ಶ್ರೀ ಪ್ರಹ್ಲಾದ ಬೆಟಗೇರಿಯವರ ಈ ಕವನ ಸಂಗ್ರಹದ ಹೆಸರು ‘ಗುಲಾಬಿ’. ಗುಲಾಬಿಯನ್ನು ಕುರಿತು ಅವರು ಬರೆದಿರುವ ಪದ್ಯವೊಂದು ಈ ಸಂಗ್ರಹದ ಶೀರ್ಷಿಕೆಯಾಗಿರುವುದರ ಜತೆಗೆ, ಅದು ಇಡೀ ಕವನ ಸಂಗ್ರಹದ ಕೇಂದ್ರ ಕಾಳಜಿಗಳನ್ನು ಸಮರ್ಥವಾಗಿ ಸಂಕೇತಿಸುತ್ತದೆ.  ಆದರೆ ಈ ‘ಗುಲಾಬಿ’ ಅನ್ನುವ ಕವಿತೆ ಹೂವೊಂದನ್ನು ಕುರಿತದ್ದಲ್ಲ; ಅದು ಅದೇ ಹೆಸರಿನ ಹೆಣ್ಣೊಂದನ್ನು ಕುರಿತ ಕವಿತೆ.  ಆದರೆ, ಅದು ಹೆಣ್ಣಿನ ಚೆಲುವನ್ನು ರಮ್ಯವಾಗಿ ಬಣ್ಣಿಸುವ ಸ್ವರೂಪದ್ದಲ್ಲ; ಅದರ ಬದಲು ಗುಲಾಬಿ ಎಂಬ ಹೆಣ್ಣೊಬ್ಬಳ ಶೋಷಣೆಯನ್ನು ಕುರಿತದ್ದು.

ಈ ಮಣ್ಣಲ್ಲಿ ಜನರ ಕಣ್ಣಲ್ಲಿ
ಚಲಾವಣೆ ಇಲ್ಲದ ಸವಕಲು ನಾಣ್ಯವಾಗಿ
ಗುಲಾಬಿ ಸೊರಗಿ ಸಣ್ಣಾಗಿದ್ದಾಳೆ         (ಪುಟ ೭)

ಎಂದು ಪ್ರಾರಂಭವಾಗುವ ಕವಿತೆ, ಒಂದು ಕಾಲಕ್ಕೆ ಚೆಲುವೆಯಾಗಿದ್ದ ಈ ಹೆಣ್ಣು ಅವರಿವರ ಕಾಲ ತುಳಿತಕ್ಕೆ ಸಿಕ್ಕು ‘ಬೆತ್ತಲುಬಿದ್ದ ಡಾಂಬರು ರಸ್ತೆಯಾಗಿದ್ದಾಳೆ’ ಎಂಬ ಕಟುವಾಸ್ತವದ ಕಡೆ ಓದುಗರ ಗಮನವನ್ನು ಸೆಳೆಯುತ್ತ, ಕತ್ತಲೆಯಲ್ಲಿ ಕಣ್ಣೀರು ಸುರಿಸುವ ಅವಳ ಇಂದಿನ ಸ್ಥಿತಿಗೆ ‘ಹೊಣೆ ಯಾರು?’ ಎಂಬ ಪ್ರಶ್ನೆಯೊಂದಿಗೆ ಸುತ್ತಣ ಸಮಾಜದ ಕಡೆಗೇ ಬೆರಳು ತೋರಿಸುತ್ತದೆ.

ಈ ಸಂಗ್ರಹದ ಎಲ್ಲ ಕವಿತೆಗಳೂ ಮೂಲತಃ ಈ ಬಗೆಯ ಸಾಮಾಜಿಕ ಕಾಳಜಿಗಳನ್ನೆ ಅಭಿವ್ಯಕ್ತಿಸುತ್ತವೆ.  ಒಂದೆರಡು ಪ್ರೇಮ ಕವನಗಳನ್ನು ಹೊರತು ಪಡಿಸಿದರೆ, ನಿಸರ್ಗದ ರಮ್ಯತೆಯ ಕಡೆಗೆ ಒಂದಿಷ್ಟೂ ಕಣ್ಣು ಹಾಯಿಸದ, ಕೇವಲ ಮಾನವ ಕೇಂದ್ರಿತ ಸಾಮಾಜಿಕ ಬದುಕಿನ ಅಸಾಂಗತ್ಯಗಳನ್ನೂ ದುರಂತಗಳನ್ನೂ ದಾಖಲು ಮಾಡುತ್ತವೆ.  ಇದು ಕವಿಯ ಆಯ್ಕೆಯ ಕ್ಷೇತ್ರವೂ ಹೌದು.

