ಮುತ್ತಯ್ಯ ಭಾಗವತರು — ಸಂಗೀತ, ಹರಿಕಥಾಕಾಲಕ್ಷೇಪ ಎರಡರಲ್ಲಿಯೂ ಖ್ಯಾತಿಯನ್ನು ಗಳಿಸಿದರು. ಬಹು ಕಷ್ಟಪಟ್ಟು ಸಂಗೀತದ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿಕೊಂಡರು. ಹರಿಕೇಶ ಎಂಬ ಹೆಸರಿನಿಂದ ಹಲವಾರು ಸುಂದರ ಹಾಡುಗಳನ್ನು ಸಂಸ್ಕೃತ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಚಿಸಿದರು.

ಮುತ್ತಯ್ಯ ಭಾಗವತರು

ಮಾನವ ಜೀವನದಲ್ಲಿ ಅವನ ಮನಸ್ಸಿನ ಮೇಲೆ ಒಂದು ಉತ್ತಮ ಪರಿಣಾಮವನ್ನು ಉಂಟುಮಾಡಿ ಸಂಗೀತವು ಅವನಿಗೆ ಆನಂದವನ್ನು ಕೊಟ್ಟಿದೆ.

ಪ್ರಾಚೀನ ಕಾಲದಿಂದಲೂ ಸಂಗೀತವು ಪರಂಪರಾಗತ ವಾಗಿ ಬಂದದ್ದು. ಮುಂದುವರಿದಂತೆ ಕರ್ಣಾಟಕ ಸಂಗೀತವು ಒಂದು ನಿರ್ದಿಷ್ಟವಾದ ರೂಪವನ್ನು ತಾಳಿದ್ದು ಸಂಗೀತದ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು ರಚಿಸಿದ ರಚನೆಗಳಿಂದ. ಈಗ ಈ ಪರಂಪರೆಯೇ ಮುಂದುವರೆದು ಎಲ್ಲರೂ ಈ ಮಾರ್ಗವನ್ನೇ ಅನುಸರಿಸುತ್ತಾ ಬಂದಿರುತ್ತಾರೆ. ಈ ತ್ರಿಮೂರ್ತಿಗಳ ಪರಂಪರೆಯಲ್ಲಿ ಅತಿ ಹೆಚ್ಚಿನ ಶಿಷ್ಯಪರಂಪರೆ ತ್ಯಾಗರಾಜರದು. ಹರಿಕೇಶ ನಲ್ಲೂರು ಮುತ್ತಯ್ಯ ಭಾಗವತರು ತ್ಯಾಗರಾಜರ ಪರಂಪರೆಗೆ ಸೇರಿದವರು. ತಮಿಳುನಾಡಿನಲ್ಲಿ ಹುಟ್ಟಿಬೆಳೆದರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಅಮೋಘವಾಗಿ ಸೇವೆ ಸಲ್ಲಿಸಿದರು. ತಮ್ಮ ಕೊನೆಯ ಹದಿನೆಂಟು ವರ್ಷಗಳ ಜೀವನವನ್ನು ಕರ್ನಾಟಕದಲ್ಲಿ ಕಳೆದರು. ಅವರು ಪ್ರತಿಭಾವಂತ ವಾಗ್ಗೇಯಕಾರರು. (ವಾಗ್ಗೇಯಕಾರರು ಎಂದರೆ, ಹಾಡುಗಳನ್ನು ಸ್ವತಃ ರಚಿಸಬಲ್ಲ ಸಂಗೀತಗಾರರು.)

ಬಾಲ್ಯ

ತಮಿಳು ನಾಡಿನ ಶ್ರೀ ವಲ್ಲಿಪತ್ತೂರು ಬಳಿ ಇರುವ ಪುನಲ್‌ವೇಲಿ ಎಂಬ ಗ್ರಾಮದಲ್ಲಿ ಲಿಂಗಮಯ್ಯರ್ ಮತ್ತು ಆನಂದಾಂಬಾಳ್ ದಂಪತಿಗಳಿಗೆ ಸುಪುತ್ರರಾಗಿ ೧೮೭೭ರ ಜನವರಿಯಲ್ಲಿ ಜನಿಸಿದರು. ಹುಡುಗನಿಗೆ ಕಾಂತಿಮತಿ ಎಂಬ ಅಕ್ಕನೂ ಹರಿಹರನೆಂಬ ತಮ್ಮನೂ ಇದ್ದರು. ಇವನ ತಂದೆಯವರು ಮುಂದೆ ಹರಿಕೇಶನಲ್ಲೂರೆಂಬ ಗ್ರಾಮದಲ್ಲಿ ಬಂದು ನೆಲೆಸಿದರು.

ಸಂಗೀತ, ತಮಿಳು ಮತ್ತು ಸಂಸ್ಕೃತ ವಿದ್ವಾಂಸರಾಗಿದ್ದ ಮುತ್ತು ಸುಬ್ಬ ಭಾರತಿಯೆಂಬುವರು ಮುತ್ತಯ್ಯನ ತಾಯಿಯ ತಂದೆ. ಇವರ ತಂದೆಯವರೂ ಸಹ ಸಂಗೀತ ಮತ್ತು ಸಾಹಿತ್ಯಗಳಲ್ಲಿ ವಿದ್ವಾಂಸರು. ಮಗನಿಗೆ ಬಾಲ್ಯದಲ್ಲಿ ತಂದೆಯವರೇ ತಮಿಳು ಮತ್ತು ಸಂಸ್ಕೃತ ಕಲಿಸುತ್ತಿದ್ದರು. ಸಂಗೀತವನ್ನು ಅಪ್ಪುಕುಡಂ ಶಾಸ್ತ್ರಿಗಳಲ್ಲಿ ಅಭ್ಯಾ ಮಾಡಿಸುತ್ತಿದ್ದರು. ಹುಡುಗನಾಗಿದ್ದಾಗಲೇ ಮುತ್ತಯ್ಯನು ಜನಪದ ಗೀತೆಗಳನ್ನು ಚೆನ್ನಾಗಿ ಹಾಡುತ್ತಿದ್ದ.

ಸೋದರಮಾವನ ಮನೆ

ಬಾಲ್ಯದಲ್ಲಿಯೇ ಮುತ್ತಯ್ಯನಿಗೆ ಕಷ್ಟ ಒದಗಿತು. ತನ್ನ ಏಳನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ. ಮುಂದೆ ಅವನ ಸೋದರಮಾವಂದಿರಾದ ಮಹಾಮಹೋಪಾಧ್ಯಾಯ ಲಕ್ಷ್ಮಣಸೂರಿಯರು ಅವನ ಪೋಷಣೆಯ ಹೊಣೆಯನ್ನು ವಹಿಸಿಕೊಂಡರು. ಸೋದರಳಿಯನು ಸಂಗೀತವನ್ನು ಅಭ್ಯಾಸ ಮಾಡುವುದು ಅವರಿಗೆ ಇಷ್ಟವಿಲ್ಲ. ಒಳ್ಳೆಯ ಮನೆತನದವರಿಗೆ ಸಂಗೀತದ ಅಭ್ಯಾಸ ಸರಿಯಲ್ಲ ಎಂದು ಅವರ ಅಭಿಪ್ರಾಯ. ತಮ್ಮಂತೆಯೇ ಉತ್ತಮ ಸಂಸ್ಕೃತ ಪಂಡಿತನಾಗಿ ಮಾಡಲು ವಿದ್ವಾಂಸರೆಂದು ಹೆಸರಾಗಿದ್ದ ಮುತ್ತ ಘನಪಾಟಿಗಳಲ್ಲಿ ವೇದಾಧ್ಯಯನ ಮಾಡಲು ಏರ್ಪಾಡನ್ನು ಮುತ್ತಯ್ಯನ ಹತ್ತನೆಯ ವಯಸ್ಸಿನಲ್ಲಿ ಮಾಡಿದರು.

ಅಂದಿನ ತಿರುವಯ್ಯಾರು ಕ್ಷೇತ್ರವು ಅತಿ ಹೆಸರಾಗಿದ್ದ ಸಂಗೀತ ವಿದ್ವಾಂಸರಿಂದ ಕೂಡಿದ್ದು ಸಂಗೀತವು ಅತ್ಯುನ್ನತ ಮಟ್ಟದಲ್ಲಿತ್ತು. ಮುತ್ತಯ್ಯನಿಗೆ ಬಾಲ್ಯದಿಂದಲೂ ಸಂಸ್ಕೃತಕ್ಕಿಂತಲೂ ಸಂಗೀತದ ಗೀಳು ಹೆಚ್ಚಾಗಿತ್ತು. ಅವನಿಗೆ ತಾನು ಕಲಿಯುತ್ತಿದ್ದ ಸಂಸ್ಕೃತವನ್ನು ಬಿಟ್ಟು ಸಂಗೀತವನ್ನು ಕಲಿಯಲು ಹಂಬಲ.

ಸಂಗೀತದ ಅಭ್ಯಾಸ

ಎರಡು ವರ್ಷಗಳ ಕಾಲ ಹಾಗೂ ಹೀಗೂ ಅಭ್ಯಾಸ ಮಾಡಿದ. ಅನಂತರ, ಭಿಕ್ಷಾನ್ನ ಮಾಡಿ ಜೀವಿಸಿದರೂ ಚಿಂತೆಯಿಲ್ಲ, ಸಂಗೀತವನ್ನು ಕಲಿಯಬೇಕು ಎಂದು ತೀರ್ಮಾನಿಸಿದ. ಅದರ ಫಲವಾಗಿ ಯಾರಿಗೂ ತಿಳಿಯದಂತೆ ತಿನ್ನವೇಲಿಯನ್ನು ಬಿಟ್ಟು ಹೊರಟ. ತಿರುವಯ್ಯಾರಿನಲ್ಲಿ ಹೆಸರಾಗಿದ್ದ ಪಲ್ಲವಿ ದೊರಸಾಮೈಯ್ಯರ್ ಅವರ ವಂಶಜರೂ ತ್ಯಾಗರಾಜ ಶಿಷ್ಯಪರಂಪರೆಗೆ ಸೇರಿದವರೂ ಆದ ವಿದ್ವಾನ್ ಶಿವಯ್ಯರಲ್ಲಿ ಹೋಗಿ ತನಗೆ ಸಂಗೀತ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸಿದ. ಹುಡುಗನ ವರ್ಚಸ್ಸು ಮತ್ತು ನಿಲುವನ್ನು ಕಂಡ ಗುರುಗಳು ಒಪ್ಪಿದರು.

ಮುತ್ತಯ್ಯ ಅಖಂಡವಾಗಿ ಆರು ವರ್ಷಗಳ ಕಾಲ ಗುರುಸನ್ನಿಧಿಯಲ್ಲಿ ಲಕ್ಷ್ಯ, ಲಕ್ಷಣ ಭಾಗವನ್ನು ಚೆನ್ನಾಗಿ ಕಲಿತ. ತನ್ನ ಗುರುವಿನ ಆರ್ಶೀವಾದ ಪಡೆದು ತನ್ನ ಊರಾದ ಹರಿಕೇಶನಲ್ಲೂರಿಗೆ ೧೮೯೩ ರಲ್ಲಿ ಹಿಂತಿರುಗಿದ.

ಸಾಂಬಶಿವಯ್ಯರ್ ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ ಮದರಾಸಿಗೆ ಬಂದು ನೆಲೆಸಿದರು. ಅಲ್ಲಿದ್ದಾಗ ಒಂದು ಘಟನೆ ನಡೆಯಿತು. ಅಲ್ಲಿ ವಿಶ್ವನಾಥ ಅಯ್ಯರ್ ಎಂಬುವರು ಒಬ್ಬ ವಕೀಲರು. ಅವರ ಅಡಿಗೆಯವರು ಒಬ್ಬರು ಮುತ್ತಯ್ಯ ಭಾಗವತರ ಸಂಗೀತವನ್ನು ಕೇಳಿ ಬಹಳ ಸಂತೋಷಪಟ್ಟಿದ್ದರು. ಅವರ ಸಲಹೆಯಂತೆ ವಕೀಲರು ಒಮ್ಮೆ ತಮ್ಮ ಮನೆಯಲ್ಲಿ ಭಾಗವತರ ಸಂಗೀತವನ್ನು ಏರ್ಪಡಿಸಿದ್ದರು. ಸಂಗೀತ ಕೇಳಿ ತುಂಬಾ ಸಂತೋಷಪಟ್ಟು ತರುಣ ಸಂಗೀತಗಾರನಿಗೆ ಹಣವನ್ನೂ ಒಂದು ಕಲಾಪತ್ತು ಪಂಚೆಯನ್ನೂ ಕೊಟ್ಟು ಸನ್ಮಾನಿಸಿದರು. ಸಾಂಬಶಿವಯ್ಯರ್ ಮಗನಿಗೆ ಭಾಗವತರನ್ನು ಕಂಡರೆ ಮೊದಲಿನಿಂದ ಅಸೂಯೆ. ಗುರುಗಳ ಅಪ್ಪಣೆ ಇಲ್ಲದೆ ಸಂಗೀತ ಕಛೇರಿ ನಡೆಸಿದರು ಎಂದು ಭಾಗವತರನ್ನು ಬೈದು, ಪಂಚೆಯನ್ನೂ ಹಣವನ್ನೂ ಬೀದಿಗೆಸೆದು, ಅವರನ್ನೂ ನೂಕಿಬಿಟ್ಟ. ಆ ಹೊತ್ತಿಗೆ ಅಕಸ್ಮಾತ್ತಾಗಿ ಸಂಗೀತ ಕಚೇರಿಯನ್ನು ಏರ್ಪಡಿಸಲು ಕಾರಣರಾದ ಅಡಿಗೆಯವರು ಅಲ್ಲಿಗೆ ಬಂದರು. ಅವರಿಗೆ ಈ ದೃಶವನ್ನು ಕಂಡು ಬಹಳ ದುಃಖವಾಯಿತು. ಭಾಗವತರನ್ನು ತಮ್ಮ ಮನೆಯಲ್ಲೆ ಇಟ್ಟುಕೊಂಡು ಉಪಚರಿಸಿದರು.

