ಮುತ್ತುಲಕ್ಷ್ಮಿ ರೆಡ್ಡಿ

ಭಾರತೀಯ ವಿಶ್ವವಿದ್ಯಾಲಯದಿಂದ ಹೊರಬಂದ ಪ್ರಥಮ ಮಹಿಳಾ ಡಾಕ್ಟರು, ವಿಧಾನಪರಿಷತ್ತಿನ ಸದಸ್ಯೆಯಾದ ಮೊಟ್ಟಮೊದಲ ಭಾರತೀಯ ಮಹಿಳೆ. ವಿಧಾನಪರಿಷತ್ತಿನ ಉಪಾಧ್ಯಕ್ಷ ಸ್ಥಾನವನ್ನಲಂಕರಿಸಿದ ಮೊಟ್ಟ ಮೊದಲ ಮಹಿಳೆ. ಸಮಾಜಸೇವೆ ಮತ್ತು ಮಹಿಳೆಯರ ಸಂಘಟನೆಗಾಗಿ ಬಾಳನ್ನು ಮುಡಿಪು ಮಾಡಿದವರು.

ಮುತ್ತುಲಕ್ಷ್ಮಿ ರೆಡ್ಡಿ

ಹುಡುಗಿಯರಿಗೆ ವಿದ್ಯೆ ಎಂದರೆ ಮೂರು ಮುರಿಯುತ್ತಿದ್ದ ಕಾಲ. ಬಾಲಕಿಯ ಮದುವೆ ವಿಳಂಬವಾದರೆ ಮನೆಗೆ ಅಮಂಗಳ ಎನ್ನುತ್ತಿದ್ದ ಜನ. ಹೆಂಗಸರನ್ನು ಕಷ್ಟಕ್ಕೆ ನೂಕುತ್ತಿದ್ದ ಪದ್ಧತಿಗಳನ್ನು ಉತ್ತಮ ಸಂಪ್ರಾದಯ ಎಂದು ನಂಬಿದ ಸಮಾಜ. ಉಚ್ಚ ಶಿಕ್ಷಣಕ್ಕಾಗಿ ಹಾತೊರೆಯುವ ಹುಡುಗಿಯರಿಗೆ ಉತ್ಸಾಹ ಕುಂದಿಸುವ ವಾತಾವರಣ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿನ ಹುಡುಗಿಯೊಬ್ಬಳು ಹಟತೊಟ್ಟು ಕಲಿತಳು. ಧೈರ್ಯದಿಂದ ಎಡರು ತೊಡರುಗಳನ್ನು ಎದುರಿಸಿದಳು. ದೊಡ್ಡವಳಾದ ಮೇಲೆ ಮಕ್ಕಳ, ಹೆಂಗಸರ ಮತ್ತು ದೀನದಲಿತರ ಸುಖಕ್ಕಾಗಿ ಶ್ರಮಿಸಿದಳು. ಅವಳೇ ಮುತ್ತುಲಕ್ಷ್ಮಿ. (ಮದುವೆಯಾದ ಮೇಲೆ ಮುತ್ತುಲಕ್ಷ್ಮಿ ರೆಡ್ಡಿ.)

ಓದಿನ ಗೀಳು

ಈಗ ತಮಿಳು ನಾಡಿನಲ್ಲಿರುವ ಪುದುಕೋಟೆ ಹಿಂದೆ ಬ್ರಿಟಿಷರ ಅಧೀನದಲ್ಲಿದ್ದ ಒಂದು ಸಂಸ್ಥಾನವಾಗಿತ್ತು. ೧೮೮೬ ರ ಜುಲೈ ೩೦ ರಂದು ಪುದುಕೋಟೆಯಲ್ಲಿ ಮತ್ತುಲಕ್ಷ್ಮಿ ಹುಟ್ಟಿದರು. ಅವರ ತಂದೆ ಎಸ್. ನಾರಾಯಣಸ್ವಾಮಿ ಅಯ್ಯರ್ ಪುದುಕೋಟೆಯ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರು ಶಿಸ್ತಿನವರೂ ಸಚ್ಚರಿತ್ರರೂ ಆಗಿದ್ದರು. ಗೊಡ್ಡು ಸಂಪ್ರದಾಯಗಳಿಗೆ ಅವರು ಬೆಲೆ ಕೊಡುತ್ತಿರಲಿಲ್ಲ.ತಾಯಿ ಚಂದ್ರಮ್ಮಾಳ್ ಸಂಪ್ರದಾಯಶೀಲೆ. ಧರ್ಮ, ಸಾಮಾಜಿಕ ಕಟ್ಟು ಕಟ್ಟಳೆಗಳಲ್ಲಿ ಆಕೆಗೆ ವಿಶೇಷ ವಿಶ್ವಾಸ. ಅವರಿಬ್ಬರದು ಅಂತರ್ಜಾತೀಯ ವಿವಾಹ.

ಬಾಲ್ಯದಿಂದಲೂ ಮುತ್ತುಲಕ್ಷ್ಮಿಯ ಆರೋಗ್ಯ ಚೆನ್ನಾಗಿರಲಿಲ್ಲ. ಮುತ್ತುಲಕ್ಷ್ಮಿ ಆಗಾಗ ಅತಿಸಾರ ಮತ್ತು ಉಬ್ಬಸದಿಂದ ನರಳುತ್ತಿದ್ದರು. ಆಗೆಲ್ಲ ಅವರಿಗೆ ಒದಗುತ್ತಿದ್ದುದು ಆಯುರ್ವೇದ ವೈದ್ಯರ ಮದ್ದು.

ನಾಲ್ಕು ವರ್ಷ ವಯಸ್ಸಾದಾಗ ಮುತ್ತುಲಕ್ಷ್ಮಿ ಶಾಲೆಗೆ ಸೇರಿದರು. ಸೂರ್ಯ ಮೂಡುವ ಮೊದಲೇ ಮುತ್ತುಲಕ್ಷ್ಮಿ ಶಾಲೆಗೆ ಹೊರಡುತ್ತಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನ ಆಹಾರ ತೆಗೆದುಕೊಳ್ಳಲು ಮಾತ್ರ ಬಿಡುವು. ಶಾಲೆ ಬಿಡುವುದು ಸಂಜೆ ಐದೂವರೆ ಗಂಟೆಗೆ. ಗಂಟೆ ನೋಡಲು ಶಾಲೆಗಳಲ್ಲಿ ಗಡಿಯಾರಗಳಿರಲಿಲ್ಲ. ಸಮಯ ತಿಳಿಯಲು ಮರಳು ಗಡಿಯಾರವನ್ನೋ ಸೂರ್ಯನ ಸ್ಥಾನವನ್ನೋ ನೋಡುತ್ತಿದ್ದರು.

ಆ ದಿನಗಳಲ್ಲಿ ಹಾಲಿನ ಮತ್ತು ಅಗಸನ ಬಟ್ಟೆಗಳ ಲೆಕ್ಕ ಇಡಲು ಗೊತ್ತಿದ್ದ ಹುಡುಗಿಯರನ್ನು ವಿದ್ಯಾವತಿಯರೆಂದು ತಿಳಿಯುತ್ತಿದ್ದರು. ಮುತ್ತುಲಕ್ಷ್ಮಿಯ ತಂದೆ ಕೂಡ ಮಗಳು ಸ್ವಲ್ಪ ಲೆಕ್ಕ ಮತ್ತು ತಮಿಳು ಕಲಿತರೆ ಸಾಕೆಂದು ಯೋಚಿಸಿದ್ದರು. ಲೇಖಣಿಯಿಂದ ತಾಳೆಗರಿಗಳಲ್ಲಿ ಬರೆದು ಮುತ್ತುಲಕ್ಷ್ಮಿ ತಮಿಳು ಅಕ್ಷರಾಭ್ಯಾಸ ಮಾಡಿದರು. ತಂದೆಗೆ  ತಿಳಿಯದಂತೆ ಇಂಗ್ಲಿಷನ್ನು ಕಲಿತರು. ಅಧ್ಯಾಪಕರಿಗೆಲ್ಲ ಕುಶಾಗ್ರಮತಿಯ ಈ ವಿದ್ಯಾರ್ಥಿನಿಯ ಬಗ್ಗೆ ಮೆಚ್ಚುಗೆ. ಮಗಳ ಸಾಧನೆ ತಿಳಿದು ಮುಂದೆ ತಂದೆಯೂ ಸಂತೋಷಪಟ್ಟರು.

ಆ ಕಾಲದಲ್ಲಿ ೧೦-೧೨ ವಯಸ್ಸಾಯಿತೆಂದರೆ ಯಾವ ಹುಡುಗಿಯನ್ನೂ ಶಾಲೆಗೆ ಕಳುಹಿಸುತ್ತಿರಲಿಲ್ಲ. ಸಾಧ್ಯವಿದ್ದಷ್ಟು ಬೇಗ ಮದುವೆ ಮಾಡಿಸುತ್ತಿದ್ದರು. ಮುತ್ತುಲಕ್ಷ್ಮಿಗೆ ಒಮ್ಮೆ ಹತ್ತನೇ ವಯಸ್ಸಿನಲ್ಲಿ ಮದುವೆ ನಿಶ್ಚಯವಾಯಿತು. ಆ ವೇಳೆಗೆ  ಮುತ್ತುಲಕ್ಷ್ಮಿಯ ಚಿಕ್ಕಮ್ಮ ಕಾಯಿಲೆ ಬಿದ್ದರು. ಇದರಿಂದ ಮುತ್ತುಲಕ್ಷ್ಮಿಯ ಮದುವೆ ನಿಂತುಹೋಯಿತು.

ಬಳಪ, ಪುಸ್ತಕಗಳನ್ನು ಹಿಡಿದುಕೊಂಡು ಮುತ್ತುಲಕ್ಷ್ಮಿ ಶಾಲೆಗೆ ಹೋಗುತ್ತಿದ್ದರು. ಮಾರ್ಗದ ಬದಿಯಲ್ಲಿ ಗುಂಪುಗೂಡುತ್ತಿದ್ದ ಹುಡುಗರು ಕೆಲವು ಬಾರಿ ಕುಚೇಷ್ಟೆ ಮಾಡುತ್ತಿದ್ದರು. ಬೇಸರ ತರುವ ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಆಕೆ ಬಳಸುದಾರಿ ಹಿಡಿಯುತ್ತಿದ್ದರು.

ಹೀಗೆ ಎರಡು ವರ್ಷ ಕಳೆದವು. ಅನಂತರ ಒಂದು ವರ್ಷ ಖಾಸಗಿಯಾಗಿ ಪಾಠ ಹೇಳಿಸಿದರು. ಮುಂದೆ ಎರಡು ವರ್ಷ ತಂದೆಯೇ ಕಲಿಸಿದರು. ಅಂದಿಗೆ ಕಷ್ಟ ಎನಿಸಿದ ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಮುತ್ತುಲಕ್ಷ್ಮಿ ೧೯೦೨ರಲ್ಲಿ ಕುಳಿತರು. ಅಲ್ಲಿ ಪರೀಕ್ಷೆಗೆ ಕುಳಿತ ೧೦೦ ಮಂದಿಯಲ್ಲಿ ತೇರ್ಗಡೆಯಾದವರು ೧೦ ಮಂದಿ. ಅವರಲ್ಲಿ ಮುತ್ತುಲಕ್ಷ್ಮಿ ಕೂಡ ಒಬ್ಬರು. ಹುಡುಗಿಯರು ಇಂಗ್ಲಿಷ್ ಕಲಿಯದ ಆ ದಿನಗಳಲ್ಲಿ ಪುದುಕೋಟೆಯ ಜನರಿಗೆ ಇದೊಂದು ದೊಡ್ಡ ಸುದ್ದಿಯಾಯಿತು.

ಒಮ್ಮೆ ಪತ್ರಿಕೆಯಲ್ಲಿ ಇಬ್ಬರು ಸೋದರಿಯರ ಚಿತ್ರ ಬಂದಿತ್ತು. ಅವರು ಸ್ನಾತಕ ಪದವೀದಾನ ಸಂದರ್ಭದಲ್ಲಿ ತೊಡುವ ನಿಲುವಂಗಿ ಧರಿಸಿದ್ದರು. ಚಿತ್ರ ನೋಡಿದ ಮುತ್ತುಲಕ್ಷ್ಮಿ ತಾನೂ ಸ್ನಾತಕಳಾಗಬೇಕೆಂದು ಹಂಬಲಿಸಿದರು. ಮೆಟ್ರಿಕ್ಯುಲೇಶನ್ ಫಲಿತಾಂಶ ತಿಳಿದೊಡನೆಯೆ ಮುಂದೆ ಕಲಿಯಲು ಕಳುಹಿಸುವಂತೆ ತಂದೆಯನ್ನು ಬೇಡಿಕೊಂಡರು.

