-ಹಿಂದಿನ ಕಾಲದಲ್ಲಿ ಮನುಷ್ಯ ಚಿತ್ರಲಿಪಿಯನ್ನೇ ಬಳಸುತ್ತಿದ್ದ. ಆಗ ಅಕ್ಷರಗಳು ರೂಪುಗೊಂಡಿರಲಿಲ್ಲ. ನೀರಿನ ಸೆಲೆಯನ್ನು ತಿಳಿಸಲು ಒಂದು ಕೊಳದ ಚಿತ್ರ, ಪ್ರಾಣಿಯ ಇರುವಿಕೆಯನ್ನು ತಿಳಿಸಲು ಪ್ರಾಣಿಯ ಚಿತ್ರ, ಹೀಗೆ. ಒಂದೊಂದು ಜನಾಂಗದವರೂ ತಮ್ಮ ಪರಿಸರ ಮತ್ತು ರೂಢಿಗೆ ತಕ್ಕಂತೆ ಚಿತ್ರಲಿಪಿಯನ್ನು ಸೃಷ್ಟಿಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಭಾಷೆ, ಲಿಪಿಗಳು ಹುಟ್ಟಿಕೊಂಡವು. ಆದರೆ ಆಗ ಬರೆಯುತ್ತಿದ್ದುದು ಹೇಗೆ? ಬಂಡೆಕಲ್ಲಿನ ಮೇಲೆ ಕೆತ್ತುತ್ತಿದ್ದರು. ಇಲ್ಲವೇ ಯಾವುದಾದರೂ ಬಣ್ಣದ ದ್ರವವನ್ನು ಬಳಸಿ ಚಿತ್ರ ಮತ್ತು ಅಕ್ಷರಗಳನ್ನು ಬಂಡೆಗಳ ಮೇಲೆ ಬರೆಯುತ್ತಿದ್ದರು.

ಅಷ್ಟರಲ್ಲಿಯೇ ಕೃಷ್ಣ ಅಡ್ಡಬಾಯಿ ಹಾಕಿದ “ಸಾರ್, ಬಂಡೆ ಕಲ್ಲಿನ ಮೇಲೆ ಕೆತ್ತುವುದು ಎಷ್ಟು ಕಷ್ಟ ಅಲ್ಲವಾ ಸಾರ್?”

ಆಗಲೇ ಕೃಷ್ಣ ಬರೆಯುವುದಕ್ಕೆ ಸಹಾಯ ಮಾಡಿರಲಿಲ್ಲವೆಂದು ಗೊಣಗಿದ್ದ ಋತ್ವಿಕ್ “ಮಹರಾಯ, ನಿನಗೆ ಪೇಪರ್ ಮೇಲೆ ಬರೆಯುವುದೂ ಕಷ್ಟ. ನೀನೇನಾದರೂ ಆ ಕಾಲದಲ್ಲಿದ್ದಿದ್ದರೆ… ಅದೇನಾಗುತ್ತಿತ್ತೋ?” ಎಂದು ಗೆಳೆಯನನ್ನು ಹಂಗಿಸಿದ

“ಏ, ನಿಮ್ಮ ಜಗಳ ಸಾಕು, ಮುಂದೆ ಓದೋ” ಎಂದು ಉಲ್ಲಾಸ್ ಚರ್ಚೆ ನಿಲ್ಲಿಸಿದ.

“ಅದಿರಲಿ, ಕನ್ನಡದಲ್ಲಿ ದೊರಕಿರುವ ಮೊದಲ ಶಾಸನ ಯಾವುದು ಅಂತ ಗೊತ್ತಿದೆಯಾ?” ಎಂದು ಮೇಷ್ಟ್ರು ಕೇಳಿದರು.

ಥಟ್ಟನೆ ಕೃಷ್ಣ, “ಹಲ್ಮಿಡಿ ಶಾಸನ ಅಂತ ನಮ್ಮ ಕನ್ನಡ ಪಾಠದಲ್ಲಿ ಬಂದಿದೆ ಸಾರ್. ಆದರೆ ಅದರ ಕಾಲ ಗೊತ್ತಿಲ್ಲ.” ಎಂದು ತನಗೆ ತಿಳಿದ ವಿಷಯ ಹೇಳಿದ. ಕೃಷ್ಣನ ಜ್ಞಾಪಕಶಕ್ತಿ ಚೆನ್ನಾಗಿತ್ತು. ಮನಸ್ಸು ಕೂಡ ಒಳ್ಳೆಯದು. ಅವನ ಒಂದೇ ವೀಕ್‌ನೆಸ್ ಎಂದರೆ ಸೋಮಾರಿತನ. ಅಲ್ಲದೆ ಚೆನ್ನಾಗಿ ರಸಕವಳವನ್ನು ತಿಂದು ಸುಖಿಸುವ ಸ್ವಭಾವ.

“ಅಬ್ಬ, ಅಂತೂ ಏನೋ ಒಂದು ವಿಷಯ ಸೇರಿಸಿ ಬಿಟ್ಟ” ಎಂದು ಋತ್ವಿಕ್ ಹೇಳಿದಾಗ ಎಲ್ಲರೂ ಒಟ್ಟಾಗಿ ನಕ್ಕರು.

ಮಕ್ಕಳ ಜೊತೆಯಲ್ಲಿ ತಾವೂ ನಕ್ಕ ನಾಗರಾಜ್, ಹಲ್ಮಿಡಿ ಶಾಸನದ ಕಾಲವನ್ನು ೪೫೦ CE ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಆದರೆ ಋತ್ವಿಕ್‌ಗೆ ಸ್ವಲ್ಪ ಅನುಮಾನ ಬಂತು. “೪೫೦ CE ಅಂದರೆ ಏನು ಸರ್?” ಎಂದು ಕೇಳಿದ.

“CE ಅಂದರೆ Common Era ಎಂದು ವರ್ಷವನ್ನು ಗುರುತಿಸುವ ಪದ್ಧತಿ. ಇತ್ತೀಚಿಗೆ ಕ್ರಿಸ್ತಶಕ ಎನ್ನುವುದಕ್ಕೆ ಬದಲಾಗಿ ವರ್ಷಗಳನ್ನು ಈ ರೀತಿ ಗುರುತಿಸುವ ಪದ್ಧತಿ ಜಾರಿಗೆ ಬರುತ್ತಿದೆ. ಕ್ರಿಶ ೪೫೦ ಎಂದರೂ ಒಂದೆ. ೪೫೦ CE ಎಂದರೂ ಒಂದೆ. ಕ್ರಿಸ್ತಪೂರ್ವ ಎನ್ನುವುದಕ್ಕೆ  BCE ಎನ್ನುತ್ತಾರೆ” ಎಂದು ಹೇಳಿ ಉಪಾಧ್ಯಾಯರು ಋತ್ವಿಕ್‌ನ ಸಂದೇಹ ನಿವಾರಿಸಿದರು. ನಂತರ ಕೃಷ್ಣನ ಕಡೆ ತಿರುಗಿ “ನೀನು ಓದುವುದಿಲ್ಲವೇನು?” ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಕೃಷ್ಣ “ಪರವಾಗಿಲ್ಲ ಸಾರ್, ಅವನೇ ಓದಲಿ” ಎಂದು ಉದಾರವಾಗಿ ಅಪ್ಪಣೆ ಕೊಟ್ಟು ತಾನು ಕೇಳುತ್ತಾ ಕುಳಿತ.

