ಶ್ರೀ ಎಂ.ಎನ್. ವ್ಯಾಸರಾವ್ ಅವರನ್ನು ನಾನು ಕಳೆದ ಹತ್ತು, ಹದಿನೈದು ವರ್ಷಗಳಿಂದಲೂ ಚೆನ್ನಾಗಿ ಬಲ್ಲೆ.  ವೃತ್ತಿಯಿಂದ ಅವರು ಬ್ಯಾಂಕ್ ನೌಕರರು.  ಅವರ ದೈನಂದಿನ ವ್ಯವಹಾರವೆಲ್ಲಾ ಹಣ ಪ್ರಪಂಚದಲ್ಲಿ.  ಆದರೆ ಅವರು ಸದಾ ಸಾಹಿತ್ಯ ಹಾಗೂ ಸಾಹಿತಿಗಳ ಸಂಗದಲ್ಲಿ ತಮ್ಮನ್ನು ತೀರಾ ಲವಲವಿಕೆಯಿಂದ ತೊಡಗಿಸಿಕೊಂಡವರು.  ಇದು ಅವರ ಚಟುವಟಿಕೆಯ ಒಂದು ಮುಖವಾದರೆ, ಮತ್ತೊಂದು ಮುಖ ಅವರಿಗೆ ಚಲನಚಿತ್ರ ಜಗತ್ತಿನೊಂದಿಗೆ ಇರುವ ಸಂಬಂಧ.  ಇದಂತೂ ಬರಹಗಾರರಿಗೆ ಒಂದು ಗಾಣವೇ.  ಅದು ಅವರ ಸೃಜನ ಸಾಮರ್ಥ್ಯವನ್ನು ಅರೆಯುವ ಗಾಣ ಮಾತ್ರವಲ್ಲ, ಅವರನ್ನೇ ಒಂದು ಗಾಣವಾಗಿ ಮಾರ್ಪಡಿಸಿ ಚಲನಚಿತ್ರದ ಕಥೆಯ ಸಮಯ ಸಂದರ್ಭಗಳಿಗೆ ಅನುಸಾರವಾಗಿ ಒಂದಷ್ಟನ್ನು ಅರೆದು ಕೊಡುವ ಯಾಂತ್ರಿಕತೆಗೆ ಒಳಪಡಿಸುತ್ತದೆ.  ಆದರೂ ವ್ಯಾಸರಾವ್ ಮೊದಲು ಜನರ ಕಿವಿಯನ್ನು ಅಥವಾ ಗಮನವನ್ನು ಸೆಳೆದದ್ದು ಒಂದು ಸಿನಿಮಾ ಹಾಡಿನಿಂದಲೇ.

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
ಅರಮನೆಯಾಗೇನೈತೆ ಸೊಗಸು

ಹೀಗೆ ಮೊದಲಾಗುವ ಈ ಹಾಡು ದಿನ ಬೆಳಗಾದರೆ ಹಲವು ವರ್ಷಗಳ ಕಾಲ ಜನಗಳ ಮೆಚ್ಚಿನ ಹಾಡಾಗಿ ಧಾಳಿಯಿಡತೊಡಗಿತ್ತು-  ಎಲ್ಲ ಬಗೆಯ ಸಮರಂಭಗಳಲ್ಲೂ.  ಎಷ್ಟೋ ಸಿನಿಮಾ ಹಾಡುಗಳಂತೆ, ಇದೂ ಹಿಂದಕ್ಕೆ ಹೋಗಿ, ಕನಸಿನಲ್ಲೆಂಬಂತೆ ಒಂದೊಂದು ಸಲ ಕಿವಿಯ ಮೇಲೆ ಬೀಳುತ್ತದೆ.  ಆದರೆ ಈ ಹಾಡು ಎಲ್ಲ ಸಿನಿಮಾ ಹಾಡುಗಳಂತೆ ಅಲ್ಲದೆ, ಅದರ ಅರ್ಥದ, ಭಾವದ ಸೊಗಸಿನಿಂದ ಒಳ್ಳೆಯ ಕಾವ್ಯಕ್ಕೆ ತೀರಾ ಹತ್ತಿರವಾದ ಒಂದು ಅನುಭವವನ್ನು ಕೊಡುವಂಥದ್ದಾಗಿದೆ.  ವ್ಯಾಸರಾವ್ ಒಳಗಿನ ಕವಿ, ಇಲ್ಲಿ ಮೊಟ್ಟಮೊದಲು ತನ್ನನ್ನು ತಾನು ಅಭಿವ್ಯಕ್ತಪಡಿಸಿಕೊಂಡಿದ್ದು ಹೀಗೆ.