ಪುದುಕೋಟೆಯ ಕಾಲೇಜಿನಲ್ಲಿ ಹುಡುಗಿಯರಿಗೆ ಪ್ರವೇಶ ಇರಲಿಲ್ಲ. ತಿರುಚಿ, ತಿನ್ನವೇಲಿಗಳಲ್ಲಿ ಪ್ರವೇಶ ದೊರೆತರೂ ದೂರದ ಹುಡುಗಿಯರಿಗೆ ಉಳಿದುಕೊಳ್ಳಲು ವಿದ್ಯಾರ್ಥಿನಿ ನಿಲಯಗಳಿರಲಿಲ್ಲ. ನಾರಾಯಣಸ್ವಾಮಿಯವರಿಗೆ ಬರುತ್ತಿದ್ದ ವಿಶ್ರಾಂತಿ ವೇತನದಿಂದ ಮನೆಯ ಖರ್ಚನ್ನು ತೂಗಿಸುವುದಕ್ಕೆ ಕಷ್ಟವಾಗುತ್ತಿತ್ತು. ಆದ್ದರಿಂದ ದೂರದ ಊರಿನಲ್ಲಿ ಮಗಳಿಗಾಗಿ ಮತ್ತೊಂದು ಬಿಡಾರ ಮಾಡುವ ಹಾಗಿರಲಿಲ್ಲ. ಪುದುಕೋಟೆಯ ಕಾಲೇಜಿಗೇ ಪ್ರವೇಶ ಕೋರಿ ಅರ್ಜಿ ಹಾಕಿದರು. ಪ್ರವೇಶ ಸಿಗಲಿಲ್ಲ. ಕಲಿಯಲೇಬೇಕೆಂದು ಮುತ್ತುಲಕ್ಷ್ಮಿಯ ಹಟ.ಕೊನೆಗೆ ಪುದುಕೋಟೆಯ ಮಹಾರಾಜರನ್ನೇ ಬೇಡಿಕೊಂಡರು. ‘ಹುಡುಗಿಗೆ ಕಲಿಯಲು ಅವಕಾಶ ನೀಡಬೇಕು. ಮತ್ತು ಈ ಕ್ರಮ ಯಶಸ್ವಿಯಾಗುವುದೇ ಎಂದು ಮೂರು ತಿಂಗಳ ಕಾಲ ನೋಡುತ್ತಿರಬೇಕು’ ಎಂದು ಮಹಾರಾಜರು ಆಜ್ಞೆ ಹೊರಡಿಸಿದರು.

ಯಾವ ಹುಡುಗಿಯೂ ಕಾಲೇಜಿಗೆ ಬರದ ದಿನಗಳವು. ಮುತ್ತುಲಕ್ಷ್ಮಿ ಮುಚ್ಚಿದ ಬಂಡಿಯಲ್ಲಿ ಕುಳಿತು ಕಾಲೇಜಿಗೆ ಹೋಗಿ ಬರತೊಡಗಿದರು. ಹುಡುಗರಿಗೆಲ್ಲ ಅವರ ಬಗ್ಗೆ ಕುತೂಹಲ.ತರಗತಿಯ ಹುಡುಗರಿಗಿಂತ ಆಕೆ ಮುಂದು ಎಂಬುದು ಕೆಲವೇ ವಾರಗಳಲ್ಲಿ ಪ್ರಾಧ್ಯಾಪಕರಿಗೆ ಮನದಟ್ಟಾಯಿತು.

ಡಾಕ್ಟರ್ ಆದ ಮೊದಲ ಹುಡುಗಿ

ಹದಿನಾರು ವರ್ಷ ವಯಸ್ಸಿನಿಂದಲೇ ಮುತ್ತುಲಕ್ಷ್ಮಿ ದೃಷ್ಟಿದೋಷದಿಂದ ನರಳಿದರು. ಇಂಟರ್ ಮೀಡಿಯೆಟ್ ಪರೀಕ್ಷೆ ಕಳೆದಾಗ ದೈಹಿಕವಾಗಿಯೂ ಕ್ಷೀಣವಾದರು. ಈ ಕಾರಣದಿಂದ ಸ್ವಲ್ಪ ಕಾಲ ಓದು ಮುಂದುವರಿಸದೆ ಮನೆಯಲ್ಲೇ ಉಲಿದರು. ಮನೆಯಿಂದ ದೂರವಿದ್ದು ಶಿಕ್ಷಣ ಮುಂದುವರಿಸಲು ಅವಕಾಶ ಕೊಡಬೇಕೆಂದು ತಂದೆಯೊಡನೆ ಪಟ್ಟು ಹಿಡಿದರು.

ಆಗ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯಾಗಿತ್ತು. ‘ಅದಕ್ಕೆ ಹೋಗಲು ಸಿದ್ಧಳಿದ್ದೀಯಾ?’ ಎಂದು ತಂದೆ ಕೇಳಿದಾಗ ಮುತ್ತುಲಕ್ಷ್ಮಿ ಕೂಡಲೇ ಒಪ್ಪಿದರು. ಆಕೆಗೆ ಹೇಗಾದರೂ ಮನೆಯಿಂದ ದೂರ ಹೋದರೆ ಸಾಕಾಗಿತ್ತು.

ಮುತ್ತುಲಕ್ಷ್ಮಿಗೆ ೧೯೦೭ ರಲ್ಲಿ ಮದರಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿತು. ಪುದುಕೋಟೆ ಸಂಸ್ಥಾನಕ್ಕೆ ಇದೊಂದು ದಾಖಲೆ. ಆದ್ದರಿಂದ ಮಹಾರಾಜರು ಆಕೆಗೆ ಶಿಕ್ಷಣವೇತನ ನೀಡಿದರು. ಪುಸ್ತಕಗಳನ್ನು ಕೊಳ್ಳಲು ಕೂಡ ಧನ ಸಹಾಯ ಮಾಡಿದರು.

ಕಾಲೇಜು ಸೇರಲು ಮುತ್ತುಲಕ್ಷ್ಮಿ ತಂದೆಯೊಂದಿಗೆ ಮದರಾಸಿಗೆ ಬಂದರು. ಕಷ್ಟದ ವೈದ್ಯಕೀಯ ಶಿಕ್ಷಣವನ್ನು ಅರಸಿಬಂದ ಕ್ಷೀಣದೇಹದ ಹುಡುಗಿಯನ್ನು ಪ್ರಿನ್ಸಿಪಾಲರು ನೋಡಿದರು. ‘೫ ವರ್ಷಗಳ ಎಂ.ಬಿ.ಬಿ.ಎಂ. ಪದವಿ ಶಿಕ್ಷಣ ಈಕೆಗೆ ಹೊರಲಾರದ ಹೊರೆಯಾಗಬಹುದು. ಸುಲಭದ ಎಲ್.ಎಂ.ಎಸ್. ತರಗತಿಗೆ ಸೇರಲಿ,’ ಎಂದರು. ‘ಪರಿಶ್ರಮದಿಂದ ಕಲಿತು ಶಿಕ್ಷಣವನ್ನು ಪೂರ್ತಿಗೊಳಿಸುತ್ತಾಳೆ. ಒಂದು ವೇಳೆ ಮೊದಲ ವರ್ಷ ತೇರ್ಗಡೆಯಾಗದಿದ್ದರೆ ಎರಡನೇ ವರ್ಷ ಎಲ್.ಎಂ.ಎಸ್. ವರ್ಗಕ್ಕೆ ಸೇರಿಸಿ’’ ಎಂದು ತಂದೆ ಉತ್ತರಿಸಿದರು.ಅಂತೂ ಕೊನೆಗೆ ಪದವಿ ತರಗತಿಗೆ ಮುತ್ತುಲಕ್ಷ್ಮಿ ಸೇರಿದರು.

ಕ್ರಿಶ್ಚಿಯನ್ನರ ಹಾಸ್ಟೆಲುಗಳನ್ನು ಬಿಟ್ಟರೆ ಮದರಾಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಬೇರೆ ವಸತಿ ಸೌಕರ್ಯವಿರಲಿಲ್ಲ. ಕ್ರಿಶ್ಚಿಯನ್ ಹಾಸ್ಟೆಲಿಗೆ ಸೇರಿಸಲು ಮುತ್ತುಲಕ್ಷ್ಮಿಯ ಹೆತ್ತವರಿಗೆ ಮನಸ್ಸಿರಲಿಲ್ಲ. ಆದ್ದರಿಂದ ಮದರಾಸಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಡಾರ ಪ್ರಾರಂಭಿಸಿದರು. ಮುತ್ತುಲಕ್ಷ್ಮಿಯ ತಂಗಿಯರೂ ವಿದ್ಯಾಭ್ಯಾಸಕ್ಕಾಗಿ ಮದರಾಸಿಗೆ ಬಂದರು. ತೀರಿಹೋದ ಒಬ್ಬ ಸಂಬಂಧಿಕಳ ಮಗುವನ್ನೂ ಕರೆ ತಂದಿದ್ದರು. ಅದು ಮುತ್ತುಲಕ್ಷ್ಮಿಗೆ ಹೆಚ್ಚು ಆತುಕೊಂಡಿತು. ಮೊದಲಿಗೆ ಮದರಾಸಿನ ಹವೆಯೂ ಮುತ್ತುಲಕ್ಷ್ಮಿಗೆ ಒಗ್ಗಲಿಲ್ಲ. ತೀವ್ರ ಉಬ್ಬಸ ಮತ್ತು ನಿದ್ದೆಬಾರದಿರುವುದರಿಂದ ಆಕೆ ಬಳಲಿದರು. ಈ ತೊಂದರೆಗಳಿದ್ದರೂ ಓದು ತಡೆಯಿಲ್ಲದೆ ಮುಂದು ವರಿಯಿತು. ಒಂದರ ಮೇಲೊಂದರಂತೆ ಪರೀಕ್ಷೆಗಳಲ್ಲಿ ಆಕೆ ಯಶಸ್ವಿಯಾದರು.

ಮೊದಲ ವರ್ಷ ಭೌತ ವಿಜ್ಞಾನದಲ್ಲಿ ಶೇಕಡಾ ೭೫ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದುದಕ್ಕೆ ಮುತ್ತುಲಕ್ಷ್ಮಿಯವರಿಗೆ ಯೋಗ್ಯತಾಪತ್ರ ದೊರಕಿತು.

ಮುತ್ತುಲಕ್ಷ್ಮಿಯವರು ಪರೀಕ್ಷೆಗಳಲ್ಲಿ ಪಡೆಯುತ್ತಿದ್ದ ಯಶಸ್ಸನ್ನು ಪ್ರಾಧ್ಯಾಪಕರು ಮುಕ್ತಕಂಠದಿಂದ ಹೊಗಳುತ್ತಿದ್ದರು. ಕರ್ನಲ್ ಡೊನೊವನ್ ಒಮ್ಮೆ ಎಲ್ಲ ವಿದ್ಯಾರ್ಥಿಗಳೆದುರು ಹೇಳಿದರು. ‘‘ಮುತ್ತುಲಕ್ಷ್ಮಿ ಮೌಖಿಕ ಪರೀಕ್ಷೆಗೆ ಬಂದಾಗ ಹೆದರಿದಂತೆ ತೋರಿತು. ಆದರೆ ಪ್ರಶ್ನೆಗಳನ್ನು ಕೇಳಿದ್ದೇ ಸರಿ. ಗುಂಡುಗಳಂತೆ ಉತ್ತರಗಳು ಚಿಮ್ಮಿದವು.’’ ಶಸ್ತ್ರ ಚಿಕಿತ್ಸಾ ಪರೀಕ್ಷೆಯ ಫಲಿತಾಂಶವನ್ನು ಹೇಳುತ್ತ ಮೇಜರ್ ನಿಬ್ಲಕ್ ಸಾರಿದರು: ‘‘ಕುಮಾರಿ ಮುತ್ತುಲಕ್ಷ್ಮಿ ಅಮ್ಮಾಳ್ ಎಂಬ ವಿದ್ಯಾರ್ಥಿನಿಗೆ ನೂರಕ್ಕೆ ನೂರು ಅಂಕ.’’ ಆಗ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿದರು.

ಅಂದಿನ ಯುರೋಪಿಯನ್ ಪ್ರಾಧ್ಯಾಪಕರಿಗೆ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಷ್ಟು ದಕ್ಷರಲ್ಲ ಎಂಬ ಭಾವನೆಯಿತ್ತು. ಆದ್ದರಿಂದಲೇ ಕರ್ನಲ್ ಗಿಫಾರ್ಡ್ ಎಂಬ ಪ್ರಖ್ಯಾತ ಪ್ರಸೂತಿ ತಜ್ಞರು ತಮ್ಮ ಉಪನ್ಯಾಸಕ್ಕೆ ವಿದ್ಯಾರ್ಥಿನಿಯರನ್ನು ಬರಗೊಡುತ್ತಿರಲಿಲ್ಲ. ಆದರೆ ಮುತ್ತುಲಕ್ಷ್ಮಿಯವರ ಉತ್ತರ ಪತ್ರಿಕೆಗಳನ್ನು ಅವರು ನೋಡಿ ಮೆಚ್ಚಿದರು. ಅನಂತರ ಎಲ್ಲ ವಿದ್ಯಾರ್ಥಿನಿಯರನ್ನು ತಮ್ಮ ಉಪನ್ಯಾಸಕ್ಕೆ ಬರಲು ಬಿಟ್ಟರು.

ಡಾ. ಎಂ.ಸಿ. ನಂಜುಂಡರಾವ್ ಮದರಾಸಿನ ಪ್ರಸಿದ್ಧ ಡಾಕ್ಟರರಾಗಿದ್ದರು. ಅವರ ಮನೆಗೆ ರಾಷ್ಟ್ರೀಯ ಮುಖಂಡರು ಬರುತ್ತಿದ್ದರು. ಅಲ್ಲಿ ಮುತ್ತುಲಕ್ಷ್ಮಿಯವರಿಗೆ ಅನೇಕ ಮುಖಂಡರ ಪರಿಚಯವಾಯಿತು.

