ಕನ್ನಡ ಕಾವ್ಯ ಒಂದು ನಿಲುಗಡೆಗೆ ಬಂದು ಸುಮಾರು ಒಂದು ದಶಕವಾಯಿತೆಂದೇ ಕಾಣುತ್ತದೆ.  ಹೊಸ ಹುಡುಕಾಟದ ಈ ಸಂಧಿ ಕಾಲದಲ್ಲಿ ಮೊನ್ನೆ ಬಂದು ಹೋದ ತುರ್ತು ಪರಿಸ್ಥಿತಿಯ ಕರಾಳ ಕತ್ತಲೆಯಲ್ಲಿ, ಕನ್ನಡ ಕಾವ್ಯದಲ್ಲಿ ಕೆಲವು ಮಿಂಚಿನ ಗೆರೆಗಳು ಹೊಳೆದದ್ದುಂಟು.  ಚಂದ್ರಶೇಖರ ಪಾಟೀಲರ ‘ಗಾಂಧೀ ಸ್ಮರಣೆ’ಯ ಕೆಲವು ಪದ್ಯಗಳು.  ಅಡಿಗರ ಕೆಲವು ಕವಿತೆಗಳು.  ಕೆ.ಎಸ್.ನ ಅವರ ‘ತೆರೆದ ಬಾಗಿಲು’ ಇವುಗಳನ್ನು ಪ್ರಾಸಂಗಿಕವಾಗಿ ಇಲ್ಲಿ ಹೆಸರಿಸಬಹುದು.  ಆದರೆ ನಿಜವಾದ ಲೇಖಕನಿಗೆ ತುರ್ತು ಒಳಗಿನಿಂದ ಬರಬೇಕು; ಹೊರಗಿನಿಂದ ಅಲ್ಲ.  ಇವತ್ತು ಅತ್ಯಂತ ಸುಲಭವಾಗಿ ದೊರೆಯಬಹುದಾದ ಹೆಸರು, ಹಣ ಇವುಗಳೆ ಹಲವರ ಪಾಲಿಗೆ ಒಂದು ಬಗೆಯ ತುರ್ತನ್ನು ನಿರ್ಮಿಸಬಲ್ಲವೇನೋ ಅನ್ನಿಸಿದೆ.  ಆದರೆ ಯಾವ ಲಾಭದಾಯಕ ಪರಿಸ್ಥಿತಿಗೂ ತಮ್ಮನ್ನು ಮಾರಿಕೊಳ್ಳಲು ಒಪ್ಪದ ಮತ್ತು ವಿವಿಧ ಪ್ರಚಾರ ಮಾದ್ಯಮಗಳಿಂದ ಸುಲಭವಾಗಿ ಬರುವ ಹೆಸರು – ಹಣಗಳಿಗೆ ಮರುಳಾಗದ, ಗಟ್ಟಿಯಾದ ನಿಲುವಿನ ವ್ಯಕ್ತಿತ್ವಗಳಿಂದ ಮಾತ್ರ ನಿಜವಾದ ಸೃಜನಾತ್ಮಕ ಹಾಗೂ ಮಾರ್ಗದರ್ಶಕ ನಿರ್ಮಿತಿ ಸಾಧ್ಯವಾಗುತ್ತದೆ.  ಕುವೆಂಪು ಬೇಂದ್ರೆ ಇವರ ತಲೆಮಾರಿನ ಲೇಖಕರಿಗೆ ಇದೆಲ್ಲದರ ಬಗೆಗೆ ಇದ್ದ ‘ದಿವ್ಯ ನಿರ್ಲಕ್ಷೆ’ಯನ್ನು ಈಗ ಎಲ್ಲಿಂದ ತರೋಣ?

ಕನ್ನಡ ಕಾವ್ಯ ಮುಂದೇನು ಎಂಬ ಸಂದೇಹದ ಸ್ತಬ್ಧ ನೆಲೆಗೆ ನಿಂತ ಈ ಕೆಲವು ವರ್ಷಗಳಲ್ಲಿ ಸಾಮಾಜಿಕ ಕಳಕಳಿಯನ್ನು, ಕೇಂದ್ರವಾಗಿರಿಸಿಕೊಂಡ ಒಂದು ಅಭಿವ್ಯಕ್ತಿಯ ಚಳುವಳಿ ಹುಟ್ಟಿಕೊಂಡದ್ದು ವಿಶೇಷದ ಸಂಗತಿಯಾಗಿದೆ.  ಇದು ಸಾಹಿತ್ಯಕ್ಕೆ ತಂದ ಹೊಸತನಗಳನ್ನೂ ಆಯಾಮಗಳನ್ನೂ ನಿರ್ಲಕ್ಷಿಸುವಂತಿಲ್ಲ.  ತಾವಲ್ಲದೆ ಇನ್ನಾರೂ ಘೋಷಣೆಗಳನ್ನು ಕೂಗಲೇಬಾರದು ಎಂದುಕೊಂಡ ಕೆಲವರು, ಸಾಮಾಜಿಕ ಪ್ರಜ್ಞೆ, ದಲಿತ ಪ್ರಜ್ಞೆ, ಇತ್ಯಾದಿಗಳನ್ನು ಒಂದು ಬಗೆಯ ಗುಮಾನಿಯಿಂದ ನೋಡಿದ್ದಿರಬಹುದು.  