ಮುತ್ತುಸ್ವಾಮಿ ದೀಕ್ಷಿತರು

’ವಾತಾಪಿ ಗಣಪತಿಂ ಭಜೇ ಹಂ……’

ಬಹು ಪ್ರಸಿದ್ಧವಾದ ಕೃತಿ ಇದು. ಮತ್ತೆಮತ್ತೆ ಸಂಗೀತ ಕಚೇರಿಗಳಲ್ಲಿ ಇದನ್ನು ಕೇಳಿ ಸಂತೋಷಪಟ್ಟಿದ್ದೇವೆ.

ಇದನ್ನು ರಚಿಸಿದವರು ಮುತ್ತುಸ್ವಾಮಿ ದೀಕ್ಷಿತರು. ಇದು ಹಂಸಧ್ವನಿ ರಾಗದಲ್ಲಿದೆ. ಈ ರಾಗವನ್ನು ನಿರ್ಮಿಸಿದವರು ರಾಮಸ್ವಾಮಿ ದೀಕ್ಷಿತರು, ಮುತ್ತುಸ್ವಾಮಿಯವರ ತಂದೆ.

ಇದಲ್ಲದೆ ’ಭಜರೇ ರೇ ಚಿತ್ತ ಬಾಲಾಂಬಿಕಾಂ’, ’ಕಂಜದ ಳಾಯತಾಕ್ಷಿ’, ’ನೀರಜಾಕ್ಷಿ ಕಾಮಾಕ್ಷಿ’, ’ವರದ ರಾಜ ಮುಪಾಸ್ಮಹೆ’, ’ರಾಮಚಂದ್ರೇನ ಸಮ್ರಕ್ಷಿತೋಹಂ’, ’ಮಾಮವ ರಘುವೀರ’, ’ಶಿವಕಾಮೇಶ್ವರಿಂ’, ’ತ್ಯಾಗರಾಜಯೋಗ ವೈಭವಂ’, ’ಸ್ವಾಮಿನಾಥ’, ’ಅಕ್ಷಯ ಲಿಂಗ ವಿಭೋ ಸ್ವಯಂ ಭೋ’, ’ಮಾಮವ ಪಟ್ಟಾಭಿರಾಮ’, ’ಆನನಂದಾಮೃತ ವರ್ಷಿಣಿ’ ಮತ್ತು ’ಶ್ರೀರಂಗಪುರ ವಿಹಾರ’ದಂತಹ ಜನಪ್ರಿಯ ಕೃತಿಗಳನ್ನು ರಚಿಸಿದವರು ಮುತ್ತುಸ್ವಾಮಿ ದೀಕ್ಷಿತರು.

ನಮ್ಮ ದೇವರುಗಳಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟು ಅವರನ್ನು ’ತ್ರಿಮೂರ್ತಿ’ಗಳು ಎಂದು ಕರೆಯುತ್ತೇವೆ. ಹಾಗೆಯೇ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತಗಳನ್ನು ಪ್ರತಿಪಾದಿಸಿ ಅವುಗಳನ್ನು ಭದ್ರವಾದ ತಳಹದಿಯ ಮೇಲೆ ನಿಲ್ಲಿಸಿದ ಶಂಕರ, ರಾಮಾನುಜ ಮತ್ತು ಮಧ್ವರನ್ನು ’ಆಚಾರ್ಯುತ್ರಯ’ರೆನ್ನುತ್ತೇವೆ. ಕರ್ಣಾಟಕ ಸಂಗೀತದ ಮಹಾಶಿಲ್ಪಿಗಳಾದ ತ್ಯಾಗರಾಜ, ದೀಕ್ಷಿತರು ಮತ್ತು ಶ್ಯಾಮಶಾಸ್ತ್ರಿಯವರನ್ನು ’ಸಂಗೀತ ತ್ರಿಮೂರ್ತಿ’ಗಳು ಎಂದು ಗೌರವಿಸುತ್ತೇವೆ.

೧೭೫೦ ರಿಂದ ೧೮೫೦ ರ ವರೆಗಿನ ಒಂದು ನೂರು ವರ್ಷಗಳು ಕರ್ಣಾಟಕ ಸಂಗೀತದ ಸ್ವರ್ಣಯುಗ. ಕಾರಣವಿಷ್ಟೆ: ಮೇಲೆ ಹೇಳಿದ ಸಂಗೀತ ತ್ರಿಮೂರ್ತಿಗಳು ಈ ಒಂದುನೂರು ವರ್ಷಗಳ ಅವಧಿಯಲ್ಲಿ ಹುಟ್ಟಿ ತಮ್ಮ ಸಂಗೀತವನ್ನು ದೇವರಿಗೆ ಅರ್ಪಿಸಿ ಕೃತಕೃತ್ಯರಾದರು. ಈ ಮೂವರೂ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿಯೇ ಹುಟ್ಟಿದುದು ಒಂದು ವಿಶೇಷ. ಅವರಲ್ಲಿ ಶ್ಯಾಮಶಾಸ್ತ್ರಿಗಳು ಹಿರಿಯರು. ಅವರು ೧೭೬೨ ರಲ್ಲಿ ಹುಟ್ಟಿದರು. ೧೭೬೭ ರಲ್ಲಿ ತ್ಯಾಗರಾಜರು ಜನಿಸಿದರು. ನಾದಜ್ಯೋತಿ ಮುತ್ತುಸ್ವಾಮಿ ದೀಕ್ಷಿತರೇ ಕಿರಿಯರು. ಅವರ ಜನನ ೧೭೭೫ ರಲ್ಲಿ.

’ನಾದಕ್ಕಿಂತ ವಿಶೇಷವಾದ ಬೇರೆ ಮಂತ್ರವಿಲ್ಲ’ ಎನ್ನು ತ್ತಾರೆ. ಅಂತಹ ನಾದವನ್ನೇ ಉಪಯೋಗಿಸಿ ಸುಂದರವಾದ ನಾದಮಯ ದೇವಾಲಯಗಳನ್ನು ಕಟ್ಟಿ ಅವುಗಳಲ್ಲಿ ಸುಬ್ರಹ್ಮಣ್ಯ, ವಿನಾಯಕ, ಶಂಕರ ಪಾರ್ವತಿ, ವಿಷ್ಣು, ಲಕ್ಷ್ಮಿ, ಸರಸ್ವತಿ, ರಾಮ, ಕೃಷ್ಣ ಮುಂತಾದ ದೇವರುಗಳನ್ನು ತಮ್ಮ ಕೃತಿಗಳ ಮೂಲಕ ಪ್ರತಿಷ್ಠಿಸಿದ ದೀಕ್ಷಿತರು ನಿಜಕ್ಕೂ ಸಂಗೀತಸಂತರು. ಕಲ್ಲು, ಇಟ್ಟಿಗೆ, ಗಾರೆ ಇವುಗಳಿಂದ ಕಟ್ಟಲ್ಪಟ್ಟ ದೇವಾಲಯ ಗಳಿಗಿಂತಲೂ ನಾದನಿರ್ಮಿತ ದೇವಾಲಯಗಳು ಶಾಶ್ವತ ವೆಂಬುದನ್ನು ಮನಗಂಡ ಜ್ಞಾನಿಗಳು. ರಾಗಸ್ವರೂಪಗಳ ಕಲ್ಪನಾ ಸೌಂದರ್ಯದಲ್ಲಿ ಮನಶ್ಯಾಂತಿಯನ್ನು ಪಡೆದ ನಾದೋಪಾಸ ಕರು. ಉಪನಿಷತ್ತುಗಳ ಸಾರವನ್ನು ಹೀರಿ, ಅವುಗಳ ವಾಕ್ಯ ಗಳನ್ನು ಸದಾ ಹೇಳಿಕೊಳ್ಳುತ್ತಿದ್ದ ಪರಮ ವೇದಾಂತಿಗಳು. ಕರ್ಣಾಟಕ ಮತ್ತು ಹಿಂದೂಸ್ತಾನಿ-ಈ ಎರಡು ಪದ್ಧತಿಗಳಲ್ಲೂ ಕೃತಿಗಳನ್ನು ರಚಿಸಿದ ಮಹಾನ್ ವಾಗ್ಗೇಯಕಾರರು.

ಬಾಲ್ಯ

ಮುತ್ತುಸ್ವಾಮಿ ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರು ನಾಲ್ಕು ವೇದಗಳಲ್ಲೂ ಪಾರಂಗತರು. ಒಳ್ಳೆಯ ಶಾರೀರವಿದ್ದು ದರಿಂದ ಹಾಡುವುದನ್ನು ಬಲುಬೇಗ ಕಲಿತುಕೊಂಡರು. ಕಲಿಕೆ ಮುಗಿದನಂತರ ರಾಮಸ್ವಾಮಿ ದೀಕ್ಷಿತರು ತಿರುವಾರೂರಿಗೆ ಹೋಗಿ ನೆಲಸಿದರು. ಈಗ ಸರ್ವಜನ ಪ್ರಿಯವಾಗಿರುವ ಹಂಸಧ್ವನಿ ರಾಗವನ್ನು ಕಂಡುಹಿಡಿದುದಲ್ಲದೆ ಅನೇಕ ವರ್ಣಗಳು, ದರು, ಕೃತಿಗಳು ಮತ್ತು ರಾಗಮಾಲಿಕೆಗಳನ್ನು ರಚಿಸಿದರು.

ರಾಮಸ್ವಾಮಿ ದೀಕ್ಷಿತರಿಗೆ ಬಹುಕಾಲ ಮಕ್ಕಳಾಗಲಿಲ್ಲ. ಕೊನೆಗೆ ಸಂನ್ಯಾಸಿಯೊಬ್ಬನ ಆಜ್ಞೆಯಂತೆ ವೈದೀಶ್ವರನ್ ಕೋಯಿಲಿನ ಬಾಲಾಂಬಿಕಾದೇವಿಯನ್ನು ಮಂಡಲ ಪೂಜೆ ಯಿಂದ ತೃಪ್ತಿಪಡಿಸಿದರು. ಮಂಡಲ ಪೂಜೆಯ  ಕೊನೆಯ ದಿನ ರಾಮಸ್ವಾಮಿ ದೀಕ್ಷಿತರ ಕನಸಿನಲ್ಲಿ ದೇವಿಯು ಕಾಣಿಸಿಕೊಂಡು ಮುತ್ತಿನ ಹಾರವನ್ನು ಕೊಟ್ಟಳೆಂದು ಪ್ರತೀತಿ. ಭಗವತಿಯ ಅನುಗ್ರಹದಿಂದ ಗಂಡು ಮಗುವೊಂದು ಹುಟ್ಟಿತು. ದೇವಿಯು ಕೊಟ್ಟ ಮುತ್ತಿನ ಹಾರವನ್ನು ಜ್ಞಾಪಿಸಿಕೊಂಡು ಮಗುವಿಗೆ ’ಮುತ್ತುಸ್ವಾಮಿ’ ಎಂದು ಹೆಸರಿಡಲಾಯಿತು.

ಮುಂದೆ ಮುತ್ತು ಸ್ವಾಮಿ ದೀಕ್ಷಿತರು ರಚಿಸಿದ ’ಭಜರೇ ರೇ ಚಿತ್ತ ಬಾಲಾಂಬಿಕಾಂ’ ಕೃತಿಯಲ್ಲಿ ’ಗುರುಗುಹ ರೂಪ ಮತ್ತು ಕುಮಾರಜನನೀಂ’ ಎಂಬ ಮಾತುಗಳು ಬರುತ್ತವೆ; ಇವು ಕನಸಿನ ವಿಷಯದ ಕಥೆಗೆ ಸಮರ್ಥನೆ ಕೊಡುವಂತೆ ಕಾಣುತ್ತದೆ. ಮುತ್ತುಸ್ವಾಮಿಯಾದನಂತರ ರಾಮಸ್ವಾಮಿ ದೀಕ್ಷಿತ ರಿಗೆ ಚಿನ್ನಸ್ವಾಮಿ ಮತ್ತು ಬಾಲುಸ್ವಾಮಿ ಎಂಬ ಇಬ್ಬರು ಗಂಡು ಮಕ್ಕಳೂ ಬಾಲಾಂಬಿಕಾ ಎಂಬ ಹೆಣ್ಣು ಮಗುವೂ ಹುಟ್ಟಿದವು.