೧೯೧೨ ರಲ್ಲಿ ಮುತ್ತುಲಕ್ಷ್ಮಿಯವರು ಹಲವು ಪದಕ ಮತ್ತು ಗೌರವಗಳೊಂದಿಗೆ ಅಂತಿಮ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಭಾರತೀಯ ವಿಶ್ವ ವಿದ್ಯಾಲಯದಿಂದ ಮಹಿಳೆಯೊಬ್ಬರು ವೈದ್ಯಕೀಯ ಪದವಿ ಪಡೆದುದು ಅದೇ ಮೊದಲು. ಕಾಲೇಜು ವಾರ್ಷಿಕೋತ್ಸವದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತ ಕರ್ನಲ್ ಗಿಫಾರ್ಡ್ ಹೇಳಿದರು. ‘‘ಐದು ವರ್ಷಗಳೊಳಗೆ ವಿಶ್ವವಿದಾಯಲಯದ ಅತಿ ದೊಡ್ಡ ವೈದ್ಯಕೀಯ ಪದವಿಯನ್ನು ಪದಕ, ಗೌರವಗಳೊಡನೆ ಒಬ್ಬ ಹಿಂದೂ ಮಹಿಳೆ ಪಡೆದ ಈ ಘಟನೆ ಮದರಾಸು ಮೆಡಿಕಲ್ ಕಾಲೇಜಿನ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದದ್ದು.’’ ಪದವೀದಾನ ಉಡುಪನ್ನು ತೊಟ್ಟ ಮುತ್ತುಲಕ್ಷ್ಮಿಯವರ ಫೋಟೊ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು. ದೇಶದ ಹಲವು ಕಡೆಗಳಿಂದ ಅಭಿನಂದನೆಗಳೂ ಉದ್ಯೋಗಕ್ಕಾಗಿ ಕರೆಗಳೂ ಬಂದವು. ಆದರೆ ಆಕೆಗೆ ಹೆಚ್ಚು ಅನುಭವ ಪಡೆಯುವ ಆಸೆ. ಆದ್ದರಿಂದ ಎಗ್ಮೋರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಸೇರಿಕೊಂಡರು. ಹೀಗೆ ಅಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡಿದವರಲ್ಲಿ ಅವರೇ ಮೊದಲಿಗರು.

ಮುತ್ತುಲಕ್ಷ್ಮಿಯವರು ಹೌಸ್ ಸರ್ಜನ್ ಆಗಿದ್ದಾಗ ಯೂರೋಪಿಯನ್ ದಾದಿಯರೂ ಅವರ ಆಜ್ಞೆಗಳನ್ನು ಪಾಲಿಸಬೇಕಾಗಿತ್ತು. ಮೊದಮೊದಲಿಗೆ ಅವರಿಗೆ ಇದು ಸಹನೆಯಾಗಲಿಲ್ಲ. ಆದರೆ ಮುತ್ತುಲಕ್ಷ್ಮಿಯವರ ಸಾಮರ್ಥ್ಯವನ್ನು ಕಂಡ ಬಳಿಕೆ ಎಲ್ಲ ದಾದಿಯರಿಗೂ ಆಕೆಯ ಮೇಲಿದ್ದ ಗೌರವ ಹೆಚ್ಚಿತು.

ಸಮಾಜ ಸೇವೆಯ ಕರೆ

ಚಿಕ್ಕಂದಿನಿಂದಲೇ ಬಂದ ಸಮಾಜ ಸೇವೆಯ ಅಭಿರುಚಿಗೆ ತಕ್ಕಂತೆ ಹೌಸ್ ಸರ್ಜನ್ ಆಗಿದ್ದಾಗಲೂ ಸಂದರ್ಭಗಳು ಒದಗಿಬಂದವು. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರ ಮತ್ತು ಮಕ್ಕಳ ಉದ್ಧಾರಕ್ಕಾಗಿ ಶ್ರೀಮತಿ ವೈಟ್‌ಹೆಡ್ ಎಂಬುವರು ಸಮಾಜ ಸೇವಾ ಸಂಘವನ್ನು ಸ್ಥಾಪಿಸಿದ್ದರು.  ಉಚಿತ ವೈದ್ಯಕೀಯ ನೆರವನ್ನು ಕೊಡಬಲ್ಲ ಆರೋಗ್ಯಾಧಿಕಾರಿಯ ಅಗತ್ಯ ಅವರಿಗಿತ್ತು. ಮುತ್ತುಲಕ್ಷ್ಮಿಯವರು ಸಮಾಜ ಸೇವಾ ಸಂಘದ ಸದಸ್ಯೆಯಾಗಿ ಆ ಕೆಲಸ ಮಾಡಿದರು. ಎಗ್ಮೋರಿನಲ್ಲಿ ಒಂದು ವಿಧವಾಶ್ರಮ ಆರಂಭವಾದಾಗ ಅಲ್ಲಿನ ಗೌರವ ಡಾಕ್ಟರರಾದರು. ಕ್ರಮೇಣ ಇತರ ಹಿಂದೂ, ಹರಿಜನ ಮತ್ತು ಕ್ರಿಶ್ಚಿಯನ್ ಹಾಸ್ಟೆಲುಗಳಿಗೂ ಅವರು ಆರೋಗ್ಯಾಧಿಕಾರಿಯಾದರು. ಇದರಿಂದ ಸಮಾಜದ ವಿವಿಧ ಗುಂಪುಗಳ ಬಗ್ಗೆ ಅವರಿಗೆ ಹೆಚ್ಚಿನ ತಿಳಿವಳಿಕೆ ಉಂಟಾಯಿತು. ಜಾತ್ಯತೀತ ಆಧಾರದ ಮೇಲೆ ಸಾಮಾನ್ಯ ಹಾಸ್ಟೆಲುಗಳು ಬಂದರೆ ಮಾತ್ರ ರಾಷ್ಟ್ರೀಯ ಐಕ್ಯವನ್ನು ಸಾಧಿಸಬಹುದೆಂಬುದು ಅವರಿಗೆ ಖಚಿತವಾಯಿತು.

ಹಲವು ಕಡೆ ಗಂಡಸರು ಹೆಂಡಿರನ್ನು ಬೈದು ಹೊಡೆಯುವುದನ್ನು ಮುತ್ತುಲಕ್ಷ್ಮಿ ಚಿಕ್ಕಂದಿನಲ್ಲಿ ಕಂಡಿದ್ದರು. ಉಳಿದ ಹುಡುಗಿಯರಂತೆ ತಾನು ಗಂಡಸಿನ ದರ್ಪ, ನಿಯಂತ್ರಣಗಳಿಗೆ ಬಲಿಯಾಗಬಾರದೆಂದು ಆಕೆ ನಿಶ್ಚಯಿಸಿದ್ದರು.

ವಿಶಾಖಪಟ್ಟಣದಲ್ಲಿ ಪ್ರಸಿದ್ಧ ಸರ್ಜನ್‌ರಾಗಿದ್ದ ಸುಂದರ ರೆಡ್ಡಿಯವರನ್ನು ಮದುವೆಯಾಗುವಂತೆ ಮುತ್ತುಲಕ್ಷ್ಮಿಯವರ ತಂದೆ ಮಗಳಿಗೆ ಸಲಹೆ ಮಾಡಿದರು.

ಸುಂದರ ರೆಡ್ಡಿಯವರು ನಾರಾಯಣಸ್ವಾಮಿಯವರ ಮನೆಗೆ ಬಂದು ಮಾತನಾಡಿದರು. ಅವರ ವರ್ತನೆ ಮತ್ತು ಶೈಕ್ಷಣಿಕ ಸಾಧನೆಗಳ ಬಗ್ಗೆ ಮುತ್ತುಲಕ್ಷ್ಮಿಯವರಿಗೆ ತೃಪ್ತಿಯಾಯಿತು. ಮದುವೆಯಾದ ಮೇಲೆ ತನ್ನ ಆಕಾಂಕ್ಷೆಗಳಿಗೆ ಅಡ್ಡ ಬರಬಾರದು ಮತ್ತು ತನ್ನನ್ನು ಸಮಾನಳಂತೆ ಕಾಣಬೇಕು ಎಂದು ಅವರು ಷರತ್ತು ಹಾಕಿದರು. ಸುಂದರ ರೆಡ್ಡಿಯವರು ಅದಕ್ಕೆ ಒಪ್ಪಿದರು. ಸುಮಾರು ೧೯೧೪ ರಲ್ಲಿ ಬ್ರಹ್ಮಸಮಾಜದ ವಿಧಿಗಳಿಗೆ ಅನುಸಾರವಾಗಿ ಅವರ ಮದುವೆ ನಡೆಯಿತು.

ಸುಂದರ ರೆಡ್ಡಿಯವರು ಉಚ್ಚಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಸಾಲ ಮಾಡಿದ್ದರು. ಮದುವೆಯ ಅನಂತರ ಸಾಲಿಗರು ಹಣ ಹಿಂದಿರುಗಿಸಲು ದುಂಬಾಲು ಬಿದ್ದರು. ತನ್ನ ತಂಗಿಯರು ಮತ್ತು ತಮ್ಮನ ವಿದ್ಯಾಭ್ಯಾಸದ ಮತ್ತು ಕುಟುಂಬದ ವೆಚ್ಚದ ಭಾರವನ್ನು ಮುತ್ತುಲಕ್ಷ್ಮಿಯವರು ಹೊತ್ತಿದ್ದರು. ಆರ್ಥಿಕ ಮುಗ್ಗಟ್ಟನ್ನು ಬಗೆಹರಿಸಲು ಸುಂದರ ರೆಡ್ಡಿಯವರು ಪುದುಕೋಟೆಯ ಮುಖ್ಯ ಆರೋಗ್ಯಾಧಿಕಾರಿ ಹುದ್ದೆಯನ್ನು ಸ್ವೀಕರಿಸಿದರು. ಮುತ್ತುಲಕ್ಷ್ಮಿ ಮದರಾಸಿನಲ್ಲೇ ವೈದ್ಯವೃತ್ತಿಯನ್ನು ಮುಂದುವರಿಸಿದರು.

ಸದಾ ಕಲಿಯುವ ತಾಯಿ

ತಿಂಗಳು ತುಂಬದೆ ಆದ ಮೊದಲ ಹೆರಿಗೆಯಲ್ಲಿ ಮುತ್ತುಲಕ್ಷ್ಮಿ ರೆಡ್ಡಿಯವರು ತುಂಬ ಕಷ್ಟಪಟ್ಟರು (೧೯೧೪). ಅಕಾಲಿಕವಾಗ ಆಸ್ಪತ್ರೆಯಲ್ಲಿ ನೀಡಿದ ಚುಚ್ಚುಮದ್ದಿನಿಂದ ನೋವು ಹೆಚ್ಚಿ ಅವರ ಸ್ಥಿತಿ ಕಠಿಣವಾಯಿತು. ತಾನೇ ಗಂಡನನ್ನು ಕರೆದು ಆದ ತಪ್ಪನ್ನು ವಿವರಿಸಿದರು. ಸ್ನೇಹಿತರಾದ ಡಾ. ಲಕ್ಷ್ಮಣಸ್ವಾಮಿ ಮೊದಲಿಯಾರರು ಸುದ್ದಿ ತಿಳಿದು ಬಂದರು. ಅವರ ಸಕಾಲಿಕ ಪ್ರಯತ್ನದಿಂದ ಹೆರಿಗೆ ಸುರಕ್ಷಿತವಾಯಿತು. ಅದಕ್ಷನಾದ ವೈದ್ಯನಿಂದ ಆಗುವ ಅನಾಹುತ, ದಕ್ಷ ವೈದ್ಯ ಸಲ್ಲಿಸಬಹುದಾದ ಅಮೂಲ್ಯ ಸೇವೆ ಎರಡನ್ನೂ ಮುತ್ತುಲಕ್ಷ್ಮಿಯವರು ಸ್ವತಃ ಅನುಭವಿಸಿದಂತಾಯಿತು.

ಹೆರಿಗೆಯ ಅನಂತರ ಆಕೆ ವಿಶ್ರಾಂತಿಗೆ ಪುದುಕೋಟೆಗೆ ಹೋದರು. ಮಗು ತುಂಬ ಕ್ಷೀಣವಾಗಿತ್ತು. ದಾದಿಯರಿದ್ದರೂ ಇತರ ಹೆಂಗಸರ ಮೇಲ್ಪಂಕ್ತಿಯನ್ನು ಅವರು ಅನುಸರಿಸಲಿಲ್ಲ. ತಾನೇ ಮಗುವಿಗೆ ಹಾಲೂಡಿದರು. ತಾಯಿಯ ಹಾಲೇ ಮಗುವಿನ ಸಹಜ ಆಹಾರ, ಸೇವಕಿಯರೊಂದಿಗೆ ಮಗುವನ್ನು ಬಿಟ್ಟು ನಿರಾಸಕ್ತಿಯಿಂದಿರುವುದು ತಪ್ಪು ಎಂಬುದು ಮುತ್ತುಲಕ್ಷ್ಮಿಯವರ ಖಚಿತ ಅಭಿಪ್ರಾಯವಾಗಿತ್ತು.

