ಪ್ರಿಯ ಶ್ರೀ ಚನ್ನಬಸವಣ್ಣನವರೆ,

ಕೆಲವು ದಿನಗಳ ಹಿಂದೆ ಅನಿರೀಕ್ಷಿತವಾಗಿ ಮನೆಗೆ ಬಂದು ನೀವು ‘ಲೋಹಿಯಾ ಪ್ರಕಾಶನ’ದ ಮೂಲಕ ಪ್ರಕಟಿಸುತ್ತಿರುವ ಬೀದರಿನ ತರುಣ ಕವಿ ವಿಕ್ರಮ ವಿಸಾಜಿಯ ‘ತಮಾಷಾ’ ಎಂಬ ಹೆಸರಿನ ಕವನ ಸಂಗ್ರಹವೊಂದಕ್ಕೆ ನಾನು ಮುನ್ನುಡಿಯಾಗಿ ನಾಲ್ಕು ಮಾತುಗಳನ್ನು ಬರೆಯಬೇಕೆಂದು ವಿಶ್ವಾಸದಿಂದ ಕೇಳಿಕೊಂಡಿರಿ.  ಕರ್ನಾಟಕದ ಪ್ರತಿಷ್ಠಿತ ಪ್ರಕಟಣಾ ಕೇಂದ್ರಗಳಿಂದ ದೂರವಿರುವ ಗುಲಬರ್ಗ-ರಾಯಚೂರು-ಬೀದರ್‌ಗಳಂಥ ಪರಿಸರದ ಎಷ್ಟೋ ಅರಳುವ ಪ್ರತಿಭೆಗಳನ್ನು ಗುರುತಿಸಿ, ಅವುಗಳ ಪ್ರಕಾಶನಕ್ಕೆ ತಕ್ಕ ವ್ಯವಸ್ಥೆಯನ್ನೂ ವಾತಾವರಣವನ್ನೂ ನಿರ್ಮಿಸುವ ಕಾಳಜಿಯುಳ್ಳ ನಿಮ್ಮಂಥವರ ಪ್ರಯತ್ನವನ್ನು ಮೊದಲಿನಿಂದಲೂ ಗಮನಿಸಿ ಮೆಚ್ಚಿಕೊಂಡಿರುವ ನಾನು, ನಿಮ್ಮ ಪ್ರೀತಿಯ ಕೋರಿಕೆಗೆ ಇಲ್ಲ ಎನ್ನದೆ, ನಾಲ್ಕು ಮಾತನ್ನು ಸಂತೋಷದಿಂದ ಬರೆಯುತ್ತಿದ್ದೇನೆ.

ಕನ್ನಡ ಕಾವ್ಯಕ್ಕೆ ಇದೊಂದು ಆತಂಕದ ಕಾಲ, ನಿರೀಕ್ಷೆಯ ಕಾಲ.  ಕಳೆದ ಅರ್ಧಶತಮಾನದಲ್ಲಿ ಹಲವು ಚಳುವಳಿಗಳ ಮೂಲಕ ಹಾದುಬಂದ ಕನ್ನಡದ ಸಮೃದ್ಧಿ ಹಾಗೂ ವೈವಿಧ್ಯತೆಯ ಕಾವ್ಯ ಪ್ರತಿಭೆ, ಈಗಾಗಲೇ ಒಂದು ಬಗೆಯ ನಿಲುಗಡೆಗೆ ಬಂದು ಹೊಸ ಹುಡುಕಾಟಗಳಲ್ಲಿ ತೊಡಗಿದ ಕಾಲ.  ಕನಸುಗಳಿಲ್ಲದ, ವಿಸ್ಮಯಗಳಿಲ್ಲದ, ಮಹತ್ವಾಕಾಂಕ್ಷೆಗಳಿಲ್ಲದ ಕಾಲ ಇದು.  ವಾಣಿಜ್ಯ ಸಂಸ್ಕೃತಿಯ  ಆಕ್ರಮಣದ ಎದುರು ನಮ್ಮ ಸೃಜನಶೀಲತೆ ಹಾಗೂ ವೈಚಾರಿಕತೆಗಳು ತತ್ತರಿಸುತ್ತ ನಿಂತ ಕಾಲ ಇದು.  ಇಂಥ ಸಂಧಿಕಾಲದಲ್ಲಿ ನೀವು ಈ ಹುಡುಗನ ಕವನ ಸಂಗ್ರಹವನ್ನು ಪ್ರಕಟಿಸುತ್ತಿದ್ದೀರಿ.

