ಜಿಲ್ಲೆ: ೪೦ ಕಿ.ಮೀ.

ಮುಂಡರಗಿ ನಾಡು ಮೊದಲಿಗೆ ಧಾರವಾಡ ಜಿಲ್ಲೆಯಲ್ಲಿ ಲೀನವಾಗಿತ್ತು. ತದನಂತರದಲ್ಲಿ ಗದಗ ಜಿಲ್ಲೆಗೆ ಸೇರ್ಪಡೆಯಾಗಿದೆ. ಇದನ್ನು ನೋಡಿದಾಗ ಮುಂಡರಗಿಗೆ ೧೪ ಮಾಸವಾಡಿ ೧೪೦೦ರಲ್ಲಿ ಅಂತರಗತವಾಗಿದ್ದವು, ಈ ವಾಡಿ ಬಗೆಗೆ ಡಂಬಳ ಶಾಸನ ಒಂದು ತಿಳಿಸುತ್ತದೆ, ಇದರ ಕಾಲ ೧೨ನೇ ಶತಮಾನ.

“ಶ್ರೀ ಕುಂತಳ ವಿಷಯದ ದಕ್ಷಿಣ ಗಂಗಾ ನದಿಯೋತ್ತರ ತೀರಂ ಬಿಡಿದೊರ್ಪು ತಿರ್ಪ ಮಾಸವಾಡಿ ನಾಡಿದಮ್ಮ”. ಹೀಗೆ ಈ ನಾಡನ್ನು ವರ್ಣಿಸಿದ್ದಾರೆ.

ಶ್ರೀ ಮತ್ಕುಂತ್ಯ ಭೂಮಿ ಕಾಮಿನಿಯ ವಕ್ತ್ರಾದರ್ಶಯಂ ವೊತ್ತ ಸದ್ದಾಮಂ ಶೋಭೆಗೆ ಮಾಸವಾಡಿಯ ಸುಗುಂನಾಡದಂತದಂ.

ಇದು ದಕ್ಷಿಣ ಗಂಗೆಯೆಂದು ಪ್ರಸಿದ್ದವಾಗಿದೆ. ತುಂಗಭದ್ರೆ ಉತ್ತರಕ್ಕಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಮುಂಡರಗಿ ಎಂಬ ಗ್ರಾಮವು ಮುಂಡ ಎಂಬ ಆದಿವಾಸಿ ಜನಾಂಗದ ಮೂಲಕ ಬಂದಿರಬೇಕೆಂದು ಗ್ರಾಮನಾಮ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. (ಸಂಸ್ಕೃತ ನಿಷ್ಟರು ಮೃಡಗಿರಿ > ಮಂಡಗಿರಿ > ಮಂಡರಗಿ > ಮುಂಡರಗಿ ಆಗಿರಬೇಕೆಂದು ಊಹೆ. ಆನಪರರು ಈ ಪದವನ್ನು ಮುಂಡರಗಿಯ ಬೋಳಾದ ಗುಡ್ಡದಿಂದ ಮೊದಲು ಮಂಡರಗಿಯಾಗಿದ್ದು, ಮುಂದೆ ಮಂಡಗಿರಿ ಹೋಗಿ ಮುಂಡರಗಿ ಯಾಗಿರಬಹುದೆಂದು ಅಭಿಪ್ರಾಯ.

 

ಡಂಬಳ

ಜಿಲ್ಲೆ: ೨೦ ಕಿ.ಮೀ.

ಮುಂಡರಗಿ ತಾಲೂಕಿನ ಎರಡನೇ ದೊಡ್ಡ ಗ್ರಾಮವೇ ಡಂಬಳ. ಮುಂಡರಗಿಯಿಂದ ಗದಗಿಗೆ ಹೋಗುವ ಮಾರ್ಗದಲ್ಲಿ ೨೦ ಕಿ.ಮೀ. ಅಂತರದಲ್ಲಿದೆ ಬಾದಾಮಿಯ ಚಾಲುಕ್ಯರು ಕ್ರಿ.ಶ. ೫೪೦ ರಿಂದ ೭೫೨ರ ವರೆಗೆ ಆಳಿದರು ಎರಡನೇ ಪುಲಕೇಶಿ ಕಾಲದಲ್ಲಿ ಡಂಬಳವು ನೆಗಳೇ ಒಡತ್ತಿದೆಂಬುದನ್ನು ಕಾಣುತ್ತೇವೆ.