ಪುದುಕೋಟೆಯಲ್ಲಿ ಹೆಂಗಸರು ಮಕ್ಕಳಿಗಾಗಿ ತಕ್ಕ ವೈದ್ಯಕೀಯ ಸೇವಾ ವ್ಯವಸ್ಥೆ ಇರಲಿಲ್ಲ. ಮುತ್ತುಲಕ್ಷ್ಮಿ ಯವರು ಅಲ್ಲಿ ಇರುವುದನ್ನು ತಿಳಿದು ಅವರಲ್ಲಿ ವೈದ್ಯಕೀಯ ಸಲಹೆ ಪಡೆಯಲು ಜನ ಬರಲಾರಂಭಿಸಿದರು. ವೃತ್ತಿ ನೀತಿಯನ್ನು ಉಲ್ಲಂಘಿಸಲು ಅವರಿಗೆ ಮನಸ್ಸಾಗಲಿಲ್ಲ. ಇದರ ಪರಿಣಾಮ-ಹಗಲು, ರಾತ್ರಿ ಅಲ್ಲಲ್ಲಿಂದ ಕರೆ. ಒಮ್ಮೊಮ್ಮೆ ರಾತ್ರಿ ಅಳುತ್ತಿದ್ದ ತಮ್ಮ ಮಗುವನ್ನು ಹಾಗೆಯೇ ಬಿಟ್ಟು ರೋಗಿಗಳ ಸೇವೆಗೆ ಧಾವಿಸಬೇಕಾಗುತ್ತಿತ್ತು.

ತಾಯಿ, ಹೆಂಡತಿ, ಡಾಕ್ಟರ್ – ಈ ಮೂರು ಹೊಣೆಯನ್ನೂ ಮುತ್ತುಲಕ್ಷ್ಮಿಯವರು ಏಕಕಾಲದಲ್ಲಿ ಮಾಡಬೇಕಾಯಿತು. ಆದ್ದರಿಂದ ಇಂಥ ಸಂದರ್ಭದಲ್ಲಿ ಒಬ್ಬ ಹೆಣ್ಣುಮಗಳು ಅನುಭವಿಸುವ ಮಾನಸಿಕ ಮತ್ತು ದೈಹಿಕ ಯಾತನೆ ಎಷ್ಟೆಂದು ಆಕೆಗೆ ತಿಳಿಯಿತು.

ಸುಂದರ ರೆಡ್ಡಿಯವರಿಗೆ ಪುದುಕೋಟೆಯ ವಾತಾವರಣ ಹಿಡಿಸಲಿಲ್ಲ. ಅದೇ ಸಮಯಕ್ಕೆ ಮದರಾಸು ಮೆಡಿಕಲ್ ಕಾಲೇಜಿನಲ್ಲಿ ಅವರಿಗೆ ಕೆಲಸ ಸಿಕ್ಕಿತು. ಇಡೀ ಕುಟುಂಬ ಮದರಾಸಿಗೆ ಬಂತು. ಆದರೆ ಅವರು ಪುದುಕೋಟೆಯಲ್ಲಿ ಸಂಪಾದಿಸುತ್ತಿದ್ದ ಹಣಕ್ಕೆ ಹೋಲಿಸಿದರೆ ಮದರಾಸಿನಲ್ಲಿ ಸಿಕ್ಕುತ್ತಿದ್ದ ಸಂಬಳ ಬಹಳ ಕಡಮೆ ಆಗಿತ್ತು. ಆದ್ದರಿಂದ ಮನೆಯ ಖರ್ಚನ್ನು ತೂಗಿಸಲು ಮುತ್ತುಲಕ್ಷ್ಮಿಯವರು ಮತ್ತೆ ಖಾಸಗಿ ಔಷಧಾಲಯ ತೆರೆದರು.

ಮಹಿಳೆಯರ ಭಾರತೀಯ ಸಂಘ (ಇಂಡಿಯನ್ ವಿಮೆನ್ಸ್ ಅಸೋಸಿಯೇಷನ್) ೧೯೧೭ ರಲ್ಲಿ ಆರಂಭವಾಯಿತು. ಅದರ ಚಟುವಟಿಕೆಗಳಲ್ಲಿ ಮುತ್ತುಲಕ್ಷ್ಮಿ ಯವರು ಮೊದಲಿನಿಂದಲೂ ಭಾಗವಹಿಸಿದರು. ಪೌರಸಭೆ, ವಿಧಾನ ಪರಿಷತ್ತು ಮೊದಲಾದ ಸಂಸ್ಥೆಗಳಿಗೆ ಸದಸ್ಯರನ್ನು ಆರಿಸುವಾಗ ಮಹಿಳೆಯರಿಗೂ ಮತದಾನದ ಹಕ್ಕಿರಬೇಕೆಂದು ಚಳವಳಿ ನಡೆಸಿದರು. ಕ್ರಮೇಣ ಮದರಾಸ್ ನಗರದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಅನೇಕ ಸಂಘ, ಸಂಸ್ಥೆಗಳಲ್ಲಿ ಮುತ್ತುಲಕ್ಷ್ಮಿಯವರು ಸಕ್ರಿಯ ಪಾತ್ರ ವಹಿಸಿದರು. ಅಂತಹವುಗಳಲ್ಲಿ ಕೆಲವು- ಶಾರದಾಶ್ರಮ, ಮದರಾಸು ಸೇವಾಸದನ, ಅಪ್ರಾಪ್ತ ವಯಸ್ಸಿನ ಹುಡುಗಿಯರ ರಕ್ಷಣೆಗಾಗಿ ಇರುವ ಮಹಿಳಾ ಸಮಾಜ, ಮುಸ್ಲಿಂ ಮಹಿಳೆಯರ ಸಂಘ.

ಮಗ ರಾಮಮೋಹನನಿಗೆ ನಾಲ್ಕು ವರ್ಷ ತುಂಬಿದಾಗ ರೆಡ್ಡಿ ದಂಪತಿಗಳು ವಿದ್ಯಾರಂಭದ ಶುಭ ವಿಧಿಯನ್ನು ನಡೆಸಿದರು. ಎಲ್ಲ ಮಕ್ಕಳ ಬಗೆಗೂ ಪ್ರೀತಿಯಿದ್ದ ಮುತ್ತುಲಕ್ಷ್ಮಿ ಆ ಶುಭದಿನದಂದು ಬಡ, ಅನಾಥ ಮಕ್ಕಳನ್ನೂ ನೆನೆದರು.ಒಂದು ಅನಾಥಾಲಯಕ್ಕೆ ಹೋಗಿ ಮಕ್ಕಳಿಗೆ ಸಿಹಿ ಹಂಚಿದರು.

ಅನಾಥಾಲಯದ ಸ್ಥಿತಿಯನ್ನು ನೋಡಿ ಅವರಿಗೆ ದುಃಖವಾಯಿತು. ಒಂದು ನೂರು ಮಕ್ಕಳನ್ನು ನೋಡಿಕೊಳ್ಳಲು ಇದ್ದುದು ಒಬ್ಬಾಕೆ ಮಾತ್ರ. ಮಕ್ಕಳ ಆರೋಗ್ಯವೂ ಒಳ್ಳೆಯದಾಗಿರಲಿಲ್ಲ. ಮೈಯಲ್ಲಿ ಕಜ್ಜಿ, ತಲೆಯಲ್ಲಿ ಹೇನು-ಹೀಗಿತ್ತು ಮಕ್ಕಳ ಸ್ಥಿತಿ. ಅಂದಿನಿಂದ, ತಮ್ಮ ದೈನಂದಿನ ಕೆಲಸದ ನಡುವೆಯೂ ಬಿಡುವು ಮಾಡಿ ಅವರು ಅನಾಥಾಲಯಕ್ಕೆ ಬಂದು ವೈದ್ಯಕೀಯ ನೆರವು ನೀಡತೊಡಗಿದರು.

೧೯೨೨ ರ ವೇಳೆಗೆ ತಂಗಿಯ ಜೀವ ಉಳಿಸಲು ಸರ್ವ ಪ್ರಯತ್ನ ಮಾಡಿಯೂ ಸೋಲು ಅನುಭವಿಸುವ ಕಟು ಅನುಭವ ಮುತ್ತುಲಕ್ಷ್ಮಿಯವರಿಗಾಯಿತು. ಅವರ ತಂಗಿ ಸುಂದರಂಬಾಳ್ ಮದುವೆಯಾಗಿ ಸ್ವಲ್ಪಕಾಲ ಚೆನ್ನಾಗಿ ಇದ್ದರು. ೨೪ನೇ ವರ್ಷ ವಯಸ್ಸಿನಲ್ಲಿ ಅವರಿಗೆ ಕ್ಯಾನ್ಸರ್ ರೋಗ ಬಂತು. ಅದು ಮುದುಕರ ರೋಗ ಎಂದು ಅಂದಿಗೆ ಇದ್ದ ನಂಬಿಕೆಯಾಗಿತ್ತು. ಅದನ್ನು ಪತ್ತೆಹಚ್ಚುವ ಕೆಲಸವೂ ಸುಲಭವಾಗಿರಲಿಲ್ಲ. ಮದರಾಸಿನಲ್ಲಿ ಕ್ಯಾನ್ಸರಿಗೆ ಚಿಕಿತ್ಸಾ ಸೌಲಭ್ಯವೂ ಇರಲಿಲ್ಲ. ಆಗ ಇಡೀ ದೇಶದ ಜನರಿಗೆ ಕ್ಯಾನ್ಸರಿನ ವಿಕಿರಣ ಚಿಕಿತ್ಸೆಗಾಗಿ ಇದ್ದುದು ರಾಂಚಿಯಲ್ಲಿದ್ದ ಕೆಲವು ಮಿಲಿಗ್ರಾಂಗಳಷ್ಟು ರೇಡಿಯಂ ಮಾತ್ರ. ಮುತ್ತುಲಕ್ಷ್ಮಿಯವರು ತಂಗಿಯನ್ನು ಕಲ್ಕತ್ತ, ರಾಂಚಿಗಳಿಗೆ ಕಳುಹಿಸಿ ಚಿಕಿತ್ಸೆ ನಡೆಸಿದರು. ಒಂದು ವರ್ಷ ನೋವಿನಿಂದ ನರಳಿ ತಂಗಿ ತೀರಿಹೋದಳು. ಹಗಲಿರುಳು ತಂಗಿಯ ಯಾತನೆಯನ್ನು ಕಂಡು, ಚಿಕಿತ್ಸೆ ನಡೆಸಿದರೂ ತನ್ನ ಕಣ್ಣೆದುರಲ್ಲೇ ಆಕೆ ಸಾಯುವುದನ್ನು ತಪ್ಪಿಸಲಾಗಲಿಲ್ಲ. ಕ್ಯಾನ್ಸರಿನಿಂದ ಜನರನ್ನು ರಕ್ಷಿಸಲು ಕೈಲಾದ್ದನ್ನು  ಮಾಡಬೇಕೆಂದು ಮುತ್ತು    ಲಕ್ಷ್ಮಿಯವರು ನಿಶ್ಚಯಿಸಿದರು.

ಅದೇ ಕಾಲಕ್ಕೆ ತನ್ನ ವೈದ್ಯಕೀಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲೂ ಆಕೆ ಹಾತೊರೆದರು. ಮಹಿಳೆಯರ ಮತ್ತು ಮಕ್ಕಳ ರೋಗಗಳ ಸ್ನಾತಕೋತ್ತರ ಅಧ್ಯಯನಕ್ಕಾಗಿ ಭಾರತ ಸರಕಾರ ಅವರಿಗೆ ಶಿಕ್ಷಣ ವೇತನ ನೀಡಿತು. ಅವರು ೧೯೨೫ ರಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಲಂಡನ್ನಿಗೆ ಹೋದರು.

