ಕನ್ನಡ ಕವಿತೆಯ ಲಕ್ಷಣವೇ ಇದು.  ಯಾವತ್ತೂ ತನ್ನ ಪಾತ್ರದೊಳಗಿನ ಜಲಸತ್ವವನ್ನು ಒಂದು ನಿಶ್ಚಿತವಾದ ಮಟ್ಟದಲ್ಲಿ ಕಾಯ್ದುಕೊಳ್ಳುತ್ತಲೇ ಅದು ಸದಾ ಚಲನಶೀಲವಾಗಿದೆ.  ಇದರಲ್ಲಿ ಆಗಾಗ ದಡವನ್ನು ಮೀರುವ ಪ್ರವಾಹಗಳೂ ಉಂಟು-ಚಳುವಳಿಗಳ ಮಳೆಗಾಲಗಳಲ್ಲಿ.  ಆದರೆ ಈ ಸಾಂದರ್ಭಿಕವಾದ ಉಬ್ಬರಗಳ ಮಧ್ಯಂತರಗಳಲ್ಲಿ ಕೂಡಾ, ಅದು ಎಂದೂ ಸೊರಗಿದ್ದೇ ಇಲ್ಲ.  ಯಾಕೋ ನೀರಿನ ಮಟ್ಟ ಕಡಿಮೆಯಾಯಿತೇನೋ ಅನ್ನಿಸುತ್ತಿದ್ದಂತೆಯೆ, ಒಳಗಿನ ಅಗೋಚರ ನೀರ ಸೆಲೆಗಳು ತೆರೆದುಕೊಂಡು ಪುಟಿಯ ತೊಡಗುತ್ತವೆ; ಮತ್ತು  ಎಲ್ಲೆಲ್ಲಿನ ನೀರುಗಳೋ ಬಂದು ಕೂಡಿಕೊಳ್ಳುತ್ತವೆ.  ಕವಿತೆಯ ಹರಿವಿಗೆ ಹೊಸಬಣ್ಣ, ಹೊಸ ಸೆಳೆತ ಕೂಡಿಕೊಳ್ಳುತ್ತವೆ.

ಒಂದು ದೃಷ್ಟಿಯಿಂದ ನೋಡಿದರೆ, ಅಂದಂದಿನ ಕಾಲಮಾನದ ಸಾಹಿತ್ಯದ ಸಮೃದ್ಧಿ ಹಾಗೂ ಸಾಧನೆಗಳನ್ನು, ಹಿಂದಿನ ಹಾಗೆ, ಈ ಹೊತ್ತು ಕೇವಲ ಕವಿತೆಯ ಮೂಲಮಾನದಿಂದ ಅಳೆಯಲು ಹೊರಡುವುದೇ ತಪ್ಪೆಂದು ತೋರುತ್ತದೆ.  ಒಂದು ಕಾಲಕ್ಕೆ ‘ಸಾಹಿತ್ಯ’ ಮತ್ತು ‘ಕಾವ್ಯ’ ಈ ಎರಡೂ ಸಮಾನಾರ್ಥಕವಾಗಿದ್ದವೆಂಬುದು ನಿಜವಾದರೂ, ಈ ದಿನ ಕಾವ್ಯ ಅನ್ನುವುದು ಸಾಹಿತ್ಯದ ಹಲವು ಹತ್ತು ಪ್ರಕಾರಗಳಲ್ಲಿ ಒಂದು ಎಂಬುದನ್ನೂ, ಕಾವ್ಯೇತರವಾದ ಇತರ ಪ್ರಕಾರಗಳೂ ಕಾವ್ಯದಷ್ಟೇ ಮುಖ್ಯ ಅನ್ನುವುದನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ.  ಜತೆಗೆ, ಒಬ್ಬ ಬರಹಗಾರನಾದವನು ಏಕಕಾಲಕ್ಕೆ ತಾನು ಕವಿತೆಯನ್ನೂ ಬರೆಯುತ್ತ, ಇನ್ನಿತರ ಪ್ರಕಾರಗಳಲ್ಲಿಯೂ-ನಿದರ್ಶನಕ್ಕೆ ಹೇಳುವುದಾದರೆ, ಸಣ್ಣಕತೆ, ಕಾದಂಬರಿ, ನಾಟಕ, ಸಾಹಿತ್ಯ ವಿಮರ್ಶೆ ಇತ್ಯಾದಿ ಕ್ಷೇತ್ರಗಳಲ್ಲಿಯೂ – ತನ್ನ ಸೃಜನ ಹಾಗೂ ಸೃಜನೇತರ ಸಾಮರ್ಥ್ಯಗಳನ್ನು ಪರೀಕ್ಷಿಸಿಕೊಳ್ಳುತ್ತಿರುತ್ತಾನೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, ನಾವು ಒಂದು ಕಾಲಮಾನದ ಒಟ್ಟು ಸಾಹಿತ್ಯ ಚಟುವಟಿಕೆಗಳ ಮೇಲಿನಿಂದ ಹಾಗೂ ಸಾಧನೆಯ ಮೂಲಮಾನದಿಂದ ನಮ್ಮ ಸಾಹಿತ್ಯ ಸಂದರ್ಭದ ಲಕ್ಷಣಗಳನ್ನು ನಿರ್ಧರಿಸಬೇಕಾಗಿದೆ.  ಈ ದೃಷ್ಟಿಯಿಂದ ಆಧುನಿಕ ಕನ್ನಡ ಸಾಹಿತ್ಯದ ಕಳೆದ ಒಂದೂವರೆ ದಶಕದ ಸಾಧನೆ ಕಡಮೆಯೇನೂ ಅಲ್ಲ.  ವಾಸ್ತವವಾಗಿ ಅದು ಇದುವರೆಗೂ ಅಪರಿಚಿತವಾದ ಅನೇಕ ಅನುಭವ ಪ್ರಪಂಚಗಳ ಅನಾವರಣದ ಕಾಲ; ಇದುವರೆಗಿನ ಹಲವು ಸಾಹಿತ್ಯ ಚಳುವಳಿಗಳೊಳಗಿನ ಮನೋಧರ್ಮಗಳಿಗೆ ಪ್ರತಿಕ್ರಯಿಸುತ್ತ, ತನ್ನ ಸಾಮಾಜಿಕ ಆಯಾಮಗಳನ್ನು ವಿಸ್ತರಿಸಿಕೊಂಡ ಕಾಲ; ಪ್ರತಿ ಸಂಸ್ಕೃತಿ ನಿರ್ಮಾಣದ ತುಡಿತಗಳನ್ನು ಒಳಗೊಂಡ ಕಾಲ. ಈ ಕಾಲಮಾನದ ವಿವಿಧ ಸಾಹಿತ್ಯಾಭಿವ್ಯಕ್ತಿಗಳ ನಡುವೆಯೂ ಕವಿತೆ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.

