೇ ಇದರ ಅರ್ಥ. ಈ ಸಂಶೋಧನೆಯನ್ನು ಕುರಿತು ಬರೆದ ವರದಿಯಲ್ಲಿ _ ಈ ವಿಧಾನದಲ್ಲಿ ಚಿತ್ರಕಲೆಯನ್ನು ಅರಿಯದವರೂ ಚಿತ್ರವನ್ನು ರಚಿಸಬಹುದು. ಯಾರು ಬೇಕಾದರೂ ಈ ವಿಧಾನವನ್ನು ಕಂಡುಹಿಡಿದವನು ರಚಿಸಿದಷ್ಟೇ ಉತ್ತಮವಾಗಿ ಚಿತ್ರ ಸೆರೆ ಹಿಡಿಯಬಹುದು ಎಂದು ಬರೆಯಲಾಗಿತ್ತು.

ಹೊಸ ವಿಚಾರಗಳನ್ನು ತಿಳಿಯಲು ಕಾತುರರಾಗಿರುತ್ತಿದ್ದ ಜನ, ರಾತ್ರಿಯಿಂದ ಬೆಳಗಾಗುವುದರೊಳಗೆ ತಾವೂ ಕೂಡ ‘ಡಾಗಿರೋಟೈಪ್’ ಬಳಸಿ ಚಿತ್ರ ರಚಿಸಬೇಕೆಂದು ಮುಂದಾದರು. ಅನೇಕ ಜನ ಸಫಲರಾದರು ಕೂಡ. ಈ ಹುಚ್ಚನ್ನು ಡಾಗಿರೋಮೇನಿಯಾ ಎಂದೇ ಕರೆಯುತ್ತಿದ್ದರು. ಆದರೆ ಕೆಲವು ನಿರಾಶಾವಾದಿಗಳು ಇದು ಕೇವಲ ಹುಚ್ಚು ಕಲ್ಪನೆ ಎಂದು ಹಾಸ್ಯ ಮಾಡಿದರು. ಮತ್ತೆ ಕೆಲವು ಚಿತ್ರ ಕಲಾವಿದರು ಇದರಿಂದ ತಮ್ಮ ಕಲೆಗೆ ಅಡ್ಡಿ ಒದಗಬಹುದೆಂದೂ, ಚಿತ್ರಕಲಾ ರಚನೆ ನಿಂತೇ ಹೋಗಬಹುದೆಂದು ಆತಂಕಪಟ್ಟರು.

ಇಂತಹ ವಾತಾವರಣದಲ್ಲಿಯೂ ‘ಡಾಗಿರೋಟೈಪ್’ ಮುನ್ನಡೆಯಿತು. ಆದರೆ ಈ ವಿಧಾನ ಬಹಳ ದುಬಾರಿ ಹಾಗೂ ಒಂದು ಬಾರಿ ಸೆರೆ ಹಿಡಿದ ಚಿತ್ರವನ್ನು ಪ್ರತಿ ಮಾಡಲು ಸಾಧ್ಯವಿರಲಿಲ್ಲ.

“ಅಬ್ಬ! ಈಗ ಹಾಗಿಲ್ಲವಲ್ಲಾ. ಈಗಂತೂ ಜೇಬಿನಲ್ಲಿ ಕೆಲವು ಫೋಟೋ ಒಂದು ನೆಗಟೀವ್ ಇಟ್ಟುಕೊಂಡೇ ಇರಬೇಕು. ಸ್ಕೂಲಿಗೆ, ಲೈಬ್ರರಿಗೆ, ಪರೀಕ್ಷೆಗಳ ಅರ್ಜಿಗಳಿಗೆ ಒಂದೇ, ಎರಡೇ ಅಲ್ವಾ ಸಾರ್?” ಎಂದು ಸಾಗರ್ ಹೇಳಿದ

“ಹೌದು, ಇನ್ನೂ ನೀವು ಚಿಕ್ಕವರು. ಮುಂದೆ ಹೋಗುತ್ತಾ, ಬ್ಯಾಂಕಿಗೆ, ಡ್ರೈವಿಂಗ್ ಲೈಸನ್ಸ್ ಮಾಡಿಸುವುದಕ್ಕೆ ಎಲ್ಲಾ ಕಡೆ ಗುರುತಿನ ಚೀಟಿಗೆ ಫೋಟೋಗಳು ಬೇಕಾಗುತ್ತವೆ. ಫೋಟೋ ಸ್ಟುಡಿಯೋ ಇಟ್ಟವರು ಬದುಕಿಕೊಂಡರು” ಎಂದು ಹೇಳಿ ನಾಗರಾಜ್ ನವೀನ್‌ಗೆ ಮುಂದೆ ಓದುವಂತೆ ಹೇಳಿದರು.

ಪ್ರತಿಮಾಡಲು ಆಗದಿದ್ದ ಕಾರಣ ಚಿತ್ರಗಳು ಏಕೈಕ ಪ್ರತಿಗಳಾಗಿ ಅದರ ಮೌಲ್ಯ ಹೆಚ್ಚುತ್ತಿತ್ತು. ಒಂದೇ ಫೋಟೋದ ಎರಡು ಪ್ರತಿಗಳು ಬೇಕಾದರೆ ಎರಡು ಕ್ಯಾಮೆರಾಗಳನ್ನು ಪಕ್ಕಪಕ್ಕದಲ್ಲಿ ಇಟ್ಟು ಚಿತ್ರವನ್ನು ಸೆರೆ ಹಿಡಿಯುತ್ತಿದ್ದರು. ಆದರೆ ಮತ್ತೆ-ಮತ್ತೆ ಪ್ರತಿಗಳನ್ನು ಮಾಡುವ ಸೌಕರ್ಯದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ವಿಲಿಯಮ್ ಹೆನ್ರಿ ಫಾಕ್ಸ್ ಟಾಲ್‌ಬಾಟ್. ಕಾಲೋಟೈಪ್ ಎಂದು ಕರೆಯಲಾದ ಮತ್ತೊಂದು ವಿಧಾನವನ್ನು ಕಂಡುಹಿಡಿದ. ಈ ವಿಧಾನದಲ್ಲಿ ಸಿಲ್‌ವರ್ ಕ್ಲೋರೈಡ್‌ನಲ್ಲಿ ಅದ್ದಿದ ಕಾಗದದ ಮೇಲೆ ಬೆಳಕನ್ನು ಹಾಯಿಸಿ ಚಿತ್ರವನ್ನು ಸೆರೆಹಿಡಿದ. ಇದರ ಬಗ್ಗೆ ಸಾರ್ವಜನಿಕ ವರದಿಯನ್ನೂ ಬಿಡುಗಡೆ ಮಾಡಿದ. ಆ ವರದಿಗೆ ‘ಚಿತ್ರಕಾರನ ಕುಂಚದ ಅಗತ್ಯವಿಲ್ಲದೆ ಮೂಡಿ ಬರುವ ಚಿತ್ರಗಳು’ ಎಂದು ಅರ್ಥ ಬರುವ ಶೀರ್ಷಿಕೆಯನ್ನು ನೀಡಿದ. ಆ ವರದಿಯಲ್ಲಿ ‘ಈ ಪ್ರಕೃತಿಯಲ್ಲಿರುವ ಸುಂದರ ದೃಶ್ಯಗಳು ಕಾಗದದ ಮೇಲೆ ಮುದ್ರಣವಾಗಿ ಖಾಯಂ ಆಗಿ ನೆಲಸುವಂತಾದರೆ ಎಷ್ಟು ಚೆನ್ನ’ ಎಂದು ತನ್ನ ನಿರೀಕ್ಷೆಯನ್ನು ಜನರಿಗೆ ತಿಳಿಸಿದ.

ಅದರಂತೆ ಸತತ ಪ್ರಯತ್ನ ಪಟ್ಟು ೧೮೪೪ರಲ್ಲಿ ಹಲವಾರು ಚಿತ್ರಗಳನ್ನೊಳಗೊಂಡ “ಪೆನ್ಸಿಲ್ ಆಫ್ ನೇಚರ್” ಎಂಬ ಪುಸ್ತಕವನ್ನೂ ಹೊರತಂದ. ಮೊದಲ ಫೋಟೋ ನೆಗಟೀವ್ ಕಂಡು ಹಿಡಿದ ಹೆಗ್ಗಳಿಕೆಗೂ ಪಾತ್ರನಾದ. ಆ ನೆಗಟೀವ್‌ನ ಅಳತೆ ೧ ಚದರ ಇಂಚು ಮಾತ್ರವಾಗಿದ್ದು ಗುಣಮಟ್ಟವೂ ಉತ್ತಮವಾಗಿರಲಿಲ್ಲ. ಈತನು ಸಿದ್ಧಪಡಿಸಿದ ಚಿತ್ರಗಳು ‘ಡಾಗಿರೋಟೈಪ್’ ನಿಂದ ತಯಾರಿಸಿದ ಚಿತ್ರಗಳ ಗುಣಮಟ್ಟವನ್ನು ತಲುಪಲಿಲ್ಲ. ಆದರೂ ಆತನು ೧೮೪೫ರಲ್ಲಿ ಮೊದಲು ಕಾಗದದ ಮೇಲೆ ಫೋಟೋ ನೆಗಟೀವ್ ತಯಾರಿಸಿದ ವಿಧಾನ ಇಂದಿಗೂ ಫೋಟೋಗ್ರಾಫಿ ತಾಂತ್ರಿಕತೆಗೆ ಆಧಾರವಾಗಿದೆ.

