ಬೆಳಿಗ್ಗೆ ಎದ್ದೊಡನೆಯೆ ಒಂಬತ್ತು ಗಂಟೆಯ ವೇಳೆಗೆ ದಿಲ್ಲಿಯ ಚಾಣಕ್ಯ ಪುರಿಯಲ್ಲಿರುವ ರಷ್ಯನ್ ರಾಯಭಾರ ಕಚೇರಿಗೆ ನಾನೂ ನನ್ನ ಮಿತ್ರ ಡಾ. ಸುಬ್ಬರಾಯಪ್ಪನವರೂ  ಹೋದೆವು. ವೀಸಾ ವಿಭಾಗದ ಕೊಠಡಿಯ ದುಂಡು  ಮೇಜಿನ ಸುತ್ತ ನಾಲ್ಕಾರು ವೀಸಾರ್ಥಿಗಳು ಕೂತಿದ್ದರು. ವೀಸಾ ಕೊಡುವ ಕೊಠಡಿಯ ಬಾಗಿಲು ಹಾಕಿತ್ತು. ಬಹುಶಃ ಹತ್ತು ಗಂಟೆಗೆ ಬಾಗಿಲು ತೆರೆದೀತು, ನಾವು ಬಹುಬೇಗ ಬಂದಿದ್ದೇವೇನೋ ಅಂದುಕೊಳ್ಳುವ ವೇಳೆಗೆ ಒಂದು ಕಿಟಕಿಯ ಹಲಗೆಬಾಗಿಲು ಸರಿಯಿತು. ಕೂತವರರಲ್ಲಿ ಒಬ್ಬರು ಎದ್ದು ಹೋಗಿ ಸಿದ್ಧವಾದ ತಮ್ಮ ವೀಸಾ ತೆಗೆದುಕೊಂಡರು. ಇನ್ನೇನು ನಾವು ಕಿಟಕಿಯ ಬಳಿ ಹೋಗುವುದರೊಳಗಾಗಿ ಬಾಗಿಲು ಮುಚ್ಚಿಕೊಂಡಿತು. ನಮ್ಮ ಗಾಬರಿಯನ್ನು ಕಂಡ ಒಬ್ಬರು, ‘ನಿಮ್ಮನ್ನು ಹೇಗೂ ನೋಡಿದ್ದಾರೆ, ಕೊಚ ಕಾಯಿರಿ’ ಎಂದರು. ಅವರೆಂದಂತೆ ಕೊಂಚ ಹೊತ್ತಿನಲ್ಲಿ ಜಾರು ಕಿಟಕಿಯ ಮರದ ತೆರೆ ಸರಿಯಿತು. ಬೆರಳ  ಸನ್ನೆಗೆ ಹೋಗಿ ತೆರೆದ ಗೂಡಿನ ಬದಿಗೆ ನಿಂತು  ನನ್ನ ಪಾಸ್‌ಪೋರ್ಟ್‌ನ್ನು ಒಪ್ಪಿಸಿದೆ. ‘ಕೊಂಚ ಕಾಯಿರಿ’ ಎಂಬ ಸೂಚನೆಯ ಜತೆಗೆ ಮತ್ತೆ ಕಿಟಿಕಿಯ ಮರದ ಹಲಗೆ ಸರಿದು ಮುಚ್ಚಿಕೊಂಡಿತು. ನಾವು ಹದಿನೈದು ನಿಮಿಷ ಕಾಯುವ ಹೊತ್ತಿಗೆ ಮತ್ತೆ ಕಿಟಕಿ ಕದ ತೆರೆದು ನನ್ನ ವೀಸಾ ಸಿದ್ಧವಾಗಿ ಬಂದಿತು. ಅಂತೂ ಯಾವ ಆತಂಕವೂ ಇಲ್ಲದೆ ವೀಸಾ ಪಡೆದದ್ದಾಯಿತು. ಈ ವೇಳೆಗೆ, ನನ್ನಂತೆಯೇ ಭಾರತ-ಸೋವಿಯೆತ್ ಯೋಜನೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ನನ್ನ ಜತೆಗೇ ಮೂರನೇ ತಾರೀಖು ಪ್ರಯಾಣ ಮಾಡಲಿದ್ದ ಡಾ. ಮ್ಯಾಥ್ಯೂ – ಅಣ್ಣಾಮಲೈ ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗದ ಮುಖ್ಯಸ್ಥರು – ಅವರ ಭೆಟ್ಟಿಯಾಯಿತು. ಅವರು ವೀಸಾ ಪಡೆದ ನಂತರ, ನಾಡಿದ್ದು ಬೆಳಿಗ್ಗೆ ದೆಹಲಿ ನಿಲ್ದಾಣದಲ್ಲಿ ಭೆಟ್ಟಿಯಾಗೋಣ ಎಂದು ಕೈ ಕುಲುಕಿ ಬೀಳ್ಕೊಟ್ಟುದಾಯಿತು.

