ಧಾರವಾಡದ ಶ್ರೀ ವಾಮನ ಬೇಂದ್ರೆಯವರು ತಾವು ಬರೆದು ಪ್ರಕಟಿಸುತ್ತಿರುವ ‘ಅನಂತಧಾರೆ’ ಎಂಬ ತಮ್ಮ ಎರಡನೆಯ ಕವನ ಸಂಗ್ರಹಕ್ಕೆ, ಮುನ್ನುಡಿಯ ನೆಪದಲ್ಲಿ ನಾನು ನಾಲ್ಕು ಮಾತನ್ನು ಬರೆಯಬೇಕೆಂದು ಕೇಳಿಕೊಳ್ಳುವುದರ ಮೂಲಕ, ಈ ಕವನ ಸಂಗ್ರಹದ ಮೊದಲ ಓದುಗನಾಗುವ ಅವಕಾಶವನ್ನು ತುಂಬ ಪ್ರೀತಿಯಿಂದ ನನಗೆ ಕಲ್ಪಿಸಿಕೊಟ್ಟದ್ದಾರೆ.

ಈ ಸಂಗ್ರಹದ ಕವಿತೆಗಳನ್ನು ಓದುತ್ತ ಹೋದಂತೆ ವರಕವಿ ದ.ರಾ.ಬೇಂದ್ರೆಯವರ ನೆನಪು ನನ್ನನ್ನು ಗಾಢವಾಗಿ ಕಾಡುತ್ತದೆ.  ಹೀಗಾಗುವುದಕ್ಕೆ, ಇವು ಬೇಂದ್ರೆಯವರ ಪುತ್ರರಾದ ಡಾ. ವಾಮನ ಬೇಂದ್ರೆ ಅವರು ಬರೆದ ಕವಿತೆಗಳು ಅನ್ನುವುದು ಒಂದು ಕಾರಣವಾದರೆ, ಬೇಂದ್ರೆಯವರನ್ನೆ ಕುರಿತು ಕೆಲವು ಕವಿತೆಗಳೂ ಈ ಸಂಕಲನದಲ್ಲಿವೆ ಅನ್ನುವುದು ಮತ್ತೊಂದು ಕಾರಣ.  ಬೇಂದ್ರೆಯವರ ಕುಟುಂಬ ವರ್ಗದ ಸದಸ್ಯರಲ್ಲಿ ಒಬ್ಬರಾದ ಮತ್ತು ಎಳೆಯಂದಿನಿಂದ ಬೇಂದ್ರೆಯವರ ಪ್ರತಿಭಾವಲಯದಲ್ಲಿ ಬೆಳೆದ ಶ್ರೀ ವಾಮನ ಅವರ ಬರೆಹಗಳಲ್ಲಿ ‘ಅಂಬಿಕಾತನಯದತ್ತರ’ರ ಅನುರಣನವು ಕೇಳಿಬರುವುದು ತೀರಾ ಸಹಜವಾಗಿದೆ.

ಸಾಧನಕೇರಿಯ ‘ಶ್ರೀಮಾತಾ’ದಲ್ಲಿ ಇದುವರೆಗೂ ಹೊರಗಣ್ಣಿಗೆ ಕಾಣಿಸುತ್ತಿದ್ದ ಬೇಂದ್ರೆಯವರು ಈಗ ಇಲ್ಲ ; ಈಗ ಅವರು ‘ಸಾವಿರದ ಮನೆಗಳಲ್ಲಿ’ ಮನೆ ಮಾಡಿಕೊಂಡಿದ್ದಾರೆ.  ಆದರೂ ಧಾರವಾಡದ ಮನೆ ಅವರ ಕರ್ಮಕ್ಷೇತ್ರವೇ.  ಈ ಸಂಕಲನದ ಕವಿತೆಯೊಂದರಲ್ಲಿ ವಾಮನರು ಹೇಳುತ್ತಾರೆ –

ಬರ್ರಿ ಬರ್ರಿ ನೀವು ಒಳಗೆ ಬನ್ನಿರಿ
ಬೇಂದ್ರೆ ಇನ್ನಿಲ್ಲಾ ಅನ್ನಬ್ಯಾಡರಿ
ಬಟ್ಟಲ ಸಕ್ಕರ‍್ಯಾಗಿ ಸಿಹಿ ಹಂಚತಾನ
ಮನಸ್ಸಿದ್ದರೆ ಕೈ ಹಾಕರಿ.