ಈ ಚಲನಚಿತ್ರ ಜಗತ್ತಿನ ಸಂಬಂಧವನ್ನುಳಿಸಿಕೊಂಡೂ ವ್ಯಾಸರಾವ್ ಹಲವಾರು ವರ್ಷಗಳಿಂದ ಕವಿತೆಯನ್ನು ಬರೆಯುತ್ತಲೇ ಬಂದಿದ್ದಾರೆ.  ಪ್ರಕಟಿಸಲು ಅರ್ಹವಾದ ಸಾಕಷ್ಟು ಸಂಖ್ಯೆಯ ಕವಿತೆಗಳನ್ನು ಬರೆದರೂ, ಅವುಗಳನ್ನು ಒಂದು ಸಂಗ್ರಹವಾಗಿ ಪ್ರಕಟಿಸುವ ವಿಚಾರದಲ್ಲಿ ಒಂದು ರೀತಿಯ ಸಂಕೋಚವನ್ನೋ, ಸಂಯಮವನ್ನೋ, ಬೆಳೆಯಿಸಿಕೊಂಡವರು ಅವರು.  ನನ್ನ ದೃಷ್ಟಿಯಲ್ಲಿ ಅದನ್ನು ಒಂದು ಸಂಕೋಚ ಎನ್ನುವ ಬದಲು ಅದೊಂದು ರೀತಿಯ ಸಂಯಮ ಎನ್ನುವುದೇ ಸರಿ ಎಂದು ತೋರುತ್ತದೆ.  ಯಾಕೆಂದರೆ ಸಂಕೋಚ ಅನ್ನುವುದು ವ್ಯಾಸರಾವ್‌ಗೆ ಶೋಭಿಸುವ ಗುಣವಲ್ಲ; ಎಂಥವರನ್ನೂ, ತಮ್ಮ ಚುರುಕಾದ ಹಾಗೂ ಪ್ರಿಯವಾದ ವ್ಯಕ್ತಿತ್ವದಿಂದ  ಮಾತನಾಡಿಸಿ ಬೆರೆಯಬಲ್ಲವರು ಅವರು.  ಇಂಥವರು ಬಹಳಷ್ಟು ಬರೆದೂ, ಬರೆದದ್ದನ್ನು ಪ್ರಕಟಿಸುವ ಬಗ್ಗೆ ಸಾಕಷ್ಟು ತಡೆ ಹಿಡಿಯುವುದು, ಇಂದಿನ ದಿನಗಳಲ್ಲಿ ಒಂದು ವಿಶೇಷವಾದ ಲಕ್ಷಣವೆಂದೇ ನಾನು ತಿಳಿದಿದ್ದೇನೆ.  ಅಂತೂ ವ್ಯಾಸರಾವ್ ತಾವು ಬರೆದದ್ದನ್ನು ಸಾಕಷ್ಟು ಜರಡಿ ಹಿಡಿದು, ತಮಗೆ ಒಪ್ಪಿಗೆಯಾದ ಕೆಲವು ಕವಿತೆಗಳನ್ನು ಕೂಡಿಸಿ ಇದೀಗ “ಬೆಳ್ಳಿ ಮೂಡುವ ಮುನ್ನ” ಎಂಬ ಹೆಸರಿನಿಂದ ಪ್ರಕಟಣೆಗೆ ಸಿದ್ಧಪಡಿಸಿದ್ದಾರೆ.  ಇದರಲ್ಲಿರುವ ಕೆಲವನ್ನು ಆಗಾಗ ಅವರು ಓದಿ ತೋರಿಸಿದಾಗ, ಚೆನ್ನಾಗಿದೆ ಎಂದು ನಾನು ಮೆಚ್ಚಿಕೊಂಡದನ್ನೆ ಪಟ್ಟಾಗಿ ಹಿಡಿದು, ಈಗ ಈ ಸಂಗ್ರಹಕ್ಕೆ ಒಂದು ಮುನ್ನುಡಿಯನ್ನು ಬರೆಯುವ ಕೆಲಸಕ್ಕೆ ನನ್ನನ್ನು ಹಚ್ಚಿದ್ದಾರೆ.  ಹೀಗಾಗಿ ನಾನು ಈ ಸಂಗ್ರಹದ ಮೊದಲ ಓದುಗನಾಗುವ ಅವಕಾಶವನ್ನು ವ್ಯಾಸರಾವ್ ಅವರು ತುಂಬ ಪ್ರೀತಿಯಿಂದ ನನಗೆ ಒದಗಿಸಿಕೊಟ್ಟಿದ್ದಾರೆ.

