ಧೂಳಾಟವನು ಮುಗಿಸಿ ಮನೆಗೆ ಮರಳಿರೆ ಸಂಜೆ,
ಮಂದ ಸುಂದರ ಶಾಂತ ಪ್ರಭೆಯೊಳುರಿದಿರೆ ಹಣತೆ,
ಕೇಳುತಿದ್ದಿತು ಕೇಕೆ ಹಾಕುತ ಬರುವ ತಮ್ಮ
ತಂಗಿಯರ ಗೆಲುವಿನ ಕೂಗು, ಎಳೆಯ ಮುಖ, ಎಳೆಯ
ಮನ. ‘ಒಂದು ಕತೆ ಹೇಳಣ್ಣ’- ಎಂದು ಹಾಸಿಗೆಯ
ಸುತ್ತಲೂ ಕುಳಿತು, ಬೆರಗುಗಣ್ಣನು ತೆರೆದು ನಾ-
ನೊರೆವ ಅಪ್ಸರೆಯ ಕತೆಯಲ್ಲಿ ಗಂಧರ್ವ ಲೋ-
ಕಕೆ ತೇಲಿ ನಲಿಯುತಿದ್ದರು ಅಂದು. ಇಂದು ಅದು

ಒಂದು ಮುಗಿದ ಕತೆ ; ಈಗ ಬರಿ ನೆನಪು, ಇಂದೋ
ನಿಡುಸುಯ್ದು ಮುಳುಗುತಿರೆ ಸೋತು ಸೊರಗಿದ ಸಂಜೆ
ಕಣ್ಣು ಕುಕ್ಕುವ ತೆರದಿ ಜ್ವಲಿಸೆ ವಿದ್ಯುದ್ದೀಪ,
ಆ ಅವರೆ ಬರುವರು ಮನೆಗೆ ಸೋತು ಹಣ್ಣಾಗಿ
ಅಂಗಡಿಯಿಂದ, ಫ್ಯಾಕ್ಟರಿಯಿಂದ ಮತ್ತೆ ಆ-
ಫೀಸಿನಿಂದ. ಇಂದವರು ಹತ್ತಿರಿದ್ದರು ದೂರ !
ಒಬ್ಬೊಬ್ಬನದು ಒಂದೊಂದು ಕೋಣೆ, ಅಂದಿನೊಲು
ಇಂದವರ ಯಾವ ಕತೆಯೂ ಹಿಡಿದು ಕೂಡಿಸದು !
ಅಂದಿಗೂ ಇಂದಿಗೂ ಸಾಕ್ಷಿಯೊಲು ನಾನಿರುವೆ,
ಅಚ್ಚರಿಯ ನಿರುಕಿಸುತ ಬರಿದೆ ನಿಟ್ಟುಸಿರಿಡುವೆ.