ಈ ಮನೆಯ ನೆಲದಲ್ಲಿ ಪುಟಿದು ಚಿಮ್ಮುತಲಿರುವ
ದೇವಲೋಕದ ದಿವ್ಯ ತೊರೆಯ ಮರಿಯೇ
ನಿನ್ನ ಸಾನ್ನಿಧ್ಯದೀ ಮುಗ್ಧ ತೀರ್ಥದಿ ನಾನು
ದಿನದ ಧೂಳಿನ ಬಾಳ ತೊಳೆಯುತಿರುವೆ !
ಮನದ ಅಂಗಳದಲ್ಲಿ ಬೆಳೆದ ಬಯಕೆಯ ಬಳ್ಳಿ-
ಯರಳಿಸಿದ ಮಲ್ಲಿಗೆಯ ಹೂವು ನೀನು.
ನಿನ್ನ ಮೃದುಹಾಸ ಮುಗ್ಧ ಕೋಮಲತೆ ಸೋಂಕಿದರೆ
ಕಗ್ಗಲ್ಲಿನೆದೆಯಲ್ಲು ಹೂವರಳದೇನು ?

ಬೇಸರದ ನೀರಸದ ಮರಳುಕಾಡೊಳು ನೀನು
ನಗುವ ನಂದನದಂತೆ ಮೂಡಿಬಂದೆ
ನೀನೀವ ಸಂತಸಕೆ ನಾವೇನು ಕೊಟ್ಟೇವೊ,
ಸಾಲಗಾರರೊ ನಾವು ನಿನ್ನ ಮುಂದೆ !

ಜನುಮಗಳ ಹಾದಿಯಲಿ ಉರುಳುವೀ ಸಂಸಾರ
ರಥಕೆ ಸಾರಥಿಯಾಗಿ ನಡೆಸುತಿರುವೆ
ಪ್ರೇಮಯಜ್ಞದಿ ಮೂಡಿ ಬಂದಿರುವ ಹೊಂಬೆಳಕೆ
ಬಾಳ್ಗೊಂದು ಬೆಳಕಾಗಿ ಹೊಳೆಯುತಿರುವೆ !