ಆದರೆ ಸಾಮಾಜಿಕ ಪ್ರಜ್ಞೆ, ದಲಿತ ಪ್ರಜ್ಞೆ, ಇತ್ಯಾದಿಗಳು ವಾಸ್ತವವಾಗಿ ಯಾರ ಘೋಷಣೆಯ ವಿಷಯಗಳೂ ಅಲ್ಲ.  ಅವು ಬದಲಾದ ಪರಿಸರದ ವಾಸ್ತವ ಸಂಗತಿಗಳು.  ನಿಜವಾದ ಅರ್ಥದಲ್ಲಿ ಇದು ನಮ್ಮ ಸಮಾಜವು ಒಂದು ತಿರುವನ್ನು ಪಡೆಯುತ್ತಿರುವ ಕಾಲವಾಗಿದೆ.  ವರ್ಗ ವರ್ಗಗಳ ಹೋರಾಟದ ಮೂಲಕ, ಅವೈದಿಕ ಆಂದೋಲನಗಳ ಮೂಲಕ, ನಮ್ಮ ಇಡೀ ಸಂಸ್ಕೃತಿಯ ಇತಿಹಾಸವನ್ನು ಪುನರಾಲೋಚಿಸುವುದರ ಮೂಲಕ, ಇದೀಗ ಬಾಯಿ ಪಡೆದ ಸಮಾಜದ ವಿವಿಧ ಸ್ತರಗಳಿಂದ ಬಂದ ಲೇಖಕರು ತಮ್ಮ ಅನುಭವಗಳನ್ನು ತೋಡಿಕೊಳ್ಳುವುದರ ಮೂಲಕ – ನಮ್ಮಸಾಹಿತ್ಯಕ್ಕೆ ಹಿಂದೆಂದೂ ಇಲ್ಲದ ಒಂದು ಸಮಗ್ರತೆಯನ್ನು ತಂದುಕೊಡುವ ಪ್ರಯತ್ನ ನಡೆದಿದೆ ಎಂಬುದನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ.  ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಎಚ್ಚರ, ಸಾಮಾಜಿಕ ಜವಾಬ್ದಾರಿ, ಸಾಮಾಜಿಕ ಪ್ರಜ್ಞೆ – ಇತ್ಯಾದಿಗಳು ಹೇಗೆ ಸಾಹಿತ್ಯದ ದಿಕ್ಕನ್ನೆ ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ವಿವೇಕವಿದ್ದ ಯಾರೂ ಕಡೆಗಣಿಸಲಾರರು.  ಹೀಗೆಂದಾಗ, ಈ ಬಗೆಯ ದೃಷ್ಟಿಗಳು ಇದುವರೆಗೂ ಇರಲೇ ಇಲ್ಲ, ಏನಿದ್ದರೂ ಇವೆಲ್ಲ ಈಗ ರೂಪು ತಾಳುತ್ತಿವೆ ಎಂದು ಅರ್ಥವಲ್ಲ.  ಸಾಹಿತ್ಯಕ್ಕೆ ಸಂಬಂಧಪಟ್ಟ ಸಮಸ್ತ ನಾವೀನ್ಯತೆ, ಎಚ್ಚರ ಇತ್ಯಾದಿಗಳು ತಮ್ಮಿಂದಲೇ ಪ್ರಪ್ರಥಮವಾಗಿ ಸಂಭವಿಸಿದವುಗಳೆಂಬ ಭ್ರಮೆಯಲ್ಲಿ ಬದುಕುವ ಜನಕ್ಕೆ ತಮ್ಮ ಪರಿಸರದ ಯಾವ ಹೊಸ ಎಚ್ಚರವೂ ಪ್ರತಿಪಕ್ಷದಂತೆ ಕಾಣುವುದು ಆಶ್ಚರ್ಯವಲ್ಲ.  ಆದರೆ ಬದಲಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ, ಅದೊಂದು ಅನಿವಾರ್ಯತೆ ಎಂದು ಒಪ್ಪಿಕೊಳ್ಳದೆ ನಾವು ಯಾರೂ ಬದುಕುವುದಕ್ಕೆ ಸಾಧ್ಯವೇ ಇಲ್ಲ.

