ನಲವತ್ತು ವರ್ಷಗಳ ಕಾಲ ನರ್ಮದಾ ನದೀ
ತೀರದರಣ್ಯಗಳಲ್ಲಿ ಘನ-ಘೋರ ತಪ-
ವೆಸಗಿ, ಅದ್ವೈತ ಸಿದ್ಧಿಯ ಪಡೆದ ಯೋಗಿ
ತೋತಾಪುರಿ, ಒಂಟಿ ಸಲಗದ ಹಾಗೆ ದೇಶಾ-
ದ್ಯಂತ ಸಂಚರಿಸುತ್ತ ಬಂದು ತಲುಪಿದನು
ದಕ್ಷಿಣೇಶ್ವರದ ಭಾಗೀರಥಿಯ ತೀರಕ್ಕೆ.
ಶ್ರೀ ರಾಮಕೃಷ್ಣರಿಗೆ ವೇದಾಂತ ದೀಕ್ಷೆಯ
ನೀಡಿದ ನಂತರದ ಒಂದು ದಿನ, ಪಂಚವಟೀ
ವಟವೃಕ್ಷದಡಿ ಧುನಿಯ ಹೊತ್ತಿಸಿಕೊಂಡು
ಧ್ಯಾನಕ್ಕೆ ಕುಳಿತನೇಕಾಂಗಿ. ನಟ್ಟಿರುಳು, ಘನ
ಮೌನ, ಪ್ರಜ್ವಲಿಸುವಗ್ನಿ, ಪಕ್ಕದಲ್ಲೇ ಸದ್ದಿ-
ರದೆ ಪ್ರವಹಿಸುವ ಗಂಗೆ. ಧ್ಯಾನ ಸ್ಥಿತಿಯ ಈ
ಮೌನಕ್ಕೆ ಕಡೆಗೋಲನಿಟ್ಟಂತೆ, ಕರ್ಣಗೋ-
ಚರವಾಯ್ತು ತೋತಾಪುರಿಗೆ ಆ ಹೆಮ್ಮರದ
ಶಾಖೋಪಶಾಖೆಗಳು ಝಗ್ಗನಲುಗಿದ ಸದ್ದು !
ಬೆರಗಾಗಿ ನೋಡುತಿದ್ದಂತೆ ಆ ಸದ್ದಿನೊಡ-
ನಿಳಿತಂದುದೊಂದು ಬೃಹದಾಕೃತಿಯ ಛಾ-
ಯಾರೂಪ. ‘ತುಂಬ ಛಳಿಯಲ್ಲವೆ? ಬಾ, ಬೆಂಕಿ
ಕಾಯಿಸಿಕೊ’ ಎಂದು ಸ್ವಾಗತಿಸುತ್ತ ನಸುನಕ್ಕ
ತೋತಾಪುರಿಯ ಪ್ರಶ್ನಿಸಿತು ಭೈರವ ರೂಪ :
‘ನೀನಾರು? ಇಲ್ಲೇನು ಮಾಡುತ್ತಿರುವೆ?’ ಧೃತಿ-
ಗೆಡದೆ ಮಾರ್ನುಡಿದನದ್ವೈತ ಸಿದ್ಧಿಯ ಯೋಗಿ:
‘ನೀನು ಏನೊ, ನಾನೂ ಅದೇ. ಬಾ ಇಬ್ಬರೂ
ಕೂತು ಧ್ಯಾನ ಮಾಡೋಣ. ಪ್ರಶಸ್ತವಾಗಿದೆ ಸಮಯ’