ಕವಿತೆ ಒಂದು ಬಗೆಯ ನಿರಾತಂಕ ಮನೋಧರ್ಮದಿಂದ ಆವಿರ್ಭವಿಸುವ ಜೀವಂತಕ್ರಿಯೆ.  ಆದರೆ ಕವಿತೆ ಬರೆಯತಕ್ಕವರಿಗೆ ಈಗ್ಗೆ ಕೆಲವು ವರ್ಷಗಳ ಹಿಂದೆ ಇದ್ದಂಥ ನಿರಾತಂಕ ಉತ್ಸಾಹೀ ಮನೋಧರ್ಮ ಇವತ್ತು ಇಲ್ಲವಾಗಿದೆ.  ಕಾರಣ, ಕವಿ ತಾನು ಬರೆಯುತ್ತಿರುವಾಗ ಕೆಲವು, ಬರೆದಾದ ನಂತರ ಪ್ರಕಟಿಸುವಾಗ ಕೆಲವು ಆತಂಕಗಳು ಇಂದಿನ ಪರಿಸರದಲ್ಲಿ ಸೇರಿಬಿಟ್ಟಿವೆ.  ಮೊದಲನೆಯದು, ಕವಿಗೆ ತಾನೆಲ್ಲಿ ಬಹುಬೇಗ ಹಳಬನಾಗಿಬಿಟ್ಟೇನೋ ಎಂಬ ಆತಂಕ; ತಾನು ಯಾವುದಾದರೂ ಪ್ರಮುಖವಾದ ಒಂದು ಪ್ರಚಲಿತ ಪಂಥಕ್ಕೆ ಸೇರದೆಹೋದರೆ ಏನು ಗತಿ ಎಂಬುದು ಇನ್ನೊಂದು; ಸಮಕಾಲೀನ ಕಾವ್ಯದ ಸಿದ್ಧರೂಪಗಳ ಸಂಕಲೆಯಿಂದ ತಪ್ಪಿಸಿಕೊಂಡು ತನ್ನ ಸಹಜಾಭಿವ್ಯಕ್ತಿಯನ್ನು ಸಾಧಿಸಿಕೊಳ್ಳಬಲ್ಲೆನೇ ಎಂಬ ಪ್ರಜ್ಞಾಪೂರ್ವಕವಾದ ಸಂದೇಹ ಮತ್ತೊಂದು.

ಹೊಸದಾಗಿ ಬರೆಯುವ ಕವಿ, ತಾನೆಲ್ಲಿ ಇಂಥ ಕವಿತೆಯಿಂದ ನವ್ಯನಾಗದೆ ಹೋಗಿಬಿಡುತ್ತೇನೋ ಅಥವಾ ಬಹುಬೇಗ ಬದಲಾಗುತ್ತಿರುವ ಕಾವ್ಯ ಪ್ರಕಾರಗಳ ನಡುವೆ ಹಳಬನಾಗಿಬಿಡುತ್ತೇನೋ ಎಂಬ ಶಂಕೆಯ ಪರಿಣಾಮವಾಗಿ, ತಾನು ಆದಷ್ಟು ಹೊಸದಾಗಿ ಕಾಣಿಸುವ, ಅದಕ್ಕಾಗಿ ಏನಾದರೊಂದು  ನಾವೀನ್ಯವನ್ನು ಪ್ರದರ್ಶಿಸುವ ಅಪಾಯಗಳೂ ಉಂಟು.  ಕೇವಲ ‘ರೀತಿ’ಯೊಂದರಿಂದಲೇ ನಾವೀನ್ಯ ಬರುವುದೆಂಬ ಭ್ರಮೆಯಿಂದಲೂ ಹೀಗಾಗುವುದುಂಟು.  ಯಾವುದೋ ಒಂದು ರೀತಿಯಲ್ಲಿ ಬರೆದರೇ ಅದು ಕವಿತೆ ಎಂಬ ಕುರುಡು ನಂಬಿಕೆಯಿಂದಲೂ ಹೀಗಾಗುವುದುಂಟು.  ಆದಕಾರಣ ಇಂಥ ಆತಂಕದ ನಡುವೆ ಕವಿ ತನ್ನ ಸ್ವಭಾವ ಸ್ವಧರ್ಮಕ್ಕನುಸಾರವಾದ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ.

