Categories
ಕನ್ನಡ

ಮಿರ್ಜಾ ಇಸ್ಮಾಯಿಲ್

ನಿನ್ನ ಜನ ನಗುತಿರಲು
ನೀನಳುತ ಬಂದೆ
ನಿನ್ನ ಜನ ಅಳುತಿರಲು
ನೀಂ ನಗುತ ಪೋಗು.

ಒಬ್ಬ ಪಾರ್ಸಿ ಕವಿಯ ಪಂಕ್ತಿಗಳು ಇವು.

ಮಗು ಹುಟ್ಟಿತು ಎಂದು ತಿಳಿಯುತ್ತಲೇ ಮನೆಯವರೆಲ್ಲ ಸಂತೋಷಪಡುತ್ತಾರೆ. ಸಿಹಿ ಹಂಚುತ್ತಾರೆ. ಮಗು ಮಾತ್ರ ಅಳುತ್ತಿರುತ್ತದೆ.

ಮನುಷ್ಯ ಹೇಗೆ ಬದುಕಬೇಕು ಎಂದರೆ ಅವನು ಸಾಯುವ ಕಾಲ ಬಂದಾಗ, ’ಅಯ್ಯೋ ಸಾಯಬೇಕಲ್ಲ’  ಎಂದು ಅಳುವಂತಿರಬಾರದು. ’ಇತರರಿಗೆ ನನ್ನಿಂದಾದ ಸಹಾಯ ಮಾಡಿದೆ. ನನ್ನ ಕೆಲಸ ಮುಗಿಯಿತು. ಹೊರಟೆ ನಾನು’ ಎಂದು ನಗುತ್ತ ಸಾವನ್ನೆದುರಿಸಬೇಕು. ಇತರರು ’ಇಷ್ಟು ಒಳ್ಳೆಯ ಮನುಷ್ಯ ಹೊರಟುಹೋಗುತ್ತಾನಲ್ಲ!’ ಎಂದು ಕಣ್ಣೀರು ಸುರಿಸುತ್ತಿರಬೇಕು.

ಈ ಉಪದೇಶವನ್ನು ಮತ್ತೆಮತ್ತೆ ಸ್ಮರಿಸಿಕೊಳ್ಳುತ್ತಿದ್ದರು ಮಿರ್ಜಾ ಮಹಮದ್ ಇಸ್ಮಾಯಿಲ್ ಅವರು. ಅದನ್ನು ಆಚರಿಸಿ ಬದುಕಲು ಬಹು ಶ್ರದ್ಧೆಯಿಂದ ಪ್ರಯತ್ನಿಸಿದರು.

ಈಗ ನಾವು ಕರ್ನಾಟಕ ಎಂದು ಕರೆಯುತ್ತಿರುವ ರಾಜ್ಯ ಉದಯವಾದದ್ದು ೧೯೫೬ರ ನವೆಂಬರ್ ಒಂದರಂದು. ಅಲ್ಲಿಯವರೆಗೆ ಕನ್ನಡವನ್ನಾಡುವ ಜನ ಬೇರೆ ಬೇರೆ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ಇವುಗಳಲ್ಲಿ ಅತಿ ದೊಡ್ಡದು ಮಹಾರಾಜರು ಆಳುತ್ತಿದ್ದ ಮೈಸೂರು ಸಂಸ್ಥಾನ; ಈಗಿನ ಕರ್ನಾಟಕದಲ್ಲಿ ಸುಮಾರು ಅರ್ಧದಷ್ಟಿತ್ತು. ಮಹಾರಾಜರ ಮುಖ್ಯಮಂತ್ರಿಯನ್ನು ದಿವಾನರು ಎಂದು ಕರೆಯುತ್ತಿದ್ದರು.

ಮೈಸೂರು ಸಂಸ್ಥಾನದಲ್ಲಿ ಹಿಂದುಗಳದೇ ಬಹು ಹೆಚ್ಚು ಸಂಖ್ಯೆ. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಬಹು ನಿಷ್ಠಾವಂತ ಹಿಂದುಗಳು. ಅವರ ದಿವಾನರಾಗಿ ಮಿರ್ಜಾ ಇಸ್ಮಾಯಿಲರು ಬಹು ಗೌರವವನ್ನೂ ಜನಪ್ರಿಯತೆಯನ್ನೂ ಸಂಪಾದಿಸಿದರು. ಹಿಂದು — ಮುಸ್ಲಿಂ ಸ್ನೇಹ ಸಹಕಾರಗಳ ಸಂಕೇತವಾದರು.