(
ಪುಟ. ೪೮)

ಶ್ರೀ ವಾಮನ ಬೇಂದ್ರೆ ಅವರು ‘ಸಂ.ವಾ.ದ.’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಾರೆ.  ಈ ಬೀಜಾಕ್ಷರದ ಗೂಢ ಏನೇ ಇರಲಿ, ಕವಿತೆ ಅನ್ನುವುದು ಮೂಲಭೂತವಾಗಿ ಸಂವಾದವೇ.  ಮೊದಲು ಜಗತ್ತಿನೊಂದಿಗೆ, ಅನಂತರ ಓದುಗರೊಂದಿಗೆ.  ಕವಿ ತನ್ನ ಒಳಗಿನ-ಹೊರಗಿನ ಜಗತ್ತಿನೊಂದಿಗೆ ನಡೆಸುವ ಸಂವಾದ – ಶಬ್ದಾರ್ಥಗಳ ಮೂಲಕ ಮೂರ್ತಗೊಳ್ಳುತ್ತವೆ; ಓದುಗ ಕಾವ್ಯದೊಂದಿಗೆ ನಡೆಸುವ ಸಂವಾದ ಸಹೃದಯಾನುಭವವಾಗಿ ಜಗತ್ತಿನೊಂದಿಗೆ ಅವನ ಸಂಬಂಧವನ್ನು ವಿಸ್ತರಿಸುತ್ತದೆ.  ಒಟ್ಟಿನಲ್ಲಿ ಸಂವಾದವೇ ಮೂಲಸೂತ್ರ ಲೋಕಬಾಂಧವ್ಯಕ್ಕೆ.  ವಿವಾದ ಅಲ್ಲ.  ವಿವಾದ ಏನಿದ್ದರೂ ವಿರಸವನ್ನು ಹುಟ್ಟಿಸುತ್ತದೆ.  ಸಂವಾದದಿಂದ ಸಮರಸ; ವಿವಾದದಿಂದ ವಿರಸ.

ಈ ಸಂಕಲನದೊಳಗಿನ ಒಟ್ಟು ಐವತ್ತು ಕವಿತೆಗಳಲ್ಲಿ ವ್ಯಕ್ತಿ ಸಂಗತಿಗಳನ್ನು ಕುರಿತ ಸುಮಾರು ಹತ್ತರಷ್ಟು ಕವಿತೆಗಳನ್ನು ಹೊರತುಪಡಿಸಿದರೆ, ಇನ್ನುಳಿದವುಗಳೆಲ್ಲ ಬಹುಮಟ್ಟಿಗೆ ವ್ಯಕ್ತಿಗೆ ನೇರವಾಗಿ ಮುಖಾಮುಖಿಯಾಗುವ ಸಮಕಾಲೀನ ಬದುಕಿನ ಅಸಾಂಗತ್ಯಗಳನ್ನು ಕುರಿತವುಗಳಾಗಿವೆ.  ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳೊಳಗಿನ ಏರಿಳಿತ ಮತ್ತು ಅಪಮೌಲ್ಯಗಳನ್ನು ಕುರಿತ ಸಾತ್ವಿಕ ಸಂತಾಪವೊಂದು ಈ ಕವಿತೆಗಳ ಹಿನ್ನೆಲೆಯಲ್ಲಿದೆ.  ಹೀಗಾಗಿ ಸಾರ್ವಜನಿಕ ಬದುಕಿನ ಬಗ್ಗೆ ಕ್ಷೇಮಕಾತರವಾದ ಕಾಳಜಿಗಳು ಇಲ್ಲಿನ ‘ಸಂವಾದ’ದ ನೆಲೆಯಾಗಿವೆ.  ಆದರೆ ಈ ನಿಲುವಿನಲ್ಲಿ ಯಾವುದೇ ವ್ಯಗ್ರತೆ ಇಲ್ಲ; ಬದಲು ಅನುಕಂಪವಿದೆ, ವಿಷಾದವಿದೆ; ಬದುಕನ್ನು ಸುಧಾರಿಸುವ ದಾರಿಗಳನ್ನು ಕಂಡುಕೊಳ್ಳುವ ಹಂಬಲಗಳಿವೆ.

ನಾವೂ ನೀವೂ ಎಷ್ಟು ಜನಾ
ಜನರಿದ್ದಷ್ಟೂ ವಿವಿಧ ಮನಾ
ಒಮ್ಮನವಾಗಲು ಕಲಿಯೋಣಾ
ನಿಂದೆಯಿಂದ ದೂರಾಗೋಣಾ

ಎನ್ನುವ ಸದಾಶಯದ ನಿರ್ದೇಶನಗಳಿವೆ.  ಈ ಬಗೆಯ ಆಶಯಗಳು ಅಲ್ಲಲ್ಲಿ ಉಪನ್ಯಾಸ ಘೋಷಣೆಗಳ ಧಾಟಿಯನ್ನು ತಾಳಿರುವುದೂ ಉಂಟು.  ಗಂಡು ಹೆಣ್ಣಿನ ಸಂಬಂಧಗಳನ್ನು ಕುರಿತು –

ಒಬ್ಬರಿಗೆ ಇನ್ನೊಬ್ಬರು
ಅಡ್ಡಗ್ವಾಡಿ ಆಗಬಾರದು
ಅಡ್ಡಗ್ವಾಡಿ ಮೇಲಿನ ದೀಪ ಆಗಬೇಕು
ಪರಸ್ಪರ ಸಮೀಪ ಬರಬೇಕು

ಎಂಬಂಥ ರೂಪಕ ಮಾರ್ಗವನ್ನು ತಾಳುವ ಉಕ್ತಿಗಳೂ ಮೂಲಭೂತವಾಗಿ ಬದುಕಿನ ‘ಸಂವಾದ’ದ ಸಾಧ್ಯತೆಗಳನ್ನೆ ಸೂಚಿಸುತ್ತವೆ.