‘ತಮಾಷಾ’ ಎಂಬ ಕವನ ಸಂಗ್ರಹವನ್ನು, ನಿಮ್ಮ ಮೂಲಕ ಪ್ರಕಟಿಸುತ್ತಿರುವ ವಿಸಾಜಿ ಇಪತ್ಮೂರು ವರ್ಷದ ತರುಣ.  ಒಂದು ವಿಶೇಷವೆಂದರೆ ಇದು ಈ ತರುಣನ ಮೊದಲ ಕವನ ಸಂಕಲನವೇನಲ್ಲ; ನಾಲ್ಕನೆಯ ಕವನ ಸಂಗ್ರಹ.  ಇವನ ಮೊದಲ ಕವನ ಸಂಗ್ರಹ ‘ಗಾಳಿಪಟ’ (೧೯೮೮) ಪ್ರಕಟವಾದದ್ದು ಅವನ ಹನ್ನೆರಡನೆಯ ವಯಸ್ಸಿನಲ್ಲಿ; ಎರಡನೆಯ ಕವನ ಸಂಗ್ರಹ ‘ನನ್ನ ಸುತ್ತಲಿನ ಜನ’ (೧೯೯೦) ಪ್ರಕಟವಾದದ್ದು ಅವನ ಹದಿನಾಲ್ಕನೆಯ ವಯಸ್ಸಿನಲ್ಲಿ; ಮೂರನೆಯ ಕವನ ಸಂಗ್ರಹ ‘ನೀವೇಕೆ ಕತ್ತಲೆ ಕಡೆ’ (೧೯೯೪) ಪ್ರಕಟವಾದದ್ದು ಅವನ ಹದಿನೆಂಟನೆಯ ವಯಸ್ಸಿನಲ್ಲಿ: ಈಗ ಈ ಸಂಗ್ರಹ ‘ತಮಾಷಾ’ (೧೯೯೯) ಪ್ರಕಟವಾಗುತ್ತಿರುವಾಗ ಈತನ ವಯಸ್ಸು ಇಪ್ಪತ್ಮೂರು.  ನೀವು ಅವನ ಹಿಂದಿನ ಮೂರು ಕವನಸಂಗ್ರಹಗಳನ್ನು ಕೊಟ್ಟಾಗಲೇ ನನಗೆ ಗೊತ್ತಾದದ್ದು, ಈ ಕವಿಗೂ ಕಾವ್ಯಕ್ಕೂ ಅಂಟಿದ ನಂಟು ಹತ್ತು ವರ್ಷಕ್ಕೂ ಹಿಂದಿನದು ಎಂಬ ಸಂಗತಿ.  ನಾನು ಅವುಗಳನ್ನು ಓದಿ ನೋಡಿದೆ.  ತುಂಬ ಆಶ್ಚರ್ಯವಾಯಿತು,  ಸಂತೋಷವೂ ಆಯಿತು-ಇದೊಂದು ಸಹಜ ಕವಿತೆಯ ಸೆಲೆ; ಎಲ್ಲೋ ಅಕಸ್ಮಾತ್ ಪುಟಿದು, ಅನಂತರ ಇಂಗಿ ಹೋಗುವಂಥದಲ್ಲ, ಎಂಬ ಕಾರಣಕ್ಕೆ.  ಈ ಹುಡುಗನ ಮೈ-ಮನಸ್ಸು-ಕಣ್ಣುಗಳು ಚುರುಕಾಗಿವೆ ಎನ್ನಿಸಿತು.  ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಕಾವ್ಯಾಸಕ್ತರು ಈ ಹುಡುಗನ ಕಾವ್ಯ ಸಾಮರ್ಥ್ಯದ ಬಗ್ಗೆ ಬೆರಗಾಗಿದ್ದಾರೆ;  ಸದಾಶಯದ ಮಾತುಗಳನ್ನಾಡಿದ್ದಾರೆ.   ಮೊದಲಿನಿಂದಲೂ ಈ ಹುಡುಗನಿಗೆ ಕವಿಯಾಗುವ ಹಂಬಲ.  ‘ಗಾಳಿಪಟ’ ಎಂಬ ತನ್ನ ಮೊದಲ ‘ಶಿಶು ಕಾವ್ಯ’ ಸಂಗ್ರಹದಲ್ಲೇ ಒಂದೆಡೆ ‘ಅಮ್ಮ-ಮಗು’ ಎಂಬ ಕವಿತೆಯಲ್ಲಿ, ತಾನು ಮುಂದೆ ಬೆಳೆದು ದೊಡ್ಡವನಾದ ಮೇಲೆ ಏನಾಗುತ್ತೇನೆ ಎಂಬುದನ್ನು, ಅಮ್ಮನ ಪ್ರಶ್ನೆಗೆ ಉತ್ತರವಾಗಿ ‘ಹೌದು ಅಮ್ಮ, ನಾನು ಕವಿಯೆ ಆಗುವೆ’ ಎಂಬ ಸಂಕಲ್ಪ ವ್ಯಕ್ತವಾಗಿದೆ.  ಅಷ್ಟೆ ಅಲ್ಲ –