ಪುಲಕೇಶಿ ದೊರೆಯೊಳ ಕಲಕೆಲ್ಲ ತಿಳಿಯಾಗಿ ಬಲಕಾಣಕೇಳೊಡೆ ಬಸವ ಡಂಬಳದಲ್ಲಿ ಕಳಸದ ತೇರು ಎಳೆದಾಂವ.

ಕರೆ ಬಿತ್ತಿ ಡಂಬಳದ ದೋರೆಕೆರೆ ಬದಾಮಿ ಮರಗ್ಯಾನ ಕರುಣ ಪುಲಕೇಶಿ ಸಾರ‍್ಯಾನ ತೇರಿಗೆ ಜನದಾಗ ಕಡತಾವೋ ಡಂಬಳ ಶಾಸನಗಳಲ್ಲಿ ಧರ್ಮವೊಳಲು ಅಥವಾ ಧರ್ಮಪುರಿ ಎಂದು ಕರೆಯಲ್ಪಟ್ಟಿದೆ.

 

ದೊಡ್ಡ ಬಸಪ್ಪನ ಗುಡಿ :

ಇದರ ಕಾಲ ೧೨೮೩, ಈ ದೇವಾಲಯದ ದಕ್ಷಿಣದಲ್ಲಿ ಅಲಂಕೃತಗೊಂಡು ಮುಖಮಂಟಪ ಪೂರ್ವಕ್ಕೆ ನಂದಿ ಮಂಟಪ ಇದೆ. ಇಲ್ಲಿಯ ನಂದಿ ಸುಮಾರು ೫ ಅಡಿ ಎತ್ತರವಿದ್ದು, ಅತ್ಯಂತ ಆಕರ್ಷಕವಾಗಿದೆ. ಇದರ ಗರ್ಭಗುಡಿ ಹಾಗೂ ಮಂಟಪಗಳು ಚಚೌಕವಾಗಿದ್ದರು ಹೊರಭಾಗ ನಕ್ಷತ್ರ ಆಕಾರದಲ್ಲಿದೆ. ಗರ್ಭಗುಡಿಯಲ್ಲಿ ಲಿಂಗವಿದೆ. ಮಧ್ಯಭಾಗದ ಮಂಟಪದಲ್ಲಿ ಸುಮಾರು ೮೦ ಕ್ಕೂ ಹೆಚ್ಚು ಉಬ್ಬು ಮೂರ್ತಿಗಳು ಇವೆ. ಈ ದೇವಾಲಯವನ್ನು ರೆಬ್ಬರಸಬಾಚಿಕಬ್ಬೆಯ ಪುತ್ರ ಅಜ್ಜಯನಾಯಕ ಈ ದೇವಾಲಯವನ್ನು ಕಟ್ಟಿಸಿ ಹೆಮ್ಮಾಡಿ ಅರಸನಿಗೆ ೧೬ ಶೆಟ್ಟಿಗಳಿಂದ ಭೂಮಿಯನ್ನು ಕಂಡುಕೊಟ್ಟರು. ಈ ಪಟ್ಟಣದ ಸುತ್ತಮುತ್ತ ಸುಗಂಧವುಳ್ಳ ಭತ್ತದ ಕಾಲುವೆಗಳು ಆಡುವ ಹಂಸಗಳು, ಕೇಕೇ ಹಾಕುವ ನವಿಲುಗಳಿಂದ, ಅರಗಿಣಿಗಳಿಂದ ಶೋಭಾಯಮಾನವಾಗಿತ್ತೆಂದು ಶಾಸನಗಳಲ್ಲಿ ಬಣ್ಣಿಸಲಾಗಿದೆ.

