. ಬ್ರಾಹ್ಮಣನುಂ ಏಡಿಯುಂ

ಚಂಪಾಪುರದೊಳೊರ್ವ ಪಾರ್ವಂ ತೀರ್ಥಯಾತ್ರಾನಿಮಿತ್ತಂ ಬರುತ್ತರ್ಪೆಡೆಯೊಳ್ ಜಲವಿಕಳಮಾಗಿರ್ದ ಜಲಾಶಯದೊಳ್ ಶಿಶುಕುಳೀರಂ ನೀರಂ ಪಡೆಯದೆ  ಮಲುಮಲನೆ ಮಱುಗುತ್ತಿರ್ದುದಂ ಕಂಡು ಕರುಣಿಸಿ ಗುಂಡಿಗೆಯೊಳಿಕ್ಕಿಕೊಂಡದನೆಲ್ಲಿಯುಂ ಬಿಡದೆ ರಕ್ಷಿಸುತ್ತುಂ ತೀರ್ಥಂಗಳೆಲ್ಲಮಂ ಮಿಂದು ಬರುತ್ತು ಬೞಲ್ದು ಅರಣ್ಯದೊಳತಿಶೀತಳ ಚಾಯೋಪೇತಮಪ್ಪ ಮರದಡಿಯೊಳ್ ಪಟ್ಟು ಗುಂಡಿಗೆಯಂ ಕೆಲದೊಳಿಟ್ಟು ಮಱೆದೊಱಗಿದಂ.

ಆ ಮರದ ಮೇಲಿರ್ಪುದೊಂದು ವಾಯಸಂ ಕಂಡು ತದ್ವಿಟಸಿ ಕೋಟರ ಕುಟೀರಾಂತರ ದೊಳಿರ್ಪುದೊಂದು ಸರ್ಪಂ ತನಗೆ ಮಿತ್ರನಪ್ಪ ಕಾರಣದಿನದಱ ಸಮೀಪಕ್ಕೆಯ್ತಂದು ಈ ಮರದೊಳ್ ಪಟ್ಟಿರ್ದ ಪಾರ್ವನ ಕಣ್ಣಂ ಬಯಸಿದೆನೆಂಬುದುಮಿದಾವ ಗಹನಂ ನಿನ್ನ ಬಯಕೆಯನೀಗಳೆ ತೀರ್ಚುವೆನೆಂದು ಪಟ್ಟಿರ್ದ ಪರ್ವನಂ ಪಿಡಿವುದುಂ ವಿಷಪ್ರಭಾವದಿಂದಾಕ್ಷಣದೊಳಾತಂ ಗತಜೀವಿತನಾಗಲೊಡಂ ಕಾಗೆ ರಾಗಿಸಿ ಬಂದು ಪಾರ್ವನ ಮೇಲೆ ಷಾಯ್ವುದುಂ ಕರ್ಕಟಕಂ ಕಂಡು ಕಾಗೆಯಿನಕಾರಣಮಾಗಿ ತನ್ನಾಳ್ದಂಗೆ ಮರಣವಾದನಱ*ದೇಗೆಯ್ಯಲುಮಱ*ಯದೆ ಮಱುಗುತ್ತಿರ್ಪುದುಂ ವಾಯಸಂ ಸ್ವಭಾವಚಪಲನಪ್ಪುದಱ*ಂ ಕೆಲದೊಳಿರ್ದ ಗುಂಡಿಗೆಯ ನೀರಂ ಕಂಡಲ್ಲಿ ಮುಸುಡಂ ನೀಡುವುದುಂ ಪಗೆ ದೊರೆಕೊಂಡುದೆಂದದಱ ಗಂಟಲಂ ಪಿಡಿದು ಬಿಡದಿರ್ಪುದುಂ ಕಾಗೆ ಪೋಗಲ್ ಪಡೆಯದೆ ಕೂಗಿಡುದುಮಾ ಸರಮನುರಗಂ ಕೇಳ್ದು ಕಾಗೆಯಂ ಕಂಠಮಂ ಕತ್ತರಿಸುತ್ತಿರ್ದ ಕರ್ಕಟಮಂ ಕಂಡಿದೇನೆಂದು ಬೆಸಗೊಳ್ವುದುಂ ಕರ್ಕಟಕನಿಂತೆಂದಂ :

