ರಾಮಾಯಣದಲ್ಲಿ ಬರುವ ಅನೇಕ ಋಷಿಗಳ ಹೆಸರನ್ನು ನೀವು ಕೇಳಿರಬಹುದು. ತಮ್ಮ ತಪಸ್ಸಿನ ಶಕ್ತಿಯ ಫಲವಾಗಿ ಋಷಿಗಳು ಏನು ಬೇಕಾದರೂ ಮಾಡಲು ಶಕ್ತರು ಎನ್ನುವುದು ಬಹಳ ಕಾಲದಿಂದಲೂ ಬೆಳೆದು ಬಂದಿರುವ ನಂಬಿಕೆ. ತಮಗೆ ಬೇಕಾದುದನ್ನು ಮಂತ್ರದ ಶಕ್ತಿಯಿಂದ ತಮ್ಮ ಎದುರಿಗೇ ತರಿಸಬಲ್ಲ ಶಕ್ತಿ ಇವರಿಗುಂಟಂತೆ. ಇವರು ಶಾಪ ಕೊಟ್ಟರೆ ಮನುಷ್ಯ ಹಕ್ಕಿಯಾಗುತ್ತಾನೆ, ಹಕ್ಕಿ ಮನುಷ್ಯನಾಗುತ್ತದೆ. ಈ ಮಂತ್ರಶಕ್ತಿಯಿಂದ ಮನಸ್ಸಿಗೆ ಬಂದುದನ್ನೆಲ್ಲಾ ಮಾಡಬಹುದಂತೆ ಆದರೆ ಮಂತ್ರಸಿದ್ಧಿ ಎಲ್ಲರಿಗೂ ಸಾಧ್ಯವಿಲ್ಲ, ಅದಕ್ಕಾಗಿ ಸತತವಾಗಿ ಸಾಧನೆ ಮಾಡಬೇಕು ಎನ್ನುತ್ತಾರೆ. ಹೀಗಿರುವಾಗ ಕತೆಯನ್ನೋ ಕಾವ್ಯವನ್ನೋ ಬರೆಯುತ್ತಾ ಕುಳಿತುಕೊಳ್ಳುವ ಕವಿಗಳಿಗೆ ಮಂತ್ರಸಿದ್ಧಿ ಸಾಧ್ಯವೆ?

ಕನ್ನಡದ ಒಬ್ಬಕವಿ (ಅವನ ಹೆಸರು ಮುದ್ದಣ) ತನಗೆ ಮಂತ್ರಸಿದ್ಧಿ ಆಗಿದೆಯಿಂದು ಹೇಳಿದರೆ ಅವನ ಕೈಹಿಡಿದ ಹೆಂಡತಿಗೆ ಆಶ್ಚರ್ಯವಾಗುವುದು ಸ್ವಾಭಾವಿಕ ಅಲ್ಲವೆ? ಅದರಲ್ಲಿಯೂ ಮನೆಯಲ್ಲಿ ಅಕ್ಕಿಯಿದೆಯೆ, ಬೇಳೆಯಿದೆಯೆ ಎಂದು ವಿಚಾರಿಸದ ತನ್ನ ಗಂಡನಿಗೆ ಒಂದು ಮಂತ್ರ ಸಿದ್ಧಿಸಿದೆ ಎಂದರೆ ತಾನೇಕೆ ಬಡತನದಲ್ಲಿ ಕೊಳೆಯಬೇಕು ಎನ್ನಿಸಬೇಕು. ಆದ್ದರಿಂದ ಆ ಮಂತ್ರ ಯಾವುದು ಎಂದು ತಿಳಿದುಕೊಳ್ಳಲು ಗಂಡನನ್ನು ಪುಸಲಾಯಿಸುತ್ತಾಳೆ. ಅಷ್ಟು ಸುಲಭವಾಗಿ ಗುಟ್ಟು ರಟ್ಟುಮಾಡುವ ಮನುಷ್ಯನೇ ಮುದ್ದಣ? ಅವನೂ ಹೆಂಡತಿಯನ್ನು ಸತಾಯಿಸುತ್ತಾನೆ. ಮುದ್ದಣ ಮತ್ತು ಅವನ ಹೆಂಡತಿ ಮನೋರಮೆಯರ ಮಧ್ಯೆ ನಡೆಯುವ ಈ ಸಂಭಾಷಣೆಯನ್ನು ನೀವೇ ಕೇಳಿ.

’ಅದು ಹೇಗೆ ಸಾಧ್ಯ?’

ಮುದ್ದಣ ’ಏನಾನುಮೊಂದು ನಲ್ಗತೆಯಂ ಪೇಳ’ ಎಂದು ಕೇಳಿದ ತನ್ನ ಹೆಂಡತಿ ಮನೋರಮೆಗೆ ರಾಮಾಯಣದ ಕತೆ ಹೇಳುತ್ತಾ ಕುಳಿತಿದ್ದಾನೆ. ಶ್ರೀರಾಮಚಂದ್ರ ರಾವಣನನ್ನು ಸಂಹಾರಮಾಡಿ ಸೀತೆಯನ್ನು ಸೆರೆಯಿಂದ ಬಿಡಿಸಿಕೊಂಡು ಬಂದು ಅಯೋಧ್ಯೆಯಲ್ಲಿ ರಾಜ್ಯವಾಳಲು ಪ್ರಾರಂಭಿಸುತ್ತಾನೆ. ಸ್ವಲ್ಪ ಕಾಲದ ಮೇಲೆ ಒಬ್ಬ ಅಗಸನ ಹೆಂಡತಿ ಗಂಡನನ್ನು ಕೇಳದೆ ತೌರುಮನೆಗೆ ಹೋದವಳು ಹಿಂದಕ್ಕೆ ಬರುತ್ತಾಳೆ; ಅಗಸ ತನ್ನ ಹೆಂಡತಿಯನ್ನು ಪುನಃ ಸೇರಿಸಿಕೊಳ್ಳದೆ, ’ಬಿಟ್ಟ ಹೆಂಡತಿಯನ್ನು ಮತ್ತೆ ಸೇರಿಸಿಕೊಳ್ಳಲು ನಾನೇನು ರಾಮನೇ?’ ಎಂದು ಹೀಯಾಳಿಸುತ್ತಾನೆ. ಈ ಮಾತನ್ನು ಗೂಢಚಾರರಿಂದ ಕೇಳಿದ ರಾಮ ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರುವಂತೆ  ಆಜ್ಞಾಪಿಸುತ್ತಾನೆ. ಲಕ್ಷ್ಮಣ ಅಣ್ಣನ  ಆಜ್ಞೆಯನ್ನು ಪಾಲಿಸಿ ಅತ್ತಿಗೆಯನ್ನು ಕಾಡಿನಲ್ಲಿ ಬಿಟ್ಟುಬರುತ್ತಾನೆ. ಆಗ ಸೀತೆ ತುಂಬುಗರ್ಭಿಣಿ, ಲಕ್ಷ್ಮಣನು ಶ್ರೀರಾಮನ ಆಜ್ಞೆಯನ್ನು ತಿಳಿಸಿದಾಗ ಸೀತೆ ಮೂರ್ಛೆಹೋಗುತ್ತಾಳೆ. ಎಚ್ಚರಗೊಂಡು ದುಃಖಿಸುತ್ತಾಳೆ, ಕಡೆಗೆ ಲಕ್ಷ್ಮಣನಿಗೆ, ’ನಿನ್ನಂ ನಿನ್ನಣ್ಣಂ ಕೋಳ್ದೊಡೆ, ನಿನ್ನಾಣತಿಗಬಲೆ ಮರುಗಿದಳಿಲ್ಲ; ಮಾರ್ನುಡಿದಳಿಲ್ಲ; ಮುನಿಸಾಂತಳಿಲ್ಲ; ಬೆರ್ಚಿದಳಿಲ್ಲ; ಕೂಳ್ಕುದಿಗೊಂಡಳಿಲ್ಲ; ದೂರಿದಳಿಲ್ಲ; ನೀನೆ ಗತಿಯೆಂದು ನಿನ್ನಡಿಯಂ ನೆನೆಯುತೆ ಕಡೆವೊಳ್ತಂ ಪಾರುತಿರ್ಪಳೆಂದು ಬಿನ್ನಯಿಸಯ್’ (ನಿನ್ನ ಅಣ್ಣ ನಿನ್ನನ್ನು ಕೇಳಿದರೆ, ನಿನ್ನ ಅಪ್ಪಣೆಗೆ ಆಬಲೆ ಮರುಗಲಿಲ್ಲ, ಎದುರಾಡಲಿಲ್ಲ, ಕೋಪ ಮಾಡಿಕೊಳ್ಳಲಿಲ್ಲ, ಬೆಚ್ಚಲಿಲ್ಲ, ಅನ್ನದಂತೆ ಕುದಿಯಲಿಲ್ಲ, ನೀನೆ ಗತಿ ಎಂದು ನಿನ್ನ ಪಾದವನ್ನು ನೆನೆಯುತ್ತ ಕಡೆಗಾಲವನ್ನು ನಿರೀಕ್ಷಿಸುತ್ತಿದ್ದಳು ಎಂದು ಬಿನ್ನವಿಸು) ಎಂದು ಹೇಳಿ ಕಳುಹಿಸುತ್ತಾಳೆ. ಅದೇ ಅರಣ್ಯದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ ವಾಲ್ಮೀಕಿ ಋಷಿಗಳು ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಸೀತೆ ಅಲ್ಲಿ ಅವಳಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ. ಅವರೇ ಲವ-ಕುಶರು, ಇತ್ತ ಹೆಂಡತಿಯನ್ನು ಕಾಡಿಗೆ ಕಳುಹಿಸಿದ ರಾಮಚಂದ್ರ ತನ್ನ ಕೆಲಸಕ್ಕಾಗಿ ವ್ಯಥೆಪಡುತ್ತಿರುತ್ತಾನೆ. ಅವನ ದುಃಖ ಕಡಿಮೆಯಾಗಲೆಂದು ಅವನ ಗುರುಗಳು ಅಶ್ವಮೇಧಯಾಗವನ್ನು ಮಾಡುವಂತೆ ಸೂಚಿಸುತ್ತಾರೆ. ಈ ಯಾಗ ಮಾಡುವ ರಾಜ ಇತರ ಎಲ್ಲ ರಾಜರನ್ನೂ ಸೋಲಿಸಬೇಕು. ರಾಮ ಶತ್ರುಘ್ನನನ್ನು ಸೈನ್ಯಸಮೇತ ಕಳುಹಿಸುತ್ತಾನೆ; ಒಬ್ಬ ಋಷಿಗಳು ಶತ್ರುಘ್ನನನ್ನೂ ಆತನ ಸೈನ್ಯವನ್ನೂ ಸತ್ಕರಿಸಿ ಉಪಚಾರ ಮಾಡುತ್ತಾರೆ ಎಂದು ಮುದ್ದಣ ಕಥೆ ಹೇಳುವಾಗ ’ಮೃಷ್ಟಾನ್ನ ಭೋಜನ ನೀಡಿ ಅವರೆಲ್ಲರನ್ನೂ ಸತ್ಕರಿಸಿದ’ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಮನೋರಮೆಗೆ ಕುತೂಹಲವಾಗುತ್ತದೆ. ’ಅದು ಹೇಗೆ ಸಾಧ್ಯ?’ ಎಂದು ಗಂಡನನ್ನು ಕೇಳುತ್ತಾಳೆ. 

ಏನಾನುವೊಂದು ನಲ್ಗತೆಯಂ ಪೇಳ

ಮುದ್ದಣ : ಮುನಿಗಳ ತಪಸ್ಸಿನ ಶಕ್ತಿಯೇನು ಕಡಿಮೆಯೆ? ಬೇಡಿದುದನ್ನು ತಂದುಕೊಡುತ್ತದೆ.

ಮನೋರಮೆ : ಓ! ಇಷ್ಟೊಂದು ತಪಸ್ಸಿನ ಶಕ್ತಿ ಇರುವುದರಿಂದಲೇ ತಪಸ್ವಿಗಳು ಯಾರ ಗೊಡವೆಗೂ ಹೋಗದೆ ಸುಮ್ಮನಿರುತ್ತಾರೆ.

ಮು : ಹೌದು, ಅದರಲ್ಲಿ ತಪ್ಪೇನು?

ಸಪಾಕ್ಷರೀ ಮಂತ್ರ

ಮ : ಅದು ಹಾಗಿರಲಿ, ನಿನ್ನಂತಹ ಕವಿಗಳು ಮನೆಯ ವಿಷಯದಲ್ಲಿ ಸ್ವಲ್ಪವೂ ಆಸಕ್ತಿ ತೋರಿಸದೆ ಸುಮ್ಮಸುಮ್ಮನೆ ಹಾಳುಕತೆಯನ್ನು ಬರೆಯುವುದಲ್ಲಿ ಯಾವಾಗಲೂ ಕಾಲ ಕಳೆಯುತ್ತೀರಲ್ಲ! ಹೆಂಡತಿ ಮಕ್ಕಳಿಗೆ ಬಟ್ಟೆಯಿದೆಯೆ, ಊಟ ಮಾಡುವುದಕ್ಕಿದೆಯೆ ಎಂದು ವಿಚಾರಿಸಿದ್ದೀರಾ? ಯಾರಾದರೂ ಅಂತಹ ತಪಸ್ವಿಗಳ ಹತ್ತಿರ ಒಂದು ಮಂತ್ರವನ್ನಾದರೂ ಉಪದೇಶ ಮಾಡಿಸಿಕೊಂಡು ಬರಲು ಆಗುವುದಿಲ್ಲವೆ?

