ಕನ್ನಡ ಕಾವ್ಯ ತನ್ನ  ಸಾಮರ್ಥ್ಯವನ್ನೆಲ್ಲ, ಕಳೆದ ಈ ನಾಲ್ಕು ದಶಕಗಳಲ್ಲಿ, ಎರಡು ಮೂರು ಪ್ರಾಯೋಗಿಕ ಉಬ್ಬರಗಳಲ್ಲಿ ಪ್ರಕಟಿಸಿಕೊಂಡು ಒಂದು ನಿಲುಗಡೆಗೆ ನಿಂತ ಹೊತ್ತಿನಲ್ಲಿ, ಶಾಮಸುಂದರ ಬಿದರಕುಂದಿಯವರಂಥ ಕೆಲವು ವಿಶಿಷ್ಟ ಧ್ವನಿಗಳು, ಹೊಸ ಹುಡುಕಾಟದ ಹೆಜ್ಜೆಗಳಂತೆ ತೋರುವುದು ಸಮಾಧಾನದ ಸಂಗತಿಯಾಗಿದೆ.  ನವೋದಯದ ಸೌಂದರ್ಯನಿಷ್ಠೆ, ರಾಷ್ಟ್ರೀಯತೆ, ಆದರ್ಶದ ಹಂಬಲಗಳು;  ನವ್ಯ ಕಾವ್ಯದ ರಭಸ, ವಾಸ್ತವನಿಷ್ಠ, ಮಾನವನ ನಿಗೂಢ ಪಾತಾಳ ಪ್ರಪಂಚದ ಅಕರಾಳ-ವಿಕರಾಳಗಳು, ನಾಗರಿಕತೆಯ ಗೊಂದಲದ ನಡುವಣ ಅಸ್ವಸ್ಥಗಳು, ವ್ಯಂಗ್ಯ-ವಿಡಂಬನೆ-ಕಾಮಗಳ ಸುತ್ತ ಗಿರ್ಕಿ ಹೊಡೆಯುವ ಚಾಪಲ್ಯ – ಈ ಸಾಮಗ್ರಿಗಳನ್ನು ವಿಸರ್ಜಿಸಿ, ಕಾವ್ಯ ಇದೀಗ ವಾಸ್ತವದ ಸಹಜತೆಗಳ ಕಡೆಗೆ ಕಣ್ಣು ಹಾಯಿಸತೊಡಗಿದೆ.  ನವ್ಯತೆಯ ರಭಸದಲ್ಲಿ ಅವಿಚಾರಿತವಾಗಿ ಕಣ್ಣು ಮುಚ್ಚಿಕೊಂಡ, ನವೋದಯದ ಎಷ್ಟೋ ಒಳ್ಳೆಯ ಅಂಶಗಳನ್ನು, ತನ್ನೊಳಗೆ ಸಮಾವೇಶ ಮಾಡಿಕೊಳ್ಳಬೇಕೆಂಬ ತಿಳಿವು ಮೆಲ್ಲನೆ ಮೂಡತೊಡಗಿದೆ.  ಭಾಷೆಯ ಬಗ್ಗೆ ಇದ್ದ ಪ್ರಜ್ಞಾಪೂರ್ವಕವಾದ, ತಾಂತ್ರಿಕ ಚಮತ್ಕಾರಗಳು ಹಿಂದೆ ಬಿದ್ದು, ಒತ್ತಿಕೊಂಡು ಬಂದ ಅನುಭವಕ್ಕೆ ಸಹಜವಾದ ಭಾಷೆಯನ್ನು ಬಳಸುವ ಪ್ರಯತ್ನಗಳು ಕಾಣಿಸಿಕೊಳ್ಳತೊಡಗಿವೆ.  ಒಟ್ಟಿನಲ್ಲಿ ಕಾವ್ಯ, ತನ್ನ ಕ್ರಿಯಾಶೀಲತೆಗೆ ಯಾವ ಪ್ರತಿಪಕ್ಷದ  ಅಸ್ತಿತ್ವವನ್ನೂ ಭ್ರಮೆಯನ್ನೂ ಅವಲಂಬಿಸದೆ, ಆದುದರಿಂದಲೇ ಅನಗತ್ಯವಾಗಿ ಸವಾಲಿನ ಧಾಟಿಯನ್ನು ಆರೋಪಿಸಿಕೊಳ್ಳದೆ, ನಿಂತ ನೆಲದಲ್ಲಿ ಬೇರೂರಿ ತಾನು ಪಡೆದಷ್ಟು ಅನುಭವಗಳನ್ನು ಅರಳಿಸುವ ನಿಸರ್ಗ ಸಹಜವೆಂಬಂಥ ಕ್ರಿಯೆಗೆ ಹಿಂದಿರುಗುತ್ತಿರುವುದು, ಈ ಅನ್ವೇಷಣೆಯ ಕಾಲದ ಆರೋಗ್ಯವಂತಿಕೆಯ ಲಕ್ಷಣವಾಗಿದೆ.  ಈ ಒಂದು ಲಕ್ಷಣವನ್ನು ಉಳಿಸಿಕೊಳ್ಳುತ್ತ, ಮತ್ತು, ಅನೇಕ ಸ್ತರಗಳ ಅನುಭವಗಳನ್ನು ಒಳಗೊಳ್ಳುತ್ತ ಖಚಿತವಾದ ದಾರಿಯನ್ನು ಕಂಡುಕೊಳ್ಳುವುದು ಇಂದಿನ ಕವಿಗಳ ಜವಾಬ್ದಾರಿಯಾಗಿದೆ.  ಶಾಮಸುಂದರ ಬಿದರಕುಂದಿಯವರ ‘ಈ ಪದ್ಯ ಸಂಕಲನ’ದಲ್ಲಿ ಈ ಒಂದು ಪರಿಸರದ ಕೆಲವು ಲಕ್ಷಣಗಳು, ತಕ್ಕಮಟ್ಟಿಗೆ ಕಾಣಿಸಿಕೊಂಡಿವೆ ಎನ್ನುವುದು ಒಂದು ವಿಶೇಷ ಸಂಗತಿಯಾಗಿದೆ.  ‘ಅಲ್ಲಮಪ್ರಭುವಾದ’ ‘ನಿನ್ನ ಗುರುತಿಗೆ ನಿನ್ನ ಮನೆ ವರ್ಣನೆ’, ‘ಹುಬ್ಬಳ್ಳಿ; ಮೇ ಹದಿನಾಲ್ಕು’ ‘ಹೊಗೆ ಮಬ್ಬಿನ ಕಸಿವಿಸಿ’ – ಈ ಕೆಲವು ಕವನಗಳು ಈ ಮಾತಿಗೆ ದಾಖಲೆಗಳಾಗಿವೆ.[1]