ಮನುಷ್ಯನ ಬುದ್ಧಿ ಕೆಲವು ವೇಳೆ ತುಂಬ ಚುರುಕಾಗುತ್ತದೆ. ಅದರಲ್ಲೂ ಸ್ವಂತದ ಕೆಲಸ ಆಗಬೇಕೆಂದಾಗ ಮತ್ತೂ ಚುರುಕಾಗುತ್ತದೆ. ನಾನು ಸರ್ಕಾರದ ಈ ಯೋಜನೆಯಲ್ಲಿ ರಷ್ಯಾಕ್ಕೆ ಹೋಗಿ ಬರುವ ಕಾರ್ಯಕ್ರಮ ಖಚಿತವಾದಾಗ ಅನಿಸಿತು, ಹೇಗೂ ನಾನು ಬೆಂಗಳೂರಿನಿಂದ ಮಾಸ್ಕೋಗೆ ಮಾಸ್ಕೋದಿಂದ ಬೆಂಗಳೂರಿಗೆ ಹೋಗಿಬರುವ ವೆಚ್ಚವನ್ನು ಸರ್ಕಾರ ವಹಿಸುತ್ತದೆ. ಈ ಸಂದರ್ಭದಿಂದ ಹಿಂದಿರುಗಿ ಬರುವ ದಾರಿಯಲ್ಲಿ ಯಾಕೆ ಇಟಲಿ, ರೋಂ, ಕೈರೋಗಳನ್ನು ನೋಡಿಕೊಂಡು ಬರಬಾರದು ಅನ್ನಿಸಿತು. ಈ ಹೆಚ್ಚಿನ ಪ್ರಯಾಣಕ್ಕೆ ಎಷ್ಟು ಹೆಚ್ಚು ಪ್ರಯಾಣದ ಖರ್ಚು ತಗಲಬಹುದೆಂದು  ವಿಚಾರಿಸಿದಾಗ ಕೇವಲ ಆರುನೂರು ರೂಪಾಯಿಗಳೆಂದು ತಿಳಿಯಿತು. ಕೂಡಲೇ ನಾನು ಯು. ಜಿ. ಸಿ. ಗೆ ಬರೆದೆ: “ನನ್ನ ಮರುಪ್ರಯಾಣದ ಟಿಕೆಟ್ಟನ್ನು  ಇಟಲಿ, ರೋಂ, ಕೈರೋ ಮೂಲಕ ದಯಮಾಡಿ ಮಾಡಿಕೊಡಿ. ಅದರ ವೆಚ್ಚವನ್ನು ನಾನು ವಿಮಾನ ಸಂಸ್ಥೆಗೆ ಭಾರತೀಯ ರೂಪಾಯಿಗಳಲ್ಲಿ ಕೊಡುತ್ತೇನೆ” ಎಂದು. ಅದಕ್ಕೆ ಬಂದ ಉತ್ತರ, “ಇದು ಸಾಧ್ಯವಿಲ್ಲ; ಸರ್ಕಾರದ ಖರ್ಚಿನೊಂದಿಗೆ, ನೀವು ಹೆಚ್ಚಿನ ಪ್ರಯಾಣಕ್ಕೆ ಕೊಡಬಹುದಾದ ಹಣವನ್ನಾಗಲಿ, ಹಾಗೂ ಪ್ರಯಾಣವನ್ನಾಗಲಿ, ಬೆರಸಬಾರದು. ಆದರೂ ವಿದ್ಯಾ ಸಚಿವ ಶಾಖೆಯ ಅನುಮತಿ ಅಗತ್ಯ. ಹಾಗೆಯೆ ನಿಮ್ಮ ದಾರಿಯ ವೆಚ್ಚಕ್ಕೆ ಬೇಕಾಗುವ ನೂರು – ನೂರಾ ಐವತ್ತು ಡಾಲರುಗಳ ವಿದೇಶಿ ವಿನಿಮಯಕ್ಕೆ ಹಣಕಾಸಿನ ಶಾಖೆಯವರು ಒಪ್ಪಬೇಕು. ಈ ಬಗ್ಗೆ ನೀವೇ ಬರೆಯಿರಿ.”

ಬರೆದದ್ದಾಯಿತು. ಎಷ್ಟೋ ದಿನ ಕಳೆದು ನಾನು ಬೆಂಗಳೂರಿನಿಂದ ಹೊರಡುವುದು ಮೂರು ದಿನ ಇದೆ ಅನ್ನುವಾಗ ವಿದ್ಯಾಸಚಿವ ಶಾಖೆಯವರಿಂದ ಉತ್ತರ ಬಂತು : “ನೀವು ನಿಮ್ಮ ಸ್ವಂತ ವೆಚ್ಚದಲ್ಲಿ ಇಟಲಿ, ರೋಂ, ಕೈರೋ ಮಾರ್ಗವಾಗಿ ಬರುವ ಪ್ರಯಾಣಕ್ಕೆ ನಮ್ಮ ಆಕ್ಷೇಪಣೆಯೇನಿಲ್ಲ. ವಿದೇಶೀ ವಿನಿಮಯಕ್ಕೆ ನೀವು ಅರ್ಥಸಚಿವ ಶಾಖೆಯಲ್ಲಿ ಪ್ರಯತ್ನಿಸಿ.”

ವೀಸಾ ಪಡೆದ ನಂತರ ದೆಹಲಿಯ ಚುರುಗುಟ್ಟಿಸುವ ಬಿಸಿಲ ಕೆಳಗೆ, ಅರ್ಥ ಸಚಿವ ಶಾಖೆಯಿಂದ ವಿದೇಶೀ ವಿನಿಮಯ ಗಳಿಸುವ ಉದ್ದೇಶದಿಂದ, ಕಛೇರಿಯಿಂದ ಕಚೇರಿಗೆ ಅಲೆದದ್ದಾಯಿತು. ಮೆಟ್ಟಿಲುಗಳನ್ನೇರಿ, ಮೆಟ್ಟಲುಗಳನ್ನಿಳಿದು ಅರ್ಥ ಸಚಿವ ಶಾಖೆಗೆ ಸಂಬಂಧಿಸಿದ ಹಲವು ವಿಭಾಗಗಳನ್ನು ಹೊಕ್ಕದ್ದಾಯಿತು. ಒಬ್ಬ  ಅಧಿಕಾರಿಯಂತೂ “ನೀವು ಇಟಲಿ, ರೋಂಗಳಿಗೆ ಹೋಗುವ ಅಗತ್ಯವೇನಿದೆ? ನೀವು ಹೋಗುವುದು ಅಗತ್ಯ ಎಂಬ ಬಗ್ಗೆ ಸಮರ್ಥನಾ ಪತ್ರ ಎಲ್ಲಿದೆ ?” – ಎಂದ. ಪ್ರಶ್ನೆಗೆ ಉತ್ತರಕೊಡುವುದಾದರೂ ಹೇಗೆ ? ಇನ್ನು ಕೆಲವರಿಗೆ ನಾನು ವಿದೇಶಕ್ಕೆ ಹೋಗಿ ಏನೋ ದೌಲತ್ತು ಮಾಡಬಹುದೆಂಬಂತೆ ತೋರಿತು. ಕಡೆಗೆ ಇದಕ್ಕೆ ಸಂಬಂಧಿಸಿದ ಮುಖ್ಯ ಅಧಿಕಾರಿಯನ್ನು ಕಂಡು ಮಾತನಾಡಿದಾಗ ಕಬ್ಬಿಣದ ಗೋಡೆಗೆ ತಲೆ ಚಚ್ಚಿಕೊಂಡ ಅನುಭವವಾಯಿತು. ಸರ್ಕಾರ ಎಂಬುದು ಒಂದು ದೊಡ್ಡ ಯಂತ್ರಾಗಾರ; ಅಧಿಕಾರಿಗಳು ಮುಖವಾಡಗಳನ್ನು ತೊಟ್ಟ ಮನುಷ್ಯರು – ಅನ್ನಿಸಿ, ಬೇಸರವಾಗಿ ಗೆಳೆಯರ ಮನೆಗೆ ಬಂದು ಮೈಚಾಚಿದೆ. ವಿದ್ಯುತ್ ಬೀಸಣಿಗೆ ದೆಹಲಿಯ ಬಿಸಿಲ ಕಾವನ್ನು ಕಡೆದು ಹರಡುತ್ತಿತ್ತು.

ದೆಹಲಿಯ ಬಿಸಿಲಲ್ಲಿ ಇನ್ನೂ ಒಂದು ದಿನ ಕೆಲವು ಹಳೆಯ ಗೆಳೆಯರನ್ನು ಮಾತನಾಡಿಸುವುದರಲ್ಲಿ ಕಳೆಯಿತು. ಮಾಸ್ಕೋದಲ್ಲಿನ ಛಳಿಯನ್ನೆದುರಿಸಲು, ನನ್ನ ಬಳಿ ಇದ್ದ ಬೆಚ್ಚನೆಯ ಓವರ್ ಕೋಟಿನ ಜತೆಗೆ, ಒಂದು ಜೊತೆ ಉಣ್ಣೆಯ ಕೈ ಚೀಲಗಳನ್ನು  ಕೊಂಡದ್ದಾಯಿತು. ಶೇಕಡಾ ನೂರಾಹತ್ತರಷ್ಟು ಶಾಖಾಹಾರಿಯಾದ ನನ್ನ ಗತಿ ಏನು ಆ ದೇಶದಲ್ಲಿ – ಎಂಬ ಶಂಕೆ ಇದ್ದರೂ, ನನ್ನ ಹಳೆಯ ವಿದ್ಯಾರ್ಥಿಯಾಗಿದ್ದೂ ಈಗ ಮಾಸ್ಕೋ ರೇಡಿಯೋದ ಕನ್ನಡ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ಮಹಾದೇವಯ್ಯನವರ ಮನೆ ಹೇಗೂ ಇದೆಯಲ್ಲ ಎಂಬ ಧೈರ್ಯ ನನ್ನ ಬೆಂಬಲಕ್ಕಿತ್ತು. ಅವರಿಗಾಗಿ ಒಂದಷ್ಟು ಬೇಳೆ, ಉಪ್ಪಿನಕಾಯಿ, ಹಪ್ಪಳ ಇತ್ಯಾದಿಗಳನ್ನು ನನ್ನ ಪೆಟ್ಟಿಗೆಯಲ್ಲಿ ಜಮಾಯಿಸಿಕೊಂಡಿದ್ದೆ.