ಮುತ್ತುಸ್ವಾಮಿಯ ಬುದ್ಧಿಶಕ್ತಿಯು ಅಸಾಧಾರಣವಾದುದು. ಅದರಿಂದಲೇ ಅವರು ಬಾಲ್ಯದಲ್ಲಿ ಸಕಲ ವಿದ್ಯಾಪಾರಂಗತ ರಾದರು. ಜೊತೆಗೆ  ತಂದೆಯವರಿಂದ ಸಂಗೀತ ಶಿಕ್ಷಣವೂ ದೊರೆಯಿತು. ಮದರಾಸಿನ ಸಮೀಪದ ಮನಾಲಿ ಎಂಬ ಗ್ರಾಮದ ಜಹಗೀರುದಾರರಾದ ಮುತ್ತುಕೃಷ್ಣ ಮೊದಲಿಯಾರರ ಅಪೇಕ್ಷೆಯಂತೆ ರಾಮಸ್ವಾಮಿಯವರು ಕುಟುಂಬದೊಂದಿಗೆ ಮನಾಲಿಯಲ್ಲಿ ನೆಲಸಿದರು. ಇದರಿಂದ ರಾಮಸ್ವಾಮಿ ಯವರಿಗೂ ಮತ್ತು ಅವರ ಸಂಸಾರಕ್ಕೂ ಒಳ್ಳೆಯದಾಯಿತು. ಮೊದಲಿಯಾರರ ಮಗ ವೆಂಕಟಕೃಷ್ಣ ಮೊದಲಿಯಾರರು ಮದರಾಸಿಗೆ ಹೋದಾಗಲೆಲ್ಲ ಮುತ್ತುಸ್ವಾಮಿಯನ್ನೂ ಜೊತೆ ಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ದೀಕ್ಷಿತರಿಗೆ ಪ್ರಯೋಜನವಾಯಿತು. ಕಂಪೆನಿಯ ವಾದ್ಯಮೇಳವು ನುಡಿಸುತ್ತಿದ್ದ ಪಾಶ್ಚಾತ್ಯ ಸಂಗೀತದಿಂದ ಅನೇಕ ರಚನೆಗಳನ್ನು ಗ್ರಹಿಸಿದರು. ಪಾಶ್ಚಾತ್ಯ ಸಂಗೀತವನ್ನು ಭಾರತೀಯರಿಗೆ ಪರಿಚಯ ಮಾಡಿಕೊಡಬೇಕೆಂದು ಆಶಿಸಿದ ಕರ್ನಲ್ ಬ್ರೌನ್ ಎಂಬ ಕಂಪೆನಿಯ ಅದಿಕಾರಿಗೆ ಪಾಶ್ಚಾತ್ಯ ಸಂಗೀತ ರಚನೆಗಳಲ್ಲಿ ಕೆಲವಕ್ಕೆ ಸಂಸ್ಕೃತ ಸಾಹಿತ್ಯವನ್ನೂ ಒದಗಿಸಿದರು. ಅಂತಹ ರಚನೆಗಳು ಸುಮಾರು ಐವತ್ತಿವೆ.

ಮುತ್ತುಸ್ವಾಮಿಯ ತಮ್ಮ ಬಾಲುಸ್ವಾಮಿಯು ಪಾಶ್ಚಾತ್ಯರು ಉಪಯೋಗಿಸುತ್ತಿದ್ದ ಪಿಟೀಲು ವಾದ್ಯವನ್ನು ಕಲಿತರು. ಮುತ್ತು ಸ್ವಾಮಿಯ ವೀಣಾವಾದನದೊಂದಿಗೆ ಬಾಲುಸ್ವಾಮಿಯ ಪಿಟೀಲು ವಾದನವೂ ಸೇರಿ ಕೇಳುವುದಕ್ಕೆ ಹಿತಕರವಾಗಿತ್ತು. ಹೀಗೆ ಪ್ರಾಯೋಗಿಕವಾಗಿ ಆರಂಭವಾದ ಈ ಮೇಳವು ಮುಂದೆ ಕರ್ಣಾಟಕ ಸಂಗೀತ ಕಚೇರಿಗಳಲ್ಲಿ ಪಿಟೀಲು ಪಕ್ಕವಾದ್ಯವಾಗಲು ನಾಂದಿ ಆಯಿತು. ಮತ್ತೊಬ್ಬ ತಮ್ಮ ಚಿನ್ನಸ್ವಾಮಿಯು ಒಳ್ಳೆಯ ವೈಣಿಕ ಹಾಗೂ ರಚನಕಾರ ರಾಗಿದ್ದರು. ’ಗಾನಲೋಲ ಕರುಣಾಲವಾಲ’ ಅವರ ರಚನೆ.

ಚಿದಂಬರನಾಥ ಯೋಗಿಯ ಅನುಗ್ರಹ

ಹಿಂದೆ ರಾಮಸ್ವಾಮಿ ದೀಕ್ಷಿತರಿಗೆ ಶ್ರೀವಿದ್ಯಾ ಮಂತ್ರವನ್ನು ಉಪದೇಶಿಸಿದ್ದ ಚಿದಂಬರನಾಥ ಯೋಗಿಯೆಂಬ ಸಂನ್ಯಾಸಿಯು ದಕ್ಷಿಣ ದೇಶದಿಂದ ಕಾಶಿಗೆ ತೀರ್ಥಯಾತ್ರೆ ಹೊರಟು ಮದರಾಸಿಗೆ ಬಂದು ತಂಗಿದರು. ಇದು ರಾಮಸ್ವಾಮಿಯವರಿಗೆ ತಿಳಿದು ಅವರು ಮನಾಲಿಯಿಂದ ಮದರಾಸಿಗೆ ಹೋಗಿ ಯೋಗಿಯನ್ನು ಭೇಟಿಮಾಡಿ, ಮನಾಲಿಗೆ ಕರೆತಂದರು. ಮುತ್ತುಸ್ವಾಮಿ ದೀಕ್ಷಿತರು ಅವರ ಸೇವೆಗೆ ನಿಂತರು. ಪೂಜಾ ಕಾಲದಲ್ಲಿ ಹಾಡಿ ಯೋಗಿಯನ್ನು ಸಂತೋಷಪಡಿಸುತ್ತಿದ್ದರು. ಯೋಗಿಗೆ ದೀಕ್ಷಿತರಲ್ಲಿ ತುಂಬ ಅಭಿಮಾನ ಬಂದಿತು.

ದೀಕ್ಷಿತರನ್ನು ತಮ್ಮ ಜೊತೆಯಲ್ಲಿ ಕಾಶಿಗೆ ಕರೆದುಕೊಂಡು ಹೋಗಲು ಇಚ್ಛಿಸಿದರು. ಮೊದಲು ರಾಮಸ್ವಾಮಿಯವರು ಒಪ್ಪಲಿಲ್ಲ. ಯೋಗಿ ಬಹಳ ಕಷ್ಟಪಟ್ಟು ಅವರನ್ನು ಒಪ್ಪಿಸಿ ದೀಕ್ಷಿತರನ್ನು ಕರೆದುಕೊಂಡು ಹೋದರು.

ಮುತ್ತುಸ್ವಾಮಿ ದೀಕ್ಷಿತರು ಕಾಶಿಯಲ್ಲಿ ಸುಮಾರು ಐದಾರು ವರ್ಷಗಳಿದ್ದರು. ಅವರ ಜೀವನವು ರೂಪುಗೊಂಡುದು ಈ ಅವಧಿಯಲ್ಲಿಯೇ ಎನ್ನುಬಹುದು. ಯೋಗಿಯ ಆಶ್ರಯ ದಲ್ಲಿಯೂ ಮತ್ತು ಶಿಷ್ಯವೃತ್ತಿಯಲ್ಲಿಯೂ ಇದ್ದುಕೊಂಡು ಸಾರ್ಥಕವಾದ ಬದುಕನ್ನು ನಡೆಸಿದರು. ಗುರುನವಿನಿಂದ ಶ್ರೀವಿದ್ಯಾ ಉಪಾಸನಾ ದೀಕ್ಷೆಯನ್ನು ಸ್ವೀಕರಿಸಿ, ಷೋಡಶಾಕ್ಷರೀ ಮಂತ್ರವನ್ನು ಕಲಿತುಕೊಂಡರು; ತಂತ್ರವಿಧಿಯ ಪೂರ್ವ ಮಾರ್ಗದ ಮರ್ಮವನ್ನರಿತರು. ಯೋಗಾಭ್ಯಾಸ ಮಾಡಿದರು.

ಕಾಶಿಯಲ್ಲಿರುವಾಗ ದೀಕ್ಷಿತರು ಪ್ರತಿದಿನವೂ ಒಂದು ಕಟ್ಟುಪಾಡಿನ ಕಾರ್ಯಕ್ರಮವನ್ನು ಅನುಸರಿಸುತ್ತಿದ್ದರು. ಅರುಣೋದಯಕ್ಕೆ ಮೊದಲೇ ಎದ್ದು ಗಂಗೆಯಲ್ಲಿ ಸ್ನಾನ ಮಾಡಿ ಯೋಗಾಭ್ಯಾಸ ಮಾಡುವುದು, ಅನಂತರ ದೇವಿಯ ಪೂಜೆ, ಗುರುಗಳಲ್ಲಿ ವೇದಾಂತ ಪಾಠ, ದೇವಸ್ಥಾನಕ್ಕೆ ಹೋಗಿ ವಿಶ್ವೇಶ್ವರ, ಅನ್ನಪೂರ್ಣೆ ಮತ್ತು ವಿಶಾಲಾಕ್ಷಿ ಇವರುಗಳಿಗೆ ಪೂಜಾಕೈಂಕರ್ಯ, ತಮ್ಮ ಬಿಡದಿಗೆ ಹಿಂತಿರುಗಿ ಪೂಜೆ ಯಲ್ಲಿರುತ್ತಿದ್ದ ಗುರುವಿಗೆ ಸಹಾಯ, ವೇದಪಠನ, ಹಾಡಿಕೆ, ಸ್ವಲ್ಪಹೊತ್ತು ವೀಣಾವಾದನ, ಸಂಜೆ ಮತ್ತೆ ದೇವಸ್ಥಾನದಲ್ಲಿ ಪೂಜೆ, ರಾತ್ರಿ ಭಜನೆ ಅನಂತರ ವಿಶ್ರಾಂತಿ-ಇದು ದೀಕ್ಷಿತರ ನಿತ್ಯವಿಧಿಯಾಗಿತ್ತು. ಇದರಿಂದ ದೀಕ್ಷಿತರ ಮೈ ಮತ್ತು ಮನಸ್ಸು ಒಂದು ಶಿಸ್ತು, ಸಂಯಮಕ್ಕೆ ಒಳಪಟ್ಟು ಧರ್ಮ, ಭಕ್ತಿ ಮತ್ತು ಜ್ಞಾನಮಾರ್ಗದ ಕಡೆಗೆ ಅವರ ಗಮನ ಹೆಚ್ಚಾಯಿತು.

ಕಾಶಿ ಕ್ಷೇತ್ರದಲ್ಲಿರುವವರೆಗೆ ದೀಕ್ಷಿತರಿಗೆ ಗುರುವಿನ ಜೊತೆಯಲ್ಲೇ ಉತ್ತರ ಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿನ ದೇವಾಲಯಗಳಲ್ಲಿನ ದೈವಗಳನ್ನು ಪೂಜಿ ಸುವ ಅವಕಾಶವು ಸಿಕ್ಕಿತು. ಹಿಂದೂಸ್ತಾನಿ ಸಂಗೀತ ಪದ್ಧತಿಯ ಪರಿಚಯ ಆಯಿತು. ಮುಂದೆ ಅವರೇ ಹಾಡುಗಳನ್ನು ರಚಿಸಿ ದಾಗ ಇದು ಬಹಳ ನೆರವಾಯಿತು. ಅವರ ’ಪಶುಪತೀಶ್ವರ’ ಮತ್ತು ’ಶ್ರೀ ಸತ್ಯನಾರಾಯಣಂ’ ಶಿವಪಂತುವರಾಳಿ (ಈಗಿನ ಶುಭಪಂತುವರಾಳಿ) ರಾಗದಲ್ಲಿದೆ. ಈ ಕರ್ಣಾಟಕ ರಾಗ ಹಿಂದೂಸ್ತಾನಿ ಸಂಗೀತರ ಪದ್ಧತಿಯ ಮಿಯಾಕಿತೋಡಿಯನ್ನು ಹೋಲುತ್ತದೆ. ಈ ಹಾಡುಗಳು ದೀಕ್ಷಿತರಿಗೆ ಎರಡು ಸಂಗೀತ ಪದ್ಧತಿಗಳಲ್ಲೂ ಎಷ್ಟು ಪರಿಣಿತರು ಎಂಬುದನ್ನು ತೋರಿಸುತ್ತವೆ.

