ಮಿರ್ಜಾ ಗಾಲಿಬ್ —ಪ್ರಸಿದ್ಧ ಕವಿ. ಜೀವನದಲ್ಲಿ ಇವನಷ್ಟು ಕಷ್ಟ ದುಃಖಗಳನ್ನು ಕಂಡವರು ವಿರಳ. ಎಲ್ಲವನ್ನೂ ಸಹಿಸಿಕೊಂಡು ಯುಗಪ್ರವರ್ತಕ ಕವಿಯಾದ. ತನ್ನ ಗಜಲ್‌ಗಳಿಂದ ಅಮರನಾದ.

ಮಿರ್ಜಾ ಗಾಲಿಬ್

ಹದಿನೆಂಟನೆಯ ಶತಮಾನದ ಅಂತ್ಯ ಭಾಗ ಹಾಗೂ ಹತ್ತೊಂಬತ್ತನೆಯ ಶತಮಾನದ ಆರು ದಶಕಗಳು: ಅದೊಂದು ಸಂಕ್ರಮಣ ಕಾಲ, ಸಂಕಷ್ಟಗಳ ಕಾಲ.

ದೇಶದಲ್ಲಿ ದುರ್ಘಟನೆಗಳ ಸುರುಳಿ ಬಿಚ್ಚಿದ ಕಾಲ; ದೇಶ ಪರಕೀಯರ ಆಕ್ರಮಣಕ್ಕೆ ತುತ್ತಾದ ಕಾಲ ಮರಾಠರ. ಮೊಗಲರ ಆಳ್ವಿಕೆಯ ಕೊನೆಗಾಲ;ಭಾರತೀಯತೆಯ ಅಳಿಗಾಲ! ದೇಶದ ಎಲ್ಲೆಡೆಗಳಲ್ಲಿಯೂ ಅನಿಶ್ಚಿತತೆ, ಅರಾಜಕತೆ, ಅಶಾಂತಿ, ಹಿಂಸೆ, ದಮನ, ದಬ್ಬಾಳಿಕೆಗಳು ತಲೆಯೆತ್ತಿದ್ದ ಕಾಲವದು. ಮೊಗಲ್ ಸಾಮ್ರಾಟನು ತನ್ನ ಅಧಿಕಾರವನ್ನು ಕಳೆದುಕೊಂಡು ಆಂಗ್ಲರ ಕೈ ಗೊಂಬೆಯಾದ. ೧೮೧೮ರ ಹೊತ್ತಿಗೆ ಮರಾಠರ ಶಕ್ತಿ ಕುಂದಿತು; ಕ್ರಮೇಣ ಬ್ರಿಟಿಷರು ಹೊಸ ಹೊಸ ಪ್ರದೇಶ ಗಳನ್ನು ವಶಮಾಡಿಕೊಂಡರು. ೧೮೫೭-೫೮ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.

ಇಲ್ಲಿಗೂ ಮುಗಿಯುವುದಿಲ್ಲ ಈ ವ್ಯಥೆಯ ಕಥೆ. ದಿಲ್ಲಿಯ ಮೇಲೆ ಐದು ದಂಡುಗಳ ದಾಳಿಗಳು ನಡೆದುವು ಒಂದಾದ ಮೇಲೊಂದರಂತೆ. ಮೊದಲ ದಾಳಿ ಬಂಡು ಗಾರರದು, ಎರಡನೆಯ ದಾಳಿ ಆಂಗ್ಲ ಸೈನಿಕರದು, ಮೂರನೆಯದ ಭೀಕರ ಬರಗಾಲದ ದಾಳಿ, ನಾಲ್ಕನೆಯದು ಮಾರಿಕಾ ಪಿಡುಗಿನ ದಾಳಿ, ಐದನೆಯದು ಜ್ವರದ ದಾಳಿ.

ಇವೂ ಸಾಲವೆಂಬಂತೆ ಹಿಂದೆಂದೂ ಹೊಯ್ಯದ ರೀತಿಯಲ್ಲಿ ಬಿರುಮಳೆ ಹೊಯ್ಯಿತು ದೆಹಲಿಯ ಮೇಲೆ; ಮೇಲಿನ ದಾಳಿಗಳಲ್ಲಿ ಧ್ವಂಸವಾಗಿದ್ದ ಮನೆಗಳ ಜೊತೆಗೆ ಇನ್ನಷ್ಟು ಮನೆಗಳು ನೆಲಸಮವಾದವು ಈ ಅನೇಕ ದಿನಗಳ ಅತಿವೃಷ್ಟಿಯಲ್ಲಿ! ಇನ್ನೂ ಸಹಸ್ರ ಸಹಸ್ರ ಜನರು ಮೃತರಾದರು. ವಿತ್ತ ಆಸ್ತಿಗಳ ಹಾನಿಯ ಲೆಕ್ಕ ಮಾಡುವರಾರು? ಮೊದಲು ಅನಾವೃಷ್ಟಿಯಿಂದ ಕ್ಷಾಮ ತಲೆದೋರಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿದ್ದರೆ, ಈಗ ಅತಿವೃಷ್ಟಿಯಿಂದ ಬರಗಾಲ ಬಂದು ತಿಂದು ನೆಕ್ಕಿತು ಸಾವಿರಾರು ಜನರನ್ನು!

ಸಂಕ್ರಮಣಕಾಲದ ಮಹಾಕವಿ

೧೭೯೭ ಡಿಸೆಂಬರ್ ೨೭ರಂದು ಆಗ್ರಾದಲ್ಲಿ ಜನಿಸಿ ೧೮೬೯ ರ ಫೆಬ್ರವರಿ ೧೫ರಂದು ದಿಲ್ಲಿಯಲ್ಲಿ ಕೊನೆಯ ಉಸಿರೆಳೆದ ಮಹಾಕವಿ ಮಿರ್ಜಾಗಾಲಿಬರು ಬದುಕಿದುದು ಈ ಸಂಕಷ್ಟಮಯ ಸಂಕ್ರಮಣ ಕಾಲದಲ್ಲಿ! ಭಾರತದಲ್ಲಿ ಸ್ವಾತಂತ್ರ್ಯಯುಗ ಮುಗಿದು ಪಾರತಂತ್ರ್ಯಯುಗ ಪ್ರಾರಂಭ ವಾದ ಕಾಲವೂ ಆಗಿದ್ದಿತು; ಜಗತ್ತಿನಲ್ಲಿ ಕೃಷಿಯುಗ ಮುಗಿದು ಉದ್ಯಮಯುಗ, ಯಂತ್ರಯುಗ, ವಿಜ್ಞಾನಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು. ಭಾರತೀಯನಾಗಿ ಪಾರತಂತ್ರ್ಯದ ಯಾತನೆಗಳನ್ನು ಅನುಭವಿಸಿದ ಗಾಲಿಬನೇ ವಿಶ್ವಮಾನವನಾಗಿ ವಿಜ್ಞಾನಯುಗವನ್ನು ಸ್ವಾಗತಿಸಿದುದು ಅವನ ಮುಂಗಾಣ್ಕೆಯ ಕುರುಹು. ಇದು ಅವನಲ್ಲಿ ಇದ್ದಿತೆಂದೇ ಈ ವಿಷಮ ಪರಿಸ್ಥಿತಿಯಲ್ಲಿಯೂ ಅವನು ಭಾರತೀಯ ಸಾಹಿತ್ಯದ ಮರುಹುಟ್ಟಿನ ಮೊದಲಿಗರಲ್ಲಿ ಒಬ್ಬನಾಗಿ ಮೆರೆದನು.

ಕಷ್ಟತನದ ಬಾಲ್ಯ

ಹೊರಗೆ ದೇಶ ದಾಳಿಗಳಲ್ಲಿ, ದಂಗೆಗಳಲ್ಲಿ, ದಾಸ್ಯದಲ್ಲಿ ತೊಳಲಿ ಬಳಲುತ್ತಿದ್ದಾಗ ಮನೆಯ ಒಳಗಾದರೂ ಸುಖಶಾಂತಿಗಳಿದ್ದುವೆ ಈ ಹಿರಿಯ ಕವಿಗೆ? ಇಲ್ಲ! ಬಾಲ್ಯ ಬಣ್ಣದ ಬಾಳಾಗಿ ಕಳೆದರೆ ಮುಂದಿನ ಬಾಳು ಗೋಳಿನ ಕತೆಯಾಯಿತು ಅವನ ಪಾಲಿಗೆ. ಅವನು ಮೂಲತಃ ತೂರಾನ್ ದೇಶದ ಆಫ್ರಾಸಿಯಾಬನ ವಂಶದವನಾದರೂ ಅವನ ತಾತ ಈ ದೇಶಕ್ಕೆ  ಬಂದುದು ಜೀವನೋಪಾಯಕ್ಕಾಗಿ. ಅವನು ದಿಲ್ಲಿಗೆ ಬಂದು ಎರಡನೆಯ ಷಾಹ್ ಆಲಮ್ ಅವರ ಸೈನ್ಯದಲ್ಲಿ ದೊಡ್ಡ ಅಧಿಕಾರಿಯಾಗಿ ಸೇರಿದ. ಅವರ ಮಗ-ಗಾಲಿಬರ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಮೊದಲು ಔದ್ ಸಂಸ್ಥಾನದ ನವಾಬರಲ್ಲಿಯೂ, ಆಮೇಲೆ ಹೈದರಾಬಾದಿನ ನಿಜಾಮರಲ್ಲಿಯೂ ಸೇವೆ ಸಲ್ಲಿಸಿ ಕೊನೆಗೆ ಆಲ್ವಾರ್ ಸಂಸ್ಥಾನಿಕನ ಸೇವೆ ಕೈಗೊಂಡರು. ಆ ಸಂಸ್ಥಾನದ ಅವಿಧೇಯ ಸಾಮಂತನೊಬ್ಬನನ್ನು ಬಗ್ಗು ಬಡಿಯಲು ಆಜ್ಞೆಯಾದುದರಿಂದ ಮಿರ್ಜಾ ಅಬ್ದುಲ್ಲಾ ಬೇಗ್ ಖಾನರು ಆ ಸಾಮಂತನ ಕೋಟೆಯ ಮೇಲೆ ಲಗ್ಗೆಯಿಟ್ಟರು. ಅದರಲ್ಲಿಯೇ ಅವರು  ೧೮೦೨ರಲ್ಲಿ ಮಡಿದು ಹೋದರು. ಆಗ ಮಿರ್ಜಾ ಗಾಲಿಬ್ ಇನ್ನೂ ಐದು  ವರ್ಷಗಳ ಬಾಲಕ! ತಂದೆಯು ತೀರಿದ ಮೇಲೆ ತಮ್ಮ ಚಿಕ್ಕಪ್ಪ  ನಸರುಲ್ಲಾ ಬೇಗ್ ಖಾನರ ಪಾಲನೆಯಲ್ಲಿ ಬೆಳೆದ ಬಾಲಕ ಗಾಲಿಬ್; ವಿಧಿಗೆ ಅದೂ ಸೇರಲಿಲ್ಲ. ಅವನು ೯ ವರ್ಷದವನಿದ್ದಾಗ ಆ ಕಕ್ಕನೂ ಆನೆಯಿಂದ ಬಿದ್ದು ಅಸು ನೀಗಿದ.

ಮಿರ್ಜಾ ಅಬ್ದುಲ್ಲಾ ಬೇಗ್ ಖಾನರ ಹೆಂಡತಿ ಆಗ್ರಾ ನಗರದ ಗೌರವಾನ್ವಿತ ಪೌರನೂ, ಸೈನ್ಯಾಧಿಕಾರಿಯೂ ಆಗಿದ್ದ ಖ್ವಾಜಾ ಗುಲಾಮ್ ಹುಸೇನ್ ಖಾನರ ಮಗಳು. ಈಗ ಅವರು ಮಿರ್ಜಾ ಗಾಲಿಬನ ಪಾಲನೆ ಪೋಷಣೆಗೆ ಮಂದಾದರು. ಗಾಲಿಬ್ ಆಗ್ರಾ ನಿವಾಸಿಯಾದ.

ಬಣ್ಣದ ಬದುಕು

ಗಾಲಿಬನ ದಿನಗಳು ಆದಷ್ಟು ಸುಖಮಯ ವಾಗುವಂತೆ, ಅವನು ಆದಷ್ಟು ಕಲಿತು ಜಾಣನಾಗುವಂತೆ ಅವನ ಈ ಕರುಳಿನ ಅಜ್ಜ ಎಚ್ಚರಿಕೆ, ಆಸ್ಥೆ, ಮಮತೆಗಳೊಡನೆ ಅವನನ್ನು ಬೆಳೆಸಿದ. ಅವನ ಜೀವನದ ಈ ಅವಧಿಯೇ ಅವನ ವಸಂತಕಾಲವೆಂದು ಹೇಳಬಹುದು. ಅವನಿಗೆ ಆಗ ಆಗ್ರಾದ ಪ್ರಸಿದ್ಧ ವಿದ್ವಾಂಸರೆನಿಸಿದ್ದ  ಷೇಖ ಮಅಜಮ್ ಅವರಲ್ಲಿ ವಿದ್ಯಾಭ್ಯಾಸವಾಯಿತೆಂದೂ, ಅವನು ೧೪ ವರ್ಷದವ ನಾದಾಗ ಅವನಿಗೆ ಎರಡು ವರ್ಷಗಳವರೆಗೆ ಮುಲ್ಲಾ ಅಬ್ದುಲ್ ಸಮದ್ ಎಂಬ ಪ್ರಖ್ಯಾತ ಫಾರಸೀ ಅರಬ್ಬೀ ಪಂಡಿತರಿಂದ ಈ ಭಾಷೆಗಳಲ್ಲಿ, ವಿಶೇಷವಾಗಿ, ಫಾರಸೀ ಭಾಷೆಯಲ್ಲಿ ಪರಿಣತಿ ದೊರೆಯಿತೆಂದೂ ಹೇಳುತ್ತಾರೆ.

