ಬುದ್ಧ ಮತ್ತು ಯುದ್ಧ – ಈ ಎರಡೂ ಶಾಂತಿ ಮತ್ತು ಹಿಂಸೆಯ ಪ್ರತೀಕಗಳಾಗಿ ಮನುಕುಲದ ಎದುರು ಯಾವತ್ತಿನಿಂದಲೋ ನಿಂತಿವೆ.  ಈ ಎರಡರಲ್ಲಿ ಚರಿತ್ರೆಯ ಆಯ್ಕೆ ಯಾವುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.  ನಾಗರಿಕತೆಯಲ್ಲಿ ಮನುಕುಲವು ಮುಂದುವರಿದಂತೆ, ಹಿಂಸೆಗೆ ಅದು ಕಂಡುಕೊಳ್ಳುವ ಕಾರಣಗಳು ಮತ್ತು ಬಳಸುವ ಉಪಕರಣಗಳು ಬದಲಾಯಿಸಿವೆಯೇ ಹೊರತು, ಅದರ ಹಿಂದಿರುವ ಮನಸ್ಸು ಅಷ್ಟೇನೂ ಬದಲಾದಂತೆ ತೋರುವುದಿಲ್ಲ.  ಈ ಚರಿತ್ರೆಯ ಮುಂದುವರಿದ ಭಾಗವಾದ ಈ ಹೊತ್ತಿನ ಹಿಂಸಾರಭಸಮತಿಯಾದ ಜಗತ್ತಿನಲ್ಲಿ ಸಂಭವಿಸುತ್ತಿರುವ ತಲ್ಲಣಗಳಿಗೆ ನಮ್ಮ ಸೃಜನಶೀಲತೆ ಹಾಗೂ ವೈಚಾರಿಕತೆಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದು ಪರಿಶೀಲಿಸಬೇಕಾದ ಸಂಗತಿಯಾಗಿದೆ.  ಮುಖ್ಯವಾಗಿ ಕಳೆದ ಎರಡು ದಶಕಗಳ ಕಾಲಮಾನದಲ್ಲಿ, ನಮ್ಮ ‘ಪುಣ್ಯಭೂಮಿ’ ಭಾರತವನ್ನೂ ಒಳಗೊಂಡಂತೆ ಈ ಜಗತ್ತು, ಧಾರ್ಮಿಕ ಮೂಲಭೂತವಾದಿಗಳ ಮತ್ತು ಶಕ್ತಿರಾಜಕಾರಣದ ಮೈತ್ರಿಯಿಂದ ಅಮಾನವೀಯವಾದ ಸಂಘರ್ಷ ಮತ್ತುಹಿಂಸೆಗಳಿಗೆ ಒಳಗಾಗುತ್ತಿರುವ ದುರಂತವನ್ನು ಅಸಹಾಯಕವಾಗಿ ನಾವೆಲ್ಲ ವೀಕ್ಷಿಸುವ ಪರಿಸ್ಥಿತಿಯೊಂದು ಪ್ರಾಪ್ತವಾಗಿದೆ.  ಸಾಮಾಜಿಕ ಅಸಮಾನತೆ, ಶೋಷಣೆ, ವ್ಯಾಪಕವಾದ ಭ್ರಷ್ಟಾಚಾರ ಇತ್ಯಾದಿಗಳಿಗೆ, ಸಹಜವಾಗಿ ಮತ್ತು ನಿರಾತಂಕವಾಗಿ ಪ್ರತಿಕ್ರಿಯಿಸುವ ನಮ್ಮ ಸಮೂಹಪ್ರಜ್ಞೆ, ಮತ-ಧರ್ಮ-ರಾಜಕಾರಣ ಸಂಬಂಧದ ಕೋಮುವಾದೀ ಸ್ವರೂಪದ ಹಿಂಸೆಗಳನ್ನು ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅದು ತಾಳುವ ವಿಭಿನ್ನ ನಿಲುವುಗಳ ಹಾಗೂ ಹಿಂಜರಿಕೆಯ ಹಿಂದಿರುವ ಕಾರಣಗಳು ತುಂಬಾ ಸೂಕ್ಷ್ಮವಾಗಿವೆ.   ಆದರೂ ತಾವು ನಿಂತ ನೆಲೆಗಳನ್ನು ಮೀರಬಲ್ಲ ವಿಚಾರವಂತ ಸಂಘಟಿತ ಮನಸ್ಸುಗಳಿಂದ, ಈ ಹಿಂಸಾಪ್ರವೃತ್ತಿಗಳ ಹಿಂದಿರುವ ಹುನ್ನಾರಗಳನ್ನು ಬಯಲಿಗೆಳೆಯುವ, ಅವುಗಳ ರಾಜಕೀಯ ಮುಖವನ್ನು ವಿರೋಧಿಸುವ, ಮತ್ತು ಚರಿತ್ರೆಯನ್ನು ಆರೋಗ್ಯಪೂರ್ಣವಾಗಿ ವ್ಯಾಖ್ಯಾನಿಸುವ ವೈಚಾರಿಕ ಪ್ರಯತ್ನಗಳು ತಕ್ಕಷ್ಟು ಕ್ರಿಯಾಶೀಲವಾಗಿವೆ ಎನ್ನುವುದು ಸಮಾಧಾನದ ಸಂಗತಿಯಾದರೂ, ಒಟ್ಟಾರೆಯಾಗಿ ಮನುಕುಲದ ನಿದ್ದೆಗೆಡಿಸುವ ಈ ಜಾಗತಿಕ ವಿದ್ಯಮಾನಗಳಿಗೆ ತನ್ನದೇ ಆದ ರೂಪಕಗಳ ಮೂಲಕ ಪರಿಣಾಮಕಾರಿಯಾಗಿ ರೂಪುಕೊಡಲು ಕನ್ನಡದ ಸೃಜನಶೀಲತೆಗೆ ಇನ್ನೂ ಸಾಧ್ಯವಾಗಿಲ್ಲವೇನೋ ಎಂದು ನನಗೆ ತೋರುತ್ತದೆ.  ಈ ಹೊತ್ತಿನಲ್ಲಿ ನನಗೆ ಕವಿ ವರ್ಡ್ಸ್‌ವರ್ತ್, ತನ್ನ ಬದುಕಿನ ಒಂದು ಸಂದರ್ಭದಲ್ಲಿ, ತನಗೂ ಸುತ್ತಣ ಜಗತ್ತಿಗೂ ಒದಗಿದ ಸಂಬಂಧರಾಹಿತ್ಯದ ತಳಮಳವನ್ನು ಕುರಿತು ತೋಡಿಕೊಂಡ ಮಾತೊಂದು ನೆನಪಿಗೆ ಬರುತ್ತದೆ.  ಅದು ಹೀಗಿದೆ : ಇಂಥ ಒಂದು ಸ್ಪಂದಮಾನರಹಿತ ಜಡಸ್ಥಿತಿಗೆ ಬಂದುಬಿಟ್ಟಿದೆಯೇ ಕನ್ನಡದ ಸೃಜನಶೀಲ ಮನಸ್ಸು? ‘For this, for every thing we are out of tune; It moves us not-great god!’