ಸಂ.ವಾ.ದ. ಅವರು ಯೋಗಾಯೋಗದಿಂದ ಉಜ್ವಲವಾದ ಪ್ರತಿಭಾ ಸಂಪನ್ನವಾದ ವ್ಯಕ್ತಿತ್ವವೊಂದರ ಸನ್ನಿಧಿಯಲ್ಲಿ ಬೆಳೆದವರು.  ಹೀಗಾಗಿ ಅವರಿಗೆ ಕವಿಯ ಪರಿಕರಗಳೆಲ್ಲ ಸಹಜವಾಗಿಯೇ ಮೈಗೂಡಿವೆ.  ಇನ್ನು ಅವರು ತಮ್ಮದೆ ಆದ ಚಹರೆಗಳನ್ನೂ, ದನಿಗಳನ್ನೂ ಕಂಡುಕೊಳ್ಳಬೇಕಾಗಿದೆ. ಬೇಂದ್ರೆಯವರಂತೆ ಇವರೂ ಮಾತೃತ್ವದ ಮಹತ್ತನ್ನು ಒಪ್ಪಿಕೊಂಡವರೇ. ಈ ಸಂಗ್ರಹದ ‘ತಾಯಿಗೆ’  ಎಂಬ ಸೊಗಸಾದ ಕವಿತೆಯೊಂದರಲ್ಲಿ, ವರಕವಿ ಬೇಂದ್ರೆಯವರೊಂದಿಗೆ ಇವರಿಗಿರುವ ಸಂಬಂಧವನ್ನು ಕುರಿತು, ಇವರ ತಾಯಿ ಲಕ್ಷ್ಮೀಬಾಯಿಯವರು ಹೇಳಿದಂತೆ ನಿರೂಪಿತವಾಗಿರುವ –

ಆಸರಿಲ್ದ
ಬ್ಯಾಸರಿಲ್ದ
ಅಪ್ಪನ ಮುಂದ
ಗಪ್ಪನ ಕೂಡು

ಬತ್ತಿ ಒಮ್ಮೆ
ಹೊತ್ತಿಕೊಂಡು
ಜ್ಯೋತಿಯಾಗಿ
ಬೆಳಗುವತನಕಾ”                        (ಪು.೨)

ಎಂಬ ಈ ‘ಮಾತೃಸಂಮಿತೆ’ ಅತ್ಯಂತ ಅರ್ಥಪೂರ್ಣವಾಗಿದೆ.  ಈಗ ಈ ಕವಿಯಲ್ಲಿ ಬತ್ತಿಯೇನೋ ಹೊತ್ತಿಕೊಂಡಿದೆ; ಇನ್ನು ಅದು ಜ್ಯೋತಿಯಾಗಿ ಉರಿಯಬೇಕು ಅಷ್ಟೆ.

ಈ ಕವನ ಸಂಗ್ರಹಕ್ಕೆ ‘ಸಂ.ವಾ.ದ.’ ಅವರು ‘ಅನಂತಧಾರೆ’ ಎಂದು ಹೆಸರು ಕೊಟ್ಟಿದ್ದಾರೆ.  ಅದೇ ಹೆಸರಿನ ಪದ್ಯವೊಂದು ಈ ಸಂಗ್ರಹದ ಮೊದಲಲ್ಲಿ ಇರುವುದಾದರೂ, ಆ ಪದ್ಯಕ್ಕಿಂತ ಅದರ ಶೀರ್ಷಿಕೆಯೇ ಹೆಚ್ಚು ಆಕರ್ಷಕವಾಗಿದೆ.  ಆದರೆ ನನಗನ್ನಿಸುತ್ತದೆ, ಕಾವ್ಯ ಎನ್ನುವುದೊಂದು ಅನಂತಧಾರೆ.  ಈ ನಿರಂತರ ಸ್ರೋತ್ರಕ್ಕೆ ಕವಿಗಳು ತಮ್ಮ ಪ್ರತಿಭೆಯ ಧಾರೆಯನ್ನು ಸೇರಿಸುತ್ತಾ ಬಂದಿದ್ದಾರೆ.  ಅದು ಹನಿಯಷ್ಟಿರಬಹುದು, ಬೊಗಸೆಯಷ್ಟಿರಬಹುದು, ಹಳ್ಳದಷ್ಟಿರಬಹುದು, ಹೊಳೆಯಷ್ಟಿರಬಹುದು, ಆದರೆ ಹೀಗೆ ಸೇರುವ ಯಾವುದೇ ಧಾರೆಯಾದರೂ ಅದು ಕವಿಯ ಅನುಭವದ ಮೂಲ ಸೆಲೆಯಿಂದ ಹೊಮ್ಮಿದ ಜಲವಾಗಿರಬೇಕು.

ಉಗಮದ ನೆಲೆ : ವಾಮನ ಬೇಂದ್ರೆ, ೧೯೯೦