ತದ್ದಲಸೆ

ಹೊರಲಾಗದ ಹೊರೆ

ಕುಮಟಾ-ಹೆರವಟ್ಟಾ ಹೆದ್ದಾರಿಯಲ್ಲಿ ಒಂದು ಕಡೆ ನಮ್ಮ ಕಾರು ನಿಂತಿದೆ. ಸಂಜೆಯ ಸಮಯ ಬಾನಿನಲ್ಲಿ ಕೆಂಬಂಣ ಚಲ್ಲಿದೆ. ಸುತ್ತಲಿನ ಪ್ರಕೃತಿ ವೈಭವನ್ನು ನಿರೀಕ್ಷಿಸುತ್ತಿದ್ದೆವು. ದಾರಿಯಂಚಿನಲ್ಲಿ ಉರುವಲು ಕಟ್ಟಿಗೆ ಹೊರೆಹೊತ್ತವರ ಉದ್ದನೆಯ ಸಾಲು ಸಾಗುತ್ತಿತ್ತು. ಎಲ್ಲರೂ ಹೆಂಗಸರು -ಮಕ್ಕಳು. ಪ್ರತಿಯೊಬ್ಬರ ತಲೆಯ ಮೇಲೂ ಜಂಬೆ ಓಡಿನ ಗಾಳಿ ಮರದ ಕಡ್ಡಿಗಳ ಕಂತೆ. ದಿನವೆಲ್ಲ ಆರಿಸಿ ಆರಿಸಿ ಕಟ್ಟು ಕಟ್ಟಿ ಪಟ್ಟಣ ಪ್ರದೇಶವಾಸಿಗಳ ಮನೆಕಡೆ ಹೊತ್ತು ಹೊರಟಿದ್ದಾರೆ. ಈ ಉರುವಲು ವಸ್ತ್ರ ಸಂಗ್ರಹ, ಮಾರಾಟ ಅವರ ಜೀವನೋಪಾಯ.

ಈ ಕಡೆ ಮುಕರಿ ಹೆಂಗಸರು ಬಹುಜನರು ಇದರಿಂದಲೇ ಬದುಕುತ್ತಾರೆ. ಎಂದರು. ಮಿತ್ರರು. ಇದು ಜೀವನಕ್ಕೆ ಸಾಕಾಗುತ್ತದೆಯೆ? ಕೇಳಿದೆ. ಸಾಕಾಗುತ್ತದೆ. ಎಂಬ ಪ್ರಶ್ನೆಯಿಲ್ಲ. ಇದು ಅವರ ಬಂದಿರುವ ಮಾರ್ಗ. ಗಂಡಸರು ಅಷ್ಟಿಷ್ಟು ಕೂಲಿ ಕೆಲಸವನ್ನು ಮಾಡುತ್ತಾರೆ. ಹೆಂಗಸರು ಈ ಉರವಲು ಸಂಗ್ರಹ ಮಾಡಿ ಮಾರಾಟ ಮಾಡುತ್ತಾರೆ. ಜೀವನ ಹೇಗೋ ಸಾಗುತ್ತದೆ. ಒಂದು ಹೊತ್ತಿನ ಗಂಜಿ ಸಾಕು. ಒಟ್ಟಿನಲ್ಲಿ ಒಂದು ಹೊತ್ತಿನ ಗಂಜಿಗೆ ಹೋರಾಟ.

ಸಾಲಾಗಿ ಹೋಗುತ್ತಿದ್ದ ಆ ಮಹಿಳೆಯರನ್ನು ನೋಡಿದೆ. ಕಟ್ಟಿಗೆಯ ಹೊರಗಳನ್ನು ಹೊತ್ತುಕೊಂಡು ನಡೆಯುತ್ತಿದ್ದುದರಿಂದ ಅವರೆಲ್ಲ ಜೀವಂತರಾಗಿದ್ದರೆಂಬುದು ಖಚಿತ. ಇದನ್ನು ಬಿಟ್ಟರೆ ಯಾವೊಂದು ರೀತಿಯಲ್ಲಿಯೊ ಇವರಲ್ಲಿ ಜೀವಕಳೆ ಕಾಣಿಸುತ್ತಿರಲ್ಲ. ಕತ್ತಲೆ ಕವಿಯುವ ಹೊತ್ತು ಅವರೆಲ್ಲರ ಮುಖದಲ್ಲಿಯೂ ಕತ್ತಲು ತುಂಬಿಕೊಂಡಂತೆ ಕಾಣುತ್ತಿತ್ತು. ಧಾರಾಕಾರವಾಗಿ ಮೈ ಬೆವರು ಇಳಿಯುತ್ತಿತ್ತು. ಉಪ್ಪಿಗಾಗಿ ಅವರು ದುಡಿಯಬೇಕಾಗಿರಲಿಲ್ಲ. ಅವರ ದೇಹವೇ ಉಪ್ಪಾಗಿತ್ತು! ಬದುಕು ಸಪ್ಪೆಯಾಗಿತ್ತು. ಅವರಿಗೆ ಬೇಕಾದುದು ಅನ್ನ. . ಎಲ್ಲರ ಸ್ಥಿತಿಯೂ ಒಂದೇ ರೀತಿ. ಒಂದೇ ಬಗೆಯ ಮೈಕಟ್ಟು, ಮುಖ, ಒಂದೇ ಬಗೆಯ ಉಡುಗೆ. ಭಾರಹೊರುವ ಶಕ್ತಿಗೆ ಅನುಗುಣವಾಗಿ ತಲೆಯ ಮೇಲಿನ ಹೊರೆಗಳು ಸಣ್ಣವು-ದೊಡ್ಡವು. ಇರುವೆಗಳು ಸಾಲು ಹಿಡಿದು ಹೊರಟಂತೆ ಅವರ ನಡಿಗೆ.

ನಾವು ನಿಂತಿದ್ದಲ್ಲಿ ಒಂದು ಚಿಕ್ಕ ದಿಣ್ಣೆಯಿತ್ತು. ಒಬ್ಬ ಮುಕರಿ ಮಹಿಳೆ ತನ್ನ ತಲೆಯ ಮೇಲಿನ ಹೊರೆಯನ್ನು ದಿಣ್ಣೆಯ ಮೇಲೆ ಇಳಿಸಿಟ್ಟು ಉಸ್ ಎನ್ನುತ್ತ. ಸೀರೆಯ ಸೆರಗಿನಿಂದ ಮುಖದ ಬೆವರನ್ನು ಒರೆಸಿಕೊಳ್ಳುತ್ತ ನಿಂತಳು. ಅವಳ ಜೊತೆಯಲ್ಲಿ ಇಬ್ಬರು ಚಿಕ್ಕ ಹುಡುಗಿಯರು. ಒಬ್ಬಳಿಗೆ ಹನ್ನೆರಡು ವರ್ಷ  ಇರಬಹುದು. ಮತ್ತೊಬ್ಬಳಿಗೆ ಚಿಕ್ಕವಳು. ಆರೆಂಟು ವರ್ಷ ಇರಬಹುದು. ಅವರ ತಲೆಯ ಮೇಲೂ ಅವರಿಗೆ ತಕ್ಕದಾಗಿ ಪುಟ್ಟ ಪುಟ್ಟ ಸೌದೆಯ ಹೊರೆಗಳಿದ್ದವು. ನಾವು ಹತ್ತಿರಹೋದಾಗ ಅವರಿಗೆ ಮುಜುಗರವಾದಂತೆ ತೋರಿತು. “ಏನವ್ವ ಇವರು ನಿನ್ನ ಮಕ್ಕಳೇ.. ಕೇಳಿದೆ.” ಮಕ್ಕಳು ಕಣ್ಣರಳಿಸಿ ನೋಡುತ್ತಿದ್ದವು. ತಾಯಿ “ಹೌದು” ಎಂದಳು. ಉರವಲು ಕಟ್ಟಿಗೆ ಹೊರೆ ಅವಳ ಸಂಬಳ. ಬೆಳಿಗ್ಗೆಯಿಂದ ಅಲೆದು ಅಲೆದು ಸಂಗ್ರಹಿಸಿದ್ದು. ಪಟ್ಟಣದಲ್ಲಿ ಇಂಧನ ಸಮಸ್ಯೆ ಹೆಚ್ಚು. ವಿದ್ಯುತ್ ಖೋತಾ, ಗ್ಯಾಸ ಕೊರತೆ. ಈ ಉರವಲದೇ ಉಪಯೋಗ. ಮುಕರಿ ಹೆಂಗಸರು ಊಟವಿಲ್ಲದೆ ಬೆಳಗಿನಿಂದ ಸಂಗ್ರಹಿಸಿ ಹೊತ್ತು ತಂದ ಉರವಲ ಹೊರಗೆ ಹತ್ತು ರೂಪಾಯಿ ಸಿಗುತ್ತದೆ. ಎಷ್ಟು ಸಿಕ್ಕುತ್ತದೋ ಅಷ್ಟು ತಂದು ರಾತ್ರಿ ಒಲೆ ಹೊತ್ತಿಸಬೇಕು. ಇನ್ನೂ ಮೂರು ಕಿಲೋಮೀಟರ ಮರಳಿ ಬಂದು ಊರು ಸೇರುಬೇಕು. ಅಕ್ಕಿಕೊಂಡು ತಂದು ಬೀಸಬೇಕು. ತಾನೂ ಮಕ್ಕಳು ಉಣ್ಣಬೇಕು. ಇವತ್ತು ಕಳೆಯುವ ಮೊದಲೆ ಅವರ ಬದುಕಿನಲ್ಲಿ ನಾಳೆ ಬಂದು ಬಿಟ್ಟಿರುತ್ತದೆ! ಮನೆಯ ಗಂಸು ದುಡಿದದ್ದು ಆ ದಿನದ ಅವನ ಕುಡಿತಕ್ಕೇ ಮೀಸಲು. ಇದು ಮುಕರಿ ತಾಯಿಯ ಜೀವನ ಚರಿತ್ರೆ. ಮಾತನ್ನು ಆರಂಭಿಸಿದಾಗ ಆಕೆಗಿದ್ದ ಮುಜುಗರ ಆಮೇಲೆ ಉಳಿದಿರಲಿಲ್ಲ. ತನ್ನದೆಲ್ಲ ದುಃಖವನ್ನು ಅವಳು ತೋಡಿಕೊಂಡಳು. ಜೊತೆಗಿದ್ದವರು. “ಮಕ್ಕಳನ್ನು ಯಾಕೆ ಶಾಲೆಗೆ ಕಳಿಸುವುದಿಲ್ಲ” ಕೇಳಿದರು. ಆಕೆ ಏನು ಉತ್ತರ ಕೊಡುತ್ತಾಳೆ? “ಬದುಕಿನ ಮೇಲೆ ವಿದ್ಯೆ ಬುದ್ದಿ ಎಲ್ಲಿ..” ಎಂದು ಬಿಟ್ಟಳು. ಮತ್ತೆ ಆ ತಾಯಿಯನ್ನು ನಾನು ಕೇಳಿದೆ.” ಈ ಮಕ್ಕಳು ಸಂಗ್ರಹಿಸಿದ ಸೌದೆಯನ್ನು ಮಾರಾಟ ಮಾಡುತ್ತೀಯಾ! ಇದಕ್ಕೆಷ್ಟು ಬರುತ್ತದೆ? “ಅವಳ ಉತ್ತರದಿಂದ ನನಗೆ ತಳಮಳವೆನಿಸಿತು. ಆಕೆ ಹೇಳಿದಳು “ಇಲ್ರೀ ನನ್ನ ಹೊರೆ ಮಾತ್ರ ಮಾರುತ್ತೇನೆ. ದೊಡ್ಡಾಗಿ ಹೊರೆ ನಮ್ಮ ಗಂಗಿ ಬೇಯ್ಸಿಕೊಳ್ಳೋದಕ್ಕೆ ಸ್ವಲ್ಪ ನಿಧಾನಿಸಿ ಚಿಕ್ಕ ಹುಡುಗಿಯ ಕಡೆ ತೋರಿಸಿ ಹೇಳಿದಳು” ಈಕೀ ಹೊರೆಗಳನ್ನು ಸೇರಿಸಿ ಹಾಗೇ ಇಟ್ಟಿದ್ದೀನಿ. ನಾಳೆ ನಾವು ಯಾರಾದರೂ ಸತ್ತರೆ ನಮ್ಮನ್ನು ಸುಡುವುದು ಬೇರೆಯವರಿಗೆ ಕಷ್ಟವಾಗಬಾರ‍್ದು. ನಾನೇ ಸತ್ತರೆ ಈ ಮಕ್ಕಳು ಏನು ಮಾಡ್ತಾವೆ? ನಮ್ಮ ಜಾತೀಲಿ ಸತ್ತರೆ ಹೊತ್ತುಹಾಕೋದೇ! ಹೆಚ್ಚು ಸ್ಥಿತಿವಂತರನ್ನು ಮಾತ್ರ ಸುಡುತ್ತಾರೆ.” ಮಕ್ಕಳು ಹಿಂಬಾಲಿಸಿದವು.

ಮುಕರಿ ಮಹಿಳೆಯನ್ನು ಮಾತನಾಡಿಸುವದು ಅಷ್ಟು ಸುಲಭವಲ್ಲ. ಇವರು ಮೂಕರು-ಮುಕರಿ ಮುಕ್ರಿ ಆದರೆಂದು ಎನ್ನಲಾಗುತ್ತದೆ. ಇವರು ಮೂಲತಃ ಹಾಲಕ್ಕಿ ಒಕ್ಕಲಿಗರೇ ಆಗಿದ್ದರಂತೆ. ಆದರೆ ಹಾಲಕ್ಕಿಗಳಿಗೆ ನಿಷಿದ್ಧವಾದ ಸೇಂದಿ ಕುಡಿಯುವನ್ನು ಇವರು ರೂಢಿಸಿಕೊಂಡರಂತೆ. ಆಗ ಇವರನ್ನು ಜಾತಿ ಕೂಟಕ್ಕೆ ಕರೆದು ಪಂಚಾಯಿತಿ ಮಾಡಲಾಯಿತು. ಅರಸುಗೌಡ, ಗುರುಗೌಡಾದಿಗಳ ಸಮಕ್ಷದಲ್ಲಿ ಜಾತಿ ಕೂಟದ ಹತ್ತು ಸಮಸ್ತರ ಎದುರು ತಮ್ಮ ವ್ಯಸನದ ವಿಷಯದಲ್ಲಿ ಯಾವುದೇ ಬಗೆಯ ಸಮರ್ಪಕ ವಿವರಣೆಯನ್ನು ನೀಡಲಾಗದೆ ಇವರು ಸ್ತಬ್ಧರಾಗಿ ಮೂಕರಂತೆ ನಿಂತು ಬಿಟ್ಟರಂತೆ. ಆಗ ಮೂಕರಂತೆ ಮೌನವಾಗಿ ನಿಂತ ಇವರನ್ನು “ಮೂಕರು” ಎಂದು ಕರೆದು ಜಾತಿ ಕಟ್ಟುಕಟ್ಟಳೆಯನ್ನು ಮೀರಿ “ಕಳ್ಳು” ಕುಡಿದುದಕ್ಕಾಗಿ ಜಾತಿಯಿಂದ ಹೊರಹಾಕಿದರಂತೆ. ಹಾಲಕ್ಕಿ ಒಕ್ಕಲಿಗರು ತಮ್ಮನ್ನು ಹೊರಹಾಕಿದುದಕ್ಕಾಗಿ, ತಮ್ಮನ್ನು ಮುಟ್ಟಿಸಿಕೊಳ್ಳದಿರುವದಕ್ಕೆ ಮುಕರಿ ಮಹಿಳೆಯರಲ್ಲಿ ಅಸಹನೆ ಮುನಿಸು ಇದೆ. ನಾವೇನ್ ಮನುಷ್ಯರಲ್ಲವಾ” ಎಂದು ಪ್ರತಿಕ್ರಿಯಿಸುತ್ತಾರೆ.

