ಶ್ರೀ ಗಿರಿಧರ್ ಆಗೆ ನಾಚೂಂಗಿ
ನಾಚ್ ನಾಚ್ ಪಿವ ರಸಿಕ್ ರಿಝೂವೂ,
ಪ್ರೇಮೀ ಜನ್ ಕೋ ಜಾಚೂಂಗೀ!
ಪ್ರೇಮ್, ಪ್ರೀತಿ ಕೆ ಬಾಂಧ್ ಘುಂಘರೂ,
ಸುರತ್‌ಕಿ ಕಛನೀ ಕಾಛೂಂಗೀ||

ಲೋಕ್ ಲಾಜ್ ಕುಲ್‌ಕಿ ಮರ್ಜಾದಾ,
ಯಾ ಮೆ ಏಕ್ ನ ರಾಖೂಂಗೀ|
ಪಿಯಾ ಕೆ ಪಲಂಗಾ ಜಾ ಪೌಡೂಂಗೀ,
ಮೀರಾ ಹರಿ ರಂಗ್ ರಾಚೂಂಗೀ||

“ಗಿರಿಧರ ಗೋಪಾಲನ ಮುಂದೆ ನರ್ತಿಸುತ್ತೇನೆ. ನರ್ತಿಸಿ ತೃಪ್ತಿ ಪಡಿಸುತ್ತೇನೆ. ಅವನನ್ನು ಪ್ರೇಮಿಸುವ ಜನರನ್ನೂ ಗೌರವಿಸುತ್ತೇನೆ. ಪ್ರೇಮ, ಪ್ರೀತಿಗಳ ಗೆಜ್ಜೆ ಕಟ್ಟಿ, ನೆನಪಿನ ಉಡುಪು ತೊಟ್ಟು ನರ್ತಿಸುತ್ತೇನೆ. ಜನರು ಲೆಕ್ಕಿಸುವ ಲೋಕದ ಮಾನ – ಮರ್ಯಾದೆ, ಮನೆತನದ ಗೌರವ- ಘನತೆಗಳು ನನಗೆ ಬೇಡ. ಪ್ರಿಯಕರನ ಪಲ್ಲಂಗದಲ್ಲಿ ಮಲಗಿ ಹರಿಯ ರಂಗಿನಲ್ಲಿ ರಂಜಿತಳಾಗುತ್ತೇನೆ.”

“ಶ್ರೀಕೃಷ್ಣನೇ ನನ್ನ ಪ್ರಿಯ! ದುಃಕದಲ್ಲಿ ಹುಚ್ಚಿಯಾಗಿದ್ದೇನೆ”.

“ಶ್ರೀಕೃಷ್ಣು ಬಂದಲ್ಲದೆನನಗೆ ಸಮಾಧಾನವಿಲ್ಲ”.

“ದಾಸಿ ಮೀರಾ, ಲಾಲ ಗಿರಿಧರ (ಮೀರಳು ದಾಸಿ, ಸ್ವಾಮಿ ಶ್ರೀಕೃಷ್ಣ)”

ಹೀಗೆ ಕೃಷ್ಣನನ್ನೇ ಸ್ಮರಿಸಿ, ಹಂಬಲಿಸಿದವಳು ಪುರಾಣದ ಕಥೆಗಳಲ್ಲಿನ ಒಬ್ಬ ಹೆಂಗಸಲ್ಲ, ಗೋಕುಲದ ಗೋಪಿಯಲ್ಲ, ಸುಮಾರು ನಾನ್ನೂರು – ನಾನ್ನೂರ ಐವತ್ತು ವರ್ಷಗಳ ಹಿಂದೆ ಬದುಕಿದ್ದ ಒಬ್ಬ ಹೆಂಗಸು, ರಾಜನ ಮಗಳು, ರಾಜನ ಸೊಸೆ ಮೀರಾಬಾಯಿ.

ದೇವರಿಗೆ ತನ್ನ ಜೀವನವನ್ನೇ ಸಮರ್ಪಿಸಿದಳು. ಬಂದ ಕಷ್ಟಗಳನ್ನೆಲ್ಲ ತಾಳ್ಮೆಯಿಂದ ಎದುರಿಸಿದಳು, ಎದ್ದಿದ್ದಾಗ, ನಿದ್ರೆ ಮಾಡುವಾಗ ಸದಾ ಶ್ರೀಕೃಷ್ಣನನ್ನೇ ಧ್ಯಾನಿಸಿದಳು ಎಂದು ಭಕ್ತಿಯ ಮೂರ್ತಿಯಾಗಿ ಭಾರತೀಯರ ಮನಸ್ಸಿನಲ್ಲಿ ನಿಂತಿದ್ದಾಳೆ ಮೀರಾ.

ಎಲ್ಲವನ್ನೂ ಅರ್ಪಿಸಿ, ಎಲ್ಲವನ್ನೂ ಮರೆತು ತಾನು ಬಯಸಿದ ಗಿರಿಧರ ಗೋಪಾಲನ್ಲಿ ಅನುರಕ್ತಳಾದ ಮೀರಾಳ ಹಾಡುಗಳನ್ನು ಇಂದೂ ಅನೇಕರು ಹಾಡುತ್ತಾರೆ. ಸಂಗೀತದಲ್ಲಿ ’ಮೀರಾ ಭಜನ್’ ಎಂಬ ವಿಶಿಷ್ಟ ಸಂಪ್ರದಾಯವೇ ಬೆಳೆದು ನಿಂತಿದೆ.

ಇನ್ನಷ್ಟು ತಿಳಿದಿದ್ದರೆ!

ರಾಜನ ಮಗಳು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಳು. ಯುವರಾಜನೊಬ್ಬನ ಕೈ ಹಿಡಿದಳು. ಚಿಕ್ಕವಯಸ್ಸಿನಲ್ಲಿಯೇ ಅವನನ್ನು ಕಳೆದುಕೊಂಡಳು. ಅವಳ ಕೃಷ್ಣಪೂಜೆಗೆ ಅವಳ ಅತ್ತೆಯ ಮನೆಯವರೇ ಅಡ್ಡಿಬಂದರು, ಸ್ವತಃ ರಾಜನೇ ವಿರೋಧಿಯಾದ. ಅವಳನ್ನು ಕೊಲೆ ಮಾಡುವ ಪ್ರಯತ್ನವೂ ನಡೆಯಿತು. ಏನೇ ಆದರೂ, ಅವಳ ಹೃದಯದಲ್ಲಿ – ಅವಳ ಬಾಯಲ್ಲಿ ಅದೇ ಮಾತುಗಳು : “ದಾಸಿ ಮೀರಾ, ಲಾಲ ಗಿರಿಧರ”.

– ಇಷ್ಟಂತೂ ಖಚಿತವಾಗಿ ತಿಳಿದಿದೆ.

ಮೀರಬಾಯಿಯ ವಿಷಯವಾಗಿ ಜನ ಎಷ್ಟೋ ಘಟನೆಗಳನ್ನು ಹೇಳುತ್ತಾರೆ. ಇವುಗಳಲ್ಲಿ ಎಷ್ಟು ನಿಜ, ಎಷ್ಟು ಕಥೆ ಎಂದು ತೀರ್ಮಾನಿಸುವುದು ತುಂಬ ಕಷ್ಟ. ಇಂತಹ ವೃತ್ತಾಂತಗಳು ಒಂದು ತಲೆಮಾರಿನವರಿಂದ ಇನ್ನೊಂದು ತಲೆಮಾರಿನವರಿಗೆ ಬರುವಾಗ ವ್ಯತ್ಯಾಸಗಳಾಗುತ್ತವೆ. ಜನರು ಹೇಳುವುದರಲ್ಲಿ ನಿಜವಿಲ್ಲ. ಎಲ್ಲ ಕಟ್ಟುಕಥೆ ಎಂದು ಬಿಡುವುದೂ ನ್ಯಾಯವಲ್ಲ. ಅವುಗಳಲ್ಲಿ ವಿವರಗಳು ತಪ್ಪಿರಬಹುದು, ಆದರೆ ವ್ಯಕ್ತಿಯ ಸ್ವಭಾವ, ಕಾರ್ಯ ಇವು ನಮಗೆ ಈ ಕಥೆಗಳಿಂದ ಸ್ಪಷ್ಟವಾಗುತ್ತವೆ.

ಮೀರಾ ಶ್ರೀಕೃಷ್ಣನ ಭಕ್ತಳು. ಆದ್ದರಿಂದ ಭಕ್ತ-ಕವಿಗಳ ಸಾಲಿನಲ್ಲಿ ಸೇರಬೇಕಾದ ಕವಿಯಿತ್ರಿ. ತನ್ನನ್ನೇ ಮರೆತು ಎಲ್ಲದರಲ್ಲೂ ತನ್ನ ಸ್ವಾಮಿಯನ್ನೇ ನೋಡುವ ಭಕ್ತ ಸಾಮಾನ್ಯವಾಗಿ ತನ್ನ ವ್ಯಕ್ತಿಗತ ಸಂಗತಿಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ಆದ್ದರಿಂದಲೇ ಅನೇಕ ಸಂತ ಕವಿಗಳ ಬಗ್ಗೆ ನಮಗೆ ಬಹು ಸಂಗತಿಗಳು ತಿಳಿಯದಾಗಿವೆ. ಮೀರಾ ಕೂಡ ತನ್ನ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿಲ್ಲ. ಅವಳ ಗೀತೆಗಳಲ್ಲಿ ತಾನು ಮೇಡತಾದವಳು. ದೂದಾಜಿ ಮನೆತನದವಳು ಎಂಬುದನ್ನು ಹೇಳಿಕೊಂಡಿದ್ದಾಳೆ. ರಾಣಾ ಕೊಟ್ಟ ಕಿರುಕುಳವನ್ನೂ ಹಾಡಿನಲ್ಲಿ ಹೊರಹಾಕಿದ್ದಾಳೆ.

ಈ ಭಕ್ತಳ ವಿಷಯ ಇನ್ನಷ್ಟು ತಿಳಿದಿದ್ದರೆ? ಎನ್ನಿಸುತ್ತದೆ.

ಎಳೆಯ ಕೈಗಳಿಗೆ ಶ್ರೀಕೃಷ್ಣನ ವಿಗ್ರಹ

ಮೀರಾಬಾಯಿ ರಾಜಸ್ಥಾನದ ಮೇಡತಾಗೆ ಸೇರಿದವಳು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆಕೆ ತನ್ನನ್ನು ’ಮೇಡತಾನಿ’ (ಮೇಡತಾದವಳು) ಎಂದೇ ಒಂದು ಗೀತೆಯಲ್ಲಿ ಕರೆದುಕೊಂಡಿದ್ದಾಳೆ. ಇದರೊಂದಿಗೆ ರಾಠೋಡ್ ರಾಜವಂಶದ ’ದೂದಾಜಿನಿ’ (ದೂದಾಜಿ ಮನೆತನಕ್ಕೆ ಸೇರಿದವಳು) ಎಂದೂ ಹೇಳಿದ್ದಾಳೆ. ರಾಜಸ್ಥಾನದಲ್ಲಿ ಅನೇಕ ಸಣ್ಣ ಪುಟ್ಟ ಪಾಳೇಪಟ್ಟುಗಳಿದ್ದವು. ಅವುಗಳಲ್ಲಿ ಮೇಡತಾ ಒಂದು. ಅಲ್ಲಿಯ ರಾಣಾ ರಾವ್ ದೂದಾಜಿ. ರಾಜಸ್ಥಾನದ ರಾಜರನ್ನು ಸಾಮಾನ್ಯವಾಗಿ ರಾಣಾ ಎಂದೇ ಕರೆಯುವ ವಾಡಿಕೆ. ಆತನಿಗೆ ನಾಲ್ಕು ಮಮದಿ ಮಕ್ಕಳು. ಹಿರಿಯ ಮಗ ಬೀರಮದೇವ. ಕೊನೆಯ ಮಗ ರತನ್ ಸಿಂಹ.

ರತನ್ ಸಿಂಹ ಪರಾಕ್ರಮಿ. ಬಹು ಕಾಲ ಆತನಿಗೆ ಮಕ್ಕಳೇ ಇರಲಿಲ್ಲ. ಕೊನೆಗೆ ದೇವರ ಕೃಪೆಯಿಂದ ಒಂದು ಹೆಣ್ಣು ಮಗು ಹುಟ್ಟಿತು. ಮೀರಾ ಎಂದು ಅದಕ್ಕೆ ಹೆಸರಿಟ್ಟರು. ಮೀರಾ ೧೪೯೮ ರಲ್ಲಿ ಹುಟ್ಟಿದಳು ಎಂದು ತೋರುತ್ತದೆ. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡಳು. ಭಾರತದಲ್ಲಿ ಆಗ ಹಲವು ಸಣ್ಣ ರಾಜ್ಯಗಳು, ಕೆಲವು ದೊಡ್ಡ ರಾಜ್ಯಗಳು. ಮೊಘಲರ ಕಾಲ ಬೇರೆ. ಅಂತೂ ಯುದ್ಧಗಳು ಆಗುತ್ತಲೇ ಇದ್ದುವು. ಮೀರಾಳ ತಂದೆ ರತನ್ ಸಿಂಹ ಬಹುಕಾಲ ಯುದ್ಧಗಳಲ್ಲಿಯೇ ಕಳೆಯಬೇಕಾಗಿದ್ದರಿಂದ ಮಗು ತಾತ ದೂದಾಜಿಯ ಅರಮನೆಯಲ್ಲಿಯೇ ಬೆಳೆಯುತ್ತಿತ್ತು.