ಆದರೆ ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ ಅಭಿವ್ಯಕ್ತವಾಗುತ್ತಿರುವ ಪರದಾಟಗಳು, ಪ್ರತಿಕ್ರಿಯೆಗಳು ಅಥವಾ ಯಾವುದೇ ಬಗೆಯ ರೊಚ್ಚು, ಐತಿಹಾಸಿಕವಾಗಿ ಸಮರ್ಥ ನೀಯವಾದವುಗಳೆಂದುಕೊಂಡರೂ, ಎಷ್ಟೋ ವೇಳೆ ಅವು ಕಾವ್ಯವಾಗದೆ, ದಾಖಲೆಗಳೋ, ಉಪನ್ಯಾಸಗಳೋ ಆಗುತ್ತಿವೆ ಎಂಬುದನ್ನು, ಅಗತ್ಯವಾದ ಒಂದು ಸಂಯಮ, ಪರಿಭಾವನೆ, ಚಿಂತನೆಯ ಹಿನ್ನೆಲೆಗಳು ಅಷ್ಟೇ ಮುಖ್ಯವೆಂಬುದನ್ನು ನಮ್ಮ ಹೊಸ ‘ಕ್ರಾಂತಿಕಾರಿ’ ಲೇಖಕರು ಇನ್ನೂ ತಿಳಿಯಬೇಕಾಗಿದೆ.  ಇದರಿಂದಾಗಿಯೇ ಈ ಹೊಸ ಅಭಿವ್ಯಕ್ತಿಯ ಸಂಧಿಕಾಲದಲ್ಲಿ ಪ್ರಕಟವಾಗುತ್ತಿರುವ ಯಾವುದೇ ಕವಿತೆಯೂ ಕೆಲವಂಶಗಳಲ್ಲಿ ‘ಬೇರೆ’ಯೆಬಂತೆ ಒಂದೊಂದು ಸಲ ತೋರಿದರೂ, ಒಟ್ಟಿನಲ್ಲಿ ಕೊಡಬೇಕಾದ್ದನ್ನು ಕೊಡದೆ  ಅತೃಪ್ತಿಯಲ್ಲಿಯೆ ನಿಲ್ಲಿಸಿದ ಅನುಭವವಾಗುತ್ತದೆ.  ಈ ಪರಿಸರದಲ್ಲಿ ನನ್ನ ಮಿತ್ರರಾದ ಶ್ರೀ ಎಚ್.ಎಸ್. ವೆಂಕಟೇಶಮೂರ್ತಿಯವರ ಈ ಮೂರುಕವಿತೆಗಳು, ನನ್ನ ಮಟ್ಟಿಗೆ ಈ ಅರಕೆಯನ್ನು ತಕ್ಕಮಟ್ಟಿಗೆ ತುಂಬುವ ಹೊಸ ಪ್ರಯೋಗಗಳಾಗಿ ಕಾಣಿಸುತ್ತವೆ.  ಈ ಕವಿತೆಗಳಲ್ಲಿ, ನವ್ಯಕಾವ್ಯದ ಕಾಲದಲ್ಲಿ ನಾವು ಸುಮ್ಮನೆ ಕಣ್ಣುಮುಚ್ಚಿಕೊಂಡು ಕಡೆಗಣಿಸಿದ ಮತ್ತು ಕಳೆದುಕೊಂಡ, ಕಾವ್ಯಕ್ಕೆ ಅಗತ್ಯವಾದ ಎಷ್ಟೋ ಒಳ್ಳೆಯ ಅಂಶಗಳನ್ನು ವೆಂಕಟೇಶಮೂರ್ತಿಯವರು ಮತ್ತೆ ಕಾವ್ಯಕ್ಕೆ ತುಂಬುವ ಪ್ರಯತ್ನವನ್ನು ನಡೆಯಿಸಿದ್ದಾರೆ.  ನವ್ಯಕಾವ್ಯ, ಕಾವ್ಯವನ್ನು ಸಂಗೀತದಿಂದ ಪಾರುಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಕಾವ್ಯದ ಭಾಷೆಯನ್ನು ಆಡುಮಾತಿನ ಸಮೀಪಕ್ಕೆ ತಂದಿತು.  ನಿಜ.  ಆದರೆ ಈ ರಭಸದಲ್ಲಿ ಭಾವಗೀತಾತ್ಮಕವಾದ ನಯ, ನವುರುಗಳನ್ನೆ ತಿರಸ್ಕಾರ ಮಾಡಿತು.  ಅಧ್ಯಾತ್ಮದ, ಮುಖ್ಯವಾಗಿ ಪೊಳ್ಳು ಅಧ್ಯಾತ್ಮದ ವೈಭವೀಕರಣವನ್ನು ನಿರಾಕರಿಸಿ, ವಾಸ್ತವತೆಯ ಅರಿವನ್ನು ಕಾವ್ಯಕ್ಕೆ ತಂದದ್ದು ನಿಜ.  ಆದರೆ ಈ ನೆಪದಲ್ಲಿ ಆನುಭಾವಿಕ ರಹಸ್ಯಮಯತೆ ರಮ್ಯತೆಗಳನ್ನೂ ದೂರವಿರಿಸಿತು.  ಮನುಷ್ಯತ್ವದ ಸೂಕ್ಷ್ಮಗಳಲ್ಲಿ ಮನೆಮಾಡಿಕೊಂಡಿರುವ ಸುಕುಮಾರತೆ, ರಹಸ್ಯಮಯತೆ ಮತ್ತು ಕನಸುಗಾರಿಕೆಗಳು ಮನುಷ್ಯನ ಅಸ್ತಿತ್ವದ ಒಂದು ಭಾಗವಷ್ಟೆ ಅಲ್ಲ, ಅಗತ್ಯವಾದವುಗಳು ಕೂಡಾ ಎಂಬ ಕಡೆ ನಿರ್ಲಕ್ಷ್ಯವನ್ನು ತಾಳುತ್ತಾ, ಕೇವಲ ಅಂತರಾಳದ  ಅಕರಾಳ ವಿಕರಾಳಗಳೇ ವ್ಯಕ್ತಿತ್ವದ ಮೂಲದ್ರವ್ಯಗಳೇನೋ ಎಂಬ ಭ್ರಮೆಯನ್ನು ಹುಟ್ಟಿಸಿತು.  ಹಾಗೆಯೆ ಕಾವ್ಯದ ಭಾಷೆ ಬಹುಮಟ್ಟಿಗೆ (ಎಲ್ಲರಲ್ಲಿಯೂ ಅಲ್ಲ) ಗದ್ಯತನಕ್ಕೆ, ಎಷ್ಟೋ ವೇಳೆ ಬರೀ ಚಮತ್ಕಾರಕ್ಕೆ ನೀರಸತೆಗೆ ಇಳಿಯಿತೇನೋ ಅನ್ನಿಸಿ ಏಕತಾನತೆಯನ್ನು ಕಿವಿಗೆ ಬಡಿಯುತ್ತಾ, ಭಾವಗೀತಾತ್ಮಕವಾದ ನಾದಮಯತೆಯನ್ನೆ ಗಡಿಪಾರು ಮಾಡಿತು.  ಆದರೆ ನವ್ಯಕಾವ್ಯ ಆವಿಷ್ಕಾರ ಮಾಡಿಕೊಂಡ ಹೊಸ ಅಭಿವ್ಯಕ್ತಿಯ ರಚನಾಕ್ರಮದೊಳಕ್ಕೆ ಇನ್ನೂ ಉಳಿಸಿಕೊಳ್ಳಬೇಕಾದ ಹಾಗೂ ಬೆಸೆಯಬೇಕಾದ ಅನೇಕ ನಿರ್ಲಕ್ಷಿತ ಒಳ್ಳೆಯ ಅಂಶಗಳಿವೆ ಎಂಬ ಅರಿವು, ಅವುಗಳನ್ನು ಅಳವಡಿಸಿಕೊಳ್ಳಬೇಕಾದ ಜವಾಬ್ದಾರಿ, ಪಂಥಬದ್ಧವಲ್ಲದ, ಮುಕ್ತಪ್ರಜ್ಞೆಯ ಕವಿಗಳ ಪಾಲಿಗೆ ಕಾದಿದೆ.  ಈ ಪ್ರಯತ್ನ ವೆಂಕಟೇಶಮೂರ್ತಿಯವರ ಇಲ್ಲಿನ ಕವಿತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬುದು ತೀರಾ ಸಮಾಧಾನದ ಸಂಗತಿಯಾಗಿದೆ.

