ವೃತ್ತಿಯಲ್ಲಿ ಕರ್ನಾಟಕ ಆಡಳಿತ ಸೇವೆಯ ಹಿರಿಯ ಶ್ರೇಣಿಯ ಅಧಿಕಾರಿ, ಪ್ರವೃತ್ತಿಯಲ್ಲಿ ಶ್ರೇಷ್ಠ ಹಿಂದೂಸ್ಥಾನಿ ಗಾಯಕ, ಎರಡನ್ನೂ ಸಮರ್ಥಕವಾಗಿ ತೂಗಿಸಿಕೊಂಡು ಹೋಗುವ ಚತುರ ಶ್ರೀ ಮುದ್ದಮೋಹನ್, ರಾಯಚೂರಿನ ಶ್ರೀ ವಾಯುಜೀವೋತ್ತಮ, ಬಳ್ಳಾರಿಯ ಶ್ರೀ ಚಂದ್ರಶೇಖರ ಗವಾಯಿ, ಧಾರವಾಡದ ಶ್ರೀ ಸೋಮನಾಥ ಮರಡೂರು ಮುಂತಾದವರಿಂದ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶ್ರೀ ಮುದ್ದಮೋಹನ್, ಮುಂದೆ ಪದ್ಮಭೂಷಣ ಡಾ. ಬಸವರಾಜ ರಾಜಗುರು ಅವರ ಪ್ರಿಯ ಶಿಷ್ಯರಾಗಿ ಗ್ವಾಲಿಯರ್ ಮತ್ತು ಕಿರಣಾ ಘರಾಣಾದ ಹಿತ ಮಿಶ್ರಣದಿಂದ ಕೂಡಿದ ಸಂಗೀತವನ್ನು ಸಿದ್ದಿಸಿಕೊಂಡರು. ಗುರುಗಳ ಆರ್ಶೀವಾದ ಮತ್ತು ಕೆಲವು ಸಂದರ್ಭಗಳಲ್ಲಿ ಕಚೇರಿಗಳಲ್ಲಿ ಅವರ ಜೊತೆ ಕುಳಿತು ಹಾಡುವ ಸುಯೋಗವನ್ನು ಪಡೆದ ಮುದ್ದುಮೋಹನರು ಓರ್ವ ಪ್ರಬುದ್ಧ ಸಂಗೀತ ಕಲಾವಿದರಾಗಿ ಬೆಳೆದರು. ಈಗ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರಲ್ಲಿ ಕಿರಾಣಾ ಘರಾಣಾದಲ್ಲಿ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆ.

ಆಕಾಶವಾಣಿ ಮತ್ತು ಧ್ವನಿಸುರುಳಿಗಳ ಮೂಲಕ ದಾಸ ಸಾಹಿತ್ಯ, ವಚನ ಮತ್ತು ಗೇಯ ಗಾಯನದಿಂದ ರಸಿಕವರ್ಗದಲ್ಲಿ ಚಿರಪರಿಚಿತರು ಮುದ್ದಮೋಹನ್, ಈ ಪರಿಚಯ ದೂರದರ್ಶನ ರಸಿಕರಿಗೂ ಹರಡಿರುವುದು ವಿಶೇಷ. ಬಿಜಾಪುರದ ನವರಸ ಪಟ್ಟದಕಲ್ಲು ಉತ್ಸವ, ಮೈಸೂರು ದಸರೆ ಸಂಗೀತೋತ್ಸವ, ಹಂಪಿ ಉತ್ಸವ, ಕುಂದಗೋಳದ ಸವಾಯಿ ಗಂಧರ್ವ ಸಂಗೀತೋತ್ಸವ, ಬಸವರಾಜ ರಾಜಗುರು ಪುಣ್ಯ ಸ್ಮರಣೆ ಸಂಗೀತೋತ್ಸವ, ಪುಣೆ, ಚೆನ್ನೈ, ದೆಹಲಿ, ಮುಂಬೈ ಮುಂತಾಗಿ ರಾಜ್ಯ ಮತ್ತು ರಾಷ್ಟ್ರದ ಉದ್ದಗಲಕ್ಕೂ ಕಾರ್ಯಕ್ರಮ ನೀಡಿ ಪ್ರಸಿದ್ಧರಾಗಿದ್ದಾರೆ. ಜೊತೆಗೆ ಅಮೆರಿಕಾ, ಲಂಡನ್ ಮತ್ತು ಸಿಂಗಪುರ್‌ಗಳಲ್ಲೂ ತಮ್ಮ ಪ್ರಬುದ್ಧ ಕಾರ್ಯಕ್ರಮಗಳಿಂದ ಜನಾನುರಾಗಗಳಿಸಿದ್ದಾರೆ.

ಶ್ರೀ ಮುದ್ದಮೋಹನ್ ಅವರ ಸಂಗೀತ ಸೇವೆಯನ್ನು ಗಮನಿಸಿ ಸಮಾಜ ಮತ್ತು ಮಠ ಮಂದಿರಗಳನ್ನು ಅನೇಕ ಸ್ತರದಲ್ಲಿ ಅವರನ್ನು ಗೌರವಿಸಿವೆ. ಅವುಗಳಲ್ಲಿ ಗದುಗಿನ ಪಂ. ಪುಟ್ಟರಾಜ ಗವಾಯಿಗಳ ಸನ್ಮಾನ ಸಮಿತಿಯಿಂದ ’ಗಾಯನ ಚತುರ’, ಮಂತ್ರಾಲಯ ಶ್ರೀಗಳಿಂ ’ಶ್ರೀ ವಿಜಯ ವಿಠಲ ಪ್ರಶಸ್ತಿ’, ’ಆರ್ಯಭಟ ಪ್ರಶಸ್ತಿ’ಗಳು ಪ್ರಮುಖವಾದವು. ಈಗ ಆ ಸಾಲಿಗೆ ೨೦೦೬-೦೭ರ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ಸೇರಿಸಿ ಶ್ರೀ ಮುದ್ದುಮೋಹನ್ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.