ಇತ್ತೀಚೆಗೆ ಕವಿತೆ ಬರೆಯಲು ತೊಡಗುವ ಹೊಸಬರಿಗೆ ಅನೇಕ ಇಕ್ಕಟ್ಟುಗಳು. ಅವುಗಳಲ್ಲಿ ಮೊದಲನೆಯದು ಕ್ಯಾಸೆಟ್ಟುಗಳು, ಅದರಲ್ಲಿಯೂ ಭಾವಗೀತೆಯ ಕ್ಯಾಸೆಟ್ಟುಗಳು.  ಈ ಕ್ಯಾಸೆಟ್ಟುಗಳ ಪ್ರಭಾವ ಹಾಗೂ ಆಕರ್ಷಣೆಗಳು, ಇಂದು ಬರೆಯುವ ಅನೇಕ  ಕವಿಗಳ ಬರೆವಣಿಗೆಯನ್ನು ಹಾಡುಗಳ ಕಡೆಗೆ ಎಳೆಯುವಂತೆ ತೋರುತ್ತದೆ.  ಇದರಿಂದಾಗಿ ನವೋದಯ ಕವಿಗಳ ಕವಿತೆಗೆ ಇದ್ದಂಥ ಗೇಯಗುಣ ಇವತ್ತಿನ ಅನೇಕ ಕವಿಗಳ ಕವಿತೆಯ ರೂಪವನ್ನು ನಿರ್ಧರಿಸುತ್ತದೆ.  ಅಷ್ಟೇ ಅಲ್ಲ, ಹೀಗೆ ಹಾಡುಗಾರಿಕೆಗೆ ಅಳವಡುವಂಥ ಪದ್ಯಗಳನ್ನು ಬರೆಯುವ ಸೆಳೆತಕ್ಕೆ ಒಳಗಾಗುವ ಇಂದಿನ ಕವಿ, ತಾನು ತಿಳಿದೋ ತಿಳಿಯದೆಯೋ ಹಿಂದಿನ ನವೋದಯ ಕವಿಗಳನ್ನು ಅನುಕರಿಸುತ್ತಿದ್ದೇನೆಂಬುದನ್ನು ಅಷ್ಟಾಗಿ ಗಮನಿಸುವಂತೆ ಕೂಡಾ ತೋರುವುದಿಲ್ಲ.  ಇದರ ಜತೆಗೆ ನವ್ಯದ ಕಾಲದಲ್ಲಿ ನವೋದಯ ಕಾಲದ ಮುಖ್ಯ ಕವಿಗಳ ಕವಿತೆಯನ್ನು ಸಾಕಷ್ಟು ಶ್ರದ್ಧೆಯಿಂದ ಓದದೆ ಹೋದ ‘ವಿಮರ್ಶಕ’ರ ಕಣ್ಣಿಗೆ, ಈಗ ಮತ್ತೆ ನವೋದಯದ ಧಾಟಿಯಲ್ಲಿ ರಚಿತವಾಗುವ ಕವಿತೆಗಳು, ನಿಜವಾಗಿಯೂ ಹೊಸವೇನೋ ಎಂಬ ಭ್ರಾಂತಿಯನ್ನು ಕವಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.  ಆದರೆ ನವೋದಯ ಹಾಗೂ ನವ್ಯಮಾರ್ಗಗಳ ಮೂಲಕ ಹಾದು ಬಂದವರಿಗೆ, ಈ ಬಗೆಯ ರಚನೆಗಳು ಅಂತಹ ಸಂತೋಷವನ್ನೇನೂ ತರಲಾರವು.  ಇನ್ನು ಎರಡನೆಯ ಇಕ್ಕಟ್ಟು, ನವ್ಯದ ಧಾಟಿಯಲ್ಲಿ ರಚಿತವಾಗಿ ಅನೇಕ ಪತ್ರಿಕೆಯ ಖಾಲಿ ಜಾಗಗಳನ್ನು ತುಂಬುವ ಕಿರು ಕವಿತೆಗಳು.  ಒಂದರ್ಥದಲ್ಲಿ ಇವು ಹಿಗ್ಗಲಿಸಿದ ಚುಟಕಗಳು.  