ವೆಂಕಟೇಶಮೂರ್ತಿಯವರ ಕಾವ್ಯದ ಹೊಸತನವಿರುವುದು.  ಅವರು ನಿರ್ವಹಿಸುವ ವಸ್ತು ಸಂವಿಧಾನಕ್ಕೆ ಸಂಬಂಧಪಟ್ಟದ್ದು.  ನವ್ಯಕಾವ್ಯದ ಅತಿವಾಸ್ತವತೆಯ ಅಕರಾಳ ವಿಕರಾಳತೆಗೆ, ಸವಾಲೆಂಬಂತೆ, ಪ್ರತಿಭಟನೆಯೋ ಎಂಬಂತೆ, ಮೂರ್ತಿಯವರ ಕವಿತೆ ರಮ್ಯತೆ (mytery) ಯ ಬೆನ್ನುಹತ್ತಿ, ಸಿಂದಾಬಾದನ ಅದ್ಭುತಕತೆಯ ಬೆನ್ನೇರಿ, ‘ಅರಿವಾ’ದ ಪಾತಾಳಕ್ಕಿಳಿದು, ಸೌಗಂಧಿಕಾ ಪುಷ್ಪದ ಕಂಪಿನ ಹಿಂದೆ ಹೊರಟಂತೆ ತೋರುತ್ತದೆ.  ಜೀವಕ್ಕೆ ವಾಸ್ತವತೆಯ ಅರಿವು ಬಹಳ ಮುಖ್ಯವೇನೋ ಹೌದು; ಆದರೆ ಕನಸುಗಳಲ್ಲಿ ಅಗಮ್ಯವಾದದ್ದರಲ್ಲಿ, ಅದ್ಭುತವಾದದ್ದರ ಅನ್ವೇಷಣೆಯಲ್ಲಿ ಅದಕ್ಕೆ ಇರುವ ಆಸಕ್ತಿಯನ್ನು ಕಡೆಗಣಿಸುವಂತಿಲ್ಲ.  ವಾಸ್ತವದ ಮೂಲಕ ಬದುಕನ್ನು ಶೋಧಿಸುವ ನವ್ಯಕಾವ್ಯದ ಧೋರಣೆಯಷ್ಟೇ, ರಹಸ್ಯವಾದದ್ದರ ಗೂಢವಾದದ್ದರ ನೆಲೆಯನ್ನು ಹೊಕ್ಕು ಅರ್ಥವಂತಿಕೆಯನ್ನು ಅನ್ವೇಷಿಸುವ ಧೋರಣೆಯೂ ಮುಖ್ಯವಾದದ್ದು.  ಅನುಭಾವ ಕವಿಗಳು ಮಾಡಿದ್ದೂ ಇದನ್ನೆ.  ಪ್ರಚಂಡ ವಾಸ್ತವವೆಂದು ಮೇಲುನೋಟಕ್ಕೆ ತೋರುವ ನವ್ಯಕವಿ ಗೋಪಾಲಕೃಷ್ಣ ಆಡಿಗರ ಕಾವ್ಯದ ಉದ್ದೇಶವೂ ಈ ಬಗೆಯ ಆನುಭಾವಿಕ ಗೂಢಗಳ ಅನ್ವೇಷಣೆಯೆ ಆಗಿದೆಯೆಂಬುದನ್ನು ಮರೆಯಬಾರದು.  ಇಲ್ಲಿ ವೆಂಕಟೇಶಮೂರ್ತಿಯವರು ಆರಿಸಿಕೊಂಡಿರುವ ರಮ್ಯಾದ್ಭುತ ವಸ್ತುಗಳ ಮೂಲಕ ಓದುಗರನ್ನು ಕೇವಲ ‘ಅವಿಚಾರಿತ ರಮಣೀಯತೆ’ಯಲ್ಲಿ ನಿಲ್ಲಿಸುವುದಿಲ್ಲ.  ಬದಲು ಆಧುನಿಕ ಮಾನವನ ಸಮಸ್ತ ತಾಕಲಾಟಗಳನ್ನೇ ಈ ವಸ್ತುಗಳ ಮೂಲಕ ಅಭಿವ್ಯಕ್ತಿಸುತ್ತಾರೆ.  ‘ಸಿಂದಾಬಾದನ ಆತ್ಮಕಥೆ’ ನಮ್ಮ ನಿಮ್ಮ ಏಕಾಕಿತನದ ಮತ್ತು ನೆಲದ ನಂಟಿನಿಂದ ನೆಮ್ಮದಿಯನ್ನು ಪಡೆಯಬೇಕೆಂಬ ಹಂಬಲದ ಕಥೆಯಾಗಿದೆ.  ಎಲ್ಲವನ್ನೂ ಕಳೆದುಕೊಂಡ ಒಬ್ಬಂಟಿತನದ ಬವಣೆಗಳನ್ನೂ ಮತ್ತು ಗೊತ್ತುಗುರಿಯಿಂದ ದಾರಿಯ ಏಕಾಕಿತನದ ಭಯದಿಂದ ಪಾರಾಗಿ ನೆಲದೊಂದಿಗೆ ಸ್ಥಾಪಿತವಾಗಬೇಕಾದ ತನ್ನ ಸಂಬಂಧದಲ್ಲಿರುವ ಸಮಾಧಾನವನ್ನೂ ಸಿಂದಾಬಾದನ ಕಥೆ ಹೇಳುತ್ತದೆ.  