ಕವಿ ಇದ್ದರೆ ಇರಬೇಕು ಹ್ಯಾಂಗ
ರಾಷ್ಟ್ರಕವಿ ಕುವೆಂಪು ಅವರ ಹಾಂಗ

ಎಂದೂ ಉದ್ಘೋಷಿಸುತ್ತದೆ ಈ ಶಿಶು ಕವಿಯ ಮನಸ್ಸು-ಹನ್ನೆರಡನೆ ವಯಸ್ಸಿನಲ್ಲಿ.  ಅನಂತರ, ತನ್ನ ಹದಿನಾಲ್ಕನೆ ವಯಸ್ಸಿನಲ್ಲಿ ಪ್ರಕಟವಾದ ‘ನನ್ನ ಸುತ್ತಲಿನ ಜನ’ ಎಂಬ ಸಂಗ್ರಹದಲ್ಲಿ ತನಗೆ ಹಕ್ಕಿಯ ಹಾಗೆ ರೆಕ್ಕೆ ಬಂದರೆ –

ಊರಿಂದ ಊರಿಗೆ ಹೋಗುತ್ತಿದ್ದೆ
ಕವಿ ಕುವೆಂಪು ಅವರನ್ನು ನೋಡುತ್ತಿದ್ದೆ (ಪು. ೨೮)

ಎನ್ನುತ್ತಾನೆ.  ಇದು ಶಿಶು ಕಂಡ ಕನಸು.  ಆದರೆ ಎಂಥ ಕನಸು!  ಅನ್ನಿಸಿತು, ಈ ಹುಡುಗನ ಗುರಿ ದೊಡ್ಡದು.  ಈತ ತನ್ನ ೧೮ನೆಯ ವಯಸ್ಸಿನಲ್ಲಿ ಪ್ರಕಟಿಸಿದ ‘ನೀವೇಕೆ ಕತ್ತಲೆ ಕಡೆ’ ಎಂಬ ಕವನ ಸಂಗ್ರಹಕ್ಕೆ ಮುನ್ನುಡಿ ಬರೆದ ಚಂಪಾ ಅವರು, ಈ ಹುಡುಗನ ಕವಿತೆಯ ಇತಿಮಿತಿಗಳನ್ನು ಗುರುತಿಸಿ, ಆತ ಬೀದರ್ ಕನ್ನಡದಲ್ಲಿ ಬರೆಯುವ ಕಡೆಗೆ ಗಮನ ಕೊಡಬೇಕು ಎಂದು ಸೂಚಿಸುತ್ತಾರೆ.  ತುಂಬ ಒಳ್ಳೆಯ ಸೂಚನೆ.  ಆದರೆ ಈ ಹುಡುಗನ ಕಾವ್ಯ ಭಾಷೆ ಕುವೆಂಪುವಿನದೂ ಅಲ್ಲ, ಬೇಂದ್ರೆಯವರದೂ ಅಲ್ಲ; ಬೀದರಿನದೂ ಅಲ್ಲ.  ಬಹುಶಃ ಸಮಕಾಲೀನ ಕಾವ್ಯ ಭಾಷೆಯ ಪರಿಚಯದಿಂದ ರೂಪುಗೊಂಡ, ಯಾವ ಪ್ರಾದೇಶಿಕತೆಯ ಲಕ್ಷಣಗಳೂ ಅಷ್ಟಾಗಿ ಕಾಣದ, ಒಂದು ಭಾಷೆ.  ಆತ ಯಾವ ಭಾಷೆಯನ್ನಾದರೂ ಬಳಸಲಿ, ಆತನಿಗೆ ತನ್ನದೇ ಆದೊಂದು ಅಭಿವ್ಯಕ್ತಿಯ ಕ್ರಮವಿದೆ ಅನ್ನುವುದು ಮುಖ್ಯ.  ನನಗನ್ನಿಸುತ್ತದೆ, ಈ ಹುಡುಗನಿಗೆ ತನ್ನದೇ ಆದೊಂದು ನಿರೂಪಣೆಯ ಕ್ರಮವಿದೆ ಎಂದು.  ಭಾಲ್ಕಿಯ ಪ್ರಾಥಮಿಕ ಶಾಲೆಯ ಏಳನೆ ತರಗತಿಯ ವಿದ್ಯಾರ್ಥಿಯಾಗಿದ್ದಾಗ ಪ್ರಕಟಗೊಂಡ ಅವನ ಮೊದಲ ಕವನ ಸಂಗ್ರಹ ‘ಗಾಳಿಪಟ’ (೧೯೮೮)ಲ್ಲಿ, ‘ನೀನು ಇಲ್ಲದಿದ್ದರೆ’ ಎಂಬ ಶೀರ್ಷಿಕೆಯ ಕವಿತೆ ಹೀಗಿದೆ:

ನೀನು ಇಲ್ಲದಿದ್ದರೆ
ಪೆನ್ನಿನಲ್ಲಿ ಕಡ್ಡಿ ಇಲ್ಲದ ಹಾಗೆ
ನೀನು ಇಲ್ಲದಿದ್ದರೆ
ಕುರ್ಚಿಗೆ ಕಾಲು ಇಲ್ಲದ ಹಾಗೆ
ನೀನು ಇಲ್ಲದಿದ್ದರೆ
ರೇಡಿಯೋದಲ್ಲಿ ಸೌಂಡ್ ಇಲ್ಲದ ಹಾಗೆ
ನೀನು ಇಲ್ಲದಿದ್ದರೆ
ಟಿ.ವಿ.ಯಲ್ಲಿ ಚಿತ್ರ ಇಲ್ಲದ ಹಾಗೆ
ನೀನು ಇಲ್ಲದಿದ್ದರೆ
ಹಾಲಿನ ಮೇಲೆ ಕೆನೆ ಇಲ್ಲದ ಹಾಗೆ
ನೀನು ಇಲ್ಲದಿದ್ದರೆ
ಪುಸ್ತಕದಲ್ಲಿ ಅಕ್ಷರ ಇಲ್ಲದ ಹಾಗೆ (ಪು. ೧೦)

ಇದನ್ನು ಕೇವಲ ‘ಶಿಶುಗೀತೆ’ ಎನ್ನಲಾದೀತೆ?  ತನಗೆ ಪ್ರಿಯವಾದ ವ್ಯಕ್ತಿ (ತಂದೆಯೋ, ತಾಯಿಯೋ, ಅಕ್ಕನೋ, ತಂಗಿಯೋ, ಗೆಳೆಯನೋ) ಇಲ್ಲದಿದ್ದರೆ ಆಗುವ ಶೂನ್ಯ ಅಥವಾ ಕೊರತೆಯನ್ನು ಹಲವು ಪ್ರತೀಕಗಳ ಮೂಲಕ ಹಿಡಿದಿಡುವ ಈ ಪ್ರತಿಭೆ ಸಾಮಾನ್ಯವಾದದ್ದಲ್ಲ.  ಹಾಗೆಯೇ ಇಂಥ ಕವಿತೆಯ ಹುಟ್ಟಿಗೆ ಹಿನ್ನೆಲೆಯಾದ ಆತನ ಮನೆಯ ಸಾಹಿತ್ಯಕ ವಾತಾವರಣ ಮತ್ತು ಪ್ರಕಾಶನದ ಅವಕಾಶ ಬಹುಜನಕ್ಕೆ ಲಭ್ಯವಾಗತಕ್ಕವುಗಳಲ್ಲ.  ಅದು ವಿಕ್ರಮನ ಅದೃಷ್ಟ ಕೂಡಾ.