ಮುಂದೆ ತಾನು ಕಲಿತ ವಿದ್ಯೆಯನ್ನು ಚೆನ್ನಾಗಿ ಮೂರುವರ್ಷಗಳ ಕಾಲ ಅಭ್ಯಾಸ ಮಾಡಿ, ಮೊದಲಾಗಿ ತುತ್ತುಕುಡಿಯಲ್ಲಿ ಸಂಗೀತ ಕಛೇರಿಯನ್ನು ಮಾಡಿ ಒಂದು ಉತ್ತಮ ತಂಬೂರಿಯನ್ನು ಪ್ರಶಸ್ತಿಯಾಗಿ ಪಡೆದರು. ಅಂದಿನಿಂದ ಮುತ್ತಯ್ಯ ಭಾಗವತರೆಂದು ಹೆಸರಾದರು. ಇದೇ ತಂಬೂರಿಯೇ ಅವರು ಮೈಸೂರಿಗೆ ಬಂದಾಗ ಅವರೊಡನಿದ್ದುದು.

ತಿರುವಾಂಕೂರು ಮತ್ತು ರಾಮನಾಡಿನಲ್ಲಿ

ಉತ್ತೇಜಿತರಾದ ಭಾಗವತರು ತಮ್ಮ ಪ್ರಾಂತದಲ್ಲೆಲ್ಲಾ ಕಛೇರಿಗಳನ್ನು ಮಾಡಿ ತಮ್ಮ ೨೦ನೆಯ ವಯಸ್ಸಿನಲ್ಲಿ ತಿರುವಾಂಕೂರು ಸಂಸ್ಥಾನಕ್ಕೆ ಹೋದರು. ಅಲ್ಲಿ ಮೂಲಂ ತಿರುನಾಳ್‌ರವರು ಮಹಾರಾಜರು. ಅವರ ಸಮ್ಮುಖದಲ್ಲಿ ತಮ್ಮ ಗಾನವನ್ನು ಮಾಡಿ ಉನ್ನತ ಮಟ್ಟದ ಪಾರಿತೋಷಕವನ್ನು ಎಂದರೆ ಎರಡು ಕೈಗಳಿಗೂ ಚಿನ್ನದ ತೋಡಾ, ಖಿಲ್ಲತ್ತು ಮತ್ತು ಸಂಭಾವನೆ ಪಡೆದು ಬಂದರು. ಮುಂದೆ ರಾಮನಾಡು ಮಹಾರಾಜರ ಸಮ್ಮುಖದಲ್ಲಿ ಹಾಡಿ ತೋಡಾ, ಖಿಲ್ಲತ್ತು ಮತ್ತು ಸಂಭಾವನೆ ಪಡೆದು ಪ್ರತಿಷ್ಠಿತ ಗಾಯಕರೆಂದು ಎಲ್ಲ ಕಡೆಯೂ ಹೆಸರಾಗಿ ಬಂದರು.

ಅವರ ವಿವಾಹವು ಶಿವಕಾಮಿಯಮ್ಮಾಳ್‌ರೊಡನೆ ಅವರ ೨೨ನೆಯ ವಯಸ್ಸಿನಲ್ಲಿ ಅತಿ ವೈಭವದಿಂದ ನೆರವೇರಿತು.

ಕಛೇರಿಯಿಂದ ಕಥಾಕಾಲಕ್ಷೇಪಕ್ಕೆ

ದಕ್ಷಿಣ ಭಾರತವು ಮರಾಠಾ ರಾಜರುಗಳಿಂದ ಆಳಲ್ಪಡುತ್ತಿದ್ದಾಗ, ಆಗ ಮಹಾರಾಷ್ಟ್ರದಲ್ಲಿ ಪ್ರಚಾರದಲ್ಲಿದ್ದ ಕಥಾಕಾಲಕ್ಷೇಪ ಪದ್ಧತಿಯು ದಕ್ಷಿಣ ಭಾರತದಲ್ಲಿಯೂ ಹರಡಿತು. ಜನಸಾಮಾನ್ಯರಿಗೆ ಸಂಗೀತಕ್ಕಿಂತಲೂ ಕಥಾಕಾಲಕ್ಷೇಪ ಕೇಳುವುದರಲ್ಲಿ ಹೆಚ್ಚು ಅಭಿರುಚಿಯೂ ಇತ್ತು. ಇದನ್ನು ಗಮನಿಸಿದ ಕೆಲವು ವಿದ್ವಾಂಸರುಗಳಾದ ಮಹಾವೈದ್ಯನಾಥ ಅಯ್ಯರ್, ಪಾಲಘಾಟು ಅನಂತರಾಮ ಭಾಗವತರು ಮತ್ತು ಕಲ್ಲಡೈಕುರ್ಚಿ ವೇದಾಂತ ಭಾಗವತರು ಕಥಾಕಾಲಕ್ಷೇಪದ ಕಲೆಯನ್ನು ಬೆಳೆಸಿಕೊಂಡರು. ಈ ಕಲೆಯಲ್ಲಿ ಬಹು ಕೀರ್ತಿಯನ್ನು ಪಡೆದರು. ಮುತ್ತಯ್ಯ ಭಾಗವತರು ಇವರನ್ನು ಅನುಸರಿಸಿಯೇ ೧೯೦೪ರಲ್ಲಿ ಕಥಾಕಾಲಕ್ಷೇಪವನ್ನು ಮಾಡಲು ತಮ್ಮ ಪ್ರಥಮ ಗುರುಗಳಾದ ಅಪ್ಪಕುಡಂ ಶಾಸ್ತ್ರಿಗಳು ಮತ್ತು ತಮ್ಮ ಹಿರಿಯರುಗಳಿಂದ ಅಭ್ಯಾಸ ಮಾಡಿದರು. ಇದಲ್ಲದೇ ತಮ್ಮಲ್ಲಿಗೆ ಕೃಷ್ಣಭಟ್‌ಜೀ ಎಂಬ ಕಥಾಕಲೋಪಾಸಕರನ್ನು ಬರಮಾಡಿಕೊಂಡು ಮರಾಠಿ ಸಂಪ್ರದಾಯದಂತೆ ಸಾಕಿ, ದಂಡಿ ಎಂಬ ರೂಪದ ರಚನೆಗಳನ್ನು ತಮ್ಮ ಕಥಾಭಾಗಕ್ಕೆ ಅಳವಡಿಸಿಕೊಂಡು ಕಥೆ ಮಾಡಲು ಆರಂಭಿಸಿದರು.

ಮನಸೆಳೆಯುವ ಕಾಲಕ್ಷೇಪ

ಭಾಗವತರು ಬಾಲ್ಯದಿಂದ ಅಭ್ಯಾಸ ಮಾಡಿದ್ದ ತಮಿಳು ಮತ್ತು ಸಂಸ್ಕೃತ ಉನ್ನತ ಮಟ್ಟದ್ದಾಗಿದ್ದಿತು. ಅವರಿಗಿದ್ದ ಸಮಯಸ್ಫೂರ್ತಿ, ಬುದ್ಧಿಚಾತುರ್ಯ, ಹಾಸ್ಯದಿಂದ ಕೂಡಿದ್ದ ವಾಕ್ಚತುರತೆ, ಎಂಥಾ ವಿಷಯವನ್ನಾದರೂ ವಿಮರ್ಶಾತ್ಮಕವಾಗಿ ಪ್ರತಿಪಾದಿಸುವ ಜಾಣ್ಮೆ, ಅಮೋಘವಾದ ಸಂಗೀತಜ್ಞಾನ, ಇಂದಿನಂತೆ ಧ್ವನಿವರ್ಧಕ ಸಲಕರಣೆಗಳಿಲ್ಲದಿದ್ದರೂ ಎಲ್ಲರಿಗೂ ಕೇಳಿಬರುತ್ತಿದ್ದ ಅವರ ಶಾರೀರ ಸಂಪತ್ತು ಅವರನ್ನು ಕಥಾಕಾಲಕ್ಷೇಪಕ್ಕಾಗಿಯೇ ಎರಕ ಹೊಯ್ದಂತೆ ಮಾಡಿದ್ದವು. ಜೊತೆಗೆ ಕಥಾಕಾಲಕ್ಷೇಪಕ್ಕೆ ಮೆರಗುಕೊಟ್ಟಿದ್ದುದು ಅವರು ಆ ಸಮಯಕ್ಕೆ ಧರಿಸುತ್ತಿದ್ದ ಉಡುಪು, ಒಡವೆಗಳು. ಅವರದು ಎತ್ತರವಾದ ದೇಹ ಪ್ರಕೃತಿ, ತುಂಬಿದ ಮೈ, ಆಜಾನುವಾದ ಬಾಹುಗಳು, ಆಕರ್ಷಕವಾದ ಮುಖ, ವಿಶಾಲವಾದ ಹಣೆ, ಸೂಕ್ಷ್ಮ ಕಣ್ಣುಗಳು. ಹಣೆ ಮತ್ತು ಶರೀರಕ್ಕೆ ಇಡುತ್ತಿದ್ದ ಸುಗಂಧಪೂರಿತವಾದ ಪಯಣುಕ್ಷೇತ್ರದ ವಿಭೂತಿ, ಹಣೆಯ ಮಧ್ಯದಲ್ಲಿಡುತ್ತಿದ್ದ ಅಗಲವಾದ ಪುನಗು, ಜವಾಜಿ ಮತ್ತು ಅರಗಜ ಮಿಶ್ರಿತ ಕಪ್ಪುಬೊಟ್ಟು, ಕಿವಿಯಲ್ಲಿ ವಜ್ರದ ಕಡಕ, ಸದಾ ಕತ್ತಿನಲ್ಲಿರುತ್ತಿದ್ದ ಚಿನ್ನದ ಸರದ ರುದ್ರಾಕ್ಷಿ, ಕೊರಳಲ್ಲಿ ಚಿನ್ನದ ಸರಗಳು, ಕೈಯಲ್ಲಿ ತೋಡಾ, ನವರತ್ನ ಖಚಿತವಾದ ಉಂಗುರಗಳು, ಉಡಲು ಮತ್ತು ಹೊದೆಯಲು ಅಂಗೈ ಅಗಲದ ಕಲಾಪತ್ತಿನ ಪಂಚೆ, ಕತ್ತಿನಿಂದ ಇಳಿಬಿಟ್ಟಿರುವ ಬಣ್ಣಬಣ್ಣದ ಕಲಾಪತ್ತಿನ ಸಾದರ. ಇಷ್ಟು ವೈಭವಯುತವಾಗಿ ಅಲಂಕರಿಸಿಕೊಂಡು ನಿಂತು ಕಲಾಕ್ಷೇಪವನ್ನು ಮಾಡುವ ಭಾಗವತರನ್ನು ನೋಡಿ ಸಭಿಕರು ಆಕರ್ಷಿತರಾದ್ದರಲ್ಲಿ ಏನು ಆಶ್ಚರ್ಯ !

