ಲಯ ವಾದ್ಯಗಳಲ್ಲಿ ಮೃದಂಗಕ್ಕೆ ಅಗ್ರಸ್ಥಾನ. ಅದರಲ್ಲೂ ದಕ್ಷಿಣಾದಿ ಸಂಗೀತ ಪದ್ಧತಿಗೆ ಮೃದಂಗ ಅವಿಭಾಜ್ಯ ಅಂಗವಾಗಿದೆ. ಮೃದಂಗ ಪಕ್ಕವಾದ್ಯವು ಭರತನಾಟ್ಯ ಹಾಗೂ ಸಂಗೀತ ಕಚೇರಿಗಳಿಗೆ ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮೃದಂಗ ವಾದ್ಯವನ್ನು ಬೆಳೆಸಿ ಪೋಷಿಸಿದವರಲ್ಲಿ ತಮಿಳುನಾಡಿನ ತಿರುಪ್ಪಾಪುಳಿಯೂರಿನ ತೇ(ದೇ)ವರ್ ವಂಶಜರು ಪ್ರಾತಃಸ್ಮರಣೀಯರು.ಇವರ ವಂಶ್ಥರಲ್ಲಿ ಸುಬ್ಬರಾಯತೇವರ್, ವೈಯ್ಯಾರಿಪುರಿ ದೇವರ್, ಇತರರನ್ನು ಉಲ್ಲೇಖಿಸಬಹುದು.

ಮುತ್ತುಸ್ವಾಮಿ ತೇವರ್ ರವರು ತಿರಿಉಪ್ಪಾಪುಳಿಯೂರಿನಲ್ಲಿ ೧೮೭೭ರಲ್ಲಿ ಜನಿಸಿದರು. ಇವರ ಪೂರ್ಣನಾಮಧೇಯ ಮುದ್ದುಕುಮಾರಸ್ವಾಮಿ ತೇವರ್. ಇವರ ತಂದೆ ಟಿ. ಸುಬ್ಬರಾಯ ತೇವರ್. ಅಂದಿನ ಪ್ರಸಿದ್ಧ ಮೃದಂಗ ವಿದ್ವಾಂಸರಾಗಿದ್ದ ಸುಬ್ಬರಾಯ್‌ ತೇವರ್ ರವರಿಗೆ ಬಹುಕಾಲ ಸಂತಾನವಾಗಲಿಲ್ಲ. ಮಹಾದೈವ ಭಕ್ತರಾಗಿದ್ದ ಇವರು ಪೂಜೆ ಪುನಸ್ಕಾರಗಳು, ವ್ರತಗಳನ್ನು ಮಾಡುತ್ತಲೇ ಇದ್ದರು. ಇಂತಹ ಸಂದರ್ಭದಲ್ಲಿ ಒಬ್ಬ ಸಾಧು ಸನ್ಯಾಸಿಯು ಮನೆಗೆ ಬಂದು ಸ್ವಯಂಪ್ರೇರಿತರಾಗಿ ಅತ್ಯಂತ ಪ್ರತಿಭಾನ್ವಿತ ಪುತ್ರ ಜನಿಸುತ್ತಾನೆಂದು ಹೇಳಿದ್ದೇ ಅಲ್ಲದೆ ಒಂದು ಕಠಿಣ ವ್ರತವನ್ನು ತಿಳಿಸಿದರು. ಅದರ ಪ್ರಕಾರ, ನಿರ್ದಿಷ್ಟ ದಿನದಂದು ಮನೆಯನ್ನು ಗೋಮಯದಿಂದ ಶುದ್ಧಮಾಡಿ, ಮಡಿಯಲ್ಲಿ ಮಾಡಿದ ಅಡಿಗೆಯನ್ನು ನಡುಮನೆಯಲ್ಲಿ ನೆಲದ ಮೇಲೆ ಬಡಿಸಿ ಕೈಯಿಂದ ಅನ್ನವನ್ನು ಮುಟ್ಟಿದೆ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಬಾಯಿಯಲ್ಲಿ ಭುಂಜಿಸಬೇಕು. ಈ ಪ್ರಕಾರ ವ್ರತ ಮಾಡಿದ ೯ ತಿಂಗಳಿಗೆ ಸರಿಯಾಗಿ ಪುತ್ರ ರತ್ನದ ಜನನವಾಯಿತು. ಜನನದ ದಿನಕ್ಕೆ ಸರಿಯಾಗಿ ಅದೇ ಸನ್ಯಾಸಿಗಳು ಮನೆಬಾಗಲಿಗೆ ಬಂದು ಹೆರಿಗೆ ಆಯಿತೇ ಎಂದು ಕೇಳಿದರು. ತಕ್ಷಣ ಮಗು ಹೇಗಿದೆಯೊ ಹಾಗೆಯೇ ತರಬೇಕೆಂದು