ಶ್ರೀ ಸನದಿಯವರು ತಮ್ಮ ಕಾವ್ಯಸಂವಾದದ ಮೂಲಕವಾಗಿಯೇ ಒಂದು ಬಗೆಯ ಚಿತ್ತಸ್ವಾಸ್ಥವನ್ನೂ ಆತ್ಮಪ್ರತ್ಯಯವನ್ನೂ ಗಳಿಸಿಕೊಂಡು, ಯಾವ ಸಾಹಿತ್ಯಕ ವಾಗ್ವಾದಗಳ ಸುಳಿಗಳಿಗೂ ಸಿಕ್ಕಿಕೊಳ್ಳದೆ ತಮ್ಮ ನಂಬಿಕೆಯ ನೆಲೆಯಲ್ಲಿ ನಿಂತು ತಮ್ಮ ‘ಪಾಡಿಗೆ’ ತಾವು ಬೆಳೆದು ಬಂದವರು.  ಬದುಕಿನ ಬಗ್ಗೆ ಗಾಢವಾದ ಅನುರಕ್ತಿಯನ್ನೂ ಮಾನವೀಯ ಸಂಬಂಧಗಳ ಬಗ್ಗೆ ಅದಮ್ಯವಾದ ಶ್ರದ್ಧೆಯನ್ನೂ ಉಳಿಸಿಕೊಂಡು ಬಂದ ಸನದಿಯಂಥವರು ಸಾಹಿತ್ಯಕವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ನಮಗೆ ಮುಖ್ಯರಾಗುತ್ತಾರೆ.  ದೂರದ ಮುಂಬೈನಲ್ಲಿದ್ದೂ ಸನದಿಯವರು ಕಳೆದ ಹಲವು ದಶಕಗಳ ಕಾಲಮಾನದಲ್ಲಿ ಕನ್ನಡ ಸಹೃದಯರ ಜತೆಗೆ ತಮ್ಮನ್ನು ಬೆಸೆದುಕೊಂಡಿರುವುದು ಈ ಬಗೆಯ ಮಾನವೀಯ ಪ್ರೀತಿಯ ಸಂಬಂಧಗಳಿಂದಲೇ.  ಈವರೆಗಿನ ಹಲವು ಕವನ ಸಂಗ್ರಹಗಳ ಮೂಲಕ ತಾವು ಒಲಿದ ಅಥವಾ ಗ್ರಹಿಸಿದ ಬದುಕನ್ನು, ತಕ್ಕ ಸಮತೂಕದ ಒಂದು ಮನಸ್ಥಿತಿಯಲ್ಲಿ ಪರಿಗ್ರಹಿಸಿ ತಮ್ಮ ಪ್ರಸನ್ನ ಕವಿತಾರಚನೆಯಿಂದ ಕನ್ನಡ ಕಾವ್ಯಪರಿಸರದಲ್ಲಿ ತಮ್ಮನ್ನು ಅಂಕಿತಗೊಳಿಸಿದ್ದಾರೆ.