ಶ್ರೀ ಬಿದರಹಳ್ಳಿ ನರಸಿಂಹಮೂರ್ತಿಯವರ ‘ಸೂರ್ಯದಂಡೆ’ ಎಂಬ ಹೆಸರಿನ ಕವನ ಸಂಕಲನ ಇಂಥ ಒಂದು ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿದೆ.  ಹಾಗೆ ನೋಡಿದರೆ ಇದು ಅವರ ಮೊದಲ ಕಾವ್ಯ ಪ್ರವೇಶ ಅಲ್ಲ.  ‘ಕಾಡಿನೊಳಗಿದೆ ಜೀವ’ ಎಂಬ ಅವರ ಮೊದಲ ಕವನ ಸಂಗ್ರಹ ಪ್ರಕಟವಾಗಿ ಸುಮಾರು ಹದಿನೈದು ವರ್ಷಗಳೇ ಕಳೆದವು.  ಮೊದಲ ಮತ್ತು ಪ್ರಸ್ತುತ ಕವನ ಸಂಕಲನಗಳ ನಡುವಣ ಹದಿನೈದು ವರ್ಷಗಳಲ್ಲಿ ಅವರು ತಮ್ಮ ಮನಸ್ಸನ್ನು ಕವಿತೆಯ ಅವಸರಕ್ಕೆ ಒಪ್ಪಿಸದೆ, ಒಂದು ಬಗೆಯ ಪರಿಭಾವನೆಯ ಹದದೊಳಗೆ ನಿಲ್ಲಿಸಿಕೊಂಡರೆಂಬುದನ್ನು ‘ಸೂರ್ಯದಂಡೆ’ಯ ಕವಿತೆಗಳು – ಕೇವಲ ಮೂವತ್ತರಷ್ಟು ಸಂಖ್ಯೆಯ ಕವಿತೆಗಳು – ಸ್ಪಷ್ಟಪಡಿಸುತ್ತವೆ.  ಈ ನಡುವೆ, ಇತ್ತೀಚೆಗೆ ‘ಶಿಸು ಕಂಡ ಕನಸು’ ಎಂಬ ಹೆಸರಿನ ಸಣ್ಣಕತೆಗಳ ಸಂಕಲನವನ್ನು ಅವರು ಪ್ರಕಟಿಸಿದರು.  ನಾನು ಈ ಕತೆಗಳೊಳಗಿನ ಕಾವ್ಯಮಯತೆಗೆ, ಅಂದರೆ ಅನುಭವದ ತೀವ್ರತೆಗೆ, ಅಭಿವ್ಯಕ್ತಿಯ ವಿಶಿಷ್ಟತೆಗೆ, ಬೆರಗಾಗಿದ್ದೇನೆ.  ಅವರ ಮೊದಲ ಕವನ ಸಂಗ್ರಹ, ಅವರ ಕಾವ್ಯಶಕ್ತಿಯನ್ನು ತೌಲನಿಕವಾಗಿ ಗುರುತಿಸಿಕೊಳ್ಳಲು ನನಗೆ ಈಗ ದೊರೆಯದೆ ಹೋದರೂ, ಅವರ ಸಣ್ಣಕತೆಗಳು – ತಮ್ಮ ವರ್ಣನೆಯ ಸೊಗಸಿನಿಂದ, ಭಾವಗೀತಾತ್ಮಕತೆಯಿಂದ – ಮೂಲತಃ ಅವರ ಕಾವ್ಯ ಸಾಮರ್ಥ್ಯದ ವಿಸ್ತರಣೆಗಳಂತೆಯೇ ನನಗೆ ತೋರುತ್ತವೆ.  ಯಾವುದೇ ಆತುರವಿಲ್ಲದೆ, ಮರೆತುಹೋಗುವ ಭಯವಿಲ್ಲದೆ, ತಮ್ಮ ಪಾಡಿಗೆ ತಾವು ಸಾವಧಾನದಿಂದ ತಮ್ಮ ಕತೆ-ಕವಿತೆಗಳ ಮೂಲಕ ತಮ್ಮ ಸೂಕ್ಷ್ಮ ಸಂವೇದನಾ ಸಾಮರ್ಥ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ.