ಮು : (ನಗುತ್ತಾ) ಏನು, ನಮ್ಮಂತಹವರನ್ನು ಗೇಲಿ ಮಾಡುತ್ತೀಯಾ? ಆಹಾ, ನಮ್ಮಂತಹ ಕವಿಗಳಿಗೆ ಏನು ಕೊರತೆ? ನಾವು ಬಯಸಿದುದನ್ನು ತಂದುಕೊಡುವ ಒಂದು ಮಂತ್ರವನ್ನು ಸಿದ್ಧಮಾಡಿಕೊಂಡಿರುವಾಗ ಕಾಡಜೋಗಿಗಳಿಂದ ಉಪದೇಶ ಮಾಡಿಸಿಕೊಳ್ಳಬೇಕೆ? ಊರನ್ನು ಕಾಡನ್ನಾಗಿ, ಕಾಡನ್ನು ಊರನ್ನಾಗಿ ಮಾಡುವ ಶಕ್ತಿಯುಳ್ಳ ಕವಿಗಳು ಮುದಿತಪಸ್ಸಿಗಳಿಗಿಂತ ದೊಡ್ಡವರಲ್ಲವೆ? ….. ನಮ್ಮಂತಹ ಕವಿಗಳ ರೀತಿ ನಿನಗೆ ತಿಳಿಯದು.

ಮ : (ಆಶ್ಚರ್ಯಗೊಂಡು) ನಿಮ್ಮಂತಹವರಿಗೂ ಮಂತ್ರಸಿದ್ಧಿಯಾಗಿದೆಯೆ?

ಮು : ಅದರಲ್ಲಿ ಅನುಮಾನವೇನು?

ಮ : ನಿನ್ನಲ್ಲಿಯೂ ಆ ಮಂತ್ರವಿದೆಯೆ?

ಮು : ನನ್ನಲ್ಲಿ ಅದು ಹಾಸುಹೊಕ್ಕಾಗಿದೆ.

ಮ : ಆ, ನೀನು ಮಹಿಮಾವಂತ ನಿನಗೆ ಯಾರಿಂದ ಉಪದೇಶವಾಯ್ತು?

ಮು : ಚಿಕ್ಕಂದಿನಲ್ಲಿಯೇ – ಗುರುವಿನಿಂದ.

ಮ : ಇನಿಯ, ಆ ಮಂತ್ರ ಯಾವುದು? ನನಗೂ ಸ್ವಲ್ಪ ಹೇಳು.

ಮು : ಅಬ್ಬಾ, ಒಳ್ಳೆಯದು, ಒಳ್ಳೆಯದು! ಮಂತ್ರವಂತೆ! ತನಗೆ ಹೇಳಬೇಕಂತೆ! ಛೆ, ಹೆಂಗಸರಿಗೆ ಮಂತ್ರೋಪದೇಶ ಸಲ್ಲುತ್ತದೆಯೆ?

ಮ : ನನಗೆ ಗೊತ್ತಿಲ್ಲವೆ? ನಿನ್ನಿಂದ ನಾನು ಉಪದೇಶವನ್ನು ಬೇಡುತ್ತೇನೆಯೇ? ನೀನು ಆಗ ಹೇಳಿದ ಮಂತ್ರಗಳ ಹೆಸರುಗಳ ಪೈಕಿ ಇದರ ಹೆಸರೇನು ಎಂದು ಕೇಳಿದೆ, ಅಷ್ಟೆ.

ಮು : ಆಗ ಹೇಳಿದ ಮುನಿಗಳ ಮಂತ್ರಗಳಂತೆ ಅಲ್ಲ. ನಮ್ಮ ಮಂತ್ರಗಳ ರೀತಿಯೇ ಬೇರೆ, ಮೂರು, ಎರಡಕ್ಷರದ ಮಂತ್ರಗಳು ನಮಗೆ ಸರಿಯ? ನಮ್ಮದು ಹಾಗೆ ಚಿಕ್ಕದಲ್ಲ, ಬಲು ದೊಡ್ಡದು, ಒಂದಕ್ಷರವಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಐದೂ ಅಲ್ಲ, ಆರು ಕೂಡ ಅಲ್ಲ, ಏಳಕ್ಷರದ ಬೀಜಮಂತ್ರ. ಅದರಿಂದ ಎಲ್ಲ ಮಂತ್ರವೆಂದು ಅದರ ಹೆಸರು.

ಮ : ಹಾಹಾ! ಆ ಮಂತ್ರದ ಅಧಿದೇವತೆ ಯಾರು? ಇದಕ್ಕೆ ಮೊದಲು ಈ ಮಂತ್ರವನ್ನು ಜಪಿಸಿ ಸಿದ್ಧಿಪಡೆದುಕೊಂಡವರು ಯಾರು?

ಮು : ಇರಲಿ, ಕೇಳುತ್ತೇನೆ.

ಮು : ಹಾಗಾದರೆ ಕೇಳು, ಈ ಮಂತ್ರದ ಅಧಿದೇವತೆ ಜ್ಯೇಷ್ಠೆ. ಮೊದಲು ಈಶ್ವರ ಇದನ್ನು ಜಪಿಸಿ ಸಿದ್ಧಿಪಡೆದ, ಅದರಿಂದ ಆತನೆ ಋಷಿ.

ಮ: ಓ ಓ, ಮಂತ್ರದ ಮಹಿಮೆ ಹೀಗಿದೆಯೋ? ಎಲೆ ರಮಣ, ನಿನ್ನ ಕಾಲಿಗೆ ಬೀಳುತ್ತೇನೆ. ನನ್ನದೊಂದೇ ವಿಜ್ಞಾಪನೆ. ಹಾಗೆ ಸಿದ್ಧಿಪಡೆದ ಮಂತ್ರ ಯಾವುದು? ನನಗೆ ತಿಳಿಸಿ ಹೇಳುತ್ತೀಯಾ?

ಮು : ಆಗಲೇ ಹೇಳಿದೆನಲ್ಲ ಸಪ್ತಾಕ್ಷರೀ ಮಂತ್ರವೆಂದು.

ಮ : ಹಾಗೆ ಹೆಸರಲ್ಲ, ಮಂತ್ರವನ್ನೇ ಹೇಳಿ ತೋರಿಸು.

ಮು : ಅಬ್ಬಾ! ಹೆಣ್ಣು ಎಷ್ಟೊಂದು ಗಟ್ಟಿಗಿತ್ತಿ? ಆಗ ಹೆಸರೇನು ಎಂದು ಕೇಳಿದಳು. ಈಗ ಮೂಲವನ್ನೇ ಕೇಳುತ್ತಾಳೆ. ಇನ್ನೂ ಏನನ್ನು ಕೇಳುತ್ತಾಳೋ? ಈ ಮೂರೆಳೆಯ ಜನಿವಾರದಾಣೆ, ನನ್ನ ಶಲ್ಯದಾಣೆ ಆಗದು. ಕೇಳುವುದಕ್ಕೆ ಹೇಳುವುದಕ್ಕೆ ನಿಮಗೆ ಅಧಿಕಾರವಿಲ್ಲ, ಕಣ್ಣಿಗೆ ಕಾಲಿಗೆ ಕೇಡು.

(ಹೀಗೆಯೇ ಸತಾಯಿಸಿ ಸ್ವಲ್ಪ ಹೊತ್ತು ಯೋಚಿಸಿದವನಂತೆ ಮಾಡಿ)

ಮು : ಎಲೆ ಹೆಣ್ಣೆ, ನೀನು ಎಂದೆಂದಿಗೂ ಯಾರ ಹತ್ತಿರವೂ ಹೇಳಬಾರದು, ಜೋಕೆ!

ಮ : ಎಂದೂ ಯಾರ ಹತ್ತಿರವೂ ಉಸುರುವುದಿಲ್ಲ.

ಮು : ಹಾಗಾದರೆ ಕೇಳು. ಭ……… ವ…….. ಬೇರೆಯವರಿಗೆ ಹೇಳುವುದಿಲ್ಲ ಎಂದು ಮಾತು ಕೊಡು.

ಮ ; ಇಗೋ.. ನಿನ್ನಾಣೆ, ಕುಲದೇವರಾಣೆ ಎಂದೂ ಬೇರೆಯವರ ಹತ್ತಿರ ಹೇಳುವುದಿಲ್ಲ.

ಮು : ಸರಿ. ಭವ…….ತಿ……ಭ…….ಹೆಂಗಸರನ್ನು ನಂಬಬಾರದು ಎಂದು ತಿಳಿದವರು ಹೇಳುತ್ತಾರೆ. ನೀನು ಮರೆತು ಯಾರ ಹತ್ತಿರವಾದರೂ ಗುಟ್ಟು ಬಿಟ್ಟುಕೊಟ್ಟರೆ ನಮ್ಮಂತಹವರ ಬಾಳು ಹಾಳಾಗುತ್ತದೆ.

ಮ : ನಾನೇನು ದಡ್ಡಿಯೆ? ನನ್ನಾಣೆ, ಕಣ್ಣಾಣೆ.

ಮು : ’ಭವತಿ ಭಿಕ್ಷಾಂದೇಹಿ’ ಎನ್ನುವುದೇ ಕವಿಗಳಿಗೆ ಸಿದ್ಧಿಸಿರುವ ದೊಡ್ಡ ಸಪ್ತಾಕ್ಷರೀ ಮಂತ್ರ. ಯಾರಿಗೂ ಹೇಳಬೇಡ.

ಈ ಮಾತನ್ನು ಕೇಳಿ ಮನೋರಮೆಗೆ ಹೇಗಾಗಿರಬೇಕು? ನಿಮಗೂ ಹಾಗೇ ಆಗಿರಬಹುದು, ಅಲ್ಲ? ಕವಿಗಳಿಗೆ ಸಿದ್ಧಿಸಿರುವುದು ಭಿಕ್ಷೆ ಬೇಡುವ ಮಂತ್ರವೊಂದೇ ಎನ್ನುವುದು ಎಷ್ಟು ಸ್ವಾರಸ್ಯವಾಗಿ ಹೇಳಿದ್ದಾನಲ್ಲವೆ ಕವಿ?

ಹೆಸರು ಹೇಳಿಕೊಳ್ಳದ ಕವಿ

ಮುದ್ದಣ ಕತೆ ಹೇಳುವ ರೀತಿ ನಿಮಗೆ ಇಷ್ಟವಾಯಿತಲ್ಲವೆ?

ಇಷ್ಟು ಸೊಗಸಾಗಿ ಕತೆ ಹೇಳುವ ಈತ ಯಾರು?

ಸುಮಾರು ಎಂಬತ್ತು ವರ್ಷಗಳ ಹಿಂದೆ ಕನ್ನಡದ ದೊಡ್ಡ ದೊಡ್ಡ ಸಾಹಿತಿಗಳೂ ಸಾಹಿತ್ಯಾಭಿಮಾನಿಗಳೂ ಈ ಕವಿಯ ವಿಷಯವಾಗಿ ಇಂತಹ ಕುತೂಹಲವನ್ನೇ ತೋರಿಸಿದರು. ೧೮೯೫ರಲ್ಲಿ ಮೈಸೂರಿನಿಂದ ಪ್ರಕಟವಾಗುತ್ತಿದ್ದ ’ಕಾವ್ಯಮಂಜರಿ’ ಎನ್ನುವ ಮಾಸಪತ್ರಿಕೆಯಲ್ಲಿ ’ಅದ್ಭುತ ರಾಮಾಯಣ’ ಎನ್ನುವ ಹಳೆಗನ್ನಡ ಕಾವ್ಯ ಪ್ರಕಟವಾಯಿತು. ಪಂಡಿತರಿಗೂ ಸಾಮಾನ್ಯ ಒದುಗರಿಗೂ ಈ ಕಾವ್ಯ ಹಿಡಿಸಿದ್ದರಿಂದ ಅದನ್ನು ಬರೆದವರು ಯಾರು ಎಂದು ತಿಳಿದುಕೊಳ್ಳಲು ಬಯಸಿದರು. ಆದರೆ ಅದನ್ನು ಬರೆದ ಕವಿ ತನ್ನ ಹೆಸರನ್ನು ಪ್ರಕಟಿಸದೆ ಬೇರೆಯವರ ಹೆಸರಿನಲ್ಲಿ ಪ್ರಕಟವಾಯಿತು. ನಂದಳಿಕೆ ಲಕ್ಷ್ಮೀನಾರಣಪ್ಪ ಎನ್ನುವವರು ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕಾವ್ಯಗಳನ್ನು ಪ್ರಕಟಿಸಿದ್ದರು. ನಿಜವಾದ ಕವಿ ಯಾರು ಎನ್ನುವುದನ್ನು ತಿಳಿದುಕೊಳ್ಳಲು ತುಂಬ ದಿನಗಳೇ ಬೇಕಾದವು.

