ಇಮೇಲ್ (ಇ-ಅಂಚೆ ಅಥವಾ ಮಿಂಚಂಚೆ) ಎಂದು ಪ್ರಸಿದ್ಧವಾಗಿರುವ ಎಲೆಕ್ಟ್ರಾನಿಕ್ ಮೇಲ್ (ವಿದ್ಯುನ್ಮಾನ ಅಂಚೆ) ನಮ್ಮ ವೇಗವೇ ಪ್ರಧಾನವಾದ ಆಧುನಿಕ ಜೀವನದ ಭಾಗವಾಗಿ ಹೋಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇಮೇಲ್ ಪತ್ರ ಸಂಸ್ಕೃತಿಯ ವಿದ್ಯುನ್ಮಾನ ರೂಪವಾಗಿ ಬದಲಾಗಿ ಬಳಕೆಗೆ ಬಂದಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅಂತರಜಾಲದ ಬಳಕೆ ಮಾಡುವವರು, ಅದರಲ್ಲಿಯೂ ಇಮೇಲ್ ಬಗ್ಗೆ ತಿಳಿದಿರುವವರು ಮತ್ತು ಅದರ ಬಳಕೆ ಮಾಡುವವರು ಬಹಳ ಕಡಿಮೆ. ಭವಿಷ್ಯದ ದಿನಗಳಲ್ಲಿ ಇಮೇಲ್ ಬಳಕೆ ದಿನನಿತ್ಯದ ಕಾರ್ಯಗಳ ಭಾಗವೇ ಆಗಿಹೋಗುವ ಸಾಧ್ಯತೆ ಇರುವುದರಿಂದ ಇಮೇಲ್ ಬಳಕೆಯನ್ನು ಎಲ್ಲರೂ ಕಲಿಯುವುದು ಅನಿವಾರ್ಯವೇ ಆಗಿದೆ.

ಮಿಂಚಂಚೆ ಹೊಂದುವುದು ಹೇಗೆ?

ಇಮೇಲ್ ಎಂದರೆ ವಿದ್ಯುನ್ಮಾನ ಮಾಧ್ಯಮದ ಮೂಲಕ ಕಳಿಸುವ ಅಂಚೆ. ಈ ರೀತಿ ಮಿಂಚಂಚೆ ಕಳಿಸುವವರು ಒಂದು ಮಿಂಚಂಚೆ ವಿಳಾಸವನ್ನು ಹೊಂದಿರಬೇಕಾಗುತ್ತದೆ. ಈ ರೀತಿ ಮಿಂಚಂಚೆ ವಿಳಾಸವನ್ನು ಮತ್ತು ಮಿಂಚಂಚೆ ಕಳಿಸುವ ಸೇವೆಯನ್ನು ಗೂಗಲ್‌ ಸಂಸ್ಥೆಯ ಜಿಮೇಲ್, ಯಾಹೂಯಾಹೂ ಮೇಲ್, ಮೈಕ್ರೋಸಾಫ್ಟ್‌ಹಾಟ್‌ಮೇಲ್, ರೆಡಿಫ್‌ರೆಡಿಫ್ ಮೇಲ್, ಎಒಎಲ್‌ಎಐಎಮ್‌ ಮುಂತಾದ ಸೇವೆಗಳು ಉಚಿತವಾಗಿ ಒದಗಿಸುತ್ತವೆ. ಇಮೇಲ್ ಬಳಕೆ ಮಾಡಬಯಸುವವರು ಈ ಯಾವುದೇ ತಾಣಕ್ಕೆ ಹೋಗಿ (ಮೇಲೆ ಹೆಸರಿಸಿರುವ ತಾಣಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಆ ತಾಣಗಳಿಗೆ ಹೋಗಬಹುದು.) ಅಲ್ಲಿ ಖಾತೆ ರಚಿಸಿಕೊಳ್ಳಬೇಕಾಗುತ್ತದೆ. ರಚಿಸುವಾಗ ನಿಮಗೆ ಬಳಕೆದಾರ ಹೆಸರೊಂದನ್ನು (User Name) ಮತ್ತು ಖಾತೆಯನ್ನು ಪ್ರವೇಶಿಸಲು ಪಾಸ್‌ವರ್ಡ್ (PassWord) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವೆರಡು ಸಿಕ್ಕರೆ ಇಮೇಲ್ ಖಾತೆಯನ್ನು ರಚಿಸಿಕೊಂಡ ಹಾಗೆ. ನೀವು ಜಿಮೇಲ್‌ನಲ್ಲಿ ಆಯ್ಕೆಮಾಡಿಕೊಂಡ ಬಳಕೆದಾರ ಹೆಸರು `username@gmail.com’ ರೀತಿ ಇರುತ್ತದೆ. ಇದನ್ನು ನಿಮಗೆ ಇಮೇಲ್ ಕಳಿಸುವ ಎಲ್ಲರೊಂದಿಗೆ ಹಂಚಿಕೊಳ್ಳಬಹುದು. ಆದರೆ ನಿಮ್ಮ ಖಾತೆಯನ್ನು ಪ್ರವೇಶಿಸಲು ಬಳಸುವ ಪಾಸ್ವರ್ಡ್ ಮಾತ್ರ ಗೌಪ್ಯವಾಗಿರಬೇಕು. ಅದನ್ನು ಯಾರಿಗೂ ನೀಡಬಾರದು, ಮತ್ತು ಅದು ಸುಲಭವಾಗಿ ಪತ್ತೆ ಹಚ್ಚಲು ಆಗದಂತೆ ಇರಬೇಕು.