ಆ ಸಮಯದಲ್ಲಿ ಕನ್ನಡವನ್ನು ಒಂದು ರಾಜ್ಯಭಾಷೆಯನ್ನಾಗಿ ಗುರುತಿಸಲಾಗಿತ್ತು. ಆದರೆ ಅದರ ಲಿಪಿ ಹಳಗನ್ನಡ ಮತ್ತು ತಮಿಳು ಲಿಪಿಯ ಮಿಶ್ರಣವಾಗಿತ್ತು. ಒಟ್ಟಿನಲ್ಲಿ ಶಾಸನಗಳು ಮೊದಲ ಮಾಹಿತಿ ಸಂಗ್ರಹ ಸಾಧನಗಳಾಗಿದ್ದವು. ರಾಜಮಹಾರಾಜರು ಶಾಸನಗಳನ್ನು ಕೆತ್ತಿಸುತ್ತಿದ್ದರು. ಇದರಲ್ಲಿ ಬಹಳ ಮಹತ್ತ್ವದ ಘಟನೆಗಳ ವಿಷಯ, ಯುದ್ಧದ ವಿಷಯ, ರಾಜನ ಆಡಳಿತ ಬಗ್ಗೆ ಪ್ರಶಂಸೆಯ ಮಾತುಗಳು ಇತ್ಯಾದಿಗಳನ್ನು ದಾಖಲಿಸಲಾಗುತ್ತಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಮಾಹಿತಿಯನ್ನು ಓದಲು ಓದುಗ ಶಾಸನದ ಹತ್ತಿರವೇ ಪಯಣಿಸಬೇಕಾಗುತ್ತಿತ್ತು. ಮಾಹಿತಿಯನ್ನು ಬೇರೆಡೆಗೆ ಕೊಂಡೊಯ್ಯುವುದು ಅಸಾಧ್ಯವಾದ ಮಾತಾಗಿತ್ತು. ಮಾಹಿತಿಯ ಪ್ರಾಮುಖ್ಯತೆಯೂ ಕಳೆದಹೋದ ವೃತ್ತಾಂತವನ್ನು ದಾಖಲಿಸುವಷ್ಟಕ್ಕೆ ಸೀಮಿತವಾಗಿತ್ತು. ಒಟ್ಟಿನಲ್ಲಿ ಮಾಹಿತಿಯನ್ನು ದಾಖಲಿಸುವ ಮಾನವನ ಮೊದಲ ಪ್ರಯತ್ನ ಇದಾಗಿತ್ತು.

ಸುಮಾರು ಕ್ರಿ.ಪೂ ೪ನೇ ಶತಮಾನದ ಹೊತ್ತಿಗೆ ತಮಗೆ ಉಪಯುಕ್ತವಾದ ವಿಷಯಗಳನ್ನು ಬರೆಯಲು ಜನ ಬೇರೆ ಬೇರೆ ವಸ್ತುಗಳನ್ನು ಕಂಡುಕೊಂಡರು. ಇವುಗಳಲ್ಲಿ ಮುಖ್ಯವಾಗಿ ಎರಡು ವಿಧದ ವಸ್ತುಗಳನ್ನು  ಗುರುತಿಸಬಹುದು. ೧) ಕಠಿಣ ವಸ್ತುಗಳು, ೨) ಮೃದು ವಸ್ತುಗಳು.

ಕಠಿಣ ವಸ್ತುಗಳಲ್ಲಿ ಕಲ್ಲು, ಲೋಹ, ಶಂಖ ಮತ್ತು ಮಣ್ಣಿನಿಂದ ಮಾಡಿದ ಆಕಾರಗಳು ಸೇರುತ್ತವೆ. ಮೃದು ವಸ್ತುಗಳಲ್ಲಿ ಮರದ ಹಲಗೆಗಳು, ಗಿಡ-ಮರಗಳ ಎಲೆಗಳು, ತೊಗಟೆ, ಪ್ರಾಣಿಗಳ ಚರ್ಮ, ಹತ್ತಿ ಬಟ್ಟೆ ಮತ್ತು ಕಾಗದ ಸೇರುತ್ತವೆ. ಆಯಾ ವಸ್ತುಗಳ ಗುಣಕ್ಕೆ ತಕ್ಕಂತೆ ಬರೆಯುವ ಸಾಧನ ಬಳಸುತ್ತಿದ್ದರು. ಉದಾಹರಣೆಗೆ ಕಲ್ಲಿನ ಮೇಲೆ ಕೆತ್ತಲಾಗುತ್ತಿತ್ತು. ಸಾಮಾನ್ಯವಾಗಿ ರಾಜರು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ನೀತಿ ನಿಯಮ ಮತ್ತಿತ್ತರ ವಿಷಯಗಳನ್ನು ಕೆತ್ತಿಸುತ್ತಿದ್ದರು. ಲೋಹದ ಹಾಳೆಗಳ ವಿಷಯಕ್ಕೆ ಬಂದರೆ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಕಬ್ಬಿಣ ಇತ್ಯಾದಿ ಲೋಹಗಳ ಹಾಳೆಯನ್ನು ಬಳಸುತ್ತಿದ್ದರು. ಇದರ ಮೇಲೆ ಚೂಪಾದ ಲೋಹದ ಕಡ್ಡಿಗಳಿಂದ ಕೊರೆಯುತ್ತಿದ್ದರು. ಇದಲ್ಲದೆ ಶಂಖ ಮತ್ತು ಮಣ್ಣಿನ ಗಡಿಗೆ ಮತ್ತಿತರ ಮಣ್ಣಿನ ವಸ್ತುಗಳ ಮೇಲೂ ಅಕ್ಷರಗಳನ್ನು ಕೊರೆಯುತ್ತಿದ್ದರು.

