ಮುದುವೀಡು ಕೃಷ್ಣರಾವ್ಗಂಡುಗಲಿ ಎನಿಸಿಕೊಂಡ ಕೃಷ್ಣರಾಯರು ತಮ್ಮ ಧರ್ಮ, ಭಾಷೆ, ದೇಶಗಳಲ್ಲಿ ಆಳವಾದ ಅಭಿಮಾನ ಇಟ್ಟುಕೊಂಡವರು. ಆದರೆ ಅವರ ಅಭಿಮಾನ ಎಂದೂ ದುರಭಿಮಾನ ವಾಗಲಿಲ್ಲ. ಅವರ ಭಾಷಣ ಕೇಳುವವರನ್ನು ರೋಮಾಂಚನ ಗೊಳಿಸುತ್ತಿತ್ತು. ಧೀರ ಪತ್ರಿಕೋದ್ಯಮಿ. ದೇಶಕ್ಕಾಗಿ ಸೆರೆಮನೆ ಸೇರಿದರು. ಪ್ರಮಾಣಿಕತೆ, ಅಂತಃಕರಣಗಳ ಸಂಗಮ.

ಮುದುವೀಡು ಕೃಷ್ಣರಾಯರು

ಕನ್ನಡದ ಅಚ್ಚ ಭಕ್ತರು ಮುದುವೀಡು ಕೃಷ್ಣರಾಯರು. ಕನ್ನಡದ ನೆಲದಲ್ಲಿ ಕನ್ನಡ ಉಳಿಯಿಬೇಕು; ಬೆಳೆಯಬೇಕು ಎಂಬ ಛಲ ಅವರದು. ಅದಕ್ಕವರು ಹೋರಾಟವನ್ನೂ ನಡೆಸಿದರು. ಅನೇಕ ಸಂದರ್ಭಗಳಲ್ಲಿ ಅದು ಅತಿ ಉಗ್ರವಾಗಿರುತ್ತಿತ್ತು. ಕನ್ನಡ ಭಾಷೆ, ಸಾಹಿತ್ಯ, ನಾಡುಗಳ ಬಗೆಗೆ ಅಪಾರ ಮಮತೆ ಅವರಿಗೆ. ಇವುಗಳ ಮುನ್ನಡೆಗಾಗಿಯೂ ಅವರು ಪರಿಶ್ರಮಿಸಿದರು. ಅದಕ್ಕಾಗಿ ಅವರು ತುಂಬ ದುಡಿದರು. ಅವರು ಇದಕ್ಕಾಗಿ ಪಟ್ಟ ಪಾಡನ್ನು ವರ್ಣಿಸಲು ಸಾಧ್ಯವಿಲ್ಲ. ಕನ್ನಡದ ಕೆಲಸ ಅವರಿಗೆ ಅಚ್ಚುಮೆಚ್ಚಿನದು. ಅದು ಅವರಿಗೆ ಸ್ಫೂರ್ತಿಯ ವಿಷಯವೇ ಆಗಿತ್ತು. ನಾಡಿನ ಮೂಲೆ ಮೂಲೆಗೆ ಅವರು ಸಂಚರಿಸಿ ಬಂದರು. ಭಾಷಣಗಳನ್ನು ಮಾಡಿದರು; ಲೇಖನಗಳನ್ನು ಬರೆದರು. ಪತ್ರಿಕೆಗಳನ್ನು ನಡೆಸಿದರು. ಕನ್ನಡದ ಕೆಲಸವೆಂದರೆ, ಅದು ಯಾವುದೇ ಇದ್ದರೂ ಮಾಡಲು ಅವರು ಸಿದ್ಧರು. ಸ್ವಂತದ ಬಗೆಗೂ ವಿಚಾರಿಸುತ್ತಿರಲಿಲ್ಲ; ರಾಷ್ಟ್ರೀಯ ಪ್ರವೃತ್ತಿಯವರೂ ಆಗಿದ್ದರು. ಎಲ್ಲವನ್ನೂ, ಏನನ್ನೂ ಎದುರಿಸಿ ಮುಂದಾಗುತ್ತಿದ್ದರು. ತುಂಬ ದಿಟ್ಟತನವನ್ನು ತೋರುತ್ತಿದ್ದರು. ಖಂಡತುಂಡವಾದಿಗಳು; ಜೊತೆಗೆ ಅತ್ಯಂತ ಸಾಹಸಿಗಳು. ಆ ಕಾಲದಲ್ಲಿ ಅವರು ಕನ್ನಡದ ಒಂದು ಶಕ್ತಿಯಾಗಿ ಪರಿಣಮಿಸಿದ್ದರು; ಕನ್ನಡಿಗರ ಕಣ್ಮಣಿ ಎನಿಸಿದವರು. ಅವರ ಜೀವನ ಎಂದೆಂದಿಗೂ ಉದ್ಬೋಧಕ.

ತಾಯಿಯ ಪ್ರಭಾವ

ಕೃಷ್ಣರಾಯರ ತಂದೆ ಹನುಮಂತರಾಯರು. ತಾಯಿ ಗಂಗಾಬಾಯಿ. ಅವರು ಬಾಗಲಕೋಟೆಯವರು. ಗೋವೆಕರ ಮನೆತನದವರು. ಕೃಷ್ಣರಾಯರ ಹಿರಿಯರು ಕಡಪಾ ಜಿಲ್ಲೆಯ ಮುದುವೀಡು ಗ್ರಾಮದವರು. ಅದೇ ಹೆಸರಿನಿಂದ ಆ ಮನೆತನ ಪ್ರಸಿದ್ಧವಾಯಿತು. ಹನುಮಂತರಾಯರು ಸರಕಾರಿ ನೌಕರರು. ಮಾಮಲೇದಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮುದುವೀಡುದಿಂದ ಕರ್ನಾಟಕಕ್ಕೆ ಬಂದರು. ಸೇವಾಜೀವನದಲ್ಲಿ ರಾಜ್ಯದ ಬೇರೆ ಬೇರೆ ತಾಲೂಕುಗಳಲ್ಲಿ ಸಂಚರಿಸುತ್ತಿದ್ದರು. ಅವರು ಕಾರವಾರದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕೃಷ್ಣರಾಯರ ಜನನವಾಯಿತು. ಅವರು ಹುಟ್ಟಿದ್ದು ತಾಯಿ ತವರುಮನೆ ಬಾಗಲಕೋಟೆಯಲ್ಲಿ. ಭಾವನಾಮ ಸಂವತ್ಸರದ ನಿಜ ಆಷಾಢ ಶುದ್ಧ ಅಷ್ಟಮಿ ಮಂಗಳವಾರ (೧೮೭೪ ಫೆಬ್ರುವರಿ ೨೪) ಬೆಳಗಿನ ನಾಲ್ಕು ಗಂಟೆಗೆ ಜನಿಸಿದರು.

ಕೃಷ್ಣರಾಯರ ಬಾಲ್ಯದ ಬಹು ಸಮಯ ಬಾಗಲಕೋಟೆಯಲ್ಲಿ ಕಳೆಯಿತು. ತಂದೆ ದೂರದ ಕಾರವಾರದಲ್ಲಿದ್ದರು. ಆದರೆ ಇದರಿಂದ ಮನೆಯಲ್ಲಿ ಅವರ ಶಿಕ್ಷಣಕ್ಕೆ ಬಾಧೆ ಬರಲಿಲ್ಲ. ಗಂಗಾಬಾಯಿ ಕನ್ನಡ ಓದು ಬರಹ ಬಲ್ಲವರು. ಸಂಸ್ಕೃತ ಭಾಷೆಯನ್ನು ಅವರು ಅರಿತಿದ್ದರು. ಕುಮಾರವ್ಯಾಸ ಭಾರತ, ವಾಲ್ಮೀಕಿ ರಾಮಾಯಣಗಳ ಅಭ್ಯಾಸವನ್ನು ಮಾಡಿದ್ದರು. ಕುಮಾರವ್ಯಾಸ ಭಾರತವನ್ನಂತೂ ಕಂಠಪಾಠ ಮಾಡಿದ್ದರು. ಸುಂದರವಾಗಿ ದಾಸರ ಪದಗಳನ್ನು ಹಾಡುತ್ತಿದ್ದರು. ತಾಯಿಯ ಈ ಸಾಹಿತ್ಯಕ ಸಂಸ್ಕಾರ ಮಗನ ಮೇಲೆ ಬಾಲ್ಯದಲ್ಲಿಯೇ ಪರಿಣಾಮ ಬೀರಿತು. ತುಂಬ ಪ್ರಭಾವಿತರೂ ಆಗಿದ್ದರು. ಕೃಷ್ಣರಾಯರೂ ಸ್ವತಃ ಜೈಮಿನಿ ಭಾರತದ ಮೂವತ್ತಮೂರು ಸಂಧಿಗಳು, ಪ್ರಸನ್ನ ವೆಂಕಟ ಭಾಗವತ, ಕುಮಾರವ್ಯಾಸ ಭಾರತಗಳ ಪದ್ಯಗಳು ಎಲ್ಲವನ್ನು ಕಂಠಪಾಠವಾಗಿ ಹೇಳುತ್ತಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಕೃಷ್ಣರಾಯರು ಕಾರವಾರದಲ್ಲಿ ಪಡೆದರು. ತಂದೆ ಇನ್ನೂ ಈ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅದರ ಪರಿಣಾಮವೆಂದರೆ ಕನ್ನಡದ ಈ ಉದ್ದಾಮ ಭಕ್ತನ ಪ್ರಾರಂಭಿಕ ಶಿಕ್ಷಣ ಮರಾಠಿಯಲ್ಲಿ ನಡೆಯಿತು. ಆದರೆ ಕನ್ನಡ ಚೆನ್ನಾಗಿ ಬರುತ್ತಿತ್ತು.

ಚಿಕ್ಕಮ್ಮನ ಆಶ್ರಯ

ಕೃಷ್ಣರಾಯರಿಗೆ ಇನ್ನೂ ಆರು ವರ್ಷ, ತಾಯಿಯನ್ನು ಕಳೆದುಕೊಂಡರು. ತಬ್ಬಲಿಯಾದರು. ತಂದೆಯೇ ಮಗನ ಪಾಲನ ಪೋಷಣವನ್ನು ನಡೆಸಿದರು. ಅವರ ಆರೈಕೆಯಲ್ಲಿ ಹುಡುಗ ಬೆಳೆಯತೊಡಗಿದ. ಆದರೆ ದೈವಕ್ಕೆ ಇದೂ ಸಹಿಸಲಾಗಲಿಲ್ಲವೆಂದು ತೋರುತ್ತದೆ. ತಾಯಿಯನ್ನು ಕಳೆದುಕೊಂಡು ನಾಲ್ಕೆ ದು ವರುಷಗಳಲ್ಲಿ ತಂದೆಯನ್ನು ಕಳೆದುಕೊಂಡರು. ಇಬ್ಬರನ್ನೂ ಕಳೆದುಕೊಂಡು ಪೂರ್ಣ ಅನಾಥರಾದರು. ಈಗ ಅವರು ಚಿಕ್ಕಮ್ಮನ ಆಶ್ರಯಕ್ಕೆ ಧಾರವಾಡಕ್ಕೆ ಬಂದರು. ಆಗ ಅವರಿಗೆ ಹನ್ನೊಂದು ವಯಸ್ಸು. ಚಿಕ್ಕಮ್ಮ ಯಮುನಾಬಾಯಿ ಇವರನ್ನು ಅಕ್ಕರೆಯಿಂದ ಸಾಕಿ ಸಲುಹಿದರು. ಮಗುವಿಗೆ ಅನಾಥನೆಂಬ ಭಾವನೆ ಬರದಂತೆ ನೋಡಿಕೊಂಡರು. ಇದೇ ಸಂದರ್ಭದಲ್ಲಿ ರೊದ್ದ ಶ್ರೀನಿವಾಸರಾಯರ ಸಂಪರ್ಕವೂ ಅವರಿಗೆ ಬಂದಿತು. ಅವರ ತಾಯಿಯೂ ಕೃಷ್ಣರಾಯರನ್ನು ಸ್ವಂತ ಮಗನಂತೇ ನೋಡಿಕೊಳ್ಳತೊಡಗಿದರು. ಈಗ ಶಿಕ್ಷಣ ಮತ್ತೆ ಕನ್ನಡದಲ್ಲಿ ಪ್ರಾರಂಭವಾಯಿತು. ಅದರ ಜೊತೆಗೆ ಕನ್ನಡ ಭಕ್ತಿ ಜಾಗ್ರತವಾಯಿತು. ಅಚ್ಚ ಕನ್ನಡಿಗರೆನಿಸಿದರು.