ತಾನು ಬರೆದ ಕೃತಿಗಳಿಗೆ ತನ್ನ ಹೆಸರು ಹಾಕಿಕೊಳ್ಳದೆ ಬೇರೆ ಹೆಸರುಗಳನ್ನು ಹಾಕಿಕೊಳ್ಳಲು ಕಾರಣವೇನು? ಆ ಕಾರಣ ಬಹಳ ಸ್ವಾರಸ್ಯವಾಗಿದೆ. ’ಮುದ್ದಣ’ ಎಂದೇ ಜನಪ್ರಿಯರಾಗಿರುವ ನಂದಳಿಕೆ ಲಕ್ಷ್ಮೀನಾರಣಪ್ಪ ಬಡತನದಲ್ಲಿ ಹುಟ್ಟಿ, ಕಷ್ಟಗಳ ಮಧ್ಯೆ ಬೆಳೆದು, ತನ್ನ ನೋವಿನ ಸುಳಿವನ್ನು ಇತರರಿಗೆ ಕೊಡದೆ ಕನ್ನಡಿಗರಿಗೆ ಕೆಲವು ಉತ್ತಮ ಕಾವ್ಯಗಳನ್ನು ಕಾಣಿಕೆಯಾಗಿ ಕೊಟ್ಟ.

ಬಾಲ್ಯ – ಓದು

ಮುದ್ದಣನ ನಿಜವಾದ ಹೆಸರು ನಂದಳಿಕೆ ಲಕ್ಷ್ಮೀನಾರಣಪ್ಪ. ನಂದಳಿಕೆ ಉಡುಪಿ ತಾಲ್ಲೂಕಿನ ಒಂದು ಗ್ರಾಮ. ಲಕ್ಷ್ಮೀನಾರಣಪ್ಪನ ತಂದೆ ಪಾಠಾಳಿ ತಿಮ್ಮಯ್ಯ, ತಾಯಿ ಮಹಾಲಕ್ಮಿ. (ಪಾಠಾಳಿ ಎಂದರೆ ದೇವಸ್ಥಾನದಲ್ಲಿ ಕಟ್ಟಿಗೆ ಕೋಲು ಹಿಡಿಯುವ ಕೆಲಸ).

ಲಕ್ಷ್ಮೀನಾರಣಪ್ಪ ಹುಟ್ಟಿದ್ದು ೧೮೭೦ನೆಯ ಜನವರಿ ೨೪ರಂದು. ತಂದೆ ತಾಯಿಗಳಿಗೆ ಮೊದಲ ಮಗ. ತುಂಬ ಪ್ರೀತಿಯಿಂದ ಸಾಕಿದರು ಎಂದು ಹೇಳಬೇಕೆ? ತಾಯಿ ಮುದ್ದಿನಿಂದ ಮುದ್ದಣ ಎಂದು ಕರೆಯುತ್ತಿದ್ದರು. (ಲಕ್ಷ್ಮೀನಾರಣಪ್ಪ ಕವಿಯಾಗಿ ಕೃತಿರಚನೆ ಮಾಡಲು ಪ್ರಾರಂಭಿಸಿದ ಮೇಲೆ ತಾಯಿಯಿಟ್ಟ ಹೆಸರನ್ನೇ ಕಾವ್ಯನಾಮವನ್ನಾಗಿಟ್ಟುಕೊಂಡ.)

ನಂದಳಿಕೆಯಲ್ಲಿ ಮುರೂರು ಚರಡಪ್ಪಯ್ಯ ಎನ್ನುವರು ಒಂದು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ್ದರು. ಲಕ್ಷ್ಮೀನಾರಣಪ್ಪ ನಾಲ್ಕೈದು ವರ್ಷಗಳ ಕಾಲ ಇಲ್ಲಯೇ ವ್ಯಾಸಂಗ ಮಾಡಿರಬೇಕು. ಅನಂತರ ಇಂಗ್ಲಿಷ್ ಕಲಿಯುವ ಆಸೆಯಿಂದ ಉಡುಪಿಯಲ್ಲಿ ಇಂಗ್ಲಿಷ್ ಶಾಲೆಯನ್ನು ಸೇರಿದ. ಆದರೆ ಆ ಶಾಲೆಯಲ್ಲಿ ಎರಡು ವರ್ಷಗಳು ಕೂಡ ಓದಲಾಗಲಿಲ್ಲ. ಅದಕ್ಕೆ ಕಾರಣ ಬಡತನ. ಆದ್ದರಿಂದ ಇಂಗ್ಲಿಷ್ ಶಿಕ್ಷಣವನ್ನು ಅಲ್ಲಗೇ ಕೈಬಿಟ್ಟು ಕನ್ನಡ ’ಟ್ರೈನಿಂಗ್ ಸ್ಕೂಲ್’ಗೆ ಸೇರಿದ. (ಬಹುಶಃ ವಿದ್ಯಾರ್ಥಿ ವೇತನ ದೊರಕುತ್ತದ್ದುದು ಇದಕ್ಕೆ ಕಾರಣವಾಗಿರಬೇಕು.) ಮನೆಯಲ್ಲಿಯೇ ಇಂಗ್ಲಿಷ್ ಕಲಿತುಕೊಂಡದ್ದಲ್ಲದೆ ಕೃಷ್ಣಾಪುರ ಮಠದ ಆಚಾರ್ಯರಿಂದ ಸಂಸ್ಕೃತವನ್ನು ಹೇಳಿಸಿಕೊಂಡ.

ಲಕ್ಷ್ಮೀನಾರಣಪ್ಪನಿಗೆ ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ಚಿಕ್ಕಂದಿನಲ್ಲಿ ತಾಯಿ ಮಹಾಲಕ್ಷ್ಮಿ ರಾಮಾಯಣ, ಮಹಾಭಾರತಗಳ ಕಥೆಗಳನ್ನು ಮಗನಿಗೆ ವಿವರಿಸಿ ಹೇಳುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರುಮನೆ. ಬಣ್ಣ ಬಳಿದುಕೊಂಡು, ವೇಷಕಟ್ಟಿ ಪಾತ್ರಗಳು ಕುಣಿಯುತ್ತಿದ್ದರೆ ಅದನ್ನು ನೋಡಲು ಲಕ್ಷ್ಮೀನಾರಣಪ್ಪನಿಗೆ ಬಹಳ ಖುಷಿ. ಜೊತೆಗೆ ಹಳ್ಳಿಯ ಪಕ್ಕದಲ್ಲಿ ಹರಿಯುತ್ತಿದ್ದ ತೊರೆ, ಮರಗಿಡಗಳು, ಗದ್ದೆ, ತೋಟ ಲಕ್ಷ್ಮೀನಾರಣಪ್ಪನ ಮೇಲೆ ತುಂಬ ಪ್ರಭಾವವನ್ನು ಬೀರದವು. ಅವನಲ್ಲಿ ಅಡಗಿದ್ದ ಕವಿತಾ ಪ್ರತಿಭೆಯನ್ನು ಜಾಗೃತಗೊಳಿಸುತ್ತಿದ್ದವು. ಎಳೆಯ ವಯಸ್ಸಿನಲ್ಲೇ ತನ್ನ ಇಂಪಾದ ಕಂಠದಿಂದ ಕನ್ನಡ ಹಾಡು, ಭಜನೆ, ಕೀರ್ತನೆ, ಯಕ್ಷಗಾನದ ಪದ್ಯಗಳನ್ನು ಹಾಡುತ್ತಿದ್ದ.

ಉಡುಪಿಯಲ್ಲದ್ದಾಗ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಯಕ್ಷಗಾನದ ಧಾಟಿಯಲ್ಲಿ ಸಣ್ಣ ಸಣ್ಣ ಪದ್ಯ ಬರೆದ. ಯಕ್ಷಗಾನ ಬಯಲಾಟ ನೋಡಲು ಸ್ನೇಹಿತರೊಡನೆ ದೂರದ ಹಳ್ಳಿಗಳಿಗೆ ಹೋಗಿ ಬರುತ್ತಿದ್ದ. ಆಗಾಗ್ಗೆ ಅವುಗಳಲ್ಲಿ ಭಾಗವಹಿಸುತ್ತಲೂ ಇದ್ದ. ಹುರಳಿ ವೆಂಕಟಸುಬ್ಬರಾಯರಂಬ ಸ್ನೇಹಿತರೊಡನೆ ಸಂಗೀತ, ಪಿಟೀಲುವಾದನ ಕಲಿಯತೊಡಗಿದ. ಮುಂದೆ ಯಕ್ಷಗಾನ ಪ್ರಸಂಗಗಳ ಪುಸ್ತಕ ಬರೆಯಲು ಇದೆಲ್ಲ ಸಹಾಯಕವಾಯಿತು.

ಡ್ರಿಲ್ ಮಾಸ್ತರ ವ್ಯಾಸಂಗ

ಉಡುಪಿಯಲ್ಲಿ ಲಕ್ಷ್ಮೀನಾರಾಣಪ್ಪ ಮನಸ್ಸಿಗೆ ತೃಪ್ತಿಯಾಗುವಷ್ಟು ಓದಿದ. ಆದರೆ ಓದಿನಿಂದ ಹೊಟ್ಟೆ ತುಂಬಬೇಕಲ್ಲ! ಹದಿನೆಂಟನೆಯ ವಯಸ್ಸಿಗೆ ಕನ್ನಡ ಟ್ರೈನಿಂಗ್ ಶಾಲೆಯ ಶಿಕ್ಷಣ ಮುಗಿಯಿತು. ಮುಂದಿನ ಜೀವನ ಹೇಗೆ ನಡೆಸುವುದು ಎಂಬ ಪ್ರಶ್ನೆ ಎದ್ದಿತು. ತಕ್ಷಣ ಎಲ್ಲೂ ಕೆಲಸ ಸಿಕ್ಕಲಿಲ್ಲ. ನಾರಣಪ್ಪ ಹಳ್ಳಿಯಲ್ಲಿ ಬೆಳೆದ ಹುಡುಗ. ಗದ್ದೆ ತೋಟಗಳಲ್ಲಿ ಹಾರಾಡಿ, ವ್ಯಾಯಾಮಮಾಡಿ, ನೋಡಲು ಗಟ್ಟಿಮುಟ್ಟಿಯಾಗಿ ಕಾಣುತ್ತಿದ್ದ. ಒಂದೊಂದು ಕೈಯಲ್ಲಿ ಒಂದೊಂದು ಮುಡಿ (ಸುಮಾರು ೪೦ ಕೆ.ಜಿ.) ಅಕ್ಕಿಯನ್ನು ಎತ್ತಿಬಿಡುವಷ್ಟು ಶಕ್ತಿ ಇತ್ತಂತೆ! ಟ್ರೈನಿಂಗ್ ಶಾಲೆಯ ಮುಖ್ಯೋಪಾಧ್ಯಯರು ಈ ಹುಡುಗನ ಅಂಗಸೌಷ್ಠವವನ್ನು ನೋಡಿ ಅಂಗಸಾಧನೆಯಲ್ಲಿ ತರಬೇತಿ ಪಡೆಯಲು ಮದರಾಸಿಗೆ ಕಳುಹಿಸಿಕೊಡಲು ಸಿದ್ಧರಾದರು. ವ್ಯಾಯಾಮದಲ್ಲಿ ತರಬೇತಿ ಪಡೆಯಲು ಈತನಿಗೆ ಆಸಕ್ತಿಯೇನೂ ಇರಲಿಲ್ಲ. ಆರೆ ತರಬೇತಿ ಪಡೆದುಕೊಂಡು ಬಂದರೆ ಒಂದು ನೌಕರಿ ಸಿಕ್ಕುತ್ತದೆ ಎನ್ನುವ ಆಸೆಯಿಂದ ಅದಕ್ಕೆ ಒಪ್ಪಿಕೊಂಡ. ಜೊತೆಗೆ ತರಬೇತಿ ಅವಧಿಯಲ್ಲಿ ಸರ್ಕಾರದವರೇ ಧನಸಹಾಯ ಮಾಡುತ್ತಿದ್ದುದರಿಂದ ಹಣದ ತೊಂದರೆಯೂ ಆಗುವಂತಿರಲಿಲ್ಲ. ಆದ್ದರಿಂದ ೧೮೮೯ರಲ್ಲಿ ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಅಂಗಸಾಧನೆಯಲ್ಲಿ ತರಬೇತಿ ಪಡೆಯುವುದಕ್ಕಾಗಿ ಮದರಾಸಿಗೆ ಹೊರಟ.