ಮೀರಾ ಎಳೆಯವಳಾಗಿದ್ದಾಗ ಒಮ್ಮೆ ಮೆರವಣಿಗೆಯೊಂದು ಬಂತು. ಮೆರವಣಿಗೆಯಲ್ಲಿ ಇದ್ದವರು ರಾಣಾನಿಗೆ ನಮಸ್ಕರಿಸಿ ಮುಂದೆ ಹೋದರು.

ಅದೊಂದು ಮದುವೆಯ ಮೆರವಣಿಗೆ. ಮದುಮಗ ಬಹು ಚೆನ್ನಾಗಿ ಅಲಂಕಾರ ಮಾಡಿಕೊಂಡು ಕುಳಿತಿದ್ದ.

ಮೀರಾ ಮದುಮಗನನ್ನು ನೋಡಿದಳು. ಅವನು ಒಂದು ದೊಡ್ಡ ಗೊಂಬೆಯಂತೆ ಕಂಡ ಆ ಎಳೆಯ ಕಣ್ಣುಗಳಿಗೆ.

“ಅದೇನು?” ಎಂದು ತಾತನನ್ನು ಕೇಳಿದಳು.

“ಅವನು ಮದುಮಗ” ಎಂದ ತಾತ.

ಪುಟ್ಟ ಹುಡುಗಿಗೆ ’ಅವನು ಮದುಮಗ’ ಎಂದರೆ ಅರ್ಥವಾಗುತ್ತದೆಯೆ? “ನನಗೂ ಒಂದು ಅಂಥಾದ್ದು ಬೇಕು. ಆಟಕ್ಕೆ ತಂದುಕೊಡು” ಎಂದಳು ಹುಡುಕಿ.

ಮಗುವಿನ ಮಾತಿಗೆ ಏನು ಹೇಳುವುದು? ಹೊಸ ಹೊಸ ವಸ್ತುಗಳನ್ನು ನೋಡಿ ಅದು ತನಗೆ ಬೇಕು ಎಂದು ಕೇಳುವುದು ಮಕ್ಕಳ ಪ್ರಭಾವ. ತಾತ ಮರುಮಾತಾಡದೆ ಎದ್ದು ಹೋಗಿ ಶ್ರೀಕೃಷ್ಣನ ಸುಂದರ ವಿಗ್ರಹವೊಂದನ್ನು ತಂದು ಅವಳ ಕೈಯಲ್ಲಿರಿಸಿ, “ನೋಡಮ್ಮಾ, ಇವನೇ ನಿನ್ನ ಮದುಮಗ, ಜೋಪಾನವಾಗಿ ನೋಡಿಕೋ” ಎಂದ.

ತಾನು ಕೇಳಿದ್ದು ತನ್ನ ಕೈಗೆ ಸಿಕ್ಕ ನಂತರ ಇನ್ನೇನು ಬೇಕು? ಮೀರ ಆ ವಿಗ್ರಹದೊಂದಿಗೇ ಆಟವಾಡಿಕೊಂಡು ಕೃಷ್ಣನೇ ಗಂಡ ಎನ್ನುವಂತೆ ವರ್ತಿಸುತ್ತಿದಳು.

ಇದು ಒಂದು ಕಥೆ. ಇದರಲ್ಲಿ ಅಸಾಧ್ಯ ಎನ್ನುವುದೇನೂ ಇಲ್ಲ. ಆದರೆ ಇದು ನಿಜವಾಗಿ ನಡೆದೇ ನಡೆಯಿತು ಎಂದು ಹೇಳುವ ಹಾಗೂ ಇಲ್ಲ.

ಮೀರಾಳಿಗೆ ಶ್ರೀಕೃಷ್ಣ ವಿಗ್ರಹ ಬಂದ ರೀತಿಯನ್ನು ವಿವರಿಸುವ ಇನ್ನೊಂದು ಕಥೆ ಗಮನಾರ್ಹ.

ರಾವ್‌ದೂದಾಜಿಗೆ ಸಾಧು – ಸಂತರೆಂದರೆ ತುಂಬಾ ಗೌರವ. ನಿತ್ಯವೂ ಅರಮನೆಗೆ ಅತಿಥಿಗಳಾಗಿ ಯಾರಾದರೂ ಬರುತ್ತಲೇ ಇದ್ದರು. ಒಮ್ಮೆ ರೈದಾಸ್ ಎನ್ನುವ ಸನ್ಯಾಸಿ ಬಂದರು. ವೈಷ್ಣವ ಸಂಪ್ರದಾಯವನ್ನು ಉತ್ತರ ಭಾರತದಲ್ಲಿ ಹರಡಿದ ರಮಾನಂದರ ಶಿಷ್ಯರಲ್ಲಿ ರೈದಾಸ್ ಪ್ರಮುಖರು. ಅವರ ಬಳಿ ಶ್ರೀಕೃಷ್ಣನ ಸುಂದರವಾದ ವಿಗ್ರಹವೊಂದಿತ್ತು. ಅದನ್ನು ಇಷ್ಟ ದೈವವಾಗಿಸಿಕೊಂಡು ಪೂಜಿಸುತ್ತಿದ್ದರು. ಅದನ್ನು ಕಂಡ ಮೀರಾ ಆ ವಿಗ್ರಹ ತನಗೆ ಬೇಕೆಂದು ಹಟ ಮಾಡಿದಳು. ಯಾರೆಷ್ಟು ಹೇಳಿದರೂ ಕೇಳಲಿಲ್ಲ. ಒಂದೇ ಹಟ – ಆ ವಿಗ್ರಹ ತನಗೇ ಬೇಕು. ಮಗುವಿನ ಅಳು ನಿಲ್ಲಿಸಲು ಇಷ್ಟ ದೈವವನ್ನು ಕೊಡಲು ಯಾರು ಒಪ್ಪುತ್ತಾರೆ? ಅತಿಥ್ಯ ಸ್ವೀಕರಿಸಿದ ಸನ್ಯಾಸಿ ಹೊರಟುಹೋದರು.

ಮೀರಾ ತನ್ನ ಅಳು ನಿಲ್ಲಿಸಲಿಲ್ಲ. ತಿಂಡಿ – ಊಟವನ್ನು ಬಿಟ್ಟು ವಿಗ್ರಹಕ್ಕಾಗಿ ಅಳುತ್ತಿದ್ದಳು. ಮರುದಿನ ಬೆಳಗ್ಗೆ ರೈದಾಸ್ ಹಿಂದಿರುಗಿ ಬಂದು ತನ್ನ ಅಕ್ಕರೆಯ ಶ್ರೀಕೃಷ್ಣನ ವಿಗ್ರಹವನ್ನು ಮಿರಾಳ ಮೀರಾಳ ಕೈಯಲ್ಲಿರಿಸಿದರು. ಅವಳ ಆನಂದಕ್ಕೆ ಮೇರೆಯೇ ಇಲ್ಲವಾಯಿತು.

ದೂದಾಜಿ “ಇದೇನು?” ಎಂದು ಆಶ್ಚರ್ಯದಿಂದ ಕೇಳಿದ.

ಸಾಧು ಹೇಳಿದರು : “ನಿನ್ನೆ ರಾತ್ರಿ ಕನಸಿನಲ್ಲಿ ಶ್ರೀಕೃಷ್ಣ ಕಾಣಿಸಿಕೊಂಡು “ನನ್ನ ಭಕ್ತಳು ನನ್ನ ವಿಗ್ರಹಕ್ಕಾಗಿ ಅಳುತ್ತಿದ್ದಾಳೆ. ವಿಗ್ರಹ ಅವಳಿಗೆ ಕೊಡು’ ಎಂದು ಹೇಳಿದ. ಪ್ರಭುವಿನ ಆಜ್ಞೆ ಪಾಲಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ಓಡಿ ಬಂದೆ. ಮೀರಾ ಮಹಾಮಹಿಮಾವಂತಳು”. ಸನ್ಯಾಸಿ ಮೀರಾಳನ್ನು ಆಶೀರ್ವದಿಸಿ ಹೊರಟು ಹೋದರು.

ರೈದಾಸ್ ಕೃಷ್ಣನ ವಿಗ್ರಹವನ್ನು ಮೀರಾಳ ಕೈಯಲ್ಲಿರಿಸಿದರು.

ಇದು ಇನ್ನೊಂದು ಕಥೆ. ಮೀರಾಳ ಬಾಳಿನಲ್ಲಿ ತುಂಬಾ ಮಹತ್ವದ ಘಟನೆ. ಇದು ೧೫೦೧-೨ರ ಸುಮಾರಿನಲ್ಲಿ ನಡೆಯಿತು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಸನ್ಯಾಸಿ ರೈದಾಸ್ ಅಲ್ಲ, ಬೇರೆ ಯಾರೋ ಇರಬೇಕೆನ್ನುವವರೂ ಇದ್ದಾರೆ. ಮೀರಾಳೇ ಒಂದು ಗೀತೆಯಲ್ಲಿ ಹೀಗೆ ಹೇಳಿದ್ದಾಳೆ:

ಮೇರೆ ಮನ್ ಲಾಗೋ ಹರಿಜಿ ಸೂ,
ಅಬ್ ನ ರಹೊಂಗಿ ಅಟ್ಕೀ

ಗುರು ಮಿಲಿಯಾ ರೈದಾಸ್ ಜೀ,
ದೀ ನ್ಹೀ ಜ್ಞಾನ್ ಕಿ ಗುಟ್ಕೀ

ಚೋಟ್ ಲಗೀ ನಿಜನಾಮ್ ಹರಿಕಿ
ಮ್ಹಾರೇ ಹಿವ್ಡೆ ಖಟ್ಕೀ

“ನನ್ನ ಮನ ಹರಿಯಲ್ಲಿ ಲೀನವಾಗಿದೆ. ನನ್ನ ಹಾದಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಗುರುದೇವ ರೈದಾಸರೇ ನನಗೆ ತಿಳಿವಿನ ಗುಳಿಗೆ ಕೊಟ್ಟಿದ್ದಾರೆ. ಹರಿನಾಮ ನನ್ನೆದೆಯಲ್ಲಿ ಭದ್ರವಾಗಿ ಎಡೆಮಾಡಿಕೊಂಡಿದೆ”.

ಇದರಿಂದ ಮೀರಾಳೇ ತನ್ನ ಗುರು ರೈದಾಸರೆಂದು ಸ್ಪಷ್ಟಪಡಿಸಿದ್ದಾಳೆ. ಈ ಮೊದಲ ಕಥೆಯನ್ನು ನಂಬಿದರೂ ನಂಬಬಹುದು. ತೊಡಕಿರುವುದು ಕಥೆಯಲ್ಲಲ್ಲ- ರೈದಾಸರ ಹೆಸರಿನ ಉಲ್ಲೇಖದಲ್ಲಿ!

ರಮಾನಂದರ ಶಿಷ್ಯರಾದ ರೈದಾಸರು ಹುಟ್ಟಿದ್ದು ಸುಮಾರು ೧೪೦೦ ರಲ್ಲಿ. ಕಥೆ ನಿಜವಾಗಬೇಕಾದರೆ ಅವರು ನೂರಕ್ಕೂ ಹೆಚ್ಚು ವರ್ಷ ಬದುಕಿರಬೇಕು. ಇನ್ನೊಂದು ಮುಖ್ಯ ಸಂಗತಿ ಎಂದರೆ ರೈದಾಸರು ರಾಮಭಕ್ತರು. ಆದ್ದರಿಂದ ಅವರು ಕೃಷ್ಣವಿಗ್ರಹ ಇರಿಸಿಕೊಂಡಿದ್ದರು ಎಂಬುದನ್ನು ಹಲವರು ನಂಬುವುದಿಲ್ಲ. ಆದರೆ ಅವರಲ್ಲಿ ಕೃಷ್ಣನ ವಿಗ್ರಹ ಇರಲೇ ಇಲ್ಲ. ಅವರು ಕೃಷ್ಣನನ್ನು ಪೂಜಿಸುತ್ತಲೇ ಇರಲ್ಲಿಲ್ಲ ಎಂದೂ ಹೇಳುವ ಹಾಗಿಲ್ಲ. ಕೃಷ್ಣನ ಕಥೆಯಲ್ಲಿ ಬರುವ ಬೃಂದಾವನ, ಯಮುನಾತೀರ, ದ್ವಾರಕೆ ಇವೆಲ್ಲಾ ಉತ್ತರ ಭಾರತದಲ್ಲಿಯೇ ಇದ್ದುದರಿಂದ ಅಲ್ಲಿಯ ಮಂದಿಗೆ ಕೃಷ್ಣ ಎಂದರೆ ವಿಶೇಷ ಅಭಿಮಾನ ಇದ್ದುದರಲ್ಲಿ ವೈಶಿಷ್ಟ್ಯವೇನೂ ಇಲ್ಲ. ಈ ಪರಿಸ್ಥಿತಿಯಲ್ಲಿ ರೈದಾಸರ ಬಳಿ ಶ್ರೀಕೃಷ್ಣನ ವಿಗ್ರಹವಿದ್ದರೂ ಹೆಚ್ಚಲ್ಲ.