ಕಾಶಿಯಲ್ಲಿ ದೀಕ್ಷಿತರ ಜೀವನದಲ್ಲಿ ಬಹು ಮುಖ್ಯವಾದ ಘಟನೆಯೊಂದು ನಡೆಯಿತು ಎಂದು ಹೇಳುತ್ತಾರೆ. ಅದರ ಕಥೆ ಹೀಗಿದೆ:

ಒಂದು ದಿನ ಯೋಗಿಯು ದೀಕ್ಷಿತರನ್ನು ಕರೆದು, “ನಾವಿಬ್ಬರೂ ಬೇರೆಯಾಗುವ ಕಾಲ ಬಂದಿದೆ. ನೀನು ನಿನ್ನ ಊರಿಗೆ ಹಿಂತಿರುಗಿ ನಿನ್ನ ತಂದೆತಾಯಿ, ತಮ್ಮಂದಿರು, ತಂಗಿಯನ್ನು ನೋಡಬಯಸುವುದಿಲ್ಲವೇ?” ಎಂದು ಕೇಳಿದರು. ದೀಕ್ಷಿತರು, “ಇಲ್ಲ” ಎಂದರು ಆದರೂ ಯೋಗಿಯು, “ನಿನ್ನ ತಂದೆಯು ನಿನ್ನನ್ನು ಕಳುಹಿಸಲು ಒಪ್ಪಲಿಲ್ಲ. ಕೊನೆಗೆ ಒಳ್ಳೆಯ ಮಾತುಗಳನ್ನಾಡಿ ನಾನು ಅವರನ್ನು ಒಪ್ಪಿಸಿದೆ. ನಿನಗೆ ಇಲ್ಲಿಯೇ ಇದ್ದು ಮುಕ್ತಿಮಾರ್ಗವನ್ನು ಬಯಸುವ ಆಸೆ ಇರಬಹುದು. ಅದಕ್ಕೆ ಇನ್ನೂ ಕಾಲವು ಬಂದಿಲ್ಲ. ನೀನು ಊರಿಗೆ ಹೋಗಿ ನಿನ್ನ ತಂದೆತಾಯಿಗಳ ಸೇವೆ ಮಾಡು. ಮೊದಲು ಗಂಗೆಯಲ್ಲಿ ಮೂರುನಾಲ್ಕು ಮೆಟ್ಟಿಲುಗಳನ್ನಿಳಿದು ಅಲ್ಲಿ ನಿನಗೆ ಏನು ಸಿಕ್ಕುವುದೋ ಅದನ್ನು ನನ್ನಲ್ಲಿಗೆ ತೆಗೆದುಕೊಂಡು ಬಾ” ಎಂದು ಅಪ್ಪಣೆ ಮಾಡಿದರು.

ದೀಕ್ಷಿತರು ಗಂಗೆಯಲ್ಲಿಳಿದರು. ಆಶ್ಚರ್ಯ! ಬಳೆಗಳಿಂದ ಅಲಂಕೃತವಾದ ಹೆಣ್ಣಿನ ಕೈಗಳೆರಡು ’ರಾಮ’ ಎಂದು ದೇವ ನಾಗರಿಯಲ್ಲಿ ಕೆತ್ತಲ್ಪಟ್ಟ ವೀಣೆಯೊಂದನ್ನು ದೀಕ್ಷಿತರ ಕೈ ಯಲ್ಲಿಟ್ಟು ಮತ್ತೆ ಮುಳುಗಿದವು.

ದೀಕ್ಷಿತರು ವೀಣೆಯನ್ನು ಯೋಗಿಗೆ ಒಪ್ಪಿಸಿದರು. “ಇದು ಗಂಗಾಮಾತೆಯು ನಿನಗೆ ಕರುಣಿಸಿರುವ ಮಹಾ ಪ್ರಸಾದ. ಇದನ್ನು ನೀನೇ ಇಟ್ಟುಕೊ. ಮುಂದೆ ಪ್ರಸಿದ್ಧ ವೈಣಿಕ ಹಾಗೂ ರಚನಕಾರನಾಗುತ್ತಿ” ಎಂದು ಹೇಳಿ ಯೋಗಿಯು ಆ ವೀಣೆಯನ್ನು ದೀಕ್ಷಿತರಿಗೆ ಹಿಂದಕ್ಕೆ ಕೊಟ್ಟು ಆಶೀರ್ವಾದ ಮಾಡಿದರು. ಅನಂತರ ಗಂಗೆಯಲ್ಲಿ ಮುಳುಗಿದರು. ಮತ್ತೆ ಮೇಲೆ ಬರಲಿಲ್ಲ.

ದೀಕ್ಷಿತರಿಗೆ ದಿಗ್ಭ್ರಮೆಯಾಯಿತು, ದುಃಖವಾಯಿತು. ತಮ್ಮ ದುಃಖವನ್ನು ತಡೆದುಕೊಂಡು ಅವರ ಕಳೇಬರವನ್ನು ಹುಡುಕಿಸಿ ತೆಗೆದು ಹನುಮಾನ್ ಘಾಟಿನಲ್ಲಿ ವಿಧಿವತ್ತಾಗಿ ಶವಸಸಂಸ್ಕಾರ ಮಾಡಿದರು. ಗುರುವಿನ ಆಜ್ಞೆಯನ್ನು ಪಾಲಿಸಲು ಕಾಶಿ ಕ್ಷೇತ್ರವನ್ನು ಬಿಟ್ಟು ಊರಿನ ದಾರಿಯನ್ನು ಹಿಡಿದರು.

ಆ ವೀಣೆಯು ಈಗ ಸುಬ್ಬರಾಮ ದೀಕ್ಷಿತರ ಮೊಮ್ಮಕ್ಕ ಳಾದ ಬಾಲುಸ್ವಾಮಿ ದೀಕ್ಷಿತರ ಬಳಿ ಇದೆ.

’ಗುರುಗುಹ’

ದೀಕ್ಷಿತರು ಮನಾಲಿಗೆ ಹಿಂತಿರುಗಿದರು. ಸದಾ ಗುರುವಿನದೇ ಧ್ಯಾನ. ಕುಮಾರಸ್ವಾಮಿಯು ಗುರುಗಳ ಇಷ್ಟದೈವ ಎಂಬುದೂ ಆ ದೈವದ ಕೊನೆಮೊದಲಿಲ್ಲದ ಕೀರ್ತಿ, ಕೃಪಾ ಕಟಾಕ್ಷಗಳ ಬಗ್ಗೆ ಗುರುವು ಆಗಾಗ್ಗೆ ಪ್ರಸ್ತಾಪಿಸುತ್ತಿದ್ದುದು ದೀಕ್ಷಿತರಿಗೆ ಜ್ಞಾಪಕಕ್ಕೆ ಬರುತ್ತಿತ್ತು. ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸಿ ಸಾಕ್ಷಾತ್ಕಾರವನ್ನು ಪಡೆಯಬೇಕೆಂಬ ಯೋಚನೆ ಯುಂಟಾಯಿತು. ಅದು ಹಂಬಲಕ್ಕೆ ತಿರುಗಿತು ಸುಬ್ರಹಣ್ಯ ಸ್ವಾಮಿಯನ್ನು ಸಂದರ್ಶಿಸಲು ನಿಶ್ಚಯಿಸಿ ಮನಾಲಿಗೆ ಸುಮಾರು ೫೦ ಮೈಲಿಗಳ ದೂರದ ತಿವತ್ತಣಿಗೆ ಹೋದರು.

ಬೆಟ್ಟವನ್ನು ಹತ್ತಿ, ದೇವಾಲಯದ ಮುಂದೆ ನಿಂತುಕೊಂಡು ಧ್ಯಾನಾಸಕ್ತರಾದರು. ನಲವತ್ತು ದಿವಸಗಳು ಪೂರ್ತಿ ಹಗಲು ರಾತ್ರಿಯೆನ್ನದೆ ಷಡಕ್ಷರಿ ಜಪವನ್ನೂ ಪೂಜೆಯನ್ನೂ ಭಜನೆ ಯನ್ನೂ ನಡೆಸಿದರು.

 

ಹೆಣ್ಣಿನ ಕೈಗಳೆರಡು ವೀಣೆಯೊಂದನ್ನು ದೀಕ್ಷಿತರ ಕೈಯಲ್ಲಿಟ್ಟವು

ನಲವತ್ತನೆಯ ದಿನ ದೀಕ್ಷಿತರಿಗೆ ಸುಬ್ರಹ್ಮಣ್ಯನ ಅನುಗ್ರಹ ಉಂಟಾಯಿತು. ಅದರ ಬಗ್ಗೆ ಒಂದು ದಂತ ಕಥೆ ಇದೆ. ನಡುಹಗಲಿನ ಪೂಜೆಯು ಮುಗಿದು ದೀಕ್ಷಿತರು ಒಬ್ಬರೇ ದೇವಸ್ಥಾನದ ಮುಂದೆ ಧ್ಯಾನಾಸಕ್ತರಾಗಿರುವಾಗ, ’ಮುತ್ತು ಸ್ವಾಮಿ, ಎಲ್ಲಿ ಸ್ವಲ್ಪ ನಿನ್ನ ಬಾಯನ್ನು ತೆಗೆ, ಎಂಬ ಧ್ವನಿ ಕೇಳಿತು. ಮುಚ್ಚಿಕೊಂಡಿದ್ದ ಕಣ್ಣನ್ನು ದೀಕ್ಷಿತರು ತೆರೆದರು. ಎದುರಿಗೆ ಒಬ್ಬ ಮುದುಕ ನಿಂತಿದ್ದಾನೆ. ’ಅಪರಿಚಿತ ಸ್ಥಳದಲ್ಲಿ ನನ್ನ ಹೆಸರು ಮುದುಕನಿಗೆ ಹೇಗೆ ಗೊತ್ತಾಯಿತು?’ ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತ ಬಾಯನ್ನು ತೆರೆದರು. ಮುದುಕನು ಅವರ ಬಾಯಲ್ಲಿ ಒಂದು ಚೂರು ಕಲ್ಲು ಸಕ್ಕರೆಯನ್ನು ಹಾಕಿ, “ಕಣ್ಣು ಮುಚ್ಚಿಕೊಂಡು ನಾನು ನಿನಗೆ ಏನನ್ನು ಕೊಟ್ಟೆ ಎಂಬುದನ್ನು ಹೇಳು” ಎಂದನು. ದೀಕ್ಷಿತರು ಅತ್ಯಂತ ವಿನಯದಿಂದ ಕಣ್ಣುಗಳನ್ನು ಮುಚ್ಚಿ ಕೊಂಡೇ, “ಸ್ವಾಮಿ, ನೀವು ನನಗೆ ಕೊಟ್ಟಿರುವುದು ಕಲ್ಲು ಸಕ್ಕರೆ” ಎಂದು ಹೇಳಿ ಕಣ್ಣುಗಳನ್ನು ತೆರೆದರು. ಮುದುಕ ಇರಲಿಲ್ಲ. ಸುತ್ತಲೂ ನೋಡಿದರು. ಎಲ್ಲಿಯೂ ಕಾಣಿಸಲಿಲ್ಲ. ಕಣ್ಣುಗಳನ್ನು ಉಜ್ಜಿ ಕೊಂಡು ಮತ್ತೆ ನೋಡಿದರು. ಮುದುಕನು ನಿಂತಿದ್ದ ಸ್ಥಳದಲ್ಲಿ ವಲ್ಲಿದೇವ ಸೇನಾ ಸಮೇತನಾದ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ ರೂಪವು ಕಂಡಿತು. ಅದು ಸ್ವಲ್ಪಸ್ವಲ್ಪ ವಾಗಿ ಹಿಂದೆ ಸರಿಯುತ್ತ ಗರ್ಭಗುಡಿಯಲ್ಲಿ ಐಕ್ಯವಾಯಿತು ಎಂದು ಪ್ರತೀತಿ.

ತಮ್ಮ ಮುಂದೆ ಮುದುಕನಂತೆ ಕಾಣಿಸಿಕೊಂಡುದು ಸುಬ್ರಹ್ಮಣ್ಯಸ್ವಾಮಿಯೆಂದೂ ತಮ್ಮ ಬಾಯಲ್ಲಿ ಹಾಕಿದ ಕಲ್ಲುಸಕ್ಕರೆಯ ಚೂರು ಜ್ಞಾನವೆಂದೂ ದೀಕ್ಷಿತರು ತೀರ್ಮಾನಿ ಸಿದರು. ಅವರ ಸಂತೋಷಕ್ಕೆ ಪಾರವೇ ಇಲ್ಲ. ಒಡನೆಯೇ ಹಾಡಲಾರಂಭಿಸಿ ’ಗುರುಗುಹ’ ಎಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಕರೆದು  ಅವನ ಮಹಿಮೆಯನ್ನು ಕೊಂಡಾಡುವ ಅನೇಕ ಕೃತಿಗಳನ್ನು ಹಾಡಿದರು. ಎಂಟು ಕೃತಿಗಳುಳ್ಳ ಈ ಕೃತಿಗೊಂಚಲಿಗೆ ’ಗುರುಗುಹ’ ಕೃತಿಗಳು, ಅಥವಾ ’ತಿರುತ್ತಣಿ’ ಕೃತಿಗಳೂ ಎಂದು ಹೆಸರು. ದೀಕ್ಷಿತರು ತಮ್ಮ ಗುರು ಚಿದಂಬರನಾಥ ಯೋಗಿಯ ಹೆಸರನ್ನು ಪರ್ಯಾಯವಾಗಿ ಸೂಚಿಸಿದ್ದಾರೆ. ’ಶ್ರೀನಾಥಾನಂದ’ ಎಂಬುದುವುದು ಯೋಗಿಯ ದೀಕ್ಷಾ ಹೆಸರು. ಆದುದರಿಂದ ’ಶ್ರೀನಾಥ’ ಎಂದು ಆರಂಭ ವಾಗುವ ಈ ಕೃತಿಯು ಗುರುವಿಗೆ ದೀಕ್ಷಿತರು ಮೊದಲು ಸಲ್ಲಿಸಿದ  ಕಾಣಿಕೆ.