ಹೊಸ ಕತೆಗಳು

ಭಾಗವತರು ಸುಬ್ರಹ್ಮಣ್ಯ ಸ್ವಾಮಿಯ ಉಪಾಸಕರಾಗಿದ್ದ ಕಾರಣ ಅಲ್ಲಿಯವರೆಗೂ ಯಾರೂ ಕಥಾರೂಪದಲ್ಲಿ ಮಾಡದೇ ಇದ್ದ ’ವಲ್ಲೀ ಪರಿಣಯ’ ಎಂಬ ಕತೆಯನ್ನು ಆರಿಸಿಕೊಂಡರು. ಕತೆಗೆ ಬೇಕಾಗಿದ್ದ ನವೀನ ರೀತಿಯ ಪೂರ್ವ ಪೀಠಿಕೆಗಾಗಿ ತಿಲ್ಲಾನ, ಹಾಡು, ಸ್ವರಜೋಡಣೆ ಮುಂತಾದುವನ್ನು ತಾವೇ ರಚಿಸಿಕೊಂಡರು. ಈ ಕತೆಯಲ್ಲಿ ಅವರು ಉಪಯೋಗಿಸುತ್ತಿದ್ದ ಶಾಸ್ತ್ರೀಯ ಸಂಗೀತವೇ ಅಲ್ಲದೆ ಜನಪದ ಗೀತೆಗೆ ಸೇರಿದ ಕಾವಡಿಚಂದ್ ಹಾಡುಗಳು ಜನಾನುರಾಗವಾಗಿ ಅವರಿಗೆ ಹೆಚ್ಚು ಕೀರ್ತಿಯನ್ನು ತಂದವು. ಈ ಕತೆಗಾಗಿಯೇ ಅವರು ರಚಿಸಿದ ಷಣ್ಮುಖ ರಾಗದ ವಲ್ಲಿನಾಯಕ ಎಂಬ ಕೃತಿ ಈಗಲೂ ಪ್ರಸಿದ್ಧವಾಗಿದೆ.

ಭಾಗವತರು ತಮಿಳು ನಾಡಿಗೆ ನೀಡಿದ ಆನಂದ ರಾಮಾಯಣದಿಂದ ತೆಗೆದುಕೊಂಡ ’ಸತೀ ಸುಲೋಚನ’ ಎಂಬುದು ಮತ್ತೊಂದು ಹೊಸ ಕತೆ. ಇದಲ್ಲದೇ ’ಕೌಸಲ್ಯಾ ಪರಿಣಯ’, ’ದೂರ್ವಾಸ ಆತಿಥ್ಯ’, ’ದ್ರೌಪದಿ ಮಾನಸಂರಕ್ಷಣೆ’, ಅನೇಕ ದಿನಗಳು ವಿವಿಧ ಘಟ್ಟಗಳಲ್ಲಿ ಮಾಡಿ ಮುಗಿಸುತ್ತಿದ್ದ ’ಸಂಪೂರ್ಣ ರಾಮಾಯಣ’ ಅವರು ಮಾಡುತ್ತಿದ್ದ ಇತರ ಕತೆಗಳು. ಅವರ ಕೀರ್ತಿ ಹಬ್ಬಿ ದಕ್ಷಿಣ ಭಾರತದಲ್ಲಿ, ಅದರಲ್ಲೂ ಚೆಟ್ಟನಾಡಿನಲ್ಲಿ ವಿಶೇಷವಾಗಿ ಆಹ್ವಾನಿತರಾಗುತ್ತಿದ್ದರು.

ಮಧುರೆಯಲ್ಲಿ

ಮುಂದೆ ತಮ್ಮ ಊರಾದ ಹರಿಕೇಶನಲ್ಲೂರನ್ನು ಬಿಟ್ಟು ಮಧುರೆಗೆ ಬಂದು ನೆಲೆಸಿದರು. ಕಥಾಕಾಲಕ್ಷೇಪಕ್ಕೆ ಕಾಲಿಟ್ಟ ಕಾರಣ ಭಾಗವತರಾಗಿಯೇ ಉಳಿಯದೇ ವಾಗ್ಗೇಯಕಾರರಾದರು. ರಾಮಾಯಣದ ಕಥಾಕಾಲಕ್ಷೇಪ ಮಾಡುವಾಗ ಪೂರ್ವ ಪೀಠಿಕೆಗಾಗಿ ರಚಿಸಿದ ಕಾಪಿ ರಾಗದ ’ಕಲಿಲೋ ಹರಿ ಸ್ಮರಣ’ ಎಂಬ ಕೀರ್ತನೆ ಅವರು ರಚಿಸಿದ ಮೊದಲನೆಯ ಕೀರ್ತನೆ. ಇದಲ್ಲದೇ, ’ನೀದು ಮಹಿಮ’, ’ಸಹಜಗುಣ ರಾಮ’, ’ಶರಣಾಗತ ವತ್ಸಲ’ ಇವೇ ಮೊದಲಾದವು ಇವರು ಕತೆಗಾಗಿಯೇ ರಚಿಸಿದ ಅನೇಕ ಕೃತಿಗಳು.

ಭಾಗವತರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರು. ಆ ಗುರುವಿನಲ್ಲಿ ಅತ್ಯಂತ ಭಕ್ತಿ. ತ್ಯಾಗರಾಜರ ಚರಿತ್ರೆಯನ್ನು ಅವರ ಕೀರ್ತನೆಗಳ ಆಧಾರದಿಂದಲೇ ಕಥಾರೂಪಕವಾಗಿ ಮಾಡಲು ಅವರ ಕೀರ್ತನೆಗಳನ್ನು ವಿಮರ್ಶಾತ್ಮಕವಾಗಿ ಅಭ್ಯಾಸ ಮಾಡಿದರು. ಮಧುರೆಯಲ್ಲಿ ಅವರು ಆಚರಿಸುತ್ತಿದ್ದ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ, ಕಥಾರೂಪವಾಗಿ ಮೂರು ದಿವಸಗಳು ತ್ಯಾಗರಾಜರ ಚರಿತ್ರೆಯನ್ನು ನಿರೂಪಿಸುತ್ತಿದ್ದರು. ಈ ಕಥಾಕಾಲಕ್ಷೇಪದಲ್ಲಿ ಅವರು, ’ಎವರನಿ’, ’ಅಲಕಲ್ಲಲ’, ’ಗೀತಾರ್ಥಮು’, ’ಏಲ ನೀ ದಯರಾಮ’ ಇವೇ ಮೊದಲಾದ ತ್ಯಾಗರಾಜರ ಕೀರ್ತನೆಗಳಿಗೆ ನೀಡುತ್ತಿದ್ದ ರಸ ಮತ್ತು ಭಾವಾರ್ಥಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ.

ಶಿಷ್ಯವರ್ಗ-ಮಿತ್ರವರ್ಗ

ಮಧುರೆಯಲ್ಲಿದ್ದಾಗಲೇ ಒಂದು ಗುರುಕುಲವನ್ನು ಭಾಗವತರು ಸ್ಥಾಪಿಸಿದರು. ಆಗ ಅವರ ಶಿಷ್ಯರಾಗಿದ್ದ ದಿವಂಗತ ಮಧುರೆ ಮಣಿ ಅಯ್ಯರ್ ಹೆಸರಾದ ಸಂಗೀತ ವಿದ್ವಾಂಸರು. ಇವರಲ್ಲದೇ ಪಿಟೀಲ್ ಅಪ್ಪಾವೈರ್, ಅವರ ಮಗ ಗೋಟುವಾದ್ಯಂ ನಾರಾಯಣ ಅಯ್ಯರ್, ಬದಲೂರು ಕೃಷ್ಣಮೂರ್ತಿ ಶಾಸ್ತ್ರಿಗಳು ಮತ್ತು ಹಾಡುವುದರಲ್ಲಿ ವಿದ್ವಾನ್ ಶ್ರೀನಿವಾಸನ್ ಮುಖ್ಯರು. ಇವರ ಶಿಷ್ಯವರ್ಗ ವಿಸ್ತಾರವಾದದ್ದು, ಈಗಿನ ಹಲವರು ಪ್ರಮುಖ ಸಂಗೀತಗಾರರು ಈ ವರ್ಗಕ್ಕೆ ಸೇರಿದವರು.

ಯಾವಾಗಲೂ ಭಾಗವತರಿಗೆ ಶಿಷ್ಯವರ್ಗ ಮತ್ತು ಮಿತ್ರವರ್ಗವೂ ಅಪಾರ. ಅವರು ಪುದುಕೋಟೆ, ಎಟ್ಟಿಯಾಪುರಂ, ರಾಮನಾಡು ಮತ್ತು ತಿರುವಾಂಕೂರು ಮಹಾರಾಜರುಗಳಿಂದಲೂ ದೊಡ್ಡ ಜಮೀನುದಾರರು ಮತ್ತು ಗುರುಮನೆಗಳಿಂದಲೂ ಸನ್ಮಾನಿತರಾದವರು. ಕರೂರು ಬಳಿ ಇರುವ ಆಂಡಿಪಟ್ಟಿ ಜಮೀನುದಾರರಾದ ಪತ್ತಾಚೆಟ್ಟಿಯಾರರು ಇವರ ಪರಮ ಮಿತ್ರರಾಗಿದ್ದವರು. ಆ ಸ್ನೇಹವೇ ಭಾಗವತರು ಕರೂರಿನಲ್ಲಿ ಬಂದು ನೆಲೆಸುವಂತೆ ಮಾಡಿತು. ಪೆತ್ತಾಚೆಟ್ಟಿಯಾರರು ಭಾಗವತರ ಸಲಹೆಯಂತೆ ಸ್ಕಂದ ಷಷ್ಠಿ ಉತ್ಸವವನ್ನು ನಡೆಸಲು ಪ್ರಾರಂಭಿಸಿದರು. ಅದರಲ್ಲಿ ಪಾಲ್ಗೊಳ್ಳಲು ನಾಡಿನ ಹಿರಿಯ ಮತ್ತು ಕಿರಿಯ ವಿದ್ವಾಂಸರನ್ನು ಬರಮಾಡಿಕೊಂಡು ಅವರುಗಳ ಕಛೇರಿಗಳನ್ನು ಮಾಡಿಸಿ ಅವರವರ ಯೋಗ್ಯತೆಗೆ ತಕ್ಕಂತೆ ಸಂಭಾವನೆಯನ್ನು ಭಾಗವತರು ಕೊಡಿಸುತ್ತಿದ್ದರು. ಈ ಕಾರಣದಿಂದಾಗಿ ನಾಡಿನ ಎಲ್ಲಾ ವಿದ್ವಾಂಸರ ಪ್ರೀತ್ಯಾದರಗಳಿಗೆ ಪಾತ್ರರಾದರು. ಅವರು ಕಲೆಗೆ ಕೊಡುತ್ತಿದ್ದ ಪ್ರೋತ್ಸಾಹವನ್ನು ಇದು ಸೂಚಿಸುತ್ತದೆ. ಈ ಉತ್ಸವವು ಐದು ವರ್ಷಗಳು ನಡೆಯುವುದರಲ್ಲೇ ಚೆಟ್ಟಿಯಾರರು ತೀರಿಕೊಂಡರು. ಇದರಿಂದ ಭಾಗವತರ ಜೀವನದಲ್ಲಿ ಮೋಡ ಮುಸುಕಿದಂತಾಯಿತು.

ತಂಜಾವೂರಿನಲ್ಲಿ

ತಂಜಾವೂರಿನಲ್ಲಿ ಎಬ್ರಹಾಂ ಪಂಡಿತರೆಂಬವರು ವೈದ್ಯರು ಮಾತ್ರವಲ್ಲದೇ, ಸಂಗೀತ ಲಕ್ಷಣಕಾರರಾಗಿ ಅನೇಕ ಸಂಶೋಧನೆಗಳನ್ನು ನಡೆಸಿ ಸಂಗೀತ ಗ್ರಂಥಗಳನ್ನು ಬರೆದವರು. ಅವರು ನಡೆಸುತ್ತಿದ್ದ ಸಂಗೀತ ಸಮ್ಮೇಳನಕ್ಕೆ ಭಾಗವತರು ಆಹ್ವಾನಿತರಾಗಿ ಹೋಗಿ ಸಂಗೀತ ಶಾಸ್ತ್ರದ ವಿಷಯವಾದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವು ವರ್ಷಗಳು ಭಾಗವತರು ತಂಜಾವೂರಿನಲ್ಲೇ ನೆಲೆಸಿದರು. ಇದರಿಂದ ಅಲ್ಲಿನ ಸರಸ್ವತೀ ಮಹಲ್ ಗ್ರಂಥ ಭಂಡಾರದಲ್ಲಿರುವ ಪ್ರಾಚೀನ ಗ್ರಂಥಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿ ತಮ್ಮ ಜ್ಞಾನಭಂಡಾರವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವರಿಗೆ ಅವಕಾಶ ದೊರಯಿತು. ಮುಂದೆ ಅವರು ಸಮ್ಮೇಳನಗಳಲ್ಲಿ, ಮದರಾಸು ಮತ್ತು ಅಣ್ಣಾಮಲೈ ವಿಶ್ವವಿದ್ಯಾನಿಲಯಗಳಲ್ಲಿ ಪ್ರಸಾರ ಭಾಷಣ ಮಾಡಿದಾಗ ಆಧಿಕಾರ ವಾಣಿಯಿಂದ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿ ಮಾತನಾಡಲು ಬಹಳ ಸಹಾಯವಾಯಿತು.