ಆದರ್ಶದ  ಜಾಡು

೧೯೨೬ ರಲ್ಲಿ ಪ್ಯಾರಿಸ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ನಡೆಯಿತು. ೪೨ ದೇಶಗಳಿಂದ ಪ್ರತಿನಿಧಿಗಳು ಬಂದಿದ್ದರು. ಮಹಿಳೆಯರ ಭಾರತೀಯ ಸಂಘದ ಪ್ರತಿನಿಧಿಯಾಗಿ ಮುತ್ತುಲಕ್ಷ್ಮಿರೆಡ್ಡಿ ಭಾಗವಹಿಸಿದರು. ಪಶ್ಚಿಮದ ದೇಶಗಳಲ್ಲಾಗಲೀ ಪೂರ್ವದ ದೇಶಗಳಲ್ಲಾಗಲೀ ಮಹಿಳೆಯರ ಮೂಲಭೂತ ಆವಶ್ಯಕತೆಗಳು ಒಂದೇ ಎಂದು ಅವರಿಗೆ ಮನವರಿಕೆಯಾಯಿತು. ಭಾರತದ ಪ್ರಾಚೀನ ನಾಗರಿಕತೆಯ ಬಗೆಗೆ ಅವರಿಗೆ ಅಭಿಮಾನವಿತ್ತು. ಅನಂತರ ಬಂದ ಬಾಲ್ಯವಿವಾಹ, ಘೋಷಾ ಪದ್ದತಿಗಳ ಬಗ್ಗೆ ತಿರಸ್ಕಾರವಿತ್ತು. ಭಾರತೀಯ ಮಹಿಳೆಯರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿತ್ತು. ಅವರು ಭಾಷಣದಲ್ಲಿ ಸಾರಿದರು: ‘‘ನಮ್ಮ ಮಕ್ಕಳಿಗೆ ಹಾಲು ಬೇಕು. ಪ್ರತಿಯೊಂದು ನಗರದಲ್ಲಿ ಮಕ್ಕಳ ಆಸ್ಪತ್ರೆಬೇಕು. ದುಡಿಯುವ ಮಹಿಳೆಗೆ ಬಾಣಂತಿಯಾಗಿರು ವಾಗ ಕೆಲಸದಿಂದ ರಿಯಾಯಿತಿ ಬೇಕು. ಚಿತ್ತೂರಿನ ಪದ್ಮಿನಿ, ವೀರರಾಣಿ ಚಾಂದಬೀಬಿ, ದಕ್ಷ ಆಡಳಿತಗಾರ್ತಿಯಾದ ಅಹಲ್ಯಾಬಾಯಿ, ಪತಿಯೊಡನೆ ಯುದ್ಧರಂಗಕ್ಕೆ ಹೋದ ರಾಮಾಯಣದ ಕೈಕೇಯಿ, ಅಮರ ಗೀತೆಗಳನ್ನು ರಚಿಸಿದ ತಮಿಳುನಾಡಿನ ಅವ್ವೆ -ಹೀಗೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಉಚ್ಚ ಮೇಲ್ಪಂಕ್ತಿಯನ್ನು ಹಾಕಿದ ಭಾರತೀಯ ಮಹಿಳೆಯರು ಇದ್ದರು. ಇಂದು ನಾವು ಹತ್ತಬೇಕಾದ ಪ್ರಗತಿಯ ಮೊದಲ ಮೆಟ್ಟಿಲು ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ.’’

ಮುತ್ತುಲಕ್ಷ್ಮಿ ರೆಡ್ಡಿಯವರು ವಿದೇಶದಿಂದ ಮರಳಿದವರೇ ಸಾಮಾಜಿಕ ಸುಧಾರಣೆಗಳ ಯಶಸ್ಸಿಗೆ ಹೋರಾಡುವ ಅವಕಾಶ ಒದಗಿಬಂತು. ೧೯೨೬ರಲ್ಲಿ ಭಾರತ ಸರಕಾರವು ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ಮಹಿಳೆಯರೂ ಅರ್ಹರೆಂದು ಸಾರಿತು. ಮದರಾಸಿನ ವಿಧಾನಪರಿಷತ್ತಿಗೆ ಮಹಿಳೆಯರ ಪ್ರತಿನಿಧಿಯಾಗಿ ಮುತ್ತುಲಕ್ಷ್ಮಿರೆಡ್ಡಿ ಆಯ್ಕೆಯಾದರು. ಹೀಗೆ ವಿಧಾನಪರಿಷತ್ತಿನ ಸದಸ್ಯೆಯಾದ ಮೊದಲ ಭಾರತೀಯ ಮಹಿಳೆ ಅವರೇ. ಮುತ್ತುಲಕ್ಷ್ಮಿ ರೆಡ್ಡಿಯವರು ವಿಧಾನಪರಿಷತ್ತಿನ ಉಪಾಧ್ಯಕ್ಷೆಯಾಗಿಯೂ  ಸರ್ವಾನುಮತದಿಂದ ಆಯ್ಕೆಯಾದರು. ಇಡೀ ಜಗತ್ತಿನಲ್ಲಿ ಆ ಸ್ಥಾನವನ್ನು ಪಡೆದ ಮೊದಲ ಮಹಿಳೆ ಎನಿಸಿದರು. ಆಗಲೂ ಅವರು ಹೇಳಿದರು, ‘‘ರಾಜಕೀಯಕ್ಕಾಗಿ ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರವನ್ನು ಬಿಡುವ ಆಸೆಯಿಲ್ಲ’’.

ವಿಧಾನಪರಿಷತ್ ಸದಸ್ಯೆ ಮತ್ತು ಉಪಾಧ್ಯಕ್ಷೆಯಾಗಿ ಮುತ್ತುಲಕ್ಷ್ಮಿಯವರು ಹೆಂಗಸರ, ಮಕ್ಕಳ ಕಲ್ಯಾಣಕ್ಕಾಗಿ ದುಡಿದರು. ಅವರ ಸತತ ಪ್ರಯತ್ನಗಳ ಸತ್ಫಲಗಳು ಹಲವು. ಹೆಣ್ಣುಮಕ್ಕಳ ಕಾಲೇಜುಗಳು ಮತ್ತು ಮಕ್ಕಳ ಆಸ್ಪತ್ರೆಗಳು ಸ್ಥಾಪನೆಯಾದವು. ಶಾಲೆಗೆ ಹೋಗುವ ಮಕ್ಕಳ ವೈದ್ಯಕೀಯ ಪರೀಕ್ಷೆ ಆರಂಭವಾಯಿತು. ಮಹಿಳಾ ಆರೋಗ್ಯಾಧಿಕಾರಿ ಮತ್ತು ಮಹಿಳಾ ಪೊಲೀಸರ ಅಗತ್ಯ ಮಂದಟ್ಟಾಯಿತು.

ಮಹಿಳಾ ಪ್ರತಿನಿಧಿಯಾಗಿ ದೇಶದ ಅನೇಕ ಸಮಸ್ಯೆಗಳ ಬಗ್ಗೆ ವಿವೇಕಪೂರ್ಣ ವಿಚಾರಗಳನ್ನು ಅವರು ಮಂಡಿಸಿದರು. ‘‘ಮಾನವೀಯ ದೃಷ್ಟಿಯಿಂದಾಗಲೀ ವೈದ್ಯಕೀಯ ದೃಷ್ಟಿಯಿಂದಾಗಲೀ ಮದ್ಯಪಾನದ ಚಟವು ವ್ಯಕ್ತಿಗೂ ರಾಷ್ಟ್ರಕ್ಕೂ ಕೇಡಿನದು’’ ಎಂದರು. ‘‘ಪ್ರತಿ ಹತ್ತು ಸಾವಿರ ಹುಡುಗಿಯರಲ್ಲಿ ಮಾಧ್ಯಮಿಕ ಶಿಕ್ಷಣಕ್ಕೆ ಹೋಗುವವರು ಹದಿಮೂರು ಮಂದಿ ಮಾತ್ರ. ಗ್ರಾಮೀಣ ಪ್ರದೇಶಗಳಲ್ಲಿ ಅವರಿಗಾಗಿ ಹೆಚ್ಚು ಶಾಲೆಗಳನ್ನು ತೆರೆಯಿರಿ, ಬಡ ಹುಡುಗಿಯರಿಗೆ ಶಾಲಾ ಶುಲ್ಕವನ್ನು ರಿಯಾಯಿತಿ ಮಾಡಿ’’ ಎಂದು ಸರಕಾರವನ್ನು ಕೇಳಿಕೊಂಡರು.

ಬ್ರಿಟಿಷರು ಆಳುತ್ತಿದ್ದ ಭಾರತದಲ್ಲಿ ಶೈಕ್ಷಣಿಕ ಅಭಿವೃದ್ದಿಯ ಬಗ್ಗೆ ವರದಿ ಮಾಡಲು ಸರಕಾರವು ಒಂದು ಸಮಿತಿಯನ್ನು ನೇಮಿಸಿತು (೧೯೨೮). ಅದರ ಅಧ್ಯಕ್ಷ ಸರ್ ಫಿಲಿಪ್ ಹಾರ್ಟೋಗ್. ಬ್ರಿಟಿಷ್ ಭಾರತದಲ್ಲಿ ಮಹಿಳೆಯರ ಶೈಕ್ಷಣಿಕ ಪ್ರಗತಿಯನ್ನು ಅಧ್ಯಯನ ಮಾಡಲು ಈ ಸಮಿತಿಗೆ ಮುತ್ತುಲಕ್ಷ್ಮಿಯವರನ್ನು ಸೇರಿಸಿಕೊಂಡರು. ಶಿಕ್ಷಣ ಪ್ರಸಾರದ ಯಾವುದೇ ಕಾರ್ಯಕ್ರಮದಲ್ಲಾದರೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಬೇಕೆಂಬ ಸಮಿತಿಯ ಅಭಿಪ್ರಾಯವನ್ನು ಅವರು ರೂಪಿಸಿದರು.

ಬಾಲಪತ್ನಿ, ಬಾಲಪತಿಯರು ಬೇಡ

ಹುಡುಗ ಹುಡುಗಿಯರ ಮದುವೆಯ ವಯಸ್ಸನ್ನು ಕಡಿಮೆ ಪಕ್ಷ ೨೧ ಹಾಗೂ ೧೬ ವರ್ಷಗಳಿಗೆ ಏರಿಸಬೇಕೆಂಬ ಠರಾವನ್ನು ಮುತ್ತುಲಕ್ಷ್ಮಿ ರೆಡ್ಡಿಯವರು ವಿಧಾನಪರಿಷತ್ತಿನಲ್ಲಿ ಮಂಡಿಸಿದರು. ‘‘ಹಿಂದೂ ಕುಟುಂಬದಲ್ಲಿ ಹೆಣ್ಣುಮಗು ಹುಟ್ಟಿದರೆ ಯಾರೂ ಸಂತೋಷಪಡುವುದಿಲ್ಲ. ಇದಕ್ಕೆ ಕಾರಣ ಬಾಲ್ಯದಲ್ಲೇ ಆಕೆಗೆ ಮದುವೆ ಮಾಡಬೇಕಾದ ಜವಾಬ್ದಾರಿ. ಅನೇಕ ಬಾಲ ವಿಧವೆಯರಿರುವುದಂತೂ ಅತಿ ದುಃಖದ ವಿಚಾರ. ಪುರಾಣಗಳಲ್ಲಿ ಬರುವ ದಮಯಂತಿ, ಸೀತೆ, ಸಾವಿತ್ರಿಯರಿಗೆ ತಮ್ಮ ಗಂಡಂದಿರನ್ನು ಆರಿಸುವ ಹಕ್ಕಿತ್ತು. ಗಾರ್ಗಿ, ಮೈತ್ರೇಯಿ,ಅಪಲಾ ಮೊದಲಾದವರ ಬಾಳ್ವೆಯಿಂದ ಏನು ತಿಳಿಯುತ್ತೇವೆ? ಹೆಣ್ಣಿಗೆ ಮದುವೆ ಮಾತ್ರವೇ ಗುರಿಯೂ ಅಲ್ಲ, ಕೊನೆಯೂ ಅಲ್ಲ. ಅಧ್ಯಯನ, ಸಂಶೋಧನೆ, ಉಪಯುಕ್ತ ಸೇವೆಗೂ ಮಹಿಳೆ ತನ್ನ ಜೀವನವನ್ನು ಮುಡಿಪಾಗಿಡಬಹುದು’’ -ಹೀಗೆ ಮುತ್ತುಲಕ್ಷ್ಮಿಯವರ ವಾಕ್ಪಟುತ್ವಕ್ಕೆ ಉಳಿದವರ ಮನಸ್ಸನ್ನು ಒಲಿಸುವ ಶಕ್ತಿಯಿತ್ತು. ೧೯೨೮ರ ಮಾರ್ಚ್ ೨೭ ರಂದು ಅವರ ನಿರ್ಣಯ ಸರ್ವಾನುಮತದಿಂದ ಮಂಜೂರಾಯಿತು.

ಭಾರತ ಸರಕಾರದ ಕೇಂದ್ರ ವಿಧಾನಸಭೆಯಲ್ಲಿ ಬಾಲ್ಯವಿವಾಹವನ್ನು ತಡೆಯಲು ರಾವ್ ಸಾಹೇಬ್ ಹರಿಬಿಲಾಸ್ ಶಾರದಾರವರು ಮಸೂದೆಯನ್ನು ಮಂಡಿಸಿದರು. (೧೯೨೮-೨೯). ಮುತ್ತುಲಕ್ಷ್ಮಿಯವರ ಮುಂದಾಳುತನದಲ್ಲಿ ಮದರಾಸಿನ ಮಹಿಳೆಯರು ಅವರ ಮಸೂದೆಗೆ ಬೆಂಬಲ ಸೂಚಿಸಿದರು. ಬಹು ಚಿಕ್ಕ ವಯಸ್ಸಿನಲ್ಲಿ ಮದುವೆಯಾದವರ ಮತ್ತು ತಾಯಿಯಾದವರ ನೋವು ಮತ್ತು ವಿಧವೆಯರ ಅಸಹನೀಯ ದುಃಖಕ್ಕೆ ಕೂಡಲೇ ಉಪಶಮನ ನೀಡುವ ಕ್ರಮ ಬರಬೇಕೆಂದು ಅವರ ಆಸೆಯಾಗಿತ್ತು.