ಲಕ್ಷ್ಮೀನಾರಣಪ್ಪ ಮದರಾಸಿನಂತಹ ದೊಡ್ಡ ಪಟ್ಟಣದಲ್ಲಿ ಅಂಗಸಾಧನೆಯ ಶಿಕ್ಷಣದ ಜೊತೆಗೆ ಬುದ್ಧಿ, ಮನಸ್ಸುಗಳಿಗೂ ಶಿಕ್ಷಣ ಪಡೆದ. ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳಂ – ಈ ದಕ್ಷಿಣ ಭಾರತದ ಭಾಷೆಗಳ ನಡುವಿನ ಪರಸ್ಪರ ಹೋಲಿಕೆ-ವ್ಯತ್ಯಾಸಗಳನ್ನು ಅಭ್ಯಾಸ ಮಾಡಿದ. ಹಗಲು ವ್ಯಾಯಾಮ ಶಾಲೆಯಲ್ಲಿ ಕಸರತ್ತು, ಸಂಜೆ-ರಾತ್ರಿ ವ್ಯಾಸಂಗ-ಇದು ನಾರಣಪ್ಪನ ದಿನಚರಿಯಾಯಿತು. ಆತನ ಅದೃಷ್ಟಕ್ಕೆ ಅದೇ ಸಮಯದಲ್ಲಿ ಮದರಾಸಿನಲ್ಲಿ ಬೆನಗಲ್ ರಾಮರಾವ್ ಎನ್ನುವ ಕನ್ನಡ ವಿದ್ವಾಂಸರಿದ್ದರು. ಮದರಾಸಿಗೆ ಹೋಗುವ ಮುಂಚೆಯೇ ಪತ್ರಗಳ ಮೂಲಕ ಅವರ ಪರಿಚಯವಿದ್ದ ಲಕಿನಾರಣಪ್ಪ ಅವರ ಬಳಿಗೆ ಹೋಗಿ ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದ. ಎಚ್.ನಾರಾಯಣರಾಯರು ಎನ್ನುವ ಇನ್ನೊಬ್ಬ ವಿದ್ವಾಂಸರ ಪರಿಚಯವೂ ಈತನಿಗಾಯಿತು. ಈ ಇಬ್ಬರು ಮಹನೀಯರ ಪರಿಚಯವನ್ನು ಸದುಪಯೋಗಪಡಿಸಿಕೊಂಡು ತಮಿಳು, ಮಲೆಯಾಳಂ ಭಾಷೆಗಳನ್ನು ಕಲಿತದ್ದೇ ಅಲ್ಲದೆ ತನ್ನ ಇಂಗ್ಲಿಷ್ ಭಾಷೆಯ ಜ್ಞಾನವನ್ನೂ ಹೆಚ್ಚಿಸಿಕೊಂಡ.

’ಅದ್ಭುತ ರಾಮಾಯಣ’ – ’ಹಿಂದಿನ ಕವಿಯ ಕೃತಿ’

ತರಬೇತಿ ಮುಗಿದನಂತರ ಲಕ್ಷ್ಮೀನಾರಣಪ್ಪನವರು ಅದೇ ವರ್ಷ ಉಡುಪಿಗೆ ಹಿಂದಿರುಗಿ ಟ್ರೈನಿಂಗ್ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕರಾದರು. ತಿಂಗಳಿಗೆ ಸಂಬಳ ಎಷ್ಟುಗೊತ್ತೆ? ಕೇವಲ ಹತ್ತು ರೂಪಾಯಿ! ಆದರೆ ಸಂಬಳವನ್ನೂ ಮೀರಿಸುವ ಒಂದು ಆಕರ್ಷಣೆ ಆ ಶಾಲೆಯಲ್ಲಿತ್ತು. ಮಳಲಿ ಸುಬ್ಬರಾಯರೆನ್ನುವ ವಿದ್ವಾಂಸರೂ ಕವಿಗಳೂ ಅಲ್ಲಿಯೇ ಕನ್ನಡ ಪಂಡಿತರಾಗಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀನಾರಣಪ್ಪ ಅವರನ್ನು ಗುರುಗಳಾಗಿ ಸ್ವೀಕರಿಸಿದರು. ಅವರ ಬಳಿ ಕುಳಿತು ಯಕ್ಷಗಾನಗಳನ್ನೂ ಹಳೆಗನ್ನಡ ಕಾವ್ಯಗಳನ್ನೂ ಅಭ್ಯಾಸ ಮಾಡಿದರು. ಸುಬ್ಬರಾಯರು ಕೆಲವು ಯಕ್ಷಗಾನಗಳನ್ನು ರಚಿಸಿದ್ದರು. ಲಕ್ಷ್ಮೀನಾರಣಪ್ಪನವರಿಗೂ ಹಾಗೆ ಯಕ್ಷಗಾನಗಳನ್ನು ರಚಿಸಬೇಕೆಂಬ ಆಸೆಯಾಗಿ ಗುರುಗಳ ಹತ್ತಿರ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.ಸುಬ್ಬರಾಯರು ಸಂಸ್ಕೃತ ಭಾಷೆಯಲ್ಲಿನ ’ರತ್ನಾವಳೀ’ ನಾಟಕವನ್ನು ನಾರಣಪ್ಪನವರಿಗೆ ಓದಿಹೇಳಿದರು. ಈ ಕಥೆಯ ಆಧಾರದ ಮೇಲೆ ೧೮೯೧ರಲ್ಲಿ ಲಕ್ಷ್ಮೀನಾರಣಪ್ಪ ’ರತ್ನಾವತೀ ಕಲ್ಯಾಣ’ ಎಂಬ ಯಕ್ಷಗಾನ ರಚಿಸಿದರು. ಇದು ಅವರು ಕವಿಯಾಗಿ ರಚಿಸಿದ ಮೊದಲ ಕೃತಿ. ಆಗ ಅವರಿಗೆ ಕೇವಲ ಇಪ್ಪತ್ತೊಂದು ವರ್ಷ. ತಾವು ಓದಿದ್ದ ಪ್ರಾಥಮಿಕ ಶಾಲೆಯ ಸ್ಥಾಪಕರಾಗಿದ್ದ ಮುರೂರು ಚರಡಪ್ಪಯ್ಯನವರಿಗೆ ಲಕ್ಷ್ಮೀನಾರಣಪ್ಪ ತಮ್ಮ ಮೊದಲ ಕೃತಿಯನ್ನು ಭಕ್ತಿ, ಗೌರವಗಳಿಂದ ಅರ್ಪಿಸಿದರು. ಗುರುಗಳಾದ ಸುಬ್ಬರಾಯರು ಈ ಕೃತಿಯನ್ನು ತುಂಬಾ ಮೆಚ್ಚಿಕೊಂಡರು. ಇದರಿಂದ ಪ್ರೋತ್ಸಾಹಿತರಾದ ಲಕ್ಷ್ಮೀನಾರಣಪ್ಪ ’ಕುಮಾರವಿಜಯ’ ಎಂಬ ಇನ್ನೊಂದು ಯಕ್ಷಗಾನ ರಚಿಸಿದರು. ಈ ಯಕ್ಷಗಾನ ಓದಿದವರಿಗೆ ಲಕ್ಷ್ಮೀನಾರಣಪ್ಪನವರಿಗೆ ಆ ವಯಸ್ಸಿನಲ್ಲೆ ಸಂಗೀತ ಮತ್ತು ಸಾಹಿತ್ಯದ ಜ್ಞಾನ ಎಷ್ಟಿತ್ತೆಂಬುದು ಅರ್ಥವಾಗುತ್ತದೆ. ಈ ಕೃತಿಯನ್ನು ಅವರು ಗುರುಗಳಾದ ಮಳಲಿ ಸುಬ್ಬರಾಯರಿಗೆ ಅರ್ಪಿಸಿದರು. 

ನಿನ್ನಂ ನಿನ್ನಣ್ಣಂ ಕೇಳ್ದೊಡೆ

ತಮ್ಮ  ಎರಡು ಯಕ್ಷಗಾನ ಪುಸ್ತಕಗಳನ್ನೂ ಲಕ್ಷ್ಮೀನಾರಯಣಪ್ಪ ಉಡಪಿಯಲ್ಲಿ ಅಚ್ಚುಹಾಕಿಸಿದರು. ಆದರೆ, ಆ ಪುಸ್ತಕಗಳನ್ನು ಕೊಂಡುಕೊಳ್ಳುವವರಾರು? ಪ್ರತಿಗಳೆಲ್ಲ ಹೆಚ್ಚುಕಡಿಮೆ ಹಾಗೇ ಬಿದ್ದಿದ್ದವು. ಪಂಜೆ ಮಂಗೇಶರಾಯರಂತಹ ಹಿರಿಯ ಕನ್ನಡ ವಿದ್ವಾಂಸರು ಅವನ್ನು ತುಂಬಾ ಮೆಚ್ಚಿಕೊಂಡರು.

ಯಕ್ಷಗಾನದ ಪುಸ್ತಕಗಳನ್ನು ಬರೆದ ಮೇಲೆ ಲಕ್ಷ್ಮೀನಾರಣಪ್ಪನವರಿಗೆ ತಮ್ಮ ಲೇಖನಿಯಲ್ಲಿ ವಿಶ್ವಾಸ ಬೆಳೆಯಿತು. ಕೈಗೆ ಸಿಕ್ಕಿದ ಹಳೆಗನ್ನಡ ಉಸ್ತಕಗಳನ್ನೆಲ್ಲ ಓದತೊಡಗಿದರು. ೧೮೯೨ರಲ್ಲಿ ಮಳಲಿ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗವಾಯಿತು. ಇದರಿಂದ ಮಾರನೆಯ ವರ್ಷವೇ ನಾರಣಪ್ಪನವರೂ ಕಷ್ಟಪಟ್ಟು ಕುಂದಾಪುರಕ್ಕೆ ವರ್ಗಮಾಡಿಸಿಕೊಂಡರು, ತಮ್ಮ ಗುರುಗಳ ಬಳಿಗೆ ಹೋದರು. ಆ ವೇಳೆಗೆ ಲಕ್ಷ್ಮೀನಾರಣಪ್ಪನವರು ಸಾಕಷ್ಟು ಹಳೆಗನ್ನಡ ಕಾವ್ಯಗಳನ್ನು ಅಭ್ಯಾಸ ಮಾಡಿದ್ದರಿಂದ ಹಳೆಗನ್ನಡದಲ್ಲಿಯೇ ಕೃತಿರಚನೆ ಮಾಡಲು ಮನಸ್ಸು ಮಾಡಿದರು. ಗುರುಗಳ ಪ್ರೋತ್ಸಾಹ ಸದಾ ಬೆಂಗಾವಲಾಗಿತ್ತು. ಪ್ರತಿನಿತ್ಯ ಶಿಷ್ಯ ಬರೆದುದನ್ನು ಓದುವ ಗುರುವಿಗೆ ಬೆರಗು, ಇನ್ನೂ ಓದಬೇಕೆಂದು ಆಸೆ. ಇದರಿಂದ ಶಿಷ್ಯನಿಗೆ ಉತ್ಸಾಹವೋ ಉತ್ಸಾಹ. ಇದರ ಫಲವೇ ’ಅದ್ಭುತ ರಾಮಾಯಣ’ ಹಳೆಗನ್ನಡ ಗದ್ಯಕಾವ್ಯ. ಕೃತಿಯನ್ನು ನೋಡಿ ಮಳಲಿ ಸುಬ್ಬರಾಯರಿಗೇ ಬೆರಗಾಯಿತು.

’ಅದ್ಭುತ ರಾಮಾಯಣ’ದ ಕತೆ ಹೀಗೆದೆ – ಶ್ರೀಮತಿ ಸ್ವಯಂವರದ ಕಾಲದಲ್ಲಿ ಅವಳನ್ನು ಮದುವೆಯಾಗುವ ಆಸೆಯಿಂದ ನಾರದ ಮತ್ತು ಪರ್ವತರಿಬ್ಬರೂ ಹೊರಟರು. ಆದರೆ ವಿಷ್ಣು ಇವರಿಬ್ಬರನ್ನೂ ವಂಚಿಸಿ ಶ್ರೀಮತಿಯನ್ನು ಕರೆದುಕೊಂಡು ಹೋದ. ವಿಷ್ಣುವಿನ ಮೇಲೆ ಈ ಋಷಿಗಳಿಬ್ಬರಿಗೂ ಅಪಾರ ಕೋಪ ಬಂತು. ವಿಷ್ಣು ಭೂಲೋಕದಲ್ಲಿ ಅಂಬರೀಷನ ಕುಲದಲ್ಲಿ ಮನುಷ್ಯನಾಗಿ ಹುಟ್ಟಬೇಕೆಂದೂ ಶ್ರೀಮತಿಯೂ ಸೀತೆಯೆಂಬ ಹೆಸರಿನಿಂದ ಭೂಮಿಯಲ್ಲಿ ಹುಟ್ಟಿ ಜನಕರಾಜನ ಆಶ್ರಯವನ್ನು ಸೇರಬೇಕೆಂದೂ ಅವರಿಬ್ಬರ ವಿವಾಹವಾದ ಮೇಲೆ ಸೀತೆಯನ್ನು ರಾಕ್ಷಸನೊಬ್ಬ ಕದ್ದುಕೊಂಡು ಹೋಗಿ (ಅದರಿಂದ ತಾವು ಈಗ ವ್ಯಥೆಪಟ್ಟಂತೆ) ವಿಷ್ನು ವ್ಯಥೆಪಡಬೇಕೆಂದೂ ಶಾಪಹಾಕಿದರು.