ಅವರು ತಂಜಾವೂರಿನಲ್ಲಿದ್ದಾಗಲೇ ಮೃದಂಗ ವಿದ್ವಾನ್ ನಾರಾಯಣಸಾಮಪ್ಪನವರಲ್ಲಿ ಮೃದಂಗ ನುಡಿಸುವುದನ್ನು ಕಲಿತರು. ಈ ಸದವಕಾಶದಿಂದ ಅವರು ರಚಿಸಿರುವ ವರ್ಣ, ದರು ಮತ್ತು ತಿಲ್ಲಾನಗಳು ಉನ್ನತ ಮಟ್ಟದ್ದಾಗಲು ಸಾಧ್ಯವಾಯಿತು. ಇದೇ ಕಾಲದಲ್ಲಿಯೇ ಭಾಗವತರ ಬಂಧುಗಳಾದ, ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ಸಂಗೀತ ಕಲಾನಿಧಿ ಟಿ. ಎಲ್. ವೆಂಕಟರಾಮಯ್ಯನವರು, ಸಾಂಗವಾಗಿ ಸಂಗೀತವನ್ನು ಭಾಗವತರಲ್ಲಿ ಕಲಿತು ಅವರ ಶಿಷ್ಯರಾಗಿದ್ದರು. ಮುಂದೆ ಅವರು ಉಭಯ ವಿದ್ಯಾಪಾರಂಗತರಾಗಿ, ಮದರಾಸು ಮ್ಯೂಜಿಕ್ ಅಕಾಡೆಮಿಯ ಸ್ಥಾಪಕರೂ ಸಮ್ಮೇಳನದ ಅಧ್ಯಕ್ಷರೂ ಮತ್ತು ಅಕಾಡೆಮಿಯ ಅಧ್ಯಕ್ಷರೂ ಆಗಿ ಬಹುಮುಖವಾಗಿ ಸೇವೆ ಸಲ್ಲಿಸಿದವರು. ಸಂಗೀತದಲ್ಲಿ, ಅದರಲ್ಲೂ ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳನ್ನು ವಿಶೇಷವಾಗಿ ಆಭ್ಯಾಸ ಮಾಡಿ ಅವುಗಳನ್ನು ಬೆಳಕಿಗ ತರಲು ಕಾರಣರಾದವರು.

ಹೊರನಾಡಿನಲ್ಲಿ

ನಮ್ಮ ನಾಡಲ್ಲದೆ, ಹೊರ ನಾಡುಗಳಾದ ಬರ್ಮಾ ಮತ್ತು ಸಿಂಹಳ (ಈಗಿನ ಶ್ರೀಲಂಕಾ) ದೇಶಗಳಲ್ಲಿಯೂ ಭಾಗವತರು ಪ್ರವಾಸ ಮಾಡಿದರು. ಇದಕ್ಕೆ ಕಾರಣ ತಮಿಳು ನಾಡಿನಿಂದ ಹೋಗಿ ಅಲ್ಲಿ ನೆಲೆಸಿದ್ದ ಚೆಟ್ಟಿಯಾರು ಪಂಗಡದವರು. ಅವರು ವಾಣಿಜ್ಯದಲ್ಲಿ ಬಹಳ ಮುಂದಾಗಿ ಅಪಾರ ಐಶ್ವರ್ಯ ಸಂಪಾದಿಸಿದವರು. ಹಾಗೂ ಕಲಾಪ್ರೇಮಿಗಳೂ ಹೌದು. ಇದರಿಂದಾಗಿ ತಮ್ಮಲ್ಲಿಗೆ ಬಂದು ಕಥಾಕಲಾಕ್ಷೇಪವನ್ನು, ಅದರಲ್ಲೂ ಸಂಪೂರ್ಣ ರಾಮಾಯಣವನ್ನು ಮಾಡಿಸಿ ಕೇಳುವ ಉದ್ದೇಶದಿಂದ ಭಾಗವತರನ್ನು ಆಹ್ವಾನಿಸಿದರು. ಒಪ್ಪಿಹೋದ ಭಾಗವತರು ಸೀತಾಕಲ್ಯಾಣ, ಪಾದುಕಾ ಪಟ್ಟಾಭಿಷೇಕ, ಸುಗ್ರೀವ ಸಖ್ಯ, ಅಂಗುಳಿ ಪ್ರದಾನ, ವಿಭೀಷಣ ಶರಣಾಗತಿ, ಸತಿ ಸುಲೋಚನ ಮತ್ತು ರಾಮಪಟ್ಟಾಭಿಷೇಕ ಇವೇ ಮೊದಲಾದ ಘಟ್ಟಗಳಲ್ಲಿ ಮಾಡಿ, ಪ್ರತಿ ಸಂದರ್ಭದಲ್ಲೂ ಒಪ್ಪುವ ವಿಶೇಷ ಸನ್ಮಾನಗಳನ್ನು ಪಡೆದು ಅಪಾರ ಕೀರ್ತಿ ಮತ್ತು ಸಂಪತ್ತಿನಿಂದ ಸ್ವದೇಶಕ್ಕೆ ಹಿಂದಿರುಗಿ ಮದರಾಸಿನಲ್ಲಿ ಬಂದು ನೆಲೆಸಿದರು.

ಮೈಸೂರಿಗೆ ಆಗಮನ

ಮರೆಯಲಾಗದ ಕರ್ನಾಟಕ ರಾಜ್ಯದ ವೈಭವವನ್ನು ದಕ್ಷಿಣ ಭಾರತದಲ್ಲಿ ಮುಂದುವರೆಸಿಕೊಂಡು ಬಂದ ರಾಜ್ಯವೆಂದರೆ ಮೈಸೂರು ಸಂಸ್ಥಾನ. ಅದನ್ನು ಆಗ ಆಳುತ್ತಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು. ಅವರು ದಕ್ಷ ಆಡಳಿತಗಾರರಲ್ಲದೆ ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳಿಗೆ ಪೋಷಕರಾಗಿದ್ದವರು. ಅವರ ಕಾಲದಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ಅವರ ವರ್ಧಂತ್ಯುತ್ಸವ ಮತ್ತು ನಾಡಹಬ್ಬವಾದ ದಸರಾ ಮಹೋತ್ಸವವು ಲೋಕವಿಖ್ಯಾತವಾದದ್ದು. ಆ ಸಂದರ್ಭಗಳಲ್ಲಿ ಸ್ಥಳ ಮತ್ತು ಪರಸ್ಥಳದ ವಿದ್ವಾಂಸರು ಬಂದು ಮಹಾರಾಜರ ಮುಂದೆ ತಮ್ಮ ವಿದ್ವತ್ ಪ್ರದರ್ಶನ ಮಾಡಿದಾಗ ಅವರು ಯೋಗ್ಯತೆಗೆ ತಕ್ಕಂತೆ ಸನ್ಮಾನಿತರಾದ್ದುದು ನಡೆದು ಬಂದ ಪದ್ಧತಿ.

ಭಾಗವತರು ೧೯೨೭ರ ದಸರಾ ಹಬ್ಬದ ಸಮಯದಲ್ಲಿ ಪರಿವಾರ ಸಮೇತರಾಗಿ ಬಂದು ಮೈಸೂರು ಸೇರಿದರು. ಆಗ ಅವರಿಗೆ ೫೦ ವರ್ಷ ವಯಸ್ಸು. ಭಾಗವತರು ಮೈಸೂರಿಗೆ ಬರುವುದಕ್ಕೆ ಮುಂಚಿನಿಂದಲೂ ಅವರು ರಚಿಸಿದ್ದ ಕೆಲವು ಕೀರ್ತನೆಗಳು ಇಲ್ಲೂ ಪ್ರಚಾರದಲ್ಲಿದ್ದವು. ಮಹಾರಾಜರ ಸಮ್ಮುಖದಲ್ಲಿ ಭಾಗವತರ ಮೂರು ಕಛೇರಿಗಳು ನಡೆದವು. ಆದರೆ ಅವರು ಪಡೆದ ಸನ್ಮಾನದಿಂದ ಭಾಗವತರ ಮನಸ್ಸಿಗೆ ತೃಪ್ತಿಯಾಗಲಿಲ್ಲ.

ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ

ಭಾಗವತರು ಅತೃಪ್ತಿಯಿಂದ ಹಿಂದಿರುಗುವುದರಲ್ಲಿದ್ದರು. ದೇವಿ ಕೃಪೆಯೋ ಎಂಬಂತೆ ಅವರು ದೇವಿ ಉಪಾಸಕರಾಗಿ, ಚಾಮುಂಡೇಶ್ವರಿ ದರ್ಶನ ಮಾಡದೆ ಹಿಂದಿರುಗುವುದು ಅಪಚಾರವಾಗಬಹುದೆಂದು ಭಾವಿಸಿ, ಶುಕ್ರವಾರ ಬೆಳಿಗ್ಗೆ ಬೆಟ್ಟವನ್ನು ಹತ್ತಿದರು. ದೇವಿಯ ಅರ್ಚನೆ ಮಾಡಿಸಿ, ದೇವಿಯ ಮುಂದೆ ಹಾಡಲು ಪ್ರಾರಂಭಿಸಿದರು. ತಾವು ಚೌಲಿ ರಾಗದಲ್ಲಿ ರಚಿಸಿದ್ದ ’ತಪ್ಪುಲನ್ನಿಯು ತಾಳುಕೊಮ್ಮು ಚಾಮುಂಡೇಶ್ವರಿ ನಾದು’ ಎಂಬ ಕೃತಿಯನ್ನು ಹಾಡುತ್ತಿದ್ದಾಗ, ಚಾಮುಂಡೇಶ್ವರಿಯ ದರ್ಶನ ಮಾಡಲು ಮಹಾರಾಜರಾದ ಕೃಷ್ಣರಾಜ ಒಡೆಯರು ಅನಿರೀಕ್ಷಿತವಾಗಿ ಅಲ್ಲಿಗೆ ಬಂದರು. ಭಕ್ತಿ ತುಳುಕುತ್ತಿದ್ದ ಮತ್ತು ಪ್ರವಾಹರೂಪವಾದ ಹಾಡನ್ನು ಕೇಳಿ ಅಲ್ಲಿಯೇ ನಿಂತರು. ಸಂಗೀತ ಮುಗಿದ ಮೇಲೆ ಅರಮನೆಗೆ ಹಿಂದಿರುಗಿದರು. ತಮ್ಮಲ್ಲಿಗೆ ಪುನಃ ಭಾಗವತರನ್ನು ಬರಮಾಡಿಕೊಂಡು ಕಛೇರಿಗಳನ್ನು ಮಾಡಿಸಿ ಕೇಳಿ ಸಂತೋಷಿಸಿ, ಉತ್ತಮವಾದ ಖಿಲ್ಲತ್, ವಜ್ರದ ಉಂಗುರ ಮತ್ತು ಸಂಭಾವನೆಯನ್ನು ಕೊಟ್ಟು ಮೈಸೂರು ಆಸ್ಥಾನ ವಿದ್ವಾಂಸರಾಗಿ ನೇಮಿಸಿದರು. ಈ ಸವಿನೆನಪಿಗಾಗಿ ಭಾಗವತರು ತೋಡಿ ರಾಗದಲ್ಲಿ ಮಹಾರಾಜರ ಮೇಲೆ ಅಟ್ಟತಾಳವರ್ಣವನ್ನು ರಚಿಸಿ ಸಮರ್ಪಿಸಲು ಭೇಟಿಗಾಗಿ ಪ್ರಾರ್ಥಿಸಿದರು. ಭೇಟಿಯಾದಾಗ ಭಾಗವತರು ವರ್ಣದ ರಚನೆಯಲ್ಲಿನ ಚಮತ್ಕಾರವಾದ ಭಾವ ನಿರೂಪಣೆಯನ್ನು ವಿವರಿಸಿ ಹೇಳಿದಾಗ ಮಹಾರಾಜರು ಕೇಳಿ ಸಂತೋಷಿಸಿದರು. ಅನಂತರ ಹೀಗೆ ಸಂಭಾಷಣೆ ನಡೆಯಿತು.

ಮಹಾರಾಜರು: ನೀವು ರಚನಕಾರರಲ್ಲವೇ ?

ಭಾಗವತರು: ತಕ್ಕಮಟ್ಟಿಗೆ ಪರಿಶ್ರಮ ಹೊಂದಿರುತ್ತೇನೆ.

ಮಹಾರಾಜರು: ಇಲ್ಲಿಯವರೆಗೂ ಎಷ್ಟು ರಚನೆ ರಚಿಸಿರುತ್ತೀರಿ ?

ಭಾಗವತರು: ಆದಿತಾಳ ಮತ್ತು ಅಟ್ಟತಾಳವರ್ಣಗಳು, ವಿವಿಧ ರಾಗಗಳಲ್ಲಿ ಕೀರ್ತನೆಗಳು, ತಿಲ್ಲಾನಗಳು ಇವೇ ಮೊದಲಾಗಿ ನೂರಾರು ರಚಿಸಿರುತ್ತೇನೆ.