ಬಳಕೆದಾರ ಖಾತೆ

ಇಮೇಲ್ ಖಾತೆಯೊಂದನ್ನು ರಚನೆ ಮಾಡಿಕೊಂಡಾಗ ಈ ಇಮೇಲ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಕೇವಲ ಇಮೇಲ್ ಖಾತೆಗೆ ಮಾತ್ರವಲ್ಲದೇ, ಈ ಸೇವೆಯನ್ನು ಒದಗಿಸುವ ಸಂಸ್ಥೆಯ ಇತರೆ ಸೇವೆಗಳಿಗೂ ಪ್ರವೇಶ ಪಡೆಯಲು ಬಳಸಬಹುದಾಗಿದೆ. ಹಾಗಾಗಿ ಅದು ಬಳಕೆದಾರ ಖಾತೆಯಾಗಿರುತ್ತದೆ. ಉದಾಹರಣೆಗೆ ನೀವು ಗೂಗಲ್ ಸಂಸ್ಥೆಯ ಜಿಮೇಲ್‌ ಖಾತೆಯೊಂದನ್ನು ರಚಿಸಿಕೊಂಡಾಗ ಅದೇ ಖಾತೆಯಿಂದ ಗೂಗಲ್‌ನ ಆರ್ಕುಟ್, ಡಾಕ್ಸ್, ಬ್ಲಾಗರ್, ಯೂಟ್ಯೂಬ್, ಐಗೂಗಲ್, ಪಿಕಾಸಾ ವೆಬ್, ಗೂಗಲ್ ಪ್ಲಸ್ ಮತ್ತಿತರ ಹಲವಾರು ಸೇವೆಗಳಿಗೆ ಅದೇ ಖಾತೆಯ ಮೂಲಕ ಪ್ರವೇಶ ಪಡೆಯಬಹುದಾಗಿದೆ.

ಇಷ್ಟೇ ಅಲ್ಲದೇ ಈ ಬಳಕೆದಾರ ಖಾತೆಯ ಇಮೇಲ್ ವಿಳಾಸದ ಸಹಾಯದಿಂದ ಅಂತರಜಾಲದಲ್ಲಿ ನೀವು ನಿಮ್ಮದೇ ಆದ ಪ್ರೊಫೈಲ್ ರಚನೆ ಮಾಡಿಕೊಳ್ಳಬಹುದು, ವಿವಿಧ ಸಾಮಾಜಿಕ ನೆಟ್‌ವರ್ಕಿಂಗ್ ತಾಣಗಳಲ್ಲಿ ಸೇರಿಕೊಂಡು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬಹುದು, ನಿಮ್ಮದೇ ಬ್ಲಾಗ್ ತಾಣಗಳನ್ನು ಆರಂಭಿಸಬಹುದು.

