ಕೆಲವು ವರ್ಷಗಳ ಹಿಂದೆ ಯುವ ಕವಿ ಸಮ್ಮೇಳನವೊಂದರಲ್ಲಿ ಶ್ರೀ ಮುಕುಂದ ರಾಜ್ ತಮ್ಮ ಒಂದು ಕವಿತೆಯ ವಾಚನದಿಂದ ನನ್ನ ಗಮನವನ್ನು ವಿಶೇಷವಾಗಿ ಸೆಳೆದರು.  ಅಂದು ಅವರು ಓದಿದ ಪದ್ಯ “ಹದ್ದು ಮತ್ತು ಜೀಮೂತ”.  ಪದ್ಯದ ವಸ್ತು ಸಂಸ್ಕೃತದಲ್ಲಿ ಸುಪ್ರಸಿದ್ಧವಾದ ಶ್ರೀಹರ್ಷನ ‘ನಾಗಾನಂದ’ ನಾಟಕದ್ದು.  ಜೀಮೂತವಾಹನ ಒಬ್ಬ ವಿದ್ಯಾಧರ.  ಆತ ಮಲಯವತಿಯೆಂಬ ರಾಜಕುಮಾರಿಯನ್ನು ಮದುವೆಯಾದ ಹೊಸತರಲ್ಲಿ, ಮಲಯವತಿಯ ಅಣ್ಣನಾದ ಮಿತ್ರಾವಸುವಿನೊಡನೆ ಸಮುದ್ರತೀರದಲ್ಲಿ ವಿಹರಿಸುತ್ತಿರುವಾಗ, ಪರ್ವತೋಪಮವಾಗಿ ಬಿದ್ದಿದ್ದ ಬೆಳ್ಳನೆಯ ಮೂಳೆಗಳ ರಾಶಿಯೊಂದನ್ನು ಕಂಡು ಆಶ್ಚರ್ಯಪಟ್ಟು, ಅವು ಗರುಡನಿಗೆ ಸರದಿಯ ಮೇರೆಗೆ ಒಪ್ಪಂದದ ಪ್ರಕಾರ ದಿನವೂ ಆಹಾರವಾದ ಅಸಂಖ್ಯ ನಾಗಗಳ ಎಲುಬುಗಳ ಮೊತ್ತ ಎಂಬುದನ್ನು ತಿಳಿದು, ಅತ್ಯಂತ ದುಃಖಿತನಾಗಿ, ಒಬ್ಬ ನಾಗನನ್ನಾದರೂ ಬದುಕಿಸಲು ತನ್ನನ್ನು ತಾನು ಬಲಿಕೊಟ್ಟುಕೊಳ್ಳುವುದು ಸಾಧ್ಯವಾದರೆ ತನ್ನ ಬದುಕು ಸಾರ್ಥಕ ಎಂದುಕೊಳ್ಳುತ್ತಾನೆ.  ಆ ವೇಳೆಗೆ ಅಂದು ಗರುಡನಿಗೆ ಆಹಾರವಾಗಬೇಕಾಗಿದ್ದ ಶಂಖಚೂಡನೆಂಬ ನಾಗನ ತಾಯಿಯ ಅಳಲನ್ನು ಕಣ್ಣಾರೆ ಕಂಡ ಜೀಮೂತವಾಹನನು ಶಂಖಚೂಡನ ಬದಲು, ರಕ್ತವಸ್ತ್ರಗಳನ್ನು ಹೊದ್ದುಕೊಂಡು ವಧ್ಯಶಿಲೆಯ ಮೇಲೆ ಕೂತು ಎರಗಿ ಬಂದ ಗರುಡನಿಗೆ ತನ್ನನ್ನು ಆಹಾರವನ್ನಾಗಿ ಒಪ್ಪಿಸಿಕೊಳ್ಳುತ್ತಾನೆ.  ಇದೊಂದು ಧೀರೋದಾತ್ತವಾದ ತ್ಯಾಗದ ಕಥೆ.  