ನರಸಿಂಹಮೂರ್ತಿಯವರ ‘ಸೂರ್ಯದಂಡೆ’ಯೊಳಗಿನ ಕವಿತೆಗಳು ತಮ್ಮ ವಸ್ತು ವೈವಿಧ್ಯ, ಬಂಧ ವೈವಿಧ್ಯ, ಮತ್ತು ಅನುಭವ ಪ್ರಪಂಚವನ್ನು ಅವರು ಗ್ರಹಿಸುವ ವಿಶಿಷ್ಟ ನಿಲುವುಗಳಿಂದಾಗಿ, ನನ್ನ ಮಟ್ಟಿಗೆ ತುಂಬ ಗಮನಾರ್ಹವಾದ ಪ್ರಯೋಗ ಮತ್ತು ಪರಿಣತಿಗಳನ್ನು ಪ್ರಕಟಿಸುತ್ತವೆ.  ಕನ್ನಡ ಕಾವ್ಯ ಪರಂಪರೆಯೊಳಗೆ ಬಹುದೂರದವರೆಗೆ ತಮ್ಮ ಬೇರುಗಳನ್ನು ಚಾಚುತ್ತಾ, ಹೊಸಗನ್ನಡದ ಈವರೆಗಿನ ಹಲವು ಸಾಹಿತ್ಯ ಚಳುವಳಿಗಳೊಳಗಿನಿಂದ ಅನೇಕ ಅಪೇಕ್ಷಣೀಯವಾದ ಅಂಶಗಳನ್ನು ತಕ್ಕ ಎಚ್ಚರ ಹಾಗೂ ವಿವೇಚನೆಯಿಂದ ಅರಗಿಸಿಕೊಳ್ಳುತ್ತಾ ಒಂದು ಬಗೆಯ ಪುನರ್ಭವಗಳನ್ನು ಪಡೆದುಕೊಂಡಂತೆ ತೋರುವ ಇಲ್ಲಿನ ಹಲವು ಕವಿತೆಗಳು, ಮತ್ತೆ ನವೋದಯ ಕಾವ್ಯ ಸಂದರ್ಭವನ್ನು ನೆನಪಿಗೆ ತರುವಂಥ ಕಾಳಜಿಗಳನ್ನು, ಅದಮ್ಯವಾದ ಜೀವನಪ್ರೀತಿ ಹಾಗೂ ಉತ್ಸಾಹಗಳನ್ನು ಮೂಲಸ್ಥಾಯಿಯನ್ನಾಗಿ ಮಾಡಿಕೊಂಡಿವೆ.  ‘ನವೋದಯ ಕಾವ್ಯ ಸಂದರ್ಭವನ್ನು ನೆನಪಿಗೆ ತರುವಂಥ’ – ಎಂಬ ಮಾತನ್ನು ‘ನವೋದಯ ಕಾವ್ಯ ಸಂದರ್ಭವನ್ನು ಪುನರಾವರ್ತಿಸುವಂಥ’ – ಎಂದು ಯಾರೂ ಇಲ್ಲಿ ತಿಳಿಯಬಾರದು.  ಹಾಗೆ ಪುನರಾವರ್ತಿಸುವ ಪ್ರಯತ್ನದಿಂದ ಯಾವ ಪ್ರಯೋಜನವೂ ಇಲ್ಲ.  ಜತೆಗೆ ನಿಜವಾದ ಸೃಜನಾತ್ಮಕವಾದ ಮನಸ್ಸು ಎಂದೂ ಯಾವುದನ್ನೂ ಪುನರಾವರ್ತಿಸುವ ಎರಡನೆ ದರ್ಜೆಯ ಕೆಲಸಕ್ಕೆ ಕೈ ಹಾಕುವುದೇ ಇಲ್ಲ.  ನರಸಿಂಹಮೂರ್ತಿಯವರು ತಾವು ನಿಂತ ನೆಲದ ಚೆಲುವುಗಳಿಗೆ ಒಲಿಯುವ ತನ್ಮಯತೆಯಲ್ಲಿ ಹಾಗೂ ಆ ಮೂಲಕ ಅವರು ಅನುಭವಿಸುವ ಆನುಭಾವಿಕ ಸ್ಪರ್ಶಗಳಲ್ಲಿ, ಮತ್ತು ಅವರ ಅಭಿವ್ಯಕ್ತಿಯ ಕ್ರಮಗಳಲ್ಲಿ, ನವೋದಯ ಸಂದರ್ಭದ ಆ ಅದಮ್ಯವಾದ ನಿಸರ್ಗಪ್ರೀತಿಯ ವೈಭವಗಳ ಸ್ಪರ್ಶವಿದೆ.  ‘ಕಾಲಸಾಗರದಲ್ಲಿ ಎದ್ದ ಅಲೆಗಳ’ ಸಾಲಿನಂತೆ.  ‘ಘನದ ಇಂಗಿತ’ಗಳಂತೆ ತೋರುವ ನ್ಯಾಮತಿಯ ನವಿಲು ಬೆಟ್ಟಗಳು; ಹೊನ್ನಾಳಿಯ ಹೊಳೆ; ‘ಯೋಗ ನಿದ್ರೆಯೊಳಿರುವ ಮಹಾಮೌನಿ ಘಟ್ಟ’ಗಳು; ‘ದೂರದ ಹಿಮಾಲಯದ ಹೇಮಕುಂಡ’ದ ಭವ್ಯಾನುಭವಗಳ ಮೂಲಕ ‘ಸೂರ್ಯಚಂದ್ರ ನದಿ ಬೆಟ್ಟ ಸಾಗರ ನಮ್ಮ ಬಂಧುಬಳಗ’ ಎಂಬ ಲೋಕಬಾಂಧವ್ಯ; ತಮ್ಮ ಊರ ಪರಿಸರದಲ್ಲಿಯೆ –