ಹಿರಣ್ಯರೋಮನು ಹೇಳಿದನು: ಚಂಪಾಪುರದಲ್ಲೊಬ್ಬ ಬ್ರಾಹ್ಮಣನು ತೀರ್ಥಯಾತ್ರೆಗಾಗಿ ಬರುತ್ತಿದ್ದಾಗ ಒಂದು ಕಡೆ ಜಲವಿಕಳವಾಗಿದ್ದ ಜಲಾಶಯದಲ್ಲಿ ಮರುಏಡಿಯೊಂದು ನೀರಿಲ್ಲದೆ ಮಲುಮಲನೆ ಕುದಿಯುತ್ತಿದ್ದುದನ್ನು ಕಂಡು ಕರುಣಿಸಿ ತನ್ನ ಕಮಂಡಲದಲ್ಲಿ ಇಟ್ಟುಕೊಂಡು ಅದನ್ನು ಎಲ್ಲಿಯೂ ಬಿಡದೆ ರಕ್ಷಿಸುತ್ತ ತೀರ್ಥಗಳನ್ನೆಲ್ಲ ಮಿಂದು ಕುರುಕ್ಷೇತ್ರಕ್ಕೆ ಬರಲು ಬಳಲಿ ಕಾಡಿನಲ್ಲಿ ತುಂಬ ತಂಪಾದ ನೆರಳಿನಿಂದ ಕೂಡಿದ ಒಂದು ಮರದ ಅಡಿಯಲ್ಲಿ ಮಲಗಿ ಕಮಂಡಲವನ್ನು ಬಳಿಯಲ್ಲಿಟ್ಟು ಮೈಮರೆತು ನಿದ್ರಿಸಿದನು. ಆ ಮರದ ಮೇಲಿದ್ದ ಒಂದು ಕಾಗೆಯು ಇದನ್ನು ಕಂಡು ಆ ಮರದ ಪೊಟ್ಟರೆಯಲ್ಲಿದ್ದೊಂದು ಸರ್ಪವು ತನಗೆ ಮಿತ್ರನಾದುದರಿಂದ ಅದರ ಬಳಿಗೆ ಬಂದು ಈ ಮರದ ಬುಡದಲ್ಲಿ ಮಲಗಿದ್ದ ಬ್ರಾಹ್ಮಣನ ಕಣ್ಣನ್ನು ಬಯಸಿದೆನೆನ್ನಲು ಅದೇನು ಮಹಾ, ನಿನ್ನ ಬಯಕೆಯನ್ನು ಈಗಲೇ ತೀರಿಸುವೆನೆಂದು ಮಲಗಿದ್ದ ಬ್ರಾಹ್ಮಣನನ್ನು ಹಿಡಿಯಲು ವಿಷಪ್ರಭಾವದಿಂದ ಆ ಕ್ಷಣವೇ ಆತನು ತೀರಿಹೋಗಲು ಕಾಗೆಯು ಸಂತೋಷದಿಂದ ಬಂದು ಬ್ರಾಹ್ಮಣನ ಮೇಲೆ ಹಾರಲು ಏಡಿಯು ಕಂಡು ಕಾಗೆಯಿಂದ ಅಕಾರಣವಾಗಿ ತನ್ನ ಒಡೆಯನು ತೀರಿದುದನ್ನು ತಿಳಿದು ಏನು ಮಾಡಲೂ ತಿಳಿಯದೆ ದುಃಖಿಸುತ್ತಿತ್ತು. ಕಾಗೆಯು ಸ್ವಭಾವಚಪಲನಾದುದರಿಂದ ಪಕ್ಕದಲ್ಲಿದ್ದ ಕಮಂಡಲದ ನೀರನ್ನು ಕಂಡು ಅದಕ್ಕೆ ಮುಸುಡನ್ನು ಹಾಕಲು ವೈರಿ ಸಿಕ್ಕಿತು ಎಂದು ಅದರ ಗಂಟಲನ್ನು ಕಚ್ಚಿ ಬಿಡದಿರಲು ಕಾಗೆಯು ಹೋಗಲಾರದೆ ಕೂಗುತ್ತಿರಲು ಆ ಸ್ವರವನ್ನು ಕೇಳಿ ಕಾಗೆಯ ಕೊರಳನ್ನು ಕತ್ತರಿಸುತ್ತಿದ್ದ ಕರ್ಕಟಕವನ್ನು ಕಂಡು