* * *

ಈ ಪೂರ್ವಪೀಠಿಕೆಯಿಂದ ಪ್ರಸ್ತುತ ಕವನಸಂಗ್ರಹಕ್ಕೆ ಬರೋಣ.

‘ತಮಾಷಾ’ – ಶೈಶವವನ್ನು ದಾಟಿ ತಾರುಣ್ಯಕ್ಕೆ ಕಾಲಿಟ್ಟ ವಿಸಾಜಿಯ ನಾಲ್ಕನೆಯ ಕವನ ಸಂಗ್ರಹ.  ಇದಕ್ಕೆ ಹಿಂದಿನ (ಹದಿನೆಂಟರ ಹರೆಯದಲ್ಲಿ ಪ್ರಕಟವಾದ) ಮೂರನೆಯ ಕವನ ಸಂಗ್ರಹ ‘ನೀವೇಕೆ ಕತ್ತಲೆ ಕಡೆ’ ಎಂಬ ಸಂಗ್ರಹದಲ್ಲಿ ಸಾಕಷ್ಟು ಪ್ರೌಢತೆಯ ಲಕ್ಷಣಗಳು ಕಾಣಿಸಿಕೊಂಡಿವೆ – ಸುತ್ತಲಿನ ವಿದ್ಯಮಾನಗಳಿಗೆ ವೈಚಾರಿಕವಾಗಿ ಪ್ರತಿಕ್ರಿಯಿಸುವ ಕ್ರಮದಲ್ಲಿ.  ಇಲ್ಲೂ ತನ್ನ ಕವಿತೆ

ಕಪ್ಪು ಮೋಡದಲಿ ಸಿಕ್ಕಿ
ಕಪ್ಪಾಗಿ ಬಿಡುವ ಸೂರ್ಯನಾಗದೆ
ಅದನ್ನು ಸೀಳಿ ಹೊರಬರುವಂತಾಗಲಿ
ನನ್ನ ಕವನ                           (ಪುಟ ೧)