ಈ ಹೊತ್ತು ಈ ಕಥೆ ಹೇಗೆ ಸಲ್ಲುತ್ತದೆ ಎನ್ನುವುದು ನಿಜವಾದ ಪ್ರಶ್ನೆಯಾಗಿದೆ.  ಅಂದಿನ ಜೀಮೂತವಾಹನ ಶಂಖಚೂಡನ ಬದಲು ಗರುಡನ ಮೃತ್ಯುದವಡೆಗೆ ತನ್ನನ್ನು ಸದ್ದಿಲ್ಲದೆ  ಒಪ್ಪಿಸಿಕೊಂಡಾಗ, ಆತನ ತ್ಯಾಗದ ಮಹತ್ತಿನಿಂದ ದಿಗ್ಭ್ರಮೆಗೊಂಡ ಗರುಡನಿಗೆ  ಪಶ್ಚಾತ್ತಾಪದಿಂದ ಮನಃಪರಿವರ್ತನೆಯಾದುದು ಮಾತ್ರವಲ್ಲ, ಗರುಡನೇ ದೇವಲೋಕದಿಂದ ತಂದ ಅಮೃತದ ಧಾರೆಯಿಂದ ಮರಣೋನ್ಮುಖನಾದ ಜೀಮೂತವಾಹನ ಬದುಕಿ ಉಳಿಯುತ್ತಾನೆ.  ಅಷ್ಟೇ ಅಲ್ಲ, ಪರ್ವತಾಕಾರದ ಮೂಳೆಯ ರಾಶಿಯ ಮೇಲೂ ಅಮೃತ ಸಿಂಚನವಾದದ್ದರಿಂದ, ಆವರೆಗೂ ಮೃತವಾದ ನಾಗಸಂತತಿಯೂ ಬದುಕಿ, ನಾಗಗಳಿಗೆ ಮಹದಾನಂದವಾಗುತ್ತದೆ.  ಇದು ‘ನಾಗಾನಂದ ’ದ ವಸ್ತು.  ಈ ವಸ್ತುವನ್ನು ನಮ್ಮ ಸಮಕಾಲೀನತೆಯಲ್ಲಿ ಇರಿಸಿ ಬರೆಯುವ ಮುಕುಂದರಾಜ್ ಅವರು, ಈ ಹೊತ್ತಿನ ಹದ್ದುಗಳು ನಮ್ಮ ಪರಿಸರದ ಜೀಮೂತವಾಹನರಂಥ ಮುಗ್ಧರನ್ನು ಕುಕ್ಕಿ ಹರಿದು ತಿನ್ನುವ ಕರಾಳತೆಯನ್ನು ಚಿತ್ರಿಸಲು ಬಳಸುತ್ತಾರೆ.  ಅಷ್ಟೆ ಅಲ್ಲ, ಇಂಥ ಪರಿಸರದಲ್ಲಿ ತ್ಯಾಗದ ಹಾಗೂ ಧೀರೋದಾತ್ತತೆಯ ನಿಲುವುಗಳು ಎಷ್ಟೊಂದು ಪೊಳ್ಳಾಗಿಬಿಡುತ್ತವೆ ಎಂಬ ವಾಸ್ತವವನ್ನು ನಿಚ್ಚಳವಾಗಿ ತೆರೆದುತೋರುತ್ತದೆ.  ‘ಹದ್ದು ಮತ್ತು ಜೀಮೂತ’ ಎಂಬ ಈ ಕವಿತೆಯ ಮೂಲಕ. ‘ನಾಗಾನಂದ’ ನಾಟಕದ ವಸ್ತುವನ್ನು, ನಮ್ಮ ಪ್ರಸ್ತುತ ಸಂದರ್ಭದಲ್ಲಿ ವ್ಯಾಖ್ಯಾನಿಸುವ ಮುಕುಂದರಾಜ್, ಈ ಕವಿತೆಯ ತುದಿಯಲ್ಲಿ ಒಂದು ಮಹತ್ವದ ಪ್ರಶ್ನೆಯನ್ನು ಎತ್ತುತ್ತಾರೆ.