ಮನೆತನ, ವಿದ್ಯಾಭ್ಯಾಸ

ಮಿರ್ಜಾ ಪರ್ಷಿಯದಿಂದ  ಭಾರತಕ್ಕೆ ಬಂದ ಶ್ರೀಮಂತ ಮನೆತನದಲ್ಲಿ ಹುಟ್ಟಿದವರು. ಅವರ ತಾತ ಅಲಿ ಆಸ್ಕರರು ಹದಿನಾರು ವರ್ಷದವರಾಗಿದ್ದಾಗ ಬೆಂಗಳೂರಿಗೆ ಬಂದರು. (ಬೆಂಗಳೂರಿನಲ್ಲಿ ಒಂದು ರಸ್ತೆಗೆ ಇವರ ಹೆಸರನ್ನಿಟ್ಟಿದೆ.) ಓದು ಬರಹ ಬರುತ್ತಿರಲಿಲ್ಲ. ಆದರೆ ವ್ಯಾಪಾರದಲ್ಲಿ ನಿಪುಣರು, ಬುದ್ಧಿವಂತರು, ನಂಬಿಕೆಗೆ ಅರ್ಹರು ಎನ್ನಿಸಿಕೊಂಡವರು. ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ವಿಶ್ವಾಸವನ್ನು ಸಂಪಾದಿಸಿದರು. ಮಿರ್ಜಾ ಅವರ ತಂದೆ ಅಗಾ ಜಾನ್ ಮಹಾರಾಜ ಚಾಮರಾಜ ಒಡೆಯರ ಅಂಗರಕ್ಷಕರಾಗಿದ್ದರು. ಹೀಗೆ ಈ ಮನೆತನಕ್ಕೆ ಮೈಸೂರಿನ ರಾಜಮನೆತನದ ಜೊತೆಗೆ ವಿಶ್ವಾಸ ಬೆಳೆಯಿತು.

ಮಿರ್ಜಾರವರು ಹುಟ್ಟಿದ್ದು ೧೮೮೩ರಲ್ಲಿ. ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಶಾಲೆ ಮತ್ತು ವೆಸ್ಲಿನ್ ಮಿಷನ್ ಹೈಸ್ಕೂಲ್ಗಳಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು.

೧೮೯೪ರಲ್ಲಿ ಮಹಾರಾಜ ಚಾಮರಾಜ ಒಡೆಯರು ತೀರಿಕೊಂಡರು. ಅವರು ಹಿರಿಯ ಮಗ ಕೃಷ್ಣರಾಜ ಒಡೆಯರಿಗೆ ಆಗ ಹತ್ತು ವರ್ಷ. ಅವರ ವಿದ್ಯಾಭ್ಯಾಸಕ್ಕಾಗಿ ಅರಮನೆಯಲ್ಲಿ ’ರಾಯಲ್ ಸ್ಕೂಲ್’ ಎಂಬ ವಿಶೇಷ ಪಾಠಶಾಲೆ ಪ್ರಾರಂಭವಾಯಿತು. ಮಿರ್ಜಾರವರೂ ಆ ತರಗತಿಯನ್ನು ಸೇರಿದರು. ತರಗತಿಯಲ್ಲಿ ಒಟ್ಟು ಒಂಬತ್ತು ಮಂದಿ ವಿದ್ಯಾರ್ಥಿಗಳು.

೧೯೦೧ರಲ್ಲಿ ಇಲ್ಲಿ ವಿದ್ಯಾಭ್ಯಾಸ ಮುಗಿಸಿ ಮಿರ್ಜಾರವರು ಬೆಂಗಳೂರಿನ ಸೆಂಟ್ರಲ್ ಕಾಲೇಜನ್ನು ಸೇರಿದರು. ಅವರು ಆರಿಸಿಕೊಂಡ ವಿಶೇಷ ವಿಷಯ ಭೂವಿಜ್ಞಾನ. ಅವರು ಶ್ರಿಮಂತ ಮನೆಯ ಯುವಕ, ಮಹಾರಾಜರ ಸ್ನೇಹಿತ, ಆದರೂ ಕಾಲೇಜಿನಲ್ಲಿ ಬಹು ಶಿಸ್ತಿನ ವಿದ್ಯಾರ್ಥಿ. ಅವರು ದಿವಾನರಾದ ನಂತರವೂ ತಮ್ಮ ಗುರುಗಳಲ್ಲಿ ಬಹು ಗೌರವದಿಂದ ನಡೆದುಕೊಳ್ಳುತ್ತಿದ್ದರು.

೧೯೦೫ರಲ್ಲಿ ಮಿರ್ಜಾರವರು ಪದವೀಧರರಾದರು. ಅನಂತರ ಪೊಲೀಸ್ ಇಲಾಖೆಯಲ್ಲಿ ಅವರಿಗೆ ಕೆಲಸ ದೊರೆಯಿತು.

ಮಹಾರಾಜರ ಕಾರ್ಯದರ್ಶಿ

ಮಿರ್ಜಾರವರು ಮಹಾರಾಜರ ತರಗತಿಯಲ್ಲೇ ಓದಿದರಲ್ಲವೆ? ಆಗಲೇ ಮಹಾರಾಜರಿಗೆ ಅವರ ಗುಣ ಮತ್ತು ಬುದ್ದಿಶಕ್ತಿ ಮೆಚ್ಚಿಗೆಯಾಗಿದ್ದವು. ಕೆಲವೇ ತಿಂಗಳಲ್ಲಿ ಮಹಾರಾಜರು ಅವರನ್ನು ತಮ್ಮ ಉಪಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು.

