ಕವಿತೆಯ ಸೆಳೆತದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ.  ಅಲ್ಪ ಸ್ವಲ್ಪ ಸಾಹಿತ್ಯದ ರುಚಿ ಹತ್ತಿದವರಿಗಂತೂ ಅದು ಬಿಟ್ಟೆನೆಂದರೆ ಬಿಡದ ಮಾಯೆ.  ಹಾಗೆ ನೋಡಿದರೆ ಸಾಹಿತ್ಯದ ಬಗ್ಗೆ ನಮ್ಮೆಲ್ಲರಿಗೂ ರುಚಿ ಹುಟ್ಟಿಸಿದ್ದೇ ಕವಿತೆ.  ಎಳೆಯಂದಿನಲ್ಲಿ ಪೆಮರಿ ಸ್ಕೂಲಿನಲ್ಲಿ ನಾವು ಓದಿದ ಪುಣ್ಯಕೋಟಿ ಎಂಬ ಗೋವಿನ ಕತೆಯ ಪದ್ಯವಾಗಲೀ, ‘ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಕೂಗಿತು’ ಎಂಬ ಕುವೆಂಪು ಅವರ ಕವಿತೆಯಾಗಲೀ ನಾವು ಬೆಳೆದು ದೈನಂದಿನ ಗಡಿಬಿಡಿಯಲ್ಲಿ ಬದುಕುತ್ತಿರುವಾಗಲೂ ನಮ್ಮ ನೆನಪುಗಳಲ್ಲಿ ಆಗಾಗ ಅನುರಣನಗೊಳ್ಳುವಂತೆ, ಅಂದಿನ ಯಾವ ಗದ್ಯ ಬರೆಹಗಳೂ ನಮ್ಮನ್ನು ಕಾಡುವುದಿಲ್ಲ.  ಬಹುಶಃ ಸಾಹಿತ್ಯದ ಇನ್ನಿತರ ಪ್ರಕಾರಗಳಿಗಿಂತ ಪದ್ಯರೂಪದ ಅಭಿವ್ಯಕ್ತಿಗಳು ಅನುಭವವನ್ನು ಹೆಚ್ಚು ತೀವ್ರವಾಗಿ, ಸಂಕ್ಷೇಪವಾಗಿ ಮತ್ತು ಪರಿಣಾಮಕಾರಿಯಾಗಿ ಹಿಡಿದಿಡುವ ಮಾಧ್ಯಮವಾಗಿವೆ ಎನ್ನುವುದೆ ಇದಕ್ಕೆ ಕಾರಣವಿರಬೇಕು.  ಸಾಹಿತ್ಯದ ಗುಂಗು ಹಿಡಿದು ಅದನ್ನು ಒಬ್ಬ ಬರೆಹಗಾರನಾಗಿ ಪ್ರವೇಶಿಸುವ ಯಾರಿಗಾದರೂ ಕವಿತೆ ಮೊದಲ ಬಾಗಿಲಿನಂತೆ ವರ್ತಿಸುತ್ತದೆ. ಹೀಗಾಗಿ ಕವಿತೆಯನ್ನು ಬರೆದು ತಾನು ಕವಿ ಎನ್ನಿಸಿಕೊಳ್ಳುವ ಹಂಬಲ ಯಾರನ್ನು ಬಿಟ್ಟಿದೆ ಹೇಳಿ?  ಭಾರತೀಯ ಅಲಂಕಾರಶಾಸ್ತ್ರದ ಚರಿತ್ರೆಯಲ್ಲಿ ಮೊಟ್ಟಮೊದಲ ಕಾವ್ಯಚರ್ಚೆಯನ್ನು ಬರೆದ, ಕ್ರಿ.ಶ. ಆರನೆಯ ಶತಮಾನಕ್ಕೆ ಸೇರಿದ ಭಾಮಹ ಎಂಬ ಆಲಂಕಾರಿಕ ಹೇಳುತ್ತಾನೆ.  “ಕವಿತೆಯನ್ನು ಬರೆಯದಿದ್ದರೆ ಯಾವ ಪಾಪವೂ ಬರುವುದಿಲ್ಲ; ಕವಿತೆಯನ್ನು ಬರೆಯದಿದ್ದರೆ ಯಾವ ರೋಗವೂ ಪ್ರಾಪ್ತವಾಗುವುದಿಲ್ಲ; ಕವಿತೆಯನ್ನು ಬರೆಯದಿದ್ದರೆ ಅದೊಂದು ಮಹಾಪರಾಧವೆಂದು ಯಾರೂ ಶಿಕ್ಷೆ ವಿಧಿಸುವುದಿಲ್ಲ”.  ಆದರೂ ಕವಿತೆಯ ಹಾದಿಯಲ್ಲಿ ನೂಕುನುಗ್ಗಲು!  ಹಾಗಿದೆ ಕವಿತೆಯ ಆಕರ್ಷಣೆ.  ಕೆಲವು ವೇಳೆ ಕವಿತೆ ಕೆಲವರ ಪಾಲಿಗೆ ಬೆನ್ನುಹತ್ತಿದ ಬೇತಾಳ.  ಈ ಸಂಕಲನದ ಮಟ್ಟಿಗೆ ಅದು ಹಿಡಿದುಕೊಂಡಿರುವುದು ಒಬ್ಬ ಪೊಲೀಸ್ ಅಧಿಕಾರಿಯನ್ನು.  ಪೊಲೀಸ್ ಅಧಿಕಾರಿಯಾದರೇನು, ಯಾರಾದರೇನು?  ಅವನೂ ಒಬ್ಬ ಮನುಷ್ಯ; ಹೃದಯವನ್ನು ಕಳೆದುಕೊಳ್ಳದ ಮನುಷ್ಯ; ಸೂಕ್ಷ್ಮ ಸಂವೇದನಾಶೀಲನಾದ ಮನುಷ್ಯ.  ಇಂಥ ಮನುಷ್ಯನನ್ನು ಸುತ್ತಣ ಜಗತ್ತು ನೂರು ಬಗೆಯಲ್ಲಿ ಕಾಡುತ್ತದೆ; ಅವನೊಳಗೆ ಸ್ಪಂದಿಸುತ್ತದೆ.  ಅವನೊಳಗೆ ಇಳಿದು ಬೇರೊಂದು ರೂಪಾಂತರವನ್ನು ಪಡೆದುಕೊಳ್ಳುತ್ತದೆ.  ಈ ಹಂತದಲ್ಲಿ ವೃತ್ತಿಯಲ್ಲಿ ‘ಪೊಲೀಸ್’ ಆದ ಮನುಷ್ಯ, ಪ್ರವೃತ್ತಿಯಲ್ಲಿ ಕವಿಯಾಗುತ್ತಾನೆ.  ಇಂಥ ಸ್ಪಂದಮಾನವಾದ ಪ್ರವೃತ್ತಿ, ಸ್ಪೆ ಪೆಂಡರೀ ಪದವೀಧರರ ಬವಣೆಗೆ ಕರಗುತ್ತದೆ.  ವರನಟ ಡಾ. ರಾಜ್‌ಕುಮಾರ್ ಅವರ ಸಾಧನೆಗೆ ಬೆರಗಾಗಿ ಮಣಿಯುತ್ತದೆ;  ಶತಮಾನದ ಮಳೆಗೆ ಸಂಭ್ರಮಿಸುತ್ತದೆ; ಬೆಳಗಿಗೆ, ಬೈಗಿಗೆ, ನಲ್ಲೆಯ ಒಲವಿಗೆ, ಕನ್ನಡ ಭಾಷೆಗೆ ಪ್ರತಿಕ್ರಿಯಿಸುತ್ತದೆ.  ಬರಡು ಭೂಮಿಯ ಸತ್ಯಗಳನ್ನು ಅನಾವರಣಗೊಳಿಸುತ್ತದೆ; ಸುತ್ತಣ ವಿವಿಧ ವಿದ್ಯಮಾನಗಳಿಗೆ ಕಸಿವಿಸಿಗೊಳ್ಳುತ್ತದೆ.