ಎಂಬ ಸಂಕಲ್ಪ  ಕ್ರಿಯಾಶೀಲವಾಗಿದೆ.  ಅನುಭವಪ್ರಪಂಚ ವಿಸ್ತಾರವಾಗುತ್ತಿದೆ.  ಒಂದು ರೀತಿಯಲ್ಲಿ ಹಿಂದಿನ ಕವನ ಸಂಗ್ರಹದ ಕೆಲವು ಆಶಯಗಳು ಇಲ್ಲಿಯೂ ಮುಂದುವರಿದಿವೆ.  ‘ತಮಾಷಾ’ ಎಂಬ ಕವಿತೆ, ತಮಾಷಾ ಎಂಬ ನರ್ತನಪ್ರಭೇದದ ವೀಕ್ಷಣೆಯ ಸಂದರ್ಭದಲ್ಲಿ, ನರ್ತಕಿಯ ಹಾವ-ಭಾವ-ಭಂಗಿಗಳಿಗೆ ಹದಿಹರೆಯದ ಮನಸ್ಸು ಸ್ಪಂದಿಸಿದ ಜೀವ ಸಂಭ್ರಮಗಳನ್ನು ತುಂಬ ಸೊಗಸಾಗಿ, ಪ್ರಾಮಾಣಿಕವಾಗಿ ಹಾಗೂ ತೀವ್ರವಾಗಿ ಹಿಡಿದಿಡುವ ಕವಿತೆಯಾಗಿದೆ.  ನನಗೆ ತುಂಬ ಖುಷಿ ಕೊಟ್ಟ ಪದ್ಯ ಇದು.  ಹಾಗೆಯೇ ‘ನೀನಿರದಿದ್ದರೆ’ ಎಂಬ ಇನ್ನೊಂದು ಕವಿತೆಯ ಸೊಗಸೇ ಸೊಗಸು.  ತಾರುಣ್ಯದ ಇಂಥ ಉಲ್ಲಾಸ-ಉತ್ಸಾಹಗಳನ್ನು ಕಟ್ಟಿಕೊಡುವ ಕವಿತೆಗಳು ಈ ಸಂಗ್ರಹದಲ್ಲಿ ಸಾಕಷ್ಟಿವೆ.  ಆದರೆ ಈ ಸಂಕಲನದ ಇನ್ನೊಂದು ಕವಿತೆ ‘ಮೊಗಲ ಅಂತಃಪುರದ ಆರ್ತನಾದಗಳು’: ಇದರ ವಸ್ತು, ಆಶಯ, ಅತ್ಯಂತ ಚಿತ್ತವೇಧಕವಾದದ್ದು.  ಆದರೆ ‘ತೋರಿರೆ’ ‘ಬೀಸಿರೆ’ ‘ನಿಲಿಸಿರೆ’ ಎಂಬ ಮುಕ್ತಾಯಗಳು ಒಂದು ಬಗೆಯ ಶಿಥಿಲತೆಯಿಂದಾಗಿ, ಬಂಧದ ಬಿಗಿತಪ್ಪಿದ ಹಾಗೆ ತೋರುತ್ತದೆ.  ವಾಸ್ತವವಾಗಿ ಇಲ್ಲಿ ನಾಲ್ಕುಪಾದಗಳ ಪದ್ಯಬಂಧ, ಕವಿಯ ಕೈಗೆ ದಕ್ಕದೆ ಹೋದದ್ದರ ಪರಿಣಾಮ ಇದು ಎಂದು ಊಹಿಸಲು ಕಷ್ಟವಾಗುವುದಿಲ್ಲ.  ಉಳಿದಂತೆ  ಮುಕ್ತ ಛಂದೋ ವಿಧಾನದಲ್ಲಿ ಸಹಜವಾಗಿ ಸಲೀಸಾಗಿ ಬರೆಯುವ ಈ ಕವಿ, ‘ಭಾವಗೀತಾತ್ಮಕ’ವಾದ ಪರಿಚಿತ ಬಂಧವನ್ನು ನಿರ್ವಹಿಸುವಲ್ಲಿ ಯಾಕೆ ಹೀಗೆ ಶೈಥಿಲ್ಯಕ್ಕೆ ಪಕ್ಕಾಗುತ್ತಾನೆ!  ಉತ್ತರವನ್ನು ಹುಡುಕಲು ಕಷ್ಟಪಡಬೇಕಾಗಿಲ್ಲ.  ವಿಸಾಜಿಯಂಥ ತರುಣರು, ಈ ಕಳೆದ ಕಾಲು ಶತಮಾನದ ಕಾಲದಲ್ಲಿ ಕಾವ್ಯಲೋಕವನ್ನು ಪ್ರವೇಶಿಸಿದಾಗ, ಅವರೆದುರಿಗೆ ನೆಲಸಿದ ಕಾವ್ಯ ಫ್ರೀವರ್ಸಿನ ರೂಪದ್ದು.  ಹೀಗಾಗಿ ಬಹುಮಂದಿಗೆ, ಈ ಫ್ರೀವರ್ಸ್ ಅತ್ಯಂತ ಸುಲಭವಾದ ಹಾಗೂ ಆಕರ್ಷಕವಾದ ಒಂದು ರೂಪವಾಗಿ ತೋರಿದ್ದು ತೀರಾ ಸಹಜವಾಗಿದೆ.  ಹೀಗಾಗಿ ಯಾವ ಕವಿಯ ಕವನಸಂಗ್ರಹವನ್ನು ತೆರೆದರೂ ಆಡುಮಾತಿನ ಧಾಟಿಯ ಮುಕ್ತ ಛಂದೋರಚನೆಗಳೇ.  ಈ ಬರಹದಲ್ಲಿ ಒಂದು ‘ಬಂಧ’ವನ್ನು ಕಾಯ್ದುಕೊಂಡು ಬಂದವರಿಗಿಂತ, ತಮ್ಮ ಕವಿತೆಯನ್ನು ತಮ್ಮ ಅನಿಸಿಕೆ, ಭಾವ ಭಾವನೆಗಳ ‘ಹರಟೆ’ಯಂತೆಯೋ ‘ರಗಳೆ’ಗಳಂತೆಯೋ ಮಾಡಿದವರೇ ಹೆಚ್ಚು.  ಇದರ ಕಷ್ಟ ಏನೆಂದರೆ, ನವೋದಯದ ಪದ್ಯಬಂಧಗಳನ್ನು ಮತ್ತೆ ಪುನರಾವರ್ತಿಸುವುದರಿಂದ, ಕೇವಲ ಅನುಕರಣಶೀಲರಾಗಿಬಿಡುವ ಆತಂಕ ಒಂದು ಕಡೆ; ನವೋದಯದ ಪದ್ಯ ಬಂಧಗಳಿಗಿಂತ ಭಿನ್ನವಾದ, ‘ಪದ್ಯಬಂಧ’ಗಳನ್ನು ಆವಿಷ್ಕಾರ ಮಾಡುವುದು ಹೇಗೆ ಎಂಬ ಸವಾಲು.  ಈ ಎರಡರ ಮಧ್ಯೆ ಹೇಗೋ ಈ ಮುಕ್ತ ಛಂದಸ್ಸಿನ ಬರಹವೇ ನಡೆದಷ್ಟು ಕಾಲ ನಡೆಯಲಿ ಎಂಬ ‘ಸಂತೃಪ್ತಿ’ಯಲ್ಲಿ ನಿಂತವರೇ ಹೆಚ್ಚು.  ಇಂಥ ಹೊತ್ತಿನಲ್ಲಿ ಮತ್ತೆ ಇಡಿಯಾಗಿ ಕಾವ್ಯದ ರೂಪವನ್ನೇ ಬದಲಾಯಿಸಿಬಿಡುವ ಪ್ರಯೋಗ ಪ್ರತಿಭೆಗೆ ಕನ್ನಡ ಕಾವ್ಯ ಕಾಯುತ್ತಿದೆ.