 

ಡಂಬಳದ ಕೆರೆ:

ಕ್ರಿ.ಶ.೧೧೦೬ರಲ್ಲಿ ಕ್ರೋದಿ ನಾಮ ಸಂವತ್ಸರದಲ್ಲಿ ಪಶ್ಚಿಮ ಚಾಲುಕ್ಯ ಚಕ್ರವರ್ತಿ ಸೋಮೇಶ್ವರ ದೇವನು ಮಹಾಪ್ರಧಾನ, ತೇಗಿಮಯ್ಯ ದಂಡನಾಯಕನಾಗಿದ್ದು, ದೇವರಸ ಸ್ವಯಂಭೋಧೆಯವರ ಎದುರಿಗೆ ಗೋಣಸಮುದ್ರವೆಂದು ಕರೆಯಲ್ಪಡುವ ಕೆರೆಗೆ ಗೋಡೆ ನಿರ್ಮಿಸಿದ ವಿಷಯ ಅಬ್ಬೇಶ್ವರ ಶಾಸನದಲ್ಲಿ ತಿಳಿದುಬರುತ್ತದೆ. ಈ ಕೆರೆಯನ್ನು ವಿಕ್ಟೋರಿಯಾ ರಾಣಿ ಶಕೆ ೧೮೭೬-೭೭ ಈ ಕೆರೆಯನ್ನು ದುರಸ್ತಿ ಮಾಡಿಸಿ ಅದಕ್ಕೊಂಡು ಹೊಸ ತಿರುವನ್ನು ನೀಡಿದ್ದಾರೆ. ಈ ಕೆರೆಯಿಂದ ಜಲಾಯನ ಪ್ರದೇಶ ೪೪೫ ಎಕರೆ ಕೆರೆಯ ಉದ್ದ ೫೭೭೫ ಅಡಿ ಹೊಡಿಯ ಉದ್ದ ೩೦೦ ಅಡಿ, ನೀರಾವರಿ ಕ್ಷೇತ್ರ ೨೯೦೦ ಎಕರೆ, ಕಾಲುವೆ ಉದ್ದ ೫ ಕಿ.ಮೀ. ಗಳಿರುವ ವಿವರಗಳಿವೆ.

 

ಸೋಮೇಶ್ವರ ದೇವಾಲಯ

ಈ ದೇವಾಲಯವು ದೊಡ್ಡ ಬಸಪ್ಪನ ಗುಡಿಯ ಎದುರಿಗೆ ಕಾಣಿಸುತ್ತದೆ. ಅದರ ಮೇಲ್ಚಾವಣೆ ಆಕಾರದಿಂದಾಗಿ ಡಬ್ಬುಗಲ್ಲುಗುಡಿ ಯೆಂದು ಕರೆಯುವ ರೂಡಿಯಿದೆ. ಇದರ ಮಂಟಪ ಮುಂಜೂರು ಮೂರು ದಿಕ್ಕುಗಳಲ್ಲಿ ಮುಂಚಾಚಿದೆ. ಈ ಗುಡಿಯನ್ನು ಮಂಟಪ, ಅರ್ಧಮಂಟಪ (ಸುಕನಾಸಿ) ಹಾಗೂ ಗರ್ಭಗುಡಿಯೆಂದು ೩ ಭಾಗಗಳನ್ನಾಗಿ ವಿಗಂಡಿಸಿದ್ದಾರೆ. ಗರ್ಭಗುಡಿಯಲ್ಲಿರುವ ಶಿವಲಿಂಗ ಅರ್ಧಮಂಟಪದಲ್ಲಿ ನಂದಿ ಇರುವುದು.