ಸರಿ, ಶ್ರೀರಾಮ ಸೀತೆ ಭೂಲೋಕದಲ್ಲಿ ಜನಿಸಿದರು; ಇವರಿಬ್ಬರ ವಿವಾಹವಾಯಿತು. ಕೈಕೇಯಿಯ ಮಾತಿನಂತೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ ವನವಾಸಕ್ಕೆ ಹೊರಟರು. ಸೀತೆಯನ್ನು ದಶಕಂಠ ರಾವಣ ಕದ್ದುಕೊಂಡು ಹೋದ. ಅನಂತರ ರಾಮ ರಾವಣನನ್ನು ಸಂಹಾರ ಮಾಡಿ ಸೀತೆಯನ್ನು ಬಿಡಿಸಿಕೊಂಡು ಬಂದು ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದ. ಒಂದು ದಿನ ಸಭೆಯಲ್ಲಿದ್ದ ಋಷಿಗಳು ಶ್ರೀರಾಮನ ಸಾಹಸವನ್ನು ವರ್ಣಿಸುವಾಗ ಸೀತೆ ಅದನ್ನು  ಕಡೆಗಣಿಸಿ ದಶಕಂಠ ರಾವಣನ ಅಣ್ಣನಾದ  ಸಹಸ್ರಕಂಠ ರಾವಣನ ಪರಾಕ್ರಮವನ್ನುಹೊಗಳಿದಳು. ಅವನನ್ನು ಜಯಿಸಿಬರುತ್ತೇನೆಂದು ಶ್ರೀಮಚಂದ್ರ ವೀರಾವೇಶದಿಂದ ಹೊರಟ. ಸಹಸ್ರಕಂಠ ರಾವಣನಿಗೂ ಶ್ರೀರಾಮಚಂದ್ರನಿಗೂ ಘೋರವಾದ ಯುದ್ಧವಾಗಿ ಶ್ರೀರಾಮ ಸೋತುಹೋದ. ಆಗ ಸೀತೆ ಅಧ್ಭುತ ರೂಪವನ್ನು (ಕರಾಳ ರೂಪ) ತಾಳಿ ಸಹಸ್ರಕಂಠನ ರುಂಡಗಳನ್ನು ಚೆಂಡಾಡಿದಳು. ಶ್ರೀರಾಮ, ದೇವತೆಗಳು ಸೀತೆಯನ್ನು ಕೊಂಡಾಡಿದರು. ಸೀತೆ ಅದ್ನುತ ರೂಪವನ್ನು ತಾಳಿದ್ದರಿಂದ ಇದಕ್ಕೆ ‘ಅದ್ಭುತ ರಾಮಾಯಣ’ ಎಂದು ಹೆಸರಾಯಿತು. (ಇದರ ಮೂಲ ಸಂಸ್ಕೃತದ ಶಾಕ್ತೇಯ ಪುರಾಣ. ಆದರೆ ಕವಿ ತನಗೆ ಬೇಕಾದಂತೆ ಸನ್ನಿವೇಶಗಳನ್ನು ಬದಲಾಯಿಸಿಕೊಂಡು ಸ್ವಂತಿಕೆಯನ್ನು ತೋರಿಸಿದ್ದಾನೆ.)

ಕಾವ್ಯರಚನೆಯಾಯಿತು. ಸುಬ್ಬರಾಯರು ಓದಿ ತುಂಬ ಸಂತೋಷಪಟ್ಟರು. ಆದರೆ ಅದನ್ನು ಪ್ರಕಟಿಸುವುದು ಹೇಗೆ? ಲಕ್ಷ್ಮೀನಾರಯಪ್ಪ ಹಿಂದೆ ಎರಡು ಯಕ್ಷಗಾನಗಳನ್ನು ಅಚ್ಚುಹಾಕಿಸಿ ನಷ್ಟಮಾಡಿಕೊಂಡಿದ್ದರು. ಬರುವ ಹತ್ತು-ಹದಿನೈದು ರೂಪಾಯಿಗಳ ಸಂಬಳದಲ್ಲಿ ಜೀವನ ನಡೆಸಬೇಕೆ, ಪುಸ್ತಕಗಳನ್ನು ಅಚ್ಚುಹಾಕಿಸಬೇಕೆ? ಬೇರೆಯವರ ಹತ್ತಿರ ತೆಗೆದುಕೊಂಡು ಹೋದರೆ ಪ್ರಕಟಿಸುತ್ತಾರೋ ಇಲ್ಲವೋ ಎನ್ನುವ ಅನುಮಾನ. ಆದ್ದರಿಂದ ಕವಿ ಒಂದು ಉಪಾಯ ಮಾಡಿ, ತನಗೆ ಹಿಂದಿನ ಕವಿಯೊಬ್ಬರು ಬರೆದ ಗ್ರಂಥ ಸಿಕ್ಕಿರುವುದಾಗಿ ೧೮೯೫ರಲ್ಲಿ ಮೈಸೂರಿನ ‘ಕಾವ್ಯಮಂಜರಿ’ ಸಂಪಾದಕರಿಗೆ ಪತ್ರ ಬರೆದು ಕವ್ಯಾವನ್ನು ಕಳುಹಿಸಿಕೊಟ್ಟರು. (ಆ ಪತ್ರಿಕೆಯಲ್ಲಿ ೧೮೯೫ರ ಜುಲೈನಿಂದ ಅಕ್ಟೋಬರ್‌ವರೆಗೆ ಪ್ರಕಟವಾಯಿತು.) ಹಿಂದಿನ ಕವಿಯ ಕೃತಿಯೆಂದೇ ಆಗ ಎಲ್ಲರೂ ಭಾವಿಸಿದರು.

೧೮೯೫ರಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನ ಕನ್ನಡ ಪಂಡಿತರ ಕೆಲಸಕ್ಕೆ ಅರ್ಜಿಗಳನ್ನು ಕರೆದರು. ಸಂಬಳ ಇಪ್ಪತ್ತು ರೂಪಾಯಿ. ಲಕ್ಷ್ಮೀನಾರಣಪ್ಪನವರು ಆಸೆಯಿಂದ ಕಾಗದ ಬರೆದರು. ಈ ಕೆಲಸಕ್ಕೆ ಪಂಜೆ ಮಂಗೇಶರಾಯರೂ ಅರ್ಜಿ ಹಾಕಿದ್ದರು. (ಪಂಜೆ ಮಂಗೇಶರಾಯರೂ ವಿದ್ವಾಂಸರು ಮತ್ತು ಕವಿಗಳು.) ಮಂಗೇಶರಾಯರನ್ನು ಆ ಕೆಲಸಕ್ಕೆ ಆಯ್ಕೆ ಮಾಡಲಾಯಿತು. ಆ ಸಂದರ್ಭವನ್ನು ಕುರಿತು ಮಂಗೇಶರಾಯರೇ ಹೀಗೆ ಹೇಳುತ್ತಾರೆ – ” ಕನ್ನಡ ಅರಿಯದ ಇಂಗ್ಲಿಷ್ ಹೆಡ್ ಮಾಸ್ತರನೊಬ್ಬನು, ಕನ್ನಡ ಬಲ್ಲ ಲಕ್ಷ್ಮೀನಾರಣಪ್ಪನವರನ್ನು ಬಿಟ್ಟು ಇಂಗ್ಲಿಷ್ ಬರುತ್ತದೆಂಬ ಕಾರಣದ ಮೇಲೆ ಆ ಜಾಗವನ್ನು ನನಗೆ ಕೊಟ್ಟರು. ಇದರ ಮರ್ಮವನ್ನು ತಿಳಿಯದ ನಾರಣಪ್ಪನವರು ನಾನೇನೋ ಕನ್ನಡ ವಾಚಸ್ಪತಿಯಾಗಿರಬಹುದೆಂದು ನೆನೆಸಿ ನನ್ನನ್ನು ಅಭಿನಂದಿಸಿ ಒಂದು ಪತ್ರವನ್ನು ಬರೆದರು. ನಾನು ಪ್ರತ್ಯುತ್ತರವನ್ನು ಬರೆಯುವಾಗ, ’ಬತ್ತದ ಸಿಪ್ಪೆಯನ್ನು ಕುಟ್ಟತಕ್ಕ ಒನಕೆಯನ್ನು ಕನ್ನಡ ಬರಹವನ್ನು ಬರೆಸುವುದಕ್ಕೆ ತಂದರು; ಚಿತ್ರಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಗುಗ್ಗೆಕಡ್ಡಿಯನ್ನಾಗಿ ಮಾಡಿದರು’ ಎಂದು ಹೇಳಿ ನಮ್ಮಿಬ್ಬರೊಳಗಿನ ಅಂತರವನ್ನು ಸ್ಪಷ್ಟಪಡಿಸಿದೆನು”.

’ಶ್ರೀರಾಮಪಟ್ಟಾಭಿಷೇಕ’

೧೮೯೫ರಲ್ಲಿ ಲಕ್ಷ್ಮೀನಾರಣಪ್ಪನವರು ’ಶ್ರೀರಾಮ ಪಟ್ಟಾಭಿಷೇಕ’ ಎನ್ನುವ ಕೃತಿಯನ್ನು ಪೂರ್ಣಗೊಳಿಸಿದರು. ಹೆಸರೇ ಹೇಳುವಂತೆ ರಾವಣಸಂಹಾರವಾದ ಮೇಲೆ ಶ್ರೀರಾಮಚಂದ್ರ ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗುವವರೆಗೆ ನಡೆದ ಘಟನೆಗಳನ್ನು ಕುರಿತದ್ದು ಈ ಕಾವ್ಯ. ಶ್ರೀರಾಮ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕೂರಿಸಿಕೊಂಡು ಅಯೋಧ್ಯೆಗೆ ಬರುವ ದಾರಿಯಲ್ಲಿ ಕೆಳಗೆ ಕಾಣುತ್ತಿದ್ದ ಪ್ರಕೃತಿ ಸೌಂದರ್ಯವನ್ನು ವರ್ಣಿಸುವುದನ್ನು ಅನೇಕ ಪದ್ಯಗಳಲ್ಲಿ ವಿವರಿಸಿದ್ದಾರೆ.

ರಾಮ ವನವಾಸಕ್ಕೆ ಹೋದಾಗ ಭರತ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಒಪ್ಪದೆ ರಾಮನನ್ನು ಹುಡುಕಿಕೊಂಡು ಹೊರಡುತ್ತಾನೆ. ರಾಮನನ್ನು ಕಾಡಿನಲ್ಲಿ ಭೇಟಿಮಾಡಿ ಅಯೋಧ್ಯೆಗೆ ಹಿಂತಿರುಗುವಂತೆ ಬೇಡುತ್ತಾನೆ. ರಾಮ ಒಪ್ಪದಿದ್ದುದರಿಂದ ಅವನ ಪಾದುಕೆಗಳನ್ನು ತೆಗೆದುಕೊಂಡು ಬಂದು ತಾನು ರಾಮನ ಪ್ರತಿನಿಧಿಯಾಗಿ ಮಾತ್ರ ರಾಜ್ಯವಾಳುತ್ತಿರುತ್ತಾನೆ. ಆದರೆ ಶ್ರೀರಾಮ ಸೂಚಿಸಿದ್ದ ಅಬಧಿಗೆ ಬರದಿದ್ದುದರಿಂದ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುತ್ತಾನೆ. ರಾಮ ಭರತನ ಮನಸ್ಸನ್ನು ಅರಿತವನಾದ್ದರಿಂದ ಮುಂಚೆಯೇ ಹನುಮಂತನನ್ನು ಕಳುಹಿಸುತ್ತಾನೆ. ಹನುಮಂತ ಸಕಾಲಕ್ಕೆ ಬಂದು ಭರತ ಬೆಂಕಿಗೆ ಹಾರುವುದನ್ನು ತಪ್ಪಿಸಿ ರಾಮಚಂದ್ರನ ಸಾಹಸಗಳನ್ನು ವರ್ಣಿಸುತ್ತಿರುತ್ತಾನೆ. ಆ ವೇಳೆಗೆ ರಾಮ ಲಕ್ಷ್ಮಣ ಸೀತೆಯರೂ ಬರುತ್ತಾರೆ. ಪಟ್ಟಾಭಿಷೇಕವಾಗುತ್ತದೆ. (’ಅದ್ಭುತ ರಾಮಾಯಣ’ವನ್ನು ಕವಿ ಗದ್ಯದಲ್ಲಿ ಬರೆದರೆ ಇದನ್ನು ವಾದರ್ಕ ಷಟ್ಟದಿಯಲ್ಲಿ ಬರೆದ.)

ಒಂದು ಕೃತಿಯ ಮೊದಲನೆ ಪದ್ಯಕ್ಕೆ ’ನಾಂದೀ ಪದ್ಯ’ ಎನ್ನುತ್ತಾರೆ. ’ಶ್ರೀರಾಮಪಟ್ಟಾಭಿಷೇಕ’ದ ನಾಂದೀಪದ್ಯದ ಸಾಲುಗಳ ಮೊದಲ ಅಕ್ಷರಗಳು ಮೇಲಿನಿಂದ ಕೆಳಕ್ಕೆ ಕ್ರಮವಾಗಿ ಹೀಗಿವೆ – ಶ್ರೀ,ರಾ,ಮ,ಚಂ,ದ್ರಾ,ಯ,ನ,ಮಾ,ಮಿ. ಒಟ್ಟಿಗೆ ಓದಿದರೆ ’ಶ್ರೀರಾಮಚಂದ್ರಾಯನಮಾಮಿ’ – ಅಂದರೆ ’ಶ್ರೀರಾಮಚಂದ್ರನಿಗೆ ನಮಸ್ಕರಿಸುತ್ತೇನೆ.’ ದೇವರಿಗೆ ಪ್ರಾರ್ಥನೆ ಮಾಡುವಂತೆ ಬೇಕಂತಲೇ ಹೀಗೆ ರಚಿಸಿದ್ದರು.