ಮೋಡಗಳ ಮೈದಡವಿ ಕರಿಯ ಕೆಚ್ಚಲು ಕರೆಸಿ
ಹರಸಿ ಸುರಿಸಿರಿ ನೊರೆಹಾಲ ಮಳೆ ನೀರು
ಸುರ ಹೊನ್ನೆ ಹೊನ್ನಾಳಿ ತುಂಬಿ ತುಳುಕುತ್ತಿರಲಿ
ನೆಲದ ಗಂಗಾಳದಲಿ ಹಸಿರು ಹೊನ್ನು

ಎಂಬ ಆಶಯಗಳಲ್ಲಿ, ಅಭಿವ್ಯಕ್ತವಾಗುವ ಈ ನೆಲದ ಫಲವಂತಿಕೆಯ ಅವ್ಯಾಜ ವಾತ್ಸಲ್ಯದ ದರ್ಶನ, ಇವೆಲ್ಲವೂ, ಕನ್ನಡ ಕವಿತೆ ಇತ್ತೀಚಿನ ದಿನಗಳಲ್ಲಿ ಕಳೆದುಕೊಂಡ ನಿಜವಾದ ನಿಸರ್ಗಪ್ರೀತಿಯ ಲಕ್ಷಣವಾಗಿವೆ.  ವಾಸ್ತವವಾಗಿ ನಮ್ಮದೇ ಬದುಕಿನ ಒಂದು ಭಾಗವಾದ ನಿಸರ್ಗವನ್ನು ಪ್ರೀತಿಸುವುದು, ಜೀವನಪ್ರೀತಿಯ ವಿಸ್ತರಣೆ ಎಂಬುದು ನಿಜವಾದರೂ, ಈ ದಿನ ನಮ್ಮ ನಿಸರ್ಗ ಅತ್ಯಂತ ದೊಡ್ಡ ಆಘಾತಕ್ಕೆ ಒಳಗಾಗಿದೆ.  ಮತ್ತು ಈ ಹೊತ್ತು ನಮ್ಮನ್ನು ಕಾಡುತ್ತಿರುವ ಬಹುದೊಡ್ಡ ಆತಂಕಗಳೆಂದರೆ ಪರಿಸರನಾಶ ಮತ್ತು ಪರಿಸರ ಮಾಲಿನ್ಯ.  ಪರಿಸರನಾಶದ ತಲ್ಲಣಗಳಿಂದ ತತ್ತರಿಸುತ್ತಿರುವ ಇಂದಿನ ನಮಗೆ, ನಿಸರ್ಗರಕ್ಷಣೆ ಹಾಗೂ ನಿಸರ್ಗಪ್ರೀತಿ, ಕೇವಲ ಭೌತಿಕ ಅಗತ್ಯ ಮಾತ್ರ ಇಲ್ಲ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಗತ್ಯವೂ ಹೌದು.  ಈ ದೃಷ್ಟಿಯಿಂದ ನವೋದಯ ಸಂದರ್ಭದಲ್ಲಿ ಉತ್ಕರ್ಷಗೊಂಡ ಅದಮ್ಯವಾದ ನಿಸರ್ಗ ಪ್ರೀತಿ ಎಂತಹ ಒಂದು ಮೌಲ್ಯವೆಂಬುದನ್ನು ನಾವು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ..  ಬಿದರಹಳ್ಳಿ ನರಸಿಂಹಮೂರ್ತಿಯವರ ಕವಿತೆಗಳಲ್ಲಿ ಅಭಿವ್ಯಕ್ತವಾಗುವ ಮುಖ್ಯ ಕಾಳಜಿಗಳಲ್ಲಿ, ಈ ನೆಲದ ಚೆಲುವಿಗೆ ತನ್ಮಯವಾಗಿ ಒಲಿಯುವುದೂ ಒಂದು.  ಆದರೆ ನವೋದಯ ಸಂದರ್ಭದ ನಿಸರ್ಗದ ಹಾಗೂ ಈ ದೇಶದ ವಾತಾವರಣಕ್ಕೂ ಮತ್ತು ಈ ದಿನ ನಮ್ಮ ಸುತ್ತಣ ನಿಸರ್ಗದ ಮತ್ತು ದೇಶದ ವಾತಾವರಣಕ್ಕೂ ವ್ಯತ್ಯಾಸವಿರುವುದರಿಂದಲೇ, ಇಂದಿನ ಕವಿ, ಪರಿಸರ ಮಾಲಿನ್ಯ ಹಾಗೂ ಪರಿಸರ ನಾಶದೊಂದಿಗೆ ತಳಕು ಹಾಕಿಕೊಂಡಿರುವ ನಗರೀಕರಣದ ದುರಂತಗಳನ್ನು ಗುರುತಿಸುತ್ತಾನೆ. ‘ನೆಲದ ಬೊಗಸೆ’ ಎಂಬ ಕವಿತೆಯಲ್ಲಿ ನರಸಿಂಹಮೂರ್ತಿಯವರು ಬೇಲೂರಿನ ಅಗಸೆಯಲ್ಲಿ ಬೊಗಸೆ ತುಂಬಿ ತುಳುಕುವಂತಿರುವ ಕೆರೆಯ ನೀರಿನ ಸೊಗಸಿಗೆ ಮಾರುಹೋಗುತ್ತಲೇ, ಬೆಂಗಳೂರು ನಗರದ ಕೆಂಪಾಂಬುಧಿ, ಧರ್ಮಾಂಬುಧಿ ಕೆರೆಗಳಿಗೆ ಒದಗಿರುವ ಪಾಡನ್ನು ಕುರಿತು