 

ತೋಂಟದದಾರ್ಯ ಮಠ:

ಈ ಮಠವು ಕ್ರಿ.ಶ. ೧೬೭೨ ರಲ್ಲಿ ಶ್ರೀ ಜಗದ್ಗುರು ಅರ್ಧನಾರೀಶ್ವರ ಮಹಾಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟಿದೆ. ಈ ಮಠವು ಡಂಬಳದ ಗದಗ ಸಂಸ್ಥಾನ ಮಠವೆಂದು ಹೆಸರಾಗಿದೆ. ೨೯-೦೭- ೧೯೭೪ರಲ್ಲಿ ೧೯ನೇ ಪೀಠಾಧಿಕಾರಿಗಳಾಗಿ ಈ ಶೂನ್ಯ ಸಿಂಹಾಸನವನ್ನೇರಿದ ಶ್ರೀ ಜಗದ್ಗುರು ಡಾ|| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು “ಶಿಷ್ಯರ ಸೇವೆಯೇ, ಶಿವನ ಪೂಜೆ” ಎಂಬ ಧ್ಯೇಯವನ್ನು ಶ್ರೀ ಮಠದ ಮೂಲಕ ಬಿತ್ತರಿಸುತ್ತಿದ್ದಾರೆ.

 

ಮಿನಿಡ್ಯಾಮ ಹಾಗೂ ವಿದ್ಯುತ್ ಉತ್ಪಾದನೆ:

ಮುಂಡರಗಿ ತಾಲೂಕ ಹಮ್ಮಿಗಿ ಗ್ರಾಮದ ಬಳಿ ತುಂಗಾಬದ್ರಾ ನದಿಗೆ ನಿರ್ಮಾಣಗೊಂಡ ಶಿಂಗಟಾಲೂರು ಏತನೀರಾವರಿ ಡ್ಯಾಮ ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರ ತಾಲೂಕಿನ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದು. ಜಿಲ್ಲಾ ಕೇಂದ್ರದಿಂದ ೬೭ ಕಿ.ಮೀ. ತಾಲೂಕಾ ಕೇಂದ್ರದಿಂದ ೨೭ ಕಿ.ಮೀ. ದೂರದಲ್ಲಿದ್ದು, ರೂ. ೭೦೦೦ ಕೋಟಿ ವೆಚ್ಚದ ಈ ಯೋಜನೆ ಮುಕ್ತಾಯದ ಹಂತದಲ್ಲಿದೆ.

 

ಗುಮ್ಮಗೋಳ:

ಗೋಣಿ ಬಸವೇಶ್ವರ ದೇವಸ್ಥಾನ ವಿಜಯನಗರ ಪತನದ ನಂತರ ಅಲ್ಲಲ್ಲಿ ಆಡಳಿತ ನಡೆಸಲು ಹುಟ್ಟಿಕೊಂಡ ಪಾಳೇಗಾರರ ಆಡಳಿತ ವ್ಯವಸ್ಥೆ ಬಳ್ಳಾರಿ ಜಿಲ್ಲೆಯ ಭಂಗಳಿಯಲ್ಲಿಯು ಇತ್ತು. ಆ ಸಮಯದಲ್ಲಿ ಪಂಚಗಣಾಧೀಶ್ವರಲ್ಲಿ ಒಬ್ಬರಾದ ಮದ್ವಾನಸ್ವಾಮಿಯ ಮಗನಾದ ಗೋಣಿ ಬಸವೇಶ್ವರರು ಧರ್ಮ ಪ್ರಚಾರಕ್ಕಾಗಿ ದೆಹಲಿ, ಸೂರತ ಸೇರಿದಂತೆ ೭೭೭ ಮಠಗಳನ್ನು ಕಟ್ಟಿಸಿದ ಉಲ್ಲೇಖವಿದೆ. ಅದರಲ್ಲಿ ಗುಮ್ಮಗೋಳ ಗೋಣಿಬಸವೇಶ್ವರ ಮಠವು ಒಂದು. ಈ ಮಠವು ಎರಡು ಭಾಗಗಳಲ್ಲಿ ವಿಗಂಡಿಸಲ್ಪಟ್ಟಿದೆ. ಗರ್ಭಗುಡಿಯ ಎದುರಿಗೆ ತೆರೆದ ಹೊಂಡ. ಇನ್ನೊಂದು ಭಾಗದಲ್ಲಿ ನವರಂಗವಿದ್ದು, ಕನ್ನಡ ನಾಡನ್ನಾಳಿದ ರಾಜರ ಲಾಂಛನಗಳನ್ನೆಲ್ಲ ಒಂದರ ಮೇಲೊಂದು ಜೋಡಿಸಿದಂತೆ ಸುಂದರವಾಗಿ ಕೆತ್ತಲ್ಪಟ್ಟ ಮೂರ್ತಿಗಳು ಆಕರ್ಷಕವಾಗಿವೆ. ಜಿಲ್ಲಾ ಕೇಂದ್ರದಿಂದ ೭೦ ಕಿ.ಮಿ. ತಾ.ಕೇಂದ್ರದಿಂದ ೩೦ ಕಿ.ಮೀ, ಇದ್ದು, ಮಿನಿ ಡ್ಯಾಮಗೆ ೨ ಕಿ.ಮೀ. ದೂರವಿದೆ.