ಈ ಸಂಗ್ರಹದಲ್ಲಿ ನನ್ನನ್ನು ಹಿಡಿದು ನಿಲ್ಲಿಸಿದ ಒಂದು ಕಿರು ಕವಿತೆ, ‘ಸ್ನೇಹ’ ಅನ್ನುವುದು:

ಬೀಡಿ ಹಚ್ಚಲು
ಕಡ್ಡಿ ಕೇಳಿದ
ಕೊಟ್ಟೆ.
ಹಚ್ಚಿಸಿ ಪಕ್ಕಕ್ಕೆಸೆದು ಹೋದ.
ಅಲ್ಲಿದ್ದ ಮೆದೆ ಹತ್ತಿ
ಈಗ ನನ್ನ ಮನೆ
ಧಗಧಗನೆ ಉರಿಯುತ್ತಿದೆ.

(
ಸ್ನೇಹ : ಪುಟ ೫೪)

ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಸೊಗಸಾದ ಕವಿತೆ.  ಮಾತಿನ ಬಳಕೆಯ ಹಿಡಿತದಲ್ಲಿ, ಅರ್ಥದಲ್ಲಿ, ಭಾವದಲ್ಲಿ, ಅದರ ಧ್ವನಿ ಪ್ರಚುರತೆಯಲ್ಲಿ ಅದು ಮಾಡುವ ಪರಿಣಾಮ ವಿಶೇಷ ರೀತಿಯದು.  ಮಾನವೀಯ ಸಂಬಂಧಗಳಲ್ಲಿ ವ್ಯಕ್ತಿಗೆ ಅನಿರೀಕ್ಷಿತವಾಗಿ ಒದಗುವ ಆಘಾತವನ್ನು ಮನದಟ್ಟು ಮಾಡಿಕೊಡುತ್ತ ಬದುಕಿನ ಬಗ್ಗೆ ನಮ್ಮನ್ನು ಗಾಢವಾದ ಚಿಂತನೆಯಲ್ಲಿ ತೊಡಗಿಸುತ್ತದೆ.  ಇಡೀ ಕವನ ಸಂಗ್ರಹದ ಮೂಲಕ ವ್ಯಾಸರಾವ್ ಅವರ ಮೂಲ ನಿಲುವುಗಳನ್ನು ಇನ್ನೂ ಗುರುತಿಸುವುದಕ್ಕೆ ಸಾಧ್ಯವಿಲ್ಲವಾದರೂ ಈ ಸಂಗ್ರಹದ ಕೆಲವು ಕವಿತೆಗಳ ಮೂಲಕ ಅಭಿವ್ಯಕ್ತವಾಗುತ್ತಿರುವ ಒಂದು ಮುಖ್ಯ ಧೋರಣೆ ಮಾನವೀಯ ಸಂಬಂಧಗಳನ್ನು ಕುರಿತದ್ದು ಎನ್ನುವುದನ್ನು ಗ್ರಹಿಸಲು ಕಷ್ಟವೇನೂ ಆಗುವುದಿಲ್ಲ.  ‘ಸರಕುಗಳು’, ‘ಗಂಧರ್ವರೆ’, ‘ಸುಭದ್ರೆಯ ಅಣ್ಣನಿಗೊಂದು ಪತ್ರ’, ‘ಪ್ರೀತಿ’, ‘ಮೌನ’ – ಇಂಥ ಕವಿತೆಗಳ ಮೂಲಕ ಇದನ್ನು ಗುರುತಿಸಬಹುದು.

