ಮಂಜೇಶ್ವರದ ಡಾ. ರಮಾನಂದ ಬನಾರಿಯವರು ತುಂಬ ಜನಪ್ರಿಯ ವೈದ್ಯರು ಎಂದು ಕೇಳಿದ್ದೇನೆ.  ವೈದ್ಯರ ಕೆಲಸ ಸಾರ್ವಜನಿಕರ ಆರೋಗ್ಯವನ್ನು ಕಾಯುವುದು.  ಈ ವೈದ್ಯರು ತಮ್ಮ ಬಿಡುವಿಲ್ಲದ ವೃತ್ತಿಯ ನಡುವೆ ಕವಿತೆಗಳನ್ನು ಬರೆಯುತ್ತಾರೆ ಎನ್ನುವುದನ್ನು ಗಮನಿಸಿದ ನನಗೆ ಅನ್ನಿಸುತ್ತದೆ;  ಅವರು ಸಾರ್ವಜನಿಕ ಆರೋಗ್ಯವನ್ನು ಕಾಯುವ ಕಾಯಕದಲ್ಲಿ ತೊಡಗಿದ್ದರೆ, ಕವಿತೆ ಈ ವೈದ್ಯರ ಆರೋಗ್ಯವನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ – ಎಂದು.  ಈ ಕಾರಣದಿಂದಲೇ ಅವರ ಕವಿತೆಗಳಲ್ಲಿ ಒಂದು ಆರೋಗ್ಯಪೂರ್ಣವಾದ ಚೈತನ್ಯವಿದೆ.

ಸುಮಾರು ಹತ್ತನೆ ಶತಮಾನದ ಸಂಸ್ಕೃತ ಕವಿ ಹಾಗೂ ಆಲಂಕಾರಿಕನಾದ ರಾಜಶೇಖರ ಎನ್ನುವವನು, ಕವಿತೆಯ ಪರಿಕರಗಳ ಬಗ್ಗೆ ಪ್ರಸ್ತಾಪಿಸುತ್ತ, ಕವಿತೆಯ ನಿರ್ಮಿತಿಗೆ ಎಂಟು ‘ಅಗತ್ಯ’ಗಳಷ್ಟು ಪಟ್ಟಿ ಮಾಡುತ್ತ, ಮೊದಲನೆಯದು ‘ಸ್ವಾಸ್ಥ್ಯ’ ಎನ್ನುತ್ತಾನೆ.  ‘ಸ್ವಾಸ್ಥ್ಯ’ ಎಂದರೆ ‘ದೇಹ-ಮನಸ್ಸುಗಳ ಸ್ವಸ್ಥತೆ’ ಎಂದು ಪ್ರೊ. ತೀ.ನಂ. ಶ್ರೀಕಂಠಯ್ಯನವರು ತಮ್ಮ ‘ಭಾರತೀಯ ಕಾವ್ಯ ಮೀಮಾಂಸೆ’ಯಲ್ಲಿ ವಿವರಿಸುತ್ತಾರೆ.  ಎಂದರೆ ಒಬ್ಬ ಕವಿ ಕಾವ್ಯ ನಿರ್ಮಿತಿಗೆ ತೊಡಗಬೇಕಾದರೆ ಆತ ಮೊದಲು ದೈಹಿಕವಾಗಿ ಮತ್ತು ಮಾನಸಿಕವಾಗಿ ‘ಸ್ವಸ್ಥ’ನಾಗಿರಬೇಕು.  ಅಥವಾ ಆರೋಗ್ಯವಂತನಾಗಿರಬೇಕು.  ಇಂಥ ಸ್ವಾಸ್ಥ್ಯವನ್ನು ಕಾಪಾಡುವುದು ವೈದ್ಯರ ಹಾಗೂ ಕವಿಗಳ ಕೆಲಸ.  ಡಾ. ರಮಾನಂದ ಬನಾರಿಯವರು ಏಕಕಾಲಕ್ಕೆ ಈ ಎರಡೂ ಆಗಿದ್ದಾರೆ.