ಕವಿಗೆ ತಾನು ಯಾವುದಾದರೊಂದು, ಪ್ರಮುಖವಾದ ಪಂಥಕ್ಕೆ ಸೇರದೆ ಹೋದರೆ ತನ್ನನ್ನು ಕೇಳುವವರು ಯಾರು ಎಂಬ ಇನ್ನೊಂದು ಆತಂಕವೂ ಇದೆ.  ಸಾಹಿತ್ಯಕ್ಷೇತ್ರದಲ್ಲಿ ಈ ಒಂದು ‘ಗುಂಪುಗಾರಿಕೆ ’ ಉಳಿದೆಲ್ಲ ಕ್ಷೇತ್ರಗಳಲ್ಲಿಯಂತೆಯೆ ಮನೆಮಾಡಿಕೊಂಡಿದೆ.  ‘ಗುಂಪುಗಾರಿಕೆ’ಯನ್ನು ಪ್ರತಿಭಟಿಸಿದವರೂ ಸಹ ತಾವೂ ಒಂದು ಗುಂಪಾಗಿಬಿಡುವುದು, ಅದನ್ನು ಸಾಹಿತ್ಯೇತರ ಮನೋಧರ್ಮಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳುವುದು ಒಂದು ದುರಂತ ವಿನೋದವಾಗಿದೆ.  ಸಮಾನ ಮನೋಧರ್ಮವುಳ್ಳ ಜನ ವೈಚಾರಿಕ ಜಾಗೃತಿಗಾಗಿ ಒಂದು ಗುಂಪಾಗುವುದು ಸಹಜವಾದರೂ, ಬರಬರುತ್ತಾ ತಮ್ಮ ತಮ್ಮ ವೈಯಕ್ತಿಕ ಸ್ವತಂತ್ರ ವಿಚಾರಶೀಲತೆಯನ್ನು ಬೆಳೆಯಿಸಿಕೊಳ್ಳುವ ಬದಲು ಆ ಗುಂಪಿನ ಮುಖವಾಣಿಯಾಗಿ ಸಾಮೂಹಿಕವಾಗಿ ಆಲೋಚಿಸತೊಡಗುತ್ತಾರೆ.  ಹೀಗೆ ಸಾಮೂಹಿಕವಾಗಿ ಆಲೋಚಿಸುವ ಪದ್ಧತಿ ಅತ್ಯಂತ ಅಪಾಯಕಾರಿಯಾದದ್ದು -ವ್ಯಕ್ತಿಗೆ ಹಾಗೂ ಪಂಥಕ್ಕೆ.  ಯಾವುದೇ ಒಂದು ಗುಂಪಿಗೆ ತತ್ವತಃ ತಾವು ಬದ್ಧರಾಗಿದ್ದರೂ, ತಮಗೆ ತಾವೇ ಸ್ವತಂತ್ರವಾಗಿ ಆಲೋಚಿಸುತ್ತಿದ್ದೇವೆ; ಅದನ್ನು ಧೈರ್ಯವಾಗಿ ಪ್ರಕಟಿಸುತ್ತಿದ್ದೇವೆ ಎಂದು ಕಂಡುಕೊಳ್ಳುವವರು ತೀರ ವಿರಳ.  ಯಾವ ಒಂದು ಗುಂಪಿಗೂ ಸೇರದೆ ಹೊರಗೆ ನಿಂತ ವ್ಯಕ್ತಿಗಳು ತಾವು ಏಕಾಕಿಗಳಾಗಿ, ‘ಅನಾಥ’ರಾಗಿ, ಗುಂಪುಗಾರಿಕೆಯ ಜನರ ಟೀಕೆಗೋ, ಅನಾದರಕ್ಕೋ, ಅವಜ್ಞೆಗೋ ಪಾತ್ರರಾಗಬೇಕಾದದ್ದು ಅನಿವಾರ್ಯ.  ಇಂದು ಇಂಥ ‘ಗುಂಪು ’ಗಳು ತಿಳಿದವರಿಂದ, ತಿಳಿಯದವರಿಂದ ರೂಪುಗೊಂಡಿವೆ.  ಹೊಸದಾಗಿ ಬರೆಯುವವರು – ಅಷ್ಟೇ ಏಕೆ, ಸಾಕಷ್ಟು ಶಕ್ತರಾದವರೂ ಸಹ ತಮ್ಮ ಇಚ್ಛೆಯಿಂದಲೋ ಅಥವಾ ಗುಂಪಿನ ಕೆಲವು ಬುದ್ಧಿವಂತರ ಚಾಕಚಕ್ಯತೆಯಿಂದಲೋ, ತಮ್ಮ ಪ್ರಕಾಶನ ಹಾಗೂ ಪ್ರಸಾರಕ್ಕಾಗಿ ಇಂಥ ಗುಂಪುಗಳ ಆಕರ್ಷಣೆಯನ್ನೋ, ರಕ್ಷಣೆಯನ್ನೋ ಬಯಸುವಂಥ ಒಂದು ಆತಂಕ ಇಂದಿನ ಪರಿಸರದಲ್ಲಿದೆ.