ಕೆಲವು ವಿದ್ವಾಂಸರು ಕಥೆಯಲ್ಲಿ ಉಲ್ಲೇಖವಾಗಿರುವ ಸಾಧು ರೈದಾಸರ ಶಿಷ್ಯ ಎಂದೂ ಹೇಳುತ್ತಾರೆ. ಗುರುಪೀಠವನ್ನು ಅಲಂಕರಿಸುವ ಶಿಷ್ಯನಿಗೂ ಅದೇ ಹೆಸರನ್ನು ಕೊಡುವುದು ಒಂದು ರೀತಿಯಾಗಿ ಬೆಳೆದು ಬಂದಿರುವ ಸಂಪ್ರದಾಯ. ಇದಾದರೂ ನಿಜವಾಗಿರಬಹುದು.

ಅಂತು ಎಳೆಯ ಮೀರಾಳ ಕೈಗಳಿಗೆ ಹಿರಿಯರೊಬ್ಬರಿಂದ ಶ್ರೀಕೃಷ್ಣನ ವಿಗ್ರಹ ಬಂದಿತು.

ಅವಳ ದೇಹದಲ್ಲಿ ಉಸಿರು ಇರುವವರೆಗೆ ಕೃಷ್ಣ ಅವಳ ಸಂಗಾತಿಯಾದ.

ರಾಜನ ಸೊಸೆಯಾದಳು

ಮೀರಾ ತಾತನ ಮನೆಯಲ್ಲಿ ಬೆಳೆದಳು. ಅರಮನೆಯಲ್ಲಿ ಅವಳಿಗೆ ವಿದ್ಯಾಭ್ಯಾಸ, ಸಂಗೀತ- ನೃತ್ಯ ಪಾಠ ನಡೆಯುತ್ತಿತ್ತು. ಈ ವಿದ್ಯೆಗಳಲ್ಲಿ ಪಾಂಡಿತ್ಯ ಗಳಿಸಿಕೊಂಡಳು. ಸಂಗೀತದಲ್ಲಿ ಅವಳಿಗೆ ವಿಶೇಷ ಪ್ರಾವೀಣ್ಯ ಇದ್ದಿರಬೇಕು. ಅವಳ ಗೀತೆಗಳಲ್ಲಿ ಇರುವ ಸಂಗೀತ ಮಾಧುರ್ಯ ಬೇರೆಯ ಕವಿಗಳ ಗೀತೆಗಳಲ್ಲಿ ಕಾಣುವುದು ಕಡಿಮೆ. ಈ ಮಾಧುರ್ಯವೇ ಅವಳ ಗೀತೆಗಲು ಜನಪ್ರಿಯವಾಗಲು ಒಂದು ಮುಖ್ಯ ಕಾರಣ.

ಆಗಲೇ ಶ್ರೀಕೃಷ್ಣ ಅವಳ ಮನಸ್ಸನ್ನು ತುಂಬಿಬಿಟ್ಟಿದ್ದ. ದೂದಾಜಿ ತೀರಿಕೊಂಡ ನಂತರ ಆತನ ಮೊದಲನೆಯ ಮಗ ಬೀರಮದೇವ ರಾಣಾ ಆದ. ಮೀರಾಳಿಗೆ ಮದುವೆ ಮಾಡಬೇಕೆಂದು ಯೋಚಿಸಿದ. ಚಿತ್ತೂರಿನ ರಾಣಾ ಸಂಗನ ಮಗ ಯುವರಾಜ ಭೋಜರಾಜನೊಂದಿಗೆ ವಿವಾಹ ನಿಶ್ಚಯವಾಯಿತು. ೧೫೧೬ ರಲ್ಲಿ ಮದುವೆ ಅದ್ಧೂರಿಯಿಂದ ನಡೆಯಿತು. ಆದರೆ ಮೀರಾ ಹಸೆಯ ಮೇಲೆ ಶ್ರೀಕೃಷ್ಣನ ವಿಗ್ರಹವನ್ನೇ ಇರಿಸಿಕೊಂಡಿದ್ದಳಂತೆ. ಕತ್ತಿಯ ಪಕ್ಕದಲ್ಲಿ ಕುಳಿತು ಮದುವೆಯಾಗುವ ಸಂಪ್ರದಾಯವೂ ಇದ್ದ ರಾಜಕುಲದಲ್ಲಿ ಈ ರೀತಿಯ ವಿವಾಹ ನಡೆದಿರಬಹುದು.

ಮೀರಾ ಬಾಲ್ಯದಿಂದ ಕೃಷ್ಣನ ಪೂಜೆ ಮಾಡುತ್ತಿದ್ದಳು. ತವರು ಮನೆಯಲ್ಲಿ  ಅಡ್ಡಿ ಇರಲಿಲ್ಲ. ಪ್ರೋತ್ಸಾಹವಿತ್ತು.

ಅತ್ತೆಯ ಮನೆಯಲ್ಲಿ ಮೀರಾ ಕಾಲಿಡುತ್ತಲೆ ಕೃಷ್ಣನ ಪೂಜೆಯ ಕಾರಣದಿಂದ ಅಸಮಾಧಾನ ಪ್ರಾರಂಭವಾಯಿತು.

ಮದುವೆಯಾಗಿ ಮೀರಾಬಾಯಿ ಸೇರಿದ ಮನೆತನ ಶೌರ್ಯ, ಸಾಹಸಗಳಿಗೆ ಹೆಸರಾದ ಮನೆತನ. ಬಾಳಿನ ಎಲ್ಲಾ ಕಷ್ಟಗಳನ್ನೂ ಒಂಟಿಯಾಗಿ ಎದುರಿಸಿ ಧೈರ್ಯದಿಂದ ಅನುಭವಿಸಿದರೂ ರಾಜಸ್ಥಾನದ ಮೇಲೆ ಮೊಗಲರ ಆಡಳಿತವನ್ನು ಒಪ್ಪದೆ ಅದಕ್ಕೆ ವಿರುದ್ಧವಾಗಿ ಕಾದಾಡುತ್ತಾ ರಾಜಸ್ಥಾನದ ಸ್ಥೈರ್ಯ, ಧೈರ್ಯ, ಸಾಹಸಗಳ ಪತಾಕೆ ಹಿಡಿದಿದ್ದ ರಾಣಾ ಸಂಗ ಆಕೆಯ ಮಾವ. ಆತನ ಹಿರಿಯ ಮಗ ಭೋಜರಾಜ ಅವಳ ಗಂಡ. ರಾಜಸ್ಥಾನದ ರಕ್ತ ಎಂದರೆ ಭಾರತದಹೆಮ್ಮೆ. ಆ ರಕ್ತವನ್ನು ಪಡೆದಿದ್ದ ಭೋಜರಾಜನೂ ಶೂರ. ಅನೂಚಾನವಾಗಿ ಅವರು ಶಾಕ್ತೇಯರ. ಎಂದರೆ ದುರ್ಗೆ, ಕಾಳಿ, ಚಾಮುಂಡಿ, ಪಾರ್ವತಿ ಮುಂತಾದ ಶಕ್ತಿ ದೇವತೆಗಳನ್ನು ಪೂಜಿಸುವವರು. ಅವರಿಗೆ ವಿಷ್ಣು ಪೂಜೆ ಎಂದರೆ ಅಷ್ಟು ಇಷ್ಟವಿಲ್ಲ. ಮುಖ್ಯವಾಗಿ ಮೀರಾಳ ಅತ್ತೆಗೆ ಇದು ಹಿಡಿಸುತ್ತಿರಲಿಲ್ಲ.

ದೇವರನ್ನೇ ಗಂಡ ಎಂದು ಭಾವಿಸಿ ಅದೇ ರೀತಿ ವರ್ತಿಸುವುದು ವಿಚಿತ್ರ ಎನ್ನಿಸಬಹುದು. ಭಕ್ತಿ ಪಂಥದಲ್ಲಿ ಇದೇನು ಹೊಸದಲ್ಲ. ಭಕ್ತಿಯಲ್ಲಿ ಹಲವು ವಿಧಗಳಿವೆ. ದೇವ- ಭಕ್ತರ ಮಧ್ಯೆ ಇರುವ ಸಂಬಂಧಕ್ಕೆ ತಕ್ಕಂತೆ ಅದರ ವರ್ಗೀಕರಣ ನಡೆಯುತ್ತದೆ. ದೇವರು ಪುಟ್ಟ ಮಗು ಎಂದು ಭಾವಿಸಿಕೊಂಡು ಮಕ್ಕಳನ್ನು ಅಕ್ಕರೆಯಿಂದ ನೋಡುವಂತೆ ನೋಡಿಕೊಂಡರೆ ಅದನ್ನು ವಾತ್ಸಲ್ಯಭಾ ಎನ್ನುತ್ತರೆ ಇದಕ್ಕೆ ಯಶೋಧ – ಕೃಷ್ಣರ ಸಂಬಂಧ ಉದಾಹರಣೆಯಾಗಿ ಕೊಡಬಹುದು.

ಇದಕ್ಕೆ ಬದಲಾಗಿ ದೇವರೇ ಒಡೆಯ, ಅವನ ಕೃಪೆಯಿಂದಲೇ ನಾನು ಬದುಕಿದ್ದೇನೆ, ಎಲ್ಲಕ್ಕೂ ಅವನೇ ಕಾರಣ ಎಂದು ನಂಬಿದರೆ ಭಕ್ತ – ದೇವರ ಮಧ್ಯೆ ಆಳು – ಒಡೆಯನ ಸಂಬಂಧ ಇರುತ್ತದೆ. ಇದನ್ನು ದಾಸ್ಯಭಾವ ಎನ್ನುತ್ತಾರೆ. ಇದಕ್ಕೆ ಹನುಮಂತ -ಶ್ರೀರಾಮರ ಸಂಬಂಧ ಉದಾಹರಣೆ.

ದೇವರನ್ನು ಪ್ರಾಣ ಸ್ನೇಹಿತನಂತೆ ಕಂಡಾಗ ಸಖ್ಯಭಾವ ಎನಿಸಿಕೊಳ್ಳುತ್ತದೆ. ಇದಕ್ಕೆ ಶ್ರೀಕೃಷ್ಣ -ಕುಚೇಲರ ಸಂಬಂಧವೇ ಉದಾಹರಣೆ.

ಭಕ್ತಿಯ ಶ್ರೇಷ್ಠರೂಪ ಎನಿಸಿಕೊಂಡದ್ದು ಮಾಧುರ್ಯಭಾವ. ಇದರಲ್ಲಿ ದೇವ-ಭಕ್ತ ಇವರ ಮಧ್ಯೆ ಗಂಡ-ಹೆಂಡತಿಯರ ಮಧ್ಯದ ಅನ್ಯೋನ್ಯ ಭಾವ ಇರುತ್ತದೆ. ಭಕ್ತನೇ ಹೆಂಡತಿ, ದೇವರೇ ಗಂಡ. ಹೆಂಡತಿ ತನ್ನ ಗಂಡನನ್ನು ಮಗುವಿನಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ. ಯಜಮಾನ ಎಂದು ಗೌರವಿಸಿ ತಾನು ದಾಸಿಯಂತೆ ಸೇವೆ ಮಾಡುತ್ತಾಳೆ. ಸ್ನೇಹಿತೆಯಂತೆ ಸಲುಗೆಯಿಂದ ವರ್ತಿಸುತ್ತಾಳೆ. ಭಕ್ತ ದೇವರ ವಿಷಯದಲ್ಲಿ ಹೀಗೆಯೇ ನಡೆಯುತ್ತಾನೆ.

ಮೀರಾಳಲ್ಲಿ ಈ ಮಾಧುರ್ಯಭಾವ ಚಿಕ್ಕಂದಿನಲ್ಲೇ ರೂಪಗೊಂಡಿತ್ತು. ಬೆಳೆದಂತೆ ಈ ಭಾವ ಗಾಢವಾಯಿತು. ಮದುವೆಯಲ್ಲಿ ಎಲ್ಲರ ಮುಂದೆ ಶ್ರೀಕೃಷ್ಣ ತನ್ನ ಗಂಡ ಎಂದು ತೋರಿದಳು. ಅದೇ ಅವಳ ಬಾಳಿನ ನಂಬಿಕೆಯಾಯಿತು. ತೌರಿನಲ್ಲಿ ಕೃಷ್ಣಭಕ್ತಿಗೆ ತಡೆಯೇ ಇರಲಿಲ್ಲ. ಅದು ಬೇರೂರಿದ್ದು ಅಲ್ಲಿ ತಾನೇ?