ಗ್ರಾಮೀಣ ಪರಿಸರದ ಮುಗ್ಧತೆ ಹಾಗೂ ವಿಸ್ಮಯಗಳ ನೆನಪುಗಳನ್ನು ತಮ್ಮ ಮನಸ್ಸಿನ ತುಂಬ ತುಂಬಿಕೊಂಡು ಯಾಂತ್ರೀಕೃತ ನಗರ ಪರಿಸರಗಳಲ್ಲಿ ಬದುಕುವ ಅನಿವಾರ್ಯತೆಗೆ ಒಳಗಾಗಿ, ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುವ ಇವತ್ತಿನ ಬಹುತೇಕ ಬರಹಗಾರರನ್ನು ಕಾಡುವ ಸಂಗತಿಯೆಂದರೆ, ತಮಗೂ ತಾವು ಬೇರೂರಬೇಕಾದ ನೆಲಕ್ಕೂ ನಡುವೆ ಏರ್ಪಡುತ್ತಿರುವ ಸಂಬಂಧರಾಹಿತ್ಯದ ತಳಮಳ.  ಈ ತಳಮಳ ತಮಗೂ, ತಮ್ಮ ಎಳೆಯಂದಿನ ರಮ್ಯನಿಸರ್ಗಕ್ಕೂ ನಡುವಣ ಅಂತರವನ್ನು ಮಾತ್ರ ಕುರಿತದ್ದಲ್ಲ;  ಅದಕ್ಕಿಂತ ಮಿಗಿಲಾಗಿ ಮಾನವೀಯ ಸಂಬಂಧಗಳೊಂದಿಗೆ ಏರ್ಪಟ್ಟ ಕಂದರಗಳ ಏಕಾಕಿತನದ ವಿಷಾದಗಳನ್ನು ಕುರಿತದ್ದು.  ಸನದಿಯವರ ಪ್ರಸ್ತುತ ಕವನ ಸಂಗ್ರಹ ಮುಖ್ಯವಾಗಿ ಪ್ರತಿಪಾದಿಸುವುದು ನಮಗೂ ಸಮೃದ್ಧವಾದ ಬದುಕಿಗೂ ಇರಬೇಕಾದ ಜೀವಂತ ಸಂಬಂಧಗಳನ್ನು ಕುರಿತಾದ ಸಾಂಸ್ಕೃತಿಕ ಕಾಳಜಿಗಳನ್ನು. ಯಾಕೆ ನಾವು ನಮ್ಮ ಜೀವಪೋಷಕವಾದ ಬದುಕಿನ ಸಮೃದ್ಧಿಯಿಂದ ಹಾಗೂ ಸಂಪನ್ನತೆಯಿಂದ ವಂಚಿತರಾಗಿದ್ದೇವೆ?  ಯಾಕೆ ನಾವು ನಮ್ಮ ನೆಲದೊಂದಿಗೆ ಸಹಜವಾಗಿ ಇರಬೇಕಾದ ನಂಟನ್ನು ಕಡಿದುಕೊಂಡಿದ್ದೇವೆ? ಯಾಕೆ ನಮ್ಮ ಬದುಕು ಚಲನಶೀಲತೆಯನ್ನು ಕಳೆದುಕೊಂಡು ಸ್ಥಗಿತವಾಗುತ್ತಿದೆ?  ನಮ್ಮನ್ನು ಮತ್ತೆ ಮತ್ತೆ ಸುತ್ತುವರಿಯುತ್ತಿರುವ ಪಹರೆಗಳಿಂದ ಪಾರಾಗಿ, ಎಲ್ಲ ಸೀಮಿತಗಳನ್ನೂ ದಾಟಿ ಹೊಸ ಹುಟ್ಟುಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವುದು ಹೇಗೆ? – ಇತ್ಯಾದಿ ತಳಮಳಗಳನ್ನೂ ಪ್ರಶ್ನೆಗಳನ್ನೂ ಕುರಿತು ಚಿಂತಿಸುವ  ಸನದಿಯವರು, ಇವತ್ತಿನ ಸೂಕ್ಷ್ಮ ಸಂವೇದನಶೀಲನಾದ ಮನುಷ್ಯನ ಒಳಹೊರಗಿನ ಸಂಘರ್ಷಗಳನ್ನು ಈ ತಮ್ಮ ‘ಸಂಭವ’ ಕವನ ಸಂಗ್ರಹದ ಬಹುತೇಕ ಕವಿತೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ.