‘ನನಗೆ ನಾನೇನೂ ಆಗಿಲ್ಲದ ಖಾಲಿತನದನಿಸಿಕೆಯಿಂದ, ಅನುಭವದ ಅನ್ವೇಷಣೆಗೆ ಹೊರಟ ಬಿದರಕುಂದಿಯವರ ಕಾವ್ಯ, ಈ ‘ಖಾಲಿತನವನ್ನು’ ತನ್ನ ವ್ಯಕ್ತಿತ್ವದ ಸಹಜಸ್ಥಿತಿ ಎಂದು ಒಪ್ಪಿಕೊಳ್ಳುತ್ತದೆಯೆ ವಿನಾ, ಅದನ್ನೇ ವೈಭವಿಸುವ, ಅಥವಾ ಅದರಿಂದಾಚೆಯ ಮಹಾ ಆದರ್ಶದಲ್ಲಿ ದುಢುಮ್ಮನೆ ಧುಮುಕುವುದರಲ್ಲೆ ತನ್ನ ಪೂರ್ಣತೆ ಇದೆ ಎಂದು  ಉದ್ಘೋಷಿಸುವ ಹವ್ಯಾಸಕ್ಕೆ ಬೀಳುವುದಿಲ್ಲ.  ನಿಜವಾದ ಕವಿ ತನ್ನ ಮಿತಿಯನ್ನು ಅರಿತು, ಅದರ ‘ಅಮಿತ’ವಾದದ್ದರ ಕಡೆಗೆ ಹೊರಟು ವಾಸ್ತವವನ್ನು ಒಪ್ಪಿಕೊಳ್ಳುತ್ತಾ, ಎದುರಿಸುತ್ತಾ ಸುತ್ತಣ ಬದುಕಿನ ಕೃತಕ ಮುಖವಾಡಗಳನ್ನು ಕಿತ್ತೆಸೆಯುತ್ತಾ ಬಯಲಿಗೆ ಬಂದು ನಿಲ್ಲುತ್ತಾನೆ.  ಆದರೆ ಸುತ್ತ ಕಾಣುವುದೇನು?  ಎಲ್ಲವನ್ನೂ ಮುಕ್ಕಿ ಮೊಗೆಯುವ ದಳ್ಳುರಿ:

ಎಲ್ಲಿ ಹೊತ್ತಿ ದಳ್ಳುರಿ ಫಡ ಫಡ ಹೊಡಕರಿಸಿ
ಕಣ್ಣಲ್ಲಿ ಮೂಗಲ್ಲಿ ಬಾಯಲ್ಲಿ ಹೊಗೆ ತುರುಕಿ
ಕಾಣಿಸುವುದನ್ನೆಲ್ಲ ಕುರುಡು ಮಾಡುವುದೋ
ಆಡಿ
, ಹೊಗಳಿ, ನಿಂದಿಸುವುದನ್ನೆಲ್ಲ ದಿಗ್ಬಂಧಿಸುವುದೋ,
ನಿರಾಳ ಉಸಿರೆತ್ತಗೊಡದೆ
, ಶ್ವಾಸಕೋಶವ ಅದುಮಿ ಅಕುಂಚಿಸುವುದೋ

ಇಂಥ ದಳ್ಳುರಿಯ ನಡುವೆ ನಿಂತು ಕವಿ ಬೆಬ್ಬಳಿಸುತ್ತಾ:

ಎಂದಾದರೂ, ಎಂತಾದರೂ ಹುಟ್ಟೀತೆ
ಶಾಶ್ವತದ
, ನೈಜವ್ಯಾಪಕದ, ಸ್ವಚ್ಛ ಮಾನವತೆಯ
ಸಂಯೋಜಿತ ಪುನರ್ ವ್ಯವಸ್ಥೆಯ ಕ್ರಿಯಾಶೀಲತೆಯ
?

ಎಂಬ ವಿಷಾದದಲ್ಲಿ ನಿಂತು ನಿಡುಸುಯ್ಯುತ್ತಾನೆ.  ಈ ಬದುಕನ್ನು ಸರಿಪಡಿಸಲೆಂದು ಬರುವ, ಸ್ವಚ್ಛ ಮಾನವತೆಯ ಕ್ರಿಯಾಶೀಲತೆಗಾಗಿ ಬರುವ ಮಹಾ ವ್ಯಕ್ತಿಗಳನ್ನು ಕುರಿತು:

……. ಇಲ್ಲ, ನೀವೊರೆಸಲಾರಿರಿ ಈ ಕಣ್ಣ,
ನೀಗಲಾರಿರಿ ಈ ಬನ್ನ
,
ಸವರಲಾರಿರಿ ಈ ಗದ್ದ
,
ತೀಡಲಾರಿರಿ ಈ ಬರೆಹ

………………………..

ಇಲ್ಲ ಈ ಬಂಜರದ ಅನಾದಿಅನಂತಗಳ ವಿಸ್ಮೃತಿಯಲ್ಲಿ
ಎಂಥಾ ಕಾಳು ಮೊಳೆತೀತು
, ಖಾತ್ರಿಯಿಲ್ಲ.
ತೂಕವಿಲ್ಲದ ಗಲಭೆಗಳ
, ತಲೆಯೆ ಇಲ್ಲದ ದೊಂಬಿಗಳ,
ಭಯಗ್ರಸ್ತ ಅಣುಬಾಂಬು ಬೀಜಾಸ್ತ್ರಗಳ ಉತ್ತಿಬಿತ್ತಿ
ಏನ ಬೆಳೆದೀರಿ
, ಎಂಥ ಪೈರು;
ಉಂಡೀರಿ ಎಂಥ ಫಲವ
?
…………………………….

ಎಂದು ಅಳಲುವ ಈ ಮಾತು, ಜಗತ್ತನ್ನು ತಾನಲ್ಲ, ಯಾರೂ ಸುಧಾರಿಸಲಾರರೆಂಬ ವಾಸ್ತವ ಸತ್ಯವನ್ನು ಮನದಷ್ಟು ಮಾಡಿಕೊಡುತ್ತದೆ.  ಆದರೆ ಈ ನಿರಾಶೆ, ಈ ಅಸಹಾಯಕತೆ ಇದೇ ಕಡೆಯಲ್ಲ : ಈ ಪರಿಸ್ಥಿತಿಯ ನಡುವೆಯೂ –