ಈ ಕಾಲದಲ್ಲಿ ಅವನೇನನ್ನೂ ಕಲಿಯಲಿಲ್ಲ, ತಾನೇ ಹೆಮ್ಮೆಯಿಂದ ಹೇಳಿಕೊಂಡಿದ್ದ ತನ್ನ ನೂರು ತಲೆಮಾರುಗಳ ಸೈನಿಕ ವೃತ್ತಿಯನ್ನೂ ಕಲಿಯಲಿಲ್ಲ, ಭಾವೀ ಜೀವನಕ್ಕಾಗಿ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ, ಬರಿಯ ವೈಭವ-ವಿಲಾಸ-ಪ್ರಿಯನಾಗಿ ಕಾಲ ಕಳೆದನೆಂದು ಹೇಳುವವರೂ ಇದ್ದಾರೆ. ಸ್ಫುದ್ರೂಪಿಯೂ ದೊಡ್ಡವರ ಮೊಮ್ಮಗನೂ, ದುಡ್ಡಿನ ಕೊರತೆಯಿಲ್ಲದವನೂ ಆಗಿದ್ದ ಅವನಾಗ ಸೊಗಸುಗಾರಿಕೆಯಲ್ಲಿ ಕಾಲ ಕಳೆದಿದ್ದರೂ ಆಶ್ಚರ್ಯವಿಲ್ಲ!

ಮದುವೆ-ಜೀವಾವಧಿ ಶಿಕ್ಷೆ

ಆದರೆ ಈ ಬಣ್ಣದ ಬದುಕು ಇತ್ತಾದರೂ ಎಷ್ಟು ದಿನ ಅವನ ಪಾಲಿಗೆ? ೧೮೧೦ ರವರೆಗೆ ಎಂದರೆ ಅವನಿಗೆ ಹದಿಮೂರು ವರ್ಷಗಳು ತುಂಬುವವರೆಗೆ. ಆಗ ಏನಾಯಿತು? ನಗೆಗಾರ ಗಾಲಿಬರ ಮಾತಿನಲ್ಲಿಯೇ ಹೇಳುವುದಾದರೆ ಅವರಿಗೆ ಅಂದು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು- ಎಂದರೆ ಅವರ ಮದುವೆಯಾಯಿತು. ಯಾರೊಡನೆ? ಲೋಹಾರು ಪ್ರಾಂತದ ನವಾಬ ಫಖ್ರುದ್ದೌಲಾನ ತಮ್ಮ ನವಾಬ ಇಲಾಹಿ ಬಕ್ಷ್ ಖಾನನ ಮಗಳು ಉಮ್ರಾನ್ ಬೇಗಮಳೊಡನೆ. ಅಚ್ಛೆಯಿಂದ ಬೆಳೆಸಿದ್ದ ಮೊಮ್ಮಗನಿಗೆ ಇಚ್ಛೆ ಬಂದಾಗ ಮದುವೆ ಮಾಡಿಬಿಟ್ಟನು ಅಜ್ಜ. ತೀರಿತವನ ಕಜ್ಜ. ಮೊಮ್ಮಗ ಮುಂದೆ ಗೃಹಸ್ಥನಾಗಿ ಬದುಕುವ ಬಗೆ? ಯಾರು ಯೋಚಿಸಬೇಕಿದನ್ನು? ಅಜ್ಜ ನವಾಬ, ಮಾವ ನವಾಬ, ಮಾವನ ಅಣ್ಣ ನವಾಬ ಗಾಲಿಬನೂ ಬರಿಗೈ ನವಾಬ,  ೨೫ ವರ್ಷಗಳಾಗುವವರೆಗೆ ಚಿಕ್ಕಪ್ಪ ನವಾಬ ಅಹಮದ್ ಬಕ್ಷ್ ಖಾನರ ಆಶ್ರಯ ದೊರೆಯಿತು. ಅಲ್ಲದೆ ಲಾರ್ಡ್ ಲೇಕ್ ಮಂಜೂರು ಮಾಡಿದ್ದ ಹತ್ತುಸಾವಿರ ರೂಪಾಯಿಗಳ ವಾರ್ಷಿಕ ವೇತನದಲ್ಲಿ ಗಾಲಿಬರ ಮನೆತನಕ್ಕೆ ನೂರರಲ್ಲೊಂದು ಭಾಗ ಬರುತ್ತಿತ್ತು. ವೈಯುಕ್ತಿಕವಾಗಿ ಗಾಲಿಬರಿಗೆ ವರ್ಷಕ್ಕೆ ೭೫೦ ರೂಪಾಯಿಗಳು ದೊರೆಯುತ್ತಿದ್ದವು. ೨೫ ವರ್ಷಗಳವರೆಗೆ ಹೇಗೋ ಸಾಗಿತು ಜೀವನ ರಥ.

ಮುಳ್ಳಿನ ಹಾದಿ

ಆಮೇಲೆ ಪ್ರಾರಂಭವಾಯಿತು ಮುಳ್ಳು ತುಂಬಿದ ಪಥ! ನವಾಬ ಅಹಮ್ಮದ್ ಬಕ್ಷ್ ತನ್ನ ಆಸ್ತಿಯನ್ನೆಲ್ಲ ಮಕ್ಕಳಿಗೆ ಹಂಚಿಬಿಟ್ಟ; ಗಾಲಿಬರಿಗೆ ಸಲ್ಲುತ್ತಿದ್ದ ಪಾಲವನ್ನು ಹಿರಿಯ ಮಗನಿಗೆ ಕೊಟ್ಟ! ಈ ಹಿರಿಯಮಗ ಕೆಲಕಾಲ ಗಾಲಿಬರಿಗೂ ಕೊಂಚ ಪಾಲುಕೊಟ್ಟ, ಆಮೇಲೆ ಹಠಾತ್ತಲೇ ಅದನ್ನೂ ನಿಲ್ಲಿಸಿಬಿಟ್ಟ! ಗಾಲಿಬರಾಗ ನಿರಾಧಾರರಾದರು! ಈ ಅಕ್ರಮದ ವಿರುದ್ಧ ಬ್ರಿಟಿಷ್ ಸರ್ಕಾರಕ್ಕೆ ಬರೆದು ಕೊಂಡರು. ಏನೂ ಉಪಯೋಗವಾಗಲಿಲ್ಲ. ಇವರ ಬಗ್ಗೆ ಕನಿಕರಿಸಿ, ಇವರ ಹಿರಿಮೆಯನ್ನು ಗುರುತಿಸಿ ಅವಧದ ನವಾಬ ವಾಜಿದ್ ಅಲಿ ಷಾಹರು ಇವರಿಗೆ ೫೦೦ ರೂಪಾಯಿಗಳ ವರ್ಷಾಶನ ನೀಡಿದರು. ಎರಡು ವರ್ಷಗಳು ಉರುಳುತ್ತಲೇ ಅವಧ ಈಸ್ಟ್ ಇಂಡಿಯಾ ಕಂಪನಿಯ ವಶವಾಗಿ ಅದೂ ನಿಂತು ಹೋಯಿತು! ರಾಮಪುರದ ದರಬಾರಕ್ಕೆ ಭೇಟಿ ಕೊಟ್ಟುದರ ಫಲವಾಗಿ ಗಾಲಿಬರು ನೂರು ರೂಪಾಯಿಗಳ ವೇತನ ಪಡೆದರು. ಮೊಗಲ್ ಸಾಮ್ರಾಟ ಎರಡನೆಯ ಬಹಾದುರ ಷಾಹರು ತಿಂಗಳಿಗೆ ೫೦ ರೂಪಾಯಿ  ಮಂಜೂರು ಮಾಡಿದರು. ಈ ಸಣ್ಣ ಸಣ್ಣ ಆದಾಯಗಳಿಂದ ದಿಲ್ಲಿಯಲ್ಲಿ, ಸಾಮ್ರಾಜ್ಯವೈಭವದ ದಿಲ್ಲಿಯಲ್ಲಿ ಈ ಸೊಬಗಿನ, ಸೊಗಸಿನ ಸವಿಗಾರ ಬದುಕುವುದು ಹೇಗೆ?

ಸಾಧ್ಯವಿಲ್ಲ, ಇಷ್ಟರಲ್ಲಿ ಬದುಕುವುದು ಸಾಧ್ಯವಿಲ್ಲ, ಏನಾದರೂ ಉಪಾಯ ಮಾಡಲೇ ಬೇಕು! ಏನು ಮಾಡಬೇಕು? ಪಿಂಚಣಿಯ ಪುನರಾರಂಭಕ್ಕಾಗಿ ಪ್ರಯತ್ನ ಮಾಡಬೇಕು! ಸರಿ, ಅದಕ್ಕಾಗಿ ದಿಲ್ಲಿಯ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಅದು ನಿರಾಕೃತವಾಯಿತು. ಇದೇ ಪ್ರಯತ್ನವನ್ನು ಕಲ್ಕತ್ತೆಗೆ ಹೋಗಿ ಅಲ್ಲಿಯ ನ್ಯಾಯಾಲಯದಲ್ಲಿ ಮುಂದುವರಿಸಿದರು. ಮೂರು ವರ್ಷ ಅಲ್ಲಿದ್ದು ಮಾಡಿದ ಪ್ರಯತ್ನವೂ ವಿಫಲವಾಯಿತು. ಸರ್ಕಾರಕ್ಕೆ ಅಪೀಲು ಮಾಡಿಕೊಂಡರು. ಅದೂ ನಿಷ್ಫಲವಾಯಿತು. ಕೊನೆಗೆ ವಿಕ್ಟೋರಿಯಾ ರಾಣಿಗೆ ಮೊರೆಯಿಟ್ಟರು. ಅಲ್ಲಿಂದಲೂ ಅವರಿಗೆ ೧೮೪೪ ರಲ್ಲಿ ದೊರೆತುದು ನಕಾರವೇ! ೧೮೨೫ ರಿಂದ ೧೮೫೭ ರ ವರೆಗೂ ಮುಂದುವರಿದ ಈ ಪಿಂಚಣಿಯ ಪ್ರಯತ್ನದಲ್ಲಿ ಫಲವಾವುದೂ ಸಿಕ್ಕಲಿಲ್ಲ ಗಾಲಿಬರಿಗೆ; ಇನ್ನಷ್ಟು ಸಾಲಗಾರರಾದರು. ಅಷ್ಟೇ! ಅಂತೂ ಇಂತೂ ಪಿಂಚಣಿ ದೊರೆಯಲಿಲ್ಲ; ಕ್ಲೇಶಮಯ ಜೀವನ ತಪ್ಪಲಿಲ್ಲ!

ದುಃಖಗಳ ಪರಂಪರೆ

ಇಲ್ಲಿಗೂ ಮುಗಿಯಲಿಲ್ಲ  ಅವರ ಅಗ್ನಿಪರೀಕ್ಷೆ! ಸತಿ ಸಾಧ್ವಿ, ಆದರೆ ಇವರ ಕುಡಿತವನ್ನು ಒಪ್ಪದ ಧರ್ಮ ಪರಾಯಣೆ. ಪತಿಗಾಗಿ ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿ, ತನಗೆ ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿಕೊಳ್ಳುತ್ತಲಿದ್ದ, ಪತಿಗಾಗಿ ಪ್ರತ್ಯೇಕವಾಗಿರಿಸಿದ್ದ ಪಾತ್ರೆಗಳಲ್ಲಿ ಬೇಯಿಸಿ ದುದನ್ನು ಒಮ್ಮೆಯೂ ಉಣ್ಣದಿದ್ದ ಛಲವಂತೆ! ಆದರೂ ಅದನ್ನು ನಗುನಗುತ್ತಲೇ ಸಹಿಸಿದ ಗಾಲಿಬರಿಗೆ ಸಂತಾನ ಸುಖವಾದರೂ ಸಿಕ್ಕಿತೇ? ಅದೂ ಇಲ್ಲ! ಅವರ ಏಳು ಜನ ಗಂಡು ಮಕ್ಕಳೂ ಚಿಕ್ಕವರಿರುವಾಗಲೇ ಮೃತ್ಯುವಿನ ಬಾಯಿಗೆ ತುತ್ತಾದರು. ಆಗ ಅವರು ತಮ್ಮ ಪತ್ನಿಯ ತಂಗಿಯ ಮಗ ಜೈನುರ್‌ಅಬಿಧೀನ್ ಖಾನ್ ಆರಿಫ್‌ನ್ನು ಸಾಕುಮಗ ನನ್ನಾಗಿ ಮಾಡಿಕೊಂಡರು. ಅವನೂ ನಡು ಹರೆಯ ದಲ್ಲಿಯೇ ಸಾವನ್ನಪ್ಪಿದ. ಗಾಲಿಬರಿಗೆ ಈ ಸಾಕು ಮಗನ ಮೇಲೆ ಅತಿಶಯವಾದ ಪ್ರೀತಿ. ಆರಿಫ್‌ನ ಸಾವು ಅವರಿಗೆ ಅಸಹನೀಯ ಆಘಾತವಾಯಿತು. ಶೋಕಗೀತೆ ಹೊರಹೊಮ್ಮಿತು-ಹೃದಯದಾಳದಿಂದ :

ಕಾಯಬೇಕಿತ್ತು ನನ್ನ ದಾರಿ ನೀನಿನ್ನೂ ಕೆಲವು ದಿವಸ;

ಏಕೆ ಒಬ್ಬನೇ ಹೋದೆ? ಇರು ಒಬ್ಬನೇ ಕೆಲವು ದಿವಸ!