 

ಕಪ್ಪತಗಿರಿ

ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ., ತಾಲೂಕಾ ಕೇಂದ್ರದಿಂದ ೩೦ ಕಿ.ಮೀ. ಅಂತರದಲ್ಲಿ ಮುಂಡರಗಿ ನಾಡಿನ ದಕ್ಷಿಣೋತ್ತರವಾಗಿ ಹಬ್ಬಿದೆ. ಎಪ್ಪತ್ತು ಗಿರಿಗಳನ್ನು ನೋಡುವುದಕ್ಕಿಂತ ಕಪ್ಪತ್ತಗಿರಿಯನ್ನು ನೋಡು ಎಂಬ ನಾಣ್ಣುಡಿ ಈ ಭಾಗದಲ್ಲಿ ಪ್ರಚಲಿತವಿದೆ. ಎಪ್ಪತ್ತಗಿರಿಗಳಲ್ಲಿ ಕಾಣುವ ಸೃಷ್ಟಿ ಸೌಂದರ್ಯ ಖಗಮೃಗಗಳು, ತರುಲತೆಗಳು, ಖನಿಜ ದ್ರವಗಳು, ವನಸ್ಪತಿಗಳು, ಗುಡಿಗುಂಡಾರಗಳು, ಪುಣ್ಯ ಕ್ಷೇತ್ರಗಳು ತೀರ್ಥಗಳೆಲ್ಲವು ಈ ಗುಡ್ಡದೊಂದಿಗೆ ಇವೆ. ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಿಗೆ ಆಸರೆಯಾಗಿ ನಿಂತ ಈ ಗಿರಿ ಮೂರು ಪರ್ವತಗಳ ಸಂಗಮ ಸ್ಥಾನ. ೧) ಎರಮಲೆ ಬೆಟ್ಟ, ೨) ದ್ರೋಣಗಿರಿ, ೩) ಕಪ್ಪತ್ತಗಿರಿ.

 

ಗಂಗೆ ಭಾವಿ :