ಬ್ರಿಟಿಷರು ಭಾರತದ ಪ್ರಭುಗಳಾಗಿದ್ದ ಕಾಲ ಅದು. ರಾಜ ಮಹಾರಾಜರುಗಳು ಆಳುತ್ತಿದ್ದ ದೇಶೀಯ ಸಂಸ್ಥಾನಗಳಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ’ರೆಸಿಡೆಂಟ್’ ಎಂಬ ಅಧಿಕಾರಿ ಇರುತ್ತಿದ್ದ. ಅಲ್ಲದೆ ಮಹಾರಾಜರ ಬಳಿ ಕೆಲಸ ಮಾಡುವವರಲ್ಲಿ ಒಬ್ಬರು ತಮ್ಮವರಿರಬೇಕು ಎಂದು ಬ್ರಿಟಿಷರು ಒತ್ತಾಯ ಮಾಡುತ್ತಿದ್ದರು. ಇದರಿಂದ ಕೃಷ್ಣರಾಜ ಒಡೆಯರು ಒಬ್ಬ ಬ್ರಿಟಿಷರವನನ್ನು ತಮ್ಮ ಅಪ್ತಕಾರ್ಯದರ್ಶಿ (ಪ್ರೈವೇಟ್ ಸೆಕ್ರೆಟರಿ) ಎಂದು ನೇಮಿಸಿಕೊಳ್ಳಬೇಕಾಯಿತು.

ಆದರೆ ಮಹಾರಾಜರಿಗೆ, ಇಲ್ಲಿನ ಜನರನ್ನು ತಿಳಿದು ಕೊಂಡು ಅವರ ಜೊತೆಗೆ ಮಾತನಾಡಬಲ್ಲ, ಅವರ ಒಳಿತನ್ನು ಯೋಜನೆ ಮಾಡಬಲ್ಲ ಅಧಿಕಾರಿ ಬೇಕಾಗಿತ್ತು. ಆದುದರಿಂದ ಅವರು ’ಹುಜೂರ್ ಸೆಕ್ರೆಟರಿ’ ಎಂಬ ಸ್ಥಾನವನ್ನು ನಿರ್ಮಿಸಿದರು. ೧೯೧೩ರಲ್ಲಿ ಈ ಸ್ಥಾನ ತೆರವಾದಾಗ ಮಿರ್ಜಾರವರನ್ನು ಮಹಾರಾಜರು ನೇಮಿಸಿದರು. ೧೯೨೩ ರಲ್ಲಿ ಮಿರ್ಜಾರವರು ಮಹಾರಾಜರ ಆಪ್ತಕಾರ್ಯದರ್ಶಿಯಾದರು.

ಆಗಿನ ಕಾಲದಲ್ಲಿ ಇದ್ದವರು ಮೂವರು  ಮಂತ್ರಿಗಳು– ದಿವಾನವರು, ಮತ್ತಿಬ್ಬರು. ಮಹಾರಾಜರ ಆಪ್ತಕಾರ್ಯದರ್ಶಿಗೆ ಸ್ವಲ್ಪ ಹೆಚ್ಚು ಕಡಿಮೆ ಮಂತ್ರಿಯಷ್ಟೆ ಅಧಿಕಾರ, ಪ್ರಾಮುಖ್ಯತೆ. ಆಗಿನ ದಿನಗಳಲ್ಲಿ ಮಹಾರಾಜರಿಗೆ ಸಂಸ್ಥಾನದ ಒಳಗಿನ ಆಡಳಿತದಲ್ಲಿ ಸಂಪೂರ್ಣ ಅಧಿಕಾರ. ಕೃಷ್ಣರಾಜ ಒಡೆಯರು ಹೆಸರಿಗೆ ಮಾತ್ರ ಮಹಾರಾಜರಾಗಿದ್ದವರಲ್ಲ. ಪ್ರತಿನಿತ್ಯ ಕಚೇರಿಯಲ್ಲಿ ಕುಳಿತು ಕಾಗದ ಪತ್ರಗಳನ್ನು ನೋಡಿ ತೀರ್ಮಾನಗಳನ್ನು ಕೊಡುವವರು. ಮಿರ್ಜಾರವರು ಹುಜೂರ್ ಸೆಕ್ರೆಟರಿ ಆಗಿದ್ದಾಗಲೂ ಮಹಾರಾಜರು ಇಂಗ್ಲಿಷರವನಾಗಿದ್ದ ಆಪ್ತ ಕೇಳುತ್ತಿದ್ದರು. ಆಪ್ತಕಾರ್ಯದರ್ಶಿಗಳಾದನಂತರ ಮಿರ್ಜಾರವರ ಹೊಣೆ ಹೆಚ್ಚಾಯಿತು. ಎಷ್ಟೋ ಬಾರಿ ಮಂತ್ರಿಗಳ ಸಲಹೆಗಳ ವಿಷಯ ತೀರ್ಮಾನಿಸುವಾಗ ಮಹಾರಾಜರು ಮಿರ್ಜಾರವರ ಅಭಿಪ್ರಾಯಗಳನ್ನು ಕೇಳುತ್ತಿದ್ದರು.

ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಮಿರ್ಜಾ ರವರು ಮಹಾರಾಜರ ಉಪಕಾರ್ಯದರ್ಶಿಯಾಗಿ, ಹುಜೂರು ಸೆಕ್ರೆಟರಿ ಆಗಿ, ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಎಲ್ಲ ಇಲಾಖೆಗಳ ಮುಖ್ಯ ಕಾಗದ ಪತ್ರಗಳೂ ಮಹಾರಾಜರ ಕಚೇರಿಗೆ ಬರುತ್ತಿದ್ದವು. ಮುಖ್ಯ ಸಂಗತಿಗಳೂ ಕಚೇರಿಯ ಗಮನಕ್ಕೆ ಬರುತ್ತಿದ್ದವು. ಆದುದರಿಂದ ಮಿರ್ಜಾರವರಿಗೆ ಎಲ್ಲ ಇಲಾಖೆಗಳ ಕೆಲಸ, ಸಮಸ್ಯೆಗಳು, ಅಗತ್ಯಗಳು ತಿಳಿಯುವಂತಾಯಿತು. ಸರ್ಕಾರದ ಕೆಲಸಕಾರ್ಯಗಳಿಗೆ ಒಂದು ಕ್ರಮ ಉಂಟು, ನಿಯಮಗಳು ಉಂಟು. ಕೆಲಸ ಪ್ರಾರಂಭವಾಗುವ ಮೊದಲು ಅಂದಾಜು, ಆಗುವಾಗ ಮೇಲ್ವಿಚಾರಣೆ, ಮುಗಿದ ನಂತರ ಖರ್ಚಿನ ತನಿಖೆ – ಎಲ್ಲ ಆಗಬೇಕು. ಕೆಲಸ ಮಾಡುವವರ ಆಯ್ಕೆಗೆ ನಿಯಮಗಳು ಉಂಟು. ಸರ್ಕಾರದ ಕ್ರಮಗಳು, ಕಷ್ಟಗಳು ಎಷ್ಟೋ ಬಾರಿ ಜನಸಾಮಾನ್ಯಕ್ಕೆ ತಿಳಿಯುವುದಿಲ್ಲ, ಅವರು ಸರ್ಕಾರವನ್ನು ಆಕ್ಷೇಪಿಸುತ್ತಾರೆ. ಜನರ ಕಷ್ಟಗಳು, ತೀವ್ರವಾಗಿ ಕೆಲಸ ಆಗಬೇಕಾದ ಅಗತ್ಯ ಅಧಿಕಾರಿಗಳಿಗೆ ಎಷ್ಟೋ ಬಾರಿ ತಿಳಿಯುವುದಿಲ್ಲ, ಅವರು ಜನರ ಒತ್ತಾಯಕ್ಕೆ ಬೇಸರಿಸುತ್ತಾರೆ. ಅಧಿಕಾರಿಗಳ ಕಷ್ಟಗಳು – ಜನರ ಕಷ್ಟಗಳು ಎಲ್ಲ, ಮಹಾರಾಜರ ಬಳಿ ಕೆಲಸ ಮಾಡುತ್ತಿದ್ದ ಮಿರ್ಜಾರವರಿಗೆ ಚೆನ್ನಾಗಿ ಪರಿಚಯವಾದವು.

ದಿವಾನರಾಗಿ

೧೯೨೬ ರಲ್ಲಿ ಮೈಸೂರ ಸಂಸ್ಥಾನದ ದಿವಾನರ ಪದವಿ ತೆರನಾಯಿತು. ಕೃಷ್ಣರಾಜ ಒಡೆಯರು ಮಿರ್ಜಾರವರನ್ನು ನೇಮಿಸಿದರು.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಮಿರ್ಜಾ ಇಸ್ಮಾಯಿಲರು, ನಾಲ್ವಡಿ ಕೃಷ್ಣರಾಜ ಒಡೆಯರು

ಬಹು ಜನಕ್ಕೆ ಇದರಿಂದ ಆಶ್ಚರ್ಯವಾಯಿತು. ಆಗ ಮಿರ್ಜಾರವರಿಗೆ ಇನ್ನೂ ನಲವತ್ತಮೂರು ವರ್ಷ. ಇಷ್ಟು ಚಿಕ್ಕ ವಯಸ್ಸಿನವರಿಗೆ, ದಿವಾನರ ಕೆಲಸಕ್ಕೆ, ಹೊಣೆಗೆ ಬೇಕಾದ ಅನುಭವ ಉಂಟೆ ಎಂದು ಅವರಿಗೆ ಅನುಮಾನ.

ಹದಿನೈದು ವರ್ಷಗಳ ಕಾಲ, ೧೯೪೧ ರವರೆಗೆ, ಮಿರ್ಜಾರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಸಂಸ್ಥಾನದ ಅತಿ ಸಮರ್ಥ ದಿವಾನರುಗಳಲ್ಲಿ ಒಬ್ಬರು ಎನ್ನಿಸಿಕೊಂಡರು. ೧೯೧೮ ರವರೆಗೆ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ಆಧುನಿಕ ಯುಗಕ್ಕೆ ಕಾಲಿಟ್ಟಿತು. ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ ಕೆಲಸವನ್ನು ಅದ್ಭುತವಾಗಿ ಮುಂದುವರಿಸಿದರು ಮಿರ್ಜಾರವರು.