ಗಂಜಿ ಇವರ ಮುಖ್ಯ ಆಹಾರ. ಇವರನ್ನು ಗಂಜೀ ಗೌಡರೆಂದು ಗುರುತಿಸುತ್ತಾರೆ. ಗೌಡ ಜಾತಿಯಿಂದ ಬೇರೆಯಾದ ಮೇಲೆ ಇವರು ಬೇರೆಯವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಬಂದ ಸಂಪಾದನೆಯಲ್ಲಿ ಗಂಜಿಯುಂಡು ಬದುಕುವ ಪರಿಸ್ಥಿತಿ. ಮೂಲತಃ ಇವರು ಗೌಡರೇ. ಆದರೆ ಗೌಡಿಕೆ ಗೌರವ ಕಳೆದುಕೊಂಡು ಬರೀ ಗಂಜಿಯುಣ್ಣುವ “ಗಂಜಿಗೌಡರು” ಆದರು. ಗಂಜಿನಿರ್ಗತಿಕರ ಆಹಾರ. ಮುಕ್ರಿಯರು ನಿರ್ಗತಿಕರು. ಇವರನ್ನು ನಿರ್ದಯರನ್ನಾಗಿಯೂ ನೋಡಲಾಯಿತು. “ಒಂದು ಕಾಲದಲ್ಲಿ ನಾವು ಮುತಾಲಿ ಗೌಡ್ರು ಆಗಿದ್ದೆವು. ಈಗ ಮುಕ್ರಿ ಅಂತಾರೆ” ಎಂದು ವಿಪಾದಿಸುವ ಮುಕ್ರಿ ಮಹಿಳೆ ಬಹಳ ನೋಡಿರುವದಂತೂ ನಿಜ. ಮುತಾಲಿ ಎಂದರೆ ಮುಖಂಡ. ಮಾತು ಮರ್ಜಿ ವಹಿಸುವವ ಎಂದರ್ಥ.ಈ ಮುತಾಲಿ ಎನ್ನುವ ಪದವೇ ಮುಕ್ರಿಯಾಗಿರುಬಹುದೇ? ಸಮಾಜದವರು ಸೇರ‍್ದಾಗ ನಮ್ಮಂವ ಒಬ್ಬ ಮುಖಂಡ ನೆಟ್ಟಗೆ ಹೋಗಿ ಮಧ್ಯ ಕುಳಿತ. ಉಳಿದವರು ಬರಲಿಲ್ಲ. ಇವೊಬ್ಬ ದೊಡ್ಡ ಮುತಾಲಿಕ ಎಂದರು ಎನ್ನುತ್ತಾರೆ. ಮುಕ್ಕ (ಹಳ್ಳಿಮುಕ್ಕ) ಮುಕ್ಕು ಎನ್ನುವ ಪದ ಮೂದಲಿಕೆಯ ಅರ್ಥದಲ್ಲಿ ಬಳಸಲಾಗುತ್ತದೆ. ದೂಷಿತರಾಗಿ ಜಾತಿಯಿಂದ ಹೊರ ಹಾಕಲ್ಪಟ್ಟವರು ಎಂಬರ್ಥದಲ್ಲಿ ಮುಕ್ಕರು ಮುಕ್ಕಾದವರು ಎಂದಾಗಿರಲೂಬಹುದು. ಮುಕ್ಕು ಎಂದರೆ ಚೆನ್ನಾಗಿ ತಿನ್ನು ಎಂಬರ್ಥವೂ ಇದೆ. ಕುಡಿದು ಕುಣಿದು ಕುಪ್ಪಳಿಸಿ ಮುಕ್ಕವವರಾದುದರಿಂದ ಇವರು ಮುಕ್ಕವವರು, ಮುಕ್ಕರು ಮುಕ್ರಿ ಆಗಿರಬಹುದು.

ಮನೆಗೆಲಸದಲ್ಲಿರುವ ಮುಕ್ರಿಯವರನ್ನು ಮನೆಯೊಡೆಯರು ಕೊಳಬಾಕರು. ಕೊಳ ಮುಕ್ಕರು ಎನ್ನುವದಲ್ಲದೆ ತಪ್ಲೇಭರ್ತಿ ಮಂದಿ ಎನ್ನುವದುಂಟು (ತಪ್ಲೇ ಎಂದರೆ ತಿನ್ನದ ಪಾತ್ರೆ). ಮುಕ್ಕ ಅಂದರೆ ಮುಗ್ಧರು ಗಂಜಿ ಉಂಡರೂ ಒಂದು ಕಾಲದಲ್ಲಿ ಘನತೆ ಗೌರವದ ಮುತಾಲಿಕರಾಗಿರಲು ಸಾಕು. ಇವರ ಜನಪದ ಗೀತ ಸಾಹಿತ್ಯ ಕತೆಗಳೇ ಇದನ್ನು ಸಾರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಹೆರವಟ್ಟಾ,ವಾಲಗಳ್ಳಿ, ಹಂದಿಗೋಣ, ತಲಗೋಡು, ಹೊಲನಗದ್ದೆ, ಧಾರೇಶ್ವರ, ಗೋಕರ್ಣಗಳಲ್ಲಿ ಹಾಗೂ ಹೊಸಾಕುಳಿ, ಹಳದೀಪುರ ಚಂದಾವರ ಅಂಕೋಲಾ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಇವರ ಮೂಲ ನೆಲೆಯೆಂದು ಕೆನರಾ ಗೆಝಟಿಯರ‍್ ನಲ್ಲಿ ಹೇಳಳಾಗಿದೆ. ಇಂದು ಶಿರಸಿ ತಾಲೂಕಿನ ಹಳ್ಳಿಗಳಲ್ಲಿ ಯಲ್ಲಾಪುರದ ಊರುಗಳಲ್ಲಿಯೂ ಇವರು ಬಂದು ನೆಲೆಸಿದ್ದಾರೆ. ಆದರೆ ಮುಖ್ಯವಾಗಿ ಕುಮಟಾ ಹೊನ್ನಾವರಗಳಲ್ಲಿಯೇ ಇವರ ಪ್ರಮುಖ ವಾಸ್ತವ್ಯ. ಕೆನರಾ ಗೆಝಟಯರನಲ್ಲಿಯೂ ಜನಗಣತಿಯ ಪ್ರಕಾರ ಇವರ ಜನಸಂಖ್ಯೆ ೪೯೮೪. ಇದರಲ್ಲಿ ಗಂಡಸರು ೨೫೦೩ ಹೆಂಗಸರು ೨೪೮೧ ಎಂದು ದಾಖಲಾಗಿದೆ. ಈಗ ಇವರ ಜನಸಂಕ್ಯೆ ಸುಮಾರು ಇಪ್ಪತ್ತು ಸಾವಿರದಷ್ಟು ಎಂದು ಅಂದಾಜಿಸಲಾಗಿದೆ. ಕಪ್ಪು ಬಣ್ಣದ ಕುಳ್ಳ ದೇಹವುಳ್ಳವರು. ಮುಂದೆ ಚಾಚಿದ ದವಡೆ, ಹಿಂದಕ್ಕೆ ಹೋದ ಹಣೆಯುಳ್ಳವರು. ಸ್ವಭಾವತ: ಸೌಮ್ಯರು, ಮುಗ್ಧರು.

ಗಂಡಸರು ಮೈಮುರಿದು ದುಡಿಯದ ಸೋಮಾರಿಗಳು. ಮನೆಯಲ್ಲಿ ಒಂದು ದಿನದ ಮಟ್ಟಿಗೆ ಊಟದ ವ್ಯವಸ್ಥೆಯಿದ್ದರೂ ಆಯ್ತು. ಕೆಲಸಕ್ಕೆ ಹೋಗುವವರಲ್ಲ. ಇದ್ದಾಗ ತಿಂದು ತೇಗುವ ಇವರಿಗೆ ಜೀವ ಧೋರಣೆ ಯೆನ್ನುವದು ಗೊತ್ತಿಲ್ಲ. ಆದರೆ ಮುಕ್ರಿ ಮಹಿಳೆಯರು ಸದಾ ಕಾರ್ಯನಿರತರು. ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಾರೆ. ನಾಳೆಯ ಗಂಜಿಯ ಚಿಂತೆ ಇವರನ್ನು ಕಾಡದೇ ಇರದು. ಮುಕ್ರಿಗಳಿಗೆ ಸ್ವಂತ ಸಾಗುವಳಿ ಜಮೀನು ಹೊಂದಿರುವುದು ಕಡಿಮೆ. ಸ್ವಂತ ಸಾಗುವಳಿ ಜಮೀನು ಹೊಂದಿದವರೂ ವಾರ್ಷಿಕವಾಗಿ ಅದರ ಉತ್ಪನ್ನದಿಂದಲೇ ಉದರ ಪೋಷಣೆ ಮಾಡಿಕೊಳ್ಳವಂತಿಲ್ಲ. ಕೆಲಕಾಲವಾದರೂ ಬೇರೆಯವರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಳ್ಳಬೇಕು. ಈ ಕಾರಣದಿಂದ ಘಟ್ಟದ ಮೇಲೆ ಅಂದರೆ ಶಿರಸಿ ಸಿದ್ಧಾಪುರ ಯಲ್ಲಾಪುರ ತಾಲೂಕಿನ ಹಳ್ಳಿಗಳಲ್ಲಿ ದುಡಿಯಲು ಬರುವದು ಸರ್ವೇ ಸಾಮಾನ್ಯ. ಹೀಗೆ ದುಡಿಯಲು ಬರುವವರಿಗಾಗಿ ಘಟ್ಟದ ಮೇಲಿನ ಹಳ್ಳಿಗಳಲ್ಲಿ ಇವರಿಗೆಂದೇ ಬಿಡಾರದ ವ್ಯವಸ್ಥೆ ಏರ್ಪಾಡು ಇದೆ. ಗದ್ದೆ ಕೆಲಸ, ಅಡಿಕೆ ತೋಟದ ಕಾರ್ಯದಲ್ಲಿ ಮುಕ್ರಿಗಳದು ತುಂಬ ಮುತುವರ್ಜಿ. ಹೊಟ್ಟೆ ತುಂಬ ಊಟ, ಕೈತುಂಬ ಸಂಬಳವಲ್ಲದೆ ಊರಲ್ಲಿನ ಮನೆ ಮದುವೆ ಮಂಗಲ ಕಾರ್ಯಗಳಿಗೆ ಆರ್ಥಿಕ ಸಹಾಯವೂ ಒದಗುತ್ತದೆ. ಮೇಲ್ವರ್ಗದವರಿಂದ ಮುಂಗಡ ಹಣ ಪಡೆದು ಅನಂತರ ಮುಂದಿನ ಹಂಗಾಮಿನಲ್ಲಿ ಕೆಲಸ ಮಾಡಿ ಲೆಕ್ಕ ಚುಕ್ತಾಗೊಳಿಸುವ ಪದ್ಧತಿ ತುಂವಾ ವರ್ಷಗಳಿಂದ ನಡೆದು ಬಂದಿದೆ. ಈಗ ಮುಕ್ರಿಗಳು ಕೃಷಿ ಕೆಲಸ ಕಾರ್ಯಗಳಲ್ಲದೆ ಬಾವಿ ತೋಡುವದು, ಕಲ್ಲು ಕಡಿಯುವದು. ಸಿಮೆಂಟು ಹಾಕುವುದು, ಮನೆ ಕಟ್ಟುವುದು, ಮೋಟಾರು ಗ್ಯಾರೇಜಿನಲ್ಲಿ ಕೆಲಸ ಮಾಡುವದು, ರಸ್ತೆ ಕೆಲಸ, ಚಿಕ್ಕಪುಟ್ಟ ನೌಕರಿ ಕೆಲಸವನ್ನು ಕಲಿತಿದ್ದಾರೆ. ಮುಕ್ರಿ ಹೆಣ್ಣು ಮಕ್ಕಳು ಹೊಲಿಗೆ, ಅಂಗನವಾಡಿಯ ಸಹಾಯಕಿ. ಹೂ ಬೆಳೆಯುವದು ಇತ್ಯಾದಿಗಳಲ್ಲಿ ಸಕ್ರಿಯಗಳಾಗಿದ್ದಾಳೆ.

ಬಾಳ ಬುತ್ತಿಯ ಹಾಡು

ಮುಕರಿ ಜನಾಂಗದ ಮಹಿಳೆಯರು ಮುಂಜಾನೆ ಐದು ಘಂಟೆಗೇ ಏಳುತ್ತಾರೆ. ಮನೆಯ ಹಿರಿಯ ಮಹಿಳೆಯ ಬಾಯಲ್ಲಿ ಗುನುಗುನು ಹಾಡು ಕೇಳಿ ಬರುತ್ತದೆ. ಒಂದೇ ಧಾಟಿ, ಒಂದೇ ಸ್ವರದಲ್ಲಿ ಈ ಹಾಡು.

ಬೆಳಗಾಗಿ ಎದ್ವಿಟ್ಟು ಯಾರ‍್ಯಾರ ನೆನೆಯಲೀ
ತೆಂಗು ಅಡ್ಕೆ ಭತ್ತ ಬೆಳೆಯಂಥಾ|
ಇಂದ್ರಾ ಭೂಮಿ ತಾಯಾನ ಎದ್ದೊಂದು ಘಳಗೀ ನೆನೆದೇನ||

ಹೆತ್ತ ಭೂಮಿತಾಯಿಗಿಂತ ಮಿಗಿಲಾದುದು ಮತ್ತಾವುದೂ ಇಲ್ಲವೆಂಬ ಅಕ್ಕರೆಯನ್ನು ತೋಡಿಕೊಳ್ಳುವ ಹಾಡಿದು. ತಮ್ಮ ಮನೆವಾರ್ತಿ ಕೆಲಸದೊಡನೆ ತಾದಾತ್ಮ್ಯರಾಗಿ ಅವರ ಬಾಯಿಯಿಂದ ಈ ರಸವತ್ತಾದ ಹಾಡುಗಳು ಬರುತ್ತವೆ. ಸಹಜ ವಾಗಿಯೇ ತಾವು ವಾಸವಗಿರುವ ನೈಸರ್ಗಿಕ ಸಿರಿಯಲ್ಲಿ ಮಿಂದು ಹಾಡುವ ಇವುಗಳ್ಲಲಿ ಬರುವ ಅಪಾರ ನೈಸರ್ಗಿಕ (ಸಸ್ಯ ಸಂಬಂಧ) ವರ್ಣನೆಗಳೇ ಸಾಕ್ಷಿ. ತಾವು ನಿಂತಾಗ ಕೆಲಸದಲ್ಲಿ ತೊಡಗಿದ್ದಾಗ. ಉಣುವಾಗ ಹೀಗೆ ಎಲ್ಲ ಕ್ರಿಯೆಗಳಲ್ಲೂ ಕಂಡು ಕೊಂಡುದುದನ್ನುಹಾಡುಗಳಲ್ಲಿ ಹೇಳಿದ್ದಾರೆ. ಗರತಿಯು ಹಾಡುವಾಗ

ಕುಟುಬೀಸೂ ಹಾಡುಯಾವಾಕಿ ಕಲಿಸ್ಯಾಳ|
ಕೃಷ್ಣನ ತಂಗಿ ಸುಭದ್ರಿ
ಕೃಷ್ಣನ ತಂಗಿ ಸುಭದ್ರಿ ಕಲಿಸ್ಯಾಳ|
ಕೃಷ್ಣನ ಮ್ಯಾಲೆ ಪದಗೋಳ||

ಎಂಬುದಾಗಿ ಶ್ರೀಹರಿಯ ಸೋದರಿಯ ಸ್ಮರಣೆ ಮಾಡುತ್ತಾಳೆ

ಮುಕರಿ ಮಹಿಳೆಯರು ಹಳ್ಳಿವಾಸಿಗಳು ಇವರ ಮುಖ್ಯವಾದ ಕಸುಬು ಕೃಷಿ ಕೆಲಸವೇ ಆಗಿದೆ. ಕೃಷಿಗೆ ಸಂಬಂಧಪಟ್ಟುದೆಲ್ಲವೂ ಪರಮ ಪೂಜ್ಯ ವಸ್ತುಗಳು. ಕರ್ತವ್ಯದಲ್ಲಿ ನಿಷ್ಠೆ. ಕಾಯಕವೇ ಕೈಲಾಸವೆಂಬ ವಿಶ್ವಾಸ ಇವರದಾಗಿದೆ. ಈ ಹಾಡು ಇದನ್ನು ಹೇಳುತ್ತದೆ.