ಆವಿಯಾಗಿದೆ ನೀರು ಮಾಯವಾಗಿದೆ ಹಸಿರು
ತೇವ ಆರಿದ ಜೀವ ನಗರಾಕೃತಿ

ಎಂದು ತಮ್ಮ ಪ್ರತಿಕ್ರಿಯೆಯನ್ನು ದಾಖಲು ಮಾಡುತ್ತಾರೆ. ಈ ಪ್ರತಿಕ್ರಿಯೆಯ ವಿಸ್ತರಣೆಯಾಗಿ, ಈ ಕವನ ಸಂಗ್ರಹದಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಮುಖ್ಯವಸ್ತು ನಗರೀಕರಣದ ದುರಂತ ಹಾಗೂ ಅದರ ಜತೆಗೆ ಹೆಣೆದುಕೊಂಡಿರುವ ಶೋಷಣೆಯ ಹಲವು ಮುಖಗಳು.  ‘ಸೀತಾಫಲ’, ‘ಪೊಂಗುರಲಿ’ ಮತ್ತು ‘ಮೆಜೆಸ್ಟಿಕ್ ಜಾತಕ’ ಇಂಥ ಕವಿತೆಗಳು ಈ ವಿಷಯಕ್ಕೆ ಸಂಬಂಧಪಟ್ಟವು.  ನಗರ ಜೀವನದ ಅಸ್ತವ್ಯಸ್ತತೆಗಳನ್ನೂ ದಿಗ್ಭ ಮೆಗಳನ್ನೂ  ಒಂದು ಬಗೆಯ ಜುಗುಪ್ಸೆಯಿಂದ ವರ್ಣಿಸುವ ‘ಮೆಜೆಸ್ಟಿಕ್ ಜಾತಕ’ ಎಂಬ ಕವಿತೆ, ಈ ಹೊತ್ತಿನ ಯಾವುದೇ ದೊಡ್ಡ ನಗರಗಳ ಜಾತಕವೂ ಆಗಬಹುದು.  ‘ಸೀತಾಫಲ’ ಹೈದರಾಬಾದಿನಿಂದ ನೈಜಾಮನಗರದೊಳಗೆ,  ಆಂಧ್ರದ ನಮ್ರ ಕಾಡುಗಳಿಂದ ‘ಸೀತಾಫಲ’ವನ್ನು ಮಾರಲು ಬಂದ ಮುಗ್ಧ ಹೆಣ್ಣು ಶೋಷಣೆ – ಅತ್ಯಾಚಾರಗಳಿಗೆ ಬಲಿಯಾಗುವ ದುರಂತದ ಕರುಣಕತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ; ಬೆಂಗಳೂರಿನ

ಕೆಂಪು ಟ್ರಾಫಿಕ್ ಸಿಗ್ನಲ್ಲಡಿ
ರಸ್ತೆ
ದಾಟು ಹುಲಿಪಟ್ಟೆ ಬಳಿ
ಕಣ್ಣು ಕಣ್ಣು ಬಿಡುತ್ತ
ಸಣ್ಣಗೆ ಅಳುತ್ತ ನಿಂತ
ಪುಟ್ಟ ಹುಡುಗಿ