ಹಟಮಾರಿಯೇ, ಹುಚ್ಚಿಯೇ?

ಎಳೆತನದಿಂದಲೇ ತನ್ನ ಸ್ವಾಮಿ ಶ್ರೀಕೃಷ್ಣ ಎಂದು ಮೀರಾ ನಂಬಿಕೊಂಡಿದ್ದರೂ ನಿಜ ಜೀವನದಲ್ಲಿ ಕೈಹಿಡಿದ ಪತಿಯನ್ನು ಕಡೆಗಣಿಸಿದಳು ಎನ್ನಲು ಆಧಾರವಿಲ್ಲ. ಗಂಡನ ಅಕ್ಕರೆ, ಮಮತೆಗಳಿಗಾಗಿ ಪ್ರತಿಯಾಗಿ ಅವಳು ಆದರ್ಶಪತ್ನಿಯಾಗಿಯೇ ಇದ್ದಿರಬಹುದು. ಅದಕ್ಕಾಗಿ ಅವಳು ಎಲ್ಲಾ ರೀತಿಗಳಲ್ಲೂ ಪ್ರಯತ್ನಿಸಿರಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಶ್ರೀಕೃಷ್ಣನನ್ನು ಮಾತ್ರ ಮರೆಯಲು ಸಿದ್ಧಳಾಗಿರಲಿಲ್ಲ. ಅವಳಿಗೆ ಆ ಪ್ರೇಮಕ್ಕಿಂತ ಹೆಚ್ಚಾದುದು ಜಗತ್ತಿನಲ್ಲಿಯೇ ಯಾವುದೂ ಇಲ್ಲ. ಮುದ್ದಾದ ಪುಟ್ಟ ಕೃಷ್ಣಮೂರ್ತಿಯ ಮುಂದೆ ಕುಳಿತು ತನ್ನ ಇಂಪಾದ ಕಂಠದಲ್ಲಿ ಶ್ರೀಕೃಷ್ಣನ ಬಗ್ಗೆ ಹಾಡುತ್ತಾ, ನರ್ತಿಸುತ್ತಾ ಕಾಲ ಕಳೆಯುವುದು ಅವಳಿಗೆ ಪ್ರಿಯವಾದ ಕೆಲಸ. ಅದೇ ಅವಳ ಬಾಳು. ಅವಳು ಹುಟ್ಟಿದ್ದೇ ಅದಕ್ಕಾಗಿ. ಇನ್ನು ಬಿಡುವುದು ಹೇಗೆ?

ಮೀರಾಳ ಈ ವರ್ತನೆ ಮನೆಯಲ್ಲಿದ್ದ ಇತರರ ಪಾಲಿಗೆ ಉದ್ಧಟತನ ಎನಿಸಿತು. ಎಲ್ಲರಲ್ಲೂ ಮೀರಾಳ ಬಗ್ಗೆ ದ್ವೇಷಕ್ಕೆಡೆ ಮಾಡಿತು. ಮನೆಯವರೆಲ್ಲರೂ ಈ ಹಟಮಾರಿ ಹುಡುಗಿಗೆ ಬುದ್ಧಿ ಹೇಳಿದರು. ಎಲ್ಲರ ಮಾತನ್ನು ಕೇಳುತ್ತಿದ್ದಳು. ಯಾವ ಕೆಲಸ ಹೇಳಿದರೂ ಮಾಡುತ್ತಿದ್ದಳು. ಕೃಷ್ಣನನ್ನು ಮರೆಯಲು ಹೇಳಿದರೆ ಮಾತ್ರ ಸಹಿಸಳು.

ಅವಳ ಅತಿಭಾವುಕ ಪೂಜೆ ಅವರ ಪಾಲಿಗೆ ಅರ್ಥವಿಲ್ಲದ ಹುಚ್ಚಾಟ. ತಮ್ಮ ಮಾತಿಗೆ ಜಗ್ಗುವವಳಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅವಳನ್ನು ಉಪೇಕ್ಷಿಸಿದರು. ದಿನದಿನಕ್ಕೆ ಅವಳು ಸಾಧು-ಸಂತರೊಡನೆ ಹೆಚ್ಚುಕಾಲ ಶ್ರೀಕೃಷ್ಣನ ಧ್ಯಾನದಲ್ಲಿ ಕಳೆಯುತ್ತಿದ್ದಳು. ಕೊನೆಗೆ ಭೋಜರಾಜ ಅವಳಿಗಾಗಿಯೇ ಒಂದು ದೇವಾಲಯವನ್ನು ಅರಮನೆಯ ಬಳಿ ಕಟ್ಟಿಸಿದ. (ಅರಮನೆಗೆ ಬರುತ್ತಿದ್ದ ಸಾಧುಗಳ ಸಂಖ್ಯೆಯನ್ನು ಇಳಿಸಲು ಈ ದೇವಾಲಯ ಕಟ್ಟಿಸಲಾಯಿತು ಎಂದೂ ಹೇಳುತ್ತಾರೆ). ಮೀರಾಳಿಗೆ ಶ್ರೀಕೃಷ್ಣನನ್ನು ಆರಾಧಿಸಲು ಸ್ವತಂತ್ರ ಎಡೆಯೊಂದು ದೊರೆಯಿತು. ಅಲ್ಲಿ ಹಾಡುತ್ತಾ ಕುಣಿಯುತ್ತಾ ದಿನವೆಲ್ಲಾ ಕಳೆಯುತ್ತಿದ್ದಳು.

ಮೈ ವಿರಹಿನ್ ಬೈಠೀ ಜಾಗೂ,
ಜಾಗತ್ ಸಬ್ ಸೋವೆ ರೀ ಆಲೀ ||

ವಿರಹಿನ್ ಬೈಠೀ ರಂಗ್ ಮಹಲ್ ಮೇ,
ಮೊತಿಯನ್ ಕಿ ಲಡ್ ಪೋವೇ ||

ಏಕ್ ವಿರಹಿನ್ ಹಮ್ ಐಸೇ ದೇಖೀ,
ಅಂಸುವನ್ ಮಾಲಾ ಪೊವೇ ||

ತಾರಾ ಗಿನ್ ಗಿನ್ ರೈನ್ ವಿಹಾನೀ,
ಸುಖ್ ಕಿ ಘಡೀ ಕಬ್ ಆವೇ ||

ಮೀರಾ ಕೆ ಪ್ರಭು ಗಿರಿಧರ್ ನಾಗರ್
ಮಿಲ್‌ಕೆ ಬಿಛಡ್ ನ ಜಾವೇ||

ಜಗತ್ತನ್ನೇ ಮರೆತು ಲಾಲ ಗಿರಿಧರನನ್ನು ಸ್ಮರಿಸುತ್ತ ನರ್ತಿಸುತ್ತಿದ್ದಳು ಮೀರಾ.

“ಪ್ರಪಂಚವೆಲ್ಲಾ ನಿದ್ರೆಯಲ್ಲಿದ್ದರೆ ನನ್ನ ಸ್ವಾಮಿಯಿಂದ ದೂರಳಾಗಿರುವ ನಾನು ಎಚ್ಚರವಾಗಿಯೇ ಇದ್ದೇನೆ. ಇದೇ ರೀತಿ ಪ್ರೇಮಿಯಿಂದ ದೂರಳಾಗಿರುವ ಒಬ್ಬಳು ಸುಖ-ಸಂಪತ್ತುಗಳಿಂದ ತುಂಬಿರುವ ಅರಮನೆಯಲ್ಲಿ ಕುಳಿತು ಮುತ್ತಿನ ಮಾಲೆ ಕಟ್ಟುತ್ತಿರುವುದನ್ನೂ ನಾನು ಬಲ್ಲೆ. ರಾತ್ರಿಯೆಲ್ಲಾ ನಕ್ಷತ್ರಗಳನ್ನು ಎಣಿಸುತ್ತಾ ಕಳೆಯುತ್ತಿರುವೆ. ಸುಖದ ಘಳಿಗೆ ನನ್ನ ಪಾಲಿಗೆ ಬರುವುದು ಯಾವಾಗ? ಮೀರಾಳ ಪ್ರಭು ’ಗಿರಿಧರ ನಾಗರ’ ಬಂದ ನಂತರವೇ ನನ್ನ ಈ ದುಃಖಕ್ಕೆ ಕೊನೆ”.

ಅವಳ ಹಾಡು, ಕುಣಿತ, ವರ್ತನೆ, ಭಾವಾವೇಶ ಇವೆಲ್ಲವನ್ನೂ ಕಂಡ ಅವಳ ಮನೆಯವರು ಅವಳು ಹುಚ್ಚಿ ಎಂದು ತೀರ್ಮಾನಿಸಿದ್ದರು. ಆಧರೆ ಅವಳನ್ನು ಕಂಡ ಸಾಧುಗಳು ಆಕೆಯನ್ನು ಮಹಾಭಕ್ತಳು ಎಂದು ಕೈ ಮುಗಿಯುತ್ತಿದ್ದರು. ಅವಳನ್ನು ನೋಡಿ ಪುನೀತರಾಗಬಯಸಿ ಬರುತ್ತಿದ್ದವರ ಸಂಖ್ಯೆ ಹೆಚ್ಚಾಯಿತು.

ಚಿತ್ತೂರಿನ ಪ್ರಸಿದ್ಧ ರಾಜವಂಶ. ಅದರ ಘನತೆ ಏನು, ಗಾಂಭೀರ್ಯವೇನು?

ಯುವರಾಜನ ಹೆಂಡತಿ ಬಂದ ಸಾಧುಸಂತರ ಜೊತೆಗೆ ಸೇರಿಕೊಂಡು ಹಾಡುತ್ತಾಳೆ, ಕುಣಿಯುತ್ತಾಳೆ.

ರಾಜಮನೆತನಕ್ಕೆ ಎಷ್ಟು ಅವಮಾನ!

ಅಲ್ಲದೆ ಅವಳು ಕಾಳೀಮಾತೆಯನ್ನು ಪೂಜಿಸದೆ ಅತ್ತೆ ಮನೆಗೆ ಅಪಮಾನ ಮಾಡಿದ್ದಾಳೆ.

ಹೀಗೆನ್ನಿಸಿತು ಮೀರಾಬಾಯಿಯ ಅತ್ತೆಯ ಮನೆಯಲ್ಲಿ ಬಹುಮಂದಿಗೆ. ಅವರಿಗೆಲ್ಲ ಮೀರಾಬಾಯಿ ಎಂದರೆ ಕೋಪ, ತಿರಸ್ಕಾರ. ಆದರೆ ಭೋಜರಾಜನಿಗೆ ಅವಳಲ್ಲಿ ತುಂಬ ಪ್ರೀತಿ. ಆದುದರಿಂದ ಯಾರಿಗೂ ಗಟ್ಟಿಯಾಗಿ ಆಕ್ಷೇಪಣೆ ಮಾಡುವ ಧೈರ್ಯವಿರಲಿಲ್ಲ.

ಆದರೆ ೧೫೨೧ ರಲ್ಲಿ ಭೋಜರಾಜ ತೀರಿಕೊಂಡ! ೧೫೧೮ ರಲ್ಲಿ ಯುದ್ಧದಲ್ಲಿ ಅವನಿಗೆ ಗಾಯವಾಗಿತ್ತು. ಅದೇ ಅವನಿಗೆ ಮೃತ್ಯುವಾಯಿತು. ಮದುವೆಯಾದ ಐದೇ ವರ್ಷಕ್ಕೆ ಮೀರಾಬಾಯಿ ವಿಧವೆಯಾದಳು. ಆಗ ಅವಳಿಗೆ ಇಪ್ಪತ್ತಮೂರು ವರ್ಷ.

ಮೀರಾಳಿಗೆ ಈ ಜಗತ್ತಿನೊಂದಿಗೆ ಇದ್ದ ಒಂದೇ ಕೊಂಡಿಯೂ ಕಳಚಿತು. ಅವಳನ್ನು ವಿಚಾರಿಸುವುವರೇ ಇರಲಿಲ್ಲ. ಮೊದಲೇ ಅವಳು ಹುಚ್ಚಿ ಎಂಬ ತಿರಸ್ಕಾರ. ಮನೆಯವರ ಈ ಔದಾಸೀನ್ಯ ಅವಳ ಭಕ್ತಿಯನ್ನು ಮತ್ತು ದಟ್ಟಗೊಳಿಸಿತು. ತನ್ನ ದೈವ ಶ್ರೀಕೃಷ್ಣನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿ ಹಿಡಿದಳು.