ಇರುವುದಕ್ಕೂ ಇರಬೇಕಾದುದಕ್ಕೂ ನಡುವಣ ಅಂತರ ಈ ನೆಲೆಯ ಕವಿಗಳನ್ನು ಗಾಢವಾಗಿ ಕಾಡುವ ಸಂಗತಿಯಾಗಿದೆ.  ಇಲ್ಲಿ ಕವಿಯೂ, ಒಬ್ಬ ಕ್ರಾಂತಿಕಾರಿಯ ಹಾಗೆ ಬದುಕಿನ ವಾಸ್ತವಗಳನ್ನು ಕಂಡು ಕಸಿವಿಸಿಗೊಳ್ಳುತ್ತಾನೆ; ಅದರ ಅಸಾಂಗತ್ಯಗಳ ಬಗ್ಗೆ ಸಿಡಿದೇಳುತ್ತಾನೆ.  ಶೋಷಣೆಗೆ ಒಳಗಾದವರ ಪಾಡನ್ನು ಅತೀವ ವ್ಯಥೆಯಿಂದ ಗುರುತಿಸುವ ಹಾಗೆ, ಶೋಷಕ ಶಕ್ತಿಗಳ ಬಗೆಗೂ, ಪ್ರತಿಕ್ರಿಯೆಗಳನ್ನು ಎತ್ತಿ ಹೇಳುತ್ತಾನೆ.  ಬದುಕಿನ ಬಗ್ಗೆ ಅದಮ್ಯವಾದ ಪ್ರೀತಿಯುಳ್ಳ ಮತ್ತು ಕನಸುಗಳನ್ನೂ ಆದರ್ಶಗಳನ್ನೂ ಉಳ್ಳ ಕವಿಯಲ್ಲಿ ಈ ಬಗೆಯ ಸಾಮಾಜಿಕ ಕಾಳಜಿಗಳೂ ತೀವ್ರವಾಗುತ್ತವೆ.  ಹಾಗೆಯೆ ಅವು ಅಭಿವ್ಯಕ್ತಗೊಂಡಾಗ ಕೊಂಚ  ಎತ್ತರದ ದನಿಯಲ್ಲಿ ಮೂರ್ತಗೊಳ್ಳುತ್ತ, ಹಲವು ವೇಳೆ ಹೇಳಿಕೆಗಳಿಗೋ ಘೋಷಣೆಗಳಿಗೋ ಹತ್ತಿರವಾದ ಸ್ಥಿತಿಯನ್ನು ತಲುಪುತ್ತವೆ.  ಹಾಗಾದಾಗ ಕಾವ್ಯ ಅಕಾವ್ಯಗಳ ನಡುವಣ ಗೆರೆಯನ್ನು ಕವಿ ತಿಳಿಯದೆ ಹೋಗುವ ಸಾಧ್ಯತೆಯಿದೆ.  ಪ್ರಸ್ತುತಸಂಗ್ರಹದಿಂದಲೇ ಒಂದೆರಡು ನಿದರ್ಶನಗಳನ್ನೆತ್ತಿಕೊಂಡು ಹೇಳುವುದಾದರೆ –

ಕ್ರೂರವ್ಯವಸ್ಥೆಯ
ವಿರುದ್ಧ
ಹೋರಾಡಲು ಹೆಣಗಾಡಿ
ಹೆಣವಾಗಿದ್ದೇನೆ.

(
ಪುಟ ೧೦)

ಎಂಬ ಹತಾಶೆಯ ಅಭಿವ್ಯಕ್ತಿಯಲ್ಲಿ, ಎಷ್ಟೇ ಸಾಮಾಜಿಕ ಕಳಕಳಿ ಇದ್ದರೂ, ಅದು ಖಂಡಿತವಾಗಿಯೂ ಕವಿತೆಯಲ್ಲ.  ಅಂದರೆ ಯಾವುದೇ ಕಳಕಳಿ ಅಥವಾ ಬದ್ಧತೆ, ಕವಿತೆಯಾಗಬೇಕಾದರೆ ಅದೊಂದು ಹದಕ್ಕೆ ಒಳಗಾಗಬೇಕಾಗುತ್ತದೆ.  ಈ ಒಂದು ಹದಕ್ಕೆ ತನ್ನ ಭಾವಗಳನ್ನು ತಂದುಕೊಳ್ಳುವುದೇ ಕವಿಯ ಕೌಶಲ್ಯ.  ಹಿಂದಿನ ನಿದರ್ಶನದಲ್ಲಿ ಪ್ರಸ್ತಾಪಿತವಾದ ಆಶಯ.

ಕತ್ತಲ ನಾಡಿನಾಗ
ಹುಣ್ಣಿಮೆಯ ಹಾಡು
ಹಾಡುವುದು ಹೇಗೆ
?
(
ಪುಟ ೬)