ಅಪ್ಪಣೆ ಮಾಡಿದರು. ಮೊರದಲ್ಲಿ ಹಸಿ ಮಗುವನ್ನು ತರಿಸಿ ಬಗಲಿನಿಂದ ವಿಭೂತಿಯನ್ನು ತೆಗೆದು ಮಗುವಿನ ಮೈಗೆ ಸಂಪೂರ್ಣವಾಗಿ ಸವರಿ ಹರಸಿ ಭವಿಷ್ಯದಲ್ಲಿ ಈ ಮಗು ದೊಡ್ಡ ವಿದ್ವಾಂಸನಾಗುತ್ತಾನೆಂಧು ತಿಳಿಸಿದರು. ಈ ಮಗುವೇ ತೇವರ್ ವಂಶಜರ ೨೧ನೇ ತಲೆಮಾರಿನವರಾದ ಮುದ್ದು ಕುಮಾರಸ್ವಾಮಿ ತೇವರ್ ಮುಂದೆ ಮೃದಂಗ ಮುತ್ತುಸ್ವಾಮಿ ತೇವರ್ ಎಂದು ಖ್ಯಾತನಾಮರಾದರು. ಕ್ಲುಪ್ತವಾಗಿ ಮುತ್ತಣ್ಣ ಎಂದು ಕರೆಯಲ್ಪಡುತ್ತಿದ್ದರು. ಈ ವಂಶಜರ ಪೂರ್ವಿಕರು ತಂಜಾವೂರು ಸಂಸ್ಥಾನದಲ್ಲಿ ಮಂತ್ರಿಗಳಾಗಿದ್ದರಂತೆ.

ತಂದೆಯವರಲ್ಲಿ ಪಾಠ ಮಾಡಿದ ಮುದ್ದುಕುಮಾರಸ್ವಾಮಿಗೆ ಮೃದಂಗ ರಕ್ತಗತವಾಗಿ ಬಂದಿತ್ತು. ಒಮ್ಮೆ ಬಾಲಕ ಮುದ್ದುಸ್ವಾಮಿ ನದಿಯ ದಂಡೆಯಲ್ಲಿ, ಮೃದಂಗ ಲೆಕ್ಕಾಚಾರವನ್ನು ಮಾಡುತ್ತಾ ನೆಲದ ಮೇಲೆ ಬರೆಯುತ್ತಿದ್ದರು. ಆಗ ಅದೇ ಸನ್ಯಾಸಿಗಳು ಬಂದು ಲೆಕ್ಕಾಚಾರವನ್ನು ಹೇಳಿಕೊಟ್ಟಿದ್ದೇ ಅಲ್ಲದೆ ಆಶೀರ್ವದಿಸಿದರಂತೆ./ ಅಂದಿನಿಂದ ಮುತ್ತಣ್ಣ ತನ್ನ ಕ್ಷೇತ್ರದಲ್ಲಿ ಹಿಂದೆ ನೋಡಲಿಲ್ಲ. ಚರ್ಮವಾದ್ಯ ಮೃದಂಗ ಸಿದ್ದಿಯಾಯಿತು.

ಹಿಂದೆ ತಮಿಳುನಾಡಿನಲ್ಲಿ ಸಂಪ್ರದಾಯ ಬದ್ಧವಾಗಿ, ಸಂಗೀತ ಕಚೇರಿ, ಭರತನಾಟ್ಯ ಹಾಗೂ ಹರಿಕಥಾ ಕಾಲಕ್ಷೇಪ ಈ ಮೂರು ಪ್ರಕಾರಗಳಿಗೂ ಮೃದಂಗ ಅತ್ಯಾವಶ್ಯಕವಾಗಿ ಬಳಸಲ್ಪಡುತ್ತಿತ್ತು. ಒಬ್ಬ ಪೂರ್ಣ ಮೃದಂಗ ವಿದ್ವಾಂಸನಾಗಬೇಕಾದರೆ ಪ್ರಥಮಃ ಹರಿಕಥಾಕಾಲಕ್ಷೇಪಕ್ಕೆ ನಂತರ ಭರತನಾಟ್ಯಕ್ಕೆ ನುಡಿಸಿ ಅನುಭವ ಬಂದ ನಂತರ ಸಂಗೀತ ಕಚೇರಿಗಳಿಗೆ ನುಡಿಸಲು ಕೂರಿಸುತ್ತಿದ್ದರು. ಸಂಗೀತ, ಭರತನಾಟ್ಯ ಹಾಗೂ ಹರಿಕಥಾ ಕಾಲಕ್ಷೇಪ ಈ ಮೂರು ಪದ್ಧತಿಗಳಿಗೂ ಮುತ್ತುಸ್ವಾಮಿ ದೇವರ್ ರವರು ಪಕ್ಕವಾದ್ಯ ನುಡಿಸುವುದರಲ್ಲಿ ಅಗ್ರಗಣ್ಯರು. ಶುದ್ಧ ಶಾಸ್ತ್ರೀಯವಾದಕನಾಗಲು ಇವರಿಗೆ ಲಕ್ಷ್ಯ ಹಾಗೂ ಲಕ್ಷಣಗಳೆರಡರಲ್ಲೂ ಇದ್ದ ಆಳವಾದ ಪರಿಣತಿಯೇ ಕಾರಣ.