ಸನದಿಯವರು ನಮ್ಮ ಸಮಕಾಲೀನ ಬಿಕ್ಕಟ್ಟುಗಳನ್ನು ಕುರಿತು ಕಾವ್ಯಕೇಂದ್ರಿತವಾಗಿ ತಮ್ಮ ಪ್ರತಿಕ್ರಿಯೆಗಳನ್ನು ದಾಖಲು ಮಾಡುವ ಕ್ರಮ ಕೂಡ ವಿಶಿಷ್ಟವಾಗಿದೆ.  ಅವರ ಪ್ರತಿಪಾದನೆಯ ಕ್ರಮದಲ್ಲಿ ಬದುಕಿನ ಬಗ್ಗೆ ತಕ್ಕ ಪ್ರೀತಿ, ವಿನಯ ಹಾಗೂ ಶ್ರದ್ಧೆಗಳಿವೆಯೇ ವಿನಾ, ಯಾವುದೇ ಸುಧಾರಕತನದ ಧೀರೋದಾತ್ತತೆಯ ಸೋಗುಗಳಿಲ್ಲ, ಬದುಕಿನ ಅಸಾಂಗತ್ಯಗಳನ್ನು ಕುರಿತ ಏರುದನಿಗಳ ಆಕ್ರೋಶಗಳಿಲ್ಲ.  ‘ನಾ ನಂಬಿಕೊಂಡಿರುವ ನೆಲ- ಮುಗಿಲ-ಸಂಸಾರ ಇಂದು ನಿನ್ನೆಯದಲ್ಲ’ (ಸೃಷ್ಟಿ – ಪು. ೧೨) ಎಂಬ ಅರಿವಿನಿಂದ, ‘ನಾನೇನೋ ಸಾಮಾನ್ಯ ಪ್ರಜೆ, ಅಸಾಮಾನ್ಯರ ಸಾಲಿನಲ್ಲಿ ನಿಲ್ಲುವವನಲ್ಲ’ (ವಿಶೇಷ -ಪು. ೩೯) ಎಂಬ ವಿನಯದಿಂದ, ‘ಸುಮ್ಮ ಸುಮ್ಮನೇ ನಾನಾರನೂ ದ್ವೇಷಿಸುವುದಿಲ್ಲ’ (ನಾನಾರನೂ ದ್ವೇಷಿಸುವುದಿಲ್ಲ- ಪು. ೪೫) ಎಂಬ ನಿಲುವಿನಿಂದ

ನನ್ನ ಪ್ರಿಯ ಬಾಂಧವರೆ
ನೀವೆಲ್ಲ ನಂಬಬೇಕೆಂದು ನಾನು ಹೇಳುವುದಿಲ್ಲ
ನೀವಾರು ನಂಬದಿದ್ದರೂ ನನಗಾವ ಕೇಡಿಲ್ಲ

ಎನ್ನುವ ಧೈರ್ಯದಿಂದ, ನಮ್ಮ ಪ್ರಸ್ತುತ ಪರಿಸರದ ಪ್ರತೀಕವಾಗಿರುವ ಕೊಳೆತು ನಾರುತ್ತಿರುವ ‘ಹಳೆಯ ಹೊಂಡ’ವನ್ನು ಬಳಿದು ಸ್ವಚ್ಛಮಾಡುವ ಕೆಲಸಕ್ಕೆ ನಿಂತು, ಆ ಕಾರ್ಯಕ್ಕಾಗಿ ಉಳಿದವರನ್ನು

ನೀವೆಲ್ಲ ಬರ‍್ತೀರಾ?
ಸಲಿಕೆ ಗುದ್ದಲಿ ಬುಟ್ಟಿ ಬಕೀಟುಗಳ ತರ‍್ತೀರಾ
?
(
ಹಳೆಯ ಹೊಂಡದ ನೀರು ಪು. ೪೭)

ಎಂದು ಕರೆ ನೀಡುವ ಈ ಮನೋಧರ್ಮ ಮೂಲಭೂತವಾಗಿ ಸಾಂಸ್ಕೃತಿಕ ಕಾಳಜಿಗಳನ್ನುಳ್ಳ ಜನಪರ ಹಾಗೂ ಜೀವನಪರವಾದ ನಿಲುವಾಗಿದೆ.  ಈ ನಿಲುವಿನ ಕವಿ ಸನದಿಯವರು ನಮ್ಮ ಸಮಕಾಲೀನ ಸಂದರ್ಭಕ್ಕೆ ಈ ಸಂಗ್ರಹದ ಅನೇಕ ಕವನಗಳ ಮೂಲಕ ತೋರುವ ಪ್ರತಿಕ್ರಿಯೆಗಳು, ಎತ್ತುವ ಪ್ರಶ್ನೆಗಳು ಮತ್ತು ಆಶಯಗಳು ತುಂಬ ಮಹತ್ವದವುಗಳಾಗಿವೆ.

ಬಿ.ಎ. ಸನದಿ : ಸಂಭವ, ೧೯೯೧