ನಿನ್ನೆ ತಾನೆ ಬಂದೆ, ಇಂದೇ ಹೋಗುವೆನೆನ್ನುತಿರುವೆ

ಒಪ್ಪಿದೆ, ಚೆನ್ನಾಗಿಲ್ಲ ಇಂದಿಗಿಂತ ಬೇರೆ ದಿವಸ!

ಹಳೆಯ ಗಗನವೆ, ಎಳೆಯನಿದ್ದ ಆರಿಫನಿನ್ನೂ-

ನಿನ್ನದೇನು ಹೋಗುತ್ತಿತ್ತು ಬದುಕಿದವರನು ಇನ್ನು ಕೆಲವು ದಿವಸ?

’ಏಕೆ ಬದುಕಿಹೆ ಗಾಲಿಬ್’ ಎನ್ನುವವರೆಲ್ಲ ಅಜ್ಞರು

ಭಾಗ್ಯದಲಿ ಬರೆದಿಹುದು ಸಾಯಲಿಕೆ ಬೇರೊಂದು ದಿವಸ?

ಆರಿಫ್ ಸಾಯುವ ಮುನ್ನ ಎರಡು ಗಂಡು ಮಕ್ಕಳ ತಂದೆಯಾಗಿದ್ದ. ಆ ಇಬ್ಬರ ಮೇಲೆ ಗಾಲಿಬರ ವಾತ್ಸಲ್ಯ ಕೇಂದ್ರೀಕೃತವಾಯಿತು ಆಮೇಲೆ ಅಷ್ಟು ಹೊತ್ತಿಗೆ ‘ಡಮ್ನಿ’ ಎಂಬ ಪ್ರೇಯಸಿಯನ್ನೂ, ಏಳು ಜನ ಗಂಡು ಮಕ್ಕಳನ್ನೂ ಆರಿಫನನ್ನೂ ಅನೇಕ ಸಹೃದಯ ಸ್ನೇಹಿತರನ್ನೂ ಕಳೆದುಕೊಂಡಿದ್ದ ಗಾಲಿಬರು ಎಷ್ಟು ವಾತ್ಸಲ್ಯ ವಿರಹಿಯಾಗಿದ್ದರೆಂದರೆ ಈ ಮೊಮ್ಮಕ್ಕಳು ಮಾಡುತ್ತಿದ್ದ ಅತಿಯಾದ ತಂಟತನವನ್ನೂ, ನೀಡುತ್ತಿದ್ದ ಸಹಿಸಲ ಸಾಧ್ಯವಾದ ಕೀಟಲೆ ಕೋಟಲೆಗಳನ್ನೂ ತಾಳಿಕೊಂಡೇ ಬಾಳಿದವರು.

ಇಲ್ಲಿಗೂ ಮುಗಿಯುವುದಿಲ್ಲ ಅವರ ಬಾಳಿನ ಗೋಳು. ಅವರ ಬಾಳೇ ಗೋಳು! ಸುರೆ ಸೇವಿಸುವ ಚಟ ಅವರನ್ನು ಸಾಲಗಾರರನ್ನಾಗಿ ಮಾಡಿದುದಲ್ಲದೆ ಅವರನ್ನು ನ್ಯಾಯಾಲಯಕ್ಕೂ ಎಳೆಯಿತು. ಒಬ್ಬ ಸಾಲಗಾರ ಇವರನ್ನು ಮುಫ್ತಿ ಸದರುದ್ದೀನ್ ಅಜುರದಾಹ ಎಂಬ ನ್ಯಾಯಾಧೀಶ ರೆದುರಿಗೆ ಎಳೆದೊಯ್ದ. ಕವಿ ಎಲ್ಲಿದ್ದರೂ ಕವಿಯೇ! ಆಪಾದನೆಗೆ, ಗಾಲಿಬರ ಉತ್ತರವೂ  ಕವಿತೆಯಾಗಿಯೇ ಹೊರಬಿದ್ದಿತು.

‘ಕುಡಿಯುತ್ತದೆ ಬಡತನದೊಳು ಉದ್ದರಿ ಮಾಡಿ ಗೊತ್ತಿತ್ತು ಬಿಡುವುದೆಂದಿದು ತೊಂದರೆಗೆ ಈಡು ಮಾಡಿ’

ಇದನ್ನು ಕೇಳಿದ ಕಾವ್ಯ ಪ್ರೇಮಿ ನ್ಯಾಯಾಧೀಶ ತನ್ನ ಬೊಕ್ಕಸದಿಂದ ವಾದಿಗೆ ಅವನ ಹಣ ಕೊಟ್ಟು ಗಾಲಿಬರ ಮಾನ ಕಾಯ್ದರಂತೆ!

ಇನ್ನೊಮ್ಮೆ ೧೮೩೫ರಲ್ಲಿ, ಸಾಲಗಾರರು ಅವರ ವಿರುದ್ಧ ನ್ಯಾಯಾಲಯದ ಹುಕುಂನಾಮೆ ತಂದರು. ಅಂದಿನ ಸಂಪ್ರದಾಯದಂತೆ ಶಿಷ್ಯರನ್ನು ಸಾಲದ ಸಲುವಾಗಿ ಅವರ ಮನೆಯಲ್ಲಿಯೇ ಬಂಧಿಸುತ್ತಿರಲಿಲ್ಲ, ಮನೆಯಿಂದ ಹೊರಬಿದ್ದಾಗ ಬಂಧಿಸಬಹುದಿತ್ತು. ಇದನ್ನರಿತ ಗಾಲಿಬರು ಬಂಧನ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಕದಲುತ್ತಲೇ ಇರಲಿಲ್ಲ. ಕತ್ತಲುಗವಿದ ಮೇಲೆಯೇ ಮಿತ್ರರನ್ನು ನೋಡಲು ಹೋಗತೊಡಗುವರು.

ಸೆರೆಮನೆ ದಾರಿದ್ರ್ಯ

ಇಷ್ಟಕ್ಕೂ ತೀರಲಿಲ್ಲ ಅವರ ಯಾತನೆಗಳ ಯಾದಿ! ಜೂಜಾಡಿದರೆಂದು ಒಮ್ಮೆ ಬಂಧನಕ್ಕೆ ಒಳಗಾಗಿಯೇ ಬಿಟ್ಟರು! ಶಿಕ್ಷೆ ಅನಿವಾರ್ಯವಾಯಿತು! ಸ್ವತಃ ಸಾಮ್ರಾಟ ಬಹಾದ್ದೂರ ಷಾಹರೇ ಗಾಲಿಬರ ಬಿಡುಗಡೆಗಾಗಿ ಕಾರಾಗಾರದ ಅಧಿಕಾರಿಗೆ ಶಿಫಾರಸು ಮಾಡಿದರು. ಆದರೆ ಅದು ಕ್ರಿ.ಶ.೧೮೪೭ನೆಯ ವರ್ಷ. ಸಾಮ್ರಾಟಿಗಿರಲಿಲ್ಲ ಮುನ್ನಿನ ಮನ್ನಣೆ. ಮೇಲಾಗಿ ಒಮ್ಮೆ ಪ್ರಕರಣ ನ್ಯಾಯಾಲಯಕ್ಕೆ ಹೋದ ಮೇಲೆ ಏನನ್ನು ಮಾಡಲೂ ಬರುವಂತಿರಲಿಲ್ಲ. ಕೊನೆಗೂ ಶಿಕ್ಷೆಯಾಗಿಯೇ ಬಿಟ್ಟಿತು ಗಾಲಿಬರಿಗೆ. ಆ ಮೂರು ತಿಂಗಳುಗಳ ಸಾದಾ ಶಿಕ್ಷೆಯ ಅವಧಿಯಲ್ಲಿ ಅವರ ಮಿತ್ರರು ಅವರನ್ನು ಭೇಟಿ ಮಾಡುವ, ಮನೆಯಿಂದ ಊಟ ತರಿಸಿಕೊಳ್ಳುವ ಅವಕಾಶ ಅವರಿಗೆ ಇದ್ದರೂ ಈ ಕಾರಾಗೃಹವಾಸ ಅವರ ಪಾಲಿಗೆ ಅಸಹನೀಯವಾದ ಆಘಾತವಾಗಿ ಪರಿಣಮಿಸಿತು.

ದಿಲ್ಲಿಯ ದಂಗೆಯ ಕಾಲದಲ್ಲಂತೂ ಗಾಲಿಬರ ಸ್ಥಿತಿ ಶೋಚನೀಯವಾಯಿತು. ಮನೆ ಬಿಟ್ಟು ಹೊರಗೆ ಹೊರಡುವಂತಿರಲಿಲ್ಲ. ಯಾರೂ ಇವರ ಮನೆಯೊಳಗೆ ನುಗ್ಗಿ ಲೂಟಿ ಮಾಡಲಿಲ್ಲ. ನಿಜ. ಆದರೆ ಉಪಜೀವನಕ್ಕಾಗಿ ಇದ್ದ ಎರಡೇ ಆದಾಯ ಮೂಲಗಳೂ ಸರ್ಕಾರದ ಪೆನ್ಸನ್ ಮತ್ತು ಕೋಟೆಯಿಂದ ಬರುತ್ತಿದ್ದ ವೇತನ ಎರಡೂ ಬತ್ತಿಹೋದುವು. ಮಡದಿಯ ಮೈಮೇಲಿನ ಒಡವೆಗಳನ್ನೂ ಮನೆಯೊಳಗಿದ್ದ, ಮಾರಬಹುದಾದ ಎಲ್ಲ ಸಾಮಾನು ಗಳನ್ನೂ ಒಳ್ಳೆಯ ಬಟ್ಟೆಗಳನ್ನು ಸಹ ಮಾರಿಯಾಯಿತು!  ಮುಸಲ್ಮಾನ ಮಿತ್ರರೆಲ್ಲ ದೆಹಲಿ ತೊರೆದಿದ್ದರು; ಹಿಂದೂ ಮಿತ್ರರು ಕೈಹಿಡಿದರು. ಈ ವಿಪನ್ನಾವಸ್ಥೆಯಲ್ಲಿಯೇ ಬಹುದಿನಗಳ ಹಿಂದೆಯೇ ಹುಚ್ಚನಾಗಿ ಅವರ ವ್ಯಾಕುಲಕ್ಕೆ ಕಾರಣನಾಗಿದ್ದ ಅವರ ತಮ್ಮ ಮಿರ್ಜಾ ಯುಸೂಫ್ ತೀರಿ ಹೋದರು! ಅವರ ಶವ ಸಂಸ್ಕಾರಕ್ಕೆ ಯಾರೂ ಇರಲಿಲ್ಲ! ಶವದ ಮೈ ತೊಳೆಯಲು ಯಾರೂ ಇಲ್ಲ. ಅದಕ್ಕೆ ಹೊದಿಸಲು ಬಟ್ಟೆಯಿಲ್ಲ! ಗಾಲಿಬರ ಮನೆಯಿಂದಲೇ ಎರಡು ಬಿಳಿಯ ಚಾದರಗಳು ಹೋದುವು. ಅವರ ನೆರೆಹೊರೆಯವರ ನೆರವಿನಿಂದ ಅವನ ಅಂತ್ಯಕ್ರಿಯೆ ನೆರವೇರಿತು!

ದಂಗೆಯ ಪರಿಣಾಮ ಇವರು ಮುಸಲ್ಮಾನರೆಂಬ ಕಾರಣದಿಂದ ಮಿರ್ಜಾ ಗಾಲಿಬರ ಮೇಲೂ ಆಗದಿರಲಿಲ್ಲ. ಅವರ ಮೇಲೂ ಆಂಗ್ಲರ ಸಂಶಯದ ಕರಾಳ ಛಾಯೆ ಬಿದ್ದಿತು. ಆದರೂ ಅವರು ಅದರಿಂದ ಪಾರಾದರು! ಮೂರು ವರ್ಷಗಳು ಕಳೆದ ಮೇಲೆ ಅವರು ನಿರಪರಾಧಿಗಳೆಂಬುದು ಸಿದ್ಧವಾಯಿತು! ರಾಮಪುರದ ಸಂಸ್ಥಾನಿಕರ ಮಾನಸಿಕ ವೇತನ ತಿಂಗಳಿಗೆ ಒಂದು ನೂರು ರೂಪಾಯಿ ದೊರೆಯತೊಡಗಿತು;  ಸರ್ಕಾರದ ಪಿಂಚಣಿಯೂ ಪ್ರಾರಂಭವಾಯಿತು.

ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ

ಆದರೆ ನೆಮ್ಮದಿ ಬಿಸಿಲುಗುದುರೆಯಾಗಿಯೇ ಉಳಿಯಿತು ಅವರ ಪಾಲಿಗೆ. ಇದು ಅವರ ದ್ವಿಪದಿಯೊಂದು:

ಓಡುತಿದೆ ಆಯುಷ್ಯದ ಅಶ್ವ: ಎಲ್ಲಿ ಹೋಗಿ ನಿಲ್ವುದೋ

ಕಡಿವಾಣ ಕೈಯೊಳಿಲ್ಲ, ಅಂಕವಣೆಯೊಳಿಲ್ಲ ಕಾಲು!’