ಒಂದು ಪ್ರಸಂಗ

ಎಳೆತನದಿಂದಲೂ ಪರಂಪರೆ, ಸಂಪ್ರದಾಯಗಳ ಭಕ್ತಿ ಅವರಲ್ಲಿ ಬೆಳೆದು ಬಂದಿತ್ತು. ಹಿಂದೂ ಧರ್ಮದ ರೀತಿ-ನೀತಿಗಳ ಬಗೆಗೆ ಅಚಲ ವಿಶ್ವಾಸ. ಯಾರೂ ಅದನ್ನು ಹೀಗಳೆಯಲು ಅವರು ಅವಕಾಶ ಕೊಡುತ್ತಿರಲಿಲ್ಲ. ಶಾಲೆಯಲ್ಲಿರುವಾಗ ಶಿಕ್ಷಕರು ಇಂಥ ವಿಷಯಗಳಲ್ಲಿ ನಿರ್ಬಂಧಿಸುವುದೂ ಅವರಿಗೆ ಸಹ್ಯವಾಗುತ್ತಿರಲಿಲ್ಲ. ಆ ಕೂಡಲೇ ಅದನ್ನು ಪ್ರತಿಭಟಿಸುತ್ತಿದ್ದರು. ಅಂಥ ಒಂದು ನಿಷ್ಠೆಯನ್ನು ಅವರು ಹಿಂದು ಧರ್ಮದ ಬಗೆಗೆ ಇರಿಸಿಕೊಂಡಿದ್ದರು. ಆದರೆ ಅವರು ತಾವೆಂದೂ ಇನ್ನೊಬ್ಬರನ್ನು ಹೀಗಳೆಯಲು ಹೋದವರಲ್ಲ. ತಮ್ಮ ಅಭಿಮಾನ ದುರಾಗ್ರಹವಾಗುವಂತೆ ಅವರು ಯಾವಾಗಲೂ ಮಾಡುತ್ತಿರಲಿಲ್ಲ. ಶಾಲೆಯಲ್ಲಿರುವಾಗಲೇ ಅವರ ಇಂಥ ಒಂದು ನಿಷ್ಠೆಯ ಪ್ರಸಂಗ ವ್ಯಕ್ತವಾಯಿತು.

ಮಿಷನ್ ಸ್ಕೂಲಿನಲ್ಲಿ ಆಗ ಅವರು ಓದುತ್ತಿದ್ದರು. ಅಲ್ಲಿಯ ಎಲ್ಲ ವಿದ್ಯಾರ್ಥಿಗಳು ಬೈಬಲ್ ಕಡ್ಡಾಯವಾಗಿ ಕಂಠಪಾಠ ಮಾಡಿಕೊಂಡು ಬರಬೇಕಿತ್ತು. ಕೃಷ್ಣರಾಯರಿಗೆ ಹೀಗೆ ಕಡ್ಡಾಯ ಮಾಡುವುದು ಸರಿ ಎನಿಸಲಿಲ್ಲ. ಮನಸ್ಸು ಇದ್ದವರು ಓದಬಹುದು, ಇಲ್ಲವಾದರೆ ಇಲ್ಲ ಎಂದು ಅವರ ಅಭಿಪ್ರಾಯ. ಅವರು ಬೈಬಲ್ ಕಂಠಪಾಠ ಮಾಡದೇ ವರ್ಗಕ್ಕೆ ಬರುತ್ತಿದ್ದರು. ಒಂದೆರಡು ದಿನ ಶಿಕ್ಷಕರಿಗೆ ಏನೇನೊ ಸಬೂಬು ಹೇಳಿ ದಾಟಿಸಿದರು. ಮುಂದೊಂದು ದಿನ ಶಿಕ್ಷಕರು ಕೋಪಗೊಂಡು ಇವರನ್ನು ತರಾಟೆಗೆ ತೆಗೆದುಕೊಂಡರು. ‘ನಾಳೆ ನೀನು ಕಂಠಪಾಠ ಮಾಡಿಕೊಂಡು ಬರಲೇಬೇಕು’ ಎಂದು ಕಟ್ಟುನಿಟ್ಟಾಗಿ ಹೇಳಿದರು. ಕೃಷ್ಣರಾಯರು ಮೌನವಾಗಿದ್ದರು. ಮರುದಿನವೂ ಬಂದಿತು. ಎಲ್ಲರೂ ಸರದಿಯಂತೆ ಬೈಬಲ್‌ದ ಕೆಲಭಾಗವನ್ನು ಕಂಠಪಾಠ ಮಾಡಿದ್ದನ್ನು ಒಪ್ಪಿಸಿದರು. ಕೃಷ್ಣರಾಯರ ಸರದಿಯೂ ಬಂದಿತು. ಅವರು ಮೌನವಾಗಿ ಎದ್ದು ನಿಂತರು. ಶಿಕ್ಷಕರು ರೇಗಿದರು. ಆದರೆ ಅವರು ಬಾಯಿ ಬಿಡಲಿಲ್ಲ. ಇನ್ನೇನು ಇವರನ್ನು ಹೊಡೆಯಲು ಶಿಕ್ಷಕರು ಧಾವಿಸಿ ಬಂದರು. ಕೃಷ್ಣರಾಯರು ಇನ್ನು ಸುಮ್ಮನಿರುವುದು ತರವಲ್ಲ ಎಂದುಕೊಂಡರೇನೊ! ಆಗ ಬಾಯಿ ಬಿಟ್ಟರು. ‘‘ಸರ್, ಬೈಬಲ್ ಓದಲು- ಕಂಠಪಾಠ ಮಾಡಲು ನನಗೆ ಮನಸ್ಸಿಲ್ಲ. ನನ್ನ ಹೆಸರು ಕೃಷ್ಣ. ನಾನಿಲ್ಲಿಗೆ ಬಂದಿದ್ದು ಇಂಗ್ಲಿಷ್ ಓದಲು. ಬೈಬಲ್ ಓದಲು ಬಂದವನಲ್ಲ. ಇಂತಹ ವಿಷಯದಲ್ಲಿ ಬಲಾತ್ಕಾರ ಮಾಡಬಾರದು. ಇಗೊ ನಿಮ್ಮ ಬೈಬಲ್ ಇಲ್ಲಿದೆ. ತೆಗೆದುಕೊಳ್ಳಿ’’ ಎಂದವರೇ ಆ ಕಿರುಗ್ರಂಥವನ್ನು ಶಿಕ್ಷಕರ ಮೇಜಿನ ಮೇಲಿಟ್ಟರು. ಕೃಷ್ಣರಾಯರು ಕಿಟಕಿಯ ಬಳಿಯೇ ಕುಳಿತಿದ್ದರು. ಅವು ವಿಶಾಲವಾದವು. ಅವಕ್ಕೆ ಕಬ್ಬಿಣದ ನಳಿಗಳೂ ಇರಲಿಲ್ಲ. ಕೃಷ್ಣರಾಯರ ಈ ಕೃತಿಯಿಂದ ಕುಪಿತರಾಗಿದ್ದರು ಶಿಕ್ಷಕರು. ಅವರು ಇವರನ್ನು ಹಿಡಿಯಲು ಧಾವಿಸಿ ಬಂದರು. ಕೃಷ್ಣರಾಯರು ಕೂಡಲೇ ಕಿಟಕಿಯಿಂದ ಹೊರಗೆ ಹಾರಿ ‘‘ನಾನು ಕೃಷ್ಣ. ಹಾಗೆ ನಿಮ್ಮ ಕೈಗೆಲ್ಲ ಸಿಕ್ಕುವವನಲ್ಲ’’ ಎಂದವರೇ ಓಡಿ ಹೋದರು. ಮತ್ತೆ ಆ ಶಾಲೆಗೆ ಅವರು ಹಣಿಕಿ ಹಾಕಲಿಲ್ಲ.

ಹೀಗಾಗಿ ಶಿಕ್ಷಣವನ್ನು ಒಂದೇ ಶಾಲೆಯಲ್ಲಿ ಅವರು ಪೂರ್ಣಗೊಳಿಸಲಿಲ್ಲ. ಮೂರು ಶಾಲೆಗಳಲ್ಲಿ ಓದಿದರು. ಆದರೆ ಯಾವ ಸಂದರ್ಭದಲ್ಲಿಯೂ ಅವರ ಈ ತುಂಟಾಟ ಮಿತಿಯನ್ನು ಮೀರುತ್ತಿರಲಿಲ್ಲ.

ರಾಜಕೀಯ ಸಮ್ಮೇಳನ

ಅಂದಿನ ಶಿಕ್ಷಣದಿಂದ ನಿಜವಾಗಿ ನಾವು ಏನು ಸಾಧಿಸಲು ಸಾಧ್ಯ ಎಂದು ಕೃಷ್ಣರಾಯರು ವಿಚಾರಿಸುತ್ತಿದ್ದರು. ನಾನು ಇದಕ್ಕೆ ಅಂಟಿಕೊಂಡು ಸಾಗುವದೇನು ಸರಿ ಎಂದು ಅವರು ಅಂದುಕೊಂಡುದೂ ಉಂಟು. ಮೆಟ್ರಿಕ್ ಪರೀಕ್ಷೆಗೆ ಬರುವ ಹೊತ್ತಿಗೆ ಈ ವಿಚಾರಗಳು ಇನ್ನೂ ಹೆಚ್ಚು ಸ್ಫುಟವಾಗಿದ್ದವು. ಅವರ ಮನಸ್ಸು ಆಗ ಡೋಲಾಯಮಾನವಾಗಿತ್ತು. ಏನು ಮಾಡಬೇಕು? ಯಾವುದು ಸರಿ? ಯಾವುದು ತಪ್ಪು? ಎತ್ತ ಸಾಗಬೇಕು? ಕೃಷ್ಣರಾಯರು ತುಂಬ ವಿಚಾರಿಸುತ್ತಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತಲೆಯೆತ್ತಿತ್ತು; ಸ್ವಾತಂತ್ರ್ಯ ಆಂದೋಲನದ ಬಿಸಿ ಎಲ್ಲರಿಗೂ ತಾಗತೊಡಗಿತ್ತು. ತರುಣರು ಅತ್ತ ವಿಶೇಷವಾಗಿ ಅಕರ್ಷಿತರಾಗತೊಡಗಿದ್ದರು. ಕೃಷ್ಣರಾಯರಿಗೂ ಅತ್ತ ಒಲವು ಮೂಡಿತು. ಈ ಅಂದೋಲನದಲ್ಲಿ ಧುಮುಕಲು ಅವರು ಹಾತೊರೆಯುತ್ತಿದ್ದರು. ಆದರೆ ಅವರನ್ನು ಒಂದು ಪ್ರಶ್ನೆ ಕಾಡುತ್ತಿತ್ತು. ತಮ್ಮನ್ನು ಸಾಕಿ ಸಲಹಿದವರ ಮನಸ್ಸನ್ನು ನೋಯಿಸಬೇಕಾಗುವದಲ್ಲ. ಅದು ಸರಿಯೇ ಎಂದುಕೊಳ್ಳುತ್ತಿದ್ದರು. ತುಂಬ ವಿಚಾರಿಸತೊಡಗಿದರು. ಆದರೆ ಈ ವಿಚಾರದ ಗೊಂದಲದಲ್ಲಿ ಅವರ ಆಂದೋಲನಕಾರಿ ಮನಸ್ಸಿಗೆ ಗೆಲುವು ದೊರೆಯಿತು.

ಕೃಷ್ಣರಾಯರು ಈ ರೀತಿಯಲ್ಲಿ ವಿಚಾರಿಸುತ್ತಿರುವಾಗಲೇ ಅವರಿಗೊಂದು ಅವಕಾಶವೂ ಒದಗಿ ಬಂತು. ಪುಣೆಯಲ್ಲಿ ರಾಜಕೀಯ ಸಮ್ಮೇಳನವೊಂದು ೧೮೯೫ ರಲ್ಲಿ ಸೇರುವದೆಂದು ಗೊತ್ತಾಗಿತ್ತು. ಇದರಲ್ಲಿ ತಾವೇಕೆ ಭಾಗವಹಿಸಬಾರದು ಎಂದು ಕೃಷ್ಣರಾಯರು ವಿಚಾರಿಸಿದರು. ಸ್ವಾತಂತ್ರ್ಯ ಆಂದೋಲನದಲ್ಲಿ ಸೇರಲು ಇದಕ್ಕಿಂತ ಬೇರೆ ಸುಸಂಧಿ ದೊರೆಯಲಿಕ್ಕಿಲ್ಲ ಎಂದು ಅವರು ಬಗೆದರು. ಆಗ ಎಲ್ಲ ಬಗೆಯ ಅನುಕೂಲಗಳೂ ಅವರಿಗೆ ಒದಗಿದವು. ಮೆಟ್ರಿಕ್ ಪರೀಕ್ಷೆಗೆ ‘ಫೀ’ ಕಟ್ಟಬೇಕಿತ್ತು. ಮನೆಯಲ್ಲಿ ಅದಕ್ಕಾಗಿ ಹಣವನ್ನು ಪಡೆದುಕೊಂಡರು. ತಮ್ಮ ನಿರ್ಧಾರವನ್ನು ಮನೆಯವರಿಗೆ ತಿಳಿಸಲಿಲ್ಲ. ಪುಣೆಗೆ ಹೋದರು. ರಾಜಕೀಯ ಸಮ್ಮೇಳನದಲ್ಲಿ ಭಾಗವಹಿಸಿದರು. ಮನಸ್ಸಿಗೊಂದು ಸಮಾಧಾನ. ಏನನ್ನೊ ಹೊಸತೊಂದನ್ನು ಸಾಧಿಸಿದ ತೃಪ್ತಿ. ನಿಜ, ಅವರ ಜೀವನದಲ್ಲಿ ಈಗ ಹೊಸ ಅಧ್ಯಾಯವೊಂದು ಪ್ರಾರಂಭವಾಗಿತ್ತು. ಶಿಕ್ಷಣವನ್ನು ಅಷ್ಟಕ್ಕೇ ನಿಲ್ಲಿಸಿಬಿಟ್ಟರು. ಆ ಬಗೆಯ ಶಿಕ್ಷಣದಿಂದ ಯಾವುದೇ ಬಗೆಯ ಉಪಯೋಗವಿಲ್ಲ ಎಂಬುದನ್ನು ಕೃಷ್ಣರಾಯರು ಈ ಮೊದಲೇ ಅರಿತಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಿತು. ಅಲ್ಲದೇ ಜೀವನದಲ್ಲಿ ತಾವು ಇರಿಸಿಕೊಂಡ ಗುರಿಯನ್ನು ಸಾಧಿಸುವ ಹವಣಿಕೆಯಲ್ಲಿ ಇದ್ದರು. ಈಗ ಸಾರ್ವಜನಿಕ  ಜೀವನವನ್ನು ಅವರು ಪ್ರವೇಶಿಸಿದರು.