ಈ ಕೃತಿಯ ಪ್ರಕಟಣೆಯ ಸಮಸ್ಸೆಯೂ ಹಿಂದಿನಂತೆಯೇ ಉಂಟಾಯಿತು. ಮತ್ತೆ ’ಕಾವ್ಯಮಂಜರಿ’ ಸಂಪಾದಕರಿಗೆ ಪತ್ರ ಬರೆದು “ಮಹಾಲಕ್ಷ್ಮಿ” ಎಂಬಾಕೆಯಿಂದ ರಚಿತವಾದ ’ರಾಮಪಟ್ಟಾಭಿಷೇಕ’ವೆಂಬ ಗ್ರಂಥವು ಸಿಕ್ಕಿದೆ. ಗ್ರಂಥವು ಬಹಳ ಚೆನ್ನಾಗಿದೆ. ಮುದ್ರಿಸಲು ಯೋಗ್ಯವೆಂದು ಭಾವಿಸುತ್ತೇನೆ” ಎಂದು ಹೇಳಿ ಕಾವ್ಯವನ್ನು ಕಳುಹಿಸಿಕೊಟ್ಟರು. ’ರಾಮಪಟ್ಟಾಭಿಷೇಕ’ ೧೮೯೫ನೆಯ ನವೆಂಬರ್ ಸಂಚಿಕೆಯಿಂದ ಪ್ರಾರಂಭವಾಗಿ ೧೮೯೫ನೆಯ ಜನವರಿ ಸಂಚಿಕೆಯಲ್ಲಿ ಮುಗಿಯಿತು.

ಪಠ್ಯಪುಸ್ತಕಗಳು – ಬಿಡಿಕಾಸಿಲ್ಲ

೧೮೯೮ರಲ್ಲಿ ’ಅದ್ಭುತ ರಾಮಾಯಣ’ ಮತ್ತು ಶ್ರೀರಾಮಪಟ್ಟಾಭಿಷೇಕ’ ಕಾವ್ಯಗಳು ಪದವಿ ತರಗತಿಗಳಿಗೆ ಪಠ್ಯಪುಸ್ತಕಳಾದವು. ಪದವಿ ತರಗತಿಗೆ ಕಾಲಿಡದೆ ಇದ್ದ ವ್ಯಕ್ತಿ ಬರೆದ ಪುಸ್ತಕಗಳು ಪದವಿ ತರಗತಿಗಳಿಗೇ ಪಠ್ಯಪುಸ್ತಕಗಳು! (ಆದರೂ ಈ ಪುಸ್ತಕಗಳ ಕರ್ತೃ ತಾನು ಎಂದು ಹೇಳಿಕೊಳ್ಳದಿದ್ದುದರಿಂದ ಲಕ್ಷ್ಮೀನಾರಣಪ್ಪನವರಿಗೆ ಅವುಗಳಿಂದ ಒಂದು ಕಾಸೂ ಬರಲಿಲ್ಲ.) ಮಂಗಳೂರಿನಲ್ಲಿ ಪಂಜೆ ಮಂಗೇಶರಾಯರೇ ಈ ಪುಸ್ತಕಗಳಲ್ಲ ಪಾಠ ಹೇಳಬೇಕಾಯಿತು. ಲಕ್ಷ್ಮೀನಾರಣಪ್ಪನವರೇ ಇವುಗಳನ್ನು ಬರೆದವರು ಎಂದು ಅವರಿಗೆ ತಿಳಿಯದು. ಪಾಠ ಹೇಳುವಾಗ ಬಂದ ಕೆಲವು ಸಮಸ್ಯೆಗಳಿಗೆ ಪರಿಹಾರ ಕೋರಿ ಲಕ್ಷ್ಮೀನಾರಣಪ್ಪನವರಿಗೇ ಪತ್ರ ಬರೆದರು. ಲಕ್ಷ್ಮೀನಾರಣಪ್ಪನವರು ಅವರ ಸಮಸ್ಯೆಗಳನ್ನು ಬಗೆಹರಿಸಿ ಉತ್ತರ ಬರೆದರು.

’ರಾಮಾಶ್ವಮೇಧ’

ಲಕ್ಷ್ಮೀನಾರಣಪ್ಪನವರಿಗೆ ೧೮೯೬ರಲ್ಲಿ ಉಡುಪಿಯ ವಿಷನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರ ಕೆಲಸ ದೊರಕಿತು. ಕುಂದಾಪುರದಿಂದ ಉಡುಪಿಗೆ ಬಂದರು. ಅದುವರೆಗೆ ವ್ಯಾಯಾಮ ಶಿಕ್ಷಕರಾಗಿದ್ದವರು ಈಗ ತಮಗೆ ಪ್ರಿಯವಾದ ಕನ್ನಡ ಕಲಿಸುವಿಕೆಯಲ್ಲಿ ತೊಡಗಿದರು. ಉಡುಪಿಯಲ್ಲಿದ್ದಾಗಲೇ ೧೮೯೮ರಲ್ಲಿ ಲಕ್ಷ್ಮೀನಾರಣಪ್ಪನವರು ’ರಾಮಾಶ್ವಮೇಧ’ ಗ್ರಂಥವನ್ನು ಬರೆದು ಪಂಜೆ ಮಂಗೇಶರಾಯರಿಗೇ ಹಸ್ತಪ್ರತಿಯನ್ನು ಕಳುಹಿಸಿಕೊಟ್ಟರು. ಈ ಗ್ರಂಥಕ್ಕೆ ನಾರಣಪ್ಪನವರು ’ಮುದ್ದಣ’ ಎನ್ನುವ ಕಾವ್ಯನಾಮವನ್ನು ಉಪಯೋಗಿಸಿಕೊಂಡಿದ್ದರು. ಮಂಗೇಶರಾಯರಿಗೆ ಈ ಬಾರಿಯೂ ಅದರ ಕರ್ತೃ ಯಾರು ಎನ್ನುವುದು ತಿಳಿದಿರಲಿಲ್ಲ. ಮುದ್ದಣ-ಮನೋರಮೆಯರ ಸಂಭಾಷಣೆಗಳನ್ನು (ಒಂದು ಸಂಭಾಷಣೆಯನ್ನು ಈ ಪುಸ್ತಕದ ಮೊದಲಲ್ಲಿ ಹೊಸಗನ್ನಡ ರೂಪದಲ್ಲಿ ಕೊಟ್ಟಿದೆ) ಓದಿ ಅವರಿಗೆ ತುಂಬ ಸಂತೋಷವಾಯಿತು. ಕಾವ್ಯ ಚೆನ್ನಾಗಿದೆ ಎಂದು ಪತ್ರ ಬರೆದರು.

ಈ ಕಾವ್ಯ ಬರೆಯುವ ವೇಳೆಗಾಗಲೇ ಲಕ್ಷ್ಮೀನಾರಣಪ್ಪನವರಿಗೆ ಮದುವೆಯಾಗಿತ್ತು. ೧೮೯೩ರಲ್ಲಿ ತಮ್ಮ ಇಪ್ಪತ್ತಮೂರನೆಯ ವಯಸ್ಸಿನಲ್ಲಿ ಕಮಲಾಬಾಯಿ ಎನ್ನುವವರನ್ನು ಮದುವೆಯಾದರು. ಈಕೆ ಶಿವಮೊಗ್ಗ ಜಿಲ್ಲೆಯ ಕಾಗೇಗೋಡುಮಗ್ಗಿ ಗ್ರಾಮದವರು. ಗಂಡ ಹೆಂಡಿರು ಅನ್ಯೋನ್ಯವಾಗಿದ್ದರು. ’ರಾಮಾಶ್ವಮೇಧ’ದ ಮುದ್ದಣ-ಮನೋರಮೆಯರಂತೆಯೇ ಇವರ ಸರಸ ಸಂಭಾಷಣೆ ನಡೆಯುತ್ತಿತ್ತು ಎಂದು ಮುದ್ದಣ್ಣನ ಸ್ನೇಹಿತರಾದ ಹುರಳಿ ಭೀಮರಾಯರು ಬರೆದಿದ್ದಾರೆ. “ಮುದ್ದಣ – ಮನೋರಮೆ ಯಾರೆಂದರೆ ಆ ಗಂಡ ಹೆಂಡಿರೇ. ಮನೆಗೆ ಬಂದ ಹೊಸದರಲ್ಲಿ ಮುಗ್ದೆಯಾದ ಆ ಚಿಕ್ಕವಳನ್ನು, ಈ ಕವಿ ಬೇಕುಬೇಕೆಂದೇ ಕೆಣಕಿ, ರೇಗಿಸಿ, ಅಳಿಸಿ, ನಗಿಸಿರುವುದನ್ನು ನಾನು ಕಂಡಿದ್ದೇನೆ. ಬಳಿಕ ಕೊಂಚ ಕಾಲ ಕಳೆದ ಮೇಲೆ ಆಕೆಯೇ ’ಮನೋರಮೆ’ಯಂತೆ ಈ ’ಮುದ್ದಣ’ನಿಗೆ ಉತ್ತರ ಕೊಡುವುದನ್ನು ಕೇಳಿದ್ದೇನೆ. ಇದನ್ನು ಕಂಡವನು ’ರಾಮಾಶ್ವಮೇಧ’ವನ್ನೇನು ಓದಬೇಕಿಲ್ಲ” ಎಂದಿದ್ದಾರೆ. (ಲಕ್ಷ್ಮೀನಾರಣಪ್ಪನವರ ಒಬ್ಬನೇ ಮಗ ರಾಧಾಕೃಷ್ಣ ಭದ್ರಾವತಿಯಲ್ಲಿ ಕೆಲಸದಲ್ಲಿದ್ದು ಈಗ ನಿವೃತ್ತರಾಗಿದ್ದಾರೆ.)

’ರಾಮಾಶ್ವಮೇಧ’ದ ಉದ್ದಕ್ಕೂ ಬರುವ ಮುದ್ದಣ ಮನೋರಮೆಯರ ಸಂಭಾಷಣೆಗಳು ಈ ಕಾವ್ಯಕ್ಕೆ ಅಲ್ಲಿಯ ಲವಲವಿಕೆಯ ಗದ್ಯಶೈಲಿ. ಮೊದಲು ’ಅದ್ಭುತ ರಾಮಾಯಣ’ವನ್ನು ಗದ್ಯದಲ್ಲಿ ಬರೆದು ಅನಂತರ ’ಶ್ರೀರಾಮಟ್ಟಾಭಿಷೇಕ’ವನ್ನು ಪದ್ಯದಲ್ಲಿ ಬರೆದಿದ್ದ ಈ ಕವಿಗೆ ಗದ್ಯದ ಕಡೆಯೇ ಹೆಚ್ಚು ಆಸಕ್ತಿ. ’ರಾಮಾಶ್ವಮೇಧ’ದ ಪ್ರಾರಂಭದಲ್ಲಿ, ’ಆವ ಧಾಟಿಯೊಳ್ ಪೇಳ್ವುದು? (ಈ ಗ್ರಂಥವನ್ನು ಯಾವ ರೀತಿ ಬರೆಯಲಿ? ಪದ್ಯದಲ್ಲಿಯೋ, ಗದ್ಯದಲ್ಲಿಯೋ? ಪದ್ಯ ವಧ್ಯ, ಗದ್ಯ ಹೃದ್ಯ. ಹೃದ್ಯವಾದ ಗದ್ಯದಲ್ಲಿಯೇ ಹೇಳುವುದು) ಎಂದು ನಿರ್ಧರಿಸುತ್ತಾನೆ.