ಇದುವರೆಗೂ ಪರಿಚಿತವಾದ ನಾಲ್ಕು ಸಾಲಿನ ಚುಟಕಗಳಿಗಿಂತ, ಬೇರೆಯಾದ, ಏಳೆಂಟು, ಹತ್ತು-ಹನ್ನೆರಡು ಸಾಲಿನ, ರೂಪಾಂಶದಲ್ಲಿ ನವ್ಯಕಾವ್ಯದ ಮರಿಗಳಂತೆ ತೋರುತ್ತ, ಅನ್ನಿಸಿಕೆ-ಆಲೋಚನೆಗಳಂತೆ ತೋರುತ್ತ, ಆದರೆ ತುದಿಗೆ ಒಂದು ಸ್ಫೋಟವನ್ನೋ, ಚಮತ್ಕಾರವನ್ನೋ ಉಳ್ಳ ವಿಸ್ತೃತ ಚುಟಕಗಳು. ಗಾಢವಾದ ಅನುಭವವನ್ನು, ಬಹುಕಾಲದ ಪರಿಭಾವನೆಗೆ ಒಳಪಡಿಸಿಕೊಳ್ಳುವ ವ್ಯವಧಾನವಿಲ್ಲದ ಅನೇಕರು ಈ ಬಗೆಯ ರಚನೆಗಳಿಗೆ ತೊಡಗುತ್ತಾರೆಂದು ತೋರುತ್ತದೆ.  ಈ  ಇಕ್ಕಟ್ಟುಗಳನ್ನು ದಾಟಿ, ಬಯಲಿಗೆ ಬಂದು ನಿಜವಾದ ಅನುಭವಗಳನ್ನು ನೇರವಾಗಿ ದಿಟ್ಟಿಸಿ, ಅವುಗಳನ್ನು ಸಾಕಷ್ಟು ಕುದಿಗೆ ಹಾಕಿ, ತನ್ನದೇ ಆದ ಅಭಿವ್ಯಕ್ತಿಯಲ್ಲಿ ಎರಕ ಹೊಯ್ಯುವ ಧೈರ್ಯ ಹಾಗೂ ಕಲೆಗಾರಿಕೆ ಇಂದಿನ ಹೊಸ ಬರೆಹಗಾರರಿಗೆ ಇನ್ನೂ ಬರಬೇಕಾಗಿದೆ.

ಶ್ರೀ ನರಸಿಂಹ ಪರಾಂಜಪೆಯವರ ‘ಹೊಂಬೆಳಕು’ ಸಂಗ್ರಹದ ಕವನಗಳನ್ನು ಓದಿದಾಗ ನನಗೆ ಅನ್ನಿಸಿದ್ದು ಹೀಗೆ.  ಪರಾಂಜಪೆಯವರಂತೆ ಇವತ್ತಿನ ಅನೇಕ ಕವಿಗಳು ನಾನು ಮೇಲೆ ಪ್ರಸ್ತಾಪಿಸಿದ ಹಲವು ಇಕ್ಕಟ್ಟುಗಳೊಳಗಿಂದ ಪಾರಾಗಬೇಕಾಗಿದೆ.  ಹಾಗೆ ನೋಡಿದರೆ ಪರಾಜಂಪೆಯವರು ಈ ಕ್ಷೇತ್ರಕ್ಕೆ ಹೊಸಬರಲ್ಲ.  ಇದು ಅವರ ನಾಲ್ಕನೆಯ ಕವನಸಂಗ್ರಹ.  ಆದರೂ ಅವರು ಕಂಡುಕೊಳ್ಳಬೇಕಾದ ಮತ್ತು ತುಳಿಯಬೇಕಾದ ಹಾದಿ ಬೇರೆಯೇ ಇದೆ.  ಧಾರವಾಡದ ಸಾಧನಕೇರಿಯ ಬೇಂದ್ರೆ-ಗಾಳಿಗೆ ಮೈ ಮನಗಳನ್ನು ಒಡ್ಡಿಕೊಂಡ ಇವರು -ವೃತ್ತಿಯಿಂದ ಇಂಜನಿಯರ್ – ತಮ್ಮ ವೃತ್ತಿಯಿಂದ ಪ್ರಾಪ್ತವಾಗಬಹುದಾದ ಮನೋಧರ್ಮ ಹಾಗೂ ಅನುಭವಗಳನ್ನು ಯಾಕೆ ಇನ್ನೂ ತಮ್ಮ ‘ಕಾವ್ಯಾನುಭವ’ದೊಳಕ್ಕೆ ತಂದುಕೊಳ್ಳಲಾಗಿಲ್ಲವೋ ನನಗೆ ತಿಳಿಯದು.  ಈ ಸಂಗ್ರಹದೊಳಗಿನ, ‘ದಹನ’, ‘ಹುತ್ತ’, ‘ಪಾಂಚಾಲಿಗೆ’, ‘ನನಗೆ ಕಣ್ಣೀರು ಬಂದಿದೆ’ ಇಂಥ ಕವಿತೆಗಳೊಳಗಿನ ‘ಕವಿ’ ತನ್ನನ್ನು ನಿಯಂತ್ರಿಸುವ ಇಕ್ಕಟ್ಟುಗಳೊಳಗಿಂದ ಪಾರಾಗಿ, ಇನ್ನಷ್ಟು ಸ್ವಾತ್ಮನಿರೀಕ್ಷೆಯಿಂದ ಹದವಾಗುವ ಹಾದಿಗೆ ಬರುವರೆಂದು ನಂಬಿ, ಕಾದಿದ್ದೇನೆ.

ಹೊಂಬೆಳಕು : ನರಸಿಂಹ ಪರಾಂಜಪೆ , ೧೯೮೫