ಪುಣೆಯಿಂದ ಅವರು ಮರಳಿ ಬಂದ ಮೇಲೆ ಮನೆಯವರೂ ಶಿಕ್ಷಣದ ಮಾತನ್ನು ಎತ್ತಲಿಲ್ಲ. ಸರ್ಕಾರಿ ನೌಕರಿ ಮಾಡುವ ಇಚ್ಛೆ ಅವರಿಗಿಲ್ಲವೆಂಬುದನ್ನು ಎಲ್ಲರೂ ಬಲ್ಲವರಾಗಿದ್ದರು. ಮನೆಯಲ್ಲಿ ಮಾತನಾಡುವಾಗಲೆಲ್ಲ ಶಿಕ್ಷಣವೆಂದರೆ ಸರ್ಕಾರಿ ನೌಕರರನ್ನು ತಯಾರಿಸುವ ಕಾರಖಾನೆಗಳೆಂದೇ ಅನೇಕಸಲ ಚೇಷ್ಟೆ ಮಾಡುತ್ತಿದ್ದರು. ಹಾಗೆಯೇ ಅವರು ಎಂದೂ ಸರ್ಕಾರಿ ನೌಕರಿ ಮಾಡಲಿಲ್ಲ. ಅಲ್ಲದೆ ತಾವಿರುವವರೆಗೂ ತಮ್ಮ ಮಕ್ಕಳಿಗೂ ಸರ್ಕಾರಿ ನೌಕರಿಯನ್ನು ಅವರು ಮಾಡಗೊಡಲಿಲ್ಲ. ಅವರಿಗೆ ಹಿರಿಯರಿಂದ ಬಂದ ಆಸ್ತಿಪಾಸ್ತಿ ಏನೂ ಇರಲಿಲ್ಲ. ಜೀವನಕ್ಕಾಗಿ ತುಂಬ ಪರಿಶ್ರಮಿಸಬೇಕಾಗುತ್ತಿತ್ತು. ಅನೇಕ ಕಷ್ಟನಷ್ಟಗಳನ್ನು ಅವರು ಸಹಿಸಬೇಕಾಯಿತು; ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತಿತ್ತು. ಆದರೂ ಅವರದು ದೃಢ ನಿರ್ಧಾರವಾಗಿತ್ತು. ಅದನ್ನವರು ಪರಿಪಾಲಿಸಿಕೊಂಡು ಬಂದರು. ಇಂಥ ಕಾಲದಲ್ಲಿಯೇ ಅವರು ಕರ್ನಾಟಕದ ಮೊದಲ ಕ್ರಾಂತಿಕಾರಿಯೆಂದೂ ಅನಿಸಿದರು.

ಕ್ರಾಂತಿಕಾರಿ

ಕೃಷ್ಣರಾಯರು ಎಳೆವಯಸ್ಸಿನಲ್ಲಿ ಕ್ರಾಂತಿಕಾರಿಯೆನಿಸಿದ್ದು ಒಂದು ಕಥೆ. ಭಾರತ ವಿಜಯೀ ಸಂಘ ಗುಪ್ತ ಕ್ರಾಂತಿಕಾರಿ ಸಂಸ್ಥೆಯಾಗಿತ್ತು. ಲೋಕಮಾನ್ಯ ತಿಲಕರು ಅದನ್ನು ಪುರಸ್ಕರಿಸುತ್ತಿದ್ದರು. ಹೀಗಾಗಿ ಅದಕ್ಕೆ ವಿಶೇಷ ಮಹತ್ವವು ಪ್ರಾಪ್ತವಾಗಿತ್ತು. ದೇಶದ ಎಲ್ಲ ಭಾಗಗಳ ತರುಣರನ್ನು ಅದು ಆಕರ್ಷಿಸಿತ್ತು. ಉತ್ತರ ಕರ್ನಾಟಕದ ಅನೇಕ ಯುವಕರೂ ಆಕರ್ಷಿತರಾಗಿದ್ದರು. ಕೃಷ್ಣರಾಯರೂ ಅವರಲ್ಲಿ ಒಬ್ಬರು. ಅವರು ಕೇವಲ ಸಾಮಾನ್ಯ ಸದಸ್ಯತ್ವ ಪಡೆದು ಸಮಾಧಾನಗೊಳ್ಳಲಿಲ್ಲ. ಸಂಸ್ಥೆಯ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪ್ರಮುಖ ಸದಸ್ಯರಾದರು. ತಮ್ಮ ಜೊತೆಗೆ ಇನ್ನೂ ಹಲವಾರು ಸ್ನೇಹಿತರನ್ನು ಸೇರಿಸಿಕೊಂಡರು. ಅವರಲ್ಲಿ ಶಿವರಾಮಪಂತ ಖಾನೋಳಕರ, ಬಂಡೆಪ್ಪ ನರೇಗಲ್ಲ, ಮಧ್ವರಾವ ಬಳ್ಳಾರಿ ಅವರು ಮುಖ್ಯರು. ಈ ಸಂಸ್ಥೆಯು ಕರ್ನಾಟಕದಲ್ಲಿ ಬಲವಾಗಿ ಸಂಘಟಿತವಾಗುವಂತೆ ಅವರು ಮಾಡಿದರು. ಈ ಪ್ರಯತ್ನದ ಫಲವಾಗಿಯೇ ಧಾರವಾಡ-ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು ಸಾವಿರ ಬೇಡರ ಬಲವಾದ ಖಡ್ಗಧಾರಿಗಳ ಪಡೆಯೊಂದು ನಿರ್ಮಾಣ ವಾಯಿತು. ಇಷ್ಟಕ್ಕೆ ಅವರು ಸುಮ್ಮನೇ ಕೂತವರಲ್ಲ. ಈ ಪಡೆ ಎರಡೂ ಜಿಲ್ಲೆಗಳ ಕಲೆಕ್ಟರ್ ಕಚೇರಿಗಳ ಮೇಲೆ ದಾಳಿ ಮಾಡಿ ಕಚೇರಿ ಕೆಲಸಕ್ಕೆ ಅಡ್ಡಿ ಮಾಡಬೇಕೆಂದು ಯೋಜನೆ ಹಾಕಿದ್ದರು.

ಅದಕ್ಕಾಗಿ ಒಂದು ದಿನವನ್ನು ಕೂಡ ಗೊತ್ತುಪಡಿಸಿ ಆಗಿತ್ತು. ಆದರೆ ಇವರ ದುರ್ದೈವ. ಆ ಯೋಜನೆ ಬುಡಮೇಲಾಯಿತು. ಲೋಕಮಾನ್ಯರನ್ನು ಮತ್ತು ಅರವಿಂದಘೋಷರನ್ನು ಬಂಧಿಸಿದ್ದುದೇ ಅದಕ್ಕೆ ಕಾರಣವಾಗಿ ಪರಿಣಮಿಸಿತು. ಕೃಷ್ಣರಾಯರು ತುಂಬ ವ್ಯಸನಪಟ್ಟರು; ನೋವೂ ಅನಿಸಿತು. ಆದರೆ ಅವರು ದಿಟ್ಟರು. ಇದರಿಂದ ಅವರು ಧೈರ್ಯ ಗುಂದಲಿಲ್ಲ. ಇಷ್ಟೇ ಅಲ್ಲ, ತಮ್ಮ ಸಂಘಟನೆಯನ್ನು ಬಿಟ್ಟುಗೊಡಲಿಲ್ಲ. ಬೇಡರಿಗೆ ಅವರು ರಕ್ಷಣೆ ನೀಡುತ್ತಲೇ ಬಂದರು. ಅದಕ್ಕಾಗಿ ಅವರು ಸಾಲವನ್ನು ಮಾಡುವ ಪ್ರಸಂಗ ಬಂದರೂ ಹಿಂದೆಗೆಯಲಿಲ್ಲ. ತಾವು ನಡೆಸುತ್ತಿದ್ದ ‘ಕರ್ನಾಟಕ ವೃತ್ತ’ ಪತ್ರಿಕೆ ಮತ್ತು ಮುದ್ರಣಾಲಯದಿಂದ ಬರುವ ಹಣವನ್ನೆಲ್ಲ ಈ ಕಾರ್ಯಕ್ಕೆ ಬಳಸಿಕೊಂಡರು. ಹೀಗೆ ಅವರು ಯಾವುದೇ ಒಂದು ಕೆಲಸವನ್ನು ಕೈಗೊಳ್ಳಲಿ, ದೃಢನಿರ್ಧಾರದಿಂದ ಮುಂದೆ ಸಾಗುತ್ತಿದ್ದರು. ಅದಕ್ಕಾಗಿ ಎಂಥ ಪರಿಸ್ಥಿತಿಯನ್ನು ಎದುರಿಸಲೂ ಸಿದ್ಧರಾಗುತ್ತಿದ್ದರು. ಯಾವೊಂದು ಕೊರತೆ ಈ ವಿಷಯದಲ್ಲಿ ಅವರನ್ನು ಬಾಧಿಸುತ್ತಿರಲಿಲ್ಲ.

ಒಂದು ಸವಾಲು

ಕೃಷ್ಣರಾಯರು ಧಾರವಾಡಕ್ಕೆ ಬಂದೊಡನೆ ಕನ್ನಡದ ವಿಶೇಷ ಸಂಪರ್ಕವು ಬಂದಿತು. ರೊದ್ದ ಶ್ರೀನಿವಾಸ ರಾಯರು ಅವರನ್ನು ಪ್ರೋತ್ಸಾಹಿಸಿದರು. ಅದರಿಂದ ಕನ್ನಡದ ಅಭಿಮಾನ ಇನ್ನೂ ಜಾಗೃತವಾಯಿತು. ಕನ್ನಡಕ್ಕಾಗಿ ಎಂಥ ಸೇವೆಯನ್ನು ಸಲ್ಲಿಸಲೂ ಸಿದ್ಧರಾಗಿದ್ದರು. ಹೀಗೆ ಅವರು ಕನ್ನಡದ ಕಟ್ಟಾಳುವೆನಿಸಿದರು. ಇನ್ನೂ ಎಳೆಯರಾಗಿರುವಾಗಲೇ ಕನ್ನಡ ಅಭಿಮಾನವನ್ನು ಮೆರೆಯುವ ಪ್ರಸಂಗವೊಂದು ಅವರಿಗೆ ಪ್ರಾಪ್ತವಾಯಿತು. ಧಾರವಾಡದಲ್ಲಿ ಭಾಷಣ ಕಲೆಗೆ ಪ್ರೋತ್ಸಾಹ ನೀಡಲು ಸಂಸ್ಥೆಯೊಂದನ್ನು ೧೮೯೭ರಲ್ಲಿ ಸ್ಥಾಪಿಸಲಾಗಿತ್ತು. ಧಾರವಾಡ ವಕ್ತೃತ್ತ್ವೋತ್ತೇಜಕ ಸಭೆಯೆಂದು ಅದರ ಹೆಸರು. ಕನ್ನಡ-ಮರಾಠಿ ಭಾಷೆಗಳಲ್ಲಿ ಭಾಷಣದ ವಿಷಯವನ್ನು ಮೊದಲು ತಿಳಿಸಬೇಕು; ಯಶಸ್ವಿ ಸ್ಪರ್ಧಾಳುಗಳಿಗೆ ಬಹುಮಾನಗಳನ್ನು ಕೊಡಬೇಕು ಎಂದು ನಿರ್ಧರಿತವಾಗಿತ್ತು. ಆ ಮೇರೆಗೆ ಕಾರ್ಯಕ್ರಮ ನಡೆದು ವಿಜೇತರಿಗೆ ಬಹುಮಾನಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಇನ್ನೊಂದು ಹೊಸ ಕಾರ್ಯಕ್ರಮ ಸ್ಫುರಿತವಾಯಿತು. ಇಪ್ಪತ್ನಾಲ್ಕು ಗಂಟೆಗಳಲ್ಲಿ ವಿಷಯದ ಬಗೆಗೆ ವಿಚಾರಿಸಿ ಮಾತನಾಡುವುದೇ ಅದು. ಅದಕ್ಕಾಗಿ ಒಂದು ವಿಶೇಷವಾದ ಬಹುಮಾನವನ್ನು ಸಾರಿದರು. ಆದರೆ ಇಲ್ಲೊಂದು ತಾರತಮ್ಯವನ್ನು ಎಣಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕೇವಲ ಮರಾಠಿ ಭಾಷೆಯಲ್ಲಿ ನಡೆಸಲಾಗುವುದೆಂದು ತಿಳಿಸಿದರು.