ದೇವದಾಸಿಯರ ಬಿಡುಗಡೆ

ಆ ಬಳಿಕ ದೇವದಾಸಿ ಪದ್ಧತಿಯನ್ನು ಕಾನೂನು ರೀತ್ಯಾ ನಿರ್ಮೂಲನಗೊಳಿಸಲು ಮುತ್ತುಲಕ್ಷ್ಮಿಯವರು ಟೊಂಕಕಟ್ಟಿದರು. ಕೆಲವು ಕುಟುಂಬಗಳ ಹುಡುಗಿಯರನ್ನು ಸಣ್ಣಪ್ರಾಯದಲ್ಲೇ ದೇವಸ್ಥಾನದ ಸೇವೆಗಾಗಿ ಅರ್ಪಿಸುತ್ತಿದ್ದರು. ಅವರಿಗೆ ದೇವದಾಸಿಯರೆಂದು ಹೆಸರು. ವಾಸ್ತವವಾಗಿ ಇಂತಹ ಪದ್ಧತಿಯಿಂದ ಕೆಟ್ಟ ಜೀವನಕ್ಕೆ ಪ್ರೋತ್ಸಾಹಿಸಿದಂತಾಗುತ್ತಿತ್ತು. ಮೈಸೂರು ಸಂಸ್ಥಾನದಲ್ಲಿ ೧೯೦೯ರಲ್ಲೇ ದೇವದಾಸಿ ಪದ್ಧತಿಯನ್ನು ರದ್ದು ಮಾಡಿದ್ದರು. ಆದರೂ ಬ್ರಿಟಿಷರ ಆಡಳಿತದಲ್ಲಿ ಅನೈತಿಕತೆಗೆ ದಾರಿಮಾಡುವ ಈ ಪದ್ಧತಿ ಮುಂದುವರಿಯುತ್ತಿದ್ದುದು ಮುತ್ತುಲಕ್ಷ್ಮಿಯವರಿಗೆ ತುಂಬ ನೋವುಂಟುಮಾಡಿತು. ಹುಡುಗಿಯರನ್ನು ದೇವಸ್ಥಾನಗಳಿಗೆ ಅರ್ಪಿಸದಿರುವಂತೆ ಹಾಗೂ ಪರಂಪರಾಗತವಾಗಿ ದೇವದಾಸಿಯರ ಕುಟುಂಬಕ್ಕೆ ಬಂದ ಭೂಮಿಯನ್ನು ಅವರೇ ಅನುಭವಿಸುವಂತೆ ಮುತ್ತುಲಕ್ಷ್ಮಿಯವರು ಮಂಡಿಸಿದ ಮಸೂದೆ ಅಂಗೀಕೃತವಾಯಿತು (೧೯೨೯).

ದೇವದಾಸಿ ವೃತ್ತಿ ತಪ್ಪಿದ ಹುಡುಗಿಯರಿಗೆ ಬೇರೆ ಜೀವನ ಮಾರ್ಗವನ್ನು ಕಲ್ಪಿಸಬೇಕಾಯಿತು. ಹಲವರಿಗೆ ವಿದ್ಯಾಭ್ಯಾಸ ನೀಡಿದರು. ಪ್ರಾಮಾಣಿಕ ರೀತಿಯಲ್ಲಿ ಕೆಲಸಮಾಡುವ ವೃತ್ತಿಗೆ ತರಬೇತಿಯನ್ನು ಕೊಟ್ಟರು. ದೇವದಾಸಿಯರಾಗಬಹುದಿದ್ದ ಅನೇಕ ಹುಡುಗಿಯರು ಶಿಕ್ಷಕಿ, ದಾದಿ ಹಾಗೂ ವೈದ್ಯರಾಗಿ ಜೀವನ ನಡೆಸಿದರು.

ಮಕ್ಕಳಿಗಾಗಿ ವಿಶೇಷ ಆಸ್ಪತ್ರೆ ಸ್ಥಾಪಿಸಬೇಕೆಂಬ ನಿರ್ಣಯಗಳನ್ನು ಮುತ್ತುಲಕ್ಷ್ಮಿಯವರು ಮಂಡಿಸಿದ್ದರು. ‘‘ಆಗ ಎಷ್ಟೋ ಮಂದಿ ಚಿಕ್ಕ ಹುಡುಗರ ಸಾವನ್ನು ನಾವು ತಪ್ಪಿಸಬಹುದು. ಪ್ರತ್ಯೇಕ ಆಸ್ಪತ್ರೆ ಇಲ್ಲದೆ ಭಾರತೀಯ ಹುಡುಗರು ನರಳಿದ್ದಾರೆ, ನರಳುತ್ತಿದ್ದಾರೆ. ದೊಡ್ಡವರದಕ್ಕಿಂತ ಭಿನ್ನವಾದುದು ಮಕ್ಕಳ ಅಧ್ಯಯನ. ಈ ಅಧ್ಯಯನಕ್ಕೆ ಗೌಣ ಸ್ಥಾನ ಸಿಗಬಾರದು’’ ಎಂದು ವಾದಿಸಿದರು.

೧೯೨೯ರಲ್ಲಿ ಮುತ್ತುಲಕ್ಷ್ಮಿಯವರು ಶ್ರೀಲಂಕಾವನ್ನು ಸಂದರ್ಶಿಸಿದರು. ಅಲ್ಲಿಯ ಚಾ ತೋಟಗಳನ್ನೂ, ಬಾರತೀಯ ಕಾರ್ಮಿಕರನ್ನೂ ನೋಡಿದರು. ತಂದೆ, ತಾಯಿ ಮತ್ತು ಐದು ಮಕ್ಕಳ ಇಡೀ ಕುಟುಂಬವೊಂದು ಬೆನ್ನಲ್ಲಿ ಚಾ ಬುಟ್ಟಿ ಹೊತ್ತು, ಒದ್ದೆಯ ರಗ್ಗು ಹೊದ್ದು ಹುಣ್ಣು-ಗಾಯಗಳಿರುವ ಬರಿಗಾಲಲ್ಲಿ ನಿಂತು ಚಳಿಯಲ್ಲಿ ನಡುಗುವ ಕರುಣಾಜನಕ ದೃಶ್ಯ ಅವರ ಕಣ್ಣಿಗೆ ಬಿತ್ತು. ಹಸಿರು ಪಚ್ಚೆಯ ಸುಂದರ ನಾಡಿನಲ್ಲಿ ಈ ಕ್ರೌರ್ಯವೇಕೆ? ಸಣ್ಣ ಮಕ್ಕಳು, ಬಾಣಂತಿ ಮತ್ತು ತುಂಬಿದ ಗರ್ಭಿಣಿಯರಿಂದ ಕೆಲಸ ಮಾಡಿಸುವುದೇಕೆ? ರಿಯಾಯಿತಿ ತೋರಿಸುವುದು ನ್ಯಾಯವೆಂದು ತೋಟದ ಮಾಲಿಕರನ್ನು ಅವರು ಕೇಳಿಕೊಂಡರು. ಮಾಲಿಕರ ಸಂಘ ಮುತ್ತುಲಕ್ಷ್ಮಿಯವರನ್ನು ಟೀಕಿಸಿತು. ಆದರೆ ಮುತ್ತುಲಕ್ಷ್ಮಿಯವರು ಅಂಕೆಸಂಖ್ಯೆಗಳನ್ನು ನೀಡಿ ಅವರ ಟೀಕೆ ನಿರಾಧಾರವೆಂಬುದನ್ನು ಸಿದ್ಧಪಡಿಸಿದರು.

ಅವ್ವೆ  ಆಶ್ರಮ ಸ್ಥಾಪನೆ

ಮುತ್ತು ಲಕ್ಷ್ಮಿಯವರಿಗೆ ಮಕ್ಕಳ ಯೋಗಕ್ಷೇಮದಲ್ಲಿ ಮೊದಲಿನಿಂದಲೂ ವಿಶೇಷ ಆಸಕ್ತಿ. ಅವರು ಇಂಗ್ಲೆಂಡಿಗೆ ಹೋಗಿದ್ದಾಗ ಮಕ್ಕಳ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಶಿಶುಕಲ್ಯಾಣ ಕೇಂದ್ರಗಳು, ಪ್ರಸೂತಿ ಗೃಹಗಳು, ಬಾಲವಾಡಿ ಶಾಲೆಗಳು ಇನ್ನಿತರ ಸಮಾಜ ಸೇವಾ ಕೇಂದ್ರಗಳನ್ನು ಸಂದರ್ಶಿಸಿದ್ದರು. ಪ್ಯಾರಿಸ್ ಸಮ್ಮೇಳನದಿಂದಲೂ ಅವರು ಸ್ಫೂರ್ತಿ ಪಡೆದಿದ್ದರು. ಭಾರತದಲ್ಲಿ ತನ್ನ ಹೆಚ್ಚಿನ ಸಮಯವನ್ನು ದಿಕ್ಕಿಲ್ಲದ ಮಕ್ಕಳ ಹಾಗೂ ತಾಯಂದಿರ ಯೋಗಕ್ಷೇಮಕ್ಕೆ ಮೀಸಲಾಗಿಡಬೇಕೆಂದು ನಿಶ್ಚಯಿಸಿದರು. ಹಿಂದಿರುಗಿ ಬಂದವರೇ ವರದಪ್ಪ ನಾಯ್ಡು ಅನಾಥಾಲಯದ ಮಕ್ಕಳ ಸರ್ವತೋಮುಖ ಸುಧಾರಣೆಗಾಗಿ ಶ್ರಮಿಸಿದರು.

೧೯೨೬ರಲ್ಲಿ ಶ್ರೀಮತಿ ಸ್ಟಾನ್‌ಫರ್ಡ್ ಎಂಬವರ ಪ್ರಯತ್ನಗಳಿಂದ ಮದರಾಸ್ ಶಿಶು ಸಹಾಯಕ ಸಂಘದ (ಮದರಾಸ್ ಚಿಲ್ಡ್ರನ್ಸ್ ಎಯ್ಡ್ ಸೊಸೈಟಿ) ಸ್ಥಾಪನೆಯಾಯಿತು. ಮುತ್ತುಲಕ್ಷ್ಮಿಯವರೂ ಅದರ ಸದಸ್ಯೆ ಯಾದರು. ಬೀದಿ ತಿರುಗುವ ದಿಕ್ಕಿಲ್ಲದ ಮಕ್ಕಳನ್ನೂ ಸಣ್ಣ ಪ್ರಾಯದ ತಪ್ಪಿತಸ್ಥರನ್ನೂ ಪೊಲೀಸರು ಸಂಘದ ಅನಾಥಾಲಯಕ್ಕೆ ಕರೆತರುತ್ತಿದ್ದರು. ವರದಪ್ಪ ನಾಯ್ಡು ಅನಾಥಾಲಯ ಮತ್ತು ಶಿಶು ಸಹಾಯಕ ಸಂಘದ ಅನಾಥಾಲಯ ಸ್ವಲ್ಪ ಮಟ್ಟಿಗೆ ಸರಕಾರದ ಹಿಡಿತದಲ್ಲಿದ್ದವು. ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಅವಲಂಬಿಸಿ ತರಬೇತಿ ನೀಡಬೇಕೆಂದು ಮುತ್ತುಲಕ್ಷ್ಮಿಯವರು ಮಾಡಿದ ಸಲಹೆ ಅನಾಥಾಲಯದ ವ್ಯವಸ್ಥಾಪಕ ಮಂಡಳಿಗೆ ಒಪ್ಪಿಗೆಯಾಗಿರಲಿಲ್ಲ. ಆದ್ದರಿಂದ ಬಡ ಹಾಗೂ ಅನಾಥ ಮಕ್ಕಳ ಆರೋಗ್ಯ ಮತ್ತು ಶಾರೀರಿಕ, ಮಾನಸಿಕ ಮತ್ತು ನೈತಿಕ ಬೆಳವಣಿಗೆಗೆ ಸರಕಾರೀ ನಿಯಂತ್ರಣವಿಲ್ಲದೆ ಜಾತಿ ಮತ ಭೇದವಿಲ್ಲದೆ ಆಶ್ರಯ ನೀಡಲು ಆಶ್ರಮವನ್ನು ಸ್ಥಾಪಿಸಲು ನಿರ್ಧರಿಸಿದರು. ಸಾಮಾನ್ಯ ಮಗುವಿಗೆ ತನ್ನ ಮನೆಯೆಂಬ ಭಾವನೆ ಬರುವಂತೆ ಅನಾಥಾಲಯದ ಮಗುವಿಗೂ ಬರುವಂತಾಗಬೇಕು ಎಂಬುದು ಮುತ್ತುಲಕ್ಷ್ಮಿಯವರ ಆಶಯವಾಗಿತ್ತು. ತಾನೇ ಗೌರವ ಕಾರ್ಯದರ್ಶಿಯಾಗಿ ೧೯೩೦ ರಲ್ಲಿ ಅವ್ವೆ  ಆಶ್ರಮವನ್ನು (ಅವ್ವೆ  ಹೋಮ್) ಪ್ರಾರಂಭಿಸಿದರು. ‘ಮಾನವ ಕೋಟಿಯಲ್ಲಿ ಇರುವುದು ಎರಡೇ ಜಾತಿ-ಸ್ವಾರ್ಥಿಗಳು ಮತ್ತು ನಿಸ್ವಾರ್ಥಿಗಳು’ ಇದು ಅವ್ವೆ  ಹೇಳಿದ ಮಾತು. ಮುತ್ತುಲಕ್ಷ್ಮಿಯವರಿಗೆ ಇದು ಜಗತ್ತಿನ ನೈಜ ಚಿತ್ರಣವಾಗಿತ್ತು. ದಿಕ್ಕಿಲ್ಲದೆ ಕೆಡುವ ಹುಡುಗಿಯರನ್ನೂ ಮಕ್ಕಳನ್ನೂ ಕಾಪಾಡಿ, ಶಿಕ್ಷಣಕೊಟ್ಟು, ಜೀವನ ನಡೆಸಲು ಸರಿಯಾದ ದಾರಿ ತೋರಿಸುವುದೇ ಅವ್ವೆ  ಆಶ್ರಮದ ಗುರಿಯಾಗಿತ್ತು.