ರತ್ನಹಾರದಿಂದ ದುಃಖ

ಇದುವರೆವಿಗೂ ಒಳಗೊಳಗೇ ವಿರೋಧಿಸುತ್ತಿದ್ದವರು ಈಗ ಎಲ್ಲರ ಮುಂದೂ ಮೀರಾಳನ್ನು ಆಡಿಕೊಳ್ಳತೊಡಗಿದರು. ಮನೆತನದ ಮರ್ಯಾದೆ ಮಣ್ಣುಪಾಲಾಗುತ್ತಿದೆ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಜನರಲ್ಲಿ ಮಾತ್ರ ’ಮಹಾಭಕ್ತಳು’, ’ಕಲಿಯುಗದ ರಾಧೆ’ ಎಂದು ಪ್ರಸಿದ್ಧಳಾಗಿದ್ದಳು. ಅವಳನ್ನು ದರ್ಶೊಸಿ, ಅವಳ ಅಡಿ ಮುಟ್ಟಿವುದೇ ಮಹಾಭಾಗ್ಯ ಎಂದು ಅನೇಕ ಭಕ್ತರು ಅವಳನ್ನು ನೋಡಲು ಬರುತ್ತಿದ್ದರು. ಅವಳ ಖ್ಯಾತಿಯನ್ನು ವರ್ಣಿಸುವ ಈ ಕಥೆ ಕೇಳಿ:

ಮೊಘಲರ ಪ್ರಸಿದ್ಧ ಚಕ್ರವರ್ತಿ ಅಕ್ಬರ್. ಅವನ ಆಸ್ಥಾನದ ಪ್ರಸಿದ್ಧ ಸಂಗೀತಗಾರ ತಾನ್‌ಸೇನ್. ತಾನ್‌ಸೇನ್ ಮೀರಾಳನ್ನು ಕಂಡಿದ್ದ. ಮೀರಾಳ ಖ್ಯಾತಿ ಅಕ್ಬರನವರೆಗೆ ಹಬ್ಬಿತು. “ಅವಳಿಗೆ ಕೃಷ್ಣನು ಒಲಿದಿದ್ದಾನೆ. ಅವಳು ಭಕ್ತಿಯಿಂದ ಹಾಡುವಾಗ ಕೃಷ್ಣನು ಪ್ರತ್ಯಕ್ಷನಾಗುತ್ತಾನೆ” – ಇಂತಹ ಮಾತುಗಳು ಅಕ್ಬರನ ಕಿವಿಗೆ ಬಿದ್ದವು. ಅವಳನ್ನು ನೋಡಬೇಕೆಂದು ಅವನಿಗೂ ಆಸೆಯಾಯಿತು. ತಾನ್‌ಸೇನ್, ಅಕ್ಬರ್ ಇಬ್ಬರೂ ಮೀರಾ ಇದ್ದ ಸ್ಥಳಕ್ಕೆ ಹೋಗಲು ತೀರ್ಮಾನಿಸಿದರು.

ಆದರೆ ರಾಜಸ್ಥಾನದಲ್ಲಿದ್ದ ರಜಪೂತ ಮಹಿಳೆಯನ್ನು ಮೊಘಲರ ಚಕ್ರವರ್ತಿ ನೋಡುವುದು ಸುಲಭದ ಸಂಗತಿಯಾಗಿರಲಿಲ್ಲ. ನಿಜರೂಪದಲ್ಲಿ ಹೋದರೆ ವಿಪತ್ತಿನ ಹೆದರಿಕೆ. ರಜಪೂತರಲ್ಲಿ ಬಹುಮಂದಿಗೆ ಮುಸ್ಲಿಮರೆಂದರೆ ಆಗುತ್ತಿರಲಿಲ್ಲ. ಅಕ್ಬರ್ ಅವರಲ್ಲಿ ಅನೇಕರೊಂದಿಗೆ ಸ್ನೇಹ ಬೆಳೆಸಿದ್ದರೂ ಶತ್ರುಗಳೂ ಹೆಚ್ಚಾಗಿದ್ದರು. ತಾನ್‌ಸೇನನ ಉಪಾಯದಂತೆ ಸನ್ಯಾಸಿಗಳಾಗಿ ವೇಷ ಬದಲಿಸಿಕೊಂಡು ಚಿತ್ತೂರನ್ನು ಪ್ರವೇಶಿಸಿದರು. ಸನ್ಯಾಸಿಗೆ ಹಿಂದೂಗಳಿಂದ ಯಾವ ಆಪತ್ತೂ ಒದಗದು. ಇದಕ್ಕೂ ಮಿಗಿಲಾಗಿ ಮೀರಾಳನ್ನು ಈ ವೇಷದಿಂದ ನೋಡುವುದು ತುಂಬಾ ಸುಲಭ.

ಸನ್ಯಾಸಿ ವೇಷದಲ್ಲಿ ಅಕ್ಬರ್, ತಾನ್‌ಸೇನ್ ಇಬ್ಬರೂ ಮೀರಾಳ ಮಂದಿರಕ್ಕೆ ಬಂದರು.

ಮೀರಾ ಕೃಷ್ಣನ ಮುಂದೆ ಹಾಡುತ್ತ ನರ್ತಿಸುತ್ತಿದ್ದಳು. ಮುಖ ದೀಪದಂತೆ ಬೆಳಗುತ್ತಿತ್ತು. ಅವಳ ಕಂಠ ಯಾರನ್ನಾದರೂ ಬೆರಗುಗೊಳಿಸಿ ಪುಳಕಿತಗೊಳಿಸುವಷ್ಟು ಇಂಪು. ಜಗತ್ತನ್ನೇ ಮರೆತು ಲಾಲ ಗಿರಿಧರನನ್ನು ಸ್ಮರಿಸುತ್ತ ನರ್ತಿಸುತ್ತಿದ್ದ ಸಂತಳನ್ನು ಕಂಡು ಮೊಘಲ್ ಸಾಮ್ರಾಟನ ಮನಸ್ಸು ಅಚ್ಚರಿಯಿಂದ, ಭಕ್ತಿಯಿಂದ ತುಂಬಿಹೋಯಿತು. ಇಂತಹ ಸಂತಳನ್ನು ವೇಷ ಮರೆಸಿಕೊಂಡು ಸನ್ಯಾಸಿಗಳೆಂದು ಸುಳ್ಳು ಹೇಳಿ ನೋಡುವುದೇ ಒಂದು ಅವನ ಮನಸ್ಸೆ ಅವನಿಗೆ ಛೀಮಾರಿ ಹಾಕಿತು.

“ತಾನ್‌ಸೇನ್, ನಾವು ಯಾರು ಎಂದು ನಿಜ ಹೇಳಿ ಆ ಮಹಾಭಕ್ತಳಲ್ಲಿ ಕ್ಷಮಾಪಣೆ ಕೇಳಿಬಿಡೋಣ”, ಅಕ್ಬರ್ ಎಂದ.

“ಸಾಮ್ರಾಟರೆ, ನಾವು ಸನ್ಯಾಸಿಗಳಲ್ಲ ಎಂದು ಇಲ್ಲಿನ ಜನರಿಗೆ ತಿಳಿದರೆ ಏನಾಗುತ್ತದೆ ಯೋಚಿಸಿ. ಮೊಘಲ್ ಸಾಮ್ರಾಟರು ನೀವು ರಜಪೂತ ಸ್ತ್ರೀಯನ್ನು ನೋಡಲು ಇಲ್ಲಿಗೆ ಬಂದಿರಿ ಎಂದು ಗೊತ್ತಾದರೆ ನಮ್ಮಿಬ್ಬರ ತಲೆಗಳು ನಮ್ಮ ಕುತ್ತಿಗೆಗಳ ಮೇಲೆ ಉಳಿಯುವುದಿಲ್ಲ”, ತಾನ್ ಸೇನ್ ಎಚ್ಚರಿಸಿದ.

ಅಕ್ಬರ್ ಭಕ್ತಿಯಿಂದ ಮೀರಾಬಾಯಿಯ ಗಾನ, ನೃತ್ಯಗಳಲ್ಲಿ ಮೈಮರೆತ.

ಹಾಡು ನಿಂತಿತು, ನೃತ್ಯ ನಿಂತಿತು. ಶ್ರೀಕೃಷ್ಣನಿಗೆ ನಮಸ್ಕರಿಸಿ ಕುಳಿತಳು ಮೀರಾಬಾಯಿ.

ಅಕ್ಬರನು ಅವಳ ಬಳಿಗೆ ಬಂದು ಅವಳ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಶ್ರೇಷ್ಠವಾದ ರತ್ನಹಾರ ಒಂದನ್ನು ಹೊರಕ್ಕೆ ತೆಗೆದು, ಮೀರಾಬಾಯಿಯ ಪಾದದ ಬಳಿ ಇಡಲು ಹೋದ.

“ನಾನು ಇಂತಹ ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ, ಬೇಡ” ಎಂದಳು ಮೀರಾಬಾಯಿ.

“ತಾಯಿ, ಇದನ್ನು ಕೃಷ್ಣಾರ್ಪಣ ಎಂದು ತಂದಿದ್ದೇನೆ. ಗಿರಿಧರನಿಗೆ ಎಂದು ಒಪ್ಪಿಸಿಕೊಳ್ಳಿ. ಕೃಷ್ಣನಿಗೆ ಎಂದು ತಂದದ್ದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲಾರೆ, ಬೇಡ ಎನ್ನಬೇಡಿ” ಎಂದ ಸಾಮ್ರಾಟ.

“ಸರಿ, ಕೃಷ್ಣಾರ್ಪಿತ” ಎಂದು ರತ್ನಹಾರವನ್ನು ಶ್ರೀಕೃಷ್ಣನ ಮಂಗಳ ವಿಗ್ರಹದ ಕೊರಳಲ್ಲಿ ಮೀರಾಬಾಯಿ ಹಾಕಿದಳು

ಕಣ್ಣು ಕೋರೈಸುವ ಹಾರ. ಬಂದವಾರ ಮನಸ್ಸನ್ನು ಸೆಳೆಯುತ್ತಿತ್ತು. ಎಲ್ಲರದೂ ಒಂದೇ ಪ್ರಶ್ನೆ: “ಇಷ್ಟೊಂದು ಬೆಲೆಯ ಕಾಣಿಕೆಯನ್ನು ಕೊಟ್ಟ ಭಕ್ತ ಯಾರು?”

ಇದು ಅಕ್ಬರನಿಗೆ ಸೇರಿದ ರತ್ನಹಾರ ಎಂದು ಯಾರೋ ಗುರುತಿಸಿದರು.

ಇಲ್ಲಿಗೆ ಹೇಗೆ ಬಂತು?

ಕ್ರಮೇಣ ಸುದ್ದಿ ಹರಡಿತು. ಮೊಘಲ ಸಾಮ್ರಾಟ ಮೀರಾಬಾಯಿಯ ಮಂದಿರಕ್ಕೆ ಬಂದಿದ್ದ. ಅವಳ ಪಾದಮುಟ್ಟಿ ನಮಸ್ಕರಿಸಿದ, ರತ್ನಹಾರವನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದ.

ಆಗ ರಾಣನಾಗಿದ್ದವನು ಎರಡನೆಯ ರತನ್‌ಸಿಂಗ್. ಅವನ ಕಿವಿಗೆ ಸುದ್ದಿ ತಲುಪಿತು. ಕೇಳಿ ಅವನು ಕೆಂಡವಾದ. ಇದು ಅವನಿಗೆ ಮನೆತನದ ಗೌರವದ ಪ್ರಶ್ನೆಯಾಯಿತು. “ಮೊಘಲನೊಬ್ಬ ರಜಪೂತ ಭೂಮಿಯನ್ನು ತುಳಿದು, ರಜಪೂತ ಸ್ತ್ರೀಯನ್ನು ಮುಟ್ಟಿ ಜೀವಂತವಾಗಿ ಹಿಂತಿರುಗಿದ. ಎಂದರೆ ಮನೆತನದ ಗೌರವ ಎಲ್ಲಿ ಉಳಿಯಿತು?” ಜೋಗಿನಿಯಂತೆ ವರ್ತಿಸುತ್ತಿರುವ ಮೀರಾಳೇ ಇದಕ್ಕೆ ಕಾರಣ ಎಂದು ಅವಳಿಗೆ ಚಿತ್ರಹಿಂಸೆ ಕೊಡಲು ಪ್ರಾರಂಭಿಸಿದ.