ಮೃದುವಾದ ವಸ್ತುಗಳ ವಿಷಯಕ್ಕೆ ಬಂದರೆ ಕ್ರಿ.ಪೂ ೫ನೆಯ ಶತಮಾನದ ಸಮಯದಲ್ಲಿ ಪಾಠಶಾಲೆಗಳಲ್ಲಿ ಮರದ ಹಲಗೆಯ ಮೇಲೆ ಬಳಪದ ಕಲ್ಲು ಬಳಸಿ ಬರೆಯುತ್ತಿದ್ದರು. ಮತ್ತೆ ಕೆಲವರು ಭೂರ್ಜಪತ್ರ ಮರದ ತೊಗಟೆ, ತಾಳೆಗರಿಯ ಎಲೆಗಳು ಇತ್ಯಾದಿಗಳನ್ನು ಬೇರೆ-ಬೇರೆ ತರಹದ ಎಣ್ಣೆ ಇತ್ಯಾದಿಗಳನ್ನು ಬಳಸಿ ಹದಗೊಳಿಸಿ ಬಳಸುತ್ತಿದ್ದರು. ತಾಳೆಗರಿಯ ಮೇಲೆ ಬರೆಯಲು ವಿಶೇಷ ರೀತಿಯ ಮಸಿಯನ್ನು ತಯಾರಿಸಿಟ್ಟುಕೊಳ್ಳುತ್ತಿದ್ದರು. ಬರೆಯಲು ಹಕ್ಕಿಗಳ ಪುಕ್ಕದ ಕೊನೆಯನ್ನು ಬಳಸುತ್ತಿದ್ದರು. ತಾಳೆಗರಿಗಳ ಮೇಲೆ ಬರೆದು, ಪ್ರತಿಯೊಂದು ಗರಿಯ ಮಧ್ಯದಲ್ಲಿ ತೂತು ಕೊರೆದು, ಎಲ್ಲಾ ತಾಳೆಗರಿಗಳನ್ನೂ ಕ್ರಮವಾಗಿ ಒಂದು ದಾರಕ್ಕೆ ಪೋಣಿಸಿಡುತ್ತಿದ್ದರು. ಅನಂತರ ಆ ದಾರದಿಂದಲೆ ಪೂರ್ತಿ ಕಟ್ಟನ್ನು ಕಟ್ಟಿ ಒಂದು ಪುಸ್ತಕ ರೂಪದಲ್ಲಿ ಕಟ್ಟಿಡುತ್ತಿದ್ದರು. ಈ ರೀತಿ ತಾಳೆಗರಿಯ ಮೇಲೆ ಕೈಬರಹದಲ್ಲಿ ಬರೆದು ಸಂರಕ್ಷಿಸಿ, ದೊರಕಿರುವ ಅತ್ಯಂತ ಹಳೆಯ ಕನ್ನಡ ರಚನೆ ಎಂದರೆ ೯ನೆ ಶತಮಾನದ ‘ಧವಳ ಎಂಬ ಜೈನಮತದ ಧರ್ಮಗ್ರಂಥವೆಂದು ಗುರುತಿಸಲಾಗಿದೆ. ಇದರಲ್ಲಿ ೧೪೭೮ ಹಾಳೆಗಳಿರುವುದಾಗಿಯೂ ದಾಖಲೆಯಾಗಿದೆ. ತಾಳೆಗರಿಗಳ ಮೇಲೆ ಮುಖ್ಯವಾಗಿ ಮಹಾರಾಜರು ತಮ್ಮ ರಾಜ್ಯದ ಬಗ್ಗೆ ವಿಷಯಗಳನ್ನು ದಾಖಲಿಸಿಟ್ಟುಕೊಳ್ಳುತ್ತಿದ್ದರು ಕವಿಗಳು, ಪಂಡಿತರು ಕಾವ್ಯ, ಜ್ಯೋತಿಷ್ಯ, ವ್ಯಾಕರಣ, ವೈದ್ಯಕೀಯ, ಮತ್ತಿತರ ಶಾಸ್ತ್ರಗಳ ಬಗ್ಗೆ ಅನೇಕ ಮಾಹಿತಿಯನ್ನು ಬರೆದು ಸಂರಕ್ಷಿಸಿಡುತ್ತಿದ್ದರು. ಜನಸಾಮಾನ್ಯರಿಗೆ ತಾಳೆಗರಿಯಲ್ಲಿ ಬರೆಯುವ ಅಗತ್ಯವಾಗಲೀ ಅನುಕೂಲವಾಗಲೀ ಇರಲಿಲ್ಲ. ಓದುವುದಕ್ಕೂ ಲಭ್ಯವಿರಲಿಲ್ಲ. ತಾಳೆಗರಿ ಗ್ರಂಥವನ್ನು ಬರೆಯಲು ಬಹಳ ಸಮಯ ಹಿಡಿಯುತ್ತಿತ್ತು. ಪ್ರತಿ ಮಾಡಲು ಓದು, ಬರಹ ಬರುವವರು ಹೆಚ್ಚಿನ ಸಂಖೆಯಲ್ಲಿರಲಿಲ್ಲ. ಮಾಹಿತಿ ಕೇವಲ ಕೆಲವು ಆಯ್ದ ವರ್ಗದವರ ಸ್ವತ್ತಾಗಿತ್ತು.

ತಾಳೆಗರಿ ಪುಸ್ತಕ

ಎಷ್ಟೋ ಸಂದರ್ಭಗಳಲ್ಲಿ ತಾಳೆಗರಿಯ ಮೇಲೆ ಬರೆದಿರುವ ಮಾಹಿತಿಯನ್ನು ಓದಲು ಅರಿಯದವರು, ತಮ್ಮ ಬಳಿ ಅದು ಇರುವುದನ್ನು ಯಾರಿಗೂ ಹೇಳದೆ ರಹಸ್ಯವಾಗಿ ಇಟ್ಟುಕೊಂಡಿರುತ್ತಿದ್ದರು. ತಮ್ಮ ತಾತ, ಮುತ್ತಾತರ ಕಾಲದಿಂದ ತಮ್ಮ ಬಳಿ ಇದೆ ಎಂದು ಪೂಜ್ಯಭಾವನೆಯಿಂದ ದೇವರ ಮುಂದಿಟ್ಟು ಪೂಜಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅನೇಕ ವರ್ಷಗಳ ನಂತರ ತಾಳೆಗರಿಗಳಿಗೆ ಹುಳ ಬಂದು ಕೆಟ್ಟು ಹೋಗುತ್ತಿತ್ತು ಅಥವಾ ಬರೆಯಲು ಬಳಸಿದ ಮಸಿ ಕೆಟ್ಟು ಅಕ್ಷರಗಳು ಮಾಸಿ ಹೋಗುತ್ತಿತ್ತು. ಕೆಲವೊಮ್ಮೆ ಅದರಲ್ಲಿರುವ ರಹಸ್ಯ ಬೇರೆಯವರಿಗೆ ತಿಳಿದು, ಅವರಿಗೆ ನಿಧಿ, ನಿಕ್ಷೇಪಗಳು ದೊರಕಿಬಿಡಬಹುದೆಂದು ಶಂಕಿಸಿ, ತಾಳೆಗರಿಯನ್ನು ನದಿಯಲ್ಲಿ ಮುಳುಗಿಸಿ ಬಿಡುತ್ತಿದ್ದರಂತೆ. ಮಾಹಿತಿಯನ್ನು ತಾಳೆಗರಿಯ ಮೇಲೆ ಬರೆಯುವುದು ಬೆಳವಣಿಗೆಯ ಒಂದು ಹಂತವಾಗಿತ್ತು ಮತ್ತು ಆ ಕಾಲದ ತಾಂತ್ರಿಕತೆಗೆ ತಕ್ಕಂತೆ ಇತ್ತು ಎನ್ನುವುದನ್ನು ಗಮನಿಸಬೇಕು. ಇದರಲ್ಲಿ ಒಂದು ಉಪಯೋಗವೆಂದರೆ ಮಾಹಿತಿಯನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವ ಅನುಕೂಲವಿತ್ತು. ಓದಲು ಆಸಕ್ತಿ ಇದ್ದವರು ತಾಳೆಗರಿ ಗ್ರಂಥಗಳನ್ನು ಪರಸ್ಪರ ವಿನಮಯ ಮಾಡಿಕೊಳ್ಳುತ್ತಿದ್ದರು.