ಇದಾದ ನಂತರ ಮುಂದಿನ ಬದಲಾವಣೆ ಬಂದದ್ದು ೧೮೫೧ರಲ್ಲಿ. ಫ್ರೆಡೆರಿಕ್ ಸ್ಕಾಟ್ ಆರ್ಚರ್ ಎಂಬುವವನು ‘’’ಕೊಲೊಡಿಯಾನ್” ಎಂಬ ವಿಧಾನವನ್ನು ಕಂಡು ಹಿಡಿದ. ಈ ವಿಧಾನದಲ್ಲಿ ಒಂದು ಫೋಟೋ ಸೆರೆ ಹಿಡಿಯಲು ಕೇವಲ ಎರಡು ಅಥವಾ ಮೂರು ಸೆಕೆಂಡುಗಳಷ್ಟೇ ಸಾಕು ಎನ್ನುವಷ್ಟು ಹಂತಕ್ಕೆ ವಿಧಾನವನ್ನು ಉತ್ತಮಗೊಳಿಸಿದ ಮತ್ತು ಫೋಟೋ ತೆಗೆಯುವ ಖರ್ಚು ಕೂಡ ಕಡಿಮೆಯಾಗಿತ್ತು. ಆದರೆ ಈ ವಿಧಾನದಲ್ಲೂ ಒಂದು ತೊಂದರೆ ಇತ್ತು. ನೆಗಟೀವ್ ತಯಾರಿಸಲು ಫೋಟೋ ಸೆರೆ ಹಿಡಿದ ಗಾಜಿನ ಹಾಳೆ ಒದ್ದೆಯಾಗಿಯೇ ಇರಬೇಕಾಗಿತ್ತು. ಆದ್ದರಿಂದ ಫೋಟೋ ತೆಗೆದ ಕೂಡಲೆ ನೆಗಟೀವ್ ತಯಾರಿಸಲು ಸಾಧ್ಯವಾಗುವಂತೆ ಆ ಸ್ಥಳಕ್ಕೇ ಅನೇಕ ರಾಸಾಯನಿಕ ಪದಾರ್ಥಗಳನ್ನೂ ಮತ್ತಿತರ ಸಾಧನಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಅಥವಾ ಫೋಟೋ ತೆಗೆದ ನಂತರ ಹಾಳೆಯನ್ನು ಒದ್ದೆಯಾಗಿರುವಂತೆ ಕಾಪಾಡಬೇಕಾಗುತ್ತಿತ್ತು.

ಆದರೆ ವಿಜ್ಞಾನಿಗಳು ಕೆಲಸವನ್ನು ಮುಂದುವರಿಸುತ್ತಲೇ ಇದ್ದರು. ೧೮೭೧ರಲ್ಲಿ ಡಾ. ರಿಚರ್ಡ್ ಮಡಾಕ್ಸ್ ಎಂಬ ಇಂಗ್ಲಿಷ್ ವೈದ್ಯ ಗಾಜಿನ ಹಾಳೆಗಳ ಮೇಲೆ ಜೆಲಾಟಿನ್ ಮತ್ತು ಸಿಲ್‌ವರ್ ಬ್ರೋಮೈಡ್ ಲೇಪನ ಉಪಯೋಗಿಸಿದರೆ ಈ ಒದ್ದೆಯಾಗಿಟ್ಟುಕೊಳ್ಳುವ ತೊಂದರೆಯಿಂದ ಬಿಡುಗಡೆ ಹೊಂದಬಹುದೆಂದು ನಿರೂಪಿಸಿದ. ಇದು ಅತ್ಯಂತ ಪ್ರಮುಖ ಬದಲಾವಣೆಯೇ ಆಯಿತು. ರಾಸಾಯನಿಕ ವಸ್ತುಗಳನ್ನು ಫೋಟೋ ಸೆರೆ ಹಿಡಿಯುವ ಕಡೆಗೆ ಕೊಂಡೊಯ್ಯುವ ತೊಂದರೆ ಇಲ್ಲದೆ, ಆ ಸ್ಥಳದಲ್ಲಿ ಕತ್ತಲೆ ಕೋಣೆಯ ಏರ್ಪಾಡು ಮಾಡಿಕೊಳ್ಳುವ ಕಿರಿಪಿರಿ ಇಲ್ಲದೆ ಚಿತ್ರಗಳನ್ನು ತಯಾರಿಸುವುದು ನಿಜಕ್ಕೂ ಬಹಳ ಸಂತಸ ತಂದಿತು. ಯಾವ ಹೆಚ್ಚಿನ ಕುಶಲತೆ ಇಲ್ಲದೆ ಯಾರು ಬೇಕಾದರೂ ಫೋಟೋ ತೆಗೆಯಬಹುದೆಂಬ ವಿಷಯ ಆಸಕ್ತರಿಗೆ ಚೇತೋಹಾರಿಯಾಗಿತ್ತು. ಹೀಗೇ ಸಂಶೋಧನೆಗಳಾಗುತ್ತಿದ್ದು ೧೮೮೪ರಲ್ಲಿ ಜಾರ್ಜ್ ಈಸ್ಟಮನ್ “ಬಾಕ್ಸ್ ಕಾಮೆರಾ” ಕಂಡು ಹಿಡಿದು, ಅದಕ್ಕೆ ತಕ್ಕಂತಹ ಫೋಟೋ ಫಿಲ್ಮ್ ತಯಾರಿಸಿ ಫೋಟೋಗ್ರಾಫಿಯನ್ನು ಮತ್ತಷ್ಟು ಜನಪ್ರಿಯಗೊಳಿಸಿದ. ಆಗ ಆತನಿಗೆ ಕೇವಲ ೨೮ ವರ್ಷಗಳು.

ಇಲ್ಲಿಯವರೆಗೂ ಕೇವಲ ಸ್ಥಿರ ಚಿತ್ರಗಳನ್ನು ತಯಾರಿಸುವುದರಲ್ಲಿ ಮಗ್ನರಾಗಿದ್ದ ವಿಜ್ಞಾನಿಗಳು ಚಲನಚಿತ್ರದತ್ತ ತಮ್ಮ ಗಮನ ಹರಿಸಿದರು. ೧೮೭೭ರಲ್ಲಿ ಧ್ವನಿಮುದ್ರಣ ಮಾಡುವುದರಲ್ಲಿ ಯಶಸ್ಸು ಗಳಿಸಿದ ಎಡಿಸನ್ ಆಮೇಲೆ ಅತ್ತ ಕಡೆ ಗಮನ ಹರಿಸಲಿಲ್ಲ. ಹಾಗೆಂದು ಅವನು ಸುಮ್ಮನಿರಲಿಲ್ಲ. ಆತನಿಗೆ “Wizard of West Orange,” ಎಂದೇ ಗುರುತಿಸಲಾಗುತ್ತಿತ್ತು ಅವನ ಹೆಸರಿನಲ್ಲಿ ಸಾವಿರಕ್ಕೂ ಹೆಚ್ಚು ಪೇಟೆಂಟುಗಳಿದ್ದವು.

“ಸಾರ್, ಒಬ್ಬನ ಜೀವಮಾನದ ಕಾಲದಲ್ಲಿ ಇಷ್ಟೆಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾ? ಅವರು ಊಟ ತಿಂಡಿ ಏನೂ ತಿನ್ನುತ್ತಿರಲಿಲ್ಲವಾ? ಅವರಿಗೆ ಅಷ್ಟೊಂದು ಸಮಯವೆಲ್ಲಿತ್ತು?” ಇದು ಕೃಷ್ಣನ ಅನುಮಾನ

ಅದಕ್ಕೆ ಉತ್ತರವಾಗಿ ನವೀನ್ ಹೇಳಿದ. “ಸರಿಯಾಗಿ ಕೇಳಿದೆ ಕಣೋ. ನಿನ್ನ ಅನುಮಾನ ನಾನು ಪರಿಹರಿಸುತ್ತೇನೆ. ಎಡಿಸನ್ ತಾನೊಬ್ಬನೇ ಕೆಲಸ ಮಾಡುತ್ತಿರಲಿಲ್ಲ. ಅವನ ಬಳಿ ಸಮರ್ಥರಾದ ಅನೇಕ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದರು. ಅವರಿಗೆ ಇವನು ತನ್ನ ಯೋಜನೆಗಳನ್ನು ಹೇಳಿ, ಮಾರ್ಗದರ್ಶನ ಮಾಡಿ ಅನುಕೂಲಗಳನ್ನು ಕಲ್ಪಿಸಿ ಕೊಡುತ್ತಿದ್ದನು. ತಾನೂ ಕೆಲಸ ಮಾಡುತ್ತಿದ್ದನು. ಎಷ್ಟೋ ಬಾರಿ ಎಡಿಸನ್ ಕಂಡುಹಿಡಿದನೆನ್ನುವ ವಿಧಾನಗಳನ್ನು ಸಂಪೂರ್ಣವಾಗಿ ಆತನ ಸಹಾಯಕರೇ ಕಂಡುಹಿಡಿದಿದ್ದಿರಬಹುದು. ಆದರೆ ಅದರ ಕೀರ್ತಿ ಮಾತ್ರ ಆತನಿಗೆ ಸಲ್ಲುತ್ತಿತ್ತು. ಇದರ ಬಗ್ಗೆ ಅನೇಕ ವಿವಾದಗಳೂ ಆಗುತ್ತಿದ್ದವಂತೆ. ಆದರೆ ಒಂದು ವಿಷಯ. ಅವರೆಲ್ಲರೂ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ತಮ್ಮ ಗುರಿ ತಲುಪಬೇಕೆಂಬ ಛಲ ಎಲ್ಲರಲ್ಲೂ ಇತ್ತು.”