ಮೂರನೆಯ ಆತಂಕ ಎಲ್ಲ ಸಾಹಿತ್ಯ ಪ್ರಯೋಗಗಳ ಪರಿಣತಾವಸ್ಥೆಯಲ್ಲಿ ಅಭಿವ್ಯಕ್ತಿಗೆ ಪ್ರಾಪ್ತವಾಗುವ ಸಿದ್ಧರೂಪದ ಏಕಾತಾನತೆಯಿಂದ ತಾನು ಪಾರಾಗಬಲ್ಲೆನೇ ಎಂಬ ಪ್ರಜ್ಞಾಪೂರ್ವಕವಾದ ಸಂದೇಹ.  ಇದನ್ನು ಒಂದು ಆತಂಕವೆನ್ನುವ ಬದಲು ಒಂದು ಸವಾಲು ಎಂದು ಕರೆಯುವುದು ಉಚಿತ.  ಕನ್ನಡ ಕಾವ್ಯವಂತೂ ಇತ್ತೀಚಿನ ಹದಿನೈದು ವರ್ಷಗಳಲ್ಲಿ ಅತ್ಯಂತ ತೀವ್ರಗತಿಯಿಂದ ತನ್ನ ಪ್ರಯೋಗ ಪರಿಣತಮತಿಯನ್ನು ಪ್ರಕಟಿಸಿಕೊಂಡಿದೆ.  ಭಾಷೆಯ ಸಾಧ್ಯತೆಗಳನ್ನು ವಿಶೇಷವಾಗಿ ಸೂರೆಮಾಡಿದೆ.  ಹೀಗಾಗಿ ಈ ಪರಿಸರದಲ್ಲಿ ಕವಿತೆ ಬರೆಯುವುದು, ಕಷ್ಟ ಎನ್ನುವಂಥ ಪರಿಸ್ಥಿತಿಯನ್ನು ತಂದಿದೆ.  ಆದ್ದರಿಂದ ಈ ಏಳೆಂಟು ವರ್ಷಗಳಲ್ಲಿ ಕನ್ನಡ ಕಾವ್ಯದ ಬೆಳೆ ಹೇಳಿಕೊಳ್ಳುವಂತೇನೂ ಇಲ್ಲ; ಬಂದರೆ ಒಂದು ರೀತಿಯ ಚರ್ವಿತಚರ್ವಣ, ಅಥವಾ ಬಲವಂತವಾಗಿ ತಯಾರಿಸಿದ ಒಂದು ರೀತಿಯ ಹೊಸತನ – ಅದಕ್ಕೆ ವ್ಯಂಗ್ಯ ವಿಡಂಬನೆ, ಕಾಮ ಕೀಟಲೆಗಳ ಉಡಿಗೆ ತೊಡಿಗೆ.  ಆದರೂ ಈಚೆಗೆ ನವ್ಯಕಾವ್ಯದ ಮುಕ್ತಛಂದಸ್ಸಿನ ಹೆಸರಿನಲ್ಲಿ ಬರುತ್ತಿರುವ ಏಕತಾನತೆಯನ್ನು ಮುರಿಯುವ ಹೋರಾಟ, ಮತ್ತು ಜಾನಪದ ಸತ್ವವನ್ನು ಕಾವ್ಯಭಾಷೆಗೆ ತುಂಬುವ ಪ್ರಯತ್ನಗಳು ಒಬ್ಬಿಬ್ಬರಿಂದ ನಡೆದಿರುವುದು ಗಮನಾರ್ಹವಾಗಿದೆ.  ಇಷ್ಟನ್ನು ಹೊರತು ಕಾವ್ಯನಿರ್ಮಿತಿ ಒಂದು ನಿಲುಗಡೆಗೆ ಬಂದಿತೇನೋ ಎಂಬ ಶಂಕೆ ಆವರಿಸಿದೆ; ಆದರೆ ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆಗಳಲ್ಲಿ ಕಂಡುಬರುತ್ತಿರುವ ನಾವೀನ್ಯ ಮತ್ತು ವೈಚಾರಿಕ ಪ್ರತಿಭೆ ನಿಜಕ್ಕೂ ಸಂತೋಷವನ್ನು ತರುವಂಥದಾಗಿದೆ.