ಮಹಾರಾಜರು: ನೀವು ಕೀರ್ತನೆಗಳನ್ನೂ ರಚಿಸುವವರಾದ್ದರಿಂದ ನಮ್ಮ ಕುಲದೇವತೆಯಾದ ಶ್ರೀ ಚಾಮುಂಡೇಶ್ವರಿ ಅಷ್ಟೋತ್ತರ ಶತನಾಮಾವಳಿಗೆ ಸರಿಹೊಂದುವ ಕೀರ್ತನೆಗಳನ್ನು ರಚಿಸಬಹುದಲ್ಲ ?

ಭಾಗವತರು: ಪ್ರಭುಗಳ ಚಿತ್ತದಂತೆ, ಶಕ್ತ್ಯಾನುಸಾರ ರಚಿಸಿ ಸಮರ್ಪಿಸಲು ಪ್ರಯತ್ನಿಸುತ್ತೇನೆ. ಭಾಗವತರು ಪ್ರಭುಗಳ ಅಪ್ಪಣೆ ಪಡೆದು ಹಿಂದಿರುಗಿದರು.

ಕೀರ್ತನೆಗಳ ರಚನೆ

ಇದಾದ ಕೆಲವೇ ತಿಂಗಳುಗಳಲ್ಲಿ ಭಾಗವತರಿಗಿದ್ದ ಏಕಮಾತ್ರ ಪುತ್ರಿಯು ಮೈಸೂರಿನಲ್ಲಿ ಸಿಡುಬಿನ ರೋಗದಲ್ಲಿ ತೀರಿಕೊಂಡಳು. ಇದರಿಂದ ಅವರಿಗೂ ಮತ್ತು ಅವರ ಕುಟುಂಬ ವರ್ಗದವರಿಗೂ ಸಹಿಸಲಾರದ ದುಃಖ ಪ್ರಾಪ್ತಿಯಾಯಿತು. ಈ ಕ್ಲೇಶವನ್ನು ಮರೆಯಲು ಕುಟುಂಬ ಸಮೇತ ಉತ್ತರದೇಶ ಯಾತ್ರೆಯನ್ನು ಕೈಗೊಂಡು ಕಾಶಿಯಲ್ಲಿಯೇ ಹೆಚ್ಚು ಕಾಲವಿದ್ದರು. ಅಲ್ಲಿರುವಾಗ ಅವರು ಕೇಳಿದ ಉತ್ತಮ ಮಟ್ಟದ ಉತ್ತರಾದಿ ಸಂಗೀತದ ಅನೇಕ ಹೊಸ ರಾಗಗಳನ್ನು ತಾವೂ ಕಲಿತರು. ತಾವು ಕಲಿತ ಉತ್ತರಾದಿ ರಾಗಗಳಲ್ಲಿ ತಾವೇ ಹೊಸ ಕೀರ್ತನೆಗಳನ್ನು ರಚಿಸಿದರು. ಹಾಗೆ ಅವರು ಪ್ರಚುರಪಡಿಸಿದ ರಾಗಗಳಲ್ಲಿ ಹಂಸಾನಂದಿ, ಮೋಹನ ಕಲ್ಯಾಣಿ ಮತ್ತು ಗೌಡಮಲ್ಲಾರ್ ಇವು ಮುಖ್ಯವಾದವು. ಅವರು ರಚಿಸಿರುವ ಹಂಸಾನಂದಿ ರಾಗ ಮತ್ತು ಅದರ ಕೀರ್ತನೆ ಹೆಚ್ಚು ಪ್ರಚಾರದಲ್ಲಿದೆ.

೧೯೨೮ರ ದಸರಾ ಹಬ್ಬದ ವೇಳೆ ಭಾಗವತರು ಮೈಸೂರಿಗೆ ಹಿಂದಿರುಗಿದರು. ಮಹಾರಾಜರು ಭಾಗವತರ ವಾಸಕ್ಕಾಗಿ ಅರಮನೆಗೆ ಸೇರಿದ್ದ ಮನೆಯನ್ನು ಉಚಿತವಾಗಿ ಕೊಟ್ಟಿದ್ದರು. ಅದೇ ವರ್ಷ ದಸರಾ ದರ್ಬಾರಿನಲ್ಲಿ ಭಾಗವತರಿಗೆ ’ಗಾಯಕ ಶಿಖಾಮಣಿ’ ಎಂಬ ಬಿರುದನ್ನೂ ಉಚಿತ ಖಿಲ್ಲತ್ತು ಮತ್ತು ಕೈಗೆ ತೋಡಾಗಳನ್ನು ಕೊಟ್ಟು ಸನ್ಮಾನಿಸಿದರು. ಭಾಗವತರು ತಪ್ಪದೇ ಪ್ರತಿ ಶುಕ್ರವಾರವೂ ದೇವಿಯ ಸನ್ನಿಧಿಗೆ ಹೋಗಿ ಅರ್ಚಿಸಿ ಹಾಡಿ ಬರುವುದು ವಾಡಿಕೆಯಾಯಿತು.

ಮೈಸೂರಿನಲ್ಲಿ ಭಾಗವತರಿಗೆ ಎಲ್ಲ ವಿಧವಾದ ಸಹಕಾರವನ್ನು ಕೊಟ್ಟು ಬಹು ಆತ್ಮೀಯವಾದ ಸ್ನೇಹದಿಂದಿದ್ದವರೆಂದರೆ ದಿವಂಗತ ಆಸ್ಥಾನ ಸಂಗೀತ ವಿದ್ವಾನ್ ಬೆಳಕವಾಡಿ ಶ್ರೀನಿವಾಸೈಯ್ಯಂಗಾರ್ಯರು. ಮುತ್ತಯ್ಯ ಭಾಗವತರು ತಾವು ರಚಿಸಬೇಕೆಂದಿದ್ದ ಚಾಮುಂಡೇಶ್ವರಿ ಕೀರ್ತನೆಗಳು ಕನ್ನಡ ಭಾಷೆಯಲ್ಲಿಯೇ ಇರಬೇಕೆಂದು ಸಂಕಲ್ಪಿಸಿದರು. ಈ ಕಾರಣದಿಂದಾಗಿ ಶ್ರೀನಿವಾಸೈಯ್ಯಂಗಾರ್ಯರ ಮೂಲಕ ಭಾಗವತರಿಗೆ ವಿದ್ವಾನ್ ದೇವೋತ್ತಮ ಜೋಯಿಸರೆಂಬ ಪಂಡಿತರ ಪರಿಚಯವಾಯಿತು. ಭಾಗವತರ ಕೋರಿಕೆಯಂತೆ ದೇವೋತ್ತಮ ಜೋಯಿಸರು ಕನ್ನಡದಲ್ಲಿ ಅಷ್ಟೋತ್ತರ ನಾಮಗಳಿಗೆ ಸರಿಹೊಂದುವ ಕೀರ್ತನೆಗಳು ಮತ್ತು ಇತರ ಪ್ರಾರ್ಥನಾ ಕೀರ್ತನೆಗಳೂ ಸೇರಿ ೧೧೪ ಕೀರ್ತನೆಗಳಿಗೆ ಸಾಹಿತ್ಯವನ್ನು ರಚಿಸಿಕೊಟ್ಟರು. ಈ ಕೀರ್ತನೆಗಳ ಸಂಗೀತ ರಚನೆಗೆ ರೂಢಿಯಲ್ಲಿರುವ ರಾಗಗಳಲ್ಲದೆ, ಪ್ರಾಚೀನ ರಾಗಗಳು ಮತ್ತು ಯಾರೂ ರಚಿಸದೇ ಇರುವ ಹರಿನಾರಾಯಣಿ, ವೀಣಾಧರಿ, ವಿಜಯನಾಗರಿ, ಊರ್ಮಿಕಾ, ಇವೇ ಮೊದಲಾದ ರಾಗಗಳಲ್ಲಿ ಮತ್ತು ವಿವಿಧ ತಾಳಗಳನ್ನು ಬಳಸಿತ್ತು. ಈ ಕಾರ್ಯವನ್ನು ಭಾಗವತರು ೧೯೩೨ರ ವೇಳೆಗೆ ಮುಗಿಸಿದರು. ಈ ಕೀರ್ತನೆಗಳ ಪೈಕಿ ಮೊದಲನೆ ಕೀರ್ತನೆಯಾದ ಕಲ್ಯಾಣಿ ರಾಗದ ’ಸಂಪತ್ಪ್ರದೆ’ ಎಂಬ ಕೃತಿಗೆ ರಚಿಸಿರುವ ಚಿಟ್ಟಸ್ವರದಲ್ಲಿ ಅನುಲೋಮ, ವಿಲೋಮ ಪದ್ಧತಿಯಂತೆ ಹಾಡಿದರೆ- ವಿಕಟಕವಿ ಎಂಬಂತೆ- ಚಮತ್ಕಾರಯುತವಾದ ರಚನಾಕ್ರಮವನ್ನು ನಾವು ಕಾಣಬಹುದು. ಇದು ಅವರ ರಚನೆಯ ವೈಶಿಷ್ಟ್ಯ.

ಈ ಕೀರ್ತನೆಗಳ ರಚನಾಕಾಲದಲ್ಲಿ ಭಾಗವತರು ತಮ್ಮಲ್ಲಿಗೆ ಬರುತ್ತಿದ್ದ ವಿದ್ವಾಂಸರುಗಳ ಮುಂದೆ ಅವುಗಳನ್ನು ಹಾಡಿ ತೋರಿಸುತ್ತಿದ್ದರು. ಅವರುಗಳಿಂದ ಏನಾದರೂ ಟೀಕೆ ಮತ್ತು ಸಲಹೆಗಳು ಬಂದಲ್ಲಿ ಆದರದಿಂದ ಸ್ವೀಕರಿಸಿ, ಉಚಿತವಾದೆಡೆಯಲ್ಲಿ ಮಾರ್ಪಾಡು ಮಾಡುವಷ್ಟು ಉದಾರತೆಯನ್ನು ಭಾಗವತರು ಹೊಂದಿದ್ದರು. ರಚಿಸಿದ ಎಲ್ಲಾ ಕೀರ್ತನೆಗಳನ್ನು ಕನ್ನಡದಲ್ಲಿ ಸಂಗೀತದ ಲಿಪಿಯಲ್ಲಿ ಶ್ರೀನಿವಾಸೈಯ್ಯಂಗಾರ್ಯರೇ ಬರೆದುಕೊಟ್ಟರು. ಅದನ್ನು ಭಾಗವತರು ತಮ್ಮ ಕಾಣಿಕೆಯಾಗಿ ಪ್ರಭುಗಳಲ್ಲಿ ಸಮರ್ಪಿಸಿದರು.

ರಚನೆಯಾದ ಎಲ್ಲಾ ಕೀರ್ತನೆಗಳನ್ನು ಭಾಗವತರಿಂದ ಹಾಡಿಸಿ ಪ್ರಭುಗಳು ಕೇಳಿ ಸಂತೋಷಿಸಿದರು. ಎಲ್ಲಾ ಸಂದರ್ಭದಲ್ಲಿಯೂ ಅವರಿಗೆ ಸಹಾಯಕರಾಗಿ ಶ್ರೀನಿವಾಸೈಯ್ಯಂಗಾರ್ಯರು ಪಿಟೀಲು ನುಡಿಸುತ್ತಿದ್ದರು. ಕೊನೆಯ ದಿವಸ ಮಂಗಳವನ್ನು ಹಾಡಿ ಮುಗಿಸಿದಾಗ ಪ್ರಭುಗಳು ಹಾಕಿದ ಮುತ್ತಿನ ಕಂಠಾಭರಣದಿಂದ ಕೂಡಿದ ಹಾರವನ್ನು, ರತ್ನ ಖಚಿತವಾದ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಉಚಿತ ಖಿಲ್ಲತ್ತು ಮತ್ತು ಸಂಭಾವನೆಯನ್ನು ಕೊಟ್ಟು ಗೌರವಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಭಾಗವತರ ಕಲಾಸೇವೆ

ಮೊದಲಿಂದಲೂ ಭಾಗವತರಿಗೆ ಕಲೆಯ ಅಭಿವೃದ್ಧಿಯಲ್ಲಿ ತುಂಬಾ ಆಸಕ್ತಿ. ೧೯೨೮ ರಲ್ಲಿ ಮದರಾಸಿನಲ್ಲಿ ಸ್ಥಾಪಿತವಾದ ಮ್ಯೂಸಿಕ್ ಅಕಾಡೆಮಿಯ ಸ್ಥಾಪಕರಲ್ಲಿ ಇವರೂ ಮುಖ್ಯರಾದವರು. ತಜ್ಞರ ಸಭೆಯ ಚರ್ಚೆಯಲ್ಲಿ ತಪ್ಪದೇ ಪಾತ್ರವಹಿಸಿ ತಮ್ಮ ಅಮೋಘವಾದ ಅನುಭವ, ನಿರ್ದಿಷ್ಟವಾದ ಅಭಿಪ್ರಾಯವನ್ನು ಕೊಟ್ಟು ಎಲ್ಲಾ ಹಿರಿಯ ಮತ್ತು ಕಿರಿಯ ವಿದ್ವಾಂಸರುಗಳ ಆದರಕ್ಕೆ ಪಾತ್ರರಾಗಿದ್ದರು. ಅವರ ಶಕ್ತಿ, ಸಾಮರ್ಥ್ಯವನ್ನು ಅರಿತ ಅಕಾಡೆಮಿಯು ತನ್ನ ೧೯೩೦ರ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿತು. ಅವರು ಅಧ್ಯಕ್ಷರಾಗಿ ತಮ್ಮ ಭಾಷಣದಲ್ಲಿ ಸೂಚಿಸಿದ ಶ್ರುತಿಗಳ ವಿಷಯ ಮತ್ತು ಗೋಷ್ಠಿಗಾನಕ್ಕಾಗಿ ಕೊಟ್ಟ ಸಲಹೆಗಳು ಬಹಳ ಮುಖ್ಯವಾದವು. ಅವರ ಸೇವೆಗಾಗಿ ಅಕಾಡೆಮಿಯು ಅವರಿಗೆ ’ಸಂಗೀತ ಕಲಾನಿಧಿ’ ಎಂಬ ಬಿರುದನ್ನು ಕೊಟ್ಟು ಗೌರವಿಸಿತು.