ಇಂಥ ಅನಿಶ್ಚಿತತೆಯ ಅಸಹಾಯಕತೆಯ ಬದುಕಿನಲ್ಲಿ ನೆಮ್ಮದಿಯ ಮಾತೆತ್ತುವುದೂ ಮೌಢ್ಯವೆನಿಸೀತು! ಎಲ್ಲಿ ಹೋಗಲಿ, ಕವಿಯೆಂದು ದೊರೆಯಬೇಕಾಗಿದ್ದ ಮಾನ್ಯತೆಯೂ ದೊರೆಯಬಾರದೆ ಇವರಿಗೆ? ಆರಂಭದಲ್ಲಿ ’ಬೇದಿಲ್’ ಕವಿಯನ್ನು ಅನುಕರಿಸಿ ಕ್ಲಿಷ್ಟತೆಗೆ ಆಸ್ಪದವಿತ್ತುದೇ ಅಪರಾಧವಾಯಿತು. ಎಲ್ಲರೂ ಇವರ ’ಗಜಲು’ಗಳ ಗೇಲಿ ಮಾಡುವವರೇ! ಅಲ್ಲಲ್ಲಿ ಅಪವಾದಗಳಿದ್ದರೂ ಹೆಚ್ಚಿನವರು ಮೆಚ್ಚದವರೇ, ಮಚ್ಚರಿಗರೇ!

‘ಅರ್ಥವಾಗುವುದು ಮೀರರ ಕವಿತೆ;

ಅರ್ಥವಾಗುವುದು ಮಿರ್ಜಾರ ಕವಿತೆ;

ಇವರಿಗೆ ಅರ್ಥವಾಗಬೇಕು

ಇಲ್ಲವೆ ದೇವರಿಗೆ ಅರ್ಥವಾಗಬೇಕು ಗಾಲಿಬರ ಕವಿತೆ!’

ಈ ಪರಿಹಾಸೋಕ್ತಿ ಅವರ ಕವಿತೆಗಳ ಬಗ್ಗೆ ಅಂದಿನ ಅನೇಕರು ತಳೆದಿದ್ದ ತಪ್ಪು ತಿಳುವಳಿಕೆಗೆ ನಿದರ್ಶನವಾಗಿ ನಿಂತಿದೆ. ಇದಕ್ಕೆ ಉತ್ತರವಾಗಿಯೋ ಏನೋ ಗಾಲಿಬ್ ಸಾರಿದ: ‘ಸುಲಭ ಶೈಲಿಯಲ್ಲಿ ಬರೆಯಿರೆಂದು ಹೇಳುತ್ತಾರೆ: ಬರೆದರೂ ಕಷ್ಟ, ಬರೆಯದಿದ್ದರೂ ಕಷ್ಟ!’ “ರಹಸ್ಯರಕ್ಷಣೆ ಮೌನದಿಂದ ದೊರೆವ ಲಾಭ; ಆದುದರಿಂದ ನನ್ನ ಮಾತು ಇವರಿಗೆ ಅರ್ಥವಾಗದಿರುವುದು ಸಂತೋಷವೇ, ನನಗೆ’! ಬುದ್ಧಿಯು ಎಷ್ಟೇ ಬಲೆ ಬೀಸಲಿ, ನನ್ನ ಬರವಣಿಗೆಯ ಅರ್ಥ ಅಲಭ್ಯ!’ ‘ನನಗಿಲ್ಲ ಹೊಗಳಿಕೆಯ ಹೆಬ್ಬಯಕೆ, ಪುರಸ್ಕಾರದ ಅಭಿಪ್ಸೆ: ನನ್ನ ಕವಿತೆಗಳಲ್ಲಿ ಅರ್ಥವಿಲ್ಲದಿದ್ದರೂ ಸರಿಯೆ!’

ಇಷ್ಟಾದರೂ ಆಗದವರ ಕುಚೇಷ್ಟೆಗಳು ನಿಲ್ಲಲಿಲ್ಲ. ಅರ್ಥ ಸೌಂದರ್ಯವೇ ಕಾವ್ಯದ ಆತ್ಮವೆಂದು ಘೋಷಿಸಿದ್ದ ಗಾಲಿಬರ ಗಜಲುಗಳಲ್ಲಿಯೇ ಅರ್ಥವಿಲ್ಲವೆಂದು ವಾದಿಸಿದವರ ವ್ಯರ್ಥಾಲಾಪಗಳಿಗೆ ಈಗ ಬೆಲೆ ಉಳಿದಿಲ್ಲ ವಾದರೂ, ಆಗ ಅವುಗಳಿಂದ ಅವನಿಗಾದ ನೋವು ಅಷ್ಟಿಷ್ಟಲ್ಲ. ‘ನನ್ನ ಕವಿತೆಗಳಲ್ಲಿ ಬರುವ ಶಬ್ದಗಳೆಲ್ಲ ಅರ್ಥಭಂಡಾರಗಳೆಂದು ಅರಿಯಿರಿ’ ಎಂದು ಅವನು ಸಾರಿದರೂ ಇವರ ಕಿರುಕುಳ ತಪ್ಪಲಿಲ್ಲ.

ಕೊನೆಯವರೆಗೂ ಇವರ ಕೀಟಲೆ ತಪ್ಪಲಿಲ್ಲ. ಗಣ್ಯ ಕುಟುಂಬದಲ್ಲಿ ಜನಿಸಿ, ಚೆಲುವು, ಒಲವುಗಳ ಆರಾಧಕನಾಗಿ ಬೆಳೆದು ಜಗದ ಒಳ್ಳೆಯ ವಸ್ತುಗಳಲ್ಲಿ ಅನುರಕ್ತನಾಗಿದ್ದೂ, ಉರ‍್ದೂ ಕವಿಕುಲ ತಿಲಕನಾಗಿಯೂ ಗಾಲಿಬ್ ಎಲ್ಲ ರಂಗಗಳಲ್ಲಿಯೂ ಪಡೆದುದು ಸೋಲನ್ನೇ, ಗೋಳನ್ನೇ, ಬನ್ನವನ್ನೇ, ಮಾನವಜೀವನ ಇದಕ್ಕಿಂತ ದುಃಖವಾಗಿರು ವುದು ಸಾಧ್ಯವಿಲ್ಲವೇನೂ! ಬಡತನದ ಬೇಗೆಯಲ್ಲಿ ಬೆಂದು ಸೋಲಿನ ಶೂಲಗಳಿಂದ ನೊಂದು, ಪ್ರತಿಕೂಲ ಪರಿಸ್ಥಿತಿಯ ಪೆಟ್ಟುಗಳನ್ನು ತಿಂದು, ಪ್ರಿಯರಾದವರ ದುರ್ಗತಿಯನ್ನು ದುರ್ಮರಣಗಳನ್ನು ಕಂಡು, ದೇಶಕ್ಕೊದಗಿದ ದುರ್ಘಟನೆಗಳನ್ನು, ದುರಂತಗಳನ್ನು ನೋಡಿ ನೋಡಿ ಬಿರುಗಾಳಿಗೆ ಸಿಕ್ಕ ತೆಪ್ಪದಂತೆ ತತ್ತರಿಸಿದರು. ತಿರ್ರನೆ ತಿರುಗಿತು ಅವರ ಬಾಳು! ‘ಮುಗಿದುವು ವಿಪತ್ತುಗಳೆಲ್ಲ ಗಾಲಿಬ್, ಈಗ ಆಕಸ್ಮಿಕ ಮರಣವೊಂದು ಉಳಿದಿದೆ!’ ಎಂದವರು ಉದ್ಗರಿಸಬೇಕಾಯಿತು.

ಕಡೆಯ ದಿನಗಳು

ಅವರ ಕೊನೆಯ ದಿನಗಳ ಕರುಣಕಥೆ ಅವರ ಈ ಕೆಲವು ಪತ್ರಗಳಲ್ಲಿ ವರ್ಣಿತವಾಗಿದೆ. ಇದು ೧೮೬೭ ರಲ್ಲಿ ಬರೆದ ಪತ್ರ: ‘ಇನ್ನೇನು ನಾನು ಇಷ್ಟರಲ್ಲಿಯೇ ಸಾಯಲಿದ್ದೇನೆ. ರೋಗಗಳು ನನ್ನ ಮೇಲೆ ದಾಳಿಯಿಟ್ಟಿವೆ’ ‘ನನಗೆ ಎಂದಾದರೂ ನೆನಪಿನ ಶಕ್ತಿ ಇದ್ದಿತೆ?’ ಎಂಬ ಸಂಶಯ ಬರುತ್ತಿದೆ. ಈಚೆಗೆ ಕಿವಿಗಳೂ ಕೇಳುವ ಶಕ್ತಿಯನ್ನು ಕಳೆದುಕೊಂಡಿವೆ. ಒಂದು ತಿಂಗಳಿಂದ ಎಂಥ ದುಃಸ್ಥಿತಿ ಒದಗಿದೆಯೆಂದರೆ ನನ್ನನ್ನು ಕಾಣಲು ಬರುವ ಗೆಳೆಯರು ನನ್ನ ಆರೋಗ್ಯವನ್ನುಳಿದು ಇನ್ನೇನನ್ನಾದರೂ ತಿಳಿಯ ಬಯಸಿದರೆ ಅದನ್ನು ಬರೆದೇ ನನಗೆ ತೋರಿಸುತ್ತಿದ್ದಾರೆ. ನಾನೀಗ ಹೆಚ್ಚು ಕಡಿಮೆ ನಿರಾಹಾರಿ. ಮುಂಜಾನೆ ಒಂದು ತುಂಡು ಕಲ್ಲುಸಕ್ಕರೆ ಇಲ್ಲವೆ ಬಾದಾಮಿ ಪುಡಿ ಸೇರಿಸಿದ ಪಾನಕವನ್ನು ಸೇವಿಸುತ್ತೇನೆ. ಮಧ್ಯಾಹ್ನದಲ್ಲಿ ಮಾಂಸದ ಗಂಜಿ, ಸಾಯಂಕಾಲ ನಾಲ್ಕು ಕರಿದ ಕಬಾಬುಗಳು ರಾತ್ರಿ ಮಲಗುವಾಗ ಐದು ತೊಲ ಮಧ್ಯದಲ್ಲಿ ಅಷ್ಟೇ ಗುಲಾಬಿ ನೀರು ಸೇರಿಸಿ ಸೇವಿಸುತ್ತೇನೆ, ನಾನು ಜರ್ಜರಿತನಾಗಿದ್ದೇನೆ; ನಾನು ತಿಳಿಗೇಡಿ, ತಪ್ಪುಗಾರ. . . . !’

ಆಗ ಅವರು ಪದೇ ಪದೇ ಹೇಳಿಕೊಳ್ಳುತ್ತಿದ್ದುದು ತಮ್ಮದೇ ಆದ ಈ ದ್ವಿಪದಿಯನ್ನು:

‘ನನ್ನ ಉಸಿರೀಗ ಹಿಡಿದಿದೆ ತನ್ನ ಹಾದಿ
ಗೆಳೆಯರೆ, ಈಗ ಅಲ್ಲಾಹನೇ ಅಲ್ಲಾಹ್’

ಕೊನೆಗೊಮ್ಮೆ ಕರಣೆ ತೋರಿತು ಮರಣ ೧೮೬೯ರ ಫೆಬ್ರವರಿ ೧೫ ರಂದು ಅವರಿಗಿದ್ದ ಎಲ್ಲ ಮತಗಳ ಸಾವಿರಾರು ಮಿತ್ರರು ಸೇರಿದ್ದರು. ಅವರ ಅಂತ್ಯ ಯಾತ್ರೆಯಲ್ಲಿ. ರಾಮಪುರದಲ್ಲಿ ತಮ್ಮ ಸಮಾಧಿಯಾಗ ಬೇಕೆಂಬುದು ಅವರ ಅಪೇಕ್ಷೆಯಾಗಿದ್ದಿತಾದರೂ ದಿಲ್ಲಿಯ, ವಲಿಷಾಹ್ ನಿಜಾಮುದ್ದೀನರ ಸ್ಮಾರಕದ ಹತ್ತಿರ ಅವರ ಗೋರಿಯಾಯಿತು.

ಜಗತ್ತು ಮರೆಯಲಿಲ್ಲ

ಗಾಲಿಬ್‌ರು ತೀರಿಕೊಂಡನಂತರ ೧೯೫೬ ರಲ್ಲಿ ಗಾಲಿಬ್ ಸೊಸೈಟಿಯವರು ಅವರ ಸಮಾಧಿಯ ಬಳಿ ಒಂದು ಸ್ಮಾರಕವನ್ನು ನಿರ್ಮಿಸಿದರು.

೧೯೬೯ರ ಫೆಬ್ರವರಿ ೧೫ಕ್ಕೆ ಗಾಲಿಬರು ನಿಧನರಾಗಿ ನೂರು ವರ್ಷಗಳಾದವು. ಅಂದು ಶತ ಮಾನೋತ್ಸವವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಭಾರತದ ಅಂಚೆ ಇಲಾಖೆಯು ಈ ಸಂದರ್ಭದಲ್ಲಿ ಒಂದು ಅಂಚೆಚೀಟಿ ಯನ್ನು ಪ್ರಕಟಿಸಿತು.

ವಿಚಿತ್ರ ಸ್ವತಂತ್ರ ವ್ಯಕ್ತಿ

‘ಈ ಶವವಸ್ತ್ರವಿಹೀನ ಕಳೇಬರವು ಗಾಯ ಗೊಂಡ ಗಾಲಿಬನದು:
ದೇವನವನ ಕ್ಷಮಿಸಿ ಬಿಡಲಿ. ವಿಚಿತ್ರ ಸ್ವಂತಂತ್ರ ವ್ಯಕ್ತಿಯವನು!’