ಈ ಬಾವಿಯ ನೀರು ಸೇವನೆ ಮಾಡುವುದರಿಂದ ಜನರ ರೋಗರುಜನಗಳು ದೂರವಾಗುತ್ತವೆ ಎಂಬ ಭಾವನೆಯಿದೆ. ಈ ಭಾವಿಯಿಂದ ತುಂಗಭದ್ರೆಯ ದಡದಲ್ಲಿರುವ ಶಿಂಗಟಾಲೂರು ವೀರಭದ್ರ ಸ್ವಾಮಿಯ ದೇವಾಲಯದ ವರೆಗೂ ಇದೆ. ಇದೇ ರಚನೆ ೧೧ ರಿಂದ ೧೯ ಶತಮಾನದಲ್ಲಿರಬೇಕೆಂಬ ಊಹೆ. ಕಪ್ಪತ್ತಮಲ್ಲಯ್ಯನ ದರ್ಶನಕ್ಕೆ ಬರುವವರೆಲ್ಲ ಗಂಗಿಭಾವಿಯ ಪುಣ್ಯೋದಕ ಸೇವಿಸಿಯೇ ಮಲ್ಲಯ್ಯನ ದರ್ಶನಕ್ಕೆ ಹೋಗುತ್ತಾರೆ. ಈ ಗುಡಿಯ ಪಕ್ಕದಲ್ಲಿ ೫೬ ಅಡಿ ಆಳ ಭಾವಿಯಿದ್ದು, ೫೬ ಕಲ್ಲಿನ ಪಾವುಟಿಗೆಗಳು ಇವೆ.

 

ಕಪ್ಪತ್ತ ಮಲ್ಲಯ್ಯನ ಗುಡಿ:

ಈ ಭಾಗದ ಎಲ್ಲಾ ದೇವಾಲಯಗಳಿಗಿಂತ ಹಿರಿದಾಗಿದೆ. ಮಲ್ಲಯ್ಯ ಗವಿಯಲ್ಲಿದ್ದು, ಮುಂದೆ ಗುಡಿ ರ್ಮಿಸಲಾಗಿದೆ. ಮುಂದೆ ಗುಡಿಯ ಮೇಲ್ಭಾಗದಲ್ಲಿ ಸುಂದರವಾದ ಗೋಪುರ ಕಳಸಗಳಿವೆ. ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಸತ್ಯಂ, ಶಿವಂ, ಸುಂದರಂ. ಎಂಬುದರ ಅರ್ಥವನ್ನು ಈ ಕಪ್ಪತ್ತೇಶ್ವರನ ಸಾನಿಧ್ಯದಲ್ಲಿ ಪಡೆಯಬಹುದಾಗಿದೆ.

 

ಶ್ರೀ ಕ್ಷೇತ್ರ ಶಿಂಗಟಾಲೂರು:

ತುಂಗಭದ್ರೆ ದಂಡೆಯ ಮೇಲಿರುವ ಪುಣ್ಯ ಕ್ಷೇತ್ರ ಜಿಲ್ಲಾ ಕೇಂದ್ರದಿಂದ ೭೦ ಕಿ.ಮೀ. ತಾಲೂಕಾ ಕೇಂದ್ರದಿಂದ ೨೫ ಕಿ.ಮೀ. ಅಂತರದಲ್ಲಿದೆ. ಈ ಪುಣ್ಯ ಕ್ಷೇತ್ರ ಆದಿದೇವತೆ ಶ್ರೀ ವೀರಭದ್ರೇಶ್ವರ. ಕಪ್ಪತ್ತಗಿರಿಯ ದಕ್ಷಿಣಕ್ಕೆ ಇರುವ ತುಂಗಭದ್ರೆ ಪೂರ್ವಾಭಿಮುಖವಾಗಿ ಹರಿದು, ಮುಂದೆ ವೀರಭದ್ರ ಸ್ವಾಮಿ ದೇವಸ್ಥಾನದ ಮುಂದೆ ಉತ್ತರಾಭಿಮುಖವಾಗಿ ಸುಮಾರು ೩-೪ ಪರ್ಲಾಂಗದ ಮೇಲೆ ಡೊಂಕಾಗಿ ಪೂರ್ವಕ್ಕೆ ಹರಿದಿದ್ದಾಳೆ. ಇದು ೧೦ನೇ ಶತಮಾನದಿಂದಲು ಪ್ರಸಿದ್ಧ ದೇವಸ್ಥಾನವಾಗಿದೆ. ಆಕಳುವೊಂದು ಈ ಗುಂಡಕ್ಕೆ ಮೇಲು ಬಂದಾಗ ಒಂದು ಮರಡಿಯ ಮೇಲೆ ಹಾಲು ಕರೆಯುತ್ತಿತ್ತಂತೆ ಅದನ್ನು ಕೆಲವು ಸಾಧುಗಳು ನೋಡಿ ಆ ಮರಡಿಯನ್ನು ಅಗೆದಾಗ ಅಲ್ಲಿ ಸುಂದರವಾದ ವೀರಭದ್ರ ಮೂರ್ತಿ ಗೋಚರಿಸಿತಂತೆ ಅಂದಿನಿಂದ ಈ ದೇವಸ್ಥಾನಕ್ಕೆ “ವೀರಣ್ಣ ಎದ್ದ ಮರಡಿ” ಎಂದು ಕರೆಯುತ್ತಾರೆ. ಕೊಪ್ಪಳ ತಾಲೂಕಿನ ಕವಲೂರಿನ ಶಾಸನವೊಂದರಲ್ಲಿ ಇದರ ಕಾಲ ೧೧೩೩ ರಿಂದ ೧೧೮೮ರ ಮಧ್ಯದಲ್ಲಿದ್ದು, ಇದರಲ್ಲಿ ಶಿಂಗಟಾಲೂರಿನ ಮಹಾಮಂಡಲೇಶ್ವರ ಬಾಚಿ ದೇವ ಆತನ ಕುಮಾರ ಚಿಡಿಗಿ ದೇವನ ಪ್ರಸ್ತಾಪವಿದೆ.