ಈ ಪೂರ್ವ ಪೀಠಿಕೆಯೆಲ್ಲವೂ ಡಾ. ಡಿ.ಸಿ. ರಾಜಪ್ಪನವರ ಕವಿತೆಯನ್ನು ಕುರಿತದ್ದು.  ಪೊಲೀಸ್ ಇಲಾಖೆಯಂಥ ಬಿಗುಮಾನದ ಹಾಗೂ ಅತಂಕದ ಜಗತ್ತಿನೊಳಗಿದ್ದೂ, ಮನಸ್ಸನ್ನು ಪರಿಭಾವನೆಯ ಹದದಲ್ಲಿ ನಿಲ್ಲಿಸಿಕೊಳ್ಳುವಂಥ ನೆಮ್ಮದಿಯ ನೆಲೆಯೊಂದನ್ನು ನಿರ್ಮಿಸಿಕೊಳ್ಳುವುದು ಸುಲಭವಲ್ಲ.   ಆದರೆ ಅದು ಶ್ರೀ ರಾಜಪ್ಪನವರಿಗೆ ಸಾಧ್ಯವಾಗಿದೆ, ಮತ್ತು ಆ ನೆಮ್ಮದಿಯ ನೆಲೆಯೇ ಅವರು ಸುತ್ತಣ ಜಗತ್ತನ್ನು ತಮ್ಮ ಪ್ರಜ್ಞೆಗೆ ತಂದುಕೊಳ್ಳುವ ಮಧ್ಯಬಿಂದು ಹಾಗೂ ಕಾವ್ಯಾಭಿವ್ಯಕ್ತಿಯ ಪ್ರಸಾರಕೇಂದ್ರವೂ ಆಗಿದೆ.

