ಇಡೀ ದಿನ ಎಲ್ಲ ಕಾರ್ಯಕ್ರಮಗಳೂ ತಲೆಕೆಳಗು. ನನ್ನ ದ್ವಿಭಾಷಿ ಬರುತ್ತೇನೆಂದು ಹೇಳಿದ್ದು ಹನ್ನೊಂದು ಗಂಟೆಗೆ; ಆತ ಬಂದದ್ದು ಹನ್ನೊಂದೂ ಮುಕ್ಕಾಲಿಗೆ. ಕಾರು ಬರುತ್ತದೆ ಎಂದು ಕಾದೆವು; ಅದೂ ಬರಲಿಲ್ಲ. ಲೆನಿನ್ ತನ್ನ ಕಡೆಯ ದಿನಗಳನ್ನು ಕಳೆದ ‘ಗೋರ್ಕಿ’ ಎಂಬ ಊರಿಗೆ ಹೋಗಿ ಬರುವ ಕಾರ್ಯಕ್ರಮ ಹಾಗೆಯೇ ಉಳಿಯಿತು. ಕಾರಿಲ್ಲದಿದ್ದರೆ ಹೋಗಲಿ, ಎಲ್ಲಾದರೂ ಅಡ್ಡಾಡಿ ಬರೋಣವೆಂದರೆ ಜಿನುಗು ಮಳೆ; ಕೊರೆಯುವ ಗಾಳಿ. ಆದರೂ ಬಸ್ಸು ಹಿಡಿದು ಹೊರಟದ್ದಾಯಿತು. ನನ್ನ ಕ್ಯಾಮರಾಕ್ಕೆ ಫಿಲ್ಮ್ ಹಾಕಿಸುವ ಸಲುವಾಗಿ ಅಂಗಡಿಯೊಂದಕ್ಕೆ ಹೋದರೆ, ಅದೇ ಅರ್ಧ ಗಂಟೆ ತೆಗೆದುಕೊಂಡಿತು. ಕಾಲಿನಿನ್‌ಪ್ರಾಸ್ಟೆಕ್ಟ್‌ನಲ್ಲಿರುವ  ಭಾರೀ ಪುಸ್ತಕದ ಅಂಗಡಿಗೆ ಹೋಗಿ ಅಲ್ಲಿ ಒಂದು ಗಂಟೆ ಸುತ್ತಿದೆವು. ಪುಷ್ಕಿನ್‌ನ ಕವನ ಸಂಗ್ರಹ-ಇಂಗ್ಲಿಷ್‌ಗೆ ಅನುವಾದಿತವಾದದ್ದು-ದೊರಕೀತೆಂದು ಆಶಿಸಿದೆ: ಅದಿರಲಿಲ್ಲ. ಅದರ ಬದಲು ಮೈಕೊವಸ್ಕಿಯ ಕವಿತೆಗಳ ಅನುವಾದ ದೊರಕಿತು. ಹಸಿವಾಗಿತ್ತು. ಒಂದು ರೆಸ್ಟೋರಾಂಟನ್ನು ಹುಡುಕಿಕೊಂಡು ಹೊರಟೆವು, ಸಿಕ್ಕಿತು. ಆದರೆ ಬಾಗಿಲಲ್ಲೇ, ಒಳಗೆ ಸ್ಥಳವಿಲ್ಲವೆಂದು ನಮ್ಮನ್ನು ತಡೆದು ನಿಲ್ಲಿಸಲಾಯಿತು. ಕಡೆಗೆ ಮೆಟ್ರೋಪೋಲ್ ಹೋಟೆಲೇ ಗತಿ ಎಂದು ದಾರಿ ತುಳಿದೆವು. ನಮ್ಮ ಊಟ ಮುಗಿಯುವ ವೇಳೆಗೆ ನಾಲ್ಕು ಗಂಟೆ. ಇಡೀ ದಿನ ಬರೀ ಅಲೆದಾಟದ ಬೇಸರ. ‘ಲಿಟರೇಚರ್ ಮ್ಯೂಸಿಯಂ’ ಅನ್ನಾದರೂ ನೋಡೋಣ ಎಂದು ಹುಡುಕಿಕೊಂಡು ಹೋದರೆ, ಅದನ್ನು ರಿಪೇರಿಗೆಂದೇ ಮುಚ್ಚಲಾಗಿತ್ತು.

ರಾತ್ರಿ ಒಂಬತ್ತು ಗಂಟೆಗೆ ಪ್ರೊ || ಆಕ್ಸಿನೋವ್ ಫೋನ್ ಮಾಡಿ, ಮರುದಿನ ರಾತ್ರಿ ತಮ್ಮ  ಮನೆಗೆ ಊಟಕ್ಕೆ  ಬರಬೇಕೆಂದು ಆಹ್ವಾನಿಸಿದರು. ಭಾನುವಾರ ಸಂಜೆ ತಾವೇ ಹೋಟೆಲಿಗೆ, ಏಳೂವರೆಗೆ ಬಂದು ಕರೆದೊಯ್ಯುವುದಾಗಿ ಹೇಳಿದರು.