 

ಕ್ಷೇತ್ರ ವನ


ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಮನತಣಿಸಲು ಈಗ ಸುಂದರವಾದ ವನ ನಿರ್ಮಾಣ ಮಾಡಿದ್ದಾರೆ. ಈ ವನದಲ್ಲಿ ಕೆತ್ತನೆಯ ಸುಂದರವಾದ ಮಕ್ಕಳ ಮನ ತಣಿಸುವ ಮೂರ್ತಿಗಳು ಇವೆ.

 

ನವೋದಯ ಶಾಲೆ – ಕೊರ್ಲಹಳ್ಳಿ:


ತಾಲೂಕಾ ಕೇಂದ್ರದಿಂದ ೧೦ ಕಿ.ಮೀ. ದೂರದಲ್ಲಿದೆ. ಗದಗ ಜಿಲ್ಲೆಯ ಕೇಂದ್ರಿಯ ನವೋದಯ ಶಾಲೆ. ದಿನಾಂಕ: ೦೧-೦೨-೧೯೯೯ ರಂದು ಪ್ರಾರಂಭಗೊಂಡುಸುಸಜ್ಜಿತವಾದ ಕಟ್ಟಡವನ್ನು ಹೊಂದಿದೆ.

 

ಮುಂಡರಗಿ ಅನ್ನದಾನೇಶ್ವರ ಮಠ:

ಧರ್ಮ, ಸಂಸ್ಕೃತಿ ಪ್ರಸಾರ ಸಾಹಿತ್ಯ ಕೃತಿಗಳ ಪ್ರಕಟಣೆ ಶಿಕ್ಷಣ ದಾಸೋಹಗಳ ಮೂಲಕ ಈ ನಾಡಿನ ಗಮನ ಸೆಳೆದಿರುವ ಮುಂಡರಗಿ ಶ್ರೀ ಅನ್ನದಾನೇಶ್ವರ ಮಠ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯದ ಪೀಠಾಧಿಪತಿಗಳಾಗಿರುವ ಶ್ರೀ ಪೂಜ್ಯ ಜಗದ್ಗುರು ಡಾ|| ಅನ್ನದಾನೇಶ್ವರ ಮಹಾಸ್ವಾಮಿಗಳು ಕನ್ನಡ, ಸಂಸ್ಕೃತ, ಹಿಂದಿ ತ್ರಿಭಾಷಾ ಪಂಡಿತರಾಗಿದ್ದು, ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ ವಿದ್ವಾಂಸರಾಗಿದ್ದಾರೆ. ಸಾಹಿತ್ಯ ಸಾಧನೆಗಾಗಿ ಕರ್ನಾಟಕ ವಿಶ್ವವಿದ್ಯಾಲಯವು ಪೂಜ್ಯರಿಗೆ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ ಶ್ರೀ ಮಠದ ಪ್ರಕಾಶನ ಸಂಸ್ಥೆಯಿಂದ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಹಸ್ತ ಪ್ರತಿಗಳ ಸಂಗ್ರಹಣೆಗಳು ಕೂಡಾ ಇವೆ.