ನೀನೆನ್ನಾಳ್ದನನೀ ರವಿ
ಸೂನುವ ಕಾರಣದೆ ಕೊಂದೆಯದಱ*ಂದಂ ನೋ-
ಡಾನುಮಿದಂ ಕೊಂದಪೆನೆ-
ತ್ತಾನುಂ ನೀನೆನ್ನ ಪತೆಯನೆತ್ತುವೊಡಿನ್ನುಂ  ೪೨೬

ಕೊಲ್ಲೆನೆನೆ ಪನ್ನಗಂ ತ-
ಳ್ಪಿಲ್ಲದೆ ವಿಪ್ರಂಗೆ ನಿರ್ವಿಷಂಗೆಯ್ಯಲೊಡಂ
ಕೊಲ್ಲದೆ ಕುಳೀರಂ ವಾಯಸಮುಮನಂ-
ತಲ್ಲಿ ಕುಳೀರಂ ಕೃತಜ್ಞಗುಣಗಂಭೀರಂ  ೪೨೭

ಅಂತು ಕುಳೀರನುಮಹಿಯುಮ-
ನಂತಗುಣರ್ ಮಿತ್ರಕಾರ‍್ಯತತ್ಪರರಾದರ್
ತಂತಮ್ಮ ಮಿತ್ರರುಂ ತಾ-
ವಿಂತು ಮಹಾಪುರುಷಚರಿತರಾದರ್ ನಿರುತಂ  ೪೨೮

ಅದು ಕಾರಣದಿಂದೇಕಾಕಿಯಾಗಿ ಪೋಗದೆನ್ನುಮನುಯ್ಯೆನಲಂತೆಗೆಯ್ವೆನೆಂದು ಲಘುಪತನಕಂ ಹಿರಣ್ಯರೋಮನಂ ನೋಯಲೀಯದೆ ಚಂಚೂಪುಟದಿಂದೌಂಕಿ ತಂದು ಮಂಧರಕನಿರ್ದ ಮಡುವಿನ ತಡಿಯೊಳಿರಿಸಿ ನೋಯಲೀಯದೆ ಚಂಚೂಪುಟದಿಂದೌಂಕಿ ತಂದು ಮಂಧರಕನಿರ್ದ ಮಡುವಿನ ತಡಿಯೊಳಿರಿಸಿ ಬೞ*ಕೆ ಮಂಧರಕನಂ ಕರೆವುದುಂ ಮಿತ್ರನ ಸರಮನಱ*ದು ಜಲದಿಂ ಪೊಱಮಟ್ಟು ಕೂರ್ಮಂಗೆ ಕೂರ್ಮೆ ಕೈಗಣ್ಮೆ ಕಾಗೆಗಭ್ಯಾಗತ ಪ್ರತಿಪತ್ತಿಯೆಲ್ಲಮಂ ನೆಱೆಯೆ ಮಾಡಿ ತದನಂತರಂ ಕೆಲದೊಳಿರ್ದ ಇಲಿಯಂ ಕಂಡೀ ಮಹಾಪುರುಷಂ ನಿನ್ನನಗಲದಿರ್ಪ ಕಾರಣಮೇನೆಂದು ಕೇಳೆ ಲಘುಪತನಕನಿಂತೆಂದಂ :

ಈ ಮೂಷಕನಪ್ಪೊಡೆ ಗುಣ-
ಧಾಮಂ ನಾಮದೆ ಹಿರಣ್ಯರೋಮಂ ಪೆಱತೇಂ
ಸಾಮಾನ್ಯನಲ್ಲದೇವೇ-
ೞ್ದೇಮಾತೇನಱಸಿ ಕಾಣೆನಿನ್ನುಂ ಮುನ್ನುಂ  ೪೨೯