“ಸರಿಯಾಗಿ ಹೇಳಿದೆ ನವೀನ್, ಮನುಷ್ಯನಿಗೆ ತಾನು ಏನಾದರೂ ಮಾಡಿ ಗೆಲ್ಲುತ್ತೇನೆಂಬ ಛಲ ಬಹಳ ಮುಖ್ಯ. ನಮ್ಮ ದೇಶದ ಸರ್ ಸಿ.ವಿ.ರಾಮನ್, ಸರ್ ಎಂ.ವಿಶ್ವೇಶ್ವರಯ್ಯ ಇಂತಹವರನ್ನು ನಾವು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಈ ಮಹನೀಯರು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿರಲಿಲ್ಲ. ಆದ್ದರಿಂದಲೇ ಅವರು ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿ, ಅಪಾರ ಯಶಸ್ಸನ್ನು ಗಳಿಸಿದರು.” ಎಂದು ನಾಗರಾಜ್ ಸಮಯದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

ನವೀನ್ ತಾನು ಓದುವುದು ಸಾಕೆಂದು ಬರೆದಿದ್ದ ಹಾಳೆಗಳನ್ನು ವಿನಯ್‌ಗೆ ಕೊಟ್ಟು ಮುಂದೆ ಓದುವಂತೆ ಹೇಳಿದ.

-೧೮೮೮ರಲ್ಲಿ ಎಡಿಸನ್ ಪ್ರಯೋಗಶಾಲೆಗೆ ಎಡ್‌ವರ್ಡ್ ಮೇಬ್ರಿಡ್ಜ್ ಭೇಟಿ ನೀಡಿ ಇಬ್ಬರೂ ಸೇರಿ ಚಲನಚಿತ್ರ ತಂತ್ರವನ್ನು ಕಂಡುಹಿಡಿಯಬೇಕೆಂದು ಸೂಚಿಸಿ, ತಾನು ಆಗಲೇ ತಯಾರಿಸಿದ್ದ ಜ಼ೋಪ್ರಾಕ್ಸಿಸ್ಕೋಪ್ (Zoopraxiscope) ಎಂಬ ಯಂತ್ರವನ್ನು ತೋರಿಸಿದ. ಎಡಿಸನ್ ಆತನ ಜೊತೆ ಕೆಲಸ ಮಾಡಲು ಒಪ್ಪಿಗೆ ಕೊಡಲಿಲ್ಲ. ಆದರೆ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದ. ಆ ಕೂಡಲೆ ‘ಕಿವಿಗೆ ಫೋನೋಗ್ರಾಫ್ ಮಾಡಿದ ಕೆಲಸವನ್ನು, ಕಣ್ಣಿಗೆ ಮಾಡುವಂತಹ ಯಂತ್ರವನ್ನು ನಾನು ತಯಾರಿಸುತ್ತೇನೆ’ ಎಂದು ಘೋಷಿಸಿದ. ಅಂದರೆ ಚಲಿಸುತ್ತಿರುವ ಚಿತ್ರಗಳನ್ನು ಮುದ್ರಿಸಿ ಮರುಚಾಲನೆ ಮಾಡುವ ಯಂತ್ರ. ಅದಕ್ಕೆ ಆತ “ಕೈನೆಟೋಸ್ಕೋಪ್” ಎಂದು ಹೆಸರಿಸಿದ. ಗ್ರೀಕ್ ಭಾಷೆಯಲ್ಲಿ “ಕೈನೆಟೋ” ಎಂದರೆ ಚಲನೆ, “ಸ್ಕೋಪ್” ಎಂದರೆ ಗಮನಿಸುವುದು, ನೋಡುವುದು ಎಂಬ ಅರ್ಥ ಬರುತ್ತದೆ.

ಈ ಗುರಿಯನ್ನು ತಲುಪಲು ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದರು. ಅದೇ ಸಮಯದಲ್ಲಿ ಈಸ್ಟಮನ್ ಕಂಪನಿಯವರು ತಯಾರಿಸಿದ ಸೆಲ್ಯುಲಾಯ್ಡ್ ಫಿಲ್ಮ್ ಸುರುಳಿಗಳು ದೊರಕಿದ ಮೇಲೆ ಇವರಿಗೆ ಯಶಸ್ಸು ಸಿಕ್ಕಿತು. ಇವರು ೧೮೯೨ರಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ ‘ಕೈನೆಟೊಗ್ರಾಫ್” ನಲ್ಲಿ ೫೦ಅಡಿ ಉದ್ದದ ಸೆಲ್ಯುಲಾಯ್ಡ್ ಫಿಲ್ಮ್ ಬಳಸಿದರು. ಈ ಫಿಲ್ಮ್ ಅನ್ನು ಒಂದು ಮರದ ಪೆಟ್ಟಿಗೆಯಲ್ಲಿ ತಿರುಗುವ ಗಾಲಿಗಳಿಗೆ ಸುತ್ತಿ, ಅದನ್ನು ಸರಿಯಾದ ವೇಗದಲ್ಲಿ ಚಾಲನೆ ಮಾಡಲು ವಿದ್ಯುಚ್ಛಕ್ತಿಯಿಂದ ಓಡುವ ಮೋಟರನ್ನು ಬಳಸಿದರು. ಫಿಲ್ಮ್ ಚಾಲನೆಯಲ್ಲಿದ್ದಾಗ, ಪೆಟ್ಟಿಗೆಯ ಒಂದು ಭಾಗದಲ್ಲಿ ಚಿಕ್ಕ ತೂತಿನ ಮೂಲಕ ನೋಡಿದಾಗ ಚಿತ್ರದ ಪಾತ್ರಗಳು ಚಲಿಸುವಂತೆ ಕಾಣುತ್ತಿತ್ತು, ಇದಕ್ಕೆ ಮತ್ತಷ್ಟು ಪರಿಣಾಮ ಸೇರಿಸಲು ಫಿಲ್ಮ್ ಹಿಂದೆ ಒಂದು ದೀಪವನ್ನು ಅಳವಡಿಸಲಾಗಿತ್ತು. ಅಷ್ಟೇ ಅಲ್ಲದೆ ಚಿತ್ರದ ಗಾತ್ರ ಹಿಗ್ಗಿಸಲು ಮಸೂರಗಳನ್ನೂ ಬಳಸಿದ್ದರು. ಹೀಗೆ ವಿಜ್ಞಾನದ ವಿವಿಧ ವಿಭಾಗಗಳಲ್ಲಿ ಹೊಸಹೊಸ ಸಂಶೋಧನೆಗಳಾಗುತ್ತಿದ್ದ ಹಾಗೆ ಅವುಗಳ ಪ್ರಯೋಜನ ಪಡೆದು ಹೆಚ್ಚು ಸಂಕೀರ್ಣವಾದ ಯಂತ್ರಗಳನ್ನು ಪಡೆಯಲು ಸಾಧ್ಯವಾಯಿತು.

“ಹೌದಲ್ಲವಾ ಸಾರ್, ಒಂದು ಚಲನಚಿತ್ರ ಯಂತ್ರ ತಯಾರಿಸಲು, ಕೆಮಿಸ್ಟ್ರಿ, ಫಿಸಿಕ್ಸ್, ಮೆಕ್ಯಾನಿಕಲ್ ಇಂಜನಿಯರಿಂಗ್ ಎಲ್ಲಾ ಗೊತ್ತಿರಬೇಕು. ಬೆಳಕು, ಶಬ್ದ, ಇಲೆಕ್ಟ್ರಿಸಿಟಿ ಎಲ್ಲದರ ಗುಣಗಳು ತಿಳಿದಿರಬೇಕು.” ಎಂದು ಉಲ್ಲಾಸ್ ಉದ್ಗರಿಸಿದ

“ಹುಂ, ಮಾನವ ಜನಜೀವನವೇ ಹಾಗಲ್ಲವೇ? ನಾವು ಬೇರೆಯಾಗಿ, ಯಾರ ಜೊತೆಯೂ ಬೆರೆಯದೆ, ಸಂಪರ್ಕಹೊಂದದೆ, ವಿಷಯಗಳನ್ನು ತಿಳಿದುಕೊಳ್ಳದೆ, ದೂರವಾಗಿ ಉಳಿದರೆ ಪ್ರಗತಿ ಹೊಂದುವುದು ಸಾಧ್ಯವಿಲ್ಲ. ಈಗ ನೋಡಿ ಪ್ರಪಂಚದಲ್ಲಿ ಎಲ್ಲಾ ವಿಷಯಗಳೂ ಎಲ್ಲರಿಗೂ ಲಭ್ಯವಾಗುತ್ತಿದೆ. ಒಳ್ಳೆಯ ವಿಷಯವಾಗಲೀ, ಅನಾಹುತ-ಅಪಘಾತಗಳಾಗಲೀ ಎಲ್ಲಿ ನಡೆದರೂ ಪ್ರಪಂಚದ ಜನರೆಲ್ಲಾ ಸ್ಪಂದಿಸುತ್ತಾರೆ. ಹೀಗಾಗಿ ಈ ಕಳೆದ ಶತಮಾನದಲ್ಲಿ ಅನೇಕ ಅದ್ಭುತ ಬೆಳವಣಿಗೆಗಳಾಗಿವೆ.” ಎಂದು ನಾಗರಾಜ್ ಸಹಜೀವನದ ಸಾರವನ್ನೇ ಹೇಳಿದರು.

ಹೀಗೆಯೇ ಮುಂದುವರಿದು ಬೆಳವಣಿಗೆಗಳಾಗುತ್ತಿದ್ದು ೧೮೮೮ ರಲ್ಲಿ ಕೊಡಕ್ ಕಂಪನಿಯವರು ಫಿಲ್ಮ್ ಹಾಕಬಹುದಾದ ಕ್ಯಾಮೆರಾ ತಯಾರಿಸಿದರು. ಇದರಲ್ಲಿ ೨-೧/೨ ಇಂಚು ವ್ಯಾಸವುಳ್ಳ ವೃತ್ತಾಕಾರದ ನೂರು ಚಿತ್ರಗಳನ್ನು ಸೆರೆ ಹಿಡಿಯಬಹುದಾಗಿತ್ತು. ೧೯೦೭ರ ಹೊತ್ತಿಗೆ ಬಣ್ಣದ ಚಿತ್ರ ಸೆರೆ ಹಿಡಿಯಬಲ್ಲ ಫಿಲ್ಮ್‌ಗಳು ಮಾರುಕಟ್ಟೆಗೆ ಬಂತು. ೧೯೧೭ರಲ್ಲಿ ಟೋಕಿಯೋದಲ್ಲಿ ನಿಕಾನ್ ಕ್ಯಾಮೆರಾಗಳನ್ನು ತಯಾರಿಸುವ ಸಂಸ್ಥೆ ಸ್ಥಾಪಿತವಾಯಿತು. ಫಿಲ್ಮ್ ಮತ್ತು ಮಸೂರಗಳು- ಈ ಎರಡೂ ವಿಭಾಗಗಳಲ್ಲಿ ಅನೇಕ ಅವಿಷ್ಕಾರಗಳು ಆಗುತ್ತಲೇ ಇದ್ದವು. ೧೯೩೨ರಲ್ಲಿ ಬಣ್ಣದ ಚಲನಚಿತ್ರಗಳೂ ತಯಾರಿಸಲು ಸಾಧ್ಯವಾಗುವಂತೆ ಕ್ಯಾಮೆರಾಗಳನ್ನು ಅಭಿವೃದ್ಧಿ ಪಡಿಸಿದರು. ೧೯೩೪ರಲ್ಲಿ ಈಗ ಪ್ರಸಿದ್ದವಾಗಿರುವ ಫ್ಯುಜಿ ಸಂಸ್ಥೆ ಪ್ರಾರಂಭವಾಯಿತು. ಈ ಕಂಪನಿಯಲ್ಲಿ ಮಸೂರ ಕ್ಯಾಮೆರಾ ಹಾಗೂ ಫಿಲ್ಮ್ ಎಲ್ಲವನ್ನೂ ಒಂದೇ ಸೂರಿನಡಿ ತಯಾರಿಸಲಾರಂಭಿಸಿದರು. ಈ ಸಮಯದಲ್ಲಿ ಎರಡನೆ ಮಹಾಯುದ್ಧ ಪ್ರಾರಂಭವಾಯಿತು. ಆ ಕಾಲದಲ್ಲಿ ಅನೇಕ ಸಾಹಸಿಗರು ಯುದ್ಧದ ದೃಶ್ಯಗಳನ್ನೂ ಚಿತ್ರಿಸಿ ಅನೇಕ ಪತ್ರಿಕೆಗಳಿಗೆ ತಲುಪಿಸುತ್ತಿದ್ದರು.

ಮುಂದೆ ಬಂದ ಫೋಟೋಗ್ರಾಫಿ ತಾಂತ್ರಿಕತೆಯಲ್ಲಿ ಗಮನಾರ್ಹವಾದುದೆಂದರೆ ೧೯೪೮ರಲ್ಲಿ  ಜಪಾನಿನ ಪೆನ್ಟಾಕ್ಸ್ ಕಂಪನಿಯವರು ಸ್ವಯಂಚಾಲಿತ ಡಯಾಫ್ರಮ್ ಬಳಕೆಗೆ ತಂದರು. ಪೋಲರಾಯ್ಡ್ ಸಂಸ್ಥೆಯವರು ತಕ್ಷಣವೇ ಚಿತ್ರ ನೀಡುವ ಪೋಲರಾಯ್ಡ್ ತಂತ್ರಜ್ಞಾನವೆಂದೇ ಕರೆಯಲಾಗುವ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ತಂದರು. ಈ ವಿಧಾನದಲ್ಲಿ, ಚಿತ್ರ ಸೆರೆ ಹಿಡಿದ ಮೇಲೆ ಫಿಲ್ಮ್ ಕ್ಯಾಮೆರಾದಿಂದ ಆಚೆ ಬಂದು ಒಂದೆರಡು ನಿಮಿಷಗಳಲ್ಲಿ ಚಿತ್ರವಾಗಿ ಬದಲಾಗುತ್ತದೆ. ಆದರೆ ಇದರ ಗುಣಮಟ್ಟವೇನೂ ಉತ್ತಮವಾಗಿರುವುದಿಲ್ಲ. ಮತ್ತು ಇದರಿಂದ ಮತ್ತೆಮತ್ತೆ ಚಿತ್ರಗಳನ್ನು ಮುದ್ರಿಸಲಾಗುವುದಿಲ್ಲ.

“ನಾನು ಇಂತಹ ಫೋಟೋ ತೆಗೆಸಿಕೊಂಡಿದ್ದೇನೆ. ಕಳೆದ ಸಲ ಮೈಸೂರಿಗೆ ಹೋಗಿದ್ದಾಗ ಅರಮನೆಯ ಮುಂದೆ ಇಂತಹ ಫೋಟೋ ತೆಗೆಯುತ್ತಾ ಇದ್ದರು. ನಮ್ಮ ಮನೆಯವರೆಲ್ಲ ಒಟ್ಟಿಗೆ ಫೋಟೋ ತೆಗೆಸಿಕೊಂಡೆವು. ತಕ್ಷಣ ಫೋಟೋ ನೋಡಕ್ಕೆ ಒಂದು ತರ ಮಜಾ.” ಎಂದು ಋತ್ವಿಕ್ ತನ್ನ ಅನುಭವ ಹೇಳಿದ.

“ಹೌದು, ತಾಜ್‌ಮಹಲ್ ಮುಂದೇನೂ ಹೀಗೆ ತೆಗೆಯುತ್ತಾ ಇರುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಇದು ಮಾಮೂಲು” ಎಂದು ಸಾಗರ್ ತನ್ನ ಧ್ವನಿಗೂಡಿಸಿದ.

-೧೯೪೮ರಲ್ಲಿ ಮತ್ತೊಂದು ವಿಶೇಷವೆಂದರೆ ಮೊದಲ SLR(single lens reflex) ಕ್ಯಾಮೆರಾಗಳು ಸಾರ್ವಜನಿಕವಾಗಿ ದೊರಕುವಂತೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು.

ಇಷ್ಟಕ್ಕೇ ನಿಲ್ಲದ ಈ ಫೋಟೋಗ್ರಾಫಿಯ ಓಟ ೧೯೬೩ರಲ್ಲಿ ಈಗಾಗಲೇ ಪೋಲೋರಾಯ್ಡ್ ಫೋಟೋಗಳ ಬಗ್ಗೆ ಹೇಳಿದೆವಲ್ಲಾ ಅದೇ ರೀತಿ ಫೋಟೋಗಳನ್ನು(color instant) ತೆಗೆದ ತಕ್ಷಣ ಫಿಲ್ಮ್‌ನಿಂದ ಬಣ್ಣದ ಚಿತ್ರವನ್ನು ಪಡೆಯುವ ಹಂತಕ್ಕೆ ತಲುಪಿತು. ನೆಲದ ಮೇಲಿನ ಓಟ ಸಾಲದೆಂಬಂತೆ ಸಾಗರದ ತಳಕ್ಕೂ ತಲುಪಿತು. ‘ಅಯ್ಯೋ! ಕ್ಯಾಮೆರಾನ ನೀರಿನೊಳಗೆ ತೆಗೆದುಕೊಂಡು ಹೋದರೆ ಕೆಟ್ಟು ಹೋಗುವುದಿಲ್ಲವಾ?’ ಎಂದು ಚಿಂತಿಸಬೇಡಿ. ಅದಕ್ಕೆ ಸಾಕಷ್ಟು ಭದ್ರತೆಯನ್ನು ಮಾಡಿಯೇ ನಿಕಾನ್ ಕಂಪನಿಯವರು ಕ್ಯಾಮೆರಾ ತಯಾರಿಸಿದ್ದರು.