ಕೈಗಾರಿಕೆಗಳ ಪ್ರಗತಿ

ಯಾವ ದೇಶವೇ ಆಗಲಿ ಮುಂದುವರಿಯಬೇಕಾದರೆ ಕೈಗಾರಿಕೆಗಳ ಬೆಳವಣಿಗೆ ಮುಖ್ಯ. ಇದರಿಂದ ನಮ್ಮ ದೇಶದಲ್ಲಿ ಸಿಕ್ಕುವ ಕಬ್ಬಿಣ, ಮರ ಮೊದಲಾದ ಸಾಮಾನುಗಳನ್ನು ಉಪಯೋಗಿಸಿಕೊಂಡು ನಮಗೆ ಬೇಕಾದ ವಸ್ತುಗಳನ್ನು ಮಾಡಿಕೊಳ್ಳಬಹುದು. ಆಗ ನಾವು ಇತರ ದೇಶಗಳನ್ನು ನೆಚ್ಚಬೇಕಾಗಿಲ್ಲ. ದೇಶದ ಸಂಪತ್ತೂ ಹೆಚ್ಚುತ್ತದೆ. ಲಕ್ಷಾಂತರ ಮಂದಿಗೆ ಉದ್ಯೋಗ ದೊರೆಯುತ್ತದೆ.

ಮಂಡ್ಯದ ಸಕ್ಕರೆಯ ಕಾರ್ಖಾನೆ, ಭದ್ರಾವತಿಯ ಕಾಗದದ ಕಾರ್ಖಾನೆ ಮೊದಲಾದ ಎಷ್ಟೋ ಕಾರ್ಖಾನೆಗಳು ಪ್ರಾರಂಭವಾದದು ಮಿರ್ಜಾ ಅವರು ದಿವಾನರಾಗಿದ್ದ ಕಾಲದಲ್ಲಿ. ಉಕ್ಕು, ಸಿಮೆಂಟ್, ರಾಸಾಯನಿಕ ಗೊಬ್ಬರ, ಗಾಜು, ಪಿಂಗಾಣಿ ಸಾಮಾನುಗಳು, ಕೃಷಿಗೆ ಅಗತ್ಯವಾದ ಉಪಕರಣಗಳು, ಕೃತಕ ರೇಷ್ಮೆ, ವಿದ್ಯುಚ್ಛಕ್ತಿಯ ಬಲ್ಬ್ಗಳು ಇವುಗಳ ಉತ್ಪಾದನೆಗೆ ಅಗತ್ಯವಾದ ಕಾರ್ಖಾನೆಗಳ ಸ್ಥಾಪನೆಗೆ ಕಾರಣರು ಮಿರ್ಜಾರವರು. ಈಗ ಬೆಂಗಳೂರಿನಲ್ಲಿರುವ ಹಿಂದುಸ್ಥಾನ ವಿಮಾನ ಕಾರ್ಖಾನೆ ಸಾವಿರಾರು ಜನರಿಗೆ ಉದ್ಯೋಗಗಳನ್ನು ಕೊಟ್ಟಿರುವುದು ಮಾತ್ರವಲ್ಲ, ಭಾರತಕ್ಕೆ ಒಂದು ಆಸ್ತಿಯಾಗಿದೆ. ಇದರ ಸ್ಥಾಪನೆಗೆ ಕಾರಣರಾದ ಪ್ರಮುಖರಲ್ಲಿ ಆಗ ದಿವಾನರಾಗಿದ್ದ ಮಿರ್ಜಾರವರು ಒಬ್ಬರು. ಭಾರತದಲ್ಲಿ ಬೆಳೆಯುವ ಕಾಫಿಯಲ್ಲಿ ನೂರರಲ್ಲಿ ಅರವತ್ತರಷ್ಟು ಮೈಸೂರು ಸಂಸ್ಥಾನದಲ್ಲಿ ಬೆಳೆಯುತ್ತಿತ್ತು. ಆದರೆ ಇದನ್ನು ಪರಿಷ್ಕರಣೆಗೆ ಸಂಸ್ಥಾನದಿಂದ ಹೊರಕ್ಕೆ ಕಳುಹಿಸಬೇಕಾಗಿತ್ತು. ಇದು ಸಂಸ್ಥಾನದಲ್ಲಿಯೆ ನಡೆಯುವಂತೆ ’ಮೈಸೂರು ಕಾಫಿ ಕ್ಯೂರಿಂಗ್ ವಕ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಕಾರಣರಾದವರು ಮಿರ್ಜಾರವರು.