ಇದು ಕಥೆ. ಇತಿಹಾಸದ ದೃಷ್ಟಿಯಿಂದ ಕೆಲವು ವಿವರಗಳ ತಪ್ಪಾಗುತ್ತವೆ. ತಾನ್‌ಸೇನ್ ಅಕ್ಬರನ ಆಸ್ಥಾನ ಸೇರಿದ್ದು ೧೫೬೩ ರಲ್ಲಿ ಎಂದರೆ ಮೀರಾ ಸತ್ತ ೧೫ ವರ್ಷಗಳ ನಂತರ! ಒಂದು ವೇಳೆ ಈ ಕಥೆ ನಡೆದಿದ್ದರೆ ಆಗ್ಗೆ ಆಕ್ಬರ್ ಚಕ್ರವರ್ತಿಯಾಗಿರಲಾರ. ಮೀರಾ ದ್ವಾರಕೆಯಲ್ಲಿ ೧೫೪೭ ರಲ್ಲಿ ಕೊನೆಯುಸಿರೆಳೆದಳು ಎನ್ನುತ್ತಾರೆ. ೧೫೪೭ ರಲ್ಲಿ ಅಕ್ಬರನಿಗೆ ಐದು ವರ್ಷ. ಆದರೆ ೧೫೪೭ ರಲ್ಲಿ ಮೀರಾಬಾಯಿ ಯುವರಾಜನಾಗಿದ್ದಾಗಲೇ ಮೀರಾಬಾಯಿಯನ್ನು ಕಂಡ ಎಂಬ ವಿವರಣೆಯೂ ಇದೆ. ಅಂತೂ ಇದು ಮೀರಾಬಾಯಿಯ ಬಗ್ಗೆ ಬಹು ಜನಪ್ರಿಯವಾದ ಕಥೆ. ಇದರ ವಿವರಗಳು ಹೇಗೇ ಇರಲಿ, ಮುಂದಿನ ಚಿತ್ರಹಿಂಸೆಯಂತೂ ನಿಜವೇ ಇರಬೇಕು.

ಕೋಪಗೊಂಡ ರಾಣನೂ ಅವನ ಕಡೆಯವರೂ ಅವಳನ್ನು ಮುಗಿಸಿಬಿಡಲು ಹತ್ತು ರೀತಿ ಪ್ರಯತ್ನಿಸಿದರು. ಮೀರಾ ಪ್ರತಿಭಟಿಸಲಿಲ್ಲ.  ಎಲ್ಲವನ್ನೂ ಸ್ವೀಕರಿಸಿದಳು. ಅವಳಿಗೆ ಯಾವ ಅಪಾಯವೂ ಆಗಲಿಲ್ಲ.

ಅದಕ್ಕೆ ಅವಳದೇ ಗೀತೆ ಕೇಳಿ:

ಸಾಂಪ್ ಪಿಟಾರೋ ರಾಣಾ ಭೇಜ್ಯೋ
ಮೀರಾ ಹಾಥ್ ದಿಯೋ ಜಾಯ್‌ ||

ನ್ಹಾಯ್ ಧೋಯ್ ಜಬ್ ದೇಖನ್ ಲಾಗಿ
ಸಾಲೀಗರಾಮ್ ಗಯೀ ಪಾಯ್||

ಜಹರ್ ಕಾ ಪ್ಯಾಲಾ ರಾಣಾ ಭೇಜ್ಯೋ
ಅಮರಿತ್ ದಿಯೋ ವಣಾಯ್‌ ||

ನ್ಹಾಯ್‌ದೋಯ್ ಜಾಲ್ ಪೀವಣ್ ಲಾಗೀ
ಅಮರ್ ಹೋಗಯೀ ಜಾಉಯ್ ||

ಸೂಲ್ ಸೇಜ್ ರಾಣಾನೇ ಭೇಜೀ
ದೀಜೋ ಮೀರಾ ಸುವಾಯ್ ||

ಸಾಂಝ್ ಭಯೀ ಮೀರಾ ಸೋವಣ್ ಲಾಗೀ
ಮಾನೋ ಫೂಲ್ ಬಿಛಾಯ್‌ ||

ಮೀರಾ ಕೆ ಪ್ರಭು ಸದಾ ಸಹಾಯೀ
ರಾಖೋ ವಿಧಾನ್ ಹಟಾಯ್‌ ||

ಭಕ್ತಿ ಭಾವ್ ಮೆ ಮಸ್ತ್ ಡೋಲ್ತೀ
ಗಿರಿಧರ್ ಪೈ ಬಲಿ ಜಾಯ್ ||

“ಹೂವಿನ ಬುಟ್ಟಿಯಲ್ಲಿ ಹಾವನ್ನು ಅಡಗಿಸಿ ಮೀರಾಳ ಬಳಿಗೆ ರಾಣಾ ಕಳುಹಿಸಿದ. ಪೂಜಿಸುತ್ತಿದ್ದ ಮೀರಾ ಬುಟ್ಟಿಗೆ ಕೈಹಾಕಿದಳು. ಹಾವು ಸಾಲಿಗ್ರಾಮವಾಗಿ ಸಿಕ್ಕಿತು. (ಗಂಡಕೀ ನದಿಯಲ್ಲಿ ದೊರೆಯುವ ಉರುಟಾಕಾರದ ಕಲ್ಲುಗಳನ್ನು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸುವ ವಾಡಿಕೆ ವೈಷ್ಣವರಲ್ಲಿದೆ. ಅದನ್ನು ಸಾಲಿಗ್ರಾಮ ಎನ್ನುತ್ತಾರೆ.)

“ಕೊಲ್ಲಲೇಬೇಕೆಂದು ಪಣ ತೊಟ್ಟವನಂತೆ ರಾಣಾ ವಿಷದ ಬಟ್ಟಲನ್ನು ಕಳುಹಿಸಿದ. ಶ್ರೀಕೃಷ್ಣನನ್ನು ನೆನೆದು ಅದನ್ನು ಕುಡಿದಳು. ವಿಷ ಅಮೃತವಾಯಿತು”.

“ಮೊನಚಾದ ಮೊಳೆಗಳಿಂದ ಹಾಸಿಗೆ ಸಿದ್ಧಪಡಿಸಿದ ರಾಣಾ. ಕತ್ತಲಾಗುತ್ತಲೇ ಮೀರಾ ಅದರಲ್ಲಿ ಮಲಗಿದಳು. ಶೂಲಗಳಂತೆ ಇರಿಯಬೇಕಾಗಿದ್ದ ಮೊಳೆಗಳು ಹೂವುಗಳಾದವು. ಮಿರಾಳ ಸ್ವಾಮಿಯೇ ಆಪತ್ತಿನಿಂದ ಅವಳನ್ನು ಪಾರು ಮಾಡುತ್ತಾನೆ. ಅಪಾರ ಮಮತೆಯಲ್ಲಿ ಮತ್ತಳಾಗಿ ತನ್ನನ್ನೇ ಅರ್ಪಿಸಿಕೊಂಡು ತನ್ನ ಸ್ವಾಮಿ ಗಿರಿಧರನನ್ನು ಅರಸುತ್ತಾ ಸುತ್ತಾಡುತ್ತಿದ್ದಾಳೆ”.

 

ಮೀರಾ ಶ್ರೀಕೃಷ್ಣನನ್ನು ನೆನೆದು ವಿಷವನ್ನು ಕುಡಿದಳು.

ರಾಣಾನ ಚಿತ್ರಹಿಂಸೆಯ ವಿವರಗಳು ಹಲವು ಗೀತೆಗಳಲ್ಲಿ ಬರುವುದರಿಂದ ಇವು ಸತ್ಯವೇ ಆಗಿರಬೇಕು. ಮೀರಾ ಇಷ್ಟು ಅಪಾಯಗಳಿಂದ ಪಾರಾದದ್ದು ಹೇಗೆ? ತನ್ನ ಸ್ವಾಮಿಯ ಕೃಪೆ ಎಂದು ಮೀರಾ ನಂಬಿದಳು. ಭಕ್ತರೂ ಅದೇ ವಿವರಣೆಯನ್ನು ನಂಬುತ್ತಾರೆ.

ಹೆಂಗಸನ್ನು ಕೊಂದರೆ ಪಾಪ ಬರುತ್ತದೆ ಎಂಬ ಭಯವೋ ಅಥವಾ ಜನಪ್ರಿಯಳಾಗಿರುವ ಮೀರಾಳ ಕೊಲೆ ಜನರನ್ನು ರೊಚ್ಚಿಗೆಬ್ಬಿಸಬಹುದೆಂಬ ಭಯವೋ ಅಂತೂ ರಾಣಾ ಮಾತ್ರ ಬಹಿರಂಗವಾಗಿ ಅವಳನ್ನು ಕೊಲ್ಲಲು ಪ್ರಯತ್ನಿಸಲಿಲ್ಲ. ರಹಸ್ಯ ಯೋಜನೆಗಳು ಸೋತಾಗ, ಹಿಂಸೆಗೂ ಜಗ್ಗದೆ ಅವಳು ನಿಂತಾಗ, “ಕುಲಗೇಡಿ ನೀರಿನಲ್ಲಾದರೂ ಮುಳುಗಿ ಸಾಯಬಾರದೇ?” ಎಂದು ಬೈಯ್ದ.

ಮೇರೇ ತೋ ಗಿರಿಧರ ಗೋಪಾಲ್ ದೂಸರೋ ಕೋಯೀ’

ಮೀರಳಿಗೂ ಈ ಮಾತು ತಿಳಿಯಿತು, ಸರಿ ಎನಿಸಿತು. ನೀರಿನಲ್ಲಿ ಮುಳುಗಿದರೆ ತನ್ನ ಅತ್ತೆಯ ಮನೆಯವರಿಗೂ ಬೇಸರ ಮುಗಿಯುತ್ತದೆ, ತಾನೂ ತನ್ನ ಒಡೆಯ ಶ್ರೀಕೃಷ್ಣನನ್ನು ಸೇರಬಹುದು, ಇದೊಂದೇ ಸುಲಭ ಮಾರ್ಗ ಎಂದು ನದಿಯ ಕಡೆ ನಡೆದಳು.

ನದಿಯಂಚಿಗೆ ನಿಂತು ಮೀರಾಬಾಯಿ ಲಾಲ ಗಿರಿಧರನನ್ನು, ಶ್ರೀಕೃಷ್ಣನನ್ನು ನೆನೆದಳು. “ಸ್ವಾಮಿ, ನನ್ನನ್ನು ನಿನ್ನಲ್ಲಿ ಸೇರಿಸಿಕೊ” ಎಂದು ಬೇಡಿ ನೀರಿಗೆ ಹಾರಲು ಸಿದ್ಧಳಾದಳು.

ಯಾರೋ ಮಾತನಾಡಿದಂತಾಯಿತು. “ಆತ್ಮಹತ್ಯೆ ಬಹು ಪಾಪ. ಬೇಡ, ನೀರಿಗೆ ಬೀಳಬೇಡ. ಬೃಂದಾವನಕ್ಕೆ ಹೋಗು” ಎಂದು ಹೇಳಿದ ಹಾಗಾಯಿತು.

ಕೃಷ್ಣ ಆಡಿ ಬೆಳೆದ ಸ್ಥಳ ಬೃಂದಾವನ. ಬೃಂದಾವನಕ್ಕೆ ಸನ್ಯಾಸಿನಿ ಮೀರಾ ಹೊರಟಳು. ಅಲ್ಲಿ ರಾಜಕುಲದ ಮರ್ಯಾದೆಯ ಕಾಟವಿಲ್ಲ. ಅರಮನೆಯ ಕಟ್ಟಳೆ ಇಲ್ಲ, ರಾಣಾನ ಭಯವಿಲ್ಲ. ಸ್ವತಂತ್ರಳಾಗಿ ಮೀರಾ ಕೃಷ್ಣನ ಮುಂದೆ ನರ್ತಿಸುತ್ತಾ ಹಾಡುತ್ತಿದ್ದಳು:

ಮೇರೇ ತೋ ಗಿರಿಧರ ಗೋಪಾಲ್
ದೂಸರೋ ನ ಕೋಯೀ ||….

“ನನ್ನ ಪಾಲಿಗೆ ಗಿರಿಧರ ಗೋಪಾಲನ ವಿನಃ ಯಾರೂ ಇಲ್ಲ”.

ಬೃಂದಾವನದಲ್ಲಿ ಶ್ರೀಕೃಷ್ಣನೊಬ್ಬನೇ ಗಂಡು’

ಬೃಂದಾವನದಲ್ಲಿ ಮೀರಾ ಇದ್ದ ಕಾಲದಲ್ಲಿ ನಡೆಯಿತೆಂದು ಹೇಳುವ ಒಂದು ಕಥೆ ಸುಂದರವಾಗಿದೆ. ಬೃಂದಾವನದಲ್ಲಿ ಅನೇಕ ಸಂತರಿದ್ದರು. ಅವರಲ್ಲಿ ಜೀವಗೋಸ್ವಾಮಿ ಹೆಸರಾದವರು. ತುಂಬಾ  ಕಟ್ಟುನಿಟ್ಟಾಗಿ ಬಾಳು ಸಾಗಿಸುತ್ತಿದ್ದವರು. ಹೆಂಗಸರ ನರಳೂ ಸೋಂಕಬಾರದು. ಇನ್ನು ಅವರನ್ನು ಹೆಂಗಸರು ನೋಡುವುದು ಹೇಗೆ? ಚೈತನ್ಯದೇವನ ಪಂಥಕ್ಕೆ ಸೇರಿ ಭಕ್ತಿಮಾರ್ಗದ ಪ್ರಚಾರ ನಡೆಸುತ್ತಿದ್ದರು. ಸಾಧು ಸಂತರೆಂದರೆ ತುಂಬಾ ಗೌರವವುಳ್ಳ ಮೀರಾ ಅವರನ್ನು ದರ್ಶಿಸಲು ಹೋದಳು.