೧೯೭೫ರಲ್ಲಿ ಒಂದು ಅದ್ಭುತ ಬದಲಾವಣೆಯಾಯಿತು. ಸ್ಟೀವ್ ಸಾಸನ್ ಕೊಡಕ್ ಕಂಪನಿಯಲ್ಲಿ ಮೊದಲ ಸಿಸಿಡಿ(CCD) ಕ್ಯಾಮೆರಾವನ್ನು ತಯಾರಿಸಿದ. – ಹೀಗೆ ವಿನಯ್ ಓದುತ್ತಿದ್ದಂತೆಯೇ

“ಸಾರ್, ಸಾರ್” ಎಂದು ಕೃಷ್ಣ ಎರಡು ಬಾರಿ ಕೂಗಿದ. ಆಗಲೇ ಎಲ್ಲರಿಗೂ ಸಮಯದ ಬಗ್ಗೆ ಗಮನ ಬಂತು. ಕೃಷ್ಣನ ಜೈವಿಕ ಗಡಿಯಾರ ಯಾವ ಕಾರಣಕ್ಕೂ ನಿಲ್ಲುತ್ತಿರಲಿಲ್ಲ. ಅಷ್ಟರಲ್ಲಿ ಕೃಷ್ಣ “ಸಾರ್ ಪಕೋಡ ತಿಂದು ಸುಮಾರು ಒಂದೂವರೆ ಶತಮಾನವಾಯಿತು.” ಎಂದು ಹೇಳಿದ. ಅಂದರೆ ಮನೆಗೆ ಹೋಗಿ ಊಟಮಾಡುವ ಸಮಯವಾಯಿತು ಎಂದು ಸೂಚ್ಯವಾಗಿ ಹೇಳಿದ.

ಮೇಷ್ಟ್ರಿಗೆ ಕೃಷ್ಣನ ಭಾಷೆ ಅರ್ಥವಾಯಿತು. ಆದರೂ “ಹಾಗೆಂದರೇನೋ? ಇವತ್ತು ತಾನೆ ನೀನೆ ತಂದಿದ್ದೆಯಲ್ಲ?’ ಎಂದು ಮೇಷ್ಟ್ರು ಹೇಳಿದಾಗ ಅವನು “ಅದೇ ಸಾರ್, ೧೮೨೭ನೆಯ ವರ್ಷದಲ್ಲಿ ನೈಪ್ಸ್ ಎಂಬ ಫ್ರೆಂಚ್ ವಿಜ್ಞಾನಿ ಫೋಟೋ ತೆಗೆಯುವಾಗಲೇ ನಾವು ಪಕೋಡ ತಿಂದದ್ದು. ಈಗ ೧೯೭೫ನೆಯ ಇಸವಿಗೆ ತಲುಪಿದ್ದೇವೆ.” ಎಂದು ಬಾಯಿಬಿಟ್ಟ.

ಅವನ ಮಾತು ಕೇಳಿ ಎಲ್ಲರಿಗೂ ನಗು ಬಂತು. ಅಲ್ಲದೆ ಅವತ್ತಿನ ವಾಚನವೂ ಮುಗಿಯುತ್ತಾ ಬಂದಿತ್ತು. ಎಲ್ಲರಿಗೂ ಕೃಷ್ಣನ ಮಾತು ಸರಿ ಎನಿಸಿತು. ಎದ್ದು ಮನೆಯ ಕಡೆ ಹೊರಟರು. ಹಾಗೆ ಹೋಗುವಾಗ ಮೇಷ್ಟ್ರು ಹುಡುಗರನ್ನು ಕುರಿತು “ಇದುವರೆವಿಗೂ ನೀವು ಓದಿರುವ ವಿಷಯಗಳೆಲ್ಲವನ್ನೂ ನಾನು ಮತ್ತೊಮ್ಮೆ ಓದಬೇಕು. ನನಗೆ ಎಲ್ಲಾ ಹಾಳೆಗಳ ಒಂದು ಪ್ರತಿ ಕೊಡಿ ಎಂದು ಕೇಳಿದರು.” ಆದರೆ ಮೊದಲ ದಿನ ಓದಿದ ಹಾಳೆಗಳನ್ನು ಋತ್ವಿಕ್ ತಂದಿರಲಿಲ್ಲ. ಅದಕ್ಕೆ ಅವನು “ಸಾರ್, ಎಲ್ಲರೂ ಬರೆದ ಹಾಳೆಗಳನ್ನು ಸೇರಿಸಿ, ಜೋಡಿಸಿ ಪಿನ್ ಮಾಡಿ ನಾಳೆ ಬೆಳಿಗ್ಗೆ ನಾನೇ ನಿಮ್ಮ ಮನೆಗೇ ತಂದು ಕೊಡುತ್ತೀನಿ” ಎಂದು ಹೇಳಿದ.

ಆಗ ಉಲ್ಲಾಸ್ “ಏ ಋತ್ವಿಕ್, ಆ ಹಾಳೆಗಳನ್ನು ಮೇಷ್ಟ್ರಿಗೆ ಕೊಡುವುದಕ್ಕೆ ಮುಂಚೆ ನನಗೂ ಒಂದು ಸೆಟ್ ಜ಼ೆರಾಕ್ಸ್ ಮಾಡಿ ಕೊಟ್ಟುಬಿಡು. ಸಾಗರ್ ಕೂಡ ಒಂದು ಸಲ ಓದಬೇಕೆನ್ನುತ್ತಿದ್ದ.” ಎಂದು ತನ್ನ ಬೇಡಿಕೆಯನ್ನು ಮುಂದಿಟ್ಟ.

ಬುಧವಾರ

ಅವತ್ತು ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದರು. ಎಲ್ಲರಿಗೂ ಈಗ ಸಾಯಂಕಾಲವಾಗುತ್ತಿದ್ದಂತೆಯೇ ಬಂಡೆಯ ಬಳಿ ಸೇರುವುದು ಅಭ್ಯಾಸವಾಗಿ ಹೋಯಿತು. ಅವರವರಿಗೇ ಅರಿವಿಲ್ಲದಂತೆ ಅವರ ಕಾಲುಗಳು ಆ ಕಡೆ ನಡೆಯುತ್ತಿದ್ದವು. ನಾಗರಾಜ್ ಬಂದವರೇ “ಕೃಷ್ಣ ಇವತ್ತು ನಿನ್ನ ಸೇವಾರ್ಥವಿಲ್ಲವೇ?” ಎಂದು ಕೇಳಿದರು

ಅವನು ಉತ್ತರವಾಗಿ ಸುಮ್ಮನೆ ನಕ್ಕುಬಿಟ್ಟ. ಆದರೆ ಸಾಗರ್ “ಸಾರ್, ಇವತ್ತಿನ ಸೇವಾರ್ಥ ನನ್ನದು. ನಾನು ಆಗ್ರಾದಿಂದ ಪೇಟ್ಹ ತಂದಿದ್ದೇನೆ. ಜೊತೆಗೆ ಖಾರಕ್ಕೆ ನಮ್ಮೂರಿನ ಖಾರಾಮಂಡಕ್ಕಿ ತಂದಿದ್ದೇನೆ.” ಎಂದು ಹೇಳಿದ.

ಅದಕ್ಕೆ ಕೂಡಲೆ ನವೀನ್, “ಏನು ಸಾರ್ ಇವನು ನಮಗೆಲ್ಲಾ ಪೇಟ ಹಾಕಿಬಿಡುತ್ತಾನಾ?” ಎಂದು ತಮಾಷೆ ಮಾಡಿದ

“ಅಯ್ಯೋ, ಪೇಟ್ಹ ಅಂದರೆ ತಲೆಯ ಮೇಲೆ ಹಾಕೊಳ್ಳೋ ಪೇಟ ಅಲ್ಲ ಕಣೋ, ಅದು ಆಗ್ರಾದ ಫೇಮಸ್ ಸಿಹಿ ಮಿಠಾಯಿ. ತಿಂದು ನೋಡು.” ಎಂದು ಎಲ್ಲರ ಮುಂದೆ ಪೇಟ್ಹದ ಡಬ್ಬ ಹಿಡಿಯುತ್ತಾ ಹೋದ. ಆ ಸಂದರ್ಭದಲ್ಲಿ ಕೃಷ್ಣ ಎರಡು ಚೂರು ಪೇಟ್ಹ ತೆಗೆದುಕೊಂಡಿದ್ದನ್ನು ಗಮನಿಸಿಯೂ ಗಮನಿಸಿದಂತೆ ಮುಂದೆ ನಡೆದ. ನಂತರ ಮಂಡಕ್ಕಿ ಪೊಟ್ಟಣಗಳನ್ನು ಎಲ್ಲರಿಗೂ ಕೊಟ್ಟ. ಅಷ್ಟರ ಮಧ್ಯೆ ತಾನು ಪ್ರವಾಸ ಹೋದಾಗ ತೆಗೆದಿದ್ದ ಫೋಟೋಗಳನ್ನೂ ಎಲ್ಲರಿಗೂ ನೋಡುವಂತೆ ತೆಗೆದುಕೊಟ್ಟ. ಎಲ್ಲರೂ ಫೋಟೋಗಳನ್ನು ನೋಡುತ್ತಾ, ನೋಡಿದ ಫೋಟೋಗಳನ್ನು ಪಕ್ಕದವರಿಗೆ ಕೊಡುತ್ತಾ, ಜಾಗಗಳನ್ನೂ, ಜನಗಳನ್ನೂ ಗುರುತಿಸುತ್ತಾ ಮಾತನಾಡುತ್ತಿದ್ದರು.