’ರಾಮಾಶ್ವಮೇಧ’ದಲ್ಲಿ ಮುದ್ದಣ ಮನೋರಮೆಗೆ ರಾಮನ ಕಥೆ ಹೇಳುತ್ತೇನೆಂದು ಪ್ರಾರಂಭಿಸಿ, “ಸ್ವಸ್ತಿ ಶ್ರೀಮತ್ಸುರಾಸುರೇಂದ್ರ ನರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟತಟಫಟಿತ…” ಎನ್ನುತ್ತಾನೆ. ಇದು ಸಂಸ್ಕೃತದಲ್ಲದೆ. ಅರ್ಥಮಾಡಿಕೊಳ್ಳುವುದು ಕಷ್ಟ. ಮನೋರಮೆ ಮುದ್ದಣ್ಣನನ್ನು ತಡೆದು, “ಕನ್ನಡದ ಸೊಗಸನ್ನೇ ಅರ್ಥ ಮಾಡಿಕೊಳ್ಳಲಾರದವಳಿಗೆ ಸಂಸ್ಕೃತದಲ್ಲಿ ಹೇಳುವುದು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ” ಎಂದು ಆಕ್ಷೇಪಿಸುತ್ತಾಳೆ. “ಕನ್ನಡದಲ್ಲೇ ಹೇಳು” ಎನ್ನುತ್ತಾ “ಕನ್ನಡಂ ಕತ್ತುರಿಯಲ್ತೆ” (ಕನ್ನಡವು ಕಸ್ತೂರಿಯಲ್ಲವೇ) ಅನ್ನುತ್ತಾಳೆ. ಮನೋರಮೆಯ ಬಾಯಿಂದ ಮುದ್ದಣ ಈ ಮಾತನ್ನು ಬೇಕೆಂತಲೇ ಹೊರಡಿಸುತ್ತಾನೆ. ಸಂಸ್ಕೃತದ ಬಗ್ಗೆ ಅತನಿಗೆ ದ್ವೇಷವಿಲ್ಲ. ಆದರೆ ಕನ್ನಡದಲ್ಲಿ ಕೃತಿ ರಚಿಸುವಾಗ ಸಂಸ್ಕೃತಬದ್ಧವಾದ ಭಾಷೆ ಬೇಡ, ತಿಳಿಗನ್ನಡಲ್ಲೇ ಒಳ್ಳೆಯ ಕೃತಿ ರಚಿಸಬಹುದು ಎಂದು ಆತ ತೋರಿಸಬೇಕಾಗಿತ್ತು. ಆದ್ದರಿಂದಲೇ ” ಕನ್ನಡಂ ಕತ್ತುರಿಯಲ್ತೆ” ಎಂಬ ಮಾತಿನ ಮೂಲಕ ಅದರ ಶ್ರೇಷ್ಠತೆಯನ್ನು ಹೊರಸೂಸುತ್ತಾನೆ. ’ರಾಮಾಶ್ವಮೇಧ’ವನ್ನು ಓದಿದಾಗ ಕನ್ನಡ ಕಸ್ತೂರಿಯೆಂಬುದು ಮನದಟ್ಟಾಗುತ್ತದೆ.

ಈ ವೇಳೆಗಾಗಲೇ ’ಅದ್ಭುತ ರಾಮಾಯಣ’, ’ಶ್ರೀರಾಮಪಟ್ಟಾಭಿಷೇಕ’, ’ರಾಮಾಶ್ವಮೇಧ’ ಕಾವ್ಯಗಳನ್ನು ಬರೆದವರು ಯಾರು ಎನ್ನುವುದು ಜನಗಳಿಗೆ ತಿಳಿಯುತ್ತಾ ಬಂದಿತ್ತು. ಆದರೂ ಮುದ್ದಣ ಎಂದೂ ಇತರರ ಹತ್ತಿರ ಈ ವಿಷಯವಾಗಿ ಹೇಳಿಕೊಳ್ಳಲಿಲ್ಲ. ಆತನ ಸ್ನೇಹಿತರಿಂದಲೇ ಈ ವಿಷಯ ಸರ್ವವ್ಯಾಪಿಯಾಯಿತು. ೧೯೦೦ರಲ್ಲಿ ಪಂಜೆ ಮಂಗೇಶರಾಯರು ಮುದ್ದಣನನ್ನು  ಭೇಟಿಮಾಡಿ ಮಾತುಕತೆ ನಡೆಸಿದಾಗ, ಈ ಕಾವ್ಯಗಳನ್ನು ಬರೆದವರು ನೀವೇ ಅಲ್ಲವೇ ಎಂದು ನೇರವಾಗಿ ಪ್ರಶ್ನಿಸಿದರು. ಅದಕ್ಕೆ ಮುದ್ದಣ ನೀಡಿತ ಉತ್ತರ – “ಯದ್ಭಾವಂ ತದ್ಭವತಿ” (ನಾವು ಹೇಗೆ ಭಾವಿಸುತ್ತೇವೋ ಹಾಗೆ ಆಗುತ್ತದೆ.) ನೇರವಾಗಿ ಹೇಳಲೇ ಇಲ್ಲ.

ಕಡೆಯ ದಿನಗಳು

ಬೆನಗಲ್ ರಾಮರಾಯರು ಮತ್ತು ಲಕ್ಷ್ಮೀನಾರಣಪ್ಪನವರ ಪಾಂಡಿತ್ಯದಲ್ಲಿ ರಾಮರಾಯರಿಗೆ ತುಂಬಾ ಗೌರವ, ಆಗ ಅವರು ಮದರಾಸಿನ ಕ್ರಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಕೆಲಸ ಮಾಡುತ್ತಿದ್ದರು. ೧೯೦೦ರಲ್ಲಿ ರಾಮರಾಯರು ಎಂ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ಆ ಕೆಲಸವನ್ನು ಬಿಟ್ಟು ಮೈಸೂರು ಸರ್ಕಾರದ ಕೆಲಸಕ್ಕೆ ಸೇರಲು ನಿರ್ಧರಿಸಿದರು. ಅವರ ಸ್ಥಳಕ್ಕೆ ಯಾರನ್ನಾದರೂ ಸೂಚಿಸುವಂತೆ ಕಾಲೇಜಿನವರು ರಾಮರಾಯರನ್ನೇ ಕೇಳೀದರು. ಈ ಸ್ಥಾನಕ್ಕೆ ನಾರಣಪ್ಪನವರೇ ಸರಿಯೆಂದು ಯೋಚಿಸಿ ಅವರ ಅಭಿಪ್ರಾಯವನ್ನು ತಿಳಿದುಕೊಳ್ಳುವುದಕ್ಕಾಗಿ ಪತ್ರ ಬರೆದರು. ರಾಮರಾಯರ ಪತ್ರಕ್ಕೆ ಬರೆದ ಉತ್ತರದಲ್ಲಿ ಮುದ್ದಣ ಮದರಾಸಿನಲ್ಲಿ ನಲವತ್ತು ರೂಪಾಯಿ ಸಂಬಳ ಕೊಟ್ಟರೆ ( ಆಗ ಅವರಿಗೆ ಬರುತ್ತಿದ್ದ ಸಂಬಳ ಇಪ್ಪತ್ತು ರೂಪಾಯಿ) ಬರಬಹುದೆಂದು ಸೂಚಿಸಿದರು. ತಮಗೆ ಇಂಗ್ಲಿಷ್ ಬಾರದಿರುವುದರಿಂದ ಭಾಷಾಂತರವನ್ನು ಪಾಠ  ಹೇಳಲು ತೊಂದರೆ ಯಾದೀತೆನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದರು. ಅದೇ ಪತ್ರದಲ್ಲಿ ತಮಗೆ ಕೊಂಚ ಜಾಡ್ಯವಿರುವುದಾಗಿಯೂ ತಿಳಿಸಿದ್ದರು. ಈ ಪತ್ರ ಬರೆದದ್ದು ೧೯೦೦ರ ಏಪ್ರಿಲ್ ೭ರಂದು. ಅನಂತರ ಸೆಪ್ಟೆಂಬರ್ ೧೦ರಂದು ಬರೆದ ಪತ್ರದಲ್ಲಿ, “ಮೊನ್ನಿನ ಪತ್ರದಲ್ಲಿ ಬರೆದಂತೆ ಜ್ವರವು ಬರುತ್ತಿದೆ. ಬಹಳ ನಿತ್ರಾಣ, ಈಗ ರಜಾ ತೆಗೆದುಕೊಂಡು ಮನಯಲ್ಲೇ ಇದ್ದೇನೆ. ಈಗ ಮದರಾಸಿಗೆ ಬರಲಿಕ್ಕೆ ಎಷ್ಟು ಮಾತ್ರಕ್ಕೂ ಅನುಕೂಲವಿಲ್ಲ. ನನಗಿಲ್ಲಿ ೨೩ರೂಪಾಯಿ ಸಿಕ್ಕುತ್ತೇ. ಬರುವ ವರ್ಷ ೨೫ಕ್ಕೆ ಶಿಫಾರಸು ಮಡಿದ್ದಾರೆ. ಈ ೨೫ ರೂಪಾಯಿ ಅಲ್ಲಿಯ ೪೦ಕ್ಕಿಂತಲೂ ಅಧಿಕವಾದದ್ದೆಂದು ನಂಬುತ್ತೇನೆ. ನಾನು ಮದರಾಸಿಗೆ ಹೋಗುವ ಅಲೋಚನೆಯನ್ನು ಇಂದಿನಿಂದ ಬಿಟ್ಟೆ” ಎಂದು ಬರೆದರು. ಪುನಃ ಅಕ್ಟೋಬರ್ ೨ ರಂದು ಬರೆದ ಪತ್ರದಲ್ಲಿ, “ಆಸ್ವಸ್ಥ; ಏನೇನೂ ಗುಣಾಂಶವಿಲ್ಲ, ಪುನಃ ಒಂದು ತಿಂಗಳ ರಜೆಗೆ ಬರದೊಂಡಿದ್ದೇನೆ. ಜ್ವರ ಬಿಡುವುದೇ ಇಲ್ಲ. ಬಹಳ ನಿತ್ರಾಣ, ಹ್ಯಾಗೂ ಇರಲಿ, ಜೀವ ಇರುವವರೆಗೆ ನನ್ನನ್ನು ಮರೆಯದೆ ಈ ಹಿಂದೆ ಅಭಿಮಾನವಿಟ್ಟು ನಡೆಸಿದಂತೆಯೇ ಮುಂದೂ ನಾನು ಬದುಕಿಕೊಂಡಿರುವರೆಗೆ ವಿಚಾರಿಸುತ್ತಿರಬೇಕಾಗಿ ಪ್ರಾರ್ಥನೆ. ನೋಡಿದವರು ಕ್ಷಯವೆಂದು ಹೇಳುತ್ತಾರೆ” ಎಂದು ಬರೆದಿದ್ದರು. ಆಗಿನ ಕಾಲದಲ್ಲಿ ಕ್ಷಯಕ್ಕೆ ಅಂತಹ ಔಷಧಿಗಳು ಇರಲಿಲ್ಲ. ಇದ್ದ ಔಷಧಿಗಳನ್ನು ತೆಗೆದುಕೊಳ್ಳಲು ಕೈಯಲ್ಲಿ ಕಾಸೂ ಇರಲಿಲ್ಲ. ಶಾಲೆಯಲ್ಲಿ ಕೆಲಸ, ಮನೆಯಲ್ಲಿ ವ್ಯಾಸಂಗ, ಬರವಣಿಗೆ – ಈ ರೀತಿ ಬಿಡುವಿಲ್ಲದೆ ಕೆಲಸ ಮಾಡುತ್ತಿದುದ್ದರಿಂದ ಕ್ಷಯ ಅವರಿಗೆ ಅಂಟಿಕೊಂಡಿತು.

ಉಡುಪಿಯಲ್ಲಿ ನಾರಣಪ್ಪನವರ ಪಕ್ಕದ ಮನೆಯಲ್ಲಿಯೇ ಇದ್ದ ಹುರಳಿ ಭೀಮರಾಯರು ಕವಿಯ ದಿನಚರಿಯನ್ನು ಕುರಿತು ಹೀಗೆ ಬರೆದಿದ್ದಾರೆ – “ಕವಿಯು ಕ್ಷಣಕಾಲವನ್ನಾದರೂ ಹಾಳು ಮಾಡುತ್ತಿರಲಿಲ್ಲ. ಪ್ರಾತಃಕಾಲ ಮೈಸೂರಿನಿಂದ ಬರುತ್ತಿರುವ ತನ್ನ ಗ್ರಂಥಗಳ ಕರಡನ್ನು ತಿದ್ದುವುದು, ಆಮೇಲೆ ಶಾಲೆಯ ಕೆಲಸ; ಸಂಜೆ ಶ್ರೀಕೃಷ್ಣದರ್ಶನವನ್ನು ಮಾಡಿ ಕೊಂಚ ಹೊತ್ತು ಪಿಟೀಲಿನ ಅಭ್ಯಾಸ; ರಾತ್ರಿ ೧೨ ಗಂಟೆಯವರೆಗೆ ಬರೆದೋದುವುದು – ಇದು ಕವಿಯ ನಿತ್ಯಾಭ್ಯಾಸ!”

ದೇಹಕ್ಕೆ ಈ ಶ್ರಮ. ಜೊತೆಗೆ ಬಡತನದ ಕಷ್ಟಗಳು. ಇವುಗಳಲ್ಲಿ ಬೆಂಡಾದ ಕವಿ ಕ್ಷಯದಿಂದ ಹಾಸಿಗೆ ಹಿಡಿದವರು ಮೇಲೇಳಲಿಲ್ಲ. ೧೯೦೧ರ ಫೆಬ್ರವರಿ ೧೫ರಂದು ಈ ಲೋಕವನ್ನು ತ್ಯಜಿಸಿದರು. ಆಗ ನಾರಣಪ್ಪನವರಿಗೆ ಕೇವಲ ಮೂವತ್ತೆರಡು ವರ್ಷ.