ಮಣ್ಣನ್ನು ನಂಬೂವೆ, ಮಣ್ಣಿಂದ ಬದುಕೂನೆ|
ಮಣ್ಣೆನಗೆ ಮುಂದೆ ಹೊನ್ನಕೊಡುಗು|
ಮಣ್ಣೆನೆಗ ಮುಂದೆ ಹೊನ್ನಕೊಡುಗು ಬುದುವಂತ
ಮಣ್ಣೆ ಲೋಕದಲಿ ಬೆಲೆಬಾಳ್ತು||

ಈ ನಂಬಿಕೆಯೇ ಇವರಿಗೆ ನೆಮ್ಮದಿ. ಈಮಣ್ಣು ಹಸನಾಗಬೇಕಾದರೆ ಮಳೆ ಹೊಯ್ಯಬೇಕು. ತಾನು ಮಾಡುವ ಕೆಲಸವೆಲ್ಲಾ ಮುಗಿದ ಮೇಲೆ ಇನ್ನು ವರುಣನ ಕೃಪೆಯಾಗಬೇಕೆಂದು ಬಯಸಿ

ಅಂಬು ಕೊಡುವವನೇ ಮುತ್ತಿನ್ಹಕಚ್ಚಡದವನೇ|
ರಂಬೆ ತೊಡಿಮ್ಯಾಲಿರುವ
ರಂಭಿ ತೊಡಿಮ್ಯಾಲಿರುವ ಮಳೆದೇವ
ಅಂಬರದಿಂದ ಬಂದು ಕರುಣಿಸು

ಮುತ್ತಿನ್ಹಚ್ಚಡ ಹೊದ್ದು ಮಳೆರಾಯ ರಂಭೆಯನ್ನುಮರೆಯದೆ ಮಲಗಿ ಬಿಟ್ಟರೆ ಗತಿಯೇನು? ಈ ಮೊದ್ದು ಭಕ್ತಿಗೆ ಬೆರಗಾದ ಮಳೆರಾಯ

ಗುಡು ಗುಡು ಗಟ್ಟಿತು. ನಡು ಬಾಣ ಮಿಂಚಿತು|
ಸಹ್ಯಾದ್ರಿ ಲಿಂಬು ದಂಡೀನ
ಸಹ್ಯಾದ್ರಿ ಅಂಬ ದಂಡೀನ ನಂದಿ ಮ್ಯಾಲ
ಚೆಂಡಾಡ್ತ ಹುಯ್ದ ಮಳೆರಾಯ
ಕಂಚು ಮಿಂಚೀತು ಕಾಳಸು, ಗುಡುಗೀತು
ಶರಾವತಿ ಗೋಳು ಹನಿಬಿದ್ದು
ಶರಾವತಿ ಗೋಳು ಹನಿಬಿದ್ದು ಗುಡ್ಡದ
ಗಿರಿಮ್ಯಾಲೆ ಕೋಡಿ ಹರಿಯಿತು”

ಧಾರಾಕಾರ ಮಳೆಯಿಂದ ಸಮೃದ್ಧ ಬೆಳೆ ಸಂತೋಷವನ್ನುಂಟು ಮಾಡುತ್ತದೆ. ತನ್ನ ಹೊಲದ ಬೆಳೆಯನ್ನು ನೋಡಿ ಮುಕರಿ ಮಹಿಳೆಯ ಬಾಯಿಂದ

ಹಾದೀಯ ಹೊಲ ನೋಡು, ಭತ್ತದ ಬೆಳೆ ನೋಡು|
ಹಾದಿಯಲಿ ಹೋಗುವವನ ನಗೆ ನೋಡು
ಹಾದಿಯಲಿ ಹೋಗುವವನ ನಗೆ ನೋಡು-ವೆಂಕ್ವಣ್ಣ
ಎಲೆಯಡಿಕೆ ಬಾಯಿ ತೆರೆದೀವೆ

ಎಲ್ಲರ ಕಣ್ಣು ಭತ್ತದ ತೆನೆಯ ಮೇಲೆ ಮಳೆ ಮಣ್ಣಿನ ಗುಣಕ್ಕೆ ತಕ್ಕ ಪ್ರತಿಫಲ ಈ ಸನ್ನೆವೇಶದಲ್ಲಿ ಮುಕಂ ಹೆಣ್ಣಿನ ಹಾಡು-

ಭತ್ತದ ಗದ್ಯಾಗ ಭತ್ತದ ತೆನೆ ಎತ್ತಿ
ತಲೆಯೆಲ್ಲ ತುಂಬಾ ಕಾಳಗೆಜ್ಜಿ
ತಲೆಯೆಲ್ಲ ತುಂಬಾ ಕಾಳಗೆಜ್ಜಿ
ಗಿಡ್ಡಿಓಡಿಸ್ಯಾಳೋ ಗಿಳಿಹಿಂಡು

ಭತ್ತದ ಪೈರು ಕಟ್ಟಿಕೊಂಡ ಕಾಳುಗಳಿಗೆ ಪಶುಪಕ್ಷಿಗಳದೂ ಪಾಲಿದೆ. ಗಿಳಿವಿಂಡುಗಳು ಗುಂಪು ಕಟ್ಟಿಕೊಂಡು ತಿನ್ನುವದನ್ನು ಕವಣೆಯ ಕಲ್ಲುಗಳಿಂದ ಓಡಿಸುವ ಕೆಲಸ ಬೇರೆ. ತೆನೆ ಕಾಯುವ ಜವಾಬ್ದಾರಿ ಮುಕರಿ ಬಾಲೆಯರದು. ಅದು ಕಣಜ ಸೇರುವ ತನಕ ಬಿಡುವೆಲ್ಲಿ? ತಾನು ಬೆಳೆದ ಧಾನ್ಯವನ್ನು ಒಕ್ಕಲು ಮಾಡಿ ಮನೆಗೆತರಬೇಕು. ಮನೀಗೆ ಬಂದ ಮ್ಯಾಲೆ ಭತ್ತದ ರಾಶಿಗೆತೆಂಗಿನಕಾಯಿ ಒಡೆದು ಊದು ಬತ್ತಿಹಚ್ಚಿ ವೀಳ್ಯೆದೆಲೆ ಪಟ್ಟಿ ನೈವೇದ್ಯ ಮಾಡಬೇಕು. ಈ ಸಂದರ್ಭದಲ್ಲಿ ಹೇಳುವ ಹಾಡು-

ಬೆಳೆಯಾಗಿ ಬಂದೈತೆ ವೇಂಕ್ಟೇಶ ನಿನ ದಯದಿಂದ
ಮರೀ ಜಾತ್ರೀಗಿ ಹೋಗ್ತಿನಿ|
ಮಾರೀ ಜಾತ್ರೀಗಿ ಹೋಗ್ತಿನಿ –ನಿನಗಾಗಿ
ಕಂಚೀನ ಗಂಟೆ ತರತೀನಿ

ಮಾರೀ ಜಾತ್ರೆಗೆ ಹೋಗಿ ಅಲ್ಲಿ ನಿನಗಾಗಿ ಹೊಸದಾಗಿ ಕಂಚಿನ ಗಂಟೆ ತರ್ತೀನಿ ಎಂದು ಕೃತಜ್ಞತೆಯಿಂದ ಹೇಳಲಾಗುತ್ತದೆ. ಇಷ್ಟಲ್ಲದೆ ತಾನು ಬೆಳೆದ ಧಾನ್ಯವನ್ನು ತನೊಬ್ಬನೇ ತಿನ್ನಬಾರದು.ಇದು ಭಗವಂತ ಕರುಣಿಸಿದ ಕಾಳು. ನಾಲ್ಕು ಜನರಿಗೆ ಹಂಚಿ ತಾನೂ ಸುಖಪಡಬೇಕೆಂಬುದು ಇವರ ಹೊಸ ಅಕ್ಕಿಪೂಜೆ ಕಾರ್ಯಕ್ರಮವೇ ಸಾರಿ ಹೇಳುತ್ತದೆ.

ಕುಣಿ ಕುಣಿದು ತಮ್ಮಯ್ಯ ಮಣಿ ಮಣಿದು ಹಾಡಿದ
ಕಣ ತುಂಬಿ ರಾಶಿ ಹೊರ ಸೂಸಿ
ಕಣ ತುಂಬಿ ರಾಶಿ ಹೊರಸೂಸಿ –ಮಣ್ಮಗ
ತಿರುಪತಿ ತಿಮ್ಮಪ್ಪನಿನಪಾದ

ಈ ಹೊಸ ಅಕ್ಕಿಯ ಪಾಯಸ ಮಾಡಿ ಅದನ್ನು ಪರಮಾನ್ನವೆಂದು ಕರೆದು ಸಹ ಭೋಜನ ಮಾಡುತ್ತಾರೆ ತಿರುಪತಿ ತಿಮ್ಮಪ್ಪನ ಪ್ರಸಾದವೆಂದು ಸೇವಿಸುತ್ತಾರೆ.

ಮದುವೆ, ಮನೆ ವಾರ್ತೆ

ಮುಕರಿಯವರಲ್ಲಿ ಹಿಂದೆ ಬಾಲ್ಯ ವಿವಾಹ ರೂಡಿಯಲ್ಲಿತ್ತು. ಈಗ ವಧು ವರರಿಗೆ ಹದಿನೆಂಟು ಮೀರಿದ ಮೇಲೆಯೇ ಮದುವೆ. ಮುಕರಿಯವರಲ್ಲಿ ಮದುವೆಯೇ ಹೆಚ್ಚು ಖರ್ಚಿನ ಕಾರ್ಯ. ಒಂದು ಮದುವೆ ಮಾಡಿ ಮುಗಿಸಿ, ಸಾಲ ಸೋಲ ತೀರಲು ನಾಲ್ಕಾರು ವರ್ಷವೇ ಬೇಕು. ಆರ್ಥಿಕ ಅನುಕೂಲತೆ ಒದಗುವವರೆಗೂ ಮದುವೆ ಮಾಡುವಂತಿಲ್ಲ. ಹಾಗಾಗಿ ಇಪ್ಪತ್ತು ವರ್ಷ ಮೀರಲೂಬಹುದು.

ಮದುವೆಯ ನಿಶ್ಚಿತಾರ್ಥ ಕಾರ್ಯದಲ್ಲಿ ಜಾತಿಯ ಯಜಮಾನನು ಮುಖ್ಯಪಾತ್ರ ವಹಿಸುತ್ತಾನೆ. ಪುರೋಹಿತರಿಂದ ಮುಹೂರ್ತ ನಿಶ್ಚಯಿಸಿಕೊಂಡು ನಾಲ್ಕೈದು ಜನ ವರನ ಕಡೆಯವರು ವಧುವಿನ ಮನೆಗೆ ಹೋಗಿ ಅವಳ ಪಾಲಕರಿಗೆ ವೀಳ್ಯವಿತ್ತು ಹೆಣ್ಣಿಗೆ ಕೊಡಬೇಕಾದ “ತೆರ” ವನ್ನು ನೀಡಿ ಮದುವೆ ಮಾಡಿ ಕೊಳ್ಳುವ ವಾಗ್ದಾನವನ್ನು ನಡೆಸುತ್ತಾರೆ. ಈ ಶುಭಕಾರ್ಯ ನಿಮಿತ್ತವಾಗಿ ಹೆಣ್ಣಿನ ಕಡೆಯವರು ವರನ ಕಡೆಯವರಿಗೆ ಪಾಯಸದೂಟ ಹಾಕುತ್ತಾರೆ. ಮೂರನೆಯ ದಿನದಿಂದಲೇ ವಧು ಮತ್ತು ವರನ ಕಡೆಯವರು ಊರವರಿಗೆ ಹಾಗೂ ನೆಂಟರಿಷ್ಟರಿಗೆ ವೀಳ್ಯವಿತ್ತು ಮದುವೆಗೆ ಕರೆಯುತ್ತಾರೆ.  ದಿಬ್ಬಣಿಗರೆಲ್ಲ ಮದುವೆ ಚಪ್ಪರದಲ್ಲಿ ಸಮಾವೇಶವಾದ ಮೇಲೆ ಅವರೆಲ್ಲರ ಮುಂದೆ ಯಜಮಾನನ ಹಿರಿತನದಲ್ಲಿ ಮದುಮಗನನ್ನು ಧೋತ್ರ, ಲುಂಗಿ, ಜಾಕೀಟು ಅಥವಾ ಕೋಟು ತೊಡಿಸಿ ಮುಂಡಾಸು ಸುತ್ತಿ, ಹೆಗಲಿಗೆ ಶಾಲು ಹೊದೆಸಿ, ಬಾಸಿಂಗ ಕಟ್ಟಿ, ಕೈಯಲ್ಲಿ ತೆಂಗಿನಕಾಯಿ, ಸಿಂಗಾರದೆಳೆ ಕೊಟ್ಟು ಶೃಂಗರಿಸುತ್ತಾರೆ. ಆತ ಹಿರಿಯರಿಗೆ ಕುಲದೇವತೆಗೆ ವಂದಿಸಿ ಗರ್ನಾಲು ಗಡದ್ದಿನೊಡನೆ ದಿಬ್ಬಣಿಗರೊಡನೆ ವಧುನಿವ ಮನೆಗೆ ಬರುತ್ತಾನೆ. ವಧುವಿನ ಮನೆಯಲ್ಲಿ ಬಾಗಿಲಲ್ಲಿ ದಿಬ್ಬಣವನ್ನು ಎದುರ್ಗೊಂಡು ಕಾಲಿಗೆ ನೀರು ತಾಗಿಸಿ ಒಳಗೆ ಬರ ಮಾಡಿಕೊಳ್ಳುವರು. ದಿಬ್ಬನ ಒಳಪ್ರವೇಶ ಮಾಡಿದ ಮೇಲೆ ನೆಂಟರಿಗೆ ಆಸ್ರಿಗೆ ಕೊಟ್ಟು (ಬೆಲ್ಲದ ನೀರು) ವಧುನಿನ ತಂದೆ ವರನ ಬೆರಳಿಗೆ ಬೆಳ್ಳಿಯುಂಗುರ ತೊಡಿಸಿ ಬಂಧುಬಳಗ ಜಾತಿಯ ಯಜಮಾನನಿಗೆ ತೇಜ(ಬಟ್ಟೆ) ಕೊಡುತ್ತಾನೆ. ವರನು ಬಾಸಿಂಗ ಕಟ್ಟಿಕೊಂಡು ಧಾರೆ ಮಂಟಪಕ್ಕೆ ಬರುತ್ತಾನೆ. ಇಷ್ಟರೊಳಗೆ ಪುರೋಹಿತರು ಗಣಪತಿ ವರುಣನ ಕಲಶ ಪೂಜೆ ಮಾಡಿ ಇಟ್ಟಿರುತ್ತಾರೆ. ವಧುವನ್ನು ಅಲಂಕರಿಸಿಕೊಂಡು ಹಾಡುಹೇಳುತ್ತಾ ಮಂಟಪಕ್ಕೆ ತಂದು ಅವಳ ಕೈಯಲ್ಲಿ ವರನ ಕೈ ಮೇಲಿಟ್ಟು ಧಾರೆ ಕಾರ್ಯಕ್ರಮ ಶುರು ಮಾಡುತ್ತಾರೆ. ಗಣಪತಿ ವರುಣನ ಕಲಶದ ನೀರನ್ನು ಧಾರೆಗೆ ಕಾರ್ಯಕ್ರಮ ಶುರು ಮಾಡುತ್ತಾರೆ. ಗಣಪತಿ ವರುಣನ ಕಲಶದ ನೀರನ್ನು ಧಾರೆಗೆ ಬಳಸುವದರೊಂದಿಗೆ ಹಾಲನ್ನು ಬಳಸುತ್ತಾರೆ. ವಧುವಿನ ತಂದೆ ತಾಯಿ ಧಾರೆ ಎರೆಯುತ್ತಾರೆ. ಆಮೇಲೆ ಅಣ್ಣ ತಮ್ಮಂದಿರು ದಾಯಾದಿಗಳ ಎರೆಯುತ್ತಾರೆ. ಈ ಧಾರೆಯ ಕಾಲಕ್ಕೆ ಮೊದಲನೆಯದಾಗಿ ಭೂಮಿ ತಾಯಿ ಸಾಕ್ಷಿ, ಎರಡನೆಯದಾಗಿ ಸೂರ್ಯಚಂದ್ರ ಸಾಕ್ಷಿ, ಮೂರನೆಯದಾಗಿ ತ್ರಿಮೂರ್ತಿಗಳ ಸಾಕ್ಷಿ, ನಾಲ್ಕನೆಯದಾಗಿ ಚತುರ್ಮುಖ ಬ್ರಹ್ಮನ ಸಾಕ್ಷಿ, ಐದನೆಯದಾಗಿ ಪಂಚಪಾಡವರ ಸಾಕ್ಷಿ, ಆರನೆಯದಾಗಿ ಷಣ್ಮುಖನ ಸಾಕ್ಷಿ, ಏಳನೆಯದಾಗಿ ಸಪ್ತರ್ಷಿಗಳ ಸಾಕ್ಷಿ, ಎಂಟನೆಯದಾಗಿ ಅಷ್ಟದಿಕ್ಪಾಲಕರ ಸಾಕ್ಷಿ, ಒಂಬತ್ತನೆಯದಾಗಿ ನವಗ್ರಹಗಳ ಸಾಕ್ಷಿ. ಹೀಗೆ ಬಂದ ಪ್ರಮುಖರ ಸಾಕ್ಷಿಯನ್ನು ಕೂಗಿಸಾರಿ ತನ್ನ ಮಗಳನ್ನು ಇಂಥಾ ವರನಿಗೆ ಧಾರೆ ಎರೆದು ಕೊಟ್ನೋ ಕೊಟ್ನೋ ಎಂದು ಪ್ರಚಾರಪಡಿಸಲಾಗುತ್ತದೆ. ಮದುವೆಯ ಮೂರನೆ ದಿನವೇ ಗಂಡನ ಮನೆಗೆ ದಿಬ್ಬಣತೆಗೆದುಕೊಂಡು ಹೋಗುತ್ತಾರೆ. ವಧುವನ್ನು ವರನ ಮನೆಯ ಒಳ ಪ್ರವೇಶದಲ್ಲಿ ಹೊಸ್ತಿಲಲ್ಲಿ ಗಿದ್ದೆಯಲ್ಲಿ ಅಕ್ಕಿಯನ್ನಿಟ್ಟು ಬಲಗಾಲದಲ್ಲಿ ವಧು ಗಿದ್ದೆಯನ್ನು ದೂಡಿಕೊಂಡು ಮುತುವರ್ಜಿವಹಿಸುತ್ತಾರೆ. ದೇವರ ಮುಂದೆ ಮಣೆಯ ಮೇಲೆ ವಧುವರರು ಕೂತ ಮೇಲೆ “ಕಾಶೀ ತುಂಬಾಣ”ದ ಶಾಸ್ತ್ರ ನಡೆಯುತ್ತದೆ. ಎರಡೂ ಕೈಗಳಲ್ಲಿ ಶಾಶಿ (ಅಕ್ಷತೆ) ತುಂಬಿಕೊಂಡು ವಧುವರರ ತಲೆಯ ಮೇಲೆ ಹಾಕುತ್ತಾರೆ. ವರನು ಬಾಸಿಂಗವನ್ನು, ವಧು ತೊಂಡಿಲನ್ನು ಧರಿಸಿರುತ್ತಾರೆ. ಅನಂತರ ವಧು ವರರಿಗೆ ಉಡುಗೊರೆ ಆರತಿ ನಡೆಯುತ್ತದೆ.