ಕೆಲವು ಫೊಟೋಗಳನ್ನು ನೋಡಿದ ಮೇಲೆ ನಾಗರಾಜ್ “ಇದೆಲ್ಲಾ ಡಿಜಿಟಲ್ ಕ್ಯಾಮೆರಾದಲ್ಲಿ ತೆಗೆದೆಯಾ ಸಾಗರ್” ಎಂದು ಕೇಳಿದರು.

ಸಾಗರ್ ಹೌದೆಂದು ಉತ್ತರಿಸಿದ. ಅಷ್ಟರಲ್ಲಿ ಉಮೇಶ್ “ನೋಡಿ ಸಾರ್, ಎಷ್ಟು ಚೆನ್ನಾಗಿ ತೆಗೆದಿದ್ದಾನೆ. ಒಳ್ಳೆ ಪ್ರೊಫೆಷಿನಲ್ ತರಹ. ಹಿಮಾಲಯದ ಸೀನರಿಗಳು ಎಷ್ಟು ಚೆನ್ನಾಗಿ ಬಂದಿವೆ. ತಾಜಮಹಲ್ ಕೂಡ ಬೊಂಬಾಟ್ ಆಗಿ ಬಿದ್ದಿದೆ ಅಲ್ವಾ?” ಎಂದು ಫೋಟೋಗಳನ್ನು ನೋಡಿ ಸಂತೋಷದಿಂದ ಉದ್ಗಾರ ಮಾಡಿದ.

ಅದಕ್ಕೆ ಉಲ್ಲಾಸ್ ನಗುತ್ತಾ “ಲೋ ಮರಿ. ತಾಜ್‌ಮಹಲ್ ಬೊಂಬಾಟ್ ಆಗಿ ಬಿದ್ದಿಲ್ಲ. ಈಗ ತಾನೆ ಪ್ರಪಂಚದ ಏಳು ಅದ್ಭುತಗಳಲ್ಲಿ ಅದೂ ಒಂದು ಎಂದು ಮಿಲಿಯನ್‌ಗಟ್ಟಲೆ ಓಟುಗಳಿಂದ ಗೆದ್ದು ಜಂಭದಿಂದ ಎದ್ದು ನಿಂತಿದೆ. ಅಪ್ಪಿತಪ್ಪಿ ಅದನ್ನು ‘ಬಿದ್ದಿದೆ’ ಎಂದು ಹೇಳಬೇಡ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ತಮಾಷೆ ಮಾಡಿದ.

“ನೋಡಿ ಸಾರ್, ಈ ಡಿಜಿಟಲ್ ಕ್ಯಾಮೆರಾಗಳು ಬಂದ ಮೇಲೆ ಯಾರು ಬೇಕಾದರೂ ಫೋಟೋ ತೆಗೆಯಬಹುದು. ಫೋಟೋ ತೆಗೆಯುವುದು ಮಕ್ಕಳ ಆಟವಾಗಿ ಹೋಗಿದೆ ಅಲ್ವಾ?” ಎಂದು ಹೇಳಿ “ಅದಿರ‍್ಲಿ ಈ ಫೋಟೋಗಳಿಗೆ ನೆಗಟೀವ್ ಅನ್ನುವುದೇ ಇರುವುದಿಲ್ಲ ಅಲ್ವಾ?” ಎಂದು ಪ್ರಶ್ನಿಸಿದವನು ಋತ್ವಿಕ್.

ಅಷ್ಟರಲ್ಲಿ ತಿಂಡಿ ಹಂಚಿ ಮುಗಿಸಿದ್ದ ಸಾಗರ್ “ಸ್ವಲ್ಪ ತಡೆಯಿರೋ. ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರ ನಾನು ಕೊಡುತ್ತೇನೆ” ಎಂದು ಹೇಳಿದ.

ಹಿಂದಿನ ದಿನ ಓದುವುದನ್ನು ನಿಲ್ಲಿಸಿದ್ದ ವಿನಯ್ ಮುಂದುವರಿಸಿದ.

೧೯೭೫ರಲ್ಲಿ ಒಂದು ಅದ್ಭುತ ಬದಲಾವಣೆಯಾಯಿತು. ಸ್ಟೀವ್ ಸಾಸನ್ ಕೊಡಕ್ ಕಂಪನಿಯಲ್ಲಿ ಮೊದಲ ಸಿಸಿಡಿ(CCD) ಕ್ಯಾಮೆರಾವನ್ನು ತಯಾರಿಸಿದ. CCD ಎನ್ನುವುದಕ್ಕೆ  ವಿಸ್ತರಣೆ – Charge Coupled Device- ಡಿಜಿಟಲ್ ಕ್ಯಾಮೆರಾಗಳಲ್ಲಿ ಇದನ್ನು ಪ್ರತಿಬಿಂಬ ಸಂವೇದಕಗಳಾಗಿ (ಸೆನ್ಸರ್)ಬಳಸುತ್ತಾರೆ. ಸಿಸಿಡಿಯಲ್ಲಿ ಮಿಲಿಯನ್‌ಗಟ್ಟಲೆ ಪಿಕ್ಸೆಲ್‌ಗಳು ಇರುತ್ತವೆ ಮತ್ತು ಪ್ರತಿಯೊಂದು ಸೂಕ್ಷ್ಮ ಪಿಕ್ಸೆಲ್, ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು ಇಲೆಕ್ಟ್ರಾನ್‌ಗಳಾಗಿ ಪರಿವರ್ತಿಸುತ್ತದೆ. ಪ್ರತಿ ಪಿಕ್ಸೆಲ್‌ನಲ್ಲಿ ಶೇಖರವಾದ ಚಾರ್ಜ್ ಅಂದರೆ ಇಲೆಕ್ಟ್ರಾನಿನ ಸಂಖ್ಯೆಯನ್ನು ಅಳೆದು ಅದನ್ನು ಒಂದು ನಿರ್ದಿಷ್ಟ ಆಂಕಿಕ ಮೌಲ್ಯವಾಗಿ ಪರಿವರ್ತನೆ ಮಾಡಲಾಗುತ್ತದೆ. ಹೀಗೆ ಚಿತ್ರ ಮಾಹಿತಿಯನ್ನು ಡಿಜಿಟಲ್ ಮಾಧ್ಯಮಕ್ಕೆ ಪರಿವರ್ತಿಸುವ ಪ್ರಯೋಗ ಯಶಸ್ವಿಯಾಯಿತು. ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ, ಕಂಪ್ಯೂಟರ್‌ಗಳಲ್ಲಿ ಹೊಸ ಆವಿಷ್ಕಾರಗಳಾದಂತೆಲ್ಲಾ ಸಾದೃಶ್ಯ ಮಾಧ್ಯಮಕ್ಕಿಂತ ಅಂದರೆ ಅನಲಾಗ್ ಮಾಧ್ಯಮಕ್ಕಿಂತ ಫೋಟೋಗ್ರಾಫಿ ಡಿಜಿಟಲ್ ಮಾಧ್ಯಮದತ್ತಲೇ ವಾಲಲು ಪ್ರಾರಂಭಿಸಿತು. ಪ್ರಸಿದ್ಧ ಫೋಟೋ ಕಂಪನಿಗಳಲ್ಲೊಂದಾದ ಸೋನಿ ಕಂಪನಿಯವರು ೧೯೮೨ರಲ್ಲಿ ವಿಡಿಯೋ ಕ್ಯಾಮೆರಾ ತಯಾರಿಸಿದರು. ೧೯೮೫ರಲ್ಲಿ ಮಿನೋಲ್ಟಾ ಕಂಪನಿಯವರು ಸ್ವಯಂಚಾಲಿತವಾಗಿ ಚಿತ್ರವನ್ನು ಕೇಂದ್ರೀಕರಿಸಿಕೊಳ್ಳುವ (autofocus SLR) ಕ್ಯಾಮೆರಾ ತಯಾರಿಸಿದರು. ಈ ಎಲ್ಲ ಆನುಕೂಲತೆಗಳಿಂದ ಈಗ ಫೋಟೋ ತೆಗೆಯಲು ಯಾವ ಹೆಚ್ಚಿನ ಕುಶಲತೆಯೂ ಬೇಕಿಲ್ಲ. ಆದರೆ ಈ ಎಲ್ಲಾ ಅನುಕೂಲಗಳನ್ನೂ ಬಳಸಿಕೊಂಡ ಮೇಲೂ ಉತ್ತಮ ಚಿತ್ರಗಳನ್ನು ತೆಗೆಯಲು, ಇಲ್ಲಿ ಉತ್ತಮ ಚಿತ್ರ ಎಂಬ ಪದವನ್ನು ಚೆನ್ನಾಗಿ ಕೇಳಿಸಿಕೊಳ್ಳಿ, ಕುಶಲತೆ, ಅನುಭವ ಎಲ್ಲವೂ ಬೇಕು.