ಸ್ವಸ್ಥವಾದ ಅಥವಾ ಆರೋಗ್ಯಪೂರ್ಣವಾದ ಕವಿಮನಸ್ಸಿನ ಲಕ್ಷಣವೆಂದರೆ, ಅದು ತನ್ನ ಸುತ್ತಣ ಆಗುಹೋಗುಗಳಿಗೆ ಸ್ಪಂದಿಸುವ ಸೂಕ್ಷ  ಸಂವೇದನೆಯನ್ನು ಪಡೆದಿರಬೇಕು;  ಇಂದಿನ ಮತ್ತು ಹಿಂದಿನ ಕಾವ್ಯ ಪರಂಪರೆಯ ಪರಿಚಯ ಹಾಗೂ ಸಂಸ್ಕಾರಗಳಿಂದ ಪರಿಷ್ಕೃತವಾಗಿರಬೇಕು; ಪ್ರಾಚೀನತೆಯ ಸತ್ವದಿಂದ ತನ್ನ ಪ್ರತಿಭೆಯನ್ನು ನವೀಕರಿಸಿಕೊಳ್ಳುತ್ತಿರಬೇಕು; ಅಹಂಕಾರರಾಹಿತ್ಯದಿಂದ ಪಡೆದುಕೊಂಡ ವಿನಯ ಹಾಗೂ ವಸ್ತುನಿಷ್ಠತೆಯಿಂದ ಬದುಕನ್ನು ಗ್ರಹಿಸಬೇಕು.  ಮತ್ತು ಯಾವುದರಲ್ಲಿಯೂ ಸ್ಥಗಿತಗೊಳ್ಳದೆ ನಿರಂತರವಾಗಿ ಚಲನಶೀಲವಾಗಿರುವಂಥ ಚಿತ್ತಸ್ಥಿತಿಯೊಂದನ್ನು ಉಳಿಸಿಕೊಳ್ಳಬೇಕು.  ಡಾ. ರಮಾನಂದ ಬನಾರಿಯವರ ಕಾವ್ಯಾಭಿವ್ಯಕ್ತಿಯನ್ನು ನೋಡಿದರೆ, ಈ ಮೇಲೆ ಪ್ರಸ್ತಾಪಿಸಿದ ಕೆಲವು ಲಕ್ಷಣಗಳು ಅವರ ಕಾವ್ಯ ಜೀವನವನ್ನು ರೂಪಿಸುತ್ತಿರುವಂತೆ ಭಾಸವಾಗುತ್ತದೆ.  ‘ನಾನು ಮತ್ತು ಅವನು’, ‘ನಮ್ಮಿಬ್ಬರ ನಡುವೆ’, ‘ಶಾಂತಿಮಂತ್ರ’, ‘ಕ್ಯೂ’, ‘ಶರಣು’ – ಇಂಥ ಕವಿತೆಗಳ ಮೂಲದ್ರವ್ಯವು ಈ ಮನೋಧರ್ಮದ ಪರಿಣಾಮಗಳಾಗಿವೆ.