ಸುಮಾರು ಒಂದು ಶತಮಾನದ ನಂತರ ಅಂದರೆ ಕ್ರಿ.ಪೂ ೪ನೆಯ ಶತಮಾನದಲ್ಲಿ ಭಾರತದಲ್ಲಿ ಹತ್ತಿಯ ಬಟ್ಟೆಯ ಮೇಲೆ ಬರೆಯುವ ಕ್ರಮ ರೂಢಿಗೆ ಬಂತು. ಬಟ್ಟೆಯನ್ನು ಪುಸ್ತಕದ ಹಾಳೆಗಳಂತೆ ಒಂದೇ ಅಳತೆಯಲ್ಲಿ ಕತ್ತರಿಸಿ, ಅದರ ಮೇಲೆ ವಿಶೇಷ ಮಸಿ ಬಳಸಿ ಬರೆಯುತ್ತಿದ್ದರು. ತಾಳೆಗರಿಗಿಂತ ಇದು ಸ್ವಲ್ಪ ಉತ್ತಮ ವಿಧಾನವೆನಿಸಿದರೂ, ಕೆಲವು ರೀತಿಯಲ್ಲಿ ಅದರಲ್ಲಿದ್ದ ಕೊರತೆ ಇಲ್ಲಿಯೂ ಇತ್ತು. ಪ್ರತಿ ಮಾಡುವ, ಸಂರಕ್ಷಿಸುವ ಕೆಲಸಗಳು ಅಷ್ಟೇ ತ್ರಾಸದಾಯಕವಾಗಿತ್ತು. ಹಳೆಯ ಕಾಲದಲ್ಲಿ ಗ್ರೀಕರು ಪ್ರಾಣಿಗಳ ಚರ್ಮವನ್ನು ಬರೆಯಲು ಉಪಯೋಗಿಸುತ್ತಿದ್ದರು. ಆದರೆ ಭಾರತದಲ್ಲಿ ಈ ಪದ್ಧತಿ ಅಷ್ಟಾಗಿರಲಿಲ್ಲ.

ಬಟ್ಟೆಯ ಮೇಲೆ ಬರಹ

ಮಾಹಿತಿಯನ್ನು ಸಂಗ್ರಹಿಸಿಡಲು ಅನುಕೂಲಕರವಾದ ಹೊಸ ವಿಧಾನಗಳನ್ನು ಕಂಡು ಹಿಡಿಯುವ ಕಾರ್ಯ ಮುಂದುವರಿಯುತ್ತಲೇ ಇತ್ತು. ಸುಮಾರು ಕ್ರಿ.ಶ ೧೧ನೆ ಶತಮಾನದ ವೇಳೆಗೆ ಭಾರತ ದೇಶದಲ್ಲಿ ಜನರು ಬರೆಯಲು ಕಾಗದವನ್ನು ಬಳಸುವಷ್ಟು ಮುಂದುವರಿದರು. ಮೊಟ್ಟಮೊದಲು ಕಾಗದವನ್ನು ಕಂಡು ಹಿಡಿದವರು ಚೀನಾ ದೇಶದವರು. ಅಲ್ಲಿಂದ ಅದರ ತಂತ್ರಜ್ಞಾನ ಭಾರತಕ್ಕೆ ತಲುಪಿತು. ಅನಂತರ ಅತಿ ಶೀಘ್ರದಲ್ಲಿ ಭಾರತೀಯರು ಕಾಗದ ತಯಾರಿಕೆಯಲ್ಲಿ ಪರಿಣತಿಯನ್ನು ಪಡೆದಿದ್ದೇ ಅಲ್ಲದೆ, ಪಶ್ಚಿಮ ಏಷಿಯಾ, ಟರ್ಕಿ ಮತ್ತು ಯೂರೋಪ್‌ಗಳಿಗೆ ಕಾಗದವನ್ನು ಕಳುಹಿಸುವಷ್ಟು ಸಮರ್ಥರಾದರು. ಈ ಸಮಯದಲ್ಲಿಯೂ ಕಾಗದದ ಮೇಲೆ ಮಸಿ ಬಳಸಿ ಕೈ ಬರಹದಲ್ಲಿ ಬರೆಯುತ್ತಿದ್ದರು. ಹಾಗಾಗಿ ಎಲ್ಲರಿಗೂ ಓದಲು ಪುಸ್ತಕಗಳಾಗಲೀ, ಮತ್ತಿತರ ಮಾಹಿತಿಯಾಗಲೀ ಸುಲಭವಾಗಿ ದೊರೆಯುತ್ತಿರಲಿಲ್ಲ. ಮೊದಲಾಗಿ ಬರೆಯುವುದಾಗಲೀ, ಪ್ರತಿ ಮಾಡುವುದಾಗಲೀ ತ್ರಾಸದಾಯಕವಾದ ಕೆಲಸ. ಹೆಚ್ಚು ಸಮಯ ಹಿಡಿಸುವ ಕೆಲಸವೂ ಆಗಿತ್ತು. ಆದರೆ ರಕ್ಷಿಸುವ ದೃಷ್ಟಿಯಿಂದ, ಕಾಗದವನ್ನು ರಕ್ಷಿಸುವುದು ಸ್ವಲ್ಪ ಸುಲಭವಾಗಿತ್ತು.