ಒಟ್ಟಿನಲ್ಲಿ ಹೇಳುವುದಾದರೆ, ೨೦ನೆಯ ಶತಮಾನದ ಕೊನೆಯ ಭಾಗದಲ್ಲಿ ಅಂದರೆ ಇಲೆಕ್ಟ್ರಾನಿಕ್ ಸಂಶೋಧನೆಗಳು ಹೆಚ್ಚಿದಂತೆ, ಪಠ್ಯ, ಧ್ವನಿ ಮತ್ತು ಚಿತ್ರ ಮಾಹಿತಿಯನ್ನು ಆಯಾ ಮಾಧ್ಯಮಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ತಾಂತ್ರಿಕತೆ ಪ್ರಪಂಚದಲ್ಲಿ ಎಲ್ಲ ಕಡೆಯೂ ಲಭ್ಯವಾಯಿತೆಂದು ಹೇಳಬಹುದು. ಅಂದರೆ ಪಠ್ಯವನ್ನು ಕಾಗದದ ಮೇಲೆ ಬರೆಯುವುದು ಅಥವಾ ಮುದ್ರಿಸುವುದು, ಶಬ್ದವನ್ನು ಮಾಗ್ನೆಟಿಕ್ ಟೇಪುಗಳ ಮೇಲೆ ಮತ್ತು ಚಿತ್ರವನ್ನು ಫಿಲ್ಮ್‌ಗಳ ಮೇಲೆ ಮುದ್ರಿಸುವುದು ಪರಿಚಿತವಾಗಿತ್ತು. ಅಲ್ಲದೆ ಸೆರೆಹಿಡಿದ ಚಿತ್ರಗಳನ್ನು ಮುದ್ರಿಸಿ ಅನೇಕ ಪ್ರತಿಗಳನ್ನು ಮಾಡಬಹುದಾಗಿತ್ತು. ಪುಸ್ತಕಗಳಲ್ಲಿ ಚಿತ್ರ ಮುದ್ರಿಸಲು ಸಾಧ್ಯವಾಗುವಂತೆ ವಿವಿಧ ಗುಣಮಟ್ಟದ ಕಾಗದ ದೊರೆಯುತ್ತಿತ್ತು. ಮನೆಮನೆಗಳಲ್ಲಿ ಧ್ವನಿ ಮುದ್ರಣ ಮಾಡುವಷ್ಟು ಧ್ವನಿಮುದ್ರಣ ತಾಂತ್ರಿಕತೆ ಮುಂದುವರಿಯಿತು. ಮಾರುಕಟ್ಟೆಯಲ್ಲಿ ಅನೇಕ ಬಗೆಯ ಧ್ವನಿಮುದ್ರಕಗಳು ಅದಕ್ಕೆ ಪೂರಕವಾಗಿ ಧ್ವನಿವರ್ಧಕಗಳು ಮತ್ತಿತರ ಸಾಮಗ್ರಿಗಳು ದೊರೆಯುತ್ತಿದ್ದವು. ಚಿತ್ರ ತೆಗೆಯುವುದು, ವಿಡಿಯೋ ಚಿತ್ರಗಳನ್ನು ತೆಗೆಯುವುದು ಸಾಮಾನ್ಯವಾಯಿತು. ಕೇವಲ ಸ್ಟುಡಿಯೋಗಳಲ್ಲದೆ ಸಭೆ, ಸಮಾರಂಭ, ಮದುವೆ ಇತ್ಯಾದಿ ಅನೇಕ ಸಂದರ್ಭಗಳ ಚಿತ್ರೀಕರಣ ಮಾಡುವುದು ಸಾಮಾನ್ಯವಾಯಿತು. ಹಾಗೆ ಚಿತ್ರೀಕರಿಸುವಾಗ ಧ್ವನಿಯನ್ನೂ ಅದರೊಂದಿಗೇ ಮುದ್ರಿಸುವ ಕಾರ್ಯವನ್ನೂ ಮಾಡುವ ಸೌಕರ್ಯವೂ ಲಭ್ಯವಾಯಿತು.

“ಈಗಂತೂ ಮನೆಗಳಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೆ, ಅಷ್ಟೇ ಏಕೆ ತಮ್ಮ ಮಕ್ಕಳ ಬೆಳೆವಣಿಗೆಯ ಪ್ರತಿಯೊಂದು ಹಂತವನ್ನೂ ತಂದೆತಾಯಿಯರು ಚಿತ್ರೀಕರಿಸಿಡುತ್ತಾರೆ. ಚಿಕ್ಕ ಮಕ್ಕಳು ಕ್ಯಾಸೆಟ್ಟುಗಳನ್ನು ತಾವೇ ಚಾಲಿಸಿ ನೋಡುವಷ್ಟು ತಿಳಿದುಕೊಂಡಿರುತ್ತಾರೆ.” ಎಂದು ನಾಗರಾಜ್ ನಾಗರೀಕತೆ ಎತ್ತ ಸಾಗಿದೆ ಎಂಬ ವಿಷಯವನ್ನು ವಿಷದಪಡಿಸಿದರು.

“ಸಾರ್, ನಾನೂ ಮೊನ್ನೆ ಬದರಿ ಪ್ರವಾಸದಲ್ಲಿ ಬಹಳ ವಿಡಿಯೋ ಚಿತ್ರಗಳನ್ನು ತೆಗೆದಿದ್ದೇನೆ ಸಾರ್” ಎಂದು ಸಾಗರ್ ತನ್ನ ಸಾಧನೆಯನ್ನೂ ಹೇಳಿಕೊಂಡ.

ಇಷ್ಟು ಮಾತನಾಡುತ್ತಿದ್ದ ಹಾಗೆ ವಿನಯ್ “ಸಾರ್, ನನ್ನ ಭಾಗ ಮುಗಿಯಿತು” ಎಂದು ತಿಳಿಸಿದ.

“ಮುಂದಿನ ಭಾಗದ ತಯಾರಿಯನ್ನು ಉಲ್ಲಾಸ್ ಮತ್ತು ಸಾಗರ್ ಮಾಡಿದ್ದೀರಲ್ಲವೆ?” ಎಂದು ನಾಗರಾಜ್ ಕೇಳಿದರು.

ಅವರಿಬ್ಬರೂ ಹೌದೆಂದು ಹೇಳಿದರು. ಆಗ ಮೇಷ್ಟ್ರು “ಇದುವರೆವಿಗೂ ನೀವು ಕೇಳಿದ್ದೆಲ್ಲಾ ಎಲ್ಲರಿಗೂ ಅರ್ಥವಾಯಿತಾ? ಜ್ಞಾಪಕ ಇದೆಯಾ? ಏಕೆಂದರೆ ನಾವು ಸುಮಾರು ಐದು ಶತಮಾನಗಳಲ್ಲಿ ನಡೆದ ಘಟನೆಗಳ ಪರಿಚಯ ಮಾಡಿಕೊಳ್ಳುತ್ತಿದ್ದೇವೆ. ವಿವರವಾಗಿ ಅಲ್ಲದಿದ್ದರೂ ಸ್ವಲ್ಪ ವಿಷಯಗಳನ್ನು ನಾವು ಮತ್ತೊಮ್ಮೆ ನೆನಪು ಮಾಡಿಕೊಳ್ಳಬೇಕು” ಎಂದು ಹೇಳಿ ನಿಲ್ಲಿಸಿ ಎಲ್ಲರನ್ನೂ ನೋಡಿದರು. ಎಲ್ಲರೂ ಅವರ ಮಾತನ್ನೇ ಗಮನವಿಟ್ಟು ಕೇಳುತ್ತಿದ್ದರು.

“ಸರಿ, ಯಾವುದಕ್ಕೂ ನಾನು ಒಂದೆರಡು ಮಾತುಗಳಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟ ಮಾಡುತ್ತೀನಿ. ನಿನ್ನೆ ಋತ್ವಿಕ್ ಕೊಟ್ಟ ಮೇಲೆ ನಾನೂ ಒಂದು ಬಾರಿ ಓದಿ, ಕೆಲವು ವಿಷಯ ಗುರುತು ಮಾಡಿಕೊಂಡಿದ್ದೇನೆ. ಅನುಮಾನ ಬಂದರೆ ಕೇಳಿ ಅಥವಾ ಮತ್ತೇನಾದರೂ ವಿಷಯ ಬಿಟ್ಟಿದ್ದರೆ ಈಗ ಸೇರಿಸಿಕೊಳ್ಳಿ.” ಎಂದು ಹೇಳುತ್ತಾ ಜೇಬಿನಿಂದ ಒಂದು ಕಾಗದ ತೆಗೆದು ಮುಂದೆ ಹೀಗೆ ಹೇಳಿದರು.