ಪುಷ್ಪವತಿ ಪ್ರಸಂತ

“ಸ್ವಲ್ಪಾನೂ ಮುಟ್ಟು ಮೈಲಿಗೆ ಹೇಳೋದು ಇಲ್ವಾ, ಇದೆಂಥಾ ಮಗಿ? ಎಂಬ ಆತಂಕದ ಮಾತನ್ನು ಮುಕರಿ ಮಂಜಿ ತಾಯಿಯ ಮಾತನ್ನು ಕೇಳಿದಾಗ ಯಾರಿಗಾದರೂ ಆಶ್ಚರ್ಯವಾಗದಿರದು. ಈ ಮಾತು ಯಾಕೆ ಏನು ಎಂಬ ಕುತೂಹಲ ನಮಗಾಗುತ್ತದೆ. ಕಾರಣವಿಷ್ಟೇ.. ಮುಕರಿ ಹೆಣ್ಣುಮಗಳು ಮೊದಲ ಬರಿಗೆ ಋತುಮತಿಯಾದಳೆಂದರೆ ಅವಳಿಗೆ ಕೆಲವು ಕಟ್ಟುಪಾಡುಗಳಿವೆ. ಅವನ್ನು ಮೀರುವಂತಿಲ್ಲ. “ಮೈಲಿಗೆ’ ಎಂಬ ಪದ ಮುಟ್ಟಾದಾಗ ಮಾತ್ರ ಇವರಲ್ಲಿ ಗಂಭೀರವಾಗಿದೆ. ಮುಟ್ಟಾದ ನಾಲ್ಕುದಿನ ಬಿಹಷ್ಠೆ(ಬಹಿಷ್ಕೃತ) ಯಾಗಿರಬೇಕು. ಯಾವುದೇ ಕಷ್ಟದ ಕೆಲಸ ಮಾಡುವಂತಿಲ್ಲ. ಯಾರನ್ನೂ ಮುಟ್ಟಿಕೊಳ್ಳಬಾರದು. ಜನರಿಂದ ದೂರವಿರಬೇಕು. ಸಾಧ್ಯವಾದಷ್ಟು ಅಗೋಚರವಾಗಿರಬೇಕು. ಅಲಂಕಾರ ತಿಡಂಬರ ಮಾಡಿಕೊಳ್ಳುವಂತಿಲ್ಲ. ಈ ಅವಸ್ಥೆಗೆ ಮುತುವರ್ಜಿ ಬಹಳ. ಮೊಟ್ಟಮೊದಲ ಬಾರಿಗೆ ಋತುಮತಿಯಾದಾಗ ಮಗಳು ಪುಷ್ಪಾತಿ (ಪುಷ್ಪವತಿ)ಯಾದಳು ಎನ್ನುತ್ತಾರೆ. ಈ ಸಂದರ್ಭದಲ್ಲಿ ಆಚರಿಸುವ ಸಂಪ್ರದಾಯ ಹೀಗಿದೆ.

ಮುಕರಿ ಹೆಣ್ಣುಮಗಳು ೧೩ ರಿಂದ ೧೪ವರ್ಷದಲ್ಲಿ ಲಿಂಗ ಪ್ರೌಢಿಮೆ ಹೊಂದುತ್ತಾಳೆ. ಬಾಲ್ಯಾವಸ್ಥೆಯನ್ನು ದಾಟಿ ಈ ಯೌವ್ವನಾವಸ್ಥೆಗೆ ಬಂದಾಗ ಅವಳನ್ನು ಎಚ್ಚರಿಸಿ ಸಾಂಸಾರಿಕ ಜೀವನದ ಜವಾಬ್ದಾರಿಯ ಕಡೆಗೆ ಕ್ರಿಯಾಶೀಲ ಗೊಳಿಸಲಾಗುತ್ತದೆ. ಈ ಪ್ರಾಯ ಬರುವಿಕೆಯನ್ನು ಕಠಿಣ ಸೂತಕವೆಂದು ಪರಿಗಣಿಸಿ ವಿಶೇಷ ಕಾರ್ಯಾಚರಣೆಗಳ ಮೂಲಕ ಆಚರಿಸಲಾಗುತ್ತದೆ. ನಿರೀಕ್ಷಿತ ವಯಸ್ಸಿನಲ್ಲಿ ಹೆಣ್ಣು ಋತುಮತಿಯಾಗದಿದ್ದರೆ ನಾಡಿ ಔಷಧ ಕೊಡಿಸ ಆದಷ್ಟು ಶೀಘ್ರವಾಗಿ ಬಹಿಷ್ಠೆಯಾಗುವಂತೆ ಮಾಡುತ್ತಾರೆ. ಈ ನಾಡಿಮದ್ದು ಫಲ ನೀಡದಿದ್ದಲ್ಲಿ ಗುಂಡಬಾಳ ದೇವರಿಗೆ ಹರಕೆ ಹೊತ್ತು ಕೊಳ್ಳುತ್ತಾರೆ.

ಮೊದಲ ಬಾರಿಗೆ ಋತುಮತಿಯಾದ ಮುಕರಿ ಹೆಣ್ಣುಮಗಳು ಮುಜುಗರದಿಂದ ಮಾತನಾಡಿಸಿದರೂ ಮಾತನಾಡದೆ ಮೌನವಾಗಿರುತ್ತಾಳೆ. ಪುಷ್ಪವತಿಯಾದ ಹೆಣ್ನು ಫಲವತಿಯಾಗುವ ಮಾವು, ಹಲಸು, ನಿಂಬೆ ಗಿಡಮರದಡಿ ಇರುವಂತೆ ಸೂಚನೆ ನೀಡುತ್ತಾರೆ. ಈ ಸಂಗತಿ ನೆರೆಹೊರೆಯ ಸ್ತ್ರೀಯರಿಗೆ ಗೊತ್ತಾಗಿ ಹುಡುಗಿಯ ಮನೆಯಲ್ಲಿ ಸೇರುತ್ತಾರೆ. ಹಂಡೆನೀರು ಕಾಯಿಸಿ ಐದು ಅಥವಾ ಹನ್ನೊಂದು ಮಂದಿ ಮುತ್ತೈದೆಯರು ಹುಡುಗಿಗೆ ಸ್ನಾನ ಮಾಡಿಸುತ್ತಾರೆ. ಗಂಗವ್ವ ತಾಯಿ, ಗೋದಾವರಿ ತಾಯಿ, ಅಘನಾಶಿನಿ ತಾಯಿ, ಶರಾವತಿತಾಯಿ, ವರದಾತಾಯಿ ಎಲ್ಲರೂ ಮೀಸ್ಯಾರೋ ಮಗಳಿಗೆ ಎಂದು ಹೇಳುತ್ತಾರೆ. ಸಡಗರದಿಂದ ನೀರೆರೆದು ಆಕೆ ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿಸಿ ಹೊಸ ಬಟ್ಟೆಯನ್ನುಕೊಡುತ್ತಾರೆ. ಬಳೆ ತೊಡಿಸುತ್ತಾರೆ. ಅರಿಷಿನ ಕುಂಕುಮ ಹಚ್ಚುತ್ತಾರೆ. ಮುಂದಾಗುವ ಅನುಭವಗಳನ್ನು ಕಿವಿಯಲ್ಲಿ ಹೇಳುತ್ತಾರೆ. ನಾಲ್ಕದಿನವೂ ಎರಡು ಹೊತ್ತು ಸ್ನಾನವಾಗುತ್ತದೆ. ತೊಟ್ಟಿದ್ದ ಬಟ್ಟೆ ಬದಲಿಸಬೇಕು. ಐದು ದಿನಗಳವರೆಗೆ ಅಡಿಗೆ ಮನೆ ದೇವರ ಮನೆ ಪ್ರವೇಶ ಮಾಡಬಾರದು. ಮನೆ ಬಿಟ್ಟು ಹೊಗೆಲ್ಲೂ ಹೋಗಬಾರದು. ಗಂಡಸರನ್ನು ಮುಟ್ಟಬಾರದು. ಈಅವಧಿಯಲ್ಲಿ ಈಕೆ ಸಂಪೂರ್ಣ ಅಶುದ್ಧಳೂ ಅಪವಿತ್ರಳೂ ಆಗಿರುತ್ತಾಳೆಂದು ನಂಬಲಾಗುತ್ತದೆ. ನಾಲ್ಕನೆಯ ದಿನ ’ನೀರೆರೆಯುವ ಶಾಸ್ತ್ರ’ ವಾದ ಮೇಲೆ ಈ ಹೆಣ್ಣಿನ ಹೆಸರಿನಲ್ಲಿವಿಶೇಷವಾಗಿ ತುಳಸಿಪೂಜೆ ಜರುಗತ್ತದೆ. ಹೆಣ್ಣಿನ ಅಜ್ಜ ಅಥವಾ ಅಜ್ಜಿ ಪೂಜಾ ಸಾಮಗ್ರಿಗಳಿಂದ ತುಳಸೀಯನ್ನು ಭಕ್ತಿಯಿಂದ ಪೂಜೆಸಿ ಮೊಮ್ಮಗಳಿಗೆ ಶುಭಕೋರುತ್ತಾರೆ. ಮಂಗಳಾರತಿ ಮುಗಿದ ಮೇಲೆ ತುಳಸಿಗಿಡಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಲಾಗುತ್ತದೆ. ತನಗಿಂತ ಹಿರಿಯರಾದವರಿಗೆಲ್ಲ ಹುಡುಗಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ. ಅವರು ಋತುಮತಿಯಾದ ಹೆಣ್ಣಿಗೆ ಉಡುಗೊರೆ ನೀಡುತ್ತಾರೆ. ಇದಕ್ಕೆ ಪುಷ್ಪಾತಿ ಆಚರಣೆ ಎನ್ನುತ್ತಾರೆ.

ಪುಷ್ಪವತಿಯಾದ ಮುಕರಿ ಹೆಣ್ಣುಮಗಳ ಮದುವೆ ಕಾರ್ಯಕಲಾಪ ಶುರುವಾಗುತ್ತದೆ.

ಮುಕರಿ ಮಹಿಳೆಯರ ಮದುವೆ ಸಡಗರ ಸಂಭ್ರಮ ಸಾಮಾನ್ಯವಾದುದಲ್ಲ. ಮದುವೆಗೆ ತಿಂಗಳಿಗೆ ಮೊದಲೇ ಮನೆಯ ಪ್ರಧಾನಬಾಗಿಲಿನ ಎಡಬಲದಲ್ಲಿ ಹೂ ಬಳ್ಳಿಯ ಚಿತ್ರ ಬಿಡಿಸುತ್ತಾರೆ. ಹಸಿರು ಕೆಂಪಿ ಹಳದಿ ಬಣ್ಣದಿಂದ ದಾಸವಾಳ ಸಂಪಿಗೆ, ಮಲ್ಲಿಗೆ ಇತ್ಯಾದಿ ಹೂಗಳಿರುವ ಬಳ್ಳಿ ಬಿಡಿಸುತ್ತಾರೆ. ಇದು ತಾವು ಅರಣ್ಯವಾಸಿಗಳಾಗಿದ್ದೂ ತಮ್ಮ ಮನೆ ಆಶ್ರಮ ಮಾದರಿಯದು ಎಂಬ ಸ್ಮರಣೆಗಾಗಿ ಈ ಚಿತ್ರ ರಚಿಸುತ್ತಾರೆ. ತುಂಬಾ ಹಿಂದ ಅರಿಷಿನ ಕುಂಕುಮ ಅಣಲೇಕಾಯಿ ಮನೆಯಿಂದ ಈ ಚಿತ್ರ ಬಿಡಿಸುತ್ತಿದ್ದರು. ಈಗ ಪೇಟೆಯಲ್ಲಿ ಸಿಗುವ ಪೇಂಟ ಬಳಸಿ ಬ್ರಶ್‌ ನಿಂದ ಬರೆಯುತ್ತಾರೆ.