ಈ ಹಿನ್ನೆಲೆಯಿಂದ ನೋಡಿದರೆ ಶ್ರೀ ಎಂ.ಡಿ. ವಕ್ಕುಂದ ಅವರ ‘ಮಗು ಮಲಗಿದೆ ಎದೆಯ ಮೇಲೆ’ ಎಂಬ ಈ ಕವನ ಸಂಗ್ರಹದೊಳಗಿನ ಬಹುತೇಕ ಕವಿತೆಗಳು ನಾನೀಗ ಪ್ರಸ್ತಾಪಿಸಿದ ಬಹುಮುಖೀ ‘ಹಿಂಸೆ’ಯ ತಳಮಳಗಳನ್ನು ಗ್ರಹಿಸಿ ನಿರೂಪಿಸುವಲ್ಲಿ ತಕ್ಕಷ್ಟು ಯಶಸ್ವಿಯಾದ ಪ್ರಯತ್ನಗಳಾಗಿವೆ.  ಒಂದೇ ಉಲ್ಲೇಖದಿಂದ, ಶ್ರೀ ವಕ್ಕುಂದ ಅವರು ಸಮಕಾಲೀನ ವಾಸ್ತವವನ್ನು ಗ್ರಹಿಸಿರುವ ಪರಿಯನ್ನು ಗಮನಿಸಬಹುದು:

ಬೆಟ್ಟದ ಮೇಲೋಂದು
ಮನೆಯ ಮಾಡಿರುವೆ
ಮೃಗಗಳ ಚಿಂತೆಯಿಲ್ಲ
ಮನುಷ್ಯರದೇ ಅಂಜಿಕೆ

(
ಅಂಜಿಕೆ, ಪುಟ ೧೯)

ಇದು ಅಕ್ಕನ ಉಕ್ತಿಗೆ ಒದಗಿರುವ ರೂಪಾಂತರ! ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ?’ ಎಂಬ ಅಕ್ಕನ ನಿಲುವಿಗೆ, ವಕ್ಕುಂದ ಅವರು ಈ ಹೊತ್ತು ತೋರುವ ಪ್ರತಿಕ್ರಿಯೆಯಲ್ಲಿ, ತನಗೆ ಹೆದರಿಕೆಯಿರುವುದು ಮೃಗಗಳದ್ದಲ್ಲ ಮನುಷ್ಯರದು – ಎಂಬ ಈ ಹೊತ್ತಿನ ವಾಸ್ತವ ಧ್ವನಿತವಾಗಿದೆ.  ಯಾಕೆಂದರೆ ಮನುಷ್ಯರಿಗೆ ಮನುಷ್ಯರನ್ನು ಕುರಿತ ನಂಬಿಕೆಯೇ ಕಳೆದುಹೋದಂಥ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ.  ಒಳಗೆ ಮತ್ತು ಹೊರಗೆ ನೂರಾರು ಗಡಿರೇಖೆಯ ಗುರುತುಗಳಿವೆ.  ಮನುಷ್ಯ ಮನುಷ್ಯರ ನಡುವೆ ಏರ್ಪಡುವ ಸಂಘರ್ಷಗಳಿಂದಾಗಿ ‘ಮಾನವತೆಯ ಮಾರಣ ಹೋಮದೆದುರು ಸಮಸ್ತ ಇಂದ್ರಿಯಗಳೂ ಸ್ತಬ್ಧ’ವಾಗಿ ಗ್ರಹಿಕೆಗೆ ಅತೀತವಾದ ನೋವೊಂದು, ಹದ್ದಿನ ಹಾಗೆ ಎರಗಿ ಕುಕ್ಕುತ್ತಿದೆ.  ಈ ಅಸ್ವಸ್ಥ ವರ್ತಮಾನದ ಹದ್ದುಗಳಿಂದಾಗಿ ಮನುಷ್ಯನ ಎದೆಯ ಮೇಲೆ ಮಲಗಿರುವ ಮಗು (ಮುಗ್ಧತೆ) ನಿದ್ದೆಮಾಡಲು ಸಾಧ್ಯವಾಗುತ್ತಿಲ್ಲ.  ಈ ಸಂಕಲನದೊಳಗಿರುವ, ಯುದ್ಧವನ್ನು ಕುರಿತ ಹದಿನಾರು ಕಿರುಕವಿತೆಗಳು ಈ ತಲ್ಲಣಗಳನ್ನು ಕುರಿತವುಗಳಾಗಿವೆ.  ದೇಶದ ಹೆಸರಿನಲ್ಲಿ, ಗಡಿ ಸಂರಕ್ಷಣೆಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಯುದ್ಧಗಳು, ದೈನಂದಿನ ಸರಳ ಸಾಧಾರಣದ ಬದುಕಿನ ಮೇಲೆ ಮಾಡುವ ಆಘಾತವನ್ನು ಚಿತ್ರಿಸುವ ವಕ್ಕುಂದ ಅವರು –