ಇನ್ನು, ಎರಡನೆಯ ಕವಿತೆ ರಾಗ-ವಿ-ರಾಗ, ‘ಸಿಂದಾಬಾದನ ಆತ್ಮಕಥೆ’ಯಷ್ಟು ಸಾವಯವತೆಯನ್ನು ಸಾಧಿಸಿಕೊಂಡಿಲ್ಲ.  ಸ್ಪಷ್ಟವಾಗಿ ಅದು ಇಬ್ಭಾಗವಾಗಿದೆ.  ಮೊದಲ ಭಾಗ, ಎರಡನೆಯ ಭಾಗಕ್ಕೆ ಬರೀ ಹಿನ್ನೆಲೆಯಾಗಿದೆಯೇನೋ ಅನ್ನಿಸುತ್ತದೆ.  ಎರಡನೆಯ ಭಾಗವೆ ಬೇರೆ ಅನ್ನಿಸುತ್ತದೆ.  ಅಲ್ಲಿಯೂ ಪಾತಾಳಮಯತೆಯ ರಹಸ್ಯದಲ್ಲಿ ತನ್ನೊಳಗಿನ ಮುಖ್ಯವಾದ ಏನನ್ನೊ ಕಳೆದುಕೊಂಡದ್ದರ ಕೊರಗೆ ಪ್ರಧಾನವಾಗಿದೆ.  ಮೂರನೆಯದಾದ ‘ಸೌಗಂಧಿಕಾ’ ತುಂಬ ಸೊಗಸಾದ ಪದ್ಯವಾಗಿದೆ.  ಕುಮಾರವ್ಯಾಸ ಈ ಪ್ರಸಂಗವನ್ನು ಅನ್ಯಾದೃಶವಾದ ರೀತಿಯಲ್ಲಿ ನಿರ್ವಹಿಸಿದ್ದಾನೆ.  ಸೌಗಂಧಿಕಾಪುಷ್ಪದ ಅನ್ವೇಷಣೆಗೆ ಹೊರಟ ಭೀಮಸೇನ, ವನಮಧ್ಯದಲ್ಲಿ ದಾರಿಗಡ್ಡವಾಗಿ ಬಾಲವನ್ನು ಚಾಚಿ ಕುಳಿತ ಹನುಮಂತನನ್ನು ಕಂಡು, ಮಹಾವೀರನಾದ ತಾನು ಈ ಕಪಿಯ ಬಾಲವನ್ನು ದಾಟುವುದೇ ಎಂಬ ಅಹಂಕಾರದಿಂದ ಮರೆತು, ಆ ಕಪಿಯ ಕೋರಿಕೆಯ ಮೇರೆಗೆ ಅದನ್ನೆತ್ತಿ ಸರಿಸಲು ಪ್ರಯತ್ನಿಸಿ ಸೋತು, ತನ್ನ ಅಹಂಕಾರಕ್ಕೆ ಒದಗಿದ ಆಘಾತದಿಂದ ವಿನೀತನಾಗಿ, ಮುಂದೆ ಸೌಗಂಧಿಕಾಪುಷ್ಪದ ಅನ್ವೇಷಣೆಗೆ ಹೊರಡುತ್ತಾನೆ.  ಕುಮಾರವ್ಯಾಸನಿಗೆ ಅಲ್ಲಿ ಮುಖ್ಯವಾದದ್ದು ಭೀಮಸೇನನ ಮಹಾಪರಾಕ್ರಮವನ್ನು ವರ್ಣಿಸುವುದು; ಆಂಜನೇಯನಿಂದ ಭೀಮನ ಅಹಂಕಾರಕ್ಕೆ ಆಘಾತವಾದುದನ್ನು ಆ ಸಂದರ್ಭದ ಮೂಲಕ ಸೂಚಿಸಿದರೂ ಮತ್ತೆ ಮುಂದಿನ ಕಥೆ ಭೀಮನ ಪರಾಕ್ರಮದ ಪ್ರದರ್ಶನಕ್ಕೆ ಮೀಸಲಾಗುತ್ತದೆ.  ಆದರೆ ವೆಂಕಟೇಶಮೂರ್ತಿಯವರ ‘ಸೌಗಂಧಿಕಾ’ ಭೀಮನಿಗೆ ಮಹಾವಾನರನಿಂದ ಒದಗಿದ ಆಘಾತದ ಸಂದರ್ಭದಲ್ಲಿಗೆ ನಿಂತು ಅದರಿಂದ ಭೀಮನಿಗೆ ದೊರೆತ ಎಚ್ಚರವೇ ಅವನ ಪಾಲಿನ ‘ಸೌಗಂಧಿಕ’ವಾಯಿತು -ಎಂಬುದನ್ನು ಹೇಳುತ್ತದೆ.  ಭೀಮನಿಗೆ ಅಹಂಕಾರಾಘಾತದ ಜತೆಗೆ, ತನ್ಮೂಲಕ ಜಗತ್ತಿನ ಜೀವಶಕ್ತಿ (Life Force)ಯ ಸಾಕ್ಷಾತ್ಕಾರವೂ ಆಗುತ್ತದೆ.  