ತ್ಯಾಗಕ್ಕಾಗಿ ಜೀವ ತೆರಲು ಬಂದ ಜೀಮೂತ
ಕುಕ್ಕಿ ತಿನ್ನುವುದೇ ಉದ್ಯೋಗವಾದ ಹದ್ದು
ಇಬ್ಬರಲಿ ಯಾರು ಹೆಚ್ಚು
?…………

ಆದರೆ ನಿಜವಾದ ಉತ್ತರ ಈ ಇಬ್ಬರಲ್ಲಿ ಯಾರು ಹೆಚ್ಚು ಯಾರು ಕಡಮೆ ಎಂಬುದಕ್ಕಿಂತ ಬೇರೆಯೆ ಆಗಿದೆ.  ಅದೆಂದರೆ –

ಕೊನೆಗೆ ಕೊಕ್ಕುಗಳು ಮಸೆಯುತ್ತವೆ
ತಮ್ಮನ್ನು ತಾವೇ ಗೆದ್ದು

ಯಾಕೆಂದರೆ ನಾವು ಬದುಕುತ್ತಿರುವುದು ಕ್ರೌರ್ಯ ಹಾಗು ಹಿಂಸೆಗಳ ಜಗತ್ತಿನಲ್ಲಿ; ‘ಕುಕ್ಕಿ ತಿನ್ನುವುದೇ ಉದ್ಯೋಗವಾಗಿರುವ’ ಹದ್ದುಗಳ ಬೀಡಿನಲ್ಲಿ.  ಇಂಥ ಜಗತ್ತಿನ ನಡುವೆ ಪ್ರೀತಿಗಾಗಿ ಹಾತೊರೆಯುವ, ಸುಂದರವಾದ ಕನಸುಗಳನ್ನು ಕಟ್ಟಿಕೊಳ್ಳುವ, ಆದರ್ಶಗಳಿಗೆ ಹಂಬಲಿಸುವ, ಬಹುಬಗೆಯ ಬಯಕೆಗಳಿಗೆ ತೀವ್ರವಾಗಿ ಸ್ಪಂದಿಸುವ ಸೂಕ್ಷ್ಮವಾದ ಮನಸ್ಸುಗಳು ಎದುರಿಸುವ ಆಘಾತಗಳು, ಅವು ಪಡುವ ಪಾಡುಗಳು ನಮ್ಮೆಲ್ಲರನ್ನೂ ಅತೀವ ಅಸ್ವಸ್ಥರನ್ನಾಗಿ ಮಾಡುತ್ತವೆ; ಕಂಗೆಡಿಸುತ್ತವೆ.  ಈ ಜಗತ್ತಿನಲ್ಲಿ ಕೊನೆಗೂ ಗೆಲ್ಲುವುದು ಮಸೆಯುವ ಹಾಗೂ ಕುಕ್ಕಿ ತಿನ್ನುವ ಹದ್ದಿನ ಕೊಕ್ಕುಗಳೇ ಅನ್ನಿಸಿದರೆ ಆಶ್ಚರ್ಯವಿಲ್ಲ.  ಇಂಥ ವಾತಾವರಣದಲ್ಲಿ –

ಬಾ ಮಗುವೆ ಬಾ
ಬದುಕಿಸು ಬಾ
ಬದುಕಲಾಗದಿದ್ದರೂ ಪರವಾಗಿಲ್ಲ
ಸಾವು ಸಲೀಸಾಗಲಿ ಬಾ

ಎಂದು ಮರಣದ ಮೊರೆಹೋಗುವ, ಸಾವೊಂದೇ ಸತ್ಯವೇನೋ ಎಂಬ ನಿಲುವೊಂದು ಮಂಡಿತವಾಗುತ್ತದೆ – ಈ ಸಂಕಲನದ ಬಹುತೇಕ ಕವನಗಳಲ್ಲಿ.  ಹೀಗಾಗಿ ಮುಕುಂದ ರಾಜ್ ಅವರ ಈ ಕವಿತೆಗಳ ಕೇಂದ್ರ ಮೃತ್ಯುಪಜ್ಞೆಯೆ ಆಗಿದೆ.