೧೯೩೨ರಲ್ಲಿ ಮ್ಯೂಸಿಕ್ ಅಕಾಡೆಮಿಯು ತಾನು ನಡೆಸುತ್ತಿದ್ದ, ಸಂಗೀತ ಶಿಕ್ಷಣ ಕೇಂದ್ರಕ್ಕೆ ಮುಖ್ಯೋಪಾಧ್ಯಾಯರಾಗಿ ಭಾಗವತರನ್ನು ನೇಮಿಸಿಕೊಂಡಿತು. ನಾಲ್ಕು ವರ್ಷಗಳ ಕಾಲ ಆ ಸ್ಥಾನದಲ್ಲಿ ಅಧ್ಯಾಪಕರಾಗಿ ಅಪಾರ ಸೇವೆ ಸಲ್ಲಿಸಿದರು.

ಗುರುವಾಗಿ

ಪಾಠವನ್ನು ಹೇಳಿಕೊಟ್ಟು ಉನ್ನತ ಆದರ್ಶಗಳನ್ನು ತೋರಿಸಿಕೊಟ್ಟಿರುವುದರಲ್ಲಿ ಭಾಗವತರ ಪಾತ್ರವು ಅತಿ ಶ್ರೇಷ್ಠವಾದುದು. ಪ್ರಾಚೀನ ರಾಗಾಲಾಪನ ಪದ್ಧತಿಯನ್ನು ವಿವರಿಸುವಾಗ, ಹಿಂದಿನವರು ಕಛೇರಿಯ ಒಟ್ಟು ಕಾಲದಲ್ಲಿ ಅರ್ಧ ಭಾಗದಷ್ಟು ಕಾಲವನ್ನು ರಾಗಾಲಾಪನೆ, ತಾನ ಮತ್ತು ಪಲ್ಲವಿ, ಅದರ ಅನುಲೋಮ, ವಿಲೋಮ ಪದ್ಧತಿ, ಸಾಹಿತ್ಯ ವಿನ್ಯಾಸ ಅಂದರೆ ನೆರವಲ್ ಮತ್ತು ಸ್ವರ ಕಲ್ಪನೆಗಳಿಗಾಗಿಯೇ ಉಪಯೋಗಿಸುತ್ತಿದ್ದ ರೆಂದು ಹೇಳಿದಾಗ ತುಂಬಾ ಸೋಜಿಗವಾಗಿ ಕಂಡಿತು. ತಾವು ಹೇಳಿದಂತೆ ಕಲ್ಯಾಣಿ ರಾಗವನ್ನು ಪ್ರಾರಂಭಿಸಿ ವಿವಿಧ ಘಟ್ಟಗಳಲ್ಲಿ ಹಾಡಿ, ಘನ ರಾಗಗಳಲ್ಲಿ ತಾನವನ್ನೂ ಹಾಡಿ ತೋರಿಸಿದರು. ಪಲ್ಲವಿಯನ್ನು ವಿಮರ್ಶಾತ್ಮಕವಾಗಿ ಹಾಡಿ ಅವರು ಮುಗಿಸಿದಾಗ ವಿದ್ಯಾರ್ಥಿಗಳಿಗೆ ಅವರ ಅಪಾರ ಪಾಂಡಿತ್ಯದ ಪರಿಚಯವಾಯಿತು. ಮತ್ತೊಂದು ದಿನ, ಕೇತಾರಗೌಳ ರಾಗವನ್ನು ಅಷ್ಟೇ ಪ್ರಮಾಣದಲ್ಲಿ ಹಾಡಿದುದನ್ನು ಕೇಳಿದವರು ಯಾರೂ ಮರೆಯಲು ಸಾಧ್ಯವಿಲ್ಲ.

ಸಂಗೀತ ಶಾಸ್ತ್ರದ ವಿಷಯವಾಗಿ ಬೋಧಿಸುವಾಗ ದರುವಿನ ರಚನೆ, ಅದರ ಲಕ್ಷಣಗಳನ್ನು ವಿವರಿಸಿದರು. ಇತರ ರಚನೆಗಳಿಗಿಂತಲೂ ಇದು ಭಿನ್ನವಾಗಿ ಹೆಚ್ಚು ರೂಢಿಯಲ್ಲಿರಲಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಿಸುವುದಕ್ಕಾಗಿಯೇ ಶಹನಾ ರಾಗದಲ್ಲಿ ದರುವನ್ನು ರಚಿಸಿ ಬೋಧಿಸಿದರು. ಮುಂದೆ ಕಮಾಚು, ವಸಂತ ಮತ್ತು ಕಾಪಿ ರಾಗಗಳಲ್ಲಿ, ವಿವಿಧ ಕ್ರಮದಲ್ಲಿ, ದರುವನ್ನು ರಚಿಸಿ ಸಂಗೀತ ಪ್ರಪಂಚಕ್ಕೆ ಉನ್ನತಸೇವೆ ಸಲ್ಲಿಸಿರುತ್ತಾರೆ.

ಇತರ ಸಾಧನೆಗಳು

ಶ್ರೀ ಚಾಮುಂಡೇಶ್ವರಿ ಅಷ್ಟೋತ್ತರ ಕೀರ್ತನೆಗಳಂತೆ ಶಿವಾಷ್ಟೋತ್ತರ ಕೃತಿಗಳನ್ನು ರಚಿಸಲು ಸಂಕಲ್ಪಿಸಿ ಭಾಗವತರು ಎರಡು ವರ್ಷಗಳು ಶ್ರಮಪಟ್ಟು ೧೯೩೫ರ ಸಮಯಕ್ಕೆ ಮಾಡಿ ಮುಗಿಸಿದರು. ಅದರ ಮಂಗಳವಾಗಿ ಮೈಸೂರು ಬಳಿ ಇರುವ ನಂಜನಗೂಡು ಕ್ಷೇತ್ರಕ್ಕೆ ಇಷ್ಟ ಮಿತ್ರರೊಡನೆ ಹೋಗಿ ಸ್ವಾಮಿಗೆ ಅರ್ಚನೆಯನ್ನು ಸಲ್ಲಿಸಿ, ಕೆಲವು ಕೀರ್ತನೆಗಳನ್ನು ದೇವರ ಸನ್ನಿಧಿಯಲ್ಲಿ ಹಾಡಿ ಸಮರ್ಪಿಸಿದರು. ಸ್ಥಳದವರಿಗೂ ಇಷ್ಟವರ್ಗದವರಿಗೂ ಸಂತರ್ಪಣೆಯನ್ನು ಮಾಡಿ ಘೋಷದೊಂದಿಗೆ ಮಂಗಳವನ್ನು ಮಾಡಿ ಮುಗಿಸಿದರು. ಈ ರಚನೆಯಲ್ಲದೆ, ನವಗ್ರಹ ಕೀರ್ತನಗಳು ಮತ್ತು ನವಾವರಣ ರಾಗಮಾಲಿಕೆಯನ್ನು ಸಹಾ ರಚಿಸಿರುತ್ತಾರೆ.

ಮೈಸೂರಿಗೆ ಭಾಗವತರು ಬರುವುದಕ್ಕೆ ಮುಂಚೆ ತ್ಯಾಗರಾಜರ ಆರಾಧನಾ ಮಹೋತ್ಸವವು ಹೆಚ್ಚಾಗಿ ಆಚರಣೆಯಲ್ಲಿರಲಿಲ್ಲ. ಈ ಕಾರಣದಿಂದಾಗಿ ಆಸ್ಥಾನ ವಿದ್ವಾಂಸರಿಂದಲೇ ಕೂಡಿದ ’ತ್ಯಾಗರಾಜ ಸಂಗೀತ ವಿದ್ವತ್ಸಭೆ’ ಪ್ರಾರಂಭ ಮಾಡಿ ವಿದ್ವಾಂಸರ ಕಛೇರಿಯನ್ನು ಏರ್ಪಡಿಸಿ ಅದಕ್ಕೆ ಹಣವನ್ನು ಸಂಗ್ರಹಿಸಿದರು. ಈ ಸಭೆಯು ಈಗಲೂ ಈ ಉತ್ಸವವನ್ನು ತಪ್ಪದೇ ಆಚರಿಸುತ್ತಾ ಬಂದಿದೆ.

ಗೋಟುವಾದ್ಯವನ್ನು ನುಡಿಸುವುದರಲ್ಲಿ ಸಹ ಭಾಗವತರು ಸಿದ್ಧಹಸರಾಗಿದ್ದರು. ಅವರು ಮಾಡುತ್ತಿದ್ದ ಕಥಾಕಾಲಕ್ಷೇಪದ ಅಂತ್ಯದಲ್ಲಿ ಈ ವಾದ್ಯವನ್ನು ನುಡಿಸಿ ಸಭಿಕರನ್ನು ಸಂತೋಷಪಡಿಸುತ್ತಿದ್ದರು. ಮೈಸೂರು ದೇಶದ ಜನ ಈ ವಾದ್ಯವನ್ನು ಕೇಳರಿಯರು. ಭಾಗವತರು ಮೈಸೂರಿಗೆ ಬಂದನಂತರ, ಅರಮನೆಯ ವಾದ್ಯಗೋಷ್ಠಿಯಲ್ಲಿ ಎಲ್ಲಾ ವಾದ್ಯಗಳಿದ್ದರೂ ಈ ವಾದ್ಯವಿಲ್ಲದಿರುವುದನ್ನು ಗಮನಿಸಿ ಅದರ ಪ್ರಚಾರಕ್ಕಾಗಿ ಒಂದು ಸ್ಪರ್ಧೆಯನ್ನು ಏರ್ಪಡಿಸಿದರು. ಈ ವಾದ್ಯವನ್ನು ನಮ್ಮ ನಾಡಿನಲ್ಲಿ ಅಭ್ಯಾಸಮಾಡಿ ಅನೇಕರು ಹೆಸರಾದವರಿರುತ್ತಾರೆ. ಇದರ ಪ್ರಚಾರ ಭಾಗವತರ ಕಾಣಿಕೆ.