ಜಗತ್ತಿನ ನಕಾಶೆಯಲ್ಲಿ
ಗಡಿರೇಖೆಗಳು
ರಕ್ತದ ಕಾಲುವೆಯಂತೆ
ಕೆಂಪಗಿವೆ
ಎಂದಾದರೊಂದು ದಿನ
ಅವುಗಳನ್ನು
ಬಿಳಿಯ
, ಬಣ್ಣದಲ್ಲಿ ಬಿಡಿಸುತ್ತೇನೆ
(
ಯುದ್ಧ : ೧೬, ಪುಟ ೧೮)

ಎನ್ನುತ್ತ, ಬುದ್ಧ, ಟಾಲ್‌ಸ್ಟಾಯ್, ಗಾಂಧಿ, ಕುವೆಂಪು ಅವರ ಕನಸುಗಳಿಗೆ ದನಿ ಕೊಡುತ್ತಾರೆ.

ಯುದ್ಧ, ನಿಶ್ಚಿತವಾದ ಕಾರಣಗಳನ್ನುಳ್ಳ, ಅಥವಾ ಕೆಲವು ವೇಳೆ ಹುಸಿ ಕಾರಣಗಳಿಗೆ ಸಿದ್ಧಾಂತದ ಮುಖವಾಡಗಳನ್ನು ತೊಡಿಸಿ ಅತ್ಯಂತ ವ್ಯವಸ್ಥಿತವಾಗಿ ಅಥವಾ ‘ಶಾಸ್ತ್ರೋಕ್ತ’ವಾಗಿ ನಡೆಯಿಸುವ ಕೊಲೆಗಳಾದರೆ, ಧಾರ್ಮಿಕ ಮೂಲಭೂತವಾದಿಗಳು ನಡೆಯಿಸುವ ಕೊಲೆಗಳು ಒಂದು ಬಗೆಯ ಅವ್ಯವಸ್ಥಿತ ಯುದ್ಧಗಳೇ.  ಯುದ್ಧಗಳಂತೆಯೇ ಇವೂ ಹಿಂಸೆಯ ಬೇರೊಂದು ರೂಪ; ಕೆಲವು ವೇಳೆ ಯುದ್ಧಕ್ಕಿಂತ ಇವು ಹೆಚ್ಚು ಅಮಾನವೀಯವಾದ ಮತ್ತು ಪ್ರತೀಕಾರ ಪರಂಪರೆಗೆ ಪ್ರಚೋದನೆಯಾಗುವ ಹಿಂಸೆಯ ವಿಕಾರಗಳು.  ಗುಜರಾತ್ ಅನ್ನು ಕುರಿತು ಈ ಸಂಕಲನದೊಳಗಿರುವ ಏಳು ಕಿರು ಕವಿತೆಗಳು ‘ಹಿಂಸೆ’ಯ ಈ ಮುಖವನ್ನು ಹಿಡಿದಿರಿಸುವ ಪ್ರಯತ್ನಗಳಾಗಿವೆ.

ಕಾಲವನ್ನು ಕುರಿತು ಇಲ್ಲಿರುವ ಒಂಬತ್ತು ಕವಿತೆಗಳಲ್ಲಿ ಕಾಲವನ್ನು ಕುರಿತ ಭಯ, ತಲ್ಲಣ, ವಿಷಾದಗಳೇ ಸ್ಥಾಯಿಯಾಗಿವೆ.  ಹೊಸಗನ್ನಡ ಕಾವ್ಯಸಂದರ್ಭದಲ್ಲಿ ‘ಕಾಲ’ವನ್ನು ಕುರಿತು ಕೆಲವು ಮುಖ್ಯ ಕವಿಗಳು ಬರೆದ ಕವಿತೆಗಳೊಳಗಿನ ಚಿಂತನೆಗೆ ಹೋಲಿಸಿದರೆ, ಇವು ಇಂಥ ಬೇರೆಯಾದದ್ದೇನನ್ನೂ ಹೇಳುವಂತೆ ತೋರುವುದಿಲ್ಲ, ಆದರೆ ಈ ವಸ್ತುವನ್ನು ಕುರಿತ ಬರವಣಿಗೆಯೊಳಗಿನ ಲವಲವಿಕೆಯೂ ಮತ್ತು ಕೆಲವು ಹೊಸ ಪ್ರತೀಕಗಳೂ ಗಮನಾರ್ಹವಾಗಿವೆ.