ಈ ಜಗತ್ತು ಮುಖ್ಯವಾಗಿ ಸಂಬಂಧಗಳ ಜಗತ್ತು.  ಇಲ್ಲಿ ಮಾನವೀಯ ಸಂಬಂಧಗಳು ಫಲಿಸದೆ ಹೋಗುವುದರಿಂದ ಒದಗುವ ಹತಾಶೆಗಳು, ಭಯಗಳು, ನೋವುಗಳು ಇತ್ಯಾದಿಗಳ ನಡುವೆ ವ್ಯಕ್ತಿತ್ವ ಮಾಗುವ ರೀತಿಯನ್ನು ಈ ಸಂಗ್ರಹದ ಹಲವು ಕವಿತೆಗಳು ಸೊಗಸಾಗಿ ಚಿತ್ರಿಸುತ್ತವೆ.  ವ್ಯಕ್ತಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಕೇವಲ ವಸ್ತುಗಳಂತೆ ಬಳಸುವ ಈ ಪ್ರಾಯೋಜನಿಕ ಪ್ರಪಂಚದ ಅಮಾನವೀಯತೆಯ ನಡುವೆ –

ನಾನೊಂದು ಕಡೆ ನೀನೊಂದು ಕಡೆ
ತ್ರಾಸಿನ ಬಟ್ಟುಗಳಾಗಿ ನಮ್ಮ ನಡುವೆ
ಪೈಪೋಟಿ ಬೆಳೆಯುತ್ತದೆ.

…………………………………………………….

ಹೀಗೆ ನಿರಂತರವಾಗಿ ನಮ್ಮ ಬೆಲೆ
ಏರುತ್ತ ಇಳಿಯುತ್ತ
ಕೈಯಿಂದ ಕೈಗೆ ಬದಲಾಗುತ್ತ

(
ಸರಕು : ಪು. ೩)

ಹೋಗುವ ಈ ಪರಿಸ್ಥಿತಿಯಲ್ಲಿ,

ಬೇಕು ನನಗೆ;
ಕ್ಷಣಕ್ಕಾದರೂ ಶಾಪ ಮರೆತು ರತಿಗೆ ಹಾತೊರೆವ
ಪಾಂಡು ಮಾದ್ರಿಯರಂಥ
ಕೆಚ್ಚೆದೆಯ ಧೀಮಂತ ಬದುಕು

(
ಗಂಧರ್ವರೆ : ಪು. ೪೦)

ಎನ್ನುವಂಥ ಉತ್ಕಟ ಕ್ಷಣಗಳಿಗೆ ವ್ಯಕ್ತಿತ್ವ ಹಾರೈಸುತ್ತದೆ.  ಉತ್ಕಟವಾದ ಪ್ರೀತಿ ಸ್ನೇಹಗಳೇ, ಈ ವ್ಯಾವಹಾರಿಕ ಜಗತ್ತಿನ ಯಾಂತ್ರಿಕ ಸಂಬಂಧಗಳು ಉಂಟುಮಾಡುವ ವೇದನೆಗೆ ಮದ್ದಾಗಬಲ್ಲವು.  ಆದರೆ ನಾವು ನಿಜವೆಂದುಕೊಂಡ ಎಷ್ಟೋ ಸಂಬಂಧಗಳಲ್ಲಿಯೂ,