‘ಮೊಗಲ್ ಅಂತಃಪುರದ ಆರ್ತನಾದಗಳು’ ‘ಬಾಜೀರಾಯನ ಪ್ರೀತಿ’ ‘ರಾಣಾಬಾಯಿಯ ಹಾಡು’ ‘ಗವಾನನ ಮದರಸಾ’ ‘ನದೀ ತೀರಕ್ಕೆ ಬಂದ ಗೌತಮ’ ‘ಮಾರ್ಕ್ಸ್‌ನ ನೆನಪಿನಂಗಳದಲ್ಲಿ ಜೆನ್ನಿ’ – ಇಂಥ ಕವಿತೆಗಳ ಮೂಲಕ ವಿಸಾಜಿ ಇತಿಹಾಸ ಹಾಗೂ ಪುರಾಣಗಳನ್ನು ವರ್ತಮಾನದ ನೆಲೆಯಲ್ಲಿ ಅರ್ಥೈಸುವ ಕ್ರಮ ಸಕಾಲಿಕವಾಗಿದೆ.  ಯಾಕೆಂದರೆ, ಕನ್ನಡ ಕವಿತೆ ಕಳೆದ ಒಂದೂವರೆ ದಶಕಗಳ ಕಾಲಮಾನದಲ್ಲಿ, ತನ್ನ ಪ್ರೇರಣೆಗೆ ಹಿಂದಿನಂತೆ ಅನ್ಯ ದೇಶೀಯವಾದ ಯಾವ ಮಾದರಿಗಳನ್ನೂ ಅವಲಂಬಿಸದೆ, ತಾನು ನಿಂತ ನೆಲದ ಜಾನಪದ-ಪುರಾಣ-ಇತಿಹಾಸಗಳಲ್ಲಿ ಬೇರೂರಿ ಅರಳಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.  ಆದರೆ ಇಂಥ ವಸ್ತುಗಳ ನಿರ್ವಹಣೆಯಲ್ಲಿ ತಕ್ಕ ಕಲಾತ್ಮಕತೆ ಹಾಗೂ ವಾಚ್ಯವಿಮುಖತೆಯಿಂದ ಅಭಿವ್ಯಕ್ತಿಗೆ ಪ್ರಾಪ್ತವಾಗುವ ಧ್ವನಿರಮ್ಯತೆಯ ಕಡೆ ಈ ಕವಿ ಇನ್ನಷ್ಟು ಗಮನ ಕೊಡುವುದು ಅಗತ್ಯವಾಗಿದೆ.  ಅಷ್ಟೆ ಅಲ್ಲ, ಇತ್ತೀಚೆಗಿನ ಬರೆಹಗಾರರು ತಾವು ಯಾವ ಭಾಷೆಯ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದಾರೆಯೋ, ಆ ಸಾಹಿತ್ಯ ಪರಂಪರೆಯೊಂದಿಗೆ ನಿರಂತರವಾದ ಸಂವಾದವನ್ನೇರ್ಪಡಿಸಿಕೊಳ್ಳುವುದು ತಮ್ಮ ಸೃಜನಶೀಲತೆಯ ನವೀಕರಣಕ್ಕೆ ಎಷ್ಟೊಂದು ಮುಖ್ಯವಾದದ್ದು ಎಂಬುದನ್ನು ತಿಳಿದುಕೊಂಡಂತೆ ತೋರುವುದಿಲ್ಲ.  ವಿಸಾಜಿಯಂಥವರು ಹಾಗೂ ಸಮಕಾಲೀನರು ಈ ಕಡೆಗೆ ತಮ್ಮ ಗಮನವನ್ನು  ಹರಿಸಬೇಕಾಗಿದೆ.