ಇದು ಗಾಲಿಬರೇ ಬರೆದ ದ್ವಿಪದಿ. ಇದರಲ್ಲಿ ಉಕ್ತವಾಗಿರುವುಂತೆ ‘ವಿಚಿತ್ರ ಸ್ವತಂತ್ರ ಪುರುಷ ಪುಂಗವ’ ರಾಗಿಯೇ ಬದುಕಿದರವರು. ಅವರಿಗೆ ಒದಗಿದ ವಿಪತ್ತುಗಳು, ಆಘಾತಗಳು, ಅನಾಹುತಗಳು ಇನ್ನಾರಿಗಾದರೂ ಒದಗಿದ್ದರೆ ಅವರು ಇಲ್ಲವೆ ಹುಚ್ಚರಾಗಿ ಬಿಡುತ್ತಿದ್ದರು, ಇಲ್ಲವೆ ಹೌಹಾರಿ ಹರಣ ನೀಗುತ್ತಿದ್ದರು. ಗಾಲಿಬರು ಇವುಗಳನ್ನು ಸಹಿಸಿಕೊಂಡು ಬದುಕಿದರು, ಇವುಗಳಿಗೆ ಸೊಪ್ಪು ಹಾಕದೆ ಬದುಕಿದರು, ಎಂಥ ಕಷ್ಟ ಬಂದರೂ ಆತ್ಮಗೌರವವನ್ನು ಉಳಿಸಿಕೊಂಡು ಬದುಕಿದರು, ಯಾರಿಗೂ ಆಳಾಗದೇ ಸ್ವತಂತ್ರ್ಯರಾಗಿ ಬದುಕಿದರು!,

ಇದು ಅವರಿಗೆ ಹೇಗೆ ಸಾಧ್ಯವಾಯಿತು?

ಕೆಲವು ಕಾರಣಗಳನ್ನು ಕೊಡಬಹುದು.

ಮೊದಲನೆಯದಾಗಿ ಅವರ ಆತ್ಮವಿಶ್ವಾಸ ಸಮಕಾಲೀನರು ತಮ್ಮ ಬಗ್ಗೆ, ತಮ್ಮ ಕವಿತೆಗಳ ಬಗ್ಗೆ ಏನೇ ಹೇಳಲಿ, ಭವಿಷ್ಯದಲ್ಲಿ ಅವುಗಳ ಬೆಲೆ ಹೆಚ್ಚುತ್ತಲೇ ಹೋಗುವುದೆಂಬ ಆತ್ಮವಿಶ್ವಾಸ. ‘ನನ್ನ ಮರಣದ ತರುವಾಯವೇ ನನ್ನ ಕಾವ್ಯದ ಕೀರ್ತಿ’ ಎಂದು ನ್ಯಾಯ ವಾಗಿಯೇ ನಂಬಿದ್ದ ಅವರು ‘ಲೋಕದಲ್ಲಿ ಅನೇಕ ಉತ್ತಮ ಕವಿಗಳು ಬೇರೆ ಇದ್ದಾರೆ; ಆದರೆ ಗಾಲಿಬರ ನಿರೂಪಣೆಯ ರೀತಿಯೆ ಬೇರೆಯಾದುದೆಂದು ಹೇಳುತ್ತಾರೆ’ ಎಂದು ನುಡಿದುದು ಅದಾವ ಅಚ್ಚರಿ? ‘ಕಾವ್ಯ ಧರ್ಮವೇ         ವಿಶ್ವಧರ್ಮವಾಗಿದ್ದರೆ ನನ್ನ ಕಾವ್ಯ ಗುಚ್ಛವೇ ಒಂದು ಧರ್ಮಕ್ಕೆ ಪವಿತ್ರ ಗ್ರಂಥವಾಗುತ್ತಿತ್ತು’ ಎಂದೂ ಹೆಮ್ಮೆಯಿಂದ ಹೇಳಿಕೊಂಡಿರುವರು. ಹೇಳಿ ಕೊಂಡುದು ಬರಿಯ ಜಂಬವೇನಿಲ್ಲ. ಅವರಿಗೆ ಸ್ಫುರಿಸುತ್ತಿದ್ದ ಭಾವನೆಗಳು ಕಲ್ಪನೆಗಳು, ವಿಚಾರಗಳು ಅಂಥಿಂಥವಾಗಿರಲಿಲ್ಲ. ‘ರಹಸ್ಯಮಯ ನೆಲೆಯಿಂದ ಹೊಳೆಯುತ್ತಿವೆ ನನಗೆ ಈ ಭಾವನೆಗಳು, ಗಾಲಿಬ್; ಅವುಗಳನ್ನು ಬರೆಯುವಾಗ ಲೆಕ್ಕಣಿಕೆಯಿಂದ ಹೊರಡುವ ಸ್ವರ ದೇವವಾಣಿ!’  ಎಂದವರು ಉಸಿರಬೇಕಾದರೆ ಸಮಕಾಲೀನರು ತಮ್ಮ ಕವಿತೆಗಳನ್ನು ನಿರ್ಲಕ್ಷಿಸಿದರೂ ಮುಂದಿನವರು ಮೆಚ್ಚಿ ಕೊಂಡಾಡುವರೆಂದು ಅವರು ಆತ್ಮವಿಶ್ವಾಸವಿರಿಸಿ ಕೊಂಡದು ತಪ್ಪಲ್ಲವೆಂದೇ ಹೇಳಬೇಕು.

ಒಮ್ಮೊಮ್ಮೆ, ‘ಓ ದೇವ, ಅವರರಿಯರು, ಅರಿಯಲಾರರು ನನ್ನ ಮಾತ; ಬೇರೆ ವಾಣಿಯನೆನಗೆ ನೀಡದಿದ್ದರು ನೀಡವರಿಗೆ ಬೇರೆ ಚಿತ್ತ’ ಎಂಬ ಸ್ವರ ಕೇಳಿ ಬಂದರೂ ಅವರ ನೈಜಸ್ವರ ಇದು:

‘ಕವಿತಾವಿಲಾಸದ ಕಾವಿನಿಂದ ಹಾಡುತ್ತಲಿದ್ದೇನೆ;
ನಾನಿಹೆನು ಬರಲಿರುವ ಬನದ ಬುಲ್‌ಬುಲ್!’

ಇನ್ನೂ  ಉದಿಸದ ಉಪವನದ ಕೋಗಿಲೆಯಾಗಿ ಹಾಡಿದ ಗಾಲಿಬರ ಗಜಲುಗಳಲ್ಲಿ ಶುಷ್ಕ ಪಾಂಡಿತ್ಯ ಪ್ರದರ್ಶನವಿಲ್ಲ, ಸುಲ್ತಾನಾಶ್ರಯ ಸಂಪಾದನೆಯ ಹಂಬಲ ವಿದ್ದರೂ ಅದಕ್ಕಾಗಿ ಕೆಳಮಟ್ಟಕ್ಕಿಳಿವ ರಂಜಕತೆಯಿಲ್ಲ; ಹಳೆಯ ವಿಚಾರಗಳ, ಹಳಸಿದ, ಕಲ್ಪನೆಗಳ ಚರ್ವಿತ ಚರ್ವಣವಿಲ್ಲ, ಅವನೊಬ್ಬ ಕಾವ್ಯ ಲೋಕದ ಮೂರ್ತಿ ಭಂಜಕ. ಹಳೆಯ ಬಂಧನಗಳನ್ನು ಹರಿದೊಗೆದ ಮುಕ್ತಾತ್ಮ; ಸ್ವತಂತ್ರನಾಗಿ ಚಿಂತನ ನಡೆಸಿ, ಸ್ವತಂತ್ರನಾಗಿ ಬರೆದ. ಹಳೆಯ ಮೂರ್ತಿಗಳನ್ನು ಒಡೆದ; ಹೊಸದನ್ನು ನೋಡಿದ; ಹೊಸದನ್ನು ಹಾಡಿದ ಆದುದರಿಂದ ಸಮಕಾಲೀನರು ಅನಾದಾರ ಟೀಕೆಗಳಿಂದ ಅಧೀರನಾಗಲಿಲ್ಲ. ಹೇಳಿದ; “ದೂರದಲ್ಲಿರುವ ದೊಡ್ಡ ನಕ್ಷತ್ರವೂ ಬರಿಗಣ್ಣಿನಿಂದ ನೋಡುವವರಿಗೆ ಸಮೀಪದಲ್ಲಿರುವ ಸಣ್ಣ ನಕ್ಷತ್ರಕ್ಕಿಂತಲೂ ಸಣ್ಣದಾಗಿ ಕಾಣುತ್ತದೆ. ಬರಿಗಣ್ಣಿನಿಂದ ನೋಡದೆ ದೂರದರ್ಶಕ ಯಂತ್ರದ ನೆರವಿನಿಂದ ನೋಡಿದಾಗ?’

ಬಹಳ ಎತ್ತರಕ್ಕೆ ಬೆಳೆದಿದ್ದ ಗಾಲಿಬರನ್ನು ಹೊರಗಣ್ಣಿನಿಂದ ನೋಡಿ ಅವರು ಸಣ್ಣವರೆಂದೇ ತಪ್ಪಾಗಿ ತಿಳಿದುಕೊಂಡರು ಅಂದಿನ ಅನೇಕರು. ಅದನ್ನು ಅಲಕ್ಷಿಸಿ ಬದುಕಿದ ಗಾಲಿಬರು ‘ದಿವ್ಯ ನಿರ್ಲಕ್ಷ್ಯವೇ ವರಕವಿಯೆ ಪಂಥ’ ಎಂಬ ಕುವೆಂಪು ಅವರ ಉಕ್ತಿಗೆ ಉದಾಹರಣೆ ಯಾಗಿದ್ದಾರೆ.

ಆತ್ಮ ಗೌರವ

ಎರಡನೆಯದಾಗಿ ಅವರ ಆತ್ಮಗೌರವ ಬುದ್ಧಿ. ಬಡತನವು ಅವರನ್ನು ಕಿತ್ತು ತಿನ್ನುತ್ತಿದ್ದರೂ ಅವರ ಆತ್ಮ ಪ್ರತಿಷ್ಠೆಗೆ ಬಡತನ ಬರಲಿಲ್ಲ. ಉದಾಹರಣೆಗಾಗಿ ಅವರು ಮಿಸ್ಟರ್‌ಥಾಮ್ ಸನ್ ಎಂಬವರೊಡನೆ ನಡೆದು ಕೊಂಡುದನ್ನಿಲ್ಲಿ ನೆನೆಯಬಹುದು. ದೆಹಲಿಯ ಕಾಲೇಜಿಗೆ ಒಬ್ಬ ಫಾರಸಿ ಪಂಡಿತರ ಅಗತ್ಯವಿದ್ದಿತು. ಅದಕ್ಕಾಗಿ ಮಿರ್ಜಾ ಗಾಲಿಬರೇ ಯೋಗ್ಯರೆಂದು ಅವರನ್ನು ಸಂದರ್ಶನಕ್ಕೆ  ಕರೆಯಲಾಯಿತು. ಕರೆದವರು ಅಂದಿನ ಭಾರತ ಸರ್ಕಾರದ ಕಾರ್ಯದರ್ಶಿಗಳೂ, ಲೆಫ್ಟಿನೆಂಟ್ ಗವರ್ನರರೂ ಆಗಿದ್ದ ಥಾಮ್‌ಸನ್ನರು ಮಿರ್ಜಾ ಗಾಲಿಬರು ಪಲ್ಲಕ್ಕಿಯನ್ನೇರಿ ಅವರ ಬಳಿಗೆ ಹೋದರು. ಇವರು ಬಂದುದು ತಿಳಿಯುತ್ತಲೇ ಥಾಮ್‌ಸನ್ನರು ಗಾಲಿಬರನ್ನು ಒಳಗೆ ಬರಹೇಳಿದರು. ಆದರೆ ಗಾಲಿಬರು ಪಲ್ಲಕ್ಕಿಯಿಂದ ಇಳಿದವರು ಒಳಗೆ ಹೋಗಲೇ ಇಲ್ಲ. ಪದ್ಧತಿಯಂತೆ ಥಾಮ್‌ಸನ್ನರು ಹೊರಗೆ ಬಂದು ಇವರನ್ನು ಕರೆದೊಯ್ಯಲೆಂದು ಕಾದರು. ಸಾಕಷ್ಟು ಹೊತ್ತು ಹಾದಿ ನೋಡಿದ ಮೇಲೆ ಥಾಮ್ ಸನ್ನರಿಗೆ ಗಾಲಿಬರು ಒಳಗೆ ಬರದಿರುವ ಕಾರಣ ತಿಳಿಯಿತು. ಅವರೇ ಹೊರಗೆ ಬಂದು ಹೇಳಿದರು, ‘ನೀವು ಗವರ್ನರರ ಒಡ್ಡೋಲಗಕ್ಕೆ ದಯ ಮಾಡಿಸಿದಾಗ ಮಾತ್ರ ಹೊರಗೆ ಬಂದು ಸ್ವಾಗತಿಸುವೆವು; ನೀವೀಗ ಕೆಲಸಕ್ಕಾಗಿ ಅಭ್ಯರ್ಥಿಯಾಗಿ ಬಂದಿರುವುದರಿಂದ ಇಂಥ ಸ್ವಾಗತ ಸಿಕ್ಕದು!’ ತಕ್ಷಣ ಗಾಲಿಬರು ಮಾರ್ನುಡಿದರು: ‘ಸರ್ಕಾರದ ನೌಕರಿಗೆ ನಾನು ಮನಸ್ಸು ಮಾಡಿದುದು ಗೌರವ ಹೆಚ್ಚುವುದೆಂಬ ಭಾವನೆಯಿಂದ: ಇದ್ದ ಗೌರವವನ್ನು ಕಳೆದುಕೊಳ್ಳಲೆಂದಲ್ಲ!’ ಥಾಮ್‌ಸನ್ನರೆಂದರು: ‘ನಿಯಮಗಳಂತೆ ನಡೆಯಬೇಕು ನಾವು’ ಗಾಲಿಬರೆಂದರು: ‘ನಿಮ್ಮ ನೌಕರಿ ಬೇಡ, ಕ್ಷಮಿಸಿರಿ!’ ಹೀಗೆಂದವರೇ ಪಲ್ಲಕ್ಕಿ ಏರಿ ಅಲ್ಲಿಂದ ಹೊರಟೇಹೋದರು!