ಕೊನೆ ಮುಟ್ಟುವುದಕ್ಕಿಂತ ಹಾದಿ ತಪ್ಪುವುದೇ ಹೆಚ್ಚು
(
ಪ್ರೀತಿ : ಪು. ೧೧)

ಈ ಸಂಗ್ರಹದ ಮತ್ತೆ ಕೆಲವು ಕವಿತೆಗಳಲ್ಲಿ ಕಾಣುವ ಬೇರೊಂದು ಎಳೆ, ನಯ, ನವುರು, ವಿನೋದ ಇತ್ಯಾದಿಗಳಿಗೆ ಸಂಬಂಧಿಸಿದ್ದು.  ಈ ನಯಗಾರಿಕೆ ಪ್ರೇಮವನ್ನು ಕುರಿತ ಕವಿತೆಗಳಲ್ಲಿದೆ.  ‘ಆಕಾಶ ಹಬ್ಬಿರಲು’, ‘ಆ ಊರಿನವಳೆ’, ‘ಪ್ರೀತಿ’, ‘ನಿರೀಕ್ಷೆ’, ‘ಮೌನ’ , ‘ಸರಳ ಪ್ರೇಮ ಸಂಭಾಷಣೆ’, ಇಂಥ ಕವಿತೆಗಳು, ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿಯವರನ್ನು ನೆನಪಿಗೆ ತರುತ್ತದೆ.  ‘ಆಲ್ಬಂ’ ಮತ್ತು ‘ಬೆದರು ಬೊಂಬೆ’ ತುಂಬ ಖುಷಿ ಕೊಡುವ ಕವಿತೆಗಳು.  ಮನುಷ್ಯ ಸ್ವಭಾವದ ಕೆಲವು ಪದರಗಳನ್ನು ಅವು ತೆರೆದು ತೋರುತ್ತವೆ.

ಒಂದೊಂದು ಸಲ ಅನ್ನಿಸುತ್ತದೆ, ಇತ್ತೀಚೆಗೆ ಬರೆಯುವ ಬಹುಪಾಲು ಕವಿಗಳಲ್ಲಿ, ಅವರು ತಮ್ಮ ಕಿರುಕವನಗಳಲ್ಲಿ ಸಾಧಿಸುವ ಗೆಲುವನ್ನು, ಸ್ವಲ್ಪ ದೀರ್ಘವಾದ ಕವನಗಳಲ್ಲಿ ಸಾಧಿಸುವಂತೆ ತೋರುವುದಿಲ್ಲವಲ್ಲ ಯಾಕೆ?  ಈ ಪ್ರಶ್ನೆ ವ್ಯಾಸರಾವ್ ಅವರ ಸಂಗ್ರಹದ ಕೆಲವು ಕವಿತೆಗಳ ಬಗೆಗೂ ಸಲ್ಲುತ್ತದೆ.  ಕಾರಣ ಹೀಗಿರಬಹುದು ಅಂದುಕೊಂಡಿದ್ದೇನೆ.  ಇದು ಅವಸರದ ಕಾಲ.  ಗಟ್ಟಿಯಾದ ವಸ್ತುವೊಂದನ್ನು ಹಿಡಿದು, ಬಹಳಷ್ಟು ಕಾಲ ಮನಸ್ಸಿನ ಮಳೆ-ಬಿಸಿಲು-ಗಾಳಿಗಳಿಗೆ ಅದನ್ನು ಒಡ್ಡಿ, ಸಾವಧಾನವಾಗಿ ಅದನ್ನು ಕೆತ್ತಿ, ಬಿಡಿಸುವ ಮೂರ್ತಿಶಿಲ್ಪ ಕಲೆಗಾರಿಕೆಯ ವ್ಯವಧಾನ, ಹೊಸದಾಗಿ ಬರೆಯುವ ಅನೇಕ ಕವಿಗಳಿಗೆ ಇಲ್ಲವೇನೋ ಅನ್ನಿಸುತ್ತದೆ.  ಹೀಗಾಗಿ ಸ್ವಲ್ಪ ದೀರ್ಘವಾಗುವ ಕವಿತೆ ಅಂಶ ಅಂಶಗಳಲ್ಲಿ ‘ಕಾವ್ಯ’ವಾಗುತ್ತ, ಅದರ ಬಹಳಷ್ಟು ಭಾಗ ಕೇವಲ ‘ಪದ್ಯ’ವಾಗಿರುವುದು ತೀರಾ ಪರಿಚಿತವಾದ ಸಂಗತಿ.  ಅಭಿವ್ಯಕ್ತಿ ಅನ್ನುವುದು ಪದಗಳ ಮೂಲಕ ಅವತರಿಸುವ ಒಂದು ಕ್ರಿಯೆ.  ಈ ಕ್ರಿಯೆಯಲ್ಲಿ ತೊಡಗಿದ ಕವಿ ತನಗೆ ಅಗತ್ಯವಾದ ಪದಗಳನ್ನು ಕುರಿತು –