ಅದೇ ಅವನ ಪಾಲಿಗೆ ದೊರೆತ ಸೌಗಂಧಿಕಾ. ಈ ಕವಿತೆಯಲ್ಲಿ ಮನುಷ್ಯನ ಅಹಂಕಾರಕ್ಕೆ ಒದಗುವ ಆಘಾತವನ್ನೂ, ಅದರಿಂದ ಅದೃಷ್ಟವಶಾತ್ ದೊರೆಯುವ ವಿವೇಕವನ್ನೂ ವೆಂಕಟೇಶಮೂರ್ತಿಯವರು ಧ್ವನಿಸಿದ್ದಾರೆ.  ಒಟ್ಟಿನಲ್ಲಿ ಪೌರಾಣಿಕವೆಂಬಂಥ ಪ್ರಸಂಗಗಳ ಮೂಲಕವೇ ಆಧುನಿಕ ಮಾನವನ ಸಮಸ್ಯೆಗಳನ್ನು ಇವರು ಚಿತ್ರಿಸಿದ್ದಾರೆ.

ಹಾಗೆ ನೋಡಿದರೆ ಇದೇನೂ ಹೊಸತಲ್ಲ.  ಪೌರಾಣಿಕ ವಸ್ತುಗಳನ್ನು ತೆಗೆದುಕೊಂಡು, ಅವುಗಳನ್ನು ಸಮಕಾಲೀನತೆಗೆ ‘ವಿಭಾವ’ ಅಥವಾ ‘ವಸ್ತು ಪ್ರತಿರೂಪ’ (objective correlative) ಗಳನ್ನಾಗಿಸುವ ಪ್ರಯತ್ನ ಹೊಸತೇನಲ್ಲ.  ಆದರೆ ಆ ವಸ್ತುಗಳನ್ನು ನಿರ್ವಹಿಸುವ ರೀತಿಯೆ ಇಲ್ಲಿ ವಿಶೇಷವಾದದ್ದು.  ಅದೆಂದರೆ, ನವ್ಯಕಾವ್ಯದ ರೂಪಾಂಶವನ್ನು ಒಂದು ರೀತಿಯ ಕಥನ ಕಾವ್ಯಕ್ಕೆ ಅಳವಡಿಸಿಕೊಳ್ಳಲು ಸಾಧ್ಯ ಎಂಬ ವಿಚಾರ.  ನವ್ಯಕಾವ್ಯ ನೆಲೆಗೊಂಡಾಗ ಇನ್ನಷ್ಟು ಪ್ರಯೋಗಗಳನ್ನು ಮಾಡಬಹುದಾಗಿದ್ದ ಕಥನಕಾವ್ಯ (narrative poetry) ತಟಕ್ಕನೆ ತಲೆಮರೆಸಿಕೊಂಡಿತು.  ನವೋದಯ ಕಾಲದಲ್ಲಿ ‘ಶ್ರೀ ರಾಮಾಯಣ ದರ್ಶನಂ’ದಂಥ ಸುದೀರ್ಘ ಕಥನ ಮಹಾಕಾವ್ಯ ಬಂತೆಂಬುದೇನೋ ನಿಜವೆ.  ಆದರೆ ಬೇರೆ ಹಲವು ಬಗೆಯ ಕಥನಕಾವ್ಯ ಪ್ರಯೋಗಗಳ ಕಡೆ ಇದ್ದ ಒಲವು ತಟ್ಟನೆ ನವ್ಯಕಾವ್ಯದ ಧೋರಣೆಯಿಂದ ನಿಂತೇ ಹೋಯಿತು.  ಅಥವಾ ಬದಲಾಯಿತು. ನಮ್ಮ ನವೋದಯ ಕಾಲದಲ್ಲಿ ಇಂಗ್ಲಿಷ್ ರೊಮ್ಯಾಂಟಿಕ್  ಕಾವ್ಯದಲ್ಲಿ ಬಂದಷ್ಟು ವೈವಿಧ್ಯಮಯವಾದ ಕಥನಕಾವ್ಯಗಳು ಬರಲಿಲ್ಲ ಎಂಬ ಸಂಗತಿಯನ್ನು ಈ ಸಂದರ್ಭದಲ್ಲಿ ಹೋಲಿಸಿ ನೋಡಬಹುದು.  ನವ್ಯಕಾವ್ಯದಲ್ಲಿ ಸಾಕಷ್ಟು ಉದ್ದವಾದ ಪದ್ಯಗಳೇನೋ ಕಾಣಿಸಿಕೊಂಡವು.  ಆದರೆ ಅವು ಅವಕ್ಕೆ ಹಿಂದಿನ ಕಥನಕಾವ್ಯದಿಂದ ಭಿನ್ನವಾಗಿ ಮತ್ತು ಭಿನ್ನಪ್ರತಿಮೆಗಳ ಮೂಲಕ ಹಿಡಿದಿಟ್ಟ ವಾಸ್ತವ ಜೀವನದ ಸಂಕೀರ್ಣತೆಯ ಪರಿಣಾಮಗಳಾಗಿವೆ. ಅತ್ತ ಎಕ್ಕುಂಡಿಯವರು ಅತ್ಯಂತ ಗೇಯಮಯವಾದ, ವರ್ಣಮಯವಾದ ಧಾಟಿಯಲ್ಲಿ ಭಾಗವತ ಪರಂಪರೆಯ ಧೋರಣೆಯಿಂದ ಬರೆದ ಕಥನ ಕವನಗಳು, ಯಾವುದಕ್ಕೂ ಪ್ರತಿಮೆಯಾಗದೆ, ಬರೀ ಪ್ರಸಂಗ ಚಿತ್ರಣಗಳಾಗಿಬಿಟ್ಟವು.  