ಕಂಚಿಯಲ್ಲಿ

ಮುತ್ತುಸ್ವಾಮಿಗೆ ತಿರುವಾರೂರಿನಲ್ಲಿರುವಾಗಲೇ ಮದುವೆ ಯಾಗಿತ್ತು. ಆದರೆ ಮುತ್ತುಸ್ವಾಮಿಯಲ್ಲಿ ಧರ್ಮಬುದ್ಧಿ ಹುಟ್ಟಿತ್ತು. ತಿರುತ್ತಣಿಯಲ್ಲಿ ಲಭಿಸಿದ ಸುಬ್ರಹ್ಮಣ್ಯಸ್ವಾಮಿಯ ದರ್ಶನವು ಅವರ ಮನಸ್ಸನ್ನು ಆಧ್ಯಾತ್ಮದೆಡೆಗೆ ತಿರುಗಿಸಿತ್ತು. ಪ್ರಾಪಂಚಿಕ ವಿಷಯಗಳು ಅವರ ಹತ್ತಿರ ಕೂಡ ಸುಳಿಯಲಿಲ್ಲ. ಆದಕಾರಣ ದೀಕ್ಷಿತರು ಸಂಸಾರದಲ್ಲಿದ್ದರೂ ಸಂನ್ಯಾಸಿಯಂತೆ ಬಾಳಿದರು. ದೇವಾಲಯದ ಮೇಲೆ ದೇವಾಲಯಗಳನ್ನು ಸಂದರ್ಶಿಸುತ್ತ ಅಲ್ಲಿನ ದೈವಗಳನ್ನು ಕುರಿತು ಹಾಡಿಡುತ್ತ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡ ಭಾಗವತ ಶಿಖಾಮಣಿ ಅವರು. ದೀಕ್ಷಿತರ ಜೀವನದ ಇತಿಹಾಸವು ತೀರ್ಥಯಾತ್ರೆಯ ಪರಮ ಪವಿತ್ರವಾದ ಕಥೆಯೆಂದು ಧಾರಾಳವಾಗಿ ಹೇಳಬಹುದು. ಇದು ಅವರು ನಡೆಸಿದ ದಿವ್ಯ ಬಾಳ್ವೆಯ ವೈಶಿಷ್ಟ್ಯ.

ಮನಾಲಿಯಿಂದ ಹೊರಟು ದೀಕ್ಷಿತರು ಕಾಂಚೀಪುರ (ಕಂಚಿ)ವನ್ನು ತಲುಪಿದರು. ಶೈವ ಮತ್ತು ವೈಷ್ಣವ ದೇವಸ್ಥಾನ ಗಳು ಅನೇಕವಿರುವ ಕಂಚಿಯು ನಿಜಕ್ಕೂ ’ದೇವಾಲಯಗಳ ಪಟ್ಟಣ’ವಾಗಿದೆ. ಆದಿಶಂಕರರು ಸಂದರ್ಶಿಸಿದ ಕಾಮಾಕ್ಷಿಯ ದೇವಸ್ಥಾನವು ಬಹಳ ಪ್ರಸಿದ್ಧವಾದುದು. ದೀಕ್ಷಿತರು ಕಂಚಿಯಲ್ಲಿ ಸಂಸಾರ ಹೂಡಿದರು. ಕಾಮಾಕ್ಷಿಯನ್ನೂ ಮತ್ತು ಏಕಾಂಬ ರೇಶ್ವರನನ್ನೂ ಅನೇಕ ಕೃತಿಗಳ ಮೂಲಕ ಪೂಜಿಸಿದರು.

ಅವುಗಳಲ್ಲಿ ಕಮಲಾಮಹನೋಹರಿ ರಾಗದ ’ಕಂಜದಳಾಯ ತಾಕ್ಷಿ’, ಹಿಂದೋಳ ರಾಗದ ’ನೀರಜಾಕ್ಷಿ ಕಾಮಾಕ್ಷಿ’ ಮತ್ತು ಗಮಕಕ್ರಿಯ ರಾಗದ ’ಏಕಾಗಮ್ರನಾಥಂ ಭಜೇಹಂ’- ಇವುಗಳು ಮುಖ್ಯ ರಚನೆಗಳು. ಕಂಚಿಯಲ್ಲಿ ಪೃಥ್ವಿಲಿಂಗವಿದೆ. ಅದನ್ನು ಕುರಿತು ದೀಕ್ಷಿತರು ಹಾಡಿರುವ ಭೈರವಿ ರಾಗದ ’ಚಿಂತಯ ಮಾಂ ಕಂದ ಮೂಲಸ್ಕಂದಂ’ ಕೃತಿಯು ಒಂದು ಸುಂದರವಾದ ರಚನೆ. ಕಂಚಿಯ ವರದರಾಜಸ್ವಾಮಿಯ ದೇವಸ್ಥಾನ ಇತಿಹಾಸ ಪ್ರಸಿದ್ಧವಾದುದು. ಯತಿರಾಜರೆನಿಸಿದ ರಾಮಾನುಜರಿಗೆ ಸ್ವಯಂ ವರದರಾಜಸ್ವಾಮಿಯೇ ಸಂನ್ಯಾಸ ದೀಕ್ಷೆಯನ್ನು ಕೊಟ್ಟನಂತೆ. ಅಂತಹ ವರದರಾಜಸ್ವಾಮಿಯನ್ನು ಕುರಿತು ದೀಕ್ಷಿತರು ಕರ್ಣಾಟಕ ಪದ್ಧತಿಯ ಸಾರಂಗ ರಾಗದಲ್ಲಿ ’ವರದರಾಜ ಮುಪಾಸ್ಮಹೇ’ ಕೃತಿಯನ್ನು ರಚಿಸಿದರು. ಎಲ್ಲ ಧರ್ಮಗಳಲ್ಲಿ ದೀಕ್ಷಿತರಿಗೆ ಗೌರವ. ಕಾಮಾಕ್ಷಿ-ಶಿವ-ವಿಷ್ಣು-ಶ್ರೀರಾಮ ಎಲ್ಲರನ್ನು ತಮ್ಮ ಹಾಡುಗಳಲ್ಲಿ ಪೂಜಿಸಿದರು.

ಕಂಚಿಯಲ್ಲಿ ನಾಲ್ಕು ವರ್ಷಗಳ ಕಾಲವಿದ್ದ ದೀಕ್ಷಿತರಿಗೆ ತಿರುವಾರೂರಿನ ತ್ಯಾಗರಾಜಸ್ವಾಮಿ ಮತ್ತು ಕಮಲಾಂಬ ಇವರ ದರ್ಶನಮಾಡುವ ಆಸೆ ಬಹಳವಾಯಿತು. ಸಂಸಾರ ಸಮೇತ ರಾಗಿ ತಿರುವಾರೂರಿಗೆ ಹೊರಟರು. ಮಾರ್ಗದಲ್ಲಿ ತಿರುವಣ್ಣಾ ಮಲೆಗೆ ಹೋಗಿ ಅಲ್ಲಿನ ತೇಜೋಲಿಂಗ ಸ್ವರೂಪನಾದ ಅರುಣಾಚಲೇಶ್ವರನನ್ನು ತಮ್ಮ ಸಾರಂಗ ರಾಗದ ’ಅರುಣಾಚಲ ನಾಥಂ ಸ್ಮರಾಮಿ’ ಕೃತಿಯ ಮೂಲಕ ಪೂಜಿಸಿ, ಚಿದಂಬರಕ್ಕೆ ತೆರಳಿ ಆಕಾಶಲಿಂಗ ಸ್ವರೂಪನಾದ ನಟರಾಜನನ್ನು ’ಆನಂದನಟನ ಪ್ರಕಾಶಂ’ ಎಂಬ ಕೇದಾರ ರಾಗ ಕೃತಿಯಿಂದ ತೃಪ್ತಿಪಡಿಸಿದರು. ಅಮ್ಮನವರ ಮೇಲೆ ಕಲ್ಯಾಣಿ ರಾಗದಲ್ಲಿ ’ಶಿವಕಾಮೇಶ್ವರಿಂ’ ಕೃತಿಯು ಸಿದ್ಧವಾಯಿತು. ಹೀಗೆ ಹಲವು ಪವಿತ್ರ ಕ್ಷೇತ್ರಗಳಲ್ಲಿ ದೇವಾಲಯಗಳಿಗೆ ಹೋದಾಗ ಅವರ ಭಕ್ತಿ ಹಾಡುಗಳ ರೂಪವಾಗಿ ಹರಿಯಿತು. ’ಮಣಿಪ್ರವಾಳ’ ಎಂದು ಹೆಸರಾಗಿರುವ ಕೃತಿ ಸಂಸ್ಕೃತ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿದೆ.

 

‘ನಾನು ಮನುಷ್ಯರನ್ನು ಸ್ತುತಿಸುವುದಿಲ್ಲ.’

ಮೇರು ರಚನೆಗಳು

 

ತಿರುವಾರೂರಿಗೆ ಮತ್ತೆ ಹಿಂತಿರುಗಿದುದಕ್ಕೆ ದೀಕ್ಷಿತರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ತ್ಯಾಗರಾಜ ಸ್ವಾಮಿಯ ದೇವಾ ಲಯವು ಪ್ರಾಚೀನವಾದದ್ದು, ವಿಸ್ತಾರವಾದದ್ದು. ಪ್ರಾಕಾರದಲ್ಲಿ ಅನೇಕ ಗುಡಿಗಳಿವೆ. ಹೊರಗಡೆ ಅತ್ಯಂತ ದೊಡ್ಡದಾದ ಪುಷ್ಕರಣಿ ಇದೆ. ದೀಕ್ಷಿತರು ತಮ್ಮ ವೇಳೆಯ ಬಹುಭಾಗವನ್ನು ಈ ದೇವಾಲಯದಲ್ಲೂ ಒಳಗಡೆ ಇರುವ ಮಿಕ್ಕ ಗುಡಿಗಳಲ್ಲೂ ಪೂಜಾನಿರತರಾಗಿ ಕಳೆದರು. ಆ ಸಂದರ್ಭದಲ್ಲಿ ಹೊರಬಂದ ಕೃತಿಗಳು ಅನೇಕವು. ತ್ಯಾಗರಾಜಸ್ವಾಮಿಯ ಮೇಲೆ ಒಂಬತ್ತು ಕೃತಿಗಳು, ದೇವಿಯ ಮೇಲೆ ಹನ್ನೊಂದು ಕೃತಿಗಳು, ಪ್ರಾಕಾರದ ಒಳಗೆ ಷೋಡಶ ಗಣಪತಿಗಳ ಮೇಲೆ ಅಪೂರ್ವ ರಚನೆಗಳು, ಐದು ಶಿವಲಿಂಗಗಳ ಮೇಲೆ ಸೊಗಸಾದ ಹಾಡುಗಳು, ಸುಬ್ರಹ್ಮಣ್ಯಸ್ವಾಮಿಯನ್ನು ಕುರಿತು ಅನೇಕ ದಿವ್ಯ ರಚನೆಗಳು- ಹೀಗೆ ದೀಕ್ಷಿತರ ಭಕ್ತಿಯ ಹೊಳೆ ಕೃತಿರೂಪದಲ್ಲಿ ತಡೆಯಿಲ್ಲದೆ ಹರಿಯಿತು.

ಸ್ಥಳ ಪುರಾಣದ ಪ್ರಕಾರ ಪಾರ್ವತಿಯು ಶಿವನನ್ನು ಮದುವೆಯಾಗಲು ತಪಸ್ಸು ಮಾಡುತ್ತಿದ್ದಾಗ ’ಕಮಲಾಂಬ’ಎಂಬ ಹೆಸರನ್ನೂ ಮದುವೆಯಾದನಂತರ ’ನೀಲೋತ್ಪಲಾಂಬಾ’ ಎಂಬ ಹೆಸರನ್ನೂ ಹೊಂದಿದ್ದಳೆಂದು ಹೇಳುತ್ತಾರೆ. ದೀಕ್ಷಿತರು ನೀಲೋತ್ಪಲಾಂಬಾ ದೇವಿಯ ಮೇಲೆ ಕೃತಿಗಳನ್ನು ರಚಿಸಿದರು. ಎಂಬ ಹೆಸರನ್ನೂ ಹೊಂದಿದ್ದಳೆಂದು ಹೇಳುತ್ತಾರೆ. ದೀಕ್ಷಿತರು ನೀಲೋತ್ಪಲಾಂಬಾ ದೇವಿಯ ಮೇಲೆ ಕೃತಿಗಳನ್ನು ರಚಿಸಿದರು.