ಇಮೇಲ್ಬಳಕೆಯ ಪ್ರಾಮುಖ್ಯ

ಈಗಾಗಲೇ ಅನೇಕ ಸರ್ಕಾರಿ ಸೇವೆಗಳನ್ನು ಹೊಂದಬಯಸುವವರು ಅಂತರಜಾಲದ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು. ವಿವಿಧ ಉದ್ಯೋಗಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಾದವರು ಸಹಾ ಅಂತರಜಾಲದ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ನೋಂದಣಿ ಮಾಡಿಕೊಳ್ಳುವಾಗ ಕೆಲವೆಡೆ `ಇಮೇಲ್ ಐಡಿ’ಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಇಮೇಲ್ ವಿಳಾಸವನ್ನು ನೀಡುವುದರಿಂದ ಯಾವುದೇ ಸಂಘ ಸಂಸ್ಥೆಯಿಂದ ಪ್ರತ್ಯುತ್ತರವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಇಮೇಲ್‌ನಿಂದ ಕಳಿಸಿದ ಪತ್ರ ಅಥವಾ ದಾಖಲೆಗಳು ನಿಮಿಷಗಳಲ್ಲಿ ನಾವು ಕಳಿಸಿದವರಿಗೆ ತಲುಪುತ್ತವೆ, ಮತ್ತು ಸುರಕ್ಷಿತವಾಗಿ ತಲುಪುತ್ತವೆ. ಅವರು ತಕ್ಷಣವೇ ನಮಗೆ ಪ್ರತ್ಯುತ್ತರ ನೀಡಬಹುದು. ಅಂಚೆ ಮೂಲಕ ಪತ್ರ ವ್ಯವಹಾರ ನಡೆಸುವಾಗ ಒಂದು ಪತ್ರ ಮತ್ತು ಅದಕ್ಕೊಂದು ಉತ್ತರ ಇಷ್ಟಕ್ಕೆ ಒಂದು ವಾರ ಕಾಲ ಬೇಕಾಗುತ್ತಿತ್ತು. ಇಮೇಲ್ ಮೂಲಕ ಇದು ತಕ್ಷಣ ಜರುಗುತ್ತದೆ.

ಇಮೇಲ್ ಮೂಲಕ ಉಚಿತವಾಗಿ ಪತ್ರ ವ್ಯವಹಾರ ಮಾಡಬಹುದಾಗಿದ್ದು, ಒಂದು ದೊಡ್ಡ ಗಾತ್ರದ ದಾಖಲೆ ಪತ್ರಗಳನ್ನು, ಇ-ಪುಸ್ತಕಗಳನ್ನು  ಸಹಿತ ಇಮೇಲ್ ಜೊತೆಯಲ್ಲಿ ಲಗತ್ತುಗಳಾಗಿ ಸೇರಿಸಿ ಕಳಿಸಬಹುದು. ಅಂಚೆಯಲ್ಲಿ ಕಳಿಸುವಂತೆ ಅದಕ್ಕೆ ಸ್ಟ್ಯಾಂಪ್ ಹಚ್ಚುವುದರ ಅಗತ್ಯವೂ ಇಲ್ಲ. ಆದರೆ ಇಲ್ಲಿನ ಅಗತ್ಯವೆಂದರೆ, ನಾವು ಯಾರಿಗೆ ಇಮೇಲ್ ಕಳಿಸಬೇಕು ಎಂದು ಬಯಸುತ್ತೇವೆಯೋ ಅವರು ತಮ್ಮದೇ ಆದ ಇಮೇಲ್ ವಿಳಾಸವನ್ನು ಹೊಂದಿರಬೇಕು, ಮತ್ತು ಅದು ನಮಗೆ ತಿಳಿದಿರಬೇಕು.

ಒಂದು ಇಮೇಲ್ ಅನ್ನು ಅನೇಕ ಮಂದಿಗೆ ಒಟ್ಟಿಗೇ ಕಳಿಸಬಹುದಾಗಿದ್ದು, ಸಮಯ ಉಳಿತಾಯವಾಗುತ್ತದೆ.  ಅಲ್ಲದೇ ಒಬ್ಬರಿಂದ ಬಂದ ಇಮೇಲ್‌ ಅನ್ನು ಇತರರಿಗೆ ಒಂದು ಕ್ಲಿಕ್ ಮೂಲಕ ಸುಲಭವಾಗಿ ಕಳಿಸಬಹುದಾಗಿದೆ. ಹೀಗೆ ಮಾಡುವ ಮೂಲಕ ಮಾಹಿತಿಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇಮೇಲ್ ಮೂಲಕ ಅಧ್ಯಯನ ಪರಿಕರಗಳನ್ನು (ನೋಟ್ಸ್) ಹಂಚಿಕೊಳ್ಳಬಹುದು, ಅಧ್ಯಾಪಕರೊಂದಿಗೆ, ವಿಷಯ ತಜ್ಞರೊಂದಿಗೆ ಸಂಪರ್ಕವಿರಿಸಿಕೊಂಡು ಅವರೊಂದಿಗೆ ಸುಲಭವಾಗಿ ಸಂವಹನದಲ್ಲಿ ತೊಡಗಬಹುದು. ಈ ದಿನಗಳಲ್ಲಿ ದೊಡ್ಡದೊಡ್ಡ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಇಮೇಲ್ ಮೂಲಕವೇ ನೋಟ್ಸ್ ಕಳಿಸುತ್ತಾರೆ.