ಮಾನವನ ನಾಗರಿಕತೆ ಮುಂದುವರಿದಂತೆಲ್ಲಾ ಆತ ಅನೇಕ ಹೊಸಹೊಸ ತಾಂತ್ರಗಳನ್ನು ಬಳಸಿದ. ಇದರಲ್ಲಿ ಮುದ್ರಣ ತಂತ್ರಜ್ಞಾನವೂ ಕೂಡ ಬಹಳ ಮುಖ್ಯವಾದ ತಂತ್ರಜ್ಞಾನ. ೧೪೫೨ರಲ್ಲಿ ಗುಟೆನ್‌ಬರ್ಗ್ ಮುದ್ರಣ ಕಲೆಯನ್ನು ಒಪ್ಪಗೊಳಿಸಿದ. ಆ ಮೊದಲೇ ಕಾಗದ ತಯಾರಿಕೆಯ ಬಗ್ಗೆ ಜನರಿಗೆ ತಿಳಿದಿತ್ತು. ಮುದ್ರಣಕ್ಕೆ ಬಳಸಬಹುದಾದ ವಿವಿಧ ರಾಸಾಯನಿಕ ವಸ್ತುಗಳ ಬಗ್ಗೆಯೂ ತಿಳಿದಿತ್ತು. ಅಚ್ಚುಮೊಳೆಗಳನ್ನು ಸೇರಿಸಿ ಮುದ್ರಿಸುವ ಕಲೆಯೂ ತಿಳಿದಿತ್ತು. ಆದರೂ ಇದೆಲ್ಲವನ್ನೂ ಒಟ್ಟಾಗಿ ಸೇರಿಸಿ ಮುದ್ರಣ ಕಲೆಗೆ ಭದ್ರವಾದ ತಳಹದಿ ಹಾಕಿದ ಕೀರ್ತಿ ಗುಟೆನ್‌ಬರ್ಗ್‌ಗೆ ಸೇರುತ್ತದೆ. ಕಾಗದದ ಪುಸ್ತಕಗಳನ್ನು ತಯಾರಿಸುವುದಕ್ಕೆ ಮುಂಚೆ, ವೆಲ್ಲಮ್(ಕುರಿಯ ಚರ್ಮ) ಬಳಸಿ ಪುಸ್ತಕ ತಯಾರಿಸುತ್ತಿದ್ದರಂತೆ. ಹಳೆಯ ಕಾಲದಲ್ಲಿ ಗ್ರೀಕರು ತಮ್ಮ ಪ್ರಾರ್ಥನೆಗಳನ್ನು ಇಂತಹ ಪುಸ್ತಕಗಳಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರಂತೆ. ಆ ಚರ್ಮವು ಬಹಳ ಕಾಲ ಬಾಳಿಕೆ ಬರುವಂತಹದಾಗಿತ್ತು. ಅದಕ್ಕೆ ಹೋಲಿಸಿದರೆ ಒಂದು ವರ್ಷ ಶ್ರಮಪಟ್ಟು ತಯಾರಿಸಿದ ಕಾಗದದ ಪುಸ್ತಕಗಳು ಅಷ್ಟೇನೂ ತೃಪ್ತಿದಾಯಕವಾಗಿರಲಿಲ್ಲ.

ಇಷ್ಟೆಲ್ಲಾ ಆದರೂ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣವಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿದ್ದವು. ಮೊದಲಿಗೆ ಈ ಪುಸ್ತಕಗಳು ಪ್ರಾರ್ಥನೆಯ ಪುಸ್ತಕಗಳಾಗಿದ್ದವು. ಇವುಗಳಿಂದ ಸಾಮಾನ್ಯ ಜನರಿಗೆ ಹೆಚ್ಚು ಪ್ರಯೋಜನವಿರಲಿಲ್ಲ. ಜನಸಾಮಾನ್ಯರಿಗೆ ಓದುವುದೂ, ಬರೆಯುವುದೂ ಬರುತ್ತಿರಲಿಲ್ಲ. ಮುದ್ರಣವನ್ನು ಮಾಡಿ ವ್ಯಾಪಾರ ಮಾಡಲು ಹೊರಟವರು ಇದರಿಂದ ಲಾಭವಿಲ್ಲೆಂದು ಹಿಂದೆಗೆದರು.

ಆದರೆ ಮಾಹಿತಿಯನ್ನು ಒದಗಿಸುವ ದೃಷ್ಟಿಯಲ್ಲಿ ಮುದ್ರಿತ ಕಾಗದ ಪುಸ್ತಕಗಳ ಬೆಳವಣಿಗೆ ಪ್ರಮುಖವಾದುದು. ಕೈಬರಹದಿಂದ ಪ್ರತಿ ಮಾಡುವ ಕಷ್ಟ ತಪ್ಪಿತು. ಸಮಯದ ಉಳಿತಾಯವೂ ಆಯಿತು. ಪುಸ್ತಕಗಳನ್ನು ಅಂದರೆ ಮಾಹಿತಿಯನ್ನು ಒಂದು ಕಡೆಯಿಂದ ಬೇರೆ ಕಡೆಗೆ ರವಾನಿಸಬಹುದಾಗಿತ್ತು. ಆದರೆ ಮುದ್ರಿಸಲು ಸರಿಯಾದ, ಎಲ್ಲರಿಗೂ ಉಪಯುಕ್ತವಾದ, ಆಸಕ್ತಿ ಮೂಡಿಸುವ ಮಾಹಿತಿಯ ಅಗತ್ಯವಿತ್ತು.

ಭಾರತಕ್ಕೆ ಮುದ್ರಣ ತಾಂತ್ರ ತಲುಪಿ, ಮೊದಲು ಭಾರತದ ಭಾಷೆಯೊಂದರಲ್ಲಿ ಮುದ್ರಣವಾಗಿದ್ದು ೧೫೭೮ರಲ್ಲಿ. ಮಲಬಾರಿನಲ್ಲಿ ತಮಿಳು ಲಿಪಿಯಲ್ಲಿ “ಡಾಕ್ಟ್ರಿನಾ ಕ್ರಿಸ್ಟಿನಾ” ಎಂಬ ಪುಸ್ತಕದ ೧೬ ಪುಟಗಳನ್ನು ಮುದ್ರಿಸಿರುವುದೆ ಮೊದಲ ಪ್ರಯತ್ನವೆಂದು ದಾಖಲಾಗಿದೆ. ಮೊದಲಿಗೆ ಮುದ್ರಿತವಾದ ಪುಸ್ತಕಗಳಲ್ಲಿ ಕ್ರೈಸ್ತ ಮತ ಸಂಬಂಧಿತ ವಿಷಯಗಳು, ಮತ ಬೋಧನೆಗಳೇ ಹೆಚ್ಚಾಗಿದ್ದವು. ಆದರೂ ಒಂದು ವಿಧದಲ್ಲಿ ಮುದ್ರಣ ಕಲೆಯನ್ನು ಭಾರತಕ್ಕೆ ತಲುಪಿಸಿ ತನ್ಮೂಲಕ, ಭಾರತೀಯರ ಬೌದ್ಧಿಕ ವಿಕಸನಕ್ಕೆ ಕಾರಣರಾದವರು ಕ್ರೈಸ್ತ ಪಾದರಿಗಳೇ.