ಹೆಂಗಸರು, ಮಕ್ಕಳಿಗೆ ಕೆಡಕು ಮಾಡುವ ವ್ಯವಹಾರವನ್ನು ನಿರ್ಬಂಧಿಸುವ ಕಾಯಿದೆಯೊಂದು ಮುತ್ತುಲಕ್ಷ್ಮಿಯವರ ಪ್ರಯತ್ನದಿಂದ ಮದರಾಸು ಆಧಿಪತ್ಯದಲ್ಲಿ ಜಾರಿಯಾಯಿತು. (೧೯೩೦). ಈ ಕಾಯಿದೆಯಂತೆ ದುರ್ವ್ಯವಹಾರಗಳಿಂದ ರಕ್ಷಿಸಲ್ಪಟ್ಟ ಹುಡುಗಿಯರಿಗಾಗಿ ಒಂದು ಅಭಯಾಶ್ರಮವನ್ನು (ರೆಸ್ಕ್ಯುಹೋಮ್) ಕಟ್ಟಬೇಕಾಯಿತು. ಮುಂದೆ ೧೯೩೪ರಲ್ಲಿ ಇಂಥ ಹುಡುಗಿಯರಿಗಾಗಿ ಸ್ತ್ರೀ ಸದನವೆಂಬ ಸಂಸ್ಥೆಯನ್ನು ಸಂಘಟಿಸಿದರು.

ರಾಷ್ಟ್ರೀಯ ಚಳವಳಿಯಲ್ಲಿ

೧೯೨೯ನೇ ಇಸವಿಯಿಂದ ರಾಷ್ಟ್ರೀಯ ಚಳವಳಿ ತೀವ್ರವಾಯಿತು. ಗಾಂಧೀಜಿ ಅಹಿಂಸಾತ್ಮಕ ಅಸಹಕಾರ ಆಂದೋಲನ ಆರಂಭಿಸಿದರು. ಗಾಂಧೀಜಿಯವರನ್ನು ಬ್ರಿಟಿಷರು ಸೆರೆಹಿಡಿದರು. ಇದನ್ನು ವಿರೋಧಿಸಿ ಮುತ್ತುಲಕ್ಷ್ಮಿ ರೆಡ್ಡಿ ವಿಧಾನಪರಿಷತ್ತಿಗೆ ರಾಜೀನಾಮೆ ನೀಡಿದರು (೧೯೩೦).

ವಿಧಾನಪರಿಷತ್ತಿನಿಂದ ಹೊರಬಂದ ಮುತ್ತುಲಕ್ಷ್ಮಿಯವರು ‘ಸ್ತ್ರೀಧರ್ಮ’ ಎಂಬ ಪತ್ರಿಕೆಯ ಸಂಪಾದಕಿ ಆದರು. ಅಸಹಕಾರ ಆಂದೋಲನದ ಸಮಯದಲ್ಲಿ ಬ್ರಿಟಿಷ್ ಸರಕಾರ ನಡೆಸುತ್ತಿದ್ದ ಅನ್ಯಾಯವನ್ನೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ಸೇರಿದವರ ಕಷ್ಟಗಳನ್ನೂ ಪತ್ರಿಕೆಯಲ್ಲಿ ಬಹಿರಂಗಪಡಿಸುತ್ತಿದ್ದರು. ಅಖಿಲ ಭಾರತ ಮಹಿಳಾ ಕಾಂಗ್ರೆಸ್, ಮಹಿಳೆಯರ ಭಾರತೀಯ ಸಂಘ ಹಾಗೂ ಮಹಿಳೆಯರ ರಾಷ್ಟ್ರೀಯ ಸಮಿತಿ ಈ ಮೂರೂ ಮಹಿಳಾ ಸಂಸ್ಥೆಗಳಲ್ಲಿ ಮುತ್ತುಲಕ್ಷ್ಮಿ ರೆಡ್ಡಿಯವರು ಮಹತ್ವದ ಸ್ಥಾನವಹಿಸಿ ಮಹಿಳೆಯರಿಗೆ ಮಾರ್ಗದರ್ಶನ ಮಾಡಿದರು.

ಅವರು ೧೯೩೦ರಲ್ಲಿ ಲಾಹೋರಿನಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾದರು. ಅನಿಬೆಸೆಂಟರ ಮರಣಾನಂತರ ೧೯೩೩ ರಲ್ಲಿ ಮಹಿಳೆಯರ ಅಖಿಲ ಏಷ್ಯಾ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದರು.

ಜನರಿಗೆ ಪ್ರಾತಿನಿಧ್ಯ ಸಿಗಬೇಕಾದರೆ ೨೧ ವರ್ಷವಾದ ಎಲ್ಲರಿಗೂ ಮತದಾನದ ಹಕ್ಕು ಇರಬೇಕೆಂಬುದು ಭಾರತೀಯ ಮಹಿಳೆಯರ ಒಟ್ಟು ಅಭಿಪ್ರಾಯವಾಗಿತ್ತು. ಮುತ್ತುಲಕ್ಷ್ಮಿಯವರು ರಾಜಕುಮಾರಿ ಅಮೃತ್ ಕೌರ್ ಮತ್ತು ಶ್ರೀಮತಿ ಹಮೀದ್ ಆಲಿಯವರೊಂದಿಗೆ ಮಹಿಳೆಯರ ಪ್ರತಿನಿಧಿಯಾಗಿ ೧೯೩೩ ರಲ್ಲಿ ಲಂಡನ್ನಿಗೆ ಹೋದರು. ಆಸ್ತಿವಂತರ ಹೆಂಡತಿಯರಿಗೆ ಮಾತ್ರ ಮತದಾನದ ಹಕ್ಕು ಕೊಡಬಹುದೆಂಬ ಸೂಚನೆಯನ್ನು ಅವರು ಸಂಪೂರ್ಣವಾಗಿ ವಿರೋಧಿಸಿದರು.

ಷಿಕಾಗೊ ಸಮ್ಮೇಳನದಲ್ಲಿ ಮುತ್ತುಲಕ್ಷ್ಮಿಯವರಿಗೆ ಗೌರವದ ಸ್ಥಾನ ದೊರಕಿತು. ಅಲ್ಲಿ ಕೂಡಿದ ಎಲ್ಲ ಮಹಿಳೆಯರಿಗೂ ಮುತ್ತುಲಕ್ಷ್ಮಿಯವರು ಭಾರತದ ಹಿಂದಿನ ಸ್ತ್ರೀಯರು ಹಾಕಿಕೊಟ್ಟ ಆದರ್ಶ, ಭಾರತದಲ್ಲಿ ಮಹಿಳೆಯರ ಚಳುವಳಿ, ಮಹಿಳೋದ್ಧಾರಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ತಿಳಿಸಿದರು. ಭಾರತೀಯರ ಪ್ರಗತಿಗೆ ಮುಖ್ಯ ತಡೆಗಳು ಬಡತನ ಮತ್ತು ಅಜ್ಞಾನ ಎಂದು ಒತ್ತಿ ಹೇಳಿದರು.

ಕ್ಯಾನ್ಸರ್ ಸಂಸ್ಥೆ

ಕ್ಯಾನ್ಸರಿನ ಭಯಾನಕ ಪರಿಣಾಮವನ್ನು ಕಣ್ಣಾರೆ ಕಂಡು ಅದರ ವಿರುದ್ಧ ಹೋರಾಡಲು ಮುತ್ತುಲಕ್ಷ್ಮಿ ಯವರು ಪಣತೊಟ್ಟಿದ್ದರು. ಆದರೆ ಪ್ರತ್ಯೇಕ ಆಸ್ಪತ್ರೆಯ ಸ್ಥಾಪನೆಗೆ ಹಣದ ಅಭಾವ ಅಡ್ಡಿಯಾಯಿತು. ಮುತ್ತುಲಕ್ಷ್ಮಿಯವರ ಮಗ ಕೃಷ್ಣಮೂರ್ತಿ ಮದರಾಸಿನ ಜನರಲ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಉಪಕರಣ ಮತ್ತು ಹಾಸಿಗೆ ಸೌಲಭ್ಯಗಳ ಅಭಾವದಿಂದ ಹಲವಾರು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನಡೆಸಲಾಗುವುದಿಲ್ಲವೆಂಬುದು ಅವರಿಂದ ತಿಳಿದುಬಂತು (೧೯೪೮). ಈ ಅಸಹಾಯಕ ಸ್ಥಿತಿಯಿಂದ ಮತ್ತೆ ಪ್ರೇರಣೆ ಪಡೆದು ಮಹಿಳೆಯರ ಭಾರತೀಯ ಸಂಘವು ಮದರಾಸಿನಲ್ಲಿ ಪ್ರತ್ಯೇಕ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಪೌರ ಸಮ್ಮೇಳನವನ್ನು ಜರುಗಿಸಿತು. ಮುತ್ತುಲಕ್ಷ್ಮಿ ರೆಡ್ಡಿಯವರ ಸತತ ಪ್ರಯತ್ನದಿಂದ ೧೯೫೪ ರಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ ಸಾಧ್ಯವಾಯಿತು. ಮದರಾಸಿನ ಅಡ್ಯಾರಿನಲ್ಲಿರುವ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಈ ಕ್ಯಾನ್ಸರ್ ಸಂಸ್ಥೆ ಇಂದು ಚಿಕಿತ್ಸೆ-ಸಂಶೋಧನೆಗಳಿಗೆ ಪ್ರಮುಖ ರಾಷ್ಟ್ರೀಯ ಕೇಂದ್ರವಾಗಿದೆ.

೧೯೩೬ರಲ್ಲಿ ಮುತ್ತುಲಕ್ಷ್ಮಿ ರೆಡ್ಡಿಯವರು ಮದರಾಸು ನಗರದ ಹೊರವಲಯದ ಅಡ್ಯಾರಿನಲ್ಲಿ ಬಂದು ನೆಲಸಿದರು. ಅಲ್ಲಿಯ ಗ್ರಾಮೀಣ ಪರಿಸರದಲ್ಲಿ ಅವರು ತಮ್ಮ ಸಮಾಜ ಸೇವಾಕಾರ್ಯಗಳನ್ನು ಮುಂದುವರಿಸಿದರು. ಅನಾಥ ಮಕ್ಕಳು ಮತ್ತು ಹೆಂಗಸರಿಗಾಗಿ ಅಡ್ಯಾರಿನಲ್ಲಿ ಒಂದು ಆಶ್ರಮ ಸ್ಥಾಪಿಸಿದರು. ಗ್ರಾಮ ಸುಧಾರಣಾ ಸಂಘವನ್ನು ಸಂಘಟಿಸಿದರು. ಆಗ ಸುತ್ತುಮುತ್ತಲ ಹಳ್ಳಿಗಳ ಜನರಿಗೆ ಸರಿಯಾದ ವೈದ್ಯಕೀಯ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಹೇಸಿಗೆ-ಕೊಳೆ ಹರಡದಂತೆ ಮಾಡುವ ನೈರ್ಮಲ್ಯ ರಕ್ಷಣಾ ವ್ಯವಸ್ಥೆ ಇರಲಿಲ್ಲ. ಇವನ್ನೆಲ್ಲಾ ಒಂದೊಂದಾಗಿ ಮುತ್ತುಲಕ್ಷ್ಮಿ ರೆಡ್ಡಿಯವರು ಒದಗಿಸಿದರು. ವಾಚನಾಲಯ ಮತ್ತು ಗ್ರಂಥಾಲಯಗಳನ್ನು ತೆರೆದರು. ಬೆಸ್ತರ ಮಕ್ಕಳಿಗಾಗಿ ಶಾಲೆ ಕಟ್ಟಿದರು. ಸಾರ್ವಜನಿಕ ಆರೋಗ್ಯ, ನೈರ್ಮಲ್ಯಗಳ ಬಗ್ಗೆ ಉಪನ್ಯಾಸ ಏರ್ಪಡಿಸಿ ಜನರಿಗೆ ತಿಳಿಯ ಹೇಳಿದರು.

೧೯೪೮ ರಲ್ಲಿ ಮದರಾಸು ಆಧಿಪತ್ಯದಲ್ಲಿ ಮದ್ಯಪಾನ ನಿರ್ಬಂಧವು ಜಾರಿಗೆ ಬಂತು. ಇದರಿಂದ ಹೆಂಡವನ್ನು ತಯಾರಿಸುವ ಕೆಲಸ ಮಾಡುತ್ತಿದ್ದವರಿಗೆ ಸಂಪಾದನೆ ಇಲ್ಲದಾಗಿ ಅನೇಕ ಕುಟುಂಬಗಳು ಕಷ್ಟಕ್ಕೆ ಒಳಗಾದವು. ಆಗ ಮುತ್ತುಲಕ್ಷ್ಮಿ ರೆಡ್ಡಿಯವರು ಅವರಿಗೆ ಬೇರೆ ಉದ್ಯೋಗಾವಕಾಶ ಒದಗಿಸಲು ಪ್ರಯತ್ನಿಸಿದರು. ಸರಕಾರೀ ವೇತನ ಒದಗಿಸಿ ನೂಲುವ ಮತ್ತು ನೇಯುವ ಕೆಲಸ ಕಲಿಸುವಂತೆ ಪ್ರೇರೇಪಿಸಿದರು.