ಕೈಗಾರಿಕೆಗಳನ್ನು ಸ್ಥಾಪಿಸುವಾಗ ಮಿರ್ಜಾರವುರ ಸಂಸ್ಥಾನದಲ್ಲಿ ಬೇರೆ ಬೇರೆ ಸ್ಥಳಗಳನ್ನು ಆರಿಸಿದರು. ಅನೇಕ ಕಾರ್ಖಾನೆಗಳು ಒಂದೇ ಸ್ಥಳದಲ್ಲಿದ್ದರೆ, ಅಲ್ಲಿಯವರಿಗೇ ಹೆಚ್ಚಾಗಿ ಕೆಲಸಗಳು ದೊರೆಯುತ್ತವೆ. ಇತರ ಸ್ಥಳದವರಿಗೆ ಅನ್ಯಯವಾಗುತ್ತದೆ. ಅಲ್ಲದೆ, ಕಾರ್ಖಾನೆಗಳು ಹೆಚ್ಚಿದರೆ ಬೇರೆಡೆಯಿಂದ ನೂರಾರು ಸಂಸಾರಗಳು ಬಂದು ನೆಲೆಸುತ್ತವೆ, ಜನಸಂಖ್ಯೆ ಹೆಚ್ಚುತ್ತದೆ; ಆಸ್ಪತ್ರೆಗಳು, ಶಾಲೆಗಳು ಎಲ್ಲ ಅಲ್ಲಿ ಹೆಚ್ಚಬೇಕು. ರಸ್ತೆಗಳು ದೊಡ್ಡವಾಗಬೇಕು. ಊರಿನ ನೆಲವನ್ನೂ ನೀರನ್ನೂ ಗಾಳಿಯನ್ನೂ ಶುದ್ಧ ಮಾಡಲು ಏರ್ಪಾಟಾಗಬೇಕು. ಆದುದರಿಂದ ದೂರದೃಷ್ಟಿಯ ಮಿರ್ಜಾರವರು ಕಾರ್ಖಾನೆಗಳನ್ನು ಸಂಸ್ಥಾನದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಿದರು.

ಹೊಟ್ಟೆಗೆ ಹಿಟ್ಟು, ಕಣ್ಣಿಗೆ ಬೆಳಕು

ಆಧುನಿಕ ಕಾಲದಲ್ಲಿ ಕೈಗಾರಿಕೆ ಎಂದರೆ ವಿದ್ಯುಚ್ಛಕ್ತಿ ಬೇಕೇಬೇಕು. ಶಿವನಸಮುದ್ರದಲ್ಲಿ ಆಗಲೇ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿತ್ತು. ಆದರೆ ಇದೊಂದೇ ಆಧಾರವನ್ನು ನೆಚ್ಚುವುದು ಜಾಣತನವಲ್ಲ ಎನ್ನಿಸಿತು ಮಿರ್ಜಾರವರಿಗೆ. ಷಿಂಷಾ ಮತ್ತು ಜೊಗ್ಜಲಪಾತಗಳನ್ನು ಬಳಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದನೆ ಮಾಡಲು ತೀರ್ಮಾನಿಸಿದರು. ಷಿಂಷಾ ವಿದ್ಯುಚ್ಛಕ್ತಿ ಕೇಂದ್ರವನ್ನಂತೂ ಬಹು ತೀವ್ರವಾಗಿ ಮುಗಿಸಿದ್ದಾಯಿತು. ಅದು ಮುಗಿದ ಎರಡು ವರ್ಷಗಳಿಗೆ ಶಿವನಸಮುದ್ರ ವಿದ್ಯುಚ್ಛಕ್ತಿ ಕೇಂದ್ರಕ್ಕೆ ಸಿಡಿಲು ಹೊಡೆದು ಕೆಲವು ತಿಂಗಳ ಕಾಲ ಅದು ನಿಷ್ಕ್ರಿಯವಾಯಿತು. ಷಿಂಷಾ ಕೇಂದ್ರ ಶಿವನಸಮುದ್ರದ ಕೇಂದ್ರದ ಹೊರೆಯನ್ನೂ ನಿರ್ವಹಿಸಿತು. ಇಲ್ಲದಿದ್ದರೆ ಊರುಗಳೂ ಹಳ್ಳಿಗಳೂ ಕತ್ತಲೆಯಲ್ಲಿ ಮುಳುಗುತ್ತಿದ್ದವು. ಕೋಲಾರದ ಚಿನ್ನದ ಗಣಿಯ ಕೆಲಸ ನಿಲ್ಲುತ್ತಿತ್ತು, ಹಲವಾರು ಕಾರ್ಖಾನೆಗಳು ಸ್ತಬ್ಧವಾಗುತ್ತಿದ್ದವು.

೧೯೨೬ರಲ್ಲಿ ಬೆಂಗಳೂರು, ಮೈಸೂರು, ಕೋಲಾರದ ಚಿನ್ನದ ಗಣಿ- ಈ ಮೂರು ನಗರಗಳಲ್ಲಿ ಮಾತ್ರ ವಿದ್ಯುಚ್ಛಕ್ತಿಯ ಸೌಲಭ್ಯ ಇದ್ದಿತು. ಹಳ್ಳಿಗಳಿಗೂ ಈ ಸೌಲಭ್ಯ ಒದಗಿಸಬೇಕು ಎಂದು ಮಿರ್ಜಾರವರು ಯೋಚಿಸಿದಾಗ ಅನೇಕರು ಹಾಸ್ಯ ಮಾಡಿದರು. ಭಾರತದಲ್ಲೆ ಹಳ್ಳಿಗಳಿಗೂ ವಿದ್ಯುಚ್ಛಕ್ತಿ ಒದಗಿಸಿದ ಮೊದಲನೆಯ ಸಂಸ್ಥಾನ ಮೈಸೂರು. ೧೯೪೦ರ ಹೊತ್ತಿಗೆ ೧೮೦ ಹಳ್ಳಿಗಳಿಗೆ ಈ ಸೌಲಭ್ಯ ಒದಗಿತ್ತು.

ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆ

ಮಿರ್ಜಾರವರಿಗೆ ಸಂಸ್ಥಾನದ ಪ್ರತಿ ಊರು, ಪ್ರತಿ ಹಳ್ಳಿ ಚೊಕ್ಕಟವಾಗಿರಬೇಕು, ಅಂದವಾಗಿರಬೇಕು, ಮನಸ್ಸಿಗೆ ಉಲ್ಲಾಸವಾಗುವಂತಿರಬೇಕು. ಜನರ ಹೊಟ್ಟೆಗೆ ಹಿಟ್ಟೂ ಬೇಕು, ಜುಟ್ಟಿಗೆ ಮಲ್ಲಿಗೆಯೂ ಬೇಕು. ಆದುದಿರಂದ ಊರುಗಳ ಮತ್ತು ಹಳ್ಳಿಗಳ ಸೊಗಸಿಗೆ ಗಮನ ಕೊಟ್ಟರು. ಊರಿಗಾಗಲಿ ಹಳ್ಳಿಗಾಗಲಿ ಸುಂದರವಾದ ಪ್ರವೇಶವಿರಬೇಕು. ಸ್ವಲ್ಪ ದೊಡ್ಡ ಸ್ಥಳವಾದರೆ ಪ್ರವಾಸಿಗರು ಇಳಿದುಕೊಳ್ಳಲು ಪ್ರವಾಸಿಮಂದಿರ ಇರಬೇಕು. ಸ್ಥಳದ ಗಾತ್ರಕ್ಕೆ ಅನುಗುಣವಾಗಿ ಒಂದೋ ಎರಡೋ ಮೂರೋ ಸಾರ್ವಜನಿಕ ಉದ್ಯಾನವಿರಬೇಕು. ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದರಲ್ಲಿ ನೀರಿನ ಕಾರಂಜಿ ಇರಬೇಕು; ಸಾಧ್ಯವಾದರೆ ಬಣ್ಣಬಣ್ಣದ ದೀಪಗಳಿರಬೇಕು. ಮಕ್ಕಳು ಆಡಲು ಉದ್ಯಾನಗಳಿರಬೇಕು. ಊರಿನಲ್ಲಿ ವಿಶಾಲವಾದ ಮೈದಾನಗಳಿರಬೇಕು. ಮನೆಗಳನ್ನು ಅಥವಾ ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಬರಿಯ ಅನುಕೂಲ ನೋಡಿಕೊಂಡು ಕಟ್ಟಬಾರದು. ಇಡೀ ರಸ್ತೆಯ ಅಂದ ಹೆಚ್ಚುವಂತೆ ಕಟ್ಟಬೇಕು. ಹಾಗೆ ಕಟ್ಟುವಂತೆ ಪುರಸಭೆಗಳು ನೋಡಿಕೊಳ್ಳಬೇಕು. ಇದು ಅವರ ಹಂಬಲ. ಹಿಂದಿನ ಮೈಸೂರು ಪ್ರದೇಶದಲ್ಲಿ ನೂರಾರು ಹಳ್ಳಿಗಳು -ನಗರಗಳನ್ನು ಪ್ರವೇಶಿಸುವಾಗ ಇಂದಿಗೂ ಕಾಣುವ ಸುಂದರ ಹೆಬ್ಬಾಗಿಲುಗಳು, ಅವುಗಳಲ್ಲಿನ ಪ್ರವಾಸಿ ಮಂದಿರಗಳು, ಸಾರ್ವಜನಿಕ ಉದ್ಯಾನಗಳು ಮಿರ್ಜಾ ಅವರ ಸೌಂದರ್ಯ ಪ್ರೇಮಕ್ಕೆ ಸಾಕ್ಷಿಗಳು.

ಕೆ. ಆರ್. ಎಸ್.-ಬೃಂದಾವನ – ಹೆಸರು ಕೇಳುತ್ತಲೇ ಕಣ್ಣಿನ ಮುಂದೆ ಸೊಗಸಾದ ಚಿತ್ರ ಕಟ್ಟುತ್ತದೆ. ಮೈಸೂರಿನ ಹತ್ತಿರ ಇರುವ ಈ ಬೃಂದಾವನದಲ್ಲಿ ನೋಟವನ್ನು ಸೆಳೆಯುವ ವಿನ್ಯಾಸದ ಬಗೆಬಗೆಯ ಗಿಡಗಳು, ಕತ್ತಲಾಗುತ್ತಲೆ ಜಗ್ಗನೆ ಹತ್ತಿಕೊಂಡು ಕಾರಂಜಿಗಳಿಗೆ ಹೊಸ ಚೆಲುವನ್ನು ಕೊಡುವ ಬಣ್ಣಬಣ್ಣದ ದೀಪಗಳು, ಎಲ್ಲ ಸೇರಿ ಅಪೂರ್ವ ಲೋಕವೊಂದು ಸೃಷ್ಟಿಯಾಗುತ್ತದೆ. ಈ ಸುಂದರ ಬೃಂದಾವನದ ನಿರ್ಮಾತೃ ಮಿರ್ಜಾರವರು.