ಫೋಟೋಗಳನ್ನು ಕಳಿಸುವುದಕ್ಕೆ ಇದು ಉತ್ತಮ ಮಾರ್ಗ.

ಇಮೇಲ್ ಯಾವತ್ತೂ ಒಂದು ಪದ ಅಥವಾ ಪದಗುಚ್ಛದ ವಿಳಾಸವಾಗಿದ್ದು, ಅದು ನಿರ್ದಿಷ್ಟ ವ್ಯಕ್ತಿಯನ್ನೇ ತಲುಪುತ್ತದೆ. ಒಮ್ಮೆ ಇಮೇಲ್ ಕಳಿಸಿದೆವೆಂದರೆ ಆ ಇಮೇಲ್ ಸ್ವೀಕರಿಸಿದ ವ್ಯಕ್ತಿಯ ಇಮೇಲ್ ವಿಳಾಸ ಯಾವತ್ತೂ ನಮಗೆ ನಮ್ಮ ಇಮೇಲ್ ಖಾತೆಯಲ್ಲಿ ಲಭ್ಯವಿರುತ್ತದೆ.

ಇಮೇಲ್ ಸೇವೆ ನೀಡುವ ತಾಣಗಳಲ್ಲಿ ಇಮೇಲ್‍ಗಳನ್ನು ಉಳಿಸಿಕೊಳ್ಳುವ ಅವಕಾಶವಿರುವುದರಿಂದ ನಾವು ಕಳಿಸುವ ಇಮೇಲ್ ಸಂದೇಶವು ಯಾವತ್ತೂ ನಮ್ಮ ಇಮೇಲ್ ಖಾತೆಯಲ್ಲಿ ರಕ್ಷಿಸಲ್ಪಟ್ಟಿರುತ್ತದೆ. ಅದನ್ನು ನಾವು ತಿಂಗಳು ಮತ್ತು ದಿನಾಂಕದ ಆಧಾರದಲ್ಲಿ ಹುಡುಕಬಹುದು.

ಒಂದು ವಿಷಯದ ಅಡಿಯಲ್ಲಿ ಮಾಡಲ್ಪಟ್ಟ ಎಲ್ಲ ಸಂವಹನಗಳೂ ಒಂದೇ ಎಡೆಯಲ್ಲಿ ಗುಚ್ಛವಾಗಿ ಹೊಂದಿಸಲ್ಪಟ್ಟಿರುತ್ತವೆ. ಇದು ಹಳೆಯ ಇಮೇಲ್ ಸಂದೇಶಗಳನ್ನು ಮತ್ತು ಒಟ್ಟಾರೆ ಸಂವಹನವನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯಕಾರಿಯಾಗಿದೆ. ಇದು ಹಾರ್ದಿಕ ಸ್ನೇಹ ಸಂಬಂಧಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳಲು ಅತ್ಯಂತ ಸುಲಭ ಮಾರ್ಗ.

ಇಮೇಲ್ ವಿಳಾಸ ಕೇಳಿ ಸ್ನೇಹಗಳಿಸಿಕೊಳ್ಳಿ: ಇಮೇಲ್ ಮೂಲಕ ಪರಿಚಿತರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳುವುದು ಅತ್ಯಂತ ಸುಲಭವಾಗುತ್ತದೆ. ಹಾಗೂ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಸಹಾ ಸುಲಭ ಸಾಧ್ಯ. ಮುಖತಃ ಭೇಟಿಯಾದ ವ್ಯಕ್ತಿಗಳಿಗೆ ಇಮೇಲ್ ವಿಳಾಸವನ್ನು ನೀಡುವ ಮೂಲಕ ಸಂಪರ್ಕವನ್ನು ಸುಲಭವಾಗಿಸಿಕೊಳ್ಳಬಹುದು.