ಮೇಲೆ ಹೇಳಿದ ಕೃತಿಗಳೆಲ್ಲವೂ ಒಂದು ತೂಕವಾದರೆ, ದೀಕ್ಷಿತರು ರಚಿಸಿರುವ ’ಕಮಲಾಂಬ ನವಾವರಣ’ ಕೃತಿಗಳೇ ಒಂದು ತೂಕವಾಗಿವೆ. ಈ ಕೃತಿಗಳಲ್ಲಿ ದೀಕ್ಷಿತರ ರಾಗಸ್ವರೂಪ ಚಿತ್ರಣದ ಅದ್ಭುತ ಚಮತ್ಕಾರವನ್ನು ಕಾಣಬಹುದು. ರಾಗಗಳ ಪರಿಪಕ್ವತೆ, ಪರಿಪರ್ಣತೆಮತ್ತು ಪ್ರಾಮಾಣಿಕತೆಗೆ ದೀಕ್ಷಿತರ ಈ ಕೃತಿಗಳು ಅತ್ಯುತ್ತಮವಾದ ನಿದರ್ಶನ. ಭಾರಿ ಪ್ರಮಾಣದ ಮತ್ತು ಘನವಾದ ಈ ಕೃತಿಗಳನ್ನು ರಾಗದೇವತೆಗಳ ನಾದಾ ಲಯಗಳೆನ್ನಬಹುದು. ಸಾಹಿತ್ಯ ರಚನೆಯಲ್ಲಿ ದೇವಿ ಪೂಜೆಯ ವಿಧಿ ಮತ್ತು ವಿಧಾನಗಳನ್ನು ವಿಸ್ತಾರವಾಗಿ ಹಾಗೂ ಸಮಯೋಚಿತವಾಗಿ ಬಳಸಿದ್ದಾರೆ. ದೇವಿಯ ಸಮೀಪಕ್ಕೆ ಹೋಗಲು ಒಂಬತ್ತು ವೃತ್ತಗಳನ್ನು ಹೊಕ್ಕು ಮುಂದುವರಿಯಬೇಕು. ಪ್ರತಿಯೊಂದು ವೃತ್ತದಲ್ಲಿಯೂ ಪೂಜೆ ಸಲ್ಲಬೇಕು. ಪ್ರತಿಯೊಂದು ಪೂಜಾವಿಧಿಗೂ ಪ್ರತ್ಯೇಕವಾದ ಹೆಸರೂ ಮತ್ತು ಶಕ್ತಿಗಳೂ ಇವೆ. ಅವು ಕೊಡುವ ಫಲಗಳೂ ವಿವಿಧ ರೀತಿಯವು. ಈ ಒಂಬತ್ತು ವೃತ್ತಗಳಿಗೂ ಪೂಜೆಯು ವಿಧಿವತ್ತಾಗಿ ನಡೆದನಂತರವೇ ದೇವಿಯು ಫಲವನ್ನು ಕೊಡು ವುದು. ಈ ಪರಿಷ್ಕಾರವಾದ ಕರ್ಮಕಾಂಡಕ್ಕೆ ’ನವಾವರಣ ಪೂಜೆ’ ಎಂದು ಹೆಸರು. ದೀಕ್ಷಿತರ ನವಾವರಣ ಕೃತಿಗಳು ಈ ರೀತಿ ಇವೆ:

ಕಮಲಾಂಬಿಕೆ (ಧ್ಯಾನ)-ತೋಡಿ.
ಕಮಲಾಂಬಾಸಂರಕ್ಷತು-ಆನನಂದಭೈರವಿ,
ಕಮಲಾಂಬಾಂ ಭಜರೆ-ಕಲ್ಯಾಣಿ,
ಶ್ರೀಕಮಲಾಂಬಿಕಯಾ-ಶಂಕರಾಭರಣ,
ಕಮಲಾಂಬಿಕಾಯೈ-ಕಾಂಬೋದಿ,
ಶ್ರೀಕಮಲಾಂಬಿಕಾಯಾಃಪರಂ_ಭೈರವಿ,
ಕಮಲಾಂಬಿಕಾಯಸ್ತವ-ಪುನ್ನಾಗವರಾಳಿ,
ಶ್ರೀಕಮಲಾಂಬಿಕಾಯಾ ಭಕ್ತಿಂ-ಶಹನ,
ಶ್ರೀ ಕಮಲಾಂಬಿಕೆ ಅವಅವ-ಘಂಟಾ,
ಶ್ರೀ ಕಮಲಾಂಬಾ ಜಯತಿ-ಸಹಿರಿ.
ಶ್ರೀ ಕಮಲಾಂಬಿಕೆ (ಮಂಗಳಾಚರಣ) ಶ್ರೀ.

ಕೆಲವು ಘಟನೆಗಳು

ದೀಕ್ಷಿತರಿಗೆ ಗಂಡುಮಕ್ಕಳಿರಲಿಲ್ಲ. ಇದ್ದ ಒಬ್ಬ ಮಗಳನ್ನು ತಿರುಚಿರಾಪಳ್ಳಿಯ ವರನೊಬ್ಬನಿಗೆ ಕೊಟ್ಟು ಮದುವೆ ಮಾಡಿದ್ದರು. ಮಗಳನ್ನು ನೋಡಲು ಆಗಾಗ್ಗೆ ಹಳ್ಳಿಗೆ ಹೋಗು ತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಕೆಲವು ರಚನೆಗಳು ಹೊರಬಂದವು..

ತಿರುವಾರೂರಿನ ಬಳಿ ಇರುವ ಕೀವಲೂರು ಗ್ರಾಮದಲ್ಲಿ ಅಕ್ಷಯದಲಿಂಗವೆಂಬ ಶಿವ ದೇವಾಲಯವಿದೆ. ದೀಕ್ಷಿತರು ಶಂಕರಾಭರಣ ರಾಗದಲ್ಲಿ ಚಿರಪರಿಚಿತವಾದ ’ಅಕ್ಷಯಲಿಂಗ ವಿಭೋ ಸಯಂ ಭೋ’ ಕೃತಿಯನ್ನು ರಚಿಸಿ, ಅದನ್ನು ದೇವರ ಮುಂದೆ ಹಾಡಲು ಕೀವಲೂರಿಗೆ ಹೋದರು. ಅವರು ಗರ್ಭಗುಡಿ ತಲಪುವುದಕ್ಕೂ ಅರ್ಚಕರು ಬಾಗಿಲಿಗೆ ಬೀಗ ಹಾಕಲು ಹೊರಬರುವುದಕ್ಕೂ ಸರಿಯಹೋಯಿತು.

“ಸ್ವಾಮಿ, ಸ್ವಲ್ಪ ತಡೆಯಿರಿ. ನಾನು ದೇವರ ದರ್ಶನಕ್ಕೆ ಬಂದಿದ್ದೇನೆ” ಎಂದು ಬೇಡಿದರು ದೀಕ್ಷಿತರು.

“ಹೊತ್ತಾಯಿತು” ಎಂದರು ಅರ್ಚಕರು.

“ಬಹಳ ದೂರದಿಂದ ಬಂದಿದ್ದೇನೆ.”

“ನಾಳೆ ದೇವರ ದರ್ಶನ ಮಾಡಿ. ದೇವರು ಓಡಿ ಹೋಗುವುದಿಲ್ಲ” ಎನ್ನುತ್ತ ಅರ್ಚಕರು ಬೀಗ ಹಾಕಿಯೇ ಬಿಟ್ಟರು. ದೀಕ್ಷಿತರು ಗರ್ಭಗುಡಿಯ ಮುದೆಯೇ ಕುಳಿತು, ”ಅಕ್ಷಯಲಿಂಗ ವಿಭೋ ಸ್ವಯಂ ಭೋ’ ಎಂದು ಹಾಡಲು ಪ್ರಾರಂಭಿಸಿದರು.

ದೀಕ್ಷಿತರ ಸ್ಥಿತಿಯೇನೂ ಹೇಳಿಕೊಳ್ಳುವಂತಿರಲಿಲ್ಲ. ಬಡತನದಲ್ಲೆ ಇದ್ದರು ಎನ್ನಬೇಕು. ಸ್ವಾಭಿಮಾನವನ್ನು ಬಿಟ್ಟು ಕೊಡುತ್ತಿರಲಿಲ್ಲ. ’ದೇಹಿ’ ಎಂದು ಯಾರ  ಮುಂದೆಯೂ ಕೈ ಚಾಚುತ್ತಿರಲಿಲ್ಲ.

ಒಂದು ದಿವಸ ಮನೆಯಲ್ಲಿ ಒಂದು ಕಾಳೂ ಇರಲಿಲ್ಲ. ಅಡಿಗೆಯ ಮನೆಯಲ್ಲಿದ್ದ ಹೆಂಗಸರಿಗೆ  ದಿಕ್ಕು ತೋಚಲಿಲ್ಲ. ಆ ಸಮಯದಲ್ಲಿ ದೀಕ್ಷಿತರು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಶಿಷ್ಯರಲ್ಲಿ ದೇವದಾಸಿ ಕಮಲಂ ಎಂಬವಳು ಒಬ್ಬಳು. ದೀಕ್ಷಿತರ ಹೆಂಡತಿಯು ಅವಳನ್ನು ಗುಟ್ಟಾಗಿ ಕರೆದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಹೇಳಿ ಸಹಾಯವನ್ನು ಬೇಡಿದರು. ಕಮಲಂ ಹೇಳಿದಳು: “ನಾವೆಲ್ಲ ಇರುವಾಗ ಚಿಂತೆ ಏಕೆ? ನನ್ನ ಬಳೆ ಯನ್ನು ಒತ್ತೆ ಇಟ್ಟು ಹಣ ತರುತ್ತೇನೆ.”

ಅವರಿಬ್ಬರ ಸಂಭಾಷಣೆ ದೀಕ್ಷಿತರ ಕಿವಿಗೆ ಬಿದ್ದಿತು. ’ನನ್ನ ಶಿಷ್ಯರಿಂದ ಹಣ ತರಿಸಿ ನಾನು ಸಂಸಾರ ನಡೆಸುವ ಸ್ಥಿತಿ ಬಂದಿತೇ!” ಎಂದು ಮರುಗಿದರು. ಕಮಲಂಗೆ, “ಬೇಡ, ನಿನ್ನ ಬಳೆಯನ್ನು ಒತ್ತೆ ಇಡಬೇಡ” ಎಂದು ಹೇಳಿದರು.

ಅನಂತರ ದೀಕ್ಷಿತರು ತ್ಯಾಗರಾಜಸ್ವಾಮಿಯ ದೇವಸ್ಥಾನಕ್ಕೆ ಹೋಗಿ ’ತ್ಯಾಗರಾಜಂ ಭಜರೇ ತಾಪತ್ರಯಂ ತ್ಯಜರೇ’ ಎಂಬ ಕೃತಿಯಲ್ಲಿ ಸ್ವಾಮಿಗೆ ಪ್ರಾರ್ಥನೆ ಮಾಡಿದರು.

ಮನೆಗೆ ಹಿಂತಿರುಗಿದಾಗ ಅವರಿಗೆ ಒಂದು ಆಶ್ಚರ್ಯವು ಕಾದಿದ್ದಿತು. ಅಂದು ದೇವಸ್ಥಾನಕ್ಕೆ ಒಬ್ಬ ಅಧಿಕಾರಿ ಬರ ಬೇಕಾಗಿತ್ತು. ಅದಕ್ಕಾಗಿ ಸ್ಥಳದ ಅಧಿಕಾರಿ ಅಡಿಗೆಯ ಪದಾರ್ಥ ಗಳನ್ನೆಲ್ಲ ಬೇಕಾದಷ್ಟು ಶೇಖರಿಸಿದ್ದ. ಆದರೆ ಬರಬೇಕಾಗಿದ್ದ ಅಧಿಕಾರಿ ಬರುವುದಿಲ್ಲ ಎಂದು ಸಮಾಚಾರ ಬಂದಿತು. ಸ್ಥಳದ ಅಧಿಕಾರಿ, “ಈ ಪದಾರ್ಥಗಳನ್ನೆಲ್ಲ ಭಗವದ್ಭಕ್ತರಾದ ಮುತ್ತು ಸ್ವಾಮಿ ದೀಕ್ಷಿತರಿಗೆ ಅರ್ಪಿಸುವುದೇ ಸರಿ” ಎಂದು ಅವರ ಮನೆಗೆ ಕಳುಹಿಸಿದ್ದ!

ದೇವಸ್ಥಾನದ ಮದ್ದಳೆ ಬಾರಿಸುತ್ತಿದ್ದ ತಂಬಿಯಪ್ಪನ್ ದೀಕ್ಷಿತರ ಶಿಷ್ಯರಲ್ಲೊಬ್ಬ. ಅವನಿಗೆ ಹಠಾತ್ತಾಗಿ ಹೊಟ್ಟೆನೋವು ಕಾಣಿಸಿಕೊಂಡು ಬದುಕುವುದೇ ಕಷ್ಟವಾಯಿತು. ಜ್ಯೋತಿಷ ಶಾಸ್ತ್ರದಲ್ಲಿ ಪರಿಶ್ರಮವಿದ್ದ ದೀಕ್ಷಿತರು ಅವನ ಜಾತಕವನ್ನು ಪರಿಶೀಲಿಸಿ ಗುರುವು ನೀಚ ಸ್ಥಾನದಲ್ಲಿದ್ದುದನ್ನು ಕಂಡು, ಅವನ ಪ್ರೀತ್ಯರ್ಥವಾಗಿ ಅಠಾಣ ರಾಗದ ’ಬೃಹಸ್ಪತೇ ತಾರಾಪತೇ’ ಕೃತಿ ಯನ್ನು ಹೇಳುತ್ತಾರೆ. ಮಾನವಕಲ್ಯಾಣಕ್ಕಾಗಿ ಈ ಯೋಜನೆಯನ್ನು ವಿಸ್ತರಿಸಿ ಉಳಿದ ಎಂಟು ಗ್ರಹಗಳ ಮೇಲೂ ಕೃತಿ ಗಳನ್ನು ರಚಿಸಿದರು. ಇವುಗಳು ’ನವಗ್ರಹ ಕೃತಿ’ ಗಳೆಂದು ಪ್ರಸಿದ್ಧವಾಗಿವೆ.