ಇನ್ನೊಂದೆಡೆ ‘ಶ್ರೀನಿವಾಸ’ರು ಬರೆದ ಕಥನ ಕವನಗಳು, ಅವರು ಗದ್ಯದಲ್ಲಿ ಬರೆದ ಸಣ್ಣಕತೆಗಳಿಗೆ ಪ್ರತಿನಿಧಾನ (substitute) ವೆಂಬಂತೆ ತೋರಿದವು.  ಈ ಹಿನ್ನೆಲೆಯಿಂದ ನೋಡಿದಾಗ, ವೆಂಕಟೇಶಮೂರ್ತಿಯವರು ನವ್ಯಕಾವ್ಯ ತಂದ ಆಡುಮಾತಿನ ಲಯ (Speech rhythm) ವನ್ನು ಹೊಸ ರೀತಿಯ ಕಥನ ಪ್ರಕಾರಕ್ಕೆ ಬಳಸಿಕೊಂಡದ್ದು ಒಂದು ವಿಶೇಷವಾಗಿ ತೋರುತ್ತದೆ.  ಇಲ್ಲಿ ಕತೆಗಾರಿಕೆ ಮುಖ್ಯವಾಗುವುದಕ್ಕಿಂತ, ಇಡೀ ನಿರೂಪಣೆ ಕಟ್ಟುವ ಚಿತ್ರ ಒಂದು ಸಂಕೇತವಾಗಿ ನಿಲ್ಲುತ್ತದೆ.

ನವ್ಯಕಾವ್ಯದ ರೂಪಾಂಶವನ್ನು ಕಥನ ಕಲೆಗೆ ಅಳವಡಿಸುವ ಮೂರ್ತಿಯವರ ಈ ಪ್ರಯತ್ನದಲ್ಲಿ ಇನ್ನೂ ಒಂದು ವಿಶೇಷವಿದೆ.  ಅದೆಂದರೆ, ಇಡೀ ಕವಿತೆ ಒಂದೇ ವಸ್ತುವಿನ ಅಥವಾ ಕಥಾವಸ್ತುವಿನ ಒಂದೇ ಚಿತ್ರವಾಗುವಿಕೆ.  ನವ್ಯಕಾವ್ಯ, ತನ್ನ ಕಟ್ಟಡದಲ್ಲಿ ಖಂಡಖಂಡವಾದ ಶಬ್ದಚಿತ್ರಗಳನ್ನು, ‘ಸಾವಯವ ಶಿಲ್ಪದ ಸಮಗ್ರೀಕರಣ ಬಲ’ದಿಂದ  ಒಂದುಗೂಡಿಸುತ್ತಿತ್ತು.  ಅಲ್ಲಿಯೂ ಸಾಕಷ್ಟು ಸಂಖ್ಯೆಯ ದೀರ್ಘಕವನಗಳಿದ್ದರೂ ಅವು ಹಿಂದಿನ ಅರ್ಥದ ಕಥನಕವನಗಳಾಗುತ್ತಿರಲಿಲ್ಲ.  ಅದೊಂದು ರೀತಿಯಲ್ಲಿ ಅರ್ಥವಂತಿಕೆಯ ಅನ್ವೇಷಣೆಯಾಗಿತ್ತು.  ಬಿಡಿಬಿಡಿ ಪ್ರತಿಮೆಗಳ ಮೂಲಕ ಇಡಿಯಾದ ಭಾವವೊಂದನ್ನು ಕಡೆದು ನಿಲ್ಲಿಸುವ ಶಿಲ್ಪಕ್ರಿಯೆಯಾಗಿತ್ತು.  ಆದರೆ ಇಲ್ಲಿ ವೆಂಕಟೇಶಮೂರ್ತಿಯವರು ಒಂದೇ ಪ್ರತಿಮೆಯನ್ನು ಪೂರ್ಣಾವಧಿ ಕವಿತೆಯ ಉದ್ದಕ್ಕೂ ವಿಸ್ತರಿಸುತ್ತಾರೆ.  ಹೀಗಾಗುವುದರಿಂದ  ಅದು ರಚನೆಯಲ್ಲಿ ಸಡಿಲವಾಗುವುದಲ್ಲ; ಎಲ್ಲಿಯೂ ತನ್ನ ಕಾವನ್ನು ಕಳೆದುಕೊಳ್ಳುವುದಿಲ್ಲ.  ಓದಿದ ನಂತರ ಇಡೀ ಕವಿತೆಯು ಬದುಕಿನ ರಮ್ಯತೆಗಳ, ಗೂಢಗಳ, ಅರ್ಥವಂತಿಕೆಗಳ ಅನ್ವೇಷಣೆಯ ಪ್ರತಿಮೆಯಾಗಿ ನಿಲ್ಲುತ್ತದೆ.

