ರಾಜ್ಯದ ಪ್ರಮುಖ ವಾರಪತ್ರಿಕೆಗೆ ೧೬ ವರ್ಷಗಳ ಹಿಂದೆ ಅಪ್ಪೆಮಿಡಿಯ ಬಗೆಗೆ ಚಿತ್ರಲೇಖನ ಬರೆದಿದ್ದೆ. ಉತ್ತರ ಕನ್ನಡದ ಅಘನಾಶಿನಿ ನದಿದಂಡೆಯಲ್ಲಿದ್ದ ಕಾಡುಮಾವು ಮಿಡಿ ಉಪ್ಪಿನಕಾಯಿಗೆ ಪ್ರಸಿದ್ದವಾಗಿತ್ತು, ಅನಂತಭಟ್ಟನೆಂಬ ವ್ಯಕ್ತಿ ಮರದ ತುತ್ತ ತುದಿಗೇರಿ ಕಾಯಿಕೊಯ್ಯುವಾಗ ಬಿದ್ದು ಸಾವನ್ನಪ್ಪಿದ್ದಕ್ಕೆ ಮರಕ್ಕೆ ಅನಂತಭಟ್ಟನ ಅಪ್ಪೆ ಎಂದು ಹೆಸರು ಬಂದಿತ್ತು. ‘ಊಟಕ್ಕೆ ಮೊದಲು ಉಪ್ಪಿನಕಾಯಿ’ ಎಂಬಂತೆ ‘ಉಪ್ಪಿನಕಾಯಿಗೆ ಮೊದಲು ಅನಂತ ಭಟ್ಟ ಮಾತು ಮಿಡಿಯ ಶ್ರೇಷ್ಠತೆ ಸಾರುತ್ತಿತ್ತು. ವಿಶೇಷ ತಳಿ ಉಳಿಸುವ ಯತ್ನವಾಗಿ ಕರ್ನಾಟಕ ಅರಣ್ಯ ಇಲಾಖೆ ನರ್ಸರಿಯಲ್ಲಿ ಲಕ್ಷಾಂತರ ಸಸಿ ಬೆಳೆಸುತ್ತಿದ್ದ ಕಾಲಘಟ್ಟದಲ್ಲಿ  ಅನಂತ ಭಟ್ಟನ ಅಪ್ಪೆಗೆ ಮರುಜನ್ಮ ಬರಹ ಪ್ರಕಟವಾಗಿತ್ತು.

ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿ ಇನ್ನು ವಾರವೂ ಕಳೆದಿರಲಿಲ್ಲ, ಮಂಗಳೂರಿನಿಂದ ಶಿರಸಿಗೆ ಬಸ್ ಓಡಿಸುತ್ತಿದ್ದ  ಚಾಲಕರೊಬ್ಬರು ನಾನು ಬರೆದಿದ್ದ ಪತ್ರಿಕೆಯ ಲೇಖನ ಹರಿದು ತಂದು ಎದುರು ಹಿಡಿದಿದ್ದರು! ಒಂದು ಅಪ್ಪೆ ಸಸಿ ಬೇಕೆಂದು ಹುಡುಕಿ ಹಳ್ಳಿಗೆ ಬಂದಿದ್ದರು. ಪುತ್ತೂರಿನಲ್ಲಿ ಬಸ್ ಪ್ರಯಾಣದಲ್ಲಿ ಪರಿಚಿತರಾದ ಇನ್ನೊಬ್ಬ ಕೃಷಿಕರು ‘ನೀವು ಮತ್ತೆ ಈಚೆ ಬರ್ಲಿಕ್ಕೆ ಉಂಟಾ?’ ಎಂದರು. ವಿಚಾರಿಸಿದರೆ ಅಪ್ಪೆಮಾವಿನ ವಿವರ ಹೇಳುತ್ತ ತಮಗೊಂದು ಸಸಿ ಮುದ್ದಾಂ ತರುವಂತೆ ಒತ್ತಾಯಿಸಿ ವಿಳಾಸ ನೀಡಿದ್ದರು. ಬರೆಯುವುದಷ್ಟೇ ನಮ್ಮ ಕೆಲಸ ಎಂಬ ನಿಲುವಿಗೆ ಅಂಟದೇ ಸಸಿ ಮಾಹಿತಿ ಹಂಚುವ ಆಸಕ್ತಿ ಮುಂದುವರಿಸಿದಾಗ ಕಾಡು ಮಾವಿನ ಕುರಿತ ನಾಡಿಮಿಡಿತ ಅರ್ಥವಾದವು. ಪತ್ರಿಕೆಯಲ್ಲಿ ಆ ಕಾಲಕ್ಕೆ ಲೇಖನ ಪ್ರಕಟಿಸುವಾಗ ಕೃಷಿಕರ/ನರ್ಸರಿಯವರ ಸಂಪರ್ಕ ವಿಳಾಸ, ದೂರವಾಣಿ ಪ್ರಕಟಿಸುವ ಪರಿಪಾಠವಿರಲಿಲ್ಲ. ಹೀಗಾಗಿ ಓದುಗರು  ಬರಹಗಾರರನ್ನೇ ನೇರ ಸಂಪರ್ಕಿಸುತ್ತಿದ್ದರು. ವಿವರ ಪಡೆಯುತ್ತಿದ್ದರು.  ಸಸಿ ನಾಟಿ ಮಾಡಿ ಫಲ ಬರುವತನಕವೂ ಹಲವರ ಸಂಪರ್ಕ ಸಂಬಂಧ ಬೆಳೆಯುತ್ತಿತ್ತು! ಅಲ್ಲಿ ಕೃಷಿ ಅನುಭವದ ಮಹತ್ವದ ಮಾಹಿತಿ ದಾಖಲಾತಿಯೂ ಸುಲಭವಾಯಿತು. ಸಸಿಗೆ ೧೦ ರೂಪಾಯಿಯಂತೆ ಅತ್ಯಂತ ರಿಯಾಯತಿ ದರದಲ್ಲಿ ಅರಣ್ಯ ಇಲಾಖೆ ಸಸಿ ಒದಗಿಸುತ್ತಿತ್ತು, ಬೇಡಿಕೆ ಮಿತಿಮಿರಿ ಬೆಳೆಯುತ್ತಿತ್ತು. ಸಸಿ ಬೆಳೆಸಿ ನಾಲ್ಕಾರು ವರ್ಷಗಳಾಗುತ್ತಲೇ ಅನಂತಭಟ್ಟನ ಮಿಡಿಮಾವು ಕಸಿಗಿಡವಾದರೂ ಬೇಗ ಫಲ ನೀಡುತ್ತಿಲ್ಲ ದೂರುಗಳು ಕೇಳಿಬಂದವು. ಈಗ ಮತ್ತೆ ಹೊಸತಳಿ ಹುಡುಕಾಟ. ಮಿಡಿಮಾವಿನ ಮಾಹಿತಿ ಸಂಗ್ರಹ, ನರ್ಸರಿಗಳ ಸಂಪರ್ಕ, ಕೃಷಿಕರ ಸ್ನೇಹ ಬೆಳೆಯುತ್ತಿದ್ದಂತೆ ರಾಜ್ಯದ ಕಾಡುಮಾವಿನ ದೊಡ್ಡ ಬಳಗ ಬೆರಗು ಹುಟ್ಟಿಸಿತು.