ಇದರ ಬಗ್ಗೆ ಒಂದು ಕುತೂಹಲಕರವಾದ ಕಥೆಯೂ ಇದೆ. ಮೊದಲ ಮುದ್ರಣ ಯಂತ್ರ ಭಾರತಕ್ಕೆ ಬಂದದ್ದು ಒಂದು ಆಕಸ್ಮಿಕ. ಈ ಯಂತ್ರ ಪೋರ್ಚುಗೀಸ್‌ನಿಂದ ಇಥೊಯೋಫಿಯಾ ದೇಶಕ್ಕೆ ರವಾನೆಯಾಗುತ್ತಿತ್ತು. ತೆಗೆದುಕೊಂಡು ಹೋಗುವ ದಾರಿಯಲ್ಲಿ, ಅದನ್ನು ಗೋವಾ ತೀರದಲ್ಲಿ ಇಳಿಸಲಾಯಿತು. ಅಷ್ಟರಲ್ಲಿ ಇಥಿಯೋಫಿಯಾ ದೇಶದ ರಾಜ ಆ ಕ್ರೈಸ್ತ ಪಾದರಿಗಳಾಗಲೀ, ಆ ಮುದ್ರಣ ಯಂತ್ರವಾಗಲೀ ತನಗೆ ಅಗತ್ಯವಿಲ್ಲವೆಂಬ ಸಂದೇಶವನ್ನು ಕಳುಹಿಸಿದ. ಅದೇ ಸಂದರ್ಭದಲ್ಲಿ, ಅಂದರೆ ೧೫೪೨ರಲ್ಲಿ ಫ್ರಾನ್ಸಿಸ್ ಕ್ಸೇವಿಯರ್ ಎಂಬ ಸ್ಪೇನ್ ದೇಶದ ಪಾದರಿ ಗೋವಾದಲ್ಲಿ ಶಾಲೆಯೊಂದನ್ನು ತೆರೆದು, ತರಂಗಂಬಾಡಿ ಎಂಬ ಸ್ಥಳದಲ್ಲಿ ಬೈಬಲ್ ಕಲಿಸುತ್ತಿದ್ದ. ಆತನಿಗೆ ಮುದ್ರಣ ಯಂತ್ರದ ಅವಶ್ಯಕತೆ ಇತ್ತು. ಹಾಗಾಗಿ ಆ ಯಂತ್ರವನ್ನು ಅಲ್ಲೇ ಸ್ಥಾಪಿಸಿ ಮುದ್ರಣ ಮಾಡಲು ಪ್ರಾರಂಭಿಸಿದ.

ಈ ಮುದ್ರಣ ಯಂತ್ರ ಕೇವಲ ಒಂದು ತಾಂತ್ರದ ಸೌಲಭ್ಯವನ್ನು ಮಾತ್ರ ಒದಗಿಸುವ ಯಂತ್ರವೆಂದು ಯೋಚಿಸಬಾರದು. ಅದು ಭಾರತೀಯರ ಪಾಲಿಗೆ ಪ್ರಪಂಚದ ಬಾಗಿಲನ್ನು ತೆರೆಯುವ ಸಾಧನವಾಗಿತ್ತು. ಇದಾದ ನಂತರ ಅನೇಕ ಮುದ್ರಣ ಯಂತ್ರಗಳೂ ಭಾರತವನ್ನು ತಲುಪಿದವು. ಇವೆಲ್ಲವೂ ಸಮುದ್ರ ತೀರದಲ್ಲಿಯೇ ಸ್ಥಾಪಿತಗೊಂಡವು. ಗುಟೆನ್‌ಬರ್ಗ್‌ನ ಮುದ್ರಣ ಕಲೆ ಆಗ ಇನ್ನೂ ನೂರು ವರ್ಷಗಳನ್ನೂ ದಾಟಿರಲಿಲ್ಲ. ಅಷ್ಟರಲ್ಲಿ ಚಮತ್ಕಾರಿಕವಾಗಿ ಅದು ಭಾರತವನ್ನು ತಲುಪಿತು. ಅಷ್ಟು ವರ್ಷಗಳೂ ಕೆಲವೇ ಜನರ ಸೊತ್ತಾಗಿ, ತಾಳೆಗರಿಯ ಹಾಳೆಯಲ್ಲಿ ಅಡಗಿದ್ದ ಮಾಹಿತಿ ಸಾಮಾನ್ಯ ಜನರಿಗೆ ದಕ್ಕುವಂತೆ ಮಾರ್ಪಾಡಾಯಿತು.

ಅಷ್ಟು ಹೊತ್ತೂ ಕಾಲ ಉರುಳಿದುದೂ ಗೊತ್ತಾಗಲಿಲ್ಲವೆಂಬಂತೆ ಎಲ್ಲರೂ ಮೌನವಾಗಿ ಋತ್ವಿಕ್ ಓದುವುದನ್ನೇ ಕೇಳುತ್ತಿದ್ದರು.

“ನೋಡಿ, ಈಗ ಕಾಲ ಹೇಗೆ ಬದಲಾಗಿದೆ ಎಂದರೆ, ಚಿಕ್ಕ ಮಕ್ಕಳು ಹೊರಲಾರದಷ್ಟು ಪುಸ್ತಕಗಳನ್ನು ಹೊತ್ತು ಶಾಲೆಗೆ ಹೋಗುತ್ತಾರೆ.” ಎಂದು ನಾಗರಾಜ್ ಮೌನ ಮುರಿದರು.

‘ಹೌದು ಸಾರ್. ಇವತ್ತು ಪ್ರಪಂಚದಲ್ಲಿರುವ ಮುದ್ರಿತ ಸಾಮಗ್ರಿಗಳ ಅಗಾಧತೆಯನ್ನು ನೋಡಿದರೆ ಒಂದು ಕಾಲದಲ್ಲಿ ಮುದ್ರಣ ಕಾರ್ಯ ಎಷ್ಟು ಕಷ್ಟವಾಗಿತ್ತೆಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಬೆಳಗಾಗುವುದೇ ತಡ. ಪ್ರಪಂಚದ ಸುದ್ದಿಯನ್ನೆಲ್ಲಾ ಮನೆಬಾಗಿಲಿಗೆ ತಲುಪಿಸುವ ಸಮಾಚಾರ ಪತ್ರಿಕೆಗಳು, ಬಣ್ಣಬಣ್ಣದ ಚಿತ್ರಗಳಿಂದ ತುಂಬಿರುವ ವಿವಿಧ ಪತ್ರಿಕೆಗಳು, ಅನೇಕ ಬಗೆಯ ಪುಸ್ತಕಗಳು ನಮಗೆ ಬಹಳ ಸುಲಭವಾಗಿ ದೊರಕುವ ವಸ್ತುಗಳಾಗಿ ಹೋಗಿವೆ. ನಾವು ಅವುಗಳ ಸೃಷ್ಟಿಯ ಹಿಂದೆ ಎಷ್ಟು ಜನರ ದುಡಿಮೆ ಇದೆ ಎಂಬುದನ್ನು ಊಹಿಸಲೂ ಪ್ರಯತ್ನಿಸುವುದಿಲ್ಲ.” ಎಂದು ಉಲ್ಲಾಸ್ ಧ್ವನಿಗೂಡಿಸಿದ.

“ಇಲ್ಲಿ ಮತ್ತೊಂದು ಮುಖ್ಯ ಮಾಹಿತಿ”  ಎಂದು ಹೇಳಿದ. ಋತ್ವಿಕ್ “ಈಗ ಪ್ರಪಂಚದಲ್ಲಿ ಅತಿ ಚಿಕ್ಕ ಪುಸ್ತಕದ ಗಾತ್ರ ಎಷ್ಟಿರಬಹುದೆಂದು ಯಾರಾದರೂ ಊಹಿಸಬಲ್ಲರಾ?” ಎಂದು ಕೇಳಿದ.