ಇದೇನು ಎಂದು ಕೇಳಲು ಏಡಿಯು ಹೇಳಿತು : ೪೨೬. ನೀನು ನನ್ನ ಒಡೆಯನನ್ನು ಈ ಕಾಗೆಯ ಕಾರಣದಿಂದ ಕೊಂದೆ. ಅದರಿಂದ ನಾನು ಇದನ್ನು ಕೊಲ್ಲುವೆನು. ಹೇಗಿದ್ದರೂ ನೀನು ನನ್ನ ಒಡೆಯನನ್ನು ಬದುಕಿಸುವುದಾದರೆ ಕೊಲ್ಲುವುದಿಲ್ಲ ಎನ್ನಲು ೪೨೭. ಸರ್ಪವು ತಡಮಾಡಿದೆ ವಿಪ್ರನನ್ನು ನಿರ್ವಿಷನನ್ನಾಗಿ ಮಾಡಲು ಏಡಿಯು ಕಾಗೆಯನ್ನೂ ಕೊಲ್ಲದೆ ಕೃತಜ್ಞ ಗುಣಗಂಭೀರನಾಗಿದ್ದನು. ೪೨೮. ಹಾಗೆ ಏಡಿಯೂ ಸರ್ಪವೂ ಅನಂತಗುಣರಾಗಿ ಮಿತ್ರಕಾರ್ಯ ತತ್ಪರರಾದರು. ತಮ್ಮ ತಮ್ಮ ಗೆಳೆಯರು ಯಾವಾಗಲೂ ಹೀಗೆ ಮಹಾಪುರುಷ ಚರಿತರಾದರು. ವ|| ಅದರಿಂದ ಏಕಾಕಿಯಾಗಿ ಹೋಗದೆ ನನ್ನನ್ನೂ ಕರೆದೊಯ್ಯು ಎನ್ನಲು ಲಘುಪತನಕನು ಹಿರಣ್ಯರೋಮನಿಗೆ   ನೋವಾಗದಂತೆ ಕೊಕ್ಕಿನಿಂದ ಒತ್ತಿಹಿಡಿದು ತಂದು ಮಂಧರಕನಿದ್ದ ಮಡುವಿನ ದಡದಲ್ಲಿಟ್ಟು ಬಳಿಕ ಮಂಧರಕನನ್ನು ಕರೆದನು. ಮಿತ್ರನ ಸ್ವರವನ್ನು ತಿಳಿದು ನೀರಿನಿಂದ ಹೊರಕ್ಕೆ ಬಂದು ಪ್ರೀತಿಗೆ ಪ್ರೀತಿ ಸೇರಲು ಕಾಗೆಗೆ ಅಭ್ಯಾಗತ ಸತ್ಕಾರವೆಲ್ಲವನ್ನೂ ಮಾಡಿ ಬಳಿಕ ಪಕ್ಕದಲ್ಲಿದ್ದ ಇಲಿಯನ್ನು ಕಂಡು ಈ ಮಹಾಪುರುಷನು ನಿನ್ನನ್ನು ಅಗಲದೆ ಇರುವ ಕಾರಣವೇನೆಂದು ಕೇಳಲು ಲಘುಪತನಕನು ಹೀಗೆಂದನು : ೪೨೯. ಈ ಮೂಷಕನು ಗುಣಕ್ಕೆ ನೆಲೆಮನೆ ; ಹೆಸರು ಹಿರಣ್ಯರೋಮ ; ಇನ್ನೇನು ;

ಕೇವಲಜೀವಿಯದಲ್ಲಿದು
ಭಾವಿಪ್ಪೊಡೆ ಸುಹೃದ್ಗುಣಾನ್ವಿತಂ ಮಿಗೆ ಚಿತ್ರ-
ಗ್ರೀವನ ಸೆಱೆಯಂ ಬಿಡಿಸಿದ-
ನೇವೊಗೞ್ದಪೆನೀ ಸುವರ್ಣರೋಮನ ಗುಣಮಂ  ೪೩೦

