ತನುವನೊಂದು ಬಿಲ್ಲುಮಾಡಿ
ಪ್ರಾಣಬಾಣವನ್ನು ಹೂಡಿ
ಕಾಲ ಪುರುಷನೆಳೆದ ಹಾಗೆ
ದೇಹ ಬಾಗಿ ಹೋಗಿದೆ.
ಗಳಿತಫಲದ ತರುವಿನಲ್ಲಿ
ಶಿಶಿರ ಕುಳಿರ ಗಾಳಿಯಲ್ಲಿ
ಎಲೆಗಳುದುರಿ ರಸವಿಹೀನ-
ತರುವಿನಂತೆ ತನುವಿದೆ.

ಬೆಳ್ಳಿನವಿರ ಹಣ್ಣು ಮುದುಕಿ
ಭಗವಂತನ ನಂಬಿ ಬದುಕಿ
ಕೈಯಕೋಲನೂರಿ ಮುಂದೆ
ಬರುತಲಿರುವಳು,
ಕಣಿವೆಯಾದ ಕೆನ್ನೆ ಮೇಲೆ
ಮುಗಿಲ ಮರೆಯ ತಾರೆಯೋಲೆ
ಎರಡು ಕಣ್ಣ ಶಾಂತಿಯಿಂದ
ಅರಳಿಸಿರುವಳು !

ಯಾವ ಊರೊ ಎಲ್ಲಿಯವಳೊ !
ಎಲ್ಲಿಗಿಂತು ಸಾಗುತಿಹಳೊ-
ನನಗೆ ಮಾತ್ರ ಜಗದ ಜೀವ
ನಡೆಯುವಂತೆ ತೋರಿದೆ,
ಅರಿಯದಿರುವ ಭಾವವೊಂದು
ಎದೆಯನೆಲ್ಲ ಕಲಕಿ ನಿಂದು
ನಿಷ್ಕಾರಣದೊಲವು ಮೂಡಿ
ಕಣ್ಣು ಹನಿಯ ತುಂಬಿದೆ.