ಪ್ರಧಾನ ಬಾಗಿಲ(ವಾಸ್ತು) ಬಲಬದಿ ಗೋಡೆಯ ಮೇಲೆ ತೊಂಡ್ಲು ಬಾಸಿಂಗ ಚಿತ್ರ ಬಿಡಿಸುತ್ತಾರೆ. ಯಕ್ಷಗಾನದ ಕಿರೀಟದಂತಿರುವದು ಬಾಸಿಂಗ ವರನದಾದರೆ, ಟೋಪನ್‌ನಂತಿರುವದು ವಧುವಿನದು. ಗುಡಿಗಾರರು ಬೆಂಡು ಬ್ಯಾಗಡೆಯಿಂದ ತಯಾರಿಸಿಕೊಡುತ್ತಾರೆ. ಆದರೆ ಇದು ಮದುವೆ ಮುಗಿದ ಮೇಲೆ ಹಾಳಾಗಿ ಹೋಗುತ್ತದೆ. ಆದರೆ ಗೋಡೆಯ ಮೇಲೆ ರಚಿತವಾದ ಈ ತೊಂಡ್ಲುಬಾಸಿಂಗ ಬಹಳ ಕಾಲದವರೆಗೆ ಇರುತ್ತದೆ.

ವಧುವರರ ಸೋದರಿಯರು ಕೈಗೆ ಹಚ್ಚೆ ಚಿತ್ರಸಿಕೊಳ್ಳುತ್ತಾರೆ. ಕಾರೇಕಾಯಿ, ಅಣಲೇಕಾಯಿ ಮಸಿಗ ಕುಪ್ಪಿಬಣ್ಣ ಸೇರಿಸಿ ಬೈನೇ ಮರದ ಅಥವಾ ನವಿಲುಗರಿಯ ಕಡ್ಡಿಯಿಂದ ಇದನ್ನು ಚಿತ್ರಿಸಿಕೊಳ್ಳುತ್ತಾರೆ. ಹೀಗೆ ಕೈಗೆ ಹಚ್ಚೆ ಹಾಕಿಸಿಕೊಂಡವರು ವಧು ಅಥವಾ ವರನ ಸೋದರಿ ವರ್ಗದವರೆಂದು ಗುರುಸಿಕೊಳ್ಳಲು ಸಾಧ್ಯವಾಗುತ್ತದೆ. ಇವರಿಗೆ ಮದುವೆಯಲ್ಲಿ ವಿಶೇಷ ಉಡುಗೊರೆ ಇರುತ್ತದೆ. ಮದುಮಕ್ಕಳಿಗೆ ಆರತಿ ಬೆಳಗುವದಕ್ಕೆ ಇವರಿಗೆ ಮೊದಲ ಪ್ರಾಶಸ್ತ್ಯ. ಈ ಆರತಿ ಬಟ್ಟಲನ್ನು ಮಣಿ ಮುತ್ತುಗಳಿಂದ ಶೃಂಗರಿಸಿಕೊಂಡಿರುತ್ತಾರೆ. ನವಿಲು, ಗಿಳಿ, ಆನೆ, ಗೋವು ಇತ್ಯಾದಿ ಚಿತ್ರಗಳನ್ನು ಬಣ್ಣದಲ್ಲಿ ಬಿಡಿಸಿಕೊಂಡಿದ್ದು ಇರುತ್ತದೆ. ಆರತಿ ಎತ್ತುವಾಗ ಇದನ್ನು ಗಮನಿಸಿ ಇದಕ್ಕೆ ಹತ್ತು ಇಪ್ಪತ್ತು ರೂಪಾಯಿ ನೀಡಲಾಗುತ್ತದೆ.

ಶೋಭನ ಪದ್ಧತಿ

ಶೋಭನದ ಪದ್ಧತಿ ಮುಕ್ರಿಯಲ್ಲಿದೆ. ಹೆಣ್ಣು ಮೈ ನೆರೆದ ಐದನೆಯ ದಿನಕ್ಕೆ ಅವಳಿಗೆ ಸ್ನಾನ ಮಾಡಿಸಿ, ಹೊಸ ಸೀರೆಯುಡಿಸಿ, ಕೈಗೆ ಹಿತ್ತಾಳೆಯ ಬಳೆಯನ್ನು೭ ತೊಡಿಸಿ, ತಲೆಗೆಣ್ಣೆ ಹಾಕಿ ಮಂಡೆ ಬಾಚಿ, ಅಡಿಕೆಯ ಸಿಂಗಾರಾದಿ ಐದು ಜಾತಿಯ ಹೂವನ್ನು ಮುಡಿಸುತ್ತಾರೆ ಮುತ್ತೈದೆಯರು ಅವಲಕ್ಕಿ, ಬೆಲ್ಲ ಕಾಯಿ ಕಲಸಿ ತಿನ್ನಲು ಕೊಡುತ್ತಾರೆ. ಅನಂತರ ತವರು ಮನೆಯವರು ಗಂಡ ಹೆಂಡತಿಯರನ್ನು ತಮ್ಮ ಮನೆಗೆ ಕರೆ ತಂದು ಅವರಿಗೆ ಒಂದೇ ಹಾಸಿಗೆ ಹಾಸಿ ದಾಂಪತ್ಯ ಜೀವನ ಧನ್ಯವಾಗಲೆಂದು ಹಾರಯಸುತ್ತರೆ. ಶೋಭನ ಕಾರ್ಯಕಲಾಪವಾಗುವ ಮುನ್ನ ಗಂಡ ಹೆಂಡತಿ ಸಮಾಗಮ ನಿಷಿದ್ಧ. ಹೆಣ್ಣು ಗರ್ಭವತಿಯಾಗುವದು, ಹೆಣ್ಣು ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಯವರಿಬ್ಬರಿಗೂ ಅತ್ಯಂತ ಆನಂದ ಪ್ರಸಂಗ, ಚೊಚ್ಚಲ ಬಸುರಿಯಾದ ಹೆಣ್ಣಿನ ಬಯಕೆಯನ್ನು ತೀರಿಸಲು ಹಿರಿಯರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹೆಣ್ಣು ಗರ್ಭಧರಿಸಿದ್ದು ಪುಷ್ಪವತಿಯಾದ ಪ್ರಸನ್ನತೆ. ಬಸುರಿಗೆ ಏಳು ಅಥವಾ ಒಂಭತ್ತು ತಿಂಗಳು ತುಂಬಿದಾಗ ಬಯಕೆ ಬಡಿಸುವ ಕಾರ್ಯಕ್ರಮ ಗಂಡನ ಮನೆಯಲ್ಲಿ ಮೊದಲಿಗೆ ಮಾಡುತ್ತಾರೆ.  ಅಂದು ಬಸುರಿಗೆ ಹೊಸ ಸೀರೆಯುಡಿಸಿ ಹಸಿರು ಬಳೆ ತೊಡಿಸಿ ಮಂಡೆಬಾಚಿ, ಹೂ ಮುಡಿಸಿ ಸಂಬಂಧಿಕರೆಲ್ಲ ಸೇರಿ ಬಯಕೆ ಬಡಿಸುತ್ತಾರೆ. ಅನಂತರ ಬಸುರಿ ಮನೆಯ ಹಿರಿಯರಿಗೆಲ್ಲ ನಮಿಸಿ ಹೆರಿಗಾಗಿ ತವರಿಗೆ ಹೋಗುತ್ತಾಳೆ. ತಾಯಾಗಿ ಬಾರಮ್ಮಾ ಮಗಳೆ ಎಂದು ಹರಸಿ ಕಳಿಸುತ್ತಾರೆ. ಈಗ ಹೆಣ್ಣು ಫಲವತಿ. ಈ ಫಲವತಿ (ಗರ್ಭವತಿ)ಯ ಉಸ್ತುವಾರಿಯನ್ನು ಬೆಜಗ್ತಿ(ಸೂಲಗಿತ್ತಿ) ನಿರ್ವಹಿಸುತ್ತಿದ್ದಳು. ಗರ್ಭಿಣಿ ಬೇನೆಗುದಿಯುತ್ತಿರುವಾಗಲೇ ಬೇಜಗ್ತಿಯನ್ನು ಕರೆತಂದು ಗರ್ಭಿಣಿ ಬಾಳಂತಿಯಾಗಲು ಸುತ್ತ ಮರೆಯನ್ನು ಕಟ್ಟಿ ಗರ್ಭಿಣಿ ಹಾಗೂ ಬೇಜಗ್ತಿಯನ್ನು ಅಲ್ಲಿ ಬಿಡುತ್ತಿದ್ದರು. ಶಿಶು ಜನ್ಮವಾದ ಕೂಡಲೇ ಮಗುವಿನ ಹೊಕ್ಕಳ ಬಳ್ಳಿಯನ್ನು ಕೊಯ್ದು ಆಮೆಹೊಂಡ ತೋಡಿ ಅಲ್ಲಿ ಹುಗಿದು ಮೂರು ದಿನಗಳ ಕಾಲ ಶಿಶುವಿನ ಸ್ನಾನ ಅಲ್ಲೇ ಮಾಡಿಸುತ್ತಿದ್ದರು. ನವಜಾತ ಶಿಶುವಿಗೆ ಸ್ನಾನವಾದ ಮೇಲೆ ಕಾಡು ಜೀರಿಗೆಯ ಕಷಾಯ ಕುಡಿಸುತ್ತಿದ್ದರು. ಬಾಳಂತಿಗೂ ಸ್ನಾನ ಮಾಡಿಸಿ ಮೆಣಸಿನ ಕಾಳು, ಉಳ್ಳಾಗಡ್ಡೆ, ಕಾಡು ಜೀರಿಗೆ, ಬೆಲ್ಲ ಬೆರಸಿದ ಕಷಾಯ ಕೊಡುತ್ತಿದ್ದರು. ಈಪಥ್ಯ ಮೂರು ದಿನಗಳ ಪರ್ಯಂತ ನಡೆದು ನಂತರ ನೆಲವನ್ನು ಸಾರಿಸಿ ಮನೆ ಮಂದಿಯೆಲ್ಲ ಬಟ್ಟೆಯನ್ನು ತೊಳೆದುಕೊಂಡು ಸ್ನಾನ ಮಾಡುತ್ತಿದ್ದರು. ಅನಂತರ ಬಾಳಂತಿಗೆ ಊಟ ನೀಡುವದು. ಈ ನಸಿಂಗ ಹೋಂಗಳ ವ್ಯವಸ್ಥೆಯಿಂದಾಗಿ ಈ ಯಾವ ಪರಿಪಾಠವೂ ಉಳಿದಿಲ್ಲ.

ನಾಮಕರಣ

ಮಗು ಹುಟ್ಟಿದ ಹನ್ನೆರಡನೆಯ ದಿನಕ್ಕೆ ಜಾತಿಯ ಯಜಮಾನನ ನೇತೃತ್ವದಲ್ಲಿ ಮಗುವಿಗೆ ಹೆಸರಿಡುವ ಕಾರ್ಯಕ್ರಮ ನಡೆಯುತ್ತದೆ. ಮಗು ಹುಟ್ಟಿದ ವೇಳೆಗೆ ಪುರೋಹಿತರಿಂದ ಶುಭಾಶುಭಗಳನ್ನು ತಿಳಿದು ಮಗುವಿನ ಜನ್ಮ ನಾಮವನ್ನು ಕೇಳಿಕೊಂಡು ಬಂದು ನಾಮಕರಣ ಶಾಸ್ತ್ರ ಮಾಡುತ್ತಾರೆ. ಸಾಮಾನ್ಯವಾಗಿಕುಟುಂಬದ ಅಜ್ಜನ ಹೆಸರು ಅಥವಾ ಕುಲ ಗ್ರಾಮ ದೇವರ ಹೆಸರನ್ನಿಡುವ ವಾಡಿಕೆ. ಇದರಲ್ಲಿ ಹುಲಿಯ, ಮೂರು ,ಕಣಿಯ, ಜಟ್ಟಿ, ಬೀರ, ಶಿವು, ಮಾಸ್ತಿ, ದೇವು, ಈರ, ತಿಮ್ಮ, ಹನುಮಂತ ಎಂಬ ಹೆಸರುಗಳನ್ನು ಗಂಡು ಮಗುವಿಗೆ: ಬೀರಿ, ಕನ್ನೆ, ದೇವಿ, ನಾಗಿ ಕೆಂಚಿ, ತಿಮ್ಮಿ ಇತ್ಯಾದಿ ಹೆಸರುಗಳನ್ನು ಹೆಣ್ಣು ಮಕ್ಕಳಿಗೆ ಇಡುವ ರೂಢಿ ಮುಕ್ರಿಯರಲ್ಲಿ ಅಡ್ಡ ಹೆಸರುಗಳಿಲ್ಲ. ತಮ್ಮ ಹೆಸರಿನ ಮುಂದೆ ಮುಕ್ರಿ, ಅಥವಾ ತಮ್ಮ ಹಳ್ಳಿಯ ಹೆಸರನ್ನು ಸೇರಿಸುತ್ತಾರೆ. ಮಗುವಿಗೆ ಹೆಸರಿಟ್ಟಾದ ಮೇಲೆ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಮುತ್ತೈದೆಯರು ಜೋಗುಳ ಹಾಡಿ ತೊಟ್ಟಿಲು ತೂಗುತ್ತಾರೆ.

ಗೃಹಕೃತ್ಯಗಳೆಲ್ಲ ಮುಕ್ರಿಯವರಲ್ಲಿ ಹೆಂಗಸರದೇ. ಪೂರ್ವೋತ್ತರವಾಗಿ ಮುಕ್ರಿಯರ ಮನೆಯ ಮುಖವಿರುತ್ತದೆ. ಇವರು ಮಣ್ಣಿನ ಗೋಡೆಯ ಇಲ್ಲವೆ ತೆಂಗಿನ ಮಡಿಲು ಹಾಗೂ ಬಿದರಿನ ತಟ್ಟಿಯಿಂದ ಮನೆಯ ಹೊರಾವಣವಿರುತ್ತದೆ. ಅಡಿಕೆಯ ಸೋಗೆ, ಹುಲ್ಲು ಕರಡದಿಂದ ಮೇಲ್ಚಾವಣಿ ಮಾಡಿಕೊಳ್ಳುತ್ತಾರೆ. ಮನೆಗಳಿಗೆ ಕಿಡಕಿಗಳು ತೀರ ಕಡಿಮೆ. ಇಲ್ಲದಿರುವದೂ ಉಂಟು. ಮನೆಗೆ ಹೆಚ್ಚಾಗಿ ಮುಂಬಾಗಿಲು ಒಂದೇ. ಮನೆಯೊಳಗೆ ಮುಂದೊಂದು ಜಗುಲಿ, ಇನ್ನೊಂದು ಕೋಣೆಯಿರುತ್ತದೆ. ಒಂದೇ ಕೋಣೆಯಲ್ಲಿ ಉಡುವದು, ಉಣ್ಣುವದು, ಮಲಗುವದು, ಆಡುವದು ಹೀಗೆ ಎಲ್ಲ ಕಾರ್ಯಕಲಾಪಗಳು ಜರಗುತ್ತವೆ. ಗಂಡಸರದು ಹೆಚ್ಚಾಗಿ ಜಗುಲಿಯಲ್ಲೇ ದರ್ಬಾರು. ಹೆಂಗಸರು ಮಕ್ಕಳು ಕೋಣೆ ಬಿಟ್ಟು ಹೊರ ಬರುವದಿಲ್ಲ. ಮಾಳಿಕಗೆಯ ಮನೆಗಳು ಇಲ್ಲವೆನ್ನುವಷ್ಟು ಕಡಿಮೆ. ಇತ್ತೀಚೆಗೆ ಸರಕಾರದವರು ಕಟ್ಟಿಸಿಕೊಟ್ಟ ಆಶ್ರಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುದೀಪದ ವ್ಯವಸ್ಥೆಯಾಗಿದೆ. ಅನೇಕರು ಮನೆಗಳಲ್ಲಿ ಇನ್ನೂ ಚಿಮಣೆ ಲಾಟೀನು ಬೆಳಕಿನಲ್ಲಿಯೇ ಕಳೆಯುತ್ತಿದ್ದಾರೆ. ಕತ್ತಲೆಯಲ್ಲಿ ಕಿರಿಯಾಗುವದೆಂಬ ಕಾರಣದಿಂದ ಸೂರ್ಯಕಂತಿದ ತಾಸಿನಲ್ಲಿಯೇ ಊಟ ಮುಗಿಸಿ ಮಲಗಿ ಬಿಡುತ್ತಾರೆ. ಇವರುಗಳ ಮನೆಯಂಗಳದಲ್ಲಿ ತುಲಸಿ ಕಟ್ಟೆಯಿರುತ್ತದೆ. ಅಲ್ಲಿ ತಿರುಪತಿ ವೆಂಕಟರಮಣ ಮತ್ತು ಅವನ ರಾಣಿಯರಿಬ್ಬರ ಚಂದನದ ಗೊಂಬೆಯಿಟ್ಟು ಪೂಜೆ ಮಾಡುವದು ನಿತ್ಯವಿಧಿ. ತಿರುಪತಿ ಯಾತ್ರೆಯ ನಂತರ ಗೋಕರ್ಣ ಮಹಾಬಲೇಶ್ವರ ಸನ್ನಿಧಿಗೂ ಬರುತ್ತಾರೆ.