ಇಂಥ ಒಂದು ಪರಿಸರದಲ್ಲಿ ಪ್ರಕಟವಾಗುತ್ತಿದೆ  ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಪ್ರಥಮ ಕವನ ಸಂಕಲನ “ವೃತ್ತ”.  ಈ ಒಂದು ವೃತ್ತದ ಕೇಂದ್ರದಲ್ಲಿರುವ ಕವಿಯ ವ್ಯಕ್ತಿತ್ವ, ತನ್ನ ಅನುಭವದ ಎಷ್ಟು ವೃತ್ತಗಳನ್ನು ಸೃಜಿಸಬಲ್ಲದಾಗಿದೆ; ಹಾಗೆಯೆ ಓದುಗರ ಅನುಭವದ ವೃತ್ತವನ್ನು ಎಷ್ಟರ ಮಟ್ಟಿಗೆ ಹಿಗ್ಗಲಿಸಬಲ್ಲದಾಗಿದೆ ಎಂಬುದರ ಮೇಲೆ ಕವಿಯ ಕಾವ್ಯದ ಸೊಗಸು ನಿಂತಿದೆ.  ಯಾವ ಕವಿತೆ ಓದುಗರ ಅನುಭವದ ವೃತ್ತದ ಪರಿಧಿಯನ್ನು ವಿಸ್ತರಿಸಬಲ್ಲದೋ ಅಷ್ಟರ ಮಟ್ಟಿಗೆ ಅದು ಗೆದ್ದಿದೆ ಎಂದು ತಿಳಿಯಬೇಕು.

ವೃತ್ತದೊಳಗಿನ ಕೆಲವು ಕವಿತೆಗಳು, ಹಿಂದೆ ಹೇಳಿದ ಆತಂಕಗಳಿಂದ ಪಾರಾಗಿ, ಕೆಲವಂಶಗಳಲ್ಲಿ ನಮಗೆ ಪರಿಚಿತವಾದ ಕಾವ್ಯಾನುಭವದ ಪರಿಧಿಯನ್ನು ವಿಸ್ತರಿಸುವುದರಲ್ಲಿ ಸಫಲವಾಗಿವೆ ಎಂಬುದು ಸಂತೋಷದ ಸಂಗತಿ.  ಈ ಸಂಗ್ರಹದ ಮೊದಲ ಕವಿತೆ “ಸೀಮಂತಿನಿ” ತುಂಬ ಸೊಗಸಾದ ಕವಿತೆ.  ತಾಯ್ತನಕ್ಕೆ ಸಿದ್ಧಳಾಗಿ ನಿಂತ ಹೆಣ್ಣನ್ನು ಕುರಿತು –

ಯಾರಿವಳು
ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು
?