ಇನ್ನೊಂದು ಘಟನೆಯನ್ನಿಲ್ಲಿ ಉಲ್ಲೇಖಿಸಬೇಕು. ಕಲ್ಕತ್ತೆಯಲ್ಲಿ ನೆಲೆಸಿದ್ದ ರಾಜಕುಮಾರ ಬಸೀರುದ್ದೀನ್ ಒಮ್ಮೆ ಗಾಲಿಬರಿಗೆ ಪತ್ರ ಬರೆದ: ‘ನಿಮ್ಮ ಪುಸ್ತಕಗಳನ್ನು ಕಳಿಸಿ: ಬೆಲೆ ತಿಳಿಸಿ’. ಗಾಲಿಬರು ಪುಸ್ತಕಗಳನ್ನು ಕಳಿಸಿ ಕಾಗದ ಬರೆದರು: ‘ಪುಸ್ತಕಗಳ ಬೆಲೆಯ ವಿಷಯ ನಿಮ್ಮ ಲೇಖನಿಯ ಮೊನೆಯಿಂದ ಮೂಡಿತಾದರೂ ಹೇಗೆ? ನಾನು ಧನಿಕನಲ್ಲದಿರಬಹುದು; ಆದರೆ ನಾನು ಬಿಕಾರಿಯೂ ಅಲ್ಲವಲ್ಲ! ನಾನೊಬ್ಬ ಲೇಖಕ; ವರ್ತಕನಲ್ಲ; ನಾನು ಬಹುಮಾನವನ್ನು ಸ್ವೀಕರಿಸುವೆನಾಗಲಿ ಬೆಲೆಯನ್ನಲ್ಲ! ನಾನು ಕಳಿಸುವುದೆಲ್ಲ ಕಾಣಿಕೆ! ನಾನು ಪಡೆವುದೆಲ್ಲ ಬಹುಮಾನ!

ಹಾಸ್ಯ ಪ್ರವೃತ್ತಿ 

ಮೂರನೆಯದಾಗಿ ಅವರ ಹಾಸ್ಯ ಪ್ರವೃತ್ತಿ. ಕ್ಲೇಶಗಳ ಜ್ವಾಲೆಗಳಲ್ಲಿಯೂ ಅವರಲ್ಲಿದ್ದ ಹಾಸ್ಯದ ಸೆಲೆ ಬತ್ತಲಿಲ್ಲ.  ಒಮ್ಮೆ ಹೊಟ್ಟೆ ತುಂಬಿಸಲು ಬಟ್ಟೆಗಳನ್ನೇ ಮಾರಿಕೊಳ್ಳಬೇಕಾಯಿತವರು. ಅದನ್ನೂ ವಿನೋದ ವಾಗಿಯೇ ಸ್ನೇಹಿತರೊಬ್ಬರಿಗೆ ತಿಳಿಸಿದವರು: ‘ಉಳಿದವರು ರೊಟ್ಟಿಯನ್ನು ತಿಂದು ಬದುಕಿದರೆ ನಾನು ಬಟ್ಟೆಯನ್ನು ತಿಂದು ಬದುಕಿದ್ದೇನೆ!’

ಹಾಸ್ಯ ಅವರ ಬದುಕಿನ ಹಾಸು ಹೊಕ್ಕಾಗಿದ್ದಿ ತೆಂದೇ ಅವರು ತಮ್ಮ ಪಾಲಿಗೆ ಬಂದ ವಿಷವನ್ನೇ ಅಮೃತವೆಂದು ಸ್ವೀಕರಿಸಿ ಬದುಕಿದರು. ಅವರು ಹಾರಿಸಿದ ಹಾಸ್ಯ ಚಟಾಕಿಗಳಿಗೆ ಲೆಕ್ಕವಿಲ್ಲ.

ಒಮ್ಮೆ ಗಾಲಿಬರ ಮನೆಯಲ್ಲಿ ಗೆಳೆಯರ ಕೂಟ. ಗಾಲಿಬರಿಗೆ ಮಾವಿನಹಣ್ಣುಗಳೆಂದರೆ ಪ್ರಾಣ. ಗೆಳೆಯರಲ್ಲಿ ಮಾವಿನಹಣ್ಣು ಸೇರದ ಹಕೀಮ್ ರಜಿಮುದ್ದೀನರೂ ಇದ್ದರು. ಬೀದಿಯಲ್ಲಿ ಮಾವಿನ ಸಿಪ್ಪೆಗಳು ಬಿದ್ದಿದ್ದುವು. ಅತ್ತಣಿಂದ ಕತ್ತೆಗಳು ಬಂದುವು. ಮಾವಿನ ಸಿಪ್ಪೆಗಳನ್ನು ಮೂಸಿ ನೋಡಿ ತಿನ್ನದೆ ಹೊರಟು ಹೋದವು. ಅದನ್ನು ನೋಡಿದ ಹಕೀಮ್ ರಜಿಮುದ್ದೀನರು ಉಬ್ಬಿ ನುಡಿದರು: ‘ನೋಡಿದಿರಾ ಗಾಲಿಬರೆ, ಕತ್ತೆಗಳೂ ಮಾವಿನ ಹಣ್ಣು ತಿನ್ನುವುದಿಲ್ಲ!’ ಗಾಲಿಬರು ಆ ಮಾತುಗಳನ್ನೇ ಅವರಿಗೆ ತಿರುಗಿಸಿದರು: ‘ಹೌದು ಹಕೀಮರೇ, ಕತ್ತೆಗಳು ಮಾವಿನ ಹಣ್ಣು ತಿನ್ನುವುದಿಲ್ಲ!’

ಒಮ್ಮೆ ಗಾಲಿಬರು ಸಾಮ್ರಾಟರ ಖಾಸಗಿ ತೋಟದಲ್ಲಿ ಅವರೊಡನೆ ವಿಹರಿಸುತ್ತಿದ್ದರು. ಅದು ಮಾವಿನ ಸುಗ್ಗಿ, ಮಾವಿನ ಮರಗಳ ತುಂಬ ಕಂಡರೆ ಬಿಡದಿರುವಂಥ ಹಣ್ಣುಗಳು. ಆದರೆ ಸಾಮ್ರಾಟ ಜಿಪುಣ, ಅಲ್ಲಿಯ ಹಣ್ಣುಗಳನ್ನು ಯಾರಿಗೂ ಕೊಡುತ್ತಿರಲಿಲ್ಲ. ಗಾಲಿಬರು ಒಂದು ಮಾವಿನ ಮರದ ಕೆಳಗೆ ನಿಂತು ಅದರ ಒಂದು ಹಣ್ಣನ್ನು ದಿಟ್ಟಿಸಿ ನೋಡತೊಡಗಿದರು. ‘ಅದೇನ್ನು ದುರುಗಟ್ಟಿ ನೋಡುತ್ತಿರುವಿರಿ ಗಾಲಿಬ್?’ ಎಂದು ಸಾಮ್ರಾಟರು ಕೇಳಿದರು. ಗಾಲಿಬರು ಉತ್ತರವಿತ್ತರು: ‘ಈ ಮರಗಳು ಬಿಡುವ ಹಣ್ಣನ್ನು ಸಾಮ್ರಾಟರು ಯಾರಿಗೂ ಕೊಡುವುದಿಲ್ಲವೆಂದು ಕೇಳಿದ್ದೇನೆ. ಆದರೂ ಅಪ್ಪಿತಪ್ಪಿ ಯಾವುದಾದರೊಂದು ಹಣ್ಣಿನಮೇಲೆ ನನ್ನ ಹೆಸರು ಬರೆದಿದೆಯೇ ಎಂದು ದಿಟ್ಟಿಸಿ ನೋಡುತ್ತಲಿದ್ದೇನೆ. ದೇವರು ಆಯಾ ಹಣ್ಣಿನ ಮೇಲೆ ಅದನ್ನು ತಿನ್ನುವವರ ಹೆಸರನ್ನು ಬರೆದಿರುತ್ತಾನಂತೆ.’ ಉತ್ತರ ನಾಟಿ ಫಲ ಕೊಟ್ಟಿತು. ಗಾಲಿಬರ ಮನೆಗೆ ಒಂದು ಬುಟ್ಟಿ ತುಂಬ ಒಳ್ಳೆಯ ಮಾವಿನಹಣ್ಣುಗಳು ಬಂದುವು. ಅವರಿಗೆ ಆಗ ಸ್ವರ್ಗ ಮೂರೇ ಬೆರಳು!

ಗಾಲಿಬರ ವಿನೋದವೃತ್ತಿ ಮಾನವರ ಮಟ್ಟಿಗೆ ಮೀಸಲಾಗಿರಲಿಲ್ಲ; ದೇವರನ್ನೂ ಒಮ್ಮೊಮ್ಮೆ ತಮ್ಮ ನಗೆಗಾರಿಕೆಗೆ ಗುರಿ ಮಾಡುತ್ತಾರೆ ಅವರು. ‘ಮಾಡಿದ ಪಾಪಗಳಿಗೆ ಶಿಕ್ಷೆ ವಿಧಿಸುವುದಾದರೆ, ದೇವರೆ, ಮಾಡದ ಪಾಪಗಳಿಗಾಗಿ ಬಹುಮಾನವನ್ನು ನೀಡು!’ ಎಂದು ಕೇಳುತ್ತಾರೆ ಅವರು; ‘ಇಷ್ಟು ದುಃಖವೂ ನಮ್ಮ ದೈವದಲ್ಲಿರುವಾಗ ಹಲವು ಹೃದಯಗಳನ್ನಾದರೂ ಕೊಡಬಾರದೆ ದೇವ?’ ಎಂದು ಸವಾಲು ಹಾಕುತ್ತಾರೆ ಅವರು; ‘ನಮ್ಮ ಬಾಳೇ ಇನಿತು ಗೋಳಿನಿಂ ಕಳೆದಾಗ ನಮಗೊಬ್ಬ ದೇವನಿಹನೆಂದು ನೆನೆವುದೆಂತು?’ಎಂದು ಪ್ರಶ್ನಿಸುತ್ತಾರೆ ಅವರು.

ವಿಶ್ವಕುಟುಂಬಿ

ಅವರ ಸ್ನೇಹಪರತೆ ಅವರು ನಂಜು ನುಂಗುತ್ತಲೇ ಬದುಕಲು ಒಲವಿತ್ತ ಇನ್ನೊಂದು ಅಂಶ. ಯಾವಾಗಲೂ ಗೆಳೆಯರ ಗುಂಪಿನಲ್ಲಿ ಕಾಲ ಕಳೆವಾಸೆ ಅವರಿಗೆ. ಅವರ ಗೆಳೆಯರಲ್ಲಿ ಎಲ್ಲ ಮತಗಳ, ಎಲ್ಲ ಪಂಥಗಳ ಜನರಿದ್ದರು. ಎಲ್ಲರಿಗೂ ಅವರು ಬೆಲ್ಲವಾಗಿದ್ದರು. ಅವರೊಡನೆ ಹರಟೆ ಕೊಚ್ಚುವುದು, ಅವರಿಗೆ ಪತ್ರ ಬರೆಯುವುದು, ಅವರ ಕವನಗಳನ್ನು ತಿದ್ದಿಕೊಡುವುದು ಅವರಿಗೆ ಅತ್ಯಂತ ಪ್ರಿಯವಾದ ವಿಷಯವಾಗಿದ್ದಿತು. ಇದರಲ್ಲಿ ಅವರು ತಮ್ಮ ಬನ್ನಗಳನ್ನು ಮರೆಯುವುದು ಬಹುಮಟ್ಟಿಗೆ ಸಾಧ್ಯವಾಗುತ್ತಿದ್ದಿತು.

ಅವರ ಮಾನವಪ್ರೇಮ ಮತಾತೀತವಾದುದು. ಮಿತ್ರ ಹರಗೋಪಾಲರಿಗೆ ಬರೆದ ಪತ್ರವಿದು: ‘ಅವರಿವರು  ನನ್ನ ಸಂಬಂಧಿಕರೆಂದು ಬರೆದಿರುವಿರಿ. ನಾನು ಮಾನವ ಕುಲವೆಲ್ಲ ನನ್ನ ಕುಟುಂಬವೆಂದು ಭಾವಿಸಿದ್ದೇನೆ. ಆದಮ್‌ನ  ಸಂತಾನ ಯಾರೇ ಇರಲಿ ಮುಸಲ್ಮಾನನಾ ಗಿರಲಿ, ಹಿಂದೂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ ಅವನು ನನ್ನ ಬಂಧುವೆಂದೇ ಭಾವಿಸುತ್ತೇನೆ. ಉಳಿದವರು ಇದನ್ನು ಒಪ್ಪದಿರಬಹುದು. ನನಗದರ ಪರವೆಯಿಲ್ಲ.’