ಮುಕರಿಯರಲ್ಲಿ ಪ್ರತ್ಯೇಕ ಸ್ನಾನದ ಮನೆಯಲ್ಲಿ. ಅವರು ನಿತ್ಯಸ್ನಾನ ಮಾಡುವದೇ ಕಡಿಮೆ. ಹಗುಲಿನ ದುಡಿಮೆಯನ್ನು ಮುಗಿಸಿಕೊಂಡು ಬಂದು ಸಂಜೆಯ ವೇಳೆಯಲ್ಲಿ ಸ್ನಾನ ಮಾಡುವದು ರೂಢಿ. ಸ್ನಾನವನ್ನು ಹಿತ್ತಲಿನ ತೆಂಗಿನ ಮರದ ಕೆಳಗೆ ಮಾಡುವದು ಹೆಚ್ಚು. ಮಳೆಗಾಲದಲ್ಲಿ ಮಾತ್ರ ಹುಲ್ಲಿನ ಸಣ್ಣ ಚಪ್ಪರ ಹಾಕಿಕೊಂಡು ಕೆಲವರು ಸ್ನಾನ ಮಾಡುತ್ತಾರೆ. ಕೆಲವರಿಗೆ ಅದೂ ಅಲಭ್ಯ. ಇನ್ನು ಮಲವಿಸರ್ಜನೆಗೆ ತಂಬಿಗೆ ತೆಗೆದುಕೊಂಡು ಹೋಗಿ ಮರೆಯಾಗಿ ಬರುವದು.

ಅಡಿಗೆಗೆ ಮಣ್ಣಿನ ಮಡಿಕೆಗಳನ್ನು ಬಳಸುತ್ತಾರೆ. ಕೆಲವರು ಅಲುಮಿನಿಯಮ್ ಪಾತ್ರೆಗಳನ್ನು ಉಪಯೋಗಿಸಿದರೆ ಕ್ವಚಿತ್ತಾಗಿ ಕೆಲವರು ತಾಮ್ರ, ಹಿತ್ತಾಳೆ, ಇಲ್ಲವೆ ಸ್ಟೀಲಿನ ಪಾತ್ರೆಗಳನ್ನು ಬಳಸುತ್ತಾರೆ. ಸ್ನಾನಕ್ಕೆ ಬೆಟ್ಟಕ್ಕೆ ಹೋಗಲು ಪ್ಲಾಸ್ಟಿಕ್ ಬಕೆಟ್ಟು, ತಂಬಿಗೆ ಬಳಸುತ್ತಾರೆ.

ಮುಕ್ರಿಯರಲ್ಲಿ ಹಳೆಯ ತಲೆಮಾರಿನವರು ಮುಂಗಚ್ಚೆಯುಡುತ್ತಾರೆ. ಕೆಲವರು ಮುಂಗಚ್ಚೆಯುಟ್ಟು ಅದರ ಒಂದು ಸೆರಗನ್ನು ಮುಂದೆ ಇಳಿಬಿಟ್ಟರೆ ಮತ್ತೆ ಕೆಲವರು ಸೆರಗನ್ನು ಇಳಿಬಿಡದೆ ಎರಡೂ ಸೆರಗಿನ ತಿದಿಗಳನ್ನು ಕುಂಡೆಯ ಹಿಂದೆ ಉಡದಾರಕ್ಕೆ ಸಿಕ್ಕಿಸುತ್ತಾರೆ. ಸೊಂಟದ ಸುತ್ತ ಲಡ್ಡ ಪಂಜೆ ಧರಿಸುತ್ತಾರೆ. ಈಗ ಹಳೆಯ ಮಾದರಿಯ ಈ ಉಡುಪು ತೊಡವದು ಕಡಿಮೆಯಾಗಿ ಆಧುನಿಕ ಉಡುಪನ್ನೇ ಧರಿಸುತ್ತಿದ್ದಾರೆ.

ಗಂಡಸರು ಕಿವಿಗೆ ಬಂಗಾರದ ಇಲ್ಲವೆ ಹಿತ್ತಾಳೆಯ ಮುರುಗಳನ್ನು ಹಾಕಿಕೊಳ್ಳುತ್ತಾರೆ. ಬಲಗಿವಿಗೆ ಚಿನ್ನದ ಕೊಡಕೆ ಮುರ ಇಲ್ಲವೆ ಸ್ವರ್ಗದೋಲೆಯೆಂದು ಕರೆಯಲಾಗುವ ಮುರು ಇರುತ್ತದೆ. ಬೆರಳಿಗೆ ಹಿತ್ತಾಳೆ, ಬೆಳ್ಳಿ ಅನುಕೂಲಸ್ಥರಾದವರು ಬಂಗಾರದ ಉಂಗುರ ಹಾಕಿಕೊಳ್ಳುತ್ತಾರೆ.

ಹೆಂಗಸರು ಕಾಜಿನ ಇಲ್ಲವೆ ಕಂಚಿನ ಬಳೆಗಳನ್ನು ತೊಡುತ್ತಾರೆ. ಕಿವಿಗೆ ಮುರ, ಬೆರಳಿಗೆ ಉಂಗರ, ಮೂಗಿಗೆ ಮೂಗುತಿ ಧರಿಸುತ್ತಾರೆ. ಕೊರಳಲ್ಲಿ ಹಾಲಕ್ಕಿ ಹೆಂಗಸರ ಹಾಗೆಯೇ ಬಹಳಷ್ಟು ಮಣಿ ಸರಗಳನ್ನು ತೊಡುತ್ತಾರೆ. ಮದುವೆಯಾದ ಹೆಂಗಸರು ಹಿತ್ತಾಳೆಯ ತೋಳ್ ಕಡಗಗಳನ್ನು ಧರಿಸುತ್ತಾರೆ. ಈಗ ಮಣಗಟ್ಟಲೆ ಸರಗಳನ್ನು ತೊಡವದು ಇಲ್ಲವಾಗಿದೆ. ಆಧುನಿಕ ಆಭರಣಗಳು ಇವರನ್ನು ಆಕರ್ಷಿಸಿವೆ.

ಹಿಂದೆ ಬೆಳಿಗ್ಗೆದ್ದು ಗಂಜಿ ಇಲ್ಲವೆ ಅಂಬಲಿ ಕುಡಿದು ಕೆಲಸಕ್ಕೆ ಹೋಗುವ ಸಂಪ್ರದಾಯ. ಬೆಲ್ಲ ನೀರು, ರಾಗಿ ನೀರು ಕುಡಿಯುತ್ತಿದ್ದರು. ಆದರೆ ಈಗ ಸಾಮಾನ್ಯವಾಗಿ ಬೆಳಿಗ್ಗೆದ್ದು ತಿಂಡಿ ಚಹಾ ಕುಡಿದು ಕೆಲಸಕ್ಕೆ ಹೋಗುತ್ತಾರೆ. ಚಹಾ ಇವರಿಗೆ ಪ್ರಿಯವಾದ ಪೇಯವಾಗಿದೆ. ಚಹದ ನಂತರ ಇವರಿಗೆ ಪ್ರಿಯವಾದದ್ದು ಹೆಂಡವೇ. ಮುಕ್ರಿಯರ ಈ ಹೆಂಡ ಕುಡಿತಕ್ಕೆಸರಾಯಿ ಎಂಬುದಿದೆಯಂತೆ. ಅದನ್ನು ಸರಾಸರಿಯ ಜನ ಕುಡಿವರಂತೆ, ಎಂದು ಮುಕ್ರಿ ಹೆಣ್ಣುಗಳು ಹಾಡುತ್ತಾರೆ.

ಅಡಿಗೆಊಟ

ಮುಕರಿ ಮಹಿಳೆಯರ ಅಡುಗೆ ವಿಶೇಷವಾದದ್ದೇ ಅಲ್ಲ. ಬೇಳೆ ಕಾಳುಗಳನ್ನು ಖರೀದಿಸುವದನಕ್ಕೆ ಅವರ ಬಳಿ ಕಾಸು ಇರುವುದಿಲ್ಲ. ಮದುವೆ ಸಂದರ್ಭದಲ್ಲಿ ತೊಗರಿ ಬೇಳೆ ತೆಗದುಕೊಳ್ಳುತ್ತಾರೆ. ಮದುವೆಯಲ್ಲಿ ಮೊಗೆ ಕಾಯಿ ಕತ್ತರಿಸಿ, ತೊಗರಿ ಬೇಳೆ ಹಾಕಿ, ತೆಂಗಿನ ಕಾಯಿ ತುರಿ ಬೀಸಿ ಮೆಣಸಿನಪುಡಿ ಹಾಕಿದ ಸಾಂಬಾರ ಮಾಡುತ್ತಾರೆ. ಎರಡು ಮೂರು ಬಾರಿ ಅನ್ನಕ್ಕೂ ಈ ಸಾಂಬಾರದ ಸಾರನ್ನೇ ಸುರವಿಕೊಂಡು ಉಣ್ಣುತ್ತಾರೆ. ತೊಗರಿ ಬೇಳೆ ಹೆಚ್ಚಾಗಿ ಬಳಸಿದ ಒಬ್ಬಿಬ್ಬರು ಗೌಡರನ್ನು ಇವರು ತೊಗರಿ ಬೇಳೆ ಗೌಡ್ರು ಎಂದೇ ಕರೆದಿದ್ದಾರೆ. ಅಕ್ಕಿಯ ಬಳಕೆ ಸರ್ವೆ ಸಾಮಾನ್ಯ. ಮೊದಲೆಲ್ಲ ಮದುವೆಯಲ್ಲಿ ಅಕ್ಕಿಗೆ ಬೆಲ್ಲ ಸೇರಿಸಿ ಪಾಯಸ ಮಾಡುತ್ತಿದ್ದರು. ಈಗೀಗ ಪೇಟೆಯಲ್ಲಿ ಸಿಗುವ ಬೋಂದಿ ಸಿಹಿ ಕಾಳನ್ನು ತಂದು ಒಬ್ಬೊಬ್ಬರಿಗೆ ಒಂದೊಂದು ಮುಷ್ಟಿ ಬಡಿಸುತ್ತಾರೆ. ದಿನಕ್ಕೆರಡು ಬಾರಿ ಊಟ ಎಲ್ಲರೂ ಮಾಡುವದಿಲ್ಲ. ಅಕ್ಕಿಯ ಗಂಜಿ, ರಾಗಿಯ ಅಂಬಲಿ ಹಗಲಿನಲ್ಲಾದರೆ ರಾತ್ರಿ ಕೊಚ್ಚಿಗೆ ಅಕ್ಕಿ ಅನ್ನು ಉಣ್ಣುತ್ತಾರೆ. ಚಹಾ ತಿಂಡಿ ಸಿಕ್ಕರೆ ಇದೂ ಬೇಡ. ಮೀನಿನ ಸಾರು ತುಂಬಾ ಪ್ರಿಯ. ಮೀನು, ಮಾಂಸಗಳು ಇವರಿಗೆ ಇಷ್ಟವಾದರೂ ಇವರಿಗೆ ಕಾಸಿಗೆ ಎಟುಕದ್ದರಿಂದ ಆಗಾಗ ಅಗ್ಗದ ಮೀನುಗಳನ್ನು ತಂದು ತಿನ್ನುವದೇ ಹೆಚ್ಚು. ಬಂಡಿಯ ಹಬ್ಬದ ಸಂದರ್ಭದಲ್ಲಿ ದೇವರಿಗೆ ಬಲಿಕೊಟ್ಟ ಕೋಳಿಯ ಮಾಂಸದಡಿಗೆಯ ಊಟವನ್ನು ಸಕುಟುಂಬ ಸಪರಿವಾರದೊಡನೆ ಮಾಡುತ್ತಾರೆ. ಮದುವೆ ಮತ್ತು ಅಂತ್ಯಕ್ರಿಯೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇವರದು ವಿಶೇಷ ಅಡುಗೆ. ಹಬ್ಬಗಳಲ್ಲಿ ಪಾಯಸ ದೋಸೆ ರೊಟ್ಟಿ ವಿಶೇಷ ಅಡಿಗೆ ತಯಾರಿಸುತ್ತಾರೆ. ಅವಲಕ್ಕೆ ಬೆಲ್ಲ ಕಾಯಿ ತುರಿ ಪಾಕ ಹಾಕುವದು ಮುಕರಿ ಮಹಿಳೆಯರ ವಿಶೇಷ ಕಜ್ಜಾಯ.