ಕೃಷ್ಣನಿಗೆ ಆ ವಿಷಯ ಗೊತ್ತು ಆದರೆ ಆತ ಹೇಳಲಿಲ್ಲ. ಅವನೂ ಆ ಭಾಗದ ವಿಷಯ ಸಂಗ್ರಾಹಕನಲ್ಲವೇ? ಅವನಿಗೆ ವಿಷಯ ತಿಳಿದಿರಲೇಬೇಕು.

ಆದರೆ ಅಷ್ಟರಲ್ಲಿ ಉಲ್ಲಾಸ್ ಹೇಳಿದ. “ಪ್ರಪಂಚದ ಅತಿ ಚಿಕ್ಕ ಪುಸ್ತಕದ ಗಾತ್ರ ೦.೯ x ೦.೯ ಮಿಲಿಮೀಟರ್. ಅಂದರೆ ಒಂದು ಅಕ್ಕಿಕಾಳಿನ ಅರ್ಧಭಾಗದಷ್ಟಿರಬಹುದು. ಇದಕ್ಕಿಂತ ಹೆಚ್ಚಿನ ವಿವರ ನನಗೆ ಗೊತ್ತಿಲ್ಲ.” ಎಂದು ಹೇಳಿದ.

ಅದಕ್ಕೆ ಪೂರಕ ಮಾಹಿತಿಯಾಗಿ ಋತ್ವಿಕ್ “ನೀನು ಹೇಳಿದ್ದು ಸರಿ ಉಲ್ಲಾಸ್. ಅಷ್ಟಲ್ಲದೆ ನಿನಗೆ ಓಡಾಡುವ ಕಂಪ್ಯೂಟರ್ ಎಂದು ಹೆಸರು ಬರತ್ತಾ? ಆದರೆ ಮತ್ತಷ್ಟು ವಿಷಯ ಹೇಳ್ತೀನಿ. ಈ ಪುಸ್ತಕ ಇರುವುದು ಅಮೆರಿಕಾದ ಸಿನ್‌ಸಿನಾಟಿ ವಿಶ್ವವಿದ್ಯಾಲಯದ ಗ್ರಂಥ ಭಂಡಾರದ ಅಧಿಕಾರಿ ಮಾರ್ಕ್ ಪಾಲ್ಕೋವಿಕ್ ಎಂಬುವವರ ಬಳಿ. ಪುಸ್ತಕದ ಹೆಸರು ‘ಕೆಮಿಲಿಯಾನ್’. ೨೦೦೨ರಲ್ಲಿ, ಗಿನ್‌ನೆಸ್ ಪುಸ್ತಕದಲ್ಲಿ ಅತಿ ಚಿಕ್ಕ ಪುಸ್ತಕವೆಂದು ದಾಖಲೆಯಾಗಿದೆ. ಇದರಲ್ಲಿ ಮೂವತ್ತು ಪುಟಗಳಿವೆ ಮತ್ತು ಎರಡು ಬಣ್ಣದ ಚಿತ್ರಗಳೂ ಇವೆ. ಇದನ್ನು ಬರಿಗಣ್ಣಿನಿಂದ ಓದುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಅದರ ಬಳಿಯೇ ಓದಲು ಸಾಧ್ಯವಾಗುವ ದೊಡ್ಡ ಪುಸ್ತಕವನ್ನಿರಿಸಿದ್ದಾರೆ. ಅದರ ಗಾತ್ರವೆಷ್ಟು ಗೊತ್ತೆ? ಕೇವಲ ೨ x ೧.೮ ಸೆಂ.ಮೀ! ೨೦೦೧ರಲ್ಲಿ ೫ x ಮಿಮಿ ಗಾತ್ರದ  ‘ನ್ಯೂ ಟೆಸ್ಟಾಮೆಂಟ್ ಆಫ್ ಕಿಂಗ್ ಜೇಮ್ಸ್ ಬೈಬಲ್’ ಎಂಬ ಪುಸ್ತಕ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.  ಆದರೆ ಇತ್ತೀಚಿಗೆ ‘ಕೆಮಿಲಿಯಾನ್’ ಗಿಂತ ಚಿಕ್ಕ ಗಾತ್ರದ ೦.೦೭ x ೦.೧೦ ಮಿಮಿ ಪುಸ್ತಕ ‘ಟೈನಿ ಟೆಡ್ ಫ್ರಂ ಟರ್ನಿಪ್ ಟೌನ್” ಎಂಬ ಪುಸ್ತಕ ೨೦೦೭ ರಲ್ಲಿ ದಾಖಲಾಗಿದೆ. ಇದರ ಗಾತ್ರ ಊಹಿಸಿಕೊಳ್ಳಲು ಸಹಾಯಕ ಮಾಹಿತಿ ಏನೆಂದರೆ ಒಂದು ಗುಂಡು ಪಿನ್ ತಲೆಯ ಗಾತ್ರ ೨ಮಿಮಿ.” ಎಂದು ಹೇಳಿ ಉಮೇಶ್ ಕಡೆ ತಿರುಗಿ “ಉಲ್ಲಾಸ್ ನೋಡು ನಿನ್ನ ಅಕ್ಕಿ ಕಾಳಿಗೆ ಒಂದು ಸ್ಪರ್ಧಿ” ಎಂದು ತಮ್ಮ ಈ ಪ್ರಾಜೆಕ್ಟ್‌ಗೆ ಕಾರಣವಾಗಿದ್ದ ಅಕ್ಕಿಕಾಳಿನ ಚಿತ್ರಕಲೆಯನ್ನು ನೆನಪು ಮಾಡಿದ.

“ಇವತ್ತಿನ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಮುದ್ರಣ ಮಾಧ್ಯಮ, ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯದಲ್ಲಿ ಅತ್ಯಂತ ಉಪಯುಕ್ತವಾದ ಸಾಧನ. ಪುಸ್ತಕಕ್ಕೆ ಪರ್ಯಾಯವಾಗಿ ಅನೇಕ ಮಾಧ್ಯಮಗಳು ಬಂದಿದ್ದರೂ ಪುಸ್ತಕಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಅಂದು ಮುದ್ರಣ ಕಲೆ ಹೇಗೆ ಜನರಿಗೆ ಅರಿವನ್ನುಂಟು ಮಾಡಿ, ಅನೇಕ ತರಹದ ಸಾಮಾಜಿಕ, ರಾಜಕೀಯ ಬೆಳವಣಿಗೆಗೆ ಕಾರಣವಾಯಿತೋ ಇಂದು ಇಂಟರ್‌ನೆಟ್ ಅದಕ್ಕೆ ನೂರುಪಟ್ಟು ಅಧಿಕ ಪ್ರಭಾವ ಬೀರಿ ಪ್ರಪಂಚವನ್ನು ಕುಗ್ಗಿಸಿದೆ. ಪ್ರಪಂಚವನ್ನು ಒಗ್ಗೂಡಿಸಿದೆ ಎಂದರೂ ತಪ್ಪಾಗಲಾರದು. ನಮ್ಮ ಹಿಂದಿನವರು ಕಷ್ಟಪಟ್ಟು ಬೆಳೆಸಿರುವ ಫಲವನ್ನು ನಾವು ಇಂದು ಸುಖವಾಗಿ ಉಣ್ಣುತ್ತಿದ್ದೇವೆ.” ಎಂದು ಹೇಳುತ್ತಾ ನಾಗರಾಜ್ ಮೇಷ್ಟ್ರು ಅಂದಿನ ಚರ್ಚೆಗೆ ಮುಕ್ತಾಯ ಹಾಡಿದರು. ಮಾರನೆಯ ದಿನವೂ ಅದೇ ಹೊತ್ತಿಗೆ ಎಲ್ಲರೂ ಸೇರುವುದೆಂದು ನಿಶ್ಚಯಿಸಿಕೊಂಡು ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