ಸಭೆಯಲ್ಲಿದ್ದ ಕನ್ನಡದ ಕಟ್ಟಾಳುಗಳಿಗೆ ಇದರಿಂದ ತುಂಬ ಕೋಪ ಬಂದಿತು. ಹೊನ್ನಾಪುರ ಗದಿಗೆಯ್ಯನವರು ಈ ವಿಚಾರವನ್ನು ಬಲವಾಗಿ ವಿರೋಧಿಸಿದರು. ಸಭೆಯಲ್ಲಿ ಗದ್ದಲವೂ ಕೆಲಮಟ್ಟಿಗೆ ನಡೆಯಿತು. ಕನ್ನಡಿಗರಲ್ಲಿ ಇಷ್ಟು ತ್ವರಿತವಾಗಿ ವಿಚಾರಿಸಿ ಮಾತನಾಡುವರು ಇಲ್ಲವೇ ಇಲ್ಲ; ಆದ್ದರಿಂದಲೇ ಕನ್ನಡದಲ್ಲಿ ಇಂಥ ಕಾರ್ಯಕ್ರಮ ಏರ್ಪಡಿಸಲು ಮುಂದಾಗಿಲ್ಲ ಎಂದು ತಿಳಿಸಲಾಯಿತು. ಪಾಠಕ್ ಗುರುನಾಥರಾಯರಂತೂ ‘‘ಕನ್ನಡಿಗರಲ್ಲಿ ಈ ಬಗೆಯಲ್ಲಿ ಮಾತನಾಡುವವರು ಯಾರಾದರೂ ಇದ್ದರೆ ಮುಂದೆ ಬನ್ನಿರಿ; ಅವರು ನೂರಕ್ಕೆ ಅರವತ್ತು ಅಂಕಗಳನ್ನು ಪಡೆಯಲಿ, ಅವರಿಗೆ ನಾನು ಹದಿನೈದು ರೂಪಾಯಿ ಬಹುಮಾನ ಕೊಡುತ್ತೇನೆ’’ ಎಂದು ಹೇಳಿದರು. ಕನ್ನಡಿಗರಿಗೆ ಇದೊಂದು ಸವಾಲೇ ಆಯಿತು. ಅವರು ಅದನ್ನು ಎದುರಿಸಿದರು. ಹಿಂದೆ ಬೀಳಲಿಲ್ಲ. ಇದೇ ಒಂದು ಸುದೈವದ ಸಂಗತಿ ಎನಿಸಿತು. ಒಬ್ಬರಲ್ಲ ಇಬ್ಬರಲ್ಲ ಎಂಟು ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂದಾದರು. ಮುದವೀಡು ಕೃಷ್ಣರಾಯರು ಈ ಎಂಟು ಜನರಲ್ಲಿ ಒಬ್ಬರಾಗಿದ್ದರು.

ಬಹುಮಾನ ಮುಖ್ಯವಲ್ಲ

ಈ ಬಗೆಯಲ್ಲಿ ಕನ್ನಡಿಗರನ್ನು ಕೆಣುಕಿದ್ದಾಯಿತು. ಅಲ್ಲದೇ ಅವರಿಗೆ ಸುಲಭವಾಗಿ ವಿಚಾರಿಸಲು ಸಾಧ್ಯವಾಗಬಾರದೆಂಬ ರೀತಿಯಲ್ಲಿ ವಿಷಯವನ್ನು ಮುಂದಿಡಲಾಯಿತು. ತುಂಬ ಗಂಭೀರವಾದ ವಿಷಯವದು. ‘‘ಭಾರತದ ಜನಸಂಖ್ಯೆಯು ಬೆಳೆಯುತ್ತ ನಡೆದಿರುವುದನ್ನು ಲಕ್ಷಿಸಿ, ಮುಂದಿನ ಭಾರತೀಯರ ಬಡತನವನ್ನು ನಿವಾರಿಸಲು ಯಾವ ಉಪಾಯಗಳನ್ನು ಕೈಗೊಳ್ಳಬೇಕು?’’ ಹೀಗೆ ಸ್ಪರ್ಧೆಯ ವಿಷಯ ತುಂಬ ಜಟಿಲವಾದುದು, ಗಂಭೀರವಾದುದು. ಆದರೆ ಕೃಷ್ಣರಾಯರು ಬಹು ಸ್ವಾರಸ್ಯಕರವಾಗಿ ಮಾತನಾಡಿದರು. ಪ್ರೇಕ್ಷಕರನ್ನು ಮರುಳುಗೊಳಿಸಿದರು; ತುಂಬ ಕರತಾಡನವಾಯಿತು. ಅವರಿಗೆ ಅರವತ್ತೆರಡು ಅಂಕಗಳು ಬಂದು ಯಶಸ್ಸು ಪಡೆದರು ಕನ್ನಡಿಗರು ತುಂಬ ಸಂತೋಷಗೊಂಡರು. ತಮ್ಮವರೊಬ್ಬರು ಸವಾಲನ್ನು ಎದುರಿಸಿದರು; ಅಷ್ಟೇ ಅಲ್ಲ, ಅದರಲ್ಲಿ ವಿಜಯವನ್ನು ಪಡೆದರು ಎಂದು. ಆದರೆ ಈ ಸಂತೋಷ ಒಂದು ಕ್ಷಣದ್ದು ಮಾತ್ರವಾಗಿತ್ತು. ಕಾರ್ಯದರ್ಶಿಗಳು ಮುದುವೀಡು ಅವರಿಗೆ ಬಹಮಾನ ಕೊಡುವದು ಸಾಧ್ಯವಿಲ್ಲ ಎಂದು ಸಾರಿದರು. ಆಗ ಸಭೆಯಲ್ಲಿ ತುಂಬ ಗದ್ದಲವಾಯಿತು. ‘‘ಏಕೆ ಕೊಡುವದಿಲ್ಲ’?  ಎಂಬ ಕೂಗು ಕೇಳಿಬರತೊಡಗಿತು. ಜನರ ಆಗ್ರಹಕ್ಕೆ ಮಣಿದ ಕಾರ್ಯದರ್ಶಿಗಳು ‘‘ಮುದುವೀಡು ಕೃಷ್ಣರಾಯನ ಕೈಯಲ್ಲಿ ಒಂದು ಟಿಪ್ಪಣಿಯ ಕಾಗದವಿತ್ತು. ಅದಕ್ಕಾಗಿ ಅವನು ಬಹುಮಾನವನ್ನು ಪಡೆವ ಹಕ್ಕನ್ನು ಕಳೆದುಕೊಂಡಿದ್ದಾನೆ’’  ಎಂದು ಸಾರಿದರು.

ಕೃಷ್ಣರಾಯರ ಮೇಲೆ ಇದೊಂದು ಹೊಸ ಅಪಾದನೆಯಾಗಿತ್ತು. ಅವರು ಇದಕ್ಕೆ ತಕ್ಕ ಉತ್ತರವನ್ನು ಕೊಡಲೇಬೇಕಾಗಿತ್ತು. ಅವರು ಚಟ್ಟನೆ ಜಿಗಿದೆದ್ದು ನಿಂತರು. ಮತ್ತೇನು ಪ್ರಸಂಗವು ನಡೆಯುವುದೋ ಎಂದು ಎಲ್ಲರೂ ಅವರನ್ನು ಕುತೂಹಲದಿಂದ ನೋಡತೊಡಗಿದರು. ಹಲವಾರು ಮರಾಠಿ ಜನರು ಕಾರ್ಯದರ್ಶಿಗಳನ್ನು ಸುತ್ತುವರಿದರು. ಅವರಿಗೆಲ್ಲ ಅನಾಹುತವೇನಾದರೂ ಸಂಭವಿಸಬಹುದೆಂಬ ಭೀತಿ. ಕೃಷ್ಣರಾಯರು ಅಜಾನುಬಾಹು ವ್ಯಕ್ತಿಗಳಿದ್ದರು. ಬಹುಶಃ ಅದೇ ಈ ಭೀತಿಗೆ ಕಾರಣವಾಗಿ ಪರಿಣಮಿಸಿರಲು ಸಾಕು. ಆದರೆ, ಕೃಷ್ಣರಾಯರಿಗೆ ಇದಾವುದರ ಪರಿವೆಯೂ ಇರಲಿಲ್ಲ. ನೇರವಾಗಿ ವೇದಿಕೆಯನ್ನು ಏರಿದರು. ಎಲ್ಲರ ದೃಷ್ಟಿ ಅತ್ತ ಹರಿಯಿತು. ಧಾರವಾಡವು ಮೊದಲಬಾರಿಗೆ ತರುಣ ಕನ್ನಡಿಗನ ಗುಡುಗನ್ನು ಕೇಳಿತು. ಅಸ್ಖಲಿತ ಧ್ವನಿಯಲ್ಲಿ ಅವರು ಹೇಳಿದರು: ‘‘ಈ ಬಹುಮಾನ ಮಹತ್ವದ್ದಲ್ಲ. ಕನ್ನಡದಲ್ಲಿ ಧೀರರಿದ್ದಾರೆಯೇ ಎಂದು ಅವರು ಸವಾಲು ಹಾಕಿದ್ದರು. ಅವರಿಗೆ ಉತ್ತರಕೊಡಲು ಬಂದೆ. ನನ್ನ ಕೈಯಲ್ಲಿ ಒಂದು ಚಿಕ್ಕ ಕಾಗದವಿದ್ದುದೇನೊ ನಿಜ, ಆದರೆ ಅದು ಅತಿ ಕಿರಿದಾದುದು. ನಾನೇನೂ ಅದರಲ್ಲಿ ಟಿಪ್ಪಣಿಗಳನ್ನು ಬರೆದುಕೊಂಡಿರಲಿಲ್ಲ. ವಿಷಯವು ಬಹಳೇ ಸುದೀರ್ಘವಾಗಿತ್ತು. ಅದು ಮರೆತು ಹೋಗಬಾರದೆಂಬ ಒಂದೇ ಕಾರಣಕ್ಕಾಗಿ ಅದನ್ನು ಈ ಕಾಗದದ ಮೇಲೆ ಬರೆದುಕೊಂಡು ಬಂದೆ. ನಾನು ಅದನ್ನು ನೋಡಿಕೊಂಡು ವಿಷಯದ ವಿವೇಚನೆ ಮಾಡಿದೆ ಇಷ್ಟೇ! ಅಲ್ಲದೇ ಟಿಪ್ಪಣಿ ಮಾಡಿಕೊಂಡು ಮಾತನಾಡಬಾರದೆಂದು ಮೊದಲು ಕರಾರು ಹಾಕಿರಲಿಲ್ಲ. ಪರೀಕ್ಷಕರು ಮತ್ತು ಗುರುನಾಥರಾಯರು ಈ ಬಗೆಗೆ ನನಗೆ ಎಚ್ಚರಿಕೆಯನ್ನು ನೀಡಬಹುದಾಗಿತ್ತು. ಅಂಥದನ್ನು ಅವರಾರೂ ಮಾಡಿಲ್ಲ; ಏನನ್ನೂ ಹೇಳಲಿಲ್ಲ. ಹೀಗಿರುವಾಗ ಈ ಮಾತನ್ನು ಹೇಳುವುದು ಅರ್ಥವಿಲ್ಲದ ಮಾತು. ನಾನು ಈ ಹದಿನೈದು ರೂಪಾಯಿ ಬಹುಮಾನದ ಆಸೆಯಿಂದ ಮಾತನಾಡಲು ಬಂದಿರಲಿಲ್ಲ. ನಾವೂ ಚೆನ್ನಾಗಿ ಮತ್ತು ಒಳ್ಳೇ ರೀತಿಯಲ್ಲಿ ಮಾತನಾಡಬಹುದು ಎಂಬುದನ್ನು ಈಗ ತೋರಿಸಿಕೊಟ್ಟಿದ್ದೇವೆ. ಇದಕ್ಕಿಂತ ಹೆಚ್ಚಿಗೆ ನಮಗೇನೂ ಬೇಡ. ಈ ಯಶಸ್ಸಿನ ಮುಂದೆ ಹದಿನೈದು ರೂಪಾಯಿಗಳ ಬೆಲೆ ನಮಗೇನೂ ಇಲ್ಲ.’’

ಕೃಷ್ಣರಾಯರು ತರುಣರು. ಆದರೂ ಎಲ್ಲರ ಮನಮುಟ್ಟುವಂತೆ ಮಾತನಾಡಿದ್ದರು. ಇದು ಅವರ ಗರ್ಜನೆಯೇ ಆಗಿತ್ತು. ಅವರ ಈ ಬಗೆಯ ಮಾತುಗಾರಿಕೆಗೆ ಪರೀಕ್ಷಕರು ಮುಗ್ಧರಾದರು. ಅವರ ಮೇಲೆ ಅದು ಪರಿಣಾಮ ಬೀರಿತು. ಕೃಷ್ಣರಾಯರಿಗೆ ಅವರು ಈ ಬಹುಮಾನವನ್ನು ಹೆಚ್ಚು ಗದ್ದಲವಿಲ್ಲದೆ ಕೊಟ್ಟುಬಿಟ್ಟರು. ಅವರಾದರೂ ಈ ಹಣವನ್ನು ತಮಗೆ ಇಟ್ಟುಕೊಳ್ಳಲಿಲ್ಲ. ಈ ಬಹುಮಾನ ನೀಡಿದ ಸಂಸ್ಥೆಯನ್ನು ಮೊದಲ್ಗೊಂಡು ಮೂರು ಸಂಸ್ಥೆಗಳಿಗೆ ಹಂಚಿಕೊಟ್ಟುಬಿಟ್ಟರು. ಅಂದಿನ ಈ ಪ್ರಸಂಗ ಕನ್ನಡಿಗರಲ್ಲಿ ವಿಶೇಷ ಸಂತೋಷಕ್ಕೆ ಕಾರಣವಾಗಿತ್ತು. ಅವರಲ್ಲಿ ಒಂದು ಭರವಸೆಯೂ ಈಗ ಮೂಡಿತ್ತು. ಕೃಷ್ಣರಾಯರ ಗುರುಗಳಂತೂ ಈ ಸಭೆಯ ನಂತರ ಅವರ ಬೆನ್ನು ಚಪ್ಪರಿಸಿ ಹೇಳಿದರು, ‘‘ಕೃಷ್ಣ ಇಂದು ನೀನು ನಿಜವಾಗಿ ಧಾರವಾಡದ ಕನ್ನಡಿಗರ ಮಾನವನ್ನು ಕಾಪಾಡಿದಿಯಪ್ಪ. ನೀನೇ ಧನ್ಯ!’’ ಅವರ ಧ್ವನಿಯಲ್ಲಿ ತುಂಬ ಅಂತಃಕರಣ, ಕಳಕಳಿ ವ್ಯಕ್ತವಾದವು. ಕೃಷ್ಣರಾಯರೂ ಗುರುಗಳಿಗೆ ವಂದಿಸಿ ‘‘ನಿಮ್ಮ ಆಶೀರ್ವಾದದ ಫಲವೇ ಈ ಯಶಸ್ಸು’’ ಎಂದರು.