ಆವರಣ ಚೊಕ್ಕಟವಾಗಿದ್ದರೆ, ಸುಂದರವಾಗಿದ್ದರೆ ಮನಸ್ಸು ಉಲ್ಲಾಸವಾಗಿರುತ್ತದೆ ಎಂದು ಮಿರ್ಜಾರವರ ಭಾವನೆ ಎಷ್ಟು ದೂರ ಹೋಗುತ್ತಿತ್ತು ಎಂಬುದಕ್ಕೆ ಮತ್ತು ಅವರ ಮೃದು ಮನಸ್ಸಿಗೆ ಒಂದು ನಿದರ್ಶನ. ಮನಸ್ಸಿನ ರೋಗಗಳಿಗೆ ನರಳುವವರಿಗೆ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆ. ಮಿರ್ಜಾರವರು ಈ ಆಸ್ಪತ್ರೆಯ ಒಳಗಿನ ಕೊಠಡಿಗಳು, ಹೊರಗಿನ ಆವರಣ ಎಲ್ಲವನ್ನೂ ಸ್ವಚ್ಛವಾಗಿಡಲು ವ್ಯವಸ್ಥೆ ಮಾಡಿದರು, ಕಾಂಪೌಂಡಿನಲ್ಲಿ ಹುಲ್ಲು-ಹೂಗಿಡಗಳನ್ನು ಬೆಳೆಸಲು ಏರ್ಪಾಡು ಮಾಡಿದರು. ಇಂಗ್ಲೆಂಡಿನ ಪ್ರಸಿದ್ಧ ರಾಜಕಾರಣಿ ಲಾರ್ಡ್ಲೋಥಿಯನ್ ಎಂಬಾತ ಬೆಂಗಳೂರಿಗೆ ಬಂದಾಗ ಈ ಆಸ್ಪತ್ರೆಗೆ ಭೇಟಿ ಕೊಡಬೇಕೆಂದು ಮಿರ್ಜಾರವರು ಸೂಚಿಸಿದರು. ಆತ ಮೊದಲು ಒಪ್ಪಲಿಲ್ಲ. ಕಡೆಗೆ ಮಿರ್ಜಾರವರು ಒಪ್ಪಿಸಿದರು. ಆಸ್ಪತ್ರೆಗೆ ಹೋಗಿಬಂದು ಆತ, “ಇದು ಆಸ್ಪತ್ರೆ ಎಂದೇ ಕಾಣುವುದಿಲ್ಲ. ವಿಹಾರಸ್ಥಳ ಇದ್ದ ಹಾಗಿದೆ” ಎಂದ. ಲಂಡನ್ನಿಂದ ಬಂದ ಮಾನಸಿಕ ರೋಗಗಳ ನಿಪುಣ ವೈದ್ಯ ಪ್ರೊಫೆಸರ್ ಮಫೋದರ್ ಎಂಬಾತ, “ಭಾರತದಲ್ಲೆ ಇಂತಹ ಮಾನಸಿಕ ರೋಗಗಳ ಆಸ್ಪತ್ರೆಯನ್ನು ನಾನು ಕಾಣಲಿಲ್ಲ” ಎಂದ.

ಜಯಪುರ ಸಂಸ್ಥಾನದ ದಿವಾನರಾಗಿದ್ದಾಗ ಮಿರ್ಜಾರವರು ಒಮ್ಮೆ ಹೇಳಿದರು: “ನಾನು ಕಡಿಸಿದ ಒಂದೊಂದು ಮರದ ಬದಲು ಒಂದು ನೂರು ಗಿಡಗಳನ್ನು ನೆಡಿಸಿದ್ದೇನೆ.”

ಬಸ್ ನಿಲ್ದಾಣಗಳು

ಇಡೀ ಸಂಸ್ಥಾನದ ಆಡಳಿತದ ಹೊಣೆಯನ್ನು ಹೊತ್ತ ಮಿರ್ಜಾರವರ ಯೋಚನೆ ಎಷ್ಟು ದಿಕ್ಕುಗಳಲ್ಲಿ ಹರಿಯುತ್ತಿತ್ತು ಎಂಬುದು ಆಶ್ಚರ್ಯಕರ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ನೂರಾರು ಹಳ್ಳಿಗಳಿಗೆ ವಿದ್ಯುಚ್ಛಕ್ತಿ ಒದಗಿಸಬೇಕು – ಇಂತಹ ಬಹು ದೊಡ್ಡ ಯೋಜನೆಗಳನ್ನು ಕಲ್ಪಿಸಿಕೊಳ್ಳುತ್ತಿದ್ದರು; ಜೊತೆಗೇ, ಪ್ರತಿ ದೊಡ್ಡ ಊರಿನಲ್ಲಿ ಬಸ್ ನಿಲ್ದಾಣ ಇರಬೇಕು ಎಂದಷ್ಟೇ ಅಲ್ಲ, ನಿಲ್ದಾಣ ಹೇಗಿರಬೇಕು ಎಂಬುದರ ವಿಷಯ ಸಣ್ಣ ಸಣ್ಣ ವಿವರಗಳನ್ನೂ ಯೋಚಿಸುತ್ತಿದ್ದರು. ಬಸ್ ನಿಲ್ದಾಣದಲ್ಲಿ ಗಂಡಸರಿಗೆ, ಹೆಂಗಸರಿಗೆ ಶೌಚಾಗೃಹಗಳಿರಬೇಕು; ಇವನ್ನು ಸ[/fusion_builder_column][/fusion_builder_row][/fusion_builder_container]