ಕವಿತೆ ಮೂಲತಃ ಮಾತಿನಲ್ಲಿ ಅನುಭವಗಳನ್ನು ಕಟ್ಟುವ ಕಲೆಗಾರಿಕೆ ಎನ್ನಬಹುದು.  ನಮ್ಮ ಭಾವ-ಭಾವನೆಗಳನ್ನು, ಅನುಭವ ಚಿಂತನೆಗಳನ್ನು ಬರೀ ಮಾತಿನಲ್ಲಿ ಹೇಗೋ ಕಟ್ಟಿಕೊಟ್ಟರೆ ಅದು ವರದಿಯಾದೀತೆ ಹೊರತು ಕವಿತೆಯಾಗುವುದಿಲ್ಲ.  ಹೀಗೆ ಕಟ್ಟಿಕೊಡುವ ಕ್ರಿಯೆ ಒಂದು ಕಲಾಕೃತಿಯಾಗಿ ಮಾರ್ಪಡಬೇಕು ಎನ್ನುವ ಕಡೆ ಬಹಳ ಜನ ತಮ್ಮ ಲಕ್ಷ್ಯವನ್ನೆ ಕೊಡುವುದಿಲ್ಲ.  ಈ ನಿರ್ಲಕ್ಷ್ಯದ ಪರಿಣಾಮವಾಗಿ, ಹಾಗೆ ಕಟ್ಟಿದ್ದು ಎಷ್ಟೋ ವೇಳೆ ಕವಿತೆಯಾಗದೆ ಕೇವಲ ಮಾತುಗಾರಿಕೆಯಾಗುವ ಸಾಧ್ಯತೆಯಿದೆ.  ಕೆಲವು ಸಂದರ್ಭಗಳಲ್ಲಿ ಚತುರವಾದ ಮಾತುಗಾರಿಕೆ ಕವಿತೆಯ ಭ್ರಮೆಯೂ ಆಗುವುದುಂಟು.  ಇಂಥ ಮಾತುಗಾರಿಕೆಯ ರಚನೆಗಳೂ ಡಾ. ಬನಾರಿಯವರ ಬರೆಹಗಳಲ್ಲೇ ಇವೆ ಎನ್ನುವುದನ್ನು ಗುರುತಿಸಲು ಕಷ್ಟಪಡಬೇಕಾಗಿಲ್ಲ.  ನಿದರ್ಶನಕ್ಕೆ ‘ಸಮಸ್ಯೆಗಳು’, ‘ಆದರೆ ಪುರುಸೊತ್ತಿಲ್ಲ’, ‘ನಾವು ಅಳಲಿಲ್ಲ’, ‘ಭ್ರಮೆ’ – ಇಂಥ ಕವಿತೆಗಳನ್ನು ನೋಡಬಹುದು.  ಆದರೆ ಮಾತುಗಳನ್ನು ತಕ್ಕ ಬಂಧಗಳಲ್ಲಿ ಹಿಡಿದಿರಿಸುವ ಕಲೆಗಾರಿಕೆ ಕರಗತವಾಗಬೇಕಾದರೆ, ಸಮಕಾಲೀನ ಹಾಗೂ ಪ್ರಾಚೀನ ಕಾವ್ಯಭಾಷೆಯ ಪರಂಪರೆಯೊಂದಿಗೆ ಕವಿ ಅನುಸಂಧಾನ ನಡೆಯಿಸಬೇಕು.  ಡಾ. ಬನಾರಿಯವರು ಮೂಲತಃ ಸಾಹಿತ್ಯದ ವಿದ್ಯಾರ್ಥಿಯಲ್ಲವಾದರೂ ಅವರು ಕವಿತೆಯ ಕಟ್ಟುವಿಕೆಗೆ ಅಗತ್ಯವಾದ ಪರಂಪರೆಯೊಂದಿಗೆ ಸಾಕಷ್ಟು ಸಂವಾದವನ್ನು ನಡೆಯಿಸಿದ್ದಾರೆ ಎನ್ನುವುದಕ್ಕೆ, ಅವರ ಅನೇಕ ಲವಲವಿಕೆಯ ಪದ್ಯಬಂಧಗಳು ಸಾಕ್ಷಿಯಾಗಿವೆ.  ‘ಬೆಳಕಿನ ಸರದಾರ’, ‘ದಾಂಪತ್ಯ’, ‘ಶರಣು’, ‘ರಸಚಂದ್ರ ದರ್ಶನ’ – ಇಂಥ ಪದ್ಯಗಳ ಬಂಧಗುಣ ಹಾಗೂ ಶಬ್ದ ಸಂಗೀತ, ಇವುಗಳನ್ನು ಈ ಹಿನ್ನೆಲೆಯಿಂದ ನೋಡಬಹುದು.  