ಅವರ ಈ ವಿಶ್ವ ಕುಟುಂಬಿತ್ವ ಅವರು ನಂಬಿದ್ದ ‘ವಹದತುಲ್ ವಜೂದ್’ (ಅಸ್ತಿತ್ವದ ಏಕತ್ವ) ತತ್ವಕ್ಕೆ ಅನುಗುಣವಾಗಿಯೇ ಇದೆ. ಸೂಫಿ, ಸಂಪ್ರದಾಯದ ಉದಾರ ವಿಚಾರಗಳಿಂದ ಪ್ರಭಾವಿತರಾಗಿದ್ದ ಅವರು ಪರಮಸಹಿಷ್ಣುತೆಯಲ್ಲಿ ಮತೀಯತೆಯ ಮೇಲೆ ಮತೀಯ ವಿಜಯವನ್ನು ಸಹಜವಾಗಿಯೇ ಅಳವಡಿಸಿಕೊಂಡಿದ್ದರು.

ಸಹಾನುಭೂತಿ

ಪರರ ದುಃಖದ ಬಗ್ಗೆ ಗಾಲಿಬರಿಗಿದ್ದ ಸಹಾನುಭೂತಿಯೂ ಅವರು ತಮ್ಮ ದುಃಖಗಳನ್ನು ಸಹಿಸಿಕೊಳ್ಳಲು ಸಹಕಾರಿಯಾಯಿತೆಂದು ಹೇಳಬಹುದು.  ತಮಗಿಂತ ದುಃಖಿಗಳು ಕಣ್ಣು ಹಾಯಿಸಿದಲ್ಲೆಲ್ಲ ಕಂಡುಬರುತ್ತಿರುವಾಗ ತಮ್ಮ ದುಃಖವನ್ನೇ ದೊಡ್ಡದು ಮಾಡಿ ಗೋಳಾಡುವುದು ದಡ್ಡತನ. ಅಂತೆಯೇ ಅವರು ತಮ್ಮ ಸಂಕಷ್ಟಗಳು ಸಾವಿರವಿದ್ದರೂ ತಮ್ಮ ಬಳಿಗೆ ಬಂದ ಬಡವರ, ಹಸಿದವರ ನಿರ್ಗತಿಕರ ನೆರವಿಗೆ ಮುಂದಾಗುತ್ತಿದ್ದರು. ಅವರ ಬಾಗಿಲಿಗೆ ಬಂದವರು ಬರಿಗೈಯಿಂದ ಹಿಂದಿರುಗುತ್ತಲೇ ಇರಲಿಲ್ಲ. ಅವರ ಮನೆಯ ಮುಂದೆ ಯಾವಾಗಲೂ ಕುರುಡರ, ಕುಂಟರ, ಅಂಗವಿಕಲರ, ಅನಾಥರ ಸಮೂಹವೇ ಇರುತ್ತಿದ್ದಿತು. ಅವರಿಗೆ  ಗಾಲಿಬರು ತಮ್ಮ ಶಕ್ತಿ ಮೀರಿ ಸಹಾಯ ನೀಡಿ ತಾವು ಸಾಲಗಾರರೂ,ಅಭಾವ ಪೀಡಿತರೂ ಆಗಿರುತ್ತಿದ್ದರು. ಒಮ್ಮೆ ಅವರಿಗೆ ಪದ್ಧತಿಯಂತೆ ಲೆಫ್ಟಿನೆಂಟ್ ಗವರ‍್ನರರಿಂದ ಗೌರವ ವೇಷಭೂಷಣಗಳು ದೊರೆತಾಗ, ಅಲ್ಲಿಯ ಸೇವಕರಿಗೆ ಇನಾಮು ಕೊಡಲು ಅವರಲ್ಲಿ ಏನೂ ಇರಲಿಲ್ಲ. ಆ ಭೂಷಣಗಳನ್ನೇ ಮಾರಿ ಅವರಿಗೆ ಇನಾಮು ಕೊಟ್ಟೇ ಮನೆಗೆ ಮರಳಿದರು. ದಿಲ್ಲಿಯ ವರಿಷ್ಟರಲ್ಲಿ ಒಬ್ಬರು ಅವರ ಸ್ನೇಹಿತರಿದ್ದರು. ದಿಲ್ಲಿಯ ದಂಗೆಯ ತರುವಾಯ ಹಣವೆಲ್ಲವನ್ನೂ ಕಳೆದುಕೊಂಡ ಅವರೊಮ್ಮೆ ಚೀಟಿನ ಮೇಲಂಗಿ ತೊಟ್ಟು ಗಾಲಿಬರ ಮನೆಗೆ ಬಂದರು. ಅದನ್ನು ನೋಡಿ ಗಾಲಿಬರಿಗೆ ಅತ್ಯಂತ ಖೇದವಾಯಿತು. ಅವರ ಮನಸ್ಸಿಗೆ ನೋವಾಗದಂತೆ ಅವರಿಗೆ ತಮ್ಮ ಒಳ್ಳೆಯ ಮೇಲಂಗಿ ಕೊಡಲು ಒಂದು ಉಪಾಯ ಹೂಡಿದರು, ಆ ಚೀಟಿನ ಬಟ್ಟೆಯನ್ನು ಬಾಯಿತುಂಬ ಹೊಗಳಿ ತಮಗೂ ಅಂಥ ಚೀಟಿನ ಮೇಲಂಗಿ ಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿ, ‘ಇದನ್ನು ಎಲ್ಲಿ ಕೊಂಡಿರಿ? ಈಗಲೇ ನನಗಿಂಥ ದೊಂದು ಮೇಲಂಗಿ ಬೇಕು’ ಎಂಬ ಆತುರ ತೋರಿಸಿದರು. ಅವರು ‘ಇದನ್ನು ಇಂದೇ ಧರಿಸಿದ್ದೇನೆ. ನಿಮಗೆ ಅಷ್ಟು ಆತುರವಿದ್ದರೆ ಇದನ್ನೇ ಸ್ವೀಕರಿಸಿರಿ!’ ಎಂದು  ಮಾರ್ನುಡಿದರು. ಗಾಲಿಬರು ಅದನ್ನು ತೆಗೆದುಕೊಂಡೇ ಬಿಟ್ಟರು. ಆಮೇಲೆ, ‘ಈಗ ಚಳಿ ಬಹಳ; ಮನೆಗೆ ಮೇಲಂಗಿಯಿಲ್ಲದೆ ಹೇಗೆ ಹೋಗುವಿರಿ? ಇದನ್ನಾದರೂ ಧರಿಸಿಕೊಂಡು ಹೋಗಿರಿ,’ ಎಂದು ತಮ್ಮ ಬೆಲೆಯುಳ್ಳ ಮೇಲಂಗಿಯನ್ನು ಅವರಿಗೆ ತೊಡಿಸಿಬಿಟ್ಟರು!

ಇಷ್ಟಾದರೂ ಅವರಿಗೆ ಇನ್ನೂ ಕೊಡಲು ತನ್ನಲ್ಲಿ ಸಾಕಷ್ಟಿಲ್ಲವಲ್ಲ ಎಂಬ ಕೊರಗು! ಒಂದೆಡೆ ಉದ್ಗರಿಸಿದ್ದಾರೆ: ‘ಇಡಿಯ ಪೊಡವಿಗೆ ಮೇಜವಾನಿ ಮಾಡಿಸುವ ಶಕ್ತಿ ನನಗಿಲ್ಲ. ಹೋಗಲಿ, ನಾನಿರುವ ನಗರದ ಮಟ್ಟಿಗಾದರೂ ಯಾರೊಬ್ಬರೂ ಬರಿ ಹೊಟ್ಟೆಯವರು ಬರಿಮೈಯವರು ಇರದಂತೆ ಮಾಡುವ ಶಕ್ತಿಯೂ ನನಗಿರಬೇಡವೇ. . . . ಯಾರು ಬಿಕ್ಷೆ ಬೇಡಿದರೂ ಅದನ್ನು ನೋಡಲಾಗದವನು, ಆದರೆ ತಾನೇ ಬಿಕ್ಷೆ ಬೇಡುವವನು- ಅವನೇ ನಾನು!’

ದೇವರಲ್ಲಿ ನಂಬಿಕೆ

ಅಲ್ಲಾಹನ ವ್ಯವಸ್ಥೆಯಲ್ಲಿ, ಅವನ ದಿವ್ಯ ಯೋಜನೆಯಲ್ಲಿ ಅವರಿಗಿದ್ದ ವಿಶ್ವಾಸವೂ ಅವರು ದುಃಖ ವೇಷ್ಟಿತರಾಗಿಯೂ ಧೀರರಾಗಿ ಬದುಕಲು ಕಾರಣ ವಾಯಿತೆಂದು ಹೇಳಬಹುದು. ಮಾನವನ ಬಯಕೆಗಳು, ಅಭೀಪ್ಸೆಗಳು ಅನಂತ. ‘ಸಾವಿರಾರು ಬಯಕೆಗಳು! ಎಂಥವು? ಒಂದೊಂದೂ ಉಬ್ಬಸ ತರುವಂಥದು! ಬಹಳ ಹೊಮ್ಮಿದುವೆನ್ನ ಬಯಕೆಗಳು. ಆದರೂ ಕಡಿಮೆ ಹೊಮ್ಮಿದುವು!’ ಎಂದು ಗಾಲಿಬರೇ ಹಾಡಿದ್ದಾರೆ. ಆದರೆ ಈ ಬಯಕೆಗಳು ಬಹುಪಾಲು ಈಡೇರದೇ ಭಗ್ನವಾದಾಗ ವ್ಯಗ್ರನಾಗುವುದು,ಉದ್ವಿಗ್ನನಾಗುವುದು ಅಲ್ಲಾಹನ ಉದ್ದೇಶದ ಅಪಾರ್ಥದ ಪ್ರತೀಕ. ತಿಳಿದ ತಂದೆ ತಾಯಿಗಳು ತಮ್ಮ ತಿಳಿಯದ ಮಗುವಿನ ಕೆಲವು ಬಯಕೆಗಳನ್ನು ಅದರ ಹಿತದ ದೃಷ್ಟಿಯಿಂದಲೇ ಪೂರೈಸದಿದ್ದಾಗ ಆ ಮಗು ತಂದೆ ತಾಯಿಗಳ ವಾತ್ಸಲ್ಯವನ್ನೇ ಶಂಕಿಸಬೇಕೆ? ಜಲೋದರದಿಂದ ನರಳುತ್ತಿರುವ ರೋಗಿಯೊಬ್ಬನಿಗೆ ವೈದ್ಯರು ನೀರು ಕುಡಿಯಕೂಡದೆಂದು ನಿರ್ಬಂಧಿಸಿದರೆ ಅವನ ಮಾನವೀಯತೆಯನ್ನೇ ಶಂಕಿಸಬಹುದೇ? ಹಾಗೆಯೇ ಅಲ್ಲಾಹನೂ ತನ್ನ ಮಕ್ಕಳು ಬೇಡಿದುದೆಲ್ಲವನ್ನು ಈಡೇರಿಸದಿದ್ದರೆ ಅವನ ಅನಂತ ಕರುಣೆಯನ್ನೂ ಶಂಕಿಸ ಬಹುದೆ? ಅವನ ಮಕ್ಕಳ ಹಿತಕ್ಕಾಗಿಯೇ ಅವನು ಅವರ ಎಲ್ಲ ಬಯಕೆಗಳನ್ನು ಈಡೇರಿಸಬಹುದು; ಯಾವುದೋ ದಿವ್ಯಯೋಜನೆಗೆ ಅನುಗುಣವಾಗಿಯೂ ಈಡೇರಿಸದಿರ ಬಹುದು. ಆದುದರಿಂದ ಅವನನ್ನು  ಬೇಡದಿರುವುದೇ ಲೇಸು:

‘ವರ ದೊರೆವ ವಿಶ್ವಾಸ ನಿನಗಿರೆ, ಏನನೂ ಬೇಡ ಬೇಡ;
ಬೇಡದಿಹ ಮನವೊಂದನುಳಿದು ಇನ್ನೇನನೂ ಬೇಡ ಬೇಡ!’

ಎಂದವರು ಎಚ್ಚರಿಸಿದ್ದಾರೆ. ಸ್ವರ್ಗದ ಆಸೆಯಿಂದಾಗಲಿ ನರಕದ ಭೀತಿಯಿಂದಾಗಲಿ, ಅಲ್ಲಾಹನನ್ನು ಪ್ರೀತಿಸುವುದು ತಪ್ಪು!

‘ಭಕ್ತಿಯೊಳಗಿರದಿರಲಿ ಮಧು ಸುಧೆಯ ಆಸೆಯು-
ನರಕದೊಳಗೊಗೆಯಿರಿ ಸ್ವರ್ಗವನ್ನಾರಾದರೂ!’

ಎಂದವರು ಪ್ರೇರಿಸಿದ್ದಾರೆ.