ಕ್ರಿ,ಶ ೧೯೯೮ರಲ್ಲಿ ಶಿರಸಿಯಲ್ಲಿ ಜೀವ ವೈವಿಧ್ಯ ದಾಖಲಾತಿ  ಕಾರ್ಯಕ್ರಮ. ವೇದಿಕೆ ಭಾಷಣ ನಡೆಯುತ್ತಿರುವಾಗ ಪುಟ್ಟ ಬಿಳಿಹಾಳೆಯನ್ನು ಪ್ರೇಕ್ಷಕರಿಗೆ ಹಸ್ತಾಂತರಿಸಿದೆ. ಅದರಲ್ಲಿ ಪರಿಚಿತವಿರುವ ಮಿಡಿಮಾವಿನ ಹೆಸರು, ಮರವಿರುವ ಸ್ಥಳ, ಕೃಷಿಕರ ಸಂಪರ್ಕ ವಿಳಾಸ ಬರೆಯಲು ವಿನಂತಿಸಿದೆ. ಕೇವಲ ಒಂದು ತಾಸಿನಲ್ಲಿ ೩೩ ತಳಿಗಳ ದಾಖಲಾತಿ! ೨೦೦೬ರ ಎಪ್ರಿಲ್‌ನಲ್ಲಿ ಶಿರಸಿಯಲ್ಲಿ ಮಿಡಿಮಾವಿನ ಪ್ರದರ್ಶನ ನಡೆಸಿದಾಗ ೧೭೫ ತಳಿಗಳನ್ನು ಪ್ರದರ್ಶಿಸಲು ಸಾಧ್ಯವಾಯಿತು. ಸಾಗರದ ಹೆಗಡೆ ಫಾರ್ಮ್‌ನ ಲಕ್ಷ್ಮಿನಾರಾಯಣ ಹೆಗಡೆ ಜತೆ ಸೇರಿ ೨೦೦೭ರಲ್ಲಿ ರಾಜ್ಯ ಮಟ್ಟದ ಮಿಡಿಮಾವಿನ ಉತ್ಸವ ಸಂಘಟನೆ. ಆಗ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ೬೩೦ ಮಿಡಿಮಾವಿನ ತಳಿ ಪ್ರದರ್ಶನ ದಾಖಲೆ! ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ನೀಡುತ್ತಿರುವ ಮಿಡಿಮಾವಿನ ಮರ, ಕೃಷಿ ಯೋಗ್ಯ ವಿಶೇಷ ತಳಿಗಳ ಹುಡುಕಾಟಕ್ಕೆ ಕಾರ್ಯಕ್ರಮ ನೆರವಾಯಿತು. ಮಿಡಿಮಾವಿನ ಮರವಿರುವ ಸ್ಥಳ, ನರ್ಸರಿಗಳು, ತೋಟ ಬೆಳೆಸಿದವರು, ಮಿಡಿ ಉಪ್ಪಿನಕಾಯಿ ತಯಾರಿಸುವ ಉದ್ದಿಮೆಗಳ ಮಾಹಿತಿಗಳು ಸಂಗ್ರಹವಾದವು. ವಿನಾಶದಂಚಿನಲ್ಲಿರುವ ತಳಿ ಉಳಿಸುವದಕ್ಕೆ  ಜನಜಾಗೃತಿ ಮೂಡಿತು. ಸರಕಾರದ ಯಾವ ನೆರವೂ ಇರಲಿಲ್ಲ, ಸಸ್ಯ ಪುನರುತ್ಪಾದನೆಗೆ ಯಾವ ಯೋಜನೆಯೂ  ಬರಲಿಲ್ಲ. ಆದರೆ ಹವ್ಯಾಸಿ ಕಸಿತಜ್ಞರ ಪ್ರಯತ್ನದಿಂದ ಕಳೆದ ೨೦೦೭ರ ನಂತರದಲ್ಲಿ  ಪ್ರತಿ ವರ್ಷ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಂಗಳೂರು ಪ್ರದೇಶದಲ್ಲಿ ಕನಿಷ್ಠ ೨ ಲಕ್ಷ ಮಿಡಿಮಾವಿನ ಸಸಿಗಳು  ಮಾರಾಟವಾಗುತ್ತಿವೆ, ರೈತರ ಖಾಸಗಿ ಭೂಮಿಯಲ್ಲಿ ಸಸಿ ಬೆಳೆಯುತ್ತಿವೆ.