ಜತೆಗೆ ಈ ಬಗೆಯ ಕವಿತೆಗಳ ರಚನಾವಿನ್ಯಾಸ, ಈಗಾಗಲೆ ಕನ್ನಡ ಕಾವ್ಯ ಸಂದರ್ಭದ ಒಂದು ಭಾಗವಾದ ನವೋದಯದ ಕೊಡುಗೆಗಳೆಂಬಂತೆ ತೋರಿದರೂ, ಇವು ಡಾ. ಬನಾರಿಯವರ ವ್ಯಕ್ತಿವಿಶಿಷ್ಟವಾದ ಅನುಭವಗಳ ಅಭಿವ್ಯಕ್ತಿಯಾಗಿ, ‘ನವೋದಯ’ದ ಪ್ರೇರಣೆ-ಪ್ರಭಾವಗಳನ್ನು ಅರಗಿಸಿಕೊಂಡ ಪರಿಣತಿಯ ಫಲಿತಗಳಾಗಿವೆ ಎಂದು ಹೇಳಬಹುದು.  ಇನ್ನು ಈ ನಿಶ್ಚಿತ ಪದ್ಯಬಂಧಗಳನ್ನು ದಾಟಿ ‘ನವ್ಯಕಾವ್ಯ’ ಪ್ರವರ್ತನಗೊಳಿಸಿದ ಮುಕ್ತ ಛಂದೋವಿಧಾನಗಳಲ್ಲಿ ರೂಪುಗೊಂಡ ಡಾ. ಬನಾರಿಯವರ ಕೆಲವು ಕವಿತೆಗಳಲ್ಲಿಯೂ, ಭಾಷೆ ತನ್ನ ಲಯ ಹಾಗೂ ಗೇಯಗುಣಗಳನ್ನು ಕಳೆದುಕೊಂಡು ‘ಗದ್ಯತನ’ಕ್ಕೆ ಇಳಿಯದೆ, ಒಂದು ಬಗೆಯ ಆರೋಗ್ಯಪೂರ್ಣವಾದ ಚಲನಶೀಲತೆಯನ್ನು ಉಳಿಸಿಕೊಂಡಿದೆ ಎನ್ನುವುದು ವಿಶೇಷದ ಸಂಗತಿಯಾಗಿದೆ. ‘ದಾಂಪತ್ಯ’ದಂಥ ಕವಿತೆ ಹಳಗನ್ನಡ ಭಾಷಾರೂಪ- ಗಳನ್ನುಳಿಸಿಕೊಂಡೂ, ‘ಹಳೆಯ’ದೆನ್ನಿಸದೆ ಹೊಸತೆಂಬಂತೆ ತೋರುವುದಕ್ಕೆ, ಡಾ. ಬನಾರಿಯವರು ಪ್ರಾಚೀನ ಕಾವ್ಯ ಸಂಸ್ಕಾರದಿಂದ ಪುಷ್ಟವಾದ ಯಕ್ಷಗಾನ ಕಲೆಯೊಂದಿಗೆ ಇರಿಸಿಕೊಂಡ ಗಾಢವಾದ ಸಂಪರ್ಕವೂ ಕಾರಣವಾಗಿರಬಹುದು.

ಬದುಕನ್ನು ಪ್ರೀತಿ ಮತ್ತು ಕೃತಜ್ಞತೆಗಳಿಂದ ಸ್ವೀಕರಿಸುವ ಧನ್ಯತೆಯ ಭಾವ, ಮನುಷ್ಯರ ಶ್ರೇಯಸ್ಸಿನ ಪರವಾಗಿ ನಿಲ್ಲುವ ಮಾನವೀಯತೆಯೆ ದೊಡ್ಡ ಧರ್ಮ ಎಂಬ ತಿಳಿವಳಿಕೆ, ಸ್ಪರ್ಧೆಗೆ ಬಲಿಬೀಳದೆ ಶ್ರದ್ಧೆಯಿಂದ, ತನ್ನ ಮಿತಿಯನ್ನರಿತು ಬದುಕಬೇಕೆನ್ನುವ ವಿನಯ – ಇತ್ಯಾದಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಡಾ. ಬನಾರಿಯವರ ಈ ಸಹಜ ಕಾವ್ಯ, ನಾಳೆ ಪಡೆದುಕೊಳ್ಳಬಹುದಾದ ಆಯಾಮಗಳನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತ, ಅವರ ಒಬ್ಬ ಜತೆಯ ಬರಹಗಾರನಾಗಿ ಶುಭವನ್ನು ಕೋರುತ್ತೇನೆ.

ನಮ್ಮಿಬ್ಬರ ನಡುವೆ : ಡಾ. ರಮಾನಂದ ಬನಾರಿ, ೨೦೦೨