ಯಾವ ಕವಿಯೂ ಅನುಭವಕ್ಕೆ ತಡಕಾಡಬೇಕಾಗಿಲ್ಲ.  ಯಾಕೆಂದರೆ ಈ ಜಗತ್ತು ಕವಿಗೆ ಒದಗಿಸುವ ಅನುಭವ ಸಮೃದ್ಧಿಗೆ ಕೊನೆಯಿಲ್ಲ.  ಈ ಅಗಾಧವಾದ ಬದುಕನ್ನು ಶತಶತಮಾನಗಳಿಂದಲೂ ಅಸಂಖ್ಯಾತ ಕವಿಗಳು ಮಾತಿನ ಮೂಲಕ ಹಿಡಿದು ಸುರಿದರೂ ಅದು ಎಂದಿಗೂ ಮುಗಿಯದಿದೆ.  ಇಂದಿಗೂ ಮುಗಿಯದಿದೆ.  ಮುಖ್ಯವಾದ ಮಾತೆಂದರೆ ಪ್ರತಿಯೊಬ್ಬ ಕವಿಯೂ ತನ್ನ ಕಾಲದ ಬದುಕನ್ನು ಹೇಗೆ ವ್ಯಕ್ತಿವಿಶಿಷ್ಟವಾಗಿ ಗ್ರಹಿಸಿದ್ದಾನೆ ಮತ್ತು ಇತರರಿಗಿಂತ ಹೇಗೆ ಅನನ್ಯವಾಗಿ ಅಭಿವ್ಯಕ್ತಿಸಿದ್ದಾನೆ – ಎನ್ನುವುದು.

ಈ ಹಿನ್ನೆಲೆಯಲ್ಲಿ ಶ್ರೀ ರಾಜಪ್ಪನವರು ಮಾಡಬೇಕಾದುದೇನೆಂದರೆ ಅವರು ಕವಿತೆಯ ಇಂದಿನ ಹಾಗೂ ಹಿಂದಿನ ಪರಂಪರೆಯೊಳಕ್ಕೆ ಬೇರೂರಬೇಕು.  ತಮ್ಮ ಸಮಕಾಲೀನತೆಯಲ್ಲಿ, ತಮ್ಮ ಜತೆಯವರು ಕಾವ್ಯಕಾಯಕದಲ್ಲಿ ಎದುರಿಸಿದ ಸವಾಲುಗಳನ್ನೂ, ಭಾಷೆಯನ್ನು ಪಳಗಿಸಿಕೊಂಡ ಕೌಶಲಗಳನ್ನೂ, ಮತ್ತು ಅಭಿವ್ಯಕ್ತಿಯ ಬಹುಮುಖತ್ವವನ್ನೂ ಪರಿಶೀಲಿಸಬೇಕು.  ತಮಗೆ ಕರಗತವಾಗಿರುವ ಬರವಣಿಗೆಯ ಕ್ರಮದೊಳಗಿನ ಏಕತಾನತೆಯಿಂದ ಪಾರಾಗಿ, ಇನ್ನಷ್ಟು ರೂಪವೈವಿಧ್ಯಗಳನ್ನು, ಇನ್ನಷ್ಟು ಚಲನಶೀಲತೆಯನ್ನು, ಸಾಧಿಸುವ ನಿಟ್ಟಿನಲ್ಲಿ ಏನು ಮಾಡಬಹುದೆಂಬುದನ್ನು ತಾವೇ ಕಂಡುಕೊಳ್ಳಬೇಕು.  ಇದು ಅವರ ನಾಳಿನ ಹಾದಿಯ ಪಯಣವನ್ನು ಕುರಿತದ್ದು.

ಈಗ? ಈಗ ಶುಭವನ್ನು ಹಾರೈಸೋಣ.  ಅವರು ಬರೆದಿರುವ ಕವಿತೆಯನ್ನು ಓದೋಣ.  ನಮ್ಮ ಪ್ರತಿಕ್ರಿಯೆಗಳನ್ನು ಪ್ರಾಮಾಣಿಕವಾಗಿ ತಿಳಿಸೋಣ.  ಇದು ಕವಿಯೊಂದಿಗೆ, ಕವಿತೆಯೊಂದಿಗೆ ನಾವು ನಡೆಸಬಹುದಾದ ಸಂವಾದ.

ಬರಡುಭೂಮಿಯ ಸತ್ಯಗಳು : ಡಾ. ಡಿ.ಸಿ. ರಾಜಪ್ಪ, ೨೦೦೨