ಆದರೆ ಸಾವನ್ನು ಅಥವಾ ಮೃತ್ಯುವನ್ನು ಒಂದು ತತ್ವಜ್ಞಾನವಾಗಿ ಒಪ್ಪಿಕೊಳ್ಳುವ ದೃಷ್ಟಿಕೋನಕ್ಕೂ, ಈ ತಲ್ಲಣಗೊಳಿಸುವ ಈ ಜಗತ್ತಿನ ಕೇಡುಗಳಿಗೆ ಬೇಸತ್ತು ಸಾವನ್ನು ಒಂದು ಪರಿಹಾರವೆಂಬಂತೆ ಮೊರೆಹೋಗುವ ನಿಲುವಿಗೂ ವ್ಯತ್ಯಾಸವಿದೆ.  ನಿಜ, ಈ ನಮ್ಮ ಜಗತ್ತು ಭಯಾನಕವಾಗಿದೆ; ಇಲ್ಲಿ ‘ಹಗಲಾಗದ ರಾತ್ರಿಗಳು’; ‘ಗರಿ ಸುಟ್ಟ ಪಾರಿವಾಳದ ವಾಸನೆಗಳು’; ‘ಕತ್ತರಿಸಿ ಚೆಲ್ಲುವ ಕತ್ತಿ ಕುಡುಗೋಲುಗಳು’; ಪ್ರಾತಃಕಾಲದಲ್ಲಿ  ‘ಕಪ್ಪಗೆ ಚುಚ್ಚುವ ದಪ್ಪಕ್ಷರದ ಪತ್ರಿಕೆಗಳು’ – ಇಂಥ ಪರಿಸ್ಥಿತಿಯಲ್ಲಿ ಬದುಕುವುದಾದರೂ ಹೇಗೆ?  ಆದಕಾರಣ ಕವಿ ಹತಾಶನಾಗಿ ಹೇಳುತ್ತಾನೆ: ‘ಆಸೆಗಳಿದ್ದರೆ ಕೊಂದುಬಿಡಿ, ಕೂಸುಗಳ ಕತ್ತುಹಿಸುಕಿ, ಪಾಪದವು ಯಾಕಾದರೂ ಹೆಣಗಬೇಕಿಲ್ಲ ಬದುಕಿ’, ಇನ್ನು ‘ಇಲ್ಲಿ ಸಲ್ಲಬೇಕಾದವರು ಸತ್ತಿದ್ದಾರೆ’.  ಹೀಗಾಗಿ ‘ಸಾವು ತುಂಬಾ ಆಪ್ತವೆನ್ನಿಸಿಬಿಡುತ್ತದೆ’.  ಅಷ್ಟೇ ಅಲ್ಲ ‘ಸಾವೂ ಬದುಕಿನಷ್ಟೆ, ಮುಖ್ಯ ಪ್ರವಾದಿ’.  ನಿಜ, ಬದುಕು ಅಸಹನೀಯವಾಗಿದೆ; ಭ್ರಷ್ಟವಾಗಿದೆ.  ಹಾಗಂತ ಸಾವು ಇದಕ್ಕೆ ಪರಿಹಾರವೆ?  ಅದು ಪರಿಹಾರವೆಂದು ಭಾವಿಸುವುದಾದರೆ, ಅದೊಂದು ಪಲಾಯನ ಪ್ರವೃತ್ತಿಯಾಗುವುದಿಲ್ಲವೆ?  ಸಾವು ಕಟ್ಟಿಟ್ಟ ಬುತ್ತಿ; ಅದು ಅನಿವಾರ್ಯ.  ಅದನ್ನು ತಡೆಯುವುದು ನಮ್ಮ ಕೈಯಲ್ಲಿ ಇಲ್ಲವಲ್ಲ.  ಆದರೆ ಬದುಕು ನಮ್ಮ ಎದುರಿಗಿದೆ.  ಅದು ನಮಗೆ ದತ್ತವಾಗಿದೆ.  ಅದನ್ನು ಕುರಿತ ಪ್ರೀತಿ, ಅದನ್ನು ಕುರಿತ ಶ್ರದ್ಧೆ ಉಳಿದ ಎಲ್ಲದಕ್ಕಿಂತ ದೊಡ್ಡದು.  ಹಾಗೆ ನೋಡಿದರೆ ಬದುಕನ್ನು ಗಾಢವಾಗಿ ಪ್ರೀತಿಸುವುದೂ, ಒಪ್ಪಿಕೊಳ್ಳುವುದೂ, ಒಲಿಯುವುದೂ ಧೀರತೆಯ ಲಕ್ಷಣವೇ.