– ಪೊಂಗುರಲಿ, ತಮಿಳುನಾಡಿಂದ ಬಂದು ಗುಂಪಿನಿಂದ ತಪ್ಪಿಸಿಕೊಂಡ ಹಾಗೂ ದಿಗ್ಭ ಮೆಗೊಂಡ ಈ ಹುಡುಗಿ ಪುಂಡು-ಪೋಕರಿಗಳ ಜಾಲಕ್ಕೆ ಸಿಕ್ಕಿದ್ದರೆ ಆಗಬಹುದಾಗಿದ್ದ ಅನಾಹುತದಿಂದ, ಅದು ಹೇಗೋ ಮಾನವೀಯ ಅಂತಃಕರಣದ ‘ಕಥಾನಾಯಕ’ ನೆರವಿನಿಂದ, ಪಾರಾಗಿ ಸುರಕ್ಷಿತವಾಗಿ ತನ್ನ ನೆಂಟರ ಮನೆ ಸೇರುತ್ತಾಳೆ.  ಈ ಎರಡೂ ಕವಿತೆಗಳ, ಕಲಾತ್ಮಕ ನಿರ್ವಹಣೆ ಹಾಗೂ ಧ್ವನಿಶಕ್ತಿ ಅಪೂರ್ವವಾದ ರೀತಿಯಲ್ಲಿ, ನಗರದ ಬದುಕು ಮುಗ್ಧತೆಯ ಮೇಲೆ ನಡೆಯಿಸುವ ಆಕ್ರಮಣಗಳನ್ನೂ ಅತ್ಯಾಚಾರಗಳನ್ನೂ ಕಣ್ಣ ಮುಂದೆ ನಿಲ್ಲಿಸುತ್ತದೆ.  ಒಂದು ಸ್ವಾರಸ್ಯದ ಸಂಗತಿ ಎಂದರೆ ಯಾವತ್ತೂ ನಮ್ಮ ಕವಿಗಳಿಗೆ ಯಂತ್ರ ನಾಗರಿಕತೆಯ ನಗರಪರಿಸರ ಎಂದೂ ಅವರ ಹೃದಯಕ್ಕೆ ಪ್ರಿಯವಾದುದಲ್ಲ.  ಔದ್ಯೋಗಿಕ ಹಾಗೂ ಮತ್ತಿತರ ಕಾರಣಗಳಿಂದ ನಗರಗಳಲ್ಲಿ ನೆಲಸುವುದು ಅನಿವಾರ್ಯವಾಗಿರುವ ಇಂದಿನ ಸಾಹಿತಿಗಳಲ್ಲಿ, ನೂರಕ್ಕೆ ತೊಂಭತ್ತರಷ್ಟು ಜನಕ್ಕೆ ಈ ನಗರಪರಿಸರ ಅಂತಹ ಆಕರ್ಷಣೆಯ ವಿಷಯವಾಗಿಲ್ಲ ಮತ್ತು ಅವರ ವ್ಯಕ್ತಿತ್ವಕ್ಕೆ ಅಗತ್ಯವಾದ ತುಷ್ಟಿಯನ್ನು ತಂದಂತೆ ತೋರುವುದಿಲ್ಲ.  ಹೀಗಾಗಿ ಅವರ ತುಡಿತಗಳೇನಿದ್ದರೂ ಅವರವರ ಗ್ರಾಮೀಣ ಪರಿಸರದ ನೆನಪುಗಳಿಗೆ, ಕನಸುಗಳಿಗೆ ಮತ್ತು ಹಂಬಲಗಳಿಗೆ.  ಈ ಕಾರಣದಿಂದಲೇ ಇರಬೇಕು ನಮ್ಮಲ್ಲಿ ಅಪ್ಪಟ ನಗರ ಸಂವೇದನೆಯ ಸಾಹಿತ್ಯ ಸೃಷ್ಟಿಯಾದದ್ದು ತೀರಾ ತೀರಾ ಕಡಮೆ.  ಹೊನ್ನಾಳಿಯಂಥ ಅರ್ಧ ನಗರ ಪರಿಸರದ ಕವಿ ಬಿದರಹಳ್ಳಿ ನರಸಿಂಹಮೂರ್ತಿಗಳ ನಿಲುವೂ, ನಗರದ ಬದುಕನ್ನು ಕುರಿತು ಇದೇ ರೀತಿಯದು. ಹೊನ್ನಾಳಿಯ ಹೊಳೆಗೆ, ಅದರ ಹತ್ತಿರದ ನ್ಯಾಮತಿಯ ನವಿಲು ಬೆಟ್ಟಗಳಿಗೆ, ಸುತ್ತ ಮುತ್ತಣ ಮಲೆನಾಡಿನ ಹಸುರಿಗೆ, ‘ಮುಂಗಾರ ಮುಗಿಲು ಮಳೆ ಸೂಜಿಯಲ್ಲಿ ಪವಣಿಸಿದ’ ನೀರ ನೂಲಿಗೆ, ಚೀಲೂರಿನ ಅಗಸೆಯ ಬೊಗಸೆಯಲ್ಲಿ ನಿಂತು ಮಿರುಗುವ ನೀರಿಗೆ ಅವರ ಮನಸ್ಸು ಸ್ಪಂದಿಸುವಷ್ಟು  ಹಾಗೂ ತನ್ಮಯವಾಗುವಷ್ಟು, ಪರಿಸರನಾಶದಲ್ಲಿ ಪ್ರಧಾನಪಾತ್ರ ವಹಿಸುತ್ತಿರುವ ನಗರೀಕರಣವನ್ನೂ ಅದರ ಪರಿಣಾಮಗಳನ್ನೂ ಅವರು ಮೆಚ್ಚಲಾರರು.  ಅಷ್ಟೆ ಅಲ್ಲ ಅವರ ಪಾಲಿಗೆ ‘ನಗರ’ ಶೋಷಣೆಯ ಸಂಕೇತವೂ ಹೌದು – ಅಲ್ಲಿ,