ಇಂತಪ್ಪ ಮಹಾಪುರುಷನಪ್ಪುದಱ*ಂದಾನುಮೀತನೊಳ್ ಮಿತ್ರತ್ವವಂ ಪಡೆದೆಂ. ಈಗಳ್ನಿನ್ನಲ್ಲಿಗೆ ಬರುತುಮಿರ್ದು ತನಗೆ ಪೇೞ್ದೊಡೆನಗಿಲ್ಲಿ ಮನೋದುಃಖಂ ಪಿರಿದೆನ್ನುಮನುಯ್ಯೆಂಬುದುಂ ತಂದೆನೆಂಬುದುಮದನೆಲ್ಲಮಂ ಸವಿಸ್ತರಂ ಕೇಳ್ದು ಮಂಧರಂ ಹಿರಣ್ಯರೋಮನನೆಂದಂ : ನಿನಗಲ್ಲಿ ಮನೋದುಃಖವೇಂ ನಿಮಿತ್ತದಿನಾದುದೆನೆ ಮೂಷಕನಿಂತೆಂದನಾ ಮುನ್ನಿನ ಭವದೊಳ್ ಗೊರವನಾಗಿ ಕಾಂಚೀಪುರದೊಳ್ ತಿಱ*ದು ಪಲವು ಕಾಲಂ ಬನ್ನಂಬಟ್ಟು ಪೊನ್ನಂ ಪಡೆದೇತರ್ಕಂ ಕುಡದೆ ಮಡಗಿದೊಡೆನ್ನ ಶಿಷ್ಯಂ ಬಿಟ್ಟಕಣ್ಣನೆಂಬಂ ಗೊರವಂ ನಿಮ್ಮಡಿ ! ನಿಮಗೆ ಸಂಸಾರಂ ಸ್ವಸ್ಥಮಲ್ಲೀಯರ್ಥಮಂ ಮಡಂಗಿ ನಿರರ್ಥಕೆ ಕಿಡದೆ ಈಶ್ವರಾಯತನಮಂ ಮಾಡಿಸಿಮಲ್ಲದಿರ್ದೊಡನಾಥಜನಕ್ಕೇನಾನುಮಂ ದಾನಂಗುಡಿಮೆಂದೊಡಾನಿಂತೆಂದೆಂ : ಎಂತಾನುಂ ಪಡೆದ ಧನಮನದ್ವ್ಯಯಂಗೆಯ್ದೊಡೆ ಬಡತನಮಕ್ಕುಂ. ಬೞ*ಕ್ಕೇಗೆಯ್ವೆನೆಂದೊಡಾ ಗೊರವಂ ಮತ್ತಮಿಂತೆಂದಂ :

ಬಡತನವಾದಂದಿಂಗೆಂ-
ದೊಡವೆಗಳಂ ಮಡಗಬೇಡದೆಂತೆನೆ ಪುಣ್ಯಂ
ಕಿಡೆ ಮಡಗಿದೊಡವೆ ಕಿಡುಗುಂ
ಕಿಡದಲ್ತೆ ಪರಾರ್ಥಮಾಗಿ ಕೊಟ್ಟವರರ್ಥಂ  ೪೩೧