ಎಂಬ ಪ್ರಶ್ನೆಯಲ್ಲಿ ಪರಿಚಿತಳಾದ, ಆತ್ಮೀಯಳಾದ ಹೆಂಡತಿ ಗರ್ಭಿಣಿಯಾದಾಗ, ಕೈಹಿಡಿದ ಗಂಡನಿಗೇ ಅಪರಿಚಿತವೂ, ವಿನೂತನವೂ, ಆಗಿ ಕಂಡ ವಿಸ್ಮಯದ ವರ್ಣನೆಯಿದೆ. ಮುಂದೆ

ಬೇಸಿಗೆಯ ಉರಿಗಣ್ಣ
ಬೆಳುದಿಂಗಳಲಿ ತೊಳೆದು
ಗರ್ಭಗುಡಿ ಹಣತೆಯನು ಹಚ್ಚಿರುವಳು
ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ
ಜಗದಂಬೆಭಾವಕ್ಕೆ ಸಂದಿರುವಳು

ಎಂಬ ಈ ಚಿತ್ರದ ಧ್ವನಿಪರಂಪರೆ ಆಶ್ಚರ್ಯಕರವಾಗಿದೆ.  ಈ ಹಿಂದೆ ನಾವು ಹೇಳಿದ ಆತಂಕಗಳಿಂದ ಪಾರಾದ ಮನೋಧರ್ಮದಿಂದ ಮಾತ್ರ ಇಂಥ ಪ್ರತಿಮಾನಿರ್ಮಿತಿ ಸಾಧ್ಯವಾಗಿದೆ.  ತಾಯಾಗಲಿರುವ ಹೆಣ್ಣಿನ ಬಗೆಗೆ ಪ್ರೀತಿ-ಗೌರವಗಳನ್ನು ತರುವಂಥದು.  ಈ ಚಿತ್ರ.  ‘ಗರ್ಭಗುಡಿ’ ‘ಹಣತೆ’ ‘ಜಗದಂಬೆ’ ಈ ಮಾತುಗಳು ಬಂದರೇ ತಾನೆಲ್ಲಿ ಹಳಬರ ಸಾಲಿಗೆ ಸೇರಿಬಿಡುವೆನೋ ಅಥವಾ ಕವಿತೆ ಹಳೆಯದಾಗಿಬಿಡುತ್ತದೋ ಎನ್ನುವ ಭಯ ಭಟ್ಟರಿಗಿಲ್ಲ.  ಇಂಥ ಮಾತುಗಳು ಬಂದಿರುವುದರಿಂದ ಈ ಚಿತ್ರ ಹಳೆಯದಾಗಿಲ್ಲ.  ಅದರ ಬದಲು ಅತ್ಯಂತ ಉಚಿತವೂ ಧ್ವನಿಪೂರ್ಣವೂ ಆಗಿದೆ.  ತಾಯಾಗಲಿರುವ ವ್ಯಕ್ತಿತ್ವದಲ್ಲಿ ಮೈದೋರುವ ಪ್ರಶಾಂತತೆ, ಸಾತ್ವಿಕತೆ ದೈವಿಕತೆಗಳಿಗೆ ಸಮರ್ಥವಾದ ಸಂಕೇತವಾಗಿದೆ.  ಇಡೀ ಪದ್ಯದ ಉದ್ದಕ್ಕೂ ಈ ಬದಲಾಗದ ಮನೋಧರ್ಮವನ್ನು ಚಿತ್ರಿಸಿ, ಕಡೆಯಲ್ಲಿ-

ಗಟ್ಟಿ ಸ್ವಾರ್ಥಕ್ಕೆ ಈಗ ಮಳೆ ಬಿದ್ದು ಮೈಯೊಡೆದು
ಉಸಿರಾಡುತಿದೆ ಮಣ್ಣತೇವ

ಎಂಬ ಪ್ರತಿಮೆಯಂತೂ, ಈ ಒಂದು ಸ್ಥಿತಿಯನ್ನು ತಟಕ್ಕನೆ ನಿಸರ್ಗಕ್ರಿಯೆಯಲ್ಲಿ ಸಮೀಕರಿಸಿ ಸಾಧಾರಣೀಕೃತವನ್ನಾಗಿಸುವ ಕಲೆಗಾರಿಕೆಯನ್ನು ಅತ್ಯಂತ ಸೊಗಸಾಗಿ ಪ್ರಕಟಿಸುತ್ತದೆ.  ಈ ವಸ್ತುವನ್ನು ಕುರಿತು ಇಂಥ ಕವಿತೆ ಕನ್ನಡದಲ್ಲಿ – ಅದೂ ಈಚಿನ ಕಾವ್ಯದಲ್ಲಿ – ಹೆಚ್ಚಾಗಿಲ್ಲ.

ಇದರಂತೆ ‘ತಾಯಿ’ ಎಂಬ ಕವಿತೆಯಲ್ಲಿ ಕಂಡುಬರುವ ಪ್ರತಿಮಾನಿರ್ಮಿತಿ ವಿಶೇಷವಾದದ್ದು.  ತನಗಾಗಿ ದುಡಿದು, ಜೀವ ತೆತ್ತು ತನ್ನನ್ನು ಒಂದು ವ್ಯಕ್ತಿಯನ್ನಾಗಿ ಮಾಡಿದ ತಾಯಿಯ ಬದುಕಿನ ಕೆಲವು ಕ್ಷಣಗಳನ್ನು ಮಗನಾದವನು ನೆನೆಸಿಕೊಂಡ ಸ್ಮರಣಾನುಭವ ಈ ಕವಿತೆಯ ವಸ್ತು.  ಆ ನೆನಪು-

ಸೊಯ್ಯನೆ ಸರಿಯುವ ಸಾಪು ಮೈ ಹೊಳೆಯಲ್ಲಿ
ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು

ಎಂಬ ಚಿತ್ರದಲ್ಲಿ ತಾಯನ್ನು ಕುರಿತ ಸ್ಥಾಯಿಯಾದ ನೆನಪು ಮಗನ ಬದುಕಿನ ಪ್ರವಾಹದಲ್ಲಿ ಎದ್ದುನಿಂತಿದೆ.  ಒಮ್ಮೊಮ್ಮೆ ಈ ನೆನಪಿನೊಳಗೆ ಈ ಒಂದು ಚಿತ್ರ ನಿಲ್ಲುತ್ತದೆ ಮಗನ ಮನಸ್ಸಿನ ಮುಂದೆ –

ಕೆಂಪುಸೀರೆಯನುಟ್ಟು ಬರಿತಲೆಗೆ ಸೆರಗಿಟ್ಟು
ಬತ್ತ ಕುಟ್ಟುವ
, ಕಲ್ಲು ಬೀಸುವ, ಸೊರಗುಮೈಯಿನ ವಿಧವೆ ಹೆಣ್ಣು
ಪಕ್ಕಕೆ ಕೂತು
ಹರಕು ಜೇಬಲಿ ಕೈಯ ಇಳಿಬಿಟ್ಟು
ಅವಳನೇ ನೆಟ್ಟುನೋಡುತ್ತಲಿದೆ ಆರೇಳರ ಎಳಗಣ್ಣು
ತಾಯ ಮುಖದಲಿ ಒಂದು ಪೆಚ್ಚುನಗೆ ಅವಳಿಗೆ
ಕನಿಕರಿಸುವಂತೆ ಹುಡುಗನ ಮುಖದ ಬಗೆ
; ಹೀಗೆ
ತಾಯಿ ಇಳಿವಳು ಮಗನ ಬಾಳಿಗೆ.

ಬದುಕಿನಾಳದಿಂದ ಎದ್ದುಬರುವ ಈ ಒಂದು ಕರುಣಾಜನಕವಾದ ಚಿತ್ರ ನಿಜಕ್ಕೂ ಅಪೂರ್ವವಾದುದೆಂದೇ ನನ್ನ ತಿಳಿವಳಿಕೆ.  ಬಸವಣ್ಣನವರನ್ನು ಕುರಿತ ಕವಿತೆಯಲ್ಲಿ,