ಯುಗ ಪ್ರವರ್ತಕ ಕವಿ

ಗಾಲಿಬರೂ ಗಜಲುಗಳ ಕವಿಯೇ. ಆದರೆ ಅವುಗಳ ಗಜಲುಗಳು ಮುನ್ನಿನವರ ಗಜಲುಗಳಂತಲ್ಲ. ಅವುಗಳ ದೇಹ ಮೊದಲಿನದಾದರೂ ಅವುಗಳಲ್ಲಿ ಅವರು ತುಂಬಿದ ಚೇತನ ಹೊಸದು. ಚೆಲುವು ಒಲವುಗಳ ಚಿನ್ನಾಟ ವನ್ನು ಮಾತ್ರ ಚಿತ್ರಿಸುತ್ತಲಿದ್ದ ಗಜಲು ಅವರ ಕೈಯಲ್ಲಿ  ವ್ಯಥೆಯ ವಾಣಿಯಾಗಿ ನುಡಿದಿದೆ, ಧೃತಿಯ ವೇಣುವಾಗಿ ಉಲಿದಿದೆ; ವಿನೋದದ ವೀಣೆಯಾಗಿ ಮಿಡಿದಿದೆ; ಸೂಫಿ ನೇತೃತ್ವದ ಸಿತಾರವಾಗಿ ತುಡಿದಿದೆ; ಜೀವನ ವಿಮರ್ಶೆಯ ಜಲ ತರಂಗವಾಗಿ ಧ್ವನಿಸಿದೆ. ಅವರು ಉಭಯ ಕವಿತಾ ವಿಶಾರದರು. ಫಾರಸಿ ಭಾಷೆಯಲ್ಲಿಯೂ ಅವರು ಉದ್ದಾಮ ಕವಿಗಳು. ತಮ್ಮ ಉರ್ದು ಕೃತಿಗಳಿಗಿಂತ ಫಾರಸೀ ಕೃತಿಗಳ ಬಗೆಗೆ ಅವರಿಗೆ ಹೆಮ್ಮೆ ಹೆಚ್ಚು. ಆದರೂ ಅವರು ಕೀರ್ತಿ ಸ್ಥಿರವಾಗಿರುವುದು ಹೆಚ್ಚಾಗಿ ಅವರ ಉರ್ದು ಕೃತಿಗಳಿಂದಲೇ.

ಅವರ ಗಜಲುಗಳಲ್ಲಿ ಎದ್ದು ಕಾಣುವ ಗುಣ ಗಳೆಂದರೆ ಭಾವಾತಿರೇಕತೆ ಉಪದೇಶ ಪರತೆಗಳೆರಡನ್ನೂ ಮೀರಿದ ಚಿಂತನಶೀಲತೆ, ನಿರೂಪಣೆಯ ವಿನೂತನ ರೀತಿ, ಜೀವನವನ್ನೂ ಜೀವನದ ಪ್ರಶ್ನೆ ಸಮಸ್ಯೆಗಳನ್ನೂ ಹೊಸ ದೃಷ್ಟಿಯಿಂದ ನೋಡುವ ಹವ್ಯಾಸ, ಮನುಜ ಸ್ವಭಾವದ ಪದರು ಪದರುಗಳನ್ನು ಬಿಚ್ಚಿ ಬಯಲಿಗಿರಿಸುವ ನೈಪುಣ್ಯ, ಇವುಗಳಿಗೆ ಅನುಗುಣವಾಗಿ ಭಾಷೆಯನ್ನು ಬೇಕಾದ ಹಾಗೆ ದುಡಿಸಿಕೊಳ್ಳಬಲ್ಲ ಭಾಷಾ ಪ್ರಭುತ್ವ, ಇತ್ಯಾದಿಗಳು. ಉದಾಹರಣೆಗಳನ್ನು ಕೊಡಬೇಕೆಂದರೆ ಅವರ ಎಲ್ಲ ದ್ವಿಪದಿಗಳನ್ನೂ ಉದಾಹರಿಸಬೇಕಾದೀತು: ಮಾದರಿಗಾಗಿ ಕೆಲವನ್ನು ಮಾತ್ರ ಉದ್ಧರಿಸಿದೆ:

‘ಮನದ ಸ್ಥಿತಿಯನ್ನರಿಯೆ, ಇನಿತು ಮಾತ್ರ ಬಲ್ಲೆ

ನಾವು ಹುಡುಕಿದೆವು ಹಲವು ಸಲ, ನೀವು ಪಡೆದಿರಿ ಹಲವು ಸಲ!’  ‘ಯಾವುದೋ ಹಾಳು, ಹಾಳೋ ಹಾಳು-

ಕಾಡನ್ನು ನೋಡಿ ಬೀಡು ನೆನಪಾಯಿತು!’

‘ಯಾರಿಗೊರೆಯಲಿ ನಾನು ಎಂಥದೆಂದಳಲಿರುಳು?

ಶಪಿಸುತ್ತಿದ್ದೇನೆ ಸಾವ ಒಂದೆ ಸಲ ಬಂದಿರೆ?’

‘ಶಿಲೆಯ ನರದಿಂ ಹರಿಯುತ್ತಿತ್ತು ನಿಲ್ಲದೆ ರಕ್ತ.

ಕಿಡಿಯೆಂದು ಕೊಂಡುದೇ ಮಿಡುಕು ಆಗಿದ್ದರೆ’!

‘ಜರಡಿಯಾಗಲಿ ಮನವು ಪೆಟ್ಟು ಬಿದ್ದಂತೆಲ್ಲ

ಹಿಗ್ಗಿರಲಿ, ಕುಗ್ಗಿರಲಿ, ಸೋರಿ ಹೋಗುವುದೆಲ್ಲ!’

‘ತಡವ ಸೇರಿದ ಮೇಲೆ ತೆಪ್ಪ ಓ ಗಾಲಿಬ್

ಯಾಕೆ ದೂರುವುದು ನಾವಿಕನ ದೇವನೆದುರು?’

‘ಅಲೆಯ ಬಲೆಯೊಳಗಿಹವು ಮೊಸಳೆಗಳ ಗಳಗಳು

ಹನಿಯ ಗತಿಯೇನಹುದೋ ಮುತ್ತಾಗುವತನಕ!’

‘ಎಲ್ಲ ತೋರಿದುವೆಲ್ಲಿ ಗುಲಾಬಿ ಹೂವಾಗಿ?

ಎನಿತೋ ಚೆಲುಮೊಗಗಳಿವೆ ಮಣ್ಣೊಳಗೆ ಮಡಗಿ?’

‘ಕರೆಸಿಕೋ ಕರುಣದಲಿ ಬೇಕಾದಾಗ ನನ್ನ

ಮತ್ತೆ ನಾ ಬರದಿರಲು ಕಳೆದ ಹೊತ್ತೇನಲ್ಲ!’

‘ಭಕ್ತಿಯಲ್ಲಿಯು ನಾವು ಸ್ವತಂತ್ರರು,

ಸ್ವಾಭಿಮಾನಿಗಳು;

ಹಿಂದಿರುಗಿ ಬಂದು ಬಿಡುವೆವು ತೆರೆಯದಿರೆ ಮಕ್ಕೆಯ ಬಾಗಿಲು!’

‘ಸಿಂಧುವಿನೊಳಳಿಯುವುದೆ ಬಿಂದುವಿನ ಭಾಗ್ಯವು

ನೋವು ಮಿತಿಮೀರುವುದೆ ನೋವಿಗೌಷಧವು’!

‘ನನ್ನ ವಿಕಾಸದೊಳಿಹುದು ನನ್ನ ವಿನಾಶದ ಉಸಿರು

ರಾಶಿಗೆರಗುವ ಸಿಡಿಲು ರೈತ ರಕ್ತದ ಬಿಸಿಯು!’

ಉರ್ದು  ಕಾವ್ಯ ಪರಂಪರೆಯ ಪರಿಚಯವಿಲ್ಲದವರಿಗೆ ಮೇಲಿನಒಂದೊಂದು ದ್ವಿಪದಿಯಲ್ಲಿಯೂ ಗಜಲು ಸ್ವತಂತ್ರ ಸ್ವಯಂಪೂರ್ಣ ದ್ವಿಪದಿಗಳು ಸರಮಾತ್ರ ಅಡಗಿರುವ ಅರ್ಥ ಸೌಂದರ್ಯ ಭಾವಮಾಧುರ್ಯಗಳು ಒಮ್ಮೆಗೆ ತಿಳಿಯುವುದು ಕಷ್ಟ. ಕೊನೆಯ ದ್ವಿಪದಿಯನ್ನೇ ನೋಡಿ: ತೋರಿಕೆಗೆ ಬೆಳವಣಿಗೆಯೆಂದು ಕೊಂಡಿರುವುದೂ ಒಳಗೊಳಗೆ ಅಳಿವಿನ ಸನ್ನಾಹವೇ! ಮಗು ಬೆಳೆಯುತ್ತಿರು ವಂಥೆ ಅದರ ಆಯುಷ್ಯ ಅಳಿಯುತ್ತಿ ರುವುದಿಲ್ಲವೆ? ಇದು ಮೊದಲ ಸಾಲಿನ ಆಶಯ. ಎರಡನೆಯ ಸಾಲು ಅದ್ಭುತ ವಾದುದು: ಆಧುನಿಕ ವಿಜ್ಞಾನಕ್ಕೆ ಹತ್ತಿರವಾದುದು ರೈತನ ರಾಶಿಯ ಮೇಲೆ ಎರಗುವ ಸಿಡಿಲಿನಲ್ಲಿ ರೈತನು ದುಡಿವಾಗ ಅವನ ರಕ್ತ ಬಿಸಿಯಾಗಿ ಅದರಿಂದ ಹೊರಟ ಕಾವೂ ಸೇರಿದೆಯಂತೆ! ರಾಶಿ ವಿಕಾಸದ  ಸಂಕೇತವಾದರೆ ಸಿಡಿಲು ವಿನಾಶದ ಪ್ರತೀಕ.

ಗಾಲಿಬರು ಉರ್ದು ಫಾರಸೀ ಭಾಷೆಗಳಲ್ಲಿ, ಗಜಲುಗಳನ್ನು  ಮಾತ್ರ ಬರೆದಿಲ್ಲ. ಬೇರೆ ಬಗೆಯ ಕವಿತೆಗಳನ್ನೂ ಬರೆದಿದ್ದಾರೆ. ಉದಾಹರಣೆಗೆ ಅವರು ಕಾಶಿಯ ಮೇಲೆ ಬರೆದ ‘ದೇಗುಲದೀಪ’ ವೆಂಬ ಫಾರಸೀ ಪದ್ಯ ‘ಮಸನವಿ’ ರೂಪದಲ್ಲಿದೆ. ಎರಡೂ ಭಾಷೆಗಳಲ್ಲಿ ಗದ್ಯಸೃಷ್ಟಿಯನ್ನು ಹೇರಳವಾಗಿ ಮಾಡಿದ್ದಾರೆ. ಅವರು ಬರೆದ ಪತ್ರಗಳಂತೂ ಪತ್ರ ಸಾಹಿತ್ಯದಲ್ಲಿಯೇ ಅನುಪಮವಾದುವು. ‘ಹಾಲಿ’ಯವರ ಮಾತುಗಳಲ್ಲಿ ಹೇಳುವುದಾದರೆ ಹಾಸ್ಯ ಹಾಗೂ ಆಹ್ಲಾದಕತೆಗಳಿಂದ ಅವು ನಾಟಕ ಕಾದಂಬರಿಗಳಿಗಿಂತ ರೋಚಕವಾಗಿವೆ. ಅವುಗಳನ್ನು ಅನುಕರಿಸಲು ಅನೇಕರು ಪ್ರಯತ್ನಿಸಿ ವಿಫಲ ರಾಗಿದ್ದಾರೆ. ತೈಮೂರನ ವಂಶದ ಚರಿತ್ರೆಯನ್ನು ಗಾಲಿಬರು ‘ಮೆಹ್ರ್ ಎ ನಿಮ್ ರೋಜ್’ ಎಂಬ ಪರ್ಷಿಯನ್ ಗ್ರಂಥದಲ್ಲಿ ಬರೆದಿದ್ದಾರೆ. ಪಾರಸೀ ಕವನಗಳ ಸಂಗ್ರಹವೇ ಪ್ರಕಟವಾಗಿವೆ. ಒಂದು ಪರ್ಷಿಯನ್ ನಿಘಂಟನ್ನೂ ಗಾಲಿಬರು ರಚಿಸಿದರು. ಇಂದು ಆಂಗ್ಲ ಸಾಹಿತ್ಯ ಸಂಪರ್ಕ ದಿಂದ ವಿಶ ಸಾಹಿತ್ಯ ಪ್ರಭಾವದಿಂದ ಉರ್ದು ಕಾವ್ಯವು ಹೊಸ ಹಾದಿಯನ್ನು ಹಿಡಿದಿದ್ದರೂ ಗಾಲಿಬರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅವರ ಸ್ಥಾನ ಅವರದೇ. ಅವರು ಶ್ರೇಷ್ಠಕವಿ, ಶ್ರೇಷ್ಠ ಭಾರತೀಯ, ಶ್ರೇಷ್ಠ ಮಾನವ.

ಅವರು ನೇರವಾಗಿ ಉಪದೇಶ ಮಾಡಿದುದೇ ಇಲ್ಲ. ಎಲ್ಲೋ ಒಮ್ಮೆ ಮಾಡಿದ್ದರೂ ಮನಸ್ಸಿಗುಪದೇಶದ ಮಾದರಿಯಲ್ಲಿದೆ. ಅವರ ಈ ಆರು ಸಾಲುಗಳೊಡನೆ ಮಂಗಳ ಹಾಡೋಣ:

‘ಕೇಳದಿರು ಕೆಡುಕು ನುಡಿದರೆ ಯಾರಾದರೂ
ಹೇಳದಿರು ಕೆಡಕು ಗೈದರೆ ಯಾರಾದರೂ
ತಡೆ, ತಪ್ಪು ದಾರಿ ತುಳಿದರೆ ಯಾರಾದರೂ
ಕ್ಷಮಿಸಿ ಬಿಡು ತಪ್ಪು ಮಾಡಿದರೆ ಯಾರಾದರೂ
ಅಪೇಕ್ಷೆಯೇ ಇಲ್ಲವಾದಾಗ ಗಾಲೀಬ್,
ಯಾರನೇತಕೆ ದೂರುವುದು ಯಾರಾದರೂ?