ಇಪ್ಪತ್ತನೆಯ ಶತಮಾನದ ತುತ್ತತುದಿಯಲ್ಲಿ, ಆಧುನಿಕ ಕನ್ನಡ ಸಾಹಿತ್ಯದ ನಾಲ್ಕನೆಯ ತಲೆಮಾರಿನ ಕಾವ್ಯ ಸಂದರ್ಭದಲ್ಲಿ, ಹೊಸದನಿಗಳಿಗೆ ಕಾತರಿಸುವ ಕಿವಿಗೆ, ಕರ್ನಾಟಕದ ಮೂಲೆಯಂತಿರುವ ಬೀದರ್‌ನ ಪರಿಸರದಲ್ಲಿ ಹೊಮ್ಮುವ ವಿಕ್ರಮ ವಿಸಾಜಿಯ ಕವಿತೆಯ ದನಿ, ತನ್ನ ಹೊಸತನ ಹಾಗೂ ಲವಲವಿಕೆಯಿಂದ ನಾಳಿನ ಕವಿತೆಯ ಬಗ್ಗೆ ಭರವಸೆಯನ್ನು ಮೂಡಿಸುವಂತಾಗಿದೆ.  ಅಷ್ಟೇ ಅಲ್ಲ –

ಏಳು ಎದ್ದೇಳು
ಈ ಜಗವ ಮುಟ್ಟು
ಇದರೆಲ್ಲ ಒಳ ಹೊರಗುಗಳ ತಟ್ಟು
ಬಿಗಿಯಾಗಿ ವಿಶ್ವವನು ಅಪ್ಪಿಕೋ         (ಪು. ೩೮)

ಎಂಬ ಅದಮ್ಯವಾದ ಜೀವನಪ್ರೀತಿಯೇ ಈ ತರುಣಕವಿಯ ನಾಳಿನ ದಾರಿದೀಪವಾಗಿ ಅವನನ್ನು ಮುನ್ನಡೆಸುವ ಸಂಕಲ್ಪವಾಗಿದೆ.

ಪ್ರಿಯ ಚನ್ನಬಸವಣ್ಣನವರೆ, ನಿಜವಾದ ಅರ್ಥದಲ್ಲಿ ಜನಪರ ಕಾಳಜಿಗಳನ್ನುಳ್ಳ ಮತ್ತು ಮಹಾ ವಿಚಾರವಂತರಾದ ರಾಮನೋಹರ ಲೋಹಿಯಾ ಅವರ ಹೆಸರಿನಲ್ಲಿ, ನೀವು ನಡೆಸುತ್ತಿರುವ ಈ ಪ್ರಕಾಶನದ ಮೂಲಕ, ವಿಕ್ರಮ ವಿಸಾಜಿಯಂಥ ತರುಣ ಕವಿಗಳ ಕವನ ಸಂಗ್ರಹವನ್ನು ಪ್ರಕಟಿಸುತ್ತಿರುವ ನಿಮಗೆ ನನ್ನ ಅಭಿನಂದನೆಗಳು ಮತ್ತು ವಿಸಾಜಿಗೆ ಶುಭಾಶಯಗಳು.

ತಮಾಷಾ : ವಿಕ್ರಮ ವಿಸಾಜಿ, ೨೦೦೦