ಕ್ಷಣ ಹೊಳೆದು ಮತ್ತೆ ತಲೆ ಮರೆಸಿ
ಏಕೆ ಅಲೆವಿರಿ ಸ್ವರಗಳೆ!

(
ಪದಗಳೆ : ಪು. ೧)

ಎಂದು ಕರೆದರೂ, ಅವು ಎಷ್ಟೋ ವೇಳೆ ಬಾರದೆ ಹೋಗುತ್ತವೆ.  ಪದಗಳ ಮೂಲಕ ನಿಶ್ಚಿತಾರ್ಥ ಆಕಾರ ತಳೆದು ಅವತರಿಸುವ ಈ ಕೆಲಸ ಸುಲಭವಾದದ್ದಲ್ಲ.  ಯಾವ ಭಾಷೆಯಲ್ಲಿ ಕವಿ ಕೆಲಸ ಮಾಡುತ್ತಾನೋ ಆ ಭಾಷಾ ಪರಂಪರೆಯಲ್ಲಿ ಬೇರೂರಿದವನಾಗಿರಬೇಕು.  ತಕ್ಕಷ್ಟು ಪರಿಭಾವನೆ ಬೇಕು; ಮತ್ತು ನಿರಂತರ ಪರಿಶ್ರಮ ಬೇಕು.

ಮಣ್ಣಿನೊಳಪದರದಡಿಯಲ್ಲಿ
ಎಚ್ಚರದ ಬೀಜಗಳು
ಆಕಳಿಸಿ ಮೈ ಮುರಿವ…..

(
ದೃಷ್ಟಿ : ಪು. ೨೫)

ಹೊತ್ತಿಗಾಗಿ ಕಾದು ಕುಳಿತಿರಬೇಕು.  ಆದರೂ –

ನಮ್ಮಿಬ್ಬರ ನಡುವೆ ಶಬ್ದಗಳಿವೆ ಎಚ್ಚರವಿಲ್ಲ
ಧ್ವನಿಗಳು ಸುತ್ತುತ್ತಿವೆ
, ಸ್ಪಂದನವಿಲ್ಲ
(
ಮೌನ : ಪು. ೨೨)

ಎನ್ನುವ ಸ್ಥಿತಿ ಬೆಳೆಯುವ ಕವಿಯೂ ಎದುರಿಸಬೇಕಾದಂಥ ಸಂದಿಗ್ಧವಾಗಿದೆ.

