ಕನ್ನಡ ಕಾದಂಬರಿ ಲೋಕದಲ್ಲಿ ಮಿರ್ಜಿ ಅಣ್ಣಾರಾಯರದು ಪ್ರಮುಖ ಹೆಸರು. ಇವರು ೧೯೧೮ ರಲ್ಲಿ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ಜನಿಸಿದರು ಇವರ ಪೂರ್ಣ ಹೆಸರು ಅಣ್ಣಪ್ಪ ಅಣ್ಣಪ್ಪ ಮಿರ್ಜಿ. ಪ್ರಾಥಮಿಕ ಶಾಲೆಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ, ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ನಿಸರ್ಗ ಇವರ ಮೊದಲ ಕಾದಂಬರಿ, ಬದುಕಿನ ಜೀವಂತ ಚಿತ್ರಣದಿಂದ ಬಹುತೇಕ ಜನರ ಪ್ರಸಂಶೆಗೆ ಪಾತ್ರವಾಯಿತು. ಸಾಹಿತ್ಯಪರಿಷತ್ತು ಮುಂಬೈ ಸರಕಾರದಿಂದ ಬಹುಮಾನ, ದೇವರಾಜ ಬಹದ್ದೂರ್ ಪಾರಿತೋಷಕ, ಪಡೆಯಿತು. ಬಿಡುಗಡೆ ಹೋರಾಟದಲ್ಲಿ ಹಿಂದೂ-ಮುಸ್ಲಿಂ, ಭ್ರಾತೃತ್ವವಿತ್ತೆಂಬುದನ್ನು ಪ್ರತಿಪಾದಿಸುವ ಕಾದಂಬರಿ ರಾಷ್ಟ್ರಪುರುಷ, ಹಳ್ಳಿಯ ಶಾಲೆಯ ಶಿಕ್ಷಕರೊಬ್ಬರು ನಾಯಕರಾಗಿರುವ ಕಾದಂಬರಿ ರಾಮಣ್ಣ ಮಾಸ್ತರ, ಪ್ರತಿಸರಕಾರ, ಅಶೋಕಚಕ್ರ, ಎರಡುಹೆಜ್ಜೆ, ಶ್ರೇಯಾಂಸಭಾಗ೧ ಭಾಗ-೨, ಹದಗೆಟ್ಟ ಹಳ್ಳಿ, ಭಸ್ಮಾಸುರ, ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ, ಸಿದ್ಧಚಕ್ರ, ಋಷಭದೇವ, ಮುಂತಾದ ಸಾಮಾಜಿಕ ಕಾದಂಬರಿಗಳನ್ನು, ಐತಿಹಾಸಿಕ. ಪೌರಾಣಿಕ ಕಾದಂಬರಿಗಳನ್ನೂ ರಚಿಸಿದ್ದಾರೆ. ಪ್ರಣಯ ಸಮಾದಿ, ಅಮರಕಥೆಗಳು, ವಿಜಯಶ್ರೀ- ಈ ಮೂರು ಕಥಾ ಸಂಕಲನಗಳು ಪ್ರಕಟವಾಗಿವೆ. ಮೂಲಶಿಕ್ಷಣ ಮೌಲ್ಯಮಾಪನ, ಭಾಷಾಶಿಕ್ಷಣ, ಲೇಖನ ಕಲೆ-ಇವರ ಶೈಕ್ಷಣಿಕ ಗ್ರಂಥಗಳು. ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ಕನ್ನಡ ಸಾಹಿತ್ಯದ ಒಲವುಗಳು ವಿಮರ್ಶಾಕೃತಿಗಳು.

ಚಿನ್ಮಯಿಚಿಂತಾಮಣಿ, ಭರತೇಶವೈಭವ ಶೋಭನಸಂದಿಗಳು, ಇವರು ಸಂಪಾದಿತ ಗ್ರಂಥಗಳು. ಇದಲ್ಲದೆ ಮಹಾಪುರುಷ ಪ್ರಿಯದರ್ಶಿನಿ, ಭಾರತದಬೆಳಕು, ಖಾರವೇಲ, ಭಗವಾನ್ ಮಹಾವೀರ, ಬುದ್ದನ ಕಥೆ, ಮಹಮ್ಮದ್ ಪೈಗಂಬರ್, ಶಾಂತಿಸಾಗರರು, ತೀರ್ಥಂಕರ ಮಹಾವೀರ, ಮೊದಲಾದ ಜೀವನ ಚರಿತ್ರೆಗಳನ್ನು ಹೊರತಂದಿದ್ದಾರೆ.

ಜೈನಧರ್ಮ ಇವರ ಬೃಹತ್ ಗ್ರಂಥ. ಕರ್ನಾಟಕ, ಕನ್ನಡ, ಜೈನ ಈ ಮೂರಕ್ಕೂ ಇರುವ ಅವಿನಾಭಾವ ಸಂಭಂದವನ್ನು ತಿಳಿಸುವ ಕೃತಿ. ಸಂಸ್ಕೃತದ ಮಹಾಪುರಾಣವನ್ನು ಸಾಮಾನ್ಯರಿಗೆ ಅರ್ಥವಾಗುವ ತಿಳಿಯಾದ ಗದ್ಯದಲ್ಲಿ ಮಹಾಪುರಾಣ ಸಾರ, ಹೆಸರಿನಲ್ಲಿ ಅನುವಾದಿಸಿದ್ದಾರೆ. ಜನತಾ ರಾಮಾಯಣ,ದಲ್ಲಿ ರವಿಶೇಣನ ರಾಮಾಯಣ ಕೃತಿ ಅನುವಾದಗೊಂಡಿದೆ. ರಮಂತ ಭದ್ರಾಚಾರ್ಯರ ‘ರತ್ನಕರಂಡಕ ಶ್ರಾವಕಾಚಾರ, ವನ್ನು ಅನುವಾದಿಸಿದ್ದಾರೆ.

ಸಿದ್ದಯ್ಯ ಪುರಾಣಿಕರನ್ನು ಪರಿಚಯಿಸುವ ‘ಕಾವ್ಯಾನಂದ, ರಂ.ಶ್ರೀ.ಮುಗಳಿಯವರನ್ನು ಪ್ರಿಚಯಿಸುವ ‘ರಸಿಕರಂಗ, ಅಬಿನಂದನಾ ಗ್ರಂಥಗಳಿಗೆ ಸಂಪಾದಕರಾಗಿದ್ದಾರೆ. ರಾಜ್ಯ ಸರ್ಕಾರದದಿಂದ ‘ಆದರ್ಶ ಶಿಕ್ಷಕ, ಭಾರತಸರ್ಕಾರ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ಪಡೆದಿದ್ದಾರೆ.

ಶಾಂತಿಸೇವಾದಳ, ಚಂದ್ರಗಂಗಾಜ್ಞಾನಪೀಠ, ಸಂಸ್ಥೆಗಳನ್ನು ಸ್ಥಾಪಿಸಿ ಹೊಸ ಬರಹಗಾರರಿಗೆ ತರಬೇತಿಕೊಟ್ಟು ಅನೇಕ ಕೃತಿಗಳನ್ನು ಪ್ರಕಟಿಸಿದರು. ಹಲವು ಹೊಸ ಪೀಳಿಗೆಯ ಕೃತಿಗಳಿಗೆ ಸ್ಫೂರ್ತಿಯಾಗಿದ್ದ ಮಿರ್ಜಿ ಅಣ್ಣಾರಾಯರು ೧೯೭೫ ರಲ್ಲಿ ನಿಧನರಾದರು.