ಮೃದಂಗ ನಾರಾಯಣ ಸ್ವಾಮಿ ಅಪ್ಪನವರು ಇವರಿಗೆ ಸಮಕಾಲೀನರಾಗಿದ್ದರು. ಬಹಳ ಶುದ್ಧವಾದ ವಾದನ. ಇವರ ಬಗ್ಗೆ ಮುತ್ತಣ್ಣನವರಿಗೆ ಬಹಳ ಗೌರವವಿತ್ತು. ಒಮ್ಮೆ ನಾರಾಯಣ ಸ್ವಾಮೀ ಅಪ್ಪನವರ ಮೃದಂಗ ಕೇಳಲು ಮದುವೆ ಮನೆ ಕಚೇರಿಗೆ ಹೋಗಿದ್ದರು. ಏನು ಕಾರಣವೋ ಅಪ್ಪನವರು ಮುತ್ತಣ್ಣನವರನ್ನು ನೋಡಿದೊಡನೆಯೇ ಸಾಮಾನ್ಯವಾಗಿ ನುಡಿಸಿದರು. ಇದರಿಂದ ತೀವ್ರ ಮನನೊಂದು, ನನ್ನಿಂದ ಇತರೆ ಶೋತೃಗಳಿಗೆ ವಂಚನೆಯಾಗಬಾರದೆಂದು ಭಾವಿಸಿ ಹೊರಕ್ಕೆ ಬಂದರು. ತಮ್ಮ ಸಮಕಾಲೀನರಾಗಿದ್ದ ಅಪ್ಪನವರ ಮೃದಂಗವಾದನದ ಮೇಲಿನ ಗೌರವ ಏನು ಮಾಡಿತೆಂದರೆ, ಮುತ್ತಣ್ಣನವರು ಹಿಂದುಗಡೆಯಿಂದ ಬಂದು ಕಿಟಕಿಯ ಕಂಬಿಗೆ ನೇತಾಡಿಕೊಂಡು ಸುಮಾರು ಮೂರು ಘಂಟೆಗಳ ಕಚೇರಿ ಕೇಳಿದರು. ಅಂತೆಯೇ, ಮುತ್ತಣ್ಣನವರು ಹೊರ ನಡೆದ ಮೇಲೆಯೇ, ಅಪ್ಪಣ್ಣನವರು, ತಮ್ಮ ಅಮೋಘ ಮೃದಂಗವನ್ನು ನುಡಿಸಿದ್ದುದು.

ಮುತ್ತುಸ್ವಾಮಿ ತೇವರ್ ಅವರು ಅಂದಿನ ಕಾಲದ ದಿಗ್ಗಜರೆಲ್ಲರಿಗೂ ಪಕ್ಕವಾದ್ಯ ನುಡಿಸುತ್ತಿದ್ದರು. ಇವರಲ್ಲಿ ಪ್ರಮುಖರಾದ ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಮಹಾವೈದ್ಯನಾಥಅಯ್ಯರ್, ವೀಣಾ ಕಾರೈಕುಡಿ ಸಾಂಬಶಿವ ಅಯ್ಯರ್, ಟೈಗರ್ ವರದಾಚಾರ್ ಮುಂತಾದವರುಗಳಿಗೆ ಸಹಕಾರ ನೀಡುತ್ತಿದ್ದರು. ಅಂದಿನ ಪ್ರಸಿದ್ಧ ಸಂಗೀತ ಕಲಾವಿದೆ ಕೊಯಮತ್ತೂರು ತಾಯಿಯವರಿಗೆ ನಿರಂತರ ನುಡಿಸುತ್ತಿದ್ದರು ಹಾಗೂ ಮಾಂಗುಡಿ ಚಿದಂಬರ ಭಾಗವತರಂತಹ ವಿದ್ವಾಂಸರ ಹರಿಕಥಾ ಕಾಲಕ್ಷೇಪಕ್ಕೆ ನುಡಿಸುತ್ತಿದ್ದರು. ಇಲ್ಲಿ ಉಲ್ಲೇಖಾರ್ಹ ಅಂಶಗಳೆಂದರೆ, ಈಗ ಭರತನಾಟ್ಯಕ್ಕೆ ಹಾಗೂ ಹರಿಕಥಾಕಾಲಕ್ಷೇಪಗಳಿಗೆ ಪಕ್ಕನಾದ್ಯ ನುಡಿಸುವುದಕ್ಕೆ ಹಿರಿಯ ವಿದ್ವಾಂಸರು ಮುಜುಗರ ಪಡುತ್ತಾರೆ. ಆದರೆ ಈ ಹಿಂದೆ ಹರಿಕಥಾಕಾಲಕ್ಷೇಪ ಮಾಡುವವರು ಸಂಗೀತದಲ್ಲಿ ಪ್ರೌಢಿಮೆ ಹೊಂದಿರುತ್ತಿದ್ದರಲ್ಲದೆ, ಎಲ್ಲಾ ಹಿರಿಯ ವಿದ್ವಾಂಸರೂ ಸಹ ಹರಿಕಥಾಕಾಲಕ್ಷೇಪಕ್ಕೆ ಪಕ್ಕವಾದ್ಯ ನುಡಿಸುತ್ತಿದ್ದರು. ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರಂತಹವರು ಹರಿಕಥಾಕಾಲಕ್ಷೇಪ ಮಾಡುತ್ತಿದ್ದರು ಹಾಗೂ ಅವರಿಗೆ, ಮುತ್ತಣ್ಣನವರು ನಂತರ ಅವರ ಸುಪುತ್ರ ಟಿ.ಎಂ. ವೆಂಕಟೇಶ ದೇವರ್ ರವರು ಮೃದಂಗ ನುಡಿಸುತ್ತಿದ್ದರು. ಇಂದಿನ ಬೆಳವಣಿಗೆಯನ್ನು ದುರದೃಷ್ಟಕರವೆಂದು ಹೇಳದೆ ವಿಧಿಯಿಲ್ಲ.

ಮುತ್ತುಸ್ವಾಮಿ ತೇವರ್ ರವರು ಮೈಸೂರಿಗೆ ಬಂದದ್ದು ಸಹ ಸಂಗೀತಕ್ಕೆ ಪಕ್ಕವಾದ್ಯಕಾರರಾಗಿಯೆ. ಈ ಪ್ರಸಂಗವು ಎರಡು ದೃಷ್ಟಿಕೋನದಿಂದ ಉಲ್ಲೇಖಾರ್ಹ. ಪ್ರಥಮತಃ ,ಮೈಸೂರಿಗೆ ಮೃದಂಗ ಬಂತು, ಎರಡನೆಯದಾಗಿ, ಮುತ್ತುಸ್ವಾಮಿ ತೇವರ್ ರಂತಹವರು ಮೈಸೂರಿಗೆ ಬಂದರು ಹಾಗೂ ಅವರ ಪರಂಪರೆ ಮೈಸೂರಿಗೆ ಬಂದು ಸಂಗೀತಕ್ಷೇತ್ರವು ಶ್ರೀಮಂತವಾಯಿತು. ೧೯೨೪ರಲ್ಲಿ ಕೊಯಮತ್ತೂರು ತಾಯಿಯವರು ಮೈಸೂರು ಸಂಸ್ಥಾನದಿಂದ ಆಹ್ವಾನಿತರಾಗಿ ಸಂಗೀತ ಕಾರ್ಯಕ್ರಮ ನೀಡಲು ಬಂದರು. ಅವರೊಡನೆ ಮುತ್ತುಸ್ವಾಮಿ ಸಹ ಬಂದರು. ಅಂದಿನ ಅವರ ಮೃದಂಗವಾದನದ ನಾದ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬಹು ಪ್ರಿಯವಾಗಿ ಅವರನ್ನು ಆಸ್ಥಾನದಲ್ಲಿಯೇ ಉಳಿಸಿಕೊಂಡರು. ನಂತರದಲ್ಲಿ ಅವರಿಬ್ಬರೂ ಬಹಳ ಹತ್ತಿರದವರಾಗಿಬಿಟ್ಟರಲ್ಲದೇ, ಮುಂದೆ ಪ್ರಭುಗಳಿಗೆ ಇವರೇ ಮೃದಂಗದ ಗುರುಗಳಾದರು. ಮುತ್ತಣ್ಣನವರ ಪ್ರಭಾವ ಎಷ್ಟಿತ್ತೆಂದರೆ, ಅವರ ಭಾವಚಿತ್ರವನ್ನು ಮಹಾರಾಜರು ತಮ್ಮ ಖಾಸಾ ಕೊಠಡಿಯಲ್ಲಿ ಇಟ್ಟುಕೊಂಡಿದ್ದರು. ಮುತ್ತಣ್ಣನವರು ಮೈಸೂರು ಆಸ್ಥಾನಕ್ಕೆ ಬರುವುದಕ್ಕೆ ಮುಂಚೆ ಮೈಸೂರಿನಲ್ಲಿ ಮೃದಂಗವಿರಲಿಲ್ಲ. ಇಲ್ಲಿ ತಬಲ ಚಿಕ್ಕರಂಗಣ್ಣ ಹಾಗೂ ದೊಡ್ಡರಂಗಣ್ಣನವರು ಎಲ್ಲಾ ಸಂಗೀತ ಕಚೇರಿಗಳಿಗೂ ತಬಲ ಪಕ್ಕವಾದ್ಯನುಡಿಸುತ್ತಿದ್ದರು. ದಕ್ಷಿಣಾದಿ ಸಂಗೀತಕ್ಕೆ ಮೃದಂಘ ಪಕ್ಕವಾದ್ಯವೇ ಸರಿಯಾದುದು ಎಂಬುದು ಅಷ್ಟಾಗಿ ತಿಳಿದಿರಲಿಲ್ಲ ಹಾಗೂ ಮೃದಂಗ ಪಕ್ಕ ವಾದ್ಯ ಲಭ್ಯವೂ ಇರಲಿಲ್ಲ. ಮುತ್ತಣ್ಣನವರು ಇಲ್ಲಿಗೆ ಬಂದ ನಂತರ ಪರಿಸ್ಥಿತಿ ಬದಲಾಯಿತು. ಎಲ್ಲಾ ಸಂಗೀತ ಕಚೇರಿಗಳಿಗೂ ಮೃದಂಗ ಪಕ್ಕವಾದ್ಯ ಲಭ್ಯವಾಯಿತು. ಅಂದಿನ ಪ್ರಸಿದ್ಧರಾದ ಮುತ್ತಯ್ಯ ಭಾಗವತರು, ಬಿಡಾರಂ ಕೃಷ್ಣಪ್ಪನವರು, ಶೇಷಣ್ಣ, ಸುಬ್ಬಣ್ಣನವರಾದಿಯಾಗಿ ಹಿರಿಯರೆಲ್ಲರಿಗೂ ಇವರದೇ ಪಕ್ಕವಾದ್ಯ. ೧೯೨೭ರಲ್ಲಿ ನಡೆದ ಒಂದು ಪ್ರಸಂಗವು ಸಂಗೀತ ಕ್ಷೇತ್ರದಲ್ಲಿ ಉಲ್ಲೇಖಾರ್ಹ. ಒಮ್ಮೆ ಮದ್ರಾಸಿನಿಂದ ಪಳನಿ ಮುತ್ತಯ್ಯ ಪಿಳ್ಳೆಯವರು ಬಂದಿದ್ದು, ಮೃದಂಗವಾದನದ ಮೇಲೆ ಸವಾಲನ್ನು ಹಾಕಿದಾಗ, ಮಹಾರಾಜರಿಗೆ, ಮುತ್ತಣ್ಣನವರು ಸವಾಲನ್ನು ಸ್ವೀಕರಿಸುವಂತೆ ತಿಳಿಸಿದರು. ಅರಮನೆ ಅಂಬಾವಿಲಾಸ ಸಭಾಂಗಣದಲ್ಲಿ ಸೇಲಂ ದೊರೈಸ್ವಾಮಿ ಅಯ್ಯಂಗಾರ್ಯರ ಹಾಡುಗಾರಿಕೆ, ಪಕ್ಕವಾದ್ಯದಲ್ಲಿ. ಅಂದಿನ ಉದಯೋನ್ಮುಖ ಕಲಾವಿದ ಚೌಡಯ್ಯನವರ ಪಿಟೀಲು ಹಾಗೂ ಇವರಿಬ್ಬರ ಮೃದಂಗ ಪಕ್ಕವಾದ್ಯ. ಕಚೇರಿಯಲ್ಲಿ ಅಯ್ಯಂಗಾರಾರ್ಯರು ಚೌಕಕಾಲ ಪಲ್ಲವಿಯನ್ನು ಹಾಡಿದರು. ಅತ್ಯಮೋಘವಾಗಿ ಪಳನಿ ಮುತ್ತಯ್ಯ ಪಿಳ್ಳೆಯವರು ನುಡಿಸಿದರು. ಸವಾಲಿನಂತೆ ನಂತರ ನುಡಿಸಿದ ಮುತ್ತಣ್ಣನವರ ವ್ಯವಹಾರಯುತ ತನಿಯಾವರ್ತನದಲ್ಲಿ, ಪಿಳ್ಳೆಯವರು ತುಂಬಿದ ಸಭೆಯಲ್ಲಿ ಸೋಲನ್ನೊಪ್ಪಿಸಿದರು. ಆದರೆ ಕೊನೆಕೋಲು ಮಾಡುವಂತೆ ಮತ್ತೆ ಸವಾಲೆಸೆದರು. ಮಹಾರಾಜರಿಗೆ ಉಭಯ ಸಂಕಟ. ತಕ್ಷಣದಲ್ಲಿ ತೀರ್ಮಾನ ನೀಡಬೇಕು. ಮುತ್ತಣ್ಣನವರು ವಿನಮ್ರರಾಗಿ ಸವಾಲು ಸ್ವೀಕರಿಸಲು ತಿಳಿಸಿದರು. ಇಲ್ಲಿ ಸಹ ಇವರಿಗೆ ಗೆಲುವು. ವಿದ್ಯೆಯಲ್ಲಿಯೇ ಅಲ್ಲದೆ ನಡತೆಯಲ್ಲಿ ಸಹ ತುಂಬಿದ ಕೊಡವಾಗಿದ್ದ ಮುತ್ತಯ್ಯ ಪಿಳ್ಳೆಯವರು ಮುಕ್ತವಾಗಿ ಸೋಲನ್ನು ಒಪ್ಪಿಕೊಂಡರು. ಪ್ರಭುಗಳು ಮೃದಂಗ ಮುತ್ತುಸ್ವಾಮಿ ದೇವರ್ ರವರಿಗೆ ಸುವರ್ಣ ಸರಸ್ವತಿ ಹಾಗೂ ಪಳನಿ ಮುತ್ತಯ್ಯ ಪಿಳ್ಳೆಯವರಿಗೆ ರಜತ ಸರಸ್ವತಿಯನ್ನು ಮತ್ತು ಶಾಲು ಜೋಡಿಯನ್ನು ನೀಡಿ ಅರಮನೆ ಸಂಪ್ರದಾಯ ಗೌರವವನ್ನು ನೀಡಿದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಂಥದ ಕೊನೆಯ ಘಟ್ಟದಲ್ಲಿ, ಒಂದು ಕ್ಷಣ ಪ್ರಭುಗಳು ಆನಂದದಿಂದ ಮೈಮರೆತು ಜೋರಾಗಿ ನಕ್ಕು ಕರತಾಡನ ಮಾಡಿದರು ಜೊತೆಯಲ್ಲಿ ಸಭೆಯು ಕರತಾಡನಮಾಡಿತು. ಶಿಷ್ಟಾಚಾರದ ಅರಿವಾಗಿ, ಕರವಸ್ತ್ರದಿಂದ ಬಾಯಿಯನ್ನು ಮುಚ್ಚಿ, ನಂತರ, “ಮುತ್ತಣ್ಣನವರೇ, ನಮ್ಮಿಂದ ತಪ್ಪು ಮಾಡಿಸಿಬಿಟ್ಟಿರಲ್ಲಾ” ಎಂದು ಉದ್ಗಾರ ಮಾಡಿದರಂತೆ. ಶ್ರೀ ಉಪಾಸಕರೂ, ವಂಶಪಾರಂಪರ್ಯವಾಗಿ ಪಡೆದ ಜ್ಞಾನಸ್ಥರೂ, ಕರದಲ್ಲಿ ಶನಿಸ್ಥಾನ ಹೊಂದಿದವರೂ ಆದ ಮುತ್ತಣ್ಣನವರಿಗೆ ಸೋಲುಂಟೇ?

ಶ್ರೀಯುತರು ಮೈಸೂರಿಗೆ ಬಂದು ನೆಲೆಸಿದ ನಂತರ ಮದ್ರಾಸಿನವರು ಇವರ ಕೊರತೆಯನ್ನು ಅನುಭವಿಸುತ್ತಿದ್ದರು. ಟೈಗರ್ ವರದಾಚಾರ್ಯರು, “ಸಂಗೀತದ ಎಲ್ಲಾ ರತ್ನಗಳೂ ಹೋದವು, ಮತ್ತೊಂದು ಉಳಿದಿದೆ ಅದು ಮೈಸೂರಿನಲ್ಲಿದೆ” ಎಂದು ಹೇಳುತ್ತಿದ್ದರಂತೆ. ಮದ್ರಾಸಿಗೆ ಕೊರತೆ ಮೈಸೂರಿಗೆ ಕೊಡುಗೆ ಆಯಿತಲ್ಲ, ಇದು ಮೈಸೂರಿನವರ ಭಾಗ್ಯ.