ಧೀರ ಪತ್ರಿಕೋದ್ಯಮಿ

ಮುದುವೀಡು ಕೃಷ್ಣರಾಯರು ಸಾರ್ವಜನಿಕ ಜೀವನ ಪ್ರವೇಶಿಸಿದಾಗ ಅವರನ್ನು ಮೊದಲು ಕೈಮಾಡಿ ಕರೆದುದು ಪತ್ರಿಕೋದ್ಯಮ. ಅವರಲ್ಲಿದ್ದ ಬರಹಗಾರನ ಶಕ್ತಿ ಸ್ಫುರಣಗೊಂಡಿತು. ಅವರು ಮೊದಲು ವಹಿಸಿಕೊಂಡಿದ್ದ ಪತ್ರಿಕೆ ‘‘ಧಾರವಾಡ ವೃತ್ತ’’  ಹತ್ತೊಂಬತ್ತನೇ ಶತಮಾನದಲ್ಲಿ ಧಾರವಾಡದಿಂದಲೇ ಪ್ರಕಟವಾಗುತ್ತಿತ್ತು. ಅವರಿಗೆ ಕನ್ನಡ-ಮರಾಠಿ ಎರಡೂ ಭಾಷೆಗಳು ಚೆನ್ನಾಗಿ ಬರುತ್ತಿದ್ದವು. ಕನ್ನಡದಲ್ಲಿ ಅವರು ಪ್ರಭಾವಿಯಾಗಿ ಬರೆಯಬಲ್ಲವರಾಗಿ ದ್ದರು.  ಮರಾಠಿಯಲ್ಲಿ ಕೂಡ ಅಷ್ಟೇ ಪ್ರಭಾವಿಯಾಗಿ ಬರೆಯಬಲ್ಲವರಾಗಿದ್ದರು. ಹೀಗಾಗಿ ಕೆಲಕಾಲ ಈ ಪತ್ರಿಕೆಯನ್ನು ಅವರು ಬಹು ಸಮರ್ಥ ರೀತಿಯಲ್ಲಿ ನಡೆಸಿಕೊಂಡು ಬಂದರು. ಈ ವೃತ್ತಿಯಲ್ಲಿ ಅವರ ಆಸಕ್ತಿ ಮೂಡಿ ನಿಂತಿತು.ತಾವೇ ಒಂದು ಪತ್ರಿಕೆಯನ್ನು ನಡೆಸಬೇಕು ಎಂಬ ವಿಚಾರವೂ ಅವರಿಗೆ ಬಂದಿತು. ಅವರ ಸ್ನೇಹಿತರೂ ಈ ವಿಚಾರವನ್ನು ಪುರಸ್ಕರಿಸಿದರು. ಒಂದು ವಾರಪತ್ರಿಕೆಯೂ ಅವರಿಗೆ ದೊರೆಯಿತು. ‘‘ಕರ್ನಾಟಕ ವೃತ್ತ’’  ಎಂದು ಅದರ ಹೆಸರು. ಅನಾಡ ಚೆನ್ನಬಸಪ್ಪನವರು ೧೮೯೦ರಲ್ಲಿ ಅದನ್ನು ಪ್ರಾರಂಭಿಸಿದ್ದರು. ಐದಾರು ವರುಷಗಳ ಹೊತ್ತಿಗೆ ಅವರಿಗೆ ಇದನ್ನು ನಡೆಸಿಕೊಂಡು ಬರುವುದು ಕಠಿಣವೆನಿಸತೊಡಗಿತ್ತು. ಯಾರಿಗಾದರೂ ಅದನ್ನು ವಹಿಸಿಕೊಡಲು ಅವರು ಸಿದ್ಧರಾಗಿದ್ದರು. ಕೃಷ್ಣರಾಯರು ಅವರನ್ನು ಕೇಳಿದೊಡನೆ ಅವರಿಗೆ ವಹಿಸಿಕೊಡಲು ಚೆನ್ನಬಸಪ್ಪನವರು ಒಪ್ಪಿಕೊಂಡುಬಿಟ್ಟರು. ಕೃಷ್ಣರಾಯರ ಸ್ನೇಹಿತರಾದ ಖಾನೋಳಕರ ಹಾಗೂ ಹೊಸಕೇರಿ ಅಣ್ಣಾಚಾರ್ಯರು ಪತ್ರಿಕೆಯ ಸಂಪಾದನೆಕಾರ್ಯ ವಹಿಸಿಕೊಂಡರು. ಮುದ್ರಣ ಮೊದಲಾದ ಕಾರ್ಯವನ್ನು ಕೃಷ್ಣರಾಯರು ತಾವೇ ವಹಿಸಿಕೊಂಡರು. ಅವರು ಹನ್ನೆರಡು ವರುಷ ಇದನ್ನು ಹೀಗೇ ನಡೆಯಿಸಿಕೊಂಡು ಬಂದರು. ಮುಂದೆ ಇನ್ನೊಂದು ಪತ್ರಿಕೆ ‘ಧನಂಜಯ’ವೂ ಇದರೊಂದಿಗೆ ಸೇರಿಕೊಂಡಿತು. ಆಗ ಪತ್ರಿಕೆಗೆ ‘‘ಕರ್ನಾಟಕ ವೃತ್ತ ಮತ್ತು ಧನಂಜಯ’ ಎಂದು ಹೆಸರು ಕೊಟ್ಟರು. ೧೯೧೦ರ ಹೊತ್ತಿಗೆ ಕೃಷ್ಣರಾಯರೇ ಸಂಪಾದಕರು. ಮುಂದೆ ೧೮ ವರುಷ ಕಾಲ ಧಾರವಾಡದಿಂದ ಇದನ್ನು ಅವರು ಪ್ರಕಟಿಸಿದರು. ಈಗ ಅವರು ಸಂಪಾದಕರಾಗಿ, ಲೇಖಕರಾಗಿ, ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದರು. ಪ್ರಸಂಗ ಬಂದಾಗ ಅಚ್ಚು ಮೊಳೆಗಳನ್ನು ಜೋಡಿಸಲು ಹಿಂದೆ ಮುಂದೆ ನೋಡಲಿಲ್ಲ. ಮೇಲು-ಕೀಳು ಎಂದು ವಿಚಾರಿಸುತ್ತಿರಲಿಲ್ಲ; ಯಾವುದಕ್ಕೂ ಅವರು ಜಗ್ಗುತ್ತಿರಲಿಲ್ಲ. ಪತ್ರಿಕೆ ಸಕಾಲದಲ್ಲಿ ಹೊರಬರುವಂತೆ ಅವರು ನೋಡಿಕೊಳ್ಳುತ್ತಿದ್ದರು.

ರಾಷ್ಟ್ರೀಯ ಚಟುವಟಿಕೆಗಳಿಗೆ ಈ ಪತ್ರಿಕೆಯಿಂದ ಕೃಷ್ಣರಾಯರು ಪ್ರೋತ್ಸಾಹ ನೀಡಿದರು. ನಿರ್ಭೀತರಾಗಿ ಅವರು ಬರೆಯುತ್ತಿದ್ದರು. ಅಂಥ ಅನೇಕ ಪ್ರಸಂಗಗಳಿವೆ. ೧೯೦೨ ರಷ್ಟು ಹಿಂದೆಯೇ ಬ್ರಾಹ್ಮಣ ಸಮಾಜದಲ್ಲಿ ಜರುಗಿದ ವಿಧವಾ ವಿವಾಹವನ್ನು ಧರ್ಮಶಾಸ್ತ್ರದ ಆಧಾರದಿಂದ ಪ್ರೋತ್ಸಾಹಿಸಿದರು. ಧಾರವಾಡದಲ್ಲಿ ೧೯೨೧ರಲ್ಲಿ ಜರುಗಿದ ಗೋಳಿಬಾರ್ ಖಂಡಿಸಲು ಅಗ್ರಲೇಖ ಬರೆದರು. ಅವರು ಪತ್ರಿಕೆಯ ಮೂಲಕ ಜನಜಾಗೃತಿಗಾಗಿ ತುಂಬ ಗರ್ಜನೆ ನಡೆಸಿದುರು. ‘‘ಕರ್ನಾಟಕದ ಗಂಡುಗಲಿ’’ ಎಂಬ ಹೆಸರನ್ನು ಪಡೆದರು. ಹಲವಾರು ಸಲ ಅವರು ಸೆರೆಮನೆವಾಸವನ್ನು ಅನುಭವಿಸಿದರು. ಇದಾವುದಕ್ಕೂ ಅವರು ಸೊಪ್ಪು ಹಾಕಲಿಲ್ಲ. ಗಂಡು ಭಾಷೆಯನ್ನು ಬಳಸುವುದನ್ನು ಅವರು ಯಾವಕಾಲಕ್ಕೂ ನಿಲ್ಲಿಸಲಿಲ್ಲ.

೧೯೨೮ ರಲ್ಲಿ ಕೃಷ್ಣರಾಯರು ಈ ಪತ್ರಿಕೆಯನ್ನು ಬೆಳಗಾವಿಗೆ ಸ್ಥಳಾಂತರಿಸಿದರು. ಅಲ್ಲಿ ಕನ್ನಡ ಪತ್ರಿಕೆಗಳ ಕೊರತೆ ಇದೆ, ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಕನ್ನಡ ಪತ್ರಿಕೆ ಅವಶ್ಯವಿದೆ ಎನಿಸಿತು. ಆದರೆ ಕನ್ನಡಿಗರ ದುರ್ದೈವ! ಅಲ್ಲಿ ಬಹುಕಾಲ ಈ ಪತ್ರಿಕೆ ನಡೆಯಲೇ ಇಲ್ಲ. ಒಂದು ವರುಷದಲ್ಲಿ ಅದನ್ನು ನಿಲ್ಲಿಸಬೇಕಾದ ದುರ್ಧರ ಪ್ರಸಂಗ ಒದಗಿಬಂದಿತು. ಅದಕ್ಕಾಗಿ ಅವರು ಮತ್ತೆ ಪತ್ರಿಕೆಯನ್ನು ಧಾರವಾಡಕ್ಕೆ ತೆಗೆದುಕೊಂಡು ಬಂದರು. ಆದರೆ ಅಲ್ಲಿಯೂ ಅವರಿಗೆ ಯಶಸ್ಸು ದೊರಕಲಿಲ್ಲ. ಕನ್ನಡದ ಈ ಉತ್ತಮವಾದ ಪತ್ರಿಕೆಯನ್ನು ಅವರು ನಿಲ್ಲಿಸಿಬಿಟ್ಟರು. ಈ ಅನುಭವ ಕೃಷ್ಣರಾಯರಿಗೆ ತುಂಬ ನೋವನ್ನು ಮಾಡಿತ್ತು. ಹೀಗಾಗಿ ಅವರು ಮತ್ತೆ ಹೊಸ ಪತ್ರಿಕೆಯನ್ನು ತೆಗೆಯುವ ವಿಚಾರಕ್ಕೂ ಹೋಗಲಿಲ್ಲ. ಪತ್ರಿಕೋದ್ಯಮದ ಹವ್ಯಾಸವನ್ನೇ ಅವರು ತೊರೆದರು. ಲೇಖನ ವ್ಯವಸಾಯದಲ್ಲಿ ಅವರು ಈಗ ನಿರತರಾದರು.