ಅಯ್ಯಾ
ನಾವು ಗಳಿಸಿದ್ದೆಲ್ಲ
ನೀ ಕೊಟ್ಟ ದ್ರಾಕ್ಷಿಗಳ ಹುಳಿಸಿ
ಮಾದ್ಯವ ಇಳಿಸಿ
ಕುಡಿವ ಕಲೆಯ

ಎನ್ನುವಲ್ಲಿ ಮಹಾವ್ಯಕ್ತಿಗಳು ತಂದುಕೊಟ್ಟ ಮೌಲ್ಯಗಳನ್ನು ಜನತೆ ಯಾವ ದುರ್ಗತಿಗಿಳಿಸುತ್ತಾರೆ ಎನ್ನುವ ವಿಡಂಬನೆ ಸೊಗಸಾಗಿ ಪ್ರತಿಮಿತವಾಗಿದೆ.

‘ವೃತ್ತ’ ಈ ಸಂಕಲನಕ್ಕೆ ಶೀರ್ಷಿಕೆಯನ್ನು ಒದಗಿಸಿರುವ ಕವನ.  ಪ್ರತಿಯೊಬ್ಬರೂ ತಮ್ಮ ತಮ್ಮ ಅಹಂಕಾರದ ವೃತ್ತದಲ್ಲಿ ಬಂಧಿತರಾದವರೇ.  ಮತ್ತೊಬ್ಬರೊಡನೆ ಕೂಡಿದಾಗಲೂ ಅದಕ್ಕೆ ಸ್ವಾರ್ಥವೇ ಪ್ರಚೋದನೆಯಾಗಿ ಪರಿಣಮಿಸಿ ಆ ಕೂಟ ಕಿರಾತನೃತ್ಯವಾಗುತ್ತಿದೆ.  ಮರ್ತ್ಯರಾಗಿ ಉಳಿದೂ ಈ ಅಹಂಕಾರ ಸ್ವಾರ್ಥಗಳಿಂದ ಪೂರ್ಣವಾಗಿ ಮುಕ್ತರಾಗುವುದು ಸಾಧ್ಯವಿಲ್ಲದ ಮಾತು.  ಆದರೆ ನಮ್ಮನ್ನು ಬಳಸಿ ನಿಂತ ಈ ‘ಅಹಂ’ ವೃತ್ತ ನಮ್ಮನ್ನೇ ಸಮಾಧಿ ಮಾಡುವ ಶಿಲಾಸೆರೆಯಾಗದಂತೆ ಅದಕ್ಕೆ ಕಿಟಕಿ ಬಾಗಿಲುಗಳನ್ನಾದರೂ ತೆರೆಯಬೇಕು.  ‘ನಾನು’ ಎನ್ನುವುದು ಮತ್ತೊಬ್ಬನನ್ನೂ ಬಾಳಲು ಬಿಡುವಷ್ಟು ತಗ್ಗಬೇಕು.  ‘ವೃತ್ತ’ ಕವನ ಈ ಅರಿವಿಗೆ ಮೂಡಿದ ಪ್ರತಿಮೆ.  ಅಹಂಕಾರವನ್ನು ವಿವೇಕದ ಹತೋಟಿಯಲ್ಲಿಟ್ಟ ಜನವೂ ಇಲ್ಲಿ ಬರುತ್ತಾರೆ.  ಅದಕ್ಕೆ ಪ್ರತಿಯಾಗಿ ಸ್ವಾರ್ಥವನ್ನೇ ವ್ಯವಹಾರದ ಸೂತ್ರವಾಗಿ ಮಾಡಿಕೊಂಡು, ಬದುಕನ್ನೂ ಬೇಟೆಯ ಕಣವಾಗಿ ಮಾಡುವ ಬೇಡರ ಪಡೆಯ ಚಿತ್ರವೂ ಕಲಾತ್ಮಕವಾಗಿ ಮೂಡಿದೆ.  ಕವನದ ಕೊನೆಯಲ್ಲಿ ಏನೋ ಕೊರತೆ ಕಾಣುತ್ತದೆ.  “ತಳದಲ್ಲೊ ಪಿಸುಗುಟ್ಟುವ ಪಿತಾಮಹರ ಚಿತ್ತ” ಎಂಬಲ್ಲಿ ಅಡಿಗರ ‘ಭೂತ’ದ ಛಾಯೆ ಬಿದ್ದಿದೆ.