ಸಾವನ್ನು ಗಾಢವಾಗಿ ಪ್ರೀತಿಸುವಂತೆ ತೋರುವ ಮುಕುಂದರಾಜ್ ಅವರ ಈ ನಿಲುವು ಜೀವನಪ್ರೀತಿಯ ನಿರಾಕರಣೆಯಿಂದ ನಿಷ್ಪನ್ನವಾದುದಲ್ಲ.  ಈ ಬದುಕನ್ನು  ಅದರ ರಮ್ಯತೆಯ ಹಾಗೂ ಆದರ್ಶಗಳ ನೆಲೆಯಲ್ಲಿ ಗ್ರಹಿಸುವ ಮನಸ್ಸಿಗಿಂತ, ಅದನ್ನು ಅದರ ಅಕರಾಳ-ವಿಕರಾಳಗಳ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮನಸ್ಸು ಹೆಚ್ಚು ಗಾಢವಾದ ಸತ್ಯಗಳನ್ನು ಹುಡುಕಬಲ್ಲದೆಂದು ತೋರುತ್ತದೆ.  ಈ ಬದುಕಿನ ಕೇಡುಗಳ ವಿಜೃಂಭಣೆಯ ನಡುವೆಯೂ, ಈ ಜಗತ್ತಿನಿಂದ ನಾವು ಪಡೆಯಬಹುದಾದ ದಟ್ಟವಾದ ಅನುಭವಗಳನ್ನು ದಕ್ಕಿಸಿಕೊಳ್ಳಬೇಕೆಂಬ ಹಂಬಲಕ್ಕೆ ಈ ಮನಃಸ್ಥಿತಿ ಹೊರಗಾದುದಲ್ಲ.  ಅದು –