ತಂಜಾವೂರು ಮತ್ತು ಮಧುರೆ

ದೀಕ್ಷಿತರ ತಂದೆತಾಯಿಗಳು ೧೮೧೭ ರ ಆರಂಭದಲ್ಲಿ ಸ್ವರ್ಗಸ್ಥರಾದರು. ಇದು ದೀಕ್ಷಿತರಿಗೆ ತುಂಬ ದುಃಖವನ್ನುಂಟು ಮಾಡಿತು. ಸ್ವಲ್ಪಕಾಲ ತಿರುವಾರೂರನ್ನು ಬಿಟ್ಟು ಬೇರೆಲ್ಲಿಗಾ ದರೂ ಹೋಗಿ ಮನಶ್ಯಾಂತಿಯನ್ನು ಪಡೆಯಬೇಕೆಂಬ ಯೋಚನೆ ಹುಟ್ಟಿತು. ತಂಜಾವೂರು ಜ್ಞಾಪಕಕ್ಕೆ ಬಂದಿತು. ಅದಕ್ಕೆ ಕಾರಣವೂ ಇದ್ದಿತು. ತಿರುವಾರೂರಿನಲ್ಲಿ ದೇವದಾಸಿ ಕಮಲಂ ಮಾಡಿದ ರಂಗ ಪ್ರವೇಶವನ್ನು ನೋಡಿ, ಅದರಲ್ಲಿ ಬಳಸಲ್ಪಟ್ಟ ದೀಕ್ಷಿತರ ರಚನೆಗಳನ್ನು ಕೇಳಿ ಆನಂದಿಸಿದ್ದ ’ತಂಜಾವೂರು ಸಹೋದರ’ರೆಂದು ಪ್ರಸಿದ್ಧರಾದ ಪೊನ್ನಯ್ಯ, ಚಿನ್ನಯ್ಯ, ವಡಿವೇಲು ಮತ್ತು ಶಿವಾನಂದಂ ಇವರುಗಳು ದೀಕ್ಷಿತರಲ್ಲಿ ಶಿಷ್ಯರಾಗಬಯಸಿ ಅವರನ್ನು ತಂಜಾವೂರಿಗೆ ಆಹ್ವಾನಿಸಿದ್ದರು. ಈಗ ಅದಕ್ಕೆ ವೇಳೆ ಬಂದಿತ್ತು. ಸಹೋದರರಿಗೆ ಮೊದಲೇ ವರ್ತಮಾನವನ್ನು ಕಳುಹಿಸಿ ದೀಕ್ಷಿತರು ತಂಜಾವೂರಿಗೆ ಹೋದರು.

ತಂಜಾವೂರಿನಲ್ಲಿ ಬಂಗಾರು ಕಾಮಾಕ್ಷಿದೇವಿಗೆ ಪೂಜೆ ಯನ್ನು ಸಲ್ಲಿಸುತ್ತ ತಮ್ಮ ಕೃತಿಗಳ ಮೂಲಕ ದೇವಿಯನ್ನು ಸ್ತೋತ್ರಮಾಡುತ್ತಿದ್ದ ’ಸಂಗೀತ ತ್ರಿಮೂರ್ತಿ’ಗಳಲ್ಲಿ ಹಿರಿಯರಾದ ಶ್ಯಾಮಶಾಸ್ತ್ರಿಯವರಿದ್ದರು. ದೀಕ್ಷಿತರೂ ಅವರೂ ಕಲೆತು ಗಹನವಾದ ತಾಂತ್ರಿಕ ಸೂತ್ರಗಳ ವಿಚಾರವಿನಿಮಯ ಮಾಡಿ ಕೊಳ್ಳುವುದು ಅವರಿಬ್ಬರ ಜೀವನದ ಒಂದು ಕ್ರಮವಾಯಿತು.

ಸಂಗೀತದಲ್ಲಿ ಇಬ್ಬರೂ ಬೇರೆಬೇರೆ ದಾರಿಯನ್ನು ಹಿಡಿದರು. ಶಾಸ್ತ್ರಿಗಳು ತಾಳಕ್ಕೆ ಪ್ರಾಮುಖ್ಯತೆ ಕೊಟ್ಟರು. ದೀಕ್ಷಿತರು ರಾಗಕ್ಕೆ ಗಮನವನ್ನು ಕೊಟ್ಟರು. ಪರಿಚಿತ ಹಾಗೂ ಜನಪ್ರಿಯ ರಾಗ ಗಳಲ್ಲಿ ಶಾಸ್ತ್ರಿಗಳು ಕೃತಿರಚನೆ ಮಾಡಿದರು. ದೀಕ್ಷಿತರು ಪರಿಚಿತ, ಅಪರಿಚಿತ, ಜನಪ್ರಿಯ ಹಾಗೂ ಅಪೂರ್ವ ರಾಗಗಳನ್ನು ಹೇರಳವಾಗಿ ಬಳಸಿದರು.

ದೀಕ್ಷಿತರು ತಂಜಾವೂರಿನಲ್ಲಿದ್ದಾಗ ತ್ಯಾಗರಾಜರು ತಂಜಾ ವೂರಿನಿಂದ ಏಳು ಮೈಲಿ ದೂರದ ತಿರುವಯ್ಯಾರಿನಲ್ಲಿದ್ದು ಕೊಂಡು ಶ್ರೀರಾಮಚಂದ್ರನ ಮೇಲೆ ಭಕ್ತಿರಸ ಪ್ರಧಾನವಾದ ಕೃತಿಗಳ ಹೊಳೆಯನ್ನು ಹರಿಸುತ್ತಿದ್ದರು. ದೀಕ್ಷಿತರು ತಿರುವಯ್ಯಾ ರಿಗೆ ಹೋಗಿ ಅಲ್ಲಿನ ಪ್ರಣತಾರ್ಥಿಹರ ಮತ್ತು ಧರ್ಮ ಸಂವರ್ಧಿನಿ ಅಮ್ಮನವರನ್ನು ಸಂದರ್ಶಿಸಿ ಸ್ತುತಿರೂಪವಾದ ಕೃತಿಗಳನ್ನು ರಚಿಸಿದರು ಎಂಬುವುದಕ್ಕೆ ಅವರ ನಾಯಕಿ ರಾಗದ ’ಪ್ರಣತಾರ್ಥಿಹರ’ ಮತ್ತು ಮಧ್ಯಮಾವತಿ ರಾಗದಲ್ಲಿ ’ಧರ್ಮ ಸಂವರ್ಧಿನಿ’ ಕೃತಿಗಳೇ ಸಾಕ್ಷಿ. ಹಾಗೆಯೇ ತ್ಯಾಗರಾಜರನ್ನು ಸಂಧಿಸಿರಬಹುದು. ಅವರಿಬ್ಬರ ಭೇಟಿಯನ್ನು ನಿರೂಪಿಸುವ ಘಟನೆಯೊಂದು ನಡೆಯಿತು ಎಂದು ಹೇಳುತ್ತಾರೆ. ದೀಕ್ಷಿತರು ಅಮ್ಮನವರ ದೇವಸ್ಥಾನದಲ್ಲಿ ಹಾಡುತ್ತಿರುವಾಗ ಅದನ್ನು ತ್ಯಾಗರಾಜರ ಶಿಷ್ಯನೊಬ್ಬನು ಕಂಡು ಗುರುಗಳಿಗೆ ತಿಳಿಸಿದರಂತೆ. ತ್ಯಾಗರಾಜರು ದೀಕ್ಷಿತರನ್ನು ತಮ್ಮ ಮನೆಗೆ ಮರ್ಯಾದೆಯಿಂದ ಕರೆತರುವಂತೆ ಶಿಷ್ಯನಿಗೆ ಅಪ್ಪಣೆ ಮಾಡಿದರಂತೆ.

ಅದರಂತೆಯೇ ಅವನು ದೀಕ್ಷಿತರನ್ನು ಕಂಡು ತ್ಯಾಗರಾಜರ ಕೋರಿಕೆಯನ್ನು ತಿಳಿಸಿದ. ದೀಕ್ಷಿತರು ತ್ಯಾಗರಾಜರ ಆಹ್ವಾನ ವನ್ನು ಮನ್ನಿಸಿ ಅವರ ಮನೆಗೆ ಹೋದರಂತೆ. ಆ ಹೊತ್ತಿಗೆ ರಾಮಾಯಣ ಪಾರಾಯಣದ ಕೊನೆಯ ಘಟ್ಟವಾದ ’ಶ್ರೀರಾಮ ಪಟ್ಟಾಭಿಷೇಕಕ್ಕೆ ಬಂದಿದ್ದರು. ದೀಕ್ಷಿತರನ್ನು ಆದರದಿಂದ ಸ್ವಾಗತಿಸಿದರು. ದೀಕ್ಷಿತರು ಆ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಕೃತಿಯೊಂದನ್ನು ಹಾಡಬೇಕೆಂದು ಅವರನ್ನು ಕೇಳಿಕೊಳ್ಳಲು, ದೀಕ್ಷಿತರು ಮಣಿರಂಗು ರಾಗದ ’ಮಾಮವ ಪಟ್ಟಾಭಿರಾಮ’ ಕೃತಿಯನ್ನು ಹಾಡಿ ಶ್ರೀರಾಮಚಂದ್ರನಿಗೆ ಅರ್ಪಿಸಿದರೆಂದು ಹೇಳುತ್ತಾರೆ.

ದೀಕ್ಷಿತರು ತಂಜಾವೂರಿನಲ್ಲಿದ್ದಾಗ ಒಂದು ಘಟನೆ ನಡೆಯಿತು. ದೀಕ್ಷಿತರೂ ಮತ್ತು ಶ್ಯಾಮಶಾಸ್ತ್ರಿಗಳೂ ಪರಸ್ಪರ ಭೇಟಿಯಾಗುತ್ತಿದ್ದ ಹಾಗೆ, ದೀಕ್ಷಿತರ ಹೆಂಡತಿಯೂ ಮತ್ತು ಶಾಸ್ತ್ರಿಗಳ ಹೆಂಡತಿಯೂ ಪರಸ್ಪರ ಕಲೆಯುತ್ತಿದ್ದರು. ದೀಕ್ಷಿತರು ಬಡತನದಲ್ಲಿ ಕಷ್ಟಪಡುತ್ತಿದ್ದುದನ್ನು ನೋಡಿ ಶಾಸ್ತ್ರಿಗಳ ಹೆಂಡತಿಯು ದೀಕ್ಷಿತರ ಹೆಂಡತಿಯೊಡನೆ “ನಿಮ್ಮ ಯಜಮಾನರ ಕೃತಿಗಳು ಮಹಾರಾಜರ ಕಿವಿಗೆ ಬಿದ್ದಿವೆ. ನಿಮ್ಮ ಯಜಮಾನರು ಅವರನ್ನು ನೋಡಿ ಸಹಾಯವನ್ನು ಪಡೆಯ ಬಹುದು” ಎಂದರು. ಇದು ದೀಕ್ಷಿತರ ಹೆಂಡತಿಗೆ ಹಿಡಿಸಿತು. ಆಕೆ ಈ ವಿಚಾರವನ್ನು ದೀಕ್ಷಿತರಲ್ಲಿ ಹೇಳಿ, “ಮಹಾರಾಜರನ್ನು ನೋಡಿ. ನಮ್ಮ ಬಡತನ ಹೋದೀತು” ಎಂದರು.

ದೀಕ್ಷಿತರ ಮನಸ್ಸಿಗೆ ನೋವಾಯಿತು. “ರಾಜನನ್ನು ಕಾಣು ವುದು ಎಂದರೆ ಏನು ನಿನಗೆ ಗೊತ್ತೆ? ಅವನನ್ನು ಹೊಗಳಿ ಒಂದು ಹಾಡನ್ನು ರಚಿಸಬೇಕು. ನಾನು ಮನುಷ್ಯರನ್ನು ಸ್ತುತಿಸುವುದಿಲ್ಲ ಬೇಕಾದರೆ ಅಷ್ಟೈಶ್ವರ್ಯವನ್ನು ಕೊಡುವ ಲ್ಕಕ್ಷ್ಮಿಯನ್ನು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು. ಲಲಿತ ರಾಗದಲ್ಲಿ ’ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ, ಹೀನ ಮಾನವಾಶ್ರಯಿಂ ತ್ಯಜಾಮಿ’ ಎಂದು ಲಕ್ಷ್ಮಿಯನ್ನು ಸತ್ರ ಮಾಡಿದರು. ಲಕ್ಷ್ಮಿಯು ದೀಕ್ಷಿತರ ಕನಸಿನಲ್ಲಿ ಕಾಣಿಸಿಕೊಂಡು, ”ನಿನಗೆ ಬಡತನವಿಲ್ಲ” ಎಂದಳಂತೆ. ಇದನ್ನು ಅವರು ತಮ್ಮ ಹೆಂಡತಿಗೆ ಹೇಳಿದರು. ಆಕೆ ಅವರ ಕ್ಷಮೆಯನ್ನು ಬೇಡಿದರು.