ಮುತ್ತಣ್ಣನವರ ಮಾತೃ ಭಾಷೆ ತೆಲುಗು. ಇವರಿಗೆ ತಮಿಳು ನಾಡಭಾಷೆ. ಕ್ರಮೇಣ ಕನ್ನಡ ಕಲಿತರು. ದೈವಭಕ್ತರೂ ಸರಳರೂ ಆಗಿದ್ದರು. ಮಂತ್ರ, ತಂತ್ರಶಾಸ್ತ್ರದ ಪ್ರಾವಿಣ್ಯತೆಯನ್ನು ಸಹ ವಂಶಪಾರಂಪರ್ಯವಾಗಿ ಪಡೆದಿದ್ದರು. ಪಾಠ ಮಾಡುವಾಗ ಕೋಪಿಷ್ಠರಾಗುತ್ತಿದ್ದರು. ಇದು ಬಹುತೇಕ ಪಂಡಿತರ ಸಾಮಾನ್ಯ ಗುಣ. ಶಿಷ್ಯರಲ್ಲಿ ಅಪಾರ ಪ್ರೇಮ ಆದರೆ, ಶಿಸ್ತಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಇವರ ಶಿಷ್ಯರಲ್ಲಿ ಪ್ರಮುಖರು, ಜ್ಞಾತಿ ಕಂದಸ್ವಾಮಿ ದೇವರ್, ಪುತ್ರ ಟಿ. ಎಂ. ವೆಂಕಟೇಶ ದೇವರ್, ಸಂಗೀತ ರತ್ನ ತಗಡೂರು ಪುಟ್ಟಸ್ವಾಮಯ್ಯ (ಮೂಗಯ್ಯ), ಕುಂದನ ಕೆಲಸದ ವೀರಪ್ಪಾಚಾರ್, ಕೆಂಪಾಚಾರ್, ತಿರಮಕೂಡಲು ಚೌಡಪ್ಪ. ಇವರಲ್ಲಿ ತಿರುಮಕೂಡಲು ಚೌಡಪ್ಪನವರೇ ಹೆಚ್ಚುಪಾಲು ಪಾಠ ಮಾಡಿದ್ದರೂ ಗುಬ್ಬಿ ಕಂಪನಿಯಲ್ಲಿ ನಾಟಕಗಳಿಗೆ ನುಡಿಸಲು ಖಾಯಂ ಆಗಿ ಸೇರಿದರು. ಕಾರಣ, ಸಂಸಾರ ಸಾಕಬೇಕಲ್ಲ. ಎಲ್ಲರಿಗೂ ರಾಜಾಶ್ರಯ ಸಿಗುವುದಿಲ್ಲ. ಜೊತೆಗೆ ಅಂದಿನ ಸಂಗೀತ ಕಚೇರಿಗಳಲ್ಲಿ ಸಿಗುತ್ತಿದ್ದ ಸಂಭಾವನೆ ಕನಿಷ್ಠ. ಇದರ ಜೊತೆಗೆ ಗುಬ್ಬಿಕಂಪನಿಯಂತಹ ಸ್ಥಳಗಳಲ್ಲಿ ವಿದ್ವಾಂಸರಿಗೇ ಆದ್ಯತೆ ಹಾಗೂ ಶುದ್ಧ ಸಂಪ್ರದಾಯಬದ್ದವಾದ ವಾದನಕ್ಕೆ ವಿಫುಲ ಅವಕಾಶ ಇರುತ್ತಿತ್ತು. ಸ್ವತಃ ಗುರುಗಳೇ ಶಿಷ್ಯನನ್ನು ಕಂಪನಿಗೆ ಸೇರಿಸಿದರಂತೆ. ಮೂಗಯ್ಯನವರು ಚಿರಪರಿಚಿತ ವಿದ್ವಾಂಸರು. ನಂತರದ ದಿನಗಳಲ್ಲಿ ಗುರುಗಳ ಬಳಿ ಇನ್ನೂ ಬಹಳ ಕಲಿಯಬಹುದಾಗಿತ್ತೆಂದು ಮರುಗುತ್ತಿದ್ದರು.

ಇಂದಿನ ಬಹುತೇಕ ಮೈಸೂರು ಮೃದಂಗ ವಾದಕರೆಲ್ಲರೂ ಈ ಪಂಥದಿಂದ ಬಂದಿರುವವರೇ ಆಗಿದ್ದಾರೆ. ಕಾಲಾನುಕ್ರಮದಲ್ಲಿ ಸಹಜವಾಗಿ ವಾದನ ಶೈಲಿಗಳು ಹಾಗೂ ಪರಂಪರೆಗಳೂ ವಿಭಿನ್ನವಾಗುತ್ತದೆ. ಆದರೆ ಮೂಲವನ್ನು ಮರೆಯುವಂತಿಲ್ಲ. ಇವರ ನೇರ ಪರಂಪರೆಗೆ ಸೇರಿದ ವಿದ್ವಾನ್‌ ವಿ. ನಾಗಭೂಷಣಾಚಾರ್ಯರು (ಇವರ ಪುತ್ರ ಟಿ.ಎಂ. ವೆಂಕಟೇಶ ದೇವರ್ ರವರ ಪಟ್ಟ ಶಿಷ್ಯರು) ದೇವರ್ ಮೃದಂಗ ಪರಂಪರೆಯನ್ನೂ ಹಾಗೂ ಅತ್ಯಮೂಲ್ಯ ಮೃದಂಗಗಳನ್ನು ಯಥಾವತ್‌ ರಕ್ಷಿಸಿದ್ದಾರೆ.