………… ಶಕ್ಯವಿದ್ದರೆ ತಡೆ, ಭಾವೋದ್ರೇಕದ ಛಿದ್ರದತ್ತ ವಿಛ್ಛಿದ್ರವಾಗಿ
ಹರಿಯುವುದ ನಿಲ್ಲಿಸು
, ಕಟ್ಟುವ ಕೆಲಸ ಸ್ಮೃತಿಗಷ್ಟೇ
ಪರಿಮಿತವಲ್ಲ
, ವಾಸ್ತವದ ಅನುದಿನದ ಬಡಪೆಟ್ಟಿಗೂ ಪ್ರತಿ
ತಾಡನ
, ಕಂಠಮರ್ದನದ ಅಟಾಟೋಪ ಪ್ರಸ್ತುತದಲಿ ಅನಿವಾರ್ಯ

ಎಂಬ ಧೈರ್ಯವನ್ನು ವಿವೇಚನೆಯನ್ನು ಈ ಮನೋಧರ್ಮ ಒಳಗೊಳ್ಳುತ್ತದೆ.  ಅಷ್ಟೇ ಅಲ್ಲ, ಸುತ್ತಣ ಸಾಮಾಜಿಕ ಅನ್ಯಾಯಗಳಿಗೆ ಆಧ್ಯಾತ್ಮಿಕವಾದ ಪರಿಹಾರಗಳನ್ನು ಸೂಚಿಸುವ ಹುಂಬತನಕ್ಕೆ ಕೈ ಹಾಕದೆ, ಅಥವಾ ಅವುಗಳನ್ನು ಅಸಹಾಯಕನಾಗಿ ಒಪ್ಪಿಕೊಳ್ಳದೆ, ಅವುಗಳನ್ನು ಬಯಲಿಗೆಳೆಯುವ ರೊಚ್ಚು ಕೆರಳುತ್ತದೆ ಈ ಕವಿತೆಗಳಲ್ಲಿ.  ಆದುದರಿಂದಲೆ –

ಇಲ್ಲಿವನ, ನೀವು ಖರೆ ಪ್ರಾಮಾಣಿಕರಾಗಿ
ದ್ದರೆ ಮುಖನೋಡಿ ಮಣೆಹಾಕಬಾರದು
ಕೆಂಡಮೀಸೆಯ ಬಿಚ್ಚುಗತ್ತಿಯ ಕಣ್ಣಿನ ತೆರೆದ
ಹಾವಿನ ನಾಲಗೆಯ

ಆಮಿಷಖೋರನ ಚಹರೆಗೆ ನಿವಿಣ್ಣದಾಗಬಾರದು

ಎಂದು ಧೈರ್ಯವಾಗಿ ವಾಸ್ತವಿಕ ಪರಿಹಾರವನ್ನು ಸೂಚಿಸಲಾಗಿದೆ, ಹಾಗೆಯೆ –

ಯೋಚಿಸು: ಸುಸೂತ್ರ ಹೊರದಾರಿಗಳ : ವಿಶಾಲ ವಿಸ್ತೃತರಾಜ
ಬೀದಿಗಳ
, ಇನ್ನಾದರೂ ಕಟ್ಟು : ಸತ್ಯನ್ಯಾಯದನಡುವೆಗಟ್ಟಿಸೇತುಬಂಧ

ಎಂಬ ದಿಟ್ಟ ನಿಲುವಿಗೆ ಬಂದು ನಿಲ್ಲುತ್ತದೆ.