ಶುಕ್ರವಾರ

ಮಾರನೆಯ ದಿನ ಹರಟೆಕಟ್ಟೆಯಲ್ಲಿ ಎಲ್ಲರೂ ಸೇರಿದರು. ಅವತ್ತು ಭಾರತ ಪಾಕಿಸ್ಥಾನಗಳ ನಡುವಿನ ಒಂದು ದಿನದ ಕ್ರಿಕೆಟ್ ಮ್ಯಾಚ್. ಎಲ್ಲರಿಗೂ ಮ್ಯಾಚ್ ನೋಡುವ ಆಸೆ. ಆದರೆ ನಾಗರಾಜ್ ಮಾಸ್ಟರ್‌ಗೆ ಕೊಟ್ಟ ಮಾತನ್ನು ತಪ್ಪುವ ಹಾಗಿಲ್ಲ. ಅಲ್ಲದೆ ಪ್ರತಿಯೊಬ್ಬರಿಗೂ ತಮ್ಮ ಪ್ರಾಜೆಕ್ಟ್ ಮುಗಿಸಬೇಕೆಂಬ ಕಾತುರವೂ ಇತ್ತು. “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎನ್ನುವ ಹಾಗಿತ್ತು ಅವರೆಲ್ಲರ ಸ್ಥಿತಿ. ಅದಕ್ಕೆ ಪರಿಹಾರವೆನ್ನುವಂತೆ ಚರಣ್ ಚಿಕ್ಕ ಟ್ರಾನ್ಷಿಸ್ಟರ್ ತೆಗೆದುಕೊಂಡು ಬಂದ. ಅದರಲ್ಲಿ ಬರುತ್ತಿದ್ದ ಕ್ರಿಕೆಟ್ ಕಾಮೆಂಟರಿ ಕೇಳುವುದರಲ್ಲಿ ಎಲ್ಲರೂ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಎಲ್ಲರೂ ತದೇಕಚಿತ್ತರಾಗಿ ಕಾಮೆಂಟರಿ ಕೇಳುತ್ತಿದ್ದರು. ತೆಂಡುಲಕರ್ ಸಿಕ್ಸರ್ ಎಂದು ಎಲ್ಲರೂ ‘ಓ” ಎಂದು ಕೂಗುತ್ತಿರುವಾಗ ಮೇಷ್ಟ್ರು ಬಂದರು. ಎಲ್ಲರೂ ಎದ್ದು ‘ನಮಸ್ಕಾರ ಸಾರ್’ ಎಂದು ವಂದಿಸಿದರು.

“ಏನ್ರೋ, ಸ್ಕೋರ್ ಎಷ್ಟಾಯಿತು? ನಮ್ಮವರು ಗೆಲ್ಲುವ ಸಾಧ್ಯತೆ ಇದೆಯಾ?’ ಎಂದು ಕೇಳಿದರು.

“ಗೊತ್ತಿಲ್ಲ ಸಾರ್, ಒಂದೊಂದು ಸಲ ತೆಂಡುಲಕರ್ ಔಟ್ ಆಗುತ್ತಿದ್ದ ಹಾಗೆ ನಮ್ಮ ಟೀಮ್‌ನವರೆಲ್ಲಾ ಅವನ ಹಿಂದೆಯೇ ಹೊರಟು ಬಿಡುತ್ತಾರೆ” ಎಂದು ಚರಣ್ ಹೇಳಿದ. ಚರಣ್ ಸ್ಕೂಲಿನ ಕ್ರಿಕೆಟ್ ಕ್ಯಾಪ್ಟನ್. ಓದಿನಲ್ಲೂ ಮುಂದು. ಅವನು ತನ್ನ ಅಭಿಪ್ರಾಯ ತಿಳಿಸಿದ ರೀತಿ ಇದು.

“ಅಂತೂ ನೋಡಿ, ಎಲ್ಲೋ ನಡೆಯುತ್ತಿರುವ ಕ್ರಿಕೆಟ್ ಪಂದ್ಯದ ವಿವರಗಳನ್ನು ಧ್ವನಿಯ ಮೂಲಕ ತಿಳಿದುಕೊಳ್ಳಬಹುದು. ಏನು ಚರಣ್, ಇವತ್ತಿನ ವಾಚನವನ್ನೂ ಧ್ವನಿ ಮುದ್ರಿಸಿ ತಂದಿದ್ದೀಯಾ?” ಎಂದು ಮೇಷ್ಟ್ರು ತಮಾಷೆ ಮಾಡಿದರು.

“ಇಲ್ಲ ಸಾರ್, ಆದರೆ ನಾನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಪ್ರಿಂಟ್ ಮಾಡಿ ತಂದಿದ್ದೇನೆ.”

“ಓಕೆ, ಸರಿ, ನಿನ್ನ ಪಾರ್ಟನರ್ ಯಾರು? ಇಬ್ಬರೂ ಸೇರಿದರೋ ಅಥವಾ ನೀನೊಬ್ಬನೇ ಮಾಡಿದೆಯಾ?”

“ಓ, ಇಲ್ಲಾ ಸಾರ್, ಇಲ್ಲ ಸಾರ್. ನಾನು, ಉಮೇಶ್ ಇಬ್ಬರೂ ಸೇರಿ ವಿಷಯ ಸಂಗ್ರಹ ಮಾಡಿದೆವು. ಅವನೂ ಬರೆದ, ಟೈಪ್ ಮಾತ್ರ ನಾನು ಮಾಡಿದೆ.”

“ಬಹಳ ಒಳ್ಳೆಯದು. ಸರಿ, ಈಗ ಕ್ರಿಕೆಟಿಗರನ್ನು ಕಳುಹಿಸಿ. ನೀವು ಅಖಾಡಾಕ್ಕೆ ಇಳಿಯರಿ.” ಎಂದು ಅವತ್ತಿನ ವಾಚನಕ್ಕೆ ಚಾಲನೆ ನೀಡಿದರು ನಾಗರಾಜ್. ಮೊದಲು ಚರಣ್ ಓದಲು ಪ್ರಾರಂಭಿಸಿದ.