’ನೂರಾರು ಗ್ರಂಥಗಳನ್ನು’

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಬಹುದೆಂದು  ಯಾರು ನಿರೀಕ್ಷಿಸಿದ್ದರು? ಕವಿಗೂ ಅದರ ನಿರೀಕ್ಷೆಯಿರಲಿಲ್ಲ. ತಾನು ಬರೆಯಲೇಬೇಕಾದ ಕೃತಿಗಳ ಒಂದು ಪಟ್ಟಿಯನ್ನೇ ಸಿದ್ಧಮಾಡಿಕೊಂಡಿದ್ದರು. ಕನ್ನಡದಲ್ಲಿ ಒಂದು ವಿಶ್ವಕೋಶ, ವ್ಯಾಕರಣಗಳನ್ನು ಬರೆಯಲು ಉದ್ದೇಶಿಸಿ ಅನೇಕ ಟಿಪ್ಪಣಿಗಳನ್ನೂ ಸಿದ್ಧಮಾಡಿಕೊಂಡಿದ್ದರು. ಬಿ.ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿ ಸ್ವತಂತ್ರವಾಗಿ ತಾವೂ ಅಂತಹ ಕಾದಂಬರಿಗಳನ್ನು ಬರೆಯಬೇಕೆಂದು ಉದ್ದೇಶಿಸಿ ’ಗೋದಾವರಿ’ ಎನ್ನುವ ಕಾದಂಬರಿಯನ್ನು ಪ್ರಾರಂಭಮಾಡಿ ಕೆಲವು ಅಧ್ಯಾಯಗಳನ್ನು ಬರೆದಿದ್ದರು. ಅಲ್ಲದೆ ಭಗವದ್ಗೀತೆ ಮತ್ತು ಕರ್ನಾಟಕ ರಾಮಾಯಣ ಎನ್ನವ ಕೃತಿಯನ್ನು ರಚಿಸಿದ್ದರಂತೆ. ಅವರು ಬದುಕಿದ್ದಾಗ ಅವು ಪ್ರಕಟವಾಗಲಿಲ್ಲ. ಅವರ ನಿಧನದ ನಂತರ ಆ ಹಸ್ತಪ್ರತಿಗಳು ಯಾರಿಗೂ ದೊರೆಯಲಿಲ್ಲ.

ಕವಿ ನಿಧನರಾಗುವುದಕ್ಕೆ ಒಂದು ವರ್ಷ ಹಿಂದೆ (೧೯೦೦) ಪಂಜೆ ಮಂಗೇಶರಾಯರು ಅವರನ್ನು ಮಂಗಳೂರಿನಲ್ಲಿ ಭೇಟೆ ಮಾಡಿದ್ದರು. ಆಗ ಕವಿ ಹೇಗೆ ಕಂಡು ಬಂದರು ಎನ್ನುವುದನ್ನು ಮಂಗೇಶರಾಯರು ವಿವರಿಸುತ್ತಾ,  “ಸುಮಾರು ಐದೂವರೆ ಅಡಿ ಎತ್ತರದ, ಎಣ್ಣೆಕಪ್ಪು ಬಣ್ಣದ, ತಕ್ಕಷ್ಟು ಅಗಲದ ಹಣೆಯ, ಕಳೆಗುಂದಿದ ಮೋರೆಯ, ಹರೆಯದ ಕುರುಹುಗಳಿಲ್ಲದೆ ಶಾಂತವಾಗಿರುವ ಮುಖಮುದ್ರೆಯ ಲಕ್ಷ್ಮೀನಾರಣಪ್ಪನವರನ್ನು ನಾನು ಕಣ್ಣಾರೆ ಕಂಡೆನು” ಎಂದು ಹೇಳಿದ್ದಾರೆ.

ತಾನು ಬರೆದ ಕಾವ್ಯಗಳಿಗೆ ತನ್ನ ಹೆಸರು ಹಾಕದೆ ಬೇರೆಯವರ ಹಸರುಗಳನ್ನು ಹಾಕಿದುದನ್ನು ನೋಡಿ ಸಂಕಟಪಟ್ಟ ಆತನ ಸ್ನೇಹಿತರು ನಿಜವಾದ ವಿಷಯವನ್ನು ಪ್ರಚುರಪಡಿಸುವಂತೆ ಒತ್ತಾಯ ಮಾಡಿದರೂ ಒಪ್ಪಲಿಲ್ಲ. ೧೯೦೦ರಲ್ಲಿ ಬೆನಗಲ್ ರಾಮರಾಯರು ಮತ್ತಿತರ ಸ್ನೇಹಿತರು ಸೇರಿ ಮಂಗಳೂರಿನಿಂದ ’ಸುವಾಸಿನಿ’ ಎನ್ನುವ ಮಾಸಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. ಲಕ್ಷ್ಮೀನಾರಣಪ್ಪನವರೂ ಈ ಪತ್ರಿಕೆಗೆ ಲೇಖನಗಳನ್ನು ಕೊಡುತ್ತಿದ್ದರು.

ಒಮ್ಮೆ ರಾಮರಾಯರು ಲಕ್ಷ್ಮೀನಾರಣಪ್ಪನವರನ್ನು ಭೇಟಿ ಮಾಡಿ ’ಅದ್ಭುತ ರಾಮಾಯಣ’ ಮೊದಲಾದ ಕಾವ್ಯಗಳ ಕರ್ತೃವಿನ ರಹಸ್ಯವನ್ನು ಬಯಲುಮಾಡಿ, ’ಸುವಾನಿಸಿ’ ಪತ್ರಿಕೆಯಲ್ಲಿ ಬರೆಯುವುದಾಗಿ ಹೇಳಿದರು. ಆದರೆ ಕವಿ ಅದಕ್ಕೆ  ಆ ಕವಿ ನೀಡಿದ ಕಾರಣವನ್ನು ನೋಡಿ – “ಒಂದು ಬಾರಿಗೆ ಯಾವ ಕಾರಣದಿಂದಲೇ ಆಗಲಿ, ನನ್ನವಲ್ಲವೆಂದೂ ಪ್ರಾಚೀನ ಗ್ರಂಥಗಳೆಂದೂ ನಂಬಿಸಿ, ಅದನ್ನು ಪ್ರಚುರಗೊಳಿಸುವಂತೆ ಮಾಡಿದ ತರುವಾಯ, ಒಡನೆಯೇ ಅವು ನನ್ನವೆಂದು ಖಾಸಗಿ ಕಾಗದದಲ್ಲಿಯಾದರೂ ಹೇಗೆ ಬರೆಯಲಿ? ನನ್ನ ಮರ್ಯಾದೆ ಏನು ಉಳಿದಂತಾಯಿತು? ನಾನಲ್ಲವಾದರೆ ನಮ್ಮ ಜಿಲ್ಲೆಯವರಾದರೂ ಬರೆದರೆಂಬ ಕೀರ್ತಿಯು ನಮಗೆ ಬಂತಲ್ಲವೆ? …. ಮುಂದೆ ಒಂದಲ್ಲ ಒಂದು ದಿನ ಇದರ ನಿಜಾಂಶವು ಪ್ರಕಟವಾಗಿಯೇ ಆಗುವುದು. ಒಂದುವೇಳೆ ಆಗದಿದ್ದರೂ ಅದೇನು ದೊಡ್ಡ ಮಾತು? ಅಂಥ ನೂರಾರು ಗ್ರಂಥಗಳನ್ನು ಬರೆಯಬಲ್ಲೆನು.” 

ಅಂಥ ನೂರಾರು ಗ್ರಂಥಗಳನ್ನು ಬರೆಯಬಲ್ಲೆನು

ಕನ್ನಡದ ಅನೇಕ ಹಿರಿಯ ವಿದ್ವಾಂಸರು ಮುದ್ದಣನನ್ನು ಅನೇಕ ವಿಧವಾಗಿ ಪ್ರಶಂಸಿಸಿದ್ದಾರೆ. ’ಕಬ್ಬಿಗರ ಬಲ್ಲಹ’ (ಕವಿಗಳ ಮುಂದಾಳು), ’ಕನ್ನಡ ಸಾಹಿತ್ಯಾಕಾಶದ ತರುಣ ಭಾಸ್ಕರ’, ’ಕನ್ನಡ ಸಾಹಿತ್ಯವನ್ನು ಸುಗ್ಗಿಸಿದ ಕಳುರತಿಯ ಕೋಗಿಲೆ ’ ಎಂದು ಮುಂತಾಗಿ ಅವರನ್ನು ಕರೆದಿದ್ದಾರೆ.

ಮುದ್ದಣ ಎಂತಹ ಕಷ್ಟದ  ಜೀವನ ನಡೆಸಿದರು! ಹುಟ್ಟಿದ್ದೇ ಬಡ ಕುಟುಂಬದಲ್ಲಿ. ಹೆಚ್ಚು ಓದೋಣವೆಂದು ಆಸೆಯಿದ್ದರೂ ಬಡತನ ಅಡ್ಡಿಯಾಯಿತು. ಆದರೆ ಎದೆಗಡದೆ ಸಾಹಿತ್ಯದ ಅಭ್ಯಾಸ ಮಾಡಿದರು. ಸಾಹಿತ್ಯಪ್ರಿಯರಾಗಿದ್ದವರು ವಿಧಿಯಿಲ್ಲದೆ ಹೊಟ್ಟೆಪಾಡಿಗಾಗಿ ವ್ಯಾಯಾಮ ಶಿಕ್ಷಕರಾಗಬೇಕಾಯಿತು. ’ಡ್ರಿಲ್ ಮಾಸ್ತರ್’ ಆಗಿದ್ದವರು ನಿರುತ್ಸಾಹಗೊಳ್ಳದೆ ಸಾಹಿತ್ಯಾಭ್ಯಾಸ ಮಾಡಿದ್ದೇ ಅಲ್ಲದೆ, ಶ್ರೇಷ್ಠ ಕೃತಿಗಳನ್ನು ರಚಿಸಿದರು. ಆದರೆ ಮೊದಲು ತಮ್ಮ ಹೆಸರನಲ್ಲೇ ಪ್ರಕಟಿಸಿದ ಯಕ್ಷಗಾನ ಕೃತಿಗಳನ್ನು ಯಾರೂ ಕೊಂಡುಕೊಳ್ಳಲಿಲ್ಲ. ಅನಂತರ ಬಹಳ ಕಷ್ಟಪಟ್ಟು ರಚಿಸಿದ ’ಅದ್ಭುತ ರಾಮಾಯಣ’, ಶ್ರೀರಾಮ ಪಟ್ಟಾಭಿಷೇಕ’, ’ಶ್ರೀರಾಮಾಶ್ವಮೇಧ’ ಕೃತಿಗಳನ್ನು ಬೇರೆಯವರ ಹೆಸರಲ್ಲಿ ಅಚ್ಚುಹಾಕಿಸಿದರು. ಅವು ಪಂಡಿತರಿಂದ ಪ್ರಶಂಸೆಗಳಿಸಿದವು. ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳಾದವು. ಇದರಿಂದ ಕವಿಗೆ ಆರ್ಥಿಕವಾಗಿ ಏನೂ ಲಾಭವಾಗಲಿಲ್ಲ. ಈ ಮಹಾಕೃತಿಗಳನ್ನು ಬರೆದವರು ಅವರೇ ಎಂದು ಕೊನೆಯವರೆಗೆ ಒಬ್ಬಿಬ್ಬರಿಗೆ ಬಿಟ್ಟು ಇನ್ನಾರಿಗೂ ತಿಳಿಯಲಿಲ್ಲ. ತಾನೇ ಅವನ್ನು ಬರೆದೆ ಎಂದು ಲಕ್ಷ್ಮೀನಾರಣಪ್ಪನವರು ಎಂದೂ ಹೇಳಿಕೊಳ್ಳಲಿಲ್ಲ. ಗೊತ್ತಿದ್ದವರಿಗೆ ಹೇಳಲಿಕ್ಕೂ ಬಿಡಲಿಲ್ಲ. ಕೀರ್ತಿಗಾಗಿ ಆಸೆಪಡಲಿಲ್ಲ. ಅವರು ಮೊದಲು ಕೆಲಸಕ್ಕೆ ಸೇರಿದಾಗ ತಿಂಗಳಿಗೆ ಹತ್ತು ರೂಪಾಯಿ ಸಂಬಳ. ಆಗಿನ ಕಾಲದಲ್ಲೂ ಅದು ಕಡಿಮೆಯೇ. ಜೀವನದ ಕೊನೆಯ ವೇಳೆಗೆ ಈ ಸಂಬಳ ಕೇವಲ ಇಪ್ಪತ್ತಮೂರು ಆಗಿತ್ತು. ಈ ಗಟ್ಟಿಮುಟ್ಟಾದ ವ್ಯಾಯಾಮ ಶಿಕ್ಷಕ ಕಡೆಗೆ ಕ್ಷಯರೋಗಕ್ಕೆ ತುತ್ತಾದ. ಆತನ ಜೀವನವೂ ಒಂದು ಕಾದಂಬರಿಯೇ.

ಮುದ್ದಣ ವೈಯಕ್ತಿಕವಾಗಿ ಎಷ್ಟೇ ಕಷ್ಟಪಟ್ಟಿರಬಹುದು. ಆದರೆ ತನ್ನ ನೋವನ್ನು ನುಂಗಿ ಕನ್ನಡಿಗರಿಗೆ ನೀಡಿದ ಉಡುಗೊರೆ ಎಂತಹುದು!