ಹಬ್ಬಹರಿದಿನ

ಹಿಂದುಗಳು ಆಚರಿಸುವ ಚವತಿ ಹಾಗೂಕೃಷ್ಣಾಷ್ಟಮಿ ಹಬ್ಬಗಳನ್ನು ಹೊರತು ಪಡಿಸಿ ಉಳಿದೆಲ್ಲ ಹಬ್ಬಗಳನ್ನು ಆಚರಿಸುತ್ತಾರೆ. ಕೃಷ್ಣಾಷ್ಟಮಿ ಆಚರಿಸದಿರುವದಕ್ಕೆ ಒಂದು ಕತೆ ಹೇಳುತ್ತಾರೆ: ಕೃಷ್ಣಾಷ್ಟಮಿಯ ದಿನದಂದು ಹನ್ನೆರಡು ಮಂದಿ ಬೆಳ್ಳಟ್ಟೆ ಜಾತಿಯ ಹೂಗಳನ್ನು ಕೊಯ್ಯಲಿಕ್ಕೆ ಕಾಡಿಗೆ ಹೋಗಿದ್ದರು. ತಾವು ಹೋಗುವಾಗ ಹನ್ನೆರಡು ಜನ ಇದ್ದರೆಂದು ಅರವಿತ್ತು. ಎಲ್ಲರೂ ಕಾಡಿನಿಂದ ಮರಳಿದರೇ ಎಂದು ತಿಳಿಯಲು ಒಬ್ಬಾಕೆ ತಮ್ಮವರ ಲೆಕ್ಕ ಮಾಡಿದಳು. ಹನ್ನೊಂದರವರೆಗೆ ಲೆಕ್ಕ ಮಾಡಿ ತನ್ನನ್ನು ಲೆಕ್ಕದಲ್ಲಿ ಸೇರಿಸಿಕೊಳ್ಳಲು ಮರೆತು ಬಿಟ್ಟಿದ್ದಳು. ಆಗ ಅವಳಂತೆಯೇ ಇತರರೂ ತನ್ನನ್ನು ಸೇರಿಸದೆ ಲೆಕ್ಕ ಮಾಡಿ, ತಮ್ಮಲ್ಲಿ ಒಬ್ಬಳು ಕಾಣೆಯಾಗಿರುವಳೆಂದು ಗಾಬರಿಯಾದರು. ಇದೇ ಕಡೇ ಕೃಷ್ಣಾಷ್ಟಮಿಯು ಇನ್ನು ಮುಂದೆ ಕೃಷ್ಣಾಷ್ಟಮಿ ಹಬ್ಬವನ್ನು ಆಚರಿಸಬಾರದೆಂದು ನಿಶ್ಚಯಿಸಿದರು. ದೀಪಾವಳಿ ಇವರಿಗೆ ದೊಡ್ಡ ಹಬ್ಬ. ದೀಪಾವಳಿ ಬಂತೆಂದರೆ ವಾರಗಟ್ಟಲೆ ಇವರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಾರೆ. ದೀಪಾವಳಿಯ ನೀರು ಮೀಯುವ ದಿನ ನಸುಕಿನಲ್ಲಿ ಸ್ನಾನ ಮಾಡಿ, ಒಂದು ಹಲಗೆಯ ಮಣೆಯ ಮೇಲೆ ಕುಡಿ ಬಾಳೆಯನ್ನಿಟ್ಟು ಅದರ ಮೇಲೆ ಅಕ್ಕಿ ಹರಗಿ ಮೊಗ ಕಾಯಿಯನ್ನಿಟ್ಟು ಅದಕ್ಕೆ ಮಸಿಯಿಂದ ಮೀಸೆಯಿರುವ ಮುಖದಾಕೃತಿಯನ್ನು ಬಿಡಿಸಿ ಬಲೀಂದ್ರನೆಂದು ಪೂಜಿಸುತ್ತಾರೆ. ಇವೆಲ್ಲ ಮುಕರಿ ಮಹಿಳೆಯರದೇ ಕೆಲಸ. ಮುಕರಿ ಅಜ್‌ಇಯರು ಮಕ್ಕಳು, ಮೊಮ್ಮಕ್ಕಳಿಗೆ ಈ ಹಬ್ಬದ ಸಂಜೆ ಬಲೀಂದ್ರನ ಕತೆ, ಬಸ್ಯಾ ಹುಲಿ ಸವಾರಿ ಮಾಡಿದ್ದು ಕತೆ ಹೇಳುತ್ತಾಳೆ. ಈ ಕತೆ ಘಟ್ಟದ ಮೇಲೆ ಒಂದು ವಾಸ್ತವ್ಯವಾಗಿರುವ ಮುಕ್ರಿ ವೃದ್ಧಳೊಬ್ಬಳು ಹೇಳಿದ್ದು ಈವರೆಗೂ ಇದು ಪ್ರಕಟವಾಗಿರುವದಿಲ್ಲ. ಕತೆ ಹೀಗಿದೆ:

ಬಸ್ಯಾ ಹೆಸರಿಗೆ ತಕ್ಕ ಹಾಗೆ ಬಲುಧೀರ. ಅವನಿಗೆ ಬೆಣ್ಣೆ ಅಂದ್ರೆ ಬಲು ಪಿರೀತಿ. ಆದರೆ ಬೆಣ್ಣೆ ತಿನ್ನುವದಕ್ಕೆ ಅವನ ಬಳಿ ಹಸುವಿರಲಿಲ್ಲ. ಹಸು ತನ್ನ ಬಳಿ ಇರಲಿಲ್ಲವೆಂದು ಕೊರಗು ಅವನನ್ನು ಕಡುತ್ತಿತ್ತು.

ದೀಪಾವಳಿ ಹಬ್ಬ ಹತ್ತಿರಕ್ಕೆ ಬಂದಿತ್ತು. ಅವತ್ತು ಹಸು ಪೂಜೆ ಮಾಡಿ ಪುಣ್ಯವಂತ ಆಗಲಾರೆನಲ್ಲಾ ಎಂಬ ತಳಮಳದಲ್ಲಿದ್ದ. ಆದರೆ ಅವನಿಗೊಂದು ಬೆಳಕು ಕಂಡಿತು. ದೀಪಾವಳಿ ಹಬ್ಬದ ಮುನ್ನಾ ದಿನ ಬೂದಗಳವು ಎಂಬ ಆಚರಣೆಯಿದೆ. ಮುಸ್ಸಂಜೆಯಲ್ಲಿ ಏನಾದರೊಂದು ತುಡುಗು ಮಾಡಿದರೆ ಅದು ಪಿಡುಗು ಎನಿಸಿಕೊಳ್ಳುವದಿಲ್ಲ. ಹೇಗೂ ಊರಿನ ರಾಯರ ಕೊಟ್ಟಿಗೆಯಲ್ಲಿ ಹಲವಾರು ಜಾತಿಯ ಹಸುಗಳಿವೆ; ಹಿತವಾದ ಒಂದು ಹಸುವನ್ನು ಹೊಡೆದುಕೊಂಡು ಹೋಗಿ ಪೋಷಿಸುವದು. ನೂರಾರು ಹಸುಗಳಲ್ಲಿ ಒಂದು ಹಸು ಕಣ್ಮರೆಯಾದರೆ ಗೌಣವೆನಿಸಿಕೊಳ್ಳುತ್ತದೆ. ಹಬ್ಬದಲ್ಲಿ ಪೂಜೆ ಮಾಡಿ ಮುಗಿಸಿ ರಾಯರಿಗೇ ಹಸ್ತು ಮರಳಿಸಿದರಾಯ್ತು ಹೀಗೇಕೆ ಮಾಡಿದೆ? ಎಂದು ವಿಚಾರಿಸಿದರೆ ಬೂದಗಳವು ಪದ್ಧತಿಯಿತ್ತಲ್ಲ. ಅದನ್ನು ಆಚರಿಸಿದೆ ಎಂದರಾಯ್ತಂದುಕೊಂಡ. ಧರ್ಮ ರಾಯನೇ ಜೂಜು ಆಡಿರುವಾಗ ತನ್ನದೇನೂ ಮಹಾಪರಾಧವಲ್ಲವೆಂದುಕೊಂಡ ನಮ್ಮ ಬಸ್ಯಾ.

ದೀಪಾವಳಿ ಹಬ್ಬದ ಮುನ್ನಾ ದಿನ ರಾಯರ ಕೊಟ್ಟಿಗೆಯಿಂದ ಹಸುವೊಂದನ್ನು ಹಾರಿಸಿಕೊಂಡು ಹೋಗವೇಕೆಂದು ಬಸ್ಯಾ ಮುಸ್ಸಂಜೆಯ ವೇಳೆ ಹೊಂಚು ಹಾಕ್ದ. ಕತ್ತಲು ಕವಿಯುತ್ತಿದ್ದಂತೆ ಕೊಟ್ಟಿಗೆಯ ಬಳಿ ಯಾರೂ ಇಲ್ಲದಿದ್ದ ಹೊತ್ತು ನೋಡಿ ಕೊಟ್ಟಿಗೆಯ ಒಳ ಸೇರಿದ. ಅದೇ ಸಮಯದಲ್ಲಿ ಅನೇಕ ದಿನಗಳಿಂದ ರಾಯರ ಮನೆಯ ಹಸುವನ್ನು ಬೇಟೆಯಾಡಲಾಗದೆ ಬಹುಬಯಕೆಯಿಂದ ಹುಲಿಯೊಂದು ಕೊಟ್ಟಿಗೆಯ ಬಾಗಿಲಿಗೆ ಬಂತು. ಯಾರಾದರೂ ತನ್ನನ್ನು ಗಮನಿಸುತ್ತಿರಬಹುದೆಂಬ ಗುಮಾನಿಯೂ ಹುಲಿಗೆ ಇತ್ತು. ಅದಕ್ಕೆ ಹುಲಿಯು ಸಾವಧಾನವಾಗಿ ಕೊಟ್ಟಿಗೆಯನ್ನು ಪ್ರವೇಶಿಸಿ ಹಸುಗಳ ಮಗ್ಗುಲಲ್ಲಿ ಸದ್ದು ಮಾಡದೆ, ತಾನೂ ಒಂದು ಹಸುವಿನಂತೆ ಮುದರಿ ಅಡಗಿ ಕುಳಿತಿತು.

ಕೊಟ್ಟಿಗೆಯನ್ನು ಪ್ರವೇಶಿಸಿದ ಬಸ್ಯಾ ಯಾವುದು ಒಳ್ಳೆಯ ಬಲವಾದ ಹಸುವೆಂದು ನೋಡಲು ಪ್ರತಿ ಹಸುವಿನ ಬೆನ್ನನ್ನು ಕತ್ತಲೆಯಲ್ಲಿಯೆ ಸವರಿ ನೋಡುತ್ತಾ ನಡೆದನು. ಕೊನೆಯಲ್ಲಿ ಅವನು ಹುಲಿಯ ಬೆನ್ನನ್ನು ಸವರಿದನು. ವಿಶಾಲವಾದ ಬೆನ್ನಿನ ಆ ಪ್ರಾಣಿಯನ್ನು ಸವರಿ ಇದೇ ಸರಿಯಾದ ಹಸುವೆಂದು ಅದರ ಬಾಯಿಗೆ ಕಡಿವಾಣವನ್ನು, ಲಗಾಮನ್ನು ಹಾಕಿ ತಾನು ಕತ್ತಲೆಯಲ್ಲಿಯೇ ಅದರ ಬೆನ್ನಿನ ಮೇಲೆ ಕುಳಿತನು. ಹುಲಿಗೆ ಮೊದಲ ಗಾಬರಿಯಲ್ಲಿ ಏನೂ ಗೊತ್ತಾಗಲಿಲ್ಲ. ಏನು ಮಾಡಬೇಕೆಂದು ಅದು ಯೋಚಿಸುತ್ತಿರುವಷ್ಟರಲ್ಲಿ ಬಸ್ಯಾ ಅದರ ಬೆನ್ನಿನ ಮೇಲೆ ಕುಳಿತಿದ್ದನು. ನನ್ನ ಬೆನ್ನಿನ ಮೇಲೆ ಯಾವ ಭಯವಿಲ್ಲದೆ ಈ ಮನುಷ್ಯ ಹೀಗೆ ಕುಳಿತ್ತಿರಬೇಕಾದರೆ ಇವನು ನನಗಿಂತ ಹೆಚ್ಚು ಶಕ್ತನೇ ಆಗಿರಬೇಕೆಂದು ಹುಲಿಯಣ್ಣ ಭಾವಿಸಿತು. ಅದಕ್ಕೆ ಎಂದೂ ಇಲ್ಲದ ಭಯವುಂಟಾಗಿ ಅದು ಒಂದೇ ಉಸಿರಿಗೆ ತನ್ನ ಶಕ್ತಿನೆಲ್ಲ ಒಗ್ಗೂಡಿಸಿ ಓಡ ತೊಡಗಿತು. ಬೆನ್ನಿನ ಮೇಲಿನ ಬಸ್ಯಾನೊಂದಿಗೆ ಅದು ಕಾಡು ಬೆಟ್ಟ ಗುಡ್ಡವೆಂದು ಲೆಕ್ಕಿಸದೆ ಕತ್ತಲಲ್ಲಿ ಓಡ ತೊಡಗಿತು. ತಾನು ಕುಳಿತಿರುವ ಹಸು ಹೀಗೆ ಹುಚ್ಚು ಹಿಡಿದಂತೆ ಓಡುತ್ತಿದ್ದುದನ್ನು ಕಂಡು ಬಸ್ಯಾನಿಗೂ ದಿಗಿಲಾಯಿತು. ಅದರ ವೇಗದಿಂದ ಅವನಿಗೆ ಉಸಿರಾಡುವುದೇ ಕಷ್ಟವಾಯಿತು. ಅವನು ಆಗಾಗ ಹಸುವಿನ ಬೆನ್ನನ್ನು ಸವರುತ್ತಾ “ಗೋಕುಲ ಗೋಪಾಲ ಮೆಲ್ಲಗೆ ಮೆಲ್ಲಗೆ ಸ್ವಲ್ಪ ನಿಲ್ಲು ಗೋವಿಂದಾ” ಎಂದು ಏದುಸಿರು ಬಿಡುತ್ತ ಹೇಳುತ್ತಿದ್ದನು. ಇದನ್ನು ಕೇಳಿ ಹುಲಿಗೆ ಇನ್ನೂ ಭಯವಾಗಿ ಅದು ಮೊದಲಿಗಿಂತಲೂ ವೇಗವಾಗಿ ಓಡತೊಡಗುತ್ತಿತ್ತು. ಕೊನೆಗೆ ರಾತ್ರಿ ಕರಗಿ ನಸುಕಿನ ಬೆಳಕಿಗೆ ಆರಂಭವಾಯಿತು. ನಸುಕಿನ ಚುಮು ಚುಮು ಬೆಳಕಿನಲ್ಲಿ ಬಸ್ಯಾ ನೋಡುತ್ತಾನೆ: ಅಬ್ಬಾ ತಾನು ಸವಾರಿ ಮಡುತ್ತಿರುವದು ಹದಿನಾರು ಪಟ್ಟೆ ಹುಲಿರಾಯ! ಬಸ್ಯಾನಿಗೆ ಮೈ ಬೆವರಿತು. ಬಾಯಿ ಒಳಗಿತು. ಕೈ ಕಾಲು ನಡುಗಿದವು. ಆದರೆ ಭಯದಿಂದ ಭ್ರಮೆಗೊಳ್ಳಲ್ಲಿಲ್ಲ. ಬಸ್ಯಾ ಭೀತನಾಗಲಿಲ್ಲ. ಪರಿಸ್ಥಿತಿ ಎದುರಿಸಲು ಸಿದ್ಧನಾದ. ಹುಲಿ ಒಂದು ಮರದ ಕೆಳಗಡೆ ಓಡುತ್ತಿದ್ದಾಗ, ಬಸ್ಯಾ ಹುಲಿಯ ಬೆನ್ನಿನಿಂದ ಬಾಗಿದ ಮರದ ಕೊಂಬೆಗೆ ಜಿಗಿದು ಜೋತು ಬಿದ್ದು ಮಂಗನಂತೆ ಮರವೇರಿದನು. ತನ್ನ ಬೆನ್ನಿನ ಮೇಲೆ ಇದ್ದ ಭಾರ ಹೀಗೆ ಇದ್ದಕ್ಕಿದ್ದಂತೆ ಹಗುರವಾದುದನ್ನು ಕಂಡು ಹುಲಿಗೂ ನೆಮ್ಮದಿಯಾಯಿತು. ಹುಲಿ ಸಂತೋಷದಿಂದ ಸದ್ಯ ಬದುಕಿದೆ ಎಂದುಕೊಂಡು ತನ್ನ ಜಾಗಕ್ಕೆ ಓಡ ತೊಡಗಿತು. ಹುಲಿ ಹೊರಟು ಹೋದುದನ್ನು ಕಂಡು ಬಸ್ಯಾ ಮರದಿಂದ ಕೆಳಗೆ ಇಳಿದ. ಆದರೆ ರಾತ್ರಿಯ ಶ್ರಮದಿಂದ ಒಂದು ಹೆಜ್ಜೆಯನ್ನು ಮುಂದಿಡಲಾರದೆ ಕೆಳಗೆ ಮಲಗಿಕೊಂಡು ಗೊರಕೆ ಹೊಡೆಯ ತೊಡಗಿದ. ಹುಲಿ ಹಸಿವೆಯಿಂದಲೂ ಆಯಾಸದಿಂದಲೂಹಣ್ಣಾಗಿತ್ತು. ಬಸ್ಯಾ ಅದಕ್ಕೆ ಮೂಗುದಾಣ ಬೇರೆ ಹಾಕಿದ್ದ. ಸುಲಭವಾಗಿ ಓಡುವದಕ್ಕೂ ಸಾಧ್ಯವಾಗುತ್ತಿರಲಿಲ್ಲ.