ಈ ಕವಿತೆಗಳ ಅಭಿವ್ಯಕ್ತಿಯ ಸೊಗಸು, ಅವುಗಳಲ್ಲಿನ ನಾದಮಯತೆ ಮತ್ತು ಚಿತ್ರಕಶಕ್ತಿಗಳು ತುಂಬ ಆಕರ್ಷಕವಾಗಿವೆ.  ಭಾವಗೀತಾತ್ಮಕ ಗೇಯತೆಯನ್ನು ತುಂಬಿಕೊಂಡು, ಆಡುಮಾತಿನ ಲಯವನ್ನು ನಿರ್ವಹಿಸುವ ಪ್ರಯತ್ನದಲ್ಲಿ ಅವರು, ತಾವು ಕನ್ನಡ ಸಾಹಿತ್ಯ ಪರಂಪರೆಯನ್ನು ಮೈಗೂಡಿಸಿಕೊಂಡವರೆಂಬುದನ್ನು ದೃಢಪಡಿಸುತ್ತಾರೆ.  ‘ಸೌಗಂಧಿಕಾ’ದಲ್ಲಿ ಅವರು ಬಳಸುವ ಷಟ್ಪದಿಯ ಹೊಸಪ್ರಯೋಗ, ತನ್ನ ರಮ್ಯವಾದ ಒಳ ಪ್ರಾಸ-ಲಯಗಳಿಂದ ಅತ್ಯಂತ ಲವಲವಿಕೆಯ ಬರೆಹಕ್ಕೆ ನಿದರ್ಶನವಾಗಿದೆ.  ಅಲ್ಲದೆ ಹಳೆಯ ಛಂದೋರೂಪಗಳನ್ನು ಮತ್ತೆ ಹೊಸ ಪ್ರಯೋಗಗಳಿಗೆ ಅಳವಡಿಸುವ ಸಾಧ್ಯತೆಯ ಕಡೆ ಪ್ರಯೋಗ ಪರಿಣತಮತಿಗಳ ಗಮನವನ್ನು ಸೆಳೆಯುತ್ತದೆ.  ನಡುಗನ್ನಡ ಛಂದೋರೂಪವಾದ ಷಟ್ಪದಿಯನ್ನು ಹೀಗೆ ಬಳಸಬಹುದು ಎಂದು ಇದುವರೆಗು ಅನ್ನಿಸಿಯೇ ಇರಲಿಲ್ಲವೆಂಬ ಆಶ್ಚರ್ಯವನ್ನು ಮೂರ್ತಿಯವರು ಈ ಪ್ರಯೋಗದ ಮೂಲಕ ಕಟ್ಟಿ ನಿಲ್ಲಿಸಿದ್ದಾರೆ.  ಹಾಗೆಯೆ ರಾಗ-ವಿ-ರಾಗದ ಆರಂಭದಲ್ಲಿ ಬರುವ ದೇಶವರ್ಣನೆ ಜೈನಪುರಾಣಗಳ ಲೋಕಾಕಾರದ ಕಲ್ಪನೆಯನ್ನು ನೆನಪಿಗೆ ತರುವುದಷ್ಟೇ ಅಲ್ಲದೆ, ಅದರ ಕತೆಯೇ ಒಂದು ಕವಿಕಲ್ಪಿತ ಪುರಾಣ (myth) ವೂ ಆಗಿದೆ.  ವಾಸ್ತವವಾಗಿ ಇಲ್ಲಿನ ಮೂರು ಕವಿತೆಗಳ ವಸ್ತುವೂ ಹೀಗೆಯೇ ಈ ವರ್ಗಕ್ಕೆ ಸೇರಿದ್ದು.  ಈ ವಸ್ತುಗಳಿಂದ ಹೊಸ ಅರ್ಥವಂತಿಕೆಯನ್ನು ನಿರ್ಮಿಸುವ, ಮೂರ್ತಿಯವರ ಈ ಪ್ರಯೋಗ ತನ್ನ ಹಿಂದಿನ ಸಂಪ್ರದಾಯದ ಸತ್ವವನ್ನು ಅರಗಿಸಿಕೊಂಡ ಹೊಸದೃಷ್ಟಿಯಿಂದ ಸಂಭವಿಸಿದ್ದೇ ಹೊರತು, ಪರಕೀಯ ಪ್ರೇರಣೆಗಳಿಂದಾಗಲಿ, ಕೇವಲ ಹೊಸತಾಗುವ ಹಂಬಲದಿಂದಾಗಲಿ ಹುಟ್ಟಿಕೊಂಡದ್ದಲ್ಲ.  ಇಂತ ಕವಿತೆಗಳನ್ನು ಬರೆದ ವೆಂಕಟೇಶಮೂರ್ತಿಯವರಿಂದ ಇನ್ನು ಹೆಚ್ಚಿನದನ್ನು ನಾವು ಖಂಡಿತ ನಿರೀಕ್ಷಿಸಬಹುದು.

ಸಿಂದಬಾದನ ಆತ್ಮಕಥೆ : ಎಚ್. ಎಸ್. ವೆಂಕಟೇಶಮೂರ್ತಿ, ೧೯೭೭