ಈ ಸಂದಿಗ್ಧತೆಯ ನಡುವೆಯೂ ವ್ಯಾಸರಾವ್ ಹದವಾಗುವ ಹಾದಿಯಲ್ಲಿ ಹೊರಟಿದ್ದಾರೆ.  ನಿಸರ್ಗ, ವಿನೋದ ಮತ್ತು ಹಲವಾರು ಪುರಾಣ ಪ್ರಸಂಗಗಳ ಮೂಲಕ ಪ್ರಸ್ತುತವನ್ನು ಪರೀಕ್ಷಿಸಿ ನೋಡುವ  ಅವರ ಪ್ರಯೋಗಗಳು ಇದಕ್ಕೆ ಸಾಕ್ಷಿಯಾಗಿವೆ.  ವರ್ತಮಾನವನ್ನು ಅದರ ಚರಿತ್ರೆಯ ಹಿನ್ನೆಲೆಯಲ್ಲಿ ಹಾಗೂ ಚರಿತ್ರೆಯ ಸಮೇತ ಗ್ರಹಿಸಿ ಅರ್ಥಮಾಡಿಕೊಳ್ಳುವ, ವ್ಯಾಖ್ಯಾನಿಸುವ ನಿಲುವು.  ಬರವಣಿಗೆಯಲ್ಲಿರುವ ಲವಲವಿಕೆ, ಹೊಸತನ ಹಾಗೂ ಒಂದು ಬಗೆಯ ಗೇಯತೆ, ವ್ಯಾಸರಾವ್ ಅವರ ಕವಿತೆಯನ್ನು ಅವರ ಸಮಕಾಲೀನರ ಸಾಲಿನಲ್ಲಿ, ಸ್ವಲ್ಪ ಬೇರೆಯೆಂಬಂತೆ ನಿಲ್ಲಿಸುವ ಲಕ್ಷಣಗಳಾಗಿವೆ.  ಅವರಲ್ಲಿ ತುಂಬ ಮೆಚ್ಚಬೇಕಾದ ಒಂದು ಅಂಶವೆಂದರೆ, ತಮ್ಮನ್ನು ತಾವು ಯಾವ ಭ್ರಮೆಗಳಿಗೂ ಒಳಗುಪಡಿಸಿಕೊಳ್ಳದೆ ಒರೆಗೆ ಹಚ್ಚಿ ನೋಡಿಕೊಳ್ಳುವ ಒಂದು ಎಚ್ಚರದ ಮನಃಸ್ಥಿತಿ.

ಇದೀಗ ನಮ್ಮನ್ನು ನಾವೇ ಒರೆಗೆ ಹಚ್ಚಿಕೊಳ್ಳುವ ಸಮಯ
ನಮ್ಮ ಕನಸು ಮನಸುಗಳಲ್ಲಿ ಅಪ್ಪಟವೆಷ್ಟು
?
(
ಹಸ್ತಾಂತರ : ಪು. ೩೧)

ಎಂಬ ಈ ಆತ್ಮ ಪರೀಕ್ಷೆ, ವ್ಯಾಸರಾವ್ ಅವರ ಕವಿತೆಯ ನಾಳಿನ ಹಾದಿಯನ್ನು ಮತ್ತಷ್ಟು ಖಚಿತವೂ, ವಿಸ್ತಾರವೂ ಆದುದನ್ನಾಗಿ ಮಾಡುವುದೆಂಬ ನಂಬಿಕೆ ನನಗಿದೆ.  ಈ ನನ್ನ ನಂಬಿಕೆ ಫಲಿಸುವುದನ್ನು, ಅವರ ಜತೆಗಾರನಾದ ನಾನು ಕುತೂಹಲದಿಂದ ಕಾಯುತ್ತೇನೆ.

ಬೆಳ್ಳಿಮೂಡುವ ಮುನ್ನ : ಎಂ. ಎನ್. ವ್ಯಾಸರಾವ್, ೧೯೮೪