ಎಂಬ ಅಭಿವ್ಯಕ್ತಿಯಲ್ಲಿ ಕಾಣಿಸಿಕೊಂಡಾಗ, ಅದು ಕಾವ್ಯದ ಸ್ಪರ್ಶವನ್ನು ಪಡೆದುಕೊಳ್ಳುವ ಹಂತಕ್ಕೆ ಬಂದಿದೆ.  ‘ಗುಲಾಬಿ’ ‘ಭಾಷಾ ಪ್ರೇಮ’ ‘ಅಸಹಜಗೀತೆ’ ‘ಕುರೂಪ’ – ಈ ಕೆಲವು ಪದ್ಯಗಳು ಪಡೆದ ಗೆಲುವು, ಮತ್ತು ಅವು ಮನಸ್ಸಿನ ಮೇಲೆ ಮಾಡುವ ಪರಿಣಾಮ ಬೇರೆಯೆ ರೀತಿಯದು.  ಅದರಲ್ಲಿಯೂ ‘ಅಸಹಜಗೀತೆ’ಯೊಳಗಿನ ‘ಅಹಮದಾಬಾದು’  ನಮ್ಮ ಪ್ರಸ್ತುತಕ್ಕೆ  ಒಡ್ಡಿದ ಸಮರ್ಥವಾದ ಪ್ರತೀಕವಾಗಿದೆ.  ಇವು ಬೆಟಗೇರಿಯವರ ಕಾವ್ಯ ಸಾಧನೆಗೆ ಸಾಕ್ಷಿಯಾಗಿವೆ.

ಯಾವುದೇ ಕವಿಯ ಮೊದಲ ಕವನ ಸಂಗ್ರಹವನ್ನು ಕುರಿತು ಬರೆಯುವಾಗ, ಆತ ಬರೆಯುತ್ತಿರುವ ಸಾಹಿತ್ಯ ಸಂದರ್ಭವನ್ನೂ, ಈ ಸಂದರ್ಭದಲ್ಲಿ ಆತನ ಕವಿತೆಯಲ್ಲಿ ಮೈದೋರುತ್ತಿರುವ ಲಕ್ಷಣಗಳನ್ನೂ ಗುರುತಿಸಬಹುದೇ ಹೊರತು ಹೆಚ್ಚೇನನ್ನೂ ಮಾಡಲಾಗುವುದಿಲ್ಲ.  ಶ್ರೀ ಬೆಟಗೇರಿಯವರ ಈ ಸಂಗ್ರಹದ ಕವಿತೆಗಳ ಮುಖ್ಯ ಲಕ್ಷಣ ಅವು ನಮ್ಮ ಪರಿಸರದ ಅಸಾಂಗತ್ಯಗಳಿಗೆ ಅತ್ಯಂತ ಕಳಕಳಿಯಿಂದ ಸ್ಪಂದಿಸುತ್ತವೆ ಎನ್ನುವುದು.  ಭೂಪಾಲದ ವಿಷಾನಿಲದ ದುರಂತ, ಮಳೆ ಬರಿಸಲು ಕೆರೆಯ ಅಂಗಳದಲ್ಲಿ ಕೂತ ಶಿವಬಾಲಯೋಗಿ, ಗರತಿಯರ ಮಾನಭಂಗ ಮಾಡುವ ಕುದುರೇಮೋತಿಸ್ವಾಮಿ, ದಲಿತರ ಮೇಲೆ ಹಲ್ಲೆ ನಡೆದರೂ ಕೈಕಟ್ಟಿ ಕೂಡುವ ನಿಸ್ಸತ್ವಜನ, ಸತೀಹೋಗುವುದರ ಮೂಲಕ ಮೂಢನಂಬಿಕೆಗಳ ಪರಂಪರೆಯನ್ನು ಮುಂದುವರಿಸಿದ ರೂಪಾ ಕನ್ವರ್, ‘ಹಾರುವ ಹಕ್ಕಿಯ ತುಪ್ಪಳ ಕಿತ್ತು ಬೇಯಿಸುವ’ ‘ಸಂಪುಹೂಡಿ ಗುಂಪುಕಟ್ಟಿ, ಗಿಟ್ಟಿಸಿ’ ಕೊಳ್ಳುವ ರಾಜಕಾರಣಿಗಳು- ಇಂಥ ಪರಿಸರದ ನಡುವೆ, ಈ ದೇಶದಲ್ಲಿ ಯಾರಾದರೂ ಥಣ್ಣಗೆ ಕೂತಿರುವುದು ಸಾಧ್ಯವೆ?  ಅದರಲ್ಲೂ ಪ್ರಹ್ಲಾದ ಬೆಟಗೇರಿಯಂಥ ಕವಿ ಸುಮ್ಮನಿರುವುದು ಸಾಧ್ಯವೆ ಎನ್ನುವುದನ್ನು, ತೋರಿಸುವ ಈ ಕವಿತೆಗಳು ಕಾವ್ಯದ ‘ನಿಯೋಗ’ವನ್ನು ವಿಸ್ತರಿಸುವ ಸ್ವರೂಪದವುಗಳಾಗಿವೆ.

ಈ ಹಿನ್ನೆಲೆಯಲ್ಲಿ ಪ್ರಹ್ಲಾದ ಬೆಟಗೇರಿಯವರ ನಾಳಿನ ಕಾವ್ಯವನ್ನು ಕಾದು ನೋಡೋಣ.

ಗುಲಾಬಿ : ಪ್ರಹ್ಲಾದ ಬೆಟಗೇರಿ, ೧೯೯೦