ತಂಜಾವೂರಿನಿಂದ ತಿರುವಾರೂರಿಗೆ ಹಿಂತಿರುಗಿದ ದೀಕ್ಷಿತರಿಗೆ ಮನಸ್ಸಿನಲ್ಲಿ ಕಳವಳ ಆರಂಭವಾಯಿತು. ಹಿಂದೆಯೇ ತಂಜಾವೂರು ಸಹೋದರರ ಜೊತೆಯಲ್ಲಿ ಹೋದ ತಮ್ಮಂದಿರಾದ ಬಾಲುಸ್ವಾಮಿ ಮತ್ತು ಚಿನ್ನಸ್ವಾಮಿ ಯವರು ಎಲ್ಲಿದ್ದಾರೆಂಬ ವಿಷಯವು ತಿಳಿಯಲಿಲ್ಲ. ಕೆಲವು ಕಡೆ ವಿಚಾರಿಸಿದ ಮೇಲೆ ಸ್ವಾಮಿಯ ನಿಧನದ ವಿಷಯವು ತಿಳಿಯಿತು. ಬಾಲುಸ್ವಾಮಿಯು ಮಧುರೆಯಲ್ಲಿರುವುದು ಗೊತ್ತಾಯಿತು. ದುಃಖದಿಂದ ತಪ್ತರಾದ ದೀಕ್ಷಿತರು ಬಾಲು ಸ್ವಾಮಿಯನ್ನು ನೋಡಲು ಮಧುರೆಗೆ ಹೋದರು. ಮಧುರೆಯು ಮುತ್ತುಸ್ವಾಮಿ ದೀಕ್ಷಿತರ ಭಾವನಾ ಶಕ್ತಿಯನ್ನು ಬಲವಾಗಿ ವಶ ಪಡಿಸಿಕೊಂಡಿತ್ತು. ದೀಕ್ಷಿತರು ಮಧುರೆಯ ಮೀನಾಕ್ಷಿ ದೇವಾ ಲಯದಲ್ಲಿ ಅಮ್ಮನವರ ಮುಂದೆ ಕುಳಿತು ಅತ್ಯುತ್ತಮವಾದ ಕೃತಿಗಳನ್ನು ಹಾಡಿಸದರು.

ಮಧುರೆಯಲ್ಲಿ ಬಾಲುಸ್ವಾಮಿಯಿರಲಿಲ್ಲ. ಚಿನ್ನಸ್ವಾಮಿಯ ನಿಧನದಿಂದ ವ್ಯಸನಗೊಂಡು ರಾಮೇಶ್ವರಕ್ಕೆ ಹೋಗಿ ಬರುವೆ ನೆಂದು ಹೋದವರು ಹಿಂತಿರುಗಿರಲಿಲ್ಲ. ದೀಕ್ಷಿತರು ಅವರನ್ನು ಹುಡುಕಿಕೊಂಡು ರಾಮೇಶ್ವರಕ್ಕೆ ಹೋದರು. ರಾಮೇಶ್ವರದ ಬಳಿ ಇರುವ ದರ್ಭಶಯನದಲ್ಲಿ ನಾರಾಯಣಗೌಳ ರಾಗದ ಪ್ರಸಿದ್ಧ ರಚನೆ ’ಶ್ರೀ ರಾಮಂ ರವಿಕುಲಾಬ್ಧಿ ಸೋಮಂ’ ರಚಿಸಿ ಹಾಡಿ ದರು. ಹಾಗೆಯೇ ರಾಮೇಶ್ವರದಲ್ಲಿ ರಾಮಕ್ರಿಯ ರಾಗದಲ್ಲಿ ’ರಾಮನಾಥಂ ಭಜೇಹಂ’ ಕೃತಿಯು ರೂಪಗೊಂಡಿತು.

ಬಾಲು ಸ್ವಾಮಿಯನ್ನು ತೀರ್ಥಯಾತ್ರೆಗೆ ರಾಮೇಶ್ವರಕ್ಕೆ ಬಂದಿದ್ದ ಎಟ್ಟಯ್ಯಾಪುರದ ಮಹಾರಾಜರು ಎಟ್ಟಯ್ಯಾಪುರಕ್ಕೆ ಕರೆದುಕೊಂಡು ಹೋದ ಸಮಾಚಾರವು ತಿಳಿದು ದೀಕ್ಷಿತರು ಎಟ್ಟಯ್ಯಾಪುರಕ್ಕೆ ಹೊರಟರು. ದಾರಿಯಲ್ಲಿ ಸಿಕ್ಕಿದ ಸಾತ್ತೂರು ಗ್ರಾಮದಲ್ಲಿ ಬಾಲುಸ್ವಾಮಿಗೆ ಡೆಟ್ಟಯ್ಯಾಪುರದಲ್ಲಿ ಮದುವೆ ನಡೆಯುತ್ತದೆ ಎಂಬ ಸಮಾಚಾರವು ಗೊತ್ತಾಗಿ, ಆನಂದದಿಂದ ಸುರಟಿ ರಾಗದಲ್ಲಿ ಸುಬ್ರಹ್ಮಣ್ಯನನ್ನು ’ಬಾಲಸುಬ್ರಹ್ಮಣ್ಯಂ ಭಜೇ ಹಂ’ ಕೃತಿಯ ಮೂಲಕ ಸ್ತೋತ್ರಮಾಡಿದರು. ಗ್ರಾಮ ಒಂದರಲ್ಲಿ ಮಳೆಯು ಬರದೇ ಜನರು ದಾರುಣವಾದ ಬೇಸಿಗೆಯಲ್ಲಿ ಬೇಯುತ್ತಿದ್ದುದನ್ನು ಕಂಡು ಅವರ ಮನಸ್ಸು ಕರಗಿತು. ಅಮೃತವರ್ಷಿಣಿ ರಾಗದಲ್ಲಿ ’ಆನಂದಾಮೃತವರ್ಷಿಣಿ’ ಕೃತಿ ಯನ್ನ ಹಾಡಿದರು. ’ವರ್ಷಯ ವರ್ಷಯ’ ಎಂದಾಗ ಆರಂಭ ವಾದ ಮಳೆಯು ಕುಂಭದ್ರೋಣವಾಗಿ ಸುರಿದದು ದೀಕ್ಷಿತರು ’ಸ್ತಂಭಯ ಸ್ತಂಭಯ’ ಎಂದಾಗಲೇ ನಿಂತಿತೆಂದು ಹೇಳುತ್ತಾರೆ.

ಎಟ್ಟಯ್ಯಾಪುರವನ್ನು ಸೇರಿದ ದೀಕ್ಷಿತರನ್ನು ಮಹಾ ರಾಜನು ಗೌರವದಿಂದ ಬರಮಾಡಿಕೊಂಡ. ಅಲ್ಲಿ ಅವರು ಸುಬ್ರಹ್ಮಣ್ಯನ ಮೇಲೆ ಅನೇಕ ಕೃತಿಗಳನ್ನು ರಚಿಸಿದರು. ಶಬರಿ ಮಲೆಗೆ ಹೋಗಿ ಅಯ್ಯಪ್ಪನನ್ನು ’ಹರಿಹರ ಪುತ್ರಮಂ’ ಎಂಬ ವಸಂತರಾಗ ಕೃತಿಯ ಮೂಲಕ ಪೂಜಿಸಿ, ಗುರುವಾಯೂರಿಗೆ ಹೋಗಿ ’ಗುರುವಾಯೂರು ಅಪ್ಪನ್’ ಎಂದು ಲೋಕಪ್ರಸಿದ್ಧ ನಾಗಿರುವ ಶ್ರಿಕೃಷ್ಣನನ್ನು ತೋಡಿ ರಾಗದ ’ಶ್ರೀ ಕೃಷ್ಣಂ ಭಜಮಾನಸ’ ಕೃತಿಯಲ್ಲಿ ಸ್ತುತಿಸಿದರು.

ಕೊನೆಯ ದಿನಗಳು

ದೀಕ್ಷಿತರ ಜೀವನಯಾತ್ರೆಯ ಕೊನೆಯ ಘಟ್ಟವು ಅವರ ದಿವ್ಯವಾದ ಬದುಕಿನಷ್ಟೇ ಸಾರ್ಥಕವೂ ಮತ್ತು ಸ್ವಾರಸ್ಯವೂ ಆಗಿದೆ.

೧೮೩೪ ರ ಅಶ್ವಯುಜ ಮಾಸ ದೀಪಾವಳಿಯ ಹಿಂದಿನ ದಿನ ಅಂದರೆ ನರಕಚತುರ್ದಶಿ ಒಂದು ಮಹತ್ವಪೂರಿತವಾದ ದಿನ. ಅಂದು ಬೆಳಗಿನ ಜಾವ ದೀಕ್ಷಿತರು ಕ್ರಮದಂತೆ ಯೋಗಾ ಭ್ಯಾಸವನ್ನು ಮಾಡಿ ಸ್ನಾನಮಾಡಲು ಬಚ್ಚಲಿಗೆ ಇಳಿದರು. ಆಗ ಅವರಿಗೆ ಕಾಶಿ ಕ್ಷೇತ್ರದ ಅನ್ನಪೂರ್ಣೆಯು ಕಣ್ಣ ಮುಂದೆ ಬಂದು ನಿಂತಂತಾಯಿತು. ಅವರು ಆ ಸ್ವರೂಪವನ್ನೇ ನೆಟ್ಟ ದೃಷ್ಟಿಯಿಂದ ನೋಡಲು ಅದು ಅಂತರ್ಧಾನವಾಯಿತು. ಕೂಡಲೇ ದೀಕ್ಷಿತರಿಗೆ ಹಿಂದೆ ಅವರ ಗುರು ಚಿದಂಬರನಾಥ ಯೋಗಿಯು ಕಾಶಿಯಲ್ಲಿ, ’ದೇವಿಯು ನಿನಗೆ ಈ ಜೀನವದಲ್ಲಿ ಆಹಾರವನ್ನು ಕೊಟ್ಟು ಇದಾದನಂತರ ಮೋಕ್ಷವನ್ನೂ ಕೊಡುವಳು’ ಎಂದು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು. ತಮ್ಮ ಕೊನೆಗಾಲವು ಬಂದಿತು ಎಂಬುದನ್ನು ದೀಕ್ಷಿತರು ಅರ್ಥ ಮಾಡಿಕೊಂಡರು. ಸ್ನಾನವನ್ನು ಮುಗಿಸಿ ದೇವಿಗೆ ನವಾವರಣ ಪೂಜೆಯನ್ನು ಸಲ್ಲಿಸಿ ಪುನ್ನಾಗವರಾಳಿ ರಾಗದ ’ಏಹಿ ಅನ್ನಪೂರ್ಣೆ’ ಕೃತಿಯಿಂದ ದೇವಿಯನ್ನು ಸ್ತುತಿಸಿದರು.

 

‘ನಿಮಗೆ ಯಾವ ವಿಧವಾದ ತೊಂದರೆಯೂ ಇಲ್ಲ.’

ಪೂಜೆಯಾದನಂತರ ಅವರು ಪಡಸಾಲೆಗೆ ಬಂದರು. ಎಟ್ಟಯ್ಯಾಪುರದ ಮಹಾರಾಜರು ಬಂದು ಅವರಿಗಾಗಿ ಕಾಯುತ್ತಿದ್ದುದನ್ನು ಕಂಡರು. ಸ್ವಯಂ ಮಹಾರಾಜರು ತನ್ನನ್ನು ಕಾಣಲು ಹೊತ್ತಿಗೆ ಮುಂಚೆಯೇ ಬಂದಿದ್ದುದು ದೀಕ್ಷಿತರು ಮುಜಗರ ಪಟ್ಟಕೊಳ್ಳುವಂತಾಯಿತು. ದೊರೆಯನ್ನು ಕಾರಣ ವಿಚಾರಿಸಿದರು.

ದೊರೆಗಳು, “ಭಾಗವತೋತ್ತಮರೇ, ಇಂದು ಬೆಳಿಗ್ಗೆ ನನ್ನ ಪಟ್ಟದಾನೆ ಗಾಂಗೇಯನು ಮದವೇರಿ ಸರಪಳಿಗಳನ್ನು ಕಿತ್ತು  ಹಾಕಿ ಯಾರನ್ನೂ ಲಕ್ಷ್ಯಮಾಡದೆ ರುದ್ರಭೂಮಿಗೆ ಹೋಗಿ ಅಲ್ಲಿ ಮಲಗಿದೆ. ಇದು ಅಶುಭವೆಂದು ನನಗೆ ತೋರುತ್ತದೆ. ನನಗೇನಾದರು ಕೇಡುಂಟಾಗುತ್ತದೆಯೆ? ದಯವಿಟ್ಟು ಹೇಳಿ” ಎಂದು ಕೈ ಮುಗಿದು ಕೇಳಿಕೊಂಡನು.

ದೀಕ್ಷಿತರು ಕ್ಷಣಕಾಲ ಶಾಂತರಾಗಿ ಯೋಚಿಸಿ, “ಮಹಾ ರಾಜ, ನಿಮಗೆ ಯಾವ ವಿಧವಾದ ತೊಂದರೆಯೂ ಇಲ್ಲ. ಸ್ವಸ್ಥವಾಗಿರಿ” ಎಂದರು. ರಾಜರು, “ನನಗೇನೋ ಸಮಾಧಾನ ವಾಯಿತು. ನನ್ನ ರಾಜ್ಯಕ್ಕೇನಾದರೂ ವಿಪತ್ತು ಕಾದಿದೆಯೇ?” ಎಂದರು. ದೀಕ್ಷಿತರು, “ರಾಜ್ಯಕ್ಕೂ ಏನು ಹಾನಿಯಿಲ್ಲ. ನಿಶ್ಚಿಂತೆ ಯಾಗಿರಿ” ಎಂದರು. ಮಹಾರಾಜರು “ದನ್ಯೋಸ್ಮಿ, ತಮ್ಮ ಆಶೀರ್ವಾದ” ಎಂದು ಹೇಳಿ ನೆಮ್ಮದಿಯಿಂದ ಅರಮನೆಗೆ ಹಿಂತಿರುಗಿದರು.