ತಿರುವಾಂಕೂರಿನಲ್ಲಿ

ವಾಗ್ಗೇಯಕಾರರಾಗಿ ಹೆಸರಾದ ಮುತ್ತಯ್ಯ ಭಾಗವತರನ್ನು ತಿರುವಾಂಕೂರು ಮಹಾರಾಜರು ಮತ್ತು ಅವರ ತಾಯಿ ಸೇತು ಪಾರ್ವತಿಬಾಯಿಯವರು ತಮ್ಮಲ್ಲಿಗೆ ೧೯೩೬ರಲ್ಲಿ ಬರಮಾಡಿಕೊಂಡರು. ಸ್ವಾತಿ ತಿರುನಾಳ್ ಮಹಾರಾಜರು ತ್ಯಾಗರಾಜರ ಸಮಕಾಲೀನರು ಸಹ. ಅವರ ರಚನೆಗಳು ಬಹಳ ಉತ್ತಮವಾಗಿದ್ದು ವಿವಧ ಭಾಷೆಗಳಲ್ಲಿ ರಚಿಸಲ್ಪಟ್ಟವು. ಸಂಗೀತದ ವಿವಿಧ ರೂಪಗಳಾದ ವರ್ಣ, ಕೀರ್ತನೆ ಪದ, ರಾಗಮಾಲಿಕೆ ಮುಂತಾದ ಭಾಗಗಳಲ್ಲಿ ರಚಿಸಲ್ಪಟ್ಟು ಒಂದು ಕಾಲದಲ್ಲಿ ಹೆಚ್ಚು ಪ್ರಚಾರದಲ್ಲಿತ್ತು. ಕಾಲಕ್ರಮದಲ್ಲಿ ಪ್ರಚಾರ ಕಡಿಮೆಯಾಗಿ ಎಷ್ಟೋ ರಚನೆಗಳ ವರ್ಣಮಟ್ಟು ಸಹ ಮರೆಯುವಂತಾಯಿತು. ಇದಕೆ ಮುಖ್ಯ ಕಾರಣವೆಂದರೆ ರಚನೆಗಳು ಅವರಿಂದ ರಚಿಸಲ್ಪಟ್ಟ ವರ್ಣಮಟ್ಟಿನಲ್ಲಿ, ಸಂಗೀತ ಲಿಪಿಯಲ್ಲಿ ಹಿಂದೆ ಅಚ್ಚಾಗದೇ ಇದ್ದದ್ದು. ಹಿಂದೆ ಇದರ ಪ್ರಯತ್ನ ನಡೆದಿದ್ದರೂ ಸಮರ್ಪಕವಾಗಿರಲಿಲ್ಲ. ಈ ಕಾರಣದಿಂದಾಗಿ ಆ ರಚನೆಗಳ ಪುನರುಜ್ಜೀವನ ಕಾರ್ಯವನ್ನು ಮಾಡಲು ಭಾಗವತರನ್ನು ಪ್ರಾರ್ಥಿಸಿದರು. ಇಂಥಾ ಕೆಲಸದಲ್ಲಿ ಸಿದ್ಧಹಸ್ತರಾದ ಭಾಗವತರು ಕಾರ್ಯೋನ್ಮುಖರಾಗಿ ನಾಲ್ಕು ವರ್ಷಗಳು ಶ್ರಮಪಟ್ಟು ಸುಮಾರು ನಾಲ್ಕು ನೂರು ಕೀರ್ತನೆಗಳನ್ನು ವರ್ಣಮಟ್ಟದೊಡನೆ ಸಂಗೀತ ಲಿಪಿಯಲ್ಲಿ ಸ್ವರ ಸಾಹಿತ್ಯದೊಡನೆ ಸಿದ್ಧಪಡಿಸಿದರು. ತಮಗೆ ಸಿಕ್ಕಿದ ರಚನೆಗಳನ್ನೆಲ್ಲಾ ಆಯಾ ರಾಗ ಮತ್ತು ವರ್ಣಮಟ್ಟಿನಲ್ಲಿಯೇ ಉಳಿಸಿ, ವರ್ಣಮಟ್ಟುಗಳು ಸಿಕ್ಕದೇ ಇದ್ದ ಇತರ ರಚನೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹೊಸ ರಾಗದಲ್ಲಿ ವರ್ಣಮಟ್ಟಿನೊಡನೆ ಬರೆದು ಮುಗಿಸಿದರು. ಈಗ ಈ ಕೃತಿಯನ್ನೊಳಗೊಂಡ ಒಂದು ಪುಸ್ತಕವು ಮೊದಲ ಭಾಗವಾಗಿ ತಮಿಳು, ಮಲಯಾಳ ಮತ್ತು ಸಂಸ್ಕೃತ ಲಿಪಿಗಳಲ್ಲಿ ಅಚ್ಚಾಗಿ ಹೊರಬಂದಿರುತ್ತೆ. ಒಂದು ನೂರು ರಚನೆಯನ್ನೊಳಗೊಂಡ ಈ ಪುಸ್ತಕವು ಕೀರ್ತನೆ, ರಾಗಮಾಲಿಕೆ ಮತ್ತು ಪದಗಳನ್ನು ಸಹಾ ಒಳಗೊಂಡಿದೆ.

ಈ ಕೀರ್ತನೆಗಳ ಪ್ರಚಾರಕಾರ್ಯ ಮತ್ತು ಸಂಗೀತದ ಮುನ್ನಡೆಗಾಗಿ ಭಾಗವತರ ಸಲಹೆಯಂತೆ ತಿರುವಾಂಕೂರಿನಲ್ಲಿ ಸ್ವಾತಿ ತಿರುನಾಳ್ ಸಂಗೀತ ಕಲಾ ಶಾಲೆಯು ಸ್ಥಾಪಿತವಾಯಿತು. ನಾಲ್ಕು ವರ್ಷಗಳ ಪಠ್ಯಕ್ರಮವನ್ನು ಏರ್ಪಡಿಸಿ ತಾವೇ ಆ ಶಾಲೆಯ ಪ್ರಥಮ ಪ್ರಿನ್ಸಿಪಾಲರಾಗಿ ನಾಲ್ಕು ವರ್ಷಗಳು ಕೆಲಸ ಮಾಡಿ ಅನಾರೋಗ್ಯದ ನಿಮಿತ್ತ ೧೯೪೩ರಲ್ಲಿ ನಿವೃತ್ತರಾದರು. ಸಂಗೀತ ಪ್ರಪಂಚಕ್ಕೆ ಅವರ ಕೊಡುಗೆಯಾಗಿ ’ಸಂಗೀತ ಕಲ್ಪದ್ರುಮ’ ಎಂಬ ಲಕ್ಷಣ ಗ್ರಂಥವನ್ನು ಸಹಾ ಬರೆದು ಅದು ಪ್ರಕಟವಾಯಿತು. ತಿರುವಾಂಕೂರು ವಿಶ್ವವಿದ್ಯಾಲಯವು ಭಾಗವತರ ಪಾಂಡಿತ್ಯ ಮತ್ತು ಸಂಗೀತಕ್ಕಾಗಿ ಅವರು ಮಾಡಿದ ಸೇವೆಯನ್ನು ಮೆಚ್ಚಿ ಅಲ್ಲಿಯವರೆಗೂ ಯಾರೂ ಪಡೆಯದೇ ಇದ್ದ ಡಾಕ್ಟರ್ ಪದವಿಯನ್ನು ನೀಡಿ ಗೌರವಿಸಿತು. ತಿರುವಾಂಕೂರು ಮಹಾರಾಜರು ಅವರಿಗೆ ಆಜೀವ ಪರ್ಯಂತ ೭೫ ರೂಪಾಯಿಗಳ ವಿಶ್ರಾಂತಿ ವೇತನವನ್ನು ಕೊಟ್ಟು ಗೌರವಿಸಿದರು. ಮುಂದೆ ಭಾಗವತರು ಮೈಸೂರಿಗೆ ಬಂದು ನೆಲೆಸಿದರು.

ಕರ್ಣಾಟಕ ಸಂಗೀತಕ್ಕೆ ಭಾಗವತರ ಒಟ್ಟು ಕಾಣಿಕೆ

ಕತೆಗಾಗಿಯೇ ಅವರು ರಚಿಸಿಕೊಂಡ ಅನೇಕ ರಚನೆಗಳನ್ನು ಬಿಟ್ಟರೂ ಸಂಗೀತಕ್ಕಾಗಿ ರಚಿಸಿರುವ ರಚನೆಗಳು ವಿವಿಧ ರೂಪಗಳಲ್ಲಿವೆ. ಅಪೂರ್ವ ರಾಗಗಳಾದ ಅಂಧೋಳಿಕಾ, ನಾರಾಯಣಗೌಳ, ಉದಯ ರವಿಚಂದ್ರಿಕೆಯಲ್ಲದೆ, ತೋಡಿ, ಮೋಹನ, ಕಾಂಭೋದಿ ಈ ರಾಗಗಳನ್ನು ಕೂಡಿ, ಆದಿತಾಳ ಮತ್ತು ಅಟ್ಟತಾಳಗಳಲ್ಲಿ ೧೦ ವರ್ಣಗಳು ರಚಿತವಾಗಿವೆ. ಆನಂದ ಭೈರವಿ ರಾಗದ ಪಂಕಜ ಲೋಚನಿರಾ ಎಂಬ ಪದವರ್ಣವೂ ರಚಿಸಲ್ಪಟ್ಟಿದೆ. ಈ ವರ್ಣಗಳಲ್ಲಿ ಸ್ವರ ರಚನೆಗಳು ಬಹಳ ಉತ್ತಮ ರೀತಿಯಲ್ಲಿದ್ದು, ಮೋಹನ ರಾಗದ ವರ್ಣದಲ್ಲಿರುವ ಮೂರನೆಯ ಚರಣದ ಸ್ವರವನ್ನು ಸಾಹಿತ್ಯಾರ್ಥವು ಬರುವಂತೆ ಚಮತ್ಕಾರವಾಗಿ ರಚಿಸಿರುವುದು ವರ್ಣದ ರಚನೆಯಲ್ಲಿ ಅವರದೇ ಆದ ಅಪೂರ್ವ ಮಾರ್ಗ. ಹಿಂದೆ ಹೇಳಿರುವಂತೆ ನಾಲ್ಕು ದರು ವರ್ಣಗಳೂ ಹತ್ತು ತಿಲ್ಲಾನಗಳೂ ರಚಿತವಾಗಿವೆ. ರಾಗಮಾಲಿಕೆಗಳಲ್ಲಿ ೫, ೬, ೭, ೮ ಮತ್ತು ೧೧ ರಾಗಮಾಲಿಕೆಗಳಿಂದ ಕೂಡಿದ ೫ ರಾಗಮಾಲಿಕೆಗಳನ್ನೂ ರಚಿಸಿರುತ್ತಾರೆ. ನವಗ್ರಹ ಕೀರ್ತನೆಗಳು ಮತ್ತು ನವಾವರಣ ರಾಗಮಾಲಿಕೆಯೂ ಮುಖ್ಯವಾದವು.

ಭಾಗವತರು ನಾಲ್ಕುನೂರಕ್ಕಿಂತಲೂ ಹೆಚ್ಚು ಕೀರ್ತನೆಗಳನ್ನು ರಚಿಸಿದರು. ಇವರ ರಚನೆಗಳಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಅವರೂ ಸಾಮಾನ್ಯವಾಗಿ ಎಲ್ಲರೂ ರಚಿಸಿರುವಂತೆ ತಿಳಿದ ರಾಗಗಳಾದ ತೋಡಿ, ಭೈರವಿ, ಶಂಕರಾಭರಣ ಮತ್ತು ಕಲ್ಯಾಣಿ ರಾಗಗಳಲ್ಲಿ ಕೀರ್ತನೆಗಳನ್ನು ರಚಿಸಿರುತ್ತಾರೆ. ತ್ಯಾಗರಾಜರು ಮಾತ್ರ ರಚಿಸಿರುವ ಅಪೂರ್ವ ರಾಗಗಳಾದ ಶುದ್ಧ ಸೀಮಂತಿನಿ, ಸಿಂಧುರಾಮಕೃಯ, ಜಿಂಗಲಾ, ಸರಸ್ವತೀ ಮನೋಹರಿ ಮತ್ತು ಸರಸ್ವತೀ ಈ ರಾಗಗಳಲ್ಲಿಯೂ ಇವರ ಕೀರ್ತನೆಗಳು ಇವೆ. ಮುತ್ತುಸ್ವಾಮಿ ದೀಕ್ಷಿತರು ಮಾತ್ರ ರಚಿಸಿರುವ, ಅಪೂರ್ವ ರಾಗಗಳಾದ ಪಾಡಿ, ಮಂಗಳ ಕೌಶಿಕಿ, ಗೋಪಿಕಾವಸಂತ, ದ್ವಿಜಾವಂತಿ ಮತ್ತು ಅಮೃತವರ್ಷಣಿ ಈ ರಾಗಗಳಲ್ಲಿ ಮನೋಹರವಾದ ಕೀರ್ತನೆಗಳನ್ನು ರಚಿಸಿರುತ್ತಾರೆ. ಹಿಂದೆ ಯಾವ ವಾಗ್ಗೇಯಕಾರರೂ ರಚಿಸದೇ ಶಾಸ್ತ್ರ ಗ್ರಂಥಗಳಲ್ಲಿ ಹೆಸರು ಮಾತ್ರವಿದ್ದ ವಿಜಯನಾಗರಿ, ಮಾಯಾ ಪ್ರದೀಪ, ವೀಣಾಭರಿ, ಚಕ್ರಪ್ರದೀಪ, ನವರತ್ನ ವಿಲಾಸ ಮತ್ತು ವಲಜಿ ಈ ರಾಗಗಳಲ್ಲಿ ಮೊಟ್ಟಮೊದಲಾಗಿ ಇವರೇ ಕೀರ್ತನೆಗಳನ್ನು ರಚಿಸಿದ ಕಾರಣ ಅವು ಪ್ರಚಾರದಲ್ಲಿಯೂ ಇವೆ. ಕೊನೆಯದಾಗಿ ಅವರೇ ಕಂಡುಹಿಡಿದ ಪಶುಪತಿ ಪ್ರಿಯ, ಬುಧ ಮನೋಹರಿ, ಊರ್ಮಿಕಾ ಮತ್ತು ನಿರೋಷ್ಟಕ ಈ ರಾಗಗಳಲ್ಲಿಯೂ ಕೃತಿಗಳು ರಚಿತವಾಗಿವೆ. ನಿರೋಷ್ಟಕ ರಾಗದ ವಿಶೇಷವೆಂದರೆ ಆ ರಾಗದಲ್ಲಿ ಬರುವ ಸ್ವರಗಳು ನಮ್ಮ ತುಟಿಗಳನ್ನು ಸ್ಪರ್ಶಿಸುವುದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಅಸ್ವಸ್ಥರಾಗಿದ್ದಾಗ, ಅವರು ಗುಣಮುಖರಾಗಲೆಂದು ದೇವಿಯನ್ನು ಪ್ರಾರ್ಥಿಸಿ ರಚಿಸಿದ ಕೀರ್ತನೆ, ಹಾಡುವಾಗ ಈ ಕೀರ್ತನೆಯಲ್ಲಿ ಬರುವ ಸಾಹಿತ್ಯವಾಗಲೀ ಅಥವಾ ಸ್ವರವಾಗಲೀ ತುಟಿಗಳನ್ನು ಸ್ಪರ್ಶಿಸುವುದಿಲ್ಲ- ಎಂದರೆ ಬಿಟ್ಟಬಾಯನ್ನು ಮುಚ್ಚದೇ ದೇವಿಯಲ್ಲಿ ಮೊರೆಯಿಡುತ್ತಿರುವ ಭಾವವನ್ನು ಸೂಚಿಸುವ ಚಮತ್ಕಾರಯುತವಾದ ರಚನೆ. ಹರಿಕೇಶ ಎಂಬುದು ಇವರ ಅಂಕಿತ ಅಥವಾ ಮುದ್ರೆ.