ಗುರುವನ್ನು ಸೋಲಿಸಿದ ಶಿಷ್ಯ

ಕೃಷ್ಣರಾಯರು ಪ್ರಭಾವಿಯಾಗಿ ಬರೆವ ಶಕ್ತಿಯನ್ನು ಹೊಂದಿದ್ದರು. ಕನ್ನಡದಲ್ಲಿ ಮಾತ್ರವಲ್ಲದೇ ಮರಾಠಿಯಲ್ಲಿಯೂ ಮೋಹಕವಾಗಿ ಬರೆಯುತ್ತಿದ್ದರು. ಅಂಥಾ ಒಂದು ಪ್ರಸಂಗ ಅವರ ಜೀವನದಲ್ಲಿ ಸಂಭವಿಸಿತು. ಮುಂಬಯಿಯಿಂದ ‘ಇಂದು ಪ್ರಕಾಶ’ ಮರಾಠಿ ಪತ್ರಿಕೆ ಪ್ರಕಟವಾಗುತ್ತಿತ್ತು. ಧಾರವಾಡದಲ್ಲಿ ಜರುಗಿದ ಭಾಷಣ ಸ್ಪರ್ಧೆಯ ಪ್ರಸಂಗದ ಕುರಿತು ಅಲ್ಲೊಂದು ಲೇಖನ ಪ್ರಕಟವಾಯಿತು. ಕೃಷ್ಣರಾಯರು ಅದನ್ನು ಓದಿದರು. ಅದಕ್ಕೆ ಉತ್ತರವನ್ನು ಬರೆಯುವುದು ಅವಶ್ಯವೆಂದು ಅವರಿಗನಿಸಿತು. ಕೂಡಲೇ ಮರಾಠಿಯಲ್ಲಿ ಬರೆದು ಕಳಿಸಿಯೂ ಬಿಟ್ಟರು. ಅದು ಪ್ರಕಟವೂ ಆಯಿತು. ಮೂಲ ಲೇಖಕರಿಂದ ಅದಕ್ಕೆ ಪ್ರತಿಯಾಗಿ ಲೇಖನ ಪ್ರಕಟವಾಯಿತು. ಈ ಪ್ರತ್ಯುತ್ತರದಲ್ಲಿ ಕೃಷ್ಣರಾಯರು ಸಂಪೂರ್ಣ ಯಶಸ್ವಿಯಾದರು. ಮೂಲ ಲೇಖಕರು ತಮ್ಮ ಸೋಲನ್ನು ಒಪ್ಪಿಕೊಂಡರು. ಅವರು ಬೇರಾರೂ ಆಗಿರಲಿಲ್ಲ. ಕೃಷ್ಣರಾಯರ ಗುರುಗಳೇ ಆಗಿದ್ದರು. ಕೃಷ್ಣರಾಯರ ಮನೆಗೆ ಅವರು ಬಂದರು. ‘‘ಕೃಷ್ಣ, ನಮ್ಮಿಬ್ಬರ  ಈ ಲೇಖನ ಕಾಳಗ ಪುರಾಣಕಾಲದ ಪರಶುರಾಮ-ಭೀಷ್ಮರ ಕಾಳಗವನ್ನು ನೆನಪಿಗೆ ತರುವದಪ್ಪಾ. ನಿಜ, ನಾನು ಸೋತೆ. ಅದಕ್ಕಾಗಿ ನನಗೇನೂ ದುಃಖವಿಲ್ಲ. ನಿನ್ನಂಥ ಶಿಷ್ಯನಿಂದ ನನಗೆ ಸೋಲು ಬಂದಿತಲ್ಲ ಎಂದು ನನಗೆ ನಿಜವಾಗಿ ಸಂತೋಷವೇ ಆಗಿದೆಯಪ್ಪಾ!’’ ಎಂದು ಎಲ್ಲವನ್ನೂ ವಿವರಿಸಿದರು.

ಮನಮುಟ್ಟುವಂತೆ ಬರೆವ ಕಲೆಯನ್ನು ಕೃಷ್ಣರಾಯರು ಚೆನ್ನಾಗಿ ಸಾಧಿಸಿಕೊಂಡು ಬಂದಿದ್ದರು. ತಮ್ಮ ಪತ್ರಿಕೆ ನಿಂತಿತೆಂದು ಅವರು ಲೇಖನ ಬರೆಹ ನಿಲ್ಲಿಸಲಿಲ್ಲ. ಈಗ ಅವರ ಲೇಖನಿ. ಕರ್ನಾಟಕದ ನಾನಾ ಪತ್ರಿಕೆಗಳಲ್ಲಿ ಪ್ರವಹಿಸತೊಡಗಿತು. ಅವರು ಮುಖ್ಯವಾಗಿ ಅಂತರಂಗ, ಕರ್ನಾಟಕ ಧುರೀಣ, ಜಯಂತಿ, ಜಯಕರ್ನಾಟಕ ಪತ್ರಿಕೆ ಗಳಲ್ಲಿ ಅನೇಕ ಲೇಖನಗಳನ್ನು ಬರೆದರು. ಅವರದು ಗಂಡುಶೈಲಿ, ನಿಜ. ಆದರೆ ಅದು ಚಿತ್ರಮಯವೂ ಆಗಿತ್ತು. ಅವರು ಬಳಸುವ ಶಬ್ದಗಳು ಮನಸ್ಸನ್ನು ಮುಟ್ಟುವಂತಿರುತ್ತಿದ್ದವು. ಹೀಗಾಗಿ ಅಲ್ಲಿ ಒಂದು ಯಥಾರ್ಥವಾದ ಚಿತ್ರಣವಿರುತ್ತಿತ್ತು. ಇಂಥ ಲೇಖನಗಳಿಂದಲೇ ಅವರು ಕನ್ನಡಿಗರನ್ನು ಬಡಿದೆಬ್ಬಿಸಿದರು. ಕನ್ನಡಿಗರಲ್ಲಿ ಕನ್ನಡತನದ ಜಾಗೃತಿಯನ್ನು ಮಾಡಲು ಮುಂದಾದರು. ಕನ್ನಡಿಗರು ಕನ್ನಡದ ಉಳಿವಿಗಾಗಿ ಹೋರಾಡಲು ಮುಂದಾದುದು ಅವರ ಲೇಖನ ಶಕ್ತಿಯ ಯಶಸ್ಸನ್ನು ವ್ಯಕ್ತಪಡಿಸುವುದು. ಅವರ ಅನೇಕ ಪತ್ರಿಕೋದ್ಯಮಿ ಸ್ನೇಹಿತರೂ ಈ ಮಾತನ್ನು ಹೇಳಿರುವರು.

ನಾಟಕಕ್ಕಾಗಿ

ಕೃಷ್ಣರಾಯರಿಗೆ ನಾಟಕದ ಹುಚ್ಚು ಬಹಳ. ರಂಗಭೂಮಿ ಅವರ ಅಚ್ಚುಮೆಚ್ಚಿನದೆನಿಸಿತ್ತು. ರಂಗಭೂಮಿಯ ನಾನಾ ಚಟುವಟಿಕೆಗಳಲ್ಲಿ ಅವರು ಪಾಲ್ಗೊಂಡರು. ಕನ್ನಡ ನಾಟ್ಯರಂಗ ಬೆಳೆದು ಬರಬೇಕು ಎಂಬುದು ಅವರ ಬಲವಾದ ಅಪೇಕ್ಷೆ.  ಕನ್ನಡ ರಂಗಭೂಮಿ ಬಹಳ ಹಿಂದುಳಿದಿತ್ತು. ಅದಕ್ಕಾಗಿ ಕೃಷ್ಣರಾಯರು ಅತ್ತ ವಿಶೇಷ ಲಕ್ಷ್ಯಗೊಟ್ಟರು. ನಾಟಕ ಬರೆಯುವುದು, ಬರೆಸುವುದು, ರಂಗಭೂಮಿಯ ಮೇಲೆ ಪ್ರಯೋಗಿಸುವುದು, ನಾಟ್ಯ ವಿಲಾಸಿಗಳನ್ನು ಅಣಿಗೊಳಿಸುವುದು, ಅವರಿಗೆ ನಾನಾ ಬಗೆಯಲ್ಲಿ ತರಬೇತಿ ನೀಡುವುದು, ಕಂಪನಿಗಳ ನಿರ್ಮಾಣಕ್ಕೆ ಪ್ರೋತ್ಸಾಹವನ್ನು ನೀಡುವುದು ಹೀಗೆ ಕೃಷ್ಣರಾಯರು ಸಮಗ್ರ ರಂಗಭೂಮಿಯ ಕಾರ್ಯಕ್ಷೇತ್ರವನ್ನು ವ್ಯಾಪಿಸಿಕೊಂಡಿದ್ದರು. ಧಾರವಾಡದ ಮದಿಹಾಳದಲ್ಲಿಯ ಪ್ರಾಚ್ಯಕ್ರೀಡಾಸಂವರ್ಧಕ ಮಂಡಳವನ್ನು ಅವರು ರಂಗಭೂಮಿಗಾಗಿ ಬಳಸಿಕೊಂಡರು. ಅದು ಕನ್ನಡ ನಾಟ್ಯಕಲಾ ವಿಲಾಸಿಗಳ ತವರಾಗಿ ಪರಿಣಮಿಸಿತು. ಮೊದಲು ವರ್ಷಕ್ಕೊಮ್ಮೆ ನಾಟಕ ಪ್ರಯೋಗವಾಗುತ್ತಿತ್ತು. ಕ್ರಮೇಣ ಈ ಸಂಖ್ಯೆ ಹೆಚ್ಚಿತು. ಅದು ನಾಟ್ಯ ಸಂಸ್ಥೆಯಾಗಿ ಪರಿಣಮಿಸಿತು. ಭಾರತ ಕಲೋತ್ತೇಜಕ ಸಂಗೀತ ಸಮಾಜ ಎಂಬ ಹೊಸ ಹೆಸರನ್ನು ಹೊಂದಿ ನಿಂತಿತು. ಕೃಷ್ಣರಾಯರ ಹಲವಾರು ನಾಟಕಗಳು ಇಲ್ಲಿ ಪ್ರಯೋಗವಾದವು. ಸುಭದ್ರಾ, ರಾಮರಾಜ್ಯ, ಮೃಚ್ಛಕಟಿಕಗಳು ಮುಖ್ಯವಾದವು. ಕೃಷ್ಣರಾಯರು ಇಲ್ಲಿಯೂ ಯಾವುದೇ ಕೆಲಸ ಮಾಡಲು ಹಿಂದೆ ಮುಂದೆ ನೋಡಲಿಲ್ಲ. ಪರದೆ ಎತ್ತುವುದಕ್ಕೂ ಅವರು ಮುಂದಾದರು. ಮುಖ್ಯವಾಗಿ ಅವರು ಅನೇಕ ತರುಣರಿಗೆ ಅಭಿನಯ ತರಬೇತಿ ನೀಡಿದರು. ಅವರು ಸರಿಯಾಗಿ ಅಭಿನಯ ಕಲಿಯದೇ ಹೋದಾಗ ಕೋಪಿಸಿದ್ದೂ ಉಂಟು. ಸುಂದರತರುಣ ಗಾಣಿಗ ವೀರಪ್ಪನನ್ನು ಶಕುಂತಲೆ ಪಾತ್ರಕ್ಕೆ ಅವರು ಅಣಿಗೊಳಿಸಬೇಕಾಗಿತ್ತು. ಅವನಿಗೆ ಒಂದು ಶಬ್ದ ಸರಿಯಾಗಿ ಉಚ್ಚರಿಸಲು ಬರಲಿಲ್ಲ. ಕೋಪಗೊಂಡ ಕೃಷ್ಣರಾಯರು ಬಾರುಕೋಲಿನಿಂದ ಅವನನ್ನು ಹೊಡೆದು ಬಿಟ್ಟರು. ಆದರೆ ಮರುಕ್ಷಣವೇ ಸಿಟ್ಟು ಇಳಿಯಿತು. ತಾವೇ ಅವನ ಆರೈಕೆಯನ್ನು ನಡೆಸಿದರು. ಹೀಗೆ ರಂಗಭೂಮಿಯ ಏಳ್ಗೆಗೆ ಅವರು ವಿಶೇಷವಾಗಿ ಪರಿಶ್ರಮಿಸಿದರು. ೧೯೨೯ರಷ್ಟು ಹಿಂದೆಯೇ ಕನ್ನಡರಾಜ್ಯ ನಾಟ್ಯ ಸಮ್ಮೇಳನವೊಂದನ್ನು ಜರುಗಿಸಿದರು. ಸ್ವಾಗತಾಧ್ಯಕ್ಷರಾಗಿ ಕೆಲಸ ಮಾಡಿದರು. ಕನ್ನಡ ರಂಗಭೂಮಿ ಬೆಳೆಯುವ ಬಗೆಯನ್ನು ಆಗ ಅವರು ನಿರೂಪಿಸಿದರು. ತಮ್ಮ ಸಾಹಸೀ ಜೀವನದಿಂದ ಅದಕ್ಕೆ ಮಾರ್ಗ ಮಾಡಿಕೊಟ್ಟರು.

ಬರಹ

ಕೃಷ್ಣರಾಯರು ಇಂಥ ಹಲವಾರು ಹವ್ಯಾಸಗಳಲ್ಲಿ ತೊಡಗಿದವರು. ಅವರ ಸಾಹಿತ್ಯ ಹೀಗಾಗಿ ಅಷ್ಟು ಬೆಳೆದು ಬರಲಿಲ್ಲ ನಿಜ. ಆದರೆ ಅವರು ಬರೆದ ಸಂಪಾದಕೀಯ ಲೇಖನಗಳು. ಸಾವಿರಾರು ಬಿಡಿ ಲೇಖನಗಳು ಅವರಲ್ಲಿ ಅಡಕವಾದ ಸಾಹಿತ್ಯಕ ಗುಣವನ್ನು ಒಡೆದು ತೋರಿವೆ. ಅಲ್ಲದೇ ಅವರು ಕಾದಂಬರಿಕಾರರು; ಕವಿಗಳು, ನಾಟಕಕಾರರೂ ಅಹುದು. ‘ಚಿತ್ತೂರ ಮುತ್ತಿಗೆ’  ಅವರು ಬರೆದ ಕಾದಂಬರಿ, ‘ವಾಗ್ಭೂಷಣ’ ದಲ್ಲಿ ಪ್ರಕಟವಾಗಿದೆ. ‘ಪ್ರೇಮ ಭಂಗ’  ನಾಟಕ ಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಹಲವು ನಾಟಕಗಳನ್ನು ಅನುವಾದಿಸಿದ್ದಾರೆ. ‘ಮುದ್ದು ಮೋಹನ’ ಎಂಬ ಹೆಸರಿನಿಂದ ಹಲವಾರು ಪದ್ಯಗಳನ್ನು ಬರೆದಿದ್ದರು. ಅವರ ಕಾವ್ಯ ಪ್ರತಿಭೆಗೆ ಇವು ಒಳ್ಳೇ ನಿದರ್ಶನಗಳು. ಯರವಾಡಾ ಸೆರೆಮನೆಯಲ್ಲಿರು ವಾಗಲೇ ‘‘ಯೋಗ ನಿದ್ರೆಯನುಳಿದು ಬೇಗನೇಳೊ’’ ಎಂಬ ಅನುಪಮ ಹಾಡು ರಚಿಸಿದರು. ಅನೇಕರ ಹೃದಯಗಳನ್ನು ಅದು ಸುಲಭವಾಗಿ ಗೆದ್ದುಕೊಂಡಿತು. ಕೃಷ್ಣರಾಯರು ಶ್ರೇಷ್ಠ ಲಾವಣಿಕಾರರೂ ಆಗಿದ್ದರು. ಅವರ ಹಲವು ಲಾವಣಿಗಳು ವಿಲಕ್ಷಣ ಜಾಗೃತಿಯುಂಟು ಮಾಡುವಂಥವು. ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ ರಸಮಯ ಸಾಹಿತ್ಯಕ ಕೃತಿಯೆನಿಸುವಂತಿದೆ. ಅವರ ಅಧ್ಯಯನಶೀಲತೆ ಯನ್ನು ಅದು ಎತ್ತಿ ತೋರುವುದು.

