ನಮ್ಮ ರಾಜ್ಯದ ನೃತ್ಯ ಕ್ಷೇತ್ರದಲ್ಲಿ ಕೋಲಾರದ ಯಜಮಾನ್ ಕಿಟ್ಟಪ್ಪನವರು ಅಗ್ರಗಣ್ಯರು. ಇವರ ಮೊಮ್ಮಗಳಾದ ಮೀನಾಕ್ಷಿ ರಾಧಾಕೃಷ್ಣ ಅವರ ಸಂಪ್ರದಾಯವನ್ನು ಮುಂದುವರಿಸಿಕೊಂಡು, ಜೀವಂತವಾಗಿರಿಸಿ ಸಾರ್ಥಕರಾಗಿದ್ದಾರೆ. ತಮ್ಮ ಏಳನೆಯ ವಯಸ್ಸಿನಿಂದಲೇ ದೊಡ್ಡಪ್ಪ, ನಟುವನಾರ್ ಗುಂಡಪ್ಪನವರಿಂದ ನೃತ್ಯವನ್ನು ಕಲಿತ ಮೀನಾಕ್ಷಿಯವರ ರಂಗಪ್ರವೇಶ ೧೯೫೪ರಲ್ಲಿ ನಡೆಯಿತು. ನಂತರ ಪತಿ “ಭರತ ಕಲಾಮಣಿ” ಸಿ. ರಾಧಾಕೃಷ್ಣರಲ್ಲಿ ಶಿಕ್ಷಣ ಮುಂದುವರಿಸಿ ಭಾರತದಾದ್ಯಂತ ಪ್ರದರ್ಶನಗಳನ್ನಿತ್ತು ರಸಿಕರ ಮೆಚ್ಚುಗೆಗಳಿಸಿದರು. ತಮ್ಮಪತಿಯವರೊಡಗೂಡಿ ಸ್ಥಾಪಿತವಾದ ಇವರ ಚಿತ್ರರಂಜನಿ ಕಲಾಕ್ಷೇತ್ರದ ಮೂಲಕ ಅನೇಕ ಶಿಷ್ಯರಿಗೆ ನೃತ್ಯವನ್ನು ಕಲಿಸಿ ಜನಮನವನ್ನು ಒಲಿಸಿಕೊಂಡಿದ್ದಾರೆ. ಆ ಮೂಲಕ ರಚಿತವಾದ ಆಲಯ ನೃತ್ಯಗಳು ಹಾಗೂ ಶ್ರೀಕರಾದಿ ೩೫ ತಾಳಗಳ ತಿಲ್ಲಾನಗಳು ಈ ದಂಪತಿಗಳ ವಿಶೇಷ ಕೊಡುಗೆ.

ಮೀನಾಕ್ಷಿ ನುರಿತ ಗಾಯಕಿಯೂ ಹೌದು. ಇವರ ಗಾಯನ ಅನೇಕ ಸಭೆಗಳಲ್ಲಿ ಹಾಗೂ ಮದರಾಸಿನ ಆಕಾಶವಾಣಿಯ ಮೂಲಕ ಮೂಡಿಬಂದಿದೆ. ನಾಟಕ, ಚಲನಚಿತ್ರ ಕ್ಷೇತ್ರಗಳಿಗೂ ಚಿರಪರಿಚಿತರಾದ ಮೀನಾಕ್ಷಿ ಅನೇಕ ನಾಟಕಗಳಲ್ಲಿ ಪಾತ್ರ ವಹಿಸಿದ್ದಾರೆ. ತಮ್ಮ ಸೋದರತ್ತೆಯವರ ನಾಟಕ ಮಂಡಲಿ, ಎಂ.ವಿ.ಸುಬ್ಬಯ್ಯ ನಾಯ್ಡುರವರ ತಂಡ ಹಾಗೂ ವರನಟರಾಜಕುಮಾರ್ ರೊಂದಿಗೆ ಮುಖ್ಯ ಪಾತ್ರದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರದು.ಅಂತೆಯೇ ಹಲವಾರು ಚಲನಚಿತ್ರಗಳನ್ನು ತಮ್ಮ ನೃತ್ಯದಿಂದ ಶ್ರೀಮಂತಗೊಳಿಸಿದ್ದಾರೆ. ಜಿ.ವಿ. ಅಯ್ಯರ್‌ರವರ “ಹಂಸಗೀತೆ” ಯಲ್ಲಿ ಪತಿ ರಾಧಾಕೃಷ್ಣರವರ ನಿರ್ದೇಶನದಲ್ಲಿ ಇವರನ್ನು ನರ್ತಿಸಲು ಆಹ್ವಾನಿಸಿದ್ದು ಇವರಿಗೆ ಹೆಮ್ಮೆಯ ವಿಷಯ. ಈಗ ಮೂರು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ತಮ್ಮ ನೃತ್ಯ ಶಾಲೆಯ ಶಾಖೆಯನ್ನು ತೆರೆದಿದ್ದಾರೆ. ಇವರಿಗೆ ನಮ್ಮಅಕಾಡೆಮಿಯು ತನ್ನ ೧೯೯೨-೯ರ ಸಾಲಿನ ಪ್ರಶಸ್ತಿ ನೀಡಿ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.