ಮೊದಲು ರಚಿಸಲ್ಪಟ್ಟ ಕೀರ್ತನೆಗಳೆಲ್ಲವೂ ತೆಲುಗು ಭಾಷೆಯಲ್ಲಿ ರಚಿತವಾದವು. ಚಾಮುಂಡಾಂಬಾ ಅಷ್ಟೋತ್ತರ ಕೀರ್ತನೆಗಳು ಕನ್ನಡದಲ್ಲಿ ರಚಿತವಾಗಿವೆ. ಶಿವಾಷ್ಟೋತ್ತರ ಕೀರ್ತನೆಗಳು ಸಂಸ್ಕೃತದಲ್ಲಿ ರಚಿಸಲ್ಪಟ್ಟಿವೆ. ತಮ್ಮ ಮಾತೃಭಾಷೆಯಾದ ತಮಿಳಿನಲ್ಲಿ ಅನೇಕ ನಿರೂಪಣಗಳನ್ನು ಕತೆಗಾಗಿ ರಚಿಸಿಕೊಂಡಿದ್ದರೂ ಐವತ್ತಕ್ಕೂ ಹೆಚ್ಚು ಕೀರ್ತನೆಗಳು ತಮಿಳಿನಲ್ಲಿಯೂ ರಚಿಸಲ್ಪಟ್ಟಿವೆ. ಈ ಎಲ್ಲಾ ಕಾರಣದಿಂದಾಗಿ ಸಂಗೀತ ತ್ರಿಮೂರ್ತಿಗಳ ನಂತರ ಬಂದ ವಾಗ್ಗೇಯಕಾರರಲ್ಲಿ ಸಂಖ್ಯೆಯಲ್ಲಾಗಲೀ ಮತ್ತು ಗುಣದಲ್ಲಾಗಲೀ ಇಷ್ಟು ವೈವಿಧ್ಯಮಯವಾಗಿ ಸಂಗೀತ ರಚನೆಗಳನ್ನು ರಚಿಸಿರುವವರು ಮತ್ತೊಬ್ಬರಿಲ್ಲ. ಈಗ ಇವರ ಎಲ್ಲಾ ರಚನೆಗಳಿಂದ ಕೂಡಿದ ಪುಸ್ತಕವನ್ನು ನಾಲ್ಕು ಸಂಪುಟಗಳಲ್ಲಿ ಭಾಗವತರ ಮಗನಾದ ವೈದ್ಯ ಲಿಂಗಂ ಭಾಗವತರು ತಮಿಳು ನಾಡು ಸಂಗೀತ ಅಕಾಡೆಮಿಯವರ ಸಹಾಯದಿಂದ ತಮಿಳಿನಲ್ಲಿ ಪ್ರಕಟಿಸಿದ್ದಾರೆ.

೧೯೪೫ರ ಜೂನ್ ೩೦ ರಂದು ಭಾಗವತರು ಮೈಸೂರಿನಲ್ಲಿ ನಿಧನರಾದರು. ಆಗ ಅವರಿಗೆ ಅರವತ್ತೆಂಟು ವರ್ಷ.

ಕಷ್ಟಗಳನ್ನು ಉಂಡವರು

ಭಾಗವತರು ಜೀವನದಲ್ಲಿ ಬಹು ಕಷ್ಟವನ್ನು ಕಂಡವರು. ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡರು. ಇವರ ಪೋಷಣೆಯ ಹೊಣೆಯನ್ನು ವಹಿಸಿದ ಸೋದರಮಾವನಿಗೆ ಸಂಗೀತದಲ್ಲಿ ಆಸಕ್ತಿ ಇರಲಿಲ್ಲ. ಭಾಗವತರಿಗಾದರೋ ಸಂಗೀತವೇ ಪ್ರಾಣ. ಮನೆ ಬಿಟ್ಟು ಹೋಗಿ ತಿರುವಯ್ಯಾರಿನಲ್ಲಿ ವಿದ್ಯಾರ್ಜನೆ ಮಾಡಲು ತಾವೇ ಶ್ರಮಿಸಬೇಕಾಯಿತು. ಅಲ್ಲಿ ಅವರಿದ್ದಾಗ, ಮುಂದೆ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರಿಗೂ ಭಾಗವತರಿಗೂ ನಡೆದ ಸಂಭಾಷಣೆಯನ್ನು ವಾಸುದೇವಾಚಾರ್ಯ ರೇ ಬರೆದಿದ್ದಾರೆ.

ವಾಸುದೇವಾಚಾರ್ಯರು : ಸ್ನಾನಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ ?

ಭಾಗವತರು : ದೇವರು ಕೊಟ್ಟ ಹಾಗೆ ಹೊಳೆಯಿದೆ, ಮೂರು ಮುಳುಗು ಹಾಕಿದರೆ ಮುಗಿಯಿತು ಸ್ನಾನ. ಹಂಡೆ ಬೇಡ, ಸೌದೆ ಬೇಡ.

ವಾಸುದೇವಾಚಾರ್ಯರು : ಊಟ ಎಲ್ಲಿ ಮಾಡುತ್ತೀರಿ ?

ಭಾಗವತರು : ನಾಲ್ಕು ಮನೆಯಲ್ಲಿ ನಾಲ್ಕು ತುತ್ತು ಅನ್ನ ಸಿಕ್ಕಿದರೆ ಸಾಕು. ಉಪನಯನ ಆಗಿದೆ. ’ಭಿಕ್ಷಾನ್ನ!’ ಎಂದು ಕೈ ನೀಡಿದರೆ ಯಾವ ಜನ್ಮದ ತಾಯಂದಿರೋ ಹಿಡಿ ಅನ್ನ ಕರುಣಿಸುತ್ತಾರೆ. ದಿನಕ್ಕೊಂದು ಬಗೆಯ ಊಟ, ದಿನಕ್ಕೊಂದು ರುಚಿಯ ಕವಳ.

ವಾಸುದೇವಾಚಾರ್ಯರು : ಸರಿ, ಹೊಳೆಯಲ್ಲಿ ಸ್ನಾನ, ಭಿಕ್ಷಾನ್ನದ ಭೋಜನ; ಅಂದರೆ ವಾಸಕ್ಕೆ ಛತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಭಾಗವತರು : ನಿಮ್ಮ ಊಹೆ ಸರಿ. ನನ್ನ ಹನ್ನೆರಡನೆಯ ವರ್ಷದಿಂದಲೂ ಈ ಛತ್ರವೇ ನನ್ನ ಮನೆಯಾಗಿದೆ. ಯಾವುದಕ್ಕೇನು ಕಡಿಮೆ ನನ್ನ ಬಾಳಿನಲ್ಲಿ ?

ಈ ಸಂಭಾಷಣೆಯನ್ನು ಸ್ಮರಿಸಿಕೊಂಡು ವಾಸುದೇವಾ ಚಾರ್ಯರು ಹೀಗೆ ಬರೆದಿದ್ದಾರೆ : ’ಹೃದಯದ ವೇದನೆಯನ್ನು ತೋಡಿಕೊಳ್ಳುವಾಗಲೂ ಭಾಗವತರು ಹಸನ್ಮುಖಿಗಳಾಗಿಯೇ ಇದ್ದರು. ಬಾಳಿನ ನೋವನ್ನು ಸಹ ನಗೆಯ ಅಲೆಯ ಮೇಲೆ ತೇಲಿಬಿಡುತ್ತಿದ್ದರು.’

ಗುರುಗಳ ಬಳಿ ಅಧ್ಯಯನ ಮಾಡುತ್ತಿದ್ದಾಗಲೂ ಗುರುಗಳ ಮಗನ ಕಾಟ.

೧೯೦೩ರಲ್ಲಿ, ಭಾಗವತರಿಗೆ ಇನ್ನೂ ಇಪ್ಪತ್ತೇಳು ವರ್ಷ ವಯಸ್ಸಾಗಿದ್ದಾಗ ಒಂದು ಆಕಸ್ಮಿಕದಿಂದ ಅವರ ಕಂಠಕ್ಕೆ ಆಘಾತವಾಯಿತು, ಹಾಡುವುದು ಕಷ್ಟವಾಯಿತು. ಇದರಿಂದ ಅವರು ಬಹುಕಾಲ ಕಷ್ಟಪಡಬೇಕಾಯಿತು.

ಭಾಗವತರ ಸಂಸಾರ ಎಂದರೆ ಅವರು, ಅವರ ಹೆಂಡತಿ, ಮಗಳು. ಈ ಒಬ್ಬ ಮಗಳೂ ಅವರು ಮೈಸೂರಿಗೆ ಬಂದ ಸ್ವಲ್ಪ ಕಾಲದಲ್ಲಿಯೇ ತೀರಿಕೊಂಡಳು.

ಹೀಗೆ ಭಾಗವತರು ಜೀವನದಲ್ಲಿ ನೋವನ್ನು ಉಂಡವರು. ಆದರೆ ಎಂದೂ ಧೃತಿಗೆಡಲಿಲ್ಲ. ಸಂಗೀತವೇ ಜೀವನಾಧಾರ, ಸಂಗೀತವೇ ಪ್ರಾಣ ಆದವರಿಗೆ ಕಂಠಕ್ಕೆ ತೊಂದರೆಯುಂಟಾಗಿ, ಶಾರೀರ ಬದಲಾಗಿ, ಹಾಡುವುದೇ ಕಷ್ಟವಾದರೆ ಆಕಾಶವೇ ಕಳಚಿಬಿದ್ದಂತಾಗುತ್ತದೆ. ಆದರೆ ಭಾಗವತರು ಇಂತಹ ವಿಪತ್ತನ್ನೂ ಗಟ್ಟಿಯಾದ ಮನಸ್ಸಿನಿಂದ ಎದುರಿಸಿದರು. ಇದಾದ ಮೇಲೂ ಸಂಗೀತಗಾರರಾಗಿ ಖ್ಯಾತಿಗಳಿಸಿದರು, ಸಂಗೀತದ ತರಗತಿಗಳನ್ನು ನಡೆಸಿದರು., ಶಿಷ್ಯರಿಗೆ ಮಾರ್ಗದರ್ಶನ ಮಾಡಿದರು.

ಭಾಗವತರದು ಸ್ನೇಹಮಯ ಸ್ವಭಾವ. ಬಂದವರಿಗೆಲ್ಲ ಒಳ್ಳೆಯ ಆತಿಥ್ಯ. ಸಂಗೀತವನ್ನು ಕುರಿತೇ ಬಹುಮಟ್ಟಿಗೆ ಮಾತು. ಇತರರು ಮಾಡುವ ಟೀಕೆ, ಕೊಡುವ ಸಲಹೆಗಳನ್ನು ಸಂತೋಷದಿಂದ ಸ್ವೀಕರಿಸುವರು.

ಭಾಗವತರ ವ್ಯಕ್ತಿತ್ವ ಹಿರಿದಾದದ್ದು, ಸಂಗೀತಕ್ಕೆ ಅವರ ಕಾಣಿಕೆಯೂ ಹಿರಿದಾದದ್ದು.