 

ಪವನ ಯಂತ್ರಗಳು

 

ಕಪ್ಪತ್ತಗಿರಿಯಲ್ಲಿ ಅನೇಕ ಖನಿಜ ಸಂಪತ್ತುಗಳ ಸದ್ಬಳಕೆಯೊಂದಿಗೆ ಗಾಳಿಯಿಂದ ವಿದ್ಯುಚ್ಚಕ್ತಿ ತಯಾರಿಸುವ ಪವನ ಯಂತ್ರಗಳು ಬೆಟ್ಟದ ತುಂಬೆಲ್ಲ ಹರಡಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ತನ್ನು ಪೂರೈಸುತ್ತದೆ.

 

ಇತರೆ ಪ್ರಾಚೀನ ದೇವಾಲಯಗಳು

ನಾಗೇಶ್ವರ (ತ್ರೈಪುರುಷ) ದೇವಾಲಯ ಆಲೂರ, ಶ್ರೀ ಸಿದ್ದೇಶ್ವರ ಗುಡಿ ಡೋಣಿ, ಈಶ್ವರ ಗುಡಿ (ಮೂಲಸ್ಥಾನದ ಕಲಿದೇವೆ ಗುಡಿ) ತಾಂಮ್ರಗುಂಡಿ, ಅಹೋಬಲ ನರಸಿಂಹಸ್ವಾಮಿ ಗುಡಿ, ಭರತೇಶ್ವರ ಗುಡಿ ಬರದೂರು, ಸೋಮೇಶ್ವರ ಗುಡಿ, ಬಿದರಹಳ್ಳಿ, ಹನುಮಂತ ಗುಡಿ, ವೆಂಕಟೇಶ್ವರ ದೇವಾಲಯ ಈಶ್ವರಗುಡಿ, ದಿಡಿಗೇಶ್ವರ ಗುಡಿ ಮೇವುಂಡಿ ಬ್ರಹ್ಮ ದೇವರ ಗುಡಿ, ಮಹಾಬಲೇಶ್ವರ ಗುಡಿ, ಶಿರೂರು- ಇವು ಇತರ ಉಲ್ಲೇಖಾರ್ಹ ಪ್ರಾಚೀನ ದೇವಾಲಯಗಳು. ಬಿದರಹಳ್ಳಿಯಲ್ಲಿ ೧೨ ವರ್ಷಕ್ಕೊಮ್ಮೆ ವಿಶೇಷ ಕಾರ್ಯಕ್ರಮ ಸಿಡಿ ಹಬ್ಬ ನೋಡಲು ರುದ್ರಭಯಂಕರವಾಗಿರುತ್ತದೆ. ಇದನ್ನು ನೋಡಲು ಬೇರೆ ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.

ಮುಂಡರಗಿ ನಾಡಿನಲ್ಲಿ ಹೇರಳವಾದ ಹಸ್ತ ಪ್ರತಿ ಭಂಡಾರ ಹಾಗೂ ಪ್ರಾಚೀನ ಶಾಸನಗಳು ಕೂಡಾ ದೊರೆತಿವೆ. ಇದರಿಂದ ಮುಂಡರಗಿ ನಾಡು ಶ್ರೀಮಂತವಾದ ಇತಿಹಾಸವನ್ನು ಸಾರಿ ಹೇಳುತ್ತದೆ.