ಈ ಕೆಲವು ನಿಲುವುಗಳಿಂದ ನಿಷ್ಪನ್ನವಾಗುವ ಸಂಗತಿ ಇದು;  ಇಲ್ಲಿ ಮುಕ್ತ ಮನಸ್ಸಿನಿಂದ, ವಾಸ್ತವವನ್ನು ಒಪ್ಪಿಕೊಳ್ಳುತ್ತ, ಎದುರಿಸುತ್ತ, ಸಂಘರ್ಷಿಸುತ್ತ ಅಂದಂದಿನ ಅನುಭವಗಳನ್ನು ತನ್ನತನದಲ್ಲಿ ಶೋಧಿಸುವ, ಒಂದು ಪ್ರಯತ್ನವಿದೆ.  ಸುತ್ತಣ ಬದುಕಿನ ‘ದಳ್ಳುರಿ’ಗೆ ಅಳುಕಿದರೂ, ಅಧೈರ್ಯದಿಂದ ಹಿಂದೆಗೆಯುವ ನಿರಾಶೆಯಿಲ್ಲ; ಈ ವಾಸ್ತವದ ಸಾಮಾಜಿಕ ಅನ್ಯಾಯ, ಅಸಮತೆಗಳನ್ನು ಯಾರು ಬಂದರೂ ಸುಧಾರಿಸಲಾರರೆಂಬ ಅರಿವಿದ್ದರೂ, ತನ್ನ ಕೈಲಾದಷ್ಟನ್ನು ತಾನು ಮಾಡಿ ಸತ್ಯ – ನ್ಯಾಯದ ನಡುವೆ ಗಟ್ಟಿಯಾದ ಸೇತುವೆಯನ್ನು ಕಟ್ಟಬೇಕೆಂಬ ಸಂಕಲ್ಪವನ್ನು ಮರೆಯುವುದಿಲ್ಲ;  ಆದರೆ ಈ ದಿಟ್ಟತನದ ಧೋರಣೆಯಿಂದ ಕವಿ ಎಲ್ಲೂ ಒಬ್ಬ ‘ಹೀರೋ’ ಆಗದೆ, ಸಾಮಾನ್ಯ ಮನುಷ್ಯನಂತೆ, ಆತ್ಮಪ್ರತ್ಯಯವಿರುವ ಮನುಷ್ಯನಂತೆ ನಿಲ್ಲುತ್ತಾನೆ.  ಯಾವ ಒಂದು ಹಂತದಲ್ಲೂ ಅಲ್ಲಲ್ಲಿನ ಕನಸನ್ನೊ, ವಿಷಾದವನ್ನೊ, ನಿರಾಸೆಯನ್ನೊ ರೊಚ್ಚನ್ನೊ ತನ್ನ ವ್ಯಕ್ತಿತ್ವದ ಒಂದು ‘ಭಂಗಿ’ಯನ್ನಾಗಿ ಮಾಡಿಕೊಳ್ಳದೆ, ಅವುಗಳನ್ನಲ್ಲಿಯೆ ತೀವ್ರವಾಗಿ ಪಟ್ಟು, ಮತ್ತೆ ಅದರಿಂದ ಬಿಡಿಸಕೊಂಡು ಮುಂದಿನ ಮಜಲಿಗೆ ನಡೆಯುವ ಅಲಿಪ್ತತೆ ಈ ಕವಿತೆಗಳ ಒಂದು ವಿಶೇಷ.  ಹೀಗಿರುವುದರಿಂದಲೇ ಈ ಕವಿ, ಯಾವ ಒಂದು ನಿಲುವಿಗೂ ಕಟ್ಟುಬೀಳದೆ, ಸಮಗ್ರವಾಗಿ ಬದುಕನ್ನು ವಿವಿಧ ಆಯಾಮಗಳಿಂದ ನೋಡಲು ಮತ್ತು ಅನುಭವಿಸಲು ಪ್ರಯತ್ನಿಸುವುದು.  ಈ ಪ್ರಯತ್ನದಲ್ಲಿ ಬಿದರಕುಂದಿಯವರ ನಾಳಿನ ಕವಿತೆ ಇನ್ನಷ್ಟು ಹೊಸ ನೆಲವನ್ನು ಉತ್ತುಬಿತ್ತಿ ಬೆಳೆ ತೆಗೆಯುವ ಬಗೆಗೆ ನನಗೆ ಭರವಸೆ ಇದೆ.

ಅಲ್ಲಮಪ್ರಭುವಾದ ಮತ್ತು ಇತರ ಪದ್ಯಗಳು : ಶಾಮಸುಂದರ ಬಿದರಕುಂದಿ ೧೯೭೬.


[1] ಈ ಸಂಕಲನದ ಕೆಲವು ‘ಅಲ್ಲಮ ಪ್ರಭುವಾದ’, ‘ಹೊಗೆಮಬ್ಬಿನ ಕಸಿವಿಸಿ’, ‘ಇಪ್ಪತ್ತೆಂಟನೆಯ ಸ್ವಾತಂತ್ರ್ಯ  ಉತ್ಸವ’, ‘ನಿನ್ನ ಗುರುತಿಗೆ ನಿನ್ನ ಮನೆ ವರ್ಣನೆ’ ಇಂಥ ಕವಿತೆಗಳ ರಚನಾ ವಿನ್ಯಾಸ, ಭಾಷೆಯ ಹಾಸು ಬೀಸು ವಿಶೇಷವಾಗಿ ಗಮನಿಸತಕ್ಕದ್ದಾಗಿದೆ.  ಬಿದರಕುಂದಿಯವರು ವಿಶಿಷ್ಟಾಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತಿರುವರೆಂಬುದಕ್ಕೆ ಸಾಕ್ಷಿಗಳಾಗಿವೆ.