ಹುಳ್ಳಗೆ ಹುಳಿತ ಹೆಂಡದ ನೊರೆ ಬೇಕು ಬೇಕೆನಗೆ
ಮಿಳ್ಳಗೆ ಮಿಂಚುವ ಮೀನಿನ ಖಡಿ ಬೇಕೆನ್ನ ಕೊನೆಗೆ

ಎಂದು ಆಶಿಸುತ್ತದೆ.  ಹೀಗೆಯೆ, ‘ಪ್ರೇಮ’ವನ್ನು ಕುರಿತು ಈ ಸಂಕಲನದೊಳಗಿನ ಹಲವು ಕವಿತೆಗಳು ದಟ್ಟವಾದ ಇಂದ್ರಿಯಾನುಭವಗಳ ಪರಿಭಾಷೆಯಲ್ಲಿ (Sensuous Imagery) ಬದುಕಿನ ಅದಮ್ಯವಾದ ಸೆಳೆತಗಳನ್ನು ಚಿತ್ರಿಸುತ್ತವೆ.  ಸುಮ್ಮನೆ ನಿದರ್ಶನಕ್ಕೆ ಹೇಳುವುದಾದರೆ – ‘ಆಕಾಶಕ್ಕೆ ಹೋಗೋಣ’, ‘ಭ್ರೂಣದ ಹಾಡು’, ‘ಹೆಣ ಹೂತ ನೆಲದಲ್ಲಿ’ ‘ಒಂದು ಸಹಜ ಪ್ರಶ್ನೆ’ ‘ಪ್ರಿಯ ರಂಜನಿ’ ‘ಚಿತ್ರಕ್ಕೆ ಗೆರೆಯಾಗುತ್ತೇನೆ’ – ಇಂಥ ಕವಿತೆಗಳೊಳಗಿನ ಬದುಕಿನ ದಾಹ, ಸಾವಿನ ಬಯಕೆಯನ್ನು ಕುರಿತ ಕವಿತೆಗಳೊಂದಿಗೆ ಮುಖಾಮುಖಿಯಾಗಿ ನಿಲ್ಲುತ್ತ ‘ಸಾವೂ ಬದುಕಿನಷ್ಟೆ ಮುಖ್ಯ ಪ್ರವಾದಿ’ ಎಂಬ ನಿಲುವನ್ನು ಗಟ್ಟಿಗೊಳಿಸುತ್ತದೆ.  ಮುಖ್ಯವಾದ ಮಾತೆಂದರೆ ಇಲ್ಲಿನ ಕವಿತೆಗಳಲ್ಲಿ ಸಾವಿನ ಸೆಳೆತ ಹಾಗೂ ಅದಮ್ಯವಾದ ಜೀವನಪ್ರೀತಿ ಈ ಎರಡರ ಸಂಘರ್ಷದ ನೆಲೆಯೊಂದರಲ್ಲಿ, ಮುಕುಂದರಾಜ್ ಅವರು ಬದುಕಿನ ಅನುಭವಗಳನ್ನು ಶೋಧನೆಗೆ ಗುರಿಪಡಿಸಿದ್ದಾರೆ.

ಶ್ರೀ ಮುಕುಂದರಾಜ್ ತಮ್ಮ ಓರಗೆಯ ಕವಿಗಳಿಂದ ಭಿನ್ನವಾಗಿ ಕಾಣಿಸುವುದು ಕೇವಲ ತಮ್ಮ ನಿಲುವಿನಿಂದ ಮಾತ್ರವಲ್ಲ; ತಮ್ಮ ಕವಿತೆಯ ಭಾಷೆ ಹಾಗು ಬಂಧಗಳ ಮೂಲಕವಾಗಿಯೂ. ಈ ಕವಿತೆಗಳನ್ನು ಓದುತ್ತಿದ್ದರೆ ಇವು ನಿಜವಾದ ತುರ್ತಿನಿಂದ ಸಂಭವಿಸಿದ ಶಾಬ್ದಿಕ ನಿರ್ಮಿತಿಗಳಾಗಿವೆ – ಪ್ರತೀಕಗಳ ಹೊಸತನದಲ್ಲಿ, ಹರಳುಗೊಂಡ ಚಿಂತನೆಯಲ್ಲಿ, ಮಡುಗಟ್ಟಿದ ಭಾವಗಳಲ್ಲಿ, ಬಂಧದ ಬಿಗಿಯಲ್ಲಿ ಮತ್ತು ಭಾಷೆಯನ್ನು ಸೃಜನಾತ್ಮಕವಾಗಿ ಬಳಸುವ ಕೌಶಲದಲ್ಲಿ.  ಈ ಹೊತ್ತಿನ ತೀರಾ ಸಲೀಸಾದ ಹಾಗೂ ತೆಳುವಾದ ಬಹುತೇಕ ರಚನೆಗಳ ಹಿನ್ನೆಲೆಯಿಂದ ನೋಡಿದರಂತೂ, ಕವಿತೆಯನ್ನು ನಿಜವಾಗಿಯೂ ಒಂದು ಗಂಭೀರವಾದ ಕಲೆಗಾರಿಕೆ ಎಂದು ಪರಿಗಣಿಸಿದ ಮನಸ್ಸೊಂದು ಇಲ್ಲಿ ಕ್ರಿಯಾಶೀಲವಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ದೇಶಕೋಶ ದಾಸವಾಳ : ಎಲ್.ಎನ್. ಮುಕುಂದರಾಜ್, ೧೯೯೨