ಆಶ್ರಮದ ಹೊರಬಾಗಿಲಲ್ಲೇ ಅವರ ಶಿಷ್ಯ ತಡೆದ. “ಸ್ವಾಮಿಗಳು ಹೆಂಗಸರನ್ನು ನೋಡುವುದಿಲ್ಲ” ಎಂದ.

ಈ ಮಾತಿಗೆ ಮೀರಾ ನಕ್ಕುಬಿಟ್ಟಳು. ’ಬೃಂದಾವನದಲ್ಲಿ ಶ್ರೀಕೃಷ್ಣನೊಬ್ಬನೇ ಗಂಡು ಎಂದುಕೊಂಡಿದ್ದೆ. ಈಗ ಅವನಿಗೂ ಪ್ರತಿಸ್ಪರ್ಧಿಯೊಬ್ಬನಿದ್ದಾನೆ ಎಂದು ತಿಳಿಯಿತು’ ಎಂದಳು.

ಈ ಮಾತು ಈಟಿಯ ಮಾನೆಯಂತೆ ಜೀವಗೋಸ್ವಾಮಿಯನ್ನು ಇರಿಯಿತು. ಒಳಗಿನಿಂದ ಬರಿಗಾಲಿನಲ್ಲಿಯೇ ಹೊರಬಂದು ಮೀರಾಳನ್ನು ಗೌರವದಿಂದ ಒಳಕ್ಕೆ ಕರೆದೊಯ್ದರು.

– ಇದಿಷ್ಟು ಕಥೆ.

ಭಕ್ತಿ ಮಾರ್ಗದಲ್ಲಿ ಗಂಡ ಹೆಂಡತಿಯರ ಪ್ರೇಮಭಾವ ಶ್ರೇಷ್ಠ ಎಂದು ಹೇಳಿದೆ. ಈ ಭಾವದಲ್ಲಿ ಜಗತ್ತಿನ ಎಲ್ಲಾ ಜೀವರಾಶಿಗೂ ಹೆಣ್ಣು. ದೇವರೊಬ್ಬನೇ ಗಂಡು. ಬೃಂದಾವನದಲ್ಲಿ ಶ್ರೀಕೃಷ್ಣ ಮಾತ್ರ ಗಂಡು. ಉಳಿದ ಎಲ್ಲಾ ಭಕ್ತರೂ ಗೋಪಿಗಳು. ಭಕ್ತರಲ್ಲಿ ಹೆಣ್ಣು – ಗಂಡು ಎಂಬ ಭೇದವಿಲ್ಲ. ಭಕ್ತರೆಲ್ಲ ಶ್ರೀಕೃಷ್ಣ ತಮ್ಮ ಪತಿ ಎಂಬ ಭಾವವನ್ನು ರಕ್ತಗತ ಮಾಡಿಕೊಂಡಿರಬೇಕು. ಇದೇ ಭಾವ ಇದ್ದರೆ ಹೆಣ್ಣನ್ನು ನೋಡಬಾರದು ಎಂಬ ಹಠವೇಕೆ? ಇದನ್ನು ತಿಳಿದೂ ತಾನು ಗಂಡೆಂದುಕೊಂಡು ವರ್ತಿಸಿದರೆ ದೇವರಿಗೆ ಪ್ರತಿಸ್ಪರ್ದಿ ತಾನೇ?

ಅರಮನೆ ಬಿಟ್ಟು ಹೊರಬಂದ ನಂತರ ಮೀರಾಳಿಗೆ ಅನೇಕ ಹಿರಿಯರ, ಅಂದಿನ ಪ್ರಸಿದ್ಧ ಕವಿಗಳ ಸಹವಾಸ ಲಭಿಸಿತು. ಇದು ಅವಳಲ್ಲಿದ್ದ ಭಕ್ತಿ ಭಾವಕ್ಕೆ, ಕವಿತಾಶಕ್ತಿಗೆ ಬಲ ನೀಡಿತು.

ದ್ವಾರಕೆಯಲ್ಲಿ

ಚಿತ್ತೂರಿನ, ಮೇಡತಾದ ರಾಜಕೀಯ ಪರಿಸ್ಥಿತಿ ತುಂಬ ಬದಲಿಸಿತ್ತು. ಮೀರಾ ಯಾರಿಗೂ ಬೇಕಾಗಿರಲಿಲ್ಲ. ಅವಳು ಕುಲಪಾತಕಿ ಎಂದೇ ಎಲ್ಲರೂ ಗಣಿಸಿದ್ದರು. ದೊಡ್ಡಪ್ಪ ಬೀರಮದೇವ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಕಾದಾಡಬೇಕಾಗಿತ್ತು. ಇನ್ನು ಮೀರಾಳನ್ನು ಗಮನಿಸುವುದೆಲ್ಲಿ? ಇದಾವುದೂ ಅವಳಿಗೆ ಹಿಡಿಸಿರಲಿಲ್ಲ. ನಿರ್ಲಿಪ್ತಳಾಗಿ ಸಂತರ ಸಂಗದಲ್ಲಿ ತೀರ್ಥಯಾತ್ರೆ ನಡೆಸಿದಳು. ಕೊನೆಗೆ ದ್ವಾರಕೆಯಲ್ಲಿ ನಿಂತಳು. ಅಲ್ಲಿಯ ರಣಛೋಡಜಿ (ಶ್ರೀಕೃಷ್ಣನ ಇನ್ನೊಂದು ಹೆಸರು) ಮಂದಿರ ಅವಳ ಆರಾಧನಾ ಸ್ಥಳವಾಯಿತು.

ಅಪಾರ ಜನಪ್ರಿಯತೆಯನ್ನು ಗಳಿಸಿದ ಮೀರಾಳನ್ನು ತಮ್ಮವಳು ಎಂದು ಹೇಳಿಕಳ್ಳಲು ರಾಜಸ್ಥಾನದ ಅರಸು ಮನೆತನಗಳು ಹಿಂಜರಿಯುತ್ತಿದ್ದವು. ರಾಣಾ ಮೀರಾಳಿಗೆ ತುಂಬಾ ಅನ್ಯಾಯ ಮಾಡಿದ್ದಾನೆ ಎಂಬುದೂ ಪ್ರಸಾರವಾಯಿತು. ಎರಡನೆಯ ರತನ್‌ಸಿಂಹ ಕೊಲೆಯಾದ. ಅನಂತರ ಉದಯಸಿಂಹ ಪಟ್ಟಕ್ಕೆ ಬಂದ. ರಾಜ ವಂಶದ ಮೀರಾಬಾಯಿ ಹೀಗೆ ಒಬ್ಬಳೇ ಸಾಧು ಸಂತರ ಸಂಗದಲ್ಲಿದ್ದರೆ ರಾಜಮನೆತನಕ್ಕೆ ಅಪಖ್ಯಾತಿ, ಆದುದರಿಂದ ಮೀರಾ ಚಿತ್ತೂರಿಗೇ ಹಿಂತಿರುಗಬೇಕು ಎಂದು ಆತ ಕೋರಿದನಂತೆ. ಅರಮನೆಯ ಚಿತ್ರಹಿಂಸೆಯ ರುಚಿ ಕಂಡ ಸನ್ಯಾಸಿನಿ ಮತ್ತೆ ಆ ಪಂಜರ ಬಯಸುವಳೇ? ಈ ಸಂದರ್ಭದಲ್ಲಿ ಸ್ವಾರಸ್ಯಕರವಾದ ಒಂದು ಕಥೆ ಇದೆ.

ತನ್ನ ಮಾತಿಗೆ ಮನ್ನಣೆ ಕೊಟ್ಟು ಮೀರಾ ಬರುವುದಿಲ್ಲ ಎಂದು ಉದಯಸಿಂಹನಿಗೆ ಅರ್ಥವಾಯಿತು. ಚಿತ್ತೂರಿನ ಐವರು ಬ್ರಾಹ್ಮಣರನ್ನು ಮೀರಾಳ ಬಳಿಗೆ ಕಳುಹಿಸಿದ. ಅವರು ಆಕೆಯನ್ನು ಚಿತ್ತೂರಿಗೆ ಹಿಂತಿರುಗಬೇಕೆಂದು ಕೋರಿದರು. ಅರಮನೆಗೆ ಹೋದರೆ ಮತ್ತೆ ಹಿಂದಿನ ಕಥೆಯೇ ಆಗುತ್ತದೆ ಎನ್ನಿಸಿತು ಮೀರಾಳಿಗೆ. ಈ ಹೊತ್ತಿಗೆ ಅವಳಿಗೆ ಸುಮಾರು ನಲವತ್ತೆಂಟು ವರ್ಷ ಎಂದು ಕಾಣುತ್ತದೆ. ಅವಳ ಗಂಡ ಭೋಜರಾಜನಿದ್ದಾಗಲೇ ಅರಮನೆಯಲ್ಲಿ ಅವಳ ಕೃಷ್ಣಪೂಜೆಗೆ ಅಡ್ಡಿ ಬಂದಿತು. ಅವಳು ಅರಮನೆಯನ್ನು ಬಿಟ್ಟು ಪ್ರತ್ಯೇಕ ಮಂದಿರಕ್ಕೆ ಹೋಗಬೇಕಾಯಿತು. ಗಂಡ ತೀರಿಕೊಂಡು ಇಪ್ಪತ್ತೈದು ವರ್ಷಗಳಾಗಿತ್ತು. ಅರಸು ಮನೆತನದವರು ಅವಳನ್ನು ಕೊಲ್ಲಲೂ ಪ್ರಯತ್ನಿಸಿದ್ದರು. ಎಲ್ಲರನ್ನೂ ಬಿಟ್ಟು ದ್ವಾರಕೆಗೆ ಬಂದು ಬಿಟ್ಟಳು. “ಮೇರೇ ತೋ ಗಿರಿಧರ ಗೋಪಾಲ್ ದೂಸರೋನ ಕೋಯೀ” ಎಂದು ನಿರ್ಧರಿಸಿ ಬಿಟ್ಟಿದ್ದಳು.

ಮತ್ತೆ ಅರಮನೆಗೆ – ಎಂದರೆ ಸೆರೆಮನೆಗೆ ಹೋಗುವೇ?

“ಬರುವುದಿಲ್ಲ” ಎಂದಳು ಮೀರಾ.

ಬ್ರಾಹ್ಮಣರನ್ನು ರಾಣಾ ಕಳುಹಿಸಿದ್ದ. ತಾವು ಸೋತೆವು ಎಮದು ಅವನ ಮುಂದೆ ಸಪ್ಪೆ ಮುಖ ಹಾಕಿನಿಲ್ಲಲು ಅವರಿಗೆ ಧೈರ್ಯವಿಲ್ಲ. ಹತ್ತು ರೀತಿಗಳಲ್ಲಿ ಹೇಳಿದರು, ಕಾಡಿದರು, ಬೇಡಿದರು.

“ಬರುವುದಿಲ್ಲ” ಎಂದಳು ಮೀರಾ.

ಕಡೆಯ ಅಸ್ತ್ರವನ್ನು ಬಳಸಿದರು ಬ್ರಾಹ್ಮಣರು.

“ನೀವು ಬಾರದೆ ನಾವು ಹಿಂದಕ್ಕೆ ಹೋಗುವುದಿಲ. ನೀವು ನಮ್ಮ ಜೊತೆಗೆ ಬರದಿದ್ದರೆ ನಾವು ಇಲ್ಲಿಯೇ ಉಪವಾಸ ಮಾಡಿ ಪ್ರಾಣ ಬಿಡುತ್ತೇವೆ.”

ಮೀರಾಳಿಗೆ ಧರ್ಮಸಂಕಟದ ಸ್ಥಿತಿಯಾಯಿತು. ಚಿತ್ತೂರಿಗೆ ಹೋಗಲು ಅವಳಿಗೆ ಮನಸ್ಸಿಲ್ಲ. ಆದರೆ ಬ್ರಹ್ಮ ಹತ್ಯೆಯ ದೋಷದ ಬೆದರಿಕೆ. ಇದರಿಂದ ಆ ರಾತ್ರಿ ಅದೇ ದೇವಾಲಯದಲ್ಲಿಯೇ ಅವರನ್ನು ತಂಗಲು ಕೋರಿದಳು. ಬೆಳಗ್ಗೆ ಅವರೊಂದಿಗೆ ಚಿತ್ತೂರಿಗೆ ಬರುವುದಾಗಿ ಒಪ್ಪಿದಳು. ಹರ್ಷಚಿತ್ತರಾದ ಬ್ರಾಹ್ಮಣರು ಅಲ್ಲಿಯೇ ಉಳಿದುಕೊಂಡರು.

ಸಂತ ಮೀರಾ ಎಲ್ಲಿ!

ಬೆಳಗಾಯಿತು.

ಮೀರಾ ಎಲ್ಲಿಯೂ ಕಾಣಲಿಲ್ಲ.