ಉದ್ದಾಮ ಭಾಷಣಕಾರರು

ಆ ಕಾಲದ ಉದ್ದಾಮ ಭಾಷಣಕಾರರೆಂದು ಕೃಷ್ಣರಾಯರು ಹೆಸರಾಗಿದ್ದರು. ಗುಡುಗಿನ ಧ್ವನಿಯಲ್ಲಿ ಅವರು ಮಾತನಾಡುವಾಗ ಧ್ವನಿವರ್ಧಕದ ಆವಶ್ಯಕತೆ ಅವರಿಗೆ ಬರುತ್ತಿರಲಿಲ್ಲ. ‘‘ನಾನೇ ನಿಮ್ಮ ಲೌಡ್ ಸ್ಪೀಕರ್’’ ಎಂದು ಅವರು ಧ್ವನಿವರ್ಧಕವನ್ನು ಬದಿಗಿರಿಸಿ ಮಾತನಾಡುತ್ತಿದ್ದರು. ಅದರಿಂದ ಸಭಿಕರನ್ನು ಅವರು ಮಂತ್ರಮುಗ್ಧಗೊಳಿಸುತ್ತಿದ್ದರು; ಜನರಿಗೆ ಹುಚ್ಚು ಹಿಡಿಸುತ್ತಿದ್ದರು. ಸಭಿಕರನ್ನು ಮೌನವಾಗಿಸಬೇಕಾದ ಪ್ರಸಂಗ ಬಂದಾಗಲಂತೂ ಕೃಷ್ಣರಾಯರು ಅಲ್ಲಿ ಇರಲೇಬೇಕು. ಸಾಮಾನ್ಯರ ಮಾತಿರಲಿ ಅನೇಕ ಧುರೀಣರು ಅವರ ಈ ಮಾತಿನ ವೈಖರಿಗೆ ಮರುಳಾಗಿದ್ದರು.  ಭಾಷಣಗಳನ್ನು ಆಗಿಂದಾಗ ಅನುವಾದಿಸಿ ಹೇಳುವ ಅವರ ಶಕ್ತಿಯೂ ನಿಜವಾಗಿ ಅತ್ಯದ್ಭುತ. ಹೆಚ್ಚು ವಿಚಾರಿಸುವ ಪ್ರಶ್ನೆ ಅವರಿಗಿರಲಿಲ್ಲ. ಶಬ್ದಶಃ ಅನುವಾದಿಸಿದ್ದರೂ ಅದು ಕನ್ನಡ ಭಾಷಣವಾಗಿರುತ್ತಿತ್ತು. ರಾಜಾಜಿ ಅವರ ಒಂದು ವಾಕ್ಯದಲ್ಲಿಯ ‘ಮೆನ್, ಮನಿ, ಮ್ಯುನಿಷನ್’ ಪದಗಳನ್ನು ಮನುಷ್ಯ, ಮಾಲಕ್ಷ್ಮಿ, ಮಮ್ಮುಮದ್ದು ಎಂದು ಮಕಾರದ ಲಾಲಿತ್ಯದಲ್ಲಿ ಅನುವಾದಿಸಿದರು. ರಾಜಾಜಿ ಅವರನ್ನು ಹೊಗಳಿದ್ದೇ ಹೊಗಳಿದ್ದು. ರಾಜಾಜಿಯಂಥ ವಿದ್ವಾಂಸರಿಂದ ಹೊಗಳಿಕೆಯೆಂದರೆ ಅದೇನು ಸಣ್ಣ ಮಾತಲ್ಲ!

ಹರಿಕೀರ್ತನೆ ಮಾಡುವಲ್ಲಿಯೂ ಕೃಷ್ಣರಾಯರು ಬಲ್ಲಿದರಾಗಿದ್ದರು. ಇತರರಂತೆ ಅವರು ಜನರಂಜನೆ ಮಾಡುತ್ತಿರಲಿಲ್ಲ; ಜನರಲ್ಲಿ ಜಾಗೃತಿಯಾಗಲು ಇವನ್ನು ಉಪಯೋಗಿಸುತ್ತಿದ್ದರು. ಅದಕ್ಕಾಗಿ ಊರೂರು ಸಂಚರಿಸಿ ಬಂದರು. ಅವರು ಗಂಡು ಭಾಷೆಯನ್ನು ಬಳಸುತ್ತಿದ್ದರು. ಅಸ್ಖಲಿತವಾಗಿರುವ ಮಾತು. ಅದನ್ನು ಕೃಷ್ಣರಾಯರು ಚೆನ್ನಾಗಿ ಸಾಧಿಸಿದ್ದರು. ಅದಕ್ಕೂ ಗುರುಕೃಪೆಯೇ ಕಾರಣ. ಇವರನ್ನು ಹೊಲದ ಒಂದು ಬದುವಿಗೆ ನಿಲ್ಲಿಸುವರು. ತಾವು ಇನ್ನೊಂದು ಬದಿಗೆ ನಿಲ್ಲುವರು. ಗಾಳಿಗೆದುರಾಗಿ ಕೇಳಿಸುವಂತೆ ಗಟ್ಟಿಯಾಗಿ ಮಾತನಾಡಲು ಹೇಳುತ್ತಿದ್ದರು. ಹೀಗೆ ಕಂಠತ್ರಾಣಕ್ಕೂ ಒಂದು ವ್ಯಾಯಾಮ ಮಾಡಿಸಿದರು; ಅದಕ್ಕೊಂದು ಸ್ಥಿರತೆ ತಂದುಕೊಟ್ಟರು. ಕೃಷ್ಣರಾಯರು ಮುಂದೆ ಇದನ್ನು ಬೆಳೆಸಿಕೊಂಡರು.

ದೇಶಕ್ಕಾಗಿ ಸೆರೆಮನೆ ವಾಸ

ರಾಷ್ಟ್ರೀಯ ಆಂದೋಲನದಲ್ಲಿಯೂ ಅವರು ಭಾಗವಹಿಸಿದ್ದರು. ವಿದೇಶವಸ್ತ್ರ ಬರಿಷ್ಕಾರ, ಅಸಹಕಾರ ಆಂದೋಲನ, ಸೇಂದಿ ಅಂಗಡಿಗಳೆದುರು ಪಿಕೆಟಿಂಗ್, ಈಚಲಗಿಡಗಳನ್ನು ಕಡಿಯುವುದು- ಮೊದಲಾದವುಗಳಲ್ಲಿ ಅವರು ಪ್ರತ್ಯಕ್ಷವಾಗಿ ಭಾಗವಹಿಸಿದ್ದರು. ಸರಕಾರಿ ನೌಕರಿಗೆಂದೂ ಅವರು ಆಸೆ ಪಡಲಿಲ್ಲ. ೧೯೨೨ ರಲ್ಲಿ ಈಚಲಗಿಡ ಕಡಿದರೆಂದು ಎರಡು ವರುಷ ಶಿಕ್ಷೆ ವಿದಿಸಿ ಯರವಾಡ ಸೆರೆಮನೆಯಲ್ಲಿರಿಸಲಾಗಿತ್ತು. ೧೯೩೪ರಲ್ಲಿ ಭಾಷಣ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ್ದರಿಂದ ಗಜೇಂದ್ರ ಗಢದಲ್ಲಿ ಎರಡು ವರುಷ ಸ್ಥಾನಬದ್ಧತೆಯಲ್ಲಿರಿಸಿದ್ದರು. ಈ ನಂತರ ಅವರು ಪ್ರತ್ಯಕ್ಷ ರಾಜಕೀಯ ಚಟುವಟಿಕೆಗಳಲ್ಲಿ ಅಷ್ಟಾಗಿ ಭಾಗವಹಿಸಲಾಗಲಿಲ್ಲ. ಆದರೆ ಕರ್ನಾಟಕ ಏಕೀಕರಣ ಚಟುವಟಿಕೆಗಳಿಂದ ಅವರೆಂದೂ ದೂರವಾಗಿ ಉಳಿಯಲಿಲ್ಲ. ಅವುಗಳಲ್ಲಿ ಅಗ್ರಗಾಮಿಯಾಗಿರುತ್ತಿದ್ದರು.

ಸಾಹಿತ್ಯ ಸಮ್ಮೇಳನಾಧ್ಯಕ್ಷರು

ನಾನಾ ಬಗೆಯಲ್ಲಿ ಅವರು ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಆದರೆ ತಮ್ಮ ಪ್ರಚಾರವನ್ನು ಅವರೆಂದೂ ಮಾಡಿಕೊಂಡವರಲ್ಲ. ಹೆಸರು ಬರಬೇಕೆಂದು ಅವರೆಂದೂ ಯತ್ನಿಸಲಿಲ್ಲ. ತಮ್ಮ ಪತ್ರಿಕೆಗಳಲ್ಲಿ ಕೂಡ ಇದೇ ರೀತಿ ಅವರು ನಡೆದುಕೊಳ್ಳುತ್ತಿದ್ದರು. ಜನ ತಮ್ಮನ್ನು ಗೌರವಿಸುವ ವಿಚಾರ ಮಾಡಿದಾಗೆಲ್ಲ ತಪ್ಪಿಸಿಕೊಳ್ಳುತ್ತ ಬಂದಿದ್ದರು. ಆದರೆ ಬೆಳಗಾವಿಯಲ್ಲಿ ೧೯೩೯ ರಲ್ಲಿ ಸೇರಿದ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಇವರು ವಹಿಸಿಕೊಳ್ಳಬೇಕಾಯಿತು. ಅವರ ಅಪಾರ ಸಾಹಿತ್ಯ ಸೇವೆ, ನಾಡು ನುಡಿಗಳ ಬಗೆಗೆ ಅವರಿಗಿರುವ ಕಳಕಳಿ ಇವನ್ನು ಜನ ಅರಿತುಕೊಂಡಿದ್ದರು. ಅವರ ಈ ಸೇವೆಯನ್ನು ಗೌರವಿಸುವ ಅವಕಾಶವನ್ನು ಜನ ಕಳೆದುಕೊಳ್ಳಲು ಸಿದ್ಧರಿರಲಿಲ್ಲ.

ಕೃಷ್ಣರಾಯರು ಈ ಸಮ್ಮೇಳನದಲ್ಲಿ ಹೊಸ ಪರಂಪರೆ ಯನ್ನು ಹಾಕಿದರು. ಹಿಂದಿನ ಸಮ್ಮೇಳನದ ಅಧ್ಯಕ್ಷರು ಪ್ರಸ್ತುತ ಸಮ್ಮೇಳನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಬೇಕೆಂಬುದೇ ಅದು. ಈ ಸಂದರ್ಭದಲ್ಲಿ ಅರವತ್ಮೂರು ಪುಟಗಳ ಅಧ್ಯಕ್ಷ ಭಾಷಣ ಸಿದ್ಧಪಡಿಸಿದ್ದರು. ಅಲ್ಲಿ ಕನ್ನಡದ ದುರ್ದೆಸೆಯನ್ನು ವಿವರಿಸಿದ್ದರು. ಕನ್ನಡದ ಬಗೆಗೆ ಅವರಲ್ಲಿದ್ದ ಅಭಿಮಾನ ಹೊರಹೊಮ್ಮಿತ್ತು. ಪುಟಪುಟದಲ್ಲಿ ಕೃಷ್ಣರಾಯರ ವ್ಯಕ್ತಿತ್ವ ಮೂಡಿ ಬಂದಿತ್ತು. ಆ ಮೂಲಕ ಕನ್ನಡಮ್ಮನ ಕುವರರಿಗೆ ಸಂಘಟಿತರಾಗಿ ಮುಂದೆ ಸಾಗಲು ಸಂದೇಶ ನೀಡಿದರು. ಕನ್ನಡ ಕುಲಕೋಟಿ ಅವರ ಈ ಕಳಕಳಿಯನ್ನು ಎಂದೆಂದಿಗೂ ಮರೆಯದು.

