ಓ, ಇವಳು !…
ತಾನೂ ಸುಂದರಿ ಎಂಬುದನರಿಯದ
ಮುಗ್ಧತೆಯೊಳು ಹುದುಗಿಹಳು !

ಈ ಹಳ್ಳಿಯ ಮುಗುದೆ,
ತುಂಬುಸಂತೆಯೊಳು ಪೇರಿಲಹಣ್ಣನು
ತಿನ್ನುವ ತವಕದೊಳು,
ಸುತ್ತಣ ಜನ ತನ್ನನೆ ನೋಡುವ
ಪರಿಗೇ ಬೆರಗಾಗಿಹಳು !

ಓ ಹಳ್ಳಿಯ ನಗೆಮಲ್ಲಿಗೆ
ದಿಟಕೂ ನೀ ಬಲು ಚೆಲುವೆ ;
ಮನವನು ಸಂಯಮಗೊಳಿಸುವ ಸಾತ್ವಿಕ ರೂಪಾನ್ವಿತೆ,
ಇದೊ, ವಂದನೆ ನಿನಗೆ.

ಈ ಮುಗ್ಧತೆ ಹೀಗೇ ಕಾಪಾಡಲಿ ನಿನ್ನನು
ಕಡೆತನಕ.
ತೆರೆಯದಿರಲಿ ನಿನ್ನೆದೆಯೊಳಗೆಂದೆಂದೂ
ನೀ ಸುಂದರಿ ಎನ್ನುವ ಬಿಂಕ.