ಎರಡನೇ ಮಹಾಯುದ್ಧ ಕಾಲದಲ್ಲಿ ಅಡ್ಯಾರಿನ ಸುತ್ತ ಮುತ್ತ ಸೈನಿಕ ತುಕಡಿಗಳು ನೆಲೆ ಊರಿದವು. ಕೆಲ ಸಿಪಾಯಿಗಳು ರಾತ್ರಿ ಹೊತ್ತು ಹತ್ತಿರದ ಗುಡಿಸಲುಗಳಿಗೆ ನುಗ್ಗಿ ಜನರಿಗೆ ತೊಂದರೆ ಕೊಡುತ್ತಿದ್ದರು. ಮುತ್ತುಲಕ್ಷ್ಮಿ ರೆಡ್ಡಿಯವರು ಕೂಡಲೇ ಸರಕಾರಕ್ಕೆ ದೂರಿತ್ತು ವಿಚಾರಣೆ ನಡೆಸುವಂತೆ ಮಾಡಿದರು. ತಪ್ಪಿ ನಡೆದ ಸಿಪಾಯಿಗಳಿಗೆ ಶಿಕ್ಷೆಯಾಯಿತು. ಮುಂದೆ ಬೇಜವಾಬ್ದಾರಿ ಕೆಲಸ ಮಾಡದಂತೆ ಸಿಪಾಯಿಗಳಿಗೆ ಒಳ್ಳೆಯ ಪಾಠವಾಯಿತು.

೧೯೩೭ ರಲ್ಲಿ ಮುತ್ತುಲಕ್ಷ್ಮಿ ರೆಡ್ಡಿಯವರು ಮದರಾಸಿನ ಕಾರ್ಪೋರೇಷನಿನ ಪ್ರಥಮ ಮಹಿಳಾ ಪುರಪ್ರಮುಖ (ಆಲ್ಡರ್ ವುಮನ್) ರಾದರು. ಸುಮಾರು ಎರಡು ವರ್ಷಕಾಲ ಈ ಸ್ಥಾನದಲ್ಲಿದ್ದುಕೊಂಡು ಅವರು ನಗರದ ಅಭಿವೃದ್ಧಿಗಾಗಿ ಸಲಹೆ-ಸೂಚನೆಗಳನ್ನು ನೀಡಿದರು. ಕುಷ್ಠ ಮತ್ತು ಇತರ ರೋಗಗಳಿಂದ ನರಳುವ ಭಿಕ್ಷುಕರಿಗಾಗಿ ಒಂದು ಭಿಕ್ಷುಕ ಗೃಹ, ಸಾಂಕ್ರಾಮಿಕ ರೋಗ ಚಿಕಿತ್ಸಾ ಆಸ್ಪತ್ರೆಯ ಸಿಬ್ಬಂದಿ ಮತ್ತು ಕಟ್ಟಡಗಳ ಸುಧಾರಣೆ, ಜನಸಾಂದ್ರತೆಯನ್ನು ತಗ್ಗಿಸಲು ನಗರ ವಿಸ್ತರಣೆ-ಹೀಗೆ ಅವರು ಮಾಡಿದ ಹಲವು ಸಲಹೆಗಳು ಕ್ರಮೇಣ ಅನುಷ್ಠಾನಕ್ಕೆ ಬಂದವು.

ಅಡ್ಯಾರಿನ ಸಮೀಪದ ತಿರುವನ್ಮಿಯೂರಿನಲ್ಲಿ ಸ್ವಲ್ಪ ಜಾಗ ತೆಗೆದುಕೊಂಡು ಮುತ್ತುಲಕ್ಷ್ಮಿಯವರು ೧೯೪೩ ರಲ್ಲಿ

ಅವ್ವೆ  ಗ್ರಾಮೀಣ ವೈದ್ಯಕೀಯ ಸೇವಾಕೇಂದ್ರವನ್ನು ಸ್ಥಾಪಿಸಿದರು. ಆ ವೇಳೆ ಗಂಡ ತೀರಿಹೋದರು. ಅನಂತರ ಅಲ್ಲಿ ಚಿಕಿತ್ಸಾಲಯ, ವೈದ್ಯಕೀಯ ಅಧಿಕಾರಿ, ಸೂಲಗಿತ್ತಿ ಮತ್ತು ದಾದಿಯರಿಗೆ ವಸತಿ ಸೌಕರ್ಯಗಳನ್ನು ಏರ್ಪಡಿಸಿದರು. ಇದಕ್ಕೆಲ್ಲ ಹಣ ಎಲ್ಲಿಂದ ಬರಬೇಕು? ತನ್ನ ಆಭರಣಗಳನ್ನು ಮಾರಿ ಈ ಕಟ್ಟಡಗಳನ್ನು ಕಟ್ಟಿಸಿದರು. ಇಲ್ಲಿ ಮುಂದೆ ಅನೇಕ ಡಾಕ್ಟರರು ಸೇವಾಭಾವದಿಂದ ಕೆಲಸ ಮಾಡಿದರು.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದುದರಿಂದ ಮುತ್ತುಲಕ್ಷ್ಮಿಯವರ ಮಗ ಕೃಷ್ಣಮೂರ್ತಿ ಮತ್ತಿತರ ವಿದ್ಯಾರ್ಥಿಗಳು ಸೆರೆಹಿಡಿಯಲ್ಪಟ್ಟರು. ಮುತ್ತುಲಕ್ಷ್ಮಿಯವರು ಎಲ್ಲ ವಿದ್ಯಾರ್ಥಿಗಳಿಗೂ ಜಾಮೀನು ನಿಂತು ಬಿಡಿಸಿದರು. ಒಂದು ದೊಡ್ಡ ಕಟ್ಟಡವನ್ನು ಬಾಡಿಗೆಗೆ ಹಿಡಿದು ಕಾಲೇಜಿನಿಂದ ಹೊರಹಾಕಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೂ ಊಟವಸತಿಯ ಏರ್ಪಾಟು ಮಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮುತ್ತುಲಕ್ಷ್ಮಿ ರೆಡ್ಡಿಯವರು ಸೆರೆಮನೆಗೆ ಹೋಗುವ ಸಂದರ್ಭ ಬರಲಿಲ್ಲ. ಆ ದಿನಗಳಲ್ಲಿ ಸೆರೆಮನೆಗೆ ಹೋಗುವುದಕ್ಕಿಂತಲೂ ಹೊರಗಿದ್ದು ಕೆಲಸ ಮಾಡುವುದು ಕಠಿಣವಾಗಿತ್ತು. ಯರವಾಡ ಜೈಲಿನಲ್ಲಿ ಗಾಂಧೀಜಿಯವರ ಆರೋಗ್ಯ ಕೆಟ್ಟಾಗ ಪ್ರತಿಬಂಧಕಾಜ್ಞೆಯನ್ನು ಮುರಿದು ಮುತ್ತುಲಕ್ಷ್ಮಿಯವರು ಪ್ರಾರ್ಥನಾ ಸಭೆ ನಡೆಸಿದರು. ಆದರೆ ಸರಕಾರ ಅವರನ್ನು ಸೆರೆಹಿಡಿಯಲಿಲ್ಲ.

ಸ್ವಾತಂತ್ರ್ಯಾನಂತರ ರಾಜಾಜಿಯವರು ಮದರಾಸಿನ ಮುಖ್ಯಮಂತ್ರಿಯಾಗಿದ್ದಾಗ ವಿಧಾನಪರಿಷತ್ತಿನ ಸದಸ್ಯೆಯಾಗುವಂತೆ ಮುತ್ತುಲಕ್ಷ್ಮಿ ರೆಡ್ಡಿಯವರನ್ನು ಒತ್ತಾಯಿಸಿದರು. ಆದರೆ ಅವರಿಗೆ ಮನಸ್ಸಿರಲಿಲ್ಲ. ಅವರಾಗ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆಗೆ ದುಡಿಯುತ್ತಿದ್ದರು. ಕೊನೆಗೆ ಆಸ್ಪತ್ರೆಗೆ ಸರಕಾರ ಜಾಗ ಕೊಡುವ ಷರತ್ತಿನ ಮೇಲೆ ಅವರು ಪರಿಷತ್ತಿನ ಸದಸ್ಯೆಯಾದರು (೧೯೫೨). ಅನಂತರ ಮದರಾಸು ರಾಜ್ಯದ ಸಮಾಜ ಕಲ್ಯಾಣ ಸಲಹಾ ಮಂಡಲಿಯ ಪ್ರಥಮ ಅಧ್ಯಕ್ಷರಾಗಿಯೂ ದುಡಿದರು. (೧೯೫೪-೫೭). ಹೆಂಗಸರು ಮಕ್ಕಳಿಗಾಗಿ ಅವರು ಸಲ್ಲಿಸಿದ ಸೇವೆಯನ್ನು ಗಣಿಸಿ ಭಾರತ ಸರಕಾರ ೧೯೫೬ ರಲ್ಲಿ ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತು.

ಮುತ್ತುಲಕ್ಷ್ಮಿ ರೆಡ್ಡಿಯವರು ಬರಹಗಾರ್ತಿಯೂ ಆಗಿದ್ದರು. ಸಮಾಜ ಸುಧಾರಣೆಯ ವಿಷಯ ಅಷ್ಟೇ ಅಲ್ಲದೆ ಹೆಂಗಸರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದರು. ತಮ್ಮ ಜೀವನದ ಬೇರೆ ಬೇರೆ ಅನುಭವಗಳನ್ನು ಬರೆದರು.

ಅವ್ವೆ  ಆಶ್ರಮದ ಅಮ್ಮ

ಮೊದಲಿನಿಂದಲೂ ಮುತ್ತುಲಕ್ಷ್ಮಿಯವರಿಗೆ ಕಣ್ಣಿನ ತೊಂದರೆ ಇತ್ತಷ್ಟೇ? ವಯಸ್ಸಾದಂತೆ ಅವರ ದೃಷ್ಟಿ ಮಂದವಾಗುತ್ತಾ ಬಂತು. ಶಸ್ತ್ರಕ್ರಿಯೆಯಿಂದಲೂ ದೃಷ್ಟಿದೋಷ ಸಂಪೂರ್ಣ ನಿವಾರಣೆಯಾಗಲಿಲ್ಲ. ಆದರೂ ಮೂಲಶಿಕ್ಷಣ ಶಾಲೆ, ಅಂಗವಿಕಲರ ತರಬೇತಿ ವ್ಯವಸ್ಥೆಗಳನ್ನು ಅವ್ವೆ  ಆಶ್ರಮದಲ್ಲಿ ಆರಂಭಿಸಿದರು. ಅವ್ವೆ  ಆಶ್ರಮದ ಚಟುವಟಿಕೆಗಳಲ್ಲಿ ಅವರ ಹೆಚ್ಚಿನ ಸಮಯ ಕಳೆಯುತ್ತಿತ್ತು. ಆಶ್ರಮನಿವಾಸಿಗಳಿಗೆಲ್ಲ ಅವರು ‘ಅಮ್ಮ’ ಆಗಿದ್ದರು. ನಿಧನ ಕಾಲದವರೆಗೂ (೧೯೬೮) ಅವರು ಹೆಂಗಸರು ಮಕ್ಕಳಿಗಾಗಿ ಅವ್ವೆ  ಆಶ್ರಮದಲ್ಲಿ ದುಡಿದರು.

ಮುತ್ತುಲಕ್ಷ್ಮಿ ರೆಡ್ಡಿಯವರಿಗೆ ಇಷ್ಟವಾದದ್ದು ಸಮಾಜ ಸೇವೆ. ಅವರು ಸರಳ ಜೀವನ ಮತ್ತು ಅಚಲ ಆತ್ಮವಿಶ್ವಾಸದಿಂದ ಅದನ್ನು ಸಲ್ಲಿಸಿದರು. ಹಿಂದೂ ಹಬ್ಬಗಳನ್ನು ಆಚರಿಸುತ್ತಿದ್ದರು. ಆದರೆ ಜಾತಿ ಪದ್ಧತಿಯನ್ನೂ ಅಂಧ ಸಂಪ್ರದಾಯವನ್ನೂ ನಂಬಿ ಅಲ್ಲ. ಆಧುನಿಕ ಕಾಲದಲ್ಲೂ ಭಾರತೀಯ ಮಹಿಳೆ ಪ್ರೀತಿಯ ಪತ್ನಿ ಮತ್ತು ತಾಯಿಯಾಗಿ ಇದ್ದುಕೊಂಡೂ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಗಂಡಸರಿಗೆ ಸರಿದೊರೆಯಾಗಿ ದುಡಿಯಬಲ್ಲಳೆಂಬುದನ್ನು ಅವರು ತಮ್ಮ ಜೀವನದಿಂದ ತೋರಿಸಿಕೊಟ್ಟರು.