ಬ್ರಾಹ್ಮಣರು ಹೆದರಿದರು. ಅವಳಿಗಾಗಿ ಹುಡುಕಿದರು. ಇತರ ಸಾಧು ಸನ್ಯಾಸಿಗಳೂ ಭಕ್ತರೂ ಅವಳಿಗಾಗಿ ಹುಡುಕಿದರು. ಅವಳು ಎಲ್ಲಿಯೂ ಕಾಣಲಿಲ್ಲ.

ಅವಳ ಉಡುಪು ಮಾತ್ರ ರಣಛೋಡಜೀ ಮಂದಿರದ ಬಳಿ ಬಿದ್ದಿತ್ತು.

ಮೀರಾಬಾಯಿ ತನ್ನ ಪ್ರಿಯ ಲಾಲ ಗಿರಿಧರದಲ್ಲಿ ಒಂದಾದಳು ಎಂದು ಭಕ್ತರು ನಂಬಿದರು.

ಇಂದೂ ಈ ನಂಬಿಕೆಯೇ ಭಕ್ತರಲ್ಲಿ ಉಳಿದು ಬಂದಿದೆ.

ಈ ಕಥೆಯನ್ನು ನಂಬದವರೂ ಉಂಟು. ಆದರೆ ಮೀರಾಳ ಬಾಳಿನ ಕಥೆಗೆ ಇದಕ್ಕಿಂತಲೂ ಸುಂದರವಾದ ಮುಕ್ತಾಯ ಬೇರೊಂದಿಲ್ಲ. ಇದೇ ಸತ್ಯವೆಂದು ನಂಬಿ ಇದು ನಡೆದಿದ್ದು ೧೫೪೭ ರಲ್ಲಿ ಎಂದು ಊಹಿಸಿರುವರೂ ಇರುವರು. ಮೀರಾ ಸಾಯಲಿಲ್ಲ, ಅಲ್ಲಿಂದ ಮಾರುವೇಷದಲ್ಲಿ ತಪ್ಪಿಸಿಕೊಂಡು ಹೋಗಿರಬೇಕು ಎಂದು ಹಲವರು ಅನುಮಾನಿಸುತ್ತಾರೆ. ಆದರೆ ಇದಾದ ನಂತರ ಅವಳ ಬಾಳಿನ ಬಗ್ಗೆ ಅವರು ಏನೂ ಹೇಳಲಾರರು. ಅವಳ ಹೆಸರು ಎಲ್ಲಿಯೂ ಕೇಳಿಬರುವುದಿಲ್ಲ. ಜನರ ಬಾಯಲ್ಲಿ ಈ ಬಗ್ಗೆ ಉಳಿದು ಬಂದಿರುವ ಕಥೆಗಳೂ ಇಲ್ಲ. ಆದ್ದರಿಂದ ಎಲ್ಲಾ ಕಷ್ಟ ನಿಷ್ಠೂರಗಳ ಮಧ್ಯೆ ಧೈರ್ಯವಾಗಿ, ಅಚಲವಾಗಿ ನಿಂತ ಮೀರಾಳ ಬಾಳಿಗೆ ಪ್ರಿಯ ಸ್ವಾಮಿಯನ್ನು ಸೇರಿದ್ದೆ ಮುಕ್ತಾಯ ಎಂಬುದು ಬಹು ಉಚಿತವಾದ ನಂಬಿಕೆ.

ವಿಷದ ಮಧ್ಯೆ ಅಮೃತ ಬಿಂದು

ಸಂಗೀತದಲ್ಲಿ ಮೀರಾಳ ಸಾಧನೆ ಗಣನೀಯ. ಅವಳ ಅನೇಕ ಗೀತೆಗಳಿಗೆ ಅವಳೇ ರಾಗಗಳನ್ನೂ ಸೂಚಿಸಿದ್ದಾಳೆ. ’ರಾಗ ಗೋವಿಂದ’, ’ಮೀರಾ ಮಲ್ಹಾರ್’ ಅವಳದೇ ಸೃಷ್ಟಿ. ಮೀರಾಳ ಗೀತೆಗಳನ್ನು ಸಂಗೀತಕ್ಕೆ ಸುಲಭವಾಗಿ ಅಳವಡಿಸಬಹುದು. ಜನರ ಬಾಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವರ್ಷಗಳಿಂದ ಈ ಗೀತೆಗಳು ಉಳಿದು ಬಂದಿರುವುದರ ಗುಟ್ಟೂ ಇದೇ!

ಮೀರಬಾಯ ಬರೆದಿದ್ದು ಎನ್ನಲಾಗುವ ಹಲವು ಕೃತಿಗಳ ಉಲ್ಲೇಖ ದೊರೆಯುತ್ತದೆ. ಆದರೆ ’ಪದ’ ಎಂದು ಕರೆಯಲ್ಪಡುವ ಅವಳ ಗೀತೆಗಳೇ ಮುಖ್ಯ. ಇದುವರೆಗೂ ನಾಲ್ಕು ನೂರಕ್ಕೂ ಹೆಚ್ಚು ಪದಗಳು ಸಂಗ್ರಹವಾಗಿವೆ.

ರಾಜಸ್ಥಾನದ ಅರಸು ಮನೆತನಗಳ ಚರಿತ್ರೆಗಳಲ್ಲಿ ಮೀರಾಳ ಹೆಸರಿನ ಉಲ್ಲೇಖ ಎಲ್ಲೂ ಇಲ್ಲ. ಅವಳ ಬಗ್ಗೆ ಯಾವ ರೀತಿಯ ವಿವರಗಳೂ ಅಂದಿನ ಇತಿಹಾಸಕಾರದಿಂದ ತಿಳಿದುಬರವು. ಇದನ್ನು ಗಮನಿಸಿದರೆ ಅವಳನ್ನು ಚರಿತ್ರೆಯಿಂದಲೇ ತೊಡೆದುಹಾಕುವ ಪ್ರಯತ್ನ ನಡೆದಿತ್ತು ಎನಿಸುತ್ತದೆ. ಬದುಕಿದ್ದಾಗ ಹಿಂಸಿಸಿ ಇಲ್ಲವಾಗಿಸಲು ಪ್ರಯತ್ನಿಸಿದವರು ಚರಿತ್ರೆಯಲ್ಲೂ ಅವಳು ಇರಬಾರದೆಂದು ಹೀಗೆ ಮಾಡಿದ್ದರೆ ಹೆಚ್ಚೇನಿಲ್ಲ. ಮತ್ಸರ, ಅಸೂಯೆ ಯಾವ ಕೆಲಸವನ್ನಾದರು ಮನುಷ್ಯನಿಂದ ಮಾಡಿಸುತ್ತವೆ. ಜನರ ಮನ ಸೂರೆಗೊಂಡ ನೂರಾರು ವರ್ಷಗಳಿಂದ ಅವರ ನಾಲಿಗೆಯ ಮೇಲೆ ಜೀವಂತವಾಗಿದ್ದಾಳೆ.

ಈಗ ಮೀರಾಳ ಜೀವನಚರಿತ್ರೆಗಾಗಿ ಇತಿಹಾಸದಲ್ಲಿ ಹುಡುಕಿದಾಗ ಅವಳನ್ನು ದ್ವೇಷಿಸಿ, ಕ್ಷುಲ್ಲಕವಾಗಿ ಕಂಡು ಚರಿತ್ರೆಯಿಂದಲೇ ಹೊರದೂಡಲು ಪ್ರಯತ್ನಿಸಿದ ಅಧಿಕಾರದಲ್ಲಿದ್ದ ಅಂದಿನ ಅರಸರ ಬಗ್ಗೆ ನಾವು ಉಪೇಕ್ಷಾಭಾವ ತೋರಿಸಬೇಕಾಗುತ್ತದೆ. ಆದರೆ ಅವರ ಕ್ರೌರ್ಯಕ್ಕೆ ತುತ್ತಾದ ಮೀರ ಕೋಪವನ್ನೂ ತೋರಿಸಲಿಲ್ಲ. ವಿಷದ ಮಧ್ಯೆ ಅಕಳಂಕವಾಗಿ ನಿಂತ ಅಮೃತ ಬಿಂದುವಿನಂತೆ ಎಲ್ಲ ದ್ವೇಷ-ಅಪವಾದ-ಹಿಂಸೆಗಳ ನಡುವೆ ಲಾಲ ಗಿರಿಧರನಲ್ಲಿ ಮನಸ್ಸನ್ನು ನಿಲ್ಲಿಸಿ ಅವನನ್ನು ಹಾಡಿ ಹೊಗಳಿದಳು. “ಭಕ್ತ ತನ್ನ ದೇವರಿಗಾಗಿ ಎಂಥ ಕಷ್ಟವನ್ನಾದರೂ ಸಹಿಸುತ್ತಾನೆ. ದೇವರನ್ನು ಅವನು ಎಂದೂ ಬಿಡುವುದಿಲ್ಲ. ತನ್ನ ಗುರಿಯನ್ನು ಅವನು ಸಾಧಿಸುತ್ತಾನೆ. ಅವರಿವರ ಗೊಡವೆ ಅವನಿಗೇಕೆ? ಎಂದು ನಗುನಗುತ್ತಾ ಮೀರಾ ಹೇಳಿದಂತೆ ಭಾಸವಾಗುತ್ತದೆ.

ನಾಲ್ಕು ನೂರು ವರ್ಷಗಳನ್ನು ದಾಟಿ ಹಾಡು ಕೇಳುತ್ತದೆ:

ಮೇರೇ ತೋ ಗಿರಿಧರ ಗೋಪಾಲ್
ದೂಸರೊ ನ ಕೋಯೀ ||

ಮಾತಾ ಛೋಡಿ ಪಿತಾ ಛೋಡೇ,
ಛೋಡೇ ಸಗಾ ಸೋಯೀ ||

ಸಾಧಾ ಸಂಗ್ ಬೈಠ್ ಬೈಠ್
ಲೋಕ್ ಲಾಜ್ ಖೋಯೀ ||

ಸಂತ್ ದೇಖ್ ದೌಡಿ ಆಯಿ,
ಜಗತ್ ದೇಖ್ ರೋಯೀ ||

ಪ್ರೇಮ್ ಆಸೂ ಡಾರ್ ಡಾರ್
ಅಮರ್ ಬೇಲ್ ಬೋಯೀ ||

ಮಾರಗ್ ಮೆ ತಾರಣ್ ಮಿಲೆ
ಸಂತ್ ನಾಂ ದೋಯೀ ||

ಸಂತ್ ಸದಾ ಸೀಸ್ ಪರ್
ನಾಂ ಹೃದೌ ಹೋಯೀ ||

ಅಬ್ ತೋ ಬಾತ್ ಫೈಲ್ ಗಯೀ,
ಜಾನೌ ಸಬ್ ಕೋಯೀ |

ದಾಸೀ ಮೀರಾ ಲಾಲ್ ಗಿರಿಧರ್
ಹೋನೀ ಸೇ ಹೋಯೀ ||

“ನನ್ನ  ಪಾಲಿಗೆ ಗಿರಿಧರ ಗೋಪಾಲನ ವಿನಃ ಯಾರೂ ಇಲ್ಲ. ತಾಯಿಯನ್ನು ಬಿಟ್ಟೆ, ತಂದೆಯನ್ನು ಬಿಟ್ಟೆ, ಸಂಬಂಧಿಗಳನ್ನೆಲ್ಲಾ ಬಿಟ್ಟಾಗಿದೆ. ಸಾಧುಗಳ ಸಂಗದಲ್ಲಿ ಲಜ್ಜೆ ಬಿಟ್ಟೆ. ಸಂತರ ಬಳಿಗೆ ಓಡಿದರೆ ಪ್ರಪಂಚದ ರೀತಿ-ನೀತಿಗಳು ನನ್ನ ಹಾದಿಗೆ ಅಡ್ಡವಾದವು. ಆಗ ಕಣ್ಣೀರು ಸುರಿಸಿದೆ. ಆ ಕಣ್ಣೀರಿನಿಂದಲೇ ಪ್ರೇಮದ ಬಳ್ಳಿಯನ್ನು ಜೀವಂತವಾಗಿರಿಸಿರುವೆ. ನನ್ನ ಹಾದಿಗೆ ದೊರೆತ ದೀಪಗಳು ಸಂತರು, ಶ್ರೀಕೃಷ್ಣನಾಮ. ಶ್ರೀ ಕೃಷ್ಣ ಹೃದಯದೊಳಗಿನಿಂದ, ಸಂತರು ಹೊರಗಿನಿಂದ ನನ್ನ ದಾರಿಯನ್ನು ಬೆಳಗಿಸಿದ್ದಾರೆ. ಸ್ವಾಮಿ, ದಾಸಿ ಮೀರಾ ನಿನ್ನವಳು. ನಿನ್ನನ್ನು ಸೇರುವುದು ಅವಳ ಗುರಿ. ಯಾವ ರೀತಿಯ ಸುದ್ದಿ ಯಾರು ಹರಡಿದರೇನು? ಯಾರು ಏನೆಂದರೇನು?”