ದೀಪಾವಳಿ ಹಬ್ಬ ಹಸುಗಳೆಲ್ಲ ಗ್ರಾಸ ತಿಂದು ಶೃಂಗಾರವಾಗಿ ಕೊಬ್ಬಿ ಕೊರಳಿನ ಗಂಟೆಯ ನಾದದೊಂದಿಗೆ ಬೆಟ್ಟಕ್ಕೆ ಉತ್ಸಾಹದಿಂದ ಅಡ್ಡಾಡಲು ಬಂದವು. ಹುಲಿ ಮಲಗಿದ್ದನ್ನು ಕಂಡು ಅವುಗಳಿಗೆ ಮಯ ಮೇಲೆ ಆವೇಶ ಬಂದಿತು. ದೊಡ್ಡಹಸುಗಳು ಗುಟುರು ಹಾಕುತ್ತ ಹುಲಿಯನ್ನು ಬೆನ್ನಟ್ಟಿದವು. ಹುಲಿಗೆ ಆಯಾಸ ಆಘಾತದಿಂದ ಆತ್ಮ ವಿಶ್ವಾಸವೇ ಹಾರಿ ಹೋಗಿತ್ತು. ಆಹಾರವಿಲ್ಲದ ಹಸಿವೆಯೂ ವಿಪರೀತವಾಗಿತ್ತು. ಈ ಗದ್ದಲದಲ್ಲಿ ಬಸ್ಯಾನಿಗೆ ಎಚ್ಚರವಾಯಿತು. ಹುಲಿಯನ್ನು ಹಸುಗಳು ಬೆನ್ನಟ್ಟ ಹೋಗುತ್ತಿರುವದನ್ನು ಕಂಡು ಭಯವಾಯಿತು. ಆದರೂ ಅವನು ಧೈರ್ಯವನ್ನು ನಟಿಸುತ್ತಾ ನಡುಗುವ ಧ್ವನಿಯಲ್ಲಿ ಹುಲಿಯನ್ನು ನೋಡಿ “ಗೋವಿಂದಾ ಗೋಪಾಲಾ ಮುರಾರಿ ಎಲ್ಲಿರುವೆಯೋ” ಎಂದು ಕೂಗಿದನು. ಇದನ್ನು ಕೇಳಿ ಹುಲಿ ಕಲ್ಲು ಮುಳ್ಳು ಕೊರಕಲು ಕೊಳ್ಳ ಎಲ್ಲೆಡೆ ಎದ್ದು ಬಿದ್ದು ಓಡಿ ಕೊನೆಗೆ ಹೊಂಡವೊಂದರಲ್ಲಿ ನಿತ್ರಾಣಗೊಂಡು ಸತ್ತು ಬಿತ್ತು. ಅದರ ನೋವು ನರಳಾಟದಿಂದ ಹುಲಿ ಸತ್ತು ಬಿತ್ತೆಂದು ಬಸ್ಯಾನಿಗೆ ಪಕ್ಕಾ ಆಯ್ತು. ಅವನು ಊರಿಗೆ ಮರಳಿದ. ಆಗಲೇ ಊರಿನಲ್ಲಿ ಬಸ್ಯಾನ ಹುಲಿ ಸವಾರಿ ಸಾಹಸ ಪ್ರಚಾರಗೊಡಿತ್ತು. ಜನರ ಉತ್ಸಾಹ ಇಮ್ಮಡಿಯಾಗಿತ್ತು. ರಾಯರು ಬಸ್ಯಾನಿಗೆ ಹಸುವೊಂದನ್ನು ಉಚಿತವಾಗಿ ನೀಡಿ ಗೌರವಿಸಿದರು.

ಹಲವಾರು ಜಾತಿ-ವರ್ಗಗಳಲ್ಲಿ ಪ್ರಚಲಿತವಿರುವ ಪ್ರಾಣಿ ಪಕ್ಷಿ ಇಲ್ಲವೆ ವೃಕ್ಷಗಳನ್ನು ತಮ್ಮ ವಂಶವಾಹಿ ಚಿಹ್ನೆಯಾಗಿ ಗುರುತಿಸಿ ಗೌರವಿಸುವ ಸಂಪ್ರದಾಯ ಮುಕರಿಯವರಲ್ಲಿದೆ. ವಂಶ, ಕುಲ, ಬಳಿ ಎಂದು ಕರೆಯುವ ಪದ್ಧತಿ. ಈ ಪದ್ಧತಿಯಂತೆ ಆಯಾ ಬಲಿಯವರು ತಾವು ನಿಗದಿಪಡಿಸಿಕೊಂಡ ಪ್ರಾಣಿ ಪಕ್ಷಿ ವೃಕ್ಷ ವನಸ್ಪತಿಯನ್ನು ನಾಶಪಡಿಸದೆ ಅದನ್ನು ಪೂಜ್ಯ ಸ್ಥಾನದಲ್ಲಿಟ್ಟು ಪವಿತ್ರವಾಗಿ ಕಾಣುತ್ತಾರೆ. ಮದುವೆಯ ಕಾಲಕ್ಕೆ ಬಳಿಗಳ ಕಡೆಗೆ (ಗೋತ್ರ) ವಿಶೇಷ ಗಮನಕೊಡುತ್ತಾರೆ. ಒಂದೇ ಬಳಿಯವರನ್ನು ವಿವಾಹವಾಗುವದಿಲ್ಲ. ಮುಕರಿಯರಲ್ಲಿ ೧) ಆನೆ ಬಳಿ ೨) ತೋಳನ ಬಳಿ ೩) ಶೆಟ್ಟಿ ಬಳಿ ೪) ಹಂದಿ ಬಳಿ ೫) ದೈವನ ಬಳಿ ೬) ಕನ್ನೆ ಬಳಿ ೭) ಶಿರಿನ ಬಳಿ ೮) ಶೆಂಡಿ ಬಳಿ ೯) ಕೌಡಿ ಬಳಿ ೧೦) ಹೆಬ್ಬಳ ಬಳಿ ಈ ಹತ್ತು ಬಳಿಗಳಲ್ಲಿ ಸಾರಾವಳಿ ನೋಡಿ ಸಂಬಂಧ ಬೆಳೆಸುತ್ತಾರೆ.

ಇವರ ಕುಲ ದೇವರು ಹೆಗಡೆಯ (ಕುಮಟಾ) ವೀರಭದ್ರನೆಂದೂ ಹೊನ್ನಾವರ ತಾಲೂಕಿನ ಚಂದಾವರದ ಹನುಮಂತನ ಶಿಷ್ಯ ವರ್ಗದವರು ತಾವೆಂದೂ ಮುಕ್ರಿಯವರು ಹೇಳಿಕೊಳ್ಳುತ್ತಾರೆ. ಇದಲ್ಲದೆ ಗ್ರಾಮ ಶಕ್ತಿ ದೇವತೆಗಳಾದ ಅಮ್ಮ. ಮಾಸ್ತಿ, ಶಿರಸಿಯ ಮಾರಿಕಾಂಬೆ, ಜಟಿಗ, ನಾಗ ಮುಂತಾದ ದೇವತೆಗಳನ್ನು ಹಾಗೂ ಇತರ ಹಿಂದುಗಳು ಪೂಜೆಇಸುವ ಎಲ್ಲ ದೇವತೆಗಳನ್ನು ಭಕ್ತಿಯಿಂದ ಆರಾಧಿಸುತ್ತಾರೆ.

ಗಂಡಸರು ಸುಗ್ಗಿಯ ಮೇಳವನ್ನು ಕಟ್ಟಿಕೊಂಡು ಊರ ಮೇಲೆಲ್ಲಾ ಕುಣಿದು ಸಂತೋಷ ಪಡುತ್ತಾರೆ. ಭೂತ ದೇವತೆಗಳಲ್ಲಿ ಭಯ ಭಕ್ತಿಯುಳ್ಳ ಮುಕ್ರಿಯರು ಬಂಡಿ ಹಬ್ಬವನ್ನು ಆಚರಿಸುತ್ತಾರೆ. ವಂಶ ಪರಂಪರೆಯಿಂದ ಭೂತಾರಾಧನೆ ಮಾಡುತ್ತಾ ಬಂದ “ಗುನಗರು” ಬಂಡಿಯ ಹಬ್ಬದ ಸಮಯಕ್ಕೆ ಭೂತಗಳ ಕಲಶಗಳನ್ನು ತಯಾರಿಸಿ ಅವುಗಳ ಮೆರವಣಿಗೆಯನ್ನು ಬಂಡಿ ಹಬ್ಬದಲ್ಲಿಮಾಡುವದಿದೆ. ಕಲಶವನ್ನು ಹೊತ್ತು ಗುನಗರಿಗೆ ಮೈಮೇಲೆ ಭಾರ ಬಂದಾಗ ಪ್ರಶ್ನೆ ಹಾಕಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳುತ್ತಾರೆ. ದೆವ್ವ ಭೂತ ಹಿಡಿದವರು, ಹುಚ್ಚು ಉನ್ಮಾದಕ್ಕೆ ತುತ್ತಾದವರು ಕಲಶ ಹೊತ್ತ ಗುನಗನ ಬೆಳ್ಳಿಕಟ್ಟಿನ ಜೋಡು ನಾಗ ಬೆತ್ತದ ಏಟಿನಿಂದ ಗುಣಮುಖರಾಗುವದೂ ಇದೆ, ಭೂತ ಪಿಶಾಚಿಗಳಲ್ಲಿ ಇವರಿಗೆ ನಂಬಿಕೆ ಹೆಚ್ಚು. ಕನ್ನೆ ಕೊಲೆ, ರಣಗೊಲೆ, ಅಡ್ಡಬಾಳಂತಿ, ಮಾಸ್ತಿ, ಚೌಡಿ ಮುಂತಾದವುಗಳಲ್ಲಿ ಮನಸ್ಸಿಟ್ಟ ಇವರು ರೋಗರುಜಿನಗಳಿಗೆ ಭೂತಬಾಧೆಯೇ ಕಾರಣವೆಂದು ಬಗೆದು ಅವುಗಳ ಉಚ್ಛಾಟನೆಗಾಗಿ ನೋಟಗಾರರನ್ನು ಆಶ್ರಯಿಸುತ್ತಾರೆ. ಜಾತಿಯ ನೋಟಗಾರರು ಅಲಭ್ಯರಾದರೆ ಪರಜಾತಿಯ ನೋಟಗಾರರಿಂದ ಭೂತೋಚ್ಛಾಟನೆಗೆ ಮುಂದಾಗುವದೂ ಇದೆ.

ನೋಟಗಾರರು

ನೋಟಗಾರರು ಇವರಿಗೆ ಗಾಡಿಗರೂ ಎಂದೂ ಕರೆಯುತ್ತಾರೆ. ಇವರು ಹಲಗೆಯ ಮಣೆಯ ಮೇಲೆ ಅಕ್ಕಿ ಕಾಳುಗಳನ್ನಿಟ್ಟುಕೊಂಡು ಯಾವ ದೆವ್ವ ಪಿಶಾಚಿ ಕಾಟಕೊಡುತ್ತದೆಂಬುದರ ಶೋಧ ಮಾಡುತ್ತಾರೆ. ಅಕ್ಕಿ ಕಾಳುಗಳನ್ನು ಮುಷ್ಟಿಯಲ್ಲಿ ಹಿಡಿದು ತಿರುಗಿಸಿ ಮಣೆಯ ಮೇಲೆ ಬೀರಿ ಅವುಗಳ ಲೆಕ್ಕದಿಂದ ಯಾವ ದೆವ್ವ ಪಿಶಾಚಿಯೆಂದು ಪತ್ತೆ ಹಚ್ಚುತ್ತಾರೆ. ಇದರ ಉಚ್ಛಾಟನೆ ಮಾಡಲು ಕೆಲವು ದೆವ್ವ ಪಿಶಾಚಿಗಳಿಗೆ ಕೋಳಿ ಬಲಿ ಕೊಡಬೇಕು. ಅನ್ನಕ್ಕೆ ಕುಂಕುಮ ಕಲಸಿ ಕೊಡುಬಾಳೆಯಲ್ಲಿಟ್ಟು ದೆವ್ವಕ್ಕೆ ಎಡೆ (ಊಟ) ಇಡುವದುಂಟು. ಕೊಡುಬಾಳೆ ಎಂದರೆ ಬಾಳ ಎಲೆಯ ತುದಿಯನ್ನಿಟ್ಟು ಕತ್ತರಿಸಿದ ಎಲೆ. ಅರ್ಧ ತಾಸಿನವರೆಗೆ ಗುಂವಮ್ ಗುಂವಮ್ ಎಂದು ಆರ್ಭಟ ಮಾಡಿ ದೆವ್ವ ಬಿಡಿಸಿದ  ನೋಟಗಾರನಿಗೆ ಅಕ್ಕಿ ತೆಂಗಿನ ಕಾಯಿ ದುಡ್ಡು ಕೊಡಬೇಕಾಗುತ್ತದೆ. ಹನುಮಂತ ದೇವರ ಸವಾರಿ ಊರಿಗೆ ಬಂದಾಗ ತೆಂಗಿನ ಕಾಯಿ ಸುಳಿದು ಒಡೆಯುತ್ತಾರೆ. ಅಲ್ಲದೆ ಹತ್ತು ಮಂದಿ ಸೇರಿ ದೇವರ ಪೂಜಾರಿಗೆ ಊಟದ ಪಡಿಯನ್ನು ಕೊಡುವದುಂಟು.

ಘಟ್ಟದ ಮೇಲಿನ ಮುಕ್ರಿಯರಿಗೆ ದೆವ್ ಭೂತ ಪಿಶಾಚಿ ಬಾಧೆ ಕಡಿಮೆ ಆದರೆ ಇಲ್ಲಿ ಚೌಡಿ ಉಪದ್ರವವಿದೆ. ಚಾಮುಂಡಿ ಚಂಡಿ ಇಲ್ಲಿ ಇವರಿಗೆ “ಚೌಡಿ” ಇದು ವನದೇವತೆ. ಹಾಲು ವೃಕ್ಷದ ಬುಢದಲ್ಲಿ ಕಲ್ಲು ನೆಟ್ಟು ಕಟ್ಟೆ ಕಟ್ಟಿರುತ್ತಾರೆ. ಇಲ್ಲಿ ಮೈಲಿಗೆ ಮುಚ್ಚಿಟ್ಟು ಮಲಿನವಾದಾಗ ಮನೆಯೊಳಗೆ ಇರುವೆ ಕಾಣಿಸಿಕೊಳ್ಳುವದು, ಹಾವು ಎದುರಾಗುವದು ಇತ್ಯಾದಿ ಉಪಟಳ ಆಗ ಚೌಡಿ ಮುನಿಸಿಕೊಂಡಿದ್ದಾಳೆಂಬ ನಿರ್ಧಾರಕ್ಕೆ ಬರುತ್ತಾರೆ.  ಪ್ರತಿ ಅಮಾವಾಸ್ಯೆಗೆ ಚೌಡಿ ಪೂಜೆ ಸಲ್ಲುತ್ತದೆ. ಈ ಚೌಡಿ ಒಮ್ಮೊಮ್ಮೆ ಸ್ವಪ್ನದಲ್ಲಿ ಕಾಣಿಸಿಕೊಳ್ಳುವದೂ ಉಂಟು. ಮಂಡೆ ಬಿಚ್ಚಿ ಹರಡಿಕೊಂಡ ಹುಡಗಿಯಾಗಿ ಈ ಕುರಿತು ಇವರದೇ ಒಂದು ಕತೆಯಿದೆ.