ನಮ್ಮ ಕಾಲದ ಚರಿತ್ರೆಯನ್ನು ವಿವಿಧ ರೂಪಕಗಳ ಮೂಲಕ ಅತ್ಯಂತ ಗಂಭೀರವಾದ ಹಾಗೂ ವಿಷಾದ ಮೂಲವಾದ ಚಿತ್ತಸ್ಥಿತಿಯಲ್ಲಿ ಗ್ರಹಿಸಿ ನಿರೂಪಿಸುವ ಶ್ರೀ ವಕ್ಕುಂದ ಅವರ ಈ ಪ್ರಯತ್ನಗಳನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ.  ಕನ್ನಡ ಸಾಹಿತ್ಯ ಪರಂಪರೆಯ ಹಲವು ಹಂತದ ಅನುರಣನಗಳು, ಇವರ ಅಭಿವ್ಯಕ್ತಿಯೊಳಗೆ ಕೇಳಿಸುವುವಾದರೂ, ಅಬ್ಬರವಿಲ್ಲದ ಒಂದು ಹದದಲ್ಲಿ ರೂಪುಗೊಂಡ ಈ ಕವಿತೆಗಳ ರಚನಾಕ್ರಮ ಮತ್ತು ಅವುಗಳ ಭಾಷೆಗೆ ಇರುವ ಹೊಸತನ, ಮತ್ತು ಉದ್ದಕ್ಕೂ ಮಿಡಿಯುವ ಮಾನವಪರ ಕಾಳಜಿಗಳು ಹಾಗೂ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುತ್ತಲೇ ಅವುಗಳನ್ನು ದಾಟುವ ಪರ್ಯಾಯಗಳನ್ನು ಚಿಂತಿಸುವ ಕ್ರಮ ವಕ್ಕುಂದ ಅವರ ಕಾವ್ಯ ಸಾಮರ್ಥ್ಯದ ವಿಶೇಷಗಳಾಗಿವೆ.

ಮತ್ತೆ ಮೊದಲ ಮಾತಿಗೆ ಹಿಂದಿರುಗುವುದಾದರೆ : ಬುದ್ಧ ಮತ್ತು ಯುದ್ಧ ಅಥವಾ ಶಾಂತಿ ಮತ್ತು ಹಿಂಸೆ ಈ ಎರಡರಲ್ಲಿ – ಒಂದನ್ನು ಆರಿಸಿಕೊಳ್ಳುವ ಅವಕಾಶ ಜಗತ್ತಿನ ಮುಂದೆ ಇದೆ.  ವಕ್ಕುಂದ ಅವರ ಮಾತಿನಲ್ಲಿ ಹೇಳುವುದಾದರೆ :

ಅವರು ಬೆಂಕಿ ಹಚ್ಚುತಿದ್ದಾರೆ
ಬನ್ನಿ
, ನಾವು ದೀಪ ಹಚ್ಚೋಣ
(
ದೀಪ ಹಚ್ಚೋಣ, ಪುಟ ೪೭)

ಹೌದು.  ಇದರ ಹೊರತು ಬೇರೆಯ ದಾರಿಯಿಲ್ಲ, ಉರಿವ ಬೆಂಕಿಯ ನಡುವೆ ದೀಪ ಹಚ್ಚುವುದಕ್ಕಿಂತ ಸಾರ್ಥಕವಾದ ಕಾರ್ಯ ಬೇರೊಂದಿಲ್ಲ.  ಕವಿಗಳು ಮಾಡುವ ಕೆಲಸವೂ ಇದೇ.  ಜೀವನವನ್ನು ಪ್ರೀತಿ-ಗೌರವಗಳಿಂದ ಒಪ್ಪಿಕೊಳ್ಳುವ ಎಲ್ಲ ಪ್ರಜ್ಞಾವಂತರೂ ಮಾಡಬೇಕಾದ ಕೆಲಸವೂ ಇದೇ.

ಮಗು ಮಲಗಿದೆ ಎದೆ ಮೇಲೆ : ಎಂ.ಡಿ. ವಕ್ಕುಂದ, ೨೦೦೪