ಜೋಪಡಿಗೆ ಕತ್ತಲು ಕುಡಿಸಿ, ಬೆಳಕ ಲೂಟಿ ಮಾಡಿದ ಮಹಲುಗಳು
ತಿಜೋರಿ ಬೊಜ್ಜುಗಳು ತುಕ್ಕಿಡಿದ ರಾಜ್ಯ ಕವಚಗಳು

ಇರುವ ಭ್ರಷ್ಟ ಜಗತ್ತು ಅದು.  ಇಂಥ ವಾತಾವರಣದಲ್ಲಿ ಕವಿಗೆ ‘ಯಾಕೋ ನಿದ್ದೆ ಹತ್ತುವುದಿಲ್ಲ . ಒಂದು ವೇಳೆ ನಿದ್ರೆ ಹತ್ತಿದರೂ ಅವನಿಗೆ ಬೀಳುವ ಕನಸುಗಳು ವಾಸ್ತವದ ಭಯಾನಕ ನೆನಪುಗಳಿಂದ ಬೆಚ್ಚಿ ಬೀಳಿಸುತ್ತವೆ-

ನನ್ನ ಕನಸುಗಳಲ್ಲಿ ನರಕ ತೆರೆವ ಕಾರ್ಖಾನೆಗಳು
ಶವಾಲಯವಾದ ಆಸ್ಪತ್ರೆ ಬ್ಯಾಂಕು ಕೋರ್ಟ್ ಕಛೇರಿಗಳು
ಕೊಳೆತ ಅತ್ತಿ ಹಣ್ಣಂಥ ನಗರಗಳು
ಶೂನ್ಯ ಸಂಪಾದನೆ ಗೈವ ಪುಲು ಪುಲು ಕುಲ ತಂಡಗಳು

(
ಕನ್ನ ಹಾಕುತ್ತಾ ಕನಸು)

– ಇದು ಪ್ರಸ್ತುತ ಸಾಮಾಜಿಕ ವಾಸ್ತವಗಳಿಗೆ ಎಚ್ಚರವಾಗಿರುವ ಮನಸ್ಸಿನ ಪ್ರತಿಕ್ರಿಯೆ.  ಈ ಪ್ರತಿಕ್ರಿಯೆಗಳಲ್ಲಿ ಯಾವುದೇ ಅಬ್ಬರವಿಲ್ಲ; ಆದರೆ ಮಾನವ ಕೇಂದ್ರ ಕಾಳಜಿಗಳಿಂದ ಕೂಡಿದ ವಿಷಾದವಿದೆ.  ಬದುಕನ್ನು ಅದರ ವಿಸ್ತಾರ ಹಾಗೂ ಸಮಗ್ರತೆಯೊಳಗೆ ಗ್ರಹಿಸುವ ಪ್ರಯತ್ನಗಳಿವೆ.  ಈ ಒಂದು ನಿಲುವಿನಿಂದ ಈ ಕವಿಯ ಮನಸ್ಸು ನಿಸರ್ಗಕ್ಕೆ ಸಾಮಾಜಿಕ ವಾಸ್ತವಗಳಿಗೆ, ಪರಂಪರೆಗೆ, ಚರಿತ್ರೆಗೆ ಅತ್ಯಂತ ಆರೋಗ್ಯಪೂರ್ಣವಾಗಿ ಸ್ಪಂದಿಸುತ್ತದೆ.  ಅದಕ್ಕೆ ಪರಂಪರೆಯ ಹಾಗೂ ಸಂಪ್ರದಾಯದ ಪೋಷಕ ಮತ್ತು ಶೋಷಕ ಸಾಮರ್ಥ್ಯಗಳ ಅರಿವಿದೆ.  ‘ಅಜ್ಜ’ ಎಂಬ ಕವಿತೆಯಲ್ಲಿ ಪರಂಪರೆಯಿಂದ ವರ್ತಮಾನವು ಪಡೆದುಕೊಳ್ಳ ಬಹುದಾದ ಪುಷ್ಟಿಗಳನ್ನು ಕುರಿತ ತಿಳಿವಳಿಕೆಯಿದೆ; ಹಾಗೆಯೆ ‘ಚಂದ್ರಗುತ್ತಿ’ ಎಂಬ ಕವಿತೆ ಸಂಪ್ರದಾಯದ ಶೋಷಕ ಮುಖವನ್ನು ಚಿತ್ರಿಸುತ್ತದೆ.  ಭಾಮಿನೀಷಟ್ಪದಿಯಲ್ಲಿ ನರಸಿಂಹಮೂರ್ತಿಯವರು ಬರೆದಿರುವ ‘ಸಾಮರಸ್ಯ’ ಎಂಬ ಒಂದು ವಿನೂತನ ‘ಅಖಂಡ ಕಾವ್ಯ’, ಸಾಹಿತ್ಯ ಚರಿತ್ರೆಯಲ್ಲಿ ತೇಲಿಬಂದ, ಕುಮಾರವ್ಯಾಸ – ಚಾಮರಸರಿಗೆ ಸಂಬಂಧಪಟ್ಟ ಸ್ಪರ್ಧೆಯ ದಂತಕತೆಯೊಳಗಣ ಅನಾರೋಗ್ಯಕರ ಪ್ರವೃತ್ತಿಯನ್ನು, ತಮ್ಮ ಕಲ್ಪನೆಯಿಂದ ಪುನರ್ ವ್ಯಾಖ್ಯಾನಿಸಿ, ಚಿಕಿತ್ಸೆಗೆ ಗುರಿಪಡಿಸಿರುವ ಕ್ರಮವೂ ವಿಶೇಷ ರೀತಿಯಿದಾಗಿದೆ.  ಇದೇ ಆರೋಗ್ಯಕರವಾದ ನಿಲುವಿನಿಂದ ಚರಿತ್ರಕಾರರನ್ನೂ ಮತ್ತು ಹಿಂದಿನ ಹಿರಿಯರನ್ನೂ ವಸ್ತುನಿಷ್ಠವಾದ ವಿಮರ್ಶೆಗೆ ಗುರಿಪಡಿಸುತ್ತ, ‘ಚರಿತ್ರೆ’ ಎಂದರೆ ಕೇವಲ ಉಳ್ಳವರ ಸಾಧನೆಗಳನ್ನೂ ವೈಭವಗಳನ್ನೂ ದಾಖಲಿಸುವ ಕ್ರಮ ಎಂದು ತಿಳಿಯುತ್ತ, ಚರಿತ್ರೆಯ ನಿರ್ಮಾಣದಲ್ಲಿ ಶ್ರೀಸಾಮಾನ್ಯರು ಸದ್ದಿಲ್ಲದೆ ಪಟ್ಟ ಪಾಡುಗಳನ್ನು ನಿರ್ಲಕ್ಷಿಸಿದ ಚರಿತ್ರಕಾರರ ಧೋರಣೆಯನ್ನೂ (ಇತಿಹಾಸಕಾರರಿಗೆ), ಹಿರಿಯರೆನ್ನಿಸಿಕೊಂಡ ಮೇಲುವರ್ಗದವರು ವರ್ಣವ್ಯವಸ್ಥೆಯ ಹೆಸರಿನಲ್ಲಿ ಕೆಳವರ್ಗದವರನ್ನು ಅನ್ಯಾಯ ಹಾಗೂ ಅವಮಾನಗಳಿಗೆ ಗುರಿಪಡಿಸಿದ್ದನ್ನೂ (ಹಿರೇರು ಮಾಡಿದ್ದು) ನರಸಿಂಹಮೂರ್ತಿಯವರು ತುಂಬ ಕಳಕಳಿಯಿಂದ ದಾಖಲು ಮಾಡುತ್ತಾರೆ.  ಇದುವರೆಗು ನಾನು ಪ್ರಸ್ತಾಪಿಸಿದ ಕೆಲವು ಸಂಗತಿಗಳ ಹಿನ್ನೆಲೆಯಿಂದ ಹೇಳಬಹುದಾದ ಮಾತೆಂದರೆ : ನರಸಿಂಹಮೂರ್ತಿಯವರ ಕವಿತೆ ಒಳಗೊಂಡಿರುವ ವಸ್ತು ಪ್ರಪಂಚದ ಹರಹು ದೊಡ್ಡದು.  ಮತ್ತು ಅದನ್ನು ಕಾವ್ಯಾನುಭವವನ್ನಾಗಿ ಮಾಡಿಕೊಂಡು, ವಿವಿಧ ಛಂದೋ ವೈವಿಧ್ಯ ಹಾಗೂ ಬಂಧ ವೈವಿಧ್ಯಗಳಲ್ಲಿ ಅಭಿವ್ಯಕ್ತಪಡಿಸಿರುವ ಕುಶಲತೆ (Craftsmanship) ತುಂಬ ಗಮನಾರ್ಹವಾದದ್ದು.  ಆದರೆ ಈ ಕಟ್ಟುವ ಕೆಲಸ ಎಲ್ಲಿಯೂ ಸಡಿಲವಾದಂತೆ ತೋರದ ಒಂದು ನಿಯಂತ್ರಣ, ಸಹಜ ಕವಿಗೆ ಮಾತ್ರ ಸಾಧ್ಯವಾಗಬಹುದಾದ ಹೊಸತನ ಮತ್ತು ಲವಲವಿಕೆ ಈ ಕವಿತೆಗಳ ವಿಶೇಷವಾಗಿದೆ.  ಕವಿತೆಯನ್ನು ಒಂದು ಗಂಭೀರವಾದ ಕಲೆಗಾರಿಕೆ ಹಾಗೂ ಸಾಮಾಜಿಕ ಜವಾಬ್ದಾರಿ ಎಂದು ಪರಿಗಣಿಸಿದ ಮನೋಧರ್ಮದ ಮಹತ್ವಾಕಾಂಕ್ಷೆಯೊಂದು ಇಲ್ಲಿ ಕ್ರಿಯಾಶೀಲವಾಗಿದೆ.

ಸೂರ್ಯದಂಡೆ : ಬಿದಿರಹಳ್ಳಿ ನರಸಿಂಹಮೂರ್ತಿ, ೧೯೯೬