ಶಿಷ್ಯರನ್ನು ತಯಾರುಮಾಡುವುದೆಂದರೆ ಇನ್ನೊಂದು ತಲೆಮಾರನ್ನು ಸೃಷ್ಟಿಸುವುದಾಗಿದೆ. ಕಲಾಪ್ರಕಾರದಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬಹಳ ಪ್ರಾಶಸ್ತ್ಯವಿದೆ. ಶಿಷ್ಯರನ್ನು ಭಯಭಕ್ತಿಗಳಲ್ಲಿ ಬೆಳೆಸುತ್ತಾ ಪರೋಕ್ಷವಾಗಿ ವಿದ್ಯೆಯ ಸೂಕ್ಷಾಂಗಗಳನ್ನು ಶಿಷ್ಯರ ಅರ್ಹತೆಯ ಆಧಾರದ ಮೇಲೆ ತಿಳಿಸುತ್ತಾ ಬರುತ್ತಾರೆ. ಮುತ್ತಣ್ಣನವರ ಪಾಠ ಬಹಳ ಶಿಸ್ತಿನದು. ಘಂಟೆಗಟ್ಟಲೆ ಪಾಠ ಮಾಡುತ್ತಿದ್ದರು. ನಂತರದಲ್ಲಿ ಕಚೇರಿಗಳಿಗೆ ಶಿಷ್ಯರನ್ನು ಪರಿಚಯಿಸಿ, ತಾವು ಖಂಜರಿ ಅಥವಾ ಕೊನಕೊಲು ಮಾಡುತ್ತಾ ಕಚೇರಿ ತಂತ್ರಗಳನ್ನು ಶಿಷ್ಯರಿಗೆ ಕಲಿಸಿಕೊಡುತ್ತಿದ್ದರು.

ಎತ್ತರದ ವ್ಯಕ್ತಿತ್ವವುಳ್ಳ ಮುತ್ತಣ್ಣನವರನ್ನು ಮೈಸೂರು ಬಹುಕಾಲ ಇಟ್ಟುಕೊಳ್ಳಲಾಗಲಿಲ್ಲ. ಮೈಸೂರಿಗೆ ಬಂದ ಕೇವಲ ೭ ವರ್ಷಗಳಲ್ಲಿ ಅಂದರೆ ೧೯೩೧ರಲ್ಲಿ ತಮ್ಮ ೫೪ನೇ ವಯಸ್ಸಿನಲ್ಲಿಯೇ ಶಿವೈಕ್ಯರಾದರು. ಮತ್ತೊಂದು ವಿಶೇಷವೆಂದರೆ ತಮ್ಮ ಪರಮಾಪ್ತರಾದ ಬಿಡಾರಂ ಕೃಷ್ಣಪ್ಪನವರೂ ಇವರೂ ಅದೇ ವರ್ಷ ಒಂದೇ ತಿಂಗಳಲ್ಲಿ ತಮ್ಮ ಇಷ್ಟದೈವವನ್ನು ಸೇರಿದರು. ಆದರೆ ಸಮಾಧಾನಕರ ಅಂಶವೆಂದರೆ, ಮುತ್ತಣ್ಣನವರ ಸುಪುತ್ರರಾದ ಟಿ.ಎಂ. ವೆಂಕಟೇಶ್‌ ತೇವರ್ ರವರು, ತಮ್ಮ ತೀರ್ಥರೂಪುರವರಂತೆಯೇ ಅವರ ಸ್ಥಾನದಲ್ಲಿಯೇ, ಪ್ರಭುಗಳ ಕೋರಿಕೆಯಂತೆ ಆಸ್ಥಾನ ವಿದ್ವಾಂಸರಾಗಿದ್ದೇ ಅಲ್ಲದೆ, ತಂಜಾವೂರು ಮೃದಂಗ ಶೈಲಿಯನ್ನು ಮೈಸೂರಿನಲ್ಲಿ ಹರಡಿ ಬೆಳೆಸಿದರು. ಪ್ರತಿ ಮನುಷ್ಯನ ವ್ಯಕ್ತಿತ್ವವನ್ನು ಅಳೆಯುವುದು ಆತನು ಬಿಟ್ಟುಹೋಗಿರುವ ಅಂಶದ ಮೇಲೆ. ಅದು ಭೌತಿಕ, ಹಣ ದ್ರವ್ಯ ಆಸ್ತಿಯಲ್ಲ. ಆದರೆ ವಿದ್ಯೆ, ಸಂಸ್ಕೃತಿ ಹಾಗೂ ಪರಂಪರೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃದಂಗ ಮುತ್ತುಸ್ವಾಮಿ ತೇವರ್ ರವರು ಮೃದಂಗವಾದನದ ಮೂಲಕ ಇಂದಿಗೂ ನಮ್ಮೊಡನೆ ಇದ್ದಾರೆ ಎಂದರೆ ತಪ್ಪಾಗಲಾರದು.