ಕಾಡುಮಾವಿನ ಸುತ್ತ ಜನರನ್ನು ಸೆಳೆಯುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಮುಖ್ಯವಾಗಿ ಇಂದಿಗೆ ೫೮ವರ್ಷದ ಹಿಂದೆ ಅನಂತಭಟ್ಟನ ಅಪ್ಪೆ ಸಸಿಯ ಪ್ರಪ್ರಥಮ ತೋಟ ಬೆಳೆಸಿದ ಸಿದ್ದಾಪುರ ಶೇಡಿ ದಂಟ್ಕಲ್ ಗಣೇಶ ಹೆಗಡೆ, ಕುಂದಾಪುರದ ಕಾಳಾವರದಲ್ಲಿ ೧೯೬೧ರಲ್ಲಿ ಮಿಡಿಮಾವು ಬೆಳೆಸಿದ ಕೃಷಿತಜ್ಞ ಕೋ.ಲ.ಕಾರಂತ, ಅರಣ್ಯ ಇಲಾಖೆಯಿಂದ ಅಪ್ಪೆಸಸಿ ಬೆಳೆಸಲು ಶ್ರಮಿಸಿದ ಹಿರಿಯ ಅರಣ್ಯಾಧಿಕಾರಿಯಾಗಿದ್ದ ಅ.ನ.ಯಲ್ಲಪ್ಪರೆಡ್ಡಿ, ಪ್ರವೀಣಚಂದ್ರ ಪಾಂಡೆ ಮುಂತಾದವರ ಪರಿಶ್ರಮಗಳು ಸ್ಮರಣೀಯ. ದಕ್ಷಿಣ ಕನ್ನಡದ ಮಾಫಲತೋಟ ಸುಬ್ರಾಯ ಭಟ್, ಸೊರಬದ ಬಿಳಿಕಲ್ ಗೌಡರು, ಗದ್ದೆಮನೆ ರಾಮರಾವ್, ರಿಪ್ಪನ್‌ಪೇಟೆಯ ಅನಂತಮೂರ್ತಿ ಜವಳಿ, ಸಾಗರ ಹೊಸಗದ್ದೆಯ ಎಚ್. ಆರ್.ಸೂರ್ಯನಾರಾಯಣರಾವ್, ಗಣೇಶ್ ಕಾಕಲ್, ಶಿರಸಿಯ ಸಾಲ್ಕಣಿಯ ದತ್ತಾತ್ರಯ ಹೆಗಡೆ ಹೀಗೆ ಹಲವರು ಮಿಡಿಮಾವಿನ ತೋಟ ಬೆಳೆಸಿ ಅನುಭವ ಪಾಠ ಹೇಳಿದರು. ಚೌತಿಅಪ್ಪೆ ತಳಿಯ ಕುರಿತು ಪತ್ರಿಕೆಯಲ್ಲಿ ಲೇಖನ ಬರೆದು ಕೃಷಿಕರ ಸಂಪರ್ಕ ನೀಡಲಾಗಿತ್ತು. ಶಿರಸಿಯ  ಕೃಷಿಕ ವಿ.ಜಿ.ಹೆಗಡೆ ಅಮಚಿಮನೆಗೆ ಎರಡು ತಿಂಗಳಲ್ಲಿ ೧೫೦ಕ್ಕೂ ಹೆಚ್ಚು ಪತ್ರಗಳು ಬಂದಿದ್ದವು, ನೂರಾರು ಕಿಲೋ ಮಿಟರ್ ದೂರದ ಆಸಕ್ತರು ಬಂದು ಸಸಿ ಪಡೆದರು. ಅಪ್ಪೆಮಿಡಿ ಕುರಿತ ಜನಸ್ಪಂದನ ಹೇಗಿದೆ ಎಂಬುದಕ್ಕೆ ಒಂದು ಉದಾಹರಣೆ  ಇದು.

ಮಿಡಿಮಾವಿನ ಕುರಿತು ಪ್ರಥಮ ಲೇಖನ ಬರೆದಾಗ ಜನ ಓದುತ್ತಾರೆ ಎಂದಷ್ಟೇ ಭಾವಿಸಿದ್ದೆ. ಸಸಿ ನೆಡುತ್ತಾರೆ, ಆಸಕ್ತಿಯಿಂದ ಚರ್ಚಿಸುತ್ತಾರೆ, ಮಾವಿತಿ ವಿನಿಮಯ ನಡೆಸುತ್ತಾರೆ ಎಂಬುದು ನಿಧಾನಕ್ಕೆ ಅರಿವಿಗೆ ಬಂದಿತು. ಕೃಷಿ ಯೋಗ್ಯ ತಳಿ ಹುಡುಕಾಟ ಆರಂಭಿಸಿದಾಗ ಸ್ವತಃ ೪೫ ತಳಿ ಬೆಳೆಸುವ ಪ್ರಯೋಗ. ಬರಹ ಬರೆಯುವದರ ಜತೆಗೆ ಸಸಿ ನೆಡುವಲ್ಲಿ  ಹೆಚ್ಚಿನ ಖುಷಿ. ಕಾಡು ಮಾವಿನಲ್ಲಿ ಕಲಿಕೆ ಅವಕಾಶಗಳು ಅಗಾಧ, ಅಚ್ಚರಿ ಹುಟ್ಟಿಸುತ್ತಿವೆ.