ಬಹಳಷ್ಟು ಉದ್ಯೋಗ ಕುರಿತ ಮಾಹಿತಿಗಳು ಬೇರೆ ಬೇರೆ ಮೂಲಗಳಿಂದ ಇಮೇಲ್ ಮುಖೇನ ನಮಗೆ ತಲುಪುತ್ತವೆ. ಹಾಗಾಗಿ ಇಮೇಲ್ ವಿಳಾಸ ಅತ್ಯಂತ ಅಗತ್ಯ.

ಅಂತರಜಾಲದ ಕಾರಣದಿಂದಾಗಿ ಜಗತ್ತು ಕಿರಿದಾಗಿದೆ ಮತ್ತು ಎಲ್ಲರನ್ನೂ ಎಲ್ಲ ಸಮಯದಲ್ಲಿಯೂ ಸಂಪರ್ಕಿಸುವುದು ಸುಲಭವಾಗಿದೆ. ಇಮೇಲ್ ನಮ್ಮನ್ನು ಜಗತ್ತಿನ ಜೊತೆಗೆ ನಿರಂತರ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಅಂತರಜಾಲ ಬಳಕೆ ಗೊತ್ತಿಲ್ಲದವರನ್ನು ಅನಕ್ಷರಸ್ತರೆಂಬಂತೆ ಪರಿಗಣಿಸಲಾಗುತ್ತದೆ. ಅಂತರಜಾಲದಲ್ಲಿ ಮಾಹಿತಿ ಹುಡುಕುವುದು, ಇಮೇಲ್ ಖಾತೆ ರಚಿಸುವುದು ಮತ್ತು ಇಮೇಲ್ ಕಳಿಸುವುದು ಇವು ಕನಿಷ್ಟ ಅಗತ್ಯತೆಗಳಾಗಿರುತ್ತವೆ. ಕನಿಷ್ಟ ಇಷ್ಟು ಇ-ಜ್ಞಾನ ಇದ್ದರೂ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳೊಡನೆ ಸಂವಹನ ಮಾಡುವಲ್ಲಿ, ಉದ್ಯೋಗಗಳು ಮತ್ತು ಉದ್ಯಮ ರಂಗದಲ್ಲಿ ವ್ಯವಹರಿಸಲು ಆತ್ಮವಿಶ್ವಾಸ ಬರುತ್ತದೆ. ಅಲ್ಲದೇ ಅಂತರಜಾಲ ಬಳಕೆಯ ಕುರಿತು ಆಸಕ್ತಿಯೂ ಹೆಚ್ಚುತ್ತದೆ.

ಕನ್ನಡದಲ್ಲಿ ಮಿಂಚಂಚೆ ಕಳಿಸುವುದು ಹೇಗೆ?

ಅಂತರಜಾಲದಲ್ಲಿ ಕನ್ನಡದಲ್ಲಿ ಬರೆಯಬೇಕೆಂದರೆ ಯುನಿಕೋಡ್‌ ಫಾಂಟ್ ಬಳಸಿ ಬರೆಯಬೇಕಾಗುತ್ತದೆ. ಯೂನಿಕೋಡ್ ಫಾಂಟ್‌ನಲ್ಲಿ ನೇರವಾಗಿ ಇಮೇಲ್ ಕಂಪೋಸ್ ಬಾಕ್ಸ್‌ನಲ್ಲಿ ಬರೆಯಬಹುದು. ಕನ್ನಡದಲ್ಲಿ ಯುನಿಕೋಡ್ ಬಳಸಿ ಟೈಪ್ ಮಾಡುವುದನ್ನು ಕೂಡಾ ಸುಲಭದಲ್ಲಿ ಕಲಿಯಬಹುದಾಗಿದೆ. ಯುನಿಕೋಡ್ ಕುರಿತು ಹೆಚ್ಚಿನ ಮಾಹಿತಿ ವಿಕಿಪೀಡಿಯಾದಲ್ಲಿದೆ. ಮಿಂಚಂಚೆ ಮೂಲಕ ಸಂವಹನ ಮಾಡುವುದು ಭವಿಷ್ಯದ ಸಾಮಾಜಿಕ ಜೀವನದ ಸಹಜ ಭಾಗವೇ ಆಗಲಿದೆ. ಹಾಗಾಗಿ ಎಲ್ಲರೂ `ಅಂತರಜಾಲ ಅಕ್ಷರಸ್ಥ’ರಾಗುವುದರ ಜೊತೆಗೆ, ಮಿಂಚಂಚೆ ಮೂಲಕ ಸಂವಹನವನ್ನು ಕಲಿಯುವುದು ಅತ್ಯಂತ ಅಗತ್ಯವಾದದ್ದಾಗಿದೆ