ಪ್ರೀತಿಯ ಸಂಸಾರ

ಕೃಷ್ಣರಾಯರದು ಸುಖಮಯವಾದ ಸಂಸಾರ. ಮೊದಲ ಹೆಂಡತಿಯಿಂದ ಅವರಿಗೆ ಮಕ್ಕಳು ಇರಲಿಲ್ಲ. ಆಕೆ  ಮಕ್ಕಳಾಗಲಿಲ್ಲ ಎಂಬ ನೋವಿನಲ್ಲಿ ತೀರಿಕೊಂಡರು. ಕೃಷ್ಣರಾಯರಿಗೆ ಇನ್ನೊಂದು ಮದುವೆಯಾಗುವ ಮನಸ್ಸು ಇರಲಿಲ್ಲ. ತಮ್ಮ ಬಡತನದಲ್ಲಿ ಮತ್ತೆ ಅದೇಕೆ ಎಂದುಕೊಂಡರು. ಆದರೆ ಸೋದರತ್ತೆ ಕೇಳಲಿಲ್ಲ. ಮಗಳನ್ನು ಕೊಟ್ಟು ಮದುವೆ ಮಾಡಿದರು.

ಕೃಷ್ಣರಾಯರ ದಿನಚರಿ ಬೆಳಿಗ್ಗೆ ಏಳಕ್ಕೆ ಪ್ರಾರಂಭ. ಎದ್ದು ಮುಖ ತೊಳೆವರು. ಸ್ಟೋವ್ ಹೊತ್ತಿಸುವರು. ಮೊದಲನೆಯ ಚಹಾ ತಮ್ಮದು-ಪತ್ನಿಯದು. ಅನಂತರ ಒಬ್ಬೊಬ್ಬರೇ ಮಕ್ಕಳು ಎದ್ದು ಬರುವರು. ಅವರಿಗೆಲ್ಲ ಚಹಾ ಮಾಡಿಕೊಡುವರು. ಈ ರೀತಿ ಚಹಾ ಮಾಡುವಾಗ ಹಾಡುತ್ತಿದ್ದರು. ದಾಸರ ಪದಗಳು, ಮತ್ತೆ ಕೃಷ್ಣನ ಭಕ್ತಿಯ ಪದಗಳು ಅವರಿಗೆ ಅಚ್ಚುಮೆಚ್ಚಿನವು. ಅವನ್ನು ಒಳ್ಳೇ ಹುರುಪಿನಿಂದ ಹಾಡುತ್ತಿದ್ದರು. ಕೃಷ್ಣರಾಯರು ತಾಯಿಯ ಕೆಲ ಪದಗಳನ್ನು ಕಲಿತಿದ್ದರು. ‘‘ತಾಳಲಾರೆನಮ್ಮ ಉಪಟಳವ’’ ‘‘ಧನ್ಯ ಧನ್ಯ ಯಮುನೆ, ಗೋವರ್ಧನ ಗಿರಿ’’ ಈ ಪದಗಳಂತೂ ಅವರ ಅತಿ ಪ್ರೀತಿಯವು. ಈ ಸಂಗೀತ ಕಾರ್ಯಕ್ರಮ ಪ್ರಾರಂಭವಾಯಿತೆಂದರೆ ತಾವಿನ್ನು ಏಳಬೇಕು ಎಂದು ಮಕ್ಕಳಿಗೆ ಸೂಚನೆಯಾಗುತ್ತಿತ್ತಂತೆ. ಇದು ಪೂರೈಸಿತೆಂದರೆ  ಕೆನೆ ಕಡೆವ ಸಂಭ್ರಮ. ಈ ಹೊತ್ತಿಗೆ ಚಹಾ ಕುಡಿದು ಬಂದ ಹೆಣ್ಣುಮಕ್ಕಳಿಗೆ ದಾಸರ ಪದಗಳನ್ನು ಹೇಳಿಕೊಡುತ್ತಿದ್ದರು. ಅಲ್ಲಿಂದ ಅಡಿಗೆಮನೆಗೆ ಅವರ ಪ್ರವೇಶ, ಸ್ನಾನವಾಗಿ ಪೂಜೆಯ ಸಮಯಕ್ಕೆ ಪತ್ರಿಕಾ ವಾಚನವೂ ಸುಮಾರು ಹೊತ್ತು ನಡೆಯುವುದು. ಅನಂತರ ಒಂದು ಗಂಟೆ ಕಾಲ ತೋಟದ ಕೆಲಸ. ಹೂ ಗಿಡಗಳೆಂದರೆ ಅವರಿಗೆ ತುಂಬ ಅಕ್ಕರೆ. ಅವುಗಳ ಆರೈಕೆಯಲ್ಲಿ ಹೊತ್ತು ಕಳೆದಷ್ಟೂ ಅವರಿಗೆ ತೃಪ್ತಿ ಇಲ್ಲ. ಇಷ್ಟಾಗುವ ಹೊತ್ತಿಗೆ ದಣಿವೆನಿಸುತ್ತಿತ್ತು. ಸ್ನಾನ ಪೂರೈಸಿ ಪೂಜೆ ಮಾಡುವರು. ತುಂಬ ದೈವಭಕ್ತರು. ಅವರು ಪೂಜೆಯ ಕಾರ್ಯವನ್ನೆಂದಿಗೂ ತಪ್ಪಿಸುತ್ತಿರಲಿಲ್ಲ. ಸಾಯಂಕಾಲ ಚಹಾದ ಸಮಯದವರೆಗೆ ಬರವಣಿಗೆ ಸಾಗುತ್ತಿತ್ತು. ಸಾಯಂಕಾಲ ಮನೆಯಲ್ಲಿದ್ದವರೆಲ್ಲ ಸೇರಿ ಹರಟೆ ಹೊಡೆಯುತ್ತ ಚಹಾ ಕುಡಿಯಬೇಕು. ಮಕ್ಕಳೊಂದಿಗೆ ಸಮಯ ಕಳೆಯಲು ಇದೊಳ್ಳೆ ಅವಕಾಶ ಅವರಿಗೆ. ತುಂಬ ಕುಟುಂಬ ವತ್ಸಲರು. ಅವರು ರಾತ್ರಿ ಕೂಡ ಊಟದ ನಂತರವೂ ಎಲ್ಲರನ್ನು ಸೇರಿಸಿ ಲಾವಣಿ ಹೇಳುತ್ತಿದ್ದರು. ಇಲ್ಲವೇ ಹರಿ ಕೀರ್ತನೆಯ ಪಾಠ ನಡೆಯಬೇಕು. ಸಾರ್ವಜನಿಕ ಜೀವನದಿಂದ ನಿವೃತ್ತರಾದನಂತರ ಇದು ಅವರಿಗೆ ನಿತ್ಯದ ಪಾಠವಾಗಿದ್ದಿತು.

ಕೃಷ್ಣರಾಯರು ಧರ್ಮಭೀರುವಾಗಿದ್ದರು; ಸತ್ಯವಾದಿಯಾಗಿ ದ್ದರು. ಹೊರಗಿನವರಿರಲಿ, ಮನೆಯವರೇ ಇರಲಿ ಸುಳ್ಳು ಹೇಳುವುದು ಅವರಿಗೆ ಸೇರುತ್ತಿರಲಿಲ್ಲ. ಹಿಂದೂ ಸಂಸ್ಕಾರ, ಸಂಸ್ಕೃತಿ, ಪರಂಪರೆಗಳಲ್ಲಿ ಅವರದು ತುಂಬ ವಿಶ್ವಾಸ. ಒಮ್ಮೊಮ್ಮೆ ಅತಿ ಎನಿಸುವಂತಹ ಪರಂಪರಾಪ್ರಿಯತೆ ಅವರದು. ಅವರದು ಶಿಸ್ತಿನ ಜೀವನವೂ ಹೌದು. ಎಲ್ಲವೂ ಸರಿಯಾಗಿರಬೇಕು; ಸರಿಯಾಗಿ ನಡೆಯಬೇಕು. ಹೆಂಡತಿ ಮಕ್ಕಳು ಅಸ್ವಸ್ಥರಾದಾಗ ತಾವೇ ಸ್ವತಃ ಆರೈಕೆ ಮಾಡುತ್ತಿದ್ದರು.

ವ್ಯಕ್ತಿತ್ವ

ಕೃಷ್ಣರಾಯರು ಪುಷ್ಟದೇಹದ ವ್ಯಕ್ತಿ. ಗಟ್ಟಿಮುಟ್ಟಾದ ಮೈಕಟ್ಟು ಅವರದು. ಎದೆಯೂ ವಿಶಾಲವಾದುದು; ಗಂಡು ಧ್ವನಿ. ಒಳ್ಳೇ ಚಿತ್ತಾಕರ್ಷಕ ಮೂರ್ತಿ ಎನಿಸಿದ್ದರು. ಒಳ್ಳೇ ಶಕ್ತಿಶಾಲಿ ಎನಿಸಿದ್ದರು. ಆದರೆ ಅನಾವಶ್ಯಕವಾಗಿ ಪ್ರಯೋಗ ಮಾಡುತ್ತಿರಲಿಲ್ಲ. ಪ್ರಸಂಗ ಬಂದಾಗ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಅವರೊಮ್ಮೆ ಬೆಂಗಳೂರಿಗೆ ಹೊರಟಿದ್ದರು. ನಿಲ್ದಾಣಕ್ಕೆ ಬಂದಾಗ ರೈಲು ಹೊರಡುವುದರಲ್ಲಿತ್ತು. ಸಮೀಪದ ಡಬ್ಬಿಹತ್ತಲು ಹೋದರು. ಇಬ್ಬರು ಪಠಾಣರು ಬಾಗಿಲಿಗೆ ನಿಂತಿದ್ದರು. ಅವರನ್ನು ತಡೆಯಲು ಯತ್ನಿಸಿದರು. ಕೃಷ್ಣರಾಯರು ನಿರಾಯಾಸವಾಗಿ ಅವರನ್ನು ಹಿಂದೆ ಸರಿಸಿದರು. ರೈಲು ಏರಿದರು. ಅವರು ಒಳ್ಳೇ ಸರಳ ಹೃದಯಿಗಳು; ಅಂತಃಕರಣಿಗಳು ಕೂಡ. ‘‘ಗುಣದಲ್ಲಿಯೂ ಗಾತ್ರದಲ್ಲಿಯೂ ದೊಡ್ಡವರು. ಫಲಿತ ದ್ರಾಕ್ಷೆಯಂತಿದ್ದಾರೆ’’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬಣ್ಣಿಸಿದ್ದು ಯಥಾರ್ಥ ವಾಗಿರುವುದು.

೧೯೪೦ ರ ನಂತರ ಎರಡುಸಲ ಅವರು ಅಸ್ವಸ್ಥರಾಗಿ ದ್ದರು. ಆದರೆ ಭಾರತ ಸ್ವತಂತ್ರವಾಗದೇ ಕರ್ನಾಟಕ ಏಕೀಕರಣವಾಗದೇ ಸಾವು ತಮಗೆ ಬಾರದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಒಂದು ವಿಷಯದಲ್ಲಿಯಂತೂ ಅದು ಸತ್ಯವಾಗಿ ಪರಿಣಮಿಸಿತು. ೧೯೪೭ ರ ಆಗಸ್ಟ್ ೧೫ ಭಾರತ ಸ್ವತಂತ್ರವಾಯಿತು. ಅವರ ಕಣ್ಣಿಂದ ಆನಂದಬಾಷ್ಪ ಸುರಿದವು. ‘‘ನನ್ನ ಒಂದು ಆಸೆ ಈಡೇರಿತು. ನಾನು ಧನ್ಯನಾದೆ’’ ಎಂದರು. ಆ ಸಂದರ್ಭದಲ್ಲಿ ಅವರು ಹುಬ್ಬಳ್ಳಿ, ಶಿಗ್ಗಾಂವಿಗಳಿಗೆ ಹೋದರು. ಜನರ ಆಗ್ರಹವನ್ನು ಮೀರುವುದು ಸಾಧ್ಯವಾಗಲಿಲ್ಲ. ಈ ಬಳಲಿಕೆಯಿಂದ ಹಾಸಿಗೆ ಹಿಡಿದವರು ಮತ್ತೆ ಮೇಲೆ ಏಳಲಿಲ್ಲ. ಕರ್ನಾಟಕ ಏಕೀಕರಣವನ್ನು ಕನವರಿಸುತ್ತಲೇ ಅವರು ೧೯೪೭ ರ ಸೆಪ್ಟೆಂಬರ್ ೨ ರಂದು ಕೊನೆಯುಸಿರೆಳೆದರು.

ಕೃಷ್ಣರಾಯರು ನಾಡಿಗಾಗಿ ನುಡಿಗಾಗಿ ದೇಹವನ್ನು ಸವೆಸಿದರು. ನುಡಿ ಕನ್ನಡ, ನಡೆ ಕನ್ನಡ, ಮನ ಕನ್ನಡ, ತನು ಕನ್ನಡ ಎಂಬ ಮಾತು ಅವರ ವಿಷಯದಲ್ಲಿ ಸಂಪೂರ್ಣ ಸತ್ಯವಾಗಿತ್ತು. ಸುಮಾರು ಐದು ದಶಕಗಳವರೆಗೆ ಕನ್ನಡ-ಕರ್ನಾಟಕದ ಸೇವೆಯನ್ನು ಏಕಮನಸ್ಸಿನಿಂದ ಅವರು ಮಾಡಿದರು. ಕನ್ನಡದ ಭೀಷ್ಮರೆನಿಸಿದರು. ಕನ್ನಡಕ್ಕಾಗಿ ದುಡಿದವರಲ್ಲಿ ಅವರು ಅಗ್ರಗಣ್ಯರು ಆದರು. ಅವರ ಹೆಸರು ಕನ್ನಡಿಗರಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ನಿಲ್ಲುವುದು.