ಈ ಕೆಲವು ನಿದರ್ಶನಗಳಿಂದ ಮತ್ತು ‘ವಿಷವದನ’ ‘ಮಂಗಳ’ ‘ನೀನು’ ‘ಅಪಘಾತ’ ‘ಪರಮಹಂಸ’ ‘ತೀನಂಶ್ರೀ’ ‘ಸಾವು’ ಇಂಥ ಕವಿತೆಗಳಲ್ಲಿ ಸ್ಫುಟವಾಗುವ ಭಟ್ಟರ ಪ್ರತಿಮಾ ನಿರ್ಮಾಣ ಸಾಮರ್ಥ್ಯ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಪ್ರಾಮಾಣಿಕತೆ, ಸಾಕಷ್ಟು ಸಾಧನೆಯಿಂದ, ಎಚ್ಚರದಿಂದ ಮೈಗೂಡಿಸಿಕೊಂಡಿರುವ ಭಾಷಾಪ್ರಯೋಗದ ಹದ ಮತ್ತು ಬಿಗಿ ಇತ್ಯಾದಿಗಳಿಂದ ಇವರ ಕಾವ್ಯಶಕ್ತಿಯ ಬಗೆಗೆ ಸಾಕಷ್ಟು ಭರವಸೆಯನ್ನು ಹುಟ್ಟಿಸುತ್ತವೆ.

ಈಗ ಹೆಸರಿಸಿದ ಕವಿತೆಗಳನ್ನು ಬಿಟ್ಟರೆ, ಉಳಿದವು ಈ ಮಟ್ಟಕ್ಕೆ ಬಾರವು.  ಏಕೆಂದರೆ ಅವುಗಳಲ್ಲಿ ಇನ್ನೂ ಅನುಕರಣದ ಅನುರಣನವಿದೆ; ಕ್ವಚಿತ್ತಾಗಿ ನಾವೀನ್ಯ ಇಣಿಕಿ ನೋಡಿದರೂ ಒಟ್ಟಿನಲ್ಲಿ ಅವು ಓದುಗರ ಅನುಭವದ ವೃತ್ತವನ್ನು ವಿಸ್ತರಿಸುವಂತೆ ತೋರುವುದಿಲ್ಲ.

ಆದರೆ ಭಟ್ಟರ ಕವಿತೆಯಲ್ಲಿ ಅಬ್ಬರವಿಲ್ಲ; ಆಡಂಬರವಿಲ್ಲ.  ನಾವೀನ್ಯವನ್ನು ತರಬೇಕೆಂಬ ಪ್ರಜ್ಞಾಪೂರ್ವಕವಾದ ಹಂಬಲದ ಚಮತ್ಕಾರಗಳಿಲ್ಲ.  ತಮ್ಮ ಸ್ವಧರ್ಮಕ್ಕೆ ವಂಚನೆಯಾಗದ ರೀತಿಯಲ್ಲಿ, ತಮಗನಿಸಿದ್ದನ್ನು ನೇರವಾಗಿ ನಿರೂಪಿಸುವ ಕೌಶಲವಿದೆ.  ಬೆಳೆಯುವ ಕವಿಗೆ ಮುಖ್ಯವಾಗಿ ಬೇಕಾದದ್ದು ಈ ನಿರಾತಂಕ ಮನೋಧರ್ಮ; ಭಟ್ಟರ ಕೆಲವು ಯಶಸ್ವಿಯಾದ ಕವಿತೆಗಳಲ್ಲಿ ಈ ಮನೋಧರ್ಮ ಸಾಕಷ್ಟಿದೆ.

ಕಾವ್ಯದ ಈ ಹಾದಿಯಲ್ಲಿ ಅವರ ಸಹಯಾತ್ರಿಯಾಗಿ ನಾನು, ಅವರ ಕಾವ್ಯದಲ್ಲಿ ಪರಿಣತಿಯನ್ನೂ ಯಶಸ್ಸನ್ನೂ ಹಾರೈಸುತ್ತೇನೆ.

ವೃತ್ತ : ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ, ೧೯೬೮.