ಅನಂತರ ದೀಕ್ಷಿತರು ತಮ್ಮ ಶಿಷ್ಯರುಗಳೆಲ್ಲರನ್ನು ಕರೆದು, “ಇಂದು ಚತುರ್ದಶಿ ಪರ್ವಕಾಲ. ದೇವಿಯ ಮೇಲಿನ ಕೃತಿ ಗಳನ್ನು ಹಾಡಿ” ಎಂದು ಅಪ್ಪಣೆಮಾಡಲು ಅವರು ಗಮಕಕ್ರಿಯ ರಾಗದ ’ಮೀನಾಕ್ಷಿ ಮೇ ಮುದಂ ದೇಹಿ’ ಕೃತಿಯನ್ನು ಹಾಡಿದರು. “ಈ ದಿವಸ ದೇವಿಯು ನನ್ನ ಬಂಧನಗಳನ್ನು ಕಿತ್ತುಹಾಕುತ್ತಾಳೆ. ಇನ್ನೊಂದು ಸಲ ಆ ಕೃತಿಯನ್ನೇ ಹಾಡಿ” ಎಂದರು. ಶಿಷ್ಯರು ಮತ್ತೆ ಆ ಕೃತಿಯನ್ನೇ ಹಾಡುತ್ತ ’ಮೀನಲೋಚನಿ ಪಾಶಮೋಚನಿ ಮಾನಿನಿ ಕದಂಬವನ ವಾಸಿಸನಿ’ ಎಂದು ಹೇಳುತ್ತಿರುವಂತೆಯೆ, ದೀಕ್ಷಿತರು ದೇವಿ ಯನ್ನೂ ಮತ್ತು ಸುಬ್ರಹ್ಮಣ್ಯನನ್ನೂ ಸ್ಮರಿಸುತ್ತ ಕಣ್ಣುಮುಚ್ಚಿ ಪ್ರಪಂಚವನ್ನು ಬಿಟ್ಟರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ರಾಜರ ಪಟ್ಟದ ಆನೆ ಗಾಂಗೇಯನು ಶಾಂತವಾಗಿ ಎದ್ದು ರುದ್ರಭೂಮಿ ಯಿಂದ ಗಜಶಾಲೆಗೆ ಹಿಂತಿರುಗಿತು.

ದೀಕ್ಷಿತರ ನಿಧನದ ವಾರ್ತೆಯನ್ನು ಕೇಳಿ ಎಟ್ಟಯ್ಯಾಪುರದ ಜನರು ದುಃಖದ ಮಡುವಿನಲ್ಲಿ ಮುಳುಗಿದರು. ಮಹಾರಾಜನಿಗೆ ಗರಬಡಿದವರಂತೆ ಆಯಿತು. ದೀಕ್ಷಿತರ ಮನೆಗೆ ಬಂದು ಅವರ ಕಳೇಬರವನ್ನು ನೋಡಿ, “ಭಕ್ತ ಶಿರೋಮಣಿ, ನಿಮ್ಮ ಪ್ರಾಣವನ್ನು ಕೊಟ್ಟು ನನ್ನನ್ನು ಉಳಿಸಿದಿರಿ. ನನ್ನ ಮತ್ತು ರಾಜ್ಯದ ಯೋಗಕ್ಷೇಮವನ್ನು ಮಾತ್ರ ನೋಡಿ ಕೊಂಡು ನಿಮ್ಮ ಪ್ರಾಣಕ್ಕೆ ಹಾನಿಯೇ ಎಂಬುದನ್ನು ಕೂಡ ವಿಚಾರಿಸದ ಸ್ವಾರ್ಥಿ ನಾನು. ಸ್ಕಂದ ಷಷ್ಠಿಯ ಹಿಂದಿನ ದಿನವಾದ ಇಂದು ಸುಬ್ರಹ್ಮಣ್ಯನಲ್ಲಿ ಐಕ್ಯರಾದ ನೀವು ಪ್ಮಣ್ಯಾತ್ಮರು” ಎಂದು ದುಃಖಪಟ್ಟ. ಸರಿಯಾದ ಸ್ಥಳವನ್ನು ಗೊತ್ತು ಮಾಡಿ ಅಲ್ಲಿ ದೀಕ್ಷಿತರ ಪಾರ್ಥಿವ ದೇಹಕ್ಕೆ ವಿಧ್ಯುಕ್ತವಾದ ದಹನ ಸಂಸ್ಕಾರವನ್ನು ಮಾಡಿಸಿದ.

ಈಗ ಎಟ್ಟಯ್ಯಾಪುರದಲ್ಲಿರುವ ದೀಕ್ಷಿತರ ಸಮಾಧಿಯು ಕಲಾರಾಧಕರ ಹಾಗೂ ಭಕ್ತ ಜನರ ಯಾತ್ರಾಸ್ಥಳವಾಗಿದೆ.

ದೀಕ್ಷಿತರ ಸಂಗೀತ

ನೂರಾರು ಕೃತಿಗಳು, ಐದು ರಾಗಮಾಲಿಕೆ, ಒಂದು ಪದವರ್ಣ ಮತ್ತು ಒಂದು ದರು-ಇವು ದೀಕ್ಷಿತರು ಕರ್ಣಾಟಕ ಸಂಗೀತಕ್ಕೆ ನೀಡಿರುವ ಅಮೂಲ್ಯವಾದ ಕೊಡುಗೆ. ರಾಗ ಭಾವ ಸಂಪನ್ನತೆ ಅವರ ರಚನೆಗಳ ಒಂದು ವೈಶಿಷ್ಟ್ಯ.

ದೀಕ್ಷಿತರ ಒಂದು ಮಹತ್ಸಾಧನೆ ಎಂದರೆ ಕೆಲವು ಹಿಂದೂಸ್ತಾನಿ ರಾಗಗಳನ್ನು ಅವುಗಳ  ಸ್ವರೂಪ ಭಂಗವಾಗ ದಂತೆ ಕರ್ಣಾಟಕ ಸಂಗೀತಕ್ಕೆ ಅಳವಡಿಸಿರುವುದು. ರಾಗ ನಿರೂಪಣೆಯಲ್ಲಿಯೂ ಕೂಡ ಅವರ ಕೃತಿಗಳಲ್ಲಿ ಅಡಗಿರುವ ಹಿಂದೂಸ್ತಾನಿ ಸಂಗೀತದ ಪ್ರಭಾವವು ಎದ್ದು ಕಾಣುತ್ತದೆ.

ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ರಚನಕಾರರೆಲ್ಲರೂ ಬಳಸುತ್ತಿದ್ದ ಪ್ರಾಸ ಮತ್ತು ಅನುಪ್ರಾಸಗಳಲ್ಲದೆ ’ಗೋಪುಚ್ಛ’ ಮತ್ತು ’ಶ್ರೋತೋವಹ’ ಎಂಬ ಅಲಂಕಾರಗಳನ್ನು ಬಳಸಿದ ವಾಗ್ಗೇಯರಕಾರರು ಪ್ರಾಯಶಃ ದೀಕ್ಷಿತರೊಬ್ಬರೆ.

ಗೋಪುಚ್ಛದಲ್ಲಿ ಅಕ್ಷರಗಳು ಕ್ರಮವಾಗಿ ಮತ್ತು ಏಕಪ್ರಕಾರವಾಗಿ ಕಡಿಮೆಯಾಗುತ್ತವೆ. ಶ್ರೋತೋವಹ ಇದಕ್ಕೆ ವಿರುದ್ಧವಾದದ್ದು. ಅವರ ಆನಂದಭೈರವಿ ರಾಗದ ’ತ್ಯಾಗರಾಜ ಯೋಗವೈಭವ’ ಕೃತಿಯಲ್ಲಿ ಈ ಎರಡು ಅಲಂಕಾರಗಳೂ ಇವೆ.

ಪಲ್ಲವಿ:  ‘ತ್ಯಾಗರಾಜ ಯೋಗವೈಭವಂ’,
‘‘ಅಗರಾಜಯೋಗ ವೈಭವಂ’,
‘ರಾಜಯೋಗ ವೈಭವಂ’,
‘ಯೋಗವೈಭವಂ’,
‘ವೈಭವಂ’,
‘ವಂ’,

ಇದು ಗೋಪುಚ್ಛಯತಿ. ಇನ್ನು ಶ್ರೋತೋವಹ ಯತಿಯು ಅದೇ ಕೃತಿಯಲ್ಲಿ ಹೀಗಿದೆ:

‘ಸಂಪ್ರಕಾಶಂ’,
‘ಸ್ವರೂಪ ಪ್ರಕಾಶಂ’,
‘ತತ್ವಃಸ್ವರೂಪ ಪ್ರಕಾಶಂ’,
‘ಸಕಲ ತತ್ವ ಸ್ವರೂಪ ಪ್ರಕಾಶಂ’,
‘ಶಿವಶಕ್ತ್ಯಾದಿ ಸಕಲ ತತ್ವಸ್ವರೂಪ ಪ್ರಕಾಶಂ’.

ಕೊನೆಯದಾಗಿ ದೀಕ್ಷಿತರು ತಮ್ಮ ಕೃತಿಗಳ ಸಾಹಿತ್ಯಕ್ಕೆ ಬಳಸಿ ರುವ ಭಾಷೆಯ ವಿಚಾರ. ಸಂಸ್ಕೃತವು ಅವರ ಕೃತಿಗಳ ಜೀವನಾಡಿ. ಕೆಲವು ಕೃತಿಗಳು ಸಂಸ್ಕೃತ, ತೆಲುಗು ಮತ್ತು ತಮಿಳು ಭಾಷೆಗಳನ್ನೊಳಗೊಂಡ ’ಮಣಿಪ್ರವಾಳ’ದಲ್ಲಿವೆ.

ದೀಕ್ಷಿತರ ರಚನೆಗಳು ಸ್ವಲ್ಪ ಕಠಿಣವಾದುವೆ. ಆದರೆ ಸಂಸ್ಕೃತ ಭಾಷೆಯನ್ನು ತಿಳಿದವರಿಗೆ ಅವರ ಕೃತಿಗಳು ಮನಸ್ಸಿಗೆ ಅಗಾಧವಾದ ಶಾಂತಿಯನ್ನು ಕೊಡಬಲ್ಲವು.

ದೀಕ್ಷಿತರ ಕೃತಿಗಳಲ್ಲಿ ಸಂಸ್ಕೃತವನ್ನು ಬಳಸಿರುವುದರಿಂದ ಇಡೀ ಭಾರತದಲ್ಲಿ ಅವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ ವಾಗಿದೆ.

ದೀಕ್ಷಿತರು ದೊಡ್ಡ ವಾಗ್ಗೇಯಕಾರರರಾಗಿದ್ದಂತೆಯೇ ಉದಾತ್ತ ವ್ಯಕ್ತಿಯಾಗಿದ್ದರು. ಸಂಸಾರದಲ್ಲಿದ್ದು ಸಂನ್ಯಾಸಿಯಂತೆ ಬಾಳಿದರು. ರಾಜಮಹಾರಾಜರು ಅವರ ರಚನೆಗಳನ್ನೂ ವ್ಯಕ್ತಿತ್ವವನ್ನೂ ಮೆಚ್ಚಿಕೊಂಡರು. ಆದರೆ ದೀಕ್ಷಿತರು ಅವರಿಂದ ಏನನ್ನೂ ಬೇಡಲಿಲ್ಲ, ಪಡೆಯಲಿಲ್ಲ. ನಿರ್ಮಲವಾದ ಮನಸ್ಸು, ಶುಭ್ರವಾದ ಜೀವನ ಅವರದು. ನಿಷ್ಠೆಯಿಂದಿದ್ದ ಆಚಾರವಂತರು ಅವರು. ಶಿವ-ವಿಷ್ಣು ಎಂದು ವ್ಯತ್ಯಾಸಮಾಡಿ ಮನಸ್ಸನ್ನೂ ಬಾಳನ್ನು ಚಿಕ್ಕದು ಮಾಡಿಕೊಳ್ಳಲಿಲ್ಲ. ಭಕ್ತರಿಗೆ ಬೆಳಕಾದ ಎಲ್ಲ ದೇವರುಗಳಲ್ಲೂ ಒಂದೇ ದಿವ್ಯಶಕ್ತಿಯನ್ನು ಕಂಡು ಸಂಗೀತ ದಿಂದ ಆರಾಧಿಸಿದರು. ಅವರ ಬದುಕು ಸುಂದರ, ಸಾವು ಸುಂದರ, ಬಿಟ್ಟುಹೋದ ನೆನಪುಗಳೂ ರಚೆನಗಳೂ ಸುಂದರ.