ಸಾಮಾನ್ಯನಲ್ಲ; ಏನುಹೇಳಿದೆ ; ಇಂದೂ ಹಿಂದೆಯೂ ಮಾತನ್ನು ಹುಡುಕಿದರೂ ಸಿಕ್ಕದು. ೪೩೦. ಇದು ಬರಿಯ ಪ್ರಾಣಿಯಲ್ಲ ಪರೀಕ್ಷಿಸಿದಲ್ಲಿ ಸ್ನೇಹಗುಣದಿಂದ ಕೂಡಿದವನು. ಚಿತ್ರಗ್ರೀವನನ್ನು ಸೆರೆಯಿಂದ ಬಿಡಿಸಿದವನು. ಈ ಹಿರಣ್ಯರೋಮನ ಗುಣವನ್ನು ಏನೆಂದು ಹೊಗಳುವೆನು ! ವ|| ಇಂತಹ ಮಹಾಪುರುಷನಾಗಿರುವುದರಿಂದಲೇ ನಾನು ಈತನಲ್ಲಿ ಮಿತ್ರತ್ವವನ್ನು ಪಡೆದೆನು. ಈಗ ನಿನ್ನಲ್ಲಿಗೆ ಬರುತ್ತಿರುವುದನ್ನು ಇವನಿಗೆ ಹೇಳಿದಾಗ ಇಲ್ಲಿ ಮನೋದುಃಖವು ಬಹಳವಾಗಿದೆ; ನನ್ನನ್ನೂ ನೀನು ಹೋಗುವಲ್ಲಿಗೆ ಕರೆದುಕೊಂಡು ಹೋಗು ಎನ್ನಲು ಇಲ್ಲಿಗೆ ತಂದೆನು ಎನ್ನಲು ಅದನ್ನೆಲ್ಲ ವಿವರವಾಗಿ ಕೇಳಿ ಮಂಧರನು ಹಿರಣ್ಯರೋಮನಿಗೆ ಹೀಗೆ ಹೇಳಿದನು: ನಿನಗೆ ಅಲ್ಲಿ ಯಾವುದರಿಂದ ಮನೋದುಃಖ ಉಂಟಾಯಿತು ಎನ್ನಲು ಮೂಷಕನು : ನಾನು ಹಿಂದಿನ ಜನ್ಮದಲ್ಲಿ ಸಂನ್ಯಾಸಿಯಾಗಿ ಕಾಂಚೀಪುರದಲ್ಲಿ ಭಿಕ್ಷಾಟನೆ ಮಾಡಿ ಹಲವು ಕಾಲ ಕಷ್ಟಪಟ್ಟು ಹೊನ್ನನ್ನು ಗಳಿಸಿ ಅದನ್ನು ಯಾವುದಕ್ಕೂ ವಿನಿಯೋಗಿಸದೆ ಬಚ್ಚಿಡಲು ನನ್ನ ಶಿಷ್ಯನಾಗಿದ್ದ ಬಿಟ್ಟಕಣ್ಣನೆಂಬ ಅಂನ್ಯಾಸಿಯು ಸ್ವಾಮೀ ! ನಿಮಗೆ ಸಂಸಾರವು ಸುಖವಲ್ಲ. ಈ ಹೊನ್ನನ್ನು ಬಚ್ಚಿಟ್ಟು ವ್ಯರ್ಥಗೊಳಿಸದೆ ದೇವಾಲಯವನ್ನು ಕಟ್ಟಿಸಿರಿ ; ಅಲ್ಲದಿದ್ದರೆ ಅನಾಥಜನಕ್ಕೆ ಏನಾದರೂ ದಾನಮಾಡಿರಿ ಎನ್ನಲು ನಾನು ಹೀಗೆಂದೆನು : ಹೇಗಿದ್ದರೂ ಸಂಪಾದಿಸಿದ ಹೊನ್ನನ್ನು ಅಪವ್ಯಯಮಾಡಿದಲ್ಲಿ ಬಡತನವುಂಟಾಗುವುದು. ಬಳಿಕ ಏನು ಮಾಡಲಿ ಎನ್ನಲು ಆ ಸಂನ್ಯಾಸಿಯು ಮತ್ತೂ ಹೀಗೆಂದನು : ೪೩೧. ಬಡತನ ಬಂದಾಗ ಒಡವೆಗಳನ್ನು ಬಚ್ಚಿಡಬೇಡ. ಏಕೆಂದರೆ ಪುಣ್ಯವು ಹಿಂಗಲು ಬಚ್ಚಿಟ್ಟ ಒಡವೆ ನಾಶವಾಗುವುದು.

ಶ್ಲೋ|| ಧರ್ಮಾರ್ಥಂ ಕ್ಷೀಣಕೋಶಸ್ಯ ಕೃಶತ್ವಮತಿಶೋಭತೇ
ಸುರೈ: ಪೀತಾವಶೇಷಸ್ಯ ರೇಖಾ ಹಿಮರುಚೇರಿವ  ||೨೦೫||

ಟೀ|| ಧರ್ಮನಿಮಿತ್ತಮಾಗಿ ಧನಹೀನನಾದಾತಂಗೆ ಬಡತನವಾದಡೊಂ ಒಪ್ಪುವನು : ಅದೆಹಗೆಂದೊಡೆ ದೇವರ್ಕಳ್ ಪಾನಮಾಡಿ ಮಿಕ್ಕ ಚಂದ್ರನ ಕಳೆಯಹಗೆ ಎಂಬುದು ಯುಕ್ತಿಯುಂಟು. ಧನಮಂ ಧರ್ಮನಿಮಿತ್ತಮಿತ್ತೊಡಾ ಬಡತನಮುಂ ತಪದಿಂ ಕ್ಷಪಿಯಿಸಿದ ಶರೀರಮುಂ ಲೋಕದೊಳ್ ಭೂಷಣಮಲ್ಲದೆಲ್ಲಿಯುಮಿಲ್ಲಂ. ನೀವಿಂತು ಮೋಹಿತರಾದಂದು ಮೋಹಿತನಾದ ನರಿಯಂತಕ್ಕುಮೆಂಬುದುವ್ಮದೆಂತೆನೆ ಬಿಟ್ಟಕಣ್ಣನಿಂತೆಂದು ಪೇೞ್ದಂ :