-ಬಹಳ ಹಿಂದೆ ಪಠ್ಯ ಮಾಹಿತಿಗೆ ಹಸ್ತಪ್ರತಿಗಳನ್ನು ಬಳಸುತ್ತಿದ್ದರು. ತಾಳೆಗರಿ, ಬಟ್ಟೆ ಇತ್ಯಾದಿ ವಿವಿಧ ಮಾಧ್ಯಮಗಳ ಮೇಲೆ ಅಕ್ಷರಗಳನ್ನು ಬರೆಯುತ್ತಿದ್ದರು. ೧೧ನೇ ಶತಮಾನದ ವೇಳೆಗೆ ಕಾಗದದ ಬಳಕೆ ಪ್ರಾರಂಭವಾಯಿತು. ೧೪೫೨ರಲ್ಲಿ ಅಂದರೆ ೧೫ನೇ ಶತಮಾನದಲ್ಲಿ ಗುಟೆನ್‌ಬರ್ಗ್ ಮುದ್ರಣ ತಾಂತ್ರಿಕತೆಯನ್ನು ಒಪ್ಪಗೊಳಿಸಿದ. ಭಾರತಕ್ಕೆ ೧೫೪೨ರಲ್ಲಿ ಮೊದಲ ಮುದ್ರಣ ಯಂತ್ರ ತಲುಪಿತು. ೧೮೭೭ರಲ್ಲಿ ಎಡಿಸನ್ ಮೊದಲ ಧ್ವನಿಮುದ್ರಣವನ್ನು ತಯಾರಿಸಿದ ಮೇಲೆ ೧೯೩೬ರ ಹೊತ್ತಿಗೆ ಅದು ಸಾಕಷ್ಟು ಅಭಿವೃದ್ಧಿ ಹೊಂದಿದ ರೂಪ ತಳೆಯಿತು. ಧ್ವನಿಮುದ್ರಣಕ್ಕೆ ಕಾಂತೀಯ ಮಾಧ್ಯಮ ಖಾಯಂ ಆಯಿತು. ೧೯೬೩ರ ವೇಳೆಗೆ ಕ್ಯಾಸೆಟ್ ಟೇಪುಗಳು ಜನಪ್ರಿಯವಾದವು. ಮತ್ತೆ ಚಿತ್ರ ಮಾಹಿತಿಯನ್ನು ಗಮನಿಸಿದರೆ ಮೊಟ್ಟ ಮೊದಲ ಫೋಟೋ ತೆಗೆದಿದ್ದು ೧೮೨೭ರಲ್ಲಿ. ಬಾಕ್ಸ್ ಕ್ಯಾಮೆರಾ ತಯಾರಾದದ್ದು ೧೮೮೪ರಲ್ಲಿ. ಫೋಟೋ ತಯಾರಿಸಲು ಫಿಲ್ಮ್ ಮಾಧ್ಯಮದ ಬಳಕೆ ಸ್ಥಿರವಾಯಿತು. ಈ ಎಲ್ಲಾ ಸಾದೃಶ್ಯ ಮಾಧ್ಯಮಗಳೆಂದೂ ಗುರುತಿಸಿದ್ದೇವೆ.

“ಸಾರ್, ನನಗೆ ಒಂದು ಡೌಟ್” ಎಂದು ಕೃಷ್ಣ ಕೈ ಎತ್ತಿದ.

ಉಮೇಶ್ “ಓಹ್, ಕೃಷ್ಣ ನಿನ್ನ ಡೌಟ್ ನನಗೆ ಗೊತ್ತು ಬಿಡೋ, ಅವರು ಊಟ ಮಾಡಿದ ಮೇಲೆ ಕಂಡು ಹಿಡಿದರೋ? ಅಥವಾ ಮುಂಚೆಯೋ? ಎಂದು. ಅಷ್ಟೇ ತಾನೆ ನಿನ್ನ ಸಮಸ್ಯೆ” ಎಂದು ತಮಾಷೆ ಮಾಡಿದ

“ಸಾರ್, ನೋಡಿ ಸಾರ್. ಹೇಗೆ ಚುಡಾಯಿಸ್ತಾರೆ. ನಾನು ತಂದ ಪಕೋಡ ಮೇಜರ್ ಪಾಲು ತಿಂದವನು ಇವನು. ಈಗ ನನ್ನೇ ಗೇಲಿ ಮಾಡ್ತಾನೆ” ಕೃಷ್ಣ ಉಮೇಶನ ವೀಕ್‌ನೆಸ್ ಹಿಡಿದ.

“ಅಬ್ಬಬ್ಬಾ! ನಿಮ್ಮ ಚರ್ಚೆ ಸಾಕು. ಈಗ ವಿಷಯಕ್ಕೆ ಬನ್ನಿ” ಎಂದು ಸಾಗರ್ ಇಬ್ಬರನ್ನೂ ಎಚ್ಚರಿಸಿದ.

ಆ ಮಾತು ಕೇಳಿಸಿಕೊಂಡ ಕೃಷ್ಣ “ಸಾರ್ ಮೊದಲ ಚಿತ್ರ ತೆಗೆದಿದ್ದು ೧೮೮೪ರಲ್ಲಿ. ಮೊದಲ ಧ್ವನಿಮುದ್ರಣ ೧೯೩೬ರಲ್ಲಿ. ಆದರೆ ನಾವು ಮೊದಲು ಧ್ವನಿಯ ಬಗ್ಗೆ ಅನಂತರ ಚಿತ್ರದ ಬಗ್ಗೆ ತಿಳಿದುಕೊಂಡೆವು. ಹೀಗೆ ಉಲ್ಟಾಪಲ್ಟ ಮಾಡಿಬಿಟ್ವಲ್ಲಾ? ಸ್ವೀಟ್ ಆದಮೇಲೆ ಖಾರ ತಿನ್ನುವುದಕ್ಕೆ ಬದಲಾಗಿ, ಖಾರ ಆದಮೇಲೆ ಸ್ವಿಟ್ ತಿಂದ್ಹಾಗಾಯಿತು” ಎಂದು ಹೇಳಿ ತನ್ನ ಹೊಟ್ಟೆಶಾಸ್ತ್ರ ಪರಿಣತಿಯನ್ನು ಪ್ರದರ್ಶಿಸಿದ.

ಕೃಷ್ಣನಿಗೆ ಊಟ-ತಿಂಡಿಗಳ ನೆಂಟು ಜಾಸ್ತಿ ಎಂದು ಮನಸ್ಸಿನಲ್ಲಿಯೇ ನಕ್ಕ ನಾಗರಾಜ್ “ಕೃಷ್ಣ ನೀನು ಗಮನಿಸಿದ್ದು ಸರಿ. ನಾನು ಅದೇ ಹೇಳುವವನಿದ್ದೆ. ಶಹಭಾಷ್, ನಿನ್ನ ಗಮನಶಕ್ತಿ ಚೆನ್ನಾಗಿದೆ. ನಿನ್ನ ಅನುಮಾನಕ್ಕೆ ಪರಿಹಾರವೂ ಇದೆ. ನೀವು ಈಗ ವಿಷಯ ತಿಳಿದುಕೊಳ್ಳಿ. ಆದರೆ ನೀನು ಈಗ ಹೇಳಿದ ಹಾಗೆ ಯಾವುದು ಮೊದಲು, ಯಾವುದು ನಂತರ ಎಂದು ನೆನಪಿಟ್ಟುಕೊಳ್ಳಿ. ನಿಮ್ಮ ಬರಹಗಳನ್ನು ಮುದ್ರಿಸಿ ಸ್ಕೂಲಿಗೆ ಕೊಡುವಾಗ ಸರಿಯಾದ ಕ್ರಮದಲ್ಲಿ ಕೊಟ್ಟರೆ ಆಯಿತು. ನೀನು ಬೇಕಾದರೆ ಮತ್ತೊಂದು ಬಾರಿ ಕ್ರಮವಾಗಿ ಮೊದಲು ಸ್ವೀಟ್ ಅನಂತರ ಖಾರ ತಿಂದುಬಿಡು” ಎಂದು ಹೇಳಿ ಎಲ್ಲರಿಗೂ ನಗುವ ಅವಕಾಶ ಕಲ್ಪಿಸಿಕೊಟ್ಟರು.

ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದ ಹಾಗೆ ಸಾಗರ್ “ಸಾರ್, ಇವತ್ತು ಸ್ವಲ್ಪ ಹೊತ್ತಾಗಿ ಹೋಯಿತು. ಈಗ ಶುರು ಮಾಡುವುದರ ಬದಲು ನಾಳೆಯೇ ಶುರು ಮಾಡೋಣ. ಹಾಗೆಯೇ ಎಲ್ಲರೂ ಇದುವರೆಗೆ ಓದಿದ್ದನ್ನು ಸ್ವಲ್ಪ ವಿಚಾರಮಾಡಿ ನಾಳೆ ಮತ್ತೇನಾದರೂ ಸೇರಿಸುವುದಿದ್ದರೆ ತಯಾರಿ ಮಾಡಿಕೊಂಡು ಬರಲಿ” ಎಂದು ಸೂಚಿಸಿದ.

ಎಲ್ಲರೂ ಸಾಗರ್‌ನ ಮಾತಿಗೆ ಒಪ್ಪಿಗೆ ಸೂಚಿಸಿ, ಎದ್ದು ಹೊರಟರು.