ಒಂದು ಕಾಲಕ್ಕೆ ಸಾಹಿತ್ಯದ ಕೇಂದ್ರವೇ ಆಗಿದ್ದ ಕವಿತೆ, ಈ ಹೊತ್ತು ಸಾಹಿತ್ಯದ ಹಲವು ಪ್ರಮುಖ ಪ್ರಕಾರಗಳ ನಡುವೆ ತಾನೂ ಒಂದು ಎಂದು ಪರಿಗಣಿತವಾಗಿರುವ ಸಂದರ್ಭದಲ್ಲಿಯೂ, ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.  ಮತ್ತು ಸಾಹಿತ್ಯ ಪರಂಪರೆಯ ಉದ್ದಕ್ಕೂ, ಹಾಗೂ ಆಧುನಿಕ ಸಾಹಿತ್ಯ ಚಳುವಳಿಗಳ ಬಹುತೇಕ ಕಾಲಘಟ್ಟಗಳಲ್ಲಿ ಕಾವ್ಯಮೀಮಾಂಸೆ ಅಥವಾ ಸಾಹಿತ್ಯವನ್ನು ಕುರಿತ ಚರ್ಚೆ ನಡೆದಿರುವುದು ಕಾವ್ಯದ ಕೇಂದ್ರದಲ್ಲಿಯೇ.  ಈ ಬಗೆಯ ಕಾವ್ಯ ಕೇಂದ್ರಿತ ಮೂಲಮಾನಗಳಲ್ಲಿ ನಿಷ್ಪನ್ನವಾದ ಸಾಹಿತ್ಯ ಚರ್ಚೆಗಳೇ ಅಂದಂದಿನ ಸಾಹಿತ್ಯವನ್ನು ರೂಪಿಸುವ ಹಾಗೂ ನಿರ್ದೇಶಿಸುವ ನಿಲುವುಗಳಂತೆ ವರ್ತಿಸುತ್ತ ಬಂದಿವೆ.  ಸಾಹಿತ್ಯ ಲೋಕವನ್ನು ಮೊಟ್ಟಮೊದಲು ಪ್ರವೇಶಿಸಬೇಕೆನ್ನುವ ಯಾರೂ, ಕವಿತೆಯನ್ನು ಬರೆದು ‘ಕವಿ’ ಎನ್ನಿಸಿಕೊಳ್ಳಬೇಕೆಂಬ ಅದಮ್ಯವಾದ ಸೆಳೆತದಿಂದ ತಪ್ಪಿಸಿಕೊಂಡದ್ದು ಬಹುಶಃ ತೀರಾ ವಿರಳವೆಂದೇ ಹೇಳಬೇಕು.  ಕಾವ್ಯೇತರವಾದ ಇತರ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಮುಖ್ಯ ಬರಹಗಾರರೂ, ಒಂದೊಂದು ಸಲ ತಾವೂ ಕವಿತೆಯನ್ನು ಬರೆಯುವ ಆಕರ್ಷಣೆಗೆ ಒಳಗಾಗಿರುವ ಅಥವಾ ತಮ್ಮ ಬರೆಹ ಕಾವ್ಯಕ್ಕೆ ಸಮೀಪವಾದ ಒಂದು ಉತ್ಕಟ ಭಾವತೀವ್ರತೆಯ ಅನುಭವ ಸ್ಥಿತಿಯನ್ನು ಒಳಗೊಳ್ಳಬೇಕೆನ್ನುವ ಹಂಬಲವನ್ನು ತೋಡಿಕೊಂಡ ನಿದರ್ಶನಗಳೂ ಇವೆ.  ಈ ಎಲ್ಲ ಮಾತಿನ ಸಾರಾಂಶವೇನೆಂದರೆ, ಸಾಹಿತ್ಯ ಎಂದು ನಾವು ಗುರುತಿಸಬಹುದಾದ ಎಲ್ಲ ಅಭಿವ್ಯಕ್ತಿಗಳೂ ‘ಕಾವ್ಯ’ವಾಗುವುದರ ಕಡೆಗೇ ಅಥವಾ ನಿಜವಾದ ಕವಿತೆ ಪಡೆದುಕೊಳ್ಳುವ ಹಾಗೂ ಸಹೃದಯರಿಗೆ ಬಿಟ್ಟುಕೊಡುವ, ಒಂದು ಸಾಂದ್ರವಾದ ಅನುಭವ ವಿಶೇಷವೊಂದನ್ನು ಕಟ್ಟಿಕೊಡುವ ಕಲೆಗಾರಿಕೆಯ ಕಡೆಗೆ ತುಡಿಯುತ್ತವೆ.

ಸುಮಾರು ಎರಡು ವರ್ಷಗಳ ಹಿಂದೆ ಕನ್ನಡದ ಒಂದು ಪ್ರಮುಖ ಮಾಸಪತ್ರಿಕೆಯವರು, ತಮ್ಮ ಕಡೆಗೆ ಪ್ರಕಟಣೆಗೆಂದು ಬಂದ ಬಹುಸಂಖ್ಯೆಯ ತರುಣ ಕವಿಗಳ ಕವಿತೆಗಳನ್ನು ನನ್ನ ಕಡೆಗೆ ಕಳುಹಿಸಿ, ಅವುಗಳಲ್ಲಿ ಪ್ರಕಟಣೆಗೆ ಅರ್ಹವಾದ ಕೆಲವು ಕವಿತೆಗಳನ್ನು ಆಯ್ದುಕೊಡಬೇಕೆಂದು ನನ್ನನ್ನು ಕೇಳಿಕೊಂಡರು.  ಇಷ್ಟೊಂದು ಸಂಖ್ಯೆಯ ತರುಣರು ಕವಿತಾರಚನೆಯಲ್ಲಿ ತೊಡಗಿಕೊಂಡಿದ್ದಾರಲ್ಲ ಅನ್ನುವುದು  ಮೇಲುನೋಟಕ್ಕೆ ನನಗೆ ಸಂತೋಷವನ್ನು ತಂದಿತಾದರೂ, ನನ್ನ ಕಡೆ ಬಂದ ಅಷ್ಟೂ ಕವಿತೆಗಳನ್ನು ಹರಹಿಕೊಂಡು ಪರಿಶೀಲಿಸತೊಡಗಿದಂತೆ, ಆ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ.  ಕಾರಣವೇನೆಂದರೆ: ಬಹಳಷ್ಟು ಜನಕ್ಕೆ ಪದ್ಯ ಅಂದರೇನೆಂಬುದೇ ಗೊತ್ತಿಲ್ಲ.  ಮತ್ತು ಪದ್ಯಕ್ಕೆ ಈಗಾಗಲೇ ಒಂದು ಪರಂಪರೆ ಇದೆ, ಅದರೊಂದಿಗೆ ತಮ್ಮನ್ನು ಪರಿಚಯಿಸಿಕೊಳ್ಳುವುದು ಅಗತ್ಯ ಅನ್ನುವುದೂ ಗೊತ್ತಿಲ್ಲ.  ಇನ್ನು ಹಾಗೂ ಹೀಗೂ ಪದ್ಯ ಬರೆಯಬಲ್ಲವರಿಗೆ ‘ಕಾವ್ಯ’ ಅಂದರೇನು ಎನ್ನುವುದು ಗೊತ್ತಿಲ್ಲ.  ಮತ್ತು ಕಾವ್ಯದ ಸ್ವಾರಸ್ಯವನ್ನು ತಕ್ಕಮಟ್ಟಿಗೆ ಬಲ್ಲ ಮತ್ತೆ ಕೆಲವರು ಬರೆದ ಪದ್ಯಗಳು ಅಂಶ ಅಂಶಗಳಲ್ಲಿ ‘ಕಾವ್ಯ’ವಾಗುತ್ತ, ಇಡಿಯಾಗಿ ಕಾವ್ಯವಾಗುವುದರಲ್ಲಿ ಸೋತಿವೆ ಅನ್ನಿಸಿತು.  ಒಟ್ಟಾರೆ ಹೇಳುವುದಾದರೆ ನಮ್ಮಲ್ಲಿ ಬಹಳ ಜನ ‘ಪದ್ಯ’ ಬರೆಯುತ್ತಾರೆ; ಆದರೆ ಅದು ಎಷ್ಟೋ ವೇಳೆ ‘ಕಾವ್ಯ’ವಾಗಿರುವುದಿಲ್ಲ.  ಹಾಗೆ ಪದ್ಯ ಬರೆಯಬಲ್ಲ, ಮತ್ತು ಕಾವ್ಯದ ಬಗ್ಗೆ ಆಸಕ್ತಿಯುಳ್ಳ ಕೆಲವರಿಗಾದರೂ, ಕವಿತೆಯನ್ನು ಬರೆಯುವುದು ಹೇಗೆ ಎನ್ನುವ ಪ್ರಥಮ ಪಾಠವನ್ನು ಯಾರಾದರೂ ಹೇಳಿಕೊಡುವುದಾದರೆ, ಅಂಥವರು ನಾಳೆ ಒಳ್ಳೆಯ ಕವಿಗಳಾಗಿ ರೂಪುಗೊಳ್ಳುವ ಸಾಧ್ಯತೆ ಇದೆಯಲ್ಲವೆ?  ಆದರೆ ಅದನ್ನು ಹೇಳಿಕೊಡುವವರು ಯಾರು?

ಅಂದಿನ ನನ್ನ ಪ್ರಶ್ನೆಗೆ ಉತ್ತರವಾಗಿ, ನನ್ನ ಕವಿ ಮಿತ್ರ ಶ್ರೀ ಸುಮತೀಂದ್ರ ನಾಡಿಗರು, ಆ ಕೆಲಸವನ್ನು ನಾನು ಮಾಡುತ್ತೇನೆ ಎಂದು ಕ್ರಿಯಾಶೀಲರಾದದ್ದರಿಂದ, ಕನ್ನಡದಲ್ಲಿ ಮೊಟ್ಟಮೊದಲ ಒಂದು ಪ್ರಯತ್ನವಾಗಿ ‘ಕಾವ್ಯವೆಂದರೇನು?’  – ಎಂಬ ಈ ಕಿರುಕೃತಿಯೊಂದು ಸಕಾಲಿಕವಾಗಿ ದೊರೆತಂತಾಗಿವೆ.

ಸುಮತೀಂದ್ರ ನಾಡಿಗರು ತಾವೇ ಸ್ವತಃ ಒಳ್ಳೆಯ ಕವಿಗಳು.  ಜತೆಗೆ ಅನೇಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಹೇಳಿರುವ ‘ಮೇಷ್ಟ್ರು’.  ಕಾವ್ಯವನ್ನು ಕುರಿತು, ಈಗಾಗಲೇ ಇರುವ ಸಾಹಿತ್ಯ ಚರ್ಚೆಯ ಪರಂಪರೆಯನ್ನು ಅಧ್ಯಯನದ ಮೂಲಕ ಅರಗಿಸಿಕೊಂಡವರು.  ಹೀಗಾಗಿ ಕಾವ್ಯದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿರುವ ತರುಣ ಕವಿಗಳಿಗೆ, ನಾಡಿಗರು ಹೇಳಿದ ಹಲವು ಮೌಲಿಕವಾದ ‘ಮೊದಲ ಪಾಠ’ಗಳು ಇಲ್ಲಿವೆ.  ಕವಿ ಎಂದರೇನು?  ಕವಿತೆಯ ಪರಿಕರಗಳು ಯಾವುವು?  ಕವಿಯ ಅನುಭವದ ಸ್ವರೂಪವೇನು?  ಕವಿತೆಯೊಂದನ್ನು ಅರ್ಥ ಮಾಡಿಕೊಳ್ಳುವುದು, ಆಸ್ವಾದಿಸುವುದು, ವಿಶ್ಲೇಷಿಸುವುದು ಹೇಗೆ?  – ಇತ್ಯಾದಿ ಹಲವು ಹತ್ತು ಸಂಗತಿಗಳನ್ನು ನಾಡಿಗರು ತಮ್ಮ ಸ್ವಾನುಭವದ ಮೂಲಮಾನದಲ್ಲಿ, ಅತ್ಯಂತ ಆತ್ಮೀಯವಾಗಿ ಹಾಗೂ ತಿಳಿಯಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಯವಾಗಿದೆ.

ನಾಡಿಗರು ಈ ಕೃತಿಗೆ ‘ಕಾವ್ಯವೆಂದರೇನು’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ.  ವಾಸ್ತವವಾಗಿ ಇದು ‘ಕವಿತೆ ಬರೆಯುವುದು ಹೇಗೆ?’ ಎನ್ನುವುದನ್ನು ಕುರಿತ ಕೆಲವು ಉಪಯುಕ್ತ ಸೂಚನೆಗಳನ್ನು ಒಳಗೊಂಡ ಕೃತಿ.  ಯಾಕೆಂದರೆ ‘ಕಾವ್ಯ ಎಂದರೇನು’ ಎಂಬುದು ಮೂಲತಃ ತಾತ್ವಿಕವಾದ, ಹಾಗೂ ಬಹುಕಾಲದಿಂದ ಕಾವ್ಯಾಸಕ್ತರು ಕೇಳಿಕೊಂಡು ಬಂದ, ಆದರೆ ಇಂದಿಗೂ ಸಮರ್ಪಕವಾದ ಉತ್ತರವನ್ನು ಕೊಡಲಾಗದ ಒಂದು ಪ್ರಶ್ನೆ.

ಕಾವ್ಯದ ಇತರ ನಿಯೋಗಗಳೇನೇ ಇರಲಿ, ನಿಷ್ಠುರ ಹಾಗೂ ವಾಸ್ತವ ಜಗತ್ತಿನ ಪ್ರಾಯೋಜನಿಕ ಏಕತಾನಕ್ಕೆ ಸಿಕ್ಕಿಕೊಳ್ಳದ ಹಾಗೆ, ತುಕ್ಕು ಹಿಡಿಯದ ಹಾಗೆ, ಕನಸುಗಳನ್ನು ಹಾಗೂ ಮನುಷ್ಯ ಏರಲಾಶಿಸುವ ಎತ್ತರದ ಹಂಬಲಗಳನ್ನು ಕಳೆದುಕೊಳ್ಳದ ಹಾಗೆ, ಜೀವನ ಪ್ರೀತಿಯಲ್ಲಿ ನಮ್ಮನ್ನು ತೊಡಗಿಸುತ್ತ ನಮ್ಮನ್ನು ಸೃಜನಾತ್ಮಕವಾಗಿ ಉಳಿಸುವುದು ಕಾವ್ಯ.  ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಕಾವ್ಯವನ್ನು ಬರೆಯುವುದಾಗಲೀ, ಅದರ ನಿಜವಾದ ಆಸ್ವಾದ ಹಾಗೂ ಅಧ್ಯಯನವಾಗಲೀ ಅಥವಾ ಅದನ್ನು ಕುರಿತ ಚರ್ಚೆಯಾಗಲೀ ಮೂಲತಃ ಸೃಜನಾತ್ಮಕ ಚಟುವಟಿಕೆಗಳೇ.  ಇಂಥ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆಪೇಕ್ಷಿಸುವ ತರುಣ ಚೇತನಗಳಿಗೆ, ಗೆಳೆಯ ಸುಮತೀಂದ್ರ ನಾಡಿಗರ ಈ ಕಿರುಕೃತಿ ಖಂಡಿತವಾಗಿಯೂ ಮಾರ್ಗದರ್ಶಕವಾಗಬಲ್ಲದೆಂಬುದು ನನ್ನ ತಿಳಿವಳಿಕೆಯಾಗಿದೆ.  ತುಂಬ ಅಗತ್ಯವಾದ ಈ ಕೃತಿರಚನೆಗೆ ಕೈ ಹಾಕಿದ ಸುಮತೀಂದ್ರ ನಾಡಿಗರನ್ನು ನಾನು ಕಾವ್ಯಾಸಕ್ತರ ಪರವಾಗಿ ಅಭಿನಂದಿಸುತ್ತೇನೆ.

ಕಾವ್ಯವೆಂದರೇನು? ಸುಮತೀಂದ್ರ ನಾಡಿಗ, ೧೯೯೪