ಸುಮಂಗಲಿ ಗಿಡ

ಒಬ್ಬ ರಾಜನಿದ್ದ, ಅವನಿಗೆ ಬಹಳ ವರ್ಷಗಳವರೆಗೆ ಮಕ್ಕಳಾಗಲಿಲ್ಲ. ವನದೇವತೆಯ ಕೋಪವೇ ಇದಕ್ಕೆ ಕಾರಣವಾಗಿತ್ತು. ವನದೇವತೆಯ ಅಶಾಂತಿಯಿಂದ ಪ್ರಕೃತಿ ಧರ್ಮ ಕೆಟ್ಟಿತ್ತು. ರಾಜ ವ್ಯಾಕುಲನಾಗಿ ಚೌಡಿ (ವನದೇವತೆ)ಯ ಪ್ರತಿಷ್ಠೆ ಮಾಡಿದ. ಅವಳಲ್ಲಿ ಶರಣಾದ. ಅನಂತರ ಹೆಣ್ಣು ಮಗು ಹುಟ್ಟಿತು. ಅವಳು ಹುಣ್ಣಿಮೆಯ ಚಂದ್ರನಂತೆ ಚೆಂದವಾಗಿ ದೊಡ್ಡವಳಾದಳು. ಅವಳಿಗೆ ಹದಿನಾರು ವರ್ಷ ತುಂಬಿತು. ಅವಳ ಮದುವೆ ಮಾಡಬೇಕೆಂದು ರಾಜ ನಿಶ್ಚಯಿಸಿದ. ಆಗ ಮಗಳು ತನ್ನ ಮದುವೆಯಾಗುವವನು ತಾನಿಟ್ಟ ಮೂರು ಪಣದಲ್ಲಿ ಗೆಲ್ಲಬೇಕೆಂದು ಹೇಳಿದಳು. ರಾಜ ಅದಕ್ಕೊಪ್ಪಿಕೊಂಡ. ಮೊದಲನೆಯದು ಊರ ದೇವಾಲಯದ ಗೋಪುರ ಮೇಲಿಡುವ ತೆಂಗಿನ ಕಾಯಿಯನ್ನು ಬಾಣದಿಂದ ಹೊಡೆದು ಉರಳಿಸಬೇಕು. ಎರಡನೆಯದು ನಮ್ಮ ಆಲಯದೊಳಗಿರುವ ಕುದುರೆ ಸವಾರಿ ಮಾಡಬೇಕು. ಮೂರನೆಯದು ನಾನು ನೆಟ್ಟು ಬೆಳಸಿದ ಗಿಡದ ಹೆಸರು ಹೇಳಬೇಕು. ಈ ಮೂರು ಪಣದ ವಿಷಯವನ್ನು ರಾಜ ಡಂಗುರ ಸಾರಿದ. ವೀರಾಧಿವೀರರೆಲ್ಲ ಬಂದು ಪಣದಲ್ಲಿ ಸೋತರು ಕೆಲವರು ಮೊದಲನೆಯ ಎರಡನೆಯ ಪಣದಲ್ಲಿ ಗೆದ್ದರೂ ಮೂರನೆಯ ಪಣದಲ್ಲಿ ಗೆಲ್ಲದಾದರು. ರಾಜನಿಗೆ ಚಿಂತೆಯಾಗ ತೊಡಗಿತು. “ಮಗಳೇ ಈ ಮೂರು ಪಣಗಳ ಅರ್ಥವೇನು? ಎಂದು ಕೇಳಿದ. ಅದಕ್ಕವಳೆಂದಳು ಮೊದಲನೆಯದು ಅವನ ಇಚ್ಛಾಶಕ್ತಿ, ಎರಡನೆಯದು ಕ್ರಿಯಾಶಕ್ತಿ, ಮೂರನೆಯದು ಜ್ಞಾನಶಕ್ತಿ ಎಂದಳು. ಈ ಮೂರು ಮಹಾಶಕ್ತಿಗಲು ನನ್ನನ್ನು ಮದುವೆಯಾಗುವ ಗಂಡಿಗೆ ಗುಂಡಿಗೆಯಿರಬೇಕೆಂದಳು. ಎರಡನೇ ವರ್ಷ ಪಣಕ್ಕೆ ಬರುವವರಿಗೆ ಮತ್ತೊಂದು ಷರತ್ತು ವಿಧಿಸಿದಳು. ಪಣದಲ್ಲಿ ಸೋತರೆ ರಾಜ್ಯದ ತೋಟದಲ್ಲಿ ಕೃಷಿ ಕೆಲಸ ಮಾಡಬೇಕು. ಆರು ತಿಂಗಳ ಕಾಲ ಕೃಷಿ ಕಾರ್ಯ ಕಡ್ಡಾಯವೆಂದಳು. ಆದರೂ ಧೀರಾಧಿಧೀರರು ರಜನ ಮಗಳನ್ನು ಮದುವೆಯಾಗ ಬೇಕೆಂದು ಬಯಕೆಯಿಂದ ಬಂದು ಪಣದಲ್ಲಿ ಪರಾಜಿತರಾಗಿ ರಾಜನ ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದರು. ಕೊನೆಗೊಬ್ಬ ಹೊರ ಊರಿನ ಭದ್ರನೆಂಬ ಹುಡುಗ ಬಂದ. ಅವನನ್ನುನೋಡಿ ಜನರೆಲ್ಲ ನಕ್ಕರು. ಇವನೇನು ಗೆದ್ದಾನು? ಇವನ್ಯಾಕೆ ಬಂದಾನು? ಎಂದು ಚೇಷ್ಟೆ ಕೂಡಾ ಮಾಡಿದರು. ಆದರೆ ಭದ್ರ ಭಯಗೊಳ್ಳಲಿಲ್ಲ. ಬಿಲ್ಲುವಿದ್ಯೆ ಬಲ್ಲವನಾಗಿದ್ದ. ಕುದುರೆ ಕೆಲಸ ಕಲಿತಿದ್ದ. ಗಿಡ ಮರಗಳ ಗುಟ್ಟು ಗೊತ್ತಿತ್ತು. ರಾಜನಿಗೆ ಪಣ ಸಾರಿದ ಮೇಲೆ ಬಂದವರಿಗೆಲ್ಲ ಅವಕಾಶ ಕೊಡಲೇ ಬೇಕಾಗಿತ್ತು. ಭದ್ರನಿಗೂ ಅವಕಾಶ ಒದಗಿತು. ಮೊದಲಲೆರಡು ಪಣಗಳನ್ನು ಗೆದ್ದುಬಿಟ್ಟ. ಮೂರನೆಯ ಪಣಕ್ಕೆ ಸಿದ್ಧನಾದ, ಸ್ವತಃ ರಾಜನ ಮಗಳೇ ಎದುರು ನಿಂತು ಈ ಗಿಡ ಯಾವುದು? ಏನಿದರ ವಿಷಯ ಹೇಳು ಎಂದಳು. ಎಲ್ಲರೂ ಭದ್ರನ ಉತ್ತರಕ್ಕೆ ಕುತೂಹಲಿಗಳಾಗಿದ್ದರು. ಭದ್ರ ಹೇಳಿದ “ಇದು ರಾಜನ ಮಗಳು ದಿನವೂ ಮಂಡೇಬಾಚಿ ಉಕ್ಕಿದ ಕೂದಲನ್ನು ಸಂಗ್ರಹಿಸಿ ಗಡಿಗೆಯಲ್ಲಿಟ್ಟಿದ್ದಳು. ಸುಗಂಧ ತೈಲ ಭರತಿ ಈ ಕೂದಲುಗಳು ಸ್ವಾತಿ ನಕ್ಷತ್ರದ ಮಳೆಯಲ್ಲಿ ಒದ್ದೆಯಾಗಿ ಹುಟ್ಟಿದ ಗಿಡ. ಇದು ಸುಮಂಗಲಿ ಗಿಡ” ಎನ್ನುತ್ತಿದ್ದಂತೆ ರಾಜನ ಮಗಳು ಪ್ರಜ್ಞೆ ತಪ್ಪಿ ಬಿದ್ದಳು. ರಾಜನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಭದ್ರನೇ ಗಿಡಕ್ಕೆ ನೀರುಣಿಸಿ ಅವಳು ಎಚ್ಚರಾಗುತ್ತಾಳೆ ಎಂದ. ಹಾಗೇ ಮಾಡಲಾಯಿತು. ರಾಜಕುಮಾರಿ ಎಚ್ಚರವಾಗಿ ಆನಂದ ಭರಿತಳಾದಳು. ಭದ್ರನನ್ನು ಮದುವೆಯಾಗಿ ಸುಖವಾಗಿ ಬಾಳಿದಳು. ಈ ಕತೆಯನ್ನು ಮುಕ್ರಿ ಹೆಂಗಸರು ತಮ್ಮದೇ ಭಾಷೆಯಲ್ಲಿ ಹೇಳುತ್ತಾರೆ. ಗಿಡ ಮರ ಬಳ್ಳಿಗಳಿಗೆ ಬಾಧೆಯಾದಾಗ ಪ್ರಕೃತಿ ಧರ್ಮ ಕೆಟ್ಟು, ಶಾರೀರ ಧರ್ಮವೂ ಕೆಡುತ್ತದೆ, ಉಪದ್ರವಗಳಾಗುತ್ತವೆಂಬ ಸಂದೇಶವನ್ನು ಈ ಕತೆ ಸಾರುತ್ತದೆ. ಮುಕ್ರಿಯರು ತಮ್ಮ ವಂಶ ಪರಂಪರೆ ಗುರುತಿಸಿ ಕೊಳ್ಳುವುದಕ್ಕೂ ವನಸ್ಪತಿ, ಪ್ರಾಣಿ ಪಕ್ಷಿ ಚಿಹ್ನೆ ಇಟ್ಟುಕೊಂಡಿರುವದಕ್ಕೂ ಹಿನ್ನೆಲೆ ಇದೇ.

ಭಾಷೆ. ಸಾಹಿತ್ಯ

ಮುಕ್ರಿಯರು ಶೈಕ್ಷಣಿಕವಾಗಿ ತೀರ ಹಿಂದುಳಿದವರು. ಇವರಲ್ಲಿ ಶೈಕ್ಷಣಿಕ ಅಂದರೆ ಸಾಕ್ಷರತಾ ಪ್ರಮಾಣ ಶೇಕಡಾ ಇಪ್ಪತ್ತೈದನ್ನು ಮೀರಲಾರದು. ಪ್ರೌಢ ಉನ್ನತ ಶಿಕ್ಷಣ ಪಡೆದವರು ತೀರ ವಿರಳ. ಹೀಗಾಗಿ ಇವರಲ್ಲಿ ಉನ್ನತ ದರ್ಜೆಯ ಅಧಿಕಾರಿಗಳು ಕಂಡು ಬರುವದೇ ಇಲ್ಲ. ಮೂರು ಅಥವಾ ನಾಲ್ಕನೆಯ ದರ್ಜೆಯ ನೌಕರರು ಕೆಲವರಿದ್ದಾರೆ. ಹೊಟ್ಟೆ ತುಂಬ ಊಟ, ಬಟ್ಟೆ ಸಿಕ್ಕರೆ ಇವರು ಮುಂದೆ ಬರಲು ಸಾಧ್ಯವಾಗುತ್ತದೆ. ಈಗ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿದ್ದು ಮಕ್ಕಳು ತಪ್ಪದೇ ಶಾಲೆಗೆ ಬರಲು ಸಾಧ್ಯವಾಗಿದೆ. ವಿದ್ಯಾಬುದ್ಧಿ ಸಂವೇದನಗೇನೂ ಇವರು ಕಡಿಮೆಯಿಲ್ಲ. ಮುಕ್ರಿಯರಲ್ಲಿ ಪ್ರತಿ ಹಳ್ಳಿಗೊಬ್ಬ ಯಜಮಾನ, ಇಲ್ಲವೇ ಬುದ್ಧಿವಂತನಿರುತ್ತಾನೆ. ಇವನು ಇವರ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಗಡಣೆಗಳ ವಿಶೇಷ ಕಾರ್ಯಕ್ರಮಗಳ ಸಂದೇಶವನ್ನು ಜಾತಿಯ ಜನರಿಗೆ ಮುಟ್ಟಿಸುವ ಕೋಲಕಾರನಿರುತ್ತಾನೆ. ಊರಿನ ಮುಖಂಡನಾದ ಯಜಮಾನ ಇಲ್ಲವೆ ಬುದ್ಧಿವಂತನು ತಮ್ಮ ಜಾತಿಯ ಸಭೆಯನ್ನು ಕರೆಯುವ ಕಾರ್ಯಕಲಾಪವನ್ನು ನಿರ್ವಹಿಸುವ ಹಾಗೂ ತಪ್ಪಿಸ್ಥರಿಗೆ ದಂಡವನ್ನು ವಿಧಿಸುವ ಅಧಿಕಾರವನ್ನು ಪಡೆದಿರುತ್ತಾನೆ. ಯಜಮಾನ ಹಾಗೂ ಕೋಲಕಾರರು ವಂಶ ಪಾರಂಪರ್ಯದಿಂದ ಬಂದಿರುತ್ತಾರೆ. ಹಿಂದೆ ಮುಕ್ರಿಯರು ವಾಸಿಸುವ ನೆಲೆಗಳನ್ನು ಹದಿನೆಂಟು ಹಳ್ಳಿಗಳ ೧) ಹೆಬ್ಬಾನ ಕೇರಿ ವಿಭಾಗ ೨) ಆರು ಹಳ್ಳಿಗಳ ಹೆಗಡೆ ವಿಭಾಗ ೩) ಏಳು ಹಳ್ಳಿಗಳ ಕುಮಟಾ ವಿಭಾಗ ೪) ಒಂಭತ್ತು ಹಳ್ಳಿಗಳ ಗೋಕರ್ಣ ವಿಭಾಗ ಹೀಗೆ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದ ಕೆನರಾ ಗೆಝೆಟಿಯರ್‌ನಲ್ಲಿ ಪ್ರಕಟವಾಗಿದೆ. ಆದರೆ ಈಗ ಮುಕ್ರಿಯರು ಜೀವನ ನಿರ್ವಹಣೆಗಾಗಿ ಹರಿದು ಹಂಚಿ ಹೋಗಿದ್ದು ಅವರವರೇ ಅವರ ಜೀವನಕ್ಕೆ ಜವಾಬ್ದಾರರಾಗಿದ್ದಾರೆ.

ಮುಕ್ರಿಯರ ಮೂಲ ಭಾಷೆ ಕನ್ನಡವೇ. ಅದಕ್ಕೆ ಶಿಕ್ಷಣದ ಸ್ಪರ್ಶ. ಇವರ ಮೇಲೆ ಇವರು ವಾಸಿಸುವ ಸುತ್ತಮುತ್ತಲಿನ ಹಾಲಕ್ಕಿ ಒಕ್ಕಲು ಹವ್ಯಕರು ಹಾಗೂ ನಾಮಧಾರಿಗಳ ಸಾಮಾಜಿಕ ಉಪಭಾಷೆಯ ಪ್ರಭಾವವಾಗಿದೆ. ಇವರ ಉಪಭಾಷೆಯಲ್ಲಿಯೂ ಋ, ಋಊ, ಐ, ಔ, ಸ್ವರಗಳು, ಮಹಾಪ್ರಾಣಗಳು, ಶ, ಷ, ಸ ಧ್ವನಿಗಳ ಬಳಕೆಯಿಲ್ಲ. ಸ್ತ್ರೀ-ಲಿಂಗ ಏಕವಚನವನ್ನು ನಪುಸಂಕ ಏಕವಚನವಾಗಿ, ಬಹುವಚನವನ್ನು ಪುಲ್ಲಿಂಗ ಬಹುವಚನದಂತೆ ಬಳಸುವ ರೂಢಿ. ಅವಳು ಬಂದಳು ಎನ್ನುವದಕ್ಕೆ ಅದು ಬಂತು ಎಂದು ಬಿಡುತ್ತಾರೆ. “ಳ” ಕಾರ ಶಬ್ದವು ನಾಲಿಗೆ ಹೊರಳದೆ “ಲ” ಕಾರವಾಗಿ ಬಿಡುತ್ತದೆ.

ಮಾತಾಡಲು ಶುರು ಮಾಡಿದಾಗ ಕಂಡಿದ್ದೆಲ್ಲವನ್ನು ಕತೆಯಾಗಿ ಹೇಳಲಾಗುತ್ತದೆ. ಆದ್ದರಿಂದಲೇ “ಮಾತುಕತೆ” ಎನಿಸಿಕೊಂಡಿತಲ್ಲವೇ. ಮುಕ್ರಿಯರಲ್ಲಿ ಜನಪದ ಸಾಹಿತ್ಯ ಪ್ರಕಾರಗಳಾದ ಗೀತೆ, ಕತೆ, ಒಗಟು ಗಾದೆಗಳು ಇವೆ. ಒಗಟನ್ನು ಗುಟ್ಟು ಎಂದು ಕೊಂಡಿದ್ದಾರೆ” ಕಿತ್ತರೂ ಸಾಯೊಲ್ಲ ಬಿತ್ತಿದರೂ ಬೆಳೆಯೋಲ್ಲ ಏನು ಗೊತ್ತಾ” ಎಂದು ಮುಕ್ರಿ ಮಹಿಳೆ ಕೇಳಿದಾಗ ’ಕೂದಲು’ ಎಂದು ನಾವು ಉತ್ತರ ಕೊಟ್ಟರೆ ಅದನ್ನು ಹೇಳಬಾರ‍್ದು ಎನ್ನುತ್ತಾಳೆ. ಇನ್ನು ಗಾದೆಗಳು ಇವರದೇ ಎನ್ನುವದು ವಿರಳ. ಸರ್ವೇಸಾಮಾನ್ಯವಾದ ಗಾದೆಗಳು ಇವರದಾಗಿವೆ. ಮುಕ್ರಿಯರ ಪ್ರಕಾರ ಹಾಡು ಬೇರೆ, ಪದ ಬೇರೆ, ಕವಿತೆ ಬೇರೆ, ಕಾವ್ಯ ಬೇರೆ ಎಂದು ಕೊಂಡಂತೆ ಒಂದು ಪದ ಹೇಳು ಎಂದು ಮುಕ್ರಿ ಹೆಂಗಸರು ಹತ್ರ ಹೇಳಿದರೆ ನೀವು ಪಸೆ ಬಿದ್ದಂತೆ. “ನಾನು ಹೆಣ್ಣು. ಪದ ಹ್ಯಾಗೆ ಹೇಳಲಿ” ಎನ್ನುತ್ತಾಳೆ. ಅಂದರೆ ಪದ ಹೇಳುವವರು ಗಂಡಸರು. ಹಾಡುವವರು ಮಾತ್ರ ಹೆಣ್ಮಕ್ಕಳು ಎಂಬ ನಂಬಿಕೆ. ಹೆಂಗಸರ ಹಾಡುಗಳಲ್ಲಿ ಮದುವೆ, ಶೋಭನ, ಇತ್ಯಾದಿ ಸಂಪ್ರದಾಯಕ್ಕೆ ಸಂಬಂಧಿಸಿ ಹಾಡುಗಳು. ಗಂಡಸರ ಪದಗಳಲ್ಲಿ ಸುಗ್ಗಿ ಪದ. ಗುಮಟೆ ಪದ ಹಾಗೂ ಕೋಲು ಪದಗಳಿವೆ. ಕತೆಗಳು ಗಪದ್ಯವಾಗಿವೆ.

ಮದುವೆ ಕಾರ್ಯ

ಮುಕ್ರಿಯರಲ್ಲಿ ನಾಲ್ಕು ದಿನಗಳ ಕಾಲ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಇದಕ್ಕನುಗುಣವಾಗಿ ಇವರಲ್ಲಿ ಈ ಸಂಪ್ರದಾಯಕ್ಕೆ ಸಂಬಂಧಿಸಿದ ಹಾಡುಗಳು ಹೇರಳವಾಗಿದ್ದವು. ಈಗ ಮದುವೆ ನಾಲ್ಕೈದು ತಾಸುಗಳಲ್ಲಿ ಮುಗಿದು ಹೋಗುವದರಿಂದ ಮದುವೆಯ ಅನೇಕ ಹಾಡುಗಳು ಮರೆಯಾಗಿ ಹೋಗಿವೆ. ಮದುವೆಯ ಮುಖ್ಯಭಾಗದ ಹಾಡುಗಳಷ್ಟೇ ಉಳಿದುಕೊಂಡಿವೆ. ಸ್ಮೃತಿ ಶ್ರುತಿಗಳಿಂದ ವೇದ ಮಂತ್ರಗಳು ಉಳಿದು ಬಂದ ಹಾಗೆ ಈ ಹಾಡುಗಳು ಹರಿದು ಬಂದಿವೆ.

ಮುಕ್ರಿಯರ ಮದುವೆಯಲ್ಲಿ ಅಕ್ಕನ ಕರೆ ತರುವದು ಹಾಡು, ತಮ್ಮ ನಾದವನು ಅಕ್ಕನನ್ನು ಆಹ್ವಾನಿಸಲು ಹೋಗುತ್ತಾನೆ.

ಹೊತ್ತಾರ ಮುಂಚೆದ್ದಿ ಕಯ್ಕಾಲು ಮಾರಿಯ ತೊಳೆದಿ
ಹೊತ್ತಾರು ಸುರಣೆಂದಿ ಮಾಡೀದಾನೋ
ದವ್ಯವರು ಸರುಣೆಂದಿ ಮಾಡೀನೊ ತಮ್ಮಯ್ಯ
ದೈವರಿಗೆ ಹೂವು ಮುಡುಸಾನೊ
ದೈವರಿಗೆ ಸರುಣಾಮಾಡಿ ಒಳಗಿನ್ನೇ ಹೋದಾನೊ
ತಾಯಿ ಪಾದಾನಾ ಸರೂಣಂದ
ತಾಯಿ ಪಾದಾನಾ ಸರುಣಂದ ತಮ್ಮಯ್ಯ
ನಾನು ನಗ್ಗನಕ ಹೋಗೇ ಬತ್ತೆ.

ಹೊತ್ತು ಮೂಡುವ ಮುನ್ನವೇ ಬೆಳಗಾಗಿ ಎದ್ದು ಕೈಕಾಲು ಮುಖತೊಳೆದುಕೊಂಡು ದೇವರಿಗೆ ವಂದಿಸಿ ಹೂವು ಮುಡಿಸಿ ತಾಯಿಯ ಪಾದಕ್ಕೆರಗಿ ಲಗ್ನಕ್ಕೆ ಕರೆಯಲು ತಮ್ಮ ತಯಾರಾಗುತ್ತಾಣೆ. ಅಲ್ಲಿ ಅಕ್ಕನೋ ನಾನಾ ನೆಪಗಳನ್ನು ಒಡ್ಡಿ ಮದುವೆಗೆ ಬರಲು ನಿರಾಕರಿಸುವದು; ತಮ್ಮನಾದವನು ಅವಳ ತೊಂದರೆಗಳನ್ನು ನಿವಾರಿಸುವ ಭರವಸೆಯನ್ನಿತ್ತು ಅಕ್ಕನನ್ನು ಅಕ್ಕರೆಯಿಂದ ಕರೆದುಕೊಂಡು ಬರುವದು-ಹೀಗೆ ಹಾಡುಗಳಲ್ಲಿ ಬಾಂಧವ್ಯದ ಅಕ್ಕರತೆ ಹರಡಿಕೊಳ್ಳುತ್ತದೆ.

ತವರಿಗೆ ಬಂದ ಅಕ್ಕನಿಗೆ ಕಳಸ ಚಾಜವನ್ನು ನೀಡಿ ಮದುಮಗ ಬಾಸಿಂಗ ಸೂಡಿ, ಮುತ್ತಿನ ಕೊಡೆ ಹಿಡಿದು ಅಕ್ಕಭಾವ ಸಕುಟುಂಬದೊಡಗೂಡಿ ಹೂಬಣ್ಣದ ಹೆಣ್ಣು ಗೆಲ್ಲಲು ಕುದುರೆಯೇರಿ ಮಲ್ಲಿಗೆಯ ಮಾಲೆ ಹಿಡಿದು ದಿಬ್ಬಣ ಹೊರಡುವದು. ಬಾಸಿಂಗ ಸೂಡಿ ಬಿಲ್ಲು ಬಾಣ ಸಹಿತವಾಗಿ ಹೆಣ್ಣು ವರಿಸಲು ಬರುವ ಅಳಿಯನನ್ನು ಕುರಿತು.

ಬಾಣವ ಬಿಡುತೆ ಬಂದ, ಬಿಲ್ಲಹೊಡೆಯುತೆ ಬಂದ
ಜಗಪುತ್ರನನ್ನಕೆ ಬರೂವಾನೆ ತಾಯಿ ಕೇಳು
ಬೈಗೊಂದರು ಬಳುವಾ ತೆಗಿಬಾರೇ

ಹೆಣ್ಣಿಗೆ ಎಣ್ಣೆ ಎದ್ದಿ ಸ್ನಾನ ಮಾಡಿಸುವದು, ವರನ ಕಡೆಯವರು ಕೊಟ್ಟ ಧಾರೆ ಸೀರೆಯನ್ನುಡಿಸಿ, ಉಂಗುರಾಭರಣಾದಿಗಳನ್ನು ತೊಡಿಸಿ ವಧುವನ್ನು ಧಾರೆಯ ಮಂಟಪಕ್ಕೆ ತಂದು ಧಾರೆಯೆರೆಯವರು. ಮಗಳನ್ನು ಅಳಿಯನಿಗೆ ಒಪ್ಪಿಸಿಕೊಡುವಾಗ

ಹುಟ್ಟಿದ ಮಗಳು ರಾಜಂಗಳಿಳಿವಾಗೆ
ಲೆತ್ತಮ್ಮ ನೋಡಲು ಉರೀದಾವೋ
ಹೆತ್ತವ್ವ ನೋಡಲು ಉರಿದಾವೋ ತಂಗ್ಯಮ್ಮ
ಉದ್ದೀಕೊ ನಿನ್ನ ಸೆರೂಗೀಗೆ
ಹುಟ್ಟಿದ ಮಗಳು ಮೆಟ್ಟಂಗಿಳ್ಳಿವಾಗೆ
ಹೆತ್ತಮ್ಮ ನೊಡ್ಳು ಲೇನಂದೇಲುರುವಾದೆ
ಲಿನ್ನೆ ನನು ಮಗಳೆ ಪರುದೇಸ! ಪರುಸ್ತಳಕೆ
ಹೋಗುವಳೆಂದು ಉರೂವದೆ

ಹೀಗೆ ವಿಷಾದಿಸುತ್ತ, ವ್ಯಾಮೋಹಗೊಳ್ಳುತ್ತಾ ಮಗಳನ್ನು ಬೀಳ್ಕೊಡವರು.

ಕೊಟ್ಟ ಮಗಳು ಕುಲಕ್ಕೆ ಹೊರಗಾಗಿ ತಂದೆ ತಾಯಿಯರಿಗೆ ಮಗಳ ನೆನಪು ಕಾಡುತ್ತದೆ. ಈ ತುಂಬ ಬಾರದ ಸ್ಥಿತಿಯನ್ನು ಹಾಡುಗಾರ್ತಿಯರು ಮಗಳು ಆಡುವ ತುಲಸಿ ಮನೆಯ ಗೋಡೆಯ ಮೇಲೆ ಮಗಳಂತಹ ಚಿತ್ರವನ್ನು ಬರೆದುಕೊಳ್ಳಿ ಎಂದು ನಿರ್ದೇಶಿಸುವದು ಹೆಣ್ಣೊಪ್ಪಿಸುವ ಚಡಂಗ (ವಿಧಿ)ದಲ್ಲಿ ಸಾರಿದೆ. ಭಾವಚಿತ್ರವಾದರೂ ನಿತ್ಯನೆನಪಲ್ಲಿ ಇರಲಿಯೆಂದು ಈಳೆ ಬಾಳಿ ಗಿಳಿಯಂತಿರುವ ಹೆಣ್ನನ್ನು ವರಿಸಿಕೊಂಡು ಬಂದ ವರ ತನ್ನ ತಾಯಿಯ ಹತ್ತಿರ ತಾನು ಚಿನ್ನದ ಬಲೆ ಹಾಕಿ ಕರದು ತಂದ ಗಿಳಿಗೆ ಹಾಲು ಅನ್ನು ನೀಡಿ ಸಲಹಬೇಕೆಂದು ಹೇಳುವಲ್ಲಿ ವರನಿಗೆ ವಧುವಿನ ಕುರಿತು ವಾತ್ಸಲ್ಯ ತುಂಬಿದೆ. ಹೆಣ್ಣು ಮನೆಯ ಸೌಭಾಗ್ಯ ಲಕ್ಷ್ಮಿಯೆನ್ನುವದು ವಧುವಿನ ಮಡಿಲಲ್ಲಿ ಹೊನ್ನ ಬೀಜವನ್ನು ತುಂಬಿಕೊಂಡು ಅದನ್ನು ನೆಲದಲ್ಲಿ ಬಿತ್ತುತ್ತ ಮನೆಯಲ್ಲಿ ಹನ್ನೆರಡು ಕಣಜಗಳನ್ನು ಕಟ್ಟುವ ಕೆಚ್ಚು ಹೆಣ್ಣುಗೆದ್ದ ಬರುವ ಹಾಡಿನಲ್ಲಿದೆ.

ಈಳಿಯೀಳಿಯ ಗೆದ್ದೆ ಈಳಿ ಬಾಳಿಯ ಗೆದ್ದೆ
ಈಳಿ ಮೈನಾಡು ಗಿಳಿಗೆದ್ದೆ ತಾಯಿ ಕೇಳು
ಮಾವನ ಕೂಡಾಡಿ ಮಗುಳ ಗೆದ್ದ
ನಾತಂದ ಮಡುದಿ ಬಲು ಸಂಣ ತಾಯಿಕೇಳು

ಹಾಲನ್ನಲಿಟ್ಟಿ ಲೂಗಂದ!
ಚಿನ್ನದ ಕಾಲಕ್ಕಿಯೆಲ್ಲೆ ಮೇವದಕಂಡೆ
ಏನಿಕ್ಕಿಲದುರ ಹಿಡುದೇ ತಂದೆ
ಚಿನ್ನದ ಬಲೆಯೊಡ್ಡಿ ಹಿಡಿದೆ ತಂದೆ
ಚಿನ್ನದ ಬಲೆಯೊಡ್ಡಿಹಿಡಿದ ತಂದ ತಾಯಿ
ಹಾಲನ್ನಲಕ್ಕಿ ಸಲೂಹಿಸು
ಹೊಟ್ಟೆಗೆ ಅನ್ನಲುಲೀಡು ನೆತ್ತಿಗೆಎಣ್ಣೆಯೆಲೀಡು
ಹನ್ನೆಯ್ದು ವರುಸಿಂದುಸಲೂಗೀಸೆ.

ಮುಕ್ತಿಯರಲ್ಲಿ ಸೋದರ ಹೆಣ್ಣಿಗೆ ಆದ್ಯತೆ. ಅದಕ್ಕಾಗಿಯೇ ಮದುವೆಯ ಸಂದರ್ಭದಲ್ಲಿ ಅಕ್ಕ ತಮ್ಮನಿಗೆ ಮುಂದೆ ಹುಟ್ಟಲಿರುವ ಹೆಣ್ಣನ್ನು ತನ್ನ ಮಗನಿಗೇ ಕೊಡಬೇಕೆಂದು ಮದುವೆ ಬಂದವರ ಮುಂದೆ ವಚನ ಪಡೆಯುವ ಬಾಗಿಲ; ತಡೆಯುವ ಪದ್ಧತಿಯೊಂದಿದೆ. ಸೋದರ ಸಂಬಂಧ ಸೌಹಾರ್ದತೆಗಾಗಿಯೇ ಈ ಸಂಗತಿ ಸಂಯುಕ್ತವಾಗಿದ.ಎ

ಇತರ ವಿಧಿವಿಧಾನಗಳು

ಚೊಚ್ಚಿಲ ಬಸುರಿ ಹೆಣ್ಣಿಗೆ ಬಯಕೆ ಬಡಿಸುವ ಶಾಸ್ತ ಮುಕರಿಯವರಲ್ಲಿದೆ. ಗಂಡನೊಡನೆ ಚೆನ್ನಮನೆಯಾಟ ಬಗರಿಯಾಟಗಳನ್ನಾಡಿ ಅತ್ತೆ ಮಾವಂದಿರಿಗೆ ನಮಿಸಿ ಅವರೆಲ್ಲರಿಗೆ ಹೊಸ ಜೀವದೊಡನೆ ಮತ್ತೆ ಮನೆ ತುಂಬುವ ಭರವಸೆಯನ್ನಿತ್ತು ತವರಿಗೆ ಹೊರಟಾಗ ಈ ಬಸುರಿ ಬಯಕೆ ಬಡಿಸುವ ಹಾಡು ಹೇಳಲಾಗುತ್ತದೆ.

ಒಂಬತ್ತು ತಿಂಗೀಳ ಒಂಬತ್ತುದಿವಸಾಲೆ
ತುಂಬೀತು ನಾರಿ ಸಣ್ಣಮ್ಮಗೇ ಅತ್ಯಮ್ಮ
ಸಣ್ಣಂಮ್ಮೆಂದೇಳಿ ಕರೂವಾದು
ಕೇಳು ಕೇಳು ನನು ಮಗನೆ ನಿನ್ನಮಡದಿಯೆಂದೆ
ಸಂತೋಷದಲ್ಲಿ ಕರಿವನೊ
ಮಾಳೂಗಿ ಒಳುಗೆ ಹಾಲೂ ಕಾಸುವತ್ತೆ
ನಾಹೋತೆ ನನ್ನಾ ತವರೀಗೆ.

ಮಗು ಹುಟ್ಟಿ ಮಗುವಿಗೆ ಹೆಸರಿಟ್ಟು ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುವಲ್ಲಿ ಮುತ್ತಯದೆಯರು ಜೋಗುಳ ಹಾಡುತ್ತಾರೆ. ಸುಮಾರು ಐದಾರು ವರ್ಷಗಳವರೆಗೂ ಮಕ್ಕಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎಡಗೈಯನ್ನು ಮಗುವಿನ ತಲೆಯ ಹಿಂಭಾಗಕ್ಕೆ ಆನಿಸಿ ಬಲಗೈಯನ್ನು ಎದೆಗೆ ಹಚ್ಚಿ ಮಗುವನ್ನು ಹಿಂದಕ್ಕೆ ಮುಂದಕ್ಕೆ ಜೋಕಾಲಿಯಾಡಿಸಿ ಲಾಲಿ ಹಾಡಿ ಮಲಗಿಸುತ್ತಾರೆ.

ಆರ್ಥಿಕ ಪರಾವಲಂಬನೆ

ಮುಕರಿಗಳದು ಪರಾವಲಂಬನೆಯ ಬದುಕು. ತಮ್ಮ ಒಡೆಯರ ಭತ್ತದ ರಾಶಿ ಮೆರೆಯುವ ಹಾಡಿನಲ್ಲಿ ಒಡೆಯನ ವೈಭವೋಪೇತ ಜೀವನವನ್ನು ಸಾರುವದರೊಂದಿಗೆ ತಮ್ಮ ಅನಿಶ್ಚಿತ, ಅತಂತ್ರ ಬದುಕಿನ ಭಯವನ್ನು ವ್ಯಕ್ತಪಡಿಸಿದ್ದಾರೆ. ಒಡೆಯನ್ ಹನ್ನೆರಡಂಕಣ ಮನೆಯಲ್ಲಿ ನೂತಂಕದ ಗಿಳಿಗಳು ಹದಿನಾರಿವೆ. ಅವು ಗೆಜ್ಜೆಕಟ್ಟಿ ಬೆಳತಂಕ ಪಾತ್ರವಾಡುತ್ತವೆ/ ಒಡೆಯನ ಸಿರಿಯರಮನೆಯ ಕೋಣೆಯ ಬಂಧನದಲ್ಲಿ ಪಾತ್ರವಾಡುತ ಗಿಳಿಗಳು ಬೆಳತಂಕ ಅವರ ವಿಲಾಸ ಜೀವನಕ್ಕೆ ಸಿಲುಕಿ ನಲುಗಿ ಹೋಗುವ ಗಿಳಿಗಳ ಮೂಕರೋದನ ಮಾತ್ರ ಉಳಿದಿದೆ.

ಆಳು ದುಡಿದು ತಂದ ಬೆಳೆ ಒಡೆಯನಿಗೆ; ಆಳಿಗಿಲ್ಲ ಕಾಳು. ಬೆಳೆ ಬೇಕೆಂಬ ಆಶೆ ಇರದಿರುತ್ತದೆಯೇ…. ಎನ್ನುವ ಅವರ ಒಡಲಾಳದ ಧ್ವನಿ ಅವರು ಬಿತ್ತಿದ ಬೆಳೆ ಹಾಡಿನಲ್ಲಿದ್ದು, ಒಡೆಯನ ಮನೆಯ ಕೊಟ್ಟಿಗೆಯೂ ಕೈಲಾಸವೇ. ಸೊಗಸುಗಾರನೂ ಮನಸುಖರಾಯನೂ ಆದ ಒಡೆಯ ತನ್ನ ಮನದಾನಂದಕ್ಕಾಗಿ ಹಾಡು ಹೇಳಿಸಿಕೊಂಡು ಹೊಗಳುವದರಲ್ಲಿ ನಿಪುಣ. ಆದರೆ ಹಾಡುಗಾರ್ತಿಯರಿಗೆ ಬಾಯಾರಿದ್ದೇ ಬಂತು, ಸುಖವೆನ್ನುವ ನೋವು ನಾದವಾಗಿ ಹರಿದಿದೆ.

ಮುಕ್ರಿಯರದು ಮುಕ್ಕಿ ತಿನ್ನುವ ಬಡತನದ ಬದುಕು. ಬೇರೆಯವರ ಮನೆಯಲ್ಲಿ ದುಡಿದು ದಣಿಯ ಬೇಕು. ಹೀಗಿರುವಾಗ ನೆಂಟರುಪಚಾರ ಅವರಿಗೆ ಹೇಗೆ ಸಾಧ್ಯ? ಮನೆಗೆ ನೆಂಟರಿಗೆ ನೆಂಟರೇ ಬನ್ನಿ ಕುಳಿತು ಕೊಳ್ಳಿ ನಾವು ಕುಟ್ಟುವ ಭತ್ತ ಬಂದ ನಮ್ಮದಲ್ಲ. ಇಲ್ಲಿ ಕುಳಿತರೆ ನಿಮಗೆ ಉಪವಾಸ ಹೊತ್ತಿರುವಾಗಲೇ ನೀವು ಹೊರಟು ಹೋಗಿ. ಇಲ್ಲಿ ಕುಳಿತರೆ ಯಾವ ಫಲವೂ ಇಲ್ಲ; ಸುಳಿಗುಂಡಿಯಲ್ಲಿ ಗಾಳಿ ಹಾಕಿದಂತೆ ಎನ್ನುವಲ್ಲಿ ಅವರ ನೋವಿನ ಆಳವಿದೆ. ಇಂಥ ನೋವಿನ ನರಳುವಿಕೆಯಲ್ಲೀ ಜೀವನ ಶ್ರದ್ಧೆಯನ್ನು, ನಲಿವನ್ನು ಕಂಡುಕೊಂಡಿರುವದು ಸಾಮಾನ್ಯವೇನಲ್ಲ. ಶೃಂಗಾರ ಹಾಸ್ಯ ಭಾವ ಲಹರಿಯ ಮೂಲಕ ತಮ್ಮ ಮುಗ್ಧತೆ, ಮನೋಹರತೆಯನ್ನು ಮೆರೆದಿದ್ದಾರೆ.

ಅಕ್ಕನನ್ನು ಕರೆಯಲು ಹೊತ್ತಿಲ್ಲ, ಕತ್ತಲಾಯಿತೆಂದು ನೆವ ಹೇಳುವ ತರುಣ ಹೆಂಡತಿ ಕರೆಯಲು ಹೋಗಿ ಕತ್ತಲೆಯಲ್ಲಿಯೂ ಬೆಳದಿಂಗಳಿನ ಹಾಲ್ಬೆಳಕನ್ನು ಕಾಣುವಲ್ಲಿ ತರುಣನ ರಮ್ಯ ರೋಮಾಂಚನದ ತವಕವನ್ನು

ಅಕ್ಕನ ಕರಿಯಂದ್ರೆ ಹೊತ್ತೂ ಹೋಯ್ತಂದ
ಮುತ್ತಿನ ಮುಡಿಯಾ ಮಡದೀಯ ಕರಿಯಂದ್ರ
ತಿಂಗಳ ಬೆಳಕು ಇದುವೆಂದ

ಎನ್ನುವ ಶೃಂಗಾರ ಹಾಡಿನಲ್ಲಿ ಪ್ರಚುರಗೊಂಡಿದೆ. ಹಾಗೆಯೇ ಮುಂದೆ

ನಾನು ಹಾಕಿದ ಹೊನ್ನ ಹೂವಿನ ಬಳೆ
ಎಲ್ಲಾಡಿ ನಾರೀ ಜರುಕಂಡೆ!
ಕಳ್ಳೆಮ್ಮಿ ಕಟ್ಟೀದೆ ಕಳ್ಳೆಮ್ಮಿ ಬಿಟ್ಟೀದೆ
ಕಳ್ಳೆಮ್ಮಿಕೋಡು ಕಯ್ತಾಗಿ! ಹೊನ್ನೀನ
ಹೂವಿನ ಬಳಿಯೂ ಜರುಕಂಡೆ!

ಪರಸಂಗದ ಒಡನಾಡಿ ಬಳೆ ಒಡಕೊಂಡ ಎಡಪುಂಡಿಯೊಬ್ಬಳು ಕಳ್ಳಮ್ಮೆ ಕೋಡು ತಾಗಿ ಬಳೆಯೊಡೆಯಿತೆಂದು ಹೇಳುವ ಸುಳ್ಳು ಬಯಲಾಗುತ್ತದೆ.

ಹಾಡು ಕಲಿಬೇಕೆಂದೇ ಊರೆಲ್ಲ ತಿರುಗೀದೆ
ರಾಮಾಕಂಡರೆ ಕಲುತೀದೆ! ರಾಯಮ್ಮ
ಹುಲ್ಲಿಗೋದಲ್ಲೆ ಮರುತೀದೆ!

ಎಂದು ಶುರುವಾಗುವ ಸರಸದ ಹಾಡಿನಲ್ಲಿ ಹಾಡು ಕಲಿಯುವ ಹಾಡಿಗಾರ್ತಿಯರಿಗೆ ಸ್ಮರಣ ಶಕ್ತಿ ಸ್ಫುರಣ ಶಕ್ತಿಯಿರಬೇಕು. ಈಗ ಕೇಳಿದ್ದು ಈಗ ಮರೆಯುವ ಚಂಚಲ ಚಿತ್ತವಿರಬಾರದೆನ್ನುವದನ್ನು ಚಿತ್ತಿಸುತ್ತದೆ.

ಹತ್ತು ಗಿಡ ಅಕ್ಕಿ ಎಂಟೆತ್ತಿನ ಬೇಸಾಯದ ದೊಡ್ಡಸ್ತಿಕೆಯಿದ್ದರೂ ಹೆಂಡತಿಗೆ ಹಿತ ನೀಡದ ಒರಲೆ ಮುಖದ ಗಂಡನಿಂದ ಉಡುವ ಬಟ್ಟೆಗೂ ತತ್ವಾರವಾಗುವ ಹಾಗೂ ಹೆಂಡತಿಯ ಕೈ ಕಟ್ಟಿ ಬಡಿಯುವ ಪುರುಷ ಪ್ರಧಾನ ಪ್ರಭುತ್ವದ ಪ್ರವೃತ್ತಿಯನ್ನು ಹಾಡುಗಳಲ್ಲಿ ಚಿತ್ರಿಸಲಾಗಿದೆ.

ಫಲವತ್ತಾದ ಮೊಲೆಯನ್ನು ಹೊಂದದ ಹೆಣ್ಣು ಕೃತಕ ಮೊಲೆಯಿಂದ ಮೆರೆಯುವ ಬಿನ್ನಾನವನ್ನು

ಅತ್ತೂಗ್ ಅತ್ತೂಗ ಚೆಂದ ಅತ್ತೂಗಿ ಮೊಕಚೆಂದ (ಅತ್ತಿಗೆ)
ಅತ್ತೂಗೆಲಂಬಳಿಗೋ ಮೊಲೆಯಲ್ಲ! ಅಣ್ಣಯ್ಯ
ಇಂಬೀಕಾಯ್ ತಂದು ಮೊಲಿ ಮಾಡೋ! ಅಣ್ಣಯ್ಯ (ಲಿಂಬೆ)
ಎಕ್ಕೀ ಹಾಲು ತಂದು ಸೊನಿಮಾಡೋ!

ಎಂದು ವಿಡಂಬಿಸಲಾಗಿದೆ. ಇವಲ್ಲದೆ ಶಿರಸಿಯ ಸೀವಮ್ಮ, ಮೂಕಾಂಬಿಕೆ, ದೇವಮ್ಮ ತಳದೊಡೆಯ, ಅಯ್ಯಪ್ಪ ಮೊದಲಾದ ಭಕ್ತಿ ಗೀತೆಗಳನ್ನು ಮುಕ್ರಿಯರು ಹಾಡುತ್ತಾರೆ. ಹಬ್ಬದ ದಿನಗಳಲ್ಲಿ ಹಾಗೂ ತೇರು ಉತ್ಸವಗಳಲ್ಲಿ ಈ ಭಕ್ತಿ ಪ್ರಧಾನ ಹಾಡುಗಳನ್ನು ಹಾಡುತ್ತಾರೆ. ಇವೆಲ್ಲ ಸುತ್ತಿಪರವಾಗಿವೆ.

ದೂರದ ದೌಲತ್ತು

ಮದುವೆ, ಶೋಭನ, ಬಸುರಿ ಬಾಳಂತಿ, ನಾಮಕರ ಇತ್ಯಾದಿಗಳು ಆಯಾ ಕಾರ್ಯಕೂಪದ ಕ್ರಿಯಾಶೀಲತೆಯನ್ನು ಕೊಂಡಾಡುವ ಹಾಡುಗಳಾದರೆ ದೂರುವ (ಜರವ) ಹಾಡುಗಳು ಎಂಬ ಪ್ರಕಾರ ಮುಕರಿ ಮಹಿಳೆಯರಲ್ಲಿದೆ. ಈ ದೂರವ ಹಾಡುಗಳಲ್ಲಿ ಮುಕರಿಯವರ ಜೀವನ ದೃಷ್ಟಿ, ಸ್ವಾಭಿಮಾನದ ಸೊಲ್ಲು ಅಡಗಿದೆ. ವಿಶಿಷ್ಟವೂ ವಿಡಂಬನೆಯೂ ಆಗಿದೆ. ವಧುವಿಗೆ ವಸ್ತ್ರ ಕೊಟ್ಟಿದ್ದನ್ನು ಮುಕರಿ ಮಹಿಳೆ ಹೀಗೆ ಹೇಳುತ್ತಾಳೆ-

ಗಾಳಿಗೆ ಹಾರಿದ ಚಣ್ಣಾ ಧೂಳಿಗೆ ಮಾಸಿದ ಬಣ್ಣಾ (ಸಣ್ಣದು)
ಇದು ಯಂತಾ ಬಣ್ಣಾ? ಹಳೀ ಬಣ್ಣಾ!! ಮದುವಣ್ಣಾ,
ಮಾರಿಗೆಗೆ ಮುರುಕಾಸೂ ಹಡಿಲಿಲ್ಲ
ಗಾಳಿಗೆ ಹಾರಿದ ಬಣ್ಣಾ ಧೂಳಿಗೆ ಮಾಸಿದ ಬಣ್ಣಾ
ಬಿಚ್ಚೀ ಬೀರಿದರೇ ಬೀದಿಸಣ್ಣಾ!! ಮದುವಣ್ಣಾ
ಮಾರಿಗೆ ಮೂರು ಕಾಸೂ ಹಡಿಲಿಲ್ಲ

ಈ ಹಾಡಿಗೆ ಕೆರಳಿದ ಗಂಡಿನವರು ಉತ್ತರ ಕೊಡುವುದು, ತಮ್ಮ ಹೆಂಗಸರ ಮೂಲಕ-

ಹತ್ವರನೇನಾಗಿದ್ದೇ ಭೂಮಿ ಕೆಲಸನೆ ಮಾಡೀ
ಅದರಾಗ ಹತ್ವರವಾ ಗಳಿಸೀದೇ! ನನ್ನ ತಮ್ಮಾ
ಕೂತೀ ತಂದಿದನೇ ಹೊಸ ಬಣ್ಣಾ!! ಹೆಣ್ಣುನ ತಂದೇ,
ಈ ಬಣ್ಣಾ ತ್ಯೆಂತಾ ಹಳೂ ಬಂತೇ? ಹೆಣ್ಣಿನ ತಾಯೇ,
ಬಡುವಳು ಇನ್ಯೆಟ್ಟೂ ಚೆಲುವೀಯೇ?

ಹೀಗೆ ಚಿನ್ನ ಕೊಟ್ಟಿದನ್ನು ಮುಕರಿ ಮಹಿಳೆಯರು ಇದೇ ಭಾವದಲ್ಲಿ ಹಳಿಯುತ್ತಾರೆ. ಆಗ ಗಂಡಸರು ನೀಯಾ ಊರ ಚೆಲುವೆಯೆಂದು ಹಂಗಿಸುತ್ತಾರೆ. ಮದುವೆ ಊಟ ಇನ್ನು ಸಿದ್ಧವಾಗಲಿಲ್ಲವೆಂದು ಅದನ್ನು ಹಾಡಿನ ಮೂಲಕವೇ ಜರಿಯುತ್ತಾರೆ.

ನೆಂಟರ ಮನಿಯಲ್ಲಿ ಉಚ್ಚಯೂ ಕೊರು ಹೊಡಾ (ಕೊರೆದ ಹೊಂಡ)
ಮಣ್ಣಿಗೂ ಇನ್ಯಂತಾ ಬಡೂತಾನಾ
ಮಣ್ಣುಗಿನ್ಯಂತಾ ಬರೆ ಬಂತೋ ನೆಂಟಾರೇ (ಬರಗಾಲ)
ನಮ್ಮೂರೀಗೈದ ಆಳಾ ಕಳು ಗೀಸೀ ನೆಂಟಾರೇ
ಮಣ್ ಬರುದೋ ಮಣ್ಣೀನಾ ಹೊರ ಬರುದೇ!!
ಕಗ್ಗನಕ್ಕೆ ಹೊಯ್ಕಂಡೀ ಕಂಡ್ಲಸೌದಿ ವಲಿದುಬಂಬೀ (ಒಲೆ)
ಊಬುತೆ ಬಿದ್ದರಿಯೋ ವಲಿಮುಂದೇ! ನೆಂಟಾರೇ
ಮಾಡಿದಾ ಅಡಿಗೀ ಸಾಲುದಾಲೋ!]
ಮಾಡಿದಾ ಅಡಿಗೀ ಸಾಲುದಾಲೋ ನೆಂಟಾರೇ
ಮಾಡಿದಡ್ಗಿ ಸಾಕೋ ಯೆಡೆ ಮಾಡಿ!!

ಎಂದಾಗ ಕೋಪತಾಪಗೊಂಡ ಗಂಡಸರು ತಮ್ಮ ಕಡೆ ಹೆಂಗಸರ ಮೂಲಕ ಕೊಡುವ ಉತ್ತರ

ಅಟ್ಟದ ಮೇನಿನಾ ಪುಟ್ಟ ಕೊಂಬಳಕಾಯೀ
ಯೆಂಚೇಣೆ ಚಾಚೀ ತಡದೀಳೆ ಆತ್ಯಮ್ಮನೇ
ಕಣ್ಣದ ಮೆಟ್ಟುಗತ್ತೀಲೀ ತೊಳದಾಳೆ ! ಳತ್ಯಮ್ಮನೇ
ಶೇರಣ್ಣೀಲಿಟ್ಟೀ ಗಮಗುಡುಸೇ! ಮಾಡಿದಡಗೀ
ನಾಲ್ವರ ಪಂತೀಗೇ ಯೆಡೇಮಾಡೇ! ಅಡಗೀ
ಉಂಡೀದಾರದವೇ ಬಲೀದಾದೋ! ಲತ್ತೇಕೇಳೇ’
ಯೇನೋ ಮಾಡಿದರೇ ಮೆಚೈವೆಲ್ಲ
ಮೆಚ್ಯಾರುಣ ತಂಗೀ, ಮೆಚ್ಚದಿರೇ ಬಿಡುತಂಗೀ
ಕೊಟ್ಟಿರೆ ಬಾ ನಮ್ಮ ಕೊದುರೀಗೇ ! ತೆನ್ನದಿರೇ
ತೋಕೆಕೆ ಬಾ ನಮ್ಮೊಜಲುದೀಗೇ!!

ಮುಕರಿಮಹಿಳೆಯರಲ್ಲಿ ತಮಾಷೆಗೇನೂ ಕಡಿಮೆಯಿಲ್ಲ. ಮದುಮಗನು ಪನ್ನೇ(ಕ್ಷೌರ) ಮಾಡಿಸಕೊಳ್ಲೂವಾಗಿನ ಈ ಹಾಡು ಇದನ್ನು ಸಾರುತ್ತದೆ.

ಪಲ್ಲಿ ಪಲ್ಲಿ ಚಂದಾ ಪಲ್ಲೀ ಮರಿಯನೆ ಚೆಂದಾ
ಪಲ್ಲಿ ನೀರುಂಬೊ ಕೆರೀ ಚಂದಾ! ತಮ್ಮಯ್ಯ
ಪಣ್ಣೇ ತಿದ್ದಿದರೇ ಮೊಕ ಚೆಂದಾ!
ಗುಬ್ಬೀ ಗುಬ್ಬೇ ಚೆಂದಾ ಗುಬ್ಬಿಯ ಮರಿ ಚೆಂದ ಗುಬ್ಬೀ
ನೀರುಂಬೋ ಕೆರೀ ಚಂದಾ! ತಮ್ಮಯ್ಯ
ಹಬ್ಬು ತಿದ್ದೀದಾ ಮೊಕು ಚೆಂದಾ!!
ಕಾಮನ ಗಿಂಡಿ ನೀರೂ ಭಿಮನ ಗಂಡಿಗೆ ಬೆರೆಸೀ
ಅರುಣಜಣ ಗುಂಡಿ ನೀರಾ ಹದಮಾಡೀ! ನೀರಿಗೇ (ಹೊಂಡ)
ಮುದ್ದು ತಮ್ಮಯನಾ ಜಳಕಾವೇ.

ಕಥಾ ಸಂಪತ್ತು

ಮುಕರಿಯರ ಜನಪದ ಕತೆಗಳು ನೂರಾರು ಪ್ರಚಲಿತದಲ್ಲಿವೆ. ಹಲವಾರು ಕತೆಗಳಲ್ಲಿ ಮಹಿಳೆಯ ಉದಾತ್ತ ಗುಣಗಳು ಸೇಡು, ಪ್ರೀತಿ, ವಾತ್ಸಲ್ಯಯ ಪ್ರವೃತ್ತಿಗಳಿವೆ. ಉತ್ತುಮಾಮಿ (ಲತುಮಾಮಿ) ಎಂಬ ಗಪದ್ಯ ಕಥನವಿದೆ. ಇದರ ಸಾರಾಂಶ ಹೀಗಿದೆ.

ಲತುಮಾಮಿ ಮನೆಯಿಂದ ಹೋಗುವಾಗ ಬರಿತಲೆಯಲ್ಲಿ ಹೋಗಿಬರುವಾಗ ಹೂದಂಡೆಯನ್ನು ಮುಡಿದು ಬರುತ್ತಾಳೆ. ಲತುಮಾಮಿಯ ಶೀಲವನ್ನು ಆಕೆಯ ಗಂಡ ಶಂಕಿಸಿ ಅವಳ ಪಾತಿವೃತ್ಯವನ್ನಉ ಸಾಬೀತುಗೊಳಿಸಲು ಸಮುದ್ರಕ್ಕೆ ಹೋಗಿ ಸಿಬ್ಬಲಿನಲ್ಲಿ ನೀರು ತರಲು, ಆಕಾಶದ ಮೇಲೆ ಮನೆ ಕಟ್ಟಲು, ಅಂಗೈಮೇಲೆ ಆಯ್ದು ಕೊಳಗಕ್ಕಿಯಿಡಲು ಹಸಿ ನುಗ್ಗೆಯ ಸವ್ವೆಯಿಂದ ಬೆಂಕಿಯುರಿಸಲು ಆಜ್ಞಾಪಿಸುತ್ತಾನೆ. ಲತುಮಾಮಿ ಅವೆಲ್ಲವನ್ನೂ ಮಾಡಿ ಮುಗಿಸಿದರೂಗಂಡ ಪ್ರತಿಕ್ರಿಯೆ ವ್ಯಕ್ತಪಡಿಸದ್ದನ್ನು ನೋಡಿ ತನ್ನ ಮಗನನ್ನು ತವರಿಗೆ ಒಪ್ಪಿಸಿ ತಾನು ಕೆರೆಗೆ ಆಹುತಿಯಾಗುತ್ತಾಳೆ. ಸ್ವಾಭಿಮಾನಿಯಾದ ಹೆಣ್ಣು ಗಂಡನ ಸಂಶಯಖೋರ ಪ್ರವೃತ್ತಿಗೆ ಹೇಸಿ ದೇಹತ್ಯಾಗ ಮಾಡಿದ ದಾರುಣ ಕತೆಯಿದು.

ಅಕ್ಕತಮ್ಮ ಎಂಬುದು ಪದ್ಯಕತೆ. ದೀಪಾವಳಿಯ ಹಬ್ಬಕ್ಕೆ ಮಗಳನ್ನು ಕರೆತರಲು ತಾಯಿ ತನ್ನ ಮಗನನ್ನು ಕಳಿಸುತ್ತಾಳೆ. ಮಗ ಮೈತುಂಬ ಬಂಗಾರ ತೊಟ್ಟು ಕುದುರೆಯೇರಿ ಅಕ್ಕನ ಮನೆಗೆ ಬರುತ್ತಾನೆ. ಮನೆಗೆ ಬಂದ ತಮ್ಮನನ್ನು ಸತ್ಕರಿಸಿ ಬರಮಾಡಿಕೊಂಡ ಅಕ್ಕ ತಮ್ಮನ ಚಿನ್ನಾಭರಣಗಳ ಆಸೆಗೆ ಅವನನ್ನು ಕೊಲ್ಲುತ್ತಾಳೆ. ಸತ್ತ ಮಗ ತಾಯಿಗೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಬದುಕು ವ್ಯಥವಾದುದನ್ನು ತಿಳಿಸುತ್ತಾನೆ. ತಾಯಿ ಮಗಳಮನೆಗೆ ಬಂದು ವಿಚಾರಿಸಿದಾಗ ಅವಳ ಮೊಮ್ಮಕ್ಕಳು ತಮ್ಮ ತಾಯಿ ಮಾಡಿದ ಘೋರಕೃತ್ಯವನ್ನು ಅಜ್ಜಿಗೆ ವಿವರಿಸುತ್ತಾರೆ. ಆಭರಣದ ಆಶೆಯಿಂದ ತಮ್ಮನನ್ನೇ ಕೊಂದ ಕೃತ್ಯ ಕರುಣಾಜನಕವಾಗಿದೆ.

ಮದುವೆಯಾಗಿಯೂ ತವರು ಮೆನಯಲ್ಲಿಯೇ ಬದುಕುವ ಆಶೆ ವ್ಯಕ್ತಪಡಿಸಿದ ಆರು ಮಂದಿ ಅಕ್ಕಂದಿರು ಆರಂಭದಲ್ಲಿ ಸುಖಸಂತೋಷ ಹೊಂದಿದರೂ ಅವರ ಜೀವನ ಸುಖಕ್ಷಿಣಿಕವಾಗಿತ್ತು. ಮದುವೆಯಾದ ಮೇಲೆ ಗಂಡನ ಆಶ್ರಯದಲ್ಲಿ ಬಾಳಬಯಸಿದ ಕಿರಿಯವಳೇ ಏಳನೆಯವಳು. ಆರಂಭದಲ್ಲಿ ತೊಮದರೆ ಅನುಭವಿಸಿ ಅಂತಿಮವಾಗಿ ಒಳ್ಳೆಯ ರಾಜನ ಹೆಂಡತಿಯಾಗಿ ಆರು ಮಂದಿ ಅಕ್ಕಂದಿರ ವಂಚನೆ, ವ್ಯಾಮೋಹವನ್ನು ಭೇದಿಸಿ, ಗಂಡನನ್ನು ಸಂಕಟದಿಂದ ಪಾರು ಮಾಡಿ ಅವನೊಡನೆ ಅನ್ಯೋನ್ಯವಾಗಿ ಆನಂದವಾಗುಳಿಯುವ ಕತೆ. ಹೆಣ್ಣಿಗೆ ಗಂಡನ ಮನೆಯ ಸರ್ವಸ್ವ. ಗಂಡನ ಗೌರವ ಸೇವೆಯೇ ಸಾಫಲ್ಯವೆನ್ನುಯವದನ್ನು ಏಳು ಅಕ್ಕ. ತಂಗಿ ಎಂಬ ಕತೆಯಲ್ಲಿ ಸಾರಲಾಗಿದೆ.

ಚಿನ್ನದ ಕೂದಲಿನ ತಂಗಿಯನ್ನುಮದುವೆಯಾಗುವದನ್ನು ಬಯಸಿದ ಅಣ್ಣ ಸೋತು ಸುಸ್ತಾಗುತ್ತಾನೆ., ಅವನ ಅತಿ ಆಸೆಗೆ ಹೇಸಿದ ತಂಗಿ ಅವನನ್ನು ಬಿಟ್ಟು ಪರಮಾತ್ಮನನ್ನೇ ತನ್ನ ಪತಯೆಂದುಕೊಂಡಳು. ಕಾಮಕ್ಕೆ ಕಣ್ಣಲ್ಲವೆಂಬುದನ್ನು ಸಾರುವ ’ಚಿನ್ನ ಕೊದ್ಲಿನ ಹೆಣ್ನೂ ಎಂಬ ಕತೆ.

ತನ್ನನ್ನು ಕೊಂದು ತಿನ್ನದ ಗೌಡನಿಗೆ, ಜೀವನ ಪರ್ಯಂತ ಸಾಲುವ ಸಂಪತ್ತು, ತನ್ನನ್ನು ಚೆನ್ನಾಗಿ ಸಾಕಿ ಸಲುಹಿದ ರಾಜನಿಗೆ ಸುಂದರಿ ಪದ್ಮಾವತಿ ಸಂಬಂಧವನ್ನು ಸಾಧ್ಯವಾಗಿಸಿದ ಕಾಪಳಿ ಗಿಳಿ ಮರಿ. ತನ್ನನ್ನು ಕಾಡಿದ ರಾಜನ ಹೆಂಡತಿಗೆ ಅವಳ ರಾಣಿಪಟ್ಟ ತಪ್ಪಿಸಿ ಗೋಳಿಗೀಡು ಮಾಡಿದ್ದನ್ನು ಸಾರುವ ’ಕಾಪಳಿ ಗಿಳಿ ಮರಿ’ ಎಂಬ ಕತೆ ಮಾಡಿದ್ದುಣ್ಣೋಮಹರಾಯ ಎಂಬ ಸಂದೇಶವನ್ನು ಬೀರುತ್ತದೆ.

ಹಿರಿಯ ಹೆಂಡತಿಯ ಮಗ ಕಿರಿ ದೋಣಿಯಲ್ಲಿ ಪ್ರವಾಸ ಮಾಡಿದರೂ ಸಾಹಸವನ್ನು ಮಾಡಿ, ಉಪಾಯದಿಂದ ರಕ್ಕಸರ ವಶದಲ್ಲಿದ್ದ ತನ್ನ ಅತ್ತೆಯನ್ನು ಕರೆದುಕೊಂಡು ಬಂದು. ಮಧ್ಯದಲ್ಲೇ ತನ್ನ ತಮ್ಮನಿಂದ ವಂಚಿತನಾಗಿಸತ್ತು, ತನ್ನ ಹೆಂಡರಿಂದ ಮರು ಹುಟ್ಟು ಪಡೆದು ತಮ್ಮನ ಮೋಸವನ್ನು ಬಯಲಿಗೆಳೆದು ತಂದೆಯಿಂದ ರಾಜ್ಯಪಡೆದ ಕತೆ’ ಅತ್ತೆ ಕರೆತಂದ ಹಿರಿ ಹೆಂಡ್ತಿಮಗ. ಗುಣಕ್ಕೆ ಮತ್ಸರವಿಲ್ಲ, ಮಲತಾಯಿ ಬಲತಾಯಿಯೊ ಆಗಬಹುದೆಂಬ ಆಶಯ ಈ ಕತೆಯಲ್ಲಿದೆ.

ಬೇಟೆಗೆ ಹೋದ ಅಣ್ಣ ತಮ್ಮಂದಿರಲ್ಲಿ ಅಣ್ಣ ಹಾವಿನ ಬಾಯಿಗೆ ತುತ್ತಾಗುತ್ತಾನೆ. ಇದನ್ನರಿತ ಆತನ ತಾಯಿ ಉಪಾಯದಿಂದ ಹಾವನ್ನು ಸೀಳಿ ಮಗನನ್ನು ಮತ್ತೆ ಪಡೆದ ಕತೆ. ತಾಯಿ ತನ್ನ ಪಟಗತ್ತಿಯಿಂದ ಹಾವನ್ನು ಸೀಳುವ ಸಂಗತಿ ರೋಚಕವಾಗಿದೆ. ಬೇಟೆಗಾರರ ಬವಣೆ ಅನಿಶ್ಚಿತವಾದುದು. ಮಕ್ಕಳು ಬೇಟೆಗಾರರಾಗುವದು ಹಿಂಸಾತ್ಮಕವಾದುದೆಂಬ ಹಿರಿಯರು ಹೇಳುತ್ತಾರೆ. ಇದು ’ಮೊಸೇಸ್ನ ಕೊಂದ ಹೆಣ್ಣು’ ಎಂಬ ಕತೆಯ ಸಾರಾಂಶ.

ಚುರುಕು ಬುದ್ದಿಯ ತಮ್ಮನನ್ನು ಅವನ ಅಣ್ಣಂದಿರು ದ್ವೇಷಿಸಿ ಅವನನ್ನು ಹಾಳು ಬಾವಿಗೆ ಹಾಕಿ, ಅವನು ಪಡೆದ ಹೆಣ್ಣನ್ನು ಅಪಹರಿಸಿ ಕೊನೆಗೆ ಅವಳು ಅವರ ಪಾಲಿಗೆ ದಕ್ಕದೇ ತಮ್ಮನೇ ಯಶಸ್ವಿಯಾಗಿ ತನ್ನ ಹೆಂಡತಿ ಹಾಗೂ ಅಪ್ಪನ ಜೊತೆಗೆ ಸುಖವಾಗಿ ಬಾಳುವೆ ಮಾಡುವ ಕತೆ. ’ಏಳು ಜನ ಅಣ್ಣ ತಮ್ಮ’. ಎಂಬುದು. ’ಹುಟುವಾಗ ಅಣ್ಣ ತಮ್ಮಂದಿರು ಬೆಳೆಯುವಾಗ ದಾಯಾದಿಗಳು, ಎಂಬ ನಿತಿ ಸಾರ ಕತೆಯಲ್ಲಿದೆ.

ಮುಕರಿಯರ ಜಾನಪದ ಕತೆಗಳೆಲ್ಲ ಸರಳವಾದುವುಗಳು. ಸಮಾಜಕ್ಕೆ ರೀತಿ ನೀತಿಯೊಂದನ್ನು ಸಾರುವ ಗುಣಧರ್ಮವುಳ್ಳದ್ದು. ತಾಯಂದಿರು ಮಕ್ಕಳಿಗೆ ಈ ಕತೆಗಳನ್ನು ತಮ್ಮದೇ ಭಾಷೆ ವಿನ್ಯಾಸದಲ್ಲಿ ವ್ಯಾಖ್ಯನಿಸಿರುತ್ತಾರೆ. ಪದಗಳ ಬಳಕೆಯೆಲ್ಲ ಜೀವನದ ಚಾಲ್ತಿಯಲ್ಲಿರುವದೇ ಆಗಿದೆ. ಕೊನೆಗೆ ಅದರ ಫಲಿತಾಂಶ ಗಾದೆಗೋ ತತ್ವಕ್ಕೋ ಅನುಭವಕ್ಕೋ ಅನ್ವಯಿಸಿಕೊಂಡಿರುತ್ತದೆ. ಮುಕರಿಯವರ ಗಾದೆಗಳೆಲ್ಲ ಸಾರ್ವತ್ರಿಕವಾದದ್ದೇ. ಸಂಗತಿ ಸನ್ನಿವೇಶಮಾತ್ರ ಬೇರೆ, ಬೇರೆ.

ಅರಿವುಆಶಯ

ಮುಕರಿಯವರ ವಾಸ್ತವ್ಯದ ನೆಲೆಗೆ ಹೋದಾಗ ಆಗುವ ಅರಿವು ಅನುಭವ ಏನು?

ಬೆಟ್ಟದ ಎತ್ತರದಲ್ಲಿರುವ ಒಡೆಯರ ದೊಡ್ಡ ಹಂಚಿನ ಮನೆ. ಮನೆಯ ಸುತ್ತಮುತ್ತ ದಟ್ಟವಾಗಿ ಬೆಳೆಸಿರುವ ಕಾಡು. ಗಾಳಿಗೆ ತೂಗಾಡುವ ಅಡಿಕೆ ಮರಗಳು, ಹಸಿರು ತೆನೆ ತುಂಬಿ ನಿಂತ ಗದ್ದೆಯ ಬಯಲು ಮನೆಯ ಅಂಗಳದ ದಿಬ್ಬವನ್ನು ಏರಿ ಏರಿ ಬಂದಾಗ ಗುರುತು ಸಿಗದ ನಾಯಿಗಳು ಹರಿದು ತನ್ನುವಂತೆ ಬೊಗಳ ತೊಡಗುತ್ತವೆ. ನಾಯಿಗಳ ಬೊಗಳಿಕೆ ಕೇಳಿ ಯಾರೋ ಮನೆಗೆ ಬಂದರೆಂದು ಹೊರಗೆ ಬಂದ ಯಜಮಾನಿತಿ ಉಭಯ ಕುಶಲೋಪರಿ ನಡೆಸಿ ಕೆಂಚ ಇವತ್ತೇಕೋ ಕೆಲಸಕ್ಕೆ ಬಂದಿಲ್ಲ. ಅವನ ಹೆಂಡ್ತಿ ನಾಗಿಗೆ ಬಹುಶಃ ಹುಶಾರಿಲ್ಲ. ನಿನ್ನೇ ಉಪ್ಪಿನಕಾಯಿ ತೆಗೆದುಕೊಂಡು ಹೋಗಿದ್ದಾಳೆ. ಏನು ಬಯಕೆಯೋ ಏನೋ ಇಷ್ಟೊಂದು ವರ್ಷದ ಮೇಲೆ ಇದೇ ಮುಂದಿನ ಕಾಲುದಾರಿ ಹಿಡಿದು ಸೀದಾ ಹೋಗಿ ಅವರ ಬಿಡಾರಕ್ಕೆ ಹೋಗುತ್ತದೆ. ಎಂದಾಗ ನಾವು ಆಗಲೇ ಆ ಮನೆಯಿಂದ ಹೊರಬಿದ್ದಿದ್ದೆವು. ಸಂಜೆ ಸಮಯ ಮೋಡ ಕವಿದಿದ್ದರಿಂದಲೂ ಬ್ಯಾಟ್ರಯ ಬೆಳಕಿನಿಂದ ಕತ್ತಲೆಯನ್ನು ಸೀಳಿಕೊಂಡು ಕೆಂಚನ ಬಿಡಾರದ ಹಾದಿಯನ್ನು ಹಿಡಿದಿದ್ದೆವು. ಕತ್ತಲು ದಟ್ಟವಾಗಿ ಎದ್ದು ಬಂದಂತಾಗಿ ಗಡಬಡಿಸಿದ ನಮ್ಮ ಕಣ್ಣಿಗೆ ಬೆಳಕಿನ ಬಿಂದುಗಳು ಕಾಣ ತೊಡಗಿದವು ಗಪ್ಪೆ ಗುಪ್ಪೆ ಮಿನೂಕು ಹುಳಗಳು ಅವನ್ನೇ ದಿಟ್ಟಿಸುತ್ತ ಸ್ವಯಂ ಪ್ರಕಾಶದ ಜೀವಕಣಗಳು ಎಂದು ಕೊಳ್ಳುತ್ತ ಹೆಜ್ಜೆ ಹಾಕತೊಡಗಿದೆವು. ತೆಂಗಿನವನ ದಾಟ್ಟುತ್ತಿದ್ದಾಗ ಕೆಂಚನ ಬೆವರ ಹನಿಗಳನ್ನು ಹೀರಿಕೊಂಡು ಬೆಳದ ಫಸಲು ಅವ್ಯಕ್ತ ಪ್ರೀತಿಯನ್ನು ಹುಟ್ಟಿಸಿತು. ಹಸಿರು ವಂಶದ ವ್ಯಾಪಕತೆಯ ಉಸಿರಿನಲ್ಲಿ ಕೆಂಚನ ಅಂಶ ಬೆರೆತಿದೆಯೆಂದು ಅನಿಸಿತು. ನಮ್ಮ ಕಾಲುಗಳು ಸಾಗುತ್ತ ಹಳ್ಳದ ಸನಿಹಕ್ಕೆ ಬಂದವು. ಪರಿಚಿ ಕಲ್ಲುಗಳ ಮೇಲೆ ಸಾಗುತ್ತಾ ನೀರನ್ನು ದಾಟಿದೆವು. ಕೆಮ್ಮಣ್ಣಿನ ವಾಸನೆ ಮೂಗಿಗೆ ಬಡಿಯಿತು. ಎದುರು ನಿಂತ ಆಲದ ಮರ ಬುಡದಲ್ಲಿ ಕುಂಕುಮ ಶೋಭಿತ ಚೌಡಿಕಲ್ಲು ಅಸ್ಪಷ್ಟ ಆಕೃತಿಯಾಗಿ ಮ್ಮೈ ಜುಮ್ಮೆನಿಸಿ ಗಾಳಿ ತಣ್ಣಗಾಗಿ ಹಾವು ನುಸುಳಿದಂತೆ ಮಯಯ ಸಂದುಗಳಲ್ಲಿ ತೂರಿ ಕಚಗುಳಿ ಇಟ್ಟಂತಾಯಿತು. ಜಿರ‍್ ಜಿರ‍್ ಹುಳುಗಳ ಸದ್ದನ್ನು ಮೀರಿಸಿ, ತ್ವರೆಯಿಂದ ನಡೆಯುತ್ತ ಬೀಡಾರದ ಸನಿಹಕ್ಕೆ ಕಾಲನ್ನು ಎತ್ತಿತ್ತಿ ಮುಂದಿಡುತ್ತಾ ನಡೆದಂತೆ ಗಿಡಗಳು ಮುರಿಗು ಮುತ್ತಿಡುತ್ತಿದ್ದವು. ಕೆಂಚನ ಹೆಂಡತಿ ನಾಗಿ. ಇವರಿಗೆ ಮಗುವಾಗಿ ಆದೆಷ್ಟೋ ವರ್ಷಗಳಾಗಿವೆ. ಈಗ ಮತ್ತೆ ಇಷ್ಟೊಂದು ವರ್ಷದ ಮೇಲೆ ಮಕ್ಕಳಾಗುವದೇ ಒಡೆದಿರ ಮನೆಯ ಯಜಮಾನಿತಿ ಹೇಳಿದ ವಿವರ ಕಾಡಿ ಹೋಯಿತು.

ಸ್ವಲ್ ದೂರದಿಂದಲೇ ಬೀಡಾರದ ಲಾಟೀನು ದೀಪ ಮಿನುಗುವದು ಕಾಣಿಸುತ್ತಿತ್ತು. ನಿಧಾನವಾಗಿ ಹೋಗಿ ಬಾಗಿಲನ್ನು ಬಡಿದು ’ಕೆಂಚ’ ಎಂದು ಕರೆದೆವು. ಲಾಟೀನು ಎದುರು ಕುಳಿತ ಕೆಂಚ ಕರೆ ಕೇಳಿ ಗೊಂದಲಗೊಮಡ. ಆದರೂ ’ಒಡೆದಿರಾ’ ಇಷ್ಟು ಕತ್ಲೆಯಲ್ಲಿ ನೀವು ಬರೋದೆ, ಎಂದ. ಅವನ ಮಾತಿನಲ್ಲಿ ಭೂಮಿಗಿಳಿದು ಬಂದ ಭಗವಂತನನ್ನು ಕಂಡು ಭಾವವಿತ್ತು. ಕೆಸರು ಬಡಿದ ಚಪ್ಪಲಿಯನ್ನು ಕಾಲಿನಿಂದ ತೆಗೆದಿಟ್ಟು ಅವನು ಕೂಡ್ರಲು ಹಾಸಿದ ಕಂಬಳಿಯ ಮೇಲೆ ಕುಳಿತುಕೊಂಡೆವು. ಸುತ್ತ ಮಂದ ಕತ್ತಲೆ ಬೆಳಕಿಗಿಂತ ಕತ್ತಲೆಯನ್ನೇ ಕಾಣಿಸುವ ದೀಪ, ಸೆಗಣಿ ಹಾಕಿ ಸಾರಿಸಿದ ನೆಲವು ಹಸಿ ಹಸಿಯಾಗಿತ್ತು. ಸ್ವಲ್ಪ ಬದಿಯಲ್ಲೇ ಒಲೆಯಲ್ಲಿ (ಹೊಡಚಲು) ನಿಗಿನಿಗಿ ಉರಿಯುವ ಕೆಂಡದ ರಾಶಿಯ ಎದುರು ನಾಗಿ ಕುಳಿತುಕೊಂಡಿದ್ದಳು. ಲಾಟೀನಿನ ಬೆಳಕನ್ನು ಕೆಂಚ ದೊಡ್ಡದು ಮಾಡಿದ. ಆಗ ಆಕೆ ಸ್ಪಷ್ಟವಾಗಿ ಕಂಡಳು. ಎಲೆ ಅಡಿಕೆ ರಸದಿಂದ ಕೆಂಪಾದ ತುಟಿ ಹಾಕಿದ್ದ ಕುಪ್ಪಸವನ್ನೇ ಸೀಳಿ ಬಿಡುವಂತೆ ಮುಂದೆ ಬಂದ ಎದೆ. ’ಏನಾಗಿದೆ ನಾಗಿ? ಹುಶಾರಿಲ್ಲವಾ’ ಕೇಳಿದವು.

“ತುಂಬಾ ಹೊಟ್ಟೆ ನೋವು. ಸೊಂಟ ಜಿಗಿತ. ಒಡೆದಿರ ಹೆಂಡ್ತಿ ಕಷಾಯ ಉಪ್ಪಿನಕಾಯಿ, ತಿಂಡಿ ಎಲ್ಲಾ ಕೊಟ್ಟು ನೋಡುದ್ರು ಏನೋ ಕಳ್ಳಬಸ್ರಿ ಆಗಿಯೇನೇ ಅಂದ್ರು” ಎನ್ನುತ್ತಿದ್ದಂತೆ ಎದ್ದುಹೊರಗೆ ಹೋಗಿ ವಾಂತಿಮಾಡಿಕೊಂಡಳು. ನಮಗೆ ಗಾಬರಿಯಾಗಿ ಅವಳನ್ನು ಹಿಡಿದುಕೊಳ್ಳುವಂತೆ ಕೆಂಚನಿಗೆ ಸೂಚಿಸಿದೆವು. ಅವಳು ಉದರ ಬೇನೆಯಿಂದ ನರಳುತ್ತಿರುವಂತೆನಿಸಿತು. ಸ್ವಲ್ಪ ಸುಧಾರಿಸಿಕೊಂಡು ಒಳಗೆ ಬಂದು ಮತ್ತೆ ಒಲೆಯ ಬುಡದಲ್ಲಿ ಕುಳಿತುಕೊಂಡಳು. ಸಂಕಟ, ನೋವು, ಹೊಟ್ಟೆಯುರಿ ಹೆಚ್ಚಾಗಿರಬೇಕು. ಮುಖವೆಲ್ಲಾ ಬೆವರುತ್ತಿತ್ತು. ಎದೆಯಲ್ಲಿ ಚುಚ್ಚಿದವರ ಹಾಗೆ ಚಡಪಡಿಸುತ್ತಿದ್ದಳು. ತಂಪುಗಾಳಿ ಬೀಸುತ್ತಿದ್ದರೂ ಮೈಯಲ್ಲಾ ನಡುಗುತ್ತಿರುವದು ಕಾಣುತ್ತದೆ. ಉಟ್ಟ ಸೀರೆ ಸಡಿಲು ಮಾಡಿಕೊಳ್ಳುತ್ತಾಳೆ. ಅಡಿಗೆ ಮನೆಯಲ್ಲಿ ಮಡಿಕೆಯಲ್ಲಿ ತುಂಬಿಟ್ಟ ಬಿಸಿ ನೀರನ್ನು ಕೆಂಚ ತಂದು ಕೊಡುತ್ತಾನೆ. ಸ್ವಲ್ಪ ಸ್ವಲ್ಪ ನೀರನ್ನು ಬಾಯಲ್ಲಿ ಸುರುವಿಕೊಂಡು ನುಂಗುತ್ತಾಳೆ. ಸರಿಯಾಗಿ ಕುಡಿಯಲು ಆಗುವುದಿಲ್ಲ. ಹೊಟ್ಟೆಯ ಏರಿಳಿತ ಕಾಣುತ್ತದೆ. ಹೆಣ್ಣಾಗಿ ಹುಟ್ಟಲೇಬಾರದು ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾಳೆ. ನಾಗಿಗೆ ನಿಮಿಷ ನಿಮಿಷಕ್ಕೆ ವೇದನೆ ಅಧಿಕ ವಾಗುತ್ತಲೇ ಇತ್ತು. ಒಂದೆರಡು ಬಾರಿ ಕೆಂಚನನ್ನು ಕರೆದಳು. ಆತ ಅಲ್ಲಿರಲಿಲ್ಲ ನಾಗಿಯ ನೋವಿನ ಗಡಿ ಮೀರಿತು. ನರಳುವ ಸದ್ದು ನಿಧಾನವಾಗುತ್ತ ಬಂತು ಏನಾಯಿತೇನೋ ಎಂದುಕೊಂಡು ಆಕಡೆ ನೋಡಿದರೆ ನಾಗಿ ಮಗ್ಗುಲಾಗಿದ್ದಾಳೆ ಮೆಲ್ಲಗೆ ಕಣ್ಣು ಬಿಡುತ್ತಾಳೆ ಬದಿಯಲ್ಲಿ ಮಾಂಸದ ಮುದ್ದೆ!

ನಾಗಿ ಕೆಂಚನನ್ನು ಕೂಗಿ ಕೂಗಿ ಕರೆಯುತ್ತಾಳೆ. ಉತ್ತರವಿಲ್ಲ. ಜೋರಾಗಿ ಕಂಠ ಬಿರಿಯುವಂತೆ ನರಳಿ ಅರಚುತ್ತಾಳೆ. ಈಗ ಕೆಂಚ ಎದುರಿಗೆ ಬಂದು ಮೂಕನಾಗಿ ನಿಂತಿದ್ದ. ನಮ್ಮ ಹೃದಯ ಅವ್ಯಕ್ತ ಭೀತಿಯಿಂದ ಕಂಪಿಸುತ್ತಿತ್ತು.

ಮುಕರಿ ಮಹಿಳೆಯರಲ್ಲಿ ಲೈಂಗಿಕ ಸ್ವಾತಂತ್ರ್‌ಯ ಅನೈತಿಕವಲ್ಲ. ಮದುವೆಯಾಗಿದ್ದೂ ಮತ್ತೊಬ್ಬನೊಂದಿಗೆ ಅನುರಕ್ತಳಾಗಬಹುದು. ನೈಸರ್ಗಿಕವಾದುದೆಲ್ಲ ನೈತಿಕವೆಂಬ ನಿಷ್ಠೆ.

ಮುಕ್ರಿಯ ಜನಗಳ ಬಡತನ, ಬವಣೆ ಅಜ್ಞಾನಕ್ಕೆ ಅನುಕಂಪ ತೋರಿಸುವ ಒಡೆಯರೇ ಹೆಚ್ಚು. ಅವರ ಮುಗ್ಧತೆಗೆ ಮೋಸ ಮಾಡುವದು ಮಹಾಪಾಪವೆಂದೇ ಭಾವಿಸುತ್ತಾರೆ. ಅವರ ಕೌಟುಂಬಿಕ ಕಷ್ಟಕಾರ್ಪಣ್ಯ, ದಾರದ್ರ‍್ಯ ದೈನ್ಯತೆಯಲ್ಲೂ ಭಾವ ಸಂಪನ್ನತೆ ಉಳಿಸಿಕೊಂಡು ಬಂದಿರುವರು. ಅವರ ಹಾಡು ಹಸೆ ಕತೆ ಕುಣಿತ ಕ್ರಿಯಾಶೀಲವಾಗಿರುವದು ಹಾಗೆ.

ಮುಕ್ರಿಯರು ಬದುಕುವದಕ್ಕಾಗಿ ದುಡಿಯುತ್ತಾರೆ. ದುಡಿಯುವದಕ್ಕಾಗಿ ಬದುಕುವವರಲ್ಲ. ಮುಕರಿಯವರಿಗೆ ಕೆಲಸ ಮಾಡುವದು ಮುಖ್ಯವಲ್ಲ. ಇರುವದು ಮುಖ್ಯ. ಇರುವದು ಮೊದಲು, ಮಾಡುವದು ಎರಡನೆಯದು. ಇವರ ಜೀವನದಲ್ಲಿ ಸಡಗರ ಸಂತೋಷ ಮೊದಲು. ದುಡಿಮೆ ನಂತರದ್ದು. ಜೀವನೋತ್ಸವಕ್ಕೆ ಪೂರ್ವಸಿದ್ಧತೆ ಅವರ ದುಡಿಮೆ.

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ ದುಡಿಮೆಗೆ ಗಂಟು ಬಿದ್ದವರು ಪ್ರತಿಯೊಮದನ್ನು ದುಡಿಮೆಯನ್ನಾಗಿ ಪರಿವರ್ತಿ ಬದುಕನ್ನು ಬೆಂಕಿಯನ್ನಾಗಿ ಬಿಡುತ್ತಾರೆ. ಬದುಕಲ್ಲಿರುವ ಎಲ್ಲಾ ಭಯವನ್ನು ದೆವ್ವದಂತೆ ದುಡಿವ ಈ ದುಡಿಮೆಗಾರರೇ ಸೃಷ್ಟಿಸಿದ್ದು, ಅವರ ಘೋಷಣೆ ’ದುಡಿ ಇಲ್ಲವೆ ಮಡಿ’. ದುಡಿಮೆಯೊಂದನ್ನು ಬಿಟ್ಟರೆ ಈ ಜೀವ ಚೈತನ್ಯಕ್ಕೆ ಬೇರೆ ಅರ್ಥವೇ ಇಲ್ಲವೇ. ದುಡಿಯುವದು ಯಾತಕ್ಕಾಗಿ? ಬದುಕುವದಕ್ಕಾಗಿ. ಬದುಕು ಬಹುಮುಖ್ಯವಾದದ್ದು ಹಾಗೂ ಬಹಳ ದೊಡ್ಡದು. ಬದುಕೆಂದರೆ ನಾವು ಮಾಡಬೇಕಾದ ಕರ್ತವ್ಯ ಕರ್ಮಗಳ ಒಂದು ವೇಳಾ ಪಟ್ಟಿಯಂತಾದರೆ ಜೀವನ ಸಡಗರಕ್ಕೆ ಜಾಗವೆಲ್ಲಿ? ಹಬ್ಬ ಉತ್ಸವ, ಜಾತ್ರ, ಸಡಗರ ಸಂಭ್ರಮಗಳು ಇಲ್ಲವಾದರೆ ದುಡಿದೇನು ಧನ್ಯತೆ? ಬದುಕಲಿಕ್ಕೆ ರೊಟ್ಟಿಬೇಕು. ಆದರೆ ಬದುಕೇ ರೊಟ್ಟಿಯಲ್ಲ. ಕೆಲವು ಜನ ತಮ್ಮ ಜೀವನ ಪರ್ಯಂತ ರೊಟ್ಟಿಗಳ ರಾಶಿ ಹಾಕುತ್ತಾ ಹೋಗುತ್ತಾರೆಯೇ ವಿನಾ ಅದನ್ನು ತಿಂದು ಸವಿಯುವದನ್ನೇ ಮರೆತು ಬಿಡುತ್ತಾರೆ. ಹಲ್ಲಿಲ್ಲದಾಗ ಕಡಲೆಯಿದ್ದರೇನು? ಬಂತು ಶಿವಾ ಎಂಬುದು ಮುಕರಿಯವರ ಮಾರ್ಮಿಕ ಮಾತು. ಕೆಲಸಗಳು ಇದ್ದೇ ಇರುತ್ತವೆ. ಕೆಲಸವಿದೆಯೆಂದು ಮಂಜುಗುಣಿ ತೇರಿಗೆ ಹೋಗದಿದ್ದಾಗುತ್ತದೆಯೇ ನಮಗೆ ಬಿಡುವಿಲ್ಲ. ಎಂದು ಮಂಜುಗುಣಿ ತೇರು ಮತ್ತೆ ಮಾಡಲಾಗುತ್ತದೆಯೇ, ಶಿರಸಿ ಮಾರೆಮ್ಮನ ಜಾತ್ರೆಗೆ ಹೋಗಿ ಪಾತ್ರೆ ಪರಡಿ, ಟ್ರಂಕು ತರುತ್ತಿದ್ದೆವು. ಈಗಲು ಹಲಕೆಲವು ವಸ್ತುಗಳನ್ನು ಜಾತ್ರೆಯಲ್ಲಿ ತೆಗೆದುಕೊಂಡು ಬರುವದೇ ಉಳಿದ ಅಂಗಡಿಯಲ್ಲಿ ಸಿಗಬಹುದು. ಆದರೆ ಜಾತ್ರೆಯಲ್ಲಿ ಓಡಾಡಿ ತೆಗೆದುಕೊಂಡು ಬಂದರೇ ಚೆಂದ. ಮುಕರಿಯವರದು ಇಂದು ಇಂದಿಗೆ ನಾಳೆ ನಾಳೆಗೆ ಎಂಬ ಧೋರಣೆ.

ಮುಕರಿಯವರು ಅಲ್ಪ ತೃಪ್ತ ಜನ. ತಮ್ಮದೇ ಆದ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಹಿಂದುಳಿದವರು, ಸ್ಥಳೀಯರೆಂದು ಗುರುತಿಸಲ್ಪಡುವ ಇವರು ತಾವು ಬದುಕುತ್ತಿರುವ ಸ್ಥಳದ ಮೂಲನಿವಾಸಿಗಳಾಗಿದ್ದು ತಮ್ಮ ಬದುಕನ್ನು ಸುತ್ತಲಿನ ಪರಿಸರದೊಟ್ಟಿಗೆ ತಾದಾತ್ಮ್ಯಗೊಳಿಸಿ ಕೊಂಡಿದ್ದಾರೆ. ಆದರೆ ಆಧುನಿಕ ಆರ್ಥಿಕ ವಿಕಾಸದ ಚಕ್ರ ಸುತ್ತಿದಂತೆಲ್ಲ ಪ್ರಾಕೃತಿಕ ಸಂಪನ್ಮೂಲಗಳ ಲೂಟಿ ಹೆಚ್ಚುತ್ತಾ ಹೋಗಿದೆ. ಮುಕರಿ ಸಂಸ್ಕೃತಿ ಛಿದ್ರವಾಗುತ್ತಿದ.ಎ ಹಿಂದ ಎಚಿನ್ನ ಮತ್ತು ಖಾದ್ಯ ವಸ್ತುಗಳಿಗಾಗಿ ಅನಂತರ ಸಕ್ಕರೆ ಮತ್ತು ತುಪ್ಪಳದ ವ್ಯಾಪಾರದಿಂದ ಆಮೇಲೆ ಕಾಫಿ, ಮರಮುಟ್ಟು ಪೆಟ್ರೋಲಿಯಂ ಗಳಿಗಾಗಿ ಪರಿಸರದ ಮೇಲಿನ ದಾಳಿಯಿಂದಾಗಿ ಮೂಲ ನಿವಾಸಿಗಳ ಮೂಲೋಚ್ಛಟನೆಯಾದಂತೆ ಇಲ್ಲಿಯೂ ಕೈಗಾ ಅಣುಸ್ಥಾವರ, ನೌಕಾನೆಲೆ, ರೇಲ್ವೇ, ರಾಷ್ಟ್ರೀಯ ಹೆದ್ದಾರಿ ಈಗ ತದಡಿ ಉಷ್ಣಸ್ಥಾವರ ಒಂದಲ್ಲ ಒಂದು ಯೋಜನೆ ಮೂಲನಿವಾಸಿಗಳನ್ನು ಮೊದಲು ಅತಂತ್ರಗೊಳಿಸುತ್ತದೆ. ಇದರಿಂದ ತಮ್ಮಷ್ಟಕ್ಕೆ ತಾವು ನೈಸರ್ಗಿಕ ರೀತಿ ನೀತಿಯನ್ನು ಕಾಯ್ದುಕೊಂಡು ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುತ್ತಾ ತಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಬಾಳಿ ಬದುಕುತ್ತಿದ್ದ ಈ ನಿವಾಸಿಗಳು ನಿರ್ದಯರಾಗುತ್ತಿದ್ದಾರೆ. ಸಾಂಸ್ಕೃತಿಕವಾಗಿ ವಿಭಿನ್ನ ಹಂತಗಳ ಮೂಲಕ ಬೆಳೆದು ಬಂದು ಜನ ಸಮುದಾಯದಲ್ಲಿ ಈ ನಿವಾಸಿಗಳು ಸಂಸ್ಕೃತಿಯ ತಳಹಂತದಲ್ಲಿದ್ದಾರೆ. ಸರ್ಕಾರ ತನ್ನ ಕಾರ್ಯಕ್ರಮಗಳ ಮೂಲಕ ಇಂತಹ ಜನ ಸಮುದಾಯವನ್ನು ಉಚ್ಚ ಸಂಸ್ಕೃತಿಯ ಮೂಲಕ್ಕೆ ಸೇರಿಸಬೇಕೆಂದು ಪ್ರಯತ್ನಿಸುತ್ತದೆ. ಇದು ಜನಾಂಗೀಯ ವೈವಿಧ್ಯವನ್ನು ಮೊದಲು ನಿರಾಕರಿಸಿ, ನಂತರ ಕತ್ತು ಹಿಸುಕುವ ಕ್ರಮವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವ ಶಕ್ತಿ-ಯುಕ್ತಿ ಮುಕ